Tuesday, September 30, 2008

ಭಾರತದಲ್ಲಿ ಮತಾಂತರದ ಇತಿಹಾಸ ಹಾಗೂ ರಾಜಕೀಯ

ಆರ್ಯ ಜನಾಂಗವು ಭಾರತಕ್ಕೆ ಹೊರಗಿನೆಂದು ಬಂದಿತೆಂದು ಕೆಲವು ಇತಿಹಾಸಕಾರರು ಹೇಳಿದರೆ, ಇನ್ನೂ ಕೆಲವರು ಆರ್ಯ ಜನಾಂಗವು ಭಾರತದ native ಜನಾಂಗವೇ ಆಗಿದೆ ಎಂದು ವಾದಿಸುತ್ತಾರೆ. ಅದೇನೆ ಇರಲಿ, ಪ್ರಾಚೀನ ಕಾಲದಲ್ಲಿ ಭಾರತದಲ್ಲಿ ಅನೇಕ ಜನಾಂಗಗಳು ವಾಸಿಸುತ್ತಿದ್ದವು. ಬಹುಶ: ಇವು ಬೇರೆ ಬೇರೆ ಬುಡಕಟ್ಟಿಗೆ ಸೇರಿದ ಜನಾಂಗಗಳಾಗಿರಬೇಕೆನ್ನುವದು, ಈ ಜನಾಂಗಗಳ ಪ್ರತ್ಯೇಕ ದೈಹಿಕ ಲಕ್ಷಣಗಳಿಂದಲೇ ವ್ಯಕ್ತವಾಗುತ್ತದೆ. ಉದಾಹರಣೆಗೆ ನಾಗಾ ಜನಾಂಗ, ಪಂಜಾಬಿ ಜನಾಂಗ, ಕೊಡವರು, ‘ದ್ರಾವಿಡ’ ಜನಾಂಗ ಇತ್ಯಾದಿ.

ಈ ಜನಾಂಗಗಳಲ್ಲಿ ಅನೇಕ ಜನಾಂಗಗಳು totem ಪೂಜಕರಾಗಿದ್ದವು. ಆರ್ಯಜನಾಂಗದವರೊಡನೆ ನಡೆದ ಹೋರಾಟಗಳಲ್ಲಿ , ಈ ಜನಾಂಗಗಳು ಸೋತ ಬಳಿಕ, ಎಲ್ಲ ಸೋತ ಜನಾಂಗಗಳು ಮಾಡುವಂತೆ ಈ ಆರ್ಯೇತರ ಜನಾಂಗಗಳೂ ಸಹ, ಗೆದ್ದವರ ಸಂಸ್ಕೃತಿಗೆ ಶರಣಾದವು.
ಈ ಸಂಸ್ಕೃತಿಯಲ್ಲಿ ‘ಧರ್ಮ’ವೂ ಒಂದು.
ಭಾರತದಲ್ಲಿ ನಡೆದ ಮೊದಲ ಮತಾಂತರ ಇದಾಗಿರಬಹುದು.

ಹೀಗೆ ಶರಣಾದವರೆಲ್ಲ ಆರ್ಯರ ವೈದಿಕ ಧರ್ಮದ ಅನುಯಾಯಿಗಳಾದರೂ ಸಹ ತಮ್ಮ totemಗಳನ್ನು , ತಮ್ಮ ದೈವಸಂಕೇತಗಳನ್ನು ಸುಲಭದಲ್ಲಿ ಬಿಟ್ಟುಕೊಡಲಿಲ್ಲ. ಅಷ್ಟೇ ಅಲ್ಲ, ತಮ್ಮ ದೈವಸಂಕೇತಗಳನ್ನು ವೇದಗಳಲ್ಲಿ ಸೇರಿಸಲು ಸಮರ್ಥರಾದರು. ವೇದಗಳಲ್ಲಿ ಬರುವ ಜಲದೇವತೆಗಳನ್ನು ಇದಕ್ಕೆ ಉದಾಹರಿಸಬಹುದು.
ಅದರಂತೆ, ‘ಸಾರ್ಪರಾಜ್ಞೀ ಸೂರ್ಯೋವಾ’ ಎನ್ನುವ ವಾಕ್ಯ ಸಹ ಈ ತರಹದ manipulated assimilationದ
ಸಂಕೇತವೆಂದು ಶ್ರೀ ಶಂ. ಬಾ. ಜೋಶಿ ಭಾವಿಸುತ್ತಾರೆ.

ಆರ್ಯರ ವೈದಿಕ ಧರ್ಮವನ್ನು ವಿರೋಧಿಸುವವರಲ್ಲಿ ಶ್ರೀಕೃಷ್ಣನೇ ಮುಂದಾಳು ಎನ್ನಬಹುದು. ಚಿಕ್ಕವನಿದ್ದಾಗಲೇ ಆತ, ವೈದಿಕ ದೇವತೆಯಾದ ಇಂದ್ರನನ್ನು ವಿರೋಧಿಸಿ, ತನ್ನ ಜನರು (ಹಟ್ಟಿಕಾರರು) ಮೊದಲಿನಿಂದಲೂ ಮಾಡುತ್ತಿದ್ದ ‘ಗಿರಿಪೂಜೆ’ಯನ್ನು ಮಾಡಲು ಪ್ರಚೋದಿಸಿದ. ಇದರ ವಿರುದ್ಧ ಪ್ರತಿಕಾರಕ್ಕೆ ಮುಂದಾದ ಇಂದ್ರ ಹಾಗೂ ವರುಣರನ್ನು ಯಶಸ್ವಿಯಾಗಿ ಎದುರಿಸಿದ.

ಅರ್ಜುನನಿಗೆ ಮಾಡಿದ ‘ಗೀತೋಪದೇಶ’ದಲ್ಲಿಯೂ ಸಹ ಶ್ರೀಕೃಷ್ಣನ ಒಲವು ಸ್ಪಷ್ಟವಾಗಿದೆ.
“ತ್ರೈಗುಣ್ಯವಿಷಯಾ ವೇದಾ ನಿಸ್ತ್ರೈಗುಣ್ಯೋ ಭವಾರ್ಜುನ” ಎಂದು ಹೇಳುವಲ್ಲಿಯ ವೇದವಿರೋಧಿ ಧೋರಣೆ ಹಾಗು “ವೃಕ್ಷಗಳಲ್ಲಿ ನಾನು ಬಿಲ್ವವೃಕ್ಷ” ಎಂದು ಹೇಳುವಾಗ, ಅಲ್ಲಿ ತೋರುವ ವೃಕ್ಷಪೂಜೆಯ ಒಲವು ಇವು ಸ್ಪಷ್ಟವಾಗಿ ವೈದಿಕ-ವಿರೋಧಿಯಾಗಿವೆ.

