Sunday, November 23, 2008

ಎಲ್ಲರಂಥವನಲ್ಲ ನನ ಗಂಡ

ಶರೀಫರ ಹಾಡಿನ ಪೂರ್ತಿಪಾಠ ಹೀಗಿದೆ:

ಎಲ್ಲರಂಥವನಲ್ಲ ನನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ ಗಂಡ ||ಪಲ್ಲ||

ಸೊಲ್ಲು ಸೊಲ್ಲಿಗೆ ಬಯ್ದು ನನ್ನ
ಎಲ್ಲಿಗೋಗದ್ಹಾಂಗ ಮಾಡಿಟ್ಟಾ
ಕಾಲ್ಮುರಿದು ಬಿಟ್ಟಾ ||ಅ.ಪ.||

ಮಾತಾಪಿತರ ಮನೆಯೊಳಿರುತಿರಲು
ಮನಸೋತು ಮೂವರು
ಪ್ರೀತಿಗೆಳೆತನ ಮಾತಿನೊಳತಿರಲು
ಮೈನೆರೆತು ಮಾಯದಿ
ಘಾತವಾಯಿತು ಯವ್ವನವು ಬರಲು
ಹಿಂಗಾಗುತಿರಲು
ದೂತೆ ಕೇಳ್ನಿಮ್ಮವರು ಶೋಭನ
ರೀತಿಚಾರವನೆಲ್ಲ ತೀರಿಸಿ
ಆತನೊಳು ಮೈಹೊಂದಿಕೆಯ ಮಾಡಿ
ಮಮತೆಯಲಿ ಕೂಡಿ ||೧||

ಅಕ್ಕತಂಗಿಯರಾರು ಮಂದಿಗಳಾ
ಅಗಲಿಸಿದನೈವರ
ಕಕ್ಕುಲಾತಿಯ ಅಣ್ಣತಮ್ಮಗಳಾ
ನೆದರೆತ್ತಿ ಮ್ಯಾಲಕ
ನೋಡಗೊಡದೇ ಹತ್ತು ದಿಕ್ಕುಗಳಾ
ಮಾಡಿದನೆ ಮರುಳಾ
ತೆಕ್ಕೆಯೊಳು ಬಿಗಿದಪ್ಪಿ ಸುರತಾ-
ನಂದಸುಖ ತಾಂಬೂಲ ರಸಗುಟ-
ಗಿಕ್ಕಿ ಅಕ್ಕರತಿಯಲಿ ನಗುವನು ತಾ
ಬಹು ಸುಗುಣನೀತಾ ||೨||

ತುಂಟನಿವ ಸೊಂಟಮುರಿ ಹೊಡೆದಾ
ಒಣ ಪಂಟುಮಾತಿನ
ಗಂಟಗಳ್ಳರ ಮನೆಗೆ ಬರಗೊಡದಾ
ಹದಿನೆಂಟು ಮಂದಿ
ಕುಂಟಲಿಯರ ಹಾದಿಯನು ಕಡಿದಾ
ಎನ್ನ ಕರವ ಪಿಡಿದಾ
ಕುಂಟಕುರುಡಾರೆಂಟು ಮಂದಿ
ಗಂಟು ಬಿದ್ದರೆ ಅವರ ಕಾಣುತ
ಗಂಟಲಕೆ ಗಾಣಾದನೇಳಕ್ಕಾ
ತಕ್ಕವನೆ ಸಿಕ್ಕಾ ||೩||

ಅತ್ತೆಮಾವರ ಮನೆಯ ಬಿಡಿಸಿದನೇ
ಮತ್ತೆಲ್ಲಿ ಮೂವರ
ಮಕ್ಕಳೈವರು ಮಮತೆಯ ಕೆಡಿಸಿದನೇ
ಎನ್ನನು ತಂದು
ರತ್ನಜ್ಯೋತಿಯ ಪ್ರಭೆಯೊಳಿರಿಸಿದನೇ
ಎನಗೊತ್ತಿನವನು
ಎತ್ತ ಹೋಗದೆ ಚಿತ್ತವಗಲದೆ
ಗೊತ್ತಿನಲಿ ಇಟ್ಟು ಎನ್ನನು
ಮುತ್ತಿನಾ ಮೂಗುತಿಯ ಕೊಟ್ಟಾನೇ
ಅವನೇನು ದಿಟ್ಟನೇ ||೪||

ಕಾಂತೆ ಕೇಳೆ ಕರುಣ ಗುಣದಿಂದ
ಎನಗಿಂಥ ಪುರುಷನು
ಬಂದು ದೊರಕಿದ ಪುಣ್ಯಫಲದಿಂದಾ
ಎನ್ನಂತರಂಗದ
ಕಾಂತ ಶ್ರೀ ಗುರುನಾಥ ಗೋವಿಂದಾ
ಶಿಶುನಾಳದಿಂದ
ಕಾಂತೆ ಬಾರೆಂತೆಂದು ಕರೆದೇ-
ಕಾಂತ ಮಂದಿರದೊಳಗೆ ಒಯ್ದು
ಭ್ರಾಂತಿ ಭವ ದುರಿತವನು ಪರಿಹರಿಸಿ
ಚಿಂತೆಯನು ಮರಸಿ ||೫||
………………………………………………………………………
ಭಕ್ತಿಮಾರ್ಗದಲ್ಲಿ ಭಕ್ತ ಮತ್ತು ಭಗವಂತನ ನಡುವೆ ಐದು ಬಗೆಯ ಸಂಬಂಧಗಳನ್ನು ಗುರುತಿಸಲಾಗಿದೆ:
೧) ದಾಸ ಭಾವ
೨) ಸಖ್ಯ ಭಾವ
೩) ಮಧುರ ಭಾವ
೪) ವಾತ್ಸಲ್ಯ ಭಾವ
೫) ವಿರೋಧ ಭಾವ

ಭಕ್ತಿಮಾರ್ಗದ ಸಾಧಕರು ಈ ಎಲ್ಲ ಪಥಗಳಲ್ಲಿಯೂ ಸಾಧನೆಯನ್ನು ಮಾಡಿದ್ದಾರೆ.
ಶರೀಫರ ಹಾಡುಗಳಲ್ಲಿ ಸಹ ಈ ವಿಭಿನ್ನ ಪ್ರಕಾರಗಳ ವರ್ಣನೆಯನ್ನು ಕಾಣಬಹುದು.

“ಎಲ್ಲರಂಥವನಲ್ಲ ನನ ಗಂಡ” ಎನ್ನುವ ಹಾಡಿನಲ್ಲಿ ಶರೀಫರು ಪರಮಾತ್ಮನನ್ನು ಪತಿಗೆ ಹಾಗೂ ಜೀವಾತ್ಮರಾದ ತಮ್ಮನ್ನು ಸತಿಗೆ ಹೋಲಿಸಿಕೊಂಡು ಹಾಡಿದ್ದಾರೆ.
ಮಧುರ ಭಕ್ತಿಯ ಈ ಸಾಧನಾಮಾರ್ಗದಲ್ಲಿ ತಮಿಳುನಾಡಿನ ಆಂಡಾಳ್, ಕರ್ನಾಟಕದ ಅಕ್ಕ ಮಹಾದೇವಿ ಹಾಗೂ ರಾಜಸ್ಥಾನದ ಮೀರಾಬಾಯಿ ಪ್ರಸಿದ್ಧರಾಗಿದ್ದಾರೆ.
ವೀರಶೈವ ದರ್ಶನದಲ್ಲಿಯೂ ಸಹ “ ಶರಣ ಸತಿ, ಲಿಂಗ ಪತಿ” ಎನ್ನುವದು ಸುಪ್ರಸಿದ್ಧವಾದ ಹೇಳಿಕೆಯೇ ಆಗಿದೆ.
ಆಧುನಿಕ ಕಾಲದಲ್ಲಿ ಮಧುರಚೆನ್ನರೂ ಸಹ ಸಾಧನೆಯ ಪಥದಲ್ಲಿ ಪರಮಾತ್ಮನನ್ನು ತಮ್ಮ “ನಲ್ಲ” ಎಂದು ಗ್ರಹಿಸಿ ಬರೆದ “ನನ್ನ ನಲ್ಲ” ಕಾವ್ಯವು ಕನ್ನಡದ ಅದ್ಭುತ ಕಾವ್ಯಗಳಲ್ಲೊಂದಾಗಿದೆ.

ಶರೀಫರ ಕವನ ಪ್ರಾರಂಭವಾಗುವದು ತಮ್ಮ ಗಂಡನ ಬಗೆಗೆ ಅವರಿಗಿರುವ ಬೆರಗು ಹಾಗು ಮೆಚ್ಚುಗೆಯ ಸಾಲುಗಳಿಂದ:
“ಎಲ್ಲರಂಥವನಲ್ಲ ನನ ಗಂಡ
ಬಲ್ಲಿದನು ಪುಂಡ”

ಈತ ಬಲ್ಲಿದನಾದ ಗಂಡ ಎಂದು ಇವನ ಹೆಂಡತಿಗೆ ಅಭಿಮಾನವಿದೆ.
ಯಾತರಲ್ಲಿ ಬಲ್ಲಿದ?
ತನ್ನ ಹೆಂಡತಿಯನ್ನು ತನಗೆ ಬೇಕಾದಂತೆ ತಿದ್ದುವದರಲ್ಲಿ ಈತ ಬಲ್ಲಿದ, ಅಂದರೆ ಜಾಣ!
ಅಷ್ಟೇ ಅಲ್ಲ. ಅವಳನ್ನು ಪರಿವರ್ತಿಸುವ ಈ ಕಾರ್ಯವನ್ನು ಆತ ‘ಪುಂಡ’ತನದಿಂದ, agressively ಮಾಡುತ್ತಾನೆ.
ಹೆಂಡತಿಗೆ ಈ ವಿಷಯದಲ್ಲಿ ಸ್ವಲ್ಪವೂ ಸ್ವಾತಂತ್ರ್ಯ ಎನ್ನುವದಿಲ್ಲ.
ಆದರೆ ಅವಳಿಗೆ ಅಸಮಾಧಾನವೂ ಇಲ್ಲ.
ಇದರಲ್ಲಿ ತನ್ನ ಹಿತವೇ ಇದೆ ಎಂದು ಅರಿತ ಅವಳು ಗಂಡನ ಇಂತಹ ವರ್ತನೆಯನ್ನು ಮೆಚ್ಚಿಕೊಂಡಿದ್ದಾಳೆ.

