Thursday, January 15, 2009

ಬಸವಣ್ಣನವರ ವಚನಗಳು

ವಿಚಾರಕ್ರಾಂತಿ, ಆಚಾರಕ್ರಾಂತಿ ಇವು ಕಲ್ಯಾಣದ ಶಿವಶರಣರ ಪ್ರಮುಖ ಧ್ಯೇಯಗಳಾಗಿದ್ದವು.
ಈ ಧ್ಯೇಯಗಳ ಸಾಧನೆಯ ಜೊತೆಜೊತೆಗೇ ಕನ್ನಡ ಭಾಷೆಯೂ ಸಹ ಶರಣರ ವಚನಗಳಿಂದಾಗಿ ಹೊಸ ಪ್ರಭೆಯನ್ನು ಪಡೆಯಿತು.
ಶರಣರ ಮುಖ್ಯ ಧ್ಯೇಯದ ಎದುರಿಗೆ ಇದು ಒಂದು ತರಹದ ‘ಉಪ ಉತ್ಪನ್ನ’.
ಹೀಗಾಗಿ, ಬಸವಣ್ಣನವರಿಗೆ, ಪ್ರಭುದೇವರಿಗೆ ಅಥವಾ ಅಕ್ಕಮಹಾದೇವಿಗೆ ‘ಶ್ರೇಷ್ಠ ಸಾಹಿತಿಗಳು’ ಎಂದು ಕರೆಯಲು ನಾವು ಹಿಂಜರಿಯುತ್ತೇವೆ.
ಆದರೆ ಅವರು ಶ್ರೇಷ್ಠ ಸಾಹಿತಿಗಳು ಎನ್ನುವದು ಒಂದು ವಾಸ್ತವಿಕತೆ, although secondary reality.
ಅವರು ಆಧ್ಯಾತ್ಮಿಕ ಮಹಾನುಭಾವರು ಎನ್ನುವದೇ ಮೂಲ ವಾಸ್ತವಿಕತೆ, primary reality.

“ನುಡಿದರೆ ಮುತ್ತಿನ ಹಾರದಂತಿರಬೇಕು..” ಎನ್ನುವ ಬಸವಣ್ಣನವರ ಮಾತು ಅವರ ವಚನಗಳಿಗೇ ಅನ್ವಯಿಸುತ್ತದೆ.
ಬಸವಣ್ಣನವರು ತಮ್ಮ ವಚನಗಳ ಮೂಲಕ ಸೃಷ್ಟಿಸಿದ ಸುಂದರ ಪದಪುಂಜಗಳಿಗೆ ಲೆಕ್ಕವಿಲ್ಲ.
‘ಹೊನ್ನಶೂಲ’, ‘ತಲೆದಂಡ’, ‘ಲೋಕದ ಡೊಂಕು’, ‘ಮಾನಿಸಗಳ್ಳೆ’, ‘ಚಿತ್ರದ ರೂಹು’, ‘ಕರ್ತಾರನ ಕಮ್ಮಟ’ ಇವುಗಳನ್ನು ಉದಾಹರಿಸಬಹುದು.

ಸಂಸ್ಕೃತದ ಅನೇಕ ಸುಂದರ ವಾಕ್ಯಗಳನ್ನು ಅವರು ಕನ್ನಡದಲ್ಲಿ ಇನ್ನೂ ಚೆನ್ನಾಗಿ ಹೇಳಿದ್ದಾರೆ ಅಥವಾ ಅನುವಾದಿಸಿದ್ದಾರೆ.
ಉದಾಹರಣೆಗೆ ಈ ಸಂಸ್ಕೃತ ವಾಕ್ಯವನ್ನು ನೋಡಿರಿ:
“ಮಧು ತಿಷ್ಠತಿ ಜಿಹ್ವಾಗ್ರೇ, ಹೃದಯೇತು ಹಾಲಾಹಲಮ್.”
ಬಸವಣ್ಣನವರು ಇದೇ ಮಾತನ್ನು ಕನ್ನಡದಲ್ಲಿ ಹೇಳಿದ ಬಗೆ ಹೀಗಿದೆ:
ಅವಳ ಮಾತು ಬೆಲ್ಲದಂತೆ, ಮನದಲ್ಲಿದ್ದದು ನಂಜು ಕಂಡಯ್ಯಾ.”

ಮಹಾಭಾರತದಲ್ಲಿ ಧರ್ಮರಾಯನು ಹೇಳುವ,
“ಮಾತೃವತ್ ಪರದಾರೇಷು,
ಪರದ್ರವ್ಯೇಷು ಲೋಷ್ಠವತ್”
ಎನ್ನುವ ನೀತಿಬೋಧೆಯನ್ನು ಬಸವಣ್ಣನವರು ಈ ರೀತಿಯಾಗಿ ಕನ್ನಡಿಸಿದ್ದಾರೆ:
ಛಲ ಬೇಕು ಶರಣಂಗೆ ಪರಧನವನೊಲೆನೆಂಬ,
ಛಲ ಬೇಕು ಶರಣಂಗೆ ಪರಸತಿಯನೊಲೆನೆಂಬ
”.

