Wednesday, October 15, 2008

ವಸುಧೇಂದ್ರರ ಸಂವೇದನಾ ಲೋಕ

ವಸುಧೇಂದ್ರರು ಈವರೆಗೆ ಮೂರು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ:
(೧) ಮನೀಷೆ
(೨) ಚೇಳು
(೩) ಯುಗಾದಿ.

ಈ ಮೂರು ಕಥಾಸಂಕಲನಗಳಲ್ಲಿ ಒಟ್ಟು ೩೭ ಕಥೆಗಳಿವೆ.
ಈ ಮೂವತ್ತೇಳೂ ಕತೆಗಳನ್ನು ಓದಿದಾಗ ಅವುಗಳಲ್ಲಿ ಮೂರು ಮೂಲಲಕ್ಷಣಗಳನ್ನು ಗುರುತಿಸಬಹುದು:

(೧) ವಸುಧೇಂದ್ರರ ಕತೆಗಳಲ್ಲಿ ಬರುವ ಸಮಾಜಗಳು ಎರಡು ತರಹದವು . ಒಂದು ಸಾಂಪ್ರದಾಯಕ ಸಮಾಜ; ಮತ್ತೊಂದು ಆಧುನಿಕ ಸಮಾಜ. ಇವೆರಡೂ ಸಮಾಜಗಳಲ್ಲಿ ವಸುಧೇಂದ್ರರು ಗುರುತಿಸುವ ಸಾಮಾನ್ಯ ಅಂಶವೆಂದರೆ ನಿಷ್ಕರುಣಿಯಾದ ಸಮಾಜವ್ಯವಸ್ಥೆ. ಕತೆಯ ಹಿನ್ನೆಲೆ ಸಾಂಪ್ರದಾಯಕ ಸಮಾಜದ್ದೇ ಇರಲಿ ಅಥವಾ ಆಧುನಿಕ ಸಮಾಜದ್ದೇ ಇರಲಿ, ಈ ಸಮಾಜವ್ಯವಸ್ಥೆಯು ಎಷ್ಟು ನಿರ್ದಯದಿಂದ ಅಸಹಾಯಕರನ್ನು ಹೊಸಕಿ ಹಾಕುತ್ತದೆ ಎನ್ನುವದು ಇಲ್ಲಿಯ ಕತೆಗಳ ಒಂದು ಮೂಲ ಲಕ್ಷಣ.

(೨) ಸಾಂಪ್ರದಾಯಕ ಸಮಾಜದ ಇಂತಹ ವ್ಯವಸ್ಥೆಯಲ್ಲಿ ತೊಳಲಾಡುತ್ತಿರುವ ಅಸಹಾಯಕ ಜೀವಿಗಳಲ್ಲಿ ಉಳಿದಿರುವ ಮೌಲ್ಯನಿಷ್ಠೆಯ ಚಿತ್ರಣವು ಇಲ್ಲಿಯ ಕತೆಗಳ ಎರಡನೆಯ ಮೂಲಲಕ್ಷಣ.

(೩) ಮೂರನೆಯದಾಗಿ ಇಂತಹ ವ್ಯವಸ್ಥೆಯ ಯಲ್ಲಿ ಸಿಲುಕಿ ನಲುಗುತ್ತಿರುವ ಅಸಹಾಯಕ ಜೀವಿಗಳ ಬಗೆಗೆ ವಸುಧೇಂದ್ರರಿಗೆ ಇರುವ ಅನುಕಂಪ.

ಅಸಹಾಯಕರ ಕತೆಗಳನ್ನು ಬರೆದಿರುವವರಲ್ಲಿ ವಸುಧೇಂದ್ರರು ಮೊದಲಿಗರೇನೂ ಅಲ್ಲ. ಕನ್ನಡದ ಶ್ರೇಷ್ಠ ಕತೆಗಾರರಾದ ದೇವನೂರು ಮಹಾದೇವ ಸಹ feudal ಸಮಾಜವ್ಯವಸ್ಥೆಯಲ್ಲಿ ಸಿಲುಕಿ ನಲುಗುತ್ತಿರುವ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಅವರ “ಮಾರಿಕೊಂಡವರು” ಕತೆ ವಿಶ್ವದ ಅತ್ಯುತ್ತಮ ಕತೆಗಳಲ್ಲಿ ಒಂದು ಎಂದು ಹೇಳಬಹುದು. ಆದರೆ ಈ ಕತೆ ಸಾಮಾಜಿಕ ವ್ಯವಸ್ಥೆ ನಿರ್ಮಿಸಿದ ಶೋಷಣೆಯನ್ನು ನಿರುದ್ವಿಗ್ನವಾಗಿ ಹೇಳುವ ಕತೆ. ಅಮರೇಶ ನುಗಡೋಣಿಯವರ ಕತೆಗಳನ್ನೂ ಸಹ ಇದೇ ವರ್ಗದಲ್ಲಿ ಸೇರಿಸಬಹುದು.
ಇನ್ನು ರಾಘವೇಂದ್ರ ಖಾಸನೀಸರು ಸಹ ತಮ್ಮ ಎಲ್ಲ ಕತೆಗಳಲ್ಲಿಯೂ ಅಸಹಾಯಕ ಜೀವಿಗಳನ್ನೇ ಮುಖ್ಯ ಪಾತ್ರಗಳನ್ನಾಗಿ ಮಾಡಿದ್ದಾರೆ. ಆದರೆ ಅವರ ಬಹುತೇಕ ಕತೆಗಳಲ್ಲಿ ವೈಯಕ್ತಿಕ ಅಥವಾ ಕೌಟಂಬಿಕ ಸಮಸ್ಯೆಯೇ ಅಸಹಾಯಕತೆಯ ಕಾರಣವಾಗಿದೆ. ಅವರ ಕತೆಗಳಲ್ಲಿ ಕಾಣುವದು ಕರುಣರಸವೇ ಹೊರತು ಸಹಾನುಭೂತಿಯಲ್ಲ.

ದೇವನೂರ ಮಹಾದೇವ, ಅಮರೇಶ ನುಗಡೋಣಿ ಹಾಗು ರಾಘವೇಂದ್ರ ಖಾಸನೀಸರ ಕತೆಗಳಿಗೂ ಮತ್ತು ವಸುಧೇಂದ್ರರ ಕತೆಗಳಿಗೂ ಇರುವ ಮುಖ್ಯ ವ್ಯತ್ಯಾಸವೆಂದರೆ ಸಮಾಜದ ವ್ಯವಸ್ಥೆಯಲ್ಲಿ ಬಲಿಪಶುಗಳಾದವರಿಗೆ ವಸುಧೇಂದ್ರರ ಹೃದಯದಲ್ಲಿ ಉಕ್ಕುತ್ತಿರುವ ಸಹಾನುಭೂತಿ; ಹೀಗಾಗಿ ಅವರ ಕತೆಗಳಲ್ಲಿ ಅನುಕಂಪವೇ ಪ್ರಧಾನ ರಸವಾಗುತ್ತದೆ.