ತನ್ನ ಗಂಡನಾದ ಪರಮಾತ್ಮ ಯಾವ ರೀತಿಯಲ್ಲಿ ತನ್ನನ್ನು ತಿದ್ದಿದ ಎಂದು ಶರೀಫರು ಹೀಗೆ ಹೇಳುತ್ತಾರೆ.
ಸೊಲ್ಲು ಸೊಲ್ಲಿಗೆ ಬಯ್ದು ನನ್ನ
ಎಲ್ಲಿಗೋಗದ್ಹಾಂಗ ಮಾಡಿಟ್ಟಾ
ಕಾಲ್ಮುರಿದು ಬಿಟ್ಟಾ ||

ಹೊಸದಾಗಿ ಮದುವೆಯಾದ ಹೆಂಡತಿ (--ಹಳೆಯ ಸಾಂಪ್ರದಾಯಕ ಸಮಾಜದಲ್ಲಿ ಎನ್ನುವದನ್ನು ನೆನಪಿನಲ್ಲಿ ಇಟ್ಟುಕೊಳ್ಳಿರಿ—) ತನ್ನ ಪತಿಯೊಡನೆ ತನ್ನ ಚಿಕ್ಕ ಪುಟ್ಟ ಬಯಕೆಗಳನ್ನು ಹೇಳಿಕೊಳ್ಳಲು ಬಯಸುತ್ತಾಳೆ. ಅವಳಿಗೆ ಬಾಯಿ ತೆರೆಯಲೇ ಅವಕಾಶ ಕೊಡದಂತೆ, ಈ ಪುಣ್ಯಾತ್ಮ ಮಾತು ಮಾತಿಗೆ (=ಸೊಲ್ಲು ಸೊಲ್ಲಿಗೆ) ಇವಳನ್ನು ಬಯ್ಯುತ್ತಾನೆ. ಇವಳು ಮನೆಯ ಬಿಟ್ಟು ಹೊರಗೆ ಕಾಲಿಡಬಾರದೆನ್ನುವ ಉದ್ದೇಶದಿಂದ ಅವಳ ಕಾಲನ್ನೇ ಮುರಿದು ಬಿಟ್ಟಿದ್ದಾನೆ.

ಶರೀಫರು ಹೊಸದಾಗಿ ಪರಮಾತ್ಮನ ಜೊತೆ ಮದುವೆಯಾಗಿದ್ದಾರೆ.
ತನ್ನಂತಹ ನೆರೆಹೊರೆಯವರೊಡನೆ ಮಾತನಾಡುವ ಹಾಗು ತನ್ನ ಸಂಸಾರದ ದೊಡ್ಡಸ್ತನವನ್ನು ಹೆಮ್ಮೆಯಿಂದ ಹೇಳಿಕೊಂಡು, ಬೀಗುವ ಮನಸ್ಸು ಈ ಹೆಂಡತಿಗೆ ಇದೆ.
ಆದರೆ ಮನೆಯ ಯಜಮಾನನಿಗೆ ಇದು ಬಿಲ್ಕುಲ್ ಬೇಕಾಗಿಲ್ಲ.
ಸರಿ, ಆತ ಇವಳ ಕಾಲನ್ನೇ ಮುರಿದು ಬಿಟ್ಟ.
ಆಧ್ಯಾತ್ಮಿಕ ಅರ್ಥದಲ್ಲಿ ಹೇಳುವದಾದರೆ, ತನ್ನ ಸರಿಕರಾದ ಇತರ ಕೆಲವು ಸಂತರಿಗೆ (ಉದಾ: ಅಜಾತ ನಾಗಲಿಂಗ ಸ್ವಾಮಿಗಳಿಗೆ) ಬಂದಂತಹ ದೊಡ್ಡಸ್ತಿಕೆ ಹಾಗು ಪ್ರಸಿದ್ಧಿ ಶರೀಫರಿಗೆ ಬರದಂತೆ, ಆ ಪರಮಾತ್ಮ ನೋಡಿಕೊಂಡ.
ಇದು ಹೆಂಡತಿಗೂ ಒಪ್ಪಿಗೆಯಾದ ಸಂಗತಿಯೇ!

ಇಷ್ಟಾದ ಮೇಲೆ ಇಂತಹ ಸುಗುಣ ಸಂಪನ್ನ ಗಂಡನೊಡನೆ ತನ್ನ ಒಗೆತನ ಹೇಗೆ ಪ್ರಾರಂಭವಾಯಿತೆಂದು ಶರೀಫರು ಹೇಳುತ್ತಾರೆ:

ಮಾತಾಪಿತರ ಮನೆಯೊಳಿರುತಿರಲು
ಮನಸೋತು ಮೂವರು
ಪ್ರೀತಿಗೆಳೆತನ ಮಾತಿನೊಳತಿರಲು
ಮೈನೆರೆತು ಮಾಯದಿ
ಘಾತವಾಯಿತು ಯವ್ವನವು ಬರಲು
ಹಿಂಗಾಗುತಿರಲು
ದೂತೆ ಕೇಳ್ನಿಮ್ಮವರು ಶೋಭನ
ರೀತಿಚಾರವನೆಲ್ಲ ತೀರಿಸಿ
ಆತನೊಳು ಮೈಹೊಂದಿಕೆಯ ಮಾಡಿ
ಮಮತೆಯಲಿ ಕೂಡಿ||

ಶರೀಫರಿಗೆ ಇನ್ನೂ ಆಧ್ಯಾತ್ಮದ ಗಂಧ ಬಡೆದಿರಲಿಲ್ಲ.
ಅವರು ತಮ್ಮ ತಂದೆ ತಾಯಿಯ ಮನೆಯಲ್ಲಿ, ಅಂದರೆ ವಿಷಯ ಭಾವನೆ ತುಂಬಿದ ಸಂಸಾರದಲ್ಲಿಯೇ ಇದ್ದರು.
ಅವರಿಗೆ ಮೂವರು ಪ್ರೀತಿಯ ಗೆಳೆಯರು.
ಈ ಮೂವರೆಂದರೆ, ಪ್ರತಿಯೊಂದು ಜೀವಿಗೆ ಸಂಚಲನೆ ನೀಡುವ ಮೂರು ಗುಣಗಳು:
(೧) ತಮಸ್ (೨) ರಜಸ್ ಹಾಗು (೩) ಸತ್ವ
ಪ್ರತಿ ಜೀವಿಯ ಜನ್ಮಾಂತರಗಳಲ್ಲಿ ತಮೋಗುಣ ಕಡಿಮೆಯಾಗುತ್ತ, ಸತ್ವಗುಣ ಅಧಿಕವಾಗುತ್ತ ಹೋಗಬೇಕು.

ಅದಲ್ಲದೆ ಅವರ ಮೂರು ಪ್ರಕಾರದ ಕರ್ಮಗಳು ಅವರನ್ನು ಬೆಂಬತ್ತಿವೆ:
(೧) ಸಂಚಿತ (೨) ಪ್ರಾರಬ್ಧ ಹಾಗೂ (೩) ಆಗಾಮಿ

(ಟಿಪ್ಪಣಿ:
ಈ ಗುಣಗಳ ಮಿಶ್ರಣಕ್ಕೆ ಸರಿಹೋಗುವಂತೆ ಹಾಗೂ ಕರ್ಮಗಳಿಗೆ ಅನುಸಾರವಾಗಿ ಪ್ರತಿ ಜೀವಿಗೆ ಒಂದು ದೇಹ ದೊರಕುತ್ತದೆ.
‘ಗಣಪತಿ ಅಥರ್ವ ಶೀರ್ಷ’ದಲ್ಲಿ ಬರುವ ಈ ಸಾಲನ್ನು ಗಮನಿಸಿರಿ:
“ತ್ವಂ ಗುಣತ್ರಯಾತೀತಃ, ತ್ವಂ ದೇಹತ್ರಯಾತೀತಃ, ತ್ವಂ ಕಾಲತ್ರಯಾತೀತಃ”
ಗಣಪತಿಯು ಸತ್ವ, ರಜಸ್ ಹಾಗೂ ತಮಸ್ ಎನ್ನುವ ಮೂರೂ ಗುಣಗಳಿಗೆ ಅತೀತನಾಗಿರುವದರಿಂದ ಅವನು ಮೂರೂ ದೇಹಗಳಿಗೆ (=ಸ್ಥೂಲ, ಸೂಕ್ಷ್ಮ ಹಾಗೂ ಕಾರಣದೇಹಗಳಿಗೆ) ಅತೀತನಾಗಿದ್ದಾನೆ.
ದೇಹವಿಲ್ಲದವನಿಗೆ ಕಾಲವೆಲ್ಲಿಯದು?
ಆ ಕಾರಣದಿಂದ ಆತನು ಭೂತ, ವರ್ತಮಾನ ಹಾಗೂ ಭವಿಷ್ಯತ್ ಎನ್ನುವ ಮೂರು ಕಾಲಗಳಿಗೂ ಸಹ ಅತೀತನಾಗಿದ್ದಾನೆ.
ದೇಹ ಹಾಗೂ ಕಾಲಗಳಿಂದ ಬದ್ಧನಾಗದವನಿಗೆ ಕರ್ಮಬಂಧನವೆಲ್ಲಿಯದು?
ಹಾಗಾಗಿ ಪರಮಾತ್ಮನಿಗೆ ಕರ್ಮಬಂಧನವಿಲ್ಲ.)

ಈ ರೀತಿಯಾಗಿ ಶರೀಫರು ತಮ್ಮ ಮೂರು ಗುಣಗಳೊಡನೆ ಪ್ರೀತಿಯಿಂದ ಇರುತ್ತಿರಲು, ಈ ಗುಣಗಳಲ್ಲಿ ಸತ್ವಗುಣವೇ ಅಧಿಕವಾಗಿದ್ದರಿಂದ, ಅವರು ಮೈನೆರೆಯುವ ಸಮಯ ಬಂದಿತು.
ಅರ್ಥಾತ್, ಈ ವಿಷಯ ಸಂಸಾರವನ್ನು ಬಿಟ್ಟು, ಆಧ್ಯಾತ್ಮಿಕ ಸಂಸಾರ ಹೂಡುವ ಅವಸ್ಥೆ ಅವರಿಗೆ ಪ್ರಾಪ್ತವಾಯಿತು.
ಅದೂ ಹೇಗೆ? ಮಾಯದಿಂದ ಅಂದರೆ ಅವರಿಗೇ ಅರಿವಾಗದಂತೆ!
ಆದರೆ ಚಿಕ್ಕ ಹುಡುಗಿಯೊಬ್ಬಳು ಮದುವೆಯಾಗುವಾಗ ಸಂಭ್ರಮದ ಜೊತೆಗೇ ಹೆದರಿಕೆಯನ್ನೂ ಅನುಭವಿಸುತ್ತಾಳೆ.
ಅದಕ್ಕಾಗಿಯೇ ಶರೀಫರು,
“ಘಾತವಾಯಿತು ಯವ್ವನವು ಬರಲು”
ಎಂದು ಹೇಳುತ್ತಾರೆ.

