Sunday, April 26, 2009

ಸಂಜೀಯ ಜಾವಿಗೆ.....ದ.ರಾ.ಬೇಂದ್ರೆ

ಛಂದಸ್ಸು ಬೇಂದ್ರೆಯವರ ಕಾವ್ಯದ ಸಹಜವಾದ ಸಿದ್ಧಿಗಳಲ್ಲಿ ಒಂದು. ಬೇಂದ್ರೆಯವರು ಕವನವನ್ನು ಬರೆಯುತ್ತಿದ್ದಿಲ್ಲ ; ಕವನವು ಅವರ ಮನದಲ್ಲಿ ಮೂಡುತ್ತಿತ್ತು. ಒಂದು ಘಟನೆಯು ಅವರ ಮನದಲ್ಲಿ ಒಂದು ಭಾವವನ್ನು ಉದ್ದೀಪಿಸಿದ ಬಳಿಕ, ಆ ಭಾವಕ್ಕೆ ತಕ್ಕದಾದ ನಾದ ಹಾಗೂ ಛಂದಗಳೊಂದಿಗೆ ಪ್ರಾಸಬದ್ಧ ಪದಗಳು ಅವರ ಮನದಿಂದ ಕವನರೂಪದಲ್ಲಿ ಹೊರಹೊಮ್ಮುತ್ತಿದ್ದವು.
ಇದರ ಒಂದು ಶ್ರೇಷ್ಠ ಉದಾಹರಣೆ ಎಂದರೆ ‘ಪಾತರಗಿತ್ತಿ ಪಕ್ಕ’ ಎನ್ನುವ ಕವನ. ಪಾತರಗಿತ್ತಿಯು ಎಷ್ಟು ಕ್ಷಿಪ್ರವಾಗಿ ರೆಕ್ಕೆಗಳನ್ನು ಬಡೆಯುವದೊ, ಅಷ್ಟೇ ಕ್ಷಿಪ್ರವಾದ ಛಂದಸ್ಸು ಈ ಕವನಕ್ಕಿದೆ. ಪಾತರಗಿತ್ತಿಯು ಕ್ಷಣಾರ್ಧದಲ್ಲಿ ಎಲ್ಲೆಲ್ಲಿ ಸುತ್ತಾಡುವದೊ, ಈ ಕವನ ಸಹ ಅದೇ ವೇಗದಲ್ಲಿ ಎಲ್ಲೆಲ್ಲೊ ಸುತ್ತಾಡುತ್ತದೆ. (ಕಲ್ಪನೆಯ ರೆಕ್ಕೆಗಳ ಮೂಲಕ ಹಾರಾಡಿದರೂ ಸಹ ಬೇಂದ್ರೆಯವರ ಕವನ ವಾಸ್ತವದ ನೆಲೆಗಳನ್ನು ಬಿಡುವದಿಲ್ಲ.) ಇಂತಹದೇ ಸಹಜ ಛಂದಸ್ಸಿನ ಮತ್ತೊಂದು ಕವನ : “ಸಂಜೀಯ ಜಾವಿಗೆ ”.

ಮೂರೂಸಂಜೆಯ ಹೊತ್ತಿನಲ್ಲಿ ಬೇಂದ್ರೆಯವರು ತಮ್ಮ ಮನೆಯ ಮುಂಭಾಗದಲ್ಲಿ ಕುಳಿತುಕೊಂಡಿದ್ದಾರೆ. ಅವರ ಪುಟ್ಟ ಮಗಳು ಮಂಗಲಾ ನೀರು ತರುವವರ ಜೊತೆಗೆ ತಾನೂ ಸಹ ಬಾವಿಗೆ ಹೊರಟಿದ್ದಾಳೆ. ಆ ಕಾಲದಲ್ಲಿ ನೀರನ್ನು ಕೆರೆ ಅಥವಾ ಬಾವಿಯಿಂದಲೇ ತರಬೇಕಾಗಿತ್ತು. ಹೊತ್ತು ಮೂಡುವ ಮುನ್ನ ಹಾಗೂ ಹೊತ್ತು ಮುಳುಗುವ ಸಮಯದಲ್ಲಿ ಈ ಕಾರ್ಯಕ್ರಮ ನಡೆಯುತ್ತಿತ್ತು.

