Wednesday, February 11, 2009

ನಿರ್ದೇಶಕನ ಪ್ರತಿಭೆ

ಕತೆ, ಕಾದಂಬರಿಗಳಲ್ಲಿ ಒಂದು ಸನ್ನಿವೇಶವನ್ನು ಸೃಷ್ಟಿಸುವದು ಸುಲಭ.
ಲೇಖಕರು ಆ ಸನ್ನಿವೇಶವನ್ನು ಪುಟಗಟ್ಟಲೆ ವರ್ಣನೆ ಮಾಡಬಹುದು ಹಾಗು ಪಾತ್ರಗಳ ಅಭಿವ್ಯಕ್ತಿಯನ್ನು ವಿಸ್ತಾರವಾಗಿ ಬರೆಯಬಹುದು.
ಉದಾಹರಣೆಗೆ ಒಂದು ರೋದನ ಸನ್ನಿವೇಶದ ವರ್ಣನೆಯನ್ನು ಹತ್ತು ಪುಟದಷ್ಟು ವಿಸ್ತಾರವಾಗಿ ಬರೆಯಬಹುದು.
ಇಂತಹ ಒಂದು ಅನುಕೂಲತೆ ಚಲನಚಿತ್ರದ ನಿರ್ದೇಶಕನಿಗೆ ಇರುವದಿಲ್ಲ.
ಆತನೇನಾದರೂ ಹತ್ತು ನಿಮಿಷದವರೆಗೆ ರೋದನ ಸನ್ನಿವೇಶನವನ್ನು ತೋರಿಸಿದರೆ, ಪ್ರೇಕ್ಷಕರು ಥಿಯೇಟರ್ ಖಾಲಿ ಮಾಡುತ್ತಾರೆ ; ನಿರ್ಮಾಪಕ ರೋದನ ಪ್ರಾರಂಭಿಸುತ್ತಾನೆ.

ನಿರ್ದೆಶಕನ ಪ್ರತಿಭೆ ವ್ಯಕ್ತವಾಗುವದು ಇಂತಹ ಸನ್ನಿವೇಶಗಳಲ್ಲಿಯೇ.
ಮೂಕಿ ಚಿತ್ರಗಳ ಕಾಲದಿಂದಲೇ ಪ್ರತಿಭಾವಂತ ನಿರ್ದೇಶಕರು ತಮ್ಮ ಜಾಣ್ಮೆಯನ್ನು ಇಂತಹ ಸನ್ನಿವೇಶಗಳ ಸೃಷ್ಟಿಯಲ್ಲಿ ತೋರಿಸುತ್ತಿದ್ದಾರೆ.
Hollywoodದಲ್ಲಿ ಮೂಕಿ ಚಿತ್ರಗಳನ್ನು ನಿರ್ಮಿಸಿದ ಚಾರ್ಲಿ ಚಾಪ್ಲಿನ್ ಇಂತಹ ಪ್ರತಿಭಾವಂತರಲ್ಲೊಬ್ಬ.
ಆತ ನಿರ್ಮಿಸಿದ ‘The Kid’ ಎನ್ನುವ ಮೂಕಿ ಚಲನಚಿತ್ರ ಸಾರ್ವಕಾಲಿಕ ಸರ್ವಶ್ರೇಷ್ಠ ಚಿತ್ರಗಳಲ್ಲೊಂದು.
ಈ ಚಿತ್ರದಲ್ಲಿ ಚಾರ್ಲಿ ಚಾಪ್ಲಿನ್ ಹೊಟ್ಟೆ ಹೊರೆದುಕೊಳ್ಳಲು ಒದ್ದಾಡುತ್ತಿರುವ, ಕಿಮ್ಮತ್ತಿಲ್ಲದ, ಒಬ್ಬ ಪುಕ್ಕಲು ಮನುಷ್ಯ.
ಈತ ಒಂದು ದಿನ ರಸ್ತೆ ಬದಿಯ ಕಸದ ಕುಂಡೆಯಲ್ಲಿ ಪರಿತ್ಯಕ್ತ ಪುಟ್ಟ ಕೂಸೊಂದನ್ನು ನೋಡುತ್ತಾನೆ.
ಅದನ್ನು ತನ್ನ ಮುರುಕಲು ಮನೆಗೆ ಕರೆತಂದು ತಾನೇ ಪಾಲನೆ ಮಾಡುತ್ತಾನೆ.
ಅದು ದೊಡ್ಡದಾದಂತೆ, ಜನರ ಮನೆಗಳ ಖಿಡಕಿಗಳಿಗೆ ಕಲ್ಲು ಎಸೆದು ಕಾಜು ಒಡೆಯಲು ಕಲಿಸಿಕೊಡುತ್ತಾನೆ.
ಅದು ಕಾಜು ಒಡೆದು ಓಡಿ ಹೋದ ಬಳಿಕ, ಈತ ತನ್ನ ಉಪಕರಣಗಳೊಂದಿಗೆ, ಆ ರಸ್ತೆಯಲ್ಲಿ ಖಿಡಕಿ ಕಾಜು ದುರಸ್ತಿಗಾರನಾಗಿ ಬರುತ್ತಾನೆ.
ಈ ರೀತಿಯಾಗಿ ಇವರಿಬ್ಬರೂ ಹೊಟ್ಟೆ ತುಂಬಿಸಿಕೊಳ್ಳುತ್ತಿರುವಾಗ, ಅಮೇರಿಕಾದಲ್ಲಿದ್ದ ಕಾನೂನುಗಳ ಮೇರೆಗೆ, ಪೋಲೀಸರು ಆ ಅನಾಥ ಪೋರನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಹೋಗುತ್ತಾರೆ.

ಈಗ ನಿರ್ಮಿಸಬೇಕಾದ ಭಾವಪೂರ್ಣ ಸನ್ನಿವೇಶವನ್ನು ಗಮನಿಸಿರಿ:
Authority ವಿರುದ್ಧ ಚಾರ್ಲಿ ಚಾಪ್ಲಿನ್ ಅಸಹಾಯಕ.
ಆತನಿಗೆ ತಾನು ಸಾಕಿದ ಪೋರನ ಮೇಲೆ ಮಮತೆ.
ಆದರೆ ಈ ಕಿಮ್ಮತ್ತಿಲ್ಲದ ದರಿದ್ರ ವ್ಯಕ್ತಿಯ ಅಳಲು ಅರಣ್ಯರೋದನವೇ ಸೈ.
ತನ್ನ ಪೋರನನ್ನು ತಾನು ತಿರುಗಿ ಪಡೆದೇನೆ ಎನ್ನುವ ಹತಾಶೆಯ ಜೊತೆಗೆ, ಪಡೆಯುವ ತೀವ್ರ ಬಯಕೆ.
ಮೂಕಿ ಚಿತ್ರಗಳ ಆ ಕಾಲದಲ್ಲಿ, ಮಾತುಗಳ ಸಹಾಯವಿಲ್ಲದೆ, ಹಿನ್ನೆಲೆ ಸಂಗೀತದ ಸಹಾಯವಿಲ್ಲದೆ ಇಂತಹ ಸನ್ನಿವೇಶವನ್ನು ಸೃಷ್ಟಿಸುವದು ಹೇಗೆ?

ದಿನವೆಲ್ಲಾ ತಿರುಗಿ ದಣಿದ ಚಾಪ್ಲಿನ್ ರಾತ್ರಿ ವೇಳೆ ಒಂದು ಮನೆಯ ಮುಚ್ಚಿದ ಬಾಗಿಲಿನ ಮೆಟ್ಟಲುಗಳ ಮೇಲೆ ಕುಸಿದು ಕೂಡುತ್ತಾನೆ, ಹಾಗೆಯೇ ಜೊಂಪಿನಲ್ಲಿ ಇಳಿಯುತ್ತಾನೆ.
ಆಗ ಕನಸೊಂದನ್ನು ಕಾಣುತ್ತಾನೆ.
ಕನಸಿನಲ್ಲಿ ಆತನಿಗೆ ರೆಕ್ಕೆಗಳಿವೆ. ರೆಕ್ಕೆಗಳ ಸಹಾಯದಿಂದ ಆತ ತನ್ನ ಪೋರನನ್ನು ಎತ್ತಿಕೊಂಡು ಹಾರಾಡುತ್ತಾನೆ; ಪೋಲೀಸ ಅಧಿಕಾರಿಯನ್ನು ಅನಾಯಾಸವಾಗಿ evade ಮಾಡುತ್ತಾನೆ.
ತನ್ನ ಪೋರನನ್ನು ತಾನು ಮರಳಿ ಕಸಿದುಕೊಳ್ಳುವದರಲ್ಲಿ ಯಶಸ್ವಿಯಾಗುತ್ತಾನೆ.
ಅಷ್ಟರಲ್ಲಿ ಬೆಳಗಾಗುತ್ತದೆ.
ಈತ ಕುಸಿದು ಕುಳಿತ ಮನೆಯ ಬಾಗಿಲು ತೆರೆಯುತ್ತದೆ.
ಮನೆಯಾತ ಈತನನ್ನು ಗದರಿಸಿ ದಬ್ಬುತ್ತಾನೆ.

'The Kid' ಚಿತ್ರವನ್ನು ಅಭಿಜಾತ ಚಲನಚಿತ್ರವನ್ನಾಗಿ ಮಾಡಿದ ಶ್ರೇಯಸ್ಸು ಈ fantasy sceneಗೆ ಸಲ್ಲಬೇಕು.
ಈ ಚಲನಚಿತ್ರದ ಯಾವ ದೃಶ್ಯದಲ್ಲೂ ವಾಸ್ತವತೆಯ ಹೂಬಾಹೂಬ ನಕಲು ಇಲ್ಲ.
ತನ್ನ ಪೋರನನ್ನು ಕಾಡುತ್ತಿದ್ದ ಕಿಡಿಗೇಡಿ ಹುಡುಗರ ಜೊತೆಗೆ ಹೋರಾಡಬೇಕಾದಂತಹ ಅನಿವಾರ್ಯ ಸನ್ನಿವೇಶದಲ್ಲಿಯೂ, ಅವಾಸ್ತವತೆಯೇ ಚಿತ್ರದ moving ಅಂಶವಾಗಿದೆ.
ಮುಖ್ಯವಾಗಿ ಚಾಪ್ಲಿನ್ fantasyಯ ಮಾಸ್ಟರ್.
ತಮ್ಮ ಅನೇಕ ಮೂಕಿ ಚಲನಚಿತ್ರಗಳಲ್ಲಿ ಅವರು fantasyಯನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.

ಭಾರತೀಯ ಚಿತ್ರಗಳಲ್ಲಿ ಸಂಕೇತವನ್ನು ಬಳಸಿದವರಲ್ಲಿ ಬಹುಶ: ಸತ್ಯಜಿತ ರಾಯರೇ ಮೊದಲಿಗರು.
‘ಪಥೇರ ಪಾಂಚಾಲಿ’ ಚಿತ್ರದ ಮುಂದಿನ ಭಾಗವಾದ ‘ಅಪರಾಜಿತೊ’ ಚಿತ್ರದಲ್ಲಿ ನಾಯಕಿಯ ಪತಿ ಹೃದಯಾಘಾತದಿಂದ ತೀರಿಕೊಳ್ಳುತ್ತಾನೆ.
ಆಕಾಶದಲ್ಲಿ ಹಕ್ಕಿಗಳು ಹಾರುವ ಮೂಲಕ ಆತ ನಿಧನ ಹೊಂದಿದ್ದನ್ನು ತೋರಿಸಲಾಗಿದೆ.
ಆ ಬಳಿಕ ಇದೊಂದು ಹಳಸಲು common scene ಆಗಿ ಹೋಯಿತು.
ಆದರೆ ಇದರ ಪ್ರಥಮ ಶ್ರೇಯಸ್ಸು ಸತ್ಯಜಿತ ರಾಯರಿಗೆ ಸಲ್ಲಬೇಕು.

