Wednesday, June 24, 2009

‘ಹಕ್ಕಿ ಹಾರುತಿದೆ ನೋಡಿದಿರಾ?’.........ದ.ರಾ.ಬೇಂದ್ರೆ

‘ಹಕ್ಕಿ ಹಾರುತಿದೆ ನೋಡಿದಿರಾ?’ ಇದು ಬೇಂದ್ರೆಯವರ ಸುಪ್ರಸಿದ್ಧ ಕವನ. ೧೯೨೯ನೆಯ ಇಸವಿಯಲ್ಲಿ ಬೆಳಗಾವಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೇಂದ್ರೆಯವರು ಈ ಕವನವನ್ನು ಹಾಡಿದರು. ಬೇಂದ್ರೆಯವರ ಉತ್ತರ ಕರ್ನಾಟಕದ ವೇಷ-ಭೂಷ, ಅವರ ಹಾವಭಾವ ಹಾಗೂ ಹಾಡುಗಾರಿಕೆಯ ಗತ್ತು ಇವುಗಳಿಂದ ನೆರೆದ ಸಭಿಕರೆಲ್ಲ ಮಂತ್ರಮುಗ್ಧರಾದರಂತೆ. ಆನಂತರ ೧೯೩೨ರಲ್ಲಿ ಪ್ರಕಟವಾದ ಅವರ ಪ್ರಥಮ ಕವನ ಸಂಕಲನ ’ಗರಿ’ಯಲ್ಲಿ ಈ ಕವನ ಸೇರ್ಪಡೆಯಾಯಿತು.

ಕವನದ ಪೂರ್ತಿಪಾಠ ಹೀಗಿದೆ:

ಇರುಳಿರಳಳಿದು ದಿನದಿನ ಬೆಳಗೆ
ಸುತ್ತಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದಕೆ
ಎವೆ ತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ?

ಕರಿನೆರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ?

ನೀಲಮೇಘಮಂಡಲ-ಸಮ ಬಣ್ಣ !
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ !
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ?

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ?

ಯುಗ-ಯುಗಗಳ ಹಣೆಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನೆಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ?

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ?

ಮುಟ್ಟಿದೆ ದಿಗ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೊ
ಬಲ್ಲರು ಯಾರಾ ಹಾಕಿದ ಹೊಂಚ
ಹಕ್ಕಿ ಹಾರುತಿದೆ ನೋಡಿದಿರಾ?

ಬೇಂದ್ರೆಯವರು ಈ ಕವನದಲ್ಲಿ ಕಾಲವನ್ನು ಹಾರುತ್ತಿರುವ ಹಕ್ಕಿಗೆ ಹೋಲಿಸಿದ್ದಾರೆ. ಈ ಕವನದ ಮೊದಲ ನುಡಿಯಲ್ಲಿ ಕಾಲಪಕ್ಷಿಯನ್ನು ಪರಿಚಯಿಸುವ ವಿಧಾನ ತುಂಬಾ ಸ್ವಾರಸ್ಯಕರವಾಗಿದೆ.
`ಇರುಳು ಅಳಿದು ದಿನವಾಗುವದು'-- ಇದು ಒಂದು ದಿನದ ಕಾಲಮಾನವನ್ನು ಸೂಚಿಸುತ್ತದೆ.
‘ಇರುಳು ಇರುಳು ಅಳಿದು ದಿನದಿನ ಬೆಳಗೆ’ ಅನ್ನುವದು ಈ ಕಾಲಮಾನದ ಪುನರಾವರ್ತನೆ.
ಈ ಸಾಲಿನ ಮೂಲಕ ಬೇಂದ್ರೆಯವರು ಒಂದು ಚಲನಶೀಲ ಕಾಲವನ್ನು ನಮ್ಮ ಕಣ್ಣೆದುರಿಗೆ ಮೂಡಿಸುತ್ತಿದ್ದಾರೆ.

ಈಗ ಕವನದ ಮುಂದಿನ ಸಾಲನ್ನು ನೋಡಿರಿ:
‘ಸುತ್ತಮುತ್ತಲೂ ಮೇಲಕೆ ಕೆಳಗೆ’ ಎನ್ನುವ ಸಾಲು ‘ಅವಕಾಶ’ದ (space) ಮೂರು ಆಯಾಮಗಳನ್ನು (3 co-ordinates) ಬಣ್ಣಿಸುತ್ತದೆ.
ಅಂದರೆ ಈ ಕಾಲವು ‘ವಿಶ್ವವ್ಯಾಪಿ ಕಾಲ’ವಾಯಿತು !
ಕಾಲಪಕ್ಷಿಯ ಬೃಹತ್ ರೂಪವನ್ನು ಈ ರೀತಿಯಾಗಿ ಬೇಂದ್ರೆ ನಿರೂಪಿಸಿದ್ದಾರೆ.

ಈ ಕಾಲಪಕ್ಷಿಯ ಗತಿ ಎಂತಹದು?
‘ಗಾವುದ ಗಾವುದ ಗಾವುದ ಮುಂದಕೆ’!
‘ಮುಂದಕೆ’ ಎಂದು ಹೇಳುವ ಮೂಲಕ ಈ ಕಾಲಪಕ್ಷಿಯು ಕೇವಲ ಗತಿಶೀಲವಲ್ಲ, ಪ್ರ-ಗತಿಶೀಲವೂ ಹೌದು ಎಂದು ಬೇಂದ್ರೆ ಸೂಚಿಸುತ್ತಾರೆ.
ಈ ಗಾವುದ ದೂರವನ್ನು ಚಲಿಸಲು ಈ ಪಕ್ಷಿಗೆ ಬೇಕಾಗುವ ಸಮಯ ಮಾತ್ರ ‘ಎವೆ ತೆರೆದಿಕ್ಕುವ ಹೊತ್ತು’.
ಕೇವಲ ಕಣ್ಣು ಮಿಟುಕಿಸುವ ಸಮಯದಲ್ಲಿ ಈ ಕಾಲಪಕ್ಷಿ ಸುದೂರ ಗಮಿಸಬಲ್ಲದು.

ಸಮಯದ ಅತ್ಯಂತ ಚಿಕ್ಕ ಅಳತೆ ಯಾವುದು ಎಂದರೆ ‘ನಿಮಿಷ’. ಭಾರತೀಯರು ಪೂರ್ವಕಾಲದಿಂದಲೂ ಬಳಸುತ್ತಿದ್ದ ಕಾಲಮಾನ ಇದು. ‘ನಿಮಿಷ’ವನ್ನು ಅಳೆಯುವ ಬಗೆ ಹೇಗೆ? ಕಣ್ಣರೆಪ್ಪೆಯನ್ನು ಬಡಿಯುವ ಕಾಲಮಾನಕ್ಕೆ ‘ನಿಮಿಷ’ ಎನ್ನುತ್ತಾರೆ. ಆದುದರಿಂದ ‘ಎವೆ ತೆರೆದಿಕ್ಕುವ ಹೊತ್ತಿನ ಒಳಗೆ’ ಈ ಪದಪುಂಜದ ಅರ್ಥ=ನಿಮಿಷ. ಇದೇ ಕಾಲದ ಕನಿಷ್ಠ ಮಾನದಂಡ. ಆದುದರಿಂದ ಅತಿ ಚಿಕ್ಕ ಕಾಲಮಾನದಲ್ಲಿ ಈ ಹಕ್ಕಿ ಗಾವುದ ದೂರಕ್ಕೆ ಚಲಿಸಬಲ್ಲದು.
ಕಲ್ಪನೆಯಂತೆ ಕಾಣುವ ಪದದಲ್ಲಿ ವಾಸ್ತವತೆಯನ್ನು ಹಿಡಿದಿಡುವ ಬೇಂದ್ರೆ-ಪ್ರತಿಭೆಯನ್ನು ಈ ಸಾಲಿನಲ್ಲಿ ನಾವು ಕಾಣುತ್ತೇವೆ.
(ದೇವತೆಗಳು ಕಣ್ಣು ಮುಚ್ಚುವದಿಲ್ಲ ಅಂದರೆ ಕಣ್ಣರೆಪ್ಪೆ ಬಡೆಯುವದಿಲ್ಲ ; ಆದುದರಿಂದ ಅವರು ‘ಅನಿಮೇಷ’ರು.)

ಈಗ ಈ ನುಡಿಯ ಮತ್ತೊಂದು ಆಯಾಮವನ್ನು ನೋಡೋಣ.
ವಿಶ್ವವನ್ನು ವ್ಯಾಪಿಸಿರುವ ಈ ಕಾಲಪಕ್ಷಿ ತನ್ನ ಚಲನೆಯ ಮೂಲಕ ವಿಶ್ವವನ್ನು ಅಂದರೆ ದೇಶವನ್ನು ಬದಲಾವಣೆಗೆ ಒಳಪಡಿಸುತ್ತದೆ. ಇದೇ ಮಾತನ್ನು ವಿಜ್ಞಾನಿ ಐನ್‍ಸ್ಟೈನ್‍ ‘ಕಾಲ ಮತ್ತು ದೇಶ ಇವೆರಡು ಸಾಪೇಕ್ಷವಾಗಿವೆ’ ಎನ್ನುವ ಮೂಲಕ ತಿಳಿಸಿದರು. (Relativity of space and time.)
ಶಂಕರಾಚಾರ್ಯರೂ ಇದೇ ಮಾತನ್ನು ‘ಮಾಯಾಕಲ್ಪಿತ ದೇಶ,ಕಾಲ ಕಲನಾ’ (=ದೇಶ ಮತ್ತು ಕಾಲ ಇವು ಕೇವಲ ಭ್ರಮೆ.)
ಎಂದು philosophically ಹೇಳಿದ್ದಾರೆ
ಆದುದರಿಂದ ಬೇಂದ್ರೆಯವರ ಈ ಕಾಲಪಕ್ಷಿ ಕೇವಲ ಸಮಯದ ಪಕ್ಷಿ ಅಲ್ಲ. ವಿಶ್ವವನ್ನೇ ತನ್ನ ಚಲನೆಯಲ್ಲಿ ಬದಲಾಯಿಸುತ್ತಿರುವ ಬೃಹತ್ ಚೈತನ್ಯಪಕ್ಷಿ!

ಎರಡನೆಯ ನುಡಿಯಲ್ಲಿ ಬೇಂದ್ರೆಯವರು ಈ ಚೈತನ್ಯರೂಪಿ ಕಾಲಪಕ್ಷಿಯ ಭೌತಿಕ ವಿವರಗಳನ್ನು ಕೊಡುತ್ತಾರೆ:

ಕರಿನೆರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣ-ಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ?

