Tuesday, September 30, 2008

ಭಾರತದಲ್ಲಿ ಮತಾಂತರದ ಇತಿಹಾಸ ಹಾಗೂ ರಾಜಕೀಯ

ಆರ್ಯ ಜನಾಂಗವು ಭಾರತಕ್ಕೆ ಹೊರಗಿನೆಂದು ಬಂದಿತೆಂದು ಕೆಲವು ಇತಿಹಾಸಕಾರರು ಹೇಳಿದರೆ, ಇನ್ನೂ ಕೆಲವರು ಆರ್ಯ ಜನಾಂಗವು ಭಾರತದ native ಜನಾಂಗವೇ ಆಗಿದೆ ಎಂದು ವಾದಿಸುತ್ತಾರೆ. ಅದೇನೆ ಇರಲಿ, ಪ್ರಾಚೀನ ಕಾಲದಲ್ಲಿ ಭಾರತದಲ್ಲಿ ಅನೇಕ ಜನಾಂಗಗಳು ವಾಸಿಸುತ್ತಿದ್ದವು. ಬಹುಶ: ಇವು ಬೇರೆ ಬೇರೆ ಬುಡಕಟ್ಟಿಗೆ ಸೇರಿದ ಜನಾಂಗಗಳಾಗಿರಬೇಕೆನ್ನುವದು, ಈ ಜನಾಂಗಗಳ ಪ್ರತ್ಯೇಕ ದೈಹಿಕ ಲಕ್ಷಣಗಳಿಂದಲೇ ವ್ಯಕ್ತವಾಗುತ್ತದೆ. ಉದಾಹರಣೆಗೆ ನಾಗಾ ಜನಾಂಗ, ಪಂಜಾಬಿ ಜನಾಂಗ, ಕೊಡವರು, ‘ದ್ರಾವಿಡ’ ಜನಾಂಗ ಇತ್ಯಾದಿ.

ಈ ಜನಾಂಗಗಳಲ್ಲಿ ಅನೇಕ ಜನಾಂಗಗಳು totem ಪೂಜಕರಾಗಿದ್ದವು. ಆರ್ಯಜನಾಂಗದವರೊಡನೆ ನಡೆದ ಹೋರಾಟಗಳಲ್ಲಿ , ಈ ಜನಾಂಗಗಳು ಸೋತ ಬಳಿಕ, ಎಲ್ಲ ಸೋತ ಜನಾಂಗಗಳು ಮಾಡುವಂತೆ ಈ ಆರ್ಯೇತರ ಜನಾಂಗಗಳೂ ಸಹ, ಗೆದ್ದವರ ಸಂಸ್ಕೃತಿಗೆ ಶರಣಾದವು.
ಈ ಸಂಸ್ಕೃತಿಯಲ್ಲಿ ‘ಧರ್ಮ’ವೂ ಒಂದು.
ಭಾರತದಲ್ಲಿ ನಡೆದ ಮೊದಲ ಮತಾಂತರ ಇದಾಗಿರಬಹುದು.

ಹೀಗೆ ಶರಣಾದವರೆಲ್ಲ ಆರ್ಯರ ವೈದಿಕ ಧರ್ಮದ ಅನುಯಾಯಿಗಳಾದರೂ ಸಹ ತಮ್ಮ totemಗಳನ್ನು , ತಮ್ಮ ದೈವಸಂಕೇತಗಳನ್ನು ಸುಲಭದಲ್ಲಿ ಬಿಟ್ಟುಕೊಡಲಿಲ್ಲ. ಅಷ್ಟೇ ಅಲ್ಲ, ತಮ್ಮ ದೈವಸಂಕೇತಗಳನ್ನು ವೇದಗಳಲ್ಲಿ ಸೇರಿಸಲು ಸಮರ್ಥರಾದರು. ವೇದಗಳಲ್ಲಿ ಬರುವ ಜಲದೇವತೆಗಳನ್ನು ಇದಕ್ಕೆ ಉದಾಹರಿಸಬಹುದು.
ಅದರಂತೆ, ‘ಸಾರ್ಪರಾಜ್ಞೀ ಸೂರ್ಯೋವಾ’ ಎನ್ನುವ ವಾಕ್ಯ ಸಹ ಈ ತರಹದ manipulated assimilationದ
ಸಂಕೇತವೆಂದು ಶ್ರೀ ಶಂ. ಬಾ. ಜೋಶಿ ಭಾವಿಸುತ್ತಾರೆ.

ಆರ್ಯರ ವೈದಿಕ ಧರ್ಮವನ್ನು ವಿರೋಧಿಸುವವರಲ್ಲಿ ಶ್ರೀಕೃಷ್ಣನೇ ಮುಂದಾಳು ಎನ್ನಬಹುದು. ಚಿಕ್ಕವನಿದ್ದಾಗಲೇ ಆತ, ವೈದಿಕ ದೇವತೆಯಾದ ಇಂದ್ರನನ್ನು ವಿರೋಧಿಸಿ, ತನ್ನ ಜನರು (ಹಟ್ಟಿಕಾರರು) ಮೊದಲಿನಿಂದಲೂ ಮಾಡುತ್ತಿದ್ದ ‘ಗಿರಿಪೂಜೆ’ಯನ್ನು ಮಾಡಲು ಪ್ರಚೋದಿಸಿದ. ಇದರ ವಿರುದ್ಧ ಪ್ರತಿಕಾರಕ್ಕೆ ಮುಂದಾದ ಇಂದ್ರ ಹಾಗೂ ವರುಣರನ್ನು ಯಶಸ್ವಿಯಾಗಿ ಎದುರಿಸಿದ.

ಅರ್ಜುನನಿಗೆ ಮಾಡಿದ ‘ಗೀತೋಪದೇಶ’ದಲ್ಲಿಯೂ ಸಹ ಶ್ರೀಕೃಷ್ಣನ ಒಲವು ಸ್ಪಷ್ಟವಾಗಿದೆ.
“ತ್ರೈಗುಣ್ಯವಿಷಯಾ ವೇದಾ ನಿಸ್ತ್ರೈಗುಣ್ಯೋ ಭವಾರ್ಜುನ” ಎಂದು ಹೇಳುವಲ್ಲಿಯ ವೇದವಿರೋಧಿ ಧೋರಣೆ ಹಾಗು “ವೃಕ್ಷಗಳಲ್ಲಿ ನಾನು ಬಿಲ್ವವೃಕ್ಷ” ಎಂದು ಹೇಳುವಾಗ, ಅಲ್ಲಿ ತೋರುವ ವೃಕ್ಷಪೂಜೆಯ ಒಲವು ಇವು ಸ್ಪಷ್ಟವಾಗಿ ವೈದಿಕ-ವಿರೋಧಿಯಾಗಿವೆ.

ಏನೇ ಇರಲಿ, ಸೋತವರು ಗೆದ್ದವರ ಧರ್ಮವನ್ನು ಏಕೆ ಸ್ವೀಕರಿಸುತ್ತಾರೆ?
ಹೋರಾಟವನ್ನು ಮುಂದುವರಿಸಲು ಅಸಮರ್ಥರಾದ ಇವರು ಗೆದ್ದವರಿಗೆ ‘ಜೀ’ ಎನ್ನುತ್ತ ಕೈಕಟ್ಟಿ ನಿಲ್ಲುವದು ಅನಿವಾರ್ಯವಷ್ಟೆ. ಕಾಲಕ್ರಮದಲ್ಲಿ ಇವರಲ್ಲಿ ಅನೇಕರು Stockholm syndrome ಕ್ಕೆ ಒಳಗಾಗುತ್ತಾರೆ. ಆಗ ಇವರು ಗೆದ್ದವರ ನಡೆ-ನುಡಿ, ವೇಷ-ಭೂಷಣ ಇವುಗಳನ್ನು ಅನುಕರಿಸಲು ಪ್ರಾರಂಬಿಸುತ್ತಾರೆ. ನಾವು ಕೂಡ ಇಂಗ್ಲೀಶರ ಭಾಷೆ, ವೇಷ-ಭೂಷಣ ಹಾಗು ನಾಗರಿಕತೆಯನ್ನು ನಮ್ಮವೇ ಎನ್ನುವಂತೆ ಅನುಕರಿಸುತ್ತಿಲ್ಲವೆ?

ಭಾಷೆ ಹಾಗು ವೇಷ-ಭೂಷಣ ಇವು ಹೊರಗಿನ, ತೋರಿಕೆಯ ಅಲಂಕಾರಗಳು. ಮನುಷ್ಯನು ಇವನ್ನೆಲ್ಲ ಸುಲಭವಾಗಿ ಬದಲಾಯಿಸಿಕೊಳ್ಳುತ್ತಾನೆ. ಆದರೆ ತನ್ನ ದೈವಿಕ ನಂಬಿಕೆಗಳನ್ನು ಸುಲಭವಾಗಿ ಬಿಟ್ಟುಕೊಡುವದಿಲ್ಲ. ಆದರೆ ಆರ್ಥಿಕ ಹಾಗೂ ಸಾಮಾಜಿಕ ಲಾಭಕ್ಕಾಗಿ ಕೆಲವರು ಧರ್ಮವನ್ನು ಬದಲಾಯಿಸಲು ಸಿದ್ಧರಾಗುತ್ತಾರೆ. ಮೊಗಲರ ಕಾಲದಲ್ಲಿ ಇಸ್ಲಾಮ ಧರ್ಮವನ್ನು ಸ್ವೀಕರಿಸಿದ ಅನೇಕ ದೊಡ್ಡ ಮನುಷ್ಯರನ್ನು ಇದಕ್ಕೆ ಉದಾಹರಣೆ ಎಂದು ಹೇಳಬಹುದು.
ಸುಪ್ರಸಿದ್ಧ ಸಂಗೀತಕಾರ ತಾನಸೇನ ಸಹ, ತನ್ನ ಇಳಿವಯಸ್ಸಿನಲ್ಲಿ ಮುಸಲಮಾನನಾಗಿ ಮತಾಂತರಗೊಂಡ. ಯಾರೂ ಅವನನ್ನು ಮತಾಂತರಕ್ಕಾಗಿ ಬಲಾತ್ಕರಿಸಿರಲಿಕ್ಕಿಲ್ಲ. ಆದರೆ, subtle pressure ಎನ್ನುವದೊಂದು ಇರುತ್ತದೆಯಲ್ಲ!
ಇದರಂತೆಯೆ, ಬ್ರಿಟಿಶರ ಆಡಳಿತದಲ್ಲಿಯೂ ಸಹ Anglo-Indiansರಿಗೆ ಹಾಗೂ ಮತಾಂತರಿತಗೊಂಡ ಕ್ರಿಶ್ಚನ್ನರಿಗೆ ಹೆಚ್ಚಿನ ಅನುಕೂಲತೆಗಳು ಇದ್ದವಲ್ಲವೆ? ಇವನ್ನು ಸಾಮಾಜಿಕ ಕಾರಣಗಳ ಮತಾಂತರ ಎನ್ನಬಹುದು.

ಆರ್ಥಿಕ ಕಾರಣಗಳಿಂದಾದ ಮತಾಂತರವನ್ನು ನಾವು ಪಶ್ಚಿಮ ಕರಾವಳಿಯಲ್ಲಿ ಕಾಣಬಹುದು. ಸುಮಾರು ೭ನೆಯ ಶತಮಾನದಲ್ಲಿ ಭಾರತದ ಪಶ್ಚಿಮ ಕರಾವಳಿಗೆ ಬರುತ್ತಿದ್ದ ಅರಬ ವ್ಯಾಪಾರಿಗಳು ಮನ್ಸೂನ್ ಗಾಳಿಗಳ ಜೊತೆಗೆ ಇಲ್ಲಿ ಬಂದು ತಲುಪುತ್ತಿದ್ದರು. ಮರಳಿ ಹೋಗಲು reverse monsoonಗಾಗಿ ಕಾಯಬೇಕಲ್ಲ. ಅಲ್ಲಿಯವರೆಗೆ ದೈಹಿಕ ಅವಶ್ಯಕತೆಗಳಿಗಾಗಿ ಏನು ಮಾಡುವದು? ಕೆಲವರು ಕರಾವಳಿಯ ಹೆಂಗಸರನ್ನು ಕೊಂಡುಕೊಂಡರು. ಆದರೆ ಮತ್ತೆ ಕೆಲವರು ಕರಾವಳಿಯ ಹೆಂಗಸರ ಜೊತೆಗೆ ಮದುವೆ ಮಾಡಿಕೊಂಡರು.
ಇದು ಆರ್ಥಿಕ ಮತಾಂತರ. ಈ ಅರಬ ವರ್ತಕರ ಸಂತಾನವೇ ಮಲಬಾರದ ‘ಮಾಪಿಳ್ಳೆ’ಗಳು, ‘ಬ್ಯಾರಿಗಳು’ ಹಾಗೂ ಉತ್ತರ ಕನ್ನಡ ಜಿಲ್ಲೆಯ ಭಟಕಳದ ‘ನವಾಯತರು’.
ಈ ಮತಾಂತರಗಳು ಶಾಂತಿಯುತ ಮತಾಂತರಗಳು. ಆರ್ಥಿಕ ಹಾಗು ಸಾಮಾಜಿಕ ಕಾರಣಕ್ಕಾಗಿ ಕರಾವಳಿಯಲ್ಲಿ ನಡೆದ ಮತಾಂತರಗಳು.
ಇಷ್ಟೇ ಆಗಿದ್ದರೆ, ಮತಾಂತರವನ್ನು ಬಹುಶಃ ಯಾರೂ ವಿರೋಧಿಸುತ್ತಿರಲಿಲ್ಲ. ಮತಾಂತರದ ಜೊತೆಗೆ ರಾಷ್ಟ್ರನಿಷ್ಠೆಯೂ ಬದಲಾಗುತ್ತಿತ್ತು ಎನ್ನುವದೇ ಇಲ್ಲಿಯ alarming point.

