Saturday, February 23, 2008

ಪಾತರಗಿತ್ತಿ ಪಕ್ಕಾ

’ಪಾತರಗಿತ್ತಿ ಪಕ್ಕಾ’ ಇದು ಬೇಂದ್ರೆಯವರ ಒಂದು ಅದ್ಭುತ ಕವನ. ಪಾತರಗಿತ್ತಿಯ ಸುಳಿದಾಟವನ್ನು ಗಮನಿಸಿರಿ. ನಿಮ್ಮ ಕಣ್ಣೆದುರಿಗೇ ಅದು ಸುತ್ತಾಡಿದರೂ ಸಹ ಅದರ ಸುಳಿದಾಟವನ್ನು trace ಮಾಡುವದು ಅಸಾಧ್ಯವಾಗುತ್ತದೆ.

Brevity; ಇದು ಪಾತರಗಿತ್ತಿಯ ಸುಳಿದಾಟದ ಮೋಹಕ ಲಕ್ಷಣ.
ಈ ಲಕ್ಷಣವನ್ನು ಕವನದ metreನಲ್ಲಿ ಅತಿ ಸಹಜವಾಗಿ ಅಳವಡಿಸಿದ್ದಾರೆ ಬೇಂದ್ರೆ. ಬೇಂದ್ರೆಯವರು ಕಂದ, ಷಟ್ಪದಿ, ಸುನೀತ, ಮುಕ್ತಛಂದಸ್ಸು ಮೊದಲಾದ ಎಲ್ಲ ಕಾವ್ಯಛಂದಸ್ಸುಗಳನ್ನೂ ಬಳಸಿಕೊಂಡಿದ್ದಾರೆ. ಕಾವ್ಯವೆನ್ನುವ ಆತ್ಮಕ್ಕೆ ಛಂದಸ್ಸು ಎನ್ನುವ ಶರೀರ ಸಹಜವಾಗಿರಬೇಕು: ಇದು ಬೇಂದ್ರೆ ಕಾವ್ಯದ ಲಕ್ಷಣ.
ಪಾತರಗಿತ್ತಿಯ ಸುಳಿದಾಟದಲ್ಲಿ ಕ್ಷಿಪ್ರತೆ (ಅಥವಾ brevity) ಇರುವಂತೆಯೇ ದಣಿವರಿಯದ ಹಾರಾಟವೂ ಇರುತ್ತದೆ. ನಿಮ್ಮ ಮನೆಯ ಮುಂದೆಯೇ ಅದು ಮೈಲುಗಟ್ಟಲೆ ಸುಳಿದಾಡಿರಬಹುದು. ತನ್ನ ದಿನದ ಸುಳಿದಾಟದಲ್ಲಿ ಇಡೀ ಅಡವಿಯನ್ನೇ ಅದು ತಿರುಗಿರಬಹುದು. ಪಾತರಗಿತ್ತಿಯ ಸುಳಿದಾಟದಷ್ಟೇ ದೀರ್ಘ ಹಾಗು ಸ್ವಾರಸ್ಯಕರವಾಗಿದೆ ಬೇಂದ್ರೆಯವರ ಈ ಕವನ. ಪಾತರಗಿತ್ತಿ ಮುಟ್ಟಿದ ಎಲ್ಲ ಹೂವುಗಳನ್ನೂ ಬೇಂದ್ರೆ ಮುಟ್ಟಿದ್ದಾರೆ. ಆ ಕಾಲದಲ್ಲಿ ಧಾರವಾಡದ ಪರಿಸರದಲ್ಲಿ ಅರಳುತ್ತಿರುವ ಎಲ್ಲ ಹೂವುಗಳೂ ಈ ಕವನದಲ್ಲಿ ಬಂದಿವೆ. ಸೂರ್ಯಪಾನ, ತುರುಬಿ, ಕಳ್ಳಿ, ರುದ್ರಗಂಟಿ, ವಿಷ್ಣುಗಂಟಿ, ಮದಗುಣಕಿ, ಸೀಗಿ, ಗೊರಟಿಗೆ, ಮಾಲಿಂಗನ ಬಳ್ಳಿ, ಗುಲಬಾಕ್ಷಿ, ಅಡವಿ ಮಲ್ಲಿಗಿ ಅಂತೂ ಸರಿಯೆ; ಹೇಸಿಗೆ ಹೂವನ್ನೂ ಸಹ ಬಿಟ್ಟಿಲ್ಲ.
’ಹೇಸಿಗೆ ಹೂವಿನ ಬಳಿಗೆ
ಹೋಗಿ ಒಂದs ಗಳಿಗೆ’ ಎಂದು ಆ ಹೂವಿಗೂ ಸಹ ತಕ್ಕ ಮನ್ನಣೆ ತೋರಿಸಿದ್ದಾರೆ.
ನಾಯಿ ಛತ್ತರಿಗಿ ಹಾಗೂ ಗುಬ್ಬಿ ಬೆಳಸಿಗೂ ಸಹ ಈ ಪಾತರಗಿತ್ತಿ ಸಂದರ್ಶನ ನೀಡಿದೆ.

