Friday, March 13, 2009

ಸಮಾಜ ಹಾಗು ಸಂಸ್ಕೃತಿ

ಈ ಭೂಮಿಯ ಮೇಲೆ ಬದಕುತ್ತಿರುವ ಅನೇಕ ಜೀವಸಂಕುಲಗಳಿಗೆ ಗುಂಪು ಕಟ್ಟಿಕೊಂಡು ಇರುವದು ಒಂದು ಅನಿವಾರ್ಯತೆಯಾಗಿದೆ. ಈ ಗುಂಪುಜೀವನವೇ ಮೊಟ್ಟಮೊದಲ ಸಮಾಜವ್ಯವಸ್ಥೆ. ಇಂತಹ ಸಮಾಜವ್ಯವಸ್ಥೆಯ ಮೂಲ ಉದ್ದೇಶಗಳು ಮೂರು. ಮೊದಲನೆಯದು ಈ ಸಮಾಜದಲ್ಲಿಯ ಜೀವಿಗೆ ಸಮಾಜದ ಹೊರಗಿನ ಪ್ರಾಣಿಗಳಿಂದ ಸಂರಕ್ಷಣೆ ನೀಡುವದು. ಎರಡನೆಯ ಉದ್ದೇಶ ಆಹಾರಪೂರೈಕೆ. ಮೂರನೆಯ ಉದ್ದೇಶ ಈ ಜೀವ ಸಂಕುಲದ ಮುಂದುವರಿಕೆ. ಈ ಎಲ್ಲ ಉದ್ದೇಶಗಳನ್ನು ಆ ಒಂದು ಸಮಾಜ ತನ್ನದೇ ಆದ ರೀತಿಯಲ್ಲಿ ವ್ಯವಸ್ಥಿತಗೊಳಿಸುತ್ತದೆ. ಇಂತಹ ಪ್ರಾಣಿಸಮಾಜಕ್ಕೆ ಪ್ರಾಥಮಿಕ ಸಮಾಜ ಅಥವಾ Primary Society ಎಂದು ಕರೆಯಬಹುದೇನೊ?

ಆದಿಮಾನವನ ಕಾಲದಲ್ಲಿಯ ಮನುಷ್ಯಸಮಾಜವು ಪ್ರಾಣಿಸಮಾಜಕ್ಕಿಂತ ಹೆಚ್ಚಿಗೆ ಭಿನ್ನವಾಗಿರಲಿಕ್ಕಿಲ್ಲ. ಆದಿಮಾನವರ ಈ ಗುಂಪನ್ನು Primary Societyಯ ಮುಂದಿನ ಹೆಜ್ಜೆಯಾದ Primitive Society ಎಂದು ಕರೆಯಬಹುದು. ಸಂರಕ್ಷಣೆ, ಆಹಾರಪೂರೈಕೆ ಹಾಗೂ ಸಂತಾನ ಇವೇ ಮೂರು ಉದ್ದೇಶಗಳು ಆದಿಮಾನವರ ಗುಂಪುಗಳ ಪರಮಾರ್ಥಗಳಾಗಿದ್ದವು. ಗುಂಪುಗಳಲ್ಲಿ ದೈಹಿಕವಾಗಿ ಬಲಿಷ್ಠನಾದವನೇ ಗುಂಪಿನ ನಾಯಕನಾಗುತ್ತಿದ್ದ. ಕಾಲಕ್ರಮೇಣ ಉತ್ಕ್ರಾಂತಿಯ ಪಥದಲ್ಲಿ ನಡೆದ ಮಾನವಸಮಾಜದಲ್ಲಿ ಅನೇಕ ಬದಲಾವಣೆಗಳು ಜರುಗಿದವು. ಬೆಂಕಿ ಹಾಗು ಚಿಕ್ಕಪುಟ್ಟ ಆಯುಧಗಳ ಸಂಶೋಧನೆಗಳಿಂದಾಗಿ ಮಾನವನಿಗೆ ಹೆಚ್ಚಿನ ಸಂರಕ್ಷಣೆ ಹಾಗೂ ಹೆಚ್ಚಿನ ಸೌಲಭ್ಯಗಳು ದೊರಕಲಾರಂಭಿಸಿದವು. Primateಗಳ ಭಿನ್ನಕುಲಗಳಲ್ಲಿ ಮಾನವನಿಗೆ ‘Tool using Primate’ ಎನ್ನುವ ಹೆಗ್ಗಳಿಕೆ ದೊರೆಯಿತು. ಇದರ ಪರಿಣಾಮವು ಒಳ್ಳೆಯದೇ ಆಯಿತು ಎಂದು ಹೇಳಲಾಗುವದಿಲ್ಲ. ಮಾನವರ ಗುಂಪುಗಳಲ್ಲೇ ಅಂತರ್ಯುದ್ಧಗಳು ಜರುಗಲಾರಂಭಿಸಿದವು. ಇದರಿಂದಾಗಿ ಪಾಳೆಯಗಾರಿಕೆ ಪ್ರಾರಂಭವಾಯಿತು. ಈ ರೀತಿಯಾಗಿ ಪಾಳೆಯಗಾರಿಕೆ ಸಮಾಜ (Feudal Society) ಹಾಗೂ ಯಜಮಾನಸಂಸ್ಕೃತಿ (Feudal culture) ಎಲ್ಲೆಡೆ ಪ್ರತಿಷ್ಠಿತವಾದವು.

ಸಮಾಜವು ತನ್ನ ಅಂಗಜೀವಿಯನ್ನು ರಕ್ಷಿಸಬೇಕಾದರೆ, ಮೊದಲು ಆ ಸಮಾಜವೇ ಸುರಕ್ಷಿತವಾಗಿರಬೇಕು ಆದುದರಿದ ಆ ಸಮಾಜದ ಎಲ್ಲ ಅಂಗಜೀವಿಗಳು ಒಟ್ಟಾಗಿ ಆ ಸಮಾಜವನ್ನು ರಕ್ಷಿಸಬೇಕಾಗುತ್ತದೆ. (ಧರ್ಮೋ ರಕ್ಷತಿ ರಕ್ಷಿತಃ). ಈ ಕಾರಣದಿಂದಾಗಿಯೇ ಸಮಾಜವು ತನ್ನ ಅಂಗಜೀವಿಗಳ ಮೇಲೆ ಕಟ್ಟುಪಾಡುಗಳನ್ನು ಹಾಕಬೇಕಾಗುತ್ತದೆ. ತನ್ನ ಅಂಗಜೀವಿಯು ಯಾವ ರೀತಿಯಿಂದ ವರ್ತಿಸಬೇಕು, ಯಾವ ರೀತಿಯ ವರ್ತನೆಯಿಂದ ಅಂಗಜೀವಿಗೆ ಹಾಗೂ ಸಮಾಜಕ್ಕೆ ಒಳಿತಾಗುವದು ಎನ್ನುವದನ್ನು ನಿರ್ಧರಿಸುವ ಕಟ್ಟುಪಾಡುಗಳೇ ಆ ಸಮಾಜದ ಸಂಸ್ಕೃತಿ ಹಾಗೂ ಆದರ್ಶ ಎಂದು ಹೇಳಬಹುದು.

‘ಅಂಗಜೀವಿ ಹುಟ್ಟಿನಿಂದ ಸ್ವತಂತ್ರನು; ಆತ ಯಾರ ಮಾತನ್ನು ಯಾತಕ್ಕೆ ಕೇಳಬೇಕು? ಅತನ ಹಕ್ಕುಗಳನ್ನು ಕಸಿದುಕೊಳ್ಳಲು ಯಾರಿಗೂ ಹಕ್ಕಿಲ್ಲ’ ಇವೆಲ್ಲ ಮಾತುಗಳು ಸಮಾಜದ ಕಟ್ಟುಗಳನ್ನು ಶಿಥಿಲಗೊಳಿಸುವ ಮಾತುಗಳು. ಇದರರ್ಥ ಸಮಾಜದ ಕಟ್ಟುಪಾಡುಗಳು, ಸಮಾಜದ ಅಂತರ್-ವ್ಯವಸ್ಥೆ ಯಾವಾಗಲೂ ಸರಿಯಾಗಿಯೇ ಇರುತ್ತದೆ ಎಂದಲ್ಲ. ‘ಸಮಾಜ ಕೊ ಬದಲ್ ಡಾಲೊ’ ಎನ್ನುವ ಕೂಗು ಅನೇಕ ಸಲ ಸರಿಯಾಗಿಯೂ ಇರಬಹುದು.