ಸತ್ಯಜಿತ ರಾಯರ ಸಹಾಯಕರಾದ ಎನ್. ಲಕ್ಷ್ಮೀನಾರಾಯಣ ಇವರು ಕನ್ನಡದಲ್ಲಿ ‘ನಾಂದಿ’ ಎನ್ನುವ ಚಿತ್ರವನ್ನು ನಿರ್ದೇಶಿಸಿದರು.
ಆ ಅವಧಿಯಲ್ಲಿ ತುಂಬಾ ಪ್ರಸಿದ್ಧಿ ಪಡೆದ ಚಿತ್ರವಿದು.
ರಾಜಕುಮಾರರು ಈ ಚಿತ್ರದ ನಾಯಕ.
ಇವರ ಮೊದಲ ಹೆಂಡತಿಯಾಗಿ ಕಲ್ಪನಾ ಅಭಿನಯಿಸಿದ್ದಾರೆ.
ಕಲ್ಪನಾ ದುರ್ಮರಣಕ್ಕೀಡಾಗುತ್ತಾರೆ ಹಾಗು ಕೆಲಕಾಲದ ನಂತರ ರಾಜಕುಮಾರ ಎರಡನೆಯ ಮದುವೆಯಾಗುತ್ತಾರೆ.
ಹರಿಣಿ ಇವರ ಎರಡನೆಯ ಹೆಂಡತಿ.
ಇವಳು ಕಿವುಡಿ ಹಾಗೂ ಮೂಕಿ.
ಈ ಮಾತನ್ನು ಪ್ರೇಕ್ಷಕರಿಗೆ ತಿಳಿಸುವದು ಹೇಗೆ?

ಈಗ ಲಕ್ಷ್ಮೀನಾರಾಯಣರ ಜಾಣ್ಮೆಯನ್ನು ನೋಡಿರಿ:
ಮದುವೆಯ ದೃಶ್ಯಗಳನ್ನು ತೋರಿಸದೆ, ಹರಿಣಿ ಹೆಂಡತಿಯಾಗಿ ರಾಜಕುಮಾರರ ಮನೆಗೆ ಬಂದಲ್ಲಿಂದ ದೃಶ್ಯ ಪ್ರಾರಂಭವಾಗುತ್ತದೆ.
ರಾಜಕುಮಾರರು ಮನೆಯ ಒಂದು ಕೋಣೆಯಲ್ಲಿ ನಿಂತಿದ್ದಾರೆ.
ಪಕ್ಕದ ಕೋಣೆಯಲ್ಲಿ ಹರಿಣಿ ನಿಂತಿದ್ದಾರೆ.
ಅಲ್ಲಿಯೆ ಮೂಲೆಯಲ್ಲಿ ಮೊದಲ ಹೆಂಡತಿ ಕಲ್ಪನಾ ಬಳಸುತ್ತಿದ್ದ ತಂಬೂರಿ ಇದೆ.
ಹರಿಣಿ ತಂಬೂರಿಯ ತಂತಿಗಳ ಮೇಲೆ ಬೆರಳು ಎಳೆಯುತ್ತಾರೆ.
ಅವಳಿಗೆ ಏನೂ ಕೇಳಿಸುವದಿಲ್ಲ , ಆದರೆ ಪಕ್ಕದ ಕೋಣೆಯಲ್ಲಿದ್ದ ರಾಜಕುಮಾರರಿಗೆ ತಂಬೂರಿಯ ನಾದ ಕೇಳಿಸುತ್ತದೆ.

ಇಲ್ಲಿಯವರೆಗೂ ನೇರ ನಿರ್ದೇಶನದ ಚಲನಚಿತ್ರಗಳನ್ನು ನೋಡಿದ ಕನ್ನಡ ಪ್ರೇಕ್ಷಕರಿಗೆ ಈ indirect suggestion ತಂತ್ರದ ದೃಶ್ಯದಿಂದ ರೋಮಾಂಚನವಾಯಿತು.
ಉತ್ತಮ ನಿರ್ದೇಶನದ ಕನ್ನಡ ಚಿತ್ರಗಳಿಗೆ ನಾಂದಿ pioneer ಆಯಿತು.
ಈ ಚಿತ್ರದಿಂದ ಲಕ್ಷ್ಮೀನಾರಾಯಣ ಕನ್ನಡಿಗರ ಮನೆಮಾತಾದರು.

ಇದೇ ಸಮಯದಲ್ಲಿ ಪುಟ್ಟಣ್ಣ ಕಣಗಾಲ ಸಹ ಚಿತ್ರರಂಗ ಪ್ರವೇಶ ಮಾಡಿದರು.
‘ಗೆಜ್ಜೆಪೂಜೆ’ ಚಿತ್ರದಲ್ಲಿ ಪುಟ್ಟಣ್ಣನವರು ಒಂದು reverse technique ಬಳಸಿದ್ದಾರೆ.
ಗೆಜ್ಜೆಪೂಜೆ ಸಮಾರಂಭಕ್ಕೆ ನಾಯಕಿ ಕಲ್ಪನಾ ಮನಸ್ಸಿಲ್ಲದೇ ಒಪ್ಪಿಕೊಂಡಿದ್ದಾರೆ.
ಪೂಜೆಯ ಅಂಗವಾಗಿ ಅವರು ಗುಡಿಯೊಂದರಲ್ಲಿ ನರ್ತಿಸುತ್ತಿದ್ದಾರೆ.
ಪುರಂದರದಾಸರ “ಭಾಗ್ಯದಾ ಲಕ್ಷ್ಮೀ ಬಾರಮ್ಮಾ…” ಹಾಡನ್ನು ಹೆಂಗಸರು ಸಾಂಪ್ರದಾಯಕ ಶೈಲಿಯಲ್ಲಿ ಹಾಡುತ್ತಿದ್ದಾರೆ.
ಈ ದೃಶ್ಯಕ್ಕೆ ಪುಟ್ಟಣ್ಣನವರು ಯಾವುದೇ ಹಿನ್ನೆಲೆ ಸಂಗೀತ ಒದಗಿಸಿಲ್ಲ.
ಮತ್ತು ಆ ಕಾರಣಕ್ಕಾಗಿಯೇ ಈ ದೃಶ್ಯವು ತುಂಬಾ explosive ಆಯಿತು.
ಈ ದೃಶ್ಯವನ್ನು ನೋಡುತ್ತಿದ್ದಾಗ ಥಿಯೇಟರ್ ತುಂಬೆಲ್ಲ ಪ್ರೇಕ್ಷಕರು ಅಳುವದನ್ನು ನಾನು ಕೇಳಿದ್ದೇನೆ.

ಪುಟ್ಟಣ್ಣನವರು ನಿರ್ದೇಶಿಸಿದ ‘ಕಪ್ಪು ಬಿಳುಪು’ ಚಿತ್ರದಲ್ಲಿ ಕಲ್ಪನಾಗೆ double role.
ಒಬ್ಬಳು ಸಾತ್ವಿಕ ಹಳ್ಳಿಯ ಹುಡುಗಿ; ಇನ್ನೊಬ್ಬಳು ಪಟ್ಟಣದಲ್ಲಿದ್ದ ಅವಳ ಬಿನ್ದಾಸ್ ಸೋದರಿ.
ಒಳ್ಳೆ ಹುಡುಗಿ ಕಲ್ಪನಾಳ ಮುಗ್ಧತೆಯನ್ನು ಹಾಗೂ ಭೀರು ಸ್ವಭಾವವನ್ನು ಪ್ರೇಕ್ಷಕರಿಗೆ ಪರಿಚಯಿಸುವದು ಹೇಗೆ?
ಪುಟ್ಟಣ್ಣನವರ ಜಾಣ್ಮೆಯನ್ನು ಈ ದೃಶ್ಯದಲ್ಲಿ ನೋಡಿರಿ:
ಕಥಾನಾಯಕ ರಾಜೇಶರ ಮನೆಯ ಹಿತ್ತಿಲಿನಲ್ಲಿ, ಸಾತ್ವಿಕ ಹುಡುಗಿ ಕಲ್ಪನಾ ಹೂವು ಕೊಯ್ಯುತ್ತಿರುವಾಗ, ರಾಜೇಶ ಅಲ್ಲಿ ಬರುತ್ತಾರೆ ಹಾಗೂ ಕಲ್ಪನಾಳನ್ನು ಗದರಿಸುತ್ತಾರೆ.
ಕಲ್ಪನಾ ಗಡಗಡ ನಡಗುತ್ತಾಳೆ.
ಅವಳ ಕೈಯಿಂದ ಹೂವು ಜಾರಿ ಕೆಳಗೆ ಬೀಳುತ್ತದೆ.
ಗಾಬರಿಯಲ್ಲಿ ಅವಳು ಹೂವನ್ನು ಮರಳಿ ಬಳ್ಳಿಗೆ ಹಚ್ಚಲು ಪ್ರಯತ್ನಿಸುತ್ತಾಳೆ.
ಇಂತಹ ಒಂದೇ ದೃಶ್ಯದಿಂದ ನಿರ್ದೇಶಕರು ಕಲ್ಪನಾಳ ಮುಗ್ಧ ಹಾಗೂ ಭೀರು ಸ್ವಭಾವವನ್ನು ಪ್ರೇಕ್ಷಕರಿಗೆ ತೆರೆದಿಟ್ಟು ತೋರಿಸಿದರು.

‘ಸಂಸ್ಕಾರ’ ಚಿತ್ರವು ಕನ್ನಡದ ಪ್ರಥಮ ನವ್ಯ ಚಿತ್ರ.
ಅನಂತಮೂರ್ತಿಯವರು ತಮ್ಮ ಕಾದಂಬರಿಯಲ್ಲಿ ಸಂಸ್ಕಾರ vs ಮೂಲ ಪ್ರಕೃತಿ ಅಂದರೆ cultivated values versus basic instincts ಬಗೆಗೆ ಚರ್ಚೆ ಮಾಡಿದ್ದಾರೆ.
ಪ್ರಾಣೇಶಾಚಾರ್ಯರು ವೈದಿಕ ಸಂಸ್ಕಾರಗಳ ಪ್ರತಿನಿಧಿ.
ನಾರಣಪ್ಪನು ಸ್ವಚ್ಛಂದ ಪ್ರವೃತ್ತಿಯ ಪ್ರತಿನಿಧಿ.
ನಾರಣಪ್ಪ ಸತ್ತು ಹೋದಾಗ ಅವನ ಹೆಣದ ಸಂಸ್ಕಾರದ ಪ್ರಶ್ನೆ ಬರುತ್ತದೆ.
ಇದಕ್ಕೆ ಸಮಾಧಾನ ಕಂಡುಕೊಳ್ಳಲು ಪ್ರಾಣೇಶಾಚಾರ್ಯರು ಊರ ಹೊರಗಿನ ಹಣಮಪ್ಪನ ಗುಡಿಯಲ್ಲಿ , ಹಣಮಪ್ಪನ ಎದುರಿಗೆ ಕೂತು ಬಿಡುತ್ತಾರೆ.
ಮಧ್ಯರಾತ್ರಿಯಾದರೂ ಹಣಮಪ್ಪನಿಂದ ಯಾವ ಉತ್ತರವೂ ದೊರಕಿಲ್ಲ.
ಆಗ ಸತ್ತ ನಾರಣಪ್ಪನ ಸೂಳೆ ಚಂದ್ರಿ ಅಲ್ಲಿಗೆ ಬರುತ್ತಾಳೆ.
ದಣಿವಿನಿಂದ ಬಳಲಿದ ಪ್ರಾಣೇಶಾಚಾರ್ಯರು ಇವಳ ತೊಡೆಯ ಮೆಲೆ ಬೀಳುತ್ತಾರೆ.
ಅಲ್ಲಿಂದ ಮುಂದೆ, ಅವರು ಕಾಲು ಜಾರುತ್ತಾರೆ.
ನಿರ್ದೇಶಕರು ಇಲ್ಲಿಗೆ ಸಂಸ್ಕಾರಕ್ಕಿಂತ ಮೂಲಪ್ರಕೃತಿ ಹೆಚ್ಚಿಗೆ ಎಂದು ಹೇಳಿದಂತಾಯಿತು.
ಬರಿ ಹೇಳಿದರೆ ಸಾಕೆ? ಈ ಚರ್ಚಾವಸ್ತುವನ್ನು ದೃಶ್ಯಮಾಧ್ಯಮದಲ್ಲಿ ತೋರಿಸಬೇಡವೆ?
ಪ್ರಾಣೇಶಾಚಾರ್ಯರು ಚಂದ್ರಿಯೊಂದಿಗೆ ಕ್ರೀಡೆಯನ್ನು ಪ್ರಾರಭಿಸಿದಾಗ ದೂರದಲ್ಲಿ, ಹಳ್ಳಿಯಲ್ಲಿ ನಡೆಯುತ್ತಿರುವ ಬಯಲಾಟದ ಪಾತ್ರಧಾರಿಗಳ ಅಬ್ಬರ ಕೇಳಬರುತ್ತದೆ.
ಬಯಲಾಟದ ಅಬ್ಬರ ಇಲ್ಲಿ ಮೂಲಪ್ರಕೃತಿಯ ಪ್ರತಿನಿಧಿಯಾಗುತ್ತದೆ.
ಕಾದಂಬರಿಯಲ್ಲಿ ಇಲ್ಲದೇ ಇದ್ದ ಈ ಬಯಲಾಟದ ಅಬ್ಬರ, ಕಾದಂಬರಿಯ ಆಶಯವನ್ನು perfect ಆಗಿ ಪೂರೈಸುತ್ತದೆ.
ಇದು ನಿರ್ದೇಶಕರ ಪ್ರತಿಭೆ.