ಈ ಮೇಲಿನ ಮೂರು ಕಥಾಸಂಕಲನಗಳಲ್ಲಿ, ವಸುಧೇಂದ್ರರು ಮೊದಲು ಒಂದು ಸಾಂಪ್ರದಾಯಕ ಸಮಾಜದ ಕತೆಯನ್ನು, ಆನಂತರ ಒಂದು ಆಧುನಿಕ ಸಮಾಜದ ಕತೆಯನ್ನು ಕೊಡುತ್ತಾ ಹೋಗಿದ್ದಾರೆ. ಈ ರೀತಿಯಾಗಿ ತಮ್ಮ ಸಂಕಲನಗಳಲ್ಲಿ ಒಂದು ರೀತಿಯ ಸಮತೋಲನವನ್ನು ಸಾಧಿಸಲು ಯತ್ನಿಸಿದ್ದಾರೆ. ಆದರೆ ಅವರ ಬಹುತೇಕ ಕತೆಗಳಲ್ಲಿ ಸಂಕಟಪಡುವ ಪಾತ್ರವೆಂದರೆ ಒಬ್ಬ ಅಸಹಾಯಕ ಹೆಣ್ಣು ಮಗಳು.

“ಮನೀಷೆ” ಕಥಾಸಂಕಲನದ ಮೊದಲ ಕಥೆಯಾದ “ನಮ್ಮ ವಾಜೀನ್ನೂ ಆಟಕ್ಕೆ ಸೇರಿಸ್ಕೊಳ್ರೋ” ಕತೆಯನ್ನು ಉದಾಹರಣೆಗೆ ತೆಗೆದುಕೊಳ್ಳಬಹುದು. ಒಂದು ಹಳೆಯ ಕಾಲಘಟ್ಟದ ಬ್ರಾಹ್ಮಣ ಸಮಾಜದ ಚಿತ್ರಣ ಇಲ್ಲಿದೆ.
ಮೈಗೆ ಅಲ್ಲಲ್ಲಿ ಬಿಳುಪು ಹತ್ತುತ್ತಿರುವ ತನ್ನ ಮಗನ ಭವಿಷ್ಯದ ಬಗೆಗೆ ಹೌಹಾರಿದ ವಿಧವೆಯ ಕತೆ ಇದು.
ಮಗನ ರೋಗಶಮನಕ್ಕಾಗಿ ಇವಳಿಗೆ ರಾಘವೇಂದ್ರಸ್ವಾಮಿಗಳ ಹರಕೆಯೇ ದಿವ್ಯೌಷಧ.

ನಡು ವಯಸ್ಸಿನಲ್ಲಿಯೆ ಗಂಡನನ್ನು ಕಳೆದುಕೊಂಡ ಬ್ರಾಹ್ಮಣ ಹೆಣ್ಣುಮಗಳೊಬ್ಬಳು ತನ್ನ ಹಾಗು ತನ್ನ ಚಿಕ್ಕ ಮಗನ ಹೊಟ್ಟೆ ತುಂಬಿಸಲು ಅಡುಗೆ ಕೆಲಸವನ್ನಲ್ಲದೆ ಬೇರಾವ ಕೆಲಸ ಮಾಡಬಲ್ಲಳು? ಇವಳಿಗೆ ಅಣ್ಣನೊಬ್ಬನಿದ್ದಾನೆ. ಆದರೆ ಎಲ್ಲ ಅಣ್ಣಂದಿರಂತೆ ಇವಳ ಅಣ್ಣನೂ ಸಹ ತನ್ನ ಹೆಂಡತಿಯ ಕೈಗೊಂಬೆ. ಅವನಿಗೆ ಇವಳ ಮೇಲೆ, ಇವಳ ಮಗನ ಮೇಲೆ ಕನಿಕರವಿರಬಹುದು. ಆದರೆ ಅದು ಪ್ರಯೋಜನಕ್ಕೆ ಬಾರದ ಕನಿಕರ. ಅಲ್ಲದೆ ಬ್ರಾಹ್ಮಣ ಸಮಾಜದ ಕ್ರೂರ ಕಟ್ಟಳೆಗಳು ಬೇರೆ. ಹೀಗಾಗಿ ಅವನೂ ಅಸಹಾಯಕ.

ಈ ಕತೆಯಲ್ಲಿಯ ಬ್ರಾಹ್ಮಣ ಸಮಾಜ ಕೊಳೆಯುತ್ತಿರುವ ಸಮಾಜವಲ್ಲ ; ಈಗಾಗಲೇ ಕೊಳೆತು ಹೋದ ಸಮಾಜ.
ಬಿಳುಪು ಕಾಣುತ್ತಿರುವ ತನ್ನ ಚಿಕ್ಕ ಮಗನಿಗೆ ಬ್ರಾಹ್ಮಣಸಮಾಜದಲ್ಲಿ acceptance ಕೊಡಿಸಲು ಈ ವಿಧವೆ ಸಂಕಟಪಡುತ್ತಿದ್ದಾಳೆ. ಮಠದ ಸ್ವಾಮಿಗಳ ಸಮಾರಂಭದಲ್ಲಿ, ತಾನು ಅಡುಗೆ ಮಾಡಿ, ತನ್ನ ಮಗನ ಕೈಯಿಂದ ನೀರು ಬಡಿಸಲು ಇವಳು ಶತಪ್ರಯತ್ನ ಮಾಡುತ್ತಾಳೆ. ಆದರೆ, ಕೊನೆಗೂ ಸ್ವಾಮಿಗಳ ಬಾಯಿಂದ ಛೀತ್ಕಾರ:
“ ದೇವರ ಪೂಜೆ ಮಾಡುವ ಈ ಕೈಗಳಿಗೆ, ಈ ತೊನ್ನು ಹತ್ತಿದವನ ಸ್ಪರ್ಷವೇ! ತೊಲಗಿಸಿರಿ ಇವನನ್ನು ಇಲ್ಲಿಂದ!”
ಬಹುಶ: ಈ ಮಾತನ್ನು ಈ ಕತೆಯ climax ಎನ್ನಬಹುದು.
(‘ದಯವೇ ಧರ್ಮದ ಮೂಲವಯ್ಯ’ ಎನ್ನುವ ಬಸವಣ್ಣನವರ ಮಾತು ಅಪ್ರಯತ್ನವಾಗಿ ಓದುಗನ ಮನಸ್ಸಿನಲ್ಲಿ ಆಗ ಸುಳಿಯದಿರದು.)

ಆದರೆ ಕತೆಯ ಹೆಚ್ಚುಗಾರಿಕೆ ಕೇವಲ ಈ climaxನಲ್ಲಿ ಮಾತ್ರವಿಲ್ಲ.
ಈ ಭರ್ತ್ಸನೆಯ ನಂತರವೂ ಆ ವಿಧವೆ ಎದೆಗುಂದುವದಿಲ್ಲ. ತನ್ನ ಮಗನ ಒಳಿತಿಗಾಗಿ ಅವಳ ಹೋರಾಟ ನಿಲ್ಲುವದಿಲ್ಲ.
ಕತೆಯ ಹೆಚ್ಚುಗಾರಿಕೆ ಇರುವದು ಇಂತಹ ಪರಾಭವದಲ್ಲೂ ಆ ವಿಧವೆ ತೋರಿಸುವ ಧೈರ್ಯದಲ್ಲಿದೆ. ಸಾಂಪ್ರದಾಯಕ ಸಮಾಜದ ಮೌಲ್ಯಗಳು ಒಬ್ಬ ಅಸಹಾಯಕ ವಿಧವೆಯಲ್ಲಿ ತುಂಬಬಹುದಾದ ಕೆಚ್ಚನ್ನು ತೋರಿಸುವದರಲ್ಲಿ ಈ ಕತೆಯ ಹೆಚ್ಚುಗಾರಿಕೆ ಇದೆ.

