Monday, June 12, 2017

ಬೇಂದ್ರೆಯವರ ‘ಸಖೀಗೀತ’


ಒಂದು
೧೯೩೬

ಸಖಿ! ನಮ್ಮ ಸಖ್ಯದ ಆಖ್ಯಾನ ಕಟು-ಮಧುರ
ವ್ಯಾಖ್ಯಾನದೊಡಗೂಡಿ ವಿವರಿಸಲೇ
ಕರುಳಿನ ತೊಡಕನು ಕುಸುರಾಗಿ ಬಿಡಿಸಿಟ್ಟು
ತೊಡವಾಗಿ ತಿರುಗೊಮ್ಮೆ ನಾ ಧರಿಸಲೇ

ಇರುಳು ತಾರೆಗಳಂತೆ ಬೆಳಕೊಂದು ಮಿನುಗುವುದು
ಕಳೆದ ದುಃಖಗಳಲ್ಲಿ ನೆನೆದಂತೆಯೆ
ಪಟ್ಟ ಪಾಡೆಲ್ಲವು ಹುಟ್ಟು-ಹಾಡಾಗುತ
ಹೊಸದಾಗಿ ರಸವಾಗಿ ಹರಿಯುತಿವೆ

ಗಂಗೆ ಸಾಗರಬಿದ್ದು ಸಾಗರವನಪ್ಪುತ
ಅರೆಬೆರೆತ ನೆರೆಬೆರೆತ ತಾಣದೊಲು
ಸುಖದುಃಖ ಸಂಗಮವಾದ ಹೃದ್ರಂಗವು
ಪಾವನವೆಂಬೆನೆ ಯಾವಾಗಲು

ಬಾ ಅಲ್ಲಿ ಕಡಲಲ್ಲಿ ತೆರೆ ತೆರೆಯನೊಡೆವಲ್ಲಿ
ನೀರ್ ಬುರುಗು ಬಿಡುವಲ್ಲಿ ಮೀಯೋಣ ಬಾ
ತೆಪ್ಪವೊ ತಾರಿಯೊ ಹರಗೋಲೊ ಹಡಗವೊ
ತೆರೆ-ತೊಡೆ-ತೊಟ್ಟಿಲನೇರೋಣ ಬಾ.

ಸಪ್ಪೆ ಬಾಳುವೆಗಿಂತ ಉಪ್ಪುನೀರೂ ಲೇಸು
ಬಿಚ್ಚು ಸ್ಮೃತಿಗಳ ಹಾಯಿ ಬೀಸೋಣ ಬಾ
ಬೀಸೋಣ ಈಸೋಣ ತೇಲೋಣ ಮುತ್ತಿನ
ತವರ್ಮನೆ ಮುಟ್ಟನು ಮುಳುಗೋಣ ಬಾ

ತಾಂಡವ ನಡೆಸಿದ ಝಂಝಾವಾತದ
ಕಾಲಿನ ಹುಲುಗೆಜ್ಜೆ ನಾವಾಗಿರೆ
ನನಗೂ ನಿನಗೂ ಅಂಟಿದ ನಂಟಿನ
ಕೊನೆ ಬಲ್ಲವರಾರು ಕಾಮಾಕ್ಷಿಯೇ!
..................................................................................

ಕನ್ನಡದಲ್ಲಿ ದಾಂಪತ್ಯಗೀತೆಗಳನ್ನು ಬರೆದವರಲ್ಲಿ  .ರಾ.ಬೇಂದ್ರೆ  ಹಾಗು ಕೆ. ಎಸ್. ನರಸಿಂಹಸ್ವಾಮಿಯವರು
 ಪ್ರಮುಖರು. ಇವರೀರ್ವರ ದಾಂಪತ್ಯಗೀತೆಗಳಲ್ಲಿ ಅಗಾಧವಾದ ಭಿನ್ನತೆಯಿದೆ. ನರಸಿಂಹಸ್ವಾಮಿಯವರ ಗೀತೆಗಳು ಹೊಸದಾಗಿ ಮದುವೆಯಾದ ದಂಪತಿಗಳ ಪ್ರಣಯಗೀತೆಗಳು. ಗೀತೆಗಳು ಗಂಡಹೆಂಡಿರ ಸುತ್ತಲಷ್ಟೇ ಅಲ್ಲ, ಅತ್ತೆ, ಮಾವ, ನಾದಿನಿ, ಬಳೆಗಾರ ಚೆನ್ನಯ್ಯ ಇವರೆಲ್ಲರನ್ನೂ ಒಳಗೊಂಡಿವೆ. ಬಡತನವೆನ್ನುವುದು ಇವರ ದೃಷ್ಟಿಯಾಚೆಯ ವಸ್ತು ಅಥವಾ ಅದು ಇಲ್ಲವೇ ಇಲ್ಲ. ಆದುದರಿಂದಲೇ ನರಸಿಂಹಸ್ವಾಮಿಯವರುಅಂಗಳದ ಒಳಗೆ, ಬೃಂದಾವನದ ಬಳಿಯಲ್ಲಿನಿಂತಿದ್ದರೂ ಸಹ, ತಮ್ಮ ಪತ್ನಿಯೊಡನೆ ಪ್ರೇಮದ ಗಂಧರ್ವಲೋಕದಲ್ಲಿ ವಿಹರಿಸುತ್ತಒಲುಮೆಯೊಳಗೊಂದು ನಾವು, ನಮಗಿಲ್ಲ ನೋವು ಸಾವುಎನ್ನುತ್ತ ಹಾಡಬಲ್ಲರು. ಲೌಕಿಕಕ್ಕೆ ಮರಳಿದರೂ ಸಹಹೆಂಡತಿಯೊಬ್ಬಳು ಬಳಿಯಲ್ಲಿದ್ದರೆ, ನನಗದುವೆ ಕೋಟಿ ರೂಪಾಯಿಎನ್ನುವ ಧೈರ್ಯ ಅವರಿಗಿದೆ. ನರಸಿಂಹಸ್ವಾಮಿಯವರ ಕವನಗಳು ಕೌಟಂಬಿಕ ಪರಿಧಿಯಲ್ಲಿದ್ದರೂ ಸಹ, ಭಾವನಾಲೋಕದಲ್ಲಿ ವಿಹರಿಸುವ ಕಲ್ಪನಾಗೀತೆಗಳು.