ಸಂಸ್ಕೃತಿ ಎನ್ನುವದು ಸಂಸ್ಕರಿಸು ಎನ್ನುವ ಮೂಲಧಾತುವಿನಿಂದ ಬಂದಿದೆ. ಉತ್ತಮವಾದ ಉತ್ಪನ್ನವನ್ನು, ಉಪಯುಕ್ತವಾದ ಉತ್ಪನ್ನವನ್ನು ನೀಡುವದಕ್ಕಾಗಿ ಕಚ್ಚಾ ಪದಾರ್ಥವನ್ನು ಸಂಸ್ಕರಿಸಬೇಕಾಗುತ್ತದೆ. ಅದೇ ರೀತಿಯಲ್ಲಿ ಸಮಾಜದ ಅಂಗಜೀವಿಗಳನ್ನು ಉತ್ತಮರಾದ ಹಾಗೂ ಉಪಯುಕ್ತರಾದ ಮಾನವರನ್ನಾಗಿ ಮಾಡಲು ಸಂಸ್ಕಾರದ ಅವಶ್ಯಕತೆ ಇದೆ. ಈ ಅಂಗಜೀವಿಗಳು ಕೇವಲ ಸಮಾಜಕ್ಕೆ ಉಪಯುಕ್ತರಾದರೆ ಸಾಲದು, ಅವರ ವೈಯಕ್ತಿಕ ಜೀವನವೂ ಸಹ ಸಾರ್ಥಕತೆಯನ್ನು ಪಡೆಯಬೇಕು. ಈ ರೀತಿಯಾಗಿ ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ಮಂಗಲಕರ ಫಲವನ್ನು ಕೊಡುವದೇ ಉತ್ತಮ ಸಂಸ್ಕೃತಿಯಾಗಿದೆ. ಇದರ counter ideal ಅಂದರೆ regimented society. ಈ regimentation ಅನ್ನು ಪ್ರಭುತ್ವದ ಶಾಸನದ ಮೂಲಕ (ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ಇದ್ದಂತೆ) ಅಥವಾ ಧಾರ್ಮಿಕ ಶಾಸನದ ಮೂಲಕ (ಅರೇಬಿಯನ್ ರಾಷ್ಟ್ರಗಳಲ್ಲಿ ಇದ್ದಂತೆ) ಸಾಧಿಸಬಹುದು.

ಭಾರತೀಯ ಸಮಾಜ, ಪಾಶ್ಚಿಮಾತ್ಯ ಸಮಾಜ ಹಾಗೂ ಅರೇಬಿಯನ್ ಸಮಾಜ ಎನ್ನುವ ಮೂರು ಸಮಾಜಗಳು ತಮ್ಮ ಅಂಗಜೀವಿಗಳಿಗೆ ಏನು ಕೊಟ್ಟಿವೆ, ಪ್ರತಿಯಾಗಿ ಈ ಅಂಗಜೀವಿಗಳು ತಮ್ಮ ಸಮಾಜಕ್ಕೆ ಏನನ್ನು ಕೊಟ್ಟಿವೆ ಹಾಗೂ ಈ ಸಮಾಜಗಳ ರಕ್ಷಣೆ ಯಾವ ರೀತಿಯಿಂದ ಆಗುತ್ತಿದೆ ಎನ್ನುವ ಅಧ್ಯಯನ ಕುತೂಹಲಕಾರಿಯಾಗಿದೆ ಹಾಗೂ ಭಾರತೀಯ ಸಮಾಜವು ಬದಲಾಗುತ್ತಿರುವಂತಹ ಈ ಸಮಯದಲ್ಲಿ ಅವಶ್ಯವೂ ಆಗಿದೆ.

ಸ್ಥೂಲವಾಗಿ ಈ ಮೂರು ಸಮಾಜಗಳನ್ನು ಈ ರೀತಿಯಾಗಿ ವರ್ಗೀಕರಿಸಬಹುದು.
(೧) ಪಾಶ್ಚಿಮಾತ್ಯ ಸಮಾಜ: Liberal ಹಾಗು permissive society.
(೨) ಅರೇಬಿಯನ್ ಸಮಾಜ: Repressive society.
(೩) ಭಾರತೀಯ ಸಮಾಜ: Deteriorating society!

ಈ ಮೂರು ಸಮಾಜಗಳಲ್ಲಿ ಭಾರತೀಯ ಸಮಾಜವು ಅತ್ಯಂತ ಹಳೆಯದು. ಕಾಲಕಾಲಕ್ಕೆ ತಕ್ಕಂತೆ ಈ ಸಮಾಜ ಬದಲಾಗುತ್ತಲೇ ನಡೆದಿದೆ ಮತ್ತು ಆಧುನಿಕ ವಿಚಾರಗಳನ್ನು ಮೈಗೂಡಿಸಿಕೊಳ್ಳುವದರಲ್ಲಿ ಇದು ಹಿಂದೆ ಬಿದ್ದಿಲ್ಲ.
ಇಂತಹ ಭಾರತೀಯ ಸಮಾಜದ ವಿವಿಧ ಮಜಲುಗಳ ಅಧ್ಯಯನ ಮಾಡುವದೇ ಒಂದು ಆಸಕ್ತಿಕಾರಕ ವಿಷಯ.

ಸನಾತನ ಭಾರತೀಯ ಸಮಾಜವು ಒಂದು ಸಂಕೀರ್ಣ ಸಮಾಜವಾಗಿತ್ತು. ಈ ಸಮಾಜವು ನಾಲ್ಕು ವರ್ಣಗಳನ್ನು ಆಧರಿಸಿತ್ತು. ಜ್ಞಾನಸಂಪಾದನೆಯು ಬ್ರಾಹ್ಮಣ ವರ್ಣದ ಉದ್ದೇಶವಾದರೆ, ಶತ್ರುಗಳಿಂದ ಸಮಾಜವನ್ನು ರಕ್ಷಿಸುವದು ಕ್ಷತ್ರಿಯವರ್ಣದ ಹೊಣೆಗಾರಿಕೆಯಾಗಿತ್ತು. ಅರ್ಥವ್ಯವಸ್ಥೆಯು ವೈಶ್ಯವರ್ಣದ ಜವಾಬುದಾರಿಯಾಗಿತ್ತು. ಶೂದ್ರವರ್ಣದವರದು ಉತ್ಪಾದನಾ ಕಾರ್ಯ.

ಇಂತಹ ಭೇದಗಳನ್ನು ಅಂದರೆ ಜಾತಿಗಳನ್ನು ಹುಟ್ಟಿನ ಆಧಾರದ ಮೇಲೆ ಮಾಡಬಾರದಾಗಿತ್ತು ಎನ್ನುವದು ಆಧುನಿಕರ ವಾದ. ಈ ವಾದ ಸರಿಯಾದದ್ದೇ. ಇದು ಸಾಮಾಜಿಕ ಅಸಮಾನತೆಯನ್ನು ನಿರ್ಮಿಸಿದ್ದದ್ದು ಸತ್ಯವೇ.
ಆದರೆ, ಈ ವ್ಯವಸ್ಥೆಗೆ ಅನೇಕ ಅನುಕೂಲತೆಗಳೂ ಇದ್ದವು. ಹತ್ತುಸಾವಿರ ವರ್ಷಗಳ ಹಿಂದೆ ಅಕ್ಷರಗಳು ಇನ್ನೂ ಹುಟ್ಟಿರಲಿಲ್ಲ. ಜ್ಞಾನಸಂಪಾದನೆಯ ಹಾದಿ ಅತ್ಯಂತ ಕಠಿಣವಾಗಿತ್ತು. ಜ್ಞಾನಪ್ರಸಾರಕ್ಕಂತೂ ಸೌಲಭ್ಯಗಳು ಇರಲೇ ಇಲ್ಲ. ನಿಷ್ಠುರವಾದ ಶಬ್ದಪಠಣದಿಂದ ಮಾತ್ರ ಜ್ಞಾನದ ಸಂಪಾದನೆ ಹಾಗೂ ಸಂಗ್ರಹ ಸಾಧ್ಯವಾಗುತ್ತಿತ್ತು. ಇದನ್ನು ಸಾಧಿಸಲು ಇದ್ದಂತಹ ಒಂದೇ ಉಪಕರಣವೆಂದರೆ ಆನುವಂಶಿಕ ಜ್ಞಾನದಾನ.
ಕೇವಲ ಗಣಿತಶಾಸ್ತ್ರ, ಖಗೋಲಶಾಸ್ತ್ರದಂತಹ abstract knowledge ಮಾತ್ರವಲ್ಲ, ಶಿಲ್ಪಶಾಸ್ತ್ರ, ಬಡಿಗತನ, ನೇಕಾರಿಕೆ, ಕಮ್ಮಾರಿಕೆ, ಒಕ್ಕಲುತನ ಮೊದಲಾದ ಎಲ್ಲ ತರಹದ professional knowledge ಸಹ ಈ ತರಹದ ಆನುವಂಶಿಕ ಜ್ಞಾನದಾನದಿಂದ ವಂಶಪಾರಂಪರ್ಯವಾಗಿ ಮುಂದಿನ ಪೀಳಿಗೆಗೆ ಸಾಗಿಸಲ್ಪಡುತ್ತಿದ್ದವು.
ಈಗ ಶಾಲೆ, ಕಾ^ಲೇಜು, ವಿಶ್ವವಿದ್ಯಾಲಯಗಳಲ್ಲಿ ಸಾಧ್ಯವಾಗದೇ ಇದ್ದದ್ದು, ಆಗ ಸಾಧ್ಯವಾಗಿದ್ದು ಈ ಕಾರಣಕ್ಕಾಗಿ.

