Wednesday, May 6, 2009

ಅಷ್ಟು ಪ್ರೀತಿ ಇಷ್ಟು ಪ್ರೀತಿ............ದ.ರಾ.ಬೇಂದ್ರೆ

ಸಖೀಗೀತದಲ್ಲಿ ಬೇಂದ್ರೆಯವರು ತಮ್ಮ ಹೆಂಡತಿಯನ್ನು ವಿಧಿ ತಂದ ವಧುಎಂದು ಬಣ್ಣಿಸಿದ್ದಾರೆ. ಅದೇ ರೀತಿಯಲ್ಲಿ ಅವರ ಹೆಂಡತಿ ಲಕ್ಷ್ಮೀಬಾಯಿಯವರಿಗೆ ಬೇಂದ್ರೆ ವಿಧಿ ತಂದ ವರಆಗಿರಲಿಕ್ಕೆ ಸಾಕು. ಮದುವೆಯಾದಾಗ ಬೇಂದ್ರೆಯವರಿಗೆ ೨೩ ವರ್ಷ ವಯಸ್ಸು. ಲಕ್ಷ್ಮೀಬಾಯಿ ಕೇವಲ ಹದಿಮೂರು ವರ್ಷದ ಹುಡುಗಿ.ಇತರ ಹುಡುಗಿಯರಿಗೆ ಇರುವಂತೆ ಈ ಹುಡುಗಿಗೂ ತನ್ನ ಸಂಸಾರದ ಬಗೆಗೆ ಬಣ್ಣ ಬಣ್ಣದ ಕನಸುಗಳು ಇದ್ದಿರಬಹುದು.

ಬೇಂದ್ರೆಯವರು ೧೯೨೬ರಲ್ಲಿ ಸ್ವಧರ್ಮಪತ್ರಿಕೆಯ ಹಾಗೂ ೧೯೨೯ರಲ್ಲಿ ಜಯ ಕರ್ನಾಟಕಪತ್ರಿಕೆಯ ಸಂಪಾದಕರಾಗಿದ್ದರು. ಇವರು ಬರೆದ ನರಬಲಿಕವನಕ್ಕಾಗಿ ಬ್ರಿಟಿಶ್ ಸರಕಾರವು ಇವರನ್ನು ೧೯೩೨ರಲ್ಲಿ ಹಿಂಡಲಗಿಯ ಜೇಲಿಗೆ ಕಳುಹಿಸಿತು. ಕೆಲ ಕಾಲ ಮುಗದ ಎನ್ನುವ ಹಳ್ಳಿಯಲ್ಲಿ ದಿಗ್ಬಂಧನದಲ್ಲಿರಿಸಿತು. ಆರು ವರ್ಷಗಳ ವರೆಗೆ ಇವರಿಗೆ ಯಾರೂ ಯಾವುದೇ ನೌಕರಿಯನ್ನು ಕೊಡಕೂಡದೆಂದು ಸರಕಾರವು ಆಜ್ಞೆ ಹೊರಡಿಸಿತು. ಆರು ವರ್ಷಗಳವರೆಗೆ ಬೇಂದ್ರೆಯವರು ನಿರುದ್ಯೋಗಿಯಾಗಿ ಉಳಿಯಬೇಕಾಯಿತು. ಬಳಿಕ ೧೯೩೮ರಲ್ಲಿ ಮಾಸ್ತಿಯವರು ಬೇಂದ್ರೆಯವರನ್ನುಜೀವನಪತ್ರಿಕೆಯ ಸಂಪಾದಕರನ್ನಾಗಿ ಮಾಡಿದರು.

ಈ ನಡುವಿನ ಅವಧಿಯಲ್ಲಿ ಬೇಂದ್ರೆಯವರು ಪುಣೆಯಲ್ಲಿ ಎಮ್. ಏ. ಪದವಿಯನ್ನು ಪಡೆದರು. ಗರಿ’ ,‘ಮೂರ್ತಿ’, ’ಕಾಮಕಸ್ತೂರಿ’, ‘ಸಖೀಗೀತ’, ‘ನಾದಲೀಲೆಹಾಗೂ ಉಯ್ಯಾಲೆಕವನಸಂಕಲನಗಳನ್ನು ಪ್ರಕಟಿಸಿದರು. ಸಾಹಿತ್ಯಸಮ್ಮೇಳನಗಳಲ್ಲಿ ಭಾಗವಹಿಸಿದರು. ಅವರ ಕೀರ್ತಿಸೂರ್ಯನು ನಡುನೆತ್ತಿಗೇರಿದನು. ಆದರೆ ಸಂಸಾರತಾಪದಲ್ಲಿ ಬೆಂದವರು ಇವರ ಧರ್ಮಪತ್ನಿ.
ಇಂತಹ ಸಹನಾಲಕ್ಷ್ಮಿಯ ಬಗೆಗೂ ಬೇಂದ್ರೆಯವರಿಗೆ ಸಹನೆ ಇರಲಿಲ್ಲ. ಎಲ್ಲ ಹೆಂಡತಿಯರು ಬಯಸುವಂತೆ ಇವಳೂ ಸಹ ಒಡವೆ ಕೊಡಿಸಲು ಬೇಂದ್ರೆಯವರನ್ನು ಯಾವಾಗಲೋ ಕೇಳಿದ್ದಾಳು. ಈ ಕವಿಪುಂಗವರು ಅವಳಿಗೆ ಕೇವಲ ಕವನಗಳ ಒಡವೆಗಳನ್ನಷ್ಟೇ ತೊಡಿಸಿದರು !
"ಆತ ಕೊಟ್ಟ ವಸ್ತು, ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂದಿ
ಕೆನ್ನೆತುಂಬ ಮುತ್ತು"

