Thursday, February 19, 2009

“ಚರ್ಚು ಏನಿದು ಪರ್ಚು?”

ಅನಂತ ಕಲ್ಲೋಳರು ಕನ್ನಡದ ಸುಪ್ರಸಿದ್ಧ ವಿನೋದ ಸಾಹಿತಿಗಳು. ವಿನೋದ ಸಾಹಿತಿ ಎಂದಾಕ್ಷಣ ಕೇವಲ ವಿನೋದಕ್ಕೆ ಸೀಮಿತ ಲೇಖನಗಳನ್ನು ಬರೆಯುತ್ತಾರೆಂದು ತಿಳಿಯದಿರಿ. ಅವರ ವಿನೋದವು ವೈಚಾರಿಕತೆಗೆ ಹೊದಿಸಿದ ಮೇಲುಪರದೆ ಅಷ್ಟೆ.

‘ಚರ್ಚು ಏನಿದು ಪರ್ಚು? ’ ಎನ್ನುವ ಈ ವಿನೋದ ಲೇಖನ ಕನ್ನಡಿಗರು ಮರೆತು ಬಿಟ್ಟ ಕೆಲವು ಪದಗಳನ್ನು ಅವರ ಕಣ್ಣೆದುರಿಗೆ ಹಿಡಿಯುತ್ತಲೇ, ಅನೇಕ ಸತ್ಯದರ್ಶನಗಳನ್ನು ಮಾಡಿಸುತ್ತದೆ.

ಶ್ರೀ ಅನಂತ ಕಲ್ಲೋಳರ ಮತ್ತೊಂದು ಲೇಖನ “ಹೆಸರಿನ ಕುಸುರು ಪಸರಿಸಿದಾಗ”ವನ್ನು ಸಹ ‘ಸಲ್ಲಾಪ’ದಲ್ಲಿ ಈಗಾಗಲೇ ಕೊಡಲಾಗಿದೆ. ಆ ಲೇಖನಕ್ಕಾಗಿ http://sallaap.blogspot.com/2008/06/blog-post_28.html ನೋಡಿರಿ.

ಲೇಖನವನ್ನು ‘ಸಲ್ಲಾಪ’ದಲ್ಲಿ ಪ್ರಕಟಿಸಲು ಅನುಮತಿ ಇತ್ತ ಶ್ರೀ ಅನಂತ ಕಲ್ಲೋಳರಿಗೆ ಅನಂತ ಧನ್ಯವಾದಗಳು.
...................................
“ಚರ್ಚು ಏನಿದು ಪರ್ಚು?”
ಪದಗಳ ಅರ್ಥ ಸಂದಿಗ್ಧವಾದಾಗ ಸಂಶಯದಗ್ಧನಾದ ನಾನು ಮುಗ್ಧಭಾವದಿಂದ ನಿಘಂಟು ತೆರೆದು ನೋಡುತ್ತೇನೆ. ಚರ್ಚು ಎಂದರೇನೆಂದು ತಿಳಿಯಲು ನಾನು ‘ಸಂಕ್ಷಿಪ್ತ ಕನ್ನಡ ನಿಘಂಟು’ ತೆರೆದು ನೋಡಿದಾಗ ಕಂಡ ಮೊದಲನೇ ಅರ್ಥ ‘ಮಗುವನ್ನು ಕಂಕುಳಲ್ಲಿ ಎತ್ತಿಕೊಳ್ಳು’ ಎಂದಾದರೆ ಎರಡನೇ ಅರ್ಥ ‘ಕ್ರಿಶ್ಚಿಯನ್ನರ ದೇವಾಲಯ’ ಎಂಬುದು ನನಗೆ ಬಲು ಮೋಜೆನಿಸಿತು. ಕನ್ನಡ ಚರ್ಚು ಎಂದರೆ ಮಗುವನ್ನು ಕಂಕುಳಲ್ಲಿ ಎತ್ತಿಕೊಳ್ಳುವದು ಎಂಬುದು ಸದ್ಯ ಬಳಕೆಯಲ್ಲಿ ಉಳಿದಿಲ್ಲವಾದರೂ, ಇಂಗ್ಲಿಷಿನಿಂದ ಕನ್ನಡಿಸಿಕೊಂಡ ಚರ್ಚು ಭರ್ಜರಿಯಾಗಿ ಬಳಕೆಯಲ್ಲಿ ಉಳಿದು ಬೆಳೆದಿದೆ. ನಾವು ಕನ್ನಡಿಗರು ಆಂಗ್ಲ ಪದಗಳಿಗೆ ಕೊನೆಯಲ್ಲಿ ‘ಉ’ಕಾರದ ಕೊಂಡಿಯನ್ನು ತೊಡಿಸಿ ಸುಲಭವಾಗಿ ಕನ್ನಡ ಪದವನ್ನಾಗಿ ಬ್ಯಾಪ್ಟಾಯಿಸು ಮಾಡುತ್ತೇವೆ, ದೀಕ್ಷೆ ನೀಡುತ್ತೇವೆ. ಕೋರ್ಟು, ಜೈಲು, ಹ್ಯಾಟು, ಬ್ಯಾಟು, ಕೋಟು ಹೀಗೆ ಪುಂಖಾನುಪುಂಖವಾಗಿ ನಿರೂಪಿಸಬಹುದು, ಈ ಕನ್ನಡ ದೀಕ್ಷಾಬದ್ಧ ಆಂಗ್ಲ ಪದಗಳನ್ನು. ಗನ್ನು, ಪೆನ್ನು, ಬಾಂಬು, ಸೈನೈಡು, ಗ್ರೆನೇಡು ಏನೆಲ್ಲ ಆವಿರ್ಭವಿಸಿವೆಯಲ್ಲ ನಮ್ಮ ಕಸ್ತೂರಿ ಕನ್ನಡದಲ್ಲಿ,ಈ ದೀಕ್ಷಾ ಪ್ರಕ್ರಿಯೆಯಲ್ಲಿ. ನನಗೆ ಚರ್ಚು ಏನಿದು ಪರ್ಚು ಎಂಬ ಸಂದಿಗ್ಧತೆಯು ಕಾಡಿದಾಗ ಮೂಡಿದ ಮೂಡು ಇದು; ಗಮನವಿರಲಿ ಈ ಮೂಡು ಕೂಡ ಕನ್ನಡೀಕರಣದ ದೀಕ್ಷೆಗೆ ಒಳಪಟ್ಟ ಆಂಗ್ಲ ಪದವೇ!