ಈ ಪುಟ್ಟ ಬಾಲೆ, ಪುಟ್ಟ ಬಿಂದಿಗೆ ಹೊತ್ತುಕೊಂಡು ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತ ನೀರು ತರಲು ಹೊರಟಾಗ, ಬೇಂದ್ರೆಯವರಿಗೆ ವಿನೋದವೆನಿಸಿದೆ. ಅವರು ಅವಳ ಚಲನವಲನವನ್ನು ಕೌತುಕದಿಂದ ಗಮನಿಸುತ್ತಿದ್ದಾರೆ. ಅವಳ ಪುಟ್ಟ ಹೆಜ್ಜೆಗಳ ತಾಳಕ್ಕೆ ತಕ್ಕಂತೆ ಅವರ ಮನದಲ್ಲಿ ಕವನ ಮೂಡುತ್ತಿದೆ.
ಕವನದ ಪೂರ್ತಿಪಾಠ ಇಂತಿದೆ:

ಮಂಗಲೆಯೊಂದಿಗೆ | ಹಿಗ್ಗಾಯ್ತು ತಂದೆಗೆ ||
ಕುಣಿಸ್ಯಾಡಿ ಕೂಸಿಗೆ | ಅರಳಿಸಿ ಆಸೆಗೆ ||
ರಾಗದ ಸಾಟಿಗೆ | ತೂಗ್ಯಾಡೊ ಧಾಟಿಗೆ ||
ಒಲಿದಾಡೊ ರೀತಿಗೆ | ಹಾಡ್ಯಾನೊ ಗೀತಿಗೆ ||
ಸಂಜೀಯ ಜಾವಿಗೆ | ಹೊರಟೀದಿ ಬಾವಿಗೆ ||

ಸಂಜೆಯ ಜಾವಿಗೆ | ಹೊರಟೀದಿ ಬಾವಿಗೆ ||
ಕಿರಗೀಯ ನೀರಿಗೆ | ಒದೆಯೂತ ದಾರಿಗೆ ||
ಗೆಜ್ಜೀಯು ಗೆಜ್ಜಿಗೆ | ತಾಕ್ಯಾವ ಹೆಜ್ಜಿಗೆ ||
ಏನಾರ ನಡಿಗೆ | ಯಾವೂರ ಹುಡಿಗೆ ||
ಸಂಜೆಯ ಜಾವಿಗೆ | ಹೊರಟಾಳ ಬಾವಿಗೆ ||

ಎರಡೂನು ಸಾಲಿಗೆ | ಹಾದ್ಯುದ್ದ ಬೇಲಿಗೆ ||
ಗುಲಬಾಕ್ಷಿ ಮಲ್ಲಿಗೆ | ಕೇಳತಾವ ಕಲ್ಲಿಗೆ ||
“ ಕಳಸೋದೆ ನೀರಿಗೆ | ಇಂಥ ಸುಕುಮಾರಿಗೆ ||
ಚಾಚ್ಯಾವಂಗಾಲಿಗೆ | ಮುಚ್ಚಂಜಿ ನಾಲಿಗೆ ” ||
ಸಂಜೀಯ ಜಾವಿಗೆ | ಬಂದ್ಯಲ್ಲ ಬಾವಿಗೆ ||

ಮಾತೀಗು ಆಚೆಗೆ | ಮೀರಿದ್ದ ನಾಚಿಗೆ ||
ಮುಸುಕ್ಯಾವ ಹೂವಿಗೆ | ಬಂದೀಯೆ ಬಾವಿಗೆ ||
ಗಿಲುಕೆಂಬೊ ಬಳಿಗೆ | ಕೆಲಸೊಂದೊ ಗಳಿಗೆ ||
ಗೆಳತೇರ ಒಂದಿದೆ | ಸೇದಿದೆ ಬಿಂದಿಗೆ ||
ಸಂಜೀಯ ಜಾವಿಗೆ | ಬಂದೀಯೆ ಬಾವಿಗೆ ||

ಮೂಗಿನ ನೇರಿಗೆ | ಹೊರಳೀದೆ ಊರಿಗೆ ||
ತಲಿಮ್ಯಾಲ ಬಿಂದಿಗೆ | ಕಾಲಾಗ ಅಂದಿಗೆ ||
ತುಂ ತುಮುಕು ತುಂಬಿದೆ | ಬಿಂದೀಗೆ ಅಂತಿದೆ ||
ಝಣ್‍ಝಣ ಅಂದಿಗೆ | ಅಂದಾವ ಹೊಂದಿಗೆ ||
ಸಂಜೀಯ ಜಾವಿಗೆ | ಹೋಗಿದ್ದೆ ಬಾವಿಗೆ ||

