Saturday, July 25, 2009

ಗ್ರಹಣರಹಸ್ಯ

“ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ ಹಾಗೂ ಶನಿ ಇವರು ಆಕಾಶದಲ್ಲಿ ಸಂಚರಿಸುವ ದೇವತೆಗಳು ; ರಾಹು ಹಾಗೂ ಕೇತು ಇವರು ರಾಕ್ಷಸರು. ಇವರಲ್ಲಿ ಒಬ್ಬನಿಗೆ ರುಂಡ ಮಾತ್ರ ಇದೆ. ಮತ್ತೊಬ್ಬನಿಗೆ ಮುಂಡ ಮಾತ್ರ ಇದೆ. ಗ್ರಹಣಕಾಲದಲ್ಲಿ ಸೂರ್ಯನನ್ನು ಅಥವಾ ಚಂದ್ರನನ್ನು ಈ ರಾಕ್ಷಸರಲ್ಲಿ ಒಬ್ಬನು ಹಿಡಿದುಕೊಳ್ಳುತ್ತಾನೆ ಎನ್ನುವ ಪಾರಂಪರಿಕ ನಂಬಿಕೆ ಭಾರತೀಯರಲ್ಲಿ ಇದೆ.”
ಆದುದರಿಂದ ಭಾರತೀಯರು ಮೂಢರು ಎನ್ನುವ ಒಂದು ಗ್ರಹಿಕೆ ಪಾಶ್ಚಾತ್ಯರಲ್ಲಿ ಹಾಗೂ ಅನೇಕ ಭಾರತೀಯರಲ್ಲಿ ಇದೆ. ಆದರೆ ಈ ಗ್ರಹಿಕೆ ಪೂರ್ವಾಗ್ರಹಪೀಡಿತವಾದಂತಹ ಗ್ರಹಿಕೆ.

ಭಾರತೀಯರ ಈ ನಂಬಿಕೆಯನ್ನು ಸ್ವಲ್ಪ ಲಕ್ಷ್ಯಗೊಟ್ಟು ಪರೀಕ್ಷಿಸಿರಿ. ಗ್ರಹಣಸಮಯದಲ್ಲಿ ಸೂರ್ಯನನ್ನು ಅಥವಾ ಚಂದ್ರನನ್ನು ರಾಹು ಅಥವಾ ಕೇತು ಎನ್ನುವ ರಾಕ್ಷಸನು ಹಿಡಿಯುತ್ತಾನೆ ಎನ್ನುವದು ಇಲ್ಲಿರುವ ನಂಬಿಕೆ. ಭಾರತೀಯರಲ್ಲಿ ಮೂಢನಂಬಿಕೆಯೆ ಇದ್ದರೆ, ಒಬ್ಬನೇ ರಾಕ್ಷಸನು ಇವರನ್ನು ಬೆನ್ನಟ್ಟಬಹುದಿತ್ತಲ್ಲ? ಇಬ್ಬರು ಯಾಕೆ ಬೇಕು ಎನ್ನುವ ಪ್ರಶ್ನೆ ಬರುತ್ತದೆ. ಅಲ್ಲದೆ, ಯಾವ ಗ್ರಹಣದಲ್ಲಿ ಯಾವ ರಾಕ್ಷಸನು ಈ ಬೆನ್ನಟ್ಟುವ ಕಾರ್ಯ ಮಾಡುತ್ತಾನೆ, ಅವನು ರಾಹುವೊ ಅಥವಾ ಕೇತುವೊ ಎನ್ನುವದನ್ನು ಭಾರತೀಯ ಪಂಚಾಂಗಗಳಲ್ಲಿ ನಿಖರವಾದ ಕಾಲಮಾನದೊಡನೆ ಹೇಳಲಾಗುತ್ತದೆ. ಅರ್ಥಾತ್ ಭಾರತೀಯರಿಗೆ ಈ ರಾಕ್ಷಸರು ಯಾರು ಅನ್ನುವ ಕಲ್ಪನೆ ಸ್ಪಷ್ಟವಾಗಿತ್ತು.