ಶರೀಫರಿಗೇನೊ ಸ್ವಲ್ಪ apprehension ಇರಬಹುದು.
ಆದರೆ ತನಗೆ ತಕ್ಕ ಕನ್ಯೆಯನ್ನು ಶೋಧಿಸುತ್ತಿರುವ ವರಮಹಾಶಯ ಸುಮ್ಮನೇ ಕೂತಾನೆ?
‘ವೆಂಕಟೇಶ ಕಲ್ಯಾಣ’ದಲ್ಲಿ ವೆಂಕಟೇಶನು ಮದುವೆಯ ಪ್ರಸ್ತಾಪಕ್ಕಾಗಿ ತಾನೇ ದೂತೆಯಾಗಿ ಕೊರವಂಜಿಯ ವೇಷದಲ್ಲಿ ಬಂದದ್ದನ್ನು ನೆನಪಿಸಿಕೊಳ್ಳಿರಿ.
ಅದೇ ರೀತಿಯಾಗಿ, ಪರಮಾತ್ಮನೂ ಸಹ ಈ ಕನ್ಯೆಯೊಡನೆ ಮದುವೆಯಾಗಲು ಗುರುರೂಪದಲ್ಲಿ ಬರುತ್ತಾನೆ.
ಆ ಗುರುವೇ ಗೋವಿಂದ ಭಟ್ಟರು.

ಹಿಂಗಾಗುತಿರಲು
ದೂತೆ ಕೇಳ್ನಿಮ್ಮವರು ಶೋಭನ
ರೀತಿಚಾರವನೆಲ್ಲ ತೀರಿಸಿ
ಆತನೊಳು ಮೈಹೊಂದಿಕೆಯ ಮಾಡಿ
ಮಮತೆಯಲಿ ಕೂಡಿ||

ಗುರು ಗೋವಿಂದ ಭಟ್ಟರು ಶರೀಫರ ಮದುವೆಯನ್ನು ಪರಮಾತ್ಮನ ಜೊತೆಗೆ ಮಾಡಿದ್ದಷ್ಟೇ ಅಲ್ಲ, ಶೋಭನ ಶಾಸ್ತ್ರವನ್ನೂ ಸಹ ಮಾಡಿದರು.
ಪರಮಾತ್ಮನೊಡನೆ ಮೈಹೊಂದಿಕೆಯನ್ನು ಮಾಡಿಸಿಕೊಟ್ಟರು.
ಪರಮಾತ್ಮ ಹಾಗೂ ಶರೀಫರು ಪ್ರೀತಿಯಲ್ಲಿ ಒಂದಾದರು.

ಈ ವರ್ಣನೆಯು ಗುರು ಗೋವಿಂದ ಭಟ್ಟರು ಶಕ್ತಿಪಾತದ ಮೂಲಕ ಶರೀಫರಲ್ಲಿ ಕುಂಡಲಿನಿಯನ್ನು ಜಾಗೃತಗೊಳಿಸಿದುದರ ಸೂಚನೆಯಾಗಿದೆ.

ಇದೀಗ ಶರೀಫರ ಹೊಸ ಸಂಸಾರ (ಪರಮಾತ್ಮನೊಡನೆ) ಪ್ರಾರಂಭವಾಯಿತು.
ಸರಿ, ಶರೀಫರ ತವರು ಮನೆಯ ಸುದ್ದಿಯೇನು?
ಹೊಸ ಗಂಡ ಈ ವಿಷಯದಲ್ಲಿ ತುಂಬಾ possessive.
ಶರೀಫರಿಗೆ ಅರಿಷಡ್ವರ್ಗವೆನ್ನುವ ಆರು ಮಂದಿ ಅಕ್ಕ ತಂಗಿಯರಿದ್ದರು.
(ಕಾಮ, ಕ್ರೋಧ, ಮೋಹ, ಲೋಭ, ಮದ ಹಾಗು ಮಾತ್ಸರ್ಯ.)
ಅಲ್ಲದೆ ಅವರಿಗೆ ಐದು ಜನ ಪ್ರಿತಿಯ ಸೋದರರು.
(ಐದು ಕರ್ಮೇಂದ್ರಿಯಗಳು ಹಾಗು ಅವಕ್ಕೆ ಪೂರಕವಾದ ಐದು ಜ್ಞಾನೇಂದ್ರಿಯಗಳು:
ಕಣ್ಣು-ನೋಟ, ಕಿವಿ-ಶ್ರವಣ, ಮೂಗು-ವಾಸನೆ, ನಾಲಗೆ-ರುಚಿ, ಚರ್ಮ-ಸ್ಪರ್ಶ).
ಅವರೆಲ್ಲರನ್ನೂ ಈತ ಅಗಲಿಸಿಯೇ ಬಿಟ್ಟ.
ಅಂದರೆ, ಈ ಸಾಧನಗಳು ಅವರನ್ನು ವಿಷಯ ಸಂಸಾರಕ್ಕೆ ಎಳೆಯಲು ಸಾಧ್ಯವಾಗಲಿಲ್ಲ.

ಅಕ್ಕತಂಗಿಯರಾರು ಮಂದಿಗಳಾ
ಅಗಲಿಸಿದನೈವರ
ಕಕ್ಕುಲಾತಿಯ ಅಣ್ಣತಮ್ಮಗಳಾ

ತನ್ನ ಹೆಂಡತಿ ತನ್ನ ನೆದರನ್ನು(=ನಜರನ್ನು, ನೋಟವನ್ನು) ಎಲ್ಲೂ ಹೊರಳಿಸಕೂಡದು;
ಅವಳು ತನ್ನನ್ನೇ ಸದಾಕಾಲ ನೋಡುತ್ತಿರಬೇಕು ಎನ್ನುವದು ಈ ಗಂಡನ ಅಭಿಲಾಶೆ.
ಹಾಗೆಂದು ಇದರಲ್ಲಿ ಆತನ ಬಲವಂತಿಕೆಯೇನಿಲ್ಲ.
ಅವನ ಆಟಕ್ಕೆ ಇವಳೇ ಮರುಳಾಗಿದ್ದಾಳೆ.

ನೆದರೆತ್ತಿ ಮ್ಯಾಲಕ
ನೋಡಗೊಡದೇ ಹತ್ತು ದಿಕ್ಕುಗಳಾ
ಮಾಡಿದನೆ ಮರುಳಾ||

ಪರಮಾತ್ಮನ ಜೊತೆಗಿನ ಸಂಸಾರದ ಸುಖವನ್ನು ಶರೀಫರು ಹೀಗೆ ಬಣ್ಣಿಸುತ್ತಾರೆ:

ತೆಕ್ಕೆಯೊಳು ಬಿಗಿದಪ್ಪಿ ಸುರತಾ-
ನಂದಸುಖ ತಾಂಬೂಲ ರಸಗುಟ-
ಗಿಕ್ಕಿ ಅಕ್ಕರತಿಯಲಿ ನಗುವನು ತಾ
ಬಹು ಸುಗುಣನೀತಾ ||

ಈ ಸಾಲುಗಳು ಆಧ್ಯಾತ್ಮಿಕ ಅನುಭವವನ್ನು ಸೂಚಿಸುತ್ತಿದ್ದು, ಅವುಗಳ ಅರ್ಥ ಆಧ್ಯಾತ್ಮಸಿದ್ಧಿ ಪಡೆದವನಿಗೆ ಮಾತ್ರ ಗೊತ್ತಾದೀತು.
(ಬಲ್ಲವನೇ ಬಲ್ಲ ಬೆಲ್ಲದ ಸವಿಯ!)
ಪರಮಾತ್ಮನು ತನ್ನ ಸಾಮರಸ್ಯದ ಸುಖವನ್ನು ಕೊಡುವದಲ್ಲದೇ, ತಾನು ಜಗಿದ ತಾಂಬೂಲದ ರಸದ ಗುಟುಕನ್ನು ಶರೀಫರ ಬಾಯಿಯಲ್ಲಿ ಅಕ್ಕರತೆಯಿಂದ ಇಡುತ್ತಿದ್ದಾನೆ.
ಅಂದರೆ ಪರಮಾತ್ಮನು ಪ್ರೇಮವನ್ನಲ್ಲದೆ, ಪೋಷಣೆಯನ್ನೂ(=ಜ್ಞಾನವನ್ನೂ) ಸಹ ನೀಡುವನು.
ಅಕ್ಕರತಿಯಿಂದ ಎನ್ನುವ ವಿಶೇಷಣವನ್ನು ಗಮನಿಸಿರಿ.
ಇದು ಗಂಡ ಹೆಂಡತಿಯ ಪ್ರೇಮಕ್ಕಿಂತ ಹೆಚ್ಚಾಗಿ ಪೋಷಕ-ಪೋಷಿತ ಭಾವವನ್ನು ತೋರಿಸುವದು.
ಆದುದರಿಂದ ಶರೀಫರು ಪರಮಾತ್ಮನಿಗೆ ‘ಬಹು ಸುಗುಣನೀತಾ’ ಎಂದು ಕರೆದಿದ್ದಾರೆ.

ಹೆಂಡತಿಗೆ ಅಚ್ಛಚ್ಛೆ ಮಾಡಿದರೆ ಸಾಕೆ?
ಈ ಚಿಕ್ಕ ಹುಡುಗಿಗೆ ಒಳ್ಳೆಯ ರೀತಿಯಲ್ಲಿ ಬದುಕು ಮಾಡುವದನ್ನು ಕಲಿಸಬೇಡವೆ?
ಪರಮಾತ್ಮನು ಶರೀಫರು ಎನ್ನುವ ತನ್ನ ಹೊಸ ವಧುವಿಗೆ ಯಾವ ರೀತಿಯಲ್ಲಿ ಶಿಕ್ಷಣ ನೀಡಿದನೆನ್ನುವದನ್ನು ನೋಡಿರಿ:

ತುಂಟನಿವ ಸೊಂಟಮುರಿ ಹೊಡೆದಾ
ಒಣ ಪಂಟುಮಾತಿನ
ಗಂಟಗಳ್ಳರ ಮನೆಗೆ ಬರಗೊಡದಾ
ಹದಿನೆಂಟು ಮಂದಿ
ಕುಂಟಲಿಯರ ಹಾದಿಯನು ಕಡಿದಾ
ಎನ್ನ ಕರವ ಪಿಡಿದಾ
ಕುಂಟಕುರುಡಾರೆಂಟು ಮಂದಿ
ಗಂಟು ಬಿದ್ದರೆ ಅವರ ಕಾಣುತ
ಗಂಟಲಕೆ ಗಾಣಾದನೇಳಕ್ಕಾ
ತಕ್ಕವನೆ ಸಿಕ್ಕಾ ||