ಬೇಂದ್ರೆಯವರಿಗೆ ತನ್ನ ಕಾವ್ಯಾಲಂಕಾರದ ಮಿತಿ ಗೊತ್ತಿರಲಿಲ್ಲ ಎಂದಲ್ಲ.
ಅವರೇ ತಮ್ಮ ಮತ್ತೊಂದು ಕವನದಲ್ಲಿ,
"ನೀನು ಕೊಡುವೆ ನನಗೆ ದವನ
ನಾನು ಕೊಡುವೆ ನಿನಗೆ ಕವನ....." ಎಂದೆಲ್ಲ ಹೇಳುತ್ತ ತಮ್ಮ ಕವನಕ್ಕೆ "ಬರಿಯ ಮಾತಿನ ಪೋಣಿಕೆ" ಎಂದು ಬಣ್ಣಿಸಿದ್ದಾರೆ.
ಬಹುಶ:ಒಂದು ಮುತ್ತಿನ ಸರವನ್ನಾದರೂ ಕೊಡಿಸಿಎಂದು ಹೆಂಡತಿ ಆಗ್ರಹಪಡಿಸಿದಾಗ, ಈ ಕವಿ ಒಂದು ಉದ್ದವಾದ ಕವನವನ್ನೇ ಹೊಸೆದು ಹೆಂಡತಿಗೆ ಕೊಟ್ಟರು. ಸುಮಾರು ೫೦೦೦ ಅಮೂಲ್ಯ ಪುಸ್ತಕಗಳನ್ನು ಸಂಗ್ರಹಿಸಿದ ಹಾಗು ಅನೇಕ ಅವಧಿಗಳಲ್ಲಿ ನಿರುದ್ಯೋಗಿಯಾಗಿದ್ದ ಬೇಂದ್ರೆಯವರಿಗೆ ಸಂಸಾರಕ್ಕಾಗಿ ದುಡ್ಡಿನ ಅಭಾವವಾಗುವುದು ಸಹಜವಾದ ಸಂಗತಿಯೇ ಆಗಿದೆ. ಆದರೆ ಕಲ್ಪನೆಯ ಅಭಾವ ಅವರನ್ನು ಎಂದೂ ಕಾಡಿಸಲಿಲ್ಲ. ಅನಂತ ಕಲ್ಪನಾಸಾಮ್ರಾಜ್ಯದ ಸಾರ್ವಭೌಮರವರು. ಪ್ರೀತಿಯನ್ನು (ಒಡವೆಗಳಿಂದ) ಅಳೆಯಬೇಡಎಂದು ತಮ್ಮ ಧರ್ಮಪತ್ನಿಗೆ ಹೇಳುವ ಬೇಂದ್ರೆಯವರ ಕವನದ ಪೂರ್ಣಪಾಠ ಹೀಗಿದೆ:
ಅಷ್ಟು ಪ್ರೀತಿ ಇಷ್ಟು ಪ್ರೀತಿ--
           ಎಣಿಸಿ ಕಷ್ಟಬಡದಿರು
                     ಒಲೆದು ಒಲಿಸಿ ಸುಖವಿರು
ಎಷ್ಟೆಯಿರಲಿ ಅಷ್ಟೆ ಮಿಗಿಲು....
ತಮ್ಮ ಕಿರಣ ತಮಗೆ ಹಗಲು;
                                   ಉಳಿದ ಬೆಳಕು ಕತ್ತಲು.
ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು
                                    ಉಳಿದ ಲೋಕ ಹಿತ್ತಲು.
ಮುತ್ತಿನೆಕ್ಕಸರವನಿಕ್ಕೆ
                                   ಮುದ್ದಿಗೆ ಕಳೆ ಕಟ್ಟಿತೆ
ತೊಯ್ದ ಎವೆಗೆ ಮುದ್ದನಿಡಲು
                                   ಮುದ್ದಿಗೆ ಅದು ತಟ್ಟಿತೆ?
ಕುದಿದು ಬಂದ ಕಂಬನಿಯೊಲು
                                   ಕಂಪು ಬರದೆ ಬಿಟ್ಟಿತೆ?
ಮುತ್ತು ರತುನ ಹೊನ್ನು ಎಲ್ಲ
                                    ಕಲ್ಲು ಮಣ್ಣ ವೈಭವಾ
                                    ಎಲವೊ ಹುಚ್ಚ ಮಾನವಾ
ಒಂದು ಷೋಕು-----ಬರಿಯ ಝೋಕು
                                    ಬದುಕಿನೊಂದು ಜಂಬವು
                                    ಒಲವೆ ಮೂಲ ಬಿಂಬವು.
ಸಪ್ತ ನಾಕ   ಸಪ್ತ ನರಕ
                                   ಅದರ ಬೆಳಕು ಕತ್ತಲು
ಮನ್ವಂತರ ತನ್ವಂತರ
                                   ಅದರ ಕೋಟೆ ಕತ್ತಲು
ಸಿಂಹಾಸನವನೇರಿ ಕುಳಿತೆ;
                                   ತೊಡೆಗೆ ತೊಡೆಯ ಹಚ್ಚಿದೆ
ಸರಿಯೆ, ಒಲಿದ ತೋಳಿಗಿಂತ
                                   ಅದರೊಳೇನು ಹೆಚ್ಚಿದೆ ?
ಎದೆಯ ಕಣ್ಣ ಮುಚ್ಚಿಕೊಂಡು
                                   ಏಕೊ ಎನೊ ಮೆಚ್ಚಿದೆ
ಮರದ ಅಡಿಗೆ ಗುಡಿಸಲಿರಲಿ
                                   ಅಲ್ಲೆ ಒಲವು ಮೆರೆಯದೇ
                                   ನಲಿವು ಮೇರೆವರಿಯದೇ?
ಬೇಂದ್ರೆಯವರ ಹೆಂಡತಿ ಒಂದು ಪ್ರಾಪಂಚಿಕ ವಸ್ತುವನ್ನು ಆಸೆಪಟ್ಟು ಕೇಳಿದಾಗ, ಬೇಂದ್ರೆಯವರು ಅದಕ್ಕೊಂದು ತಾತ್ವಿಕ ಸಮಾಧಾನವನ್ನು ನೀಡುತ್ತಿದ್ದಾರೆ. ಮೊದಲನೆಯ ನುಡಿಯನ್ನು ನೋಡಿರಿ:
ಅಷ್ಟು ಪ್ರೀತಿ ಇಷ್ಟು ಪ್ರೀತಿ--
           ಎಣಿಸಿ ಕಷ್ಟಬಡದಿರು
                     ಒಲೆದು ಒಲಿಸಿ ಸುಖವಿರು
ಎಷ್ಟೆಯಿರಲಿ ಅಷ್ಟೆ ಮಿಗಿಲು....ತಮ್ಮ ಕಿರಣ ತಮಗೆ ಹಗಲು;
                                                ಉಳಿದ ಬೆಳಕು ಕತ್ತಲು.
ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು
                                                 ಉಳಿದ ಲೋಕ ಹಿತ್ತಲು.
ಪ್ರೀತಿಯ ಮಡದಿಯೆ, ನನಗೆ ನಿನ್ನಲ್ಲಿರುವ ಪ್ರೀತಿಯನ್ನು ಇಷ್ಟು , ಇಷ್ಟೇ ಎಂದು ಎಣಿಸಿ ಕಷ್ಟಪಡಬೇಡ. ಇಲ್ಲಿ ಎಣಿಸು ಎನ್ನುವದಕ್ಕೆ ಎರಡು ಅರ್ಥಗಳಿವೆ. ಎಣಿಸು=counting ಎನ್ನುವದು ಒಂದು ಅರ್ಥವಾದರೆ , ಭಾವಿಸು ಎನ್ನುವುದು ಎರಡನೆಯ ಅರ್ಥ. ನನಗೆ ಒಲೆದು ಎಂದರೆ ನನ್ನಲ್ಲಿ ಅನುರಕ್ತಳಾಗು ; ಒಲಿಸಿ ಎಂದರೆ ನನ್ನನ್ನು ಒಲಿಸಿಕೊಳ್ಳು ಅರ್ಥಾತ್ ನನ್ನ ಒಲವನ್ನು (ಕಷ್ಟಪಟ್ಟು) ಸಂಪಾದಿಸಿಕೊ ಹಾಗೂ ಸುಖದಿಂದಿರು!
ಕವಿಯು ಪ್ರೀತಿಯ ಈ ವ್ಯಾಪಾರದ ಎಲ್ಲಾ ಭಾರವನ್ನು ಹೆಂಡತಿಯ ಮೇಲೆ ಹಾಕುತ್ತಿದ್ದಾನೆ. ನೀನು ಒಡವೆಯನ್ನು ಕೇಳದೇ, ನನ್ನ ಪ್ರೀತಿಯನ್ನು ಪಡೆಯಲು ನೀನೇ ಪ್ರಯತ್ನ ಮಾಡು(!) ಎನ್ನುವುದು ಈ ಕವಿಯ ಸಂದೇಶ. ಇಂತಹ ಸಂದೇಶಕ್ಕೆ ಕವಿ ಕೊಡುವ ತಾತ್ವಿಕ ಆಧಾರ ಈ ರೀತಿಯಾಗಿದೆ:
ಎಷ್ಟೆಯಿರಲಿ ಅಷ್ಟೆ ಮಿಗಿಲು....
                           ತಮ್ಮ ಕಿರಣ ತಮಗೆ ಹಗಲು;
                            ಉಳಿದ ಬೆಳಕು ಕತ್ತಲು.
ಪಾಲಿಗೆ ಬಂದದ್ದು ಪಂಚಾಮೃತ. ನಮ್ಮ ಹಣೆಯಲ್ಲಿ ಎಷ್ಟೇ ಸ್ವಲ್ಪವಿದ್ದರೂ ಅದನ್ನೇ ಬಹಳ ಎಂದು ತಿಳಿಯಬೇಕು. ಯಾಕೆಂದರೆ, “ತಮ್ಮ ಕಿರಣ ತಮಗೆ ಹಗಲು ;ಉಳಿದ ಬೆಳಕು ಕತ್ತಲು. ನಮ್ಮ ಮನೆಯ ಕಿಡಕಿಯಿಂದ ಒಳಗೆ ತೂರಿದ ಸೂರ್ಯನ ಒಂದೇ ಕಿರಣವು ನಮ್ಮ ಕತ್ತಲೆ ಕೋಣೆಗೆ ಬೆಳಕು ನೀಡುವದೇ ಹೊರತು, ಇತರ ನಕ್ಷತ್ರಗಳ ಕಿರಣಗಳಿಂದ ನಮ್ಮ ಮನೆಗೆ ಹಗಲು ಸಿಗಲಾರದು. ಆ ಬೆಳಕು ನಮ್ಮ ಮಟ್ಟಿಗೆ ಕತ್ತಲೆಯೇ ಸೈ! ನಿನ್ನ ಜೀವನದಲ್ಲಿ ಪ್ರೀತಿಯ ಬೆಳಕನ್ನು ಕಾಣಬೇಕಾಗಿದ್ದರೆ ಹುಚ್ಚು ಹಂಬಲಗಳನ್ನು ಬಿಟ್ಟುಬಿಟ್ಟು, ನಿನ್ನ ಕವೀಶ್ವರ ಪತಿ ಕೊಡುವ ಪ್ರೀತಿಯನ್ನಷ್ಟೇ ನೆಚ್ಚಿಕೊ! ವರಕವಿಗಳು ತಮ್ಮ ಕಲ್ಪನಾಶಕ್ತಿಯ ಬಲದಿಂದ ಇನ್ನಿಷ್ಟು ಉದಾಹರಣೆಗಳನ್ನು ಸೃಷ್ಟಿಸುತ್ತಾರೆ:
ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು
                           ಉಳಿದ ಲೋಕ ಹಿತ್ತಲು.
ಬೇರೆಯವರ ಅನುಕರಣೆ, ಅನುಸರಣೆ ಬೇಡ ; ನಾವು ಎಲ್ಲಿ ನಿಲ್ಲುತ್ತೇವೆಯೊ ಅದೇ ನಮ್ಮ ಬೀಡು , ಅದೇ ನಮ್ಮ ನೆಲೆ. ನಾವು ಎಲ್ಲಿ ಆಡುತ್ತೇವೊ ಅದೇ ನಮ್ಮ ಮನೆಯ ಅಂಗಳು.
ಅಲ್ಲಾ, ಉಳಿದವರು ಎಷ್ಟು ಚೆನ್ನಾಗಿರೊ ಬೀಡಿನಲ್ಲಿ ಇದ್ದಾರಲ್ಲಾಎಂದು ಅವರ ಹೆಂಡತಿ ಏನಾದರೂ ಅನುಮಾನ ವ್ಯಕ್ತ ಪಡಿಸಿದರೆ, ವರಕವಿಗಳ ಉತ್ತರ ಅದಕ್ಕೂ ಸಿದ್ಧವಾಗಿದೆ : ಉಳಿದ ಲೋಕ ಹಿತ್ತಲು. (=ಅದೆಲ್ಲಾ ನಮ್ಮ ಹಿಂದೆ ಇರೋದು, ನಾವು ಅದನ್ನೆಲ್ಲ ನೋಡೋದು ಬೇಡ !)
ರೀತಿಯಾಗಿ ಹೆಂಡತಿಗೆ ತತ್ವಜ್ಞಾನದ ಪಾಠವನ್ನು ಹೇಳಿ ಮುಗಿಸಿದ ಕವಿ, ತನ್ನ ಮಾತುಗಳಿಂದ ತಾನೇ ಕಸಿವಿಸಿಗೊಳ್ಳುತ್ತಾನೆ. ಆತನಿಗೆ ಗೊತ್ತು: ತನ್ನ ಹೆಂಡತಿಯ ಒಂದೇ ಒಂದು ಸಣ್ಣ ಅಪೇಕ್ಷೆಯನ್ನು ತಾನು ಪೂರೈಸುತ್ತಿಲ್ಲ ಎಂದು. ತನ್ನ ಮೇಲೆ ತನಗೇ ಬರುತ್ತಿರುವ ಕೋಪವನ್ನು ಈಗ ಆತ ಅವಳ ಮೆಲೆ ತಿರುಗಿಸುತ್ತಾನೆ. ಹತಾಶನಾದ ಗಂಡ ಹೆಂಡತಿಯ ಮೇಲೆ ಹರಿಹಾಯುವದು ಒಂದು ಸಾಮಾನ್ಯ ಸಂಗತಿ. ಒಂದು ಮುತ್ತಿನ ಸರವನ್ನು ಪಡೆದು, ನೀನು ಏನು ಮಹಾ ಸಾಧಿಸಿಕೊಂಡಂತಾಯ್ತುಎಂದು ಆತ ಅವಳ ಮೇಲೆ ಹಾರಾಡುತ್ತಾನೆ :
ಮುತ್ತಿನೆಕ್ಕಸರವನಿಕ್ಕೆ
                                   ಮುದ್ದಿಗೆ ಕಳೆ ಕಟ್ಟಿತೆ
ತೊಯ್ದ ಎವೆಗೆ ಮುದ್ದನಿಡಲು
                                   ಮುದ್ದಿಗೆ ಅದು ತಟ್ಟಿತೆ?
ಕುದಿದು ಬಂದ ಕಂಬನಿಯೊಲು
                                   ಕಂಪು ಬರದೆ ಬಿಟ್ಟಿತೆ?
ಮುತ್ತಿನ ಸರ ತೊಡಿಸುವದರಿಂದ ಮಾತ್ರ ಪ್ರೀತಿಗೆ ಕಳೆ ಬರುವದೆ? ನಿನ್ನ ಕಣ್ಣೀರಿನಿಂದ ತೊಯ್ದ ರೆಪ್ಪೆಗಳಿಗೆ ನಾನು ಮುತ್ತು ಕೊಟ್ಟರೆ, ಅದು ನಿನ್ನ ಪ್ರೀತಿಗೆ ತಟ್ಟಲಾರದೆ? ನಿನ್ನ ಕುದಿಯುತ್ತಿರುವ ಮನಸ್ಸು ಹೊರಚೆಲ್ಲಿದ ಕಂಬನಿಗಳಲ್ಲಿ ಸಹ ಒಲವಿನ ಕಂಪು ಇಲ್ಲವೆ? ಗಂಡ ಹೆಂಡಿರಲ್ಲಿ ಪರಸ್ಪರ ಒಲವಿನ ಭಾವನೆಗಳೇ ಮುಖ್ಯವಲ್ಲವೆ? ಇದು ಕವಿಯು ದಾಂಪತ್ಯದ ನೆಲೆಗಟ್ಟಿನಲ್ಲಿ ಮಾಡುತ್ತಿರುವ ತರ್ಕವಾದ. ಆದರೆ ಹೆಂಡತಿಯು ಮುಖವನ್ನು ಬೇರೆಡೆಗೆ ಹೊರಳಿಸಿ ಬಿಟ್ಟಿದ್ದಾಳೆ. ಮಾನವ ಕುಲದ ಮೂರ್ಖತನಕ್ಕೆ ಬೇಸತ್ತು ಹೋದ ಕವಿ , ವ್ಯಥೆಪಟ್ಟು ಉದ್ಗರಿಸುತ್ತಾನೆ:
ಮುತ್ತು ರತುನ ಹೊನ್ನು ಎಲ್ಲ
                                    ಕಲ್ಲು ಮಣ್ಣ ವೈಭವಾ
                                    ಎಲವೊ ಹುಚ್ಚ ಮಾನವಾ
ಒಂದು ಷೋಕು-----ಬರಿಯ ಝೋಕು
                                    ಬದುಕಿನೊಂದು ಜಂಬವು
                                    ಒಲವೆ ಮೂಲ ಬಿಂಬವು.
precious stonesಗಳೆಲ್ಲ earthly glory ಮಾತ್ರ. ಅವು ಸತ್ಯವಲ್ಲ.
(ಟಿಪ್ಪಣಿ: ರತ್ನಗಳು ಭೂಗರ್ಭದಲ್ಲಿ ಸಿಗುವುದರಿಂದ ಅವುಗಳಿಗೆ ಕಲ್ಲು ಮಣ್ಣ ವೈಭವಾ ಎಂದು ಕರೆಯುವುದು ಒಂದು ವ್ಯಂಗ್ಯೋಕ್ತಿ).
ಇದೆಲ್ಲ ಬರಿಯ ಶೋಕಿ, ಬರಿಯ ಡೌಲು, ಬದುಕಿನ ಒಣ ಜಂಬ ಅಷ್ಟೆ! ಪ್ರೀತಿಯೇ ಸತ್ಯ, ಬೇರೆ ಎಲ್ಲ ಮಿಥ್ಯ!
ಕವಿ ಮುಂದುವರಿದು ಸಂಪತ್ತಿನ ಸಂಭ್ರಮವನ್ನಷ್ಟೇ ಅಲ್ಲ, ಅಧಿಕಾರದ ವೈಭವವನ್ನೂ ಸಹ ತುಚ್ಛೀಕರಿಸುತ್ತಾನೆ. ಕೇವಲ ಭೂಮಿಯ ಒಡೆತನವಲ್ಲ, ಸಪ್ತಸ್ವರ್ಗ ಹಾಗೂ ಸಪ್ತನರಕಗಳನ್ನು ಒಳಗೊಂಡ ಇಂದ್ರಾಧಿಕಾರದ ವೈಭೋಗಕ್ಕೂ ಸಹ ಏನು ಬೆಲೆ ಇದೆ?