ಪೋರ್ತುಗೀಜರು ಅರಬ ವರ್ತಕರಂತೆ ಕೇವಲ ವ್ಯಾಪಾರಕ್ಕೆ ತಮ್ಮನ್ನು ಸೀಮಿತಗೊಳಿಸಲಿಲ್ಲ. ಕರಾವಳಿಯ ಮೀನುಗಾರರನ್ನು ಇವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಲು ಪ್ರಾರಂಭಿಸಿದರು. ಇದನ್ನು ಪ್ರತಿಬಂಧಿಸಿ ವಿಜಯನಗರದ ರಾಜರು ಹಾಗೂ ವಿಜಾಪುರದ ಸುಲ್ತಾನರು, ಪೋರ್ತುಗೀಜರಿಗೆ ಶರತ್ತುಗಳನ್ನು ಹಾಕಿದರು.
ಈ ಶಾಂತಿಯುತ ಮತಾಂತರವನ್ನು ಪ್ರತಿಬಂಧಿಸಲು ಕಾರಣವೇನು ಎಂದು ಯಾರಾದರೂ ಕೇಳಬಹುದು.

ಪೋರ್ತುಗೀಜರು ಕರಾವಳಿ ಪ್ರದೇಶದಲ್ಲಿ ವ್ಯಾಪಾರದ ಹೊರತಾಗಿ, ತಮ್ಮ ಆಡಳಿತ ಸ್ಥಾಪಿಸಲು ಪ್ರಾರಂಭಿಸಿದಾಗ, ವಿಜಯನಗರ ಹಾಗೂ ವಿಜಾಪುರದ ಅರಸರು ಪೋರ್ತುಗೀಜರ ಮೇಲೆ ದಂಡೆತ್ತಿ ಬಂದರು. ಆ ಸಮಯದಲ್ಲಿ ಈ ಮತಾಂತರಿತ ಮೀನುಗಾರರು ಪೋರ್ತುಗೀಜರ ಪರವಾಗಿ ಹೋರಾಡಿದರು. ಅಲ್ಲದೆ, ಇವರಲ್ಲಿ ಅನೇಕರು ಮೀನುಗಾರರಾಗಿದ್ದರಿಂದ, ವಿಜಯನಗರದ ಹಾಗೂ ವಿಜಾಪುರದ ಕಡಲ ಕಾವಲುಪಡೆಯು ನಿರ್ಬಲವಾಗಿ ಹೋಯಿತು.
ಗೋವಾದಲ್ಲಿ ಅಲ್ಬುಕರ್ಕನು ಅನೇಕ ದೇವಾಲಯಗಳನ್ನು ಕೆಡವಿಸಿ ಹಾಕಿದ ; ಮತಾಂತರಕ್ಕೆ ಒಪ್ಪದ ಜನರ ಮೇಲೆ ಘೋರ ಅತ್ಯಾಚಾರವನ್ನು ಎಸಗಿದ. ಇದು ಬಲಾತ್ಕಾರದ ಮತಾಂತರ. ಈ ಎಲ್ಲ ಕೃತ್ಯಗಳಲ್ಲಿ ಮತಾಂತರಿತರು ಪೋರ್ಚುಗೀಜರಿಗೆ ಬೆಂಬಲವಾಗಿ ನಿಂತರು.
ಮತಾಂತರದ ರಾಜಕೀಯ ಉದ್ದೇಶ ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ಈ ಕಾರಣದಿಂದಾಗಿಯೇ, ಮಂಗಳೂರನ್ನು ಮುತ್ತಿದ ಟೀಪು ಸುಲ್ತಾನನು ಮತಾಂತರಿತಗೊಂಡ ಮೂರುಸಾವಿರ ಕ್ರಿಶ್ಚನ್ನರನ್ನು, ಸೆರೆಯಾಳಾಗಿ ಕೊಡಗಿಗೆ march ಮಾಡಿಸುತ್ತ ಒಯ್ದ. ಟೀಪುವಿನ ಈ ಕಾರ್ಯಕ್ಕಾಗಿ ಅವನನ್ನು ಮತಾಂಧನೆಂದು ಕರೆಯುವವರು, ಇದರ ಹಿಂದಿನ ರಾಜಕೀಯ ಉದ್ದೇಶವನ್ನು ದಯವಿಟ್ಟು ಗಮನಿಸಬೇಕು.

ಈಗಲೂ ಸಹ ಅಷ್ಟೇ. ಮತಾಂತರದಲ್ಲಿ ತೊಡಗಿದ New Life ಸಂಸ್ಥೆಯ ಕಾರ್ಯಕರ್ತರನ್ನು ಕೆಲವು ರಾಜಕಾರಣಿಗಳು ತಕ್ಷಣವೇ ಬೆಂಬಲಿಸಿ ಹೇಳಿಕೆ ಕೊಟ್ಟರು. ಕ್ರಿಶ್ಚನ್ನರ ಮೇಲೆ ಇವರಿಗೆ ಪ್ರೀತಿ ಬಹಳ ಅಂತಲ್ಲ. ಮತಾಂತರಿತರ ‘ಮತ’ ತಮಗೆ ದೊರೆಯಲಿ ಅನ್ನುವದೊಂದೇ ಇದರ ಹಿಂದಿನ ಉದ್ದೇಶ. So, ಇಲ್ಲಿ ಮತಾಂತರದ ಬೆಂಬಲಕ್ಕೆ ರಾಜಕೀಯ ಉದ್ದೇಶವಿದೆ.

ಕ್ರಿ.ಶ. ೭೦೦ರ ನಂತರ ಭಾರತದ ಮೇಲೆ ದಾಳಿ ಮಾಡಿದ, ತುರುಕರು ಹಾಗೂ ಪರ್ಶಿಯನ್ನರು ಸೆರೆ ಸಿಕ್ಕ ಸೈನಿಕರಿಗೆ ಒಂದು ಶರತ್ತಿನ ಮೇಲೆ ಜೀವದಾನ ಮಾಡುತ್ತಿದ್ದರು: “ನೀವು ಇಸ್ಲಾಮ ಧರ್ಮಕ್ಕೆ ಮತಾಂತರಗೊಳ್ಳಬೇಕು”.
ಇವರ ಉದ್ದೇಶ ಸ್ಪಷ್ಟವಾಗಿದೆ. ಮತಾಂತರಗೊಂಡ ಸೈನಿಕರು ತಮ್ಮ ನಿಷ್ಠೆಯನ್ನು ಬದಲಾಯಿಸುತ್ತಾರೆ. ಇದರ ಜ್ವಲಂತ ಉದಾಹರಣೆ ಎಂದರೆ ಮಲಿಕ ಕಾಫರ. ದಕ್ಷಿಣ ಭಾರತದ ಮೇಲೆ ದಂಡೆತ್ತಿ ಬಂದಾಗ ಈ ಮತಾಂತರಿತನು ಮಾಡಿದ ಅತ್ಯಾಚಾರಗಳು ತುರುಕರ ಹಾಗೂ ಪರ್ಶಿಯನ್ನರ ಅತ್ಯಾಚಾರಗಳಿಗಿಂತ ಘೋರವಾಗಿದ್ದವು. ಆ ಸಮಯದಲ್ಲಿ ಸೋಲುಂಡ ಹೊಯ್ಸಳ ಬಲ್ಲಾಳ ದೊರೆಯು ದಕ್ಷಿಣ ಭಾರತದ ಇತರ ರಾಜರಿಗೆ ಒಂದು ಸಂದೇಶವನ್ನು ನೀಡಿದ. ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಸಂದೇಶವಿದು: “ಮಲಿಕ ಕಾಫರನು ನಮ್ಮ ರಾಜ್ಯಗಳನ್ನಷ್ಟೇ ಅಲ್ಲ, ನಮ್ಮ ಸಂಸ್ಕೃತಿಯನ್ನೇ ನಾಶ ಮಾಡುತ್ತಿದ್ದಾನೆ. ಇದಕ್ಕಿಂತ ಹೆಚ್ಚಿನ ಗಂಡಾಂತರ ಯಾವುದಿದೆ? ನಮ್ಮೆಲ್ಲರ ಬಲವನ್ನು ಒಟ್ಟುಗೂಡಿಸಿ ಹೋರಾಡೋಣ. ನಾನು ನಿಮ್ಮ ಸೈನ್ಯದಲ್ಲಿ ಸಾಮಾನ್ಯ ಸೈನಿಕನಂತೆ ಹೋರಾಡಾಲು ಸಿದ್ಧನಿದ್ದೇನೆ”.
ಆದರೆ ಆಗಲೇ ಇಳಿವಯಸ್ಸಿನಲ್ಲಿದ್ದ ಬಲ್ಲಾಳ ದೊರೆಯ ಇಷ್ಟಾರ್ಥ ಸಿದ್ಧಿಸಲಿಲ್ಲ. ಮದುರೆಯ ಸುಲ್ತಾನನು ಬಲ್ಲಾಳ ದೊರೆಯನ್ನು ಸೆರೆ ಹಿಡಿದು, ಚರ್ಮ ಸುಲಿಸಿ, ತೂಗು ಹಾಕಿದನು. ದಕ್ಷಿಣ ಭಾರತ ಸೋಲುಂಡಿತು. ಸೆರೆಯಾಳುಗಳು ಜೀವ ಉಳಿಸಿಕೊಳ್ಳಲೆಂದು ಇಸ್ಲಾಮ ಧರ್ಮಕ್ಕೆ ಶರಣಾದರು. ಈ ಸೆರೆಯಾಳುಗಳಲ್ಲಿ ಮತಾಂತರಗೊಂಡು ಜೀವ ಉಳಿಸಿಕೊಂಡ ಹುಕ್ಕ ಹಾಗೂ ಬುಕ್ಕರೂ ಇದ್ದರು.

ಶೃಂಗೇರಿ ಪೀಠಾಧಿಪತಿಯಾದ ವಿದ್ಯಾರಣ್ಯರು ಕಾಶಿಯಲ್ಲಿ ಹುಕ್ಕ ಹಾಗೂ ಬುಕ್ಕರನ್ನು ವೈದಿಕ ಧರ್ಮಕ್ಕೆ ಮರು ಮತಾಂತರಿಸಿದರು. ಆರ್ಯಸಮಾಜ ಸ್ಥಾಪಿಸಿದ ದಯಾನಂದ ಸರಸ್ವತಿಯವರು ಮರುಮತಾಂತರವನ್ನು ಪ್ರಾರಂಭಿಸುವದಕ್ಕಿಂತ ೬೦೦ ವರ್ಷಗಳಷ್ಟು ಮೊದಲೇ ವಿದ್ಯಾರಣ್ಯರು ಈ ಕಾರ್ಯ ಮಾಡಿದರು. (ಹಾಗೂ ಈ ಕಾರ್ಯಕ್ಕಾಗಿ ಅವರ ಮೇಲೆ ಬಹಿಷ್ಕಾರ ಹಾಕಲಾಗಿತ್ತು.)

ಹುಕ್ಕ, ಬುಕ್ಕರು ಮರುಮತಾಂತರಗೊಂಡು ವಿಜಯನಗರ ಸ್ಥಾಪಿಸದಿದ್ದರೆ ಏನಾಗುತ್ತಿತ್ತು? ವೈದಿಕ ಧರ್ಮ ನಾಶವಾಗುತ್ತಿತ್ತೆ?
ಧರ್ಮನಾಶಕ್ಕಿಂತ ಹೆಚ್ಚಿನ ನಷ್ಟವೆಂದರೆ ಭಾರತದ ಸಂಸ್ಕೃತಿನಾಶ.
ಕೆಲ ವರ್ಷಗಳ ಬಳಿಕ ಬುಕ್ಕನು ಮದುರೆಯ ಸುಲ್ತಾನನನ್ನು ಸೋಲಿಸಿದ ಬಳಿಕ, ಬುಕ್ಕನ ಸೊಸೆ ಕಂಪಲಾದೇವಿ ಬರೆದ “ಮದುರಾ ವಿಜಯಮ್” ಸಂಸ್ಕೃತ ಕಾವ್ಯದಲ್ಲಿ ಈ ಸಂಸ್ಕೃತಿನಾಶದ ಸ್ಪಷ್ಟ ಚಿತ್ರಣವಿದೆ.
[ “ಯಾವ ರಾಜಮಂದಿರಗಳಲ್ಲಿ ಗಿಳಿಗಳು ಮಧುರವಾಣಿಯಲ್ಲಿ ನುಡಿಯುತ್ತಿದ್ದವೊ, ಅಲ್ಲೀಗ ಗೂಗೆಗಳು ಕರ್ಕಶವಾಗಿ ಕಿರಚುತ್ತಿವೆ.”]