‘ವಂಶವೃಕ್ಷ’ ಚಲನಚಿತ್ರದಲ್ಲಿ ಕಾತ್ಯಾಯಿನಿಯ death wish ತೋರಿಸಲು ಕನಸಿನ ದೃಶ್ಯವನ್ನು ಬಳಸಲಾಗಿದೆ.
ಚಲನಚಿತ್ರದಲ್ಲಿ ಹೆಣದ ಮೆರವಣಿಗೆ ದೂರದಿಂದ ಬರುತ್ತಿರುವ ದೃಶ್ಯವನ್ನು ತೋರಿಸಲಾಗುತ್ತಿದೆ.
ಹೆಣದ ಚಟ್ಟ ಪ್ರೇಕ್ಷಕನ ಕಣ್ಣೆದುರಿಗೆ ಬರುತ್ತಿದ್ದಂತೆಯೇ, ಹೆಣವು ಸಟ್ಟನೆ ತನ್ನ ಮುಖವನ್ನು ತನ್ನ ಎಡಕ್ಕೆ ಅಂದರೆ ಪ್ರೇಕ್ಷಕರಿಗೆ ಎದುರಾಗಿ ಹೊರಳಿಸುತ್ತದೆ.
ಅದು ಕಾತ್ಯಾಯನಿಯ ಮುಖ!
ಅವಳ death wish ಈ ರೀತಿಯಾಗಿ ಪ್ರೇಕ್ಷಕನ ಮನಸ್ಸನ್ನು ಮುಟ್ಟುತ್ತದೆ.

ಭೈರಪ್ಪನವರ ‘ತಬ್ಬಲಿಯು ನೀನಾದೆ ಮಗನೆ’ ಚಿತ್ರದಲ್ಲಿ Cultural alienationದ ಚರ್ಚೆಯಿದೆ.
ಅಮೇರಿಕನ್ ಹುಡುಗಿಯನ್ನು ಮದುವೆ ಮಾಡಿಕೊಂಡು, ಕಥಾನಾಯಕ ತನ್ನ ಹಳ್ಳಿಗೆ ಮರಳುತ್ತಾನೆ.
ಅಲ್ಲಿ ಅವನ ಮೂಕಿ ಅವ್ವ ಮನೆತನವನ್ನು, ಒಕ್ಕಲುತನವನ್ನು ನೋಡಿಕೊಂಡು ಇರುತ್ತಿದ್ದಾಳೆ.
ನಾಯಕ ಹಾಗು ನಾಯಕನ ಹೆಂಡತಿ ಇಲ್ಲಿಯ ಪದ್ಧತಿಗಳನ್ನು ಬದಲಾಯಿಸಲು ಬಯಸುತ್ತಾರೆ.
ತಮ್ಮಲ್ಲಿದ್ದ ಆಕಳುಗಳನ್ನೆಲ್ಲ ನಾಯಕಿಯು ಕಟುಕರಿಗೆ ಮಾರಿ ಬಿಡುತ್ತಾಳೆ.
ನಾಯಕನ ಮನಸ್ಸು ಈಗ ಬದಲಾಗಿದೆ.
ಆತ ಆಕಳುಗಳನ್ನು ಮರಳಿ ಪಡೆಯಲು ಪಟ್ಟಣದ ಕಡೆಗೆ ಓಡುತ್ತಾನೆ.
ಹೋಗುತ್ತಿರುವಾಗಲೇ ಆತ ದನಗಳ ದೊಡ್ಡ ಮಂದೆ ಹೋಗುವದನ್ನು ನೋಡುತ್ತಾನೆ.
ಆದರೆ ಆತನಿಗೆ ತನ್ನ ದನಗಳ ಗುರುತೇ ಹತ್ತುವದಿಲ್ಲ!
ಇಷ್ಟೇ ಆಗಿದ್ದರೆ alienation ಎಂದು ಸುಮ್ಮನಾಗಿ ಬಿಡಬಹುದಿತ್ತು
ಆದರೆ ನಿರ್ದೇಶಕರ ಪ್ರತಿಭೆ ಮುಂದಿನ ನೋಟದಲ್ಲಿ ವ್ಯಕ್ತವಾಗಿದೆ.
ಈತನಿಗೆ ದನಗಳ ಗುರುತು ಹತ್ತದಿದ್ದರೇನಾಯ್ತು, ದನಗಳಿಗೆ ಈತನ ಗುರುತು ಹತ್ತಬಹುದಲ್ಲ; ಆದುದರಿಂದ ದನಗಳ ಹೆಸರನ್ನು ಹಿಡಿದು ಕೂಗಿ ಕರೆಯಿರಿ ಎಂದು ಒಬ್ಬರು ಸೂಚಿಸುತ್ತಾರೆ.
ಆತ “ಗಂಗೇ, ತುಂಗೇ, ಪುಣ್ಯಕೋಟಿ” ಎಂದು ಕೂಗುತ್ತಾನೆ.
ದನಗಳು ಈತನ ದನಿಯನ್ನು ಗುರುತಿಸದೆ ಹೋಗಿ ಬಿಡುತ್ತವೆ.
ಇಲ್ಲಿಗೆ alienation ಪೂರ್ಣವಾದಂತಾಯಿತು.
Neither he recognizes his cattle, nor the cattle recognize him.

ಇವೆಲ್ಲ ದೃಶ್ಯಗಳು cinema specific ದೃಶ್ಯಗಳು.
ಸಿನೆಮಾದ ವೈಯಕ್ತಿಕ ಚೌಕಟ್ಟನ್ನು ಮೀರಿದ ದೃಶ್ಯವೊಂದು ‘ಉಮರಾವ್ ಜಾನ್’ ಹಿಂದಿ ಚಲನಚಿತ್ರದಲ್ಲಿದೆ.
ಮೊಗಲರ ಕಾಲದ ಕತೆ ಇದು.
ಸುಮಾರು ಹನ್ನೆರಡು ಹದಿಮೂರು ವರ್ಷದ ಹಳ್ಳಿಯ ಹುಡುಗಿಯೊಬ್ಬಳು ತನ್ನ ಮನೆಯ ಅಂಗಳದಲ್ಲಿ ಇತರ ಪುಟ್ಟ ಹುಡುಗ ಹುಡುಗಿಯರೊಂದಿಗೆ ಆಡುತ್ತಿದ್ದಾಳೆ.
ಆ ಕುಟುಂಬದೊಡನೆ ದ್ವೇಷವಿರುವ ವ್ಯಕ್ತಿಯೊಬ್ಬ ಎತ್ತಿನ ಬಂಡಿಯಲ್ಲಿ ಅಲ್ಲಿ ಹಾಯ್ದು ಹೋಗುತ್ತಿರುವಾಗ ಇವರನ್ನು ನೋಡುತ್ತಾನೆ.
ದ್ವೇಷ ಸಾಧಿಸಲೆಂದು ಆ ಹುಡುಗಿಯನ್ನು ಪಟ್ಟನೆ ತನ್ನ ಬಂಡಿಯಲ್ಲಿ ಎತ್ತಿ ಹಾಕಿಕೊಂಡು ಹೋಗಿ ಬಿಡುತ್ತಾನೆ.
ಲಖನೌ ಮುಟ್ಟಿದ ಬಳಿಕ ಅವಳನ್ನು ವೇಷ್ಯಾಗೃಹವೊಂದಕ್ಕೆ ಮಾರುತ್ತಾನೆ.
ಆ ಹುಡುಗಿಯೇ ಮುಂದೆ ಹೆಸರುವಾಸಿ ವೇಷ್ಯೆ ಉಮರಾವ್ ಜಾನ್ ಆಗುತ್ತಾಳೆ.
ಹುಡುಗಿಯ ಅಪಹರಣದ ದೃಶ್ಯದ ನಂತರ ಅವಳನ್ನು ಮಾರುವ ದೃಶ್ಯವನ್ನು ತೋರಿಸಿದ್ದರೆ ಕತೆಯಲ್ಲಿ ಏನೂ ವ್ಯತ್ಯಾಸವಾಗುತ್ತಿರಲಿಲ್ಲ.
ಆದರೆ ಈ ಚಿತ್ರದ ನಿರ್ದೇಶಕರು ಚಿತ್ರದ ಆಶಯವನ್ನು ಮೀರಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.

ನಿರ್ಜನ ರಸ್ತೆಯಲ್ಲಿ ಬಂಡಿ ಸಾಗುತ್ತಿದೆ.
ಈಗಾಗಲೇ ಕತ್ತಲೆ ಕವಿದಿದೆ.
ಮಾರ್ಗಮಧ್ಯದಲ್ಲಿ ಬಂಡಿಯ ಹಿಂಭಾಗದಲ್ಲಿ ಆ ಹುಡುಗಿಯ ಮುಖವನ್ನು ಬಂಡಿಯ ಹೊರಗೆ ತೋರಿಸಲಾಗಿದೆ.
ಆ ಹುಡುಗಿಯ ಮುಖದ ಮೇಲೆ ಅಸಹಾಯಕತೆ ಹಾಗೂ resignation ಕೆತ್ತಿದಂತಿವೆ.
ಆ ದೃಶ್ಯವನ್ನು ನೋಡುತ್ತಿರುವ ಪ್ರೇಕ್ಷಕರಿಗೆ ಇದು ಕೇವಲ ಒಬ್ಬ ಉಮರಾವ್ ಜಾನ್ ಕತೆಯಾಗಿ ಉಳಿಯುವದಿಲ್ಲ.
ಭಾರತದಲ್ಲಿ ಪ್ರತಿ ದಿನವೂ ನೂರಾರು ಉಮರಾವ್ ಜಾನ್‌ಗಳು ಅಸಹಾಯಕರಾಗಿ ತಮ್ಮನ್ನು ಕ್ರೌರ್ಯಕ್ಕೆ ಒಪ್ಪಿಸಿಕೊಳ್ಳುತ್ತಿದ್ದಾರೆ.
ಇದನ್ನು ಹೇಳುವ ಮೂಲಕ ನಿರ್ದೇಶಕರು ಪ್ರೇಕ್ಷಕನ ಮನದ ತಂತಿಯೊಂದನ್ನು ಮಿಡಿಯುತ್ತಾರೆ.

