‘ಹುಬ್ಬಳ್ಳಿಯಾಂವಾ’ ಇದು ಬೇಂದ್ರೆಯವರ ಅತ್ಯಂತ ಜನಪ್ರಿಯ ಗೀತೆಗಳಲ್ಲೊಂದು. ಬೇಂದ್ರೆಯವರು ಬರೆಯಬಯಸಿದ ಒಂದು ನಾಟಕದಲ್ಲಿ ಈ ಹಾಡು ಬರುತ್ತದೆ. ಪ್ರಣಯಭಂಗದಿಂದ ಹುಚ್ಚಳಂತಾದ ಸೂಳೆಯೊಬ್ಬಳು ಹಾಡುವ ಹಾಡಿದು.
ಹಾಡಿನ ಪೂರ್ತಿಪಾಠ ಇಲ್ಲಿದೆ :
ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ
ವಾರದಾಗ ಮೂರಸರತಿ ಬಂದು ಹೋದಾಂವಾ ||ಪಲ್ಲ||
೧
ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾ
ತುಂಬು-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ
ಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾ
ಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ
ಇನ್ನೂ ಯಾಕ……….
೨
ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾ
ಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾ
ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ
ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ
ಇನ್ನೂ ಯಾಕ……….
೩
ಇರು ಅಂದರ ಬರತೇನಂತ ಎದ್ದು ಹೊರಡಾಂವಾ
ಮಾರೀ ತೆಳಗ ಹಾಕಿತಂದರ ಇದ್ದು ಬಿಡಾಂವಾ
ಹಿಡಿ ಹಿಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾಂವಾ
ಖರೇ ಅಂತ ಕೈಮಾಡಿದರ ಹಿಡsದ ಬಿಡಾಂವಾ
ಇನ್ನೂ ಯಾಕ……….
೪
ಚಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ
ಚೌಡಿಯಲ್ಲ ನೀ ಚೂಡಾಮಣಿಯಂತ ರಮಿsಸ ಬಂದಾಂವಾ
ಬೆರಳಿಗುಂಗರಾ ಮೂಗಿನಾಗ ಮೂಗಬಟ್ಟಿಟ್ಟಾಂವಾ
ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ
ಇನ್ನೂ ಯಾಕ……….
೫
ಹುಟ್ಟಾ ಯಾಂವಾ ನಗಿಕ್ಯಾದಗೀ ಮುಡಿಸಿಕೊಂಡಾಂವಾ
ಕಂಡ ಹೆಣ್ಣಿಲೆ ಪ್ರೀತಿ ವೀಳ್ಯೆ ಮಡಿಚಿಕೊಂಡಾಂವಾ
ಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ
ಎದಿ ಮ್ಯಾಗಿನ ಗೆಣತೀನ ಮಾಡಿ ಇಟ್ಟಕೊಂಡಾಂವಾ
ಇನ್ನೂ ಯಾಕ……….
೬
ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀಂವಾ
ಹಾದಿ ಬೀದಿ ಹುಡುಕತೈತ್ರೇ ಬಿಟ್ಟು ಎಲ್ಲ ಹ್ಯಾಂವಾ
ಎಲ್ಲೀ ! ಮಲ್ಲೀ ! ತಾರೀ ! ಪಾರೀ ! ನೋಡೀರೇನವ್ವಾ?
ನಿಂಗೀ ! ಸಂಗೀ ! ಸಾವಂತರೀ ! ಎಲ್ಹಾನ ನನ್ನಾಂವಾ ?
ಇನ್ನೂ ಯಾಕ ಬರಲಿಲ್ಲಾ ?
ಬೇಂದ್ರೆಯವರು ಈ ಗೀತೆಯನ್ನು ೧೯೩೫ರಲ್ಲಿ ರಚಿಸಿದರು.
ಆ ಕಾಲದ ಸಮಾಜವ್ಯವಸ್ಥೆ ಹಾಗು ಜನರ ಜೀವನ ಪದ್ಧತಿಗಳು ಈ ಗೀತೆಗೆ ಹಿನ್ನೆಲೆಯಾಗಿ ನಿಂತಿವೆ.
ವ್ಯಾಪಾರ ಕೇಂದ್ರವಾದ ಹುಬ್ಬಳ್ಳಿಯಲ್ಲಿಯ ಒಬ್ಬ ಸಿರಿವಂತ ರಸಿಕ ಹುಡುಗ ವಾರದಲ್ಲಿ ಮೂರು ಸಾರೆ ಧಾರವಾಡಕ್ಕೆ ವ್ಯಾಪಾರದ ನೆವ ಮಾಡಿಕೊಂಡು ಹೋಗುತ್ತಿರುತ್ತಾನೆ. ಅಲ್ಲಿ ಅವನ ‘ಶೋಕಿಯ ಹೆಣ್ಣು’ ಇದ್ದಾಳೆ. ಆದರೆ ಈ ಹುಡುಗ ಕೇವಲ ಚಟಕ್ಕಾಗಿ ಹೆಣ್ಣುಗಳನ್ನು ಹುಡುಕುವವನಲ್ಲ ; ಈತನದು ರಸಿಕ ಹೃದಯ. ಒಮ್ಮೆ ಇವನಿಗೂ ಅವಳಿಗೂ ಯಾವುದೋ ಕಾರಣಕ್ಕಾಗಿ ಮನಸ್ತಾಪವಾಗುತ್ತದೆ. ಆತ ಇವಳಿದ್ದಲ್ಲಿ ಮತ್ತೆ ಕಾಲು ಹಾಕುವದಿಲ್ಲ. ಅವಳು ಈತನ ವಿರಹದಲ್ಲಿ ಹುಚ್ಚಿಯಂತಾಗಿ ಹಾಡಿದ ಹಾಡಿದು.