ಈ ನುಡಿಯನ್ನು ಎರಡು ರೀತಿಯಲ್ಲಿ ಅರ್ಥೈಸಬಹುದು:
ಪುಚ್ಚ ಅಂದರೆ ಬಾಲ. ಇದು ಹಕ್ಕಿಯ ಹಿಂದಿರುತ್ತದೆ. ಇದು ಭೂತಕಾಲ. ಆದುದರಿಂದ ಇದರ ಬಣ್ಣ ಕರಿ.
ಈಗ ಕಣ್ಣಿಗೆ ಕಾಣುತ್ತಿರುವ , ಹೊಳೆಯುತ್ತಿರುವ ಗರಿಯ ಬಣ್ಣ ಬಿಳಿ. ಆದುದರಿಂದ ಇದು ವರ್ತಮಾನ ಕಾಲ. ನಮಗೆ ಮುಂದೆ ಕಾಣುವದು ಭವಿಷ್ಯತ್ ಕಾಲ. ಇದು ಉದಯಿಸುತ್ತಿರುವ ಸೂರ್ಯನ ಹಾಗೆ ಕೆಂಪಾಗಿ ಹಾಗೂ ಬಂಗಾರ ಬಣ್ಣದ್ದಾಗಿರುತ್ತದೆ. ಈ ಮೂರೂ ಕಾಲಗಳು ಕಾಲಪಕ್ಷಿಯ ಚಲನೆಯ ಅಂಶಗಳು.

ಎರಡನೆಯದಾಗಿ, ನಮ್ಮ ಪೃಥ್ವಿಯ ಮೇಲಿನ ಜನಾಂಗಗಳನ್ನು ಗಮನಿಸಿರಿ: ಕರಿಯ ಬಣ್ಣದ ಆಫ್ರಿಕನ್ ಜನಾಂಗ, ಬಿಳಿಯ ಬಣ್ಣದ ಕಾ^ಕೇಸಿಯನ್ ಜನಾಂಗ, ಇವೆರಡರ ನಡುವಿನ ಕೆನ್ನನ ಅಂದರೆ brownie ಜನಾಂಗ ಹಾಗೂ ಕೊನೆಯದಾಗಿ ಹಳದಿ ಬಣ್ಣದ ಅಂದರೆ ಹೊನ್ನ ಬಣ್ಣದ ಮಂಗೋಲಿಯನ್ ಜನಾಂಗ.
ಈ ಎಲ್ಲ ಜನಾಂಗಗಳನ್ನು ಈ ಕಾಲಪಕ್ಷಿ ಹೊತ್ತುಕೊಂಡು ಮುನ್ನಡೆದಿದೆ ಎಂದೂ ಅರ್ಥೈಸಬಹುದು.

ಇಂತಹ ಒಂದು ಬೃಹತ್ ಪಕ್ಷಿ ನೋಡಲು ಹೇಗೆ ಕಾಣುತ್ತಿರಬಹುದು?
ಇದರ ಹರಹು ಪೃಥ್ವಿಯನ್ನಷ್ಟೇ ಅಲ್ಲ, ನಮ್ಮ ಆಕಾಶಗಂಗೆಯನ್ನೂ ದಾಟಿದೆ. ಬೇಂದ್ರೆ ಇದರ ಅನಂತ ವೈಶಾಲ್ಯವನ್ನು ಹೀಗೆ ಬಣ್ಣಿಸುತ್ತಾರೆ :

ನೀಲಮೇಘಮಂಡಲ-ಸಮ ಬಣ್ಣ !
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ !
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ?

ಆಕಾಶ ಅನಂತವಾದದ್ದು. ಅದರ ಬಣ್ಣ ಈ ಕಾಲಪಕ್ಷಿಯದು, ಅಂದರೆ ಕಾಲವೂ ಸಹ ಅನಂತವೇ. ಆ ಅನಂತವಾದ ಆಕಾಶಕ್ಕೆ ರೆಕ್ಕೆ ಒಡೆದರೆ ಹೇಗಿರಬೇಡ!? ಅಂತಹ ಈ ಕಾಲಪಕ್ಷಿಯು ಚಿಕ್ಕೆಗಳ ಮಾಲೆಯನ್ನು ಅಂದರೆ ಆಕಾಶಗಂಗೆಯೇ ಮೊದಲಾದ ವಿಶ್ವಗಳನ್ನು ಸೆಕ್ಕಿಸಿಕೊಂಡಿದೆ.
ಬೇಂದ್ರೆಯವರು ‘ಸಿಕ್ಕಿಸಿಕೊಂಡಿದೆ’ ಎಂದು ಹೇಳಿಲ್ಲ . ಸೆಕ್ಕಿಸಿಕೊಂಡಿದೆ ಎಂದು ಹೇಳಿದ್ದಾರೆ. ಸೆಕ್ಕಿಸಿಕೊಳ್ಳುವದು ಅಂದರೆ ದಿಮಾಕಿನಿಂದ ಸಿಕ್ಕಿಸಿಕೊಳ್ಳುವದು.
ಈ ಕಾಲಪಕ್ಷಿಯ ಕಣ್ಣುಗಳು ಸೂರ್ಯ ಹಾಗೂ ಚಂದ್ರ ಎನ್ನುವ ಎರಡು ಪ್ರಭಾಬಿಂಬಗಳು. ಸೂರ್ಯ ಹಾಗೂ ಚಂದ್ರರನ್ನು ನಾವು ಕಾಲಗಣನೆಗೆ ಬಳಸುತ್ತೇವೆ. ಆದುದರಿಂದ ಈ ಪ್ರಭಾಬಿಂಬಗಳು ಕಾಲಪಕ್ಷಿಯ ಕಣ್ಣುಗಳು ಎಂದು ಹೇಳುವದು ಯಥಾರ್ಥವಾಗಿದೆ.
ಇಂತಹ ಅದ್ಭುತ ನೋಟದ ಈ ಕಾಲಪಕ್ಷಿಯು ಮಾಡುತ್ತಿರುವದೇನು?
ಅದನ್ನು ನಾಲ್ಕನೆಯ ನುಡಿಯಲ್ಲಿ ಬೇಂದ್ರೆಯವರು ಈ ರೀತಿಯಾಗಿ ಬಣ್ಣಿಸುತ್ತಾರೆ:

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ?

ಸಣ್ಣ ಪುಟ್ಟ ರಾಜ್ಯಗಳನ್ನು, ದೊಡ್ಡ ದೊಡ್ಡ ಸಾಮ್ರಾಜ್ಯಗಳನ್ನು ಹುಟ್ಟಿಸಿ ಬೆಳೆಯಿಸುವದೇ ಈ ಕಾಲಪಕ್ಷಿ. ಅವುಗಳ ತೆನೆ ಒಕ್ಕುವದು ಅಂದರೆ ಅವುಗಳ ಫಲಿತವನ್ನು ಕೊಯ್ಲು ಮಾಡುವದು ಈ ಕಾಲಪಕ್ಷಿಯ ಕೆಲಸ. ಈ ತರಹ ಬೆಳೆದು ನಿಂತ ತೆನೆಗಳನ್ನು ಮುಕ್ಕುವದೂ ಸಹ ಈ ಕಾಲಪಕ್ಷಿಯೇ! (ಸುಗ್ಗಿಯ ಸಮಯದಲ್ಲಿ ಹಕ್ಕಿಗಳು ಹೊಲದಲ್ಲಿಯ ಕಾಳುಗಳನ್ನು ಮುಕ್ಕುವದನ್ನು ನೆನಪಿಸಿಕೊಳ್ಳಿರಿ.) ಭೂಮಂಡಲವೆಲ್ಲ ಈ ಹಕ್ಕಿಯ ಆಹಾರವೇ. ಧರಣಿಮಂಡಲದಲ್ಲಿರುವ ಏಳೂ ಖಂಡಗಳನ್ನು ಈ ಹಕ್ಕಿ ತೇಲಿಸುತ್ತದೆ ಹಾಗೂ ಮುಳುಗಿಸುತ್ತದೆ. ಒಂದು ಕಾಲದಲ್ಲಿ ಏಶಿಯಾ ಖಂಡ ಎಲ್ಲಕ್ಕೂ ಮೇಲೆ ತೇಲುತ್ತಿತ್ತು,ಇದೀಗ ಯುರೋಪ ಹಾಗೂ ಅಮೇರಿಕಾ ಖಂಡಗಳು ಮೇಲೆದ್ದಿವೆ!
(ಭೌತಿಕವಾಗಿಯೂ ಸಹ ಇಡೀ ಭೂಪ್ರದೇಶವು ಮೊದಲು ಗೊಂಡವನ ಖಂಡವೆನ್ನುವ ಒಂದೇ ಭೂಮಿಯಾಗಿದ್ದು, ಅನಂತರ ತುಂಡಾಗಿ ಏಳು ಖಂಡಗಳಾದವು.)
ಈ ಖಂಡಗಳಿಗೆ ತಾವು ಸಾರ್ವಭೌಮರೆಂದುಕೊಂಡು ಬೀಗುತ್ತಿರುವವರ ನೆತ್ತಿಯನ್ನು ಕುಕ್ಕಿ ಅವರ ಅಹಂಕಾರವನ್ನು ಈ ಕಾಲಪಕ್ಷಿ ಮೆಟ್ಟಿ ನಿಂತಿದೆ.
(ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಶ್ ಸಾಮ್ರಾಟರನ್ನು ಅಣಕಿಸುವ ಈ ಸಾಲುಗಳನ್ನು ಬರೆಯಲು ಯಾವುದೇ ಕವಿಗೂ ಅಪಾರ ಧೈರ್ಯ ಬೇಕು. ಸಾಹಿತ್ಯಸಮ್ಮೇಳನದಲ್ಲಿ ಈ ಕವನವನ್ನು ಕೇಳುತ್ತಿದ್ದ ಬಿ.ಎಮ್.ಶ್ರೀಕಂಠಯ್ಯನವರು ಗಾಬರಿಗೊಂಡರೆಂದು ದಾಖಲೆಗಳಿವೆ.)