ಒಂದೇನೆ ಬಾರಿಗೆ | ಹೋದೆ ಸೀ-ನೀರಿಗೆ ||
ಬೆವರೀನ ಸಾರಿಗೆ | ತಂದೀದಿ ಯಾರಿಗೆ ||
ಇಬ್ಬನಿ ಹೂವಿಗೆ | ನಸುಕಿನ ಜಾವಿಗೆ ||
ಮುತ್ತ್ಹನಿ ಮಾರಿಗೆ | ಮುತ್ತ್ಯಾವೊ ನಾರಿಗೆ ||
ಸಂಜೀಯ ಜಾವಿಗೆ | ಹೋಗಿಯು ಬಾವಿಗೆ ||

ಕೆಲಸಾನ ಆಟಿಗೆ | ಮಾಡುವ ಸೂಟಿಗೆ |
ಹಸನಾದ ಧರತಿಗೆ | ಮೆಚ್ಚಿದೆ ಗರತಿಗೆ ||
ಕುಣಿಸಿದೆ ಇಂದಿಗೆ | ಕಣ್ಬಿಟ್ಟ ಮಂದಿಗೆ ||
ನೀವಾಳಿ ದಿಟ್ಟಿಗೆ | ಕಣ್ಣೆಲ್ಲ ಒಟ್ಟಿಗೆ ||
ಸಂಜೀಯ ಜಾವಿಗೆ | ಹೋಗಿದ್ದ್ಯೆ ಬಾವಿಗೆ ||

ಮಂಗಲೆಯೊಂದಿಗೆ | ಹಿಗ್ಗಾಯ್ತು ತಂದೆಗೆ ||
ಕುಣಿಸ್ಯಾಡಿ ಕೂಸಿಗೆ | ಅರಳಿಸಿ ಆಸೆಗೆ ||
ರಾಗದ ಸಾಟಿಗೆ | ತೂಗ್ಯಾಡೊ ಧಾಟಿಗೆ ||
ಒಲಿದಾಡೊ ರೀತಿಗೆ | ಹಾಡ್ಯಾನ ಗೀತಿಗೆ ||
ಸಂಜೀಯ ಜಾವಿಗೆ | ಹೊರಟೀದಿ ಬಾವಿಗೆ ||
vvvvvvvvvvvvvvvvvvvvvvvvvvvvvvvvvvvvvvvvvvvvvvv

ಪುಟ್ಟ ಮಂಗಲೆಯನ್ನು ಎತ್ತಿಕೊಂಡು ಆಡುವದರಿಂದ ತಂದೆಗೆ ಸಂತೋಷ ಉಕ್ಕುತ್ತದೆ. ಅವಳನ್ನು ಆತ ಎತ್ತಿ ಎತ್ತಿ ಕುಣಿಸುತ್ತಾನೆ. ಇಬ್ಬರ ಮನಸ್ಸೂ ಆನಂದದ ಆಸೆಯಲ್ಲಿ ಅರಳುತ್ತದೆ. ಕುಣಿಸುವಾಗ ಈತ ಮಾಡುವ ‘ಊ ಊ’ ರಾಗದ ದನಿಗೆ ತಕ್ಕಂತೆ ಅವಳು ತೂಗುತ್ತಾಳೆ. ಒಬ್ಬರಿಗೊಬ್ಬರು ಮಮತೆಯಿಂದ ಸ್ಪಂದಿಸುತ್ತಾರೆ. ಈ ಸ್ಪಂದನದಿಂದ ಉದ್ದೀಪ್ತನಾದ ಕವಿಯಲ್ಲಿ ಹಾಡು ಮೂಡುತ್ತದೆ.

“ಮಂಗಲೆಯೊಂದಿಗೆ | ಹಿಗ್ಗಾಯ್ತು ತಂದೆಗೆ ||
ಕುಣಿಸ್ಯಾಡಿ ಕೂಸಿಗೆ | ಅರಳಿಸಿ ಆಸೆಗೆ ||
ರಾಗದ ಸಾಟಿಗೆ | ತೂಗ್ಯಾಡೊ ಧಾಟಿಗೆ ||
ಒಲಿದಾಡೊ ರೀತಿಗೆ | ಹಾಡ್ಯಾನೊ ಗೀತಿಗೆ ||
ಸಂಜೀಯ ಜಾವಿಗೆ | ಹೊರಟೀದಿ ಬಾವಿಗೆ ||”