ಭಾರತದ ಮುಸಲ್ಮಾನರು ಧರ್ಮವನ್ನು ಬದಲಿಸಿರಬಹುದು. ಆದರೆ ರಕ್ತವನ್ನು ಬದಲಿಸಿಕೊಂಡಿಲ್ಲವಲ್ಲ. ಭಾರತೀಯ ಪ್ರಾಚೀನ ಸಂಸ್ಕೃತಿಗೆ ಹಿಂದೂಗಳಷ್ಟೇ ಮುಸಲ್ಮಾನರೂ ಸಹ ವಾರಸುದಾರರಾಗಿದ್ದಾರೆ. ಭಾರತದ ಯೋಗ, ವೇದ, ಆಯುರ್ವೇದ, ಭರತನಾಟ್ಯ, ಶಾಸ್ತ್ರೀಯ ಸಂಗೀತ ಇವೆಲ್ಲಕ್ಕೆ ಎಲ್ಲಾ ಭಾರತೀಯರೂ—whatever their religion—ವಾರಸುದಾರರೇ!

ಆದರೆ, ಮತಾಂತರಗೊಂಡವರು ಇವನ್ನೆಲ್ಲ ಮರೆತುಬಿಡುವದೇ, ಮತಾಂತರದ ದುರಂತ.
ಕಾಶ್ಮೀರದ ಮುಸಲ್ಮಾನರಲ್ಲಿಯ ಅನೇಕರ ಹೆಸರುಗಳು ‘ಭಟ್’ ಎಂದು ಇರುವದನ್ನು ಗಮನಿಸಿರಿ. ಮತಾಂತರಿತರಾದ ಈ ಭಟ್ಟರು ಈಗ ಕಟ್ಟಾ ಉಗ್ರಗಾಮಿಗಳಾಗಿರುವದೇ ಮತಾಂತರದ ದುರಂತಕ್ಕೆ ಹಿಡಿದ ಕನ್ನಡಿಯಾಗಿದೆ.

ಆದರೆ, ರಾಜಕೀಯದ ಸ್ವಾರ್ಥಸಾಧನೆಗಾಗಿ ದೇಶವನ್ನು ನಾಶ ಮಾಡಲು ಸಿದ್ಧರಾದ ರಾಜಕಾರಣಿಗಳಿದ್ದಾಗ, ಭಾರತ ದೇಶ ಒಂದು ದೇಶವಾಗಿ ಉಳಿದೀತೆ? ಮುಸ್ಲಿಮ್ ಮತಗಳ ಸಲುವಾಗಿ, ರಾಷ್ಟ್ರದ್ರೋಹಿ ಸಿಮಿ ಕಾರ್ಯಕರ್ತರಿಗೆ ಸರಕಾರದ ಹಣದಲ್ಲಿ
legal aid ಕೊಡಲು ಹೊರಟಿರುವ ಇಂತಹ ರಾಜಕಾರಣಿಗಳಿದ್ದಾಗ, ಭಾರತ ಛಿದ್ರವಾಗದೇ ಉಳಿದೀತೆ?

Sunday, September 21, 2008

ಶಿಶುನಾಳ ಶರೀಫರು

ಶಿಶುನಾಳ ಶರೀಫರು ತಮ್ಮ ತತ್ವಪದಗಳಿಂದಾಗಿ ಕರ್ನಾಟಕದ ತುಂಬ ಖ್ಯಾತರಾಗಿದ್ದಾರೆ. ಇವರ ಜೀವನದ ವಿವರಗಳು ಇಂತಿವೆ:

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನಲ್ಲಿರುವ ಶಿಶುನಾಳವು ಈಗಲೂ ಸಹ ಒಂದು ಸಣ್ಣಹಳ್ಳಿ. ಈ ಹಳ್ಳಿಯಲ್ಲಿ ದೇವಕಾರ ಮನೆತನದ ಇಮಾಮ ಹಜರತ್ ಸಾಹೇಬ ಹಾಗು ಅವರ ಹೆಂಡತಿ ಹಜ್ಜೂಮಾ ದಂಪತಿಗಳು ಜೀವಿಸುತ್ತಿದ್ದರು.

ಈ ದಂಪತಿಗಳಿಗೆ ಅನೇಕ ವರ್ಷಗಳವರೆಗೆ ಮಕ್ಕಳಿಲ್ಲದ್ದರಿಂದ, ಹುಲಗೂರಿನಲ್ಲಿದ್ದ ಸಂತ ಖಾದರ ಷಾವಲಿ ಸಮಾಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅದರ ಫಲವಾಗಿ ಕ್ರಿ.ಶ. ೧೮೧೯ನೆಯ ಇಸವಿಯ ಮಾರ್ಚ ತಿಂಗಳಿನ ೭ನೆಯ ದಿನಾಂಕದಂದು ಮಹಮ್ಮದ ಶರೀಫ ಜನಿಸಿದರು.

ಶರೀಫರು ಶಿಶುನಾಳದಲ್ಲಿಯೇ ಇದ್ದ ಕೂಲಿಮಠದಲ್ಲಿ ಕಲಿತು ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಬಳಿಕ ಶಿಶುನಾಳದ ಅಕ್ಕಪಕ್ಕದಲ್ಲಿದ್ದ ಮಂಡಿಗನಾಳ, ಕ್ಯಾಲಕೊಂಡ, ಪಾಣಿಗಟ್ಟಿ, ಎರಿಬೂದಿಹಾಳ, ಗುಂಜಳ ಹಳ್ಳಿಗಳ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲವು ವರ್ಷ ಕೆಲಸ ಮಾಡಿದರು.

ಕೆಲ ಕಾಲಾನಂತರ ಕೆಲಸ ಬಿಟ್ಟ ಶರೀಫರು ತಮ್ಮ ಹಳ್ಳಿಯಲ್ಲಿಯೇ ಆಧ್ಯಾತ್ಮಚಿಂತನೆಯಲ್ಲಿ ಮಗ್ನರಾಗಿದ್ದರು. ತಮ್ಮ ಮನೆಯ ಕಟ್ಟೆಯ ಮೇಲೆ ಕುಳಿತುಕೊಂಡು ಆಧ್ಯಾತ್ಮ ಚರ್ಚೆಯಲ್ಲಿ ತೊಡಗಿರುತ್ತಿದ್ದರು.
ಈ ಸಮಯದಲ್ಲಿ ಅವರಿಗೆ ಕಳಸದ ಗೋವಿಂದ ಭಟ್ಟರ ಭೆಟ್ಟಿಯಾಯಿತು. ಗೋವಿಂದ ಭಟ್ಟರಿಂದ ಶರೀಫರಿಗೆ ಉಪದೇಶವಾಯಿತು. ಸ್ವಜಾತಿ ಬಾಂಧವರಿಗೆ ಇದು ಸರಿ ಬರಲಿಲ್ಲ. ಆದರೆ ಶರೀಫರು ತಮ್ಮ ಗುರುವಿನ ಸಂಗವನ್ನು ಬಿಡಲಿಲ್ಲ.
ತಮ್ಮ ಗುರುವನ್ನು ಶರೀಫರು ಹೀಗೆ ವರ್ಣಿಸುತ್ತಾರೆ:

ಸದ್ಗುರು ನಿನ್ನ ಮಾಯಕ್ಕೆ ಮರುಳಾದೆನೋ ||ಪಲ್ಲ||

ಕರ ಪಿಡಿದು ಎನ್ನ ಕರಣದೊಳಗೆ ಮೊದಲು
ವರಮಂತ್ರ ಬೋಧಿಸಿ ಕರವಿಟ್ಟು ಶಿರದೊಳು ||೧||

ಮಸ್ತಕ ಪಿಡಿದೆತ್ತಿ ಹಸ್ತದಿ ತರ್ಕೈಸಿ
ದುಸ್ತರ ಭವಬಾಧೆ ಕಸ್ತು ಬಿಸಾಕಿದಿ ||೨||

ಗುರುವರ ಗೋವಿಂದ ಪರಮಗಾರುಡಿಗ ನೀ—
ನಿರುತಿಹೆ ತಿಳಿಯದು ನರರಿಗೆ ಪರಿಯಿದು ||೩||

ಕೆಲಕಾಲದ ನಂತರ ಶರೀಫರಿಗೆ ಕುಂದಗೋಳದ ನಾಯಕ ಮನೆತನದ ಫಾತಿಮಾಳೊಡನೆ ಮದುವೆಯಾಯಿತು.
ಶರೀಫರಿಗೆ ತಮ್ಮ ಹೆಂಡತಿಯ ಬಗೆಗಿರುವ ಮರ್ಯಾದೆಯ ಭಾವವು ಅವರು ರಚಿಸಿದ ಈ ಹಾಡಿನಲ್ಲಿ ಕಂಡುಬರುತ್ತದೆ:

ನನ್ನ ಹೇಣ್ತೆ ನನ್ನ ಹೇಣ್ತೆ
ನಿನ್ನ ಹೆಸರೇನ್ಹೇಳಲಿ ಗುಣವಂತೆ ||ಪಲ್ಲ||

ಘನಪ್ರೀತಿಲೆ ಈ ತನುತ್ರಯದೊಳು
ದಿನ ಅನುಗೂಡೂನು ಬಾ ಗುಣವಂತೆ ||ಅನುಪಲ್ಲ||

ಮೊದಲಿಗೆ ತಾಯ್ಯಾದಿ ನನ್ನ ಹೇಣ್ತೆ ಮತ್ತೆ
ಸದನಕ ಸೊಸಿಯಾದಿ ನನ್ನ ಹೇಣ್ತೆ ಮತ್ತೆ
ಮುದದಿಂದ ಮೋಹಿಸಿ ಮದುವ್ಯಾದವನಿಗೆ
ಮಗಳೆಂದೆನಿಸಿದೆ ನನ್ನ ಹೇಣ್ತೆ ||೧||

ಅತ್ತಿಗಿ ನಾದುನಿ ನನ್ನ ಹೇಣ್ತೆ
ನಮ್ಮತ್ಯಾಗಿ ನಡಿದೀಯೇ ನನ್ನ ಹೇಣ್ತೆ
ತುತ್ತು ನೀಡಿ ಎನ್ನೆತ್ತಿ ಆಡಿಸಿದಿ
ಹೆತ್ತವ್ವನೆನಸಿದೆ ನನ್ನ ಹೇಣ್ತೆ
ಚಿಕ್ಕಮ್ಮನ ಸರಿ ನೀ ನನ್ನ ಹೇಣ್ತೆ ಎನಗ
ತಕ್ಕವಳೆನಿಸಿದೆ ನನ್ನ ಹೇಣ್ತೆ ||೨||

ಅಕ್ಕರದಲ್ಲಿ ಅನಂತಕಾಲಾ ನಮ್ಮ
ಅಕ್ಕಾಗಿ ನಡೆದೆಲ್ಲ ನೀ ನನ್ನ ಹೇಣ್ತೆ
ಬಾಳೊಂದು ಚಲ್ವಿಕೆ ನನ್ನ ಹೇಣ್ತೆ
ಆಳಾಪಕೆಳಸಿದೆ ನನ್ನ ಹೇಣ್ತೆ
ಜಾಳಮಾತಲ್ಲವು ಜಗದೊಳು ಮೋಹಿಸಿ
ಸೂಳೆ ಎಂದೆನಿಸಿದೆ ನನ್ನ ಹೇಣ್ತೆ ||೩||

ಮಂಗಳರೂಪಳೆ ನನ್ನ ಹೇಣ್ತೆ
ಅರ್ಧಾಂಗಿಯೆನಿಸಿದೆ ನನ್ನ ಹೇಣ್ತೆ
ಶೃಂಗಾರದಿ ಸವಿ ಸಕ್ಕರೆ ಉಣಿಸುವ
ತಂಗೆಂದೆನಬೇಕ ನನ್ನ ಹೇಣ್ತೆ
ಕುಶಲದಿ ಕೂಡಿದ ನನ್ನ ಹೇಣ್ತೆ
ವಸುಧಿಯೊಳು ಶಿಶುನಾಳಧೀಶನಡಿಗೆ ಹೆಣ್ಣು
ಶಿಶುವಾಗಿ ತೋರಿದಿ ನನ್ನ ಹೇಣ್ತೆ
ನಿನ್ನ ಹೆಸರೇನು ಹೇಳಲಿ ಗುಣವಂತೆ ||೪||

ಶರೀಫರ ಸಂಸಾರದಲ್ಲಿ ಇಷ್ಟು ಚೆನ್ನಾಗಿ ಹೊಂದಿಕೊಂಡದ್ದಷ್ಟೇ ಅಲ್ಲ, ಅವರ ಹೆಂಡತಿ ಅವರ ಆಧ್ಯಾತ್ಮ ಸಾಧನೆಯಲ್ಲಿಯೂ ಅವರಿಗೆ ಜೊತೆಗಾತಿಯಾಗಿರಬಹುದು.