ಈ ವಿಶ್ವ, ಈ ಭೂಮಿ, ಭೂಮಿಯ ಮೇಲಿನ ಜೀವಜಂತುಗಳು ಇವೆಲ್ಲವುಗಳ ಉಗಮವಾಗಿ ಯಾವ ಕಾಲವಾಯಿತೊ? ಹೊಸ ಯುಗಕ್ಕೊಮ್ಮೆ ಆ ಯುಗದ ಹಣೆಬರಹವನ್ನು ಬರೆಯುವದು, ಹಳೆಯ ಯುಗದ ಹಣೆಬರಹವನ್ನು ಒರೆಸುವದು ಈ ಕಾಲಪಕ್ಷಿಯ ಕೆಲಸ. ಭೂಮಿಯ ಮೇಲಿನ ಶಿಲಾಯುಗ, ಧಾತುಯುಗ, ಪರಮಾಣುಯುಗ ಇವೆಲ್ಲವೂ ಕಾಲದ ಅಧೀನವೇ.
ಆದುದರಿಂದ ಈ ಕಾಲಪಕ್ಷಿಯ ಮಹಿಮೆ ಅಪಾರ. ಅದು ಯುಗ-ಯುಗಗಳನ್ನು, ಮನ್ವಂತರಗಳನ್ನು ತನ್ನ ಆಧೀನದಲ್ಲಿಟ್ಟುಕೊಂಡಿದೆ:

ಯುಗ-ಯುಗಗಳ ಹಣೆಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನೆಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ?

ಕಾಲಪಕ್ಷಿಯ ಕೆಲಸ ಕೇವಲ ವಿನಾಶಕಾರಿಯಲ್ಲ. ಹೊಸ ಮನ್ವಂತರದ ಶುಭೋದಯವಾಗುವದು ಈ ಕಾಲಪಕ್ಷಿಯಿಂದಲೇ. ಯಾಕೆಂದರೆ ತನ್ನ ರೆಕ್ಕೆಗಳನ್ನು ಬೀಸುವ ಮೂಲಕ ಪ್ರಾಣವಾಯುವನ್ನು ಕೊಟ್ಟು ಈ ನಿರ್ಜೀವ ಮನ್ವಂತರಗಳಿಗೆ ಚೈತನ್ಯ ನೀಡುವುದು ಅಂದರೆ ಸಜೀವಗೊಳಿಸುವದು ಈ ಕಾಲಪಕ್ಷಿಯ ಕೆಲಸ. ನಮ್ಮ ಭೂಮಂಡಲದಲ್ಲಿ ಜರುಗಿದ ಸಾಂಸ್ಕೃತಿಕ ಬದಲಾವಣೆಗಳು, ಪುನಶ್ಚೇತನಗಳು (Renaissances) ಎಲ್ಲವೂ ಈ ಕಾಲಪಕ್ಷಿಯ ಮಹಿಮೆಯೇ! ಹೊಸ ಕಾಲದ ಎಳೆಯ ಮಕ್ಕಳಿಗೆ ಹಾರೈಸಿ ಬೆಳೆಸುವದು ಈ ಕಾಲಪಕ್ಷಿಯೇ. ಇದನ್ನೆಲ್ಲ ಪರಿವೀಕ್ಷಿಸುವ ಕಣ್ಣು ನಮಗೆ ಬೇಕು. ಅಂತಲೇ ಬೇಂದ್ರೆ ನಮ್ಮನ್ನು ಕೇಳುತ್ತಿದ್ದಾರೆ:
“ಹಕ್ಕಿ ಹಾರುತಿದೆ ನೋಡಿದಿರಾ?”

ಮಾನವ ದೃಷ್ಟಿ ತತ್ಕಾಲಕ್ಕೆ ಸೀಮಿತವಾಗಿರುತ್ತದೆ. ಆದರೆ ಕವಿಯ ನೋಟ ಕಾಲಾತೀತ, ದೇಶಾತೀತ.
ಮುಂದಿನ ನುಡಿಯಲ್ಲಿ ಬೇಂದ್ರೆಯವರು ಕಾಲಪಕ್ಷಿಯ ಲಾಘವದ ಭವಿಷ್ಯ ನುಡಿಯುತ್ತಿದ್ದಾರೆ:

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ?

ಕಾಲದ ಓಟದಲ್ಲಿ ಬೆಳ್ಳಿ ಅಂದರೆ ಶುಕ್ರಗ್ರಹವು ಮನುಷ್ಯನಿಗೆ ಕೇವಲ ಹಳ್ಳಿಯಾಗಬಹುದು, ಚಂದ್ರಲೋಕವು ಬರಿ ಊರಾಗಬಹುದು ಹಾಗೂ ಮಂಗಳಲೋಕವು ಭೂಮಿಗೆ ಅಂಗಳವಾಗಬಹುದು. ಮಾನವನಿಗೆ ಈ ಆಕಾಶಕಾಯಗಳು ಆಡಲು, ಹಾಡಲು ಹಾಗೂ ಹಾರಾಡಲು platforms ಆಗಬಹುದು!
ಮಾನವನು ಭೂಮಿಯಿಂದ ಇತರ ಗ್ರಹ, ಉಪಗ್ರಹಗಳಿಗೆ ಸಂಚರಿಸಬಹುದಾದ ದಾರ್ಶನಿಕ ಮುನ್ನೋಟ ಈ ನುಡಿಯಲ್ಲಿ ವ್ಯಕ್ತವಾಗಿದೆ.

ಕೊನೆಯ ನುಡಿಯಲ್ಲಿ ಬೇಂದ್ರೆಯವರು ಈ ಕಾಲಪಕ್ಷಿಯ ಹಾರಾಟ ಮಾನವನ ಕಲ್ಪನೆಗೆ ಮೀರಿದ್ದು ಎನ್ನುವದನ್ನು ವ್ಯಕ್ತಪಡಿಸುತ್ತಾರೆ:

ಮುಟ್ಟಿದೆ ದಿಗ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೊ
ಬಲ್ಲರು ಯಾರಾ ಹಾಕಿದ ಹೊಂಚ
ಹಕ್ಕಿ ಹಾರುತಿದೆ ನೋಡಿದಿರಾ?

ವಿಶ್ವಗಳು ಅನೇಕವಿರಬಹುದು. ಈ ವಿಶ್ವಗಳ ದಿಕ್ಕುಗಳು ಅನಂತವಾಗಿರಬಹುದು. ಆದರೆ ಈ ಕಾಲಪಕ್ಷಿಯು ಈ ಎಲ್ಲ ಮಂಡಲಗಳ ಅಂಚನ್ನು ಮುಟ್ಟಿದೆ. ಇಷ್ಟೇ ಅಲ್ಲ, ಈ ಅನಂತತೆಯ ಆಚೆಗೂ ಸಹ ಇದು ತನ್ನ ಚುಂಚನ್ನು ಚಾಚಿದೆ. ಅಬ್ಬಾ, ಎಂತಹ ಕಲ್ಪನೆ !
ಈ ಕಾಲಪಕ್ಷಿಯ ಮನೋಗತ ನಮಗೆ ಅರ್ಥವಾಗಬಹುದೆ? ಇದು ಅಸಾಧ್ಯ ಎನ್ನುವ ಹೊಳಹನ್ನು ‘ಬಲ್ಲರು ಯಾರಾ’ ಎನ್ನುವ ಪ್ರಶ್ನೆಯ ಮೂಲಕ ಬೇಂದ್ರೆ ವ್ಯಕ್ತಪಡಿಸುತ್ತಾರೆ.
ಬ್ರಹ್ಮಾಂಡ ಅಂದರೆ ಬ್ರಹ್ಮದೇವನು ಸೃಷ್ಟಿಸಿದ ಬೃಹತ್ ಅಂಡ. ಆ ಬ್ರಹ್ಮಸೃಷ್ಟಿಗಳನ್ನೇ ಈ ಕಾಲಪಕ್ಷಿ ಒಡೆಯಲೆಂದು ಹೊಂಚು ಹಾಕಿ ಹಾರುತ್ತಿದೆಯೆ? ಇರಬಹುದು, ಅಥವಾ ಅಂಡವು ಒಡೆದಾಗಲೇ ಹೊಸ ಸೃಷ್ಟಿ ಹೊರಗೆ ಬರುವದು ಎನ್ನುವ ಅರ್ಥವೂ ಇಲ್ಲಿ ಇರಬಹುದು.
ಇದಕ್ಕೆ ಉತ್ತರ : “ಬಲ್ಲರು ಯಾರಾ?”

ಇಂತಹ ಹಕ್ಕಿ ಹಾರುತ್ತಿರುವದನ್ನು ನೀವು ನೋಡಿದಿರಾ?
ಬಹುಶ: ಈ ಕಾಣ್ಕೆ, ಈ ನೋಟ ವರಕವಿಗೆ ಮಾತ್ರ ಸಾಧ್ಯ!

ಈ ಕವನದ ಕೆಲವು ವೈಶಿಷ್ಟ್ಯಗಳು:
ಈ ಕವನವನ್ನು ಓದಿದಾಗ ಮೂಡುವ ಭಾವನೆ ಎಂದರೆ ಬೆರಗು.
ವಿಸ್ಮಯರಸವೇ ಈ ಕವನದ ಪ್ರಧಾನ ರಸ. ಈ ರಸವನ್ನು ಬೇಂದ್ರೆಯವರು ಹೇಗೆ ಸಾಧಿಸಿದ್ದಾರೆ?
ಕವನದ ಪ್ರತಿಯೊಂದು ನುಡಿಯ ಕೊನೆಯ ಸಾಲು “ಹಕ್ಕಿ ಹಾರುತಿದೆ ನೋಡಿದಿರಾ?” ಎಂದಾಗಿರುವದನ್ನು ನೀವು ಗಮನಿಸಿರಬಹುದು. ಕವನದ ಏಳೂ ನುಡಿಗಳಲ್ಲಿ ಇದು ಆವರ್ತಿಸಿದೆ. ಆಗಸದಲ್ಲಿ ಹಾರುವ ಹಕ್ಕಿಯೊಂದನ್ನು ನೋಡಿದ ಹುಡುಗನೊಬ್ಬ ಬೆರಗುಪಟ್ಟು ತನ್ನ ಗೆಳೆಯನೊಬ್ಬನಿಗೆ ಆ ಹಕ್ಕಿಯನ್ನು ತೋರಿಸುತ್ತ, ಬಣ್ಣಿಸುತ್ತ, ಪದೇ ಪದೇ ಉದ್ಗರಿಸುವ ಪ್ರಶ್ನೆಯಂತಿದೆ ಈ ಸಾಲು. ಆ ಹುಡುಗನ ಬೆರಗು ಅವನ ಗೆಳೆಯನಿಗೂ ಸಹ ಹಬ್ಬುತ್ತದೆ.
ಇದು ಬೇಂದ್ರೆಯವರು ವಿಸ್ಮಯರಸವನ್ನು ಈ ಕವನದಲ್ಲಿ ಸಾಧಿಸಿದ ವಿಧಾನ.