ಭಗವದ್ಗೀತೆಯು ಸ್ಥಿತಪ್ರಜ್ಞನ ಲಕ್ಷಣಗಳನ್ನು ನಾಲ್ಕು ಶ್ಲೋಕಗಳಲ್ಲಿ ಹೇಳಿದೆ.
ಬಸವಣ್ಣನವರು ಕನ್ನಡದ ಒಂದೇ ವಾಕ್ಯದಲ್ಲಿ ಅದರ ಸಾರವನ್ನು ತಿಳಿಯಾಗಿ ತಿಳಿಸಿದ್ದಾರೆ:
ಮನೆಯೊಳಗಿನ ಕಿಚ್ಚು ಮನೆಯ ಸುಟ್ಟೀತಲ್ಲದೆ, ನೆರೆಮನೆಯ ಸುಟ್ಟೀತೆ ಅಯ್ಯಾ?

ಈ ವಾಕ್ಯದಲ್ಲಿ ಕೇವಲ ಸಂದೇಶವಷ್ಟೇ ಅಲ್ಲ, ಅದಕ್ಕಿರುವ ಮನೋವೈಜ್ಞಾನಿಕ ಆಧಾರವೂ ಸಹ ವ್ಯಕ್ತವಾಗಿದೆ.
ಇದೀಗ ನಮ್ಮ ಮನೋವಿಜ್ಞಾನಿಗಳು, corporate ಗುರುಗಳು ಇದೇ ಸಂದೇಶವನ್ನು corporate executiveಗಳಿಗೆ ***** ಹೊಟೇಲುಗಳಲ್ಲಿ ವಿವರಿಸುತ್ತಾರೆ.
ಬೇರೆಯವರ ವಿಚಾರವಾಗಿ ನಮ್ಮ ಮನದಲ್ಲಿ ಸಿಟ್ಟು, ಸೆಡವು, ಹತಾಶೆ ಉಳಿದುಕೊಂಡರೆ, acidity, BP, ಇವೆಲ್ಲ ಅಗುವದು ನಮಗೇ ಹೊರತು ಅವರಿಗಲ್ಲ ಎನ್ನುವ ಸಂದೇಶವನ್ನು ಬಸವಣ್ಣನವರು ಒಂದೇ ವಾಕ್ಯದಲ್ಲಿ ಮನಗಾಣಿಸಿದ್ದಾರೆ.

ಯಾವುದೇ ಒಂದು ಸಂದೇಶವನ್ನು ಬಸವಣ್ಣನವರಂತೆ compact ಆಗಿ ಹೇಳಿದವರು ಬಹುಶಃ ಯಾರೂ ಇರಲಿಕ್ಕಿಲ್ಲ.
ಉದಾಹರಣೆಗೆ ಈ ವಚನ ನೋಡಿರಿ:
“ಕರಿ ಘನ, ಅಂಕುಶ ಕಿರಿದೆನ್ನಬಹುದೆ? ಬಾರದಯ್ಯಾ
ಗಿರಿ ಘನ, ವಜ್ರ ಕಿರಿದೆನ್ನಬಹುದೆ? ಬಾರದಯ್ಯಾ
ತಮಂಧ ಘನ, ಜ್ಯೋತಿ ಕಿರಿದೆನ್ನಬಹುದೆ? ಬಾರದಯ್ಯಾ
ಮರಹು ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ?
ಬಾರದಯ್ಯಾ ಕೂಡಲಸಂಗಮ ದೇವಾ”

ಈ ವಚನವನ್ನು ನೋಡಿದಾಗ ನನಗೆ ಅಲೆಗ್ಝಾಂಡರ
ಸೋಲ್ಝೆನಿತ್ಸನ್ನನ ನಾಟಕದ ಶೀರ್ಷಿಕೆ ನೆನಪಾಗುತ್ತದೆ: “Candle in the wind”.
Candle in the wind ಅಂದರೆ ಸಂಕಷ್ಟವನ್ನು ಎದುರಿಸುತ್ತಿರುವ human spirit ಎಂದು ಸೋಲ್ಝೆನಿತ್ಸನ್ನನ ಮತ.
'ಜ್ಯೋತಿ' ಎಂದು ಬಸವಣ್ಣನವರು ಹೇಳುತ್ತಿರುವದು ದೇವರಲ್ಲಿಯ ನಂಬುಗೆ.
ಈ ಎರಡರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ನಂಬುಗೆ ಅಥವಾ spirit ಇವು ಅನೇಕ ಅಡಚಣಿಗಳನ್ನು ಎದುರಿಸುತ್ತಿರಬಹುದು. ಆದರೆ ಅವುಗಳನ್ನು ರಕ್ಷಿಸಿಕೊಳ್ಳುವದು ನಮ್ಮ ಅವಶ್ಯಕತೆ.