ಬೇಂದ್ರೆಯವರು ಬರೆದ ಪ್ರಣಯಗೀತೆಗಳು ಹಳ್ಳಿಯ ಪರಿಸರದಲ್ಲಿರುವ ಅವಿವಾಹಿತ ಹುಡುಗ-ಹುಡುಗಿಯರ ವಿವಾಹಪೂರ್ವದ ಪ್ರಣಯಗೀತೆಗಳು. ಇವುಗಳ ಸಂಖ್ಯೆ ಕಡಿಮೆ. (‘ಕಾಮಕಸ್ತೂರಿಸಂಕಲನದಲ್ಲಿಯ ಹನ್ನೆರಡು ಕವನಗಳು. ಇದಲ್ಲದೆ, ದಾಂಪತ್ಯಪ್ರಣಯದ ಒಂದು ಗೀತೆ ಸಹ (-‘ನನ್ನವಳು’-) ಈ ಸಂಕಲನದಲ್ಲಿದೆ. ಪತಿಪತ್ನಿಯರ ಅನ್ಯೋನ್ಯತೆಯನ್ನು ಇಷ್ಟು ಚೆನ್ನಾಗಿ ನಿರೂಪಿಸಿರುವ ಗೀತೆ ವಿಶ್ವದ ಯಾವ ಸಾಹಿತ್ಯದಲ್ಲಿಯೂ  ಇರಲಿಕ್ಕಿಲ್ಲ. ಬೇಂದ್ರೆಯವರ ಇನ್ನುಳಿದ ದಾಂಪತ್ಯಗೀತೆಗಳಲ್ಲಿ ಪ್ರೇಮಕ್ಕಿಂತ ಹೆಚ್ಚಾಗಿ ಅಥವಾ ಪ್ರೇಮದ ಜೊತೆಜೊತೆಗೇ, ಬಡತನದ ನಿಟ್ಟುಸಿರೂ ಇದೆ. ಉದಾಹರಣೆಗೆ ಅವರನಾನು ಬಡವಿ, ಆತ ಬಡವ’ (-‘ನಾದಲೀಲೆಕವನಸಂಕಲನ-) ಎನ್ನುವ ಖ್ಯಾತ ಗೀತೆಯನ್ನು ನೋಡಬಹುದು. ಇದು ಎಷ್ಟೇ ಸುಂದರವಾದ ಗೀತೆಯಾಗಿದ್ದರೂ ಸಹ, ‘ನಾನು ಬಡವಿಎನ್ನುವ ವಿಶೇಷಣದೊಡನೆಯೇ ಪ್ರಾರಂಭವಾಗುತ್ತದೆ. ಬೇಂದ್ರೆಯವರ ದಾಂಪತ್ಯಗೀತೆಗಳು ಸಂಕಷ್ಟಗಳಲ್ಲಿ ಸಿಲುಕಿದ ದಂಪತಿಗಳ, ಗಂಡಹೆಂಡಿರ ಕೋಪತಾಪಗಳ, ಕಾಲದೊಡನೆ ಪರಿಪಾಕವಾಗುತ್ತಿರುವ ಅವರ ಅನ್ಯೋನ್ಯತೆಯ, ಮಾಗಿದ ಪ್ರೇಮ-ಗೀತೆಗಳಾಗಿವೆ. ಹಾಗೆಂದೇ, ತಮ್ಮ ಹೆಂಡತಿ ನಿಧನರಾದಾಗ, ಬೇಂದ್ರೆಯವರು, ‘ಮುತ್ತಯ್ಯ ಮುಳುಮುಳು ಅತ್ತಎಂದು ಹೇಳಲು ಸಾಧ್ಯವಾಗಿದ್ದು.

ಬೇಂದ್ರೆಯವರು ಮದುವೆಯಾದಾಗ ಇಪ್ಪತ್ಮೂರು ವರ್ಷದವರು. ಅವರ ವಧುವಿಗೆ ಕೇವಲ ಹದಿಮೂರು ವರ್ಷ. ‘ಸಖೀಗೀತವನ್ನು ಬರೆದಾಗ ಅವರಿಗೆ ನಲವತ್ತು ವರ್ಷ. ನಡುವಿನ ಹದಿನೇಳು ವರ್ಷಗಳಲ್ಲಿ ದಂಪತಿಗಳು ಏನೆಲ್ಲ ಅನುಭವಿಸಿದರು. ಬೇಂದ್ರೆಯವರು ತಾಪತ್ರಯ ಎನ್ನುವ ಮೂರು ತಾಪಗಳನ್ನು ಅನುಭವಿಸಿದರೆ, ಅವರ ಹೆಂಡತಿ ಲಕ್ಷ್ಮೀಬಾಯಿಯವರು ಗಂಡನ ಕೋಪ, ಅವನ ಧಿಮಾಕು ಎನ್ನುವ ನಾಲ್ಕನೆಯ ತಾಪವನ್ನೂ ಅನುಭವಿಸಬೇಕಾಯಿತು! ಬಂಗಾರದ ಒಡವೆಗಳನ್ನು ಕೇಳದ ಹೆಂಡತಿ ಯಾವಾಗಲೊ ಒಮ್ಮೆ ಮುತ್ತಿನ ಒಂದು ಸರವನ್ನು ಕೇಳಿದ ತಪ್ಪಿಗಾಗಿ, ಬೇಂದ್ರೆಯವರು ಒಂದು ದೊಡ್ಡ ಕವನವನ್ನೆ ಬರೆದು ಅವಳೆಡೆಗೆ ಬಿಸಾಕಿದರು. (ಅಷ್ಟು ಪ್ರೀತಿ, ಇಷ್ಟು ಪ್ರೀತಿ ಎಣಿಸಿ ಕಷ್ಟ ಪಡೆದಿರು, ಒಲಿದು ಒಲಿಸಿ ಸುಖದಿರು.---‘ನಾದಲೀಲೆಕವನಸಂಕಲನ). ಹಾಗೆಂದು ತಮ್ಮ ಹೆಂಡತಿಯ ತ್ಯಾಗ ಅವರಿಗೆ ತಿಳಿದಿರಲಿಲ್ಲ ಎಂತಲ್ಲ. ಆದುದರಿಂದಲೆ, ‘ನೀನು ಈವೆ ನನಗೆ ದವನ; ನಾನು ಈವೆ ನಿನಗೆ ಕವನಎನ್ನುವ ಮತ್ತೊಂದು ಕವನವನ್ನು ಬರೆದು, ವ್ಯಾಜವನ್ನು ಸರಿ ಮಾಡಿದರು.

ತಮ್ಮ ಗ್ರಂಥಭಾಂಡಾರಕ್ಕಾಗಿ ಐದು ಸಾವಿರ ಅಮೂಲ್ಯ ಪುಸ್ತಕಗಳನ್ನು ಖರೀದಿಸಿದ ಬೇಂದ್ರೆಯವರಿಗೆ, ಹೆಂಡತಿ ಬೇಡಿದ ಒಂದು ಮುತ್ತಿನ ಸರ ದುಬಾರಿ ಎನಿಸಿತು. (ಆನಂತರಮೇಘದೂತ ಅನುವಾದಕ್ಕಾಗಿ ಬೇಂದ್ರೆಯವರಿಗೆ ದೊರೆತ ಗೌರವಧನದಲ್ಲಿ ಬೇಂದ್ರೆ ತಮ್ಮ ಹೆಂಡತಿಗೆ ಒಂದು ಮುತ್ತಿನ ಸರವನ್ನು ಕೊಡಿಸುತ್ತಾರೆ.)