ಬೇಂದ್ರೆಯವರು ಬರೆಯುವ ಎಲ್ಲ ಕವನಗಳಲ್ಲಿಯೂ ಒಂದು ಕ್ರಮಬದ್ಧತೆ ಇರುತ್ತದೆ. ಈ ಕವನದಲ್ಲಿಯೂ ಸಹ ಅಂತಹ ಕ್ರಮಬದ್ಧತೆಯನ್ನು ಕಾಣಬಹುದು.
“ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ
ವಾರದಾಗ ಮೂರಸರತಿ ಬಂದು ಹೋದಾಂವಾ”
ಎಂದು ಹಪಹಪಿಸುವ ವಿರಹಿಣಿಯ ವರ್ಣನೆಯಿಂದ ಕವನ ಪ್ರಾರಂಭವಾಗುತ್ತದೆ.
ಈ ಭ್ರಮಿಷ್ಠ ವಿರಹಿಣಿಯ ಒಳಗಣ್ಣಿಗೆ ಮೊದಲು ಕಾಣುವದು ಅವನ ಶಾರೀರಕ ನೋಟ.
“ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾ
ತುಂಬು-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ”
ಈ ಸಾಲುಗಳು ಆ ಸೆಟ್ಟರ ಹುಡುಗನ ಡೌಲನ್ನು , ಅವನ ರಸಿಕತೆಯ ಬಾಹ್ಯಲಕ್ಷಣಗಳನ್ನು ತೋರಿಸುವವು.
ಆದರೆ ಅವನ ರಸಿಕತೆ ಕೇವಲ ಬಾಹ್ಯಲಕ್ಷಣಗಳಿಗೆ ಸೀಮಿತವಾಗಿಲ್ಲ. ಅವನಲ್ಲಿ ರಸಿಕಹೃದಯವಿದೆ. ಈ ಹೆಣ್ಣು ಅವನ ಪಾಲಿಗೆ ಕೇವಲ ಸೂಳೆಯಲ್ಲ. ಅವಳೊಡನೆ ಆತ ಚೇಷ್ಟೆಯಿಂದ ಮಾತನಾಡುತ್ತಾನೆ ; ಹಾಡು ಕಟ್ಟುತ್ತಾನೆ.
“ಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾ
ಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ”
ಇಂತಹ ರಸಿಕತೆಗೆ ಯಾವ ಹೆಣ್ಣು ಮರಳಾಗಲಿಕ್ಕಿಲ್ಲ? ಇಂತಹ‘ಉದಾರ ಗಿರಾಕಿ’ಯಿಂದ ಒಬ್ಬ ಸೂಳೆ ಹಣಕ್ಕಿಂತ ಹೆಚ್ಚಾದ ‘ಗೆಣೆತನ’ವನ್ನು ಬಯಸುವುದು ಸಹಜ. ಇವನೋ ಭರವಸೆಗಳ ಸರದಾರ! ಕನಸುಗಳ ಸೌದಾಗರ್!
ಈ ಕವನದ ನಾಯಕಿಯು ಸಾದಾ ಸೂಳೆಯೇನಲ್ಲ ; ಇವಳು “ಯಲ್ಲಮ್ಮನ ಜೋಗತಿ”. ಆದರೇನು? ಇವಳು ಯಾರ ಹೆಂಡತಿಯೂ ಆಗಲಾರಳು. ಇಂಥವಳಿಗೆ ಈ ರಸಿಕ ಕಟ್ಟಿ ಕೊಡುವ ಕನಸನ್ನು ಅವಳು ಎರಡನೆಯ ನುಡಿಯಲ್ಲಿ ಹಾಡಿಕೊಂಡಿದ್ದಾಳೆ :
“ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾ
ಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾ”
ಜೋಗತಿಯರು ಎಲ್ಲಮ್ಮನ ಹೆಸರಿನಲ್ಲಿ ತಾಳಿಯನ್ನು ಕಟ್ಟಿಕೊಳ್ಳುತ್ತಾರೆ. ತಾಳಿಯ ಮಧ್ಯದಲ್ಲಿರುವ ಎರಡು ಬೇಳೆಗಳು ಕೇವಲ ಮದುವೆಯಾದ ಗರತಿಯ ಸೊತ್ತು. ಗರತಿಯಾಗುವ ಈ ಅಸಾಧ್ಯ ಕನಸನ್ನು(—ಹಾಸ್ಯದಲ್ಲಿಯೇ ಆಗಲಿ—)ಆತ ಅವಳಿಗೆ ಕಟ್ಟಿಕೊಡುತ್ತಾನೆ.
“ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾ
ಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾ”
ಈ ಜೋಗತಿಯರ ಸಂಪತ್ತೆಂದರೆ ಯಲ್ಲಮ್ಮನ ಗುಡಿಯಿಂದ ತಂದ ಭಂಡಾರ. (ಅರಿಶಿಣ, ಕುಂಕುಮಗಳು). ಆ ಭಂಡಾರವನ್ನು ಬಂಗಾರದ ಹುಡಿಯಿಂದ ತುಂಬುತ್ತೇನೆನ್ನುವ ಔದಾರ್ಯವನ್ನು ಆತ ತೋರುತ್ತಾನೆ. ಈ ಮಾತು ಚೇಷ್ಟೆಯಲ್ಲಿ ಆಡಿದ ಮಾತೇ ಆಗಿರಬಹುದು. ಆದರೆ ಅವಳಲ್ಲಿರುವ ಅವನ ಖಾಯಿಶ್ ಬರಿ ಚೇಷ್ಟೆಯದಲ್ಲ. ಮುಂದಿನ ಎರಡು ಸಾಲುಗಳಲ್ಲಿ ಇದು ವ್ಯಕ್ತವಾಗುತ್ತದೆ :
“ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ
ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ”
ತನ್ನ ಮೊದಲ ಅಡ್ಡಹೆಜ್ಜೆಗಳನ್ನು ಈ ಸಿರಿವಂತ ತರುಣನು ಕಸುಬಿನವರ (=professional prostitutes) ಮನೆಗಳಲ್ಲಿ ಇರಿಸಿದ್ದಾನೆ ; ಅವರಾದ ಮೇಲೆ ಅದಕ್ಕೂ ಹೆಚ್ಚಿನ ಸ್ತರದ ಬಸವಿಯರ (=ದೇವರಿಗೆ ಬಿಟ್ಟವರು) ಜೊತೆಯಲ್ಲಿ ರಾತ್ರಿಗಳನ್ನು ಕಳೆದಿದ್ದಾನೆ. ಇದೀಗ ಬಸವಿಯರಿಗಿಂತ ಹೆಚ್ಚಿನ ಸ್ತರದಲ್ಲಿರುವ ಜೋಗತಿಯರ ಜೊತೆಗೆ ಇವನ ಪ್ರಣಯ ಪ್ರಾರಂಭವಾಗಿದೆ.
ಅಂತಹ ಜೋಗತಿಯರೆಲ್ಲರಲ್ಲಿ ಇವಳೇ ಶ್ರೇಷ್ಠಳು ಎಂದು ಆತ ಇವಳನ್ನು ಉಬ್ಬಿಸುತ್ತಾನೆ. ಈ ರಸಿಕನಿಗೆ ಹೆಣ್ಣನ್ನು ಹೊಗಳಿ ಮರಳು ಮಾಡುವ ಕಲೆ ಚೆನ್ನಾಗಿ ಸಿದ್ಧಿಸಿದ ಹಾಗೆ ಕಾಣುತ್ತದೆ.
ಇಷ್ಟೆಲ್ಲ ಹೊಗಳುವ ಗಂಡಸಿನ ಮೇಲೆ (--ಆತ ಬರೇ ಗಿರಾಕಿಯಾಗಿದ್ದರೂ ಸಹ--) ಯಾವ ಹೆಣ್ಣಿಗೆ ಒಲುಮೆ ಮೂಡಲಿಕ್ಕಿಲ್ಲ? ಅಂತಲೇ ಅವಳು ಈತನನ್ನು “ಇನ್ನೂ ಇರು, ಯಾತಕ್ಕೆ ಇಷ್ಟು ಬೇಗನೇ ಹೊರಡುತ್ತೀಯಾ?” ಅಂತ ಜುಲುಮೆ ಮಾಡುತ್ತಾಳೆ.
("ಆಜ ಜಾನೇಕಿ ಜಿದ್ ನಾ ಕರೋ, ಆಜ ಪೆಹಲೂ ಮೇ ಐಸೇ ಹಿ ಬೈಠೇ ರಹೋ"...ಫರೀದಾ ಖಾನ್ನುಮ್ ಅವರು ಹಾಡಿದ ಗೀತೆ).
ಆತ ಘಾಟಿ ಹುಡುಗ ! ಇವಳ ಬಲುಮೆಗೆ care ಮಾಡದೆ ಎದ್ದು ಬಿಡುತ್ತಾನೆ. (ಅಥವಾ ಹಾಗೆ ನಟಿಸುತ್ತಾನೆ). ಅವಳು ಖಿನ್ನಳಾಗಿ ಅವನತ ಮುಖಳಾದ ಕ್ಷಣವೇ ಈತ ತನ್ನ ನಿರ್ಧಾರವನ್ನು ಬದಲಿಸಿ ಅವಳನ್ನು ಪ್ರಸನ್ನಗೊಳಿಸುತ್ತಾನೆ.
“ಇರು ಅಂದರ ಬರತೇನಂತ ಎದ್ದು ಹೊರಡಾಂವಾ
ಮಾರೀ ತೆಳಗ ಹಾಕಿತಂದರ ಇದ್ದು ಬಿಡಾಂವಾ”
ಆತ ಘಾಟಿ ಹುಡುಗ ! ಇವಳ ಬಲುಮೆಗೆ care ಮಾಡದೆ ಎದ್ದು ಬಿಡುತ್ತಾನೆ. (ಅಥವಾ ಹಾಗೆ ನಟಿಸುತ್ತಾನೆ). ಅವಳು ಖಿನ್ನಳಾಗಿ ಅವನತ ಮುಖಳಾದ ಕ್ಷಣವೇ ಈತ ತನ್ನ ನಿರ್ಧಾರವನ್ನು ಬದಲಿಸಿ ಅವಳನ್ನು ಪ್ರಸನ್ನಗೊಳಿಸುತ್ತಾನೆ.