ಕವನಕ್ಕೆ ಅವಶ್ಯವಾದ ಛಂದಸ್ಸನ್ನು ಆಯ್ಕೆ ಮಾಡುವದು, ಕವನದಲ್ಲಿ ಲಯವನ್ನು ಸಾಧಿಸುವದು ಇವು ಬೇಂದ್ರೆಯವರ ಸಹಜಸಿದ್ಧಿಗಳು. ಈ ಕವನದ ನುಡಿಗಳಲ್ಲಿ ಐದು ಸಾಲುಗಳಿವೆ. ಕವನದಲ್ಲಿ ನಾಲ್ಕು ಸಾಲುಗಳಿರುವದು ಸಹಜ. ದಾಸರ ಹಾಡುಗಳಿಂದ ಹಿಡಿದು, ನವೋದಯದ ಭಾವಗೀತೆಗಳವರೆಗೆ, ಕನ್ನಡದ ಕವನಗಳು ಬಹುತೇಕವಾಗಿ ಚೌಪದಿಗಳೇ ಆಗಿವೆ. ನಡುಗನ್ನಡದ ಕವಿಗಳು ಷಟ್ಪದಿಗಳನ್ನು ರಚಿಸಿದ್ದಾರೆ ನಿಜ, ಆದರೆ ಅವೂ ಸಹ ಚೌಪದಿಗಳೇ. ಉದಾಹರಣೆಗೆ ಚಾಮರಸನ ಪ್ರಭುಲಿಂಗಲೀಲೆಯ ಈ ಪದ್ಯವನ್ನು ಗಮನಿಸಿರಿ:

ಹಿಡಿಹಿಡಿದುಕೊಂಡರ್ತಿಯಲಿ ಬೆಂ-
ಬಿಡದೆ ಶಿಕ್ಷಾಚಾರ್ಯತನದಲಿ
ಜಡಿದು, ಜಂಕಿಸಿ, ಮುದ್ದುತನ ಮಿಗೆ ಮಾಯೆ ತನ್ನಂತೆ|
ನಡೆಯಕಲಿಸಿದಳಂಚೆವಿಂಡಿಗೆ
ನುಡಿಯಕಲಿಸಿದರಗಿಳಿಗೆ
ಸರವಿಡಲು ಕಲಿಸಿದಳಾಕೆ ತನ್ನರಮನೆಯ ಕೋಗಿಲೆಗೆ||

ಭಾಮಿನೀಷಟ್ಪದಿಯ ಈ ನುಡಿಯನ್ನು ಹೀಗೂ ಬರೆಯಬಹುದು:
“ ಹಿಡಿಹಿಡಿದುಕೊಂಡರ್ತಿಯಲಿ, ಬೆಂಬಿಡದೆ ಶಿಕ್ಷಾಚಾರ್ಯತನದಲಿ
ಜಡಿದು ಜಂಕಿಸಿ, ಮುದ್ದುತನ ಮಿಗೆ ಮಾಯೆ ತನ್ನಂತೆ|
ನಡೆಯಕಲಿಸಿದಳಂಚೆವಿಂಡಿಗೆ, ನುಡಿಯಕಲಿಸಿದರಗಿಳಿಗೆ
ಸರವಿಡಲು ಕಲಿಸಿದಳಾಕೆ ತನ್ನರಮನೆಯ ಕೋಗಿಲೆಗೆ ”||
ಇದೀಗ ಚೌಪದಿಯಾಯಿತು!

ಹೀಗಿರುವಾಗ, ಬೇಂದ್ರೆಯವರು ಕವನವನ್ನು ಚೌಪದಿಯನ್ನಾಗಿ ಬರೆಯದೆ, ಪ್ರತಿಯೊಂದು ನುಡಿಗೂ ಐದನೆಯ ಸಾಲೊಂದನ್ನು ಜೋಡಿಸಿದ್ದಾರೆ. ಐದನೆಯ ಸಾಲಿನಲ್ಲಿ ವಿಸ್ಮಯವನ್ನು ಸೂಚಿಸುವ ಆವರ್ತಕ ಸಾಲೊಂದನ್ನು ಇಟ್ಟಿದ್ದಾರೆ.
ಹೀಗೆ ಮಾಡುವಾಗ ಕಾವ್ಯದ ಲಯವು ಕೈತಪ್ಪಿ ಹೋಗಬೇಕು. ಆದರೆ ಏಳು ನುಡಿಗಳ ಈ ಕವನದಲ್ಲಿ ಮೊದಲ ಸಾಲಿನಿಂದ ಕೊನೆಯ ಸಾಲಿನವರೆಗೂ ಕಾವ್ಯದಲಯವು ಸಮಪ್ರವಾಹದಲ್ಲಿ ಹರಿದಿದೆ.

“ಪಾತರಗಿತ್ತಿ ಪಕ್ಕ”ದಲ್ಲಿ ಪುಟ್ಟ ಸಾಲುಗಳ ಮೂಲಕ, ಎರಡೇ ಸಾಲುಗಳ ನುಡಿಯ ಮೂಲಕ, ದೀರ್ಘವಾಗಿರುವ ಇಡೀ ಕವನವನ್ನೇ ಚಿಕ್ಕ ಚಿಟ್ಟೆಯನ್ನಾಗಿ ಪರಿವರ್ತಿಸಿದ ಕವಿ, ಇಲ್ಲಿ ಚೌಪದಿಯ ಬಂಧವನ್ನು ಕಿತ್ತೊಗೆದು, ಕಾವ್ಯದಲಯವನ್ನು ಹಿಡಿತದಲ್ಲಿ ಇಟ್ಟುಕೊಂಡೇ ಕಾಲಪಕ್ಷಿಯ ವಿಶಾಲತೆಯನ್ನು ಓದುಗನ ಅನುಭವಕ್ಕೆ ತರುತ್ತಾರೆ.

ಇನ್ನು ಬೇಂದ್ರೆಯವರ ಕವನಗಳ ಇತರ ಲಕ್ಷಣಗಳು ಈ ಕವನದಲ್ಲೂ ಕಾಣುತ್ತವೆ.
ವಾಸ್ತವತೆಯನ್ನು ಚಮತ್ಕಾರಿಕವಾಗಿ ಬಳಸುವ ಅವರ ಪ್ರತಿಭೆಯನ್ನು ಇಲ್ಲೂ ಕಾಣಬಹುದು. ಉದಾಹರಣೆಗೆ ‘ಎವೆ ತೆರೆದಿಕ್ಕುವ ಹೊತ್ತಿನ ಒಳಗೆ’ ಎನ್ನುವಾಗಿನ ಕಾಲಮಾನದ ವಾಸ್ತವತೆಯನ್ನು ಗಮನಿಸಬಹುದು.

ಬೇಂದ್ರೆಯವರ ಕವನಗಳಲ್ಲಿ ಬರುವ ಪ್ರತೀಕಗಳು ಸಂಕೀರ್ಣವಾಗಿರುತ್ತವೆ. ಕಾಲಪಕ್ಷಿಯ ಪುಚ್ಚ ಹಾಗೂ ಗರಿಗಳ ಪ್ರತೀಕವನ್ನು ಉದಾಹರಣೆಯಾಗಿ ಗಮನಿಸಬಹುದು.

ಬೇಂದ್ರೆಯವರ ಕಲ್ಪನೆ ಅಗಾಧವಾದದ್ದು. ಕಾಲಪಕ್ಷಿಯ ವರ್ಣನೆ, ಅದರ ಆಹಾರ,ಅದರ ಕಾರ್ಯಸೂಚಿಯನ್ನು ಬೇಂದ್ರೆಯವರು ಹೆಣೆದ ಪರಿಯನ್ನು ಗಮನಿಸಿದರೆ, ಅವರ ಕಲ್ಪನಾಸಾಮರ್ಥ್ಯದ ಅರಿವಾಗುವದು. ಇಂತಹ ಅಪಾರ ಕಲ್ಪನೆಯನ್ನು ವ್ಯವಸ್ಥಿತವಾಗಿ ಹೆಣೆಯುತ್ತ, ಕವನದ focus ಅನ್ನು ಕಾಯ್ದುಕೊಂಡು ಹೋಗುವದು ಪ್ರತಿಭಾವಂತ ಕವಿಗೇ ಸಾಧ್ಯ.

ಇಷ್ಟೆಲ್ಲ ಗುಣಗಳಿದ್ದ ಈ ಕವನದಲ್ಲಿ ದೋಷಗಳೂ ಇವೆ.
ಓದುಗನಲ್ಲಿ ಕಾಲಪಕ್ಷಿಯ ಬಗೆಗೆ ಬೆರಗು ಹುಟ್ಟುತ್ತದೆಯೇ ಹೊರತು, ಕಾಲಪಕ್ಷಿಯ ಪ್ರಧಾನಗುಣವಾದ powerಅನ್ನು ಆತ ಅನುಭವಿಸುವದಿಲ್ಲ. ಕಾಲಪಕ್ಷಿಯ powerಅನ್ನು ತಿಳಿಸಲು, ಬೇಂದ್ರೆ ಮೂರು-ನಾಲ್ಕು ನುಡಿಗಳನ್ನು ಬರೆದಿದ್ದಾರೆ. ಆದರೆ ಈ ಸಾಲುಗಳು ಕೇವಲ ವಾಚ್ಯವಾಗಿವೆ. ಕಾಲಪಕ್ಷಿಯ ಶಕ್ತಿ ಓದುಗನ ಅನುಭವಕ್ಕೆ ಬರುವದಿಲ್ಲ.

ಶಂಕರಾಚಾರ್ಯರು ತಮ್ಮ ಸ್ತೋತ್ರವೊಂದರಲ್ಲಿ ಕಾಲದ ಮಹಿಮೆಯನ್ನು ಹೀಗೆ ಬಣ್ಣಿಸಿದ್ದಾರೆ:
“ಕಾಲೋ ಜಗದ್ ಭಕ್ಷಕ:” (=ಕಾಲವು ವಿಶ್ವಗಳನ್ನು ಕಬಳಿಸುತ್ತದೆ.)
ಈ ಒಂದು ಸಾಲಿನಲ್ಲಿ ಅನುಭವಕ್ಕೆ ಬರುವ ಕಾಲದ ಶಕ್ತಿಯು, ಬೇಂದ್ರೆಯವರ ೩೫ ಸಾಲುಗಳಲ್ಲಿ ಬರುವದಿಲ್ಲವೆನ್ನುವದು ಕವನದ ಶಕ್ತಿಹೀನತೆಯ ನಿದರ್ಶನವಾಗಿದೆ.

ಹೀಗಾಗಿ ಬೇಂದ್ರೆಯವರ ಈ ಕವನವು ಉತ್ತಮ ಲಕ್ಷಣಗಳಿದ್ದರೂ ಸಹ ರಸಸೃಷ್ಟಿಯಲ್ಲಿ ಸೋತಿದೆ ಎಂದು ಹೇಳಬೇಕಾಗುತ್ತದೆ.