“ಘನಪ್ರೀತಿಲೆ ಈ ತನುತ್ರಯದೊಳು
ದಿನ ಅನುಗೂಡೂನು ಬಾ ಗುಣವಂತೆ” ಎನ್ನುವ ಸಾಲುಗಳು ಸ್ಥೂಲದೇಹಕ್ಕಷ್ಟೇ ಅಲ್ಲ, ಸೂಕ್ಷ್ಮದೇಹ ಹಾಗೂ ಕಾರಣದೇಹಗಳಲ್ಲೂ ತಾವು ಜೊತೆಯಾಗಿರೋಣ ಎಂದು ಶರೀಫರು ತಮ್ಮ ಹೆಂಡತಿಗೆ ಕರೆ ಕೊಡುವದನ್ನು ತೋರಿಸುತ್ತವೆ.

ಕೆಲಕಾಲದ ನಂತರ ಶರೀಫರಿಗೆ ಒಂದು ಹೆಣ್ಣು ಮಗು ಜನಿಸಿ, ಬೇಗನೇ ಮರಣವನ್ನಪ್ಪುತ್ತದೆ. ಅವರ ಹೆಂಡತಿ ಫಾತಿಮಾ ಸಹ ಸ್ವಲ್ಪೇ ದಿನಗಳಲ್ಲಿ ತೀರಿಕೊಳ್ಳುತ್ತಾಳೆ. ಹೆಂಡತಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವರ ಮಾವ ಅವರಿಗೆ ಹೇಳಿ ಕಳಿಸುತ್ತಾರೆ. ಆದರೆ, ಶರೀಫರು ಈಗ ಎಲ್ಲಾ ಮಾಯಾಬಂಧಗಳಿಂದ ಮುಕ್ತರಾಗಿದ್ದರು. ಹೆಂಡತಿಯ ಅಂತ್ಯಕ್ರಿಯೆಯಲ್ಲಿ ಅವರು ಭಾಗವಹಿಸಲಿಲ್ಲ. ಅವರ ಮನೋಭಾವನೆ ಈ ಹಾಡಿನಲ್ಲಿ ವ್ಯಕ್ತವಾಗಿದೆ:

ಮೋಹದ ಹೆಂಡತಿ ಸತ್ತ ಬಳಿಕ
ಮಾವನ ಮನೆಯ ಹಂಗಿನ್ನ್ಯಾಕೋ ||ಪಲ್ಲ||
ಸಾವು ನೋವಿಗೆ ತರುವ ಬೀಗನ
ಮಾತಿನ ಹಂಗೊಂದೆನಗ್ಯಾಕೋ ||ಅನುಪಲ್ಲ||

ಖಂಡವನದಿ ಸೋಂಕಿ ತನ್ನ ಮೈಯೊಳು ತಾಕಿ
ಬಂಡೆದ್ದು ಹೋಗುವದು ಭಯವ್ಯಾಕೋ
ಮಂಡಲನಾಡಿಗೆ ಪಿಂಡದ ಗೂಡಿಗೆ
ಚಂಡಿತನದಿ ಚರಿಸ್ಯಾಡುವದ್ಯಾಕೋ ||೧||

ತಂದೆ ಗುರುಗೋವಿಂದನ ಸೇವಕ
ಕುಂದಗೋಳಕೆ ಬಂದು ನಿಂತಾನ್ಯಾಕೋ
ಬಂಧುರ ಶಿಶುನಾಳಧೀಶನ ದಯದಿಂದ
ಇಂದಿಗೆ ವಿಷಯದ ವ್ಯಸನಗಳ್ಯಾಕೋ ||೨||

ಇನ್ನು ಮುಂದೆ ಶರೀಫರ ಜೀವನವು ಪೂರ್ಣವಾಗಿ ಪಾರಮಾರ್ಥಿಕ ಸಾಧನೆಗೆ ಮೀಸಲಾಯಿತು. ಮಗಳು, ಮಡದಿ, ತಂದೆ,ತಾಯಿ ಹಾಗು ಕೊನೆಗೆ ಗುರು ಗೋವಿಂದ ಭಟ್ಟರ ನಿಧನದ ನಂತರ, ಶರೀಫರು ಪುಣ್ಯಕ್ಷೇತ್ರಗಳ ಯಾತ್ರೆ ಹಾಗು ಪುಣ್ಯಜೀವಿಗಳ ಭೆಟ್ಟಿಯಲ್ಲಿ ಕಾಲ ಕಳೆದರು. ನವಲಗುಂದದ ನಾಗಲಿಂಗಪ್ಪನವರು ಹಾಗೂ ಗರಗದ ಮಡಿವಾಳಪ್ಪನವರು ಶರೀಫರಿಗೆ ಅತ್ಯಂತ ಆಪ್ತರಾಗಿದ್ದರು.
ಆ ಅವಧಿಯಲ್ಲಿ ಇಳಿವಯಸ್ಸಿನಲ್ಲಿದ್ದ ಶ್ರೀ ಚಿದಂಬರ ಸ್ವಾಮಿಗಳ ಹಾಗು ಬಾಲಲೀಲಾ ಮಹಾಂತ ಶಿವಯೋಗಿಗಳ ದರ್ಶನ ಪಡೆದರು.
ಅಲ್ಲದೆ ಸಮಕಾಲೀನರಾದ ಅಗಡಿಯ ಶೇಷಾಚಲ ಸ್ವಾಮಿಗಳು, ಅವರಾದಿ ಫಲಾಹಾರ ಸ್ವಾಮಿಗಳು, ಗುಡಗೇರಿಯ ಕಲ್ಮಠದ ಸಂಗಮೇಶ್ವರರು, ಅಂಕಲಗಿಯ ಶ್ರೀ ಅಡವಿ ಸ್ವಾಮಿಗಳು ಹಾಗು ವಿಶ್ವಕರ್ಮದ ಪ್ರಭುಸ್ವಾಮಿಗಳು ಇವರೆಲ್ಲರ ಸತ್ಸಂಗವನ್ನು ಪಡೆದರು.
ತಮ್ಮ ಕೊನೆಯ ದಿನಗಳಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳನ್ನು ಸಂದರ್ಶಿಸಿದಾಗ ಸ್ವಾಮಿಗಳಿನ್ನೂ ಚಿಕ್ಕವರಿದ್ದರು.

ಶರೀಫರು ಯಾವುದೇ ಕೆಲಸ ಮಾಡದೆ, ಆತ್ಮಚಿಂತನೆಯಲ್ಲಿ ಮಗ್ನರಾಗಿ ಇರುತ್ತಿದ್ದರಿಂದ ಸಾಕಷ್ಟು ನಿಂದನೆಯನ್ನು ಎದುರಿಸಬೇಕಾಯಿತು. ಸಾಲಗಾರರ ಕಾಟದಿಂದ ಮುಕ್ತರಾಗಲು, ಶಿಶುನಾಳದಲ್ಲಿದ್ದ ತಮ್ಮ ಹೊಲವನ್ನು ಮಾರಬೇಕಾಯಿತು. ಇದೆಲ್ಲವನ್ನೂ ಶರೀಫರು ದೇವರ ದಯವೆಂದೇ ಭಾವಿಸಿದರು:

ಎಂಥಿಂಥಾದೆಲ್ಲಾನು ಬರಲಿ
ಚಿಂತೆಯಂಬೋದು ನಿಜವಾಗಿರಲಿ ||ಪಲ್ಲ||
ಪರಾತ್ಪರನಾದ ಗುರುವಿನ
ಅಂತಃಕರಣ ಒಂದು ಬಿಡದಿರಲಿ ||ಅನುಪಲ್ಲ||

ಬಡತನೆಂಬುದು ಕಡೆತನಕಿರಲಿ
ವಡವಿ ವಸ್ತ ಹಾಳಾಗಿ ಹೋಗಲಿ
ನಡುವಂಥ ದಾರಿಯು ತಪ್ಪಿ
ಅಡವಿ ಸೇರಿದಂತಾಗಿ ಹೋಗಲಿ ||೧||

ಗಂಡಸ್ತಾನ ಇಲ್ಲದಂತಾಗಲಿ
ಹೆಂಡರು ಮಕ್ಕಳು ಬಿಟಗೊಟ್ಟು ಹೋಗಲಿ
ಕುಂಡಿ ಕುಂಡಿ ಸಾಲ್ದವರೊದೆಯಲಿ
ಬಂಡು ಮಾಡಿ ಜನರು ನಗಲಿ ||೨||

ನಂಬಿಗೆ ಎಳ್ಳಷ್ಟಿಲ್ಲದಂತಾಗಲಿ
ಅಂಬಲಿ ಎನಗೆ ಸಿಗದೆ ಹೋಗಲಿ
ಹುಂಬಸುಳೇಮಗನೆಂದು ಬೈಯಲಿ
ಕಂಬಾ ಮುರಕೊಂಡು ಎನ್ನ ಮ್ಯಾಲೆ ಬೀಳಲಿ ||೩||

ವ್ಯಾಪಾರುದ್ಯೋಗ ಇಲ್ಲದಾಂಗಾಗಲಿ
ಬುದ್ಧಿಯೆಂಬುದು ಮಸಣಿಸಿ ಹೋಗಲಿ
ಮದ್ದು ಹಾಕಿ ಎನ್ನನು ಕೊಲ್ಲಲಿ
ಹದ್ದು ಕಾಗಿ ಹರಕೊಂಡು ತಿನ್ನಲಿ ||೪||

ಭಾಷೆ ಪಂಥ ನಡಿದ್ಹಾಂಗಾಗಲಿ
ಹಾಸ್ಯ ಮಾಡಿ ಜನರೆಲ್ಲರು ನಗಲಿ
ಈ ಶಿಶುನಾಳಧೀಶ ಸದ್ಗುರುವಿನ
ಲೇಸಾದ ದಯವೊಂದು ಕಡೆತನಕಿರಲಿ ||೫||

ತಮ್ಮ ಕೊನೆಗಾಲವನ್ನು ಅರಿತ ಶರೀಫರು, ಶರಣರ ಪದ್ಧತಿಯಂತೆ “ವಿಭೂತಿ ವೀಳ್ಯೆ” ಮಾಡಿಸಿಕೊಂಡು ದೇಹತ್ಯಾಗ ಮಾಡಲು ಬಯಸಿದರು. ಈ ವಿಧಾನದ ಪ್ರಕಾರ ಜಂಗಮ ಪಾದಪೂಜೆ ಹಾಗು ಶರೀಫರ ಮಸ್ತಕದ ಮೇಲೆ ಜಂಗಮನ ಪಾದವಿಟ್ಟು ಶಿವಸಾಯುಜ್ಯ ಮಂತ್ರಪಠಣ ಮಾಡುವ ಅವಶ್ಯಕತೆ ಇತ್ತು. ಶರೀಫರ ಹಣೆಯ ಮೇಲೆ ಪಾದವಿಡಲು ಯಾವ ಜಂಗಮ ಒಪ್ಪಿಯಾರು? ಕೊನೆಗೆ ಹಿರೇಮಠದ ಕರಿಬಸವಯ್ಯನವರು ಶರೀಫರ ಇಚ್ಛೆಯನ್ನು ಪೂರ್ಣಗೊಳಿಸಿದರು. ಆ ಕ್ಷಣವೇ ಶರೀಫರು ಓಂಕಾರದಲ್ಲಿ ಲೀನವಾದರು:(ಕ್ರಿ.ಶ.೧೮೮೯ನೆಯ ಮಾರ್ಚ ೭ನೆಯ ದಿನಾಂಕ.)