ಖಗೋಲಶಾಸ್ತ್ರವು ಸಾವಿರಾರು ವರ್ಷಗಳಷ್ಟು ಹಳೆಯದು. ಭೂಮಿ ಹಾಗೂ ಇತರ ಗ್ರಹಗಳು ಸೂರ್ಯನ ಸುತ್ತಲೂ ಪರಿಭ್ರಮಿಸುತ್ತವೆ ಎನ್ನುವ ಮಾತನ್ನು ಮೊದಲು ದಾಖಲಿಸಿದವನು ಮೊದಲನೆಯ ಆರ್ಯಭಟನು (ಕ್ರಿ.ಶ. ೪೭೬-೫೫೦). ಭೂಮಿಯ ಸುತ್ತಳತೆ ಹಾಗೂ ಸೂರ್ಯನಿಂದ ಭೂಮಿಯ ದೂರವನ್ನು ಆರ್ಯಭಟನು ಅತ್ಯಂತ ನಿಖರವಾಗಿ ತಿಳಿಸಿದ್ದಾನೆ.
ಆರ್ಯಭಟನ ನಂತರ ಒಂದು ಸಾವಿರ ವರ್ಷಗಳ ಬಳಿಕ ಕೋಪರ್ನಿಕಸ್(ಕ್ರಿ.ಶ. ೧೪೭೩- ಕ್ರಿ.ಶ. ೧೫೪೩) ಎನ್ನುವ ಪೋಲ್ಯಾಂಡಿನ ಶಾಸ್ತ್ರಜ್ಞನು ಭೂಮಿಯ ಪರಿಭ್ರಮಣವನ್ನು ಯುರೋಪಿನಲ್ಲಿ ಸಾರಿದನು.

ಖಗೋಲಶಾಸ್ತ್ರದ ವಿದ್ಯಾರ್ಥಿಗಳಿಗೆಲ್ಲ ಗೊತ್ತಿರುವಂತೆ, ಚಂದ್ರನು ಭೂಮಿಯ ಸುತ್ತಲೂ ತಿರುಗುವ ಕಕ್ಷೆಯು, ಭೂಮಿಯು ಸೂರ್ಯನ ಸುತ್ತಲೂ ತಿರುಗುವ ಕಕ್ಷೆಯನ್ನು, ಎರಡು ಬಿಂದುಗಳಲ್ಲಿ ಛೇದಿಸುತ್ತದೆ. ಇವೆರಡೂ ಕಾಲ್ಪನಿಕ ಬಿಂದುಗಳು. ಪರಿಭ್ರಮಣೆ ಮುಂದುವರೆದಂತೆಲ್ಲ, ಈ ಬಿಂದುಗಳೂ ಸಹ ಸರಿಯುತ್ತಲೆ ಹೋಗುತ್ತವೆ. ಭೂಮಿಯು ಸೂರ್ಯನ ಸುತ್ತಲೂ ತಿರುಗುವ ದಿಕ್ಕಿಗೆ ವಿರುದ್ಧವಾದ ದಿಕ್ಕಿನಲ್ಲಿ ಈ ಬಿಂದುಗಳು ಸರಿಯುತ್ತವೆ.

ಈಗ ಈ ಬಿಂದುಗಳಲ್ಲಿ ಮೊದಲನೆಯ ಬಿಂದುವಿಗೆ ನಮ್ಮ ಶಾಸ್ತ್ರಜ್ಞರು ಕೊಟ್ಟ ಹೆಸರು ರಾಹು ; ಎರಡನೆಯ ಬಿಂದುವಿನ ಹೆಸರು ಕೇತು. ‘ಈ ಬಿಂದುಗಳು ರಾಕ್ಷಸರು ಏಕೆ?’ ಎನ್ನುವ ಪ್ರಶ್ನೆಗೆ ಅನೇಕ ಉತ್ತರಗಳಿವೆ. ಉತ್ತರವನ್ನು ಹುಡುಕುವ ಮೊದಲು ನಾವು ಇನ್ನಿಷ್ಟು ಮಾಹಿತಿಗಳನ್ನು ಗಮನಿಸೋಣ.