(ಒಂದು ಸ್ವಾರಸ್ಯದ ಸಂಗತಿ: ಪುರಾತನ ಭಾರತದಲ್ಲಿ ಉತ್ಪನ್ನವಾದ ಜ್ಞಾನವು ಆಧುನಿಕ ಭಾರತದಲ್ಲಿ ಉತ್ಪನ್ನವಾದ ಜ್ಞಾನದ ಅನೇಕ ಮಡಿಯಾಗಿದೆ. ಅಷ್ಟೇ ಏಕೆ, ಆಧುನಿಕ ಪ್ರಪಂಚದಲ್ಲಿ ಉತ್ಪನ್ನವಾದ ಜ್ಞಾನಕ್ಕಿಂತಲೂ ಇದರ ಮೌಲ್ಯವು ಅನೇಕ ಪಟ್ಟು ಹೆಚ್ಚಿನದೆಂದು ಹೇಳಬಹುದು.)

ನಮ್ಮ ಮಾಜಿ ರಾಷ್ಟ್ರಪತಿ ಡಾ^. ಕಲಾಮ್ ಅವರು ಭವಿಷ್ಯದ ಭಾರತೀಯ ಸಮಾಜವು ಜ್ಞಾನಾಧಾರಿತ ಸಮಾಜ (Knowledge Society) ಆಗಬೇಕೆಂದು ಹಂಬಲಿಸುತ್ತಾರೆ.
ನಮ್ಮ ಪುರಾತನ ಭಾರತೀಯ ಸಮಾಜವು ಕೇವಲ ಜ್ಞಾನಾಧಾರಿತ ಸಮಾಜವಾಗಲೀ, ಕೇವಲ ಭೌತಿಕ ವೈಭವದ ಸಮಾಜವಾಗಲೀ ಆಗಿರಲಿಲ್ಲ. ತನ್ನ ಅಂಗಜೀವಿಗಳ ಸಂಪೂರ್ಣ ಏಳ್ಗೆ ಯಾವುದರಿಂದ ಸಾಧ್ಯವಾಗುವದು ಎನ್ನುವದರ ಚಿಂತನೆಯನ್ನೂ ಈ ಸಮಾಜ ಮಾಡಿತು. ಅದರ ಫಲವೇ ಭಾರತೀಯ ಸಮಾಜವು ಉಪದೇಶಿಸುವ ನಾಲ್ಕು ಪುರುಷಾರ್ಥಗಳು: ಧರ್ಮ, ಅರ್ಥ, ಕಾಮ, ಮೋಕ್ಷ.

ಈ ಪುರುಷಾರ್ಥಗಳನ್ನು ಸಾಧಿಸಲು ಅವಶ್ಯವಿರುವ ನಾಲ್ಕು ಆಶ್ರಮಗಳನ್ನು ಭಾರತೀಯ ಸಮಾಜವು ತನ್ನ ಅಂಗಜೀವಿಗಳ ಮೇಲೆ ವಿಧಿಸಿತು. ಆ ನಾಲ್ಕು ಆಶ್ರಮಗಳೆಂದರೆ: ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ.
ಇವೆಲ್ಲವೂ ಭಾರತೀಯ ಸಮಾಜವು ತನ್ನ ಅಂಗಜೀವಿಗಳ ಸರ್ವಾಂಗೀಣ ಉತ್ಕರ್ಷಕ್ಕಾಗಿ ರೂಪಿಸಿದ ಸಂಸ್ಕೃತಿ. ಇದೇ ಪುರಾತನ ಭಾರತೀಯ ಸಮಾಜದ ಆದರ್ಶ.

ಈ ಸಾಂಸ್ಕೃತಿಕ ಆದರ್ಶದ ಹಾಗು ಇಂತಹ ಸಮಾಜದ ಸಂರಕ್ಷಣೆಯನ್ನು ಎರಡು ವಿಧಗಳಲ್ಲಿ ಮಾಡಲಾಯಿತು.
(೧) ರಾಜಕೀಯ ಆಡಳಿತೆಯ ಮೂಲಕ
(೨) ನೈತಿಕ/ಧಾರ್ಮಿಕ ಆಡಳಿತೆಯ ಮೂಲಕ

ಯಾವುದೇ ಸಮಾಜದಲ್ಲಿ ಆಗಲಿ, ಪ್ರಭುತ್ವವು ಶಕ್ತವಾಗಿದ್ದರೆ ಮಾತ್ರ ಆ ಸಮಾಜಕ್ಕೆ ಸಂರಕ್ಷಣೆ ದೊರೆಯುತ್ತದೆ. ಪುರಾತನ ಭಾರತದಲ್ಲಿರುವ ಸಶಕ್ತ ರಾಜಪ್ರಭುತ್ವಗಳಿಂದಾಗಿಯೇ, ಈ ಸಮಾಜವು ಸುರಕ್ಷಿತವಾಗಿ ನಿಂತುಕೊಂಡು, ಸರ್ವಾಂಗೀಣ ಏಳ್ಗೆಯನ್ನು ಸಾಧಿಸಿತೆಂದು ಹೇಳಬಹುದು. ಇಂತಹ ಅರಸರಲ್ಲಿ ಶ್ರೀರಾಮಚಂದ್ರನಂತಹ ಮಹಾರಾಜನು ತನ್ನ ಆದರ್ಶದಿಂದಾಗಿ ಅವತಾರಪುರುಷನಾದನು. ಉಜ್ಜಯನಿಯ ವಿಕ್ರಮರಾಜನು ದಂತಕಥೆಯಾದನು. ಈ ರಾಜರುಗಳ ಕತೆ ಕೇಳಿದವರಿಗೆ ಪುರಾಣಕಾಲದಲ್ಲಿ ಶಾಸನವು ಕರುಣೆಯಿಂದ ಕೂಡಿತ್ತು ಎಂದು ಭಾಸವಾಗುತ್ತದೆ. ಆದರೆ ಧಾರ್ಮಿಕ ಕಟ್ಟುಪಾಡುಗಳು ಮಾತ್ರ ಕಠೋರವಾಗಿದ್ದವು.
ಈ ರೀತಿಯ ರಾಜಕೀಯ ಶಾಸನ ಹಾಗೂ ಧಾರ್ಮಿಕ ಕಟ್ಟಳೆಗಳ ಮೂಲಕ ಪುರಾತನ ಭಾರತೀಯ ಸಮಾಜವು ಸಂರಕ್ಷಿಸಲ್ಪಟ್ಟಿತ್ತು.

ಈ ಸಮಾಜದಲ್ಲಿ ದೋಷಗಳು ಇರಲಿಲ್ಲವೆಂದಲ್ಲ. ಹೆಣ್ಣುಮಕ್ಕಳಿಗೆ ಹಾಗೂ ಶೂದ್ರರಿಗೆ ಈ ಸಮಾಜದಲ್ಲಿ ಯಾವ ಅಧಿಕಾರವೂ ಇರಲಿಲ್ಲ. ದಾಸವ್ಯವಸ್ಥೆಯು (=ಗುಲಾಮಗಿರಿಯು) ಈ ಸಮಾಜದಲ್ಲಿ ವ್ಯಾಪಕವಾಗಿತ್ತು.
ಸತ್ಯಹರಿಶ್ಚಂದ್ರನ ಕತೆಯೇ ಇದಕ್ಕೆ ದೊಡ್ಡ ಉದಾಹರಣೆ. ಹರಿಶ್ಚಂದ್ರನು ತನ್ನ ಹೆಂಡತಿ ಹಾಗೂ ಮಗನನ್ನು ದುಡ್ಡಿಗಾಗಿ ಮಾರಿದ್ದು, ತನ್ನನ್ನೂ ಮಾರಿಕೊಂಡಿದ್ದು ದಾಸವ್ಯವಸ್ಥೆಯ ಉದಾಹರಣೆಯಾಗಿದೆ. ಯಾವಾಗಲೂ ಧರ್ಮದ ಜಿಜ್ಞಾಸೆಯಲ್ಲಿಯೇ ಮುಳುಗಿರುತ್ತಿದ್ದ ಧರ್ಮರಾಜನು ದ್ರೌಪದಿಯನ್ನು ಜೂಜಿನಲ್ಲಿ ಪಣವಾಗಿಟ್ಟು ದಾಸಿಯನ್ನಾಗಿ ಮಾಡಿದ ಕತೆಯೂ ಸಹ ದಾಸವ್ಯವಸ್ಥೆಯ ಉದಾಹರಣೆಯೇ ಸೈ.

ಬಲಿಷ್ಠ ರಾಜಪ್ರಭುತ್ವದಿಂದ ಹಾಗೂ ನೈತಿಕ ಕಟ್ಟುಪಾಡುಗಳಿಂದ ಸಂರಕ್ಷಿಸಲ್ಪಟ್ಟ ಈ ಸಮಾಜವು ಕಾಲಾಂತರದಲ್ಲಿ ತನ್ನ ಅಂತರ್ವೈರುಧ್ಯಗಳಿಂದಾಗಿಯೇ ಮುರಿದು ಬೀಳಲಾರಂಭಿಸಿತು. ಭಗವಾನ್ ಬುದ್ಧನ ಚಿಂತನೆಗಳಿಂದಾಗಿ ಸಮಾಜದಲ್ಲಿ ಬದಲಾವಣೆಗಳು ಕಾಣಲಾರಂಭಿಸಿದವು. ಈತನ ತಂದೆಯಾದ, ಕಪಿಲವಸ್ತುವಿನ ರಾಜನಾದ ಶುದ್ಧೋದನ ನೀಡಿದ ರಾಜಾಶ್ರಯದಿಂದಾಗಿ, ಬುದ್ಧಧರ್ಮವು ಮೊದಮೊದಲು ಒಂದು ಚಿಕ್ಕ ಪ್ರದೇಶದಲ್ಲಿ ನೆಲೆಗೊಂಡಿತು. ಬಳಿಕ ಚಕ್ರವರ್ತಿ ಅಶೋಕನ ರಾಜಾಶ್ರಯ ಪಡೆದ ಬುದ್ಧಧರ್ಮವು ಭಾರತದ ಒಳಗಡೆ ಹಾಗೂ ಹೊರಗಡೆ ವ್ಯಾಪಕ ನೆಲೆಯನ್ನು ಹೊಂದಿತು.