ಉಮರಾವ್ ಜಾನ್ ಒಂದು specific ಕತೆಯುಳ್ಳ ಸಿನೆಮಾ.
ಆದರೆ social theme ಇರುವ ಕೆಲವು ಕತೆಗಳಿವೆ.
ಶ್ಯಾಮ ಬೆನಗಲ್ಲರ ಅಂಕುರ, ನಿಶಾಂತ ಮೊದಲಾದವುಗಳು ಇಂತಹ ಕತೆಗಳು.
ಬೆನಗಲ್ಲರಲ್ಲಿ ಕೆಮರಾಮನ್ ಆಗಿ ಕೆಲಸ ಮಾಡಿದ ಗೋವಿಂದ ನಿಹಲಾನಿ ಸ್ವತಃ ಒಂದು ಚಿತ್ರವನ್ನು ನಿರ್ದೇಶಿಸಿದರು.
ಅವರು ನಿರ್ದೇಶಿಸಿದ ಚಲನಚಿತ್ರ ‘ಆಕ್ರೋಶ’ದಲ್ಲಿ ಓಮ್ ಪುರಿ ಓರ್ವ ಅತಿ ಹಿಂದುಳಿದ communityಯ ಕೂಲಿ ಕೆಲಸಗಾರ.
ಊರಿನ ಪ್ರಮುಖ ವ್ಯಕ್ತಿಗಳಾದ ಜಮೀನುದಾರ, ನ್ಯಾಯಾಧೀಶ, ಪೋಲೀಸ ಅಧಿಕಾರಿ ಮೊದಲಾದವರೆಲ್ಲ ಆತನ ಹೆಂಡತಿಯ(ಸ್ಮಿತಾ ಪಾಟೀಲಳ) ಮೇಲೆ ಒಂದು ರಾತ್ರಿ ಅತ್ಯಾಚಾರ ಮಾಡುತ್ತಾರೆ.
(ಗಮನಿಸಿ: ಅತ್ಯಾಚಾರದ ದೃಶ್ಯವನ್ನು ತೋರಿಸಿಲ್ಲ!)
ಸಾಮೂಹಿಕ ಅತ್ಯಾಚಾರದಿಂದಾಗಿ ಅಕೆ ಸತ್ತು ಹೋಗುತ್ತಾಳೆ.
ಅವಳ ಹೆಣವನ್ನು ಬಾವಿಯಲ್ಲಿ ಒಗೆದು ಅವಳ ಗಂಡನ ಮೆಲೆ ಕೊಲೆಯ ಕೇಸನ್ನು ಹಾಕುತ್ತಾರೆ.
ಸಿನೆಮಾದ titles ಪ್ರಾರಂಭವಾಗುವದೇ ನ್ಯಾಯಾಲಯದ ದೃಶ್ಯದಿಂದ.
ಕೊಲೆಯಾದ ಸ್ಮಿತಾ ಪಾಟೀಲ ಹಾಗೂ ಓಮ್ ಪುರಿಯ ಶಿಶುವನ್ನು ಅವನ ತಂಗಿ ನ್ಯಾಯಾಲಯದಲ್ಲಿ ಎತ್ತಿಕೊಂಡು ಕೂತಿರುತ್ತಾಳೆ.
ನ್ಯಾಯಾಲಯದ scenes ಮುಗಿಯುತ್ತ ಬಂದಂತೆ, ಆ ಕೂಸು ಸಣ್ಣದಾಗಿ ಅಳಲು ಪ್ರಾರಂಭಿಸುತ್ತದೆ. ನ್ಯಾಯದಾನ ನೀಡುತ್ತಿದ್ದಂತೆಯೇ, ಆ ಕೂಸಿನ ಅಳು ಜೋರಾಗುತ್ತ, ಇಡೀ ನ್ಯಾಯಾಲಯವನ್ನು ತುಂಬಿಕೊಂಡು ಬಿಡುತ್ತದೆ.
ಭಾರತದ ಕನಿಷ್ಠ ಪ್ರಜೆಗಳು ಅಸಹಾಯಕ ಶಿಶುವಿನಂತೆ ಹೇಗೆ ನ್ಯಾಯವಂಚಿತರಾಗಿದ್ದಾರೆ, ಹೇಗೆ ಅವರು ಆಕ್ರೋಶಿಸುತ್ತಿದ್ದಾರೆ ಎನ್ನುವ ತಮ್ಮ ಕಥಾ-ಆಶಯವನ್ನು ಗೋವಿಂದ ನಿಹಲಾನಿ ಸಿನೆಮಾದ ಮೊದಲಲ್ಲೇ ತೋರಿಸಿಬಿಡುತ್ತಾರೆ.

ಬಹುಶ: ಈ ದೃಶ್ಯಕ್ಕೆ ಸ್ವಲ್ಪ ಮಟ್ಟಿನ ಪ್ರೇರಣೆ Alfred Hitchcock ಅವರ ಚಿತ್ರವೊಂದರಿಂದ ದೊರೆತಿರಬಹುದು.
ಆ ಚಿತ್ರದಲ್ಲಿ ಬರುವ ಯುವಕನೊಬ್ಬ rash ಆಸಾಮಿ, ತಲೆತಿರುಕ ಎನ್ನಬಹುದು.
ಆತನ ಮೇಲೆ ಕೊಲೆಯ ಆರೋಪವಿದೆ.
Scotland Yardನ ಅಧಿಕಾರಿಗಳು ಎಲ್ಲ ಸಾಕ್ಷ್ಯಗಳನ್ನು ಹುಡುಕಿ, ಪರಿಶೀಲಿಸಿ ಆತನ ಮೇಲೆ ಖಟ್ಲೆ ಹಾಕಿದ್ದಾರೆ.
ನ್ಯಾಯಾಲಯದಲ್ಲಿ ಖಟ್ಲೆ ನಡೆಯುತ್ತಿರುವಾಗ, ಮನೆಯಲ್ಲಿ ಊಟ ಮಾಡುತ್ತ ಕುಳಿತಿದ್ದ Yardನ ಅಧಿಕಾರಿಗೆ ತಟ್ಟನೆ ಈ ವ್ಯಕ್ತಿ ನಿರಪರಾಧಿ ಎಂದು ಹೊಳೆಯುತ್ತದೆ.
ತಾವು ಮಾಡಿದ ತಪ್ಪು ಆತನಿಗೆ ಗೊತ್ತಾಗುತ್ತದೆ.
ಆತ ನ್ಯಾಯಾಲಯಕ್ಕೆ ಧಾವಿಸುತ್ತಾನೆ.
ನ್ಯಾಯಾಲಯವನ್ನು ಆತ ತಲುಪಿದಾಗ, ಮುಚ್ಚಿದ ಕಾಜಿನ ಬಾಗಿಲುಗಳಿಂದ ಒಳಗಿನ ದೃಶ್ಯ ಗೋಚರವಾಗುತ್ತದೆ.
ಆರೋಪಿಯು ಜೋರಾಗಿ ಕೈಗಳನ್ನು ಅಲ್ಲಾಡಿಸುತ್ತಿರುತ್ತಾನೆ, ಬಹುಶ: ತಾನು ನಿರಪರಾಧಿಯೆಂದು ಹೇಳುತ್ತಿರಬಹುದು.
ಆತ ಹೇಳುವದು ಇವನಿಗೆ ಹಾಗೂ ಪ್ರೇಕ್ಷಕರಿಗೆ ಕೇಳುವದಿಲ್ಲ.
ಈತ ಗಾಜಿನ ಬಾಗಿಲನ್ನು ತೆರೆಯುತ್ತಿದ್ದಂತೆ, ನ್ಯಾಯಧೀಶರು ಆತನಿಗೆ ದಂಡನೆ ನೀಡುವ ತೀರ್ಪು ಕೇಳಿಸುತ್ತದೆ.
ಸಮಾಜದ ವ್ಯವಸ್ಥೆಯು ಆರೋಪಿಯ ಕೂಗಿಗೆ ಹೇಗೆ ಕಿವುಡಾಗಿದೆ ಎನ್ನುವ ಆಶಯವನ್ನು ವ್ಯಕ್ತಪಡಿಸುವ ಮೂಲಕ Alfred Hitchcock ಇವರು ಈ ಸಿನೆಮಾವನ್ನು ಸಾಮಾನ್ಯ ಪತ್ತೇದಾರಿ ಸಿನೆಮಾಗಿಂತ ಎತ್ತರದ ಸಾಮಾಜಿಕ ಸಿನೆಮಾ ಆಗಿ ಪರಿವರ್ತಿಸಿದ್ದಾರೆ.

ಇಲ್ಲಿ ಉದಾಹರಿಸಲಾದ ಕೆಲವು ಚಿತ್ರಗಳು ೪೦, ೫೦ ವರ್ಷಗಳಷ್ಟು ಹಳೆಯವು.
ಆ ಕಾಲದಲ್ಲಿ ಸಿನೆಮಾ ತಂತ್ರಜ್ಞಾನ ಅಷ್ಟಕ್ಕಷ್ಟೇ.
ಆದರೆ, ನಿರ್ದೇಶಕರು ಪ್ರತಿಭಾವಂತರಾಗಿದ್ದರು.
ಅಂತೆಯೇ ಇಷ್ಟು ವರ್ಷಗಳ ನಂತರವೂ ಇವು ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿ ನಿಂತಿವೆ.

ಇಂತಹ ಒಂದಾದರೂ ಪ್ರತಿಭಾವಂತ ದೃಶ್ಯವು Slumdog millionaire ಚಿತ್ರದಲ್ಲಿ ಇದೆಯೆ?
ಇಂತಹ ಪ್ರತಿಭೆಯ ಒಂದೇ ಉದಾಹರಣೆಯನ್ನಾದರೂ ಈ ಚಿತ್ರದಲ್ಲಿ ನೋಡಬಹುದೆ?
ಬಾಲಕ ಜಮಾಲ ಸಂಡಾಸದ ಹೊಲಸಿನಲ್ಲಿ ಹಾರುವ ಒಂದೇ ದೃಶ್ಯವಲ್ಲ, ಇಡೀ ಚಲನಚಿತ್ರವೇ ಸಂಡಾಸದ ಹೊಲಸಾಗಿದೆ!
Slumdog millionaire is just toilet shit.

33 comments:

Sushrutha Dodderi said...

ಒಳ್ಳೆಯ ಪಟ್ಟಿ. ಹಳೆಯ ಸುಮಾರು ಸಿನಿಮಾಗಳನ್ನು ನಾನು ನೋಡಿಯೇ ಇಲ್ಲ. ನೋಡ್ಬೇಕು. ಥ್ಯಾಂಕ್ಸ್.

shivu.k said...

ಸುನಾಥ್ ಸರ್,

ನಿಮ್ಮ ಲೇಖನವನ್ನು ಓದುತ್ತಾ ಹೋದಂತೆ ನಾನು ನೋಡಿದ[ನೀವು ಹೇಳಿದ]ಸಿನಿಮಾಗಳು ನೆನಪಾದವು ಪಥೇರ್ ಪಾಂಚಾಲಿ ಅಪರಾಜಿತ, ಕೆಲವು ಹಿಂದಿ ಚಿತ್ರಗಳನ್ನು ಬಿಟ್ಟರೆ ಉಳಿದೆಲ್ಲವನ್ನು ನೋಡಿದ್ದೇನೆ.....ನಾನು ನೋಡಿದ್ದ ದೃಷ್ಟಿಕೋನವೇ ಬೇರೆ[ಹೆಚ್ಚಾಗಿ ಫೋಟೋಗ್ರಫಿಗೆ ಸಂಭಂದಿಸಿದಂತೆ ಲಾಂಗ್ ಶಾಟ್‌ಗಳು ಕ್ಲೋಸ್‌ಅಪ್‌ಗಳು, ಸಂಕಲನಕ್ಕೆ ಸಂಭಂದಿಸಿದಂತೆ ಚಿತ್ರದ ವೇಗ, ಚಿತ್ರಕ್ಕೆ ಬಳಸಿರುವು ಬಣ್ಣಗಳು, [ಉದಾ: ಓಂ ಮತ್ತು ಉಪೇಂದ್ರ ಚಿತ್ರಗಳಿಗೆ ಹಳದಿ ಹೆಚ್ಚು ಇದೆ....ಹಾಗೆ ಜಾಲಿಡೇಶ್, ತೆಲುಗಿನ ಗೋದಾವರಿ,ಆರ್ಯದಲ್ಲಿ ಮನ ಪುಳಕಗೊಳಿಸುವ ನೆರಳು ಬೆಳಕು. ಇಂಗ್ಲೀಷಿನ ಆಪ್ಕೋಲಿಪ್ಟೋ, ಕನ್ನಡದ ಜೋಗಿ, ಇಂತಿ ನಿನ್ನ ಪ್ರೀತಿಯ, ದುನಿಯಾಗಳಿಗೆ ಸ್ವಾಭಾವಿಕ ಬೆಳಕನ್ನು ಬಳಸಿರುವುದು ಮುಂಗಾರು ಮಳೆ ಗಾಳಿಪಟ, ಪೂರ್ತಿ ತಂಪು ವಾತಾವರಣವನ್ನು ಬಳಸಿರುವುದು,] ಗಮನಿಸುತ್ತಿದ್ದೆ....
ಇದರ ಜೊತೆಗೆ ಮೈ ಆಟೋಗ್ರಾಫ್ ನಲ್ಲಿ ನಟನೆಯ ಜೊತೆಗೆ ದೃಶ್ಯಾವಳಿಯ ಟೇಕಿಂಗ್ಸ್, ಬ್ಲಾಕ್ ಸಿನಿಮಾದಲ್ಲಿ ನಟನೆ, ಶಾಟ್‌ಗಳು, ಗಮನಿಸುತ್ತಿದ್ದೆ.....ನೀವು ಹೇಳಿದ ಕೆಲವು ಚಿತ್ರಗಳನ್ನೂ ನೋಡಿದ್ದರೂ ನನಗೆ ಆಗ ಇದರ ಅರಿವು ಇಲ್ಲದ ಕಾರಣ ಆಷ್ಟೂ ಸೂಕ್ಷ್ಮವಾಗಿ ನೋಡಲು ತಿಳಿದಿರಲಿಲ್ಲ....ಇತ್ತೀಚೆಗೆ ನೀವು ಹೇಳಿದಂತೆ ನೋಡಲು ಪ್ರಾರಂಭಿಸಿದ್ದೇನೆ...ಇನ್ನೂ ಮುಂದೆ ನಿಮ್ಮ ರೀತಿ ಸಿನಿಮಾ ನೋಡಲು ಪ್ರಾರಂಬಿಸಿಸಬೇಕೆನಿಸುತ್ತದೆ....ನಿಜಕ್ಕೂ ಕೆಲವು ಒಳ್ಳೆಯ ವಿಚಾರವನ್ನು ಹಂಚಿಕೊಳ್ಳುತ್ತಿದ್ದೀರಿ....ಥ್ಯಾಂಕ್ಸ್...

sunaath said...