ಇಂತಹ ಕಾವ್ಯೋದ್ದೀಪನಕ್ಕೆ ಕಾರಣಳಾಗುವ ಈ ಮಗಳು , ಮಂಗಳೆ ಇದೀಗ ಮೂರೂಸಂಜೆಯ ಹೊತ್ತಿನಲ್ಲಿ ನೀರು ತರಲು ಬಾವಿಗೆ ಹೊರಟಿದ್ದಾಳೆ. ಈ ಪುಟ್ಟ ಬಾಲೆ ನಡೆಯುತ್ತಿರುವ ಪರಿಯಾದರೂ ಎಂತಹದು? ಅವಸರದಲ್ಲಿ ಧಾವಿಸುತ್ತಿರುವದರಿಂದ ತಾನು ಉಟ್ಟುಕೊಂಡ ಕಿರಿಗೆ (=ಸಣ್ಣ ಸೀರೆ)ಯ ನಿರಿಗೆಗಳನ್ನು ಅವಳು ಚಿಮ್ಮುತ್ತಿದ್ದಾಳೆ. ಈ ಕಿರಿಗೆ ಸಹ ಅವಳಿಗೆ ದೊಡ್ಡದೇ ಆಗಿದೆ. ಅದು ಅವಳ ಅಂಗಾಲುಗಳನ್ನು ದಾಟಿ, ನೆಲವನ್ನು ಸ್ಪರ್ಷಿಸುತ್ತದೆ. ಆದುದರಿಂದ ಕವಿ ಇದನ್ನು ‘ಒದೆಯೂತ ದಾರಿಗೆ’ ಎಂದು ಬಣ್ಣಿಸುತ್ತಾನೆ.

“ಸಂಜೆಯ ಜಾವಿಗೆ | ಹೊರಟೀದಿ ಬಾವಿಗೆ ||
ಕಿರಗೀಯ ನೀರಿಗೆ | ಒದೆಯೂತ ದಾರಿಗೆ ||
ಗೆಜ್ಜೀಯು ಗೆಜ್ಜಿಗೆ | ತಾಕ್ಯಾವ ಹೆಜ್ಜಿಗೆ ||
ಏನಾರ ನಡಿಗೆ | ಯಾವೂರ ಹುಡಿಗೆ ||
ಸಂಜೆಯ ಜಾವಿಗೆ | ಹೊರಟಾಳ ಬಾವಿಗೆ ||”

ಅದರಂತೆ ಅವಳ ಗೆಜ್ಜೆಗಳು ಅವಳ ಹೆಜ್ಜೆಗೆ ತಾಕುತ್ತಿವೆ. ಈ ಪುಟ್ಟ ಚೆಲುವಿಯನ್ನು ಕಂಡ ಕವಿಗೆ ತನ್ನ ಮಗಳಲ್ಲಿಯೇ ಹೊಸದೊಂದು ಸೌಂದರ್ಯ ಕಾಣುತ್ತದೆ. ‘ಎಲಾ! ಇವಳು ತನ್ನ ಮಗಳೇ?’ ಎಂದು  ಅಗಾಧಪಟ್ಟುಕೊಂಡ ಕವಿ, “ಏನಾರ ನಡಿಗೆ, ಯಾವೂರ ಹುಡಿಗೆ!ಎಂದು ಉದ್ಗಾರವೆತ್ತುತ್ತಾನೆ.

ಇವಳು ಹೋಗುತ್ತಿರುವ ಕಿರುದಾರಿಯ ಎರಡೂ ಬದಿಗೆ ಬೇಲಿ ಹಬ್ಬಿದೆ. ಆ ಬೇಲಿಯಲ್ಲಿ , ಬಾವಿಯ ಸನಿಹದಲ್ಲಿ ಗುಲಬಾಕ್ಷಿ ಹಾಗು ಕಾಡುಮಲ್ಲಿಗೆ ಬೆಳೆದಿವೆ. ಅವೂ ಸಹ ಈ ಬಾಲೆಯನ್ನು ನೋಡುತ್ತವೆ. ತಂದೆಯಲ್ಲಿ ಕೌತುಕವನ್ನು ಹುಟ್ಟಿಸಿದ ಈ ದೃಶ್ಯವು ಹೂವುಗಳಲ್ಲಿ ಅನುಕಂಪವನ್ನು ಹುಟ್ಟಿಸಿದೆ. ಮಂಗಲೆಯ ಸಾಹಸವು ಅವುಗಳಲ್ಲಿ ಮರುಕವನ್ನೇ ಮೂಡಿಸುತ್ತದೆ.