ಕರ್ನಾಟಕದಲ್ಲಿಯೂ ಸಹ ವೀರಶೈವ ಶರಣರ ಮೂಲಕ ನಡೆದ ಚಳುವಳಿಯು ಸಮಾಜದಲ್ಲಿ ಬದಲಾವಣೆಗಳನ್ನು ತರುವ ಉದ್ದೇಶದಿಂದ ಮಾಡಿದ ಚಳುವಳಿಯೇ ಸೈ. ಇವೆಲ್ಲ ಆಂದೋಲನಗಳು ಸಮಾಜವ್ಯವಸ್ಥೆಯನ್ನು ಬದಲಿಸಲು ಹೊರಟಂತಹ ಕ್ರಾಂತಿಕಾರಿ ಚಳುವಳಿಗಳೇ ಹೊರತು, ಸಮಾಜವನ್ನು ಮುರಿದೊಗೆಯಲು ಮಾಡಿದ ಆಂದೋಲನಗಳಲ್ಲ.

ಈ ಪುರಾತನ ಭಾರತೀಯ ಸಮಾಜವ್ಯವಸ್ಥೆಗೆ ಅಂತಹ ಬಲವಾದ ಧಕ್ಕೆ ಬಿದ್ದದ್ದು ಪರಕೀಯರ ಆಕ್ರಮಣದಿಂದ. ಪ್ರಪ್ರಥಮವಾಗಿ ಒಬ್ಬ ಅರೇಬಿಯನ್ ರಾಜ, ಆ ಬಳಿಕ ಮಂಗೋಲರು, ಪರ್ಶಿಯನ್ನರು ಹಾಗೂ ತುರುಕರು ಭಾರತದಲ್ಲಿ ತಮ್ಮ ಪ್ರಭುತ್ವವನ್ನು ಸ್ಥಾಪಿಸಿದರು. ಈ ಪ್ರಭುಗಳು ಭಾರತೀಯ ಸಮಾಜದ ಆರ್ಥಿಕ,ಆಡಳಿತಾತ್ಮಕ, ಸಾಮಾಜಿಕ , ಸಾಂಸ್ಕೃತಿಕ ಹಾಗೂ ಧಾರ್ಮಿಕ ವ್ಯವಸ್ಥೆಯನ್ನು ತಮ್ಮ ತವರಿನ ಸಂಕೇತಗಳ ಮೂಲಕ ಬದಲಾಯಿಸಿ ಬಿಟ್ಟರು. ಅವರ ರಾಜಕೀಯ ಮುಂದುವರಿಕೆಗೆ ಇದು ಅವಶ್ಯಕವಾಗಿತ್ತು. ಆದರೆ ಭಾರತೀಯ ಸಮಾಜದ ಮೇಲೆ ಇದರ ದುಷ್ಪರಿಣಾಮವು ಘೋರವಾಗಿತ್ತು.

ಮೊದಲನೆಯದಾಗಿ ಭಾರತದಲ್ಲಿ ಜ್ಞಾನೋತ್ಪಾದನೆಯ ಪ್ರಕ್ರಿಯೆ ಸ್ಥಗಿತವಾಯಿತು.
ಎರಡನೆಯದಾಗಿ ಮತಾಂತರಿತರು ತಾವು ಭಾರತದ ಮಕ್ಕಳೆನ್ನುವ identityಯನ್ನೇ ಮರೆತುಬಿಟ್ಟು ತಮ್ಮ ಮೂಲಸಂಸ್ಕೃತಿಯನ್ನು ತುಚ್ಛೀಕರಿಸಲಾರಂಭಿಸಿದರು.ಭಾರತೀಯ ಸಂಸ್ಕೃತಿಯು ತನಗಿಂತ ಕೆಳದರ್ಜೆಯ ಪರಕೀಯ ಪ್ರಭುತ್ವದ ಸಂಸ್ಕೃತಿಗೆ ಸಲಾಮು ಹೊಡೆಯತೊಡಗಿತು.

ಎರಡನೆಯದಾಗಿ ಪುರಾತನ ಭಾರತೀಯ ಸಂಸ್ಕೃತಿಗೆ ರಾಜಕೀಯ ಆಶ್ರಯ ತಪ್ಪಿಹೋಯಿತು. ಪುರಾತನ ಭಾರತೀಯ ಸಂಸ್ಕೃತಿ ಶಿಥಿಲವಾದಂತಹ ಈ ಸಮಯದಲ್ಲಿಯೇ ಭಾರತದಲ್ಲಿ ಬ್ರಿಟಿಶರ ಪ್ರಭುತ್ವ ಸ್ಥಾಪನೆಯಾಯಿತು.
ಬ್ರಿಟಿಶ್ ಆಡಳಿತೆಯು ಭಾರತದ ಸಾಂಸ್ಕೃತಿಕ ಸ್ವರೂಪವನ್ನು ಸಂಪೂರ್ಣವಾಗಿ ಬದಲಾಯಿಸಿತು. ಭಾರತೀಯ ಸಂಸ್ಕೃತಿಯ ಅನೇಕ ದುಷ್ಟ ಪದ್ಧತಿಗಳು ಬದಲಾದದ್ದೇನೊ ನಿಜ. ಉದಾಹರಣೆಗೆ ಸತಿ ಪದ್ಧತಿಯನ್ನು ಬ್ರಿಟಿಶರೇ ತೆಗೆದು ಹಾಕಿದರು. ಬಳಿಕ ಭಾರತೀಯರೇ ಶಾಸನದ ಮೂಲಕ ಬಹುಪತ್ನಿತ್ವವನ್ನು, ಬಾಲ್ಯವಿವಾಹವನ್ನು ತೆಗೆದುಹಾಕಿದರು. ಆಧುನಿಕ ಸೌಲಭ್ಯಗಳು ದೊರೆತಿದ್ದರಿಂದ, ಸಾರ್ವಜನಿಕ ಶಿಕ್ಷಣ ಲಭ್ಯವಾಯಿತು. ಹೀಗಾಗಿ ಜ್ಞಾನಸಂಪಾದನೆಯು ಸಾರ್ವತ್ರಿಕವಾಯಿತು. ಹೆಣ್ಣುಮಕ್ಕಳಲ್ಲಿ ಪ್ರಗತಿಯಾಗತೊಡಗಿತು. ಅವರಿಗೆ ಶಿಕ್ಷಣ ದೊರೆಯತೊಡಗಿತು ಹಾಗೂ ಹೆಣ್ಣುಮಕ್ಕಳ ಆರ್ಥಿಕ ಸ್ವಾವಲಂಬನ ಸಾಧ್ಯವಾಯಿತು.
ಇದೆಲ್ಲ ನಿಜ; ಆದರೆ ಭಾರತದಲ್ಲಿ ಆದ ಈ ಎಲ್ಲ ಬದಲಾವಣೆಗಳಿಂದ ಸಾಂಸ್ಕೃತಿಕ ಉನ್ನತಿಯಾಗಿದೆಯೋ ಅಥವಾ ಅವನತಿಯಾಗಿದೆಯೊ?

ಇಂದಿನ ಭಾರತೀಯ ಸಮಾಜದಲ್ಲಿ ಆದಂತಹ ಒಳ್ಳೆಯ ಸಂಗತಿಗಳೆಂದರೆ ಇವು:
ಜಾತ್ಯಾಧಾರಿತ ಸಾಮಾಜಿಕ ಅಸಮಾನತೆ ಕಡಿಮೆಯಾಗತೊಡಗಿದೆ. ಶಿಕ್ಷಣ ಹಾಗೂ ಉದ್ಯೋಗ ರಂಗಗಳಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಲಭ್ಯವಿದೆ. ಸ್ತ್ರೀಯರ ಮೇಲೆ ಹೇರಲಾದ ಕಠೋರ ಧಾರ್ಮಿಕ, ಸಾಮಾಜಿಕ ನಿಷೇಧಗಳು ಕಡಿಮೆಯಾಗಿವೆ. ಸ್ತ್ರೀ ಆರ್ಥಿಕವಾಗಿ ಹಾಗು ಸಾಮಾಜಿಕವಾಗಿ ಸ್ವಾವಲಂಬಿಯಾಗಿದ್ದಾಳೆ.