ತನ್ನ ಕೊನೆಯ ದಿನಗಳಲ್ಲಿ ಬುದ್ಧನು ತನ್ನ ಶಿಷ್ಯರಿಗೆ ಕೆಲವೊಂದು rules of conduct ಹೇಳಿದ್ದ.
“ನೀವು ಭಿಕ್ಷೆ ಬೇಡಲು ಹೋದಾಗ ಯಾರನ್ನೂ ಬಯ್ಯಬೇಡಿ, ಸುಳ್ಳು ಹೇಳಬೇಡಿ” ಇತ್ಯಾದಿ.
ಇದೇ ಸಂದೇಶವು ಬಸವಣ್ಣನವರ ವಚನದಲ್ಲಿ ಎಷ್ಟು ಸುಂದರವಾಗಿ ಮೂಡಿದೆ ಎನ್ನುವದನ್ನು ನೋಡಬಹುದು.

“ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಅನ್ಯರಿಗೆ ಅಸಹ್ಯಪಡಬೇಡ, ಮುನಿಯಬೇಡ,
ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ,
ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ”

ಅನೇಕ ಮೂಲಗಳಿಂದ ಜ್ಞಾನಸಂಪಾದನೆ ಮಾಡಿದ ಬಸವಣ್ಣನವರು ಬುದ್ಧನ ಸಂದೇಶವನ್ನೇ ಕನ್ನಡದಲ್ಲಿ ಹೇಳಿದ್ದರೆ ಆಶ್ಚರ್ಯವಿಲ್ಲ.

ಇಂತಹ ವಚನಗಳಿಂದ ಬಸವಣ್ಣನವರು ಕೇವಲ ಸಮಾಜಸುಧಾರಣೆಯನ್ನಷ್ಟೇ ಮಾಡಲಿಲ್ಲ, ಕನ್ನಡ ನುಡಿಯ ಸೊಬಗನ್ನೂ ಸಹ ಹೆಚ್ಚಿಸಿದರು.
ಕನ್ನಡ ಸಾಹಿತ್ಯದ ಹಿರಿಯ ಪಟ್ಟ ಅವರದು.
ಆದರೆ ಅವರ ಶರಣಪಟ್ಟವು ಇದಕ್ಕಿಂತಲೂ ಎಷ್ಟೋ ದೊಡ್ಡದು.
.......................................................
ಪ್ರಿಯ ಸಹಭಾಗಿಗಳೆ,
ಒಂದು ಅತ್ಯಂತ ಕಳವಳದ ವಿಷಯವನ್ನು ನಮ್ಮ ಸಹಬ್ಲಾಗಿಗರಾದ ಸುಷ್ಮಾಸಿಂಧು ನನ್ನ ನಜರಿಗೆ ತಂದಿದ್ದಾರೆ.
ಅವರು ತಮ್ಮ ಬ್ಲಾಗಿನಲ್ಲಿ ಬರೆದ ಲೇಖನವನ್ನು
(http://mydreamwritings.blogspot.com/2008/10/great-aspirations.html)
ಯದ್ವತ್ ನಕಲು ಮಾಡಿ Panky ಎನ್ನುವ ಕಳ್ಳನೊಬ್ಬ ತನ್ನದೇ ಲೇಖನ ಎನ್ನುವಂತೆ ತನ್ನ ಬ್ಲಾಗಿನಲ್ಲಿ ಹಾಕಿಕೊಂಡಿದ್ದಾನೆ.
(http://panki-wellstream.blogspot.com/2008/11/great-aspirations.html)
This is a clear case of plagiarism.
ನಾನು ಅವನಿಗೆ ಇದೇ ರೀತಿಯಾಗಿ comment ಬರೆದಿದ್ದೇನೆ.
ನೀವು ದಯವಿಟ್ಟು ಎರಡೂ blogsಗಳಿಗೆ ಹೋಗಿ ನೋಡಿ, ನಿಮ್ಮ commentಆ blogಗಳಲ್ಲಿ ಉಲ್ಲೇಖಿಸಿದರೆ ಇಂತಹ ಕಳ್ಳತನಗಳು ಇಲ್ಲವಾಗಬಹುದು.
ಅಲ್ಲದೆ, ಈ ವಿಷಯವನ್ನು ನಮ್ಮ blogger.comದ ಒಡೆಯರಿಗೆ ತಿಳಿಸುವ ಬಗೆ ನಿಮಗೆ ಗೊತ್ತಿದ್ದರೆ ದಯವಿಟ್ಟು ಹೇಳಿ ಹಾಗೂ ನೀವು ತಿಳಿಸಿ.
Let us fight against plagiarism.
-ಸುನಾಥ

21 comments:

Anonymous said...