ಏನೇ ಇರಲಿ, ಸೋತವರು ಗೆದ್ದವರ ಧರ್ಮವನ್ನು ಏಕೆ ಸ್ವೀಕರಿಸುತ್ತಾರೆ?
ಹೋರಾಟವನ್ನು ಮುಂದುವರಿಸಲು ಅಸಮರ್ಥರಾದ ಇವರು ಗೆದ್ದವರಿಗೆ ‘ಜೀ’ ಎನ್ನುತ್ತ ಕೈಕಟ್ಟಿ ನಿಲ್ಲುವದು ಅನಿವಾರ್ಯವಷ್ಟೆ. ಕಾಲಕ್ರಮದಲ್ಲಿ ಇವರಲ್ಲಿ ಅನೇಕರು Stockholm syndrome ಕ್ಕೆ ಒಳಗಾಗುತ್ತಾರೆ. ಆಗ ಇವರು ಗೆದ್ದವರ ನಡೆ-ನುಡಿ, ವೇಷ-ಭೂಷಣ ಇವುಗಳನ್ನು ಅನುಕರಿಸಲು ಪ್ರಾರಂಬಿಸುತ್ತಾರೆ. ನಾವು ಕೂಡ ಇಂಗ್ಲೀಶರ ಭಾಷೆ, ವೇಷ-ಭೂಷಣ ಹಾಗು ನಾಗರಿಕತೆಯನ್ನು ನಮ್ಮವೇ ಎನ್ನುವಂತೆ ಅನುಕರಿಸುತ್ತಿಲ್ಲವೆ?

ಭಾಷೆ ಹಾಗು ವೇಷ-ಭೂಷಣ ಇವು ಹೊರಗಿನ, ತೋರಿಕೆಯ ಅಲಂಕಾರಗಳು. ಮನುಷ್ಯನು ಇವನ್ನೆಲ್ಲ ಸುಲಭವಾಗಿ ಬದಲಾಯಿಸಿಕೊಳ್ಳುತ್ತಾನೆ. ಆದರೆ ತನ್ನ ದೈವಿಕ ನಂಬಿಕೆಗಳನ್ನು ಸುಲಭವಾಗಿ ಬಿಟ್ಟುಕೊಡುವದಿಲ್ಲ. ಆದರೆ ಆರ್ಥಿಕ ಹಾಗೂ ಸಾಮಾಜಿಕ ಲಾಭಕ್ಕಾಗಿ ಕೆಲವರು ಧರ್ಮವನ್ನು ಬದಲಾಯಿಸಲು ಸಿದ್ಧರಾಗುತ್ತಾರೆ. ಮೊಗಲರ ಕಾಲದಲ್ಲಿ ಇಸ್ಲಾಮ ಧರ್ಮವನ್ನು ಸ್ವೀಕರಿಸಿದ ಅನೇಕ ದೊಡ್ಡ ಮನುಷ್ಯರನ್ನು ಇದಕ್ಕೆ ಉದಾಹರಣೆ ಎಂದು ಹೇಳಬಹುದು.
ಸುಪ್ರಸಿದ್ಧ ಸಂಗೀತಕಾರ ತಾನಸೇನ ಸಹ, ತನ್ನ ಇಳಿವಯಸ್ಸಿನಲ್ಲಿ ಮುಸಲಮಾನನಾಗಿ ಮತಾಂತರಗೊಂಡ. ಯಾರೂ ಅವನನ್ನು ಮತಾಂತರಕ್ಕಾಗಿ ಬಲಾತ್ಕರಿಸಿರಲಿಕ್ಕಿಲ್ಲ. ಆದರೆ, subtle pressure ಎನ್ನುವದೊಂದು ಇರುತ್ತದೆಯಲ್ಲ!
ಇದರಂತೆಯೆ, ಬ್ರಿಟಿಶರ ಆಡಳಿತದಲ್ಲಿಯೂ ಸಹ Anglo-Indiansರಿಗೆ ಹಾಗೂ ಮತಾಂತರಿತಗೊಂಡ ಕ್ರಿಶ್ಚನ್ನರಿಗೆ ಹೆಚ್ಚಿನ ಅನುಕೂಲತೆಗಳು ಇದ್ದವಲ್ಲವೆ? ಇವನ್ನು ಸಾಮಾಜಿಕ ಕಾರಣಗಳ ಮತಾಂತರ ಎನ್ನಬಹುದು.

ಆರ್ಥಿಕ ಕಾರಣಗಳಿಂದಾದ ಮತಾಂತರವನ್ನು ನಾವು ಪಶ್ಚಿಮ ಕರಾವಳಿಯಲ್ಲಿ ಕಾಣಬಹುದು. ಸುಮಾರು ೭ನೆಯ ಶತಮಾನದಲ್ಲಿ ಭಾರತದ ಪಶ್ಚಿಮ ಕರಾವಳಿಗೆ ಬರುತ್ತಿದ್ದ ಅರಬ ವ್ಯಾಪಾರಿಗಳು ಮನ್ಸೂನ್ ಗಾಳಿಗಳ ಜೊತೆಗೆ ಇಲ್ಲಿ ಬಂದು ತಲುಪುತ್ತಿದ್ದರು. ಮರಳಿ ಹೋಗಲು reverse monsoonಗಾಗಿ ಕಾಯಬೇಕಲ್ಲ. ಅಲ್ಲಿಯವರೆಗೆ ದೈಹಿಕ ಅವಶ್ಯಕತೆಗಳಿಗಾಗಿ ಏನು ಮಾಡುವದು? ಕೆಲವರು ಕರಾವಳಿಯ ಹೆಂಗಸರನ್ನು ಕೊಂಡುಕೊಂಡರು. ಆದರೆ ಮತ್ತೆ ಕೆಲವರು ಕರಾವಳಿಯ ಹೆಂಗಸರ ಜೊತೆಗೆ ಮದುವೆ ಮಾಡಿಕೊಂಡರು.
ಇದು ಆರ್ಥಿಕ ಮತಾಂತರ. ಈ ಅರಬ ವರ್ತಕರ ಸಂತಾನವೇ ಮಲಬಾರದ ‘ಮಾಪಿಳ್ಳೆ’ಗಳು, ‘ಬ್ಯಾರಿಗಳು’ ಹಾಗೂ ಉತ್ತರ ಕನ್ನಡ ಜಿಲ್ಲೆಯ ಭಟಕಳದ ‘ನವಾಯತರು’.
ಈ ಮತಾಂತರಗಳು ಶಾಂತಿಯುತ ಮತಾಂತರಗಳು. ಆರ್ಥಿಕ ಹಾಗು ಸಾಮಾಜಿಕ ಕಾರಣಕ್ಕಾಗಿ ಕರಾವಳಿಯಲ್ಲಿ ನಡೆದ ಮತಾಂತರಗಳು.
ಇಷ್ಟೇ ಆಗಿದ್ದರೆ, ಮತಾಂತರವನ್ನು ಬಹುಶಃ ಯಾರೂ ವಿರೋಧಿಸುತ್ತಿರಲಿಲ್ಲ. ಮತಾಂತರದ ಜೊತೆಗೆ ರಾಷ್ಟ್ರನಿಷ್ಠೆಯೂ ಬದಲಾಗುತ್ತಿತ್ತು ಎನ್ನುವದೇ ಇಲ್ಲಿಯ alarming point.