ಬಿಡತೇನಿ ದೇಹ ಬಿಡತೇನಿ ||ಪಲ್ಲ||

ಬಿಡತೇನಿ ದೇಹವ ಕೊಡತೇನಿ ಭೂಮಿಗೆ
ಇಡತೇನಿ ಮಹಿಮಾದ ನಡತೆ ಹಿಡಿದು ದೇಹಾ ||೧||

ಪಾವಕಾಗುಹುತಿ ಮಾಡಿ ಜೀವನದಸು
ನಾ ಬೇರೆ ಬೈಲು ಬ್ರಹ್ಮದೊಳಾಡುತಲಿ ದೇಹಾ ||೨||

ಅವನಿಯೊಳು ಶಿಶುನಾಳಧೀಶನೆ ಗತಿಯೆಂದು
ಜವನಬಾಧೆಗೆದ್ದು ಶಿವಲೋಕದೊಳು ದೇಹಾ ಬಿಡತೇನಿ ||೩||

ಶರೀಫರ ಅಂತ್ಯಕ್ರಿಯೆಯನ್ನು ಹಿಂದು ಹಾಗು ಮುಸ್ಲಿಮರು ಕೂಡಿಯೇ ಮಾಡಿದರು. ಶರೀಫರ ತಂದೆ,ತಾಯಿಗಳ ಸಮಾಧಿಯ ಪಕ್ಕದಲ್ಲಿಯೇ ಶರೀಫರ ಸಮಾಧಿಯಾಯಿತು. ಈ ಗದ್ದುಗೆಯು ಯಾವುದೇ ಧರ್ಮದ ಮಾದರಿಯಲ್ಲಿ ಇಲ್ಲ. ವಿಶಾಲವಾದ ಕಟ್ಟೆ, ಅದಕ್ಕೆ ನೆರಳು ನೀಡುವ ಮರ ಇವೇ ಅವರ ಗದ್ದುಗೆ.
ಗದ್ದುಗೆಯ ಎಡಭಾಗದಲ್ಲಿ ಮುಸಲ್ಮಾನರು ಹಾಗು ಬಲಭಾಗದಲ್ಲಿ ಹಿಂದೂಗಳು ತಮ್ಮ ಪದ್ಧತಿಯ ಪ್ರಕಾರ ಪೂಜೆ ಸಲ್ಲಿಸುತ್ತಾರೆ.

ಗುಡಿಯ ನೋಡಿರಣ್ಣಾ ದೇಹದ
ಗುಡಿಯ ನೋಡಿರಣ್ಣಾ ||ಪಲ್ಲ||

ಗುಡಿಯ ನೋಡಿರಿದು
ಪೊಡವಿಗೆ ಒಡೆಯನು
ಆಡಗಿಕೊಂಡು ಕಡುಬೆಡಗಿನೊಳಿರುತಿಹ
ಗುಡಿಯ ನೋಡಿರಣ್ಣಾ ||ಅನುಪಲ್ಲ||

ಮೂರು ಮೂಲೆಯ ಕಲ್ಲು ಅದರೊಳು
ಜಾರುತಿರುವ ಕಲ್ಲು
ಧೀರ ನಿರ್ಗುಣನು ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರ್ಯಾಗಿರುತಿಹ
ಗುಡಿಯ ನೋಡಿರಣ್ಣಾ ||೧||

ಆರು ಮೂರು ಕಟ್ಟಿ ಮೇಲಕೆ
ಏರಿದನು ಘಟ್ಟಿ
ಭೇರಿ ಕಾಳಿ ಶಂಖ
ಭಾರಿ ಸುನಾದದಿ
ಮೀರಿದಾನಂದ ತೋರಿ ಹೊಳೆಯುತಿಹ
ಗುಡಿಯ ನೋಡಿರಣ್ಣಾ ||೨||

ಸಾಗುತಿಹವು ದಿವಸ ಬಹುದಿನ
ಹೋಗಿ ಮಾಡಿ ಪಾಯ್ಸ
ಯೋಗಿ ರಾಜ ಶಿಶುನಾಳಧೀಶ ತಾ—
ನಾಗಿ ಪರಾತ್ಪರ ಬ್ರಹ್ಮರೂಪನಿಹ
ಗುಡಿಯ ನೋಡಿರಣ್ಣಾ ||೩||
……………………………………………………..

Wednesday, September 10, 2008

ಚಿಗರಿಗಂಗಳ ಚೆಲುವಿ.........ದ.ರಾ.ಬೇಂದ್ರೆ

ವಸುಂಧರಾ ಎನ್ನುವದು ನಮ್ಮ ಪುರಾತನ ಕವಿಗಳು ಭೂಮಿತಾಯಿಗೆ ಕೊಟ್ಟ ಹೆಸರು. ವಸು ಎಂದರೆ ಜೀವಿ. ಭೂಮಿತಾಯಿಯು ಜೀವಿಗಳನ್ನು ಹೊತ್ತವಳು, ಆದುದರಿಂದ ಇವಳು ವಸುಂಧರಾ. ಇವಳಲ್ಲಿ ಅಡಗಿರುವ ಅನೇಕ ಹಾಗೂ ಅಮೂಲ್ಯ ಸಂಪತ್ತಿನಿಂದಾಗಿ ಇವಳನ್ನು ಬಹುರತ್ನಾ ವಸುಂಧರಾಎಂದು ಬಣ್ಣಿಸಲಾಗಿದೆ.

ಬೇಂದ್ರೆಯವರು ತಮ್ಮ ಕವನದಲ್ಲಿ ಭೂಮಿತಾಯಿಯನ್ನು ಚಿಗರಿಗಂಗಳ ಚೆಲುವಿಎಂದು ಕರೆದಿದ್ದಾರೆ. ಚಿಗರಿಯ ಕಣ್ಣುಗಳು ಸೌಂದರ್ಯಕ್ಕೆ ಹೆಸರಾದಂತಹವು. ಸಂಸ್ಕೃತ ಸಾಹಿತ್ಯದಲ್ಲಿಯೂ ಸಹ ಸುಂದರ ಕಣ್ಣುಗಳ ಸ್ತ್ರೀಯನ್ನು ಮೃಗನಯನಿಎಂದು ಕರೆಯಲಾಗಿದೆ. ಆದರೆ ಈ ಕವನದಲ್ಲಿ ಭೂಮಿತಾಯಿ ಸುಂದರ ಕಣ್ಣುಗಳಿಗಾಗಿ ಚಿಗರಿಗಂಗಳ ಚೆಲುವಿಯಾಗಿಲ್ಲ ; ಅವಳು ಇಲ್ಲಿ ಹೆದರಿದ ಹರಿಣಿ. ಹೆದರಿದ ಹರಿಣಿಯನ್ನು ನೋಡುವವರಿಗೆ ಎದ್ದು ಕಾಣುವ ಸಂಗತಿ ಎಂದರೆ, ಹರಿಣಿಯ ಕಣ್ಣುಗಳು ; ಅತ್ತಿತ್ತ ಚಂಚಲವಾಗಿ ಚಲಿಸುವ ಬೆದರಿದ ಕಣ್ಣುಗಳು.

ಚಿಗರಿಗಂಗಳ ಚೆಲುವಿಈ ಕವನವು ಬೇಂದ್ರೆಯವರ ಸಖೀಗೀತಕವನಸಂಕಲನದಲ್ಲಿ ಸೇರಿದೆ.
ಸಖೀಗೀತವು ೧೯೩೭ರಲ್ಲಿ ಪ್ರಕಟವಾಯಿತು.
………………………………………………………………..
ಚಿಗರಿಗಂಗಳ ಚೆಲುವಿಕವನವು ಮಾನವನ ವಿಕೃತ, ಜೀವಿರೋಧಿ ನಾಗರಿಕತೆಯ ದುರಂತವನ್ನು ಸೂಚಿಸುವ ಕವನ.
ಮಾನವನ ನಾಗರಿಕತೆ ಪ್ರಾರಂಭವಾಗುವ ಮೊದಲು ಈ ಸೃಷ್ಟಿಯು ಒಂದು ಸುಂದರವಾದ ಬನವಾಗಿತ್ತು. ಅಲ್ಲಿರುವ ಸಸ್ಯಸಂಕುಲ ಹಾಗೂ ಪ್ರಾಣಿಸಂಕುಲ ಸಾಮರಸ್ಯದಲ್ಲಿ ಜೀವಿಸುತ್ತಿದ್ದವು.
ನಾಗರಿಕತೆ ಪ್ರಾರಂಭವಾದಾಗಿನಿಂದ, ನಿಸರ್ಗದಲ್ಲಿದ್ದ ಸಾಮರಸ್ಯ ಹಾಳಾಯಿತೆನ್ನಬಹುದು.
ಮಾನವನ ಸ್ವಾರ್ಥ ಹಾಗೂ ದುರಾಸೆಯ ಮೊದಲ ಪೆಟ್ಟು ಬಿದ್ದದ್ದು ಸಸ್ಯಸಂಕುಲಕ್ಕೆ ಹಾಗೂ ಇತರ ಪ್ರಾಣಿಗಳಿಗೆ. ಬಳಿಕ ಮನುಷ್ಯವರ್ಗದಲ್ಲಿಯೇ ನಡೆದ ಆಂತರಿಕ ಕಲಹಗಳಿಂದಾಗಿ, ಸಂಕಷ್ಟಗಳ ಸರಪಳಿಯೇ ಪ್ರಾರಂಭವಾಯಿತು. ಇದನ್ನು ಈ ಕವನದಲ್ಲಿ ಹಂತ ಹಂತವಾಗಿ ವರ್ಣಿಸಲಾಗಿದೆ.

ಬೇಂದ್ರೆಯವರ ಕವನಗಳೆಂದರೆ, ಕವಿಯು ತನ್ನ ಭಾವನೆಗಳನ್ನು, ತನ್ನ ಸುಖ, ದುಃಖಗಳನ್ನು, ತನ್ನ ಅನುಭವಗಳನ್ನು ಎಲ್ಲರೊಡನೆ ಹಂಚಿಕೊಳ್ಳುವ ಕವನಗಳು. ಚಿಗರಿಗಂಗಳ ಚೆಲುವಿಕವನದಲ್ಲಿಯೂ ಸಹ ಕವಿಯು ತನ್ನ ದುಃಖವನ್ನು, ತನ್ನ ಆಕ್ರೋಶವನ್ನು ತನ್ನ ಗೆಳೆಯನೆದುರಿಗೆ ಹೇಳಿಕೊಳ್ಳುತ್ತಿದ್ದಾನೆ.

ಕವನದ ಪೂರ್ತಿಪಾಠ ಹೀಗಿದೆ:
………………………………………………………………

ಚಿಗರಿಗಂಗಳ ಚೆಲುವಿ ಚೆದsರಿ ನಿಂತಾಳ ನೋಡೋ
ಬೆದsರಿ ನಿಂತಾಳ ||ಪಲ್ಲವಿ||


ಹೊಳಿಹಳ್ಳ ತೊರೆದಾವೋ
ಗೆಣೆಹಕ್ಕಿ ಬೆರೆದಾವೋ
ಆಗದವರ ಹೊಟ್ಟಿ ಉರದಾವೋ
ಗೆಣೆಯಾ ಉರದಾವs
ಅಂಥವರ ದಿಟ್ಟಿ ಮನಿ ಮುರದಾವ;
ಅದನ ತಾ ಕಂಡು ಕೊರಗ್ಯಾsಳೊ
ಮರುಗ್ಯಾsಳೊ
ಸೊರಗ್ಯಾsಳೋ
ಹೂ ಕಾಯಿ ಹಣ್ಣು ತುಂಬಿದ ಬನದಾs|| ಚಿಗರಿಗಂಗಳ. . . .


ಬ್ಯಾಟಿ ನಾಯೊದರ್ಯಾವೋ
ಹಸುಜೀವ ಬೆದರ್ಯಾವೋ
ಗಳಗಳನೆ ಗಿಡದೇಲಿ ಉದರ್ಯಾವೋ
ಗೆಣೆಯಾ ಉದರ್ಯಾವs
ದಿನ್ನಿ ಮಡ್ಡಿ ಗುಡ್ಡ ಅದರ್ಯಾವ;
ಅದನ ತಾ ಕಂಡು ನೊಂದಾsಳೊ
ಬೆಂದಾsಳೊ
ಅಂದಾsಳೋ
ಇದು ಎಂಥಾ ಜೀವದ ಬ್ಯಾಟಿ ಹಾಡೇ ಹಗಲs’ || ಚಿಗರಿಗಂಗಳ. . .


ಆಳುಗಳ ಹೋರಾಟ
ಆಳುವವರಿಗೆ ಆಟ
ಗಾಳಕ್ಕ ಸಿಕ್ಕ ಮೀನದ ಗೋಳಾಟೊ
ಗೆಣೆಯಾ ಗೋಳಾಟೋ
ಗೆದ್ದವರ ಇದ್ದವರ ಹಾರಾಟ;
ಅರೆಸತ್ತ ಜೀವಾ ಕೊಳೆತಾsವೊ
ಹುಳತಾsವೊ
ಅಳತಾsವೋ
ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿಧ್ಹಾಂಗ || ಚಿಗರಿಗಂಗಳ. . .