ಸುಶ್ರುತ,
ಹಳೆಯ ಸಿನೆಮಾಗಳಲ್ಲಿಯ ಕಳಪೆ ತಂತ್ರಜ್ಞಾನದಿಂದಾಗಿ ಕೆಲವು ಕನ್ನಡ ಸಿನೆಮಾಗಳು ಈಗ ಬೋರ್ ಆಗಬಹುದು.
ಅವುಗಳಲ್ಲಿ ನಿರ್ದೇಶಕನ ಪ್ರತಿಭೆ ಎಲ್ಲಿ ಮಿಂಚುತ್ತದೆಯೊ ಅವನ್ನಷ್ಟೇ ನೀವು ಗ್ರಹಿಸಬೇಕು!

sunaath said...

ಶಿವು,
ನೀವು ಸಿನೆಮಾದ ನಿರ್ಮಾಣತಂತ್ರಜ್ಞಾನದ ಕಡೆಗೆ ಗಮನ ಕೊಡುತ್ತಿದ್ದೀರಿ. ಈ ವಿಷಯದಲ್ಲಿ ನಾನು ತಿಳಿದವನಲ್ಲ. ಆದರೆ ನೀವು ಬರೆದದ್ದನ್ನು ಓದಿ, ಎಷ್ಟೆಲ್ಲಾ ಅಂಶಗಳು ಇಲ್ಲಿ ಇರುತ್ತವೆ ಎನ್ನುವದು ತಿಳಿಯಿತು.

Ittigecement said...
This comment has been removed by the author.
Ittigecement said...

ಸುನಾಥ ಸರ್...

ನೀವು ಹೇಳಿದ ಹೆಚ್ಚಿನ ಚಿತ್ರಗಳನ್ನು ನೋಡಿರುವೆ...

ನೀವು ಹೇಳಿದ ಹೆಚ್ಚಿನ ಸನ್ನೀವೇಷಗಳನ್ನು ಅನುಭವಿಸಿರುವೆ...

ಈಗ ಮತ್ತೊಮ್ಮೆ ನೋಡುವ ಆಸೆ ಮಾಡಿಬಿಟ್ಟಿದ್ದೀರಿ...

ಹಳೆಯದನ್ನೆಲ್ಲ ಜ್ಞಾಪಿಸಿದ್ದಕ್ಕೆ ಧನ್ಯವ್ವದಗಳು..

ಇನ್ನು ಸ್ಲಮ್ ಡಾಗ್ ಮಿಲಿಯನೇರ್" ಮಾಮೂಲಿ ಕಮರ್ಶಿಯಲ್ ಚಿತ್ರ..

ನಾನು ನಿಮ್ಮ ಹಿಂದಿನ ಲೇಖನಕ್ಕೆ ಅದೇ ಪ್ರತಿಕ್ರಿಯೆ ಕೊಟ್ಟಿದ್ದೆ..

ಇದಕ್ಕೆ ಯಾಕೆ ಇಷ್ಟೆಲ್ಲ "ವಿದೇಶಿ" ಪ್ರಶಸ್ತಿ ಬರುತ್ತಿದೆ?
ಇದಕ್ಕಿಂತ ಹಲವಾರು ಉತ್ತಮ ಚಿತ್ರಗಳು ನಮ್ಮಲ್ಲಿವೆ..

ಅದರ ಬಗೆಗೆ ಈಂಥಹ ಚಂದದ ಲೇಖನದಲ್ಲಿ ಮಾತಾಡಿದ್ದು ಸಾಕೆನಿಸುತ್ತದೆ..

ನಿಮ್ಮ ವಿಮರ್ಶೆಯ ನಂತರ ನೆನಪಾದದ್ದು "ದಿ ಲೈಫ್" ಚಿತ್ರ..

ಅದು ೬೦ ರ ದಶಕದಲ್ಲಿ ತೆಗೆದ ಚಿತ್ರ..
ಸುಮಾರು ೨೫ -೩೦ ನಿಮಿಷದ ಸಿನೇಮಾ..

ಅದ್ಭುತವಾಗಿದೆ..

ನನ್ನ ಈಮೇಲ್ " kash531@gmail.com"
ನಿಮ್ಮ "ಈ ಮೇಲ್" ಕೊಡುವಿರಾ?

ಸರ್ ...
ನಿಮಗೆ ಧನ್ಯವಾದಗಳು..

sunaath said...

ಪ್ರಕಾಶ,
ನಮ್ಮ ಚಿತ್ರನಿರ್ಮಾಪಕರ ದೃಷ್ಟಿಯೇ ಬೇರೆ, ಪಾಶ್ಚಾತ್ಯರ ದೃಷ್ಟಿಯೇ ಬೇರೆ.
ಒಟ್ಟಿನಲ್ಲಿ ನಾವೇ Oscar, Bookerಗಳಿಗೆ ಮಹತ್ವ ಕೊಡುವದನ್ನು ನಿಲ್ಲಿಸಬೇಕಷ್ಟೆ.

ತೇಜಸ್ವಿನಿ ಹೆಗಡೆ said...

ಕಾಕಾ,

ನೀವು ಹೇಳಿದ್ದರಲ್ಲಿ ಸತ್ಯತೆ ಇದೆ. ಲೇಖನದಲ್ಲಿ ಉಲ್ಲೇಖಿಸಿರುವ ಹಲವಷ್ಟು ಸಿನಿಮಾಗಳನ್ನು ನೋಡಿರುವೆ. ಮಂಡಿ, ನಾಂದಿ, ಗೆಜ್ಜೆಪೂಜೆ, ಕಲಿಯುಗ್ (ಹಿಂದಿ.. ಹಳೆಯ ಚಿತ್ರ), ಮಂಥನ್ ಇನ್ನೂ ಹಲವಾರು ಚಿತ್ರಗಳನ್ನು ಆಗಾಗ ನೋಡುತ್ತಿರಬೇಕೆನಿಸುತ್ತದೆ. ನಿಮ್ಮಲ್ಲಿ ಮಂಡಿ ಚಿತ್ರದ ಕಾಪಿ ಇದೆಯೇ? ಅದರಲ್ಲಿ ಅದ್ಭುತ ಅಭಿನಯ ನೀಡಿ ಶಬನಾ ಅವರನ್ನು ಮರೆಯುವ ಹಾಗಿಲ್ಲ.

ಅಂದಹಾಗೆ ಕುವೆಂಪು ಅವರ "ಮಲೆಗಳಲ್ಲಿ ಮದುಮಗಳು" ಕಾದಂಬರಿಯನ್ನು ಓದಿರುವಿರಾ? ಓದಿದ್ದರೆ ಇದರ ಕುರಿತು ನಿಮ್ಮ ಅನಿಸಿಕೆ, ಅಭಿಪ್ರಾಯ ಹಾಗೂ ವಿಮರ್ಶೆಯನ್ನು ಓದಲು, ತಿಳಿಯಲು ಉತ್ಸುಕಳಾಗಿರುವೆ. ಧನ್ಯವಾದಗಳು.

Anonymous said...

ಹಾಗೆಯೇ ಪುಟ್ಟಣ್ಣ ಕಣಗಾಲ್ ಅವರು ತುಂಬ ಹಿಂದೆಯೇ 'ನಾಗರ ಹಾವು' ಚಿತ್ರದ "ಬಾರೇ.. ಬಾರೇ.. ಚಂದದ ಚೆಲುವಿನ ತಾರೆ.." ಹಾಡಿನಲ್ಲಿ ಅರ್ಧ slow motion ಅರ್ಧ normal ಎಂಬಂತೆ ಚಿತ್ರಿಸಿದ್ದರು.ಇವತ್ತಿಗೂ ಈ ಹಾಡು ತನ್ನ ವಿಶಿಷ್ಟ ತಂತ್ರದಿಂದಲೇ ಮುದುಗೊಳ್ಳುತ್ತಿದೆ..
ಹಾಗೆಯೇ ಯಾವುದೋ ಕಪ್ಪು-ಬಿಳುಪು ಕನ್ನಡ ಚಿತ್ರದಲ್ಲಿ ಹೀರೋ ಸತ್ತು ಹೋದದ್ದನ್ನು, ಸೂತಕದ ಮನೆಯ ಮುಂಬಾಗಿಲು ಕಿರ್ರೆನ್ನುತ್ತ ತನ್ನಷ್ಟಕ್ಕೆ ತಾನೆ ತೆಗೆದುಕೊಳ್ಳುವ ಮೂಲಕ ಸೂಚಿಸಿದ್ದರು..

-ರಾಘವೇಂದ್ರ ಜೋಶಿ

PARAANJAPE K.N. said...

ಸುನಾಥ್ ಸರ್,
ಬಹಳ ದಿನಗಳಿ೦ದ ನಿಮ್ಮ ಬ್ಲಾಗ್ ನಲ್ಲಿ ಹೊಸ ಲೇಖನ ಬರುತ್ತಿಲ್ಲವಲ್ಲಾ ಅ೦ದುಕೊ೦ಡಿದ್ದೆ. ನಿಮ್ಮ ಲೇಖನ ಓದುವ ಆಸೆಯಲ್ಲಿ ದಿನವೂ ಇಣುಕಿ ನೋಡುತ್ತಿದ್ದೆ. ಇವತ್ತು ಅ ಸೌಭಾಗ್ಯ ಸಿಕ್ತು ನೋಡಿ. ಒ೦ದು ಕೆಟ್ಟ ಚಿತ್ರ ಕೂಡ ಹಲವಾರು ಒಳ್ಳೆಯ ಹಳೆಯ ಚಿತ್ರಗಳ ವಿಚಾರಗಳ ಕುರಿತು ಮೆಲುಕು ಹಾಕಲು ಪ್ರೇರಣೆಯಾಯ್ತಲ್ಲ?? ನಿಮ್ಮ ವಿಮರ್ಶೆ ನೋಡಿದ ನ೦ತರ ನಾನು Slum Dog ನೋಡಿದೆ. ನೀವು ಕೊನೆಯ ಸಾಲಿನಲ್ಲಿ ಹೇಳಿದ್ದೀರಲ್ಲ:-

"ಬಾಲಕ ಜಮಾಲ ಸಂಡಾಸದ ಹೊಲಸಿನಲ್ಲಿ ಹಾರುವ ಒಂದೇ ದೃಶ್ಯವಲ್ಲ, ಇಡೀ ಚಲನಚಿತ್ರವೇ ಸಂಡಾಸದ ಹೊಲಸಾಗಿದೆ!" ಇದು ಸತ್ಯ. India is not that bad.

ಅ೦ದ ಹಾಗೆ ನನ್ನ ಬ್ಲಾಗಿಗೊಮ್ಮೆ ಭೇಟಿ ಕೊಟ್ಟು ನೀವು ಓದಿರದ ಬರಹ ಓದಿದಲ್ಲಿ ಸ೦ತೋಷ.

ಸುಪ್ತದೀಪ್ತಿ suptadeepti said...

ಕಾಕಾ, ನೀವು ವಿಶ್ಲೇಷಿಸಿದ ಚಿತ್ರಗಳಲ್ಲಿ ಅರ್ಧವನ್ನೂ ನಾನು ನೋಡಿಲ್ಲ. ಆದರೆ, ನಿಮ್ಮ ವಿಷ್ಲೇಷಣೆ ಓದಿದ ಮೇಲೆ ನೋಡಲೇಬೇಕೆನಿಸಿದೆ.