ಪರಮಾತ್ಮನೇನೊ ಈ ಚಿಕ್ಕ ಹೆಂಡತಿಗೆ ಮನೆಯ ಮಾಡಿ ಕೊಟ್ಟ.
ಗಂಡನಿಲ್ಲದ ವೇಳೆ ಈಕೆ ಮನೆಯ ಹೊರಗೆ ಹೋಗಬಹುದಲ್ಲವೆ?
ಸರಿ, ಹೊರಗೆ ಹೋಗದಂತೆ ಅವಳ ಸೊಂಟವನ್ನೆ ಮುರಿದು ಬಿಟ್ಟ.
ಅವಳು ಹೋಗದಿದ್ದರೇನು?
ಅವಳನ್ನು ಭೆಟ್ಟಿಯಾಗಲು, ಸಮಯಸಾಧಕರು ಮನೆಯ ಒಳಗೆ ಬರಬಹುದಲ್ಲವೆ?
ಅದುದರಿಂದ ಈ ಚಿಕ್ಕ ಹುಡುಗಿಯ ಎದುರಿಗೆ ಪಂಟು ಮಾತನ್ನಾಡಿ(=bogus talk) ಇವಳನ್ನು ಹಾದಿ ತಪ್ಪಿಸುವವರು ಬರದಂತೆ ಆತ ವ್ಯವಸ್ಥೆ ಮಾಡಿದ.
(ಅಂದರೆ ಕ್ಷುದ್ರಸಾಧನೆಗಳು ಸಿಗದಂತೆ ಮಾಡಿದ.)
ಅದರಂತೆ ಗಂಟುಗಳ್ಳರು ಮನೆಗೆ ಬರದಂತೆ ಮಾಡಿದ.
ಈ ಚಿಕ್ಕ ಹುಡುಗಿ ತನ್ನ ಸಾಧನೆಯ ಮೂಲಕ ಒಂದಿಷ್ಟು ದುಡ್ಡನ್ನು (=ಸಾಧನಾಫಲವನ್ನು) ಜತನ ಮಾಡಿ ಇಟ್ಟುಕೊಂಡಿದ್ದಾಳೆ.
ಇವಳಿಗೆ ಏನೇನೊ ಕೊಡಿಸುವ ಆಸೆ ಹುಟ್ಟಿಸಿ, ಇವಳು ಕೂಡಿಸಿಟ್ಟುಕೊಂಡ ದುಡ್ಡನ್ನು ಹೊಡೆಯುವ ಗಂಟುಗಳ್ಳರು ದೂರವಿರುವಂತೆ ಆತ ವ್ಯವಸ್ಥೆ ಮಾಡಿದ.
ಈ ಪಂಟು ಮಾತಿನವರು ಹಾಗೂ ಗಂಟುಗಳ್ಳರು ಸಣ್ಣಪುಟ್ಟ ಕಳ್ಳರು.
ಆದರೆ ೧೮ ಜನ ಕುಂಟಲಗಿತ್ತಿಯರು (ಅಂದರೆ ಗಿರಾಕಿಗಳನ್ನು ಹೊಂದಿಸಿಕೊಡುವ pimp ಹೆಂಗಸರು) ಗಂಟು ಬಿದ್ದರೆ ಏನು ಮಾಡುವದು?

(ಟಿಪ್ಪಣಿ:
ಶ್ರೀಚಕ್ರಕ್ಕೆ ೯ ಆವರಣಗಳಿವೆ. ಮೊದಲನೆಯ ಆವರಣದಲ್ಲಿ ಅಂದರೆ ಭೂಪುರದಲ್ಲಿ ಅಣಿಮಾ, ಲಘಿಮಾ ಮೊದಲಾದ ೧೮ ಸಿದ್ಧಿಗಳು ಇರುತ್ತವೆ. ಈ ಚಕ್ರದಲ್ಲಿ ಸಿದ್ಧಿ ಪಡೆದವನಿಗೆ ಅಣಿಮಾ ಅಂದರೆ ಅತಿ ಸೂಕ್ಷ್ಮವಾಗುವ, ಲಘಿಮಾ ಅಂದರೆ ಭಾರವಿಲ್ಲದಂತಾಗುವ ಮೊದಲಾದ ಸಿದ್ಧಿಗಳು ಸಾಧಿಸುತ್ತವೆ.
ಈ ಸಿದ್ಧಿಗಳಲ್ಲಿಯೇ ಮೋಜು ಅನುಭವಿಸುತ್ತ ಕುಳಿತರೆ, ಮುಂದಿನ ಸಾಧನೆಗೆ ವ್ಯತ್ಯಯವಾಗುವದು.
ಈ ಸಿದ್ಧಿಗಳನ್ನು ಶರೀಫರು ಕುಂಟಲಗಿತ್ತಿಯರು ಎಂದು ಕರೆಯುತ್ತಾರೆ.
ಈ ಸಿದ್ಧಿಗಳು ಸಾಧಕನ ಮನಸ್ಸನ್ನು ಪರಮಾತ್ಮನಿಂದ ಬೇರೆಡೆಗೆ ಸೆಳೆಯುವವು.)

ಆದುದರಿಂದ ಈ ಸಿದ್ಧಿಗಳು ಶರೀಫರಿಗೆ ಲಭಿಸದಂತೆ ಮಾಡಿ, ಪರಮಾತ್ಮನು ತನ್ನ ಚಿಕ್ಕ ಪತ್ನಿಯಾದ ಶರೀಫರನ್ನು ರಕ್ಷಿಸಿದ.
ಅದಕ್ಕಾಗಿಯೇ ಶರೀಫರು “ಎನ್ನ ಕರವ ಪಿಡಿದಾ” ಎಂದು ಪ್ರೀತಿಯಿಂದ ಪರಮಾತ್ಮನನ್ನು ನೆನಸುತ್ತಾರೆ.
ಆತ ಇವಳ ಕರ ಪಿಡಿದದ್ದು ಇವಳಿಗೆ ಅವಲಂಬನ ಕೊಟ್ಟು ಇವಳನ್ನು ಮುನ್ನಡೆಸಲಿಕ್ಕಾಗಿ.

ಈ ಎಲ್ಲ ಸಿದ್ಧಿಗಳು ಸ್ವತಃ ಕುಂಟ ಹಾಗೂ ಕುರುಡರಿದ್ದಂತೆ.
ಅವು ಸಾಧಕನನ್ನು ಸಾಧನೆಯ ಮಾರ್ಗದಲ್ಲಿ ನಡೆಸಲಾರವು.
ಆದುದರಿಂದ ಈ ಸಿದ್ಧಿಗಳಿಗೆ ಆತ ಗಂಟಲಗಾಣನಾದ.
ಅಂದ ಮೇಲೆ, ಶರೀಫರಿಗೆ ತನ್ನ ಗಂಡನ ಮೇಲೆ ಅಭಿಮಾನಪೂರ್ವಕ ಪ್ರೇಮ ಉಕ್ಕದಿದ್ದೀತೆ?
ಆ ಸಂತೋಷ ಭಾವದಲ್ಲಿಯೇ ಶರೀಫರು ಹಾಡುತ್ತಾರೆ:
“ತಕ್ಕವನೆ ಸಿಕ್ಕಾ” !

ತವರು ಮನೆಯನ್ನು ಬಿಡಿಸಿ, ಅತ್ತೆಯ ಮನೆಗೆ ಕರೆತಂದ ಈ ಗಂಡ ಈಗ ಅತ್ತೆಮಾವರ ಮನೆಯನ್ನೂ ಸಹ ಬಿಡಿಸುತ್ತಿದ್ದಾನೆ.

ಅತ್ತೆಮಾವರ ಮನೆಯ ಬಿಡಿಸಿದನೇ
ಮತ್ತೆಲ್ಲಿ ಮೂವರ
ಮಕ್ಕಳೈವರು ಮಮತೆಯ ಕೆಡಿಸಿದನೇ

ತವರುಮನೆಯೆಂದರೆ ವಿಷಯ ಸುಖಗಳ ಮನೆಯಾಯಿತು. ಈ ಅತ್ತೆಮಾವರ ಮನೆ ಯಾವುದು?
ಸತ್ ಹಾಗೂ ಅಸತ್ ಇವು ದೇವರ ಎರಡು ಸೃಷ್ಟಿಗಳು. ಅಸತ್ ಅಂದರೆ unreal. ಸತ್ ಅಂದರೆ real.
ಅಸತ್ ಅಥವಾ unreal ಸೃಷ್ಟಿಯು ಕಾಲಮಿತಿಗೆ ಒಳಪಟ್ಟದ್ದು.

“ನಾನು ಕೆಲ ವರ್ಷಗಳ ಹಿಂದೆ ಚಿಕ್ಕ ಹುಡುಗನಾಗಿದ್ದೆ. ಆದರೆ ಈಗ ನಾನು ಚಿಕ್ಕ ಹುಡುಗನಲ್ಲ.”
ಆದುದರಿಂದ ನಾನು ಹುಡುಗ ಎನ್ನುವದು ಕಾಲಮಿತಿಗೆ ಒಳಪಟ್ಟ reality.ನಾನು ಸತ್ತೂ ಹೋಗುವೆ.
ಆದುದರಿಂದ ಈ ದೇಹವು ಕಾಲಮಿತಿಗೆ ಒಳಪಟ್ಟ reality. ಇದು ಅಸತ್ ಸೃಷ್ಟಿ.

ಆದರೆ ಆತ್ಮ ಎನ್ನುವದು ಯಾವಾಗಲೂ ಇರುವಂತಹದು.
ಆದುದರಿಂದ ಅದು ಸತ್ ಸೃಷ್ಟಿ.
ಆತ್ಮನಿಗೆ ಪುರುಷ ಎನ್ನುತ್ತಾರೆ.
(ಪುರುಷ ಅಂದರೆ ಗಂಡಸು ಅನ್ನುವ ಅರ್ಥ ಇಲ್ಲಿಲ್ಲ. ಪುರುಷ ಅಂದರೆ ಉಪಭೋಕ್ತಾ ಆತ್ಮ.)
ಪ್ರಕೃತಿ ಅಂದರೆ ಬದಲಾಗುತ್ತಿರುವ ಅಸತ್ ಸೃಷ್ಟಿ.
ಅಸತ್ ಸೃಷ್ಟಿಯು ಈ ಜೀವಿ ಇಳಿದು ಬಂದಿರುವ ತವರುಮನೆ.
ಅಲ್ಲಿಂದ ಈ ಜೀವಿ ದೈವಿ ಭಾವವೇ ನಿತ್ಯವಾಗಿರುವ ಸತ್ ಸೃಷ್ಟಿಗೆ ಪ್ರವೇಶಿಸುತ್ತದೆ.
ಈ ಸೃಷ್ಟಿಯು ಸತ್ ಸೃಷ್ಟಿಯೇ ಆಗಿರಲಿ, ನಿತ್ಯ ಸೃಷ್ಟಿಯೇ ಆಗಿರಲಿ, ಆದರೆ ಇದೂ ಸಹ ಆತ್ಮನ ಕೊನೆಯ ನಿಲ್ದಾಣ ಅಲ್ಲ.
ಪರಮಾತ್ಮನೊಳಗೆ ಒಂದಾಗುವದೇ ಜೀವಾತ್ಮನ ಕೊನೆಯ ಗತಿ.
ಆದುದರಿಂದ ಆತ ಜೀವಾತ್ಮನ ಮೂರು ವಾಸನಾಶರೀರಗಳಾದ ಸ್ಥೂಲ, ಸೂಕ್ಷ್ಮ ಹಾಗೂ ಕಾರಣ ಶರೀರಗಳನ್ನು ನಾಶ ಪಡಿಸುತ್ತಾನೆ. ಆ ಶರೀರಗಳ ಸಂಯೋಜಕರಾದ ಐದು ಕೋಶಗಳನ್ನು (ಅನ್ನಮಯ ಕೋಶ, ಪ್ರಾಣಮಯ ಕೋಶ, ಜ್ಞಾನಮಯ ಕೋಶ, ವಿಜ್ಞಾನಮಯ ಕೋಶ, ಆನಂದಮಯ ಕೋಶಗಳನ್ನು) ದೂರಪಡಿಸುತ್ತಾನೆ. ಬಳಿಕ ತನ್ನ ಭಕ್ತನನ್ನು ವಿದೇಹಿಯನ್ನಾಗಿ ಮಾಡಿ ತನ್ನ ಸಾನ್ನಿಧ್ಯಕ್ಕೆ ಕರೆದೊಯ್ಯುತ್ತಾನೆ.
ಅಲ್ಲಿ ದೇಹನಾಶವಾಗಿ ಕೇವಲ ಭಾವ ಮಾತ್ರ ಉಳಿದುಕೊಳ್ಳುತ್ತದೆ.
ಅದನ್ನು ಶರೀಫರು ಹೀಗೆ ವರ್ಣಿಸುತ್ತಾರೆ:

ಎನ್ನನು ತಂದು
ರತ್ನಜ್ಯೋತಿಯ ಪ್ರಭೆಯೊಳಿರಿಸಿದನೇ
ಎನಗೊತ್ತಿನವನು
ಎತ್ತ ಹೋಗದೆ ಚಿತ್ತವಗಲದೆ
ಗೊತ್ತಿನಲಿ ಇಟ್ಟು ಎನ್ನನು
ಮುತ್ತಿನಾ ಮೂಗುತಿಯ ಕೊಟ್ಟಾನೇ
ಅವನೇನು ದಿಟ್ಟನೇ ||

ಶಿವನು ಪ್ರಭೆಯ ಮೂಲ; ಶಕ್ತಿಯೇ ಪ್ರಭೆ.
ಪರಮಾತ್ಮನು ಶರೀಫರನ್ನು ಈಗ ಸತ್ ಲೋಕದಿಂದ ಮೇಲಕ್ಕೆ ಎತ್ತಿ ಪ್ರಭಾಲೋಕದಲ್ಲಿ ಇರಿಸುತ್ತಾನೆ.
ಈ ಲೋಕದಲ್ಲಿ ಪರಮಾತ್ಮನು ಶರೀಫರಿಗೆ ‘ಎನಗೊತ್ತಿನವನು’.
‘ಎನಗೊತ್ತಿನವನು’ ಎನ್ನುವ ಪದ ಅತ್ಯಂತ ಅನ್ಯೋನ್ಯತೆಯನ್ನು ಹಾಗು ವಿಶ್ವಾಸವನ್ನು ಸೂಚಿಸುವ ಪದ.
ಈ ಪದವು ಎನಗೆ ಗೊತ್ತಿನವನು ಹಾಗೂ ಎನಗೆ ಒತ್ತಿನವನು ಎನ್ನುವ ಎರಡೂ ಅರ್ಥಗಳನ್ನು ಸೂಚಿಸುತ್ತದೆ. ಎನಗೆ ಗೊತ್ತಿನವನು ಅಂದರೆ ನಾನು ಅವನನ್ನು ಸಂಪೂರ್ಣವಾಗಿ ಬಲ್ಲೆ ಎಂದು ಹೇಳಿದಂತೆ. ಎನಗೆ ಒತ್ತಿನವನು ಎಂದರೆ ನನಗೆ ಅತ್ಯಂತ ಹತ್ತಿರವಾದವನು ಎಂದು ಹೇಳಿದಂತೆ.

ಈ ಪ್ರಭಾಲೋಕದಲ್ಲಿ ಶರೀಫರ ಮನಸ್ಸು ಬೇರೆಲ್ಲೂ ಹೋಗದು; ಪರಮಾತ್ಮನನ್ನು ಒಂದು ಗಳಿಗೆ ಸಹ ಅಗಲಿ ಇರದು. ಪರಮಾತ್ಮನು ಶರೀಫರನ್ನು ತನ್ನ ಸಾನ್ನಿಧ್ಯದಲ್ಲಿಯೆ (=ಗೊತ್ತಿನಲ್ಲಿಯೆ) ಇಟ್ಟುಕೊಂಡು, ಅವರಿಗೆ ಮುತ್ತಿನ ಮೂಗುತಿಯ ಕೊಟ್ಟನು. ಅಂದರೆ ಶರೀಫರು ಈಗ ಪರಮ ಪತಿವ್ರತೆ ಎಂದು ಹೇಳಿದಂತಾಯಿತು.ತನ್ನನ್ನು ಇಷ್ಟೆಲ್ಲ ತಿದ್ದಿ ಇಂತಹ ಪತಿವ್ರತೆ ಹೆಂಡತಿಯನ್ನಾಗಿ ಮಾಡಿಕೊಂಡ ಪರಮಾತ್ಮನನ್ನು ಶರೀಫರು ‘ಅವನೇನು ದಿಟ್ಟನೇ’ ಎಂದು ಬಣ್ಣಿಸುತ್ತಾರೆ

ಶರೀಫರು ಈ ಪದವಿಯನ್ನು ಪಡೆಯುವ ಯೋಗ್ಯತೆಯುಳ್ಳ ಇತರ ಭಕ್ತರನ್ನು, ತನ್ನ ಸಖಿಯರೆಂದು ಗ್ರಹಿಸಿ ಹೀಗೆ
ಹೇಳುತ್ತಾರೆ:

ಕಾಂತೆ ಕೇಳೆ ಕರುಣ ಗುಣದಿಂದ
ಎನಗಿಂಥ ಪುರುಷನು
ಬಂದು ದೊರಕಿದ ಪುಣ್ಯಫಲದಿಂದಾ
ಎನ್ನಂತರಂಗದ
ಕಾಂತ ಶ್ರೀ ಗುರುನಾಥ ಗೋವಿಂದಾ
ಶಿಶುನಾಳದಿಂದ
ಕಾಂತೆ ಬಾರೆಂತೆಂದು ಕರೆದೇ-
ಕಾಂತ ಮಂದಿರದೊಳಗೆ ಒಯ್ದು
ಭ್ರಾಂತಿ ಭವ ದುರಿತವನು ಪರಿಹರಿಸಿ
ಚಿಂತೆಯನು ಮರಸಿ ||

ತಮ್ಮ ಈ ಸಿದ್ಧಿಗೆ ತಮ್ಮ ಪೂರ್ವಪುಣ್ಯವು ಎಷ್ಟು ಕಾರಣವೋ, ಪರಮಾತ್ಮನ ಕರುಣೆಯೂ ಅಷ್ಟೇ ಕಾರಣವೆಂದು
ಶರೀಫರು ಹೇಳುತ್ತಾರೆ.
ಪರಮಾತ್ಮ ಬೇರೆ ಅಲ್ಲ, ಸದ್ಗುರು ಬೇರೆ ಅಲ್ಲ.
ಆತ ಕಾಲ ಕೂಡಿದಾಗ, ಭಕ್ತನನ್ನು ತಾನಾಗಿಯೇ ಏಕಾಂತ ಮಂದಿರದಲ್ಲಿ ಕರೆದೊಯ್ದು (---ಗುರುವು ಉಪದೇಶವನ್ನು ಏಕಾಂತದಲ್ಲಿ ಕೊಡುತ್ತಾನೆ---) ಸದ್ಗತಿಗೆ ಹಚ್ಚುತ್ತಾನೆ.
ಅದರಿಂದಾಗಿ ಭಕ್ತನ ಭ್ರಾಂತಿ ಹಾಗೂ ಈ ಜಗದ ದುರಿತ ಪರಿಹಾರವಾಗುತ್ತವೆ.
ಸದ್ಗತಿಯನ್ನು ಹೇಗೆ ಪಡೆದೇನು ಎನ್ನುವ ಭಕ್ತನ ಚಿಂತೆ ಮಾಯವಾಗುತ್ತದೆ.
…………………………………………………………………………………
ಕನ್ನಡ ನಾಡಿನಲ್ಲಿ ಓಡಾಡಿ, ಹಳ್ಳಿಯ ಕನ್ನಡದಲ್ಲಿಯೆ ಮಹತ್ತತ್ವ ಸಾರಿದ ಶರೀಫರ ಬೋಧನೆ ನಮ್ಮನ್ನೂ ಸದ್ಗತಿಗೆ ಹಚ್ಚಲಿ.

(ಟಿಪ್ಪಣಿ:
ಖ್ಯಾತ ಓಡಿಸ್ಸಿ ನರ್ತನ ವಿದುಷಿಯಾದ ಸಂಯುಕ್ತಾ ಪಾಣಿಗ್ರಾಹಿಯವರು ಬೆಂಗಳೂರಿನಲ್ಲಿ ಕೇಳಿದ ಒಂದು ಪ್ರಶ್ನೆಯನ್ನು ಇಲ್ಲಿ ಉದ್ಧರಿಸುವದು ಅಪ್ರಸ್ತುತವಾಗಲಾರದು:
“ ಎಲ್ಲಾ ಕಲೆಗಳಲ್ಲಿ ಪರಮಾತ್ಮನನ್ನು ಪತಿಗೆ ಹಾಗೂ ಭಕ್ತನನ್ನು ಸತಿಗೆ ಏಕೆ ಹೋಲಿಸುತ್ತಾರೆ; ಪರಮಾತ್ಮನನ್ನು ಪತ್ನಿಗೆ ಹಾಗೂ ಭಕ್ತನನ್ನು ಪತಿಗೆ ಏಕೆ ಹೋಲಿಸಬಾರದು? ”

ಇದಕ್ಕೆ ಉತ್ತರ ಸ್ಪಷ್ಟವಿದೆ:
ದುರ್ದೈವದಿಂದ ನಮ್ಮದು ಪುರುಷ ಪ್ರಧಾನ ಸಮಾಜ ಹಾಗೂ ಪಿತೃಪ್ರಧಾನ ಕುಟುಂಬ ವ್ಯವಸ್ಥೆ.
ಇಂತಹ ಸಮಾಜವ್ಯವಸ್ಥೆಯಲ್ಲಿ, ಗಂಡಸಿನದು super ordinate ಸ್ಥಾನ ಹಾಗೂ ಹೆಣ್ಣಿನದು
sub ordinate ಸ್ಥಾನ.
ಸಂಸ್ಕೃತದಲ್ಲಿ ಪತ್ನಿಗೆ ‘ಭಾರ್ಯಾ’ ಹಾಗೂ ಪತಿಗೆ ‘ಭರ್ತಾ’ ಎನ್ನುವ ಪದಗಳಿರುವದನ್ನು ಗಮನಿಸಿರಿ.
‘ಭಾರ’ ಅಂದರೆ load, ಒಜ್ಜೆ.
ಭರ್ತಾ ಅಂದರೆ ಒಜ್ಜೆ ಹೊರುವವನು. ಭಾರ್ಯಾ ಅಂದರೆ ಹೊರಬೇಕಾದ ಒಜ್ಜೆ.
ಸುಮಾರು ಎರಡು ಶತಮಾನಗಳ ಹಿಂದಿನ ಇಂತಹ ಒಂದು ಸಾಂಪ್ರದಾಯಕ ಸಮಾಜದಲ್ಲಿ ಬಾಳಿದ ಸಂತರು, ಆ ಸಮಾಜದ ಗುಣ,ಲಕ್ಷಣಗಳನ್ನು ಅಳವಡಿಸಿಕೊಂಡಿರುವ ಕವಿಗಳು, ಭಗವಂತನನ್ನು ಭರ್ತಾ(=ಪಾಲಕ) ಎಂದು ತಿಳಿದವರು, ತಮ್ಮನ್ನು ಭಾರ್ಯಾ ಎಂದೇ ಭಾವಿಸಬೇಕಲ್ಲವೆ?