ತನ್ನ ತಾ ಸುತ್ತ್ಯಾಳೊ
ಹೊತ್ತಿನ ಬೆನ್ಹತ್ತ್ಯಾಳೊ
ತಿಂಗಳನ ಬಗಲಾಗೆತ್ತ್ಯಾಳೊ
ಗೆಣೆಯಾ ಎತ್ತ್ಯಾಳೊ
ಉಕ್ಕುಕ್ಕುವ ದುಃಖ ಒಳಗೊತ್ತ್ಯಾಳೊ;
ನಿಂತ ನೆಲವೆಂದು ಕಡಿಲಾsಕೊ
ಬಡಿಲಾsಕೊ
ಒಡಿಲಾsಕೊ
ಒಡವ್ಯಲ್ಲೋ ಮಗನೇ ಉಸಿರಿದ್ದೊಡಲಂತಾsಳೋ || ಚಿಗರಿಗಂಗಳ. . .
…………………………………………………………….
ಕವನದ ಮೊದಲ ನುಡಿ ಹೀಗಿದೆ:

ಹೊಳಿಹಳ್ಳ ತೊರೆದಾವೋ
ಗೆಣೆಹಕ್ಕಿ ಬೆರೆದಾವೋ
ಆಗದವರ ಹೊಟ್ಟಿ ಉರದಾವೋ
ಗೆಣೆಯಾ ಉರದಾವs
ಅಂಥವರ ದಿಟ್ಟಿ ಮನಿ ಮುರದಾವ;
ಅದನ ತಾ ಕಂಡು ಕೊರಗ್ಯಾsಳೊ
ಮರುಗ್ಯಾsಳೊ
ಸೊರಗ್ಯಾsಳೋ
ಹೂ ಕಾಯಿ ಹಣ್ಣು ತುಂಬಿದ ಬನದಾs|| ಚಿಗರಿಗಂಗಳ. . . .

ಈ ನುಡಿ ಪ್ರಾರಂಭವಾಗುವದು ಸಾಮರಸ್ಯದಿಂದ ಕೂಡಿದ ಸಮೃದ್ಧ ನಿಸರ್ಗದ ವರ್ಣನೆಯೊಂದಿಗೆ :
ಹೊಳಿಹಳ್ಳ ತೊರೆದಾವೋ
ಗೆಣೆಹಕ್ಕಿ ಬೆರೆದಾವೋ

ನಿಸರ್ಗದ ಸಂಪನ್ಮೂಲಗಳಾದ ಹಾಗೂ ಜೀವರಾಶಿಯ ಬೆಳವಣಿಗೆಗೆ ಅವಶ್ಯವಿರುವ ಹೊಳೆಹಳ್ಳಗಳು ತೊರೆಯುತ್ತಿವೆ ಅಂದರೆ ತುಂಬಿಕೊಂಡು ಸಮೃದ್ಧವಾಗಿ ಹರಿಯುತ್ತಿವೆ. ಈ ಸಂಪನ್ಮೂಲಗಳನ್ನು ಭೋಗಿಸುವ ಜೀವರಾಶಿಯಾದ ಹಕ್ಕಿಗಳು ಬೆರೆದಿವೆ ಅಂದರೆ ಹೊಸ ಸೃಷ್ಟಿಯ ಕ್ರಿಯೆಯಲ್ಲಿ ತೊಡಗಿಕೊಂಡಿವೆ. ಇದೆಲ್ಲ ಮನಸ್ಸನ್ನು ಮುದಗೊಳಿಸುವ ನೋಟ.

ಆದರೆ ಈ ಸಾಮರಸ್ಯದ ಪರಿಸ್ಥಿತಿಗೆ ಈಗ ಭಂಗ ಬಂದಿದೆ.
ಯಾಕೆಂದರೆ:

ಆಗದವರ ಹೊಟ್ಟಿ ಉರದಾವೋ
ಗೆಣೆಯಾ ಉರದಾವs
ಅಂಥವರ ದಿಟ್ಟಿ ಮನಿ ಮುರದಾವ

ನಿಸರ್ಗದ ಈ ಸಾಮರಸ್ಯವನ್ನು ಸಹಿಸಲಾರದ ಜೀವಿ ಇಲ್ಲೊಂದಿದೆ. ಅದು ಮಾನವ ಜೀವಿ. ಮಾನವನ ಹೊರತಾಗಿ ಉಳಿದೆಲ್ಲ ಪಶು, ಪಕ್ಷಿಗಳನ್ನು ನಾವು ಆದಿವರ್ಗದ ಜೀವಿಗಳು ಎನ್ನಬಹುದು. ಈ ಅಮಾಯಕ ಜೀವಿಗಳು ನಿಸರ್ಗದೊಡನೆ ಒಂದಾಗಿ ಬಾಳುತ್ತಿವೆ. ಆದರೆ, ಮಾನವ ಎನ್ನುವ ಈ ಜೀವಿಗೆ ದುರಾಸೆ ಬಹಳ. ನಿಸರ್ಗದ ಸಂಪತ್ತನ್ನೆಲ್ಲ ತಾನೇ ಭೋಗಿಸುವ ಸ್ವಾರ್ಥ ಈ ಜೀವಿಗೆ. ಈ ಜೀವಿಗೆ ಬೇರೆ ಜೀವಿಗಳ ಸೌಖ್ಯವನ್ನು ಕಂಡರೆ ಸಹಿಸಲಾಗುವದಿಲ್ಲ. ಇವನಿಗೆ ಉಳಿದ ಜೀವಿಗಳ ಮೇಲೆ ಹೊಟ್ಟೆಕಿಚ್ಚು. ಅದಕ್ಕೆ ಬೇಂದ್ರೆ ಹೇಳುತ್ತಾರೆ:
ಆಗದವರ ಹೊಟ್ಟಿ ಉರದಾವೋ
ಗೆಣೆಯಾ ಉರದಾವs”

ಇಷ್ಟೇ ಅಲ್ಲ, ಇಂಥವರ ಕೆಟ್ಟ ದೃಷ್ಟಿಯಿಂದಾಗಿ (evil eye) ‘ಮನಿ ಮುರದಾವ’. ಇಲ್ಲಿಯವರೆಗೆ, ಒಂದು ಕ್ರಮದಿಂದ ನಡೆಯುತ್ತಿದ್ದಂತಹ ಸಂಸ್ಥೆ , ಎಲ್ಲ ಜೀವಿಗಳಿಗೆ ನೆಲೆಯಾದ ನಿಸರ್ಗದ ಆಶ್ರಯ (=ಮನಿ) ಈಗ ಭಗ್ನವಾಗುತ್ತಿದೆ.

ಆದರೆ ಭೂಮಿತಾಯಿ ನಿಸ್ಸಹಾಯಕಳು. ತನ್ನ ಒಡಲೆಲ್ಲ ಹೂ,ಕಾಯಿ ಹಾಗು ಹಣ್ಣುಗಳಿಂದ ತುಂಬಿದೆ. ಅದನ್ನೆಲ್ಲ ದುರಾಸೆಯಿಂದ ದೋಚುತ್ತಿರುವವರನ್ನು ಅವಳು ತಡೆಯುವದೆಂತು?
ಹೀಗಾಗಿ, ಅವಳು ಕೊರಗುತ್ತಿದ್ದಾಳೆ (ಪರಿಸ್ಥಿತಿಯ ಬಗೆಗೆ),
ಮರಗುತ್ತಿದ್ದಾಳೆ (ದುರ್ಬಲರ ಬಗೆಗೆ),
ಹಾಗೂ ಈ ಶೋಷಣೆಯಿಂದಾಗಿ ಸೊರಗುತ್ತಿದ್ದಾಳೆ (ಸ್ವತಃ).

ಅದನ ತಾ ಕಂಡು ಕೊರಗ್ಯಾsಳೊ
ಮರುಗ್ಯಾsಳೊ
ಸೊರಗ್ಯಾsಳೋ
ಹೂ ಕಾಯಿ ಹಣ್ಣು ತುಂಬಿದ ಬನದಾs|| ಚಿಗರಿಗಂಗಳ. . . . .

ಈ ದುರಾಕ್ರಮಣಕ್ಕೆ ಹೆದರಿದ ಅವಳು ಸ್ಥೈರ್ಯವನ್ನು ಕಳೆದುಕೊಂಡಿದ್ದಾಳೆ. ಆದುದರಿಂದ ಧಾವಿಸಲು ಯತ್ನಿಸುವ ಹರಿಣಿಯಂತೆ ಚೆದರಿ, ಚಂಚಲವಾಗಿ ನಿಂತಿದ್ದಾಳೆ. ಯಾವ ಗಳಿಗೆಯಲ್ಲಿ ಯಾರು ಆಕ್ರಮಣ ಮಾಡುತ್ತಾರೊ ಎಂದು ಬೆದರಿ ನಿಂತಿದ್ದಾಳೆ. ಸ್ಥೈರ್ಯ ಹಾಗು ಧೈರ್ಯವನ್ನು ಕಳೆದುಕೊಂಡ ಹರಿಣಿ ಇವಳು. ಇದು ಈ ಕವನದ ಪಲ್ಲವಿ, ಅಂದರೆ ಆವರ್ತಿಸುವ ವಿಷಯ.

ಚಿಗರಿಗಂಗಳ ಚೆಲುವಿ ಚೆದsರಿ ನಿಂತಾಳ ನೋಡೋ
ಬೆದsರಿ ನಿಂತಾಳ .
………………………………………………………………
ಮೊದಲನೆಯ ನುಡಿಯಲ್ಲಿ ಒಂದು ಸ್ತಬ್ದ ಚಿತ್ರವಿದೆ. ತಾನು ಸಮೃದ್ಧವಾದ ಬನದಲ್ಲಿದ್ದೂ, ಮನೆಮುರುಕರ ದುರಾಸೆಯ ಕೆಟ್ಟ ಕಣ್ಣಿನಿಂದ ಹೆದರಿದ, ಎಲ್ಲಿ ಓಡಬೇಕೊ ತಿಳಿಯದ ಅಸಹಾಯಕ ಹರಿಣಿಯ ಚಿತ್ರವಿದೆ. ಎರಡನೆಯ ನುಡಿಯಲ್ಲಿ ಆಕ್ರಮಣದ ಚಿತ್ರವಿದೆ.

ಬ್ಯಾಟಿ ನಾಯೊದರ್ಯಾವೋ
ಹಸುಜೀವ ಬೆದರ್ಯಾವೋ
ಗಳಗಳನೆ ಗಿಡದೇಲಿ ಉದರ್ಯಾವೋ
ಗೆಣೆಯಾ ಉದರ್ಯಾವs
ದಿನ್ನಿ ಮಡ್ಡಿ ಗುಡ್ಡ ಅದರ್ಯಾವ;
ಅದನ ತಾ ಕಂಡು ನೊಂದಾsಳೊ
ಬೆಂದಾsಳೊ
ಅಂದಾsಳೋ
ಇದು ಎಂಥಾ ಜೀವದ ಬ್ಯಾಟಿ ಹಾಡೇ ಹಗಲs’ || ಚಿಗರಿಗಂಗಳ. . .

ಬೇಂದ್ರೆ ಈ ನುಡಿಯಲ್ಲಿ ಪಳಗಿಸಿದ ಬೇಟೆಯ ನಾಯಿಗಳ ಸಂಕೇತವನ್ನು ಬಳಸುತ್ತಿದ್ದಾರೆ. ಮಾನವನ ನಾಗರಿಕತೆಯಲ್ಲಿ ಜರುಗಿದ ಮೊದಲ ಹಂತದ, ಅಂದರೆ ಬೇಟೆಯಾಡುವ ಹಂತದ ಚಿತ್ರವಿದು. ಬೇಟೆಯಾಡುವ ಪ್ರಾಣಿಗಳನ್ನು ಈಲು ಮಾಡಿ, ಅವುಗಳಿಂದ ಬೇಟೆಯಾಡಿಸುವ ಮಾನವ ಬುದ್ಧಿಯ ಚಿತ್ರವಿಲ್ಲಿದೆ. ಈ ಬೇಟೆಗೆ ಹಸುಜೀವಬೆದರ್ಯಾವೊ. ಹಸು ಇದು ಪಶು ಪದದ ತದ್ಭವವಾಗಿದ್ದರೂ ಸಹ, ರೂಢಿಯಲ್ಲಿ ಹಸು ಅಂದರೆ ಆಕಳು ; ಆದುದರಿಂದ ಹಸುಜೀವ ಅಂದರೆ ಸಾಧು ಪ್ರಾಣಿಗಳು.

ಅಪ್ರತ್ಯಕ್ಷವಾಗಿ ಇದು ಆಕ್ರಮಣಕಾರರ ಹಾಗು ಪರಾಜಿತ ಜನಾಂಗದವರನ್ನೂ ಸಹ ಸೂಚಿಸುತ್ತಿದೆ.
ಭಾರತ ದೇಶವನ್ನೇ ಉದಾಹರಣೆಗೆ ತೆಗೆದುಕೊಳ್ಳಬಹುದು. ಪ್ರಾಚೀನ ಕಾಲದಿಂದಲೂ ಈ ದೇಶದ ಮೇಲೆ ಆಕ್ರಮಣಗಳು ನಡೆಯುತ್ತಲೆ ಇವೆ. ಸುಸಂಸ್ಕೃತರಾದ ಹಾಗು ಆ ಕಾರಣದಿಂದಲೇ ದುರ್ಬಲರಾದ ಇಲ್ಲಿಯ ಜನತೆ, ಅನಾಗರಿಕ ಆಕ್ರಮಣಕಾರರಿಂದ ಅತ್ಯಾಚಾರಕ್ಕೊಳಗಾಗುತ್ತಲೆ ಬಂದಿದ್ದಾರೆ.
ಈ ಅತ್ಯಾಚಾರದಿಂದ ಪ್ರಕೃತಿಯೂ ಸಹ ಕಂಪಿಸಿದೆ ; ಗಿಡದ ಎಲೆಗಳು ಗಳಗಳನೆ ಉದರಿವೆ. ಅಷ್ಟೇ ಏಕೆ, ನಿರ್ಜೀವ ವಸ್ತುವಾದ ದಿನ್ನಿ, ಮಡ್ಡಿ, ಗುಡ್ಡ ಸಹ ನಡುಗಿವೆ.