ಸಪ್ತ ನಾಕ   ಸಪ್ತ ನರಕ
                                   ಅದರ ಬೆಳಕು ಕತ್ತಲು
ಮನ್ವಂತರ ತನ್ವಂತರ
                                   ಅದರ ಕೋಟೆ ಕತ್ತಲು
ಸಿಂಹಾಸನವನೇರಿ ಕುಳಿತೆ;
                                   ತೊಡೆಗೆ ತೊಡೆಯ ಹಚ್ಚಿದೆ
ಸರಿಯೆ, ಒಲಿದ ತೋಳಿಗಿಂತ
                                   ಅದರೊಳೇನು ಹೆಚ್ಚಿದೆ ?

ಕವಿ ತಮ್ಮ ಹೆಂಡತಿಗೆ ಆಹ್ವಾನ ನೀಡುತ್ತಿದ್ದಾರೆ. ಇಂತಹ ಲೋಕಾಧಿಪತಿಯ ಹೆಂಡತಿಯಾಗಿ ನೀನೂ ಸಹ ಸಿಂಹಾಸನವನ್ನೇರಬಹುದು. ಸಾಮ್ರಾಟನ ತೊಡೆಗೆ ತೊಡೆ ಹಚ್ಚಿ ಕುಳಿತುಕೊಳ್ಳಬಹುದು. ಅವನ ಅಧಿಕಾರ ಮತ್ತು ವೈಭೋಗದಲ್ಲಿ ನೀನೂ ಭಾಗಿಯಾಗಬಹುದು. ಇದೆಲ್ಲ ಸರಿ; ಒಲಿದಂತಹ ನಲ್ಲನ ತೋಳುಗಳ ಅಪ್ಪುಗೆಗಿಂತ ಇದೆಲ್ಲ ಹೆಚ್ಚಿನದೆ?

ಕವಿ ತನ್ನೆಲ್ಲ ತರ್ಕವಾದಗಳನ್ನು ತನ್ನ ಅರ್ಧಾಂಗಿಗೆ ಹೇಳಿದ್ದಾನೆ. ಮುತ್ತಿನ ಹಾರಕ್ಕಿಂತ ಪತಿಯ ಪ್ರೇಮವೇ ಹೆಚ್ಚಿನದು ಎಂದು ಅವಳಿಗೆ ತಿಳಿಸಿದ್ದಾನೆ. ತನ್ನ ಹತಾಶೆ, ತನ್ನ ಅಸಹಾಯಕತೆಯನ್ನೆಲ್ಲ ಹೊರಕಕ್ಕಿ, ಆತನೀಗ ನಿರುಮ್ಮಳನಾಗಿದ್ದಾನೆ. ಇಂತಹ ಸಮಾಧಾನದ ಸ್ಥಿತಿಯಲ್ಲಿ ಆತ ಅಂತರ್ಮುಖಿಯಾಗಿ ಏನನ್ನೊ ಧ್ಯಾನಿಸುತ್ತಾನೆ :
ಎದೆಯ ಕಣ್ಣ ಮುಚ್ಚಿಕೊಂಡು
                                   ಏಕೊ ಎನೊ ಮೆಚ್ಚಿದೆ
ಮರದ ಅಡಿಗೆ ಗುಡಿಸಲಿರಲಿ
                                   ಅಲ್ಲೆ ಒಲವು ಮೆರೆಯದೇ
                                   ನಲಿವು ಮೇರೆವರಿಯದೇ?
ನಿಜ, ಒಲವಿನ ವೈಭವಕ್ಕೆ ಲೌಕಿಕ ಸಂಪತ್ತು ಬೇಕಾಗಿಲ್ಲ. ಪುಟ್ಟ ಗುಡಿಸಲಿನಲ್ಲಿಯೂ ಸಹ ಒಲವು ಹಾಗೂ ನಲಿವು ಮಹಾಪೂರದಂತೆ ಹರಿಯಬಲ್ಲವು ! ಈ ರೀತಿಯಾಗಿ ವರಕವಿಗಳು ತಮ್ಮ ಅರ್ಧಾಂಗಿಯನ್ನು ಸಮಾಧಾನಿಸುತ್ತಾರೆ. ಅವರೂ ಸಹ ’ಕವನದ ಹಾರ’ದಿಂದಲೇ ತೃಪ್ತಿ ಪಟ್ಟಿರವಹುದು!

ಟಿಪ್ಪಣಿ: ಬೇಂದ್ರೆಯವರು ೧೯೪೩ರಲ್ಲಿ ಕಾಳಿದಾಸನ ಮೇಘದೂತ ವನ್ನು ಕನ್ನಡಕ್ಕೆ ಅನುವಾದಿಸಿದರು. ಆ ಅನುವಾದದ ಗೌರವಧನದಿಂದ ತಮ್ಮ ಹೆಂಡತಿಗೆ ಮುತ್ತಿನ ಏಕಾಕ್ಷಿ ಸರವನ್ನು ಕೊಡಿಸಿ ಅವಳ ಹಂಬಲವನ್ನು ಪೂರೈಸಿದರು.
ಈ ಕವನದಲ್ಲಿ ಕವಿಯ ಲಂಬಿತ ಉದಾಸ ಭಾವಕ್ಕೆ ತಕ್ಕಂತೆ ಹಾಗೂ ಅವನ ಲಂಬಿತ ವಾದ ಗಳಿಗೆ ಹೊಂದುವಂತೆ, ಕವನವು ಲಂಬಿತ ಛಂದಸ್ಸಿನಲ್ಲಿ ಇರುವದನ್ನು ಗಮನಿಸಬಹುದು.

37 comments:

Godavari said...

ಸುನಾಥ್ ಅವರೇ ತುಂಬಾ ಸುಂದರವಾಗಿ ಕವಿತೆಯನ್ನೂ ಮತ್ತು ಆ ಕವಿತೆಯ ಹಿನ್ನಲೆಯನ್ನೂ ವಿವರಿಸಿದ್ದೀರಿ..
ಬೇಂದ್ರೆ ಅವರು ಅಷ್ಟು ಸಂಕಷ್ಟದಲ್ಲಿದ್ದರೂ ಅವರ ಕಾವ್ಯಪ್ರಯತ್ನಕ್ಕೆ ಯಾವುದೂ ಅಡ್ಡಿಯಾಗಲಿಲ್ಲ..
ಒಮ್ಮೆ ಬೇಂದ್ರೆ, ಬೆಂದ್ರೆ ಬೇಂದ್ರೆ ಆಗ್ತಾರೆ ಅಂತ ಹೇಳಿದ್ದರಂತೆ.. ಮುಂದೆ ಅವರೇ ಯಾವುದೋ ಸನ್ನಿವೇಶದಲ್ಲಿ ಬೆಂದೊರೆಲ್ಲ ಬೇಂದ್ರೆ ಆಗಲ್ಲ ಅಂತಲೂ ಹೇಳಿದ್ದರಂತೆ !!

PARAANJAPE K.N. said...

ಸುನಾಥ್ ಸರ್,
ಬಡತನ, ಆರ್ಥಿಕ ಸ೦ಕಟ, ಹೀಗೆ ಅನೇಕ ನೋವುಗಳ ಕುಲುಮೆಯಲ್ಲಿ ಬೆ೦ದು ಅವರು ಬೇ೦ದ್ರೆಯಾದರೆನಿಸುತ್ತದೆ. ಅವರ ಕವನಗಳನ್ನು, ಕವನದ ಸಾರವನ್ನು, ಕವನ ಹುಟ್ಟಿದ ಕ್ಷಣದ ಹಿನ್ನೆಲೆಯನ್ನು, ಬಹಳ ಚೆನ್ನಾಗಿ ವಿವರಿಸಿ ಕವಿಯ ದರ್ಶನ ಮಾಡಿಸುತ್ತಿದ್ದೀರಿ. ತು೦ಬಾ ಚೆನ್ನಾಗಿದೆ.

ಧರಿತ್ರಿ said...

"ತಮ್ಮ ಕಿರಣ ತಮಗೆ ಹಗಲು ;
ಉಳಿದ ಬೆಳಕು ಕತ್ತಲು..." ಈ ಪುಟ್ಟ ಸಾಲು ಬಗ್ಗೆ ತಿಳಿದುಕೊಳ್ಳಲು ತುಂಬಾ ಹಾತೊರೆದಿದ್ದೆ. ಅದಕ್ಕೆ ಕಳೆದ ಬಾರಿಯ ನಿಮ್ಮ ಬರಹದಲ್ಲಿ ಕೇಳಿಕೊಂಡಿದ್ದೆ. ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಅಂಕಲ್.

ನಂಗೆ ಬೇಂದ್ರೆ ತುಂಬಾ ಇಷ್ಟ. ಅವರ ಕವನಗಳ ಬಗ್ಗೆ ತಿಳಿದುಕೊಳ್ಳಕ್ಕೆ 'ಗೌರೀಶ್ ಕಾಯ್ಕಿಣಿ ಅವರ 'ಸಾಹಿತ್ಯ ಸಮೀಕ್ಷೆ' ತಕೊಂಡಿದ್ದೆ. ಅದ್ರಲ್ಲಿ ಈ ವಿಷ್ಯಗಳೆಲ್ಲಾ ಇರಲಿಲ್ಲ. ನಿಮ್ಮ ಬರಹದ ಮೂಲಕ ತುಂಬಾನೇ ತಿಳ್ಕೊಂಡಂಗೆ ಆಯಿತು. ಖುಷಿಗೊಂಡೆ ಅಂಕಲ್.