“ಎರಡೂನು ಸಾಲಿಗೆ | ಹಾದ್ಯುದ್ದ ಬೇಲಿಗೆ ||
ಗುಲಬಾಕ್ಷಿ ಮಲ್ಲಿಗೆ | ಕೇಳತಾವ ಕಲ್ಲಿಗೆ ||
“ ಕಳಸೋದೆ ನೀರಿಗೆ | ಇಂಥ ಸುಕುಮಾರಿಗೆ ||
ಚಾಚ್ಯಾವಂಗಾಲಿಗೆ | ಮುಚ್ಚಂಜಿ ನಾಲಿಗೆ ” ||
ಸಂಜೀಯ ಜಾವಿಗೆ | ಬಂದ್ಯಲ್ಲ ಬಾವಿಗೆ || ”

ಹೂವು ಮೃದುತ್ವದ ಪ್ರತೀಕ. ಕಲ್ಲು ಕಾಠಿಣ್ಯದ ಪ್ರತೀಕ. ಕಲ್ಲುಮನಸ್ಸಿನ ಕಲ್ಲನ್ನೇ ಈ ಹೂವುಗಳು ಕೇಳುತ್ತವೆ:
“ ಕಳಸೋದೆ ನೀರಿಗೆ , ಇಂಥ ಸುಕುಮಾರಿಗೆ ? ಅದೂ ಸಹ ಇಂತಹ ಮುಚ್ಚಂಜೆಯ ವೇಳೆಯಲ್ಲಿ? ”
ಈ ಪ್ರಶ್ನೆಗೆ ಆ ಕಲ್ಲು ಸಹ ಕರಗಿರಬಹುದೆ?

ಕಾಲವನ್ನು ಗುರುತಿಸಲು ಮನುಷ್ಯರಿಗೆ ಕಾಲಯಂತ್ರವೆನ್ನುವ ಸಾಧನವಿದೆ. ಮರ, ಗಿಡ, ಹೂವು ಮೊದಲಾದ ನೈಸರ್ಗಿಕ ವಸ್ತುಗಳು ಕಾಲವನ್ನು ಹೇಗೆ ಗುರುತಿಸುತ್ತಿವೆ?
“ಚಾಚ್ಯಾವಂಗಾಲಿಗೆ | ಮುಚ್ಚಂಜಿ ನಾಲಿಗೆ ” ||
ಮೂರೂಸಂಜೆಯ ನಾಲಿಗೆ (=ಮುಳುಗುತ್ತಿರುವ ಸೂರ್ಯಕಿರಣಗಳು) ಇವಳ ಅಂಗಾಲನ್ನು ಸ್ಪರ್ಶಿಸುತ್ತಿವೆ. ಇದು ಹೊತ್ತು ಮುಳುಗುವ ಸಮಯ. ಇಂತಹ ಸಮಯದಲ್ಲಿ ಯಾರಾದರೂ ಇಂತಹ ಪುಟ್ಟ ಹುಡುಗೆಯನ್ನು ನೀರು ತರಲು ಕಳಿಸಬಹುದೆ?
ತಮ್ಮ ಪ್ರಶ್ನೆಗೆ ಉತ್ತರಿಸುವರಾರೂ ಇಲ್ಲವೆಂದು ಆ ಹೂವುಗಳು ಆ ಹುಡುಗೆಯನ್ನೇ ಕೇಳುತ್ತವೆ:
“ಯಾಕವ್ವಾ, ಸಂಜೀಯ ಜಾವಿಗೆ ಬಂದ್ಯಲ್ಲ ಬಾವಿಗೆ ? ”

ಯಾರಿಂದಲೂ ಉತ್ತರ ಸಿಗದಿದ್ದಾಗ, ಆ ಹೂವುಗಳು ತಮ್ಮ ಮಾತಿಗಾಗಿ ತಾವೇ ನಾಚಿಕೊಳ್ಳುತ್ತವೆ. (ಹೂವುಗಳು ನಾಚಿಕೊಳ್ಳುವದೆಂದರೇನು? ಕೆಲವು ಹೂವುಗಳು ಸಂಜೆಯಾದಾಗ ಮುಚ್ಚಿಕೊಳ್ಳುತ್ತವೆ.) ಮೃದು ಸ್ವಭಾವದ ಆ ಹೂವುಗಳ ನಾಚಿಗೆಯ ಭಾವನೆಯು ಮಾತಿನಲ್ಲಿ ಹೇಳಲು ಸಾಧ್ಯವಾಗದಂತಹದು. (ಅದಕ್ಕಾಗಿಯೇ ಅವು ಮುಚ್ಚಿಕೊಳ್ಳುವದು.)