ನಮಗೀಗ ಹೀಗೆ ಮತಾಂತರಿತವಾದ ಪದಗಳು ಎಷ್ಟೊಂದು ರೂಢಿಯಾಗಿವೆ ಎಂದರೆ ನಮ್ಮ ಕನ್ನಡದ ಮೂಲ ಪದಗಳೇ ಅಸ್ಪೃಶ್ಯವಾಗಿ, ಅವಾಚ್ಯವಾಗಿ, ಅದೃಶ್ಯವಾಗಿ ಹೋದಂತಾಗಿವೆ. ಚರ್ಚು ಏನಿದು ಪರ್ಚು? ಎಂದು ನಾನು ತಲೆ ಕೆರೆಯುತ್ತಿದ್ದರೆ ನೀವು ‘ಪರ್ಚು’ ಎಂದರೇನೆಂದು ತಲೆ ಖರ್ಚು ಮಾಡುತ್ತಿರಬಹುದು. ಪರ್ಚು ಎಂದರೆ ‘ಪಿಸು ಮಾತನ್ನಾಡು’ ‘ಪಿಸುಗುಟ್ಟು’ ಮತ್ತು ‘ಗುಟ್ಟು’ ಎಂಬುದಾಗಿ ವಿವಿಧಾರ್ಥಗಳಿವೆ. ಈ ಪರ್ಚು ಆಂಗ್ಲಭಾಷೆಯಿಂದ ಮತಾಂತರಿತ ಪದ ಅಲ್ಲರೀ ಮತ್ತ, ಅಪ್ಪಟ ಕನ್ನಡ ಪದ. ಅಪ್ಪಟ ಕನ್ನಡ ಪದ ಅನ್ನೋದಕ್ಕೆ ಪುರಾವೆ ಏನೆಂದರೆ ಕನ್ನಡಿಗರು ಅದನ್ನು ಬಳಸುವದಿಲ್ಲ; ಮಿಶ್ರ ತಳಿಯ ಅಥವಾ ಬ್ಯಾಪ್ಟಾಯಿಸುಗೊಂಡ ಪದಗಳೇ ಅವರಿಗೆ ಪ್ರಿಯ. ಈ ಚಾಳಿ ಎಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ ರತ್ನಕೋಶ ಎಂಬಕಿರುಹೊತ್ತಿಗೆಯಲ್ಲಿ ‘ಚರ್ಚು’ ಎಂಬುದಕ್ಕೆ ಕ್ರಿಶ್ಚಿಯನ್ನರ ದೇವಾಲಯ ಎಂಬ ಅರ್ಥವನ್ನು ಮಾತ್ರ ನೀಡಲಾಗಿದೆ; ಕನ್ನಡದ ಮೂಲಾರ್ಥವಾದ ‘ಮಗುವನ್ನು ಕಂಕುಳಲ್ಲಿ ಎತ್ತಿಕೊಳ್ಳು’ ಎಂಬುದಕ್ಕೆ ‘ಖೊಕ್’ ಕೊಡಲಾಗಿದೆ.