ಸಖೀಗೀತವನ್ನು ಬೇಂದ್ರೆಯವರು ೧೯೩೬ರಲ್ಲಿ ಬರೆದರು. ೧೯೧೯ರಲ್ಲಿ ಹದಿಮೂರರ ಹುಡುಗಿಯೊಂದಿಗೆ ಮದುವೆಯಾದಾಗಿನಿಂದ, ಮುಂದಿನ ಹದಿನೇಳು ವರ್ಷಗಳವರೆಗೆ ಬೇಂದ್ರೆಯವರು ತಮ್ಮ ಹೆಂಡತಿಯೊಂದಿಗೆ ಅನುಭವಿಸಿದ, ತಮ್ಮ ಬಾಳಿನ ಸುಖ, ದುಃಖಗಳ ಪರಿಣಾಮವನ್ನು ಇಲ್ಲಿ ವಿವೇಚಿಸಿದ್ದಾರೆ. ಅನುಭವಗಳಿಂದಾಗಿ ತಾವಿಬ್ಬರೂ ಜೊತೆಯಾಗಿ ಮಾಗಬೇಕು ಎನ್ನುವ ಹಾರೈಕೆ ಇಲ್ಲಿದೆ. ದಂಪತಿಗಳ ನಡುವಿನ ದೈಹಿಕ ಕಾಮವು ಅಂತರಂಗದ ಪ್ರೇಮವಾಗಿ ಪರಿವರ್ತನೆಯಾಗಬೇಕು ಎನ್ನುವ ಆಶಯ ಇಲ್ಲಿದೆ.  

ತಮ್ಮ ಸಖಿಯೊಡನೆ ಪುರುಸೊತ್ತಾಗಿ ಕುಳಿತುಕೊಂಡು, ಹಳೆಯ ನೆನಪುಗಳನ್ನು ನಿಧಾನವಾಗಿ ನೆನೆಯುತ್ತಿರುವಂತೆ ಇರುವ  ಕವನದಲ್ಲಿ ಬೇಂದ್ರೆಯವರು ಸರಳ ರಚನಾವಿಧಾನವನ್ನು ಅನುಸರಿಸಿದ್ದಾರೆ. ಹಿನ್ನೋಟದ ಅವಲೋಕನದಲ್ಲಿ ಅವರ ಸಖಿಯೂ ಭಾಗಿ. ಆದುದರಿಂದ ಗೀತೆಯುಮಾತಿನ ಛಂದಸ್ಸಿ’ (!)ನಲ್ಲಿದೆ ಎಂದು ಹೇಳಬಹುದು. ಅದರಂತೆ ಇಲ್ಲಿ ಬಳಸಲಾದ ಪದಗಳೂ ಸಹ ಸರಳ ಪದಗಳೇ ಆಗಿವೆ. (ಬೇಂದ್ರೆಯವರ ಕವನಗಳಲ್ಲಿಯ ಪದಗಳು ಎಷ್ಟೇ ಸರಳವಾಗಿದ್ದರೂ ಸಹ, ಅರ್ಥಗರ್ಭಿತವಾಗಿರುತ್ತವೆ ಎನ್ನುವುದು ಬೇರೆ ಮಾತೇ ಆಗಿದೆ.)

ಸಖೀಗೀತೆಯು ನಲವತ್ತು ಪುಟಗಳಲ್ಲಿದೆ. ಪ್ರತಿ ಪುಟದಲ್ಲಿ ಆರು ನುಡಿಗಳಿವೆ. ಲೇಖನದಲ್ಲಿ ಮೊದಲ ಪುಟದ ಆರು ನುಡಿಗಳನ್ನು ಮಾತ್ರ ಎತ್ತಿಕೊಳ್ಳಲಾಗಿದೆ.
…………………………………………………………………
ಸಖಿ! ನಮ್ಮ ಸಖ್ಯದ ಆಖ್ಯಾನ ಕಟು-ಮಧುರ
ವ್ಯಾಖ್ಯಾನದೊಡಗೂಡಿ ವಿವರಿಸಲೇ
ಕರುಳಿನ ತೊಡಕನು ಕುಸುರಾಗಿ ಬಿಡಿಸಿಟ್ಟು
ತೊಡವಾಗಿ ತಿರುಗೊಮ್ಮೆ ನಾ ಧರಿಸಲೇ

ದಾಂಪತ್ಯವೆಂದರೆ ಸಖ್ಯ; ದಂಪತಿಗಳೆಂದರೆ ಗೆಳೆಯ-ಗೆಳತಿಯರು’--- ಇದು ಬೇಂದ್ರೆಯವರ ದೃಷ್ಟಿ. ಬಾಳಬಂಧನದ ಆಖ್ಯಾನವನ್ನು ಅಂದರೆ ಅಂತರಂಗದ  ಕಥೆಯನ್ನು ಬೇಂದ್ರೆಯವರು ತಮ್ಮ ಸಖಿಯೊಡನೆ ಹಂಚಿಕೊಳ್ಳಬಯಸುತ್ತಾರೆ. ಆದರೆ ಆಖ್ಯಾನ  ಕೇವಲ ಸುಖಸಂತೋಷದ ಕಥೆ ಅಲ್ಲ. ಕಥೆಯಲ್ಲಿ ಸಂಕಟಗಳೂ ಇವೆ, ಜಗಳಗಳೂ ಇವೆ. ಆದುದರಿಂದಲೆ ಇದಕ್ಕೆ ಮಾಡಲಾಗುವ ವ್ಯಾಖ್ಯಾನವುಕಟುಮಧುರವಾದದ್ದು. ಹಾಗೆಂದು ವ್ಯಾಖ್ಯಾನವನ್ನು ಯಾವನೋ ಒಬ್ಬ ಹೊರಗಿನ ವ್ಯಕ್ತಿಯು ಮಾಡುವ ವ್ಯಾಖ್ಯಾನದಂತೆ ಆತ್ಮನಿರಪೇಕ್ಷವಾಗಿ ಮಾಡಲು ಸಾಧ್ಯವಾಗದು. ಕಥೆಯಲ್ಲಿರುವ ನಾಯಕ-ನಾಯಕಿಯರು ದಾಂಪತ್ಯದಲ್ಲಿ ಹಾವುಗಳಂತೆ ಹೆಣೆದುಕೊಂಡಿದ್ದಾರೆ. ಕಥೆಯಲ್ಲಿ ಬರುವ, ಅಕಾಲಮರಣವನ್ನಪ್ಪಿದ ಹುಡುಗರು ಇವರವೇ ಮಕ್ಕಳು. ಆದುದರಿಂದ ಇಲ್ಲಿ ಕರುಳಿನ ತೊಡಕು ಇದೆ. ತೊಡಕನ್ನು ಸೂಕ್ಷ್ಮವಾಗಿ, ನವಿರಾಗಿ ಬಿಡಿಸಿಡಬೇಕು. ತಮ್ಮದೇ ಆದ ಅಂತರಂಗದ ತೊಡಕನ್ನು ಬಹಿರಂಗಕ್ಕೆತಂದುಕೊಂಡು, ಆ ನೆನಪುಗಳನ್ನು ಮಮತೆಯಿಂದ, ಆತ್ಮೀಯತೆಯಿಂದ, --ಇವು ನಮ್ಮ ಮನಸ್ಸು ತೊಟ್ಟುಕೊಂಡ ಆಭರಣಗಳು ಎನ್ನುವಂತೆಎತ್ತಿಕೊಳ್ಳಬೇಕು.