ಪೋರ್ತುಗೀಜರು ಅರಬ ವರ್ತಕರಂತೆ ಕೇವಲ ವ್ಯಾಪಾರಕ್ಕೆ ತಮ್ಮನ್ನು ಸೀಮಿತಗೊಳಿಸಲಿಲ್ಲ. ಕರಾವಳಿಯ ಮೀನುಗಾರರನ್ನು ಇವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಲು ಪ್ರಾರಂಭಿಸಿದರು. ಇದನ್ನು ಪ್ರತಿಬಂಧಿಸಿ ವಿಜಯನಗರದ ರಾಜರು ಹಾಗೂ ವಿಜಾಪುರದ ಸುಲ್ತಾನರು, ಪೋರ್ತುಗೀಜರಿಗೆ ಶರತ್ತುಗಳನ್ನು ಹಾಕಿದರು.
ಈ ಶಾಂತಿಯುತ ಮತಾಂತರವನ್ನು ಪ್ರತಿಬಂಧಿಸಲು ಕಾರಣವೇನು ಎಂದು ಯಾರಾದರೂ ಕೇಳಬಹುದು.

ಪೋರ್ತುಗೀಜರು ಕರಾವಳಿ ಪ್ರದೇಶದಲ್ಲಿ ವ್ಯಾಪಾರದ ಹೊರತಾಗಿ, ತಮ್ಮ ಆಡಳಿತ ಸ್ಥಾಪಿಸಲು ಪ್ರಾರಂಭಿಸಿದಾಗ, ವಿಜಯನಗರ ಹಾಗೂ ವಿಜಾಪುರದ ಅರಸರು ಪೋರ್ತುಗೀಜರ ಮೇಲೆ ದಂಡೆತ್ತಿ ಬಂದರು. ಆ ಸಮಯದಲ್ಲಿ ಈ ಮತಾಂತರಿತ ಮೀನುಗಾರರು ಪೋರ್ತುಗೀಜರ ಪರವಾಗಿ ಹೋರಾಡಿದರು. ಅಲ್ಲದೆ, ಇವರಲ್ಲಿ ಅನೇಕರು ಮೀನುಗಾರರಾಗಿದ್ದರಿಂದ, ವಿಜಯನಗರದ ಹಾಗೂ ವಿಜಾಪುರದ ಕಡಲ ಕಾವಲುಪಡೆಯು ನಿರ್ಬಲವಾಗಿ ಹೋಯಿತು.
ಗೋವಾದಲ್ಲಿ ಅಲ್ಬುಕರ್ಕನು ಅನೇಕ ದೇವಾಲಯಗಳನ್ನು ಕೆಡವಿಸಿ ಹಾಕಿದ ; ಮತಾಂತರಕ್ಕೆ ಒಪ್ಪದ ಜನರ ಮೇಲೆ ಘೋರ ಅತ್ಯಾಚಾರವನ್ನು ಎಸಗಿದ. ಇದು ಬಲಾತ್ಕಾರದ ಮತಾಂತರ. ಈ ಎಲ್ಲ ಕೃತ್ಯಗಳಲ್ಲಿ ಮತಾಂತರಿತರು ಪೋರ್ಚುಗೀಜರಿಗೆ ಬೆಂಬಲವಾಗಿ ನಿಂತರು.
ಮತಾಂತರದ ರಾಜಕೀಯ ಉದ್ದೇಶ ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ಈ ಕಾರಣದಿಂದಾಗಿಯೇ, ಮಂಗಳೂರನ್ನು ಮುತ್ತಿದ ಟೀಪು ಸುಲ್ತಾನನು ಮತಾಂತರಿತಗೊಂಡ ಮೂರುಸಾವಿರ ಕ್ರಿಶ್ಚನ್ನರನ್ನು, ಸೆರೆಯಾಳಾಗಿ ಕೊಡಗಿಗೆ march ಮಾಡಿಸುತ್ತ ಒಯ್ದ. ಟೀಪುವಿನ ಈ ಕಾರ್ಯಕ್ಕಾಗಿ ಅವನನ್ನು ಮತಾಂಧನೆಂದು ಕರೆಯುವವರು, ಇದರ ಹಿಂದಿನ ರಾಜಕೀಯ ಉದ್ದೇಶವನ್ನು ದಯವಿಟ್ಟು ಗಮನಿಸಬೇಕು.

ಈಗಲೂ ಸಹ ಅಷ್ಟೇ. ಮತಾಂತರದಲ್ಲಿ ತೊಡಗಿದ New Life ಸಂಸ್ಥೆಯ ಕಾರ್ಯಕರ್ತರನ್ನು ಕೆಲವು ರಾಜಕಾರಣಿಗಳು ತಕ್ಷಣವೇ ಬೆಂಬಲಿಸಿ ಹೇಳಿಕೆ ಕೊಟ್ಟರು. ಕ್ರಿಶ್ಚನ್ನರ ಮೇಲೆ ಇವರಿಗೆ ಪ್ರೀತಿ ಬಹಳ ಅಂತಲ್ಲ. ಮತಾಂತರಿತರ ‘ಮತ’ ತಮಗೆ ದೊರೆಯಲಿ ಅನ್ನುವದೊಂದೇ ಇದರ ಹಿಂದಿನ ಉದ್ದೇಶ. So, ಇಲ್ಲಿ ಮತಾಂತರದ ಬೆಂಬಲಕ್ಕೆ ರಾಜಕೀಯ ಉದ್ದೇಶವಿದೆ.