ಸಮಾಜದಿಂದ ಹಾಗೂ ತನ್ನ ಸ್ವಂತ ಗಂಡನಿಂದ ಅನ್ಯಾಯಕ್ಕೊಳಗಾಗಿಯೂ, ಕೆಚ್ಚಿನಿಂದ ಬದುಕು ಸಾಗಿಸಿದ ಹೆಣ್ಣು ಮಗಳ ಚಿತ್ರಣ ಸಿಗುವದು “ಚೇಳು” ಕತೆಯಲ್ಲಿ.
ತನ್ನ ಹೆಂಡತಿಗೆ ಮಕ್ಕಳಾಗಲೆಂದು ಭೈರವ ಬಾಬಾನ ಆಶೀರ್ವಾದ ಪಡೆಯಲು, ಮನಸ್ಸಿಲ್ಲದ ಹೆಂಡತಿಯನ್ನು ಕುರಿಯಂತೆ ನೂಕಿದ ಗಂಡ, ಬಾಬಾನ ಕಾಮಲೀಲೆಯನ್ನು ಕಂಡಾಗ, ಸಾರ್ವಜನಿಕವಾಗಿ ಹೆಂಡತಿಯ ಮಾನ ತೆಗೆಯಲು ಹೇಸುವದಿಲ್ಲ. ಅವಳ ತವರುಮನೆಯವರೂ ಸಹ ಈ ‘ಪತಿತೆ’ಯನ್ನು ತಿರಸ್ಕರಿಸುತ್ತಾರೆ. ಆದರೆ ಬಾಬಾ ತಾನು ಮಾಡಿದ ತಪ್ಪನ್ನು ಅರಿತು, ಈ ಅಸಹಾಯಕ ಹೆಣ್ಣು ಮಗಳಿಗೆ ಚೇಳಿನ ಮಂತ್ರವನ್ನು ಅನುಗ್ರಹಿಸಿ ಹೋಗುತ್ತಾನೆ. ಅವಳ ಬದುಕು ಈ ಚೇಳಿನ ಮಂತ್ರದ ಸಹಾಯದಿಂದ ಹೇಗೋ ಸಾಗುತ್ತಿರುತ್ತದೆ. ಆ ಸಮಯದಲ್ಲಿ ಆಧುನಿಕ ವೈಜ್ಞಾನಿಕ ಅನ್ವೇಷಣೆ ಅವಳ ಬದುಕಿಗೆ ಕುಠಾರವಾಗಿ ಬರುತ್ತದೆ. ಈ ಸಮಸ್ಯೆಗೆ ಅವಳು ಕಂಡುಕೊಳ್ಳುವ ಪರಿಹಾರವು ಅಸಹಾಯಕ ಜೀವಿಗಳು ಮೊರೆ ಹೋಗುವ ಏಕೈಕ ಮಾರ್ಗವಾಗಿದೆ. ಇಂತಹ ದುರಂತ ಕತೆಯನ್ನು ಸಹನೀಯವಾಗಿ ಮಾಡುವದು ವಸುಧೇಂದ್ರರ ವಿನೋದಪೂರ್ಣ ಶೈಲಿ.

ವಸುಧೇಂದ್ರರು ಬರೆದ ಇಂತಹ ಸಾಂಪ್ರದಾಯಿಕ ಸಮಾಜದ ಕತೆಗಳಲ್ಲಿಯೇ ಶ್ರೇಷ್ಠವಾದದ್ದು ‘ಚೇಳು’ ಕಥಾಸಂಕಲನದಲ್ಲಿಯ ಕತೆ: “ ಹೊಟ್ಟೆಯೊಳಗಿನ ಗುಟ್ಟು”.

ವಿಧವೆಯೊಬ್ಬಳು ಬ್ರಾಹ್ಮಣ ಕುಟುಂಬವೊಂದರಲ್ಲಿ ಮನೆಕೆಲಸ ಮಾಡುತ್ತ ಬದುಕು ಸಾಗಿಸುತ್ತಿದ್ದಾಳೆ. ದೀರ್ಘ ಕಾಲದ ನಂತರ ಅವಳ ಯಜಮಾನಿಯೂ ಸಹ ವಿಧವೆಯಾಗಿದ್ದಾಳೆ. ಇದಿಷ್ಟು ಕತೆಯಲ್ಲಿ ಬರೆಯದೆ ಇದ್ದ ಹಿನ್ನೆಲೆ.
ಇದೀಗ, ಯಜಮಾನಿಯ ಶ್ರಾದ್ಧದ ಕೊನೆಯ ವಿಧಿಯಾದ ಕಾಕಪಿಂಡದಿಂದ ಕತೆ ಪ್ರಾರಂಭವಾಗುತ್ತದೆ.

ನಗರದಲ್ಲಿ ವಾಸಿಸುತ್ತಿರುವ ಅವಳ ಮಗ ಶ್ರಾದ್ಧಕರ್ಮಕ್ಕಾಗಿ ಮನೆಗೆ ಬಂದಿದ್ದಾನೆ. ಕಾಕಪಿಂಡ ಆಗುತ್ತಿಲ್ಲ.
ಅಲ್ಲಿರುವ ಸಂಬಂಧಿಕರೆಲ್ಲರೂ ಪ್ರಯತ್ನಿಸುತ್ತಾರೆ. ಆದರೂ ಕಾಕಪಿಂಡ ಆಗುವದಿಲ್ಲ.
ಕೊನೆಗೊಮ್ಮೆ ಈ ಮನೆಕೆಲಸದ ಮುದಿ ವಿಧವೆಯಿಂದ ಕಾಕಪಿಂಡ ಆಗುತ್ತದೆ.
ಅವಳು ತನ್ನ ಯಜಮಾನಿಯ ಪಿಂಡಕ್ಕೆ ಹೇಳಿದ್ದೇನು?
ಅದು ಕತೆಯ ಮುಕ್ತಾಯದಲ್ಲಿಯೂ ಗುಟ್ಟಾಗಿಯೇ ಉಳಿಯುತ್ತದೆ.

ಈ ಕತೆಯಲ್ಲಿ, ಈ ಮನೆಗೆಲಸದ ವಿಧವೆಯ ಸಂಕಷ್ಟಗಳ ಬಗೆಗೆ ಎಲ್ಲಿಯೂ ಪ್ರತ್ಯಕ್ಷವಾಗಿ ಹೇಳಿಲ್ಲ. ಆದರೆ ಓರ್ವ ಅಸಹಾಯಕ ವಿಧವೆಯನ್ನು ಅವಳ ಆಶ್ರಯದಾತರು ಹಾಗೂ ಸಮಾಜ ಯಾವ ರೀತಿಯಲ್ಲಿ ಶೋಷಿಸಿರಬಹುದು, ಅವಳ ತಾಪಗಳಿಗೆ ಅವರು ಎಷ್ಟರ ಮಟ್ಟಿಗೆ insensitive ಆಗಿರಬಹುದು ಎನ್ನುವ ಕಲ್ಪನೆ ಓದುಗನ ಚಿತ್ತದಲ್ಲಿ ಕ್ಷಣಮಾತ್ರಕ್ಕೆ ಮಿಂಚುತ್ತದೆ. ಇಷ್ಟಾಗಿಯೂ ದೈಹಿಕವಾಗಿ ಹಾಗೂ ಆರ್ಥಿಕವಾಗಿ ಶೋಷಿತಳಾದ ಆ ಮುದಿ ವಿಧವೆಯ ಹೃದಯದಲ್ಲಿ ಮಿಣುಕುತ್ತಿರುವ ಸಾಂಪ್ರದಾಯಕ ಮೌಲ್ಯಗಳನ್ನು ತೋರಿಸುವದೇ ವಸುಧೇಂದ್ರರ ಮುಖ್ಯ ಗುರಿಯಾಗಿದೆ.