ಇನ್ನು ಭಾರತೀಯ ಸಮಾಜದಲ್ಲಿ ಆದಂತಹ ಕೆಡುಕಿನ ಸಂಗತಿಗಳೇನು?
ಮುಖ್ಯವಾಗಿ ಭಾರತೀಯ ಸಮಾಜವು Insensitive Society ಆಗಿ ಪರಿವರ್ತನೆಗೊಂಡಿದೆ.
ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಭಾರತದಲ್ಲಿ ತಮ್ಮ ಸಾಮಾಜಿಕ ಜೀವನವನ್ನು ಪ್ರಾರಂಭಿಸುವ ಮೊದಲು, ತಮ್ಮ ಗುರುವಾದ ಗೋಖಲೆಯವರ ಸಲಹೆಯ ಮೇರೆಗೆ ಭಾರತದಲ್ಲಿ ಪ್ರಯಾಣ ಕೈಗೊಂಡಿದ್ದರು. ಆ ಸಂದರ್ಭದಲ್ಲಿ ಅವರು ಒಂದು ಗುಡಿಸಿಲಿಗೆ ಭೆಟ್ಟಿ ಕೊಟ್ಟರು. ಗುಡಿಸಿಲಿನಲ್ಲಿರುವ ಹೆಣ್ಣುಮಗಳು ತನ್ನಲ್ಲಿದ್ದ ಒಂದೇ ಸೀರೆಯನ್ನು ಒಗೆದು ಗುಡಿಸಿಲಿನ ಬಾಗಿಲಿಗೆ ಒಣಗು ಹಾಕಿ, ತಾನು ಒಳಗೆ ಬತ್ತಲೆಯಾಗಿ ಕುಳಿತಿದ್ದಳು. ಹೀಗಾಗಿ ಅವಳು ಹೊರಗೆ ಬರಲಿಲ್ಲ. ತನ್ನವರೆಲ್ಲರೂ ಅರೆಬತ್ತಲೆ ಇರುವಾಗ ತಾನು ಒಳ್ಳೆಯ ವಸ್ತ್ರಗಳನ್ನು ಧರಿಸಿಕೊಳ್ಳಬಹುದೆ ಎಂದು ಗಾಂಧೀಜಿಯವರ ಅಂತರಂಗ ಶೋಕಿಸಿತು. ಅವರು ಮುಂಡುಧೋತರ ಹಾಗೂ ಅಂಗವಸ್ತ್ರವನ್ನು ಮಾತ್ರ ಧರಿಸಲು ಈ ಘಟನೆ ಪ್ರೇರಣೆ ನೀಡಿತು.
ಇದು ಮಹಾತ್ಮರ sensitivity.

ಹೋ ಚಿ ಮಿನ್ಹರು ಉತ್ತರ ವ್ಹಿಯೆಟ್ ನಾಮ್‍ದ ಅಧ್ಯಕ್ಷರಾದ ಮೇಲೂ ಸಹ ಗುಡಿಸಿಲಿನಲ್ಲಿಯೇ ವಾಸಿಸುತ್ತಿದ್ದರೆಂದು ಕೇಳಿದ್ದೇನೆ.ಅದರಂತೆ, ಪುರಾತನ ಚೀನಾದ ಮಹಾ ತತ್ವಜ್ಞಾನಿಯಾದ ಕಾಂ^ಗ್ ಫೂಜಿ (Confucius)ನುಡಿದ ಒಂದು ಮಾತು ನಮಗೆ ಅತ್ಯಂತ ಸಂಗತವಾಗಿದೆ: It is a shame to be poor when the country is rich ; it is a shame to be rich when the country is poor.

ಆದರೆ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ನಮ್ಮ ರಾಜಕಾರಣಿಗಳು ಸಾಮಾಜಿಕ sensitivityಯನ್ನು ಕಸ ಗೂಡಿಸುವಂತೆ ಗುಡಿಸಿ ಬಿಸಾಕಿದರು.
Power corrupts and absolute power corrupts absolutely ಎಂದು ಹೇಳುತ್ತಾರೆ.
ನಮ್ಮ ರಾಜಕಾರಣಿಗಳು corrupt ಆಗಲು ಅರ್ಧ ನಿಮಿಷ ಕೂಡ ಬೇಕಾಗಲಿಲ್ಲ!
ಇದು ಭಾರತೀಯ ಸಮಾಜದ ಅವನತಿಯ ಕಥೆಯ ಪ್ರಾರಂಭ.
ಇದಕ್ಕೆ ಕಾರಣವೇನು?

ಬ್ರಿಟಿಶ್ ಆಡಳಿತದಿಂದಾಗಿ ಭಾರತೀಯರು ತಮ್ಮ ಸನಾತನ ಧರ್ಮದಲ್ಲಿದ್ದ ಅನೇಕ ಅರ್ಥಹೀನ ಕಟ್ಟಳೆಗಳನ್ನು ಗಮನಿಸಲಾರಂಭಿಸಿದರು. ಅವುಗಳನ್ನು ಕಿತ್ತೆಸೆಯುವ ಕಾರ್ಯವನ್ನೂ ಮಾಡಿದರು. ಇದು ಒಳ್ಳೆಯದೇ ಆಯಿತು. ಆದರೆ ಧಾರ್ಮಿಕ ಕಟ್ಟುಪಾಡುಗಳು ರೂಪಿಸುವ ನೈತಿಕ ಪ್ರಜ್ಞೆಯೂ ಇದರೊಡನೆಯೇ ಹೊರಟು ಹೋಯಿತು. ತರ್ಕದ ಆಧಾರದ ಮೇಲೆ ಧರ್ಮವನ್ನು ವಿರೋಧಿಸಿದವರು, ಧರ್ಮವು ಕೊಡುವ ನೈತಿಕ ಪ್ರಜ್ಞೆಯನ್ನು ಎಲ್ಲಿಂದ ತರಬೇಕೆನ್ನುವದನ್ನು ವಿಚಾರಿಸಲಿಲ್ಲ.

ಇತ್ತೀಚೆಗಂತೂ ಅಮೇರಿಕನ್ ವಾಣಿಜ್ಯ ಸಂಸ್ಕೃತಿ ಹಾಗೂ ಅದರಿಂದ ಪ್ರೇರಿತರಾದ ಭಾರತೀಯರು ನಮ್ಮ ಸಂಸ್ಕೃತಿಯನ್ನು commercialise ಮಾಡಿದರು. Maximum Exploitation ಅನ್ನುವದೇ ನಮ್ಮ ಧ್ಯೇಯವಾಕ್ಯವಾಯಿತು. Exploitation ಮಾಡಲು ಏನಿಲ್ಲ ನಮ್ಮಲ್ಲಿ? ಬೇಕಾದಷ್ಟು ಭೂಗತ ಸಂಪತ್ತು, ಬೇಕಾದಷ್ಟು ನಿಸರ್ಗ ಸಂಪತ್ತು ನಮ್ಮಲ್ಲಿದೆ. ಅವನ್ನು ರಫ್ತು ಮಾಡಬಹುದು. ಮನೆಕೆಲಸ ಮಾಡಲು ನಮ್ಮ ತರುಣಿಯರನ್ನು ಹಾಗೂ ಇಟ್ಟಿಗೆ ಹೊರಲು ನಮ್ಮ ತರುಣರನ್ನು ಮಧ್ಯಪ್ರಾಚ್ಯಕ್ಕೆ ರಫ್ತು ಮಾಡಬಹುದು.
ಬುದ್ಧಿವಂತರನ್ನು I.T. ಕೆಲಸ ಮಾಡಲು ಅಮೇರಿಕೆಗೆ ರಫ್ತು ಮಾಡಬಹುದು.

ಇಲ್ಲಿ ಒಂದು ಪ್ರಶ್ನೆ ಉದ್ಭವಿಸುತ್ತದೆ: ಅಮೇರಿಕೆಯಲ್ಲಿಯೂ ಸಹ Commercial Culture ಇದೆ. ಆದರೆ ಈ ಸಂಸ್ಕೃತಿಯ ದುರಂತಗಳು ನಮ್ಮನ್ನು ಬಾಧಿಸಿದಂತೆ ಅವರನ್ನೇಕೆ ಬಾಧಿಸುತ್ತಿಲ್ಲ?
ಅದಕ್ಕೆ ಉತ್ತರ ಹೀಗಿದೆ: ಅಮೇರಿಕದಲ್ಲಿ ಶಾಸನದ ಆಡಳಿತ ತುಂಬಾ ಶಕ್ತಿಶಾಲಿಯಾಗಿದೆ. ಭಾರತದಲ್ಲಿ ಶಾಸನದ ಆಡಳಿತಕ್ಕೆ ಬಲವೇ ಇಲ್ಲ.
ನಾವು ಮೊದಲೇ ಚರ್ಚಿಸಿದಂತೆ, ಸಮಾಜದ ಅಂಗಜೀವಿಗಳು ಸಮಾಜ ವಿಧಿಸಿದ ಚೌಕಟ್ಟಿನೊಳಗೇ ಜೀವಿಸಬೇಕಾದರೆ ಶಾಸನದ ಆಡಳಿತ ಅಥವಾ/ಮತ್ತು ಧಾರ್ಮಿಕ ಆಡಳಿತ ಶಕ್ತಿಶಾಲಿಯಾಗಿರಬೇಕು. ಅಮೇರಿಕದಲ್ಲಿ ಕ್ರಿಶ್ಚಿಯನ್ ಚರ್ಚ ಎಷ್ಟರ ಮಟ್ಟಿಗೆ ಶಕ್ತಿಶಾಲಿಯಾಗಿದೆಯೋ ಗೊತ್ತಿಲ್ಲ; ಆದರೆ ಶಾಸನದ ಆಡಳಿತ ಮಾತ್ರ ಸರ್ವಶಕ್ತವಾಗಿದೆ. ಹೀಗಾಗಿ ಎಷ್ಟೇ ವೈಯಕ್ತಿಕ ಸ್ವಾತಂತ್ರ್ಯವಿದ್ದರೂ ಸಹ ಅಮೆರಿಕದ ಸಮಾಜವು ಶಾಸನದ ಚೌಕಟ್ಟಿನ ಒಳಗೆ ಸುರಕ್ಷಿತವಾಗಿ ಉಳಿದಿದೆ.