ಬಸವಣ್ಣ-Part3
-----------
ಕನ್ನಡದ ಅದ್ಭುತ Translator!
ಆತ ಬರೀ ಇತರ ಭಾಷೆಗಳಲ್ಲಿದ್ದ ಉಪಯುಕ್ತ
ವಿಷಯಗಳನ್ನು ಬರೀ ಅನುವಾದ ಮಾಡದೇ
recreation ಮಾಡಿದರು ಎನ್ನುವದು ಸೂಕ್ತ.
ಸರ್,ಲೇಖನ ಚಿಕ್ಕದಾಯಿತಲ್ಲವೆ?
-ರಾಘವೇಂದ್ರ ಜೋಶಿ.

sunaath said...

rj,
ಲೇಖನ ತುಂಬಾ ಚಿಕ್ಕದಾಗಿದೆ.
ಅವರ ವಚನಗಳ ಅನೇಕ ವೈಶಿಷ್ಟ್ಯಗಳನ್ನು ಇಲ್ಲಿ ಗುರುತಿಸಿಲ್ಲ.
I am sorry for that.
ನೀವು ಹೇಳುವದು ಸರಿ: ಬಸವಣ್ಣನವರು ಭಾರತೀಯ ಸಂಸ್ಕೃತಿಯ ಅನೇಕ ಮಹದ್ವಾಕ್ಯಗಳನ್ನು ಕನ್ನಡದಲ್ಲಿ recreate ಮಾಡಿದ್ದಾರೆ, ಕೇವಲ ಅನುವಾದಿಸಿಲ್ಲ.

Anonymous said...

ಲೇಖನ ಚಿಕ್ಕದಾದರೂ ಚೊಕ್ಕವಾಗಿದೆ. ಸುಂದರವಾಗಿದೆ. ಬಸವಣ್ಣನವರ ವಚನಗಳು ಮೇರು ಸಾಹಿತ್ಯ ಕೃತಿಗಳು. ಅದರಂತೆ ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭುಗಳದು ಕೂಡ. ಆದರೆ ಒಂದು ಮಾತು, ವೇದ-ಉಪನಿಷತ್ತುಗಳನ್ನು ಧಿಕ್ಕರಿಸಿದವರು, ಅವೇ ತತ್ವಗಳನ್ನು ಕನ್ನಡದಲ್ಲಿ ಪುನಃ ಹೇಳಿದ್ದಾರಲ್ಲ ? ಬಸವಣ್ಣನವರು ಬಾಳಿದ 8ನೇ ಶತಮಾನದ ಸಾಮಾಜಿಕ, ರಾಜಕೀಯ ಪರಿಸರವನ್ನು ವಿವರಿಸಿ, ಅವರ ಕೊಡುಗೆಗಳನ್ನು ವಿಮರ್ಶಿಸಿದರೆ, ತುಂಬ ುಪಯುಕ್ತವಾಗಬಹುದಲ್ಲವೆ ?

sunaath said...

ಕಟ್ಟಿಯವರೆ,
ನೀವು ಹೇಳಿದಂತೆ, ಶರಣರ ಅನೇಕ ವಚನಗಳು ವೇದೋಪನಿಷತ್ತುಗಳ, ಶಾಸ್ತ್ರಾದಿಗಳ ಕನ್ನಡೀಕರಣವೇ ಹೌದು.
ಆದರೆ, ಶರಣರು ಹಂಸಕ್ಷೀರನ್ಯಾಯದಂತೆ, ಒಳ್ಳೆಯದನ್ನಷ್ಟೇ
ಕನ್ನಡಿಸಿ, ಅಪಥ್ಯವಾದದ್ದನ್ನು ಬಿಟ್ಟುಬಿಟ್ಟಿದ್ದಾರಲ್ಲವೆ?

Keshav.Kulkarni said...

ಸುನಾಥ,

ಬಸವಣ್ಣನವರ ಬಗ್ಗೆ ಚಿಕ್ಕದಾಗಿ ಚೊಕ್ಕದಾಗಿ ಬರೆದಿದ್ದೀರಿ, ವಿಚಾರ ತುಂಬ ಚೆನ್ನಾಗಿದೆ, ಇನ್ನೂ ಮುಂದುವರೆಸಿ.

ಕೇಶವ (www.kannada-nudi.blogpsot.com)

Anonymous said...

ವೇದ-ಉಪನಿಷತ್ತುಗಳಲ್ಲಿ ಅಪಥ್ಯ ಯಾವದಿದೆ ? ಸ್ವಲ್ಪ ವಿಷದವಾಗಿ ಹೇಳುವಿರಾ ? ಇಂದಿನ ನಮ್ಮ ಆಚರಣೆಗಳು ವೇದ ಧರ್ಮವಲ್ಲ ! ವೇದ ಧರ್ಮವು ವಿಶ್ವ ಧರ್ಮ, ಮಾನವ ಧರ್ಮ. ಅಲ್ಲವೆ ? 'ಆನೊ ಭದ್ರಾ ಋತವೋ ಯಾಂತು ವಿಶ್ವತಃ' 'ಸತ್ಯಂ ವದ, ಧರ್ಮಂ ಚರ' ಎಂಬುದು ವೇದೋಪನಿಷತ್ತುಗಳ ಮೂಲ ಮಂತ್ರ. ಅಂದಾಗ ಅದರಲ್ಲಿ ಅಪಥ್ಯ ಯಾವದು ? ಅಧರ್ಮವಾದ, ಅಮಾನವೀಯವಾದ ಒಂದೆರಡು ಮಣತ್ರಗಳನ್ನು ಉದಾಹರಿಸಿ ಹೇಳಿರಿ.

