Saturday, February 16, 2008

ಬೇಂದ್ರೆ

“ಬಾರೊ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ” ಇದು ವರಕವಿ ಬೇಂದ್ರೆಯವರ ಒಂದು ಮನೋಜ್ಞವಾದ ಕವನ. ಈ ಕವಿತೆಯಲ್ಲಿ “ಬೇಲಿಗೂ ಹೂಬೆರಳಿದೆ” ಎನ್ನುವ ಒಂದು ಸಾಲು ಬರುತ್ತದೆ. ಬೇಲಿ ಮನೆಯ ಕಾವಲುಗಾರ. ಬೇಲಿಯನ್ನು ದಾಟಿ ಅತಿಕ್ರಮಣ ಮಾಡುವ ಧೈರ್ಯ ಅಪರಿಚಿತರಿಗೆ ಬರಲಾರದು. The job of fence is defence (against encroachers). ಇಂತಹ ಬೇಲಿಗೂ ಸಹ ಹೂಬೆರಳಿದೆ. ಮನೆಯ ಮಿತ್ರರನ್ನು ಈ ಬೇಲಿ ಹೂವುಗಳ ಹಸ್ತಲಾಘವದೊಂದಿಗೆ ಸ್ವಾಗತಿಸುತ್ತದೆ. ಇದು ಮೇಲ್ನೋಟಕ್ಕೆ ತೋರುವ ಅರ್ಥ. ಬೇಂದ್ರೆಯವರ ಅನೇಕ ಕವನಗಳಲ್ಲಿ ಇಂತಹ ವಿರೋಧಾಭಾಸದ ಅರ್ಥಚಮತ್ಕಾರ ಎದ್ದು ಕಾಣುತ್ತದೆ.
ಉದಾಹರಣೆಗೆ “ಎಲೆಗಳ ಮೇಲೆ ಹೂಗಳ ಒಳಗೆ ಅಮೃತದಾ ಬಿಂದು…..”.
ಒಂದು ಕ್ಷಣದಲ್ಲಿ ಕರಗಿ ಹೋಗುವ ಇಬ್ಬನಿಗೆ ಬೇಂದ್ರೆ “ಅ-ಮೃತದಾ ಬಿಂದು” ಎಂದು ಕರೆಯುತ್ತಾರೆ. ಆದರೆ, “ಬೇಲಿಗೂ ಹೂಬೆರಳಿದೆ” ಎನ್ನುವ ಮಾತಿನಲ್ಲಿ ಮತ್ತೂ ಒಂದು ಅರ್ಥವಿದೆ. ಬೇಂದ್ರೆಯವರ ಕಾಲದಲ್ಲಿ ಧಾರವಾಡದಲ್ಲಿಯ ಮನೆಗಳಿಗೆ ಕಲ್ಲಿನ ಅಥವಾ ಇಟ್ಟಂಗಿಯ ಅವರಣದ ಗೋಡೆಗಳು ಸಾಮಾನ್ಯವಾಗಿ ಇರುತ್ತಿರಲಿಲ್ಲ. ಕಾಂಕ್ರೀಟ್ ಅಂತೂ ಆಗ ಇರಲೇ ಇಲ್ಲ. ಸಾಧಾರಣವಾಗಿ ಎಲ್ಲ ಮನೆಗಳ ಆವರಣಗಳಿಗೆ ಬಿಳಿ ಅಥವಾ ನೀಲಿ ಬಣ್ಣದ tube shaped ಹೂವುಗಳ ಬೇಲಿಯದೇ ಆವರಣವಿರುತ್ತಿತ್ತು. ಇದು “ಬೇಲಿಗೂ ಹೂಬೆರಳಿದೆ” ಎನ್ನುವ ಸಾಲಿನ ವಾಸ್ತವ ಅರ್ಥ. ಈ ತರಹದ ವಾಸ್ತವತೆ ಬೇಂದ್ರೆಯವರ ಕಾವ್ಯದ ಒಂದು ವೈಶಿಷ್ಟ್ಯವಾಗಿದೆ. ಬೇಂದ್ರೆಯವರ ಕಲ್ಪನಾಶಕ್ತಿ ಅಗಾಧವಾದದ್ದು.