ಭಾರತದಲ್ಲಿ ಮಾತ್ರ ಇಂತಹ conservative society ಇತ್ತು ಎಂದೇನಲ್ಲ.
ಸುಮಾರು ನೂರು ವರ್ಷಗಳ ಹಿಂದಿನ ಇಂಗ್ಲಿಶ್ ಲೇಖಕಿಯರನ್ನೇ ಗಮನಿಸಿರಿ.
ಅವರೆಲ್ಲರೂ male supremacyಯನ್ನು ಮನಃಪೂರ್ವಕವಾಗಿ ಒಪ್ಪಿಕೊಂಡವರೇ!
ಉದಾಹರಣೆಗೆ ಹೇಳಬೇಕೆಂದರೆ ಸುಪ್ರಸಿದ್ಧ ಇಂಗ್ಲಿಶ್ ಲೇಖಕಿಯಾದ Daphne du Maurier.
ಇವಳು ಬರೆದ Frenchman’s Creek ಕಾದಂಬರಿಯು ಈ ಧೋರಣೆಯ ಜ್ವಲಂತ ಉದಾಹರಣೆಯಾಗಿದೆ.

ಇಂತಹ ಒಂದು ಪರಿಸ್ಥಿತಿಗೆ ಕಾರಣವೇನು?
ಗಂಡಸು ಹೆಂಗಸಿಗೆ ಯಾವತ್ತು ಬಳೆ(=ಬೇಡಿ) ತೊಡಿಸಿದನೊ, ಆ ದಿನದಿಂದ ಹೆಂಗಸರ social conditioning ಪ್ರಾರಂಭವಾಯಿತು.
ಸೆರೆಯಾಳುಗಳು ತಮ್ಮನ್ನು ಸೆರೆ ಹಿಡಿದವರನ್ನೇ ಆರಾಧಿಸುವ Stockholm Complexಗೆ ಹೆಂಗಸರು ಬಲಿಯಾದರು.

ಈ ಲಕ್ಷಣವನ್ನು ಮೈಗೂಡಿಸಿಕೊಂಡಂತಹ ಒಂದು ಕಾದಂಬರಿ: Frenchman’s Creek;
ಈ ಸಾಮಾಜಿಕ ಲಕ್ಷಣವನ್ನು ಪ್ರದರ್ಶಿಸುವಂತಹ ಆಧ್ಯಾತ್ಮಿಕ ಕವನ: ಎಲ್ಲರಂಥವನಲ್ಲ ನನ ಗಂಡ.

38 comments:

Anonymous said...

ನಿಮ್ಮ ಬರವಣಿಗೆಯನ್ನು ಹೊಗಳಿದರೆ ನಿಮ್ಮ ಪ್ರತಿಭೆ ಮಸುಕಾಗಬಹುದೆಂಬ ಭಯದಿಂದ ಹೊಗಳಬಾರದೆಂದು ಮಾಡಿದ್ದೆ ! ಆದರೇನು ಮಾಡಲಿ ? ನೀವು ಅದಕ್ಕೆ ಅವಕಾಶವನ್ನೇ ಕೊಡುವದಿಲ್ಲ ! ನಿಜವಾಗಿಯೂ ಅದ್ಭುತ !! ಈ ಪದ್ಯವನ್ನು ಹತ್ತಾರು ಸಲ ಓದಿದ್ದೇನೆ ; ನೂರಾರು ಸಲ ಕೇಳಿದ್ದೇನೆ. ಇಷ್ಟು ಆಳವಾಗಿ ತಿಳಿದುಕೊಂಡಿರಲಿಲ್ಲ. ಹಿಂಜಿ-ಹಿಂಜಿ ಅರ್ಥೈಸಿದ್ದೀರಿ.

ಭಕ್ತಿ ಪಂಥ, ಶಾಕ್ತ ಪಂಥ ಒಂದಕ್ಕೊಂದು ವಿರುದ್ಧವಾದ ಪಂಥಗಳು. ದೇವನೂರಿನ ಹಾದಿ ಹಲವಿರಬಹುದು !! ಆದರೆ ನಡೆಯುವ ದಾರಿ ಒಂದು ಮಾತ್ರ. ಭಕ್ತ ಆಯ್ಕೆ ಮಾಡುವದು ಒಂದೇ ದಾರಿ. ಎರಡೂ ಮಾರ್ಗಗಳಲ್ಲಿ ನಡೆಯಲಾರನಲ್ಲವೆ ? ಆದ್ದರಿಂದ ಶರೀಫರು ಭಕ್ತಿಮಾರ್ಗದ ಸಂತರು. ಶಾಕ್ತರಲ್ಲ ಎಂದೇ ನನ್ನ ಅಭಿಪ್ರಾಯ ಮತ್ತು ನಂಬಿಕೆ.

sunaath said...

ಕಟ್ಟಿಯವರೆ,
ನಿಮ್ಮ ಪ್ರೀತಿಯ ಕಣ್ಣಿಗೆ ನನ್ನಲ್ಲಿಲ್ಲದ ಪ್ರತಿಭೆ ದೊಡ್ಡದಾಗಿ ಕಾಣುತ್ತಿದೆ ಅಷ್ಟೆ!ನಿಮಗೆ ನನ್ನ ನಮ್ರ ಧನ್ಯವಾದಗಳು.

ಶರೀಫರು ಭಕ್ತಿಪಂಥವನ್ನೇ ಅನುಸರಿಸಿದವರು. ಅದು ನಿಸ್ಸಂಶಯ. ಆದರೆ ಗೋವಿಂದ ಭಟ್ಟರು initially ಇವರಿಗೆ ಶಾಕ್ತ ಮಾರ್ಗದಲ್ಲಿ ದೀಕ್ಷೆ ನೀಡಿದ್ದಾರೆ.

Anonymous said...

ಸುನಾಥರೆ ನಿಮ್ಮ ವಿವರಣೆ ತುಂಬಾ ಹಿಡಿಸಿತು. ಶರೀಫರೇ ನಿಮ್ಮಿಂದ ಬರಿಸಿದಂತೆ ಭಾಸವಾಗುತ್ತದೆ.

--ಕರುಣಾ

NilGiri said...

ಓಹ್! ಈ ಹಾಡಿನ ಎಲ್ಲಾ ಸಾಲುಗಳು ನನಗೇ ಗೊತ್ತಿರಲೇ ಇಲ್ಲ! ಅರ್ಥವಂತೂ ಮೊದಲೇ ಗೊತ್ತಿರಲಿಲ್ಲ! ಎಲ್ಲವನ್ನೂ ಬಿಡಿಸಿ ವಿವರಿಸಿದ ಕಾಕಾ ನಿಮಗೆ ಎಷ್ಟು ಅಭಿನಂದಿಸಿದರೂ ಸಾಲದು. Thanks...Thanks.

sunaath said...

ಕರುಣಾ,
ಧನ್ಯವಾದಗಳು.

sunaath said...

ಗಿರಿಜಾ,
ನಿನ್ನ ಥ್ಯಾಂಕ್ಸ್ ಅನ್ನು ಶರೀಫರಿಗೇ ರವಾನಿಸುತ್ತಿದ್ದೇನೆ.
-ಕಾಕಾ

ಚಂದ್ರಕಾಂತ ಎಸ್ said...

ನಮಸ್ತೆ.

ನಿಮ್ಮ ಬ್ಲಾಗ್ ಗೆ ನನ್ನ ಮೊದಲ ಭೇಟಿ. ಶರೀಫರ ಬಗ್ಗೆ ನಿಮಗಿರುವ ಆಳವಾದ ಜ್ಞಾನ ದಂಗುಬಡಿಸುವಂತದ್ದು.ನಿಮ್ಮ ಈಬ್ಲಾಗ್ ನಲ್ಲಿ ನಾನಿನ್ನೂ ಓದಬೇಕಿರುವುದು ಬೇಕಾದಷ್ಟಿದೆ.ಸಧ್ಯಕ್ಕೆ ಬೇಂದ್ರೆಯವರ ಚಿಗರಿಗಂಗಳ ಚೆಲುವಿ ಓದಿ ಮುಗಿಸಿದೆ. ಕವನದ ಪ್ರತಿಯೊಂದು ಸೂಕ್ಷ್ಮವನ್ನೂ ಬಹಳ ಚೆಲ್=ನ್ನಾಗಿ ವಿಶ್ಲೇಷಿಸಿದ್ದೀರಿ. ಬೇಮ್ದ್ರೆಯವರ ಕವನಗಳಲ್ಲಿ ಒಂದು ಪದವೂ ಅನವಶ್ಯಕವಾಗಿ ಬಂದಿರುವುದಿಲ್ಲ.ಅವೆಲ್ಲವನ್ನೂ ನೀವು ಬಹಳ ಚೆನ್ನಾಗಿ ವಿವರಿಸಿದ್ದೀರಿ.

ನೀವಿ ಶರೀಫರ ’ ಗಿರಣಿ ವಿಸ್ತಾರ...’ ಮತ್ತು ’ ಬಿದ್ದೀಯಬ್ಬೇ ಮುದುಕಿ.." ಪದಗಳನ್ನು ವಿಶ್ಲೇಷಿದುವುದನ್ನು ಓದಬೇಕೆನಿಸುತ್ತದೆ. ವಸಾಹತುಶಾಹಿಯ ಆಕ್ರಮಣದ ಬಗ್ಗೆ ಇವರ ಅಭಿಪ್ರಾಯಗಳನ್ನು ತಾವು ಹೇಗೆ ವಿವರಿಸುತ್ತೀರಿ.

sunaath said...