Anonymous said...

ಮಣತ್ರ = ಮಂತ್ರ

ಬರಹದ ದೋಷಕ್ಕೆ ಕ್ಷಮೆ ಇರಲಿ.

shivu.k said...

ಸುನಾಥ್ ಸಾರ್,

ನಾನು ನಿನ್ನೆಯೆಲ್ಲಾ ಬೇಕಂತಲೇ ನಿಮ್ಮ ಬ್ಲಾಗಿಗೆ ಬಂದಿರಲಿಲ್ಲ.. ನನ್ನ ಲೇಖನದಿಂದಾಗಿ ಭಾವೋದ್ವೇಗಕ್ಕೊಳಗಾಗಿದ್ದೆ....ನಿಮ್ಮ ಹೊಸ ಲೇಖನ ಓದಲು ಮನಸ್ಥಿತಿಯನ್ನು ಸರಿಯಾಗಿಟ್ಟಿದ್ದರೆ ಸಾದ್ಯ.......

ಬಸವಣ್ಣನವರ ವಚನಗಳು ಮತ್ತು ಅವರನ್ನು ಶ್ರೇಷ್ಟ ಸಾಹಿತಿಗಳು ಅನ್ನುವುದಕ್ಕಿಂತ ಅದ್ಯಾತ್ಮಿಕ ಮಹಾನುಭಾವರುಗಳೇ ಸರಿ.....

ನಾನು ಒಂದು ಅದ್ಯಾತ್ಮದ ಕ್ಲಾಸಿಗೆ ಹೋಗುತ್ತಿರುತ್ತೇನೆ......
ನಾವು ಪ್ರಪಂಚದಲ್ಲಿರುವ ಯಾವುದೇ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಮೊದಲಿಗೆ ನಮಗೆ ನಾವೆ ಅರ್ಥವಾಗಿರುವುದಿಲ್ಲ....ಅಂಥದರಲ್ಲಿ ಬೇರೆಯವರು ಹೇಗೆ ಅರ್ಥವಾಗಲು ಸಾಧ್ಯ ! ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ನಿದಾನವಾಗಿ ಒಂದೊಂದೆ ಅವರ ಅವಗುಣಗಳು ಕಾಣಲಾರಂಬಿಸಿ ಅವರ ಬಗ್ಗೆ ನಮ್ಮ ಭಾವನೆಗಳು ಬದಲಾಗುತ್ತಿರುತ್ತವೆ.....ಇದರಿಂದ ಸಂಭಂದಗಳು ಕೆಡುತ್ತವೆ.......ಅದಕ್ಕೆ ಅವರನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಅವರನ್ನು ವ್ಯಕ್ತಿಯಾಗಿ ಸ್ವೀಕರಿಸಿ...ಪ್ರೀತಿಸಿ....ಆಷ್ಟೇ ಸಾಕು...ಅವರು ಅದನ್ನೇ ಮಾಡುವುದು....ಇದರಿಂದ ಅವರಿಗೂ ತೊಂದರೆ ಇಲ್ಲ ನಮಗೂ ಯಾವುದೇ bp sugar, acidity ಯಂತ ಇನ್ನೂ ಅನೇಕ ಕಾಯಿಲೆಗಳು ನಮ್ಮ ಬಳಿ ಸುಳಿಯುವುದಿಲ್ಲ ಎಂದು ಹೇಳಿಕೊಡುತ್ತಾರೆ....ಇಂದಿನ ಕಾರ್ಪೋರೇಟ್ ಜನಕ್ಕೆ ಕೊಡುತ್ತಿರುವ ಹೊಸ ಹೊಸ ನೀತಿಗಳು....ಇದು ಬಸವಣ್ಣನವರ ಕಾಲದಲ್ಲೇ ಚಾಲ್ತಿಯಲ್ಲಿರುವುದನ್ನು ಚೆನ್ನಾಗಿ ವಿವರಿಸಿದ್ದೀರಿ.......

ಚಂದ್ರಕಾಂತ ಎಸ್ said...

ಸುನಾಥ್ ಸರ್

ಬಹಳ ಸರಳವಾಗಿ ಬಸವಣ್ಣನವರ ವಚನಗಳನ್ನು ಕೆಲವು ಶೀರ್ಷಿಕೆಗಳ ಅಡಿಯಲ್ಲಿ ವಿವರಿಸಿರುವಿರಿ.ಸಾಹಿತ್ಯ ಅಧ್ಯಯನ ಮಾಡುವಾಗಲೂ ಇದನ್ನೇ ನಾವು ಒತ್ತುಕೊಟ್ಟು ಹೇಳುತ್ತೇವೆ. ಸಾಮಾಜಿಕ ಬದಲಾವಣೆ ವಚನಕಾರರ ಪ್ರಮುಖ ಉದ್ದೇಶ. ಸಮಾಜದಲ್ಲಿರುವ ಬೇಧ ಭಾವ{ ಬಡವ- ಶ್ರೀಮಂತ ; ಮೇಲ್ಜಾತಿ-ಕೆಳಜಾತಿ ; ಗಂಡು - ಹೆಣ್ಣು }ಗಳನ್ನು ಹೋಗಲಾಡಿಸುವುದೇ ಇವರ ಮುಖ್ಯ ಉದ್ದೇಶವಾಗಿತ್ತು.