ಬೇಂದ್ರೆಯವರ ಕವನದಲ್ಲಿ ವಾಸ್ತವತೆ ಒಡೆದು ಕಾಣುವ ಲಕ್ಷಣವೆನ್ನಲು , ಈ ಕೆಳಗಿನ ಸಾಲುಗಳನ್ನು ನೋಡಬಹುದು:
“ಹಡಿಯೆ ಬೀಜ ಗಂಡು
ಹಾರ ಹರಿಕಿ ಅಂದು”
ದ್ವಿಲಿಂಗಿ ಸಸ್ಯಗಳಿಗೆ ಪಾತರಗಿತ್ತಿ ’ಗಂಡು ಹಡೆ’ ಎಂದು ಹಾರೈಸುತ್ತದೆ.

“ಇಷ್ಟು ಎಲ್ಲಾ ಮಾಡಿ
ಸಪ್ಪಳಿಲ್ಲದಾಡಿ”
ಈ ವಾಸ್ತವತೆ ಬೇಂದ್ರೆಯವರನ್ನು ಬೆರಗುಗೊಳಿಸುತ್ತದೆ.

ಪಾತರಗಿತ್ತಿ ಎಷ್ಟೆ ದೂರ ಸುಳಿದಾಡಲಿ, ಅದರ ಜೀವನ ಕ್ಷಣಿಕ. ಈ ವಾಸ್ತವತೆ ಸಹ ಈ ಕವನದ ಕೊನೆಯ ಸಾಲುಗಳಲ್ಲಿ ಅದ್ಭುತವಾಗಿ ವ್ಯಕ್ತವಾಗಿದೆ:
“ಕಾಣದೆಲ್ಲೊ ಮೂಡಿ
ಬಂದು ಗಾಳಿಗೂಡಿ

ಇನ್ನು ಎಲ್ಲಿಗೋಟ?
ನಂದನದ ತೋಟ!”

೩೯ ದ್ವಿಪದಿಗಳ “ಪಾತರಗಿತ್ತಿ ಪಕ್ಕಾ” ಒಂದು ಅದ್ಭುತ ಕವನ.

15 comments:

ರಾಧಾಕೃಷ್ಣ ಆನೆಗುಂಡಿ. said...

ಬೇಂದ್ರೆ ನಿಮಗೆ ಯಾಕಿಷ್ಟು ಕಾಡುತ್ತಾರೆ.

sunaath said...

ಕಾಡುವದು ಬೇಂದ್ರೆಯವರ ಸ್ವಭಾವ. ರಸ್ತೆಯಲ್ಲಿ ಸಿಕ್ಕವರನ್ನೂ ಸಹ ತಾಸುಗಟ್ಟಲೆ ’ಕಾಡು’ತ್ತ ನಿಲ್ಲುತ್ತಿದ್ದರು ಬೇಂದ್ರೆ!

ಸುಪ್ತದೀಪ್ತಿ suptadeepti said...