ಚಂದ್ರಕಾಂತ,
ನಮಸ್ತೆ!
ಶರೀಫರ ಬಗೆಗಿನ ನನ್ನ ಮಾಹಿತಿ ಬಹಳ ಏನಲ್ಲ.
ನೀವು ಬಯಸಿದ ಪದಗಳನ್ನು ಅಭ್ಯಸಿಸಿ, ಬರೆಯಲು ಪ್ರಯತ್ನಿಸುತ್ತೇನೆ.

Keshav.Kulkarni said...

ಸುನಾಥವರೇ,
ಶರೀಫರ ಈ ಪದ ಭಾಳ ಛಂದ ಬಿಡಿಸಿ ಹೇಳಿದ್ರಪಾ. ನೀವs ನಮ್ ಮುಂದ ಕುಂತಗೊಂಡು ಹಿಂಜಿ ಹಿಂಜಿ ಹೇಳಿಧಂಗ ಆತ್ರಿ. ನಿಮ್ಮ ಶ್ರಮ, ನಮಗ ಆರಾಮ.
-ಕೇಶವ

sunaath said...

ಕೇಶವ,
ಎಲ್ಲಾರೂ ಒಂದು ಕಡೆ ಕುಂತಗೊಂಡು ಶರೀಫರ ಬಗ್ಗೆ ಹರಟಿ ಹೊಡಿಯೋದ್ರಾಗ ಮಜಾ ಇರ್ತದಲ್ರೀ!

Anonymous said...

great work!
ನೀವೂ ಕೂಡ ಭಾರ ಹೊರುವುದರಲ್ಲಿ ನಿಸ್ಸೀಮರೇ.
ಇಂಥದೊಂದು ಅಪೂರ್ವ ಒಳನೋಟದ ಹಾಡನ್ನು
ಈ ಪರಿ ವಿಶ್ಲೇಷಿಸುವದೆಂದರೆ ಸುಮ್ನೇನಾ..!
-ರಾಘವೇಂದ್ರ ಜೋಶಿ

Anonymous said...

ಶರೀಫ ಅಂಥವರನ್ನ, ದಾಸರನ್ನ ಓದು ಬುದ್ಧಿ ಹಂಗ ಬರಂಗಿಲ್ಲ.....ಅದಕ ಹಿಂದಿನ ಜನ್ಮದ ಪುಣ್ಯಾ .....ಈ ಜನ್ಮದ ಕರ್ಮ ....ಬೇಕ್ರಿ....ಮತ್ತ ಬೇಡಿನೂ ಬಂದಿರಬೇಕು..... ಸುನಾಥರು ಪುಣ್ಯವಂತರು....

ಭಾರ್ಗವಿ said...

ಈ ಹಾಡು ಇಷ್ಟು ಅರ್ಥ ತುಂಬಿಕೊಂಡಿದೆ ಅಂತ ಗೊತ್ತೇ ಇರಲಿಲ್ಲ.ಈ ಮೊದಲು ಇಷ್ಟವಾಗಿದ್ದು ಮೊದಲ ೧ ಸಾಲು ಮಾತ್ರ , ತುಂಬಾ ಧನ್ಯವಾದಗಳು ಕಾಕಾ(ನಿಮ್ಮ ಅಭ್ಯಂತರವಿಲ್ಲ ಅಂದುಕೊಳ್ಳುತ್ತೇನೆ).

ತೇಜಸ್ವಿನಿ ಹೆಗಡೆ said...

ಕಾಕಾ,

ಏನೂ ಹೇಳಲೂ ತೋಚುತ್ತಿಲ್ಲ.. ನಿಜವಾಗಿಯೂ ನಿಮ್ಮ ಈ ವಿಮರ್ಶೆಯಂತೂ ನನ್ನ ಬುದ್ಧಿಗೆ ನಿಲುಕದ್ದು. ಅರ್ಥವಾದಷ್ಟು ನನಗೆ, ಉಳಿದದ್ದು ಶರೀಫರಿಗೆ. ಅರ್ಥಮಾಡಿಸಿದ ನಿಮಗೆ ತುಂಬಾ ಧನ್ಯವಾದಗಳು.

ಚಂದ್ರಕಾಂತ ಎಸ್ said...

ನಾನು ಕೇಳಿದ ಶರೀಫರ ಪದಗಳಿಗೆ ಅಭ್ಯಾಸಮಾಡಿ ಬರೆಯಲು ಪ್ರಯತ್ನಿಸುವೆ ಎಂದಿದ್ದಕ್ಕೆ ವಂದನೆಗಳು.

ನಿಮಗೆ ಅನುಕೂಲವಾಗುವುದಾದರೆ ಆ ಪದಗಳ ಪೂರ್ಣ ಪಾಠವನ್ನು ನಿಮಗೆ ಕಳಿಸುವೆ.

sunaath said...

rj,
ಸಂಸಾರದೊಳಗ ಬಿದ್ದೇವಂದ ಮ್ಯಾಲ, ಭಾರ ಹೊರಲಿಕ್ಕೇ ಬೇಕಲ್ರೆಪಾ!

sunaath said...

ಪ್ರಹ್ಲಾದ,
Thanx a lot!

sunaath said...

ಭಾರ್ಗವಿ,
ನಾನು ಯಾವಾಗಿನಿಂದಲೂ ನಿನ್ನ ಕಾಕಾನs ಇದ್ದೇನಿ.
-ಸುನಾಥ ಕಾಕಾ

sunaath said...

ತೇಜಸ್ವಿನಿ,
ಪಸಂದ ಆತಲ್ಲೊ?
-ಕಾಕಾ

sunaath said...

ಚಂದ್ರಕಾಂತ,
Thanks.ಆದರ, ಹಾಡು ಇಲ್ಲೆ ಲಭ್ಯ ಅವ.

Unknown said...

ಸುನಾಥರೆ,
ಶರೀಫರು ಸಹಜ ಸ್ಫೂರ್ತಿಯಿಂದ ಹಾಡಿದ ಹಾಡುಗಳಿಗೆ ಇಷ್ಟೊಂದು ಆಳವಾದ ಆರ್ಥ ಇದೆಯೆ? ಓದಿ ಅಗಾಧ ಆಯಿತು.

Anonymous said...

ಹೀಗೆ ಒಂದು ಸಲ ಪುರಂದರದಾಸರು 4 ಲಕ್ಷಕ್ಕೂ ಮೀರಿ ಕವಿತೆ ರಚಿಸಿದ್ದಾರೆ ಎಂಬ ವಿಷಯದ ಕುರಿತು ಚರ್ಚೆ. ಮಿತ್ರರೊಬ್ಬರು "ಇದು ಸಾಧ್ಯವೇ ಇಲ್ಲ. ಉತ್ಪ್ರೇಕ್ಷೆ" ಎಂದು ಅಭಿಪ್ರಾಯ ಪಟ್ಟರು. ಇನ್ನೊಬ್ಬ ಮಿತ್ರರು " ನಮ್ಮ ಸಾಮರ್ಥ್ಯದ ಅಳವಿನಲ್ಲಿ ಪುರಂದರದಾಸರನ್ನು ಅಳೆಯುವದು ತಪ್ಪು.ದಿನಾಲೂ ಅವರ ಕಣ್ಣಿಗೆ ಕಂಡ ದೃಶ್ಯಗಳೆಲ್ಲವೂ ( ಡೊಂಕುಬಾಲದ ನಾಯಿ, ಕಲ್ಲುಸಕ್ಕರೆ,ಮನೆ, ಹೆಂಡತಿ, ಮಕ್ಕಳು, ದೇಗುಲ, ದಾರಿ, ಇನ್ನೂ ಅಸಂಖ್ಯ ಚರಾಚರ ವಸ್ತುಗಳು)ಅವರ ಕಣ್ಣಿಗೆ, ಮನಸ್ಸಿಗೆ, ಬುದ್ಧಿಗೆ ಕಾವ್ಯದ ಪ್ರತಿಮೆಯಾದಾಗ, 4 ಲಕ್ಷ ಯಾವ ಲೆಕ್ಕ"? ಎಂದು ವಾದಿಸಿದ್ದರು. ಹಾಗೆ ಶರೀಫರಿಗೆ, ಸಂತೆ, ಸಂತೆಯಲ್ಲಿಯ ಮುದುಕಿ, ಮನೆ, ಮನೆಯಮಾಳಿಗೆ,ಗಂಡ ಮುಂತಾದ ಎಲ್ಲವೂ ಅಧ್ಯಾತ್ಮದ ಪ್ರತಿಮೆಯಾದಾಗ ಸಾಧಾರಣ ಶಬ್ದಗಳಲ್ಲಿ ಗೂಡಾದ್ಗೂಢತರ ಕವಿತೆ ಬರೆದದ್ದು ಏನಾಶ್ಚರ್ಯ ?

ಆಲಾಪಿನಿ said...

ಅಂಕಲ್‌, ಶರೀಫ್ ಸಿರೀಸ್ ಮುಗಿದಮೇಲೆ ಅವರ ಸಮಕಾಲೀನರ ಬಗ್ಗೆ ನೀವ್ಯಾಕ ಬರಿಬಾರದು?

sunaath said...

ವನಮಾಲಾ,
ಆಳವಾದ ವ್ಯಕ್ತಿತ್ವವುಳ್ಳ ವ್ಯಕ್ತಿಗಳಿಂದ ಆಳವಾದ ಕವಿತೆ ಹೊರಬರುವದೇನಾಶ್ಚರ್ಯ?

sunaath said...

ಕಟ್ಟಿಯವರೆ,
You have put your finger on the point.

sunaath said...

ಶ್ರೀದೇವಿ,
ಶರೀಫ ಸೀರೀಜ್ ಮುಗಿಯುವದು ಸಾಧ್ಯವೆ?

shivu.k said...

ಸುನಾಥ್ ಸಾರ್,

ನಮ್ಮಂಥ ಯುವಕರ ಬರವಣಿಗೆ ಒಂದು ರೀತಿಯದಾದರೆ ನಿಮ್ಮ ಬರವಣಿಗೆಯ ತೂಕವೆ ಬೇರೆ ರೀತಿಯದು. ಶರೀಪರ ಪದಗಳ ಬಗ್ಗೆ, ಅವುಗಳ ಅರ್ಥಗಳ ಬಗ್ಗೆ, ನೀವು ನೀಡುವ ಮಾಹಿತಿಯ ಪರಿಯನ್ನು ಹೊಗಳಲು ನನ್ನಲ್ಲಿ ಪದಗಳಿಲ್ಲ. ಅದನ್ನು ನೀವು ಅರ್ಥೈಸಿಕೊಂಡಿರುವ ಬಗ್ಗೆ ಮಾತಾಡಲು ನಾನು ತುಂಬಾ ಚಿಕ್ಕವನೆನಿಸುತ್ತದೆ.

Anonymous said...