ಆದರೆ ಅವರ ಕಲ್ಪನೆಯ ಕುದುರೆ ಎಂದೂ ವಾಸ್ತವತೆಯ ಗೆರೆ ದಾಟಲಿಲ್ಲ. ಸಾಮಾನ್ಯವಾಗಿ ಕಾಣುವ ಸಾಲಿನಲ್ಲಿಯೂ ಸಹ ಈ ವಾಸ್ತವತೆಯ ಜೋಡಣೆ ಮಾಡುವ ಕಲ್ಪಕಶಕ್ತಿ ವರಕವಿಗಳಿಗೆ ಮಾತ್ರ ಸಾಧ್ಯ.
ಉದಾಹರಣೆಗೆ ಅವರ “ಕುಣಿ ಕುಣಿ ನವಿಲೆ, ಕುಣಿ ಕುಣಿ” ಕವನದಲ್ಲಿ “ಬೇಸಿಗೆ ಬಿಸಿಲಿಗೆ ಬಾಯ್ಬಿಡುತಿದೆ ಧರೆ” ಎನ್ನುವ ಸಾಲು ಬರುತ್ತದೆ. ಧರೆ ನೀರಡಿಸಿದೆ ಎನ್ನುವದು ಕಲ್ಪನೆಯ ಮಾತಾದರೆ, ಬಿಸಿಲಿನಿಂದಾಗಿ ಭೂಮಿಯಲ್ಲಿ ಕೊರೆ ಬೀಳುವದು ವಾಸ್ತವ ದೃಶ್ಯ. ಇದರಂತೆ “ಹಕ್ಕಿ ಹಾರುತಿದೆ ನೋಡಿದಿರಾ” ಕವನದಲ್ಲಿ “ಗಾವುದ ಗಾವುದ ಗಾವುದ ದೂರಕೆ, ಎವೆ ತೆರೆದಿಕ್ಕುವ ಹೊತ್ತಿನ ಒಳಗೆ” ಎನ್ನುವ ಸಾಲು ಬರುತ್ತದೆ. ಭಾರತೀಯ ಕಾಲಮಾನದಲ್ಲಿ ಕನಿಷ್ಠ ಮಾಪನವೆಂದರೆ “ನಿಮಿಷ”. ಕಣ್ಣುರೆಪ್ಪೆಯನ್ನು ಬಡೆಯುವ ಕಾಲಾವಧಿಗೆ “ನಿಮಿಷ”ವೆಂದು ಕರೆಯುತ್ತಾರೆ. (ದೇವತೆಗಳು ಕಣ್ಣು ಮುಚ್ಚುವದಿಲ್ಲವೆಂದೇ , ಅವರು ’ಅನಿಮೇಷ’ರು.) ಮಾನವಜೀವಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದಷ್ಟು, ಅವನನ್ನು ಬೆಚ್ಚಿ ಬೀಳಿಸುವಷ್ಟು ಕ್ಷಿಪ್ರವಾಗಿ ಕಾಲ ಸಾಗುತ್ತದೆ ಎನ್ನುವದನ್ನು ಹೇಳುತ್ತಲೆ, ಬೇಂದ್ರೆ ಕಾಲಮಾನದ ವಾಸ್ತವ ಪರಿಮಾಣವನ್ನು (ನಿಮಿಷ=ಎವೆ ತೆರೆದಿಕ್ಕುವ ಹೊತ್ತಿನ ಒಳಗೆ) ಬಳಸಿಕೊಳ್ಳುತ್ತಾರೆ.