ಅದಕ್ಕಾಗಿ ಸಾಮಾನ್ಯ ಜನರನ್ನುಸುಲಭವಾಗಿ ತಲುಪಲು ಅವರು ಕಂಡು ಕೊಂಡ ಮಾಧ್ಯಮ‘ ವಚನ’.ಆದ್ದರಿಂದಲೇ ವಚನಗಳನ್ನು "ಉಪ ಉತ್ಪನ್ನ"ಎನ್ನುತ್ತೇವೆ. ವಚನ ಎಂದರೆ ಸರಳ ಅರ್ಥ ಮಾತು. ಇವರ ‘ಮಾತು’ ಭಾವಪೂರ್ಣವಾಗಿದ್ದಿದ್ದರಿಂದ ಅವುಗಳಲ್ಲಿ ಭಾವಗೀತೆಯ ಲಕ್ಷಣ ಕಾಣುತ್ತೇವೆ.

ನಿಮ್ಮ ಲೇಖನ ನೋಡುತ್ತಿದ್ದರೆ ನನಗೂ ಕೆಲವು ವಚನಗಳನ್ನು ವಿಶ್ಲೇಷಿಸುವ ಮನಸ್ಸಾಗುತ್ತಿದೆ.!!

ನಿಮ್ಮದು ಅತ್ಯಂತ ಆರೋಗ್ಯಕರ ಬರವಣಿಗೆ. ಅದಕ್ಕಾಗಿ ಧನ್ಯವಾದಗಳು.

sunaath said...

ಕಟ್ಟಿಯವರೆ,
ವೇದೋಪನಿಷತ್ತುಗಳಲ್ಲಿ ಅನೇಕ ಶ್ರೇಷ್ಠ ವಿಚಾರಗಳಿದ್ದು, ಬಸವಣ್ಣನವರು ಅವನ್ನು ತಮ್ಮ ವಚನಗಳಲ್ಲಿ ಎತ್ತಿಕೊಂಡಿದ್ದಾರೆ. ಆದರೆ ವೇದಗಳಲ್ಲಿ ಪ್ರಾಣಿಬಲಿಯನ್ನು, ಸೋಮಪಾನವನ್ನು, ಹೋಮ ಹವನಾದಿ ಆಚರಣೆಗಳನ್ನು ಹೇಳಲಾಗಿದ್ದು, ಶರಣರು ಈ ಅಂಶವನ್ನು ತಿರಸ್ಕರಿಸಿದ್ದಾರೆ.

sunaath said...

ಶಿವು,
ನಿಮ್ಮ ದುಃಖದಲ್ಲಿ ನಾನೂ ಸಹಭಾಗಿಯಾಗಿದ್ದೇನೆ. ದಯವಿಟ್ಟು ಸಂತೈಸಿಕೊಳ್ಳಿರಿ.

sunaath said...

ಕೇಶವ,
ನಿಮ್ಮ ಉತ್ತೇಜನಕ್ಕೆ ಧನ್ಯವಾದಗಳು.

sunaath said...

ಚಂದ್ರಕಾಂತಾ,
ವಚನಗಳ ವಿಶ್ಲೇಷಣೆಯನ್ನು ನಿಮ್ಮಿಂದ ಅಪೇಕ್ಷಿಸುತ್ತೇನೆ.
ದಯವಿಟ್ಟು ಬರೆಯಿರಿ.

Unknown said...

ಸುನಾತರೆ,

"
ಸಂಸ್ಕೃತದ ಅನೇಕ ಸುಂದರ ವಾಕ್ಯಗಳನ್ನು ಅವರು ಕನ್ನಡದಲ್ಲಿ ಇನ್ನೂ ಚೆನ್ನಾಗಿ ಹೇಳಿದ್ದಾರೆ ಅಥವಾ ಅನುವಾದಿಸಿದ್ದಾರೆ.
ಉದಾಹರಣೆಗೆ ಈ ಸಂಸ್ಕೃತ ವಾಕ್ಯವನ್ನು ನೋಡಿರಿ:
“ಮಧು ತಿಷ್ಠತಿ ಜಿಹ್ವಾಗ್ರೇ, ಹೃದಯೇತು ಹಾಲಾಹಲಮ್.”
ಬಸವಣ್ಣನವರು ಇದೇ ಮಾತನ್ನು ಕನ್ನಡದಲ್ಲಿ ಹೇಳಿದ ಬಗೆ ಹೀಗಿದೆ:
“ಅವಳ ಮಾತು ಬೆಲ್ಲದಂತೆ, ಮನದಲ್ಲಿದ್ದದು ನಂಜು ಕಂಡಯ್ಯಾ.”
"