ಸಾರ್,
ಕಟ್ಟಿಯವರು ಮೇಲೆ ವಿವರಿಸಿದಂತೆ ಪುರಂದರದಾಸರ ಬಗ್ಗೆ
ನಿಮಗೆ ಬರೆಯಲಾದೀತಾ..?
ಪೂರ್ವಾಶ್ರಮದಲ್ಲಿ ಅವರು ಶ್ರೀನಿವಾಸನಾಯಕನಾಗಿದ್ದು,ಅವರ ಜಿಪುಣತನ,ಹರಿಯ ಸತ್ವಪರೀಕ್ಷೆ,ಹೆಂಡತಿಯ ಆತ್ಮಹತ್ಯಾ ಪ್ರಯತ್ನ-ಎಲ್ಲರಿಗೂ ಗೊತ್ತಿರುವಂಥಾದ್ದೇ.
ಆದರೆ ಅವರ ಬಗೆಗಿನ ಕೆಲವೊಂದು facts ಬಗ್ಗೆ ಗಮನಿಸಿ:
ಪುರಂದರದಾಸರ ಬದುಕಿನ ಅವಧಿ ೧೪೮೪-೧೫೬೪.ಅಂದರೆ ೮೦ ವರ್ಷಗಳು.ಅವರಿಗೆ ಬದುಕಿನ ಸಾರ್ಥಕತೆ ಅರ್ಥವಾಗಿದ್ದು ತಮ್ಮ ೩೦ನೇ ವಯಸ್ಸಿಗೆ ಅಂತ ಅಜಮಾಸು ಲೆಕ್ಕ ಹಾಕಿದರೂ
ಉಳಿದ ೫೦ ವರ್ಷಗಳಲ್ಲಿ ಆತ ಸರಿಸುಮಾರು ೪,೨೫,೦೦೦ ಭಜನೆ,ಕೀರ್ತನೆಗಳನ್ನು ರಚಿಸುತ್ತಾರೆ.
ಅದೂ with tune!
ಸದ್ಯಕ್ಕೆ ಅವರ ೭೦-೭೫ ಸಾವಿರ ಭಜನೆಗಳು ಮಾತ್ರ ಬಳಕೆಯಲ್ಲಿವೆ ಎಂದು ಎಲ್ಲೋ ಓದಿದ ನೆನಪು..
ಅದರರ್ಥ, ತಮ್ಮ ಜೀವಿತ ಅವಧಿಯಲ್ಲಿ ದಿನವೊಂದಕ್ಕೆ ಸರಿಸುಮಾರು ೨೦ಕ್ಕೂ ಹೆಚ್ಚು ಹಾಡುಗಳನ್ನು
ಬರೆದು,ಸಂಯೋಜಿಸಿ ಸ್ವತಃ ಹಾಡುತ್ತಾ ಸಾಗಿದ ಈ ಕರ್ನಾಟಕದ ಪ್ರಪ್ರಥಮ ಸಂಗೀತ ಪಿತಾಮಹ,ಸ್ಟಾರ್ ಹೋಟೆಲ್ ನಲ್ಲಿ ರೂಮ್ ಮಾಡಿ ನಾಲ್ಕು ಹಾಡಿಗೆ ಸಂಗೀತ ಸಂಯೋಜಿಸಲು ತಿಂಗಳುಗಟ್ಟಲೇ ತಿಣುಕಾಡುವ ನಮ್ಮ ಸಿನೆಮಾ ಸಂಗೀತ ನಿರ್ದೇಶಕರುಗಳಿಗೆ ಏನಾದರೂ ಅರ್ಥವಾದಾರೆಯೇ?
-Raghavendra Joshi

Anonymous said...

ಪುರಂದರ ಸಾಹಿತ್ಯದಲ್ಲಿ ದೊರೆತದ್ದು 20-25 ಸಾವಿರ ಕೃತಿಗಳು ಮಾತ್ರ. 1565ರ ತಾಳಿಕೋಟೆ ಯುದ್ಧದ ಪರಾಜಯದ ನಂತರ ಸಂಭವಿಸಿದ ವಿಜಯನಗರದ ಲೂಟಿಯಲ್ಲಿ ಆಕ್ರಮಣಕಾರರು ಅಲ್ಲಿಯ ಎಲ್ಲ ಪುಸ್ತಕದ ಸಂಗ್ರಹಗಳಿಗೆ ಬೆಂಕಿ ಇಟ್ಟರಂತೆ. ಅದರಲ್ಲಿ ಅತ್ಯಮೂಲ್ಯವಾದ ಗ್ರಂಥಗಳೆಲ್ಲವೂ ಭಸ್ಮವಾದವು. ಇದೇ ರೀತಿ ನಾಲಂದಾ, ತಕ್ಷಶಿಲಾ ವಿಶ್ವವಿದ್ಯಾಲಯಗಳ ಗ್ರಂಥ-ಭಂಡಾರಗಳೂ ಆಕ್ರಮಣಕಾರರ ಬೇಂಕಿಗೆ ಆಹುತಿಯಾಗಿದ್ದವು. ಇದು ನಮ್ಮ ದೇಶದ ದುರ್ದೈವ.

sunaath said...

ಶಿವು,
ನಿಮ್ಮದು ಸೃಜನಶೀಲ, orijinal ಬರವಣಿಗೆ.
ನನ್ನದು ಕೇವಲ ಅರ್ಥಗ್ರಹಣ, ಮೂಲಕೃತಿಗೆ ಕನ್ನಡಿಯನ್ನು ಹಿಡಿದಂತೆ ಅಂತಿಟ್ಕೊಳ್ಳೋಣ.
ಆದುದರಿಂದ ನಿಮ್ಮ ಬರವಣಿಗೆಯ ಮೌಲ್ಯ ಯಾವಾಗಲೂ ಹೆಚ್ಚೇ ಎನ್ನಬೇಕು.

sunaath said...

rj,
ದಾಸಶ್ರೇಷ್ಠ ಪುರಂದರದಾಸರ ಕೀರ್ತನೆಗಳ ಬಗೆಗೆ ನೀವು ಹೇಳಿದ್ದು ಅತ್ಯಂತ ಯೋಗ್ಯವಾಗಿದೆ.ನನ್ನ ಮಂದಮತಿಗೆ ಅವರ ಯಾವುದಾದರೂ ಕೀರ್ತನೆಯ ವಿಶೇಷ ಅರ್ಥ ಹೊಳೆದರೆ, ಹೊಳೆದಷ್ಟನ್ನು ಖಂಡಿತವಾಗಿಯೂ ಹಂಚಿಕೊಳ್ಳುತ್ತೇನೆ.

sunaath said...

ಕಟ್ಟಿಯವರೆ,
ಭಾರತದಲ್ಲಿದ್ದ ಜ್ಞಾನಭಂಡಾರ ನಾಶವಾಗಿದ್ದಂತೂ ಹೌದು. ಇದ್ದಷ್ಟನ್ನು ಕೂಡ ನಮ್ಮವರು ನೋಡಲು ತಯಾರಿಲ್ಲವಲ್ಲ!

Anonymous said...

ಇದ್ದದ್ದನ್ನು ನೋಡಲು ಸಿದ್ಧರಿಲ್ಲ. ಅಷ್ಟೇ ಅಲ್ಲ, ಆ ಜ್ಞಾನ ಭಂಡಾರದ ಅವಹೇಳನವೂ ಆಗುತ್ತಿದೆ. ಸಂಸ್ಕೃತಕ್ಕೆ ಸತ್ತಭಾಷೆ ಎಂದು ಹೆಸರಿಟ್ಟು, ಅದರ ಹುರುಳನ್ನು ಮನುವಾದಿ ಎಂದು ಜರೆದು, ತಮ್ಮನ್ನು ತಾವೇ ಹೊಗಳಿಕೊಳ್ಲುವ "ಪರಮ ಜ್ಞಾನಿ"ಗಳು ತುಂಬಿದ್ದಾರೆ!!!

ಆಲಾಪಿನಿ said...

ಅಂಕಲ್, ನಾ ಹೇಳಿದ್ದು ಹಂಗಲ್ಲಾ. ಶರೀಫ್ ಸಿರೀಸ್ ಮುಗಿಯುದಿಲ್ಲ ಬಿಡ್ರಿ. ನಡುನಡುವೆ ಬರಕೋತ ಇರ್‍ರಿ ಅಂದೆ. ಆದ್ರೂ ನಿಮ್ಮಿಷ್ಟ ಬಿಡ್ರಿ.

sunaath said...

ಕಟ್ಟಿಯವರೆ,
ಈಗೊಂದು ಹೊಸ ಘೋಷಣೆ ಬಂದಿದೆ:
"Ignorance (of people)is Power of (politicians)!"

sunaath said...

ಶ್ರೀದೇವಿ,
ನಿನ್ನಿಷ್ಟಕ್ಕಿಂತ ಕಾಕಾನ ಇಷ್ಟ ಬೇರೆಯಾಗಿದೆಯೆ?

ಸುಪ್ತದೀಪ್ತಿ suptadeepti said...

ಕಾಕಾ, ಮತ್ತ ಬಂದೀನಿ ಬ್ಲಾಗ್ ಲೋಕಕ್ಕ!!

ಶರೀಫರ ಗೀತೆಗಳು ಲೌಕಿಕ ಚೌಕಟ್ಟಿನೊಳಗ ಕೂಡಿಸಿದ ಅಲೌಕಿಕ ಚಿತ್ರಗಳು ಅನ್ನೂದು ತಿಳದಿತ್ತು. ಆದ್ರ ಆ ಚಿತ್ರಗಳ ಪೂರ್ಣ ಪ್ರಮಾಣ (ಬಣ್ಣ ವಿಸ್ತಾರ ವಿನ್ಯಾಸ) ಅರಿಯುವ ಸಾಮರ್ಥ್ಯ ಇರಲಿಲ್ಲ. ನೀವು ಇಂಥ ವಿವರಣೆಗಳ ಜೊತೆ ನಮ್ಮ ಕಣ್ಣಿಗೆ ಸೂಕ್ತ ಕನ್ನಡಕ ಏರಿಸಿ ಚೌಕಟ್ಟಿಗಿಂತಲೂ ಚಿತ್ರದ ಕಡೆ ಬೆರಳು ಮಾಡಿ ತೋರಿದ್ದೀರಿ.

ಧನ್ಯವಾದ ಎಂದರೆ ಬರೀ ಬಾಯಿಮಾತು ಆದೀತು!

ಕಾಕಾ, ಪ್ರೀತಿಯ ವಂದನೆಗಳು ಕೂಡಾ.

sunaath said...

ಜ್ಯೋತಿ,
ಬ್ಲಾಗ್ ಲೋಕದಿಂದ ನಿನ್ನ ದೀರ್ಘಾವಧಿಯ ಗೈರುಹಾಜರಿಯು ನಮ್ಮೆಲ್ಲರನ್ನೂ ವ್ಯಸ್ತಗೊಳಿಸಿತ್ತು.
ಇದೀಗ ಮರುಸ್ವಾಗತ!