“ಮಾತೀಗು ಆಚೆಗೆ | ಮೀರಿದ್ದ ನಾಚಿಗೆ ||
ಮುಸುಕ್ಯಾವ ಹೂವಿಗೆ | ಬಂದೀಯೆ ಬಾವಿಗೆ ||
ಗಿಲುಕೆಂಬೊ ಬಳಿಗೆ | ಕೆಲಸೊಂದೊ ಗಳಿಗೆ ||
ಗೆಳತೇರ ಒಂದಿದೆ | ಸೇದಿದೆ ಬಿಂದಿಗೆ ||
ಸಂಜೀಯ ಜಾವಿಗೆ | ಬಂದೀಯೆ ಬಾವಿಗೆ ||”

ಈ ಬಾಲೆಯಾದರೊ ತನ್ನ ಕೆಲಸದಲ್ಲಿ ಖುಶಿ ಪಡುತ್ತ, ಬಳೆಗಳನ್ನು ಗಿಲುಕೆನ್ನಿಸುತ್ತ, ಒಂದೇ ಗಳಿಗೆಯಲ್ಲಿ ತನ್ನ ಜೊತೆಗಾತಿಯರೊಡನೆ ನೀರು ಸೇದಿಕೊಂಡು, ತನ್ನ ಬಿಂದಿಗೆಯನ್ನು ತುಂಬಿಕೊಂಡು ಈಗ ಮರಳಿ ಹೋಗುತ್ತಿದ್ದಾಳೆ !

“ಮೂಗಿನ ನೇರಿಗೆ | ಹೊರಳೀದೆ ಊರಿಗೆ ||
ತಲಿಮ್ಯಾಲ ಬಿಂದಿಗೆ | ಕಾಲಾಗ ಅಂದಿಗೆ ||
ತುಂ ತುಮುಕು ತುಂಬಿದೆ | ಬಿಂದೀಗೆ ಅಂತಿದೆ ||
ಝಣ್‍ಝಣ ಅಂದಿಗೆ | ಅಂದಾವ ಹೊಂದಿಗೆ ||
ಸಂಜೀಯ ಜಾವಿಗೆ | ಹೋಗಿದ್ದೆ ಬಾವಿಗೆ || ”

ಮರಳುತ್ತಿರುವ ಈ ಬಾಲೆಯ ತಲೆಯ ಮೇಲೆ ಇರುವದು ಬಿಂದಿಗೆ ಹಾಗೂ ಕಾಲಲ್ಲಿ ಇರುವದು ಅಂದಿಗೆ ; ಈ ವರ್ಣನೆಯನ್ನು ಆಪಾದಮಸ್ತಕ ವರ್ಣನೆ ಎನ್ನಬಹುದಲ್ಲವೆ? ತಲೆಯ ಮೇಲಿನ ಬಿಂದಿಗೆಯು ತುಂ ತುಂ ಎಂದು ಧ್ವನಿಸುತ್ತಿದ್ದರೆ, ಕಾಲೊಳಗಿನ ಅಂದಿಗೆಗಳು ಝಣ್ ಝಣ್ ಎನ್ನುತ್ತಿವೆ. ಬಿಂದಿಗೆಯ ಹಾಗೂ ಅಂದಿಗೆಯ ಧ್ವನಿಗಳು ಸಮತಾಳದಲ್ಲಿ ಸಂವಾದಿಯಾಗಿ ಹೊಂದಿಕೊಂಡಿವೆ !

ಕುಡಿಯಲು ಸಿಹಿನೀರು ತರಲು ಹೋದ ಬಾಲೆ ಒಂದು ಸಾರಿಗೆ ನೀರು ತಂದಳು. ಅಷ್ಟೇ ಸಾಕು, ಅವಳ ಮುಖದ ಮೇಲೆಲ್ಲ ಬೆವರಿನ ಹನಿಗಳು ಮೂಡಿವೆ. ತಂದೆಯ ಕಣ್ಣಿಗೆ ಇದು ಮುಂಜಾವಿನಲ್ಲಿ ಹೂವಿಗೆ ಮುಸುಕಿದ ಇಬ್ಬನಿಯಂತೆ ಕಾಣುವದು. ಈ ಬೆವರಿನ ಹನಿಗಳು ಮುತ್ತಿನ ಹನಿಗಳಂತೆ ಅವನಿಗೆ ಕಾಣುವವು.