ಈ ಮೇಲ್ಕಂಡ ಸಾಲುಗಳನ್ನು ನಾನು ಒಪ್ಪುವುದಿಲ್ಲ. ನಿಮಗೆ ಹೇಗೆ ಗೊತ್ತು ಬಸವಣ್ಣನವರು ಸಕ್ಕದವನ್ನು ಕನ್ನಡಯ್ಸಿದ್ದಾರೆ ಅಂತ . ಇದಕ್ಕೆ ಪುರಾವೆ ಏನು? ಇದು ನಿಮ್ಮ ಎಣಿಕೆ/ಊಹೆ ಅಂತ ಓದುಗರಿಗೆ ತಾವು ತಿಳಿಯಾಗಿಸಬೇಕಿತ್ತು.

ಬಸವಣ್ಣ ಹುಟ್ಟು-ಕನ್ನಡಿಗ. ಬಸವಣ್ಣನವರಿಗೆ ಕನ್ನಡದಲ್ಲಿ ಉಂಕಿಸಿ ಹೇಳುವ ಆರ್ಪು ಇರಲಿಲ್ಲವೆ?

ಹಾಗೆಯೇ, ಕನ್ನಡದ ಹಲವು ಪದಗಳು ಸಕ್ಕದಕ್ಕೆ ಹೋದ ಹಾಗೆ ಕನ್ನಡದ ನುಡಿಗಟ್ಟುಗಳು ಸಕ್ಕದ ಹೋಗಿರಬಹುದು ಅಲ್ಲವೆ?

Anonymous said...

ಪ್ರಾಣಿಬಲಿ, ಸೋಮಪಾನ, ಯಜ್ಞ ಯಾಗಾದಿಗಳ ಭಾಗವಲ್ಲ. ಅರಸರು ಚಕ್ರವರ್ತಿಗಳಾಗಲು, ತಮ್ಮ ಪರಮಾಧಿಕಾರವನ್ನು ಸ್ಥಾಪಿತಗೊಳಿಸಲು 'ಅಶ್ವಮೇಧ' ಅಥವಾ 'ರಾಜಸೂಯ'ಸಾಂಗಗೊಳಿಸುತ್ತಿದ್ದರು. ಅದು ಅವರ ರಾಜಕೀಯ ಮಹತ್ವಾಂಕ್ಷೆಯೆ ಹೊರತು ವೇದಧರ್ಮವಲ್ಲ ! ವೇದ ಪ್ರಣೀತವಾದ ಯಜ್ಞ 'ಯಜ್ಞಃ ಕರ್ಮ ಸಮುದ್ಭವಃ'ಆಗಿತ್ತು. ನೀವು 'ತ್ರಿಸುಪರ್ಣ' ಮಂತ್ರವನ್ನು ಓದಿರಿ. ಅದರ ಗೂಡಾರ್ಥವನ್ನು ನನಗೆ ನನ್ನ ಮಾವಂದಿರಾದ ಶ್ರೀ ಗೋವರ್ಧನಾಚಾರ್ಯರು ವಿವರಿಸಿ ಹೇಳಿದ್ದರು. ನಮ್ಮ ನಿತ್ಯ ಕರ್ಮಗಳೆಲ್ಲವೂ ಯಜ್ಞವೇ. ನಮ್ಮ ಮನಸ್ಸಿನ ಅಗ್ನಿಯಲ್ಲಿ ಆಹುತಿ ಹಾಕಬೇಕಾದದ್ದು ಅರಿ ಷಡ್ವರ್ಗಗಳನ್ನು, ಮನಸ್ಸಿನ ದುಷ್ಟ ವಾಸನೆಗಳನ್ನು. ಅಮಾಯಕ ಪ್ರಾಣಿಗಳನ್ನಲ್ಲ ! ವೈದಿಕ ಧರ್ಮವನ್ನು ಪಾಲಿಸುವವರು ಕಡಿಮೆ ಅಥವಾ ಇಲ್ಲವೇ ಇಲ್ಲ. ಅದೇ ರೀತಿ ಬಸವಣ್ಣನವರು ಹೇಳಿದ ನೀತಿಸಂಹಿತೆಯನ್ನು ಪಾಲಿಸಿದವರು ಅವರ ಕಾಲದಲ್ಲಿಯೂ ಇರಲಿಲ್ಲ; ಈಗಲೂ ಇಲ್ಲ. ಅಸ್ಪೃಷ್ಯತೆ, ಜಾತಿಗಳು, ಜಾತಿಭೇದ, ಮೂರ್ತಿಪೂಜೆ ಇವಾವೂ ವೇದ ಪ್ರಣೀತ ಧರ್ಮವಲ್ಲ. 'ಧಾರ್ಯತೆ ಇತಿ ಧರ್ಮಃ' ಎಂಬುದು ಧರ್ಮದ ವಿಶಾಲವಾದ ವ್ಯಾಖ್ಯೆ. ಹೋಗಲಿ, ಯಜ್ಞದಲ್ಲಿ ಬಲಿಕೊಟ್ಟ ಪ್ರಾಣಿಗಳೆಷ್ಟು ? ಕೇವಲ ತಿನ್ನುವದಕ್ಕೆ ಬಲಿಕೊಟ್ಟ ಪ್ರಾಣಿಗಳೆಷ್ಟು ? ವೈದಿಕ ಧರ್ಮಒಂದು ಜಾತಿ ಅಥವಾ ಪಂಗಡವಲ್ಲ ; ಅದೊಂದು ಜೀವನ ಧರ್ಮ. ನೀವು "ತ್ರಿಸುಪರ್ಣ" ವನ್ನು ಖಂಡಿತವಾಗಿ ಓದಿ. ಅದೂ ಒಳ್ಳೆ ಸಂಸ್ಕೃತ ಬಲ್ಲ , ಕೂಪಮಂಡೂಕರಲ್ಲದ, ಪಂಡಿತರ ಮುಖಾಂತರ. ಇನ್ನೊಂದು ವಿಷಯ, ಭಾರತದಲ್ಲಿ ಹುಟ್ಟಿದ ಇತರ ವಿಚಾರಗಳು ವೈದಿಕ ಧರ್ಮವನ್ನು ಎಷ್ಟೇ ತೆಗಳಿದರೂ, ಪರದೇಶದ ವಿಚಾರಗಳು ಎಷ್ಟೇ ಆಕ್ರಮಿಸಿದರೂ, ಮೂಲಭೂತವಾದ ವೈದಿಕ ಧರ್ಮ ( ಆಚರಣೆಗಳಲ್ಲ)ನಾಶವಾಗಲಿಲ್ಲ ; ಆಗುವದಿಲ್ಲ. ಯಾಕೆಂದರೆ, ವೈದಿಕ ಧರ್ಮ ಜೀವನ ಧರ್ಮ !!