ಸಂಡಾಗ್- ಚಿತ್ರಕ್ಕೆ ಪ್ರಶಸ್ತಿಗಳು ಬಂದಿರುವುದು, ಅದೊಂದು ಭಾರತೀಯ ಚಿತ್ರವೆಂದಲ್ಲ. ಭಾರತದ ತುಣುಕೊಂದನ್ನು ವಿದೇಶೀ ಕಣ್ಣುಗಳು ನೋಡುತ್ತಿರುವ ರೀತಿಗೆ. ಇದನ್ನೇ, ಇದೇ ಚಿತ್ರವನ್ನೇ, ಹೀಗೇನೇ, ಭಾರತೀಯರೇ ಮಾಡಿದ್ದರೆ ಯಾರೂ ಮೂಸುತ್ತಿರಲಿಲ್ಲ; ಅದು ಸತ್ಯ. ಈ ವಿದೇಶೀಯರಿಗೆ ಭಾರತ ಕಾಣೋ ರೀತಿಯೇ ವಿಚಿತ್ರ. ಇದು ನನ್ನ ಅನಿಸಿಕೆ ಮಾತ್ರ.

sunaath said...

ತೇಜಸ್ವಿನಿ,
ಮಂಡಿ ಚಿತ್ರದ copy ನನ್ನಲ್ಲಿ ಇಲ್ಲ. ಅದರಲ್ಲಿ ಶಬಾನಾಳ ಅಭಿನಯ ಅದ್ಭುತವಾಗಿದೆ.
ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಬಹಳ ಮೊದಲು ಓದಿದ್ದೆ. ಈಗ ಚರ್ಚೆ ಮಾಡಬೇಕೆಂದರೆ ಮತ್ತೊಮ್ಮೆ ಓದಬೇಕಾಗುತ್ತದೆ. ಮಾಡೋಣವಂತೆ.
-ಕಾಕಾ

sunaath said...

rj,
ನಾಗರಹಾವು ಚಿತ್ರವನ್ನು ನೆನಪು ಮಾಡಿಕೊಟ್ಟದ್ದಕ್ಕೆ ಧನ್ಯವಾದಗಳು. ನೀವು ಹೇಳಿದ ದೃಶ್ಯ ನನ್ನ ಮನಸ್ಸಿನಲ್ಲೂ ಸಹ
ಅಚ್ಚೊತ್ತಿ ನಿಂತಿದೆ.
ಪುಟ್ಟಣ್ಣನವರು ಹಾಡಿನ ದೃಶ್ಯಗಳನ್ನು ಚಿತ್ರೀಕರಿಸುವ ರೀತಿಯೇ
ಬೇರೆ, ಅಲ್ಲವೆ?
ಶರಪಂಜರ ಹಾಗೂ ಎಡಕಲ್ಲು ಗುಡ್ಡದ ಮೆಲೆ ಚಿತ್ರಗಳ ಹಾಡುಗಳ ದೄಶ್ಯಗಳು ಚಿರನೂತನ ದೄಶ್ಯಗಳಾಗಿವೆ.
Hats off to that great master!

sunaath said...

ಪರಾಂಜಪೆಯವರೆ,
ಧನ್ಯವಾದಗಳು.

sunaath said...

ಜ್ಯೋತಿ,
ಹಳೆಯ ಕನ್ನಡ ಚಿತ್ರಗಳಲ್ಲಿ ಪ್ರತಿಭೆ ಮಿಂಚಿದೆ. ಆದರೆ ತಂತ್ರಜ್ಞಾನದ ದೃಷ್ಟಿಯಿಂದ ಅವು ಈಗ ಕಳಪೆ ಅನ್ನಿಸಬಹುದು.
Slumdog millionaire ಚಿತ್ರದ ನಿರ್ಮಾಣ ಚೆನ್ನಾಗಿದೆ.
ಆದರೆ, ನೀನು ಹೇಳುವದು ಸರಿ. ಆ ಚಿತ್ರದ ನಿರ್ದೇಶಕರ ದೃಷ್ಟಿಕೋನವೇ ಬೇರೆ.

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ತುಂಬಾ ಸೊಗಸಾಗಿ ಚಿತ್ರಗಳ ವಿಶ್ಲೇಷಣೆ ಮಾಡಿರುವಿರಿ. ನಮ್ಮವರ ಪ್ರತಿಭೆ ಅಗಾಧ. ಪಾಶ್ಚಾತ್ಯರ ಟೆಕ್ನಾಲಜಿ ಸೇರಿದರೆ ಇನ್ನೂ ಅದ್ಭುತಗಳನ್ನು ಸಾಧಿಸುತ್ತಾರೆ.ನಾನು ಕೇವಲ ಫೋಟೋಗ್ರಫಿಯ ಅಂಶಕ್ಕೇ ಹೆಚ್ಚು ಒತ್ತುಕೊಡುವುದು ನನ್ನ ಪರಿಮಿತಿ. ನಿಮ್ಮ ಲೇಖನದಿಂದ ಚಿತ್ರವನ್ನು ಹೀಗೂ ನೋಡಬೇಕೆಂಬುದು ತಿಳಿಯಿತು.ಧನ್ಯವಾದಗಳು. ಬೆಳೆಗ್ಗೆ "ಬೈಸಿಕಲ್ ತೀಫ್" ನೋಡಿ ಇನ್ನೂ ಅದರ ಗುಂಗಲ್ಲೇ ಇದ್ದೇನೆ.

ಬಿಸಿಲ ಹನಿ said...

ಕೆಲವು ಸಂದರ್ಭಗಳನ್ನು ದೃಶ್ಯ ಮಾಧ್ಯಮಗಳಿಗೆ ಇಳಿಸುವದು ನಿಜಕ್ಕೂ ಕಷ್ಟದ ಕೆಲಸ. ಪುಟ್ಟಣ್ಣನವರು ಅರ್ಧ ನಿರ್ದೇಶಿಸಿದ "ಮಸಣದ ಹೂ" ಚಿತ್ರದಲ್ಲಿ ಸಹ ಇಂಥದೇ ಒಂದು ದೃಶ್ಯ ಬರುತ್ತೆ. ಚಿತ್ರದ ಕೊನೆಯಲ್ಲಿ ಈಗಾಗಲೇ ಬೇರುಬಿಟ್ಟಿರುವ ಸೂಳೆಗಾರಿಕೆಯನ್ನು ಬುಡಮಟ್ಟ ಕೀಳುವದು ಹೇಗೆ? ಎಂದು ಯೋಚಿಸುತ್ತಾ ಅಂಬರೀಷ ಅದನ್ನು ನಡೆಸುವ ಮುಖ್ಯಸ್ಥೆಯನ್ನು (ಜಯಂತಿಯನ್ನು) ಕತ್ತು ಹಿಸುಕಿ ಸಾಯಿಸಲು ನಿರ್ಧರಿಸುತ್ತಾನೆ. ಹಾಗೆ ಅವಳನ್ನು ಕತ್ತು ಹಿಸುಕಿ ಸಾಯಿಸುವಷ್ಟರಲ್ಲಿಯೇ ಅವಳು ಅವನ ಕೈಯಿಂದ ತಪ್ಪಿಹೋಗಿ ಮತ್ತೆ ಬೇರೆ ಕಡೆ ಬೇರೆ ಸೀರೆ ಉಟ್ಟು ಅಟ್ಟಹಾಸದ ನಗೆ ನಗುತ್ತಾ ಕಾಣಿಸಿಕೊಳ್ಲುತ್ತಾಳೆ. ಮತ್ತೆ ಅಲ್ಲಿಗೆ ನಾಯಕ ಹೋಗಿ ಅವಳನ್ನು ಸಾಯಿಸುವ ಪ್ರಯತ್ನ ಮಾಡುತ್ತಾನೆ. ಅವಳು ಮತ್ತ್ತೆ ತಪ್ಪಿಸಿಕೊಂಡು ಬೇರೆ ಸೀರೆ ಉಟ್ಟು ಬೇರೊಂದೆಡೆ ಮತ್ತೆ ಅಟ್ಟಹಾಸದಿಂದ ನಗುತ್ತಾಳೆ. ಹೀಗೆ ಇದು ಮುಂದುವರೆಯುತ್ತಲೇ ಹೋದಂತೆ ಅವಳು ಎಲ್ಲ ದಿಕ್ಕುಗಳಲ್ಲಿ ಕಾಣಿಸಿಕೊಂಡು ಅವಳ ಅಟ್ಟಹಾಸದ ನಗೆ ಜೋರಾಗುತ್ತಲೇ ಹೋಗುತ್ತದೆ. ಅಲ್ಲಿಗೆ ಚಿತ್ರ ಮುಗಿಯುತ್ತದೆ.
ಅಂದರೆ ಸೂಳೆಗಾರಿಕೆಯನ್ನು ಎಲ್ಲೋ ಒಂದು ಕಡೆ ಹತ್ತಿಕ್ಕಿದರೆ ಅದು ಇನ್ನೊಂದು ಏಳುತ್ತದೆ ಎನ್ನುವದನ್ನು ಅತ್ಯಂತ ಪರಿಣಾಮಕಾರಿಯಾಗಿ ಸೂಚ್ಯವಾಗಿ ಹೇಳಲಾಗುತ್ತದೆ.

"ಅಮೆರಿಕಾ ಅಮೆರಿಕಾ" ಚಿತ್ರದಲ್ಲಿ ಅಡಿಗರ ಮೋಹನ ಮುರಳಿ ಕವನ ಅಳವಡಿಸಲಾಗಿದೆಯಷ್ಟೆ? ಅದರಲ್ಲಿ "ವಿವಶವಾಯಿತು ಪ್ರಾಣಃ " ಎನ್ನುವ ಸಾಲುಗಳನ್ನು ನಾಯಕ ಸತ್ತ ದೃಶ್ಯದೊಂದಿಗೆ ತೋರಿಸಲಾಗುತ್ತದೆ. ಹಾಗೆ ಅಮೂರ್ತವಾದುದನ್ನು ಮೂರ್ತ ರೂಪದಲ್ಲಿ ಹೇಳಬಾರದಾಗಿತ್ತೆಂದು ಲಂಕೇಶ್ ತಮ್ಮ ಪತ್ರಿಕೆಯಲ್ಲಿ ಖಂಡಿಸಿ ಬರೆದಿದ್ದರು. ಆದರೆ ಮೊದಲ ಎಲ್ಲಾ ಸಾಲುಗಳನ್ನು ಸಂದರ್ಭೋಚಿತವಾಗಿ ತೋರಿಸಿ ಇದನ್ನು ಸಹ ಅದೇ ಅರ್ಥದಲ್ಲಿ ತೋರಿಸಿದ್ದರಿಂದ ನನಗೆ ತಪ್ಪಾಗಿ ಕಾಣಿಸಲಿಲ್ಲ. ಇದಕ್ಕೆ ನಿಮ್ಮ ಅಭಿಪ್ರಾಯವೇನು?

sunaath said...

ಮಲ್ಲಿಕಾರ್ಜುನ,
Photography ಹಾಗೂ ಇತರ ತಂತ್ರಗಳಿಗೆ ಸಂಬಂಧಿಸಿದಂತೆ ಚಲನಚಿತ್ರಗಳ ವಿಮರ್ಶೆಯನ್ನು ನೀವು ಕೊಡಬಾರದೇಕೆ?

sunaath said...

ಉದಯ,
ಮಸಣದ ಹೂವು ಚಿತ್ರವನ್ನು ಚೆನ್ನಾಗಿ ವಿಮರ್ಶಿಸಿರುವಿರಿ. ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ಕವನದ ಸಾಲುಗಳಿಗೆ ಆ ದೃಶ್ಯವು ಸರಿಯಾಗಿದೆ ಎಂದೇ ನನ್ನ ಭಾವನೆ. ಅಮೂರ್ತ ಭಾವನೆಯ ಮೂರ್ತೀಕರಣದಲ್ಲಿ ತಪ್ಪೇನಿದೆ?

sritri said...