ಮೊದಲನೆಯದಾಗಿ ಈ ಬಿಂದುಗಳ ಹೆಸರುಗಳನ್ನು ಪರೀಕ್ಷಿಸೋಣ. ಮೊದಲನೆಯ ಬಿಂದುವಿಗೆ ರಾಹು ಎಂದು ಕರೆದಿದ್ದಾರೆ. ರಾಹು ಈ ಪದದ ಅರ್ಥ Lock. ಗ್ರಹಣಸಮಯದಲ್ಲಿ ಈ ಬಿಂದುವಿನಲ್ಲಿ ಸೂರ್ಯ ಅಥವಾ ಚಂದ್ರರ ಚೈತನ್ಯಕ್ಕೆ ತಡೆ ಬೀಳುವದರಿಂದ ಈ ಬಿಂದುವಿನ ಹೆಸರು Lock ಅಥವಾ ರಾಹು.
ಎರಡನೆಯ ಬಿಂದುವಿನ ಹೆಸರು ಕೇತು. ಕೇತು ಅಂದರೆ Flag. ಮೊದಲನೆಯ ಬಿಂದುವಿಗೆ Flag ಎಂದು ಕರೆಯದೆ ಎರಡನೆಯ ಬಿಂದುವಿಗೆ Flag ಎಂದು ಕರೆಯುವ ಕಾರಣವೇನು? ಯಾಕೆಂದರೆ, ಈ ಬಿಂದುಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುವದರಿಂದ, ಮೊದಲನೆಯ ಬಿಂದು ಹಿಂದಿನಿಂದ ಚಲಿಸುತ್ತದೆ ಹಾಗೂ ಎರಡನೆಯ ಬಿಂದು ಮುಂದಿನಿಂದ ಚಲಿಸುತ್ತದೆ. ಎರಡನೆಯ ಬಿಂದುವೇ ಇಲ್ಲಿ Flag bearer. ಆದುದರಿಂದ ಇದರ ಹೆಸರು ಕೇತು ಅರ್ಥಾತ್ Flag!
ಮತ್ತೊಂದು ವಿಷಯವೆಂದರೆ ರಾಹುವಿಗೆ ರುಂಡವಿಲ್ಲ ಹಾಗೂ ಕೇತುವಿಗೆ ಮುಂಡವಿಲ್ಲ. ಈ ಎರಡೂ ಬಿಂದುಗಳು ಒಂದರ್ಥದಲ್ಲಿ Supplementary ಬಿಂದುಗಳು. ಆದುದರಿಂದಲೇ ಇವು ಅರ್ಧದೇಹಿಗಳು.

ಪಾಶ್ಚಾತ್ಯರಿಗಿಂತ ಸಾವಿರ ವರ್ಷಕ್ಕೂ ಮೊದಲೇ ಭಾರತೀಯ ಖಗೋಲವಿಜ್ಞಾನಿಗಳು ತಿಳಿದ ವಿಷಯ ಇದು. ಆದರೆ, ಯುರೋಪ ಖಂಡವು ಏಶಿಯಾ ಖಂಡವನ್ನು ತನ್ನ ಆಳ್ವಿಕೆಗೆ ಒಳಪಡಿಸಿದ್ದರಿಂದ, ಭಾರತೀಯ ಖಗೋಲಶಾಸ್ತ್ರಜ್ಞರ ಜ್ಞಾನಕ್ಕೆ ಮನ್ನಣೆ ಸಿಗದೆ, ಈ ದೇಶವನ್ನು ಗೆದ್ದವರೇ ಪಂಡಿತರಾಗಿ ಮನ್ನಣೆ ಪಡೆದದ್ದು ಅನಿವಾರ್ಯವಾಯಿತು.