ಅಸಹಾಯಕತೆಯ ಪರಮಾವಧಿಯನ್ನು ನೋಡಬೇಕಾದರೆ , “ ಹುಲಿಗೆ ಕಾಡೇ ರಕ್ಷೆ, ಕಾಡಿಗೆ ಹುಲಿಯೇ ರಕ್ಷೆ ” ಕತೆಯನ್ನು ಓದಬೇಕು. ಈ ಕತೆಯಲ್ಲಿ ಮನೆಯ ಯಜಮಾನ ಮಾನಸಿಕವಾಗಿ ಅತ್ಯಂತ ಬಲಹೀನ ಮನುಷ್ಯ. ಆತನ ಕುಟುಂಬಕ್ಕೆ ಅವನ ಹೆಂಡತಿಯೇ ಧೈರ್ಯದ ಆಧಾರ. ಆದರೆ, ಸಮಾಜದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಅವರಲ್ಲಿ ಇಲ್ಲ. ಆದರೆ ಶೋಷಣೆಗೆ ಒಳಗಾಗಿಯೂ, ಗಂಡನಲ್ಲಿ ಹಾಗು ಮಕ್ಕಳಲ್ಲಿ ಧೈರ್ಯವನ್ನು ತುಂಬುವವಳು, ಕುಟುಂಬವನ್ನು ಸಂಬಾಳಿಸಿಕೊಂಡು ಹೋಗುವವಳು ಹೆಂಡತಿಯೇ.

ಸಾಂಪ್ರದಾಯಕ ಸಮಾಜದಲ್ಲಿಯ ಅಸಹಾಯಕ ಹೆಣ್ಣುಮಗಳ ಶ್ರೇಷ್ಠ ಕತೆ ಎಂದರೆ “ಸೀಳು ಲೋಟ”. ಈ ಕತೆ ಇಲ್ಲಿ ತೋರಿಸಿದ ಮೂರು ಸಂಕಲನಗಳಲ್ಲಿ ಇಲ್ಲ. ಇದನ್ನು ಓದಬಯಸುವವರು ದಯವಿಟ್ಟು
ಇಲ್ಲಿನೋಡಿರಿ.
ಈ ಕತೆಯಲ್ಲಿಯೂ ಸಹ ಬಲಹೀನ ಗಂಡ, ಅಸಹಾಯಕ ಅಣ್ಣ ಹಾಗು ನೆರೆಹೊರೆಯವರ ಔದಾರ್ಯದ ಮೇಲೆ ಬದುಕು ಸಾಗಿಸಬೇಕಾದಂತಹ ಹೆಂಗಸಿನ ಕತೆ ಇದು.

ಇಷ್ಟೆಲ್ಲ ಕಾರ್ಪಣ್ಯಗಳ ನಡುವೆಯೂ ಆಕೆ ಸಾಂಪ್ರದಾಯಿಕ ಸಮಾಜ ನೀಡಿದ ಸಂಸ್ಕಾರದ ಮೌಲ್ಯಗಳನ್ನು ಬಿಟ್ಟಿಲ್ಲ. ಕತೆಯ ಕೊನೆಕೊನೆಯಲ್ಲಿ ಅವಳು ತನ್ನ ಮಗನಿಂದ ಆಣೆ ಹಾಕಿಸಿಕೊಳ್ಳುವ ಭಾಗವು ಕತೆಯ ಪರಾಕಾಷ್ಠೆ ಎನ್ನಬಹುದು.
ಫ್ರಾನ್ಸ್ ದೇಶದ ಕತೆಗಾರ ಮೊಪಾಸಾನ ಕತೆಗಳನ್ನು ನೆನಪಿಸುವ ಈ ಕತೆ ಕನ್ನಡದ ಒಂದು ಶ್ರೇಷ್ಠ ಕತೆಯಾಗಿದೆ.

ಈ ಎಲ್ಲ ಕತೆಗಳಲ್ಲಿಬರುವ ಹೆಣ್ಣುಮಕ್ಕಳು ಸಮಾಜದ ನೀತಿಯನ್ನು ಒಪ್ಪಿಕೊಂಡಂತಹ ಸಾಮಾನ್ಯ ಜೀವಿಗಳು. ಸಮಾಜದ ವಿಧಿಗಳನ್ನು ದಾಟದಯೇ, ಕೆಚ್ಚಿನಿಂದ ಬದುಕು ಮಾಡಿದವರು. ಸ್ವತಃ ಶೋಷಣೆಗೆ ಒಳಗಾಗಿದ್ದರೂ, ಮಾನವೀಯತೆಯನ್ನು ಮರೆತವರಲ್ಲ. ಅರ್ಥಾತ್, ಇವಳು ಸಾಮಾನ್ಯ ಭಾರತೀಯ ಹೆಣ್ಣು ಮಗಳು. ತನ್ನ ದುಗುಡ ದುಮ್ಮಾನಗಳು ಏನೇ ಇರಲಿ, ಸಂಪ್ರದಾಯವು ತನಗೆ ಚಿಕ್ಕಂದಿನಿಂದ ಕಲಿಸಿದ ಮೌಲ್ಯಗಳನ್ನು ಬಾಳಿನಲ್ಲಿ ಅರಗಿಸಿಕೊಂಡ ಭಾರತೀಯ ಹೆಣ್ಣುಮಗಳು.

ವಸುಧೇಂದ್ರರು ಆಧುನಿಕ ಸಮಾಜದಲ್ಲಿಯ ಅಸಹಾಯಕರ ಕತೆಗಳನ್ನೂ ಸಹ ಕೊಟ್ಟಿದ್ದಾರೆ. “ ಕ್ಷಿತಿಜ ಹಿಡಿಯ ಹೊರಟವರಾರು, ಹೆಡ್ ಹಂಟರ, ಕಣ್ತೆರದು ನೋಡಲ್ಲಿ ಗೆದ್ದಲು ಮರ ಕೆಡವಲಿದೆ, ಗುಳ್ಳೆ ” ಮುಂತಾದವು ಆಧುನಿಕ ಸಮಾಜದಲ್ಲಿಯ ಅಸಹಾಯಕರ ಕತೆಗಳು. ಆಧುನಿಕ ಸಮಾಜದ ಆರ್ಥಿಕ ಆಸೆಬುರುಕತನ ಈ ಎಲ್ಲ ಕತೆಗಳಿಗೆ ಹಿನ್ನೆಲೆಯಾಗಿದೆ.

ಇವಲ್ಲದೆ, ಮತ್ತೊಂದು ವರ್ಗದ ಅಸಹಾಯಕ ಜೀವಿಗಳ ಕತೆಯೂ ಇಲ್ಲಿವೆ. ಸಮಾಜದ ಚೌಕಟ್ಟಿಗೆ ಸಂಬಂಧವಿರದೆ, ತನ್ನೊಳಗಿನ ವೈಯಕ್ತಿಕ ಅಥವಾ ಆರ್ಥಿಕ ಕಾರಣದಿಂದಾಗಿ ಕಷ್ಟಪಡುತ್ತಿರುವ ಅಸಹಾಯಕ ಜೀವಿಗಳ ಕತೆಗಳಿವು.