"ಒಲವೆಂಬ ಹೊತ್ತಗೆಯ ಓದಬಯಸುವ ನೀನು
ಬೆಲೆಯೆಷ್ಟು ಎಂದು ಕೆಳುವಿಯಾ ಹುಚ್ಚ
ಹಗಲಿರುಳು ದುಡಿದರೂ ಹಲಜನುಮ ಕಳೆದರೂ
ನೀ ತೆತ್ತಲಾರೆ ಬರೇ ಅಂಚೆವೆಚ್ಚ"
ಅಂದಿದ್ದು ಕೂಡ ಬೇಂದ್ರೆ ಅಲ್ವಾ?

ಬೇಂದ್ರೆ ಅನುಭವದ ಕುರಿತು, ಬದುಕಿನ ಕುರಿತು ನನಗೆ ತಿಳಿದುಕೊಳ್ಳಲು ನನಗೆ ಕೆಲವು ಪುಸ್ತಕದ ಹೆಸರು ಹೇಳಿ ಅಂಕಲ್. ನಂಗದು ಬೇಕಿದೆ...
ಧನ್ಯವಾದಗಳೊಂದಿಗೆ
ಧರಿತ್ರಿ

ಮನಸು said...

ಬೇಂದ್ರೆಯವರ ಕವನ ಬಹಳ ಅರ್ಥವನ್ನು ಕೊಡುತ್ತೆ ನಿಮ್ಮ ವಿವರಣೆ ನಮಗೆ ಬಹಳಷ್ಟು ತಿಳಿಸಿದೆ... ಹಣದ ಮುಗ್ಗಟ್ಟು ಪ್ರೀತಿ,ಒಲುಮೆಗೇನು ಕೊರತೆಮಾಡುವುದಿಲ್ಲ.........ಬಡತನ ನೆಮ್ಮದಿಯ ಸೋಪಾನ......ಸಿರಿತನ ನೆಮ್ಮದಿ ಕೆಡೆಸಲು ಆಹ್ವಾನ.......
ನೀವು ಇಷ್ಟು ಚೆನ್ನಾಗಿ ತಿಳಿಸಿದ್ದೀರಿ ನಿಜಕ್ಕೊ ನಮ್ಮ ಮನಗೆದ್ದಿದೆ.......ಬರಹ........ಮತ್ತಷ್ಟು ತಿಳಿಸಿಕೊಡೆ ನಮಗೆ ಇವೆಲ್ಲ ಏನು ಅಷ್ಟು ತಿಳಿದಿಲ್ಲ.
ವಂದನೆಗಳು...

ಶಿವಪ್ರಕಾಶ್ said...

ಸುನಾಥ್ ಅವರೇ,
ತುಂಬಾ ಚನ್ನಾಗಿ ವಿವರಿಸಿದ್ದೀರಿ...
ಇದು ಎಲ್ಲ ಮದ್ಯಮ ವರ್ಗದ ಜನರು ಪಡುವ ಕಷ್ಟ..
ಹೆಂಡತಿಯ ಒಡವೆಯ ಆಸೆಯನ್ನು ತೀರಿಸಲಾಗದೆ, ಅವಳನ್ನು ಸಮಾಧಾನಿಸಲೂ ಆಗದೆ, ವ್ಯಥೆ ಪಡುತ್ತಿರುತ್ತಾರೆ.
ಗಂಡನ ಸಮಾಧಾನದ ಮಾತಿಗೆ, ಹೆಂಡತಿ ಸುಮ್ಮನಿದ್ದರು, ಇಬ್ಬರಿಗೂ ಎಲ್ಲೋ ಒಂದು ಕಡೆ ಮನ ಕಾಡುತ್ತಿರುತ್ತದೆ..
ಒಳ್ಳೆಯ ಲೇಖನಕ್ಕೆ ಧನ್ಯವಾದಗಳು...

ಶೆಟ್ಟರು said...

ಕಾಕಾ,

ಭಾರಿ ಛಂದ ವಿವರಣೆ ಕೊಟ್ಟಿರಿ,

"ಬೆಂದ್ರೆ ಅನ್ನೋವಾ ಬೆಂದ ಆದಾವಾ" ಅನ್ನುದನ್ನ ಬರಿ ಕೇಳಿದ್ದೆ, ನಿಮ್ಮ ಲೇಖನದಿಂದ ಅವರ ಬದುಕಿನ ಆ ದಿನಗಳ ಪರಿಚಯವಾಯ್ತು.

ಬೆಂದ್ರೆಯವರನ್ನು ನಮಗೆ ಇನ್ನಷ್ಟು ಪರಿಚಯಿಸಿ ಎಂದು ಕೇಳುತ್ತ, ಧನ್ಯವಾದಗಳು.

-ಶೆಟ್ಟರು

sunaath said...

ಗೋದಾವರಿ,
ಬೆಂಕಿಯಲ್ಲಿ ಬಿದ್ದಾಗಲೇ ಚಿನ್ನ ಪರಿಶುದ್ಧವಾಗುವದು!

sunaath said...

ಧರಿತ್ರಿ,
ಬೇಂದ್ರೆಯವರ ಜೀವನ ಚರಿತ್ರೆ ಇಂತಿವೆ:
(೧) ದ. ರಾ. ಬೇಂದ್ರೆ (ಎನ್ಕೆ ಕುಲಕರ್ಣಿ ; ರೂ. ೬೦/-)
(೨) ಬೇಂದ್ರೆ (ಬಿ.ಎಚ್. ಶ್ರೀಧರ, ಬನ್ನಂಜೆ ಗೋವಿಂದಾಚಾರ್ಯ ; ರೂ. ೨೫/-)
(೩) ವರಕವಿ ದ.ರಾ.ಬೇಂದ್ರೆ (ಎಲ್ಲೆಸ್ಕೆ; ರೂ.೨೦/-)
(೪) ಬೇಂದ್ರೆ-ಜೀವನ ಪರಿಚಯ (ಡಾ| ವಾಮನ ಬೇಂದ್ರೆ ; ರೂ.೧೦೦/-)

ಈ ಎಲ್ಲ ಕೃತಿಗಳು ಸಮಾಜ ಪುಸ್ತಕಾಲಯ, ಶಿವಾಜಿ ಬೀದಿ, ಧಾರವಾಡ ಇಲ್ಲಿ ಲಭ್ಯವಿವೆ.
ಬೇಂದ್ರೆಯವರ ಸಾಹಿತ್ಯದ ಬಗೆಗೆ ಅನೇಕ ಕೃತಿಗಳು ರಚನೆಯಾಗಿವೆ.
ಕೀರ್ತಿನಾಥ ಕುರ್ತಕೋಟಿಯವರು ಬೇಂದ್ರೆ ಕಾವ್ಯದ ಅತ್ಯುತ್ತಮ ಅರ್ಥಗ್ರಾಹಿಗಳು.
ಅವರು ಬರೆದ ಪುಸ್ತಕಗಳು ಹೀಗಿವೆ.
(೧) ಭೃಂಗದ ಬೆನ್ನೇರಿ (ಮನೋಹರ ಗ್ರಂಥಮಾಲಾ, ಧಾರವಾಡ)
(೨) ಬಾರೊ ಸಾಧನಕೇರಿಗೆ (ಮನೋಹರ ಗ್ರಂಥಮಾಲಾ, ಧಾರವಾಡ)
ಜಿ.ಎಸ್. ಆಮೂರ ಅವರು ಬರೆದ ಕೃತಿ:
ಭುವನದ ಭಾಗ್ಯ (ಸ್ನೇಹ ಪ್ರಕಾಶನ ಬೆಂಗಳೂರು)
ಜಿ. ಎಸ್. ಆಮೂರ ಸಂಪಾದಿತ ಕೃತಿ:
ಬೇಂದ್ರೆ--ಕಾವ್ಯ (ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು)

ಬಹುಶ: ಈ ಎಲ್ಲ ಕೃತಿಗಳು ನಿಮಗೆ ಸಮಾಜ ಪುಸ್ತಕಾಲಯ, ಶಿವಾಜಿ ಬೀದಿ, ಧಾರವಾಡ ಇಲ್ಲಿ ದೊರಕಬಹುದು.

’ಒಲವೆಂಬ ಹೊತ್ತಿಗೆಯನೋದಬಯಸುತ..." ಈ ಕವನವು
ಬೇಂದ್ರೆಯವರದೇ. ಅವರ "ಉಯ್ಯಾಲೆ" ಸಂಕಲನದಲ್ಲಿದೆ.