ಬೇಂದ್ರೆಯವರು ಈ ವರ್ಣನೆಗಳಲ್ಲಿ ಶ್ರೇಣೀಕರಣದ ಬಳಕೆಯಾಗಿರುವದನ್ನು ಗಮನಿಸಬೇಕು.
ಮೊದಲು ಸಾಧುಪ್ರಾಣಿಗಳಿಗಾದ ಆಘಾತ ವರ್ಣಿಸಿ, ಆ ಬಳಿಕ ಸಸ್ಯಗಳಿಗಾದ ಆಘಾತವನ್ನು ಬಣ್ಣಿಸಲಾಗಿದೆ. ಆ ಬಳಿಕ ನಿರ್ಜೀವ ವಸ್ತುಗಳಿಗಾದ ಆಘಾತ ಬಣ್ಣಿಸಲಾಗಿದೆ. ಅಲ್ಲೂ ಸಹ, ಮೊದಲುದಿನ್ನಿ’, ಬಳಿಕ ಅದಕ್ಕಿಂತ ದೊಡ್ಡದಾದ ಮಡ್ಡಿ’, ಬಳಿಕ ಅದಕ್ಕೂ ದೊಡ್ಡ ವಸ್ತುವಾದಗುಡ್ಡವನ್ನು ಬಣ್ಣಿಸಲಾಗಿದೆ.
ಈ ರೀತಿಯಾಗಿ ಕಲ್ಪನೆಯಲ್ಲೂ ಸಹ ಕ್ರಮಬದ್ಧತೆಯನ್ನು ಅನುಸರಿಸುವದು ಬೇಂದ್ರೆಯವರ ವೈಶಿಷ್ಟ್ಯವಾಗಿದೆ.

ಮೊದಲನೆಯ ನುಡಿಯ ಎರಡನೆಯ ಭಾಗದಲ್ಲಿ ಭೂಮಿತಾಯಿ ಮರುಗಿದಂತೆ, ಇಲ್ಲೂ ಸಹ ಅವಳು ಸಂಕಟಪಡುವ ಚಿತ್ರವಿದೆ:

ಅದನ ತಾ ಕಂಡು ನೊಂದಾsಳೊ
ಬೆಂದಾsಳೊ
ಅಂದಾsಳೋ
ಇದು ಎಂಥಾ ಜೀವದ ಬ್ಯಾಟಿ ಹಾಡೇ ಹಗಲs’ || ಚಿಗರಿಗಂಗಳ. . .

ವಸುಂಧರೆಗೆ ಪ್ರತಿ ಜೀವಿಯೂ (-- ಸಸ್ಯವೇ ಇರಲಿ ಅಥವಾ ಚಿಕ್ಕ ಪ್ರಾಣಿಯೇ ಇರಲಿ--) ತನ್ನ ಮಗುವೆ. ಹೀಗಾಗಿ ಇಲ್ಲಿ ನಡೆಯುತ್ತಿರುವ ಜೀವದ ಬೇಟೆಯನ್ನು ಕಂಡು ಅವಳು ಶೋಕಿಸುತ್ತಿದ್ದಾಳೆ.

ಮೂರನೆಯ ನುಡಿಯಲ್ಲಿ, ಮಾನವನ `ನಾಗರಿಕತೆ’ಯ ಬೆಳವಣಿಗೆ ಇನ್ನೂ ಮೇಲಕ್ಕೇರಿದೆ. ಇದೀಗ ಆತ ರಾಜ್ಯಗಳನ್ನು ಕಟ್ಟಿಕೊಂಡಿದ್ದಾನೆ. ಪರರಾಜ್ಯಗಳನ್ನು ಆಕ್ರಮಿಸಿ ಚಕ್ರವರ್ತಿಯಾಗುತ್ತಿದ್ದಾನೆ. ಆದರೆ, ನಾಗರಿಕತೆಯ ಈ ಆಟದಲ್ಲಿ ಸ್ವತಃ ಮಾನವನೇ ಬಲಿಯಾಗುತ್ತಿದ್ದಾನೆ.

ಆಳುಗಳ ಹೋರಾಟ
ಆಳುವವರಿಗೆ ಆಟ
ಗಾಳಕ್ಕ ಸಿಕ್ಕ ಮೀನದ ಗೋಳಾಟೊ
ಗೆಣೆಯಾ ಗೋಳಾಟೋ
ಗೆದ್ದವರ ಇದ್ದವರ ಹಾರಾಟ;
ಅರೆಸತ್ತ ಜೀವಾ ಕೊಳೆತಾsವೊ
ಹುಳತಾsವೊ
ಅಳತಾsವೋ
ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿಧ್ಹಾಂಗ || ಚಿಗರಿಗಂಗಳ. . .

ಹೋರಾಟವೆನ್ನುವದು, ರಾಜ್ಯವಿಸ್ತಾರ ಎನ್ನುವದು ಇವೆಲ್ಲ ಆಳುವವರಿಗೆ ಒಂದು ಆಟ. ಆದರೆ ಹೋರಾಟದಲ್ಲಿ ತೊಡಗಿದ ಆಳುಗಳಿಗೆ ಹಾಗೂ ಅಮಾಯಕ ಪ್ರಜೆಗಳಿಗೆ ಈ ಹೋರಾಟವೆನ್ನುವದು ಒಂದು ದುಃಸ್ವಪ್ನವಿದ್ದಂತೆ. ಕೌರವ-ಪಾಂಡವರ ಯುದ್ಧವೇ ಆಗಲಿ, ಜಾಗತಿಕ ಯುದ್ಧವೇ ಆಗಲಿ, ಸಾಮಾನ್ಯ ಜನತೆಗೆ ಅದು ಬೇಕಾಗಿಲ್ಲದ ಯುದ್ಧ. ಅವರು ಗಾಳಕ್ಕೆ ಸಿಕ್ಕ ಮೀನಿನಂತೆ ಚಡಪಡಿಸುತ್ತಾರೆ. ಎಷ್ಟೇ ಕಣ್ಣೀರು ಹಾಕಿದರೇನು, ಗಾಳವು ಮೀನಿಗೆ ದಯೆ ತೋರುವದೆ?

ಈ ಹೋರಾಟದಲ್ಲಿ ಗೆದ್ದವರು ಹಾಗು ಬದುಕಿದ್ದವರು ಸತ್ತವರ ಮೇಲೆ ಬಾವುಟ ಹಾರಿಸುತ್ತಾರೆ. ಸೋತು ಬದುಕುಳಿದವರ ಪಾಡು ನಾಯಿಪಾಡು. ಅವರು ಅರೆಸತ್ತಂತವರು. ಅವರ ಬದುಕು ಕೊಳೆತು ಹೋಗುತ್ತದೆ, ಹುಳತು ಹೋಗುತ್ತದೆ, ಅಳುವುದೊಂದೇ ಅವರಿಗೆ ಉಳಿದ ಬದುಕು.

ಇದನ್ನು ಕಂಡ ಭೂಮಿತಾಯಿಗೆ ಹೇಗೆ ಅನಿಸುತ್ತದೆ?
ನಾನಾ ಜೀವಿಗಳಿಗೆ ಜನ್ಮ ಕೊಡುತ್ತಿರುವ, ಅನ್ನ ಕೊಡುತ್ತಿರುವ, ತಾಯಿ ವಸುಂಧರೆಗೆ ಹೇಗೆನ್ನಿಸುತ್ತದೆ?
ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿಧ್ಹಾಂಗ.
Her womb is a burial ground for her babies.

ಬೇಂದ್ರೆಯವರ ಉಪಮೆಗಳಲ್ಲಿ ಅತಿ ಕಠೋರವಾದ ಉಪಮೆ ಇದು ಎಂದು ಹೇಳಬಹುದು. ಅವರ ಮತ್ತೊಂದು ರಚನೆನೀ ಹೀಂಗ ನೋಡಬ್ಯಾಡ ನನ್ನಕವನದಲ್ಲಿ ಸಹ ಶೋಕರಸದ ಉನ್ನತ ಉಪಮೆಯೊಂದಿದೆ:
ಹುಣ್ಣವಿ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲುತ ಹಗಲs”.
ಆದರೆ ಈ ಉಪಮೆಯಲ್ಲಿ ಶೋಕವಷ್ಟೇ ಅಲ್ಲದೆ, ಕ್ರೌರ್ಯವಿದೆ.

ಕೊನೆಯ ನುಡಿಯಲ್ಲಿ, ಭೂಮಿತಾಯಿಯ ಈ ಬವಣೆ, ಕೊನೆಯಿಲ್ಲದ ಬವಣೆ ಎನ್ನುವ ಭಾವನೆಯನ್ನು ಕವಿ ವ್ಯಕ್ತಪಡಿಸುತ್ತಾರೆ:

ತನ್ನ ತಾ ಸುತ್ತ್ಯಾಳೊ
ಹೊತ್ತಿನ ಬೆನ್ಹತ್ತ್ಯಾಳೊ
ತಿಂಗಳನ ಬಗಲಾಗೆತ್ತ್ಯಾಳೊ
ಗೆಣೆಯಾ ಎತ್ತ್ಯಾಳೊ
ಉಕ್ಕುಕ್ಕುವ ದುಃಖ ಒಳಗೊತ್ತ್ಯಾಳೊ;
ನಿಂತ ನೆಲವೆಂದು ಕಡಿಲಾsಕೊ
ಬಡಿಲಾsಕೊ
ಒಡಿಲಾsಕೊ
ಒಡವ್ಯಲ್ಲೋ ಮಗನೇ ಉಸಿರಿದ್ದೊಡಲಂತಾsಳೋ || ಚಿಗರಿಗಂಗಳ. . . .

ವಾಸ್ತವತೆ ಹಾಗು ಕಲ್ಪನೆಗಳನ್ನು ಕರಗಿಸಿ ಒಂದಾಗಿಸುವ ಬೇಂದ್ರೆ ಪ್ರತಿಭೆ ಇಲ್ಲಿ ಮತ್ತೊಮ್ಮೆ ಕಾಣುತ್ತದೆ.
ಓರ್ವ ಅಸಹಾಯಕ ಸ್ತ್ರೀ, ಸಂಕಟಗಳಿಂದ ಪಾರಾಗಲು ತನ್ನ ಸೀಮಿತ ಪರಿಧಿಯಲ್ಲಿ ಸುತ್ತುವಳು ಎನ್ನುವ ಅರ್ಥವನ್ನು ಕೊಡುವ ಮೊದಲ ಸಾಲು, ಭೂಮಿಯು ತನ್ನ ಅಕ್ಷದ ಸುತ್ತಲೂ ತಿರುಗುವ ವಾಸ್ತವವನ್ನೂ ಹೇಳುತ್ತದೆ. ಅದರಂತೆ ಹೊತ್ತಿನ ಬೆನ್ಹತ್ತ್ಯಾಳೊಎನ್ನುವ ಸಾಲು ಅವಳು ತನ್ನ ದುಃಖಗಳನ್ನು ನಿವಾರಿಸಲು ಕಾಲವನ್ನು ಕಾಯುತ್ತಿದ್ದಾಳೆ ಎನ್ನುವ ಅರ್ಥದ ಜೊತೆಗೇ, ಸೂರ್ಯನ (=ಹೊತ್ತಿನ) ಸುತ್ತಲೂ ತಿರುಗುವ ಭೂಮಿಯನ್ನೂ ಸಹ ಸೂಚಿಸುತ್ತದೆ. ತಿಂಗಳನ ಬಗಲಾಗೆತ್ತ್ಯಾಳೊಎನ್ನುವ ಸಾಲು ಹಸುಗೂಸನ್ನು ಎತ್ತಿಕೊಂಡ ಹೆಂಗಸಿನ ಚಿತ್ರವನ್ನು ಕೊಡುತ್ತದೆ; ಅದರಂತೆಯೇ ಚಂದ್ರನು (=ತಿಂಗಳನು) ಭೂಮಿಯ ಸುತ್ತಲೂ ತಿರುಗುತ್ತಿರುವ ವಾಸ್ತವವನ್ನೂ ಒಳಗೊಂಡಿದೆ.

ಇಂತಹ ಭೂಮಿತಾಯಿ ತನ್ನ ದುಃಖವನ್ನು ತನ್ನೊಳಗೇ ಒತ್ತಿ ಹಿಡಿದುಕೊಂಡು, ತನ್ನ ಬುದ್ಧಿಶಾಲಿ (!) ಮಕ್ಕಳಿಗೆ ಅಂದರೆ ಮಾನವರಿಗೆ ಅಂಗಲಾಚುತ್ತಿದ್ದಾಳೆ:

ನಿಂತ ನೆಲವೆಂದು ಕಡಿಲಾsಕೊ
ಬಡಿಲಾsಕೊ
ಒಡಿಲಾsಕೊ
ಒಡವ್ಯಲ್ಲೋ ಮಗನೇ ಉಸಿರಿದ್ದೊಡಲಂತಾsಳೋ.