ಆಂಗ್ಲ ಪದಗಳನ್ನು ‘ಉ’ಕಾರದ ದೀಕ್ಷೆಯೊಂದಿಗೆ ಕನ್ನಡಪದಗಳನ್ನಾಗಿ ಪರಿವರ್ತಿಸುವದಕ್ಕೆ ಇನ್ನೂ ಯಾರೂ ತಕರಾರು ಮಾಡಿದಂತಿಲ್ಲ. ಅದನ್ನು ಬಲವಂತದ ಧರ್ಮಾಂತರ, ಆಮಿಷ ಒಡ್ಡಿ ಮಾಡಿದ ಮತಪರಿವರ್ತನೆ ಎಂಬಂತಾಗಿ ವಿರೋಧ ಮಾಡಿದ್ದೂ ಇಲ್ಲ. ಆಂಗ್ಲಭಾಷಿಕರು ಸಹ ನಮ್ಮ ಪದಗಳಿಗೆ ಹೀಗೆ ದೀಕ್ಷೆ ನೀಡಿ ಅಪಹರಿಸಿದ್ದಾರೆಂದು ಹುಯಿಲು ಎಬ್ಬಿಸಿಲ್ಲ. ಕಾರಣವೇನೆಂದರೆ ಹೀಗೆ ಕನ್ನಡ ಭಾಷೆಯವರು ಅವರ ಪದಗಳನ್ನು ದೋಚಿದ್ದರಿಂದ ಅವರಿಗೆ ನಷ್ಟವೇನೂ ಆಗಿಲ್ಲ. ಬದಲಾಗಿ ದಾನ ನೀಡಿದ ಹಿರಿಮೆಯ ಗರಿಮೆ ಪೆರ್ಮೆಗಟ್ಟಿದೆ. ಪದಗಳನ್ನು ಬೇರೆ ಭಾಷಿಕರು ಅವರವರ ನುಡಿಯ ಜಾಯಮಾನಕ್ಕೆ ಅನುಗುಣವಾಗಿ ದೀಕ್ಷೆ ಕೊಟ್ಟು ಅಂಗೀಕರಿಸಿಕೊಂಡರೂ ಮೂಲಭಾಷೆಯಲ್ಲಿಯ ಆ ಪದಗಳ ಅಸ್ತಿತ್ವಕ್ಕೇನೂ ಊನ ಉಂಟಾಗದಲ್ಲ! ಇಂಥ ಧರ್ಮಾಂತರ ಅಥವಾ ಭಾಷಾ-ಅಂತರವೆನ್ನಿ, ಸಮಾಜದಲ್ಲಿ ಕ್ಷೋಭೆಗೆ ಕಾರಣವಾಗುವದಿಲ್ಲ; ಬದಲಿಗೆ ನುಡಿಗಳ ಶೋಭೆಗೆ ಹೂರಣವಾಗುವವು. ನಿರ್ಜೀವ ಅಮೂರ್ತ ಪದಗಳ ದೀಕ್ಷಾಂತರ, ಧರ್ಮಾಂತರ, ಮತಾಂತರದಿಂದಾಗಿ ಸಮಾಜದಲ್ಲಿ ಶಾಂತಿ ಕದಡುವ ಪ್ರಮೇಯ ಕಡಮೆ; ಆದರೆ ಅದೇ ದೀಕ್ಷಾಂತರ, ಧರ್ಮಾಂತರ, ಮತಾಂತರ ವ್ಯಕ್ತಿಯ ಸಂಬಂಧದಲ್ಲಿ ನಡೆದಾಗ ಪರಿಸ್ಥಿತಿಯು ಹದಗೆಡುವದನ್ನು ಕಾಣುತ್ತೇವೆ. ಅದಕ್ಕೆ ಕಾರಣವೂ ಸ್ಪಷ್ಟವಾಗಿದೆ. ಇಂಥ ಧರ್ಮಾಂತರ, ದೀಕ್ಷಾಂತರ, ಮತಾಂತರಗಳಿಂದ ಮೂಲ ಧರ್ಮದಲ್ಲಿಯ ಜನರ ಸಂಖ್ಯೆ ಖೋತಾ ಆಗುತ್ತದೆ ಹಾಗು ಧರ್ಮಾಂತರದಿಂದಾಗಿ ಅದನ್ನು ಎಸಗಿದವರ ಸಂಖ್ಯೆ ಉಬ್ಬರಗೊಳ್ಳುತ್ತದೆ. ವಿವೇಕಾನಂದರಂತಹ ವಿವೇಕವಂತರು ಸಹ ಇದನ್ನು ಸರಿಯಾಗಿ ಪರೀಕ್ಷಿಸಿ ಒಬ್ಬ ಹಿಂದೂ ಅನ್ಯಧರ್ಮಕ್ಕೆ ದೀಕ್ಷಾಂತರಗೊಂಡಲ್ಲಿ ಹಿಂದೂಗಳ ಸಂಖ್ಯೆ ಒಂದರಿಂದ ಕೊರೆಯಾದರೆ ಪ್ರತಿಸ್ಪರ್ಧಿಯ ಬಲ ಒಂದರಿಂದ ಅಧಿಕಗೊಳ್ಳುತ್ತದೆ , ಅಂದರೆ ಇಮ್ಮಡಿ ಕೊರೆತ ಎಂದು ಮನಗಂಡಿದ್ದರು.