sunaath said...

ಭರತ,
ನಿಮ್ಮ ಪ್ರಶ್ನೆಗೆ ನನ್ನ next postನಲ್ಲಿ ಉತ್ತರ ಕೊಟ್ಟಿದ್ದೇನೆ. ದಯವಿಟ್ಟು ನೋಡಿರಿ.

sunaath said...

ಕಟ್ಟಿಯವರೆ,
ನಿಮ್ಮ ಸಲಹೆಯನ್ನು ಪಾಲಿಸುವೆ.

Jagali bhaagavata said...

ಕಾಕಾ,

ಬ್ಲಾಗರ್ ಒಡೆಯರಿಗಿಂತ ಈ ಒಡೆಯರಿಗೆ ತಿಳಿಸಿ. ಕೆಲಸ ಆಗಬಹುದು.
http://www.cyberpolicebangalore.nic.in/

sunaath said...

ಭಾಗವತರೆ,
Thanks a lot.
ಇದೀಗ ದಾರಿ ಕಂಡಂತಾಯಿತು.
-ಕಾಕಾ

ತಿಳಿಗಣ್ಣ said...

ಹೋಲಿಕೆಗಳು ಚನ್ನಾಗಿವೆ.

ಮತ್ತೊಂದೆಡೆ ಸಂಸ್ಕ್ರುತ ಶುಬಾಶಿತಗಳ ಯತಾವತ್ ಕನ್ನಡ ನುಡಿಮಾರ್‍ಪು ಕೆಲ ವಚನಗಳಲ್ಲಿ ಕಂಡಿರುವುದನ್ನು ಮತ್ತೊಬ್ಬ ಬ್ಲಾಗ್ಗಾರರು ಬರೆದಿದ್ದಾರೆ. ಎಲ್ಲಿ ಎಂದು ಮರೆತು ಹೋಯಿತು.

ಹಾಗೆ ದಾಸರ ಪದಗಳಲ್ಲೂ ಈ ಬಗೆಯವು ಕಾಣ ಸಿಗುವುದು.

ಕವಿರಾಜಮಾರ್‍ಗದಲ್ಲೂ ದಂಡಿಯ ಶ್ಲೋಕಗಳು ಕನ್ನಡಕ್ಕೆ ತಂದಿರುವ ಉದಾಹರಣೆಗಳಿವೆ.

ಅವನ್ನು ಒಂದು ಕಡೆ ಬರೆಯಬಹುದು.

ನನ್ನಿ

ತಿಳಿಗಣ್ಣ said...

ತಿದ್ದು:
ಕವಿರಾಜಮಾರ್‍ಗದಲ್ಲೂ ದಂಡಿಯ ಶ್ಲೋಕಗಳನ್ನು ಕನ್ನಡಕ್ಕೆ ತಂದಿರುವ ಉದಾಹರಣೆಗಳಿವೆ.