“ಇರು ಅಂದರ ಬರತೇನಂತ ಎದ್ದು ಹೊರಡಾಂವಾ
ಮಾರೀ ತೆಳಗ ಹಾಕಿತಂದರ ಇದ್ದು ಬಿಡಾಂವಾ”
(ಹೆಣ್ಣಿನ ಮನಸ್ಸನ್ನು --ಅವಳು ಸೂಳೆಯೇ ಆಗಿರಲಿ--ಈತ ನೋಯಿಸಲಾರ.)
ಮುಂದಿನ ಸಾಲುಗಳಲ್ಲಿ ನಾಯಕಿಯು ಆತನ ರಸಿಕ ಚೇಷ್ಟೆಗಳನ್ನು ನೆನಪಿಸಿಕೊಳ್ಳುತ್ತಾಳೆ :
“ಹಿಡಿ ಹಿಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾಂವಾ
ಖರೇ ಅಂತ ಕೈಮಾಡಿದರ ಹಿಡsದ ಬಿಡಾಂವಾ”.
ಬೇಂದ್ರೆ ಇಲ್ಲಿ ತಮ್ಮ ಅನ್ಯಾದೃಶ ಚಮತ್ಕಾರೋಕ್ತಿಯನ್ನು ತೋರಿಸಿದ್ದಾರೆ.
ತನ್ನ ಬಗಲಬಂಡಿಯ ಕಿಸೆಯಲ್ಲಿ ಕೈಹಾಕಿ ಹಿಡಿಗಟ್ಟಲೆ ರೊಕ್ಕ ತಗದಂತೆ ನಟಿಸುವ ನಾಯಕ, ಈ ಅಮಾಯಕ ಹೆಣ್ಣು ಕೈಮುಂದೆ ಮಾಡಿದಾಗ ತಟ್ಟನೆ ಅವಳ ಕೈಯನ್ನು ಹಿಡಿದುಕೊಳ್ಳುತ್ತಾನೆ.
ಬರೀ ಶಬ್ದಚಮತ್ಕಾರ ಮಾತ್ರವಲ್ಲ ; ಇದು ಕಲ್ಪನಾಚಮತ್ಕಾರದ ಪರಾಕಾಷ್ಠೆಯೂ ಹೌದು.
ಒಬ್ಬ ಸೂಳೆ ಮತ್ತು ಅವಳ ಗಿರಾಕಿಯ ನಡುವೆ ನಡೆಯುವ ಇಂತಹ ಪ್ರಣಯದೃಶ್ಯ ಯಾವ ಕವಿಯ ಕಲ್ಪನೆಗೆ ಹೊಳೆಯಲು ಸಾಧ್ಯ ?
ಏನೇ ಮಾಡಿದರೂ, ಏನೇ ಹೇಳಿದರೂ ಈಕೆ ಅವನಿಗೆಷ್ಟರವಳು? ಅವಳು ಕೇವಲ ವಿನೋದವಸ್ತು ಮಾತ್ರ ಎನ್ನುವದೆ ವಾಸ್ತವತೆ ಅಲ್ಲವೆ? ಈ ವಾಸ್ತವತೆಯನ್ನೆ ಆತ ಎಷ್ಟು ವಿನೋದದಿಂದ ಹೇಳುತ್ತಾನೆ !
“ಚಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ”.
ಹೀಗೆಂದರೆ ಅವಳಿಗೆ ಸಿಟ್ಟು ಬರದಿದ್ದೀತೆ?
ಮುನಿಸಿಕೊಂಡ ಇವಳನ್ನು ರಮಿಸುವದು ಅವನಿಗೊಂದು ಆಟ.
“ಚೌಡಿಯಲ್ಲ ನೀ ಚೂಡಾಮಣಿಯಂತ ರಮಿsಸ ಬಂದಾಂವಾ”.
ಆದರೆ ಇಷ್ಟಕ್ಕೆಲ್ಲ ಇವಳು ಒಲಿಯುವವಳಲ್ಲ. ಆಗ ಆತ ಅವಳಿಗೆ ಕೊಡುವದು , ಸೂಳೆಯೊಬ್ಬಳಿಗೆ ಸಿಗಬಹುದಾದ ಅತಿ ಹೆಚ್ಚಿನ ಬೆಲೆ :- “ಬೆರಳಿಗುಂಗರಾ ಮೂಗಿನಾಗ ಮೂಗಬಟ್ಟಿಟ್ಟಾಂವಾ”
ಹೆಣ್ಣಿನ ಬೆರಳಿಗೆ ಉಂಗುರ ತೊಡಸುವದು ಅವಳ ಮದುವೆ ನಿಶ್ಚಯವಾಗುವಾಗ. ಅವಳಿಗೆ ಮೂಗುತಿ ತೊಡಿಸುವದು ಅವಳ ಮದುವೆಯ ಸಮಯದಲ್ಲಿ.