ಚರ್ಚು ಎಂದರೆ ‘ಮಗುವನ್ನು ಕಂಕುಳಲ್ಲಿ ಎತ್ತಿಕೊಳ್ಳು’ ಎಂಬ ಅರ್ಥ ಉಂಟಷ್ಟೆ. ಅದನ್ನು ಗಮನದಲ್ಲಿಟ್ಟು ಕೆಲ ಚರ್ಚುಗಳು ಕಂಡ ಕಂಡ ಕೂಸುಗಳನ್ನೆಲ್ಲ ಚಾಕ್ಲೆಟ್, ಪೆಪ್ಪರ್ಮಿಂಟ್ಗಳ ಆಮಿಷ ಒಡ್ಡಿ ತಮ್ಮ ಕಂಕುಳಲ್ಲಿ ಕುಳ್ಳಿರಿಸಿಕೊಂಡು ಹೋಗುವಂತಾದಾಗ ಹುಯಿಲೇಳುವದು ಸಹಜವೇ. ಮಕ್ಕಳಕಳ್ಳರನ್ನು ಬೆನ್ನಟ್ಟಿ ಬಾರಿಸುವ ಸುದ್ದಿಗಳು ಬರ್ತಾನೆ ಇರ್ತಾವಲ್ಲ.

ನಿಮ್ಮ ಮನೆಯವರು ದುಷ್ಟರಿದ್ದಾರೆ. ಅನ್ಯಾಯ ಮಾಡ್ತಾರೆ. ನಿಮ್ಮ ದೇವರು ದಿಂಡರು ಹಾಗೆ ಹೀಗೆ; ನಮ್ಮದೆಲ್ಲ ಅಪ್ಪಟ ಚಿನ್ನ. ಆದ್ದರಿಂದ ನಿಮ್ಮನ್ನು ಚರ್ಚುತ್ತೇವೆ ಅಂದರೆ ನಮ್ಮ ಕಂಕುಳಲ್ಲಿ ಕೂಡ್ರಿಸಿಕೊಳ್ಳುತ್ತೇವೆ ಎಂದು ಗದ್ದಲವೆಬ್ಬಿಸಿದವರಿಗೆ ಅವರ ಧರ್ಮದವರೇ ಆದ ಶ್ರೀ ಬೆಂಜಮಿನ್, ಅಲ್ಬುಕರ್ಕ್ ಮೊದಲಾದವರು ಆ ಧರ್ಮದ ಇತಿಹಾಸ, ಅಲ್ಲಿಯ ಕರಾಳ ವಿಷಯಗಳನ್ನು ಜಾಹೀರು ಪಡಿಸಿದ್ದು ಇತ್ತೀಚಿನ ಸುದ್ದಿಪತ್ರಿಕೆಗಳಲ್ಲಿ ಪ್ರಸಿದ್ಧವಾಗಿದೆ. ಹೀಗಿರುವಾಗ ಕೆಲ ಅತ್ಯುತ್ಸಾಹಿ ಚರ್ಚುಗಳು ನಾವು ಕರುಣೆಯಿಂದ, ಪ್ರೀತಿಯಿಂದ ಚರ್ಚುತ್ತೇವೆ ಎಂದಾಗ ಏನಿದರ ಪರ್ಚು? ಏನಿದರ ಗುಟ್ಟು ಎಂದು ಪಿಸುಗುಡುವದನ್ನು ಕೇಳುತ್ತೇವೆ. ಈ ಕುರಿತು ಚಿಂತನೆ ಮಾಡುವಾಗ ಅಮ್ಮ ಯಶೋದೆ, ‘ ಪೋಗದಿರು ರಂಗಾ ಹೊಸ್ತಿಲನು ದಾಟಿ, ಗುಮ್ಮ ಎತ್ತಿಕೊಂಡು ಪೋಗುವನೋ’ ಎಂದು ಆರ್ತವಾಗಿ ಪಾಡಿದ ಸನ್ನಿವೇಶ ನೆನಪಾಗುತ್ತದೆ. ಈ ಸಂಕೀರ್ಣ ಸಂಗತಿಗಾಗಿ ಎಷ್ಟು ತಲೆ ಖರ್ಚು ಮಾಡಿದರೂ ಕಡಮೆಯೇ! ನಾವು ನಮ್ಮವರನ್ನು ಚರ್ಚಿಕೊಳ್ಳುವದೇ ಅಂದರೆ ಕಂಕುಳಲ್ಲಿ ಎತ್ತಿಕೊಳ್ಳುವದೇ ತರಣೋಪಾಯ ಎಂಬುದು ಸರ್ಚು ಮಾಡಿದಾಗ, ರಿಸರ್ಚು ಮಾಡಿದಾಗ ಬೆಳಗುವ ಟಾರ್ಚು.
-ಅನಂತ ಕಲ್ಲೋಳ

26 comments:

ಚಂದ್ರಕಾಂತ ಎಸ್ said...

ಸುನಾಥ್ ಅವರೆ

ಮೊದಲನೆಯದಾಗಿ ಅನಂತ ಕಲ್ಲೋಳರ ಪ್ರಬಂಧವನ್ನು ಬ್ಲಾಗ್ ಲೋಕಕ್ಕೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು.