ಆದರೆ ಭಾರತದಲ್ಲಿ ಒಳ್ಳೆಯ ಶಾಸನಗಳನ್ನು ಮಾಡಲು, ಆ ಶಾಸನಗಳನ್ನು ಭಾರತೀಯರೆಲ್ಲರಿಗೂ ಅನ್ವಯಿಸಲು ನಮ್ಮ ಪ್ರಭುಗಳು ಹೆದರುತ್ತಾರೆ. ಬಲಶಾಲಿಯಾದ ಪ್ರಜಾಭಾಗಗಳಿಗೆ ಈ ದೇಶದಲ್ಲಿ ಯಾವ ಕಾನೂನನ್ನೂ ಮಾಡುವಂತಿಲ್ಲ ; ಮಾಡಿದರೂ ಅದು ಅನ್ವಯಿಸುವದಿಲ್ಲ!

ಭಾರತೀಯ ಶಾಸನವು ನಿರ್ಬಲವಾಗಲು ಕಾರಣವೇನು?
ಅನೇಕ ವರ್ಷಗಳ ಹಿಂದೆ ಮಾನವಶಾಸ್ತ್ರಜ್ಞರು ಮಂಗಗಳ ಮೇಲೆ ಹಾಗೂ ಇಲಿಗಳ ಮೇಲೆ ಕೆಲವು ಪ್ರಯೋಗಗಳನ್ನು ಮಾಡಿದರು. ದಟ್ಟ ಅರಣ್ಯಪ್ರದೇಶದಲ್ಲಿರುವ, ಒಂದೇ ಬಲಶಾಲಿ ನಾಯಕನಿರುವ ಮಂಗಗಳ ಗುಂಪು , ಅರೆಬರೆ ಅರಣ್ಯಪ್ರದೇಶದಲ್ಲಿರುವ ಸಮಾನ ಬಲಶಾಲಿಗಳಾದ ಮಂಗಗಳ ಗುಂಪು ಹಾಗೂ ಆಹಾರದ ಕೊರತೆಯಿರುವ ನಿರ್ಬಲ ನಾಯಕತ್ವದ ಮಂಗಗಳ ಗುಂಪು ಹೀಗೆ ಮೂರು ಗುಂಪುಗಳನ್ನು ಆರಿಸಿ ಅವುಗಳ ಅಭ್ಯಾಸ ಮಾಡಲಾಯಿತು. (ಎರಡನೆಯ ಗುಂಪಿಗಾಗಿ ಧಾರವಾಡದ ಬಳಿಯ ಅರಣ್ಯಪ್ರದೇಶವನ್ನು ಆರಿಸಲಾಗಿತ್ತು!)
ಬಲಶಾಲಿ ನಾಯಕತ್ವ ಹಾಗೂ ದಟ್ಟ ಅರಣ್ಯದಲ್ಲಿರುವ ಮಂಗಗಳ ಗುಂಪು ಈ ಎಲ್ಲ ಗುಂಪುಗಳಲ್ಲಿಯ ಶ್ರೇಷ್ಠ ಗುಂಪಾಗಿ ಹೊರಹೊಮ್ಮಿತು ಮತ್ತು ಮೂರನೆಯ ಗುಂಪು ಕನಿಷ್ಠ ಗುಂಪಾಗಿ ಹೊರಹೊಮ್ಮಿತು ಎಂದು ಹೇಳಬೇಕಾಗಿಲ್ಲ.

ಇದೇ ತರ್ಕವನ್ನು ನಮ್ಮ ಭಾರತಕ್ಕೆ ಅನ್ವಯಿಸಿ ನೋಡೋಣ:
ಭಾರತದಲ್ಲಿ ಮಿತಿಮೀರಿದ ಜನಸಂಖ್ಯೆ ಇದೆ. ಇದು ಆಹಾರದ ಕೊರತೆ ಇರುವ ಅರಣ್ಯಪ್ರದೇಶವನ್ನು ಹೋಲುತ್ತದೆ.
ಬಲಶಾಲಿಯಾದ ನಾಯಕತ್ವ ನಮ್ಮಲ್ಲಿ ಇಲ್ಲ. ನಾಯಕರಾಗಲು ಬಯಸುವವರು ತಮ್ಮ ಸ್ಥಾನಬಲದ ಮೂಲಕ ದೇಶವನ್ನು ಲೂಟಿ ಮಾಡಲು ಬಯಸುತ್ತಾರೆ. ತಮ್ಮ ಸ್ಥಾನವನ್ನು ಕಾಪಾಡಿಕೊಳ್ಳುವ ಒಂದೇ ಉದ್ದೇಶದಿಂದ ಜಾತಿಜಾತಿಗಳಲ್ಲಿ ವೈಷಮ್ಯ ಬೆಳೆಸುತ್ತಾರೆ. ಇವರಿಂದ ಶಾಸನದ ಅಥವಾ ನೈತಿಕತೆಯ ಪ್ರಭುತ್ವವನ್ನು ಅಪೇಕ್ಷಿಸುವದು ಸಾಧ್ಯವಿಲ್ಲ. ಮಿತಿಮೀರಿದ ಜನಸಂಖ್ಯೆ ಹಾಗೂ ನಿರ್ಬಲ, ಅನೈತಿಕ ನಾಯಕತ್ವ ಹೊಂದಿದ ಪ್ರಜಾಪ್ರಭುತ್ವವುಳ್ಳ ಎಲ್ಲಾ ದೇಶಗಳದೂ ಇದೇ ಹಣೆಬರಹ. ಉದಾಹರಣೆಗೆ ಪಾಕಿಸ್ತಾನ, ಬಂಗ್ಲಾದೇಶ ಹಾಗೂ ಶ್ರೀಲಂಕಾ.

ಆದರೆ ಅಮೇರಿಕದಲ್ಲಿ ಶಕ್ತಿಶಾಲಿ (ಪ್ರಜಾ)ಪ್ರಭುತ್ವವಿರುವದರಿಂದ ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲಿ ಧಾರ್ಮಿಕ ಕಟ್ಟಲೆಗಳ ನಿರಂಕುಶಾಧಿಕಾರವಿರುವದರಿಂದ, ಅಲ್ಲಿಯ ಸಮಾಜಗಳು ಸ್ಥಿರವಾಗಿ ನಿಂತಿವೆ ಎಂದು ಹೇಳಬಹುದು. ಅಮೇರಿಕದ ಸಮಾಜವು ವೈಯಕ್ತಿಕ ಮಹದಾಧಿಕಾರದ ನಾಡಾದರೆ, ಮಧ್ಯಪ್ರಾಚ್ಯದ ಸಮಾಜವು ಧಾರ್ಮಿಕ ಮಹದಾಧಿಕಾರದ ನಾಡು. ಆದರೆ ಈ ಎರಡೂ ನಾಡುಗಳಲ್ಲಿ ಇರುವ ಸ್ಥಿರತೆ ಭಾರತದಲ್ಲಿ ಉಳಿದಿಲ್ಲ ಎನ್ನುವದು ಖೇದದ ಸಂಗತಿ.

26 comments:

hEmAsHrEe said...
This comment has been removed by the author.
hEmAsHrEe said...

very good observation and analysis !

Keshav.Kulkarni said...

Very complex issue!
- Keshav (www.kannada-nudi.blogspot.com)

PARAANJAPE K.N. said...

ಸುನಾಥ್ ಸರ್,
ಸಮಾಜ, ಸಂಸ್ಕೃತಿ, ಮತ್ತು ಭಾರತದ ಇ೦ದಿನ ಸ್ಥಿತಿ, ನೈತಿಕ-ಅರ್ಥಿಕ ಅಧಃಪತನ ದ ಬಗ್ಗೆ ವಿಶ್ಲೇಷಣಾತ್ಮಕವಾಗಿ
ಪಾಮರರಿಗೂ ಅರ್ಥವಾಗುವ೦ತೆ ವಿವರಿಸಿದ್ದೀರಿ. ಉತ್ತಮ ಲೇಖನ.

Anonymous said...

ಆರಂಭದಲ್ಲಿ ಬರಹ ಕಬ್ಬಿಣದ ಕಡಲೆಯಂತೆ ತೋರಿತು.
ಆದರೆ ಮುಂದೆ ಮುಂದೆ ಓದಿದಂತೆ ತಾನೇ ತಾನಾಗಿ ಅರಳುತ್ತ ಸಾಗಿತು.
ಅದ್ಭುತ ಒಳನೋಟ ಮತ್ತು ಅತ್ಯುತ್ತಮ homework ಮಾಡಿದ್ದೀರೆಂದು ಭಾವಿಸುವೆ.
ಆದರೆ ಕೊನೆಯಲ್ಲಿ ಇನ್ನೂ ತೀಕ್ಷ್ಣವಾದ concusion
ಅಥವಾ remedy ಇರಬೇಕಾಗಿತ್ತೇನೋ...