ತೊಡವುಪದವುತೊಡಕುಪದಕ್ಕೆ ಹತ್ತಿರವಾಗಿರುವದನ್ನು ಗಮನಿಸಬೇಕು. ತೊಡವು ಬೇಂದ್ರೆಯವರಿಗೆ ಹತ್ತಿಕೊಂಡಿರುವ ಕರುಳಿನ ತೊಡಕೂ ಆಗಿದೆ. ತೊಡವನ್ನು ಕಂಠದ ಸುತ್ತಲೂ ಸುತ್ತಿಕೊಂಡಿರುವವನು ನಾಗಾಭರಣ; ಕಂಠದ ಒಳಗೆ ನುಂಗಿಕೊಂಡಿಟ್ಟಿರುವವನು ನಂಜುಂಡ!

ಇರುಳು ತಾರೆಗಳಂತೆ ಬೆಳಕೊಂದು ಮಿನುಗುವುದು
ಕಳೆದ ದುಃಖಗಳಲ್ಲಿ ನೆನೆದಂತೆಯೆ
ಪಟ್ಟ ಪಾಡೆಲ್ಲವು ಹುಟ್ಟು-ಹಾಡಾಗುತ
ಹೊಸದಾಗಿ ರಸವಾಗಿ ಹರಿಯುತಿವೆ

ಹಳೆಯ  ದುಃಖಗಳ ನೆನಪು ಈಗೇಕೆ?’ ಎಂದು ಬೇಂದ್ರೆಯವರ ಸಖಿ ಅವರನ್ನು ಕೇಳಬಹುದು. ಸಂಸ್ಕೃತದ ಪ್ರಸಿದ್ಧ ಕವಿ ಭವಭೂತಿಯಉತ್ತರರಾಮಚರಿತಮ್ನಾಟಕದಲ್ಲಿ ರಾಮಚಂದ್ರ ಹಾಗು ಸೀತೆಯರು ವನವಾಸದ ಬಳಿಕ, ತಮ್ಮ ಅರಮನೆಯಲ್ಲಿ ವಿರಮಿಸಿಕೊಳ್ಳುತ್ತಿರುವ ಒಂದು ದೃಶ್ಯ ಬರುತ್ತದೆ. ಅಲ್ಲಿ ಸೀತೆ ಹಾಗು ರಾಮಚಂದ್ರರು ಹೇಳಿಕೊಳ್ಳುವ ಮಾತೊಂದು ಹೀಗಿದೆ:  ತೇ ಹಿ ನೊ ದಿವಸಾ: ಗತಾ: (= ನಮ್ಮ ದಿವಸಗಳು ಕಳೆದು ಹೋದವು.)

ಬೇಂದ್ರೆಯವರೂ ಸಹ ತಮ್ಮ ಸಖಿಗೆ ಅದೇ ಮಾತನ್ನು ಹೇಳುತ್ತಾರೆ:   ನಮ್ಮ ದಿವಸಗಳು ಕಳೆದು ಹೋದವು. ಇದೀಗ ದುಃಖಗಳನ್ನು ನೆನಪಿಸಿಕೊಂಡಾಗ ದುಃಖವು ಮರುಕಳಿಸುವದಿಲ್ಲ ಬದಲಾಗಿ ದುಃಖಗಳನ್ನು ಎದುರಿಸಿ, ಹೊರಬಂದಾಗಿನ ಪರಿಪಾಕದ ರಸಾನುಭವವು ಬೇರೆಯೇ ಆಗಿರುತ್ತದೆ’. ಅಲ್ಲದೆ, ಇವೆಲ್ಲ ಅನುಭವಗಳು ದಂಪತಿಗಳ ಬದುಕಿಗೆ ಒಂದು ಕಾಣ್ಕೆಯನ್ನು ಕೊಡುತ್ತವೆ.

ನೆನೆದಂತೆಯೆಎನ್ನುವ ಪದವು ಕೊಡುವ ವಿಶಾಲಾರ್ಥವನ್ನು ಗಮನಿಸಿರಿ. ‘ನೆನೆಎನ್ನುವುದಕ್ಕೆನೀರಲ್ಲಿ ಒದ್ದೆಯಾಗುಎನ್ನುವ ಅರ್ಥವೂ ಇದೆ. ಗತ ಅನುಭವಗಳಲ್ಲಿ ಮುಳುಗಿ ಮತ್ತೊಮ್ಮೆ ಒದ್ದೆಯಾಗುವುದರ ಸೂಚನೆಯನ್ನು ಪದವು ಕೊಡುತ್ತದೆ. ಹಾಗಿದ್ದರೆ ಒದ್ದೆಯಾಗುವುದು ಏನು?  ಕಣ್ಣು ಮತ್ತು ಮನಸ್ಸು ತಾನೆ ಒದ್ದೆಯಾಗುವದು? ಇದಷ್ಟೇ ನೆನಪಿನ ಪ್ರಯೋಜನವೆ?  ಇರುಳು ತಾರೆಗಳಂತೆ ಬೆಳಕೊಂದು ಮಿನುಗುವುದುಎಂದು ಬೇಂದ್ರೆಯವರು ನೆನಪುಗಳ ಪ್ರಯೋಜನವನ್ನು ಉಸುರುತ್ತಾರೆ. ಇರುಳಿನ ಸಮಯವು ವಿಶ್ರಾಂತಿಯ ಸಮಯ. ಹಗಲೆಲ್ಲ ದುಡಿದ ಜೀವ, ಇರುಳಿನಲ್ಲಿ ಆರಾಮಾಗಿ ಕುಳಿತು, ಮೇಲೆ ನೋಡಿದಾಗ, ನೂರಾರು ಮಿನುಗುವ ಚಿಕ್ಕೆಗಳು ಕಣ್ಣಿಗೆ ಬೀಳುತ್ತವೆ. ನಮ್ಮ ನೂರಾರು ಅನುಭವಗಳೇ ನೂರಾರು ಚಿಕ್ಕೆಗಳು. ಅವು ಕೊಡುವ ಬೆಳಕು ತಂಪನೆಯ ಬೆಳಕು, ನಮ್ಮನ್ನು ದಿಕ್ಕೆಡಿಸುವ ಬೆಳಕಲ್ಲ, ನಮ್ಮನ್ನು ಸಂತೈಸುವ ಬೆಳಕು.  ಬೆಳಕಿನಿಂದ ರಸೋತ್ಪತ್ತಿಯಾಗುತ್ತದೆ. ಕವಿಯು ಅನುಭವಿಸಿದ ಪಾಡೆಲ್ಲವೂ ಇದೀಗ ಹುಟ್ಟು-ಹಾಡಾಗುತ್ತಿದೆ.

ಹುಟ್ಟು-ಹಾಡಾಗುತ್ತಿದೆಎನ್ನುವ ಪದಪುಂಜವು ಅನೇಕಾರ್ಥಗಳನ್ನು ಒಳಗೊಂಡಿದೆ. ಹಾಡಾಗಿ ಹುಟ್ಟುತ್ತಿದೆ ಅಥವಾ ಸದ್ಯೋಜಾತ ಗೀತೆಯಾಗುತ್ತಿದೆ ಎನ್ನುವುದು ಒಂದು ಅರ್ಥವಾದರೆ, ‘ಜೇನುಹುಟ್ಟಿನಷ್ಟು ರಸಪೂರ್ಣ ಹಾಡಾಗುತ್ತಿದೆ ಎನ್ನುವುದು ಮತ್ತೊಂದು ಅರ್ಥ. ಅನುಭವಗಳು ಹಳೆಯವು, ಆದರೆ ಅವುಗಳಲ್ಲಿ ಹುಟ್ಟಿ ಬರುತ್ತಿರುವ ರಸ ನವೋನವೀನ.
 [ ಸಂದರ್ಭದಲ್ಲಿ ಬೇಂದ್ರೆಯವರ ಮತ್ತೊಂದು ಗೀತೆಯನ್ನು ನೆನಪಿಸಿಕೊಳ್ಳುವುದು ಉಚಿತವಾದೀತು:
ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು, ರಸಿಕ ನಿನಗೆ.
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಸವಿಯ ಹಣಿಸು ನನಗೆ.’]