ಕ್ರಿ.ಶ. ೭೦೦ರ ನಂತರ ಭಾರತದ ಮೇಲೆ ದಾಳಿ ಮಾಡಿದ, ತುರುಕರು ಹಾಗೂ ಪರ್ಶಿಯನ್ನರು ಸೆರೆ ಸಿಕ್ಕ ಸೈನಿಕರಿಗೆ ಒಂದು ಶರತ್ತಿನ ಮೇಲೆ ಜೀವದಾನ ಮಾಡುತ್ತಿದ್ದರು: “ನೀವು ಇಸ್ಲಾಮ ಧರ್ಮಕ್ಕೆ ಮತಾಂತರಗೊಳ್ಳಬೇಕು”.
ಇವರ ಉದ್ದೇಶ ಸ್ಪಷ್ಟವಾಗಿದೆ. ಮತಾಂತರಗೊಂಡ ಸೈನಿಕರು ತಮ್ಮ ನಿಷ್ಠೆಯನ್ನು ಬದಲಾಯಿಸುತ್ತಾರೆ. ಇದರ ಜ್ವಲಂತ ಉದಾಹರಣೆ ಎಂದರೆ ಮಲಿಕ ಕಾಫರ. ದಕ್ಷಿಣ ಭಾರತದ ಮೇಲೆ ದಂಡೆತ್ತಿ ಬಂದಾಗ ಈ ಮತಾಂತರಿತನು ಮಾಡಿದ ಅತ್ಯಾಚಾರಗಳು ತುರುಕರ ಹಾಗೂ ಪರ್ಶಿಯನ್ನರ ಅತ್ಯಾಚಾರಗಳಿಗಿಂತ ಘೋರವಾಗಿದ್ದವು. ಆ ಸಮಯದಲ್ಲಿ ಸೋಲುಂಡ ಹೊಯ್ಸಳ ಬಲ್ಲಾಳ ದೊರೆಯು ದಕ್ಷಿಣ ಭಾರತದ ಇತರ ರಾಜರಿಗೆ ಒಂದು ಸಂದೇಶವನ್ನು ನೀಡಿದ. ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಸಂದೇಶವಿದು: “ಮಲಿಕ ಕಾಫರನು ನಮ್ಮ ರಾಜ್ಯಗಳನ್ನಷ್ಟೇ ಅಲ್ಲ, ನಮ್ಮ ಸಂಸ್ಕೃತಿಯನ್ನೇ ನಾಶ ಮಾಡುತ್ತಿದ್ದಾನೆ. ಇದಕ್ಕಿಂತ ಹೆಚ್ಚಿನ ಗಂಡಾಂತರ ಯಾವುದಿದೆ? ನಮ್ಮೆಲ್ಲರ ಬಲವನ್ನು ಒಟ್ಟುಗೂಡಿಸಿ ಹೋರಾಡೋಣ. ನಾನು ನಿಮ್ಮ ಸೈನ್ಯದಲ್ಲಿ ಸಾಮಾನ್ಯ ಸೈನಿಕನಂತೆ ಹೋರಾಡಾಲು ಸಿದ್ಧನಿದ್ದೇನೆ”.
ಆದರೆ ಆಗಲೇ ಇಳಿವಯಸ್ಸಿನಲ್ಲಿದ್ದ ಬಲ್ಲಾಳ ದೊರೆಯ ಇಷ್ಟಾರ್ಥ ಸಿದ್ಧಿಸಲಿಲ್ಲ. ಮದುರೆಯ ಸುಲ್ತಾನನು ಬಲ್ಲಾಳ ದೊರೆಯನ್ನು ಸೆರೆ ಹಿಡಿದು, ಚರ್ಮ ಸುಲಿಸಿ, ತೂಗು ಹಾಕಿದನು. ದಕ್ಷಿಣ ಭಾರತ ಸೋಲುಂಡಿತು. ಸೆರೆಯಾಳುಗಳು ಜೀವ ಉಳಿಸಿಕೊಳ್ಳಲೆಂದು ಇಸ್ಲಾಮ ಧರ್ಮಕ್ಕೆ ಶರಣಾದರು. ಈ ಸೆರೆಯಾಳುಗಳಲ್ಲಿ ಮತಾಂತರಗೊಂಡು ಜೀವ ಉಳಿಸಿಕೊಂಡ ಹುಕ್ಕ ಹಾಗೂ ಬುಕ್ಕರೂ ಇದ್ದರು.

ಶೃಂಗೇರಿ ಪೀಠಾಧಿಪತಿಯಾದ ವಿದ್ಯಾರಣ್ಯರು ಕಾಶಿಯಲ್ಲಿ ಹುಕ್ಕ ಹಾಗೂ ಬುಕ್ಕರನ್ನು ವೈದಿಕ ಧರ್ಮಕ್ಕೆ ಮರು ಮತಾಂತರಿಸಿದರು. ಆರ್ಯಸಮಾಜ ಸ್ಥಾಪಿಸಿದ ದಯಾನಂದ ಸರಸ್ವತಿಯವರು ಮರುಮತಾಂತರವನ್ನು ಪ್ರಾರಂಭಿಸುವದಕ್ಕಿಂತ ೬೦೦ ವರ್ಷಗಳಷ್ಟು ಮೊದಲೇ ವಿದ್ಯಾರಣ್ಯರು ಈ ಕಾರ್ಯ ಮಾಡಿದರು. (ಹಾಗೂ ಈ ಕಾರ್ಯಕ್ಕಾಗಿ ಅವರ ಮೇಲೆ ಬಹಿಷ್ಕಾರ ಹಾಕಲಾಗಿತ್ತು.)