“ಒಂದೇನೆ ಬಾರಿಗೆ | ಹೋದೆ ಸೀ-ನೀರಿಗೆ ||
ಬೆವರೀನ ಸಾರಿಗೆ | ತಂದೀದಿ ಯಾರಿಗೆ ||
ಇಬ್ಬನಿ ಹೂವಿಗೆ | ನಸುಕಿನ ಜಾವಿಗೆ ||
ಮುತ್ತ್ಹನಿ ಮಾರಿಗೆ | ಮುತ್ತ್ಯಾವೊ ನಾರಿಗೆ ||
ಸಂಜೀಯ ಜಾವಿಗೆ | ಹೋಗಿಯು ಬಾವಿಗೆ ||”

ಸಂಜೆಯ ಸಮಯದಲ್ಲಿ ನೀರು ತಂದರೂ ಸಹ, ಮುಂಜಾನೆಯ ಇಬ್ಬನಿಗಳು ಮುಖದಲ್ಲಿ ಕಾಣುತ್ತಿವೆಯಲ್ಲ ಎಂದು ಅವನಿಗೆ ಅಚ್ಚರಿಯಾಗುತ್ತಿದೆ. ತನ್ನ ಮಗಳ ಮೊಗವು ಮುಂಜಾನೆಯ ಹೂವಿನಂತೆ ಯಾವಾಗಲೂ ತಾಜಾ ಆಗಿಯೇ ಇರುವದು ಎಂದು ಅವನ ಭಾವನೆಯೆ?

ಆಟವಾಡುವ ವಯಸ್ಸಿನ ಬಾಲೆ ಇವಳು. ಇವಳಿಗೆ ಕೆಲಸವೆಲ್ಲವೂ ಆಟವೇ! ಈ ಪುಟ್ಟ ಗರತಿಯ ಇಂತಹ ಅಚ್ಚುಕಟ್ಟಾದ ವಿಧಾನವನ್ನು ತಂದೆ ಮೆಚ್ಚಿಕೊಳ್ಳುತ್ತಾನೆ. ಅವನ ಮನಸ್ಸು ಕುಣಿಯುತ್ತದೆ. ಅವಳ ಈ ನೀರು ತರುವ ಆಟವನ್ನು ನೋಡಿದ ಜನರೂ ಅನೇಕರು. ಅವರ ‘ಕಣ್ಣು’ ಇವಳಿಗೆ ತಾಕಬಾರದಲ್ಲ ! ಅದಕ್ಕಾಗಿ ತಂದೆ ಇವಳಿಗೆ ನೀವಾಳಿಸುತ್ತಾನೆ.

“ಕೆಲಸಾನ ಆಟಿಗೆ | ಮಾಡುವ ಸೂಟಿಗೆ |
ಹಸನಾದ ಧರತಿಗೆ | ಮೆಚ್ಚಿದೆ ಗರತಿಗೆ ||
ಕುಣಿಸಿದೆ ಇಂದಿಗೆ | ಕಣ್ಬಿಟ್ಟ ಮಂದಿಗೆ ||
ನೀವಾಳಿ ದಿಟ್ಟಿಗೆ | ಕಣ್ಣೆಲ್ಲ ಒಟ್ಟಿಗೆ ||
ಸಂಜೀಯ ಜಾವಿಗೆ | ಹೋಗಿದ್ದ್ಯೆ ಬಾವಿಗೆ ||”

ಕವಿ ತನ್ನ ಸವಿ ಅನುಭವವನ್ನು ಮತ್ತೆ ನೆನಪಿಸಿಕೊಳ್ಳುತ್ತಾನೆ.
“ಮಂಗಲೆಯೊಂದಿಗೆ | ಹಿಗ್ಗಾಯ್ತು ತಂದೆಗೆ ||
ಕುಣಿಸ್ಯಾಡಿ ಕೂಸಿಗೆ | ಅರಳಿಸಿ ಆಸೆಗೆ ||
ರಾಗದ ಸಾಟಿಗೆ | ತೂಗ್ಯಾಡೊ ಧಾಟಿಗೆ ||
ಒಲಿದಾಡೊ ರೀತಿಗೆ | ಹಾಡ್ಯಾನ ಗೀತಿಗೆ ||
ಸಂಜೀಯ ಜಾವಿಗೆ | ಹೊರಟೀದಿ ಬಾವಿಗೆ ||”

ಮೊದಲನೆಯ ನುಡಿಯು ಕೊನೆಯ ನುಡಿಯಂತೆಯೇ ಕಾಣುತ್ತಿದೆ. ಆದರೆ ಮೊದಲನೆಯ ನುಡಿಯ ನಾಲ್ಕನೆಯ ಸಾಲಿನಲ್ಲಿ “ ಹಾಡ್ಯಾನೊ ಗೀತಿಗೆ ” ಎನ್ನುವ ಉಲ್ಲಾಸಮಯ ಪ್ರಾರಂಭವಿದ್ದರೆ, ಕೊನೆಯ ನುಡಿಯ ನಾಲ್ಕನೆಯ ಸಾಲಿನಲ್ಲಿ “ ಹಾಡ್ಯಾನ ಗೀತಿಗೆ ” ಎನ್ನುವ ಮಂಗಲಮುಕ್ತಾಯವಿದೆ.

