Monday, April 21, 2008

ಪರಾಗ......ದ.ರಾ.ಬೇಂದ್ರೆ

ಪರಾಗಕವನವು ಬೇಂದ್ರೆಯವರ ಸಖೀಗೀತದಲ್ಲಿ ಸೇರಿದೆ. ಕವನದ ಪೂರ್ತಿಪಾಠವು ಹೀಗಿದೆ:

ಬಾ ಭೃಂಗವೆ ಬಾ, ವಿರಾಗಿಯಂದದಿ
ಭ್ರಮಿಸುವಿ ನೀನೇಕೆ?
ಕಂಪಿನ ಕರೆಯಿದು ಸರಾಗವಾಗಿರೆ
ಬೇರೆಯ ಕರೆ ಬೇಕೆ?

ಬರಲಿಹ ಕಾಯಿಯ ಪಾಡಿನ ರುಚಿಯೂ
ಇದರೊಳು ಮಡಗಿಹುದು.
ನಾಳಿನ ಹಣ್ಣಿನ ರಸವಿಲ್ಲಿಯ ಮಕ-
ರಂದದೊಳಡಗಿಹುದು.

ಕವನ ಕೋಶದೀ ಕಮಲ ಗರ್ಭದಲ್ಲಿ
ಪರಾಗವೊರಗಿಹುದು.
ನಿನ್ನ ಮುಖಸ್ಪರ್ಶವೂ ಸಾಕು; ಹೊಸ
ಸೃಷ್ಟಿಯೆ ಬರಬಹುದು.

ಕವನದ ಮೊದಲ ನುಡಿಯನ್ನು ಗಮನಿಸೋಣ:

ಬಾ ಭೃಂಗವೆ ಬಾ, ವಿರಾಗಿಯಂದದಿ
ಭ್ರಮಿಸುವಿ ನೀನೇಕೆ?
ಕಂಪಿನ ಕರೆಯಿದು ಸರಾಗವಾಗಿರೆ
ಬೇರೆಯ ಕರೆ ಬೇಕೆ?

ಬೇಂದ್ರೆಯವರ ಈ ಕವನವು ಒಂದು ಸರಳವಾದ ಹಾಗು ಅಷ್ಟೇ ಮೋಹಕವಾದ ಕವನ. ಒಂದು ಹೂವು ದುಂಬಿಯನ್ನು ಕರೆಯುತ್ತಿರುವ ಚಿತ್ರ ಈ ಕವನದಲ್ಲಿದೆ. ದುಂಬಿ ತನ್ನನ್ನು ಗಮನಿಸದೆ, ದೂರ ಚಲಿಸುತ್ತಿರಲು, ಈ ಹೂವು ಆ ದುಂಬಿಗೆ ಆಹ್ವಾನವೀಯುತ್ತಿದೆ. ನಾನು ಸೂಸುತ್ತಿರುವ ಕಂಪು ಅಂದರೆ ಪರಿಮಳವು ಸರಾಗವಾಗಿದೆ ಎಂದು ಹೂವು ದುಂಬಿಗೆ ಹೇಳುತ್ತಿದೆ. ಇಲ್ಲಿ ಸರಾಗಕ್ಕೆ ಎರಡು ಅರ್ಥಗಳು. ಒಂದು ಅರ್ಥವೆಂದರೆ ತನ್ನ ಸುವಾಸನೆಯಲ್ಲಿ ಅನುರಾಗವಿದೆ; ಎರಡನೆಯ ಅರ್ಥವೆಂದರೆ ದುಂಬಿಯ ಆತಿಥ್ಯಕ್ಕೆ ಹೂವು ಅನುಕೂಲವಾಗಿದೆ. ಹೀಗೆ ಹೂವು ಸರಾಗವಾಗಿರಲು, ದುಂಬಿ ವಿರಾಗಿಯಂತೆ ಭ್ರಮಿಸಬೇಕೆ? ಭ್ರಮಿಸು ಪದಕ್ಕೂ ಎರಡು ಅರ್ಥಗಳಿವೆ. ಒಂದು ಸುತ್ತಾಡು. ಎರಡನೆಯ ಅರ್ಥ ಹುಚ್ಚನಾಗು. ಆದುದರಿಂದ ನನ್ನ ಬಳಿಗೆ ಬರದೆ ಹುಚ್ಚನಂತೆ ಎಲ್ಲೆಲ್ಲೊ ಹೋಗುತ್ತಿರುವದೇಕೆ? ನನ್ನಲ್ಲಿ ಅನುರಾಗವಿದೆ, ನಾನು ಅನುಕೂಲೆಯಾಗಿದ್ದೇನೆ ಎಂದು ಹೂವು ದುಂಬಿಗೆ ಹೇಳುತ್ತಿದೆ.