ಹುಕ್ಕ, ಬುಕ್ಕರು ಮರುಮತಾಂತರಗೊಂಡು ವಿಜಯನಗರ ಸ್ಥಾಪಿಸದಿದ್ದರೆ ಏನಾಗುತ್ತಿತ್ತು? ವೈದಿಕ ಧರ್ಮ ನಾಶವಾಗುತ್ತಿತ್ತೆ?
ಧರ್ಮನಾಶಕ್ಕಿಂತ ಹೆಚ್ಚಿನ ನಷ್ಟವೆಂದರೆ ಭಾರತದ ಸಂಸ್ಕೃತಿನಾಶ.
ಕೆಲ ವರ್ಷಗಳ ಬಳಿಕ ಬುಕ್ಕನು ಮದುರೆಯ ಸುಲ್ತಾನನನ್ನು ಸೋಲಿಸಿದ ಬಳಿಕ, ಬುಕ್ಕನ ಸೊಸೆ ಕಂಪಲಾದೇವಿ ಬರೆದ “ಮದುರಾ ವಿಜಯಮ್” ಸಂಸ್ಕೃತ ಕಾವ್ಯದಲ್ಲಿ ಈ ಸಂಸ್ಕೃತಿನಾಶದ ಸ್ಪಷ್ಟ ಚಿತ್ರಣವಿದೆ.
[ “ಯಾವ ರಾಜಮಂದಿರಗಳಲ್ಲಿ ಗಿಳಿಗಳು ಮಧುರವಾಣಿಯಲ್ಲಿ ನುಡಿಯುತ್ತಿದ್ದವೊ, ಅಲ್ಲೀಗ ಗೂಗೆಗಳು ಕರ್ಕಶವಾಗಿ ಕಿರಚುತ್ತಿವೆ.”]

ಭಾರತದ ಮುಸಲ್ಮಾನರು ಧರ್ಮವನ್ನು ಬದಲಿಸಿರಬಹುದು. ಆದರೆ ರಕ್ತವನ್ನು ಬದಲಿಸಿಕೊಂಡಿಲ್ಲವಲ್ಲ. ಭಾರತೀಯ ಪ್ರಾಚೀನ ಸಂಸ್ಕೃತಿಗೆ ಹಿಂದೂಗಳಷ್ಟೇ ಮುಸಲ್ಮಾನರೂ ಸಹ ವಾರಸುದಾರರಾಗಿದ್ದಾರೆ. ಭಾರತದ ಯೋಗ, ವೇದ, ಆಯುರ್ವೇದ, ಭರತನಾಟ್ಯ, ಶಾಸ್ತ್ರೀಯ ಸಂಗೀತ ಇವೆಲ್ಲಕ್ಕೆ ಎಲ್ಲಾ ಭಾರತೀಯರೂ—whatever their religion—ವಾರಸುದಾರರೇ!

ಆದರೆ, ಮತಾಂತರಗೊಂಡವರು ಇವನ್ನೆಲ್ಲ ಮರೆತುಬಿಡುವದೇ, ಮತಾಂತರದ ದುರಂತ.
ಕಾಶ್ಮೀರದ ಮುಸಲ್ಮಾನರಲ್ಲಿಯ ಅನೇಕರ ಹೆಸರುಗಳು ‘ಭಟ್’ ಎಂದು ಇರುವದನ್ನು ಗಮನಿಸಿರಿ. ಮತಾಂತರಿತರಾದ ಈ ಭಟ್ಟರು ಈಗ ಕಟ್ಟಾ ಉಗ್ರಗಾಮಿಗಳಾಗಿರುವದೇ ಮತಾಂತರದ ದುರಂತಕ್ಕೆ ಹಿಡಿದ ಕನ್ನಡಿಯಾಗಿದೆ.

ಆದರೆ, ರಾಜಕೀಯದ ಸ್ವಾರ್ಥಸಾಧನೆಗಾಗಿ ದೇಶವನ್ನು ನಾಶ ಮಾಡಲು ಸಿದ್ಧರಾದ ರಾಜಕಾರಣಿಗಳಿದ್ದಾಗ, ಭಾರತ ದೇಶ ಒಂದು ದೇಶವಾಗಿ ಉಳಿದೀತೆ? ಮುಸ್ಲಿಮ್ ಮತಗಳ ಸಲುವಾಗಿ, ರಾಷ್ಟ್ರದ್ರೋಹಿ ಸಿಮಿ ಕಾರ್ಯಕರ್ತರಿಗೆ ಸರಕಾರದ ಹಣದಲ್ಲಿ
legal aid ಕೊಡಲು ಹೊರಟಿರುವ ಇಂತಹ ರಾಜಕಾರಣಿಗಳಿದ್ದಾಗ, ಭಾರತ ಛಿದ್ರವಾಗದೇ ಉಳಿದೀತೆ?

18 comments:

Harisha - ಹರೀಶ said...

ಸಮಯೋಚಿತ ಬರಹ. ಅರ್ಜುನ್ ಸಿಂಗ್ (ಬೊಗಳೆ ರಗಳೆಯ ದುರ್ಜನ್ ಸಿಂಗ್) ಅಂಥವರನ್ನು ಚುನಾಯಿಸಿ ಕಳುಹಿಸುವ ನಮ್ಮಂಥ ಮತದಾರರಿಗೆ ಬುದ್ಧಿಯಿಲ್ಲ.

ನಾನು ಈಚೆಗೆ ನೋಡಿದ "ಎ ವೆನ್ಸ್‍ಡೇ" ಎಂಬ ಹಿಂದೀ ಚಲನಚಿತ್ರ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿದೆ.

ಅಂದ ಹಾಗೆ ಹಕ್ಕ-ಬುಕ್ಕ ಎಂದು ಕೇಳಿದ್ದೇನೆ.. ಅದು ಸರಿಯೇ ಅಥವಾ ನೀವು ಬರೆದಿರುವಂತೆ "ಹುಕ್ಕ"-ಬುಕ್ಕ ಸರಿಯೇ?

Anonymous said...

ಹೌದು ಸುನಾಥರೇ,
ಆದರೆ ಇವೆಲ್ಲ ತಲುಪಬೇಕಾದವರ ಕಿವಿ ತಲುಪೋದಿಲ್ಲ ಅನ್ನೋದೇ ಒಂದು ದುರಂತ. ಈಗ ನೋಡಿ!ಕರ್ನಾಟಕದಲ್ಲಿ ಮತಾಂತರ ನಡೀತಿದ್ದನ್ನು ಪ್ರ್ತಿಭಟಿಸಿದ್ದಕ್ಕೆ ಅಮೆರಿಕದಲ್ಲಿ ಹಿಂದೂಗಳ ವಿರುದ್ಧ ಪ್ರತಿಭಟನೆ ನಡೀತಿದೆ. ಯಾರಿಗ್ಗೊತ್ತು!? ಮುಂದೊಂದು ದಿನ ಅಮೆರಿಕನ್ನರು ಭರತೊದಳಗೆ ಸೇನೆ ನುಗ್ಗಿಸಿ ಆಫ್ಘಾನಿಸ್ತಾನ, ಇರಾಕ್ ಗಳ ಸ್ಥಿತಿಗೆ ನಮ್ಮನ್ನೂ ತಂದುಬಿಟ್ಟಾರು.
- ಚೇತನಾ

ಆಲಾಪಿನಿ said...