ಕಾಕಾ, ಚಿತ್ರಪ್ರಿಯಳಾದ ನನಗೆ ನಿಮ್ಮ ಈ ಬಾರಿಯ ಬರಹ ತುಂಬಾ ಮೆಚ್ಚುಗೆಯಾಯಿತು. ಸಂಸ್ಕಾರ ಒಂದನ್ನು ಬಿಟ್ಟು ನೀವು ಹೇಳಿದ ಬಹುಪಾಲು ಸಿನಿಮಾ ನೋಡಿದ್ದೇನೆ ಅನಿಸಿತು. ಈಗ ಸಿನಿಮಾಗಳಿದೆ ಸುರಿಯುವ ದುಡ್ಡಿಗೆ ಲೆಕ್ಕವೇ ಇಲ್ಲ. ಆದರೂ ಅಂದಿನ ಗುಣಮಟ್ಟ ಇಂದೇಕಿಲ್ಲ ಅನ್ನಿಸುತ್ತದೆ. ಪುಟ್ಟಣ್ಣ ಕಣಗಾಲರಂತಹ ನಿರ್ದೇಶಕರಿಗೆ ಇವತ್ತಿನ ಸೌಲಭ್ಯಗಳೆಲ್ಲಾ ಸಿಕ್ಕಿದ್ದರೆ ಏನೆಲ್ಲಾ ಸೃಷ್ಟಿಸುತ್ತಿದ್ದರೋ, ಎಂದು ಕಲ್ಪಿಸಿಕೊಂಡು, ಕೊರಗುವಂತಾಗುತ್ತದೆ. ಒಟ್ಟಿನಲ್ಲಿ ಇರದುದರೆಡೆಡೆ ತುಡಿತ ತಪ್ಪದೇನೊ.


ತೇಜಸ್ವಿನಿ ಸೂಚಿಸಿರುವ "ಮಲೆಗಳಲ್ಲಿ ಮದುಮಗಳು" ಪೋಸ್ಟಿಗೆ ನಾನು ಕಾದಿರುತ್ತೇನೆ.

sunaath said...

ತ್ರಿವೇಣಿ,
ಚಲನಚಿತ್ರಗಳು ಕನ್ನಡದಲ್ಲಿ ಪ್ರಾರಂಭವಾದ ಹೊಸತರಲ್ಲಿ, ನಮ್ಮ ನಟರು, ನಿರ್ದೇಶಕರು ಎಲ್ಲರೂ ತರುಣರೇ ಅಲ್ಲವೆ? ಆ ತಾರುಣ್ಯವೆ ಕೆಲವು ಸಿನೆಮಾಗಳಿಗೆ plus point ಆಗಿದೆ.
ಬೇಡರ ಕಣ್ಣಪ್ಪ ಚಿತ್ರದ ರಾಜಕುಮಾರರನ್ನು ನೆನಪಿಸಿಕೊಳ್ಳಿರಿ.
ಕಣ್ಣಪ್ಪನ ಮುಗ್ಧತೆಯು ತರುಣ ರಾಜಕುಮಾರರಲ್ಲಿ ಸಹಜವಾಗಿಯೇ ಇದೆ.
ಹಣ್ಣೆಲೆ ಚಿಗುರಿದಾಗ ಚಿತ್ರದಲ್ಲಿ "ಹೂವು ಚೆಲುವೆಲ್ಲಾ ತಂದೆಂದಿತು" ಹಾಡಿನ ದೃಶ್ಯ ನೆನಪಿಸಿಕೊಳ್ಳಿ. ಅಲ್ಲಿ ಒಳ್ಳೆಯ ಕೆಮರಾ ಇರಲಿಕ್ಕಿಲ್ಲ, ಆದರೆ ಕಲ್ಪನಾಳ freshnessದಿಂದಾಗಿಯೇ ಆ ದೃಶ್ಯ ಅಮರವಾಗಿದೆ.

ಈಗ ನಮ್ಮಲ್ಲಿ ಒಳ್ಳೆಯ ಉಪಕರಣಗಳು ಹಾಗು ಸಾಕಷ್ಟು ದುಡ್ಡು ಇದೆ. ಆದರೆ ಬಾಲನಟರ ಮುಖದಲ್ಲಿಯೂ ಸಹ
innocence ಇಲ್ಲ.

ಚಿತ್ರಾ said...

ಕಾಕಾ,
ಪಟ್ಟಿಯಲ್ಲಿನ ಬಹಳ ಸಿನೆಮಾಗಳನ್ನು ನಾನು ನೋಡಿಲ್ಲ. ನಿಮ್ಮ ಲೇಖನ ಓದಿದ ಮೇಲೆ ನೋಡಬೇಕೆನಿಸುತ್ತಿದೆ.ಎಷ್ಟೋ ಒಳ್ಳೆಯ ಸಿನೆಮಾಗಳನ್ನು ನೋಡಿ ಮೆಚ್ಚುತ್ತೇವೆ. ಆದರೆ ನಿರ್ದೇಶಕನ ಇಂಥಾ ತಂತ್ರಗಳನ್ನು ಗಮನಿಸುವುದು ಕಡಿಮೆ.
ನನಗೆ ನೆನಪಿರುವುದು ಹಿಂದಿ ಚಿತ್ರ "ಬ್ಲಾಕ್ " ನ ಕೊನೆಯ ಭಾಗ. ತನ್ನ ನೆನಪಿನ ಶಕ್ತಿಯನ್ನು ಪೂರ್ಣವಾಗಿ ಕಳೆದುಕೊಂಡ ಅಮಿತಾಭ್ ಪಾತ್ರ ಇರುವ ಕೋಣೆಯಿಡೀ ಬರೀ ಸ್ವಚ್ಛ ಬಿಳಿಬಣ್ಣ !ಎಲ್ಲವನ್ನೂ ಅಳಿಸಿ ಸಣ್ಣ ಕಲೆಯೂ ಇರದಂತೆ ಶುಭ್ರಗೊಳಿಸಿದ ಬಿಳಿಗೋಡೆ ! ಜೊತೆಗೆ ಅಮಿತಾಭ್ ಹಾಗೂ ರಾಣಿಯ ಅದ್ಭುತ ಅಭಿನಯ !

ಧನ್ಯವಾದಗಳು ಕಾಕಾ. ನಿರ್ದೇಶಕನ ದೃಷ್ಟಿಕೋನದಿಂದ ಚಿತ್ರ ನೋಡುವಂತೆ ಮಾಡಿದ್ದಕ್ಕೆ !

sunaath said...

ಚಿತ್ರಾ,
ಬ್ಲ್ಯಾಕ್ ಸಿನೆಮಾದ ಈ ದೃಶ್ಯದ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು. ನಿರ್ದೇಶಕರ ಜಾಣ್ಮೆ ಪ್ರೇಕ್ಷಕನ ಕಣ್ಣಿಗೆ ಬಿದ್ದಾಗಲೆ
ಅವರು ಧನ್ಯರಾಗುತ್ತಾರೆ.
ಇಂತಹ ಜಾಣ್ಮೆಯ ವಿವರಗಳನ್ನು ಸಿನೆಮಾ ಪತ್ರಿಕೆಗಳು ತಮ್ಮ ವಿಮರ್ಶೆಯಲ್ಲಿ ಎತ್ತಿ ತೋರಿಸಬೇಕು. ಆವಾಗ ನಿರ್ದೇಶಕರಿಗೂ
ಹುರುಪು ಬಂದೀತು.

Keshav.Kulkarni said...

ಸುನಾಥ,
ಲೇಖನದ ಧ್ವನಿ ಚೆನ್ನಾಗಿದೆ.

ಇಲ್ಲಿ ಕಾಸರವಳ್ಳಿಯ ಸಿನೆಮಾಗಳನ್ನು ಪ್ರಸ್ತಾಪಿಸದಿದ್ದರೆ ಪೂರ್ಣವಾಗುವುದಿಲ್ಲ ಎನಿಸಿ ಈ ಟಿಪ್ಪಣೆ:

ಕಾಸರವಳ್ಳಿಯ ಬಹುತೇಕ ಸಿನೆಮಾಗಳು ಸಣ್ಣ ಕತೆ ಆಧಾರಿತ. "ಸಂಸ್ಕಾರ" ಕೂಡ ಒಂದು ನೀಳ್ಗತೆ, ಕಾದಂಬರಿಯಾಗುವಷ್ಟು ದೊಡ್ಡದಲ್ಲ. "ತಬರನ ಕತೆ", "ಬಣ್ಣದ ವೇಷ", "ಮನೆ", "ದ್ವೀಪ" ಗಳಲ್ಲಿ ಮೂಲಕತೆಯನ್ನು ಆಧರಿಸಿ ಕಾಸರವಳ್ಳಿ ಹೊಸದೊಂದು ಲೋಕವನ್ನೇ ಸೃಷ್ಟಿಸುತ್ತಾರೆ. ಕತೆಯಲ್ಲಿರುವ ಪಾತ್ರಗಳನ್ನೇ ಕೇಂದ್ರಬಿಂದುವಾಗಿಟ್ಟುಕೊಂಡು ಹೊಸ ಘಟನೆಗಳು, ಹೊಸ ಆಯಾಮಗಳು, ಹೊಸ ಪಾತ್ರಗಳು ಅವರ ಸಿನೆಮಾವನ್ನು ಮೂಲ ಕತೆಗಿಂತ ಹೆಚ್ಚು ಸಂಕೀರ್ಣವಾಗಿ ಹೆಚ್ಚು ಅರ್ಥಪೂರ್ಣವಾಗಿ ಮಾಡಿದ್ದಾರೆ. ಮೂಲ ಕತೆಗಳನ್ನು ಓದಿ ಸಿನೆಮಾ ನೋಡಿದರೆ ಕಾಸರವಳ್ಳಿಯವರ ಸಿನೆಮಾ ಮಾಧ್ಯಮದ ಮೇಲಿನ ಹಿಡಿತವಷ್ಟೇ ಅಲ್ಲ, ಬದುಕಿನ ಬಗ್ಗೆ ಅವರಿಗೆ ಇರುವ ಕಾಳಜಿ, ಬದುಕಿನ ಸಂಕೀರ್ಣತೆಯನ್ನು ಅವರು ಸಿನೆಮಾ ಮಾಧ್ಯಮದಲ್ಲಿ ಹಿಡಿದಿಡುವ ತಾಳ್ಮೆ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಕಾಸರವಳ್ಳಿ ಸಿನೆಮಾ ಮಾಧ್ಯಮವನ್ನು ಇತರ ಕತೆ ಕಾದಂಬರಿ ಆಧಾರಿತ ನಿರ್ದೇಶಕರಿಗಿಂತ (ಪುಟ್ಟಣ್ಣ) ತುಂಬ ಭಿನ್ನವಾಗಿ ದುಡಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಅವರು ಉಪಯೋಗಿಸುವ ಕತೆಗಳೂ ಇತರ ನಿರ್ದೇಶಕರಿಗಿಂತ (ಪುಟ್ಟಣ್ಣ - ಭಾವುಕ ಕಾದಂಬರಿಗಳು) ತುಂಬ ಭಿನ್ನ.

ನಾನೀಗಾಗಲೇ "ಕೆಂಡಸಂಪಿಗೆ"ಯಲ್ಲಿ ಬರೆದಿರುವಂತೆ (http://kendasampige.com/article.php?id=2015) ವಿಕಾಸ್ ಸ್ವರೂಪರ "Q and A" ಕಾದಂಬರಿಯೇ ತೃತೀಯ ದರ್ಜೆಯ ಕಾದಂಬರಿ. ಆದರೂ ಅದನ್ನು ಸಿನೆಮಾ ಮಾಧ್ಯಮಕ್ಕೆ ಅಳವಡಿಸಿರುವ ಪರಿ ಮಾತ್ರ ತುಂಬ ಚೆನ್ನಾಗಿದೆ. ಆದರೆ ಇಂಥಹ ಕತೆಯನ್ನು ಸಿನೆಮಾ ಮಾಡಲು ಏಕೆ ಉಪಯೋಗಿಸಿದರೋ ಮತ್ತು ಇಂಥ ಚಿತ್ರ ಯಾಕಿಷ್ಟು ಗದ್ದಲ ಪ್ರಶಸ್ತಿಗೆ ಕಾರಣವಾಗುತ್ತಿದೆಯೋ ಎಂಬ ಪ್ರಶ್ನೆಗಳು ಇನ್ನೂ ಹೆಚ್ಚಿನ ವಿಶ್ಲೇಷಣೆ ಬೇಡುತ್ತವೆ.

- ಕೇಶವ (www.kannada-nudi.blogspot.com)

sunaath said...