40 comments:

umesh desai said...

ಸುನಾಥ ಸರ್ ೮೦ ವರ್ಷದ ಹಿಂದಿನ ಕವಿತಾ ಇಂದೂ ಪ್ರಸ್ತುತ ಯಾಕ್ ಅಂದ್ರ ಆ ಹಕ್ಕಿ ಇನ್ನೂ ಹಾರಲಿಕ್ಕ ಹತ್ತೇದ..
ಚಂದ್ರನ್ನ ಮೆಟ್ಟಿದ್ದಾತು ಮಂಗಳದ ತಲಿಬಾಗಿಲು ಮುಟ್ಟೇದ ಆದ್ರೂ ಇನ್ನೂ ದಣಿದಿಲ್ಲ...ಸಾಕಾಗಿಲ್ಲ.
ನಿಮ್ಮ ಕವಿತಾ ವಿಶ್ಲೇಷಣಾಕ್ಕ ಏನ್ ಅನ್ನಲಿ " ಉಘೇ ಉಘೇ...."

PARAANJAPE K.N. said...

ಬೇ೦ದ್ರೆಯವರ ಕವನದ ಸಮರ್ಥ ವಿಶ್ಲೇಷಣೆ ನಿಮ್ಮ ಸರಳ ಸುಂದರ ಶೈಲಿಯಲ್ಲಿದೆ. ಚೆ೦ದಾಗಿದೆ.

Anil said...

ಸುನಾಥರೆ,
ನಿಮ್ಮ ವಿಶ್ಲೇಷಣೆ ತುಂಬ ಚನ್ನಾಗಿದೆ.

>> ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
...
ಈ ನುಡಿಯನ್ನ ಓದುವಾಗ ಭಗವದ್ಗೀತೆಯ ’ಕಾಲೋsಸ್ಮಿ ಲೋಕಕ್ಷಯಕೃತ್’ ನೆನಪಾಯಿತು!

ಒಳ್ಳೆಯ ಕವನವನ್ನ ಅರ್ಥ ಸಮೇತ ಓದಿಸಿದ್ದಕ್ಕೆ ಥ್ಯಾಂಕ್ಸ್ ನಿಮಗೆ.

ಇದನ್ನ ಓದ್ತಿದ್ದಾಗ ತುಂಬ ಹಿಂದೆ thatskannada ದಲ್ಲಿ ಓದಿದ್ದ ನಾಗ ಐತಾಳರ ಬರಹವೊಂದು ನೆನಪಾಯಿತು. ಹೆಕ್ಕಿದಾಗ ಇಲ್ಲಿ (http://tinyurl.com/mva59p) ಸಿಕ್ಕಿತು. ನೋಡಿರದಿದ್ದಲ್ಲಿ ನೋಡಿರಿ. ಹಾರುವ ಹಕ್ಕಿ ಬೇಂದ್ರೆ, ಪುತಿನ ಹಾಗೂ ಕುವೆಂಪುರವರಿಗೆ ಹೇಗೆ ಕಂಡಿದೆ ಎನ್ನುವದನ್ನ ಚನ್ನಾಗಿ ಹೇಳಿದ್ದಾರೆ.

-
ಅನಿಲ

ಶಿವಪ್ರಕಾಶ್ said...

ಸುನಾಥ ಅವರೇ,
ನಿಮ್ಮ ಬ್ಲಾಗಿನಲ್ಲಿ ಹಕ್ಕಿಯನ್ನು ತುಂಬಾ ಚನ್ನಾಗಿ ಹಾರಡಿಸಿದ್ದಿರ.
ಕವನ ಮತ್ತು ನಿಮ್ಮ ವಿವರಣೆ ತುಂಬಾ ಸೊಗಸಾಗಿದೆ.
ಧನ್ಯವಾದಗಳು

sunaath said...

ಉಮೇಶ,
ಧನ್ಯವಾದಗಳು.
ನೀವು ಹೇಳೋದು ಸರಿ. ಇದು ಸಾಮಾನ್ಯ ಹಕ್ಕಿ ಅಲ್ಲ ನೋಡರಿ. ಅನಂತ ಕಾಲ ಹಾರೋ ಅಂಥಾ ಹಕ್ಕಿ ಇದು!

sunaath said...

ಪರಾಂಜಪೆ,
ಧನ್ಯವಾದಗಳು.

sunaath said...

ಅನಿಲ,
ನೀವು ಕೊಟ್ಟ ಕೊಂಡಿಯಲ್ಲಿ ನಾಗ ಐತಾಳರ ಲೇಖನ ಓದಿದೆ.
ಅವರು ವಿವರಿಸಿದ ಮೂರು ಚಿತ್ರಗಳನ್ನು ಕಂಡು ಖುಶಿಯಾಯಿತು. ಅದಕ್ಕಾಗಿ ನಿಮಗೆ ಧನ್ಯವಾದಗಳು. ಅಲ್ಲದೆ,
‘ಕಾಲೋsಸ್ಮಿ ಲೋಕಕ್ಷಯಕೃತ್’ ನೆನಪಿಸಿದ್ದಕ್ಕಾಗಿ ಮತ್ತೆ ಧನ್ಯವಾದಗಳು.

sunaath said...

ಶಿವಪ್ರಕಾಶ,
ಹಾರಾಡಲು ಜೊತೆಗೂಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು!

Ittigecement said...

ಸುನಾಥ ಸರ್.....

ಬೇಂದ್ರೆಯವರ ಪ್ರತಿಭೆಯ ಬಗೆಗೆ ಮೂಕನಾಗಿದ್ದೇನೆ...

ಧಾಟಿಯಿಲ್ಲದೆಯೂ ..
ಸುಮ್ಮನೆ ದೊಡ್ಡದಾಗಿ ಓದಿದೆ...
ಎಷ್ಟೋಂದು ಲಯ ಇದೆ ಸರ್ ಅದರಲ್ಲಿ..!!

ಇನ್ನು ಅದರ ಅರ್ಥ ವಿವರಣೆ ಓದಿ ಬೆರಗಾಗಿ ಹೋಗಿದ್ದೇನೆ....

" ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ?"

wahh...!!

ಇದರ ದೋಷಗಳ ಬಗೆಗೆ ನೀವು ತಿಳಿಸಿದಾಗಲೇ ಗೊತ್ತಾದದ್ದು...

ನಿಮಗೆ ನನ್ನ ನಮನ...

Keshav.Kulkarni said...

ಸುನಾಥ,

ತುಂಬ ಚೆನ್ನಾಗಿ ಬರೆದಿದ್ದೀರಿ. ಕವನದ ಬಗ್ಗೆ ಹೊಸ ಆಯಾಮಗಳನ್ನು ತೋರಿಸಿದ್ದೀರಿ.

ಈ ಕವನವನ್ನು ಬೇಂದ್ರೆ ಸಾಹಿತ್ಯ ಸಮ್ಮೇಳನದಲ್ಲಿ ಕೈಯಾಡಿಸುತ್ತಾ ಓದಿ ಎಲ್ಲರನ್ನೂ ದಂಗು ಬಡಿಸಿದ ಇತಿಹಾಸವನ್ನೂ ಬರೆದಿದ್ದರೆ ಚೆನಾಗಿತ್ತು.

ಆನಂದರಾಮ ಶಾಸ್ತ್ರಿಯವರು ಈಗ ಸ್ವಲ್ಪ ದಿನಗಳ ಕೆಳಗೆ ಈ ಕವಿತೆಯ ಬಗ್ಗೆ ತಮ್ಮ ಬ್ಲಾಗಿನಲ್ಲಿ ಬರೆದಿದ್ದಾರೆ. ಇಲ್ಲಿದೆ ಕೊಂಡಿ: http://gulige.blogspot.com/2009/06/blog-post_20.html

೧. "ಇರುಳಿರುಳಳಿದು ದಿನದಿನ ಬೆಳಗೆ" ಎನ್ನುವ ಲಯದಲ್ಲೇ ದಿನಗಳು ವರುಷಗಳಾಗುವ, ವರುಷಗಳು ಶತಮಾನಗಳಾಗುವ ಪ್ರಕ್ರಿಯೆ ಸೃಷ್ಟಿಸುತ್ತಾರೆ ಬೇಂದ್ರೆ. ಈ ಸಾಲನ್ನು ಇಂಗ್ಲೀಷಿಗೆ ಭಾಷಾಂತರ ಮಾಡಲು ಪ್ರಯತ್ನಿಸಿ, ಆಗ ಬೇಂದ್ರೆಯ ಕಾವ್ಯಶಕ್ತಿ ಗೊತ್ತಾಗುತ್ತದೆ.

೨. "ಎವೆ ತೆರೆದಿಕ್ಕುವ ಹೊತ್ತಿನ ಒಳಗೆ" ಮೊದಲ ಮೂರು ಸಾಲಿನಲ್ಲಿ ಕಾಲಹಕ್ಕಿಯ ಅಗಾಧತೆಯನ್ನು ಪರಿಚಯಿಸುತ್ತಾ ಹೋಗುವ ಕವಿಯ ಬೆರಗು ಇರುವುದು ಈ ಸಾಲಿನಲ್ಲಿ. ಕಾಲನಹಕ್ಕಿಗೂ ಪ್ರಸ್ತುತದಲ್ಲಿ (present tense) ಮಾಡಲು ಸಾಧ್ಯವಾಗುವುದು ಒಂದೇ - ಆ ಕ್ಷಣದಲ್ಲಿ ಬದುಕುವುದು! ಎವೆ ತೆರೆದಿಕ್ಕುವ ಹೊತ್ತು = ಭಾರತೀಯರ ಪ್ರಕಾರ ಅತ್ಯಂತ ಕಡಿಮೆ ಕಾಲದ ಪರಿಮಾಣ. ಅಂಥ "ಹೊತ್ತ"ಲ್ಲಿ ಕಾಲನ ಪಕ್ಷಿಯೂ ಹಾರುತ್ತಿದೆ. ಅಂದರೆ ಕ್ಷಣ ಕ್ಷಣಗಳು ಕೂಡಿ ದಿನಗಳಾಗುತ್ತದೆ, ದಿನದಿನ ಕೂಡಿ ವರುಷಗಳಾಗುತ್ತವೆ, ಶತಮಾನಗಳಾಗುತ್ತದೆ, ಕಾಲಗಳಾಗುತ್ತವೆ!

೩. "ಕರಿನೆರೆ" ಎಂದರೆ ಸುಟ್ಟುಕರಕಲಾದ ಕೂದಲು ಎಂದು ಹೊಸ ಅರ್ಥಕೊಟ್ಟಿದ್ದಾರೆ.