ಬೇಂದ್ರೆ-ಯಾತ್ರೆ ನಿಮಗೆ light ಮತ್ತು delight ಕೊಡಲಿ ಎಂದು ಹಾರೈಸುತ್ತೇನೆ.

sunaath said...

ಪರಾಂಜಪೆ,
ಮಕ್ಕಳ ಸಾವುನೋವುಗಳೂ ಸಹ ಬೇಂದ್ರೆಯವರನ್ನು ಹಣ್ಣು ಮಾಡಿದವು.ಬೇಂದ್ರೆಯವರಿಗೆ ೯ ಮಕ್ಕಳು ಹುಟ್ಟಿದರೂ ಸಹ, ೬ ಮಕ್ಕಳು ಕೆಲವೇ ಸಮಯದಲ್ಲಿ ನಿಧನಹೊಂದಿದವು.

sunaath said...

ನಗಿಸು,
ಬೇಂದ್ರೆಯವರು ತಮ್ಮ ಬಾಳಿನ ಬಗೆಗೆ, ಕಾವ್ಯದ ಬಗೆಗೆ ತಾವೇ ಹೀಗೆ ಹಾಡಿದ್ದಾರೆ:

"ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ;
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ."

sunaath said...

ಶಿವಪ್ರಕಾಶ,
ತಾವು ಹೇಳುವದು ಸರಿ. ಇದು ಎಲ್ಲ ಮಧ್ಯಮವರ್ಗದವರ ಕತೆ.
ಬೇಂದ್ರೆಯವರಿಂದ ಕಾವ್ಯವಾಗಿ ಹೊರಹೊಮ್ಮಿದೆ,ಅಷ್ಟೆ.

sunaath said...

ಶೆಟ್ಟರ,
ಬೇಂದ್ರೆಯವರ ಕಾವ್ಯಸುಧೆಯನ್ನು ಎಷ್ಟು ಸವಿದರೂ ಸಾಲದು,
ಹೌದಲ್ರೀ?

ಅಂತರ್ವಾಣಿ said...

uncle,
chennagi explain maDiddeera..

bendre ajjana mattondu adbhuta kavana.

"muttina haara Eke maDadi
maatina haara koDuve" antha nillisirthaare andukonde but konegu muttina haara koDisiddaare..


bendre avarannu vara kavi annuvudu Eke?
dayaviTTu tiLisi

Unknown said...

ಬೇಂದ್ರೆಯವರ ಬಗ್ಗೆ ಎಷ್ಟು ಓದಿದರೂ ಸಾಲದು. ಅವರ ಬಗ್ಗೆ ನಿಮ್ಮ ಬರಹಗಳನ್ನು ಓದುತ್ತಿರುವಾಗಲೇ, ನನ್ನ ಹಿಂಬದಿಯ ಪುಸ್ತಕದ ಶೆಲ್ಪಿನಿಂದ ಬೇಂದ್ರೆಯವರ ಔದುಂಬರಗಾಥೆಯ ಎರಡನೇ ಸಂಪುಟವನ್ನು ಮತ್ತೆ ಮತ್ತೆ ಕಣ್ಣಾಡಿಸುವ ದೃಷ್ಟಿಯಿಂದ ತೆಗೆದಿಟ್ಟುಕೊಂಡಿದ್ದೇನೆ. ಬೇಂದ್ರೆಯವರ ಶಬ್ದಗಾರುಡಿಗತನ, ಮಾಂತ್ರಿಕತನ ನನ್ನನ್ನು ಯಾವಾಗಲೂ ಸೆರೆಹಿಡಿಯುತ್ತದೆ. 'ವಿಕ್ರಾಮಾರ್ಜುನ ವಿಜಯ ಓದಿ ಕಾಯಲು ಕಲಿತರು, ಆದಿಪುರಾಣವ ಓದಿ ಸಾಯಲು ಕಲಿತರು ಹಿಂದಿನವರು. ನೀವೇನು ಕಲಿತಿರಯ್ಯಾ ಇಂದಿನವರು?' ಎಂಬ ಸಾಲುಗಳು, ಇಂದಿನವರು ಕಲಿಯಬೇಕ್ಕಾದ್ದು ಬಹಳವಿದೆ ಎಂದು ಸೂಚಿಸುತ್ತಿರುವಂತಿದೆ ಅಲ್ಲವೆ? ಬೇಂದ್ರೆಯವರನ್ನ ಮರು ಓದಿಗೆ ಅವಕಾಶ ಕಲ್ಪಿಸಿದ ನಿಮಗೆ ಧನ್ಯವಾದಗಳು

Keshav.Kulkarni said...

ಸುನಾಥ,

ಮತ್ತೊಂದು ಬೇಂದ್ರೆ ಕವನ, ಮತ್ತೊಂದು ರಸಾನುಭವ! ಧನ್ಯೋಸ್ಮಿ!!

ಬೇಂದ್ರೆಯವರ ಜೀವನದ ಯಾವ ಘಟ್ಟದಲ್ಲಿ ಹೇಗೆ ಕವಿತೆ ನುಸುಳಿತು ಎನ್ನುವುದನ್ನು ತುಂಬ ಚೆನ್ನಾಗಿ ಬರೆದಿದ್ದೀರಿ. ಕವಿ ಕವಿತೆಯನ್ನು ಯಾವ ಸಂದರ್ಭದಲ್ಲೇ ಬರೆದಿರಲಿ, ಕೊನೆಯಲ್ಲಿ ಕವಿತೆ ಮಾತ್ರ ಪೂರ್ಣ ಸ್ವತಂತ್ರವೆನ್ನುವುದನ್ನು ಈ ಕವಿತೆ ತೋರಿಸುತ್ತದೆ, ಅಲ್ಲವೇ?

ಈ ಕವಿತೆಯ ಬಗ್ಗೆ ಇನ್ನೆರೆಡು ಮಾತು ಸೇರಿಸುತ್ತೇನೆ:

೧:
ಕವಿತೆ ಮೊದಲಿನಿಂದ ಕೊನೆಯವರೆಗೆ ನೋಡಲು ಒಂದೇ ತರಹದ ಛಂದಸ್ಸಿನಲ್ಲಿ ಬರೆಯಲ್ಪಟ್ಟಂತೆ ಕಂಡರೂ ನುಡಿಯಿಂದ ನುಡಿಗೆ ಶಬ್ದಗಳ ಬಳಕೆಯಲ್ಲಿ ಅದ್ಭುತ ಬದಲಾವಣೆಯಿದೆ. ಮೊದಲ ನುಡಿಯಲ್ಲಿ
"ತಮ್ಮ ಕಿರಣ ತಮಗೆ ಹಗಲು ;
ಉಳಿದ ಬೆಳಕು ಕತ್ತಲು.
ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು
ಉಳಿದ ಲೋಕ ಹಿತ್ತಲು."
ಎಂಬ ಹೊಸ ರೂಪಕಗಳನ್ನು ಶಬ್ದಗಾರುಡಿ ಆರಾಮವಾಗಿ ತಂದು ನಿಲ್ಲಿಸುತ್ತಾರೆ.

ಮುಂದಿನ ನುಡಿ ಬರೀ ಉತ್ತರಗಳನ್ನೇ ಹೇಳುವ ಪ್ರಶ್ನೆಗಳ ನುಡಿ.

ಮೂರನೇ ನುಡಿಯ ಶಬ್ದ ಮತ್ತು ಭಾವಗಳಲ್ಲಿ ಬರೀ ಲೌಕಿಕತೆಯೇ ಇದೆ. ಶೋಕು, ಝೋಕು ಎಂಬ ಹೊಸಕನ್ನಡ ಪದಗಳು ಬರುತ್ತವೆ.

ನಾಕನೇ ನುಡಿಯಲ್ಲಿ ಇದ್ದಕ್ಕಿದ್ದಂತೆ ಶಬ್ದಗಳೆಲ್ಲ ಪುರಾಣದ್ದಾಗುತ್ತವೆ. ಆದರೆ ತಟ್ಟನೇ "ತೊಡೆಗೆ ತೊಡೆಯ ಹಚ್ಚಿದೆ" ಎಂದು ಶುದ್ಧ ಕನ್ನಡ ಬಂದು ಆ ನುಡಿಯಲ್ಲಿ ಶಾಕ್ ಕೊಡುತ್ತದೆ.

ಐದನೇ ನುಡಿ ಧ್ಯಾನದ ಸ್ಥಿತಿಯನ್ನು ತಲುಪುತ್ತದೆ.