ಬೇಂದ್ರೆ ಕವನಗಳ ಬಗ್ಗೆ ನೀವು ಮಾತಾಡುತ್ತಾ ಇದ್ದರೆ ಕೇಳುತ್ತಾ ಕೇಳುತ್ತಾ ಇಲ್ಲೇ ನಿಂತು ನಿಮ್ಮನ್ನು ಕಾಡಬಹುದಾದವರ ಗುಂಪಲ್ಲಿ ನಾನು ಮೊದಲಿಗಳು.

sunaath said...

Pleasure is mine.

ಶಾಂತಲಾ ಭಂಡಿ (ಸನ್ನಿಧಿ) said...

sunAth ಅವರೆ...
ಬೇಂದ್ರೆಯವರ ಕವನಗಳ ಬಗ್ಗ್ಗೆ ಚೆನ್ನಾದ ಮಾಹಿತಿ ನೀಡಿ, ಬ್ಲಾಗಿಗೆ ಬಂದವರ ಆಸರಿಗೆ ಸಿಹಿ ನೀರುಣಿಸುತ್ತಿದ್ದೀರ.
ಒಳ್ಳೆಯ ಮಾಹಿತಿಗಳ ನೀಡುವ ನಿಮ್ಮ ಬರಹಗಳಿಷ್ಟವಾದ್ವು.

sunaath said...

ಶಾಂತಲಾ ಅವರೆ,
ಸಲ್ಲಾಪಕ್ಕೆ ಸುಸ್ವಾಗತ.
ಉತ್ತರ ಕನ್ನಡದ ’ಆಸರೆ’ಯಷ್ಟು ಜೀವನದಾಯಕವಾದ ಪಾನೀಯ ಇನ್ನೊಂದಿಲ್ಲ. ಬೇಂದ್ರೆಯವರ ಕವನಗಳೂ ಜೀವನಕ್ಕೆ ಆಸರೆ ಎನ್ನೋಣವೆ?

ಮನಸ್ವಿನಿ said...

ನಮಸ್ಕಾರ,

ಧನ್ಯವಾದಗಳು.

ಬೇಂದ್ರೆಯವರ ಈ ಎರಡು ನುಡಿಮುತ್ತುಗಳನ್ನ ನೋಡಿ.

೧.೬೦ ಕ್ಕೆ ಅರಳು ಮರಳು ಅಲ್ಲ, ೬೦ಕ್ಕೆ ಮರಳಿ ಅರಳು.
೨.ಸಾವಿರದಾಚೆ ಲಕ್ಷ(ಲಕ್ಷ್ಯ) -- ಗಣಿತವೋ, ತತ್ವವೋ!

ಆಕಾಶವಾಣಿಯವರು ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಕೇಳಿದ ಮಾತುಗಳು.(ಯಾರು ಹೇಳಿದ್ದೆಂದು ನೆನಪಿಲ್ಲ, ಕ್ಷಮಿಸಿ)

sunaath said...

ಮನಸ್ವಿನಿಯವರೆ,
ಬೇಂದ್ರೆಯವರ ಎರಡು ಸುಂದರ ಹೇಳಿಕೆಗಳನ್ನು ನಮ್ಮೆಲ್ಲರೆದುರಿಗೆ ಇಟ್ಟಿದ್ದೀರಿ. ಧನ್ಯ್ಸವಾದಗಳು.
’ಅರಳು ಮರಳು’ ಕವನಸಂಕಲನದಲ್ಲಿಯ ಅರಿಕೆಯನ್ನು ಇಲ್ಲಿ reproduce ಮಾಡಿದ್ದೇನೆ:

ಅರಳಲ್ಲ ನಾನು, ಮರುಳಾದೆನಯ್ಯ
ನನ್ನೆದೆಯ ಮರಳುಸಿದ್ಧ
ನಿಮ್ಮರಳಿನಿಂದ ಮರಮರಳಿ ಅರಳಿ
ಸ್ಫುಟವಾಗಿ ಭಾವಶುದ್ಧ
ನಿಮ್ಮಡಿಗೊ ಮುಡಿಗೊ ಮುಡಿಪಾಯ್ತು ಮಾತು
ಸಂತತದ ಏಕನಾದ
ಈ ಕೊರಳು ಬೆರಳು, ಆ ಕರಳು ಅರಳು
ಮರಳೂನು ತಂ ಪ್ರಸಾದ

Unknown said...