“ ಅಪಸ್ವರದಲ್ಲೊಂದು ಆರ್ತನಾದ ” ಕತೆಯಲ್ಲಿ ಮನೆಯ ಪರಿಸ್ಥಿತಿಯಿಂದಾಗಿ, ಮದುವೆಯಾಗದೇ ಇರುವ ಒಬ್ಬಳು ಹುಡುಗಿ ಹಾಗೂ ಅವಳ ವಿಧವೆ ಅಮ್ಮನ ತೊಳಲಾಟಗಳ ಚಿತ್ರಣವಿದೆ.
“ ಅನಘ ” ಕತೆಯಲ್ಲಿ ಹಳ್ಳಿಯಲ್ಲಿರುವ transvestite ಹುಡುಗನೊಬ್ಬನ ಸಮಸ್ಯೆಯ ಚಿತ್ರಣವಿದೆ. ಈ ಕತೆಯಲ್ಲಿ ಹುಡುಗನ ಬಲಹೀನತೆ ಹಾಗು ಅವನ ಅಪ್ಪನ ಪೌರುಷಗಳಿಗೆ ಮುಖಾಮುಖಿಯಾಗಿ ನಿಲ್ಲುವದು ಸೂಳೆಯೊಬ್ಬಳಲ್ಲಿ ಮಿನಗುತ್ತಿರುವ ಮಾನವೀಯತೆ.
“ಯುಗಾದಿ” ಕತೆಯಲ್ಲಿ ಬದಲಾದ ಸಾಮಾಜಿಕ ಮೌಲ್ಯಗಳಿಂದಾಗಿ ಒದ್ದಾಡುತ್ತಿರುವ ಹಿರಿಯ ಜೀವಿಯೊಬ್ಬನ ಅಸಹಾಯಕತೆಯ ಚಿತ್ರಣವಿದೆ. ಇಲ್ಲಿಯೂ ಸಹ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಕೆಳಸ್ತರದಲ್ಲಿರುವ ವ್ಯಕ್ತಿಗಳು ಉಳಿಸಿಕೊಂಡು ಬಂದಿರುವ ಸಾಂಪ್ರದಾಯಕ ಮೌಲ್ಯಗಳೇ ಕತೆಯ ತಿರುಳಾಗಿವೆ.

ಹಾಗಾದರೆ, ವಸುಧೇಂದ್ರರ ಕತೆಗಳು ಕೇವಲ ಅಸಹಾಯಕರ ಕತೆಗಳೇ ಎನ್ನುವ ಸಂದೇಹ ಬರಬಹುದು.
ನಿಜ ಹೇಳಬೇಕೆಂದರೆ, ವಸುಧೇಂದ್ರರ ಕತೆಗಳು ಮೌಲ್ಯವನ್ನು ಹುಡುಕುತ್ತಿರುವ ಕತೆಗಳು.
ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಲಹೀನರಾದವರಲ್ಲಿಯೇ ಅಂದರೆ ಶೋಷಣೆಗೆ ಒಳಗಾದವರಲ್ಲಿಯೇ ಈ ಮೌಲ್ಯಗಳು ಉಳಿದುಕೊಂಡಿರುವದು ಈ ಕತೆಗಳಲ್ಲಿಯ ವೈಶಿಷ್ಟ್ಯ.

ವಸುಧೇಂದ್ರರು ಮೌಲ್ಯಗಳನ್ನು ಹುಡುಕಲು ಬಲಹೀನರನ್ನೇ ಆರಿಸಿಕೊಳ್ಳುತ್ತಾರೆಯೇ ಎನ್ನುವ ಪ್ರಶ್ನೆಯೂ ಬರಬಹುದು. ಆದರೆ ಇದು ಕೇವಲ ಸಾಂದರ್ಭಿಕ. ವಸುಧೇಂದ್ರರರದು ಸೂಕ್ಷ್ಮ ಸಂವೇದನಾ ಮನಸ್ಸು. ಎಲ್ಲೇ ಸಂತಾಪ ಕಾಣಲಿ, ಅವರ ಮನ ಮಿಡಿಯುತ್ತದೆ. ಅದರ ಫಲವೇ ಈ ಕತೆಗಳು.

ವಸುಧೇಂದ್ರರ ಕತೆಗಳು ಅವರ ಆಪ್ತ ಪರಿಸರದಿಂದ ಹೊಮ್ಮಿವೆ. ಸಾಂಪ್ರದಾಯಕ ಸಮಾಜದ ಕತೆಗಳೆಲ್ಲ ಸಂಡೂರಿನ ಸುತ್ತಮುತ್ತಲಿನ ಕತೆಗಳು. ಇಲ್ಲಿಯ ಪರಿಸರವನ್ನು ವಿನೋದಪೂರ್ಣವಾಗಿ ಕಟ್ಟಿಕೊಡುವದರಲ್ಲಿ ವಸುಧೇಂದ್ರರು ಯಶಸ್ವಿಯಾಗಿದ್ದಾರೆ. ಈ ಕತೆಗಳು ಸಾಂಪ್ರದಾಯಕ ಸಮಾಜದ ಕೊಳಕನ್ನು ತೋರಿಸುವಂತೆಯೇ, ಆ ಸಮಾಜವು ನೀಡಿದ ಮೌಲ್ಯಗಳನ್ನೂ ತೋರಿಸುತ್ತವೆ.
ಆಧುನಿಕ ಸಮಾಜದ ಕತೆಗಳೆಲ್ಲ ಬೆಂಗಳೂರು ನಗರದ ಕತೆಗಳು. ದುಡ್ಡೇ ದೊಡ್ಡಪ್ಪ ಎನ್ನುವದೇ ಇಲ್ಲಿಯ ಮೌಲ್ಯ.
ತೆಳುವಿನೋದದ ತಿಳಿಲೇಪನವಿರುವದರಿಂದ ವಸುಧೇಂದ್ರರ ಕತೆಗಳಲ್ಲಿಯ ಸಂಕಟವು ಸಹನೀಯವಾಗಿದೆ.

24 comments:

NilGiri said...

ವಸುಧೇಂದ್ರರ ಕಥೆಗಳ ಬಗ್ಗೆ ವಿವರವಾಗಿ ತಿಳಿಸಿದ್ದಕ್ಕೆ ವಂದನೆಗಳು ಕಾಕಾ. ಈ ಸಲ ಊರಿಗೆ ಬಂದಾಗ, ನನ್ನ ತಿಂಡಿ-ಬಟ್ಟೆಗಳ ಲಗೇಜು ಕಡಿಮೆ ಮಾಡಿ, ಪುಸ್ತಕಗಳನ್ನು ತರಬೇಕು.

sunaath said...

ಗಿರಿಜಾ,
ಹಾಗಿದ್ದರೆ, ಈಗ ಊರಿಗೆ ಬರುವ ಕಾರ್ಯಕ್ರಮ ಇದೆ ಅಂತಾಯ್ತಲ್ಲ!
Welcome back!
-ಸುನಾಥ ಕಾಕಾ

Anonymous said...