ಈ ಜಗತ್ತಿಗೆ ಅತ್ಯಂತ ಮಹತ್ವದ ಜ್ಞಾನವನ್ನು ನೀಡಿದ ವಿಷಯ ಯಾವದು ಎಂದು ಕೇಳಿದರೆ ಪಾಶ್ಚಾತ್ಯರು ಒಕ್ಕೊರಲಿನಿಂದ ಐನ್‌ಸ್ಟೈನನ ಸಾಪೇಕ್ಷವಾದವೆಂದು ಘೋಷಿಸುತ್ತಾರೆ. ಆದರೆ ಅಂಕಗಣಿತದಲ್ಲಿಯ Place value position ಹಾಗೂ ಶೂನ್ಯಸಂಕೇತ ಇವೇ ಅತ್ಯಂತ ಮಹತ್ವದ ಜ್ಞಾನಗಳು. ಇದರ ಸಂಶೋಧಕರು ಭಾರತೀಯರು. ಆದರೆ ಜಗತ್ತಿಗೆ ಅತ್ಯಂತ ಮಹತ್ವದ ಜ್ಞಾನ ನೀಡಿದ ಸಂಶೋಧನೆ ಎಂದು ಇವಕ್ಕೆ ಯಾರೂ ಕರೆಯುವದಿಲ್ಲ. ಒಂದು ವೇಳೆ ಭಾರತೀಯ ಗಣಿತಜ್ಞರು ಶೂನ್ಯಸಂಶೋಧನೆಯನ್ನು ಮಾಡಿರದಿದ್ದರೆ, ವಿಜ್ಞಾನದ ಪ್ರಗತಿಯು ಸಾಧ್ಯವಿರಲಿಲ್ಲ.

ಇವತ್ತು ಯಾವುದೇ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗೆ, “ನೂರು-ಐವತ್ತು” ಎಂದು ಕೇಳಿದರೆ (೧೦೦-೫೦) ಎಂದು ಬರೆದುಕೊಂಡು ೫೦ ಎನ್ನುವ ಉತ್ತರವನ್ನು ಥಟ್ಟನೆ ನೀಡುತ್ತಾನೆ. ಆದರೆ ಭಾರತೀಯ ಗಣಿತವು ಯುರೋಪಿಗೆ ತಲುಪುವ ಮೊದಲು “ನೂರು-ಐವತ್ತು” ಇದನ್ನು ಅಲ್ಲಿಯ ಗಣಿತ ಪಂಡಿತರು “C-L” ಎಂದು ಬರೆದುಕೊಳ್ಳುತ್ತಿದ್ದರು. ಆ ಬಳಿಕ ಒಂದುನೂರು ಗುಂಡುಗಳನ್ನು ಎಣಿಸಿ ತೆಗೆದುಕೊಂಡು, ಅದರಲ್ಲಿ ಐವತ್ತು ಗುಂಡುಗಳನ್ನು ಎಣಿಸಿ ಪಕ್ಕಕ್ಕಿಡುತ್ತಿದ್ದರು. ಬಳಿಕ ಉಳಿದ ಗುಂಡುಗಳನ್ನು ಎಣಿಸಿ, ಐವತ್ತು ಎನ್ನುವ ಉತ್ತರವನ್ನು ಕೊಡುತ್ತಿದ್ದರು.