೪. ನೀವು ಆಫ್ರಿಕಾದ ಬಣ್ಣದ ಜನರಿಗೆ "ನಿ.." ಅಂತ ಬರೆದಿರುವುದು ತಪ್ಪು. ಅದು ಈಗ ಜನಾಂಗೀಯ ನಿಂದನೆಯ ಶಬ್ದವೆಂದು ಎಲ್ಲೆಲ್ಲೂ ಹೇಳುತ್ತಾರೆ. ಇಲ್ಲಿ ಇಂಗ್ಲಂಡೀನಲ್ಲಿ ಆ ಶಬ್ದ ಹೇಳಿದರೆ ನಮ್ಮನ್ನು ಜೈಲಿಗೆ ತಳ್ಳುತ್ತಾರೆ. ಅವರಿಗ್ ಈಗ "ಕರಿಯರು" ಎಂದೇ ಕರೆಯುತ್ತಾರೆ. ಆದ್ದರಿಂದ ದಯವಿಟ್ಟು ಆ ಶಬ್ದ ತೆಗೆದುಹಾಕಿ, ಪ್ಲೀಸ್!

ಈ ಕವಿತೆಯನ್ನು ಯುವಪೀಳಿಗೆಗೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು.

- ಕೇಶವ

shivu.k said...

ಸುನಾಥ್ ಸರ್,

ಹಕ್ಕಿ ಹಾರುತಿದೆ ನೋಡಿದಿರಾ...

ನಿಜಕ್ಕೂ ಕವನ, ಮತ್ತು ಅದರ ಸಂಪೂರ್ಣ ವಿಶ್ಲೇಷಣೆಯನ್ನು ಓದಿ ಮನಸ್ಸು ಹಕ್ಕಿಯಂತೇ ತೇಲಿದಂತಾಯಿತು...

ಕಾಲವನ್ನು ಹಾರುವ ಹಕ್ಕಿಗೇ ಹೋಲಿಸಿ ಬರೆದಿರುವ ಬೇಂದ್ರೆ ಬೇಂದ್ರೆಯವರೇ ಸಾಟಿ ಅಲ್ವಾ...

ತುಂಬಾ ಚೆನ್ನಾಗಿ ವಿಶ್ಲೇಷಿಸಿದ್ದೀರಿ....

sunaath said...

ಪ್ರಕಾಶ,
ಇದೊಂದು ಅಸಾಮಾನ್ಯ ಕವನ. ಆದರೂ ಸಹ ಇದರಲ್ಲಿ ಒಂದು ಮಹತ್ವದ ದೋಷವಿದೆ. ಎಷ್ಟು ವಿಚಿತ್ರ ಅಲ್ಲವೆ?

sunaath said...

ಕೇಶವ,
ನೀವು ಕೊಟ್ಟ ಕೊಂಡಿಗೆ ಹೋಗಿ ಆನಂದರಾಮ ಶಾಸ್ತ್ರಿಗಳ ಲೇಖನ
ಓದಿದೆ. ಕೆಲವು ಹೊಸ ಅರ್ಥಗಳು ಹೊಳೆದವು. ಬೇಂದ್ರೆಯವರ
ವೈಶಿಷ್ಟ್ಯ ಇದೇ ನೋಡಿರಿ. ಎಷ್ಟು ಅರ್ಥೈಸಿದರೂ, ಅವರ ಕವನವು ನವನವೋನ್ಮೇಶ ಅರ್ಥಶಾಲಿನೀ!
ನೀವು ಸೂಚಿಸಿದಂತೆ, ‘ನಿ..’ ಪದ ತೆಗೆದು ಹಾಕಿದ್ದೇನೆ. ಅದರ ಬದಲಾಗಿ ‘ಆಫ್ರಿಕನ್’ ಪದ ಬಳಸಿದ್ದೇನೆ.
ಧನ್ಯವಾದಗಳು.

sunaath said...

ಶಿವು,
ವರಕವಿಗೆ ವರಕವಿಯೇ ಸಾಟಿ!

sritri said...

ವೈಭವದಿಂದ ಮೆರೆದು, ನಿರ್ನಾಮವಾಗಿ ಹೋಗಿರುವ ರಾಜಮನೆತನಗಳ ಬಗ್ಗೆ ಓದುವಾಗೆಲ್ಲಾ ನನಗೆ ಈ ಕವನದ "ಸಾರ್ವಭೌಮರಾ ನೆತ್ತಿಯ ಕುಕ್ಕಿ.." ಸಾಲು ನೆನಪಾಗುತ್ತದೆ, ಕಾಕಾ. ಗಾರುಡಿಗ ಬೇಂದ್ರೆಗೆ ನಮನ!

sunaath said...

ತ್ರಿವೇಣಿ,
ಶಬ್ದಗಾರುಡಿಗನಿಗೆ ನಿನ್ನೊಡನೆ ನನ್ನದೂ ಒಂದು ನಮನ!

ಅಂತರ್ವಾಣಿ said...

ಅಂಕಲ್,
ಸುಂದರವಾದ ಕವನವನ್ನು ಚೆನ್ನಾಗಿ ಅರ್ಥವಾಗುವಂತೆ ಹೇಳಿದ್ದೀರ. ವಂದನೆಗಳು

ನನ್ನ ಒಂದು ಕವನ "ಹಕ್ಕಿ ಹಾರಬಯಸಿದೆ ತನ್ನ ಗೂಡಿಗೆ" ಬೇಂದ್ರೆಯವರ ಈ ಕವನವೇ ಸ್ಫೂರ್ತಿ!
ಇದನ್ನು ನಾನು ಭಾವಗೀತೆಯಲ್ಲಿ ಮುಂಚೆ ಕೇಳಿದ್ದೆ. ಆದರೆ ಅದು ಕಾಲಕ್ಕೆ ಹೋಲಿಸಿ ಬರೆದಿದ್ದರು ಎಂದು ಈಗ ತಿಳಿಯಿತು.
ಈ ಹಾಡು ಹಾಗು ಅವರ ಮತ್ತಷ್ಟು ಗೀತೆಗಳು ಇಲ್ಲಿವೆ.
http://www.kannadaaudio.com/Songs/Bhaavageethe/home/Naakutanti-DaRa-Bendre.php

ನನಗೂ ಅನಿಸುತ್ತದೆ ಕವನ ಬರೆಯುವಾಗ ಮನದಲ್ಲಿ ಒಂದು ’ಲಯ’ ಕಲ್ಪಿಸಿಕೊಂಡು, ಹಾಡಲು ಸುಲಭವಾಗುವಂತೆ ಬರೆದರೆ ಚೆನ್ನಾಗಿರುತ್ತದೆ ಎಂದು. ಅದೇ ರೀತಿ ನನ್ನ ಪ್ರತಿಯೊಂದು ಕವನವನ್ನು ಬರೆಯುವ ಪ್ರಯತ್ನ ಮಾಡುದ್ದೇನೆ.

sunaath said...

ಜಯಶಂಕರ,
ನೀವು ಸೂಚಿಸಿದ ಕೊಂಡಿಯಲ್ಲಿ ಬೇಂದ್ರೆಯವರ ಕವನಗಳನ್ನು ಕೇಳಿ
ಖುಶಿಯಾಯಿತು. ಅನಂತಸ್ವಾಮಿ ಹಾಗೂ ಕಸ್ತೂರಿಯವರು ಭಾವಗೀತೆಗಳನ್ನು ಸೊಗಸಾಗಿ ಹಾಡಿದ್ದಾರೆ. ಧನ್ಯವಾದಗಳು.

ಭಾವಗೀತೆಗಳೇ ಆಗಲಿ, ನವ್ಯಕವನಗಳೇ ಆಗಲಿ, ಲಯವಿದ್ದರೇ ಕವನವಾಗುತ್ತದೆ. ನಿಮ್ಮ ಪ್ರಯತ್ನಕ್ಕೆ ಶುಭ ಹಾರೈಸುತ್ತೇನೆ. ಬೇಗನೇ ನಿಮ್ಮ ಕವನಗಳು ಬ್ಲಾ^ಗಿನಲ್ಲಿ ಬರಲಿ.

ಬಿಸಿಲ ಹನಿ said...

"‘ಹಕ್ಕಿ ಹಾರುತಿದೆ ನೋಡಿದಿರಾ?’" ಕವನದ ಬಗೆಗಿನ ನಿಮ್ಮ ವಿಶ್ಲೇಷಣೆ ಅದ್ಭುತವಾಗಿದೆ. ಹಾಗೇಯೇ ಬೇಂದ್ರೆಯವರು ಬೆಳಗಾವಿ ಸಮ್ಮೇಳನದಲ್ಲಿ ಈ ಕವನ ಓದುತ್ತಿರಬೇಕಾದರೆ ಬ್ರಿಟಿಷ್ ಅಧಿಕಾರಿಯೊಬ್ಬರು ಆ ಓದಿನ ಓಘಕ್ಕೆ ಎದ್ದು ನಿಂತುಕೊಡರೆಂದು ಕೇಳಿದ್ದೇನೆ. ಇದು ನಿಜವೆ?

Godavari said...

ಸುನಾಥ್ ಅವರೇ,

ಬಹಳ ಸುಂದರವಾಗಿ ಈ ಕವಿತೆಯನ್ನು ವಿವರಿಸಿದ್ದೀರಿ. ಎಲ್ಲ ದೃಷ್ಟಿ ಕೋನಗಳಿಂದಲೂ ಈ ಕವಿತೆಯನ್ನು ಗ್ರಹಿಸುವಂತೆ ಬರೆದಿದ್ದೀರಿ. ಪ್ರಸ್ತುತ ಕವಿತಾ ಪಾಠವನ್ನು ಓದಿ ತುಂಬಾ ಅನಂದವಾಯಿತು.