-ರಾಘವೇಂದ್ರ ಜೋಶಿ.

Anonymous said...

sorry.
concusion=conclusion

-rj

sunaath said...

hEmAsHrEe,
Thanks.
Observation and analysis are ok. I wonder if there is a solution somewhere!

sunaath said...

ಕೇಶವ,
The issue is more complex than appears here!

sunaath said...

ಪರಾಂಜಪೆಯವರೆ,
ನಮ್ಮ ಸಮಾಜ ಹಾಗೂ ಸಂಸ್ಕೃತಿ ಅವನತಿ ಹೊಂದಿವೆ. ಆದರೆ
ದಾರಿ ಯಾವುದಯ್ಯಾ ವೈಕುಂಠಕೆ ಎಂದು ಹುಡುಕಬೇಕಾಗಿದೆ.

sunaath said...

rj,
ನಿಮ್ಮ ಮಾತು ನಿಜ. ಲೇಖನ ಆರಂಭಿಸುವದು ನನಗೂ ಕಷ್ಟದ ಕೆಲಸವೇ ಆಯಿತು. ಭಾರತೀಯ ಪುರಾತನ ಹಾಗೂ ಆಧುನಿಕ ಸಂಸ್ಕೃತಿಗಳ canvas ತುಂಬಾ ದೊಡ್ಡದಿದ್ದು, ಸಮಗ್ರವಾಗಿ
cover ಮಾಡಲು ನನ್ನಿಂದ ಸಾಧ್ಯವೂ ಆಗಿಲ್ಲ. ನಾನು ಬರೆದದ್ದು ಕೇವಲ tip of the iceberg ಎನ್ನಬಹುದಷ್ಟೇ. ಇನ್ನು ಈ ಸಮಸ್ಯೆಗೆ remedy ಸೂಚಿಸುವದು ನನಗೆ ಸಾಧ್ಯವಾಗಲಾರದು. ಯಾಕೆಂದರೆ ನಮ್ಮಲ್ಲಿರಾಜಕಾರಣಿಗಳು vs ನೈತಿಕತೆ ಎನ್ನುವ ಕುಸ್ತಿಯಲ್ಲಿ ನೈತಿಕತೆ ಯಾವಾಗಲೋ ಬಿದ್ದು ಹೋಗಿದೆ! ಎಲ್ಲಿ ಧರ್ಮವಿಲ್ಲವೊ ಅಲ್ಲಿ ಜಯ ಹೇಗೆ ಸಿಕ್ಕೀತು?

Ittigecement said...

ಸುನಾಥ ಸರ್..

ಅತ್ಯಂತ ನಿಷ್ಪಕ್ಷಪಾತದಿಂದ ವಿಶ್ಲೇಷಿಸಿದ್ದೀರಿ..

"TOO GOOD IS...
TOO BAD..!

ಅಲ್ಲವಾ..?

ನೀವೆನ್ನುva.. ಎಲ್ಲ ಮಾತುಗಳೂ ನಿಜ..

ನಮ್ಮ ಸಮಾಜ ಅವನತಿಯತ್ತ ಸಾಗುತ್ತಿದೆ..

"ನಮ್ಮದು" ಅನ್ನುವ ಭಾವನೆ..
ಜವಾಬ್ದಾರಿ..
ಉನ್ನತಿಯತ್ತ ಕರೆದೊಯ್ಯ ಬಹುದು ಅಲ್ಲವಾ..?

sunaath said...

ಪ್ರಕಾಶ,
"ನಮ್ಮದಿದು" ಅನ್ನುವ ಭಾವನೆಯಿಂದ ಪ್ರೇರಣೆ ದೊರೆತರೆ, ನಮ್ಮ ಸಮಾಜ ಹಾಗೂ ಸಂಸ್ಕೃತಿ ಸುಧಾರಿಸಲೂ ಬಹುದು!

shivu.k said...

ಸುನಾಥ್ ಸರ್,

ತುಂಬಾ ಚೆನ್ನಾಗಿ ಮಾನವನ ಸಮಾಜದ ಮೂಲದಿಂದ ಎಲ್ಲವನ್ನು ವಿಶ್ಲೇಷಿಸಿದ್ದೀರಿ.....ಪಾಳೆಯಗಾರಿಕೆ, ಪ್ರಾಥಮಿಕ ಸಮಾಜ, ಧಾರ್ಮಿಕ ಸಮಾಜವನ್ನು ಚೆನ್ನಾಗಿ ವಿಶ್ಲೇಷಿಸಿದ್ದೀರಿ...ಸಂಸ್ಕೃತಿ ಅನ್ನುವ ಪದ ಬಂದ ಬಗೆ ತಿಳಿದು ಸಂತೋಷವಾಯಿತು....ಅಲ್ಲಿಂದ ಮುಂದಕ್ಕೆ ನಿದಾನವಾಗಿ ಓದಿದರೂ ನನಗೆ ಅರ್ಥೈಸಿಕೊಳ್ಳುವುದು ಕಷ್ಟವಾಯಿತು......ಅದಕ್ಕೆ ಮತ್ತೊಮ್ಮೆ ಮಗದೊಮ್ಮೆ ಓದಿ ಮತ್ತೆ ಬರುತ್ತೇನೆ....

ಚಂದ್ರಕಾಂತ ಎಸ್ said...

ಸುನಾಥ್ ಸರ್

ನನಗೆ ಬಹಳ ಇಷ್ಟವಾದ ವಿಷಯದ ಬಗೆಗಿನ ಚರ್ಚೆಯಿದು. ಅದನ್ನು ಈ ಲೇಖನದ ಮಿತಿಯಲ್ಲಿ ಸಾಧ್ಯವಾದಷ್ಟೂ ಸಮರ್ಥವಾಗಿ ಚರ್ಚಿಸಿದ್ದೀರಿ. ನೀವು ಹೇಳಿದಂತೆ ನಮ್ಮ ದೇಶದ ವಿಸ್ತಾರ ವೈವಿಧ್ಯತೆ ಎಲ್ಲವೂ ಅಗಾಧವಾದದ್ದು.ಎಷ್ಟೆಲ್ಲ ರಾಜರ ಹೊಡೆತಕ್ಕೆ ಸಿಕ್ಕರೂ ಇಷ್ಟೊಂದು ಗಟ್ಟಿಯಾಗಿರುವುದೇ ಇದರ ಅಂತಃಸತ್ವವನ್ನು ತೋರಿಸುತ್ತದೆ.

ಏನೇ ಆದರೂ ಕಾಲಧರ್ಮ ಎಂಬುದೊಂದಿರುತ್ತದಲ್ಲ. ಅದಕ್ಕನುಗುಣವಾಗಿ ನಮ್ಮ ದೇಶದ ಜನಗಳ ಸ್ವಭಾವವೂ ಬದಲಾಗಿತ್ತಿದೆ.ಯಾವಾಗ ಸಮೂಹ ಮಾಧ್ಯಮಗಳು ನಮ್ಮ ಮನೆಯ ಪಡಸಾಲೆಯೊಳಗೇ ಪ್ರಪಂಚವನ್ನು ತಂದಿಟ್ಟವೋ ಅಲ್ಲಿ ಕಾಣುವ ವೈಭೋಗದ ಜೀವನಕ್ಕೆ ಸಹಜವಾಗಿಯೇ ಮನುಷ್ಯ ತಲೆಬಾಗಿದ. ನೀವು ಹೇಳಿದಂತೆ ನಮ್ಮ ದೇಶದ ಕಾನೂನು ವ್ಯವಸ್ಥೆ ಕೇವಲ ಕಣ್ಣೊರೆಸುವ ವ್ಯವಸ್ಥೆ. ಒಟ್ಟಿನಲ್ಲಿ ಇದೀಗ ಆರ್ಥಿಕ ಹಿಂಜರಿತದಿಂದ ಒಂದು ರೀತಿಯ ಒಳ್ಳೆಯದೇ ಆಯಿತೆಂದು ನನಗನಿಸುತ್ತದೆ. ಸದಾಕಾಲ ಆಕಾಶದೆಡೆಗೆ ಗಮನವಿಟ್ಟಿದ್ದ ಮನುಷ್ಯ ಈಗ ನೆಲ ನೋಡತೊಡಗಿದ್ದಾನೆ.

ಅತ್ಯಂತ ಪರಿಶ್ರಮದಿಂದ ಬರೆದ ಈ ಬರವಣಿಗೆ ಮುಂದಿನ ದಿನಗಳಲ್ಲಿ ನನ್ನ ಅಧ್ಯಾಪನ ವೃತ್ತಿಗೆ ಸಹಾಯಕವಾಗಬಲ್ಲುದು.

ಸುಪ್ತದೀಪ್ತಿ suptadeepti said...

ಕಾಕಾ, ನಿಮ್ಮ ಎಲ್ಲ ಬರಹಗಳಲ್ಲಿ ಇರುವ ಅಧ್ಯಯನಶೀಲತೆ, ವಿಷಯದ ಗಾಢತೆ, ಮತ್ತು ನಿಖರವಾದ ವಿವರಪೂರ್ಣ ನಿರೂಪಣೆ ಯಾವಾಗಲೂ ನನಗಿಷ್ಟ. ಇಲ್ಲೂ ಹಾಗೆಯೇ.