ಆತ ಅವಳಿಗೆ ಇವನ್ನೇ ಕೊಡುತ್ತಾನೆ. ಅವಳಿಗೆ ಗೊತ್ತು : ಈ ಉಂಗುರ, ಈ ಮೂಗುತಿ ಅವಳ status ಅನ್ನು ಬದಲಾಯಿಸುವದಿಲ್ಲ. ಅವಳು ಸಾಯುವವರೆಗೂ ಸೂಳೆಯೇ.
ಆದರೂ ಸಹ, ಈ token ಅವನ ಬಗೆಗಿರುವ ಅವಳ ಒಲುಮೆಯನ್ನು ಗಾಢವಾಗಿಸುತ್ತದೆ.
ಅವನೀಗ ಅವಳ ಅತ್ಯಂತ ಪ್ರೀತಿಪಾತ್ರ ವ್ಯಕ್ತಿ : “ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ”
ಬೇಂದ್ರೆಯವರು ಕನ್ನಡದ ಪಡೆನುಡಿಗಳನ್ನು ಎಷ್ಟು ಸಮರ್ಥವಾಗಿ ಬಳಸಿಕೊಳ್ಳುತ್ತಾರೆ ಎನ್ನುವುದಕ್ಕೆ ಈ ಸಾಲು ಅತ್ಯುತ್ತಮ ನಿದರ್ಶನವಾಗಿದೆ.
ಅವನ ಬಗೆಗಿನ ಅವಳ ಒಲವಿನ ಭಾವನೆಗಳು ಈ ಮುಂದಿನ ನುಡಿಯಲ್ಲಿ ವ್ಯಕ್ತವಾಗುತ್ತವೆ :
“ಹುಟ್ಟಾ ಯಾಂವಾ ನಗಿಕ್ಯಾದಗೀ ಮುಡಿಸಿಕೊಂಡಾಂವಾ
ಕಂಡ ಹೆಣ್ಣಿಲೆ ಪ್ರೀತಿ ವೀಳ್ಯೆ ಮಡಿಚಿಕೊಂಡಾಂವಾ
ಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ
ಎದಿ ಮ್ಯಾಗಿನ ಗೆಣತೀನ ಮಾಡಿ ಇಟ್ಟಕೊಂಡಾಂವಾ”
ಈತ ಹುಟ್ಟುತ್ತಲೆ ನಗಿಕ್ಯಾದಗಿ ಮುಡಿಸಿಕೊಂಡು ಬಂದಂಥವನು, ಸತತ ನಗೆಮೊಗದವನು. ಹೆಣ್ಣುಗಳ ಪ್ರೀತಿ ಸಂಪಾದಿಸುವದು ಇವನಿಗೊಂದು ಆಟ.ಯಾಕೆಂದರೆ ಹೆಣ್ಣುಗಳೇ ಇವನ ಮೇಲೆ ಮುಗಿ ಬೀಳುತ್ತವೆ. ಇಂಥವನಿಂದ ಇಷ್ಟೊಂದು ಪ್ರೀತಿ ಪಡೆದದ್ದೇ ತನ್ನದೊಂದು ದೊಡ್ಡ ಭಾಗ್ಯ.
ಇವನ ಹೆಂಡತಿಯಾಗುವ ಭಾಗ್ಯ ತನಗೆ ಯಾವ ಜನ್ಮದಲ್ಲೂ ಸಾಧ್ಯವಿಲ್ಲ.
ಹಾಗಿದ್ದರೆ, next best?
ತನ್ನೆಲ್ಲ ಜನ್ಮಗಳಲ್ಲಿಯೂ ಈತನೇ ತನಗೆ “ಗೆಣೆಯ” ನಾಗಿ ಸಿಕ್ಕರೆ ಸಾಕು.
ಅದು ಆತ ಕೊಡುತ್ತಿರುವ ವಚನ !
ತನ್ನ ಅತ್ಯಂತ ಪ್ರೀತಿಯ “ಗೆಣತಿ”ಯ ಪಟ್ಟ ಇವಳಿಗೇ !
(ಶರೀರದ ಮೇಲಿನ ಕೆಂಪು ಅಥವಾ ಕಪ್ಪು moleಗೆ ‘ಗೆಳತಿ’ ಎಂದು ಕರೆಯುತ್ತಾರೆ).
ಇಂತಹ ನೆಚ್ಚಿನ ಗೆಣೆಯನೊಡನೆ ಯಾವ ಕಾರಣಕ್ಕಾಗಿ ಮನಸ್ತಾಪ ಬಂತೊ ಏನೊ? ಆತ ಇವಳ ಕಡೆಗೆ ಬೆನ್ನು ತಿರುಗಿಸಿದ್ದಾನೆ. ಅವನ ದರುಶನವೇ ಇಲ್ಲ. ತನ್ನೆಲ್ಲ ಹ್ಯಾಂವ ಬಿಟ್ಟು ಅವಳು ಇವನಿಗಾಗಿ ಹಲಬುತ್ತಾಳೆ, ಹಂಬಲಿಸುತ್ತಾಳೆ. ಹುಚ್ಚಿಯಂತೆ ಹಾಡಿಕೊಳ್ಳುತ್ತ ಹಾದಿ-ಬೀದಿಗಳಲ್ಲಿ ತಿರುಗುತ್ತಾಳೆ :
“ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀಂವಾ
ಹಾದಿ ಬೀದಿ ಹುಡುಕತೈತರೇ ಬಿಟ್ಟು ಎಲ್ಲ ಹ್ಯಾಂವಾ
ಎಲ್ಲೀ ! ಮಲ್ಲೀ ! ತಾರೀ ! ಪಾರೀ ! ನೋಡೀರೇನವ್ವಾ?