ಅನಂತ ಕಲ್ಲೋಳರ ಈ ಬರಹ ನಮ್ಮ ಹಿರಿಯ - ಗೊರೂರು, ಎ.ಎನ್. ಮೂರ್ತಿರಾಯರು ಮುಂತಾದವರನ್ನು ನೆನಪಿಸಿತು. ಎಷ್ಟು ಹಿತಮಿತವಾಗಿ ಹಾಸ್ಯದೆಳೆಯನ್ನು ತಂದಿದ್ದಾರೆ. ಒಳಗಿನ ಹೋರಣ ಗಂಭೀರ ಅಲೋಚನೆಯನ್ನು ಮಾಡುತ್ತದೆ.ಇದನ್ನು ಓದುತ್ತಿದ್ದಂತೆ ನನಗೆ ಮಾಸ್ತಿಯವರ ‘ ಡುಬಾಯಿ ಪಾದ್ರಿಯ ಪತ್ರ’ ಕತೆ ನೆನಪಾಯಿತು. ಅದರಲ್ಲಿ ಒಂದು ಮಾತು ಬರುತ್ತದೆ. " ಹಿಂದೂ ಧರ್ಮ oneway Traffic ಇದ್ದಹಾಗೆ.. ಇಲ್ಲಿಂದ ಹೊರಗೆ ಹೋಗಬಹುದೇ ಹೊರತು ಒಳ ಬರುವ ಹಾಗಿಲ್ಲ " ಎಂದು. ಆದ್ದರಿಂದಲೇ ಹಿಂದಿನ ಕಾಲದಲ್ಲಿ ಹೆಚ್ಚಿನ ಮಟ್ಟದಲ್ಲಿ ಮತಾಂತರವಾಗುತ್ತಿತ್ತು.

ಲೇಖನದ ಕಡೆಯ ವಾಕ್ಯ ಅರ್ಥಪೂರ್ಣವಾಗಿದೆ. ನಮ್ಮಲ್ಲಿಯೇ ತೀವ್ರ ಅನಾದರಕ್ಕೆ ಒಳಗಾದವರಿಗೆ ಮೇಲ್ಜಾತಿಯಲ್ಲಿ ಒಂದು ಒಳ್ಳೆ ಸ್ಥಾನ ಕಲ್ಪಿಸುವ ಬಗ್ಗೆ ಚಿಂತಿಸಬೇಕೇ ಹೊರತು ಬೇರೆಯವರು ಮತಾಂತರಗೊಳಿಸುತ್ತಿದ್ದಾರೆ ಎಂದು ಹುಯಿಲೆಬ್ಬಿಸುವುದರಲ್ಲಿ ಯಾವ ಅರ್ಥವೂ ಇಲ್ಲ.

sunaath said...

ಚಂದ್ರಕಾಂತಾ,
ಭಾಷೆ, ಮತಾಂತರ ಮೊದಲಾದ ವಿಷಯಗಳನ್ನೆಲ್ಲ ಕಲ್ಲೋಳರು
ವಿನೋದದ ಧಾಟಿಯಲ್ಲಿಯೇ ಎಷ್ಟು ಚೆನ್ನಾಗಿ ಚಿತ್ರಿಸಿದ್ದಾರೆ, ಅಲ್ಲವೆ?

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಹಾಸ್ಯ ಮಿಶ್ರಿತವಾಗಿ ಆಲೋಚನೆ ಮಾಡಬೇಕಾದ ವಿಚಾರವನ್ನು
ತುಂಬಾ ಚೆನ್ನಾಗಿ ಬರೆದಿದ್ದಾರೆ ಅನಂತ ಕಲ್ಲೋಳರು. ನಿಮ್ಮಿಬ್ಬರಿಗೂ ಧನ್ಯವಾದಗಳು.

Ittigecement said...

ಸುನಾಥ.. ಸರ್..

ಅನಂತ್ ಕಲ್ಲೋಳರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು..

ಈಗ ಆಗುತ್ತಿರುವದಕ್ಕೂ..
ಪದಗಳ ಅರ್ಥಕ್ಕೂ..
ಎಷ್ಟೊಂದು ಸಾಮ್ಯವಿದೆ..!!

ತಿಳಿ ಹಾಸ್ಯದಲ್ಲಿ ಮನೋಜ್ಞವಾಗಿ ಬರೆದಿದ್ದಾರೆ..!

ಚಂದ್ರಕಾಂತರವರು ಹೇಳಿದಹಾಗೆ ತಪ್ಪು ನಮ್ಮಲ್ಲೇ ಇದೆ..

ಜಾತಿ ಅಸಮಾನತೆ ಸರಿಪಡಿಸಬೇಕು..

ಧನ್ಯವಾದಗಳು..

sunaath said...

ಮಲ್ಲಿಕಾರ್ಜುನ,
ಧನ್ಯವಾದಗಳು ಅನಂತ ಕಲ್ಲೋಳರಿಗೇ ಸಲ್ಲಬೇಕು. ನನ್ನದು ಏನಿದ್ದರೂ ಅಂಚೆಯವನ ಕೆಲಸ ಅಷ್ಟೆ!

sunaath said...