ಈ ಕರೆ ನೀಡುತ್ತಿರುವ ಉದ್ದೇಶವನ್ನು ಹೂವು ಎರಡನೆಯ ನುಡಿಯಲ್ಲಿ ಸ್ಪಷ್ಟ ಮಾಡುತ್ತಿದೆ:

ಬರಲಿಹ ಕಾಯಿಯ ಪಾಡಿನ ರುಚಿಯೂ
ಇದರೊಳು ಮಡಗಿಹುದು.
ನಾಳಿನ ಹಣ್ಣಿನ ರಸವಿಲ್ಲಿಯ ಮಕ-
ರಂದದೊಳಡಗಿಹುದು.

 ಫಲದ ಸೃಷ್ಟಿಯೇ ಹೂವು ದುಂಬಿಗೆ ನೀಡುತ್ತಿರುವ ಆಹ್ವಾನದ ಉದ್ದೇಶವಾಗಿದೆ. ಆದುದರಿಂದ ಮುಂದೆ ಬರುವ ಕಾಯಿಯ ರುಚಿ ಈ ಕಂಪಿನಲ್ಲಿ ಗುಪ್ತವಾಗಿದೆ, ನಾಳೆ ಬರುವ ಹಣ್ಣಿನ ರುಚಿ ಈ ಮಕರಂದದಲ್ಲಿ ಅಡಗಿದೆ ಎಂದು ಹೂವು ಹೇಳುವಾಗ ಈ ದುಂಬಿಯ ಕಾರ್ಯವು ದೂತನ ಕಾರ್ಯವೆನ್ನುವದರ ಅರಿವು ಆಗುತ್ತದೆ. ಪರಾಗಸ್ಪರ್ಶವನ್ನು ಮಾಡುವ ದೂತನಾಗಬೇಕಾಗಿದೆ ಈ ದುಂಬಿ.

ಆದರೆ ಈ ಕವನವು ಕೇವಲ ನಿಸರ್ಗದ ಒಂದು ಪ್ರಕ್ರಿಯೆಯನ್ನು ವರ್ಣಿಸುವ ಕವನವಲ್ಲವೆನ್ನುವದು ಮೂರನೆಯ ನುಡಿಯಿಂದ ಗೊತ್ತಾಗುತ್ತದೆ:

ಕವನ ಕೋಶದೀ ಕಮಲ ಗರ್ಭದಲ್ಲಿ
ಪರಾಗವೊರಗಿಹುದು.
ನಿನ್ನ ಮುಖಸ್ಪರ್ಶವೂ ಸಾಕು; ಹೊಸ
ಸೃಷ್ಟಿಯೆ ಬರಬಹುದು.

 ಕವನ ಕೋಶದೀ ಕಮಲಗರ್ಭದಲಿ ಪರಾಗವೊರಗಿಹುದುಎನ್ನುವ ಸಾಲನ್ನು ಓದಿದಾಗ, ’ಓಹೋ, ಈ ಹೂವು ನಮ್ಮ ಕಣ್ಣಿಗೆ ಬೀಳುವ ಹೂವಲ್ಲ; ಇದು ಕಾವ್ಯವಸ್ತುವೆನ್ನುವ ಹೂವು ಹಾಗು ಭ್ರಮರವೆಂದರೆ ಕವಿಎನ್ನುವ ಅರ್ಥ ಹೊಳೆಯುವದು. ಕವಿಯ ಮನಸ್ಸು ಕಾವ್ಯರಚನೆಗೆ ವಿಮುಖವಾಗಿ ಎಲ್ಲೆಲ್ಲೊ ಚಲಿಸುತ್ತಿರುವಾಗ ಅವನ ಒಳಗಿರುವ ಕಾವ್ಯವಸ್ತು ಅವನನ್ನು ಕಾವ್ಯಸೃಷ್ಟಿಗೆ ಕರೆಯುತ್ತಿದೆ. ಕವಿಯ ಮನಸ್ಸಿನಲ್ಲಿರುವ ಕಾವ್ಯ ಹೊರಬರಲು ಬೇಕಾದದ್ದು ಕೇವಲ ಆತನ ಮುಖಸ್ಪರ್ಶ ಮಾತ್ರ. ಕವಿಯು ಇಲ್ಲಿ ಕೇವಲ ದೂತನ ಕಾರ್ಯ ನಿರ್ವಹಿಸುತ್ತಿದ್ದಾನೆ ಎಂದು ಈ ಕವನದ ಭಾವ.