ಇಂತಹ ಅನೇಕ ಉದಾಹರಣೆಗಳು ಅವರ ಕವನಗಳಲ್ಲೆಲ್ಲ ಕಾಣಸಿಗುತ್ತವೆ. “ಶರಪಂಜರ” ಚಲನಚಿತ್ರದಲ್ಲಿ ಬಳಸಿಕೊಳ್ಳಲಾದ ಅವರ ಕವನ “ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ” ಎನ್ನುವ ಕವನದಲ್ಲಿಯ ಈ ಸಾಲು ವಿಶ್ವ ಪ್ರಣಯವನ್ನು ಪ್ರತಿನಿಧಿಸುವಂತೆಯೆ, ಎರಡು ಧ್ರುವಗಳ ನಡುವೆ ಇರುವ magnetic force ಎನ್ನುವ ವಾಸ್ತವತೆಯನ್ನೂ ದರ್ಶಿಸುತ್ತದೆ.
ಬೇಂದ್ರೆ-ಕವನಗಳ ವಾಸ್ತವಿಕತೆ ಅನೇಕ ಸಲ documentationದ ಕಾರ್ಯವನ್ನೂ ಸಹ ನಿರ್ವಹಿಸುತ್ತದೆ.
“ಬೇಲಿಗೂ ಹೂಬೆರಳಿದೆ” ಎನ್ನುವ ಕಾವ್ಯೋಕ್ತಿ ಒಂದು ಕಾಲಾವಧಿಯಲ್ಲಿ ಧಾರವಾಡದ ಮನೆಯ ಆವರಣಗಳನ್ನು documentation ಮಾಡಿದಂತೆಯೆ, ಅವರ ಇನ್ನೊಂದು ಕವನ “ಹುಬ್ಬಳ್ಳಿಯಾಂವಾ” ಸಹ documentationದ ಒಂದು ಅತ್ಯುತ್ತಮ ಉದಾಹರಣೆ.
“ಭಾರಿ ಜರದ ವಾರಿ ರುಮಾಲಾ ಸುತ್ತಿಕೊಂಬಾವಾ, ತುಂಬ ಮೀಸಿ ತೀಡಿಕೋತ ಹುಬ್ಬ ಹಾರಿಸಾಂವಾ” ಎನ್ನುವ ಸಾಲು ಆ ಕಾಲಾವಧಿಯ ರಸಿಕರ ವಾಸ್ತವ ಚಿತ್ರಣ ನೀಡುತ್ತದೆ. ಇದಕ್ಕೂ ಮುಖ್ಯವಾಗಿ,
“ಕಸಬೇರ ಕಳೆದು, ಬಸವೇರ ಬಿಟ್ಟು ಬಂದೇನಂದಾಂವಾ,
ಜೋಗತೇರಿಗೆ ಮೂಗತಿ ಹಾಂಗ ನೀ, ನನಗಂದಾಂವಾ”,
ಸಾಲುಗಳಲ್ಲಿಯ ವೇಷ್ಯೆಯರ ಶ್ರೇಣೀಕರಣವನ್ನು ಗಮನಿಸಬೇಕು. ವೇಷ್ಯೆಯರಲ್ಲಿ ಅತಿ ಕೆಳಮಟ್ಟದವರು ’ಕಸಬೆ’ಯರು; ಅವರ ಮೇಲಿನವರು ’ಬಸವೆ’ಯವರು; ’ಜೋಗತಿ’ ಇವರೆಲ್ಲರಿಗೂ ಮೇಲ್ಮಟ್ಟದ ವೇಷ್ಯೆ.
ತಮ್ಮ ಕಾಲ ಹಾಗು ಸ್ಥಳಗಳ ವಾಸ್ತವತೆಯ documentation ಅನ್ನು ಬೇಂದ್ರೆಯವರಂತೆ ಕಾವ್ಯದಲ್ಲಿ ಜೋಡಿಸಿದ ಕವಿ ಮತ್ತೊಬ್ಬರಿಲ್ಲ.
ವಾಸ್ತವತೆ ಹಾಗು ಕಲ್ಪಕತೆ ಈ ಜೋಡು ಕುದುರೆಗಳ ಸಾರೋಟಿನ ಮೇಲೆ ಬೇಂದ್ರೆಯವರ ಕಾವ್ಯದೇವಿ ತ್ರಿಭುವನ ಪರ್ಯಟನ ಮಾಡಿದ್ದಾಳೆ ಎಂದರೆ ಅತಿಶಯೋಕ್ತಿಯಾಗಲಾರದು.