ಪ್ರಿಯರೇ,
ವಸುಧೇಂದ್ರರ ಕಥೆಗಳ ಬಗ್ಗೆ ಬರೆದಿದ್ದನ್ನು ನೋಡಿ ತುಂಬ ಖುಶಿಯಾಯಿತು.
ವಾಜಿಯ ಕಥೆ ಎಂಥ ಜೀವಂತಕಥೆಯೆಂದರೆ ಇಡೀ ಕಥೆ ಓದಿದ ಮೇಲೆ ಇಲ್ಲಿರುವ ಪಾತ್ರಗಳನ್ನೆಲ್ಲ ಎಲ್ಲೋ ಯಾವತ್ತೋ ನೋಡಿ ಮರೆತಿರಬಹುದಾದ ಭಾವ ನಮ್ಮನ್ನಾವರಿಸಿಬಿಡುತ್ತದೆ..
ಅಷ್ಟೊಂದು ತೀವ್ರವಾಗಿ ಕಾಡುವ ಶಕ್ತಿ ಈ ಕಥೆಗಿದೆ.ತಮಾಷೆಯೆಂದರೆ ವಾಜಿ ಕಥೆಯ ಬಗ್ಗೆ
ನಾನೊಮ್ಮೆ ಅಭಿನಂದಿಸಿ ವಸುಧೇಂದ್ರರಿಗೆ ಮೇಲ್ ಮಾಡಿದಾಗ ಅಯ್ಯೋ,ಅದೊಂದು ಸಾಮಾನ್ಯ ಕಥೆ..ಕಥೆ
ಬರಿಯೋದೆಂದರೆ ಹ್ಯಾಗೆ ಎಂದು ಗೊತ್ತಿರದಿದ್ದ ಕಾಲದಲ್ಲಿ ಬರೆದಂಥ ಕಥೆಯದು..ಎಂದು ಪತ್ರಿಸಿದ್ದರು!

"ಚೇಳು" ಕೂಡ ಇನ್ನೊಂದು ರೀತಿಯಲ್ಲಿ ಭಯಂಕರ ಕಥೆ.ಇಲ್ಲಿ ಚೇಳು ಕಥಾನಾಯಕಿಗೆ business ತಂದುಕೊಡುವ ಗಿರಾಕಿಯಿದ್ದಂತೆ.ಆದರೆ ಇಡೀ ಕಥಾಹಂದರದಲ್ಲಿ ಚೇಳು ಯಾವ ಪರಿ ತನ್ನನ್ನು ತಾನು ಪ್ರತಿಷ್ಟಾಪಿಸಿಕೊಳ್ಳುತ್ತದೆಯೆಂದರೆ,ಬೆಳಿಗ್ಗೆ ಆಫೀಸ್ ಗೆ ಹೋಗುವಾಗ ಶೂ ಕಟ್ಟಿಕೊಳ್ಳುವ ಮುನ್ನ
ಇಲ್ಲೇನಾದರೂ ಆ ಚೇಳು ಅಡಗಿ ಕುಳಿತಿದೆಯಾ ಎಂದು ಶೂ ಕೊಡವಿಕೊಳ್ಳುವಷ್ಟು!

ಆದರೆ ಸುನಾಥ ಸರ್, ನೀವು ಅವರ "ನಮ್ಮಮ್ಮ ಅಂದ್ರೆ ನಂಗಿಷ್ಟ" ಪುಸ್ತಕದ ಬಗ್ಗೆ ಹೇಗೆ ಮರೆತಿರೋ ಕಾಣೆ.
ತಮ್ಮ ತಾಯಿಯ ಬಗ್ಗೆ,ಆಕೆಯ ಪ್ರೀತಿ,ಸಂಕೋಚ,ಸಿಟ್ಟು ಎಲ್ಲವನ್ನೂ ಅವರು ತುಂಬ ವಿನೋದವಾಗಿ,ಆದ್ರವಾಗಿ
ಚಿಕ್ಕಚಿಕ್ಕ ಘಟನೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ.ನನ್ನ all time favourite ಪುಸ್ತಕವಿದು!

ಎಲ್ಲಕ್ಕಿಂತ ಮುಖ್ಯವಾಗಿ ಈ ಮನುಷ್ಯ ಸಾಹಿತ್ಯಕವಾಗಿ ಹ್ಯಾಗೆ ಭಿನ್ನ ಎಂದು ತಮ್ಮ "ಛಂದ" ಪ್ರಕಾಶನದ
ಮೂಲಕ ತೋರಿಸಿಕೊಡುತ್ತಿದ್ದಾರೆ.ಓದುಗರಿಗೆ ಓದಿಸುವ ಮುನ್ನವೇ ಸ್ವತಃ filter ಮಾಡಿ ಅತ್ಯಂತ ಕಡಿಮೆ ಬೆಲೆಯಲ್ಲಿ
(ಅವರ ಬಹುತೇಕ ಪುಸ್ತಕಗಳು ೪೦/- ಅಷ್ಟೇ!)ಪುಸ್ತಕವೊಂದನ್ನು ಕೈಗಿಡುವ ಅವರ ಕಾರ್ಯವನ್ನು ನಾವ್ಯಾರೂ ಅನುಮಾನಿಸುವಂತಿಲ್ಲ..
ವೈಯಕ್ತಿಕವಾಗಿ ನಾನು ಯಾವತ್ತೂ ವಸುಧೇಂದ್ರರನ್ನು ನೋಡಿಲ್ಲ.ಮಾತನಾಡಿಸಿಲ್ಲ.ಪರಿಚಯವೂ ನನಗಿಲ್ಲ.
ಆದರೆ ಅವರ ಕಥೆಗಳ ಮೂಲಕ,ಸುಲಲಿತ ಪ್ರಬಂಧಗಳ ಮೂಲಕ,non profitable publication ಮೂಲಕ ಇಷ್ಟವಾಗಿಬಿಡುತ್ತಾರೆ.

-ರಾಘವೇಂದ್ರ ಜೋಶಿ.

Anonymous said...

ಸಾರ್,

ನೀವು ಯಾರೆಂದು ನನಗೆ ಗೊತ್ತಿಲ್ಲ. ಆದರೆ ಎಷ್ಟೊಂದು ಕಳಕಳಿಯಿಂದ ಮತ್ತು ಪ್ರೀತಿಯಿಂದ ನನ್ನ ಕತೆಗಳ ಬಗ್ಗೆ ಬರೆದಿದ್ದೀರ. ತುಂಬಾ ಖುಷಿಯಾಗಿದೆ. ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.

ವಸುಧೇಂದ್ರ

Anonymous said...

ನಾನು ವಸುಧೇಂದ್ರರ ಕತೆಗಳನ್ನು ಓದಿಲ್ಲ. ಈಗ ಓದುವ ಸಾಧ್ಯತೆಯೂ ಇಲ್ಲ. ಏನಿದ್ದರೂ ನಮ್ಮ ೂರಿಗೆ ಬಂದ ಮೇಲೆ ಸಾಧ್ಯ. ಆದರೆ ಒಂದು ಮಾತು. ಯಾವದೇ ಸಮಾಜ ಹೊಸ ದೃಷ್ಟಿಯನ್ನು ಕಳೆದುಕೊಂಡು, ಸಂಪ್ರದಾಯಗಳಿಗೆ ಕಟ್ಟು ಬಿದ್ದಾಗ, ನಿಂತ ನೀರಾಗುತ್ತದೆ. ನಿಂತ ನೀರು ಕೊಳೆಯಲೇ ಬೇಕು. ಇದು ಬ್ರಾಹ್ಮಣ ಸಮಾಜಕ್ಕೆ ಮಾತ್ರ ಮೀಸಲಾಗಿಲ್ಲ ; ನಮ್ಮ ದೇಶದ ಎಲ್ಲ ಸಮಾಜಗಳ ಸ್ಥಿತಿಯೂ ಇದೇ ಆಗಿದೆ. ಯಾವದೇ ಸಮಾಜದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕೈ ಮೇಲಾದಾಗ, ಮಾನವೀಯತೆ ಹಿಂದೆ ಬಿದ್ದು, ಮಾನವರ ಸಹಜ ಗುಣವಾದ, ಪಾಶವೀಯತೆ ವಿಜೃಂಭಿಸುತ್ತದೆ. ಇದು ಅತಿ ಸಾಮಾನ್ಯ. ಇದು ವಿಶ್ವದ ಕಣ್ಣೀರು ತರಿಸುವ ಕತೆಗಳ ಸಾಮಾನ್ಯ ಹಂದರ. ಧರ್ಮಗಳು ಮಠವಾಗಿ, ತತ್ವಗಳನ್ನು ಮರೆತು ಸಂಪ್ರದಾಯಕ್ಕೆ ಆಳಾದಾಗ, ಕೊಳೆತು ಗಬ್ಬಾಗುವದು ಓಂದು ಸಾಮಾನ್ಯ ಕ್ರಿಯೆ. ಆ ಗಬ್ಬಿನಿಂದ ಉದಿಸಿದ ಹೊಸ ಧರ್ಮವೂ ನಂತರ ತಾನೇ ಹೊಲಸಾಗುವದು. ಇದೊಂದು ನಿರಂತರ ಕ್ರಿಯೆ.