೨. "ತೊಡೆಗೆ ತೊಡೆಯ ಹಚ್ಚಿದೆ, ಸರಿಯೆ," ನನಗೆ ಎರಡು ಅರ್ಥ ಕೊಟ್ಟಿತು. ಒಂದು, ನೀವು ಬರೆದಂತೆ "ಸಾಮ್ರಾಟನ ತೊಡೆಗೆ ತೊಡೆ ಹಚ್ಚಿ ಕುಳಿತುಕೊಳ್ಳಬಹುದು.", ಇನ್ನೊಂದು ನನಗನಿಸಿದ್ದು, "ಕಾಮದ ಮದ (ತೊಡೆಗೆ ತೊಡೆ)ಕ್ಕಿಂತ ಪ್ರೀತಿ (ಒಲಿದ ತೋಳು) ಕವಿಗೆ ಮುಖ್ಯವಾಗುತ್ತದೆ.

ಇನ್ನೂ ಕವಿತೆಗಳ ರಸಾನುಭವ ಬರುತ್ತಲಿರಲಿ ನಿರಂತರ.

- ಕೇಶವ

ಧರಿತ್ರಿ said...

Sunath Uncle..............
Thumba Thanks uncle...
mathe baruve..........
-Dharithri

sunaath said...

ಜಯಶಂಕರ,
’ವರಕವಿ’ ಎನ್ನುವ conceptಅನ್ನು ಕನ್ನಡದಲ್ಲಿ ಮೊಟ್ಟಮೊದಲಿಗೆ ಕನಕದಾಸರು ತಂದರೆಂದು ತೋರುತ್ತದೆ.
ಕನಕದಾಸರ ಖ್ಯಾತ ಪದವೊಂದನ್ನು ನೀವು ಕೇಳಿರಬಹುದು:
"ವರಕವಿಗಳ ಮುಂದೆ ನರಕವಿಗಳು ವಿದ್ಯೆ ತೋರಬಾರದು.
ಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು!"

ಬೇಂದ್ರೆಯವರನ್ನು ವರಕವಿ ಎಂದು ಮೊಟ್ಟಮೊದಲಿಗೆ ಕರೆದವರಾರು? ಬಹುಶಃ ಶಂಕರ ಮೊಕಾಶಿ ಪುಣೇಕರ ಅವರು ಬೇಂದ್ರೆಯವರಿಗೆ ಈ ಅಭಿದಾನವನ್ನು ಕೊಟ್ಟಿರಬಹುದು. (ಅಥವಾ ಇದು ಗೋಕಾಕರ ಗೌರವದ ಸಂಬೋಧನೆಯೂ ಆಗಿರಬಹುದು.)

ಶಂಕರ ಮೊಕಾಸಿ ಪುಣೇಕರ ಅವರು ತಮ್ಮ ಬೇಂದ್ರೆ ವಚನ ವಾಙ್ಮಯ ಎನ್ನುವ ಕೃತಿಯಲ್ಲಿ ಬೇಂದ್ರೆಯವರು ಏಕೆ ವರಕವಿಗಳು ಎನ್ನುವದನ್ನು ವಿವರಿಸಿದ್ದಾರೆ.

ವರಕವಿ ಎಂದರೆ ನೈಜ ಕವಿ. ಕವಿತೆ ಆತನಿಗೆ ಸಹಜ ಸಿದ್ಧಿ.
ಇಂಗ್ಲಿಶ್ ಕವಿಯೊಬ್ಬರು ಕವಿತೆಯನ್ನು "10% Inspiration ಹಾಗು 90% Perspiration"
ಎಂದು ಬಣ್ಣಿಸಿದ್ದಾರೆ. ಆದರೆ ವರಕವಿಗಳಿಗೆ ಅದು "100%
Inspiration and 0% Perspiration"!

ಮತ್ತೊಬ್ಬ ಇಂಗ್ಲಿಶ್ ವಿಮರ್ಶಕನು,"ಒಂದು ಪದವನ್ನು ಅನುಸಂಧಾನ ಮಾಡಿದ ತಕ್ಷಣ ನೈಜ ಕವಿಗೆ ಅದರ ಎಲ್ಲಾ ಅರ್ಥಗಳೂ ಹೊಳೆದು ಬಿಡುವವು" ಎಂದು ಹೇಳಿದ್ದಾನೆ.

ಬೇಂದ್ರೆಯವರಿಗೆ ಪದ,ಅದರ ನಾದ, ಪದಾರ್ಥ, ಛಂದಸ್ಸು,ಪ್ರಾಸ ಇವೆಲ್ಲ ಸಹಜಸಿದ್ಧಿಗಳಾಗಿದ್ದವು. ಆದುದರಿಂದ ಅವರು ವರಕವಿಗಳು!

sunaath said...

ಡಾ|ಸತ್ಯನಾರಾಯಣರೆ,
ಬೇಂದ್ರೆಯವರನ್ನು ಓದಿದಷ್ಟೂ ಹೊಸ ಅರ್ಥ, ಹೊಸ ಖುಶಿ ಚಿಮ್ಮುತ್ತಲೇ ಇರುತ್ತವೆ!
ಬೇಂದ್ರೆಯವರನ್ನು ಓದುವದರಿಂದ ನಾವು ಬಾಳುವದನ್ನು ಕಲಿಯುತ್ತೇವೆ ಎಂದು ಹೇಳಬಹುದೆ?

sunaath said...

ಕೇಶವ,
ನಿಮ್ಮ ಅಭಿಪ್ರಾಯವನ್ನು ಮತ್ತೆ ಮತ್ತೆ ಓದಿದೆ. ಬೆಂದ್ರೆಯವರ ಕವನದ ಮೇಲೆ ಹೊಸ ಬೆಳಕನ್ನು ತೋರಿಸಿದ್ದೀರಿ.
"ಬೇಂದ್ರೆ ವಿಮರ್ಶಕರನ್ನು ಬೆಳೆಸುವ ಕವಿ" ಎಂದು ಈ ಕಾರಣಕ್ಕಾಗಿಯೇ ಹೇಳುತ್ತಾರಲ್ಲವೆ?

ನಿಮ್ಮ ಅಭಿಪ್ರಾಯವನ್ನು ಮೂಲಲೇಖನದಲ್ಲಿ ಸೇರಿಸುವದು ಯೋಗ್ಯವೆನ್ನುವ ಅಭಿಪ್ರಾಯ ನನ್ನಲ್ಲಿ ಮೂಡಿದೆ. ಆದುದರಿಂದ ನಿಮ್ಮ ಅನುಮತಿಯನ್ನು ಪೂರ್ವಗ್ರಹಿಸಿಕೊಂಡು, ಮೂಲಲೇಖನದಲ್ಲಿ ಅಡಕ ಮಾಡಿದ್ದೇನೆ. ದಯವಿಟ್ಟು post-facto sanction ನೀಡಿರಿ!

VENU VINOD said...

ಬೇಂದ್ರೆಯವರ ಕವನಗಳು ತಿಳಿದುಕೊಂಡಷ್ಟೂ ಹಿಗ್ಗುತ್ತಲೇ ಹೋಗುತ್ತವೆ! ಜೊತೆಗೆ ನಮ್ಮ ಹಿಗ್ಗೂ ಹೆಚ್ಚುತ್ತಲೇ ಹೋಗುತ್ತದೆ! well said sir...

Keshav.Kulkarni said...

ಸುನಾಥ,
ನಿಮ್ಮ ಚಂದದ ಬರವಣಿಗೆ ಮತ್ತೊಮ್ಮೆ ಕವನವನ್ನು ಓದಲು ಪ್ರೇರೇಪಿಸಿತು. ಬೇಂದ್ರೆ ಕವನಗಳನ್ನು ನೀವು ನೀರು ಕುಡಿದಂತೆ ವಿವರಿಸುತ್ತಿದ್ದೀರಿ, ನಾನು ಕನ್ನಡನಾಡಿನಿಂದ ದೂರ ಕುಳಿತು ಅನುಭವಿಸುತ್ತಿದ್ದೇನೆ. ತೋಚಿದ ಎರಡು ಮಾತು ಬರೆದೆ, ಅದನ್ನೂ ನೀವು ನಿಮ್ಮ ಲೇಖನದಲ್ಲಿ ಸೇರಿಸಿದ್ದೀರಿ. "ಪುಷ್ಪಮಾಲಾ ಪ್ರಸಂಗೇನ ಸೂತ್ರಂ ಶಿರಸಿ ಧಾರ್ಯತೆ" ಅನ್ನುವಂತಾಗಿದೆ. ಧನ್ಯೋಸ್ಮಿ!
-ಕೇಶವ

sunaath said...

ವೇಣು,
ನಿಮ್ಮ ಮಾತು ನನ್ನನ್ನು ಹಿಗ್ಗಿಸುತ್ತಿದೆ.
ಧನ್ಯವಾದಗಳು.

sunaath said...