ನಿಂಗೀ ! ಸಂಗೀ ! ಸಾವಂತರೀ ! ಎಲ್ಹಾನ ನನ್ನಾಂವಾ ?
ಇನ್ನೂ ಯಾಕ ಬರಲಿಲ್ಲಾ ?”
ಆತ ತನ್ನ ಮೇಲಿನ ಸಿಟ್ಟನ್ನು ಮರೆತು ಬಂದಾನೇ? ಇಲ್ಲಿ ಮತ್ತೊಂದು ವ್ಯಂಗ್ಯವನ್ನು ಗುರುತಿಸಬೇಕು. ಈತ ಸೆಟ್ಟರ ಹುಡುಗ. ಈತ ಸೆಡುವು ಮಾಡಿಕೊಂಡು ಹೋದರೆ ಈಕೆಯ ಬದುಕು ನಡೆಯುವದು ಹೇಗೆ? ಅದು ಕಟು ವಾಸ್ತವ. ಆತನ ಮೇಲೆ ಅವಳಿಗೆ ಇರುವ ನೆಚ್ಚು ಒಂದು ಭಾಗವಾದರೆ, ತನ್ನ ಉಪಜೀವನಕ್ಕಾಗಿ ಅಂತಹ ಗಿರಾಕಿ ಬೇಕಲ್ಲ ಎನ್ನುವ ದುಗುಡವು ಮತ್ತೊಂದು ಭಾಗವಾಗಿದೆ. ಆದುದರಿಂದಲೇ ಅವಳು ಹುಚ್ಚಿಯಾಗಿ ಹುಡುಕುತ್ತಿದ್ದಾಳೆ:
“ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀಂವಾ
ಹಾದಿ ಬೀದಿ ಹುಡುಕತೈತರೇ ಬಿಟ್ಟು ಎಲ್ಲ ಹ್ಯಾಂವಾ ”
ಬೇಂದ್ರೆಯವರ ಕಲ್ಪನೆ ಅಗಾಧವಾಗಿದ್ದರೂ ಸಹ, ಅವರ ಕವನಗಳು ಯಾವಾಗಲೂ ವಾಸ್ತವತೆಯ ಅಂಚನ್ನು ದಾಟುವದಿಲ್ಲ. ಹೀಗಾಗಿ ಅವರ ಅನೇಕ ಕವನಗಳಿಗೆ documentary value ಬರುತ್ತದೆ. “ಹುಬ್ಬಳ್ಳಿಯಾಂವಾ” ಕವನದಲ್ಲಿ ವಾಸ್ತವತೆಯ ಇಂತಹ ನೋಟಗಳನ್ನು ಕಾಣಬಹುದು. ಉದಾಹರಣೆಗೆ ಸೂಳೆಯರ ಶ್ರೇಣೀಕರಣ:
ಮೊದಲಲ್ಲಿ ಕಸಬೆಯರು, ಅವರ ಮೇಲೆ ಬಸವಿಯರು, ಅವರಿಗಿಂತಲೂ ಮೇಲಿನ ಸ್ಥಾನದಲ್ಲಿ ಜೋಗತಿಯರು.
ಬೇಂದ್ರೆಯವರ ಕವನಗಳಲ್ಲಿ ಬರುವ ಆಡುನುಡಿಯ ಪದಪುಂಜಗಳು, ಅವರ ಕವನಗಳಿಗೆ ಹೆಚ್ಚಿನ ಸೊಬಗನ್ನು ಕೊಡುತ್ತವೆ. ಇದೇ ಕವನದಲ್ಲಿಯ ಕೆಲವು ಸಾಲುಗಳನ್ನು ಉದಾಹರಣೆಗಳೆಂದು ನೋಡಬಹುದು :
“ಎದಿ ಮ್ಯಾಗಿನ ಗೆಣತೀನ ಮಾಡಿ ಇಟ್ಟಕೊಂಡಾಂವಾ”
“ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ”
‘ಹುಬ್ಬಳ್ಳಿಯಾಂವಾ’ ಕವನವು ತೋರಿಕೆಗೆ ರಂಜನೀಯ ಕವನವಾಗಿದೆ. ಬೇಂದ್ರೆಯವರ ಪದಚಮತ್ಕಾರ, ಅಸೀಮ ಕಲ್ಪನೆ ಇಲ್ಲಿಯೂ ಧಾರಾಳವಾಗಿ ಬಳಕೆಯಾಗಿವೆ. ಕಲ್ಪನೆಯು
ಎಲ್ಲಿಯೂ ವಾಸ್ತವವನ್ನು ಅತಿಕ್ರಮಿಸದ ಎಚ್ಚರಿಕೆಯು ಇಲ್ಲಿದೆ. ಒಂದು ಕಾಲದ ಸಮಾಜವ್ಯವಸ್ಥೆಯ
ದಾಖಲಾತಿ ಇಲ್ಲಿದೆ. ಆಡುನುಡಿಯನ್ನು ಸಮರ್ಥವಾಗಿ ಉಪಯೋಗಿಸುವ ಪ್ರತಿಭೆ ಇಲ್ಲಿದೆ. ಇದೆಲ್ಲವನ್ನೂ
ಮೀರಿದ ಅಂಶವೆಂದರೆ ಈ ಗೀತೆಯ ಆಂತರ್ಯದಲಿ ಅಡಗಿದ ಸೂಳೆಯೊಬ್ಬಳ ಅಳಲು, ಬಳಸಿ ಬಿಸಾಡಬಹುದಾದ ಹೆಣ್ಣುಜೀವಿಯೊಂದು ತನ್ನ ಭಾವನೆಗಳಿಗೆ ಸ್ಪಂದಿಸುವ ಪರಿ.