ಆಳುವವರಿಗೆ ಹೆಣ್ಣು, ಹೊನ್ನು, ಮಣ್ಣು ಇವು ತಮ್ಮ ಘನತೆಯನ್ನು ಸಾರುವ ಆಭರಣಗಳು ;
ದೊಡ್ಡಸ್ತಿಕೆ ತೋರುವ ಸಂಕೇತಗಳು.
ನವಾಬನ ಜನಾನಾ ದೊಡ್ಡದಿದ್ದಷ್ಟೂ ಆತ ದೊಡ್ಡ ನವಾಬ.
ಆದರೆ, ಆತನ ದೊಡ್ಡಸ್ತಿಕೆಗಾಗಿ ಬಲಿಯಾಗುವ ಜನರ ಕಣ್ಣೀರನ್ನು ಆತ ಗಮನಿಸುವದಿಲ್ಲ.
ಇದನ್ನೇ ಭೂತಾಯಿ ಹೀಗೆ ಹೇಳುತ್ತಾಳೆ:

ನನ್ನನ್ನು ನಿರ್ಜೀವ ನೆಲವೆಂದು ತಿಳಿದು ಕಡಿಯಬೇಡ; ನಾನು ಕೇವಲ ಒಡವೆ ಅಲ್ಲ, ನಾನು ಉಸಿರಿರುವ ಒಡಲು; ಯಾಕೆಂದರೆ ನನ್ನ ಉಸಿರಿನಿಂದಲೆ ಬದಕುತ್ತಿವೆ ನನ್ನಲ್ಲಿಯ ಕೋಟಿ ಕೋಟಿ ಜೀವಿಗಳು.
ಒಡವ್ಯಲ್ಲೊ ಮಗನೆ ಉಸಿರಿದ್ದೊಡಲೊ’!

ಬೇಂದ್ರೆಯವರ ಕಾಲದಲ್ಲಿಯೇ, ಎಲ್ಲಾ ಯುರೋಪಿಯನ್ ದೇಶಗಳು ಏಶಿಯಾ ಹಾಗೂ ಆಫ್ರಿಕಾ ಖಂಡದ ದೇಶಗಳಲ್ಲಿ ಕ್ರೌರ್ಯದಿಂದ ಅಧಿಕಾರ ಸ್ಥಾಪಿಸಿ, ಆ ದೇಶಗಳನ್ನು ಶೋಷಿಸುತ್ತಿದ್ದವು. ಭಾರತವಂತೂ ಪುರಾತನ ಕಾಲದಿಂದಲೇ ಆಕ್ರಮಣಗಳನ್ನು ಎದುರಿಸುತ್ತ ಬಂದ ನಾಡು.

ಈ ಎಲ್ಲ ಸಂಗತಿಗಳು ಬೇಂದ್ರೆಯವರಿಗೆ ಈ ಕವನವನ್ನು ಬರೆಯಲು ಪ್ರೇರಣೆ ಕೊಟ್ಟಿರಬೇಕು. ಇಂತಹದೇ ಇನ್ನೊಂದು ಕವನವನ್ನು ಅವರು ರಚಿಸಿದ್ದಾರೆ : ಮೊದಲಗಿತ್ತಿ
(ಮೊದಲಗಿತ್ತಿಯಂತೆ ಮೆರೆಯುವಿಯೇ ತಾಯಿ|
ಮೊದಲಗಿತ್ತಿಯಂತೆ ಮೆರೆಯುತಿಹೆ.)

ಮಾನವನ ನಾಗರಿಕತೆ ಬೆಳೆದಂತೆಲ್ಲ ಶೋಷಣೆಯೂ ಹೆಚ್ಚುತ್ತ ಹೋದದ್ದನ್ನು ಅವರು ತಮ್ಮ ಕರಡಿ ಕುಣಿತಕವನದಲ್ಲಿ ಬಣ್ಣಿಸಿದ್ದಾರೆ:

ಯಾವ ಕಾಡಡವಿಯಲ್ಲಿ ಜೇನುಂಡು ಬೆಳೆದಿದ್ದ
ಜಾಂಬುವಂತನ ಹಿಡಿದು ತಂದಾನೊ
ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ
ಧಣಿ ದಾನ ಕೊಡುವನು ಎಂದಾನೊ.

ಜಾಂಬುವಂತ ಅಂದರೆ ಮೂಲಜನಾಂಗದ ಪ್ರತಿನಿಧಿ. ಧಣಿ ಅಂದರೆ ಯಜಮಾನ ನಾಗರಿಕತೆಯ ಪ್ರತಿನಿಧಿ.
ಅಡವಿಯಲ್ಲಿ ಸ್ವತಂತ್ರನಾಗಿ, ಜೇನುಂಡು ಬದುಕುತ್ತಿದ್ದ ಕರಡಿಯನ್ನು, ನಾಗರಿಕ ಮಾನವನು ಹಿಡಿದು ತಂದು, ಧಣಿ ಕೊಡುವ ದಾನಕ್ಕಾಗಿ (!) ಸಲಾಮು ಹೊಡಿಸುತ್ತಾನೆ!

ಬೇಂದ್ರೆಯವರದು ಭಾರತೀಯ ಆದರ್ಶ. ಈಶಾವಾಸ್ಯ ಉಪನಿಷತ್ತಿನಲ್ಲಿ ಹೇಳುವಂತೆ :
ಈಶಾವಾಸ್ಯಮಿದಮ್ ಸರ್ವಮ್,ಯತ್ಕಿಂಚ ಜಗತ್ಯಾಂ ಜಗತ್;
ತೇನ ತ್ಯಕ್ತೇನ ಭುಂಜೀಥಾ:, ಮಾ ಗೃಧ: ಕಸ್ಯಸ್ವಿದ್ಧನಮ್.

ಈ ಆದರ್ಶವನ್ನು ಬಿಂಬಿಸುವ ಕವನಗಳೂ ಸಹ ಅವರಿಂದ ಹೊಮ್ಮಿವೆ. ಉದಾಹರಣೆಗೆ, ಅವರ ಬೈರಾಗಿಯ ಹಾಡುಎನ್ನುವ ಅತಿ ಚಿಕ್ಕ ಕವನವೊಂದನ್ನು ನೋಡಬಹುದು:

ಬೈರಾಗಿಯ ಹಾಡು
ಇಕೋ ನೆಲ-ಅಕೋ ಜಲ
ಅದರ ಮೇಲೆ ಮರದ ಫಲ
ಮನದೊಳಿದೆ ಪಡೆವ ಛಲ
ಬೆಳೆವಗೆ ನೆಲವೆಲ್ಲ ಹೊಲ.
ಜಲಧಿವರೆಗು ಒಂದೆ ಕುಲ
ಅನ್ನವೆ ಧರ್ಮದ ಮೂಲ
ಪ್ರೀತಿಯೆ ಮೋಕ್ಷಕ್ಕೆ ಬಲ
ಇದೇ ಶೀಲ ಸರ್ವಕಾಲ || ಇಕೋ ನೆಲ…..
……………………………………………….......
ಟಿಪ್ಪಣಿ:

ಇಂಗ್ಲೀಶಿನ enjambment ಅನ್ನುವ ಅಲಂಕಾರದಲ್ಲಿ ಕವನದ ಗತಿಯನ್ನು ನಡುವಿನ ಒಂದು ಸಾಲಿನ ಮೂಲಕ ಮುರಿಯಲಾಗುತ್ತದೆ. ಬೇಂದ್ರೆ ತಮ್ಮ ಈ ಕವನದಲ್ಲಿ ಆ ಅಲಂಕಾರವನ್ನು ಅತ್ಯುತ್ತಮವಾಗಿ ಬಳಸಿಕೊಂಡಿದ್ದಾರೆ. ಮೊದಲನೆಯ ನುಡಿಯ ಉದಾಹರಣೆಯನ್ನೇ ತೆಗೆದುಕೊಳ್ಳೋಣ:

ಹೊಳಿಹಳ್ಳ ತೊರೆದಾವೋ
ಗೆಣೆಹಕ್ಕಿ ಬೆರೆದಾವೋ
ಆಗದವರ ಹೊಟ್ಟಿ ಉರದಾವೋ
ಗೆಣೆಯಾ ಉರದಾವs
ಅಂಥವರ ದಿಟ್ಟಿ ಮನಿ ಮುರದಾವ;
ಅದನ ತಾ ಕಂಡು ಕೊರಗ್ಯಾsಳೊ
ಮರುಗ್ಯಾsಳೊ
ಸೊರಗ್ಯಾsಳೋ
ಹೂ ಕಾಯಿ ಹಣ್ಣು ತುಂಬಿದ ಬನದಾsಗ .

ಈ ನುಡಿಯ ಮೊದಲ ನಾಲ್ಕು ಸಾಲುಗಳಲ್ಲಿ ಒಂದು ಚಿತ್ರವಿದೆ ; ಕೊನೆಯ ನಾಲ್ಕು ಸಾಲುಗಳಲ್ಲಿ ಭೂಮಿತಾಯಿಯ ಸಂಕಟವಿದೆ. ಇವುಗಳ ಪ್ರವಾಹವನ್ನು ನಡುವಿನ ಸಾಲು ಅಂದರೆ ಐದನೆಯ ಸಾಲು ಮುರಿಯುತ್ತದೆ.
ಇದೇ ರೀತಿಯಾಗಿ ಇತರ ನುಡಿಗಳಲ್ಲೂ ಸಹ, ಮೊದಲ ನಾಲ್ಕು ಸಾಲುಗಳನ್ನು ಹಾಗು ಕೊನೆಯ ನಾಲ್ಕು ಸಾಲುಗಳನ್ನು ,ನಡುವಿನ ಅಂದರೆ ಐದನೆಯ ಸಾಲು ಪ್ರತ್ಯೇಕಿಸುತ್ತದೆ.

ಈ ಕವನದ ಇನ್ನೊಂದು ರಚನಾವೈಶಿಷ್ಟ್ಯವನ್ನು ಗಮನಿಸಬಹುದು :
ಪ್ರತಿಯೊಂದು ನುಡಿಯಲ್ಲಿ ಮೊದಲ ನಾಲ್ಕು ಸಾಲುಗಳು ಭೂಮಿತಾಯಿಯ ಒಂದು ಸ್ಥಿತಿಯನ್ನು ಬಣ್ಣಿಸುತ್ತವೆ. ಕೊನೆಯ ನಾಲ್ಕು ಸಾಲುಗಳು ಅವಳು ದುಃಖಿಸುವದನ್ನು ಬಣ್ಣಿಸುತ್ತವೆ.
ಮೊದಲನೆಯ ನುಡಿಯಿಂದ ಕೊನೆಯ ನುಡಿಯವರೆಗೆ, ವಸುಂಧರೆಯ ದುರಂತ ಗಂಭೀರವಾಗುತ್ತ ಹೋಗುವದನ್ನು ವರ್ಣಿಸಲಾಗಿದೆ.
ಸರ್ವಮಂಗಲೆಯಾದ ನಿಸರ್ಗದಲ್ಲಿಯ ಹಿಂಸೆ ಭಾರತೀಯ ಕವಿಗಳನ್ನು ಯಾವಾಗಲೂ ವಿಷಾದಕ್ಕೆ ಈಡು ಮಾಡಿದೆ. ಆದಿಕವಿ ವಾಲ್ಮೀಕಿ ಸಹ ‘ಮಾ ನಿಷಾದ ತ್ವಮಗಮಃ ಶಾಶ್ವತೀ  ಸಮಾ: ಯತ್ ಕ್ರೌಂಚಮವಧೀ: ಶಾಶ್ವತೀ ಸಮಾ:’ ಎಂದು ದುಃಖಿಸಿದ್ದು, ಭಾರತದ ಆದಿಕಾವ್ಯವಾದ ‘ರಾಮಾಯಣ’ಕ್ಕೆ ಪ್ರೇರಣೆಯಾಯಿತು. ವಾಲ್ಮೀಕಿಯ ಈ ವಿಷಾದವನ್ನು ಕನ್ನಡದ ಮತ್ತೊಬ್ಬ ಶ್ರೇಷ್ಠ ಕವಿಯಾದ ಅಡಿಗರು ‘ಕ್ರೌಂಚವಧದುದ್ವೇಗದಳಲ ಬತ್ತಲ ಸುತ್ತ ರಾಮಾಯಣಶ್ಲೋಕ ರೇಶ್ಮೆದೊಗಲು’ ಎಂದು ಬಣ್ಣಿಸಿದ್ದಾರೆ.

ಚಿಗರಿಗಂಗಳ ಚೆಲುವಿಸ್ವತಃ ಬೇಂದ್ರೆಯವರಿಗೇ ಪ್ರಿಯವಾದ ಕವನವಾಗಿತ್ತು.