ಪ್ರಕಾಶ,
ನಾವು ಯಾರನ್ನು ಚಚ್ಚುತ್ತೇವೊ ಅವರನ್ನು ಚರ್ಚುಗಳು
ಚರ್ಚುತ್ತವೆ(=ಎತ್ತಿಕೊಳ್ಳುತ್ತವೆ.)ಇದೇ ಇಲ್ಲಿರುವ ಪರ್ಚು. ಕಲ್ಲೋಳರು ಗುಟ್ಟನ್ನು ವಿನೋದವಾಗಿಯೇ ರಟ್ಟು ಮಾಡಿದ್ದಾರೆ.

Santhosh Rao said...

ಅನಂತ ಕಲ್ಲೋಳರನ್ನು ಪರಿಚಯಿಸಿದಕ್ಕೆ ಧನ್ಯವಾದಗಳು

sunaath said...

ಸಂತೋಷ,
ಶ್ರೀ ಅನಂತ ಕಲ್ಲೋಳರ ಮತ್ತೊಂದು ಲೇಖನ (“ಹೆಸರಿನ ಕುಸುರು ಪಸರಿಸಿದಾಗ”)ವನ್ನು ಸಹ ‘ಸಲ್ಲಾಪ’ದಲ್ಲಿ ಈಗಾಗಲೇ ಕೊಡಲಾಗಿದೆ. ಆ ಲೇಖನಕ್ಕಾಗಿ http://sallaap.blogspot.com/2008/06/blog-post_28.html ನೋಡಿರಿ.
ಕಲ್ಲೋಳರು ಬೆಳಗಾವಿಯಲ್ಲಿ ನೆಲೆಸಿರುವ ಕನ್ನಡದ ಕಟ್ಟಾಳು. ಬೆಳಗಾವಿಯಲ್ಲಿ ಕನ್ನಡದ ನೆಲೆಗಾಗಿ ಅವರು ಅನೇಕ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುತ್ತಾರೆ.

ತೇಜಸ್ವಿನಿ ಹೆಗಡೆ said...

ಕಾಕಾ,

ಚರ್ಚುವಿನ ಪರ್ಚು ಏನೆಂದು ರಿ-ಸರ್ಚ್ ಮಾಡಿ ನಮಗೂ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು. :)

ಚಿತ್ರಾ said...

ಕಾಕಾ,
ಚೆನ್ನಾಗಿದೆ ’ ಚರ್ಚು -ಪರ್ಚು’ .
ಹೀಗೇ ಇನ್ನೆಷ್ಟೋ ಶಬ್ದಗಳು ಇದೇ ಥರ ಕನ್ನಡೀಕರಣಗೊಂದಿವೆ ಅಲ್ಲವೆ? ನಮ್ಮ ದೈನಂದಿನ ಜೀವನದಲ್ಲಿ ಬೆರೆತು ಕನ್ನಡ ಶಬ್ದಗಳಂತೆಯೇ ಆಗಿವೆ ! ಒಳ್ಳೆಯ ಲೇಖನ.

sunaath said...

ತೇಜಸ್ವಿನಿ,
ಈ ರಿಸರ್ಚಿನ ಕಾರಣಪುರುಷ ಶ್ರೀ ಕಲ್ಲೋಳರಿಗೆ ನಿನ್ನ ಧನ್ಯವಾದಗಳನ್ನು ರೂಟ್ ಮಾಡುತ್ತಿದ್ದೇನೆ.

sunaath said...

ಚಿತ್ರಾ,
ಕಾಲಪ್ರವಾಹದಲ್ಲಿ ಕನ್ನಡಕ್ಕೆ ಬಂದ ಪದಗಳೆಷ್ಟೊ, ಕನ್ನಡದಿಂದ
ಪರಭಾಷೆಗಳಿಗೆ migrate ಆದ ಪದಗಳೆಷ್ಟೊ, ಕಾಣೆಯಾದ
ಪದಗಳೆಷ್ಟೋ.......!
ಕನ್ನಡಾಂಬೆಗೇ ಗೊತ್ತು!

PARAANJAPE K.N. said...

ಸುನಾಥ್ ಸರ್,
ಚರ್ಚು-ಪರ್ಚು - ಅನ೦ತ ಕಲ್ಲೋಳರ ಬರಹ ತು೦ಬಾ ಚೆನ್ನಾಗಿದೆ.ಹೀಗೆ ಶಬ್ದಗಳೊ೦ದಿಗೆ ಆಟವಾಡುತ್ತ ಓದುಗರನ್ನು ಚಿ೦ತನೆಗೆ ಹಚ್ಚುವ ಕೆಲವೇ ಕೆಲವು ಲೇಖಕರಲ್ಲಿ ಕಲ್ಲೋಳರು ಕೂಡ ಒಬ್ಬರು.ಅವರ ಲೇಖನಗಳನ್ನು ನಾನು ಓದಿದ್ದೇನೆ. ಒ೦ದು ಉತ್ತಮ ಬರಹವನ್ನು ಓದಿಗೆ ಒದಗಿಸಿದ್ದಕ್ಕೆ ವ೦ದನೆಗಳು.

sunaath said...