ಕೇಶವ,
ಕನ್ನಡ ನಾಡಿನ ಒಳಗಿದ್ದವರನ್ನು ಹಾಗೂ ಹೊರಗಿದ್ದವರನ್ನು ಬಂಧಿಸುವ ಸೂತ್ರವೆಂದರೆ ಈ ಕನ್ನಡ ಸಾಹಿತ್ಯ!

shivu.k said...

ಸುನಾಥ್ ಸರ್,

ತಡವಾಗಿದ್ದಕ್ಕೆ ಕ್ಷಮೆಯಿರಲಿ...

ಬೇಂದ್ರೆಯವರ ಬಡತನ, ಬದುಕು, ಪತ್ನಿಗೆ ಕವನದ ಮೂಲಕ ತೊಡಿಸುತ್ತಿದ್ದ ವಡವೆಗಳು ಅದ್ದೂರಿ ಆಡಂಬರಕ್ಕಿಂತ ಸರಳವಾಗಿ ಬದುಕುವ ಕಲೆ ಅದಕ್ಕಾಗಿ ಕವನಗಳು ಎಲ್ಲಾ ಓದು ಖುಷಿಯಾಯ್ತು...

ಅವರನ್ನು ಬ್ರಿಟೀಷರು ಜೈಲಿಗೆ ಹಾಕಿದ್ದು, ನಂತರ ಪತ್ರಿಕಾ ಸಂಪಾದಕರಾಗಿದ್ದು...ಅನಂತರದ ಬದುಕು ಎಲ್ಲವನ್ನು ಚೆನ್ನಾಗಿ ಬರೆದಿದ್ದೀರಿ..ಧನ್ಯವಾದಗಳು

sunaath said...

ಶಿವು,
ನೀವು ಬಂದಿರುವದೇ ಸೊಗಸು.
ತಡವೆಂದು ಚಿಂತಿಸದಿರಿ.

Ittigecement said...

ಸುನಾಥ ಸರ್....

ಬೇಂದ್ರೆಯವರ ಕಾವ್ಯದ ಸೊಗಸನ್ನು ಉಣಬಡಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...
ಬಡತನದ ಬೇಗೆಯಲ್ಲಿ ಬೆಂದ ಬೇಂದ್ರೆಯವರ...
ಕಾವ್ಯ ಸಾಹಿತ್ಯ ಜೀವನಕ್ಕೆ ಹತ್ತಿರ..
ಅಲ್ಲವಾ...?

ತಡವಾಗಿ ಬಂದೆ...
ಕ್ಷಮೆ ಇರಲಿ....

ಬೇಂದ್ರೆಯವರ ಬಗೆಗೆ ಇನ್ನಷ್ಟು ಬರೆಯಿರಿ...

sunaath said...

ಪ್ರಕಾಶ,
ಬೇಂದ್ರೆಯವರ ಸಾಹಿತ್ಯ ಜೀವನದ ಎಲ್ಲ ಮುಖಗಳನ್ನೂ ಒಳಗೊಂಡಿದೆ. ನಿಸರ್ಗ, ಆಧ್ಯಾತ್ಮ, ಬಡತನ, ಪ್ರೀತಿ ಎಲ್ಲವೂ
ಅವರ ಕಾವ್ಯದಲ್ಲಿವೆ!

Prabhuraj Moogi said...

ಸುನಾಥ್ ಸರ್, ಬೇಂದ್ರೆಯವರ ಕವನಗಳು ಅವರ ಹೆಂಡತಿಯೊಂದಿಗಿನ ಸಲ್ಲಾಪಗಳನ್ನು ಚೆನ್ನಾಗಿ ತೆರೆದಿಟ್ಟಿದ್ದೀರಿ... ಅವರ "ನೀ ಹಿಂಗ ನೋಡಬ್ಯಾಡ ನನ್ನ.. ತಿರುಗಿ ನಾ ಹೆಂಗ ನೋದಲಿ ನಿನ್ನ" ಕವನ.. ಮಗನ ಸಾವಿಗೆ ದು:ಖಿಸುತ್ತಿರುವ ತಮ್ಮ ಹೆಂದತಿಯ ನೋಟ ನೋಡಿ ಬರೆದದ್ದಂತೆ ಹೌದಾ.. ನಾನೇಲ್ಲೊ ಕೇಳಿದ ನೆನಪು, ನಿಮಗೆ ಗೊತ್ತಿರಬಹುದೆಂದು ಕೇಳುತ್ತಿದ್ದೇನೆ... ನೀವು ಹಿಂದಿನ ಲೇಖನದಲ್ಲಿ ನನಗೆ ಪ್ರತಿಕ್ರಿಯೆ ಬರೆದಂತೆ, ಮಕ್ಕಳಾಡಿಸುವ ಸಮಯ ಇನ್ನೂ ಬಂದಿಲ್ಲ, ನವ ದಂಪತಿಗಳು ಸ್ವಲ್ಪ ದಿನ ಖುಷಿಯಾಗಿರೋಣ ಅಂತಿದೀವೀ...

sunaath said...

ಪ್ರಭುರಾಜ,
‘ನೀ ಹಿಂಗ ನೋಡಬ್ಯಾಡ ನನ್ನ’ ಅನ್ನುವ ಕವನ ಕಾಲ್ಪನಿಕ ಕವನ. ಆದರೆ, ಈ ಕವನ ರಚಿಸಿದ ಅಲ್ಪಾವಧಿಯಲ್ಲಿಯೇ, ಬೇಂದ್ರೆಯವರ ಪುಟ್ಟ ಕಂದ ‘ಲಲಿತಾ’ ತೀರಿಕೊಂಡಿದ್ದು ವಿಧಿಯು ಎಸೆಗಿದ ಅಪಹಾಸ್ಯ.
ಈ ಕವನದ ಮಾಹಿತಿಯನ್ನು ನಾನು ‘ಸಲ್ಲಾಪ’ದಲ್ಲಿಯೇ ಕೊಟ್ಟಿದ್ದೇನೆ. ಅದನ್ನು http://sallaap.blogspot.com/2008/08/blog-post_20.html
ಇಲ್ಲಿ ನೋಡಬಹುದು.

ಅವೀನ್ said...

Sunath Sir, really you are great!!

I appreciate the grip you hold on Kannada topic and Subject.

Kudoos!!!

Please can you write on Article on "Sorutihudu maneya maalige".

I know its composed by Sharifajja but still hope, if you write this it will get its real meaning in words also.

Expecting this as a favour.

Yours

Aveen

sunaath said...

Aveen,
I shall try.

naveen said...

chennagishe
http://jaenugudu.wordpress.com/

naveen said...

chennagishe
http://jaenugudu.wordpress.com/

keshavvd@gmail.com said...

ನಮ್ ತಂದೆಯವರು ಬೇಂದ್ರೆಯವರ ಪಟ್ಟ ಶಿಷ್ಯರಾಗಿದ್ದರು. ಬೇಂದ್ರೆಯವರ ಧಾಟಿಯಲ್ಲೇ ಕವಿತೆ ಬರೆಯುತ್ತಿದ್ದರು. ನನ್ನ ತಾಯಿಯವರು ಬಂಗಾರ ಕೇಳಿದಾಗ, ನಂನ್ ತಂದೆಯವರು: * ನಾನ ನಿನ್ನ ಬಂಗಾರ ಅಲ್ಲೇನ್..* ಎಂದು ಕವಿತೆ ಬರಿದಿದ್ದರು. ಗಳಿಕೆಯೇ ಅತ್ಯಲ್ಪ ಇರುವಾಗ ಬಂಗಾರ ಎಲ್ಲಿ 🙏

sunaath said...

ಖರೇ ಅದರೀ, ಕೇಶವ! ಗಂಡಗ ಹೇಣತಿ, ಹೇಣತಿಗೆ ಗಂಡ ಬಂಗಾರ ನೋಡರಿ!

ಭಾರತಾಂಬೆ ಕ್ರಿಯೇಷನ್ಸ್ said...

ಬಡತನದಲ್ಲಿ ಬೆಂದ ಜೀವಗಳು ಮಾತ್ರ ಬೇಂದ್ರೆ ಅಜ್ಜನಂತಾಗಲು ಸಾಧ್ಯ. ಯಾರ ಯಾರು ಬಡತನದ ಬೇಗೆಯಲ್ಲಿ ಬೆಯ್ದರೂ ತಮ್ಮ ಜೀವನದಲ್ಲಿ ಅದನ್ನು ತೋರ್ಗೊಡಲಿಲ್ಲವೋ ಅವರೆಲ್ಲಾ ನನ್ನ ಬಾಳಿಗೆ ಸ್ಪೂರ್ತಿ. ಧನ್ಯೋಶ್ಮೀ.

sunaath said...

ಧನ್ಯವಾದಗಳು, ಭಾರತಾಂಬೆ ಕ್ರಿಯೇಶನ್ಸ್-ರೆ.