ವಿಜ್ಞಾನದಲ್ಲಿ ಇಷ್ಟೆಲ್ಲ ಮುಂದುವರಿದಿದ್ದ ಭಾರತೀಯರು ರಾಹು ಹಾಗೂ ಕೇತು ಎನ್ನುವ ಬಿಂದುಗಳನ್ನು ರಾಕ್ಷಸರು ಎಂದು ಕರೆದಿದ್ದೇಕೆ? ಇದಕ್ಕೆ ಉತ್ತರ ಬಹುಶಃ ಹೀಗಿರಬಹುದು. ನಮ್ಮ ವಿಜ್ಞಾನಿಗಳು ಆಕಾಶಕಾಯಗಳನ್ನು ದೇವತೆಗಳು ಎಂದು ಭಾವಿಸಿದ್ದರು. ಈ ದೇವತೆಗಳನ್ನು ಮರೆಮಾಡುವಂತಹ ವಸ್ತು ಯಾವುದೇ ಇದ್ದರೂ ಅದು ರಾಕ್ಷಸಸಮಾನ. ಆದುದರಿಂದ ಈ ಬಿಂದುಗಳು ರಾಕ್ಷಸರು.

ಆಕಾಶಕಾಯಗಳನ್ನು ದೇವತೆಗಳು ಎಂದು ಭಾವಿಸುವದು ತಪ್ಪೆನ್ನುತ್ತೀರಾ? ಭೌತಿಕ ಅರ್ಥದಲ್ಲಿ ಅದು ತಪ್ಪಾಗಿರಬಹುದು. ಆದರೆ ಪುರಾತನ ಭಾರತೀಯರು ಅತ್ಯಂತ ಧಾರ್ಮಿಕ ಮನೋಭಾವದವರಾಗಿದ್ದರು. ಈ ಸೃಷ್ಟಿಯಲ್ಲಿಯ ಪ್ರತಿಯೊಂದು ವಸ್ತುವೂ ಭಗವಂತನ ರೂಪವೇ (form) ಆಗಿದೆ. ಇತರರಿಗೆ ಒಳ್ಳೆಯದನ್ನು ಮಾಡುತ್ತಿದ್ದರೆ ಅದೊಂದು ದೇವತೆ ; ದೇವತೆಗೆ ವಿರೋಧವಾಗಿರುವದು ರಾಕ್ಷಸ. ಇದು ನಮ್ಮ ಪುರಾತನರ ಭಾವನೆ.

ಆದುದರಿಂದಲೇ ಅವರು ಸೂರ್ಯ ಹಾಗು ಚಂದ್ರರನ್ನು ದೇವತೆಗಳೆಂದು ಭಾವಿಸಿದರು ; ರಾಹು ಹಾಗು ಕೇತು ಎನ್ನುವ ಕಾಲ್ಪನಿಕ ಖಗೋಲ ಬಿಂದುಗಳನ್ನು ರಾಕ್ಷಸರೆಂದು ಕರೆದರು. ತಮ್ಮ ಖಗೋಲ ಜ್ಞಾನದ ಮೂಲಕ ಗ್ರಹಣದ ಸಮಯ ಹಾಗೂ ಅವಧಿಯನ್ನು ಕಂಡು ಹಿಡಿಯುತ್ತದ್ದಿಂತೆಯೇ, ಆ ಅವಧಿಯಲ್ಲಿ ನದಿಯಲ್ಲಿ ಮುಳುಗು ಹಾಕಿ ದೇವರ ಧ್ಯಾನವನ್ನು ಮಾಡುತ್ತಿದ್ದರು! ಇದು ಅವರ ಪ್ರಾಮಾಣಿಕ ಮನೋಧರ್ಮ. ಇದರಲ್ಲಿ ಯಾವುದೇ ವಿರೋಧಾಭಾಸ ಇಲ್ಲ!

Sunday, July 12, 2009

ಬೆಕ್ಕು ಹಾರುತಿದೆ ನೋಡಿದಿರಾ?