ಅಂಕಲ್,
ಲೇಖನದ ಒಳನೋಟ ಇಷ್ಟವಾಯ್ತು. ನಿಮ್ಮ ಆತಂಕವೇ ನನಗೂ ಇದೆ.

ಸಂದೀಪ್ ಕಾಮತ್ said...

ತುಂಬಾ informative !

sunaath said...

ಹರೀಶ,
ಹುಕ್ಕ ಹಾಗೂ ಹಕ್ಕ ಎನ್ನುವ ಎರಡೂ ಪಾಠಾಂತರಗಳು ಬಳಕೆಯಲ್ಲಿವೆ. ನಿಜವಾದ ಪದವು ಯಾವುದೆಂದು ಆ ರಾಜನಿಗೇ ಗೊತ್ತು.

"ಏ ವೆನ್ಸ್ ಡೇ" ಚಲನಚಿತ್ರದ ಬಗೆಗೆ ನಿಮ್ಮ blogನಲ್ಲಿ ಮಾಹಿತಿ ನೀಡುವಿರಾ?

sunaath said...

ಚೇತನಾ,
ಅಮೇರಿಕಾದ ಪ್ರಸಿದ್ಧ ಕರಿಯ ಕುಸ್ತಿಪಟು ಮುಹಮ್ಮದ ಅಲಿ (Cassius Clay), ತನ್ನ ಔನ್ನತ್ಯದ ದಿನಗಳಲ್ಲಿ ಒಮ್ಮೆ ರಶಿಯಾಕ್ಕೆ ಪ್ರಯಾಣ ಮಾಡಿದ್ದ. ಅಮೆರಿಕೆಯಲ್ಲಿ civil movement ನಡೆಯುತ್ತಿದ್ದ ದಿನಗಳವು.ಮುಹಮ್ಮದ ಅಲಿ ಬಿಳಿಯರನ್ನು ಬಯ್ಯಬಹುದೆನ್ನುವ ಭಾವನೆಯಿಂದ, ರಶಿಯನ್ ಪತ್ರಕರ್ತರು ಉದ್ರೇಕಕಾರಿ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಮುಹಮ್ಮದ ಅಲಿಯ ಉತ್ತರ:
"My country is the greatest in the world,counting yours too."
ಇಂತಹ ಭಾವನೆ ನಮ್ಮಲ್ಲಿಯ ಮತಾಂತರಿಸುವ ಮಿಶನರಿಗಳಿಗೆ ಇದ್ದರೆ, ಅವರು ಪರದೇಶದ ಹಣಕ್ಕೆ ಕೈಯೊಡ್ಡಿ ಮತಾಂತರಿಸುವ ಗೋಜಿಗೆ ಹೋಗುತ್ತಿದ್ದರೆ?

sunaath said...

ಶ್ರೀದೇವಿ ಹಾಗು ಸಂದೀಪ,
ಉಗ್ರವಾದದ ಹತ್ಯಾಕಾಂಡದ ಮೊದಲ ಘಟನೆಯಾಗಿ, ಪಂಜಾಬಿನಲ್ಲಿ ಖಲಿಸ್ತಾನಿ ಉಗ್ರರು ಹಿಂದೂ ಪ್ರಯಾಣಿಕರನ್ನು ಬಸ್ಸಿನಿಂದ ಕೆಳಗಿಳಿಸಿ, ಗುಂಡು ಹಾರಿಸಿ ಕೊಂದರು. ಯಾವ ಸೀಖನೇ ಆಗಲಿ, ಮುಸ್ಲಿಮ್ ಅಥವಾ ಕ್ರಿಶ್ಚನ್ ಮುಂದಾಳುವಾಗಲೀ ವಿಷಾದ ವ್ಯಕ್ತಪಡಿಸಲಿಲ್ಲ.
ಇಂದಿರಾ ಗಾಂಧಿಯವರು Operation Blue Star ಮಾಡಿದಾಗ ಸಿಖ್ ಸಮುದಾಯ (including ಖುಶವಂತ ಸಿಂಗ) ಪ್ರತಿಭಟಿಸಿತು.
ಹುಬ್ಬಳ್ಳಿಯಲ್ಲಿ ಪೋಲೀಸರು ಉಗ್ರರನ್ನು ಹುಡುಕಲು ಪ್ರಾರಂಭಿಸಿದಾಗ,ಮುಸ್ಲಿಮ್ ಸಮುದಾಯ (including former MLC ಹಿಂಡಸಗೆರಿ) ಇದರ ವಿರುದ್ಧ ಮೆರವಣಿಗೆ ತೆಗೆದರು.
ದೇವೇಗೌಡರು ವೀರಾವೇಶದ ಹೇಳಿಕೆ ನೀಡಿದರು.
ಈಗ ಕ್ರಿಶ್ಚನ್ನರಿಗೆ ಅನ್ಯಾಯವಾಗುತ್ತಿದೆ ಎಂದು ಮತ್ತೆ ಕೆಲ ರಾಜಕಾರಣಿಗಳು (including former minister ಬಸವರಾಜ ಹೊರಟ್ಟಿ) ಗಲಾಟೆ ಮಾಡುತ್ತಿದ್ದಾರೆ.
ಇವರ ಕಣ್ಣಿಗೆ ಭಾರತೀಯರು ಕಾಣಿಸುವದಿಲ್ಲ. ಕೇವಲ ಹಿಂದು, ಮುಸ್ಲಿಮ್, ಸಿಖ್ ಹಾಗೂ ಕ್ರಿಶ್ಚನ್ನರು ಮಾತ್ರ ಕಾಣಿಸುತ್ತಾರೆ.