ಗಂಗೆ ಸಾಗರಬಿದ್ದು ಸಾಗರವನಪ್ಪುತ
ಅರೆಬೆರೆತ ನೆರೆಬೆರೆತ ತಾಣದೊಲು
ಸುಖದುಃಖ ಸಂಗಮವಾದ ಹೃದ್ರಂಗವು
ಪಾವನವೆಂಬೆನೆ ಯಾವಾಗಲು

ಶಾಸ್ತ್ರಗಳ ಅಧ್ಯಯನದಿಂದ ಬರುವ ತತ್ವಜ್ಞಾನವು ನಿಜವಾದ ಜ್ಞಾನವಲ್ಲ; ಅನುಭವದಿಂದ ಬರುವ ಜೀವನದರ್ಶನವೇ ನೈಜವಾದದ್ದು. ಪ್ರತಿಯೊಬ್ಬರ ಬಾಳೂ ಕೊನೆಯಲ್ಲಿರುವ ಸಾಗರದೆಡೆಗೆ ಅಂದರೆ ದೈವೀ ಚೈತನ್ಯದೆಡೆಗೆ ಧಾವಿಸುತ್ತಿರುವ ನದಿ ಇದ್ದಂತೆ. ಇದು ಪರ್ವತದ ಕೊಳ್ಳಗಳಲ್ಲಿ, ನಂತರ ಬಯಲಿನಲ್ಲಿ ಹರಿಯುತ್ತ, ಸಾಗರವನ್ನು ತೆಕ್ಕೆ ಹಾಯುತ್ತದೆ. ಕೂಡಲ-ಸಂಗಮವನ್ನು ಭಾರತೀಯರು ಪವಿತ್ರವೆಂದು ಪರಿಗಣಿಸುತ್ತಾರೆ. ಅದೇ ರೀತಿಯಲ್ಲಿ  ಸುಖ-ದುಃಖಗಳ ಕೂಡಲ ಸಂಗಮವಾದ ಅಂತರಂಗವು ಸದೈವ ಪವಿತ್ರವೆಂದು ಬೇಂದ್ರೆಯವರು ತಮ್ಮ ಸಖಿಗೆ ಹೇಳುತ್ತಾರೆ.

ಬಾ ಅಲ್ಲಿ ಕಡಲಲ್ಲಿ ತೆರೆ ತೆರೆಯನೊಡೆವಲ್ಲಿ
ನೀರ್ ಬುರುಗು ಬಿಡುವಲ್ಲಿ ಮೀಯೋಣ ಬಾ
ತೆಪ್ಪವೊ ತಾರಿಯೊ ಹರಗೋಲೊ ಹಡಗವೊ
ತೆರೆ-ತೊಡೆ-ತೊಟ್ಟಿಲನೇರೋಣ ಬಾ.

ನಮ್ಮ ಬಾಳೂ ಸಹ ಸಮುದ್ರವನ್ನು ಸೇರುವ ಗಂಗೆಯಂತೆ ಇರಬೇಕು. ಕಡಲಲ್ಲಿ ನಾವು ಮೀಯಬೇಕು. ಅಲ್ಲಿ ಸೇರಿಕೊಳ್ಳಲು ನಾವು ನಮ್ಮಲ್ಲಿ ಇರುವ ತೇಲು-ಸಾಧನವನ್ನು ಉಪಯೋಗಿಸೋಣ. ಅದು ಸಾದಾ ತೆಪ್ಪವಿರಬಹುದು; ಅಥವಾ ತಾರಿಯೊ, ಹರಗೋಲೊ ಇರಬಹುದು. ನಮ್ಮ ಸಾಧನ ಯಾವುದೆನ್ನುವುದು ಮಹತ್ವದ್ದಲ್ಲ. ಕಡಲನ್ನು ಸೇರಿ, ತೆರೆಗಳ ತೊಡೆ ಎನ್ನುವ ತೊಟ್ಟಿಲನ್ನು ಏರೋಣ; ಆ ತೆರೆಗಳು ನಮ್ಮನ್ನು ಮೇಲೆ ಕೆಳಗೆ ತೂಗಾಡಿಸಲಿ; ನಾವು ಅದನ್ನು ಸಮಚಿತ್ತತೆಯಿಂದ ಒಪ್ಪಿಕೊಳ್ಳೋಣ. ಭೋರ್ಗರೆಯುವ ಈ ತೆರೆಯು ವಾತ್ಸಲ್ಯಮಯಿ ದೇವರ ತೊಡೆಯೇ ಆಗಿದೆ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳೋಣ.

ಸಪ್ಪೆ ಬಾಳುವೆಗಿಂತ ಉಪ್ಪುನೀರೂ ಲೇಸು
ಬಿಚ್ಚು ಸ್ಮೃತಿಗಳ ಹಾಯಿ ಬೀಸೋಣ ಬಾ
ಬೀಸೋಣ ಈಸೋಣ ತೇಲೋಣ ಮುತ್ತಿನ
ತವರ್ಮನೆ ಮುಟ್ಟನು ಮುಳುಗೋಣ ಬಾ