ಪರಾಂಜಪೆಯವರೆ,
ಧನ್ಯವಾದಗಳು.
ಪದಗಳ ಜೊತೆಗೆ ಆಟವಾಡುತ್ತ ವಿನೋದ ಹಾಗೂ ವಿಚಾರ ಸೃಷ್ಟಿಸುವದರಲ್ಲಿ ಕಲ್ಲೋಳರದು ಎತ್ತಿದ ಕೈ.

ಚಿತ್ರಾ ಸಂತೋಷ್ said...

ಅನಂತ ಕಲ್ಲೋಳರ ಪರಿಚಯ, ಜೊತೆಗೆ ಅವರ ಬರಹ ಪರಿಚಯಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸರ್.
-ಚಿತ್ರಾ

ಸುಪ್ತದೀಪ್ತಿ suptadeepti said...

ಕಾಕಾ, ಕಲ್ಲೋಳರ ಲೇಖನ ಚೆನ್ನಾಗಿದೆ. ಗಂಭೀರ ಚಿಂತನೆಯನ್ನೂ ತಿಳಿಹಾಸ್ಯದೊಂದಿಗೆ ಹೇಳಬಹುದೆನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಕಹಿಮದ್ದನ್ನು ಸಿಹಿಜೇನಿನೊಡನೆ ಕೊಡುವ ನಾಡಲ್ಲವೆ ನಮ್ಮದು!!

sunaath said...

ಜ್ಯೋತಿ,
ಸೊಗಸಾದ ಹೋಲಿಕೆ.
ಕಲ್ಲೋಳರ ಲೇಖನಿಯಿಂದ ಹೊರಬರುವ ಕಹಿಮದ್ದೆಲ್ಲ ಸಿಹಿಜೇನಾಗಿಯೇ ಹೊರಬರುತ್ತದೆ.

shivu.k said...

ಸುನಾಥ್ ಸರ್,

ಚರ್ಚು ವಿಚಾರವಾಗಿ ಅನಂತ ಕಲ್ಲೋಳರ ಪ್ರಬಂಧವನ್ನು ಇಲ್ಲಿ ಪರಿಚಯಿಸಿದ್ದಕ್ಕೆ ಥ್ಯಾಂಕ್ಸ್...

ನನಗೆ ಇಲ್ಲಿ ಚರ್ಚು ಅನ್ನುವುದಕ್ಕಿಂತ "ಪರ್ಚು" ಅನ್ನುವ ಪದ ಕುತೂಹಲ ಕೆರಳಿಸಿತ್ತು....ಕಾರಣವೇನೆಂದರೆ ನಿಮ್ಮ ಲೇಖನದ ಪ್ರಕಾರ ಅದು ಗುಟ್ಟು ಅಂತ ಅರ್ಥವಲ್ಲವೇ....
ಅದ್ರೆ ನಾನೊಂದು ತಮಾಷೆ ಹೇಳುತ್ತೇನೆ.....ನಾವು ಫೋಟೋಗ್ರಫಿಯಲ್ಲೂ "ಪರ್ಚು" ಅನ್ನುವ ಪದವನ್ನು ಬಳಸುತೇವೆ. ಪರ್ಚು ಆಂದರೆ ಒಂದು ಪಕ್ಷಿ ಫೋಟೊ ತೆಗೆಯುವಾಗ ಹಕ್ಕಿ ಹಾರಿಬಂದು ಒಂದು ನಿರ್ದಿಷ್ಟ ಮರದ ಕಡ್ಡಿಯ ಮೇಲೆ ಕುಳಿತುಕೊಳ್ಳುತ್ತದೆ...ಆ ಕಡಿಗೆ ನಾವೆಲ್ಲಾ ಪರ್ಚು ಅನ್ನುತ್ತೇನೆ....ನಿಮ್ಮ ಲೇಖನ ಓದಿದ ಮೇಲೆ ನನಗೆ ಅದರ ಅರ್ಥ ಹುಡುಕಲು ಪ್ರಯತ್ನಿಸಿದೆ...ಅದಕ್ಕೆ ಫೋಟೊಗ್ರಫಿಯಲ್ಲಾಗಲಿ, ಇಂಗ್ಲೀಷಿನಲ್ಲಾಗಲಿ, ಕನ್ನಡದಲ್ಲಾಗಲಿ ಅದರ ಅರ್ಥವಿಲ್ಲ.....ಅದರೂ ಅದನ್ನು ಬಳಸುತ್ತೇವೆ...."ಅದೋ ನೋಡು ಆ ಪರ್ಚಿನ ಮೇಲೆ ಕುಂತುಕೊಂಡಿದೆ" ಅನ್ನುತ್ತೇವಲ್ಲ....ಇದರ ಅರ್ಥ ವನ್ನೇನಾದರೂ ನಿಮ್ಮಿಂದ ಪತ್ತೆ ಮಾಡಲು ಸಾದ್ಯವೇ ನೋಡಿ ಸರ್,...

ಚಂದ್ರಕಾಂತ ಎಸ್ said...