ಬೇಂದ್ರೆಯವರ ಪ್ರತಿಭೆ ಕೇವಲ ಗಂಭೀರ ಸಾಹಿತ್ಯಕ್ಕೆ ಮಾತ್ರ ಮೀಸಲಾಗಿರಲಿಲ್ಲ. ವಿನೋದಸಾಹಿತ್ಯದಲ್ಲೂ ಅವರು ಕುಶಲರೇ. ಅವರ ಅಣಕುವಾಡುಗಳು ಹಾಗೂ ಅವರ ‘ಸಾಯೋ ಆಟ’ ನಾಟಕವು ಅವರ ಈ ಪ್ರತಿಭೆಗೆ ಉದಾಹರಣೆಗಳಾಗಿವೆ.

‘ಹಕ್ಕಿ ಹಾರುತಿದೆ ನೋಡಿದಿರಾ?’ ಕವನವನ್ನು ಬರೆದು, ಹಾಡಿ, ಕನ್ನಡಿಗರನ್ನು ಮೋಡಿ ಮಾಡಿದ ಬೇಂದ್ರೆಯವರು ಇದೇ ಹಾಡನ್ನು ಅಣಗಿಸಿ ‘ಬೆಕ್ಕು ಹಾರುತಿದೆ ನೋಡಿದಿರಾ?’ ಎನ್ನುವ ಕವನವನ್ನು ಬರೆದರು. ಇಂತಹ ಕವನಗಳಿಗೆ ‘ಅಣಕುವಾಡು’ ಎಂದು ಕರೆದರು. ‘ಒರದಾ ತಗಣಿ ಒರದಾ’ ಎನ್ನುವದು ಅವರ ಇನ್ನೊಂದು ಅಣಕುವಾಡು. ಇದು ‘ವರದಾ ಕಂಚಿ ವರದಾ’ ಎನ್ನುವ ದಾಸರ ಹಾಡಿನ ಮೇಲೆ ರೂಪಿತವಾಗಿದೆ.

‘ಬೆಕ್ಕು ಹಾರುತಿದೆ ನೋಡಿದಿರಾ?’ ಕವನವನ್ನು ಓದಿದಾಗ, ಬೇಂದ್ರೆಯವರ ವೈನೋದಿಕ ಕಲ್ಪನಾಸಾಮರ್ಥ್ಯದ ಅರಿವಾಗುವದು. ‘ಹಕ್ಕಿ ಹಾರುತಿದೆ ನೋಡಿದಿರಾ?’ ಕವನದಲ್ಲಿ ಆಟವಾಡಿದ ಕಲ್ಪನೆಯೇ ಈ ಕವನದಲ್ಲಿಯೂ ಆಟವಾಡಿದೆ. ಭಾಷೆ, ಛಂದಸ್ಸು ಎಲ್ಲವೂ ಮೂಲಕವನದ ಅನುಕರಣೆಗಳು. ಅಲ್ಲದೆ, ಪ್ರತಿಯೊಂದು ಸಾಲಿನಲ್ಲಿಯೂ ಮೂಲಕವನದ ಅಣಕನ್ನು ಕಾಣಬಹುದು.

‘ಬೆಕ್ಕು ಹಾರುತಿದೆ ನೋಡಿದಿರಾ?’ ಕವನದ ಪೂರ್ತಿಪಾಠ ಹೀಗಿದೆ:

ಈರುಳ್ಳ್ಯುರುಳಲು ಮಾಡವು ಬೆಳಗೆ
ಅತ್ತಲೆತ್ತಲು ಕತ್ತಲೆಯೊಳಗೆ
ಯಾವುದ ! ಯಾವುದ ! ಯಾವುದ ಎಂದು
ಕೇಳುವ ಹೇಳುವ ಹೊತ್ತಿನ ಒಳಗೆ
ಬೆಕ್ಕು ಹಾರುತಿದೆ ನೋಡಿದಿರಾ? ||೧||