ಉಪ್ಪುನೀರಿನ ಕಡಲನ್ನೇಕೆ ಸೇರಬೇಕು? ಸಿಹಿನೀರಿನ ಗಂಗೆಯಲ್ಲಿಯೆ ಸುಖವಾಗಿ ಇರಲು ಆಗುವದಿಲ್ಲವೆ?’ ಎನ್ನುವ ತಮ್ಮ ಸಖಿಯ ಪ್ರಶ್ನೆಗೆ ಬೇಂದ್ರೆ ಹೇಳುವುದು ಹೀಗೆ: ಮಾನವನಿಗೆ ಸುಖ ಹಾಗು ದುಃಖ ಎರಡೂ ಅನುಭವಗಳು ಬೇಕು. ಕೇವಲ ಸುಖಾನುಭವವಿದ್ದರೆ, ಅದು ಸಪ್ಪೆಯಾದ ಬಾಳ್ವೆಯಾಗುವುದು. ಸಪ್ಪೆಯಾದ ಬಾಳುವೆಗಿಂತ ಸಂಕಟಗಳ ಉಪ್ಪು ನೀರನ್ನು ಕುಡಿಯುವುದು ಅಂತರಂಗದ ಆರೋಗ್ಯಕ್ಕೆ ಹಿತಕರವಾದದ್ದು! ಉಪ್ಪು ನೀರನ್ನು ನಾವು ಇದೀಗ ಸಾಕಷ್ಟು ಕುಡಿದಿದ್ದೇವೆ. ಅನುಭವಗಳ ನೆನಪಿನ ಹಾಯಿಯನ್ನು ಬಿಚ್ಚಿ, ನಮ್ಮ ದೋಣಿಯನ್ನು ನೆನಪಿನ ಕಡಲಲ್ಲಿ ಸಾಗಿಸೋಣ. ಕಡಲಲ್ಲಿ ಬರಿ ತೇಲಿದರೆ ಸಾಲದು, ಕಡಲಲ್ಲಿ ಮುಳಗಬೇಕು. ಅಂದಾಗ ಮಾತ್ರ ಮುತ್ತುಗಳ ತವರುಮನೆಯಾದ ಸಮುದ್ರದ ತಳವನ್ನು ಮುಟ್ಟಲು ಸಾಧ್ಯವಾಗುವುದು. ಅಮೂಲ್ಯವಾದದ್ದು ಬೇಕಾದರೆ, ನಾವು ಮುಳುಗಲು ಸಿದ್ಧರಿರಬೇಕು!
(ಬೇಂದ್ರೆಯವರನನ್ನ ಹಾಡುಎನ್ನುವ ಕವನದ ಕೊನೆಯ ನುಡಿಯನ್ನು ನೆನಪಿಸಿಕೊಳ್ಳೋಣ:
ಸರಸ ಜನನ
ವಿರಸ ಮರಣ
ಸಮರಸವೇ ಜೀವನ
ಬೇಂದ್ರೆಯವರ ಮತ್ತೊಂದು ಮಿಂಚು-ನುಡಿಯನ್ನು ನೆನಪಿಸಿಕೊಳ್ಳುವುದು ಇಲ್ಲಿ ಸಮಂಜಸವಾದೀತು:
ದುಃಖ ಬಂದಾಗ  ಹ್ಯಾಂಗರ ತಡಕೋಬಹುದು; ಸುಖ ಬಂದಾಗ ತಡಕೊಳ್ಳೋದು ಕಷ್ಟ.)

ತಾಂಡವ ನಡೆಸಿದ ಝಂಝಾವಾತದ
ಕಾಲಿನ ಹುಲುಗೆಜ್ಜೆ ನಾವಾಗಿರೆ
ನನಗೂ ನಿನಗೂ ಅಂಟಿದ ನಂಟಿನ
ಕೊನೆ ಬಲ್ಲವರಾರು ಕಾಮಾಕ್ಷಿಯೇ!

ಬೇಂದ್ರೆಯವರ ಸಮಯದಲ್ಲಿ, ಸ್ವಾತಂತ್ರ್ಯದ ಆಂದೋಲನ ರಭಸದಿಂದ ನಡೆದಿತ್ತು. ಬೇಂದ್ರೆಯವರು ಬರೆದನರಬಲಿಕವನದಿಂದಾಗಿ ಬೇಂದ್ರೆಯವರು ಕೆಲಸವನ್ನು ಕಳೆದುಕೊಂಡರು. ಅವರನ್ನು ಸೆರೆಮನೆಯಲ್ಲಿ, ನಂತರ ನಜರಬಂದಿಯಲ್ಲಿ ಇಡಲಾಯಿತು. ಆರು ವರ್ಷಗಳವರೆಗೆ ಅವರಿಗೆ ಯಾರೂ ಯಾವ ಕೆಲಸವನ್ನೂ ಕೊಡಕೂಡದು ಎಂದು ಸರಕಾರವು ಆಜ್ಞೆಯನ್ನು ಹೊರಡಿಸಿತು. ಬೇಂದ್ರೆಯವರ ಕುಟುಂಬವು ಪರಾಶ್ರಯದಲ್ಲಿ ಇರಬೇಕಾಯಿತು. ಇಡೀ ದೇಶದಲ್ಲಿ ನಡೆದ ರುದ್ರತಾಂಡವವು ದೇಶದ ತುಂಬೆಲ್ಲ ಝಂಝಾವಾತವನ್ನು ಅಂದರೆ ಬಿರುಗಾಳಿಯನ್ನೇ ಎಬ್ಬಿಸಿತು; ಬೇಂದ್ರೆಯವರನ್ನೂ ಬಾಧಿಸಿತು.

ಬೇಂದ್ರೆಯವರುಬರುವುದೇನೆ ನೆಪ್ಪಿಗೆ,ನಾವು ಬಿದ್ದ ಟೊಪ್ಪಿಗೆ’ (--‘ಗಂಗಾವತರಣಕವನಸಂಕಲನ--) ಎನ್ನುವ ಕವನದಲ್ಲಿ ಕಾಲವನ್ನು ಸ್ಮರಿಸಿದ್ದಾರೆ.) ದೇಶವನ್ನೇ ನಡುಗಿಸಿದ ಕಾಲನೃತ್ಯದಲ್ಲಿ, ತಾವೆಲ್ಲರೂ ಕಾಲನ ಕಾಲಿನ ಹುಲುಗೆಜ್ಜೆ ಎಂದು ಬೇಂದ್ರೆಯವರು ಭಾವಿಸುತ್ತಾರೆ.

ವಿರಹ ಹಾಗು ಸಂಕಟಗಳಿಂದಾಗಿ ಬೇಂದ್ರೆಯವರಿಗೆ, ತಾವು ದಂಪತಿಗಳು ಎಂದಾದರೂ ಕೂಡಿ ಇದ್ದೇವೆಯೆ ಎಂದು ಎನ್ನಿಸಿರಬಹುದು. ಆದುದರಿಂದಲೇ ಅವರುನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು ಕಾಮಾಕ್ಷಿಯೇಎಂದು ತಮ್ಮ ಸಖಿಯನ್ನು ಕೇಳುತ್ತಾರೆ. ಆದರೆ ವಾಕ್ಯದಲ್ಲಿ ಅನೇಕ ಅರ್ಥಗಳಿವೆ: ಮೊದಲನೆಯದಾಗಿ, ‘ಅಂಟಿದ ನಂಟುಎನ್ನುವ ಪದಪುಂಜವನ್ನು ನೋಡಿರಿ. ಬೇಂದ್ರೆಯವರಿಗೆ ತಮ್ಮ ಹೆಂಡತಿ, ‘ವಿಧಿ ತಂದ ವಧುವಾಗಿದ್ದಳು. ಅವಳಿಗಾದರೂ ಅಷ್ಟೇ ಸೈ. ಆದರೆ, ಒಂದು ಮರಕ್ಕೆ ಮತ್ತೊಂದು ಮರದ ಅಂಟನ್ನು (ಸಣ್ಣ ಶಾಖೆಯೊಂದನ್ನು) ಕೂಡಿಸಿ, ‘ಕಲಮು ಕಟ್ಟುವ’ (grafting) ಕ್ರಿಯೆಯು ನಿಮಗೆ ಗೊತ್ತಿರಬಹುದು. ಆಗ ಇವೆರಡೂ ವಿಭಿನ್ನ ಗಿಡಗಳು ಒಂದಾಗಿ ಬೆಳೆಯುತ್ತವೆ.  ಎರಡು ಹೋಗಿ ಒಂದಾಗುತ್ತವೆ. ಇದುಅಂಟಿದ ನಂಟು.’ ನಂಟು ಯಾವಾಗ ಕೊನೆಯಾಗುತ್ತದೆಯೊ ಎನ್ನುವುದು ಒಂದು ಅರ್ಥ.