‘ಹುಬ್ಬಳ್ಳಿಯಾಂವಾ’
ಕವನವು ‘ಸಖೀಗೀತ’ ಕವನಸಂಕಲನದಲ್ಲಿ ಅಡಕವಾಗಿದೆ.
16 comments:
ಸುನಾಥಕಾಕಾ...
"ಹುಬ್ಬಳ್ಳಿಯಾಂವಾ" ಕವಿತೆಯನ್ನ ಅರ್ಥವಿವರಣೆಸಹಿತ ಓದುವ ಅವಕಾಶ ಕಲ್ಪಿಸಿದ್ದಕ್ಕೆ ವಂದನೆ. ಬೇಂದ್ರೆಯವರ ಕವಿತೆಗಳೊಡಗೂಡಿ ಬರುತ್ತಿರುವ ನಿಮ್ಮ ಬರಹಗಳು ಬಲು ಇಷ್ಟವಾಗತ್ವೆ.
ತುಂಬ ಹಿಂದೆ ಬೇಂದ್ರೆಯವರ ಕೆಲವು ಸಾಲುಗಳನ್ನ ಉಪಯೋಗಿಸಿಕೊಂಡು ಲೇಖನ ಬರೆದಿದ್ದೆ. ನಿಮ್ಮ ಬರಹಗಳನೋದಿದಾಗ ನೆನಪಿಗೆ ಬಂದ ಆ ಲೇಖನವನ್ನ ನನ್ನ ಬ್ಲಾಗಲ್ಲಿ ಕೂಡ ಹಾಕಿದ್ದೇನೆ. ಅದರಲ್ಲಿನ ನನ್ನ ಅನಿಸಿಕೆಗಳು ಎಷ್ಟು ಮಾತ್ರ ಸರಿಯಿವೆಯೋ ಗೊತ್ತಿಲ್ಲ.ಇಲ್ಲೊಮ್ಮೆ ನೋಡಿ ತಪ್ಪುಗಳಿದ್ದಲ್ಲಿ ದಯವಿಟ್ಟು ತಿಳಿಸುವಿರಾ?
ಶಾಂತಲಾ,
ಸಖೀಗೀತದ ಬಗೆಗಿನ ನಿನ್ನ ವಿವರಣೆ ನನಗೆ ತುಂಬಾ ಇಷ್ಟವಾಯಿತು. ಬೇಂದ್ರೆಯವರ ಇತರ ದಾಂಪತ್ಯ-ಕವನಗಳಲ್ಲಿ
ಕಾಣುವ ಭಾವನೆಗಳನ್ನು ಸಂಕಲಿಸಿ ಒಂದು ಲೇಖನವನ್ನು ನೀನು ನಿನ್ನ blogನಲ್ಲಿ ಪ್ರಕಟಿಸಿದರೆ ಸ್ವಾರಸ್ಯಕರವಾಗಿರುತ್ತದೆ ಎಂದು ನನ್ನ ಭಾವನೆ. ದಯವಿಟ್ಟು ಆ ಕೆಲಸವನ್ನು ನೀನು ಮಾಡಬೇಕು.
-ಸುನಾಥ ಕಾಕಾ
ಸುನಾಥರೇ,
ಚಿಕ್ಕಂದಿನಿಂದಲೂ ಈ ಹಾಡನ್ನ ಕೇಳ್ತಾ ಇದ್ದೆ, ಆದ್ರೆ ಅದರ ಅರ್ಥ ಇಷ್ಟೊಂದು ಸರಳವಾಗಿ ನನಗೆ ಆಗಿರಲಿಲ್ಲ, ಧನ್ಯವಾದಗಳು ನಿಮಗೆ.
ಸಿಮ್ಮಾ,
ಬೇಂದ್ರೆಯವರ ಗೀತೆಗಳಲ್ಲಿ ಬಳಸಲಾದ ಪ್ರಾದೇಶಿಕ ಪದಗಳಿಂದ,ಆ
ಕವನಗಳ ಅರ್ಥ ಮಸಕಾಗುತ್ತಿರಬಹುದು?