sunaath said...

rj,
ವಸುಧೇಂದ್ರರ ಚಿತ್ರಣಸಾಮರ್ಥ್ಯದ ಬಗೆಗೆ ನೀವು ಹೇಳುತ್ತಿರುವದು ನೂರಕ್ಕೆ ನೂರು ಸರಿಯಾಗಿದೆ. ಈ ಲೇಖನದಲ್ಲಿ ನಾನು ವಸುಧೇಂದ್ರರ ಕತೆಗಳ ಒಂದು ವಿಶಿಷ್ಟ ಮುಖ ತೋರಿಸಲು ಮಾತ್ರ ಪ್ರಯತ್ನಿಸಿದ್ದರಿಂದ, ಅವರ ಅತ್ಯಂತ ಜನಪ್ರಿಯ "ಅಮ್ಮ"ನ ಬಗೆಗೆ ಬರೆದಿಲ್ಲ.
"ಯುಗಾದಿ" ಸಂಕಲನದ ಕಿರುಕತೆಗಳೂ ಸಹ ಓದುಗನಲ್ಲಿ ಬೆರಗು ಹುಟ್ಟಿಸುವಂತೆ ಇವೆಯೆಂದ ಮೇಲೆ, ಅವರ ಬಗೆಗೆ ಹೆಚ್ಚಿಗೇನು ಹೇಳಬೇಕು?
ನೀವು ಹೇಳಿದಂತೆ, ಇಂದಿನ ಕನ್ನಡ ಸಾಹಿತ್ಯಲೋಕದಲ್ಲಿ ನಾವೆಲ್ಲ ಇಷ್ಟಪಡುವ ವ್ಯಕ್ತಿ ಎಂದರೆ ವಸುಧೇಂದ್ರರೇ ಸರಿ.

sunaath said...

ವಸುಧೇಂದ್ರರೆ,
ಮುದ್ದಾದ ಮಗುವನ್ನು ನೋಡಿದವರು, ಆ ಕೂಸನ್ನು ಪ್ರೀತಿಯಿಂದ ಎತ್ತಿಕೊಳ್ಳುತ್ತಾರೆ;ತಾಯಿಯನ್ನು ಅಭಿನಂದಿಸುತ್ತಾರೆ.
ಇದೇ ಸಂಬಂಧವು ವಸುಧೇಂದ್ರರಿಗೂ ಅವರ ಓದುಗರಿಗೂ ಇದೆ.

ವಸುಧೇಂದ್ರರಿಗೂ ನನಗೂ ಇರುವ ಒಂದು ಸ್ಪೆಶಲ್ ಸಂಬಂಧವೆಂದರೆ, ನಾನು ಸುರತ್ಕಲ್ ಕಾಲೇಜಿನಿಂದ ಬಿ.ಇ (ಸಿವಿಲ್)ಮುಗಿಸಿ ಬಂದ ವರುಷವೇ(೧೯೬೯),ಅವರು ಹುಟ್ಟಿದ್ದು,ನಂತರ ಅದೇ ಕಾಲೇಜಿನಿಂದ ಡಿಗ್ರಿ ಪಡೆದುಕೊಂಡದ್ದು.

sunaath said...

ಕಟ್ಟಿಯವರೆ,
ನಮ್ಮ ಎಲ್ಲ ಧರ್ಮಗಳಿಗೂ, ಎಲ್ಲ ಸಂಸ್ಥೆಗಳಿಗೂ, ನಿಮ್ಮ ಹೇಳಿಕೆ ಸರಿಹೊಂದುತ್ತದೆ.

ವಸುಧೇಂದ್ರರ ಕತೆ "ಸೀಳುಲೋಟ”ವನ್ನು 'ಅಪಾರ' ಇವರು ತಮ್ಮ blogನಲ್ಲಿ ಕೊಟ್ಟಿದ್ದರು. ಅದರ ಕೊಂಡಿಯನ್ನು ಈ ಲೇಖನದಲ್ಲಿ ಕೊಟ್ಟಿದ್ದೇನೆ. ದಯವಿಟ್ಟು ಓದಿರಿ.

Unknown said...

ಸುನಾಥರೆ, ನನಗ ವಸುಧೇಂದ್ರರ ಕಥೆಗಳು ಎಂದರೆ ಬಹಳ ಮೆಚ್ಚುಗೆ. ಅವರ ಕಥೆಗಳಲ್ಲಿ ನಮ್ಮ ಸಮಾಜದ ರೀತಿ ನೀತಿಗಳ ಹಾಗು ಹೆಣ್ಣಿನ ಸ್ಥಾನ ಮಾನದ ನೈಜ ವರ್ಣನೆಯಿದೆ. ಇದು ನಮ್ಮ ಭಾವನೆಗಳಿಗೆ ಸ್ಪಂದಿಸುತ್ತದೆ. ನೀವು ಕೊಟ್ಟ ವಿವರಣೆ ಚೆನ್ನಾಗಿದೆ. ಧನ್ಯವಾದಗಳು.

sunaath said...

ವನಮಾಲಾ,
ನಿಮಗೆ ಸುಸ್ವಾಗತ.

shivu.k said...

ನೀವು ಹೇಳಿದ ವಸುದೇಂದ್ರರ ಕತೆ ಪುಸ್ತಕಗಳನ್ನು ಓದಲು ಕೊಂಡುಕೊಂಡಿದ್ದೇನೆ. ಅದಕ್ಕೂ ಮೊದಲು ಅವರ "ನಮ್ಮಮ್ಮ ಅಂದ್ರೆ ನಂಗಿಷ್ಟ' ಕಥಾ ಸಂಕಲನ ತುಂಬಾ ಚೆನ್ನಾಗಿದೆ. ಅತ್ಯುತ್ತಮವೆನಿಸುವ ಜೀಮನ್ಮುಖಿ ಲೇಖನಗಳು.

ಹಾಗೆ ನನ್ನ ಬ್ಲಾಗಿನಲ್ಲಿ ಮತ್ತೊಂದು ಲೇಖನವನ್ನು ಹಾಕಿದ್ದೇನೆ. ನೀವು ಓದಿ ಕಾಮೆಂಟಿಸಿ.