ಬೇಂದ್ರೆಯವರ ಈ ಕವನದ ಎರಡು ವೈಶಿಷ್ಟ್ಯಗಳನ್ನು ಇಲ್ಲಿ ಗಮನಿಸಬಹುದು.
ಮೊದಲನೆಯದು ಸಹಜ ಛಂದಸ್ಸು , ಅಂದರೆ ಕಾವ್ಯದ ವಸ್ತುವಿಗೆ ಹೊಂದಿಕೊಳ್ಳುವ ಛಂದಸ್ಸು.
ಎರಡನೆಯದು, ನಿಸರ್ಗದ ವಸ್ತುಗಳಾದ ಹೂವು , ಕಲ್ಲು ಇತ್ಯಾದಿ ವಸ್ತುಗಳ ಮಾನುಷೀಕರಣ ಹಾಗು ಅವುಗಳ ಜೊತೆಗೆ ಕವನವು ಸಾಧಿಸಿದ ತಾದಾತ್ಮ್ಯ.
ಈ ಕವನವು ಕೇವಲ ಪುಟ್ಟ ಬಾಲೆಯ ಬಗೆಗಿನ ಕವನವಲ್ಲ. ಇದು ನಿಸರ್ಗವಸ್ತುಗಳ ಬಗೆಗಿನ ಕವನವೂ ಹೌದು.
ಅಂತೆಯೇ ಕವನ ಮುಗಿದ ಬಳಿಕವೂ ಸಹ ಕೆಳಗಿನ ಸಾಲುಗಳು ನಮ್ಮ ಮನಸ್ಸಿನಲ್ಲಿ ರಿಂಗಣಿಸುತ್ತಲೇ ಉಳಿದು ಬಿಡುತ್ತವೆ:
“ಗುಲಬಾಕ್ಷಿ, ಮಲ್ಲಿಗೆ ಕೇಳತಾವ ಕಲ್ಲಿಗೆ
ಕಳಸೋದೆ ನೀರಿಗೆ, ಇಂಥ ಸುಕುಮಾರಿಗೆ ?”

Friday, April 10, 2009

ಮದುವೆಯ ಮಮತೆಯ ಕರೆಯೋಲೆ

ಆತ್ಮೀಯರೆ,
ನಮ್ಮ ಮಗಳು

ಕುಮಾರಿ ಚಂದ್ರಲಾ
ಇವಳ ವಿವಾಹವನ್ನು,
ಚಿ|| ಪವನ
(ಧಾರವಾಡದ ಡಾ^. ಪ್ರಹ್ಲಾದ ಛೆಬ್ಬಿ ಇವರ ಸುಪುತ್ರ)
ಇವರ ಜೊತೆ
ದಿ: ೧೯-೦೪-೨೦೦೯ರಂದು ಜರುಗಿಸಲು
ನಿಶ್ಚಯಿಸಲಾಗಿದೆ.

ವಿವಾಹ ಸಮಾರಂಭದಲ್ಲಿ ತಾವು ಉಪಸ್ಥಿತರಿದ್ದು
ನಮ್ಮ ಸಂತೋಷದಲ್ಲಿ ಭಾಗಿಯಾಗಲು ಪ್ರಾರ್ಥಿಸುತ್ತೇವೆ.
ದಯವಿಟ್ಟು ಬನ್ನಿರಿ.

ವಿವಾಹ ಸ್ಥಳ: ದೈವಜ್ಞ ಸಮುದಾಯ ಭವನ,
ಬೆಂಗಳೂರು-ಪುಣೆ ರಸ್ತೆ, ಧಾರವಾಡ
ಮುಹೂರ್ತ: ಮಧ್ಯಾಹ್ನ ೧೨:೨೭ ಗಂಟೆ


ತಮ್ಮ ಆತ್ಮೀಯ
-ವನಮಾಲಾ
-ಸುನಾಥ