ಕರಿ-ನೆರೆ ಬಣ್ಣದ ಮೊಸಡೆಯ ಗಂಟು
ಬಿಳಿ-ಹೊಳೆ ಬಣ್ಣದ ಮೀಸೆಗಳೆಂಟು
ಹಚ್ಚನ ಬೆಚ್ಚನ ಪಚ್ಚೆಯ ಪೈರಿನ
ಬಣ್ಣದ ಕಣ್ಣು ಕಿವಿ ಬದಿಗುಂಟು
ಬೆಕ್ಕು ಹಾರುತಿದೆ ನೋಡಿದಿರಾ? ||೨||

ಕಾಡಿಗೆಗಿಂತಲು ಕಪ್ಪೋ ಬಣ್ಣಾ
ಕತ್ತಲಕೇ ಕಾಲೊಡೆದವೊ ಅಣ್ಣಾ
ಕೂದಲ ಕೂದಲ ನಿಗುರಿಸಿಕೊಂಡು
ಸೂರ್ಯ-ಚಂದ್ರರೊಲು ಮಾಡಿದೆ ಕಣ್ಣಾ
ಬೆಕ್ಕು ಹಾರುತಿದೆ ನೋಡಿದಿರಾ? ||೩||

ರಾಜ್ಯದ ಹೆಗ್ಗಣಗಳ ತಾನೊಕ್ಕಿ
ಜೊಂಡಿಗದಾ ಹುಲುಗಡಣವ ಮುಕ್ಕಿ
ಹಾರಿಸಿ ಹೇಂಟೆಯ ಹಿಂಡುಹಿಂಡುಗಳ
ಜಂಭದ ಕೋಳಿಯ ನೆತ್ತಿಯ ಕುಕ್ಕಿ
ಬೆಕ್ಕು ಹಾರುತಿದೆ ನೋಡಿದಿರಾ? ||೪||

ಹಾಲಿನ ಗಡಿಗೆಯ ತಳವನು ಒರಸಿ
ಮೊಸರಿನ ಮಡಿಕೆಯ ಮುಚ್ಚಳ ಸರಿಸಿ
ಉರುಳಿಸಿ ಹೊರಳಿಸಿ ಭಾಂಡ ಭಾಂಡಗಳ
ಬಿಸಿ ಹಾಲಲಿ ತುಸು ಮಜ್ಜಿಗೆ ಬೆರಸಿ
ಬೆಕ್ಕು ಹಾರುತಿದೆ ನೋಡಿದಿರಾ? ||೫||

ಇಲಿಗಳು ಬೆಳ್ಳಗೆ ಇದ್ದರು ಬಿಡದು
ಬೆಳ್ಳಗಿದ್ದದನು ಕುಡಿದೂ ಕುಡಿದೂ
ನೋಡಿ ಚಂದ್ರನನು ಬೆಣ್ಣೆಯದೆಂದೊ
ಮುಗಿಲಿನಂಗಳಕೆ ಸಿಟ್ಟನೆ ಸಿಡಿದು
ಬೆಕ್ಕು ಹಾರುತಿದೆ ನೋಡಿದಿರಾ? ||೬||

ಹಿಂದಕೆ ಮುಂದಕೆ ಚಾಚಿದೆ ಕಾಲ
ಉಬ್ಬಿಸೆಬ್ಬಿಸಿದೆ ಜೊಂಡಿನ ಬಾಲ
ಬೆಳುದಿಂಗಳ ಹಾಲೆನೆ ತಿಳುಕೊಂಡೊ
ಬಲ್ಲರು ಯಾರಿವರಪ್ಪನ ಸಾಲ!
ಬೆಕ್ಕು ಹಾರುತಿದೆ ನೋಡಿದಿರಾ? ||೭||
…………………………………………………………….
‘ಹಕ್ಕಿ ಹಾರುತಿದೆ ನೋಡಿದಿರಾ?’ ಮೂಲಕವನದ ಪೂರ್ತಿಪಾಠ ಹೀಗಿದೆ:
ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತುಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆ ತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ? ||೧||

ಕರಿನೆರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ? ||೨||

ನೀಲಮೇಘಮಂಡಲ-ಸಮ ಬಣ್ಣ !
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ !
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ? ||೩||