ಶಿವು.ಕೆ
ಮತ್ತೊಂದು ವಿಷಯ ನನ್ನ ಛಾಯಕನ್ನಡಿ ಬ್ಲಾಗಿನಲ್ಲಿ ನಾಚಿಕೆಯಿಲ್ಲದ ಪಾರಿವಾಳ ಕುಟುಂಬ ಬಂದಿದೆ. ನೋಡಿ ಓದಿ ನಿಮ್ಮ ಪ್ರತಿಕ್ರಿಯೆ ತಿಳಿಸಿ.

ಆಲಾಪಿನಿ said...

ಅಂಕಲ್, ಖುಷಿಯಾಯ್ತು ವಸುಧೇಂದ್ರರ ಸಂವೇದನಾ ಲೋಕ ತೋರಿಸಿದ್ದಕ್ಕ. ವಸುಧೇಂದ್ರ ಮೇಲ್‌ನಲ್ಲಿ ನಿಮ್ ಬಗ್ಗೆ ಏನ್ ಹೇಳಿದ್ರು ಗೊತ್ತ? ‘ಯಾರೋ ಪರಿಚಯವಿಲ್ಲದವರು ಹೀಗೆ ಮೆಚ್ಚಿಕೊಂಡಾಗ ಎಷ್ಟು ಖುಷಿಯಾಗುತ್ತಲ್ವಾ?’ ಅಂತ. ಮೊಮ್ಮಗಳಿಗೆ ಧಾರವಾಡ ಪೇಡಾ ಕೊಡಸ್ರಿ. ಅಂದ್ರ ನಿಮಗ್ ಸಿಸ್ಟಮ್ ಬಿಟ್ಟ ಕೊಡ್ತಾಳು

sunaath said...

ಶಿವು,
ಧನ್ಯವಾದಗಳು.

sunaath said...

ಶ್ರೀದೇವಿ,
ಧಾರವಾಡ ಫೇಡಾಕ್ಕ ಮಣಿಯೂದುಲ್ಲವಾ ಈಕಿ. ನಮ್ಮ ಸಿಸ್ಟಮ್ಮನ್ನ ಆಕ್ರಮಿಸಿ ಬಿಟ್ಟಾಳ; ಇನ್ನ ಗಣಕಯಂತ್ರದ್ದ ಬಿಡತಾsಳ?

Mahantesh said...

sunatha Kaka,
VasudeMdra kathegaLa bagge nimma lekhana odi tuMba saMtasavaayitu..

adhunika samajada (IT jagattina) bavaNegaLannu teLu haasya reetiyalli vivarisiruvudu tuMba istavaagutte...

sunaath said...

ಮಹಾಂತೇಶ,
ವಸುಧೇಂದ್ರರ IT ಕತೆಗಳು ಸ್ವಾರಸ್ಯಕರವಾಗಿರುತ್ತವೆ.
ನೀವು ನಿಮ್ಮ blogನಲ್ಲಿ ಬಹುಕಾಲದಿಂದ ಏಕೆ ಬರೆದಿಲ್ಲ?

ಸಂಭವಾಮಿ ಯುಗೇ ಯುಗೇ said...

ನಾನು ವಸುಧೇಂದ್ರರ ಕತೆಗಳ ಬಗ್ಗೆ ಚೆನ್ನಾಗಿ ಬರೆದಿದ್ದೀರಿ..

sunaath said...

ಮಂದಾರ,
ಧನ್ಯವಾದಗಳು.

Anonymous said...

"ಸೀಳುನೋಟ" ಓದಿದೆ. ವಿಷೇಶವೆನಿಸಲಿಲ್ಲ. ಓದಲಿಕ್ಕೆ ಕುತೂಹಲ ಎನಿಸಿತು. ಕತೆಯಲ್ಲಿ 'ಸತ್ವ'ಇಲ್ಲ. ಹಂದರ ಬಹಳ ಜಾಳು-ಜಾಳಾಗಿದೆ. ಯಾವ ಪಾತ್ರಕ್ಕೂ ಉದ್ದೇಶವಿದೆಯೆಂದು ಎನಿಸಲಿಲ್ಲ. ತಿರುಪತಿ ತಿಮ್ಮಪ್ಪನೂ ಕಥೆಯಲ್ಲಿ ರಾಗ-ದ್ವೇಷಯುಕ್ತವಾದ ಪಾತ್ರವಾದದ್ದು ಅತ್ತಂತ ಅಸ್ವಾಭಾವಿಕ.

Shriniwas M Katti said...

ಶ್ರೀಮತಿ ವನಮಾಲಾ ಮತ್ತು ಶ್ರೀ ಸುಧೀಂದ್ರರಿಗೆ,
"ಸಲ್ಲಾಪ"ದ ವಿಶಾಲ ಬಳಗಕ್ಕೆ,

ದೀಪಾವಳಿಯ ಶುಭಾಷಯಗಳು.

ಸೌ.ಗೀತಾ - ಶ್ರೀನಿವಾಸ ಕಟ್ಟಿ

sunaath said...

ಶ್ರೀಮತಿ ಗೀತಾ, ಶ್ರೀ ಶ್ರೀನಿವಾಸ ಕಟ್ಟಿಯವರಿಗೆ,
ಧನ್ಯವಾದಗಳು.
ನಿಮಗೂ ನಮ್ಮ ದೀಪಾವಳಿಯ ಹಾರ್ದಿಕ ಶುಭಾಶಯಗಳು.

ಅಮರ said...

ಸುನಾಥರೇ,

ವಸುಧೇಂದ್ರರ ಕಥಾಲೋಕದ ಪರಿಚಯ ಖುಷಿ ತಂದಿದೆ.. :)
ನನಗೆ ಅವರನ್ನು ಪರಿಚಯಿಸಿದ್ದು "ಹಾಯ್ ಬೆಂಗಳೂರು" ಪತ್ರಿಕೆ, ಅಲ್ಲಿ ಪ್ರಕಟವಾದ ’ಸ್ಟೀಲ್ ಪಾತ್ರೆಗಳು’ ಪ್ರಭಂದ ಓದಿ.... ಅವರ ಪುಸ್ತಕಗಳನ್ನ ಹುಡುಕಿ ಓದಿಕೊಂಡೆ. ನನ್ನ ಗೆಳೆಯಗಿಗೆ ಉಡುಗೊರೆಯಾಗಿ ಕೊಟ್ಟ ಹೆಚ್ಚು ಪುಸ್ತಕಗಳಲ್ಲಿ "ನಮ್ಮಂದ್ರ ನನಗಿಷ್ಟ" ಒಂದಾಗಿದೆ. ಕನ್ನಡ ಓದುಗರಿಗೆ ಹಲವಾರು ಹೊಸ ಹೊಸ ಲೇಖಕರನ್ನ ಪರಿಚಯಿಸುತ್ತಿರುವ ವಸುಧೇಂದ್ರ ಅವರ "ಚಂದ ಪುಸ್ತಕ" ಪ್ರಕಾಶನದ ಕೆಲಸ ಶ್ಲಾಘನೀಯ. ವಸುಧೇಂದ್ರ ಇನ್ನು ಹೆಚ್ಚು ಹೆಚ್ಚು ಬರೆಯಲಿ.
-ಅಮರ

Dev Milinda said...

bahala chennagi haagu koolankushavaagi vasudeendrara kathegalannu vimarshe maadiddiri...

ಡಾ. ಚಂದ್ರಿಕಾ ಹೆಗಡೆ said...

vasudendrara samaya aadharita nage zalak avara "atithigalu mattu kooti"galalli kaanasiguttade.