ಮಾಸ್ತಿಯವರು ನಾದಲೀಲೆಗೆ ಬರೆದ ಮುನ್ನುಡಿಯಲ್ಲಿ ಬೇಂದ್ರೆಯವರು 'ಹಕ್ಕಿ ಹಾರುತಿದೆ ನೋಡಿದಿರಾ' ಕವನವನ್ನು ಬೆಳಗಾವಿಯ ಸಾಹಿತ್ಯ ಸಮ್ಮೇಳನದಲ್ಲಿ ಹೇಗೆ ಓದಿದ್ದರು ಎಂಬುದಾಗಿ ಉಲ್ಲೇಖಿಸುತ್ತಾರೆ. ಈ ಕವಿತೆಯ ಹಿನ್ನಲೆಯ ಕುರಿತು ಕುರ್ತುಕೋಟಿಯವರು ತಮ್ಮ ಒಂದು ಲೇಖನದಲ್ಲಿ ಬರೆದದ್ದನ್ನು ಓದಿದ್ದೇನೆ. ಆ ಸಂಜೆ ಬೇಂದ್ರೆಯವರಿಗೆ ಒಂದು ಸಮಾರಂಭಕ್ಕೆ ಹೋಗಬೇಕಾಗಿತ್ತಂತೆ. ಸಂಜೆ ಐದಕ್ಕೆ ಎದ್ದರಾಯಿತು ಎಂದು ಮಧ್ಯಾಹ್ನ ಮೂರು ಘಂಟೆಗೆ ಗಡಿಯಾರ ನೋಡಿಕೊಂಡು ಮಲಗಿದರಂತೆ. ಕಣ್ಣು ಮುಚ್ಚಿದ್ದೊಂದೇ ಗೊತ್ತು, ನಿದ್ದೆ ತಿಳಿದು ಎದ್ದಾಗ ಗಡಿಯಾರದಲ್ಲಿ ಸರಿಯಾಗಿ ಐದಾಗಿತ್ತಂತೆ! 'ಎವೆ ತೆರೆದಿಕ್ಕುವ ಹೊತ್ತಿನ ಒಳಗೆ| ಹಕ್ಕಿ ಹಾರುತಿದೆ ನೋಡಿದಿರಾ' ಎಂಬ ಸಾಲುಗಳ ಮೂಲ ಈ ಸಂಗತಿಯಲ್ಲಿದೆ. ಇಲ್ಲಿ ಹಾರುವ ಹಕ್ಕಿ ಕಾಲವಾದರೆ, 'ಎವೆತೆರೆದಿಕ್ಕುವ ಹೊತ್ತು' ಕಾಲವೇ. ಆದರೆ ಎವೆತೆರೆದಿಕ್ಕುವ ಹೊತ್ತಿದೆಯಲ್ಲ ಅದು ಕಾಲದ ಅಮೂರ್ತ ಪರಿಕಲ್ಪನೆ. ಆ ಸಂಜೆ ತನಗಾದ ಅಮೂರ್ತದ ಅನುಭವವನ್ನು ಕವಿ, ಈ ಸಾಲಿನಲ್ಲಿ ಪ್ರತ್ಯಕ್ಷೀಕರಿಸಿದ್ದಾರೆ.

ಆದರೆ ನೀವು ಹೇಳಿದಂತೆ ಕಾಲದ ವಿರಾಟ್ ಸ್ವರೂಪವನ್ನು ತೋರಿಸುವಲ್ಲಿ ಈ ಕವಿತೆ ಎಲ್ಲೋ ಸೋಲುತ್ತದೆ ಎಂದು ಹೇಳಬಹುದು. ಕುಮಾರವ್ಯಾಸನು ಕಾಲವನ್ನು ಬಣ್ಣಿಸುವಾಗ (ಕುಮಾರವ್ಯಾಸ ವರ್ಣಿಸುವುದು ಭಗದತ್ತನ ಆನೆಯನ್ನು, ಅದು ಕಾಲನ ವರ್ಣನೆಯಂತೆ ತೋರುತ್ತದೆ.) 'ಕೈಕಾಲ್ ಮೂಡಿತೋ ನಭಕೆ' ಎಂದು ಉದ್ಘರಿಸುತ್ತಾನೆ. ಕುಮಾರವ್ಯಾಸನ ಈ ಪ್ರಯೋಗದಷ್ಟು ಪರಿಣಾಮಕಾರಿಯಾಗಿ 'ಹಕ್ಕಿ ಹಾರುತಿದೆ ನೋಡಿದಿರಾ' ಕವನದ ಸಾಲುಗಳು ಕಾಲನ ವಿರಾಟತೆಯನ್ನು ಕಟ್ಟಿಕೊಡುವುದಿಲ್ಲ.

ಧನ್ಯವಾದಗಳು.
-ಗೋದಾವರಿ

ಜಲನಯನ said...

ಸುನಾಥ್ ಸರ್,
ಸುಪ್ತ ಭಾವನೆಗಳ ವ್ಯಕ್ತಗೊಳಿಸುವ ಶಕ್ತಿ, ಚಿಲುಮೆಗಳು ಬೇಂದ್ರೆಯವರ ಕೃತಿಗಳು...
ಅವನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ನಮಗೆ ನಿಲುಕದ್ದು ಬಿಡಿ...ಇಂತಹ ಅಮೂಲ್ಯ ಕೃತಿಯೊಂದನ್ನು ಹಣ್ಣಿನ ಎಸಳುಗಳ ಬಿಡಿಸಿದಂತೆ ವಿವರಿಸಿದ್ದೀರ ಧನ್ಯವಾದಗಳು.

sunaath said...

ಉದಯ,
ಬ್ರಿಟಿಶ್ ಅಧಿಕಾರಿಯು ಎದ್ದು ನಿಂತ ವಿಷಯ ನನಗೆ ಗೊತ್ತಿಲ್ಲ.
ಆದರೆ ರಾಜಸೇವಾಸಕ್ತ ಬಿ.ಎಮ್.ಶ್ರೀಕಂಠಯ್ಯನವರು ಮಾತ್ರ,
”ಸಾರ್ವಭೌಮರಾ ನೆತ್ತಿಯ ಕುಕ್ಕಿ" ಎನ್ನುವ ಸಾಲನ್ನು ಕೇಳಿದಾಗ, ಮುಲುಗಿದರು ಎಂದು ಒದಿದ್ದೇನೆ.

sunaath said...

ಗೋದಾವರಿ,
ಬೇಂದ್ರೆಯವರ ಕವಿತ್ವ, ಕಾವ್ಯಸ್ಫೂರ್ತಿಯ ಬಗೆಗೆ ವಿಶೇಷ ಮಾಹಿತಿ
ನೀಡಿದ್ದೀರಿ. ಧನ್ಯವಾದಗಳು.
ಕುಮಾರವ್ಯಾಸನು ‘ಕಾಲ’ನಿಗೆ ನೀಡಿದ ಉಪಮೆ ಸುಂದರವಾಗಿದೆ.
ಅದಕ್ಕೂ ಸಹ ನಿಮಗೆ ಧನ್ಯವಾದಗಳು.

sunaath said...

ಜಲನಯನ,
ನಿಮ್ಮ ಸೌಜನ್ಯ ಪ್ರಶಂಸನೀಯವಾದದ್ದು. ಬೇಂದ್ರೆಯವರ ಕವನವನ್ನು ಸಿಹಿ ಹಣ್ಣಿಗೆ ಹೊಲಿಸಿದರೆ, ತೊಳೆ ಬಿಡಿಸುವದು ಕಷ್ಟದ ಕೆಲಸವಲ್ಲ. ಆದರೆ ಬಿಡಿಸಿದಷ್ಟೂ ತೊಳೆಗಳು ಸಿಗುತ್ತಲೇ
ಹೋಗುತ್ತವೆ!

ಜಲನಯನ said...

ಸುನಾಥ್ ಸರ್
ಅದೇ ಅಲ್ಲವೇ ಆ ಹಣ್ಣಿನ ವೈಶಿಷ್ಠ್ಯ...ಅದರ ಕತೃವಿನ ಸಾಮರ್ಥ್ಯ....ಇನ್ನು ಬಿಡಿಸಿಡುವರು ಇದ್ದರೆ ....ಆಹಾ..ಏನು..ಮಜಾ..!!! ಸವಿದು ನಮಗನ್ನಿಸಿದ್ದನ್ನು ಹಂಚಿಕೊಳ್ಳುತ್ತೇವೆ.

ಶ್ರೀನಿವಾಸ ಮ. ಕಟ್ಟಿ said...

ಬಹಳ ದಿನಗಳ ನಂತರ ಸಲ್ಲಾಪಕ್ಕೆ ಬಂದಿರುವೆ. ಏನೇನೋ ಜೀವನ ವ್ಯಾಪಾರಗಳು. ಬೇಂದ್ರೆಯವರ ಹಕ್ಕಿಯನ್ನು ಬಹಳ ಚೆನ್ನಾಗಿ ಹಾರಿಸಿರುವಿರಿ. ಈ ಹಕ್ಕಿಗೆ ಆದಿ-ಅಂತ್ಯ ಇಲ್ಲವೇ ಇಲ್ಲ. ಹಾಗೆ, ಬೇಂದ್ರೆಯವರ ಕಾವ್ಯ. ಅವರು ದೃಷ್ಟಾರರು. ನೀವು ಇನ್ನೂ ಸೂಕ್ಷ್ಮವಾಗಿ ನೋಡಿದರೆ, ಈ ಕವಿತೆಯಲ್ಲಿ ಬ್ರಹ್ಮಾಂಡದ ರಹಸ್ಯವೇ ಅಡಗಿದೆ.

sunaath said...

ಕಟ್ಟಿಯವರೆ,
ವಿದೇಶಕ್ಕೆ ಹಾರಿದ ಹಕ್ಕಿ ಈಗ ಗೂಡಿಗೆ ಮರಳಿ ಮಧುರ ಸಲ್ಲಾಪಕ್ಕೆ ಅಣಿಯಾಗಿದ್ದು ಸಂತೋಷದ ಸಂಗತಿ. ನಿಮಗೆ ಸುಸ್ವಾಗತ.

ಸಿಂಧು sindhu said...

ಸುನಾಥ,

ಇದು ನನಗೂ ತುಂಬ ಇಷ್ಟವಾದ ಕವಿತೆ. ಇದರ ಕ್ಯಾಸೆಟ್ ರೂಪ ಕೇಳಿ ಮರುಳಾಗಿದ್ದೆ ನಾನು ಚಿಕ್ಕವಳಿದ್ದಾಗಿನಿಂದ.
ಇಲ್ಲಿ ಓದಿ, ಅದರ ಅಂತಃಸತ್ವವನ್ನು ನಿಮ್ಮ ಮಾತುಗಳಲ್ಲಿ ಸವಿದು ಮನಕ್ಕೆ ಮುದವಾಗಿದೆ.

ಕವಿಯ ದೋಷದ ಬಗ್ಗೆ ಮಾತನಾಡಲು ನಾನು ಹಸುಳೆ.
ಅದು ದೋಷವಿರಲೂಬಹುದು.. ಆದರೆ ಅದು ಕವಿ ಅನುಭವಿಸಿದ ಕಾಲಮಿತಿಯಲ್ಲಿನ ಬೆರಗನ್ನು ಮಾತ್ರ ಕಟ್ಟಿಕೊಟ್ಟ ವಿಷೇಷವೂ ಇರಬಹುದು. ಇದು ನನ್ನ ಪರಿಮಿತ ತಿಳುವಳಿಕೆಯ ಅನಿಸಿಕೆ.