ಸುನಾಥ್

ಕಲ್ಲೋಳರ ಇನ್ನೊಂದು ಲೇಖನವನ್ನೂ ಓದಿದೆ. ಅದಕ್ಕೆ ಸಧ್ಯದಲ್ಲಿಯೇ ಪ್ರತಿಕ್ರಿಯಿಸುವೆ.
" ನಾವು ಚಚ್ಚುವವರನ್ನು ಅವರು ಎತ್ತಿಕೊಳ್ಳುವುದು " ತುಂಬಾ ಆಳವಾದ ಅರ್ಥವಿದೆ.
ಶಿವು ಅವರ ಅನುಮಾನಕ್ಕೆ ನನ್ನದೊಂದು ವಿವರಣೆ.ಪಕ್ಷಿಗಳ ಫೋಟೋ ತೆಗೆಯುವಾಗ ಬಳಸುವ ಪದ ಪರ್ಚು, ಇಂಗ್ಲೀಷಿನ Perch ಪದದ ಕನ್ನಡ ರೂಪಾಂತರ.ಇದರ ಮೂಲ ಅರ್ಥ ಹಕ್ಕಿಗಳು ಕುಳಿತುಕೊಳ್ಳಲು ಹಾಕಿರುವ ಅಡ್ಡ ಕಂಬಿ

sunaath said...

ಶಿವು,
ಮತ್ತೊಂದು ಹೊಸ ಪದ ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು.
ಚಂದ್ರಕಾಂತಾ ಅವರು ತಿಳಿಸಿದಂತೆ ಇದು ಇಂಗ್ಲೀಶಿನ perch ಎಂದು ಗೊತ್ತಾಯಿತು.
ಶಿವು ಹಾಗು ಚಂದ್ರಕಾಂತಾರಿಗೆ ಧನ್ಯವಾದಗಳು.

sunaath said...

ಚಂದ್ರಕಾಂತಾ,
perchದ ಪರ್ಚನ್ನು ಬಿಚ್ಚಿ ಹೇಳಿದ್ದಕ್ಕಾಗಿ ಧನ್ಯವಾದಗಳು.

shivu.k said...

ಚಂದ್ರಕಾಂತ ಮೇಡಮ್,

ನಿಮ್ಮ ಪದ ಭಂಡಾರ ಪರ್ಸಿನಿಂದ "ಪರ್ಚು" ಪದದ ಅರ್ಥ ಹುಡುಕಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್...

ಇಂಥ ವಿಚಾರಗಳನ್ನು ತಿಳಿಯುವ ಅವಕಾಶ ಒದಗಿಸಿದ್ದಕ್ಕೆ ಸುನಾಥ್ ಸರ್ ಗೂ ಧನ್ಯವಾದಗಳು.....

ಚಂದ್ರಕಾಂತ ಎಸ್ said...

ಸುನಾಥ್ ಸರ್

ಅಂತೂ ನೀವೂ ಕಲ್ಲೋಳರ ಪ್ರಭಾವಕ್ಕೆ ಒಳಗಾದಿರಿ
" perchದ ಪರ್ಚನ್ನು ಬಿಚ್ಚಿ ಹೇಳಿದಿರಿ "! ಪ್ರಯೋಗ ಚೆನ್ನಾಗಿದೆ

ಚಂದ್ರಕಾಂತ ಎಸ್ said...

ಶಿವು ಅವರೆ
ನಾನು ದೊಡ್ಡ ಕೆಲಸವನ್ನೇನೂ ಮಾಡಲಿಲ್ಲ. ಮೊದಲಿನಿಂದಲೂ ನನಗೆ Dictionary ನೋಡುವ ಹುಚ್ಚು. ಹೀಗಾಗಿ ಯಾವುದೇ ಹೊಸ ಪದ ಕಂಡರೂ ಕೂಡಲೇ ಅದನ್ನು ನೋಡುತ್ತೇನಷ್ಟೆ.
ನಿಮಗೆ ನನ್ನ ಈ ಕೆಲಸ ಸಹಾಯಕ್ಕೆ ಬಂದದ್ದು ಸಂತೋಷ.

sunaath said...

ಚಿತ್ರಾ (ಕರ್ಕೇರಾ),
ನಿನ್ನ ಸ್ಪಂದನಕ್ಕೆ ನನ್ನ ಪ್ರತಿಕ್ರಿಯೆ ಬಿಟ್ಟು ಹೋಗಿದೆ.
ಅನಂತ ಕಲ್ಲೋಳರ ಬಗೆಗೆ ಹೆಚ್ಚಿನ ಮಾಹಿತಿ ವಿಕಿಪೀಡಿಯಾದಲ್ಲಿ ಲಭ್ಯವಿದೆ. ದಯವಿಟ್ಟು ಅಲ್ಲಿ ನೋಡು.

Harisha - ಹರೀಶ said...

ಅಪ್ಪಟ ಕನ್ನಡ ಪದ ಅನ್ನೋದಕ್ಕೆ ಪುರಾವೆ ಏನೆಂದರೆ ಕನ್ನಡಿಗರು ಅದನ್ನು ಬಳಸುವದಿಲ್ಲ - ಅಪ್ಪಟ ಸತ್ಯ!