12 comments:

Unknown said...

ಬೇಂದ್ರೆಯವರ ಕಾವ್ಯದ ಸೊಗಸನ್ನು ಸೊಗಸಾಗಿ ತೋರಿಸಿದ್ದೀರಿ. ಅಭಿನಂದನೆಗಳು.

Jagali bhaagavata said...

ಈ ಬರಹ ಲಾಯ್ಕಿತ್ತ್. ತುಂಬ ಒಳ್ಳೆಯ ಮಾಹಿತಿಗಳು

sunaath said...

ಧನ್ಯವಾದಗಳು, ವನಮಾಲಾ.

sunaath said...

ಹೌದಾ ಭಾಗವತರೆ, ನಿಮ್ಮ comment ನನಗೆ ಸ್ಫೂರ್ತಿ ಕೊಡುತ್ತಿದೆ.

Anonymous said...

"ವಾಸ್ತವತೆ ಹಾಗು ಕಲ್ಪಕತೆ ಈ ಜೋಡು ಕುದುರೆಗಳ ಸಾರೋಟಿನ ಮೇಲೆ ಬೇಂದ್ರೆಯವರ ಕಾವ್ಯದೇವಿ ತ್ರಿಭುವನ ಪರ್ಯಟನ ಮಾಡಿದ್ದಾಳೆ " - ಬೇಂದ್ರೆ ಪ್ರತಿಭೆಯನ್ನು ಈ ಮಾತಿನಲ್ಲಿ ಸೆರೆಹಿಡಿದಿದ್ದೀರಿ!

ಶಂಭಾ ಜೋಶಿಯವರ ಬಗ್ಗೆಯೂ ತಿಳಿಸಿ.

sunaath said...

ಧನ್ಯವಾದಗಳು,ತ್ರಿವೇಣಿಯವರೆ! ಶಂಬಾ ಜೋಶಿಯವರ ಸಂಶೋಧನೆಗಳ ಬಗೆಗೆ ಬರೆಯುವದೆಂದರೆ ಕೊಡದಲ್ಲಿ ಸಮುದ್ರ ಹಿಡಿದಂತೆ. ಆದರೂ ಸಹ ಪ್ರಯತ್ನಿಸುತ್ತೇನೆ!

ಮನಸ್ವಿನಿ said...

ನಮಸ್ಕಾರ,

ನಿಮಗೆ ಸಾವಿರ thanks.
ನನ್ನ ಅತ್ಯಂತ ಪ್ರೀತಿಯ ಕವಿಯ ಬಗ್ಗೆ ಇಷ್ಟೆಲ್ಲ ಮಾಹಿತಿ ಒದಗಿಸಿದ್ದಕ್ಕೆ.

sunaath said...

ಮನಸ್ವಿನಿಯವರೆ,
ಆ ’ಗಂಗಾವತರಣ’ಪ್ರವಾಹವನ್ನು ಬೊಗಸೆಯಲ್ಲಿ ಹಿಡಿದು ನಿಮಗೆ ಕೊಟ್ಟಿದ್ದೇನಷ್ಟೆ.

Manjula said...

ಬೇಂದ್ರೆ ಅವರು ವರಕವಿ, ಅವರ ಬಗ್ಗೆ ತಮಗೆ ಇಷ್ಟೊಂದು ಮಾಹಿತಿ ಇರುವುದನ್ನು ತಿಳಿದು ಅಚ್ಚರಿ-ಸಂತೋಷ ಒಟ್ಟಿಗೆ ಆಗುತಿದೆ.. ಹೀಗೆ ಮೂಡಿ ಬರುತಿರಲಿ ಅಮೃತ ಧಾರೆ.. ಬೇಂದ್ರೆ ಅಜ್ಜನವ ಸಂಪೂರ್ಣ ಕವನಗಳನ್ನು ಇಲ್ಲಿ ನೋಡಲು ಬಯಸುತ್ತೇನೆ.. :-) ಅಂದ ಹಾಗೆ, ನನ್ನ ತವರೂರು ಧಾರವಾಡ.. :-)

sunaath said...

ಓಹೋಹೋ, ನೀವು ಸಹ ಧಾರವಾಡದವರೆ! ನಾವು ಹಾಗಾದರೆ ಒಂದೇ ಊರಿನವರು. ಬೇಂದ್ರೆಯವರ ಕವನಗಳ ಬಗೆಗೆ ಸಾಕಷ್ಟು ಹರಟೆ ಹೊಡೆಯೋಣ!

Shiv said...

ಬೇಂದ್ರೆ ಕಾವ್ಯ ವಿಹಾರ ಹೀಗೆ ಮುಂದುವರಿಸಿ..
ಶ್ಲಾಘನೀಯ ಕಾರ್ಯ ಮಾಡುತ್ತಿದ್ದೀರಿ..

sunaath said...

ಧನ್ಯವಾದಗಳು,ಶಿವ.