Anonymous said...

dಪ್ರಿಯರೇ,
ಸದರೀ ಲೇಖನವೂ ಸೇರಿದಂತೆ ಇತ್ತೀಚೆಗೆ ನಿಮ್ಮ ಸಲ್ಲಾಪವು
ಅನೇಕ ವಿಚಾರಗಳೆಡೆಗೆ ತೆರೆದುಕೊಳ್ಳುತ್ತಿರುವದು ಸಂತಸದ ಸಂಗತಿ.
ಈ ಬರಹವೂ ಕೂಡ ಚೆಂದಾಗಿದೆ.
ಆದರೆ ಎಷ್ಟೇ ಮತಾಂತರದ ಹುನ್ನಾರ ನಡೆದರೂ ಕೂಡ
ಹಿಂದೂ ಧರ್ಮದಂಥ ಬಲಿಷ್ಠ ಸಮುದಾಯಕ್ಕೆ ಎಂಥ ಅಪಾಯವೂ ಸದ್ಯಕ್ಕೆ ಇದ್ದಂತಿಲ್ಲ.
ಆದರೆ ಮತಾಂತರದಂಥ ಪ್ರಕ್ರಿಯೆಗೆ ಆಮಿಷಗಳೇ ಮೂಲಕಾರಣವಾಗತೊಡಗಿದರೆ
ಕಷ್ಟ!
ಇಷ್ಟಕ್ಕೂ ಎಲ್ಲಿಯಾದರೂ ಬೇರೆ ಧರ್ಮದವರು ಇಂಥ ಸೋಕಾಲ್ಡ್ ಆಮಿಷಗಳಿಗೆ
ಒಳಗಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಂಥ ಉದಾಹರಣೆ ಉಂಟಾ?
ಇಂಥ ಸರಳ ಸತ್ಯ ನಮ್ಮ ನಾಯಕರುಗಳಿಗೆ ಯಾಕೆ ಅರ್ಥವಾಗುವದಿಲ್ಲ?
-ರಾಘವೇಂದ್ರ ಜೋಶಿ.

ravihara said...

ನಿಜಕ್ಕೂ ವಿಷಯಯುಕ್ತ ಬರಹ. ಮತಾಂತರದ ಆಮಿಷಕ್ಕೆ ಬಲಿಯಾಗಿರುವವರು, ಆಗಲಿರುವವರು ಮೊದಲು ಈ ಬರಹವನ್ನು ಓದಬೇಕು.
If your writing comes in a News-Paper, it will be really good.

sunaath said...

rj,
ನಮ್ಮ ರಾಜಕಾರಣಿಗಳು (ಸೋನಿಯಾ)ಗಾಂಧಿಯವರ ಮೂರು ಮಂಗಗಳಂತಿದ್ದಾರೆ:
೧)ಸತ್ಯವನ್ನು ನೋಡುವದಿಲ್ಲ
೨)ಸತ್ಯವನ್ನು ಕೇಳುವದಿಲ್ಲ
೩)ಸತ್ಯವನ್ನು ಮಾತನಾಡುವದಿಲ್ಲ.

ಇನ್ನು ಈ ದೇಶಕ್ಕೆ ದೇವರೇ ಕಾಪಾಡಬೇಕು.

sunaath said...

ರವಿಶಂಕರ,
ಮತಾಂತರಕ್ಕೆ ಬಲಿಯಾಗುವವರು ಒಂದೊ ಅಜ್ಞಾನಿಗಳು ಅಥವಾ ಅಸಹಾಯಕರು.
ಅಸಹಾಯಕರ ಉದಾಹರಣೆಗೆ, ಪಂಜಾಬದ ಮಹಾರಾಜ ರಣಜಿತ ಸಿಂಗನ ಮಗ ದುಲೀಪ ಸಿಂಗನ ಹೆಸರನ್ನು ಹೇಳಬಹುದು.
ರಣಜಿತ ಸಿಂಗ ೧೮೩೯ರಲ್ಲಿ ತೀರಿಕೊಂಡ.೧೮೪೯ರಲ್ಲಿ ಬ್ರಿಟಿಶರು ಪಂಜಾಬವನ್ನು ಗೆದ್ದುಕೊಂಡಾಗ, ದುಲೀಪ ಸಿಂಗ ಇನ್ನೂ ಚಿಕ್ಕ ಬಾಲಕ. ಈ ಬಾಲಕನನ್ನು ಬ್ರಿಟಿಶರು ತಮ್ಮ "ಆಶ್ರಯ"ದಲ್ಲಿ ತೆಗೆದುಕೊಂಡು ಇಂಗ್ಲಂಡಿಗೆ ಕರೆದೊಯ್ದರು. ಅಲ್ಲಿ ಈ ಬಾಲಕ ಕ್ರಿಶ್ಚನ್ ಧರ್ಮಕ್ಕೆ ಸ್ವಇಚ್ಛೆಯಿಂದ ಮತಾಂತರಗೊಂಡ ಹಾಗು
ಸ್ವಇಚ್ಛೆಯಿಂದ ಕೊಹಿನೂರ ವಜ್ರವನ್ನು ವಿಕ್ಟೋರಿಯಾ ರಾಣಿಗೆ
"present" ಎಂದು ನೀಡಿದ!

Harisha - ಹರೀಶ said...

ನಾನು ನನ್ನ ಇಂಗ್ಲಿಷ್ ಬ್ಲಾಗಿನಲ್ಲಿ ಸಂಕ್ಷಿಪ್ತವಾಗಿ ಅದರ ಬಗ್ಗೆ ಬರೆದಿದ್ದೇನೆ.

ವಿವರಗಳು ಬೇಕಿದ್ದರೆ ಇಲ್ಲಿ ನೋಡಿ. (ನೀವು ವಿವರ ನೋಡದೆ ಚಿತ್ರವನ್ನೇ ನೇರವಾಗಿ ನೋಡಿರಿ ಎಂಬುದು ನನ್ನ ಸಲಹೆ)

ರಾಜೇಶ್ ನಾಯ್ಕ said...

ಸುನಾಥ್,

ಎಷ್ಟು ಸೂಪರ್ ಆಗಿ ಬರೆದಿದ್ದೀರಾ. ಹುಕ್ಕ ಬುಕ್ಕರು ತುರುಕ ಜನಾಂಗಕ್ಕೆ ತೆರಳಿ ಹಿಂದಿರುಗಿದ್ದರೆಂಬ ಬಗ್ಗೆ ಗೊತ್ತೇ ಇರಲಿಲ್ಲ. ಹೀಗೆ ಈ ಲೇಖನದಲ್ಲಿ ನೀವು ಬರೆದಿರುವ ಅದೆಷ್ಟೋ ವಿಷಯಗಳು ಗೊತ್ತಿರಲಿಲ್ಲ. ಇತ್ತೀಚೆಗೆ ಕೆಲವು ಮತಾಂಧರು ಬರೆಯುತ್ತಿದ್ದ ಲೇಖನಗಳನ್ನು ಓದಿ ಬೇಸತ್ತಿದ್ದ ನನಗೆ ಈ ಲೇಖನ ತುಂಬಾನೇ ಇಷ್ಟವಾಯಿತು.