ಬೇಂದ್ರೆಯವರಿಗೆ ಕಷ್ಟಪಟ್ಟು ಕವನ ಕಟ್ಟಬೇಕಾಗಿರಲಿಲ್ಲ. ಕಾವ್ಯವಸ್ತು ಅವರ ಮನಸ್ಸಿನಲ್ಲಿಯೆ ಯಾವಾಗಲೂ ಕುಣಿಯುತ್ತಿದ್ದು, ಅದನ್ನು ಕಾವ್ಯರೂಪದಲ್ಲಿ ಹೊರಗೆ ತರುವದಷ್ಟೆ ಕವಿಯ ಕಾರ್ಯವೆನ್ನುವುದು ಅವರ ಭಾವನೆಯಾಗಿತ್ತು.

10 comments:

ಸುಪ್ತದೀಪ್ತಿ suptadeepti said...

ಕಾಕಾ, ಪುನಃ ಧನ್ಯವಾದಗಳು.

ಕವನವನ್ನು ಸುಮ್ಮನೆ ಓದಿಕೊಂಡಾಗ, ಪ್ರಾಕೃತಿಕ ಪ್ರಕ್ರಿಯೆಯ ಜೊತೆಗೆ ಕವಿ/ಕವಿತೆ ಸಹೃದಯ ಓದುಗನನ್ನು ಆಹ್ವಾನಿಸುವಂತೆಯೂ ಅನಿಸಿತ್ತು. ನಿಮ್ಮ ವಿವರಣೆ ಓದಿದ ಮೇಲೆ ಕಾವ್ಯವಸ್ತು ಕವಿಯನ್ನು ಕರೆಯುತ್ತಿರುವುದರ ಅರಿವಾಯ್ತು. ಒಂದೇ ಕವನದ ವಿವಿಧ ದೃಷ್ಟಿಕೋನಗಳಿಗೆ ಇನ್ನೊಂದು ಉದಾಹರಣೆ ಇದು.

sunaath said...

chಹೌದು, ಜ್ಯೋತಿ. ಈ ಕವನವನ್ನು ಮೂರೂ ರೀತಿಗಳಲ್ಲಿ ಅರ್ಥೈಸಬಹುದು. ಬೇಂದ್ರೆಯವರ ಚಮತ್ಕಾರವಿದು!
-ಕಾಕಾ

ರಾಧಾಕೃಷ್ಣ ಆನೆಗುಂಡಿ. said...

ಬೇಂದ್ರೆ ಬಗ್ಗೆ ಮಾಹಿತಿ ಯಾರಾದರೂ ಕೇಳಿದರೆ ನಾನು ನಿಮ್ಮ ಕಡೆ ಕೈ ತೋರಿಸುತ್ತೇನೆ.

Anonymous said...

ಸರಳ,ಸುಂದರವಾದ "ಪರಾಗ" ಕವನವನ್ನು ಅರ್ಥ ಸಹಿತ ಒದಗಿಸಿದ್ದಕ್ಕೆ ಧನ್ಯವಾದಗಳು ಕಾಕಾ.

sunaath said...

ಅಯ್ಯೊ, ಆ ಥರಾ ಮಾಡಬೇಡ್ರೀ, ರಾಧಾಕೃಷ್ಣರೆ! ಬೇಂದ್ರೆಯವರ ಬಗೆಗೆ ನಾನು ತಿಳಿಯದೆ ಇದ್ದದ್ದು ಗುಡ್ಡದಷ್ಟಿದೆ!

sunaath said...

ತ್ರಿವೇಣಿ,
Mine is the pleasure!
-ಕಾಕಾ

VENU VINOD said...

ಹೀಗೇ ಕನ್ನಡದ ಬಗ್ಗೆ ಒಬ್ಬೊಬ್ಬರು ವಿದ್ವಾಂಸರು ಬರೆದರೆ ನಮ್ಮ ಜ್ಞಾನವೂ ಹೆಚ್ಚೀತು, ಒಳ್ಳೆ ಕೆಲಸ ಮಾಡ್ತಾ ಇದೀರಿ ಸುನಾಥ್

sunaath said...

ಧನ್ಯವಾದಗಳು, ವೇಣು ವಿನೋದ!

ಮಂಜಿನಕಮಲ said...

ತುಂಬು ಹೃದಯದ ಧನ್ಯವಾದಗಳು

sunaath said...

ಮಂಜಿನಕಮಲರೆ,ಸ್ಪಂದನೆಗಾಗಿ ನಿಮಗೆ ಧನ್ಯವಾದಗಳು.