ಪ್ರಿಯರೇ,
ಬೇಂದ್ರೆ ಅಜ್ಜನ ಕವಿತೆಯನ್ನ ಮನಮುಟ್ಟುವಂತೆ
ಬಿಡಿಸಿಟ್ಟಿದ್ದೀರಿ.ಬರೀ ಕವಿತೆ ಓದುವದಕ್ಕೂ,"ಹೀಗೀಗೆ.."ಅಂತ
focus ಮಾಡ್ತ ಹೋಗುವದಕ್ಕೂ ತುಂಬ ವ್ಯತ್ಯಾಸವಿದೆ.
ಪದ್ಯದಷ್ಟೇ ನಿಮ್ಮ grafic ಶೈಲಿಯೂ ಇಷ್ಟವಾಯಿತು..
-ರಾಘವೇಂದ್ರ ಜೋಶಿ.
ಸುನಾಥರೆ,
ತುಂಬಾ ಸುಂದರವಾಗಿ ಮನಮುಟ್ಟುವಂತೆ ವಿವರಿಸಿದ್ದೀರಿ. ನಿಜ. ವಾಸ್ತವಿಕತೆಯ ನೆಲೆಯಲ್ಲಿ ಕಲ್ಪನೆಯನ್ನು ಬಿತ್ತಿದವರು ಬೇಂದ್ರೆಯವರು. ಹಾಗಾಗಿಯೇ ನನಗೆ ಅವರ ಕವನಗಳೆಂದರೆ ಬಲು ಇಷ್ಟ.
ಅವರ ಇನ್ನೊಂದು ಕವನ "ಬಂಗಾರ ತೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ.."("ಕೃಷ್ಣಕುಮಾರಿ" ಕವನಸಂಕಲನ) ತುಂಬಾ ಸುಂದರ ಕಲ್ಪನೆಗಳಿಂದ ಕೂಡಿದೆ. ಅದರ ಬಗ್ಗೆಯೂ ಸಧ್ಯವಾದರೆ ಬರೆಯಬೇಕಾಗಿ ವಿನಂತಿ.
ರಾಘವೇಂದ್ರ ಜೋಶಿಯವರೆ,
ಕವಿತೆಯನ್ನು ಒಬ್ಬರೇ ಓದಿಕೊಂಡಾಗ ಸಿಗುವ ಸುಖ, ಜೊತೆಯಾಗಿ ಚರ್ಚಿಸಿದಾಗ ಸಿಗುವ ಸುಖ,ಆ ಹಾಡನ್ನು ಕೇಳಿದಾಗ ಸಿಗುವ ಸುಖ ಅಧಿಕಾಧಿಕ, ಅಲ್ಲವೆ?
ತೇಜಸ್ವಿನಿ,
"ಬಂಗಾರ ನೀರ ಕಡಲಾಚೆಗೀಚಿಗಿದೆ" ಸುಂದರವಾದ ಕವನ. ಅದರ ಬಗೆಗೆ ಬರೆಯಲು ಪ್ರಯತ್ನ ಮಾಡುತ್ತೇನೆ.
bendre'yavara kavanavannu tumba arthavattaagi vivarisiddeera. avara ella kavanagaLoo praadEshika sogaDininda kooDide. dhanyavaadagaLu
ಧನ್ಯವಾದಗಳು, ದೀಪ್ತಸ್ಮಿತಾ.
ಬೇಂದ್ರೆಯವರ ಕಾವ್ಯದ ಪ್ರಾದೇಶಿಕ ಸೊಗಡು ಹಾಗು ದೇಸಿ ರಚನೆ ಅನನ್ಯವಾಗಿವೆ.
ಸುನಾಥರೇ,
ಹೃದಯಸಮುದ್ರ ಕವನ ಓದಿಕೊಂಡು ಇಲ್ಲಿಗೆ ಬಂದೆ..
ಅಲ್ಲ್ರಿರುವ ಒಂದು ಸಾಲು, ಯಾಕೋ ಇಲ್ಲಿ ನೆನಪಾಯಿತು
"ಅನುಭಾವದ ಸಾಕ್ಷಾತ್ ಅನುಭವವಿಲ್ಲದೆ, ಅನುಭಾವ-ಕವನ ರಚಿಸಲಾಗದು"
ತರಲೆಗೆ ಕ್ಷಮೆಯಿರಲಿ ;)
ಶಿವ,
ಸರಿಯಾದದ್ದನ್ನೇ ಹೇಳಿದ್ದೀರಿ. ತರಲೆ ಏನು ಬಂತು!
ಧನ್ಯವಾದಗಳು ಸಾರ್
ಧನ್ಯವಾದಗಳು, ಪ್ರಕಾಶರೆ.
ನಿಮ್ಮ ವಿಮರ್ಶಾತ್ಮಕ ವಿವರಣೆಯನ್ನು ಬೇಂದ್ರೇ ಅಜ್ಜವರು ಒದಿದ್ದರೇ ಬಹುಶಃ ಅತೀ ಸಂತೋಷ ಪಡುತ್ತಿದ್ದರೆನೋ...ಧನ್ಯೋಸ್ಮಿ.
ಧನ್ಯವಾದಗಳು, ಪಂಚಾಕ್ಷರಿಯವರೆ.
Post a Comment