ಸುನಾಥ ಅವರೆ,
ಪಾತರಗಿತ್ತಿ ಪಕ್ಕಾ ಎಂದು ನೋಡಿದಾಗ ನನ್ನ ಮಗಳಿಗೆ, ಚಿಕ್ಕವಳಿದ್ದಾಗ ಈ ಕವನ ಕಲಿಸಿದ್ದು ನೆನಪಾಯಿತು. ಬೇಂದ್ರೆಯವರ ಬಗೆಗೆ ಓದಲು ಖುಶಿಯಾಗುತ್ತದೆ.

sunaath said...

ವನಮಾಲಾ,
ಬೇಂದ್ರೆ ಕವಿತೆಗಳು ಎಷ್ಟು ನವನವೀನವಾಗಿವೆ ಅಲ್ಲವೆ?

rajeevs said...

sunaath-ji
ಬೆಂದರೆ ಬೇಂದ್ರೆ ಆಗ್ತಾರಂತೆ.ಅವರ ನೋವಿನ ಹಾಡುಗಳೂ ಸಹ ಓದುಗನಿಗೆ ಸಿಹಿ.ಅದನ್ನು ನಮಗೆ ಧಾರವಾಡ ಪೇಢೆಯ ಪಾವ ಕಿಲೊ ಪ್ಯಾಕೆಟ್ಟಿನಲ್ಲಿ ಕೊಡಬ್ಯಾಡ್ರಿ. ಕಡೆಕ ಅರ್ಧಾ ಕಿಲೊನ್ರ ಕೊಡ್ರಿ plz

sunaath said...

ರಾಜೀವರೆ,
ಧಾರವಾಡ ಪೇಢೆ ಒಂದೇ ತಿಂದರೂ ರುಚಿಯೇ! ಆದರೂ ಸಹ ನಿಮ್ಮಿಷ್ಟದಂತೆ, ತೂಕವನ್ನು ಜಾಸ್ತಿ ಮಾಡೋಣ.

Shiv said...

ಸುನಾಥ್,

ಬೇಂದ್ರೆಯವರ ಪಾತರಗಿತ್ತಿ ಪಕ್ಕಾ ನನ್ನ ಒಂದು ನೆಚ್ಚಿನ ಕವನಗಳಲ್ಲೊಂದು.(ನನ್ನ ಬ್ಲಾಗ್ ಹೆಸರು ಇಟ್ಟಿದ್ದೆ ಈ ಕವನದ ಆಧಾರದ ಮೇಲೆ.

ಪಾತರಗಿತ್ತಿಯನ್ನು ಬಹು ಚೆನ್ನಾಗಿ ವರ್ಣಿಸಿದ್ದೀರಿ..
ಧನ್ಯವಾದಗಳು

sunaath said...

ಶಿವ,
ನಿಮ್ಮ blog ಹೆಸರು ನೋಡಿಯೇ ನಾನು ಮರುಳಾಗಿದ್ದೆ ಹಾಗು ಬೇಂದ್ರೆಯವರ ಈ ಕವನ ನಿಮ್ಮ ಮೆಚ್ಚಿನ ಕವನ ಇರಬೇಕೆಂದುಕೊಂಡಿದ್ದೆ. ಪಾತರಗಿತ್ತಿಯಂತೆಯೆ, ನಿಮ್ಮ blog ಲೇಖನಗಳೂ ಸಹ ಸುಳಿದಾಡುತ್ತಿವೆಯಲ್ಲ!

Anonymous said...

ಆ ಕವನದ ಪೂರ್ಣ ಪಾಠ ಇದ್ದರೆ ಟೈಪಿಸಿ....

shakti