ಆದರೆ ಕೊನೆಎನ್ನುವದಕ್ಕೆಅಂತ್ಯಎನ್ನುವ ಒಂದೇ ಅರ್ಥವಿಲ್ಲ. ಕೊನೆ ಎಂದರೆ ತುದಿಯೂ ಹೌದು, ಗೊನೆಯೂ ಹೌದು (ಉದಾಹರಣೆಗೆ ಬಾಳೆಯ ಗೊನೆ.) ಆದುದರಿಂದಕೊನೆ ಬಲ್ಲವರಾರು?’ ಎಂದು ಬೇಂದ್ರೆಯವರು ಕೇಳುವಾಗ, ನಮ್ಮ ದಾಂಪತ್ಯ ಎನ್ನುವ ವೃಕ್ಷದ ಗೊನೆ ಏನು, ಫಲಿತವೇನು;  ನಮ್ಮ ದಾಂಪತ್ಯದ culmination ಏನು ಎಂದೂ ಕೇಳುತ್ತಿದ್ದಾರೆ.

ಬೇಂದ್ರೆಯವರಿಗೆ ದಾಂಪತ್ಯವೆಂದರೆದಾಂಪತ್ಯಯೋಗ.’ ಇದು ಒಂದೇ ಜನ್ಮದ ನಂಟಲ್ಲ. ಜಗತ್ತಿನ ಮೊದಲ ಕಾದಂಬರಿಯಾದ, ಬಾಣಭಟ್ಟನು (ಏಳನೆಯ ಶತಮಾನದಲ್ಲಿ) ರಚಿಸಿದಕಾದಂಬರಿಯಲ್ಲಿ ಬರುವ ಪುಂಡರೀಕ ಹಾಗು ಮಹಾಶ್ವೇತೆಯರ ಹಾಗೆ, ಈ ದಾಂಪತ್ಯಯೋಗಸಿದ್ಧಿಗಾಗಿ ತಪಸ್ಸು ಮಾಡಬೇಕು. ತಾವು ಹಾಗು ತಮ್ಮ ಪತ್ನಿ ಪುಂಡರೀಕ ಹಾಗು ಮಹಾಶ್ವೇತೆಯರ ಹಾಗೆ ಎಂದು ಬೇಂದ್ರೆಯವರುಫಜಾರಗಟ್ಟಿ ಮುಟ್ಟೋಣ ಬಾ’, (--‘ಗಂಗಾವತರಣಕವನಸಂಕಲನ--)  ಎನ್ನುವ ಕವನದಲ್ಲಿ ಹೇಳಿದ್ದಾರೆ. ಆ ಕವನ ಕೊನೆಯಾಗುವುದು ಹೀಗೆ:

ಗುರುವಿನಂಗಳದ ಗಿಡಾ ಬಳ್ಳಿಯಾಗಿ
            ಹೊಸಾ ಹೂವು ನಾವು ಸುರಿಸೋಣು ಬಾ|
ತಾಯಿ ಪಾದದಾನಂದ ಗಂಧ ಉಂಡು
            ಬೆಂದವರ ಜೀವ ಬೆರಸೋಣ ಬಾ

ಇದು ಬೇಂದ್ರೆಯವರು ಸೂಚಿಸುವನನಗೂ ನಿನಗೂ ಅಂಟಿದ ನಂಟಿನ ಕೊನೆ’!

ಸಖೀಗೀತದ ಪ್ರತಿ ಪುಟವು ಕೊನೆಯಾಗುವುದು, ‘ಕಾಮಾಕ್ಷಿಎನ್ನುವ ಸಂಬೋಧನೆಯೊಂದಿಗೆ. ಕಾಮಾಕ್ಷಿ ಎಂದರೆ ಕಮನೀಯವಾದ (ಅರ್ಥಾತ್ ಸುಂದರವಾದ) ಕಣ್ಣುಗಳು ಇರುವ ಚೆಲುವೆ ಎನ್ನುವದೇನೊ ಸರಿಯೆ. ಆದರೆ ಬೇಂದ್ರೆಯವರು ಅದಷ್ಟೇ ಅರ್ಥವನ್ನು ಇಲ್ಲಿ ಹೇಳುತ್ತಿಲ್ಲ. ಕಾಮ ಅಂದರೆ ಬಯಕೆ. ಗಂಡನ ಎಲ್ಲ ಬಯಕೆಗಳಿಗೂ ಅವನ ಸಖಿಯುಅಕ್ಷಿಯಾಗಿದ್ದಾಳೆ, ಅವನನ್ನು ಗಮನಿಸುತ್ತಿರುವ, ಅವನ ಜೊತೆಯಾಗಿರುವ ಸಖಿಯಾಗಿದ್ದಾಳೆ. ಅಕ್ಷ ಎಂದರೆ portal ಎನ್ನುವ ಅರ್ಥವೂ ಇದೆ. ಆದುದರಿಂದ ಗಂಡನ ಬಯಕೆಗಳಿಗೆ ಇವಳು ದ್ವಾರವಾಗಿದ್ದಾಳೆ; ಅವನೊಡನೆ ಸತತ ಬಾಳು ನಡೆಸುತ್ತಿರುವ ಸಖಿಯಾಗಿದ್ದಾಳೆ. ಇದೆಲ್ಲವನ್ನೂ ಹೇಳಲು, ಬೇಂದ್ರೆಯವರುಕಾಮಾಕ್ಷಿಎನ್ನುವ ಪದವನ್ನು ಬಳಸುತ್ತಾರೆ.
… ………………………………………………….
ಬೇಂದ್ರೆಯವರ ಇತರ ಕವನಸಂಕಲನಗಳಲ್ಲಿ ಬರುವ ಕೆಲವೊಂದು ದಾಂಪತ್ಯಗೀತೆಗಳು ಸಹ ಸಖೀಗೀತೆಗಳೇ.  ಆದರೆ ದೀರ್ಘಕಾಲೀನ ಅವಧಿಯ ತಮ್ಮ ಬದುಕಿನ ಬಗೆಗೆ ಬರೆದ ಸಖೀಗೀತೆಯು  ಬೇಂದ್ರೆಯವರ ದಾಂಪತ್ಯಗೀತೆಯಷ್ಟೇ ಅಲ್ಲ ಅವರ ಆತ್ಮಗೀತೆಯೂ ಆಗಿದೆ. ಖಂಡಕಾವ್ಯದಲ್ಲಿ ಬೇಂದ್ರೆಯವರ ಬದುಕಿನ ಹಾಡು ಹಾಗು ಅವರ ಪತ್ನಿಯ ಸಾಂಗತ್ಯ ಮಿಳಿತವಾಗಿವೆ. ಬದುಕು ಗೆಳೆಯ-ಗೆಳತಿಯರನ್ನು ಮಾಗಿಸಿದ ರೀತಿ ಇಲ್ಲಿ ಹಿನ್ನೋಟದಲ್ಲಿ ನಿರೂಪಿತವಾಗಿದೆ. ‘ಇಲ್ಲಿಯವರೆಗೆ ನೋಡಿದ್ದು ಮೊದಲ ಅರ್ಧ ಭಾಗ ಮಾತ್ರ, ಇನ್ನೂ ನೋಡುವುದು ಸಾಕಷ್ಟಿದೆ; ತಮ್ಮ ದಾಂಪತ್ಯವು ತಮ್ಮನ್ನು ಪರಿಪೂರ್ಣತೆಯೆಡೆಗೆ ಕರೆದೊಯ್ಯಲಿ, ಇದಕ್ಕೆ ದೈವಸಹಾಯವಿರಲಿಎನ್ನುವ ನಂಬಿಕೆ ಹಾಗು ಹಾರೈಕೆಯೊಂದಿಗೆಸಖೀಗೀತಮುಕ್ತಾಯವಾಗುತ್ತದೆ. ಸಖೀಗೀತದ ಕೊನೆಯಲ್ಲಿರುವ ಎರಡು ನುಡಿಗಳು ಹೀಗಿವೆ:

ಅಂಬಿಕಾತನಯನ ಜಂಭದ ಪಾಡಳಿದು
ನಂಬಿಕೆಯು ಹಾಡಾಗಿ ಬಂತಿಲ್ಲಿಗೆ
ಪೂರ್ವಾನುರಾಗವೀ ಪರ್ವಕೆ ಸಂದಿತು
ಉತ್ತರೋತ್ತರವಿರಲಿ ಉತ್ತರಕೆ!

ಕಲ್ಯಾಣ-ಶಕ್ತಿಯ ಕೈಯ್ಯ ಕುಶಲತೆಯಿಂದ
ಪಾಕವಾಗಲಿ ಪ್ರೇಮ!’ ಎನ್ನುವೆನೇ
ನನಗೂ ನಿನಗೂ ಅಂಟಿದ ನಂಟಿನ
ಕೊನೆ ಬಲ್ಲವರಾರು ಕಾಮಾಕ್ಷಿಯೆ?

7 comments:

MKA said...

ಸುನಾಥ್ ಕಾಕಾ,

ನಿಮ್ಮ blogಅನ್ನು ಸಾಕಷ್ಟು ದಿನದಿಂದ follow ಮಾಡುತ್ತ ಬಂದಿದ್ದೇನೆ. ಅದರಿಂದ ಸ್ಫೂರ್ತಿ ಪಡೆದಿದ್ದೀನಿ ಕೂಡ. ಹ್ಯಾಗಂದರೆ, ಇಲ್ಲಿ ನೋಡಿ. :)

https://darabendreinenglish.wordpress.com/2016/04/19/the-descent-of-the-ganga-%E0%B2%97%E0%B2%82%E0%B2%97%E0%B2%BE%E0%B2%B5%E0%B2%A4%E0%B2%B0%E0%B2%A3/

ಅಂದ ಹಾಗೆ, ನಿಮಗೆ ಹೊತ್ತು ಸಿಕ್ಕಿದರೆ ಬೇರೆ blog postsಗಳನ್ನು ಓದಿ.

Madhava

sunaath said...

ಪ್ರಿಯ ಮಾಧವ,
‘ಗಂಗಾವತರಣ’ದ ನಿಮ್ಮ ಕಾವ್ಯಾನುವಾದವನ್ನು ಓದಿದೆ. ತುಂಬಾ ಖುಶಿಯಾಯಿತು. ಓದುತ್ತಿದ್ದಂತೆ, ಇದು ಬೇಂದ್ರೆಯವರ ಕವನವೇ ಎಂದೆನಿಸಿತು. ನೀವು ಮೂಲ ಕವನದ ಛಂದಸ್ಸಿಗೆ ಸ್ವಲ್ಪವೂ ಕುಂದು ಬರದಂತೆ ಅನುವಾದಿಸಿದ್ದೀರಿ. ಆಂಗ್ಲ ಪದಗಳೂ ಸಹ ಸಮರ್ಪಕವಾಗಿವೆ ಎಂದು ಅನಿಸುತ್ತದೆ. ಆದರೆ, ಮೂಲ ಕವನವನ್ನು ಪಕ್ಕದಲ್ಲಿಟ್ಟುಕೊಂಡು ನಾನಿನ್ನೂ ಓದಿಲ್ಲ. ಬಹುಶಃ ಅದರ ಅಗತ್ಯ ಬೀಳಲಿಕ್ಕಿಲ್ಲ!. ನಿಮ್ಮ ಇತರ ಅನುವಾದಗಳನ್ನು ಮತ್ತೆ ಓದುವೆ. ನಿಮ್ಮ blog link ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.

MKA said...

ಪ್ರೀತಿಯ ಸುನಾಥ್ ಕಾಕಾ,

ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಮೆಚ್ಚುಗೆಗೆ ಬಹಳ thanks! ನಿಮ್ಮ ಮಾತನ್ನು ಓದಿ ಖುಶಿಯಾಯಿತು. ನಾನು ಹೇಳಿದ ಹಾಗೆ, ನನ್ನ ಅನುವಾದ ಸಾಕಷ್ಟು ನಿಮ್ಮ ವ್ಯಾಖ್ಯಾನದ ವಿವರಗಳನ್ನು ಬಳಸಿದೆ. ಅದಲ್ಲದೆ, ನನ್ನ ಬೇರೆ ಅನುವಾದಗಳಿಗೂ ನಿಮ್ಮ ವ್ಯಾಖ್ಯಾನಗಳು ನೆರವು ನೀಡಿದ್ದೇವೆ. For instance, 'ಕರಡಿ ಕುಣಿತ'.

ಹೂಂ, ನಿಮಗೆ ಪುರಸತ್ತು ಸಿಕ್ಕಿದ ಹಾಗೆ ಬೇರೆ postsಗಳೂ ಓದಿರಿ. ಅಂದ ಹಾಗೆ, ನನ್ನ latest blog post 'ಜೋಗಿ'ಯ ಅನುವಾದ. ನಿಜ ಹೇಳಬೇಕಂದರೆ, ಈ ಅನುವಾದ ನನ್ನ ಇಲ್ಲಿಯವರೆಗಿನ greatest triumph ಅಂಥ ಎಂದುಕೊಳ್ಳುತ್ತೇನೆ. Because, even though ಆ ಕವನದ ಸಂಪೂರ್ಣ ಅನುವಾದ (especially its ಧ್ವನಿ and ದ್ವಂದ್ವಾರ್ಥ) practically ಅಸಾಧ್ಯವೇ ಆಗಿದ್ದರು, ನನಗೆ ನನ್ನೀ ಅನುವಾದ ಬಹಳ ಸಂತೋಷ ಹಾಗೂ ತೃಪ್ತಿ ತುಂದುಕೊಟ್ಟಿತು. :)

ಕೊನೆಯದಾಗಿ ಕಾಕಾ, ನಿಮಗೆ ಅಭ್ಯಂತರ ಇಲ್ಲದಿದ್ದರೆ, ನಿಮ್ಮ email address ಕೊಡುವಿರಾ? ನನ್ನ email address ಬಂದು: mk.ajjampur@gmail.com.

Madhava

Anonymous said...

Super poetry ❤️❤️

sunaath said...

ಧನ್ಯವಾದಗಳು, Anonymus!

Sagar M K said...

ಧನ್ಯವಾದಗಳು

sunaath said...

ಧನ್ಯವಾದಗಳು, Sagar M K.