ಓದಿ ತುಂಬಾ ಖುಶಿಯಾಗಿದೆ.
ಪ್ರೀತಿಯಿಂದ
ಸಿಂಧು

sunaath said...

ಸಿಂಧು,
ಕಾಲದ ಹಾರಾಟದ ಬೆರಗನ್ನು ಇಷ್ಟು ಚೆಂದವಾಗಿ ತೋರಿಸುವ ಕವನ ಮತ್ತೊಂದಿರಲಿಕ್ಕಿಲ್ಲ. ಆದರೆ ಕಾಲದ ಮಹಾಬಲವನ್ನು ತೋರಿಸುವಲ್ಲಿ ಈ ಕವನ ವಿಫಲವಾಗಿದೆ ಎನ್ನುವದು ನನ್ನ ವೈಯಕ್ತಿಕ ಭಾವನೆ.
ಈ ಲೇಖನದಿಂದ ನಿಮಗೆ ಸಂತೋಷವಾಗಿದ್ದರೆ, ಅದು ನನಗೂ ಸಂತೋಷವೇ.
ವಂದನೆಗಳು.

ಚಂದ್ರಕಾಂತ ಎಸ್ said...

ಸುನಾಥ್ ಸರ್
ತುಂಬಾ ದಿನಗಳ ನಂತರ ಬರುತ್ತಿದ್ದೇನೆ. ನಿಮ್ಮ ಇನ್ನೊಂದು ಕವನದ ವಿಶ್ಲೇಷಣೆ ಬಂದ ಮೇಲೆ ಬಂದಿರುವೆ. ಆದರೂ ಕವನದ ವಿಶ್ಲೇಷಣೆಯ ಸ್ವಾರಸ್ಯವೇನೂ ಕಡಿಮೆಯಾಗಿಲ್ಲ. ಬದಲಿಗೆ ಇತರರ ಕಾಮೆಂಟ್ ಗಳನ್ನು ಓದುವ ಅನುಕೂಲವೂ ಒದಗಿದೆ.

ಈ ಕವನ ಕಾಲದ ವಿರಾಟ್ ಸ್ವರೂಪ ತೋರಿಸುವ ಕೆಲವೇ ಶ್ರೇಷ್ಟ ಕವನಗಳಲ್ಲಿ ಒಂದು.ಉಅಥಾಪ್ರಕಾರ ಗಾರುಡಿಗ ಕವಿ ಬೇಂದ್ರೆಯವರ ಎಲ್ಲ ಗಾರುಡಿಯನ್ನೂ ಇದು ಒಳಗೊಂಡಿದೆ.ಕಾಲದ ಮಹಾಬಲವನ್ನು ತೋರಿಸುವಲ್ಲಿ ವಿಫಲವಾಗಿದೆ ಎಂದಿರುವಿರಿ. ಆದರೆ ನನಗೆ ಹಾಗನಿಸಿಲ್ಲ. ಕಾಲ ಎನ್ನುವುದು ನಿರ್ದಯಿ, ನಿರ್ಲಿಪ್ತ, ನಿಶ್ಪಕ್ಷ ಮನೋಭಾವ ಹೊಂದಿರುವಂತದ್ದು, ಪ್ರತಿಯೊಬ್ಬರಿಗೂ "ತಮ್ಮ ಕಾಲ" ಇರುತ್ತದೆಯೇ ಹೊರತು, ಕಾಲಕ್ಕೆ ಅಂತಹ ನಿರ್ಬಂಧವಿಲ್ಲ.ಕಾಲ ಎಂತಹ ಮನುಷ್ಯನ ಅಹಂಕಾರವನ್ನೂ ಚೂರುಚೂರು ಮಾಡುತ್ತದೆ. ಆಗ ಆ ಮನುಷ್ಯನಿಗೆ ಕಾಲದ ಮಹತ್ವ ತಿಳಿಯುತ್ತದೆ.

ಆದಿಪುರಾಣದಲ್ಲಿ ಭರತ ಚಕ್ರವರ್ತಿ ಇಡೀ ಭೂಮಂಡಲವನ್ನು ಗೆದ್ದು ತನ್ನಂಥವರು ಅದುವರೆಗೂ ಯಾರೂ ಇರಲೇ ಇಲ್ಲವೆಂಬ ಅಹಂಕಾರದಲ್ಲಿ ಮುಳುಗಿ ಅದನ್ನು ಸಾರ್ವಕಾಲಿಕವಾಗಿ ಪ್ರಪಂಚಕ್ಕೆಲ್ಲಾ ತಿಳಿಸಬೇಕೆಂದು ವಿಜಯಾರ್ಧಪರ್ವತದ( ಅತಿ ಎತ್ತರವಾದ ಪರ್ವತ) ಮೇಲೆ ತನ್ನ ಹೆಸರು ಕೆತ್ತಿಸಲು ಹೋಗುತ್ತಾನೆ. ಅಲ್ಲಿ ಅವನು ಕಾಣುವುದೇನು? ತನ್ನ ಹೆಸರು ಕೆತ್ತಿಸಲು ಚೂರೂ ಜಾಗವಿಲ್ಲದಂತೆ ತನಗಿಂತ ಹಿಂದೆ ಗೆದ್ದ ರಾಜರುಗಳ ಹೆಸರು ಪರ್ವತದ ತುಂಬೆಲ್ಲಾ ಆವರಿಸಿದೆ. ಇದು ಕಾಲದ ಮಹತ್ವ. ಏನೂ ಹೇಳದೆ ಎಲ್ಲದರ ಅರಿವೂ ಮಾಡಿಸುವುದು.
( ಈ ಪ್ರಸಂಗ ವಿವರಿಸಿರುವುದು ಎಷ್ಟರ ಮಟ್ಟಿಗೆ ಸರಿಯೋ ಗೊತ್ತಿಲ್ಲ )

sunaath said...

ಚಂದ್ರಕಾಂತಾ,
ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ. ದೃಷ್ಟಿಕೋನಗಳು ವಿಭಿನ್ನವಾಗುವದು ಸ್ವಾಭಾವಿಕ.
ಇನ್ನು ಕಾಲಮಹಿಮೆಯ ಬಗೆಗೆ ನೀವು ಹೇಳಿದ ಕತೆ ಸರಿಯಾಗಿಯೇ ಇದೆ. ಈ ಕತೆಯನ್ನು ಓದಿದ ಬಳಿಕ ನನಗೆ OZYMANDIS ಎನ್ನುವ ಆಂಗ್ಲ ಕವನವೊಂದರ
ನೆನಪಾಯಿತು. ಆ ಕವನದ ಕೊನೆಯ ಸಾಲುಗಳು ಹೀಗಿವೆ:

Of that colossal wreck, boundless and bare,
The lone and level sands stretch far away.

ಚಂದ್ರಕಾಂತ ಎಸ್ said...

ಸುನಾಥ್ ಸರ್

ನಿಮ್ಮ ಲೇಖನಕ್ಕೆ ಪ್ರತಿಕ್ರಿಯೆ ಬರೆಯುವಾಗ ಮೊದಲು ನೆನಪಿಗೆ ಬಂದದ್ದು ಓಜಮಾಂಡಿಯೋಸ್ ಕವನವೇ. ಆದರೆ ಅದರ ಉಚ್ಛಾರ ಸರಿ ಇದೆಯೋ ಇಲ್ಲವೋ ಎಂಬ ಅನುಮಾನ ಮತ್ತು ಮರೆತ ಕವಿಯ ಹೆಸರು ಈ ಕಾರಣಗಳಿಂದ ಅದನ್ನು ಬರೆಯಲಿಲ್ಲ. ನೀವು ಅದನ್ನು ಪ್ರಸ್ತಾಪಿಸಿದ್ದು ತುಂಬಾ ಖುಷಿ ತಂದಿತು. ಆನರ್ಸ್/ಎಮ್.ಎ. ಓದುತ್ತಿದ್ದಾಗ ನಮಗೆ ಜಿ.ಎಸ್. ಶಿವರುದ್ರಪ್ಪನವರು ಈ ಕವನವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದರು. ಈಗಲೂ ಆ ಮಣ್ಣಿನ ರಾಶಿ ಕಣ್ಣ ಮುಂದೆ ಬಂದಂತಾಗುತ್ತದೆ.

Anonymous said...

Nice blog, very well written, I've seen many praising Da. Ra. Bendre, without understanding any of his poems. They copy and paste in their blog, but only when you share the meaning behind this, will you understand the greatness of the poet.

sunaath said...

Anonymus,
ಧನ್ಯವಾದಗಳು.

ಕನ್ನಡ ಸಂಪುಟ said...

ಪದ್ಯದಲ್ಲಿರುವ ದಿಗ್ಮಂಡಲ ಪದ್ಯ ಬಳಕೆ ಸರಿಯಾಗಿ ಇದೆಯೋ

sunaath said...

ಧನ್ಯವಾದಗಳು, Unknownರೆ. ವ್ಯಾಕರಣದ ಮೇರೆಗೆ, ‘ದಿಙ್ಮಂಡಲ’ ಎನ್ನುವುದು ಸರಿಯಾದ ಪದ. ಆದರೆ ಬೇಂದ್ರೆಯವರು ‘ದಿಗ್ಮಂಡಲ’ ಎನ್ನುವ ಪದವನ್ನು ಪ್ರಯೋಗಿಸಿದ್ದಾರೆ. ಏಕಿರಬಹುದು? ಬಹುಶ: ‘ದಿಕ್’ ಎನ್ನುವ ಪದವನ್ನು highlight ಮಾಡಲು ಅವರು ಹಾಗೆ ಬರೆದಿರಬಹುದು. ಇನ್ನು ನಾನಂತೂ ಯಾವುದೇ ಕವಿಯ ಕವನಗಳನ್ನು ನಕಲು ಮಾಡುವಾಗ ‘ಮಖ್ಖೀಕಾ ಮಖ್ಖೀ’ ಮಾಡಬೇಕು ಎನ್ನುವ ಅಭಿಪ್ರಾಯ ಹೋದಿರುವದರಿಂದ, ‘ದಿಗ್ಮಂಡಲ’ ಎಂದೇ ಬರೆದಿದ್ದೇನೆ.

Shashidhara Singh said...

Dhanyosmi

sunaath said...

ಧನ್ಯವಾದಗಳು, singhvss@108!

Unknown said...

ಧನ್ಯವಾದಗಳು ಸುಂದರ ವಿಶ್ಲೇಷಣೆ

sunaath said...

ಧನ್ಯವಾದಗಳು, Unknownರೆ!