Archu said...

sunatha kaka,
wonderful article !! eshto hosa vishayagaLannu tiLikonde!!
cheers,
archana

sunaath said...

ರಾಜೇಶ, ಅರ್ಚನಾ,
ನಮಗೆ ಶಾಲೆ, ಕಾಲೇಜುಗಳಲ್ಲಿ ಬೋಧಿಸುವ ಇತಿಹಾಸ
filtered, brief and many times unrelated ಇತಿಹಾಸ. Most times, it is biased too!
ಹೀಗಾಗಿ,ವಿವಿಧ ಮೂಲಗಳನ್ನು ಓದಿ, ನಾವು ಇತಿಹಾಸವನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿಕೊಳ್ಳಬೇಕಾಗುತ್ತದೆ. ಆದರೆ ನಮ್ಮ ಅರ್ಥಗ್ರಹಣದಲ್ಲಿಯೂ ಸಹ ತಪ್ಪು ಇರಬಹುದು.

Ittigecement said...

SIR..
SAMAYOCHITAWAAGI VIVARAGALANNU TILISIDDIRI. NAMMA RAJAKEEYADAWARIGE ONDU COPY KALISABAHUDA? AWARIGE IDELLA ARTHA AGODILLAWA?

sunaath said...

ಪ್ರಕಾಶ ಹೆಗಡೆಯವರೆ,
ನಮ್ಮ ರಾಜಕಾರಣಿಗಳು ಅತಿ ಬುದ್ಧಿವಂತರು. ಅವರಿಗೆ ಎಲ್ಲಕ್ಕೂ ಹೆಚ್ಚಾಗಿ ಅರ್ಥವಾಗುವದು ’ಅರ್ಥ’ವೊಂದೇ!

ಸಿಂಧು sindhu said...

ಸುನಾಥ,

ಸಮಯೋಚಿತ ಮತ್ತು ಮೌಲಿಕ ಬರಹ.
ನನಗೆ ಮತ್ತು ನನ್ನ ಸಂಗಾತಿಗೆ ಗಝಲ್ ಗಳೆಂದರೆ ಪ್ರೀತಿ. ಈ ಬಗ್ಗೆ ನಾವಿಬ್ಬರೂ ಮಾತನಾಡುತ್ತಿದ್ದಾಗ ಈ ವಿಷಯದ ಬಗ್ಗೆ ಅವರು ನನಗೆ ಹೇಳಿದ್ದು ಇದೇ ಬಗೆಯ ಮತಾಂತರ ಮತ್ತು ಸಂಸ್ಕೃತಿಯ ದೇಶಾಂತರ.

ನಮ್ಮ ಹೆಚ್ಚಿನ ಹಿಂದುಸ್ತಾನಿ ಗಾಯಕರು, ಹಾಡುಗಾರರು, ಗಝಲ್ ಬರಹಗಾರರು ಹೇಗೆ ಇಸ್ಲಾಂನವರಿದ್ದಾರೆ ಮತ್ತು ಅವರು ಬರೆಯುವ, ಹಾಡುವ, ಅಭಿವ್ಯಕ್ತಿಸುವ ಎಲ್ಲ ಕಲಾಮಾಧ್ಯಮದ ನೆಲಗಟ್ಟು ಹಿಂದೂ/ಭಾರತೀಯವಾಗಿವೆ ಎಂಬ ನನ್ನ ಪ್ರಶ್ನೆಗೆ ಅವರ ಉತ್ತರ ಇದೇ ಆಗಿತ್ತು.

ಹಿಂದೆ ಸಮರ್ಖಂಡದಿಂದ ದಂಡೆತ್ತಿ ಬಂದ ತಿಮೂರನು ನಮ್ಮ ರಾಜ್ಯಗಳನ್ನ ಪತನಗೊಳಿಸಿ ಸಂಪತ್ತನ್ನೆಲ್ಲ ಹೊತ್ತೊಯ್ದಿದ್ದಲ್ಲದೆ, ನಮ್ಮ ಕಲಾವಿದರು,ಬರಹಗಾರರು,ಶಿಲ್ಪಿಗಳನ್ನ ಬಲವಂತವಾಗಿ ತನ್ನ ದೇಶಕ್ಕೆ ಕೊಂಡೊಯ್ದನಂತೆ. ಅಲ್ಲಿ ನೀವು ಹೇಳಿದ subtle pressure ಮತಾಂತರಕ್ಕೆ ಕಾರಣವಾಯಿತು. ಈ ಕಾರಣದಿಂದ ಒಂದು ನಾಡಿನ ಸಂಸ್ಕೃತಿ, ಕಲೆಯ ಜೀವನದಿಯೇ ಸ್ಥಳಾಂತರ ಮತ್ತು ಮತಾಂತರಗೊಂಡಿತು.

ಇವನ್ನೆಲ್ಲ ವಸ್ತುನಿಷ್ಠವಾಗಿ ನೋಡುವುದು ಪ್ರಾಮಾಣಿಕವಾಗಿ ಕಲೆಯನ್ನು ಸಂಸ್ಕೃತಿಯನ್ನು ಆರಾಧಿಸುವ ಜನ ಮಾತ್ರ. ರಾಜಕಾರಣಿಗಳಿಗೆ ’ಅರ್ಥ’ ಸಾಧನೆಯೇ ಮುಖ್ಯ. ಅದನ್ನು ಸಾಧಿಸಲು ಏನನ್ನೂ ಯಾರನ್ನೂ ಬಳಸಿಕೊಳ್ಳುವ ನೀಚತನ ಅವರಿಗಿದೆ.

ನಿಮ್ಮ ವಿಷಯ ಪೂರ್ಣ ವಿಚಾರಮಂಡನೆಗೆ ತುಂಬ ಧನ್ಯವಾದ.

ಪ್ರೀತಿಯಿಂದ
ಸಿಂಧು