ಕೇಶವ,
ಸತ್ಯಜಿತ ರಾಯರ ತರಹ ಕಾಸರವಳ್ಳಿಯವರೂ ಸಹ ತಮ್ಮ ಸಿನೆಮಾಗಳಲ್ಲಿ underplay ಮಾಡುತ್ತಾರೆ. ‘ತಬರನ ಕತೆ’ ಇದಕ್ಕೆ ಉತ್ತಮ ಉದಾಹರಣೆ ಎಂದು ಅನಿಸುತ್ತದೆ. ಗುಲಾಬಿ ಟಾಕೀಜ್ ಚಿತ್ರವನ್ನು ನಾನು ಇನ್ನೂ ನೋಡಿಲ್ಲ. ಅದೂ ಸಹ ಅವರ ಇತರ ಚಿತ್ರಗಳಂತೆ under-played ಚಿತ್ರವಿರಬಹುದು?
ಕೆಂಡಸಂಪಿಗೆಯಲ್ಲಿಯ ನಿಮ್ಮ ಲೇಖನ ಓದಿದ್ದೇನೆ. ನಿಮ್ಮ ವಿಶ್ಲೇಷಣೆ ಚೆನ್ನಾಗಿದೆ. ಸಿನೆಮಾದವರಿಗೆ ಕಳಪೆ ಕತೆಗಳೇ ಆಹಾರವಲ್ಲವೆ?

ಚಂದ್ರಕಾಂತ ಎಸ್ said...

ಲೇಖನ ಬಹಳ ಚೆನ್ನಾಗಿದೆ. ಇದರೊಂದಿಗೆ ಇನ್ನೆರಡು ಚಿತ್ರಗಳನ್ನು ಸೇರಿಸಬಹುದೇನೋ. ಲಕ್ಷ್ಮೀನಾರಾಯಣ್ ಅವರ ಉಯ್ಯಾಲೆ- ತನ್ನ ವಿಶಿಷ್ಟ ವಸ್ತುವನ್ನೂ ಸಮರ್ಪಕವಾಗಿ, ತನ್ನೆಲ್ಲ ಸಂಕೀರ್ಣಗಳನ್ನು ಒಳಗೊಂಡಿರುವ ಚಿತ್ರ. ಅಶ್ವಥ್, ಅವರ ಪತ್ನಿಯಾಗಿ ಕಲ್ಪನಾ ಮತ್ತು ಅವರ ಮನೆಗೆ ಬರುವ ಅವಿವಾಹಿತನಾಗಿ ರಾಜಕುಮಾರ್ ಇವರೆಲ್ಲರ ಪ್ರತಿಭೆಯು ಇಲ್ಲಿ ಅನಾವರಣವಾಗಿದೆ.ಆ ಚಿತ್ರದ ಜೀವಾಳದಂತಹ ದೃಶ್ಯ - ಕಲ್ಪನಾ ಮತ್ತು ರಾಜ್ ಪರಸ್ಪರ ಆಕರ್ಷಿತರಾಗುವುದು, ( ಅದನ್ನು ಇಂದಿನ ಚಿತ್ರಗಳಂತೆ ನೇರವಾಗಿ ತೋರಿಸಿಲ್ಲ) ಕಡೆಗೊಮ್ಮೆ ಕಲ್ಪನಾ ತನ್ನ ಮನದ ಭಾವನೆಗಳನ್ನು ಹತ್ತಿಕ್ಕಲಾರದೆ ರಾಜ್ ಕೋಣೆಯ ಬಾಗಿಲು ತಟ್ಟುವುದು - ಈ ದೃಶ್ಯದ ಸಂಕೀರ್ಣತೆ, ಪಾತ್ರಗಳ ಅದಮ್ಯ ಭಾವನೆಗಳು, ಭಾವನೆಗಳ ಸಂಕೀರ್ಣತೆ ಇವುಗಳನ್ನು ಪದಗಳಲ್ಲಿ ವರ್ಣಿಸಲಾಗದು

ನಾಂದಿಯಲ್ಲಿ ಹರಿಣಿಯ ಕಿವುಡುತನದ ಬಗ್ಗೆ ಹೇಳಿದ ಕೂಡಲೇ ಹಿಂದಿಯ ‘ ಕೋಶಿಶ್ ’ ಚಿತ್ರ ನೆನಪಿಗೆ ಬಂತು. ಅದರನಾಯಕ ಸಂಜೀವ್ ಕುಮಾರ್ ಮತ್ತು ನಾಯಕಿ ಜಯಾಬಾದುರಿ ಇಬ್ಬರೂ ಕಿವುಡ-ಮೂಗರು. ಅವರ ವಿವಾಹಾನಂತರ ಮಗು ಹುಟ್ಟಿದಾಗ ಅದು ಕಿವುಡು ಹೌದೋ ಅಲ್ಲವೋ ಎಂದು ಮಲಗಿದ ಮಗುವಿನ ಮುಂದೆ ಗಿಲಕಿಯನ್ನಾಡಿಸುತ್ತಾರೆ. ಎಷ್ಟೇ ಆಡಿಸಿದರೂ ಮಗು ಅದಕ್ಕೆ ಸ್ಪಂದಿಸುವುದಿಲ್ಲ. ದಂಪತಿಗಳು ಗೋಳಾಡುತ್ತಾ ಡಾಕ್ಟರ್ ಬಳಿ ಹೋಗಿ ಗಿಲಕಿಯನ್ನು ತೋರಿಸಿ ಅಭಿನಯದಲ್ಲೇ ಎಲ್ಲವನ್ನೂ ವರ್ಣಿಸುತ್ತಾರೆ. ಆಗ ಡಾಕ್ಟರ್ ಗಿಲಕಿಯನ್ನು ಅಲ್ಲಾಡಿಸುತ್ತಾನೆ. ನೋಡಿದರೆ ಗಿಲಕಿಯ ಒಳಗೆ ಏನೂ ಇರುವುದಿಲ್ಲ,ಆದ್ದರಿಂದ ಶಬ್ದ ಬರುವುದಿಲ್ಲ. ಪಾಪ ಕಿವುಡ ದಂಪತಿಗಳಿಗೆ ಅದರ ಅರಿವಾಗುವುದಾದರೂ ಹೇಗೆ?

ಗುಲಾಬಿ ಟಾಕೀಸ್ ಒಳ್ಳೆಯ ಚಿತ್ರ. ಅವರ ಹಿಂದಿನ ಚಿತ್ರಗಳಷ್ಟು ಉದ್ದೇಶಪೂರ್ವಕವಾಗಿ underplay ಆಗಿಲ್ಲ.ಜಾಗತಿಕರಣದ ಪ್ರಭಾವ - ನಮ್ಮ ನಡುವೆ ಕೋಮುವಾದ ಕ್ರಮೇಣ ಹೆಚ್ಚಾಗುತ್ತಿರುವ ರೀತಿ ಅದ್ಭುತವಾಗಿ ಚಿತ್ರಿತವಾಗಿದೆ.

Harisha - ಹರೀಶ said...

ಸ್ಲಮ್ ಡಾಗ್ ಬಿಟ್ಟರೆ ಇದರಲ್ಲಿ ನೀವು ಹೆಸರಿಸಿರುವ ಒಂದು ಚಲನಚಿತ್ರವನ್ನೂ ನಾನು ನೋಡಿಲ್ಲ! ಬಹುಶಃ ಅದರ ಬಗ್ಗೆ ನನ್ನ ನಿರಾಸಕ್ತಿಯೇ ಕಾರಣವಿರಬಹುದೇನೋ... ಇನ್ನಾದರೂ ಇವುಗಳಲ್ಲಿ ಕೆಲವನ್ನಾದರೂ ನೋಡಲು ಪ್ರಯತ್ನಿಸುತ್ತೇನೆ.

ಸ್ಲಮ್ ಡಾಗ್ ಬಗ್ಗೆ ಮಾತ್ರ ಹೇಳಬಲ್ಲೆ.. ಅದು ನೀವು ವರ್ಣಿಸಿರುವಂತೆಯೇ ಇದೆ!!

ಒಂದು ಸಂಶಯ: "ಸತ್ಯಜಿತ್ ರಾಯ" ಎಂದು ಬರೆದಿರುವಿರಿ.. ಅದು "ಸತ್ಯಜಿತ್ ರೇ" ಎಂದಾಗಬೇಕಲ್ಲವೇ?

sunaath said...

ಚಂದ್ರಕಾಂತಾ,
ಉಯ್ಯಾಲೆ ತುಂಬ ಸುಂದರವಾದ ಚಲನಚಿತ್ರ. ರಾಜಕುಮಾರ ಹಾಗೂ ಕಲ್ಪನಾರ ನಡುವಿನ ಆಕರ್ಷಣೆಯ ದೃಶ್ಯವನ್ನು ಲಕ್ಷ್ಮೀನಾರಾಯಣರು ತುಂಬಾ ಚೆನ್ನಾಗಿ ತೋರಿಸಿದ್ದಾರೆ.
ಸತ್ಯಜಿತ ರಾಯರ ‘ಚಾರುಲತಾ’ ಸಹ ಇಂತಹದೇ ಕತೆಯನ್ನೊಳಗೊಂಡ ಚಿತ್ರ.

sunaath said...

ಹರೀಶ,
ಸತ್ಯಜಿತ ‘ರಾಯ’ರ ಹೆಸರನ್ನು ಆಂಗ್ಲ scriptನಲ್ಲಿ ಬರೆದಾಗ Ray ಎಂದು ಬರೆಯುತ್ತಾರಲ್ಲವೆ? ಅದನ್ನೇ ನಾವು ಆಂಗ್ಲರಂತೆ ‘ರೇ’ ಎಂದು ಉಚ್ಚರಿಸುತ್ತಿದ್ದೇವೆ!
ಸತ್ಯ ಆದರೂ ವಿಚಿತ್ರ!

Anonymous said...

ಸುನಾಥರೆ,
ನನಗೆ ತಿಳಿದಿರುವಹಾಗೆ, ಬಂಗಾಲಿಯಲ್ಲಿ ರಾಯ = Ray ಪದವನ್ನು Roy ಎಂದು ಉಚ್ಚರಿಸುತ್ತಾರೆ. ಆದುದರಿಂದ ಸತ್ಯಜಿತ್ ರಾಯರು ಬಂಗಾಳ ಉಚ್ಚರದಲ್ಲಿ ಸತ್ಯಜಿತRoy ಆಗುತ್ತಾರಲ್ಲವೆ?

-ಕರುಣಾ

sunaath said...

ಕರುಣಾ,
ಬಂಗಾಲಿಗಳು ‘ಅ’ವನ್ನು ‘ಒ’ ರೀತಿ ಉಚ್ಚರಿಸುತ್ತಾರೆ. ಹೀಗಾಗಿ ನಿರುಪಾ ರಾಯ್ ಅನ್ನುವ ಬಂಗಾಲಿ ನಟಿ ಹಿಂದಿಯಲ್ಲಿ ನಿರುಪಾ Roy ಎಂದು ಪ್ರಸಿದ್ಧಳಾದಳು. ಅದರಂತೆ ಕಾಜಲ್ ಹಾಗೂ ಕಂಕಣಾ ಸೇನ್ ಇವರು ಕಾಜೊಲ್ ಹಾಗೂ ಕೊಂಕಣಾ ಸೇನ್ ಆಗಿದ್ದಾರೆ.
ಸತ್ಯಜಿತ ರಾಯರು ತಮ್ಮ ಹೆಸರನ್ನು ಬಂಗಾಲಿಯಲ್ಲಿ ರಾಯ ಎಂದೇ ಬರೆಯುತ್ತಾರೆ ಹಾಗೂ Roy ಎಂದು ಉಚ್ಚರಿಸುತ್ತಾರೆ.
ಇಂಗ್ಲೀಶಿನಲ್ಲಿ ಸಹ ಅವರು ರಾಯ=Ray ಎಂದು ಬರೆಯುವದರಿಂದ ಬಂಗಾಲ ಹೊರತಾಗಿ ಉಳಿದೆಡೆ ಅವರು ಸತ್ಯಜಿತ ರೇ ಆಗಿದ್ದಾರೆ.

Archu said...

kaka,
oLLeya paTTiyannu neeDiddeeri..thank you kaka..

preetiyinda,
archu

sunaath said...

ಅರ್ಚು,
At your service!
-ಕಾಕಾ