ಮಾನವರಾಗಿ ನಾವು ನಮ್ಮ ಸಂರಕ್ಷಣೆಗಾಗಿ ಬೆಳೆಸಿಕೊಂಡು ಬಂದ ಸಮಾಜವೆಂಬ ಒಂದು "ಸಂಸ್ಥೆ" ಈಗ ಮಾನವರಾದ ನಮ್ಮನ್ನೇ ನುರಿಯುತ್ತಿದೆ (ನಮ್ಮಂತೆ ಕಾಣುವ ಆದರೆ ದಾನವರಾಗಿ ಬಾಳುತ್ತಿರುವವರನ್ನಲ್ಲ). ನಾವೇ ಹುಟ್ಟಿಸಿದ್ದು ನಮ್ಮನ್ನೇ ಸುಡಲು ಬರುತ್ತಿರುವ ಭಸ್ಮಾಸುರ ಆಗಿ ಕೂತಿದೆಯಲ್ಲ. ಇದು ಮಾನವನ ಅಧಃಪತನವೆ? ಹೊಸತೊಂದು ದಿಕ್ಕಿನ ಮೊದಲ ಕತ್ತಲ ಹಾದಿಯೇ? ಯೋಚಿಸಿದರೆ ಪ್ರಶ್ನೆಗಳು ಹಲವಾರು. ಯೋಚನೆ ಬಂದಾಗ ಸುಮ್ಮನೆ ನಿಡುಸುಯ್ದು, ದಿನಾ ದಿನಾ ಹೊಸದೆಂದು ಸಾಗೋದು ಸುಲಭ. ಅದನ್ನೇ ಮಾಡುತ್ತಿರುವೆ.

Prabhuraj Moogi said...

ಬಹಳ ಗಹನವಾದ ವಿಚಾರದ ಬಗ್ಗೆ ಬರೆದಿದ್ದೀರಿ ಎಂದಿನಂತೆ... ಇದಕ್ಕೆ ಕಾಮೆಂಟು ಬರೆಯಲು ಹಿಂದೆ ಮುಂದೆ ಯೊಚಿಸಬೇಕಾಗುವಂತಿದೆ... ಮಾನವನ ಗುಂಪು ಜೀವನದಿಂದ ಹಿಡಿದು ಇಂದಿನ ಗುಂಪು ಘರ್ಷಣೆಗಳವರೆಗೆ ಉಲ್ಲೇಖವಿದೆ... ಎಷ್ಟೇ ಬದಲಾದರೂ ಎಷ್ಟೇ ಮುಂದುವರೆದರೂ ಜೀವನದ ಕೆಲವು ಸತ್ಯಗಳ ಬದಲಾಗಲ್ಲ. ಭಾರತದ ಗತವೈಭವಗಳು ಇಷ್ಟವಾದರೂ ಶೂದ್ರ, ಸತಿಸಹಗಮನದಂಥ ಆಚರಣೆಗಳು ಮನ ಕಲಕುತ್ತವೆ, ಹೀಗಿತ್ತು ನಮ್ಮ ಸಮಾಜ ಅಂತ ಹೆಮ್ಮೆಯಿಂದ ಹೇಳಿಕೊಳ್ಳಲು ಹಿಂಜರಿಕೆಯಾಗುತ್ತದೆ... ಪರಕೀಯರ ಆಳ್ವಿಕೆ ಶತಮಾನಗಳಿಂದ ನಮ್ಮ ಮೂಲ ಸಂಸ್ಕೃತಿಗೆ ಧಕ್ಕೆ ಮಾಡುತ್ತ ಬಂದಿದೆ, ಅಷ್ಟೆಲ್ಲ ಹೊಡೆತಗಳ ಸಹಿಸಿಕೊಂಡೂ ನಮ್ಮ ಪೂರ್ವಜರು ಆ ಸಂಸ್ಕೃತಿ ಅಲ್ಪಸ್ವಲ್ಪವಾದರೂ ಜೀವಂತವಾಗಿಟ್ಟಿದ್ದು ಸಾಧನೆಯೇ ಸರಿ...

sunaath said...

ಶಿವು,
ನಿಮಗೆ ಮತ್ತೆ ಮತ್ತೆ ಸ್ವಾಗತ!

sunaath said...

ಚಂದ್ರಕಾಂತಾ,
ಕಾಲವು ತರುತ್ತಿರುವ ಬದಲಾವಣೆ ನಮ್ಮ ದೇಶಕ್ಕೆ ಒಳ್ಳೆಯದನ್ನೇ
ಮಾಡಲಿ ಎಂದು ಹಾರೈಸೋಣ!

sunaath said...

ಜ್ಯೋತಿ,
ಭಸ್ಮಾಸುರರು ನಮ್ಮ ಸಮಾಜವನ್ನು ಸುಡುತ್ತಿದ್ದಾರೆ. ಆದರೆ
ಬಸವಣ್ಣನವರು ಹೇಳಿದ್ದನ್ನು ನೆನೆಸಿಕೊಳ್ಳೋಣ:
"ತಮಂಧ ಘನ, ಜ್ಯೋತಿ ಕಿರಿದೆನ್ನಬಹುದೆ?"

sunaath said...

ಪ್ರಭುರಾಜ,
ಭಾರತೀಯ ಸಮಾಜದಲ್ಲಿ ಅನೇಕ ದೋಷಗಳಿದ್ದವು; ಅಷ್ಟೇ ಒಳ್ಳೆಯ ಅಂಶಗಳೂ ಇದ್ದವು. ಕಾಲಕಾಲಕ್ಕೆ ಮಹಾತ್ಮರು ಈ ಸಮಾಜವನ್ನು ಸುಧಾರಿಸಲು ಪ್ರಯತ್ನಪಟ್ಟರು. ಈಗ ಈ ನಮ್ಮ
ಸಮಾಜ ಎಲ್ಲಿ crumble ಆಗುತ್ತದೆಯೋ ಎನ್ನುವ ಹೆದರಿಕೆ ಆಗುತ್ತದೆ. ಆದರೆ ಭರವಸೆಯೂ ಇದೆ. ಭಾರತೀಯರಲ್ಲಿ ಅಂತರ್ನಿಹಿತವಾದ ನೈತಿಕ ಪ್ರಜ್ಞೆ ಎಚ್ಚರಗೊಳ್ಳುವದು, ಸಮಾಜ ಮತ್ತೆ ಸುಂದರವಾದೀತು.

ಬಿಸಿಲ ಹನಿ said...

ಸುನಾಥ್ ಸರ್,
ಸಮಾಜದೊಳಗಿನ ನಿಮ್ಮ ಇಣುಕು ನೋಟ ಹಾಗೂ ಅದರೊಂದಿಗೆ ಬೆಸೆದುಕೊಂಡಿರುವ ಸಂಸ್ಕೃತಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದೀರಿ. ಚಿಂತನೆಗೆ ಹಚ್ಚುವ ಲೇಖನ.
ಉತ್ತಮ ಲೇಖನಕ್ಕೆ ವಂದನೆಗಳು.

sunaath said...

ಉದಯ,
ಸ್ಪಂದನೆಗಾಗಿ ವಂದನೆಗಳು.

ಅಂತರ್ವಾಣಿ said...

ಸುನಾಥಂಕಲ್,

ಮತ್ತೆ ತುಂಬಾ ಒಳ್ಳೆ ವಿಚಾರ ಕುರಿತು ಬರೆದು ಜ್ಞಾನ ಹೆಚ್ಚುಗಳಿಸಿದ್ದಕ್ಕೆ ವಂದನೆಗಳು

ಶ್ರೀನಿಧಿ.ಡಿ.ಎಸ್ said...

ಚೆಂದ ಬರೆದಿದ್ದೀರಿ. ಕುತೂಹಲಕಾರೀ ವಿಷಯ ಇದು. ನಾನು ಸಮಾಜಶಾಸ್ತ್ರದ ವಿದ್ಯಾರ್ಥಿಯೂ ಆಗಿದ್ದರಿಂದ,ನಿಮ್ಮ ಹೊಳಹುಗಳು ಮತ್ತಷ್ಟು ಹಿಡಿಸಿದವು.

ನೀವೇಕೆ ನಿಮ್ಮೆಲ್ಲ ಬರಹಗಳನ್ನು ಪುಸ್ತಕರೂಪಕ್ಕಿಳಿಸಬಾರದು ಕಾಕಾ?

sunaath said...

ಜಯಶಂಕರ,
ಸಹಜ್ಞಾನಂ ಕರವಾವ ಹೈ
=ಜ್ಞಾನವನ್ನು ಜೊತೆಯಾಗಿ ಬೆಳೆಸಿಕೊಳ್ಳೋಣ.

sunaath said...

ಶ್ರೀನಿಧಿ,
ನೀವು ಸಮಾಜಶಾಸ್ತ್ರದ ವಿದ್ಯಾರ್ಥಿಯಾಗಿದ್ದರಿಂದ,ಈ ಲೇಖನದಲ್ಲಿರುವ ತಪ್ಪುಗಳನ್ನು ತಿಳಿಸಬಲ್ಲಿರಿ. ದಯವಿಟ್ಟು ಬರೆಯಿರಿ.