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ? ||೪||

ಯುಗ-ಯುಗಗಳ ಹಣೆಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನೆಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ? ||೫||

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ? ||೬||

ಮುಟ್ಟಿದೆ ದಿಗ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೊ
ಬಲ್ಲರು ಯಾರಾ ಹಾಕಿದ ಹೊಂಚ
ಹಕ್ಕಿ ಹಾರುತಿದೆ ನೋಡಿದಿರಾ? ||೭||
………………………………………………………………………………….................
‘ಹಕ್ಕಿ ಹಾರುತಿದೆ ನೋಡಿದಿರಾ?’ ಕವನದ ಮೊದಲ ನುಡಿಯನ್ನು ನೋಡಿರಿ:
ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತುಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆ ತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ? ||೧||

ಈಗ ‘ಬೆಕ್ಕು ಹಾರುತಿದೆ ನೋಡಿದಿರಾ?’ ಕವನದ ಮೊದಲ ನುಡಿಯನ್ನು ನೋಡಿರಿ:
ಈರುಳ್ಳ್ಯುರುಳಲು ಮಾಡವು ಬೆಳಗೆ
ಅತ್ತಲೆತ್ತಲು ಕತ್ತಲೆಯೊಳಗೆ
ಯಾವುದ ! ಯಾವುದ ! ಯಾವುದ ಎಂದು
ಕೇಳುವ ಹೇಳುವ ಹೊತ್ತಿನ ಒಳಗೆ
ಬೆಕ್ಕು ಹಾರುತಿದೆ ನೋಡಿದಿರಾ? ||೧||

ಮೂಲಕವನದ ಮೊದಲ ಸಾಲಿನಲ್ಲಿ ‘ಇರುಳಿರುಳಳಿದು ದಿನ ದಿನ ಬೆಳಗೆ’ ಎನ್ನುವ ವಾಕ್ಯವಿದ್ದರೆ, ಅಣಕುಕವನದಲ್ಲಿ ‘ಈರುಳ್ಳ್ಯುರುಳಲು ಮಾಡವು ಬೆಳಗೆ’ ಎನ್ನುವ ಸಾಲಿದೆ.
ಇವೆರಡೂ ಸಾಲುಗಳು ಶ್ರವಣಕ್ಕೆ ಒಂದೇ ತೆರನಾಗಿವೆ. ಆದರೆ ಮೂಲಕವನದ ಸಾಲು ಹಕ್ಕಿಯ ಬೆಳಗಿನ ಹಾರಾಟದೊಂದಿಗೆ ಕಾರ್ಯಾರಂಭ ಮಾಡಿದರೆ, ಅಣಕುವಾಡಿನ ಸಾಲು ಕತ್ತಲೆಯಲ್ಲಿ ಬೆಕ್ಕು ಮಾಡುವ ಹಾರಾಟವನ್ನು ಚಿತ್ರಿಸುತ್ತದೆ.
ಈ ಬೆಕ್ಕು ಮಾಡಕ್ಕೆ ಜಿಗಿದು ಅಲ್ಲಿ ಇಟ್ಟ ಈರುಳ್ಳಿಗಳನ್ನೆಲ್ಲ ಉರುಳಿಸುವದರೊಂದಿಗೆ ಕವನ ಪ್ರಾರಂಭವಾಗುತ್ತದೆ.
ಮೂಲಕವನದ ಮುಂದಿನ ಸಾಲುಗಳಲ್ಲಿ
‘ಗಾವುದ ಗಾವುದ ಗಾವುದ ಮುಂದೆ,
ಎವೆ ತೆರೆದಿಕ್ಕುವ ಹೊತ್ತಿನ ಒಳಗೆ ’
ಎನ್ನುವ ವರ್ಣನೆ ಇದ್ದರೆ, ಅಣಕವಾಡಿನಲ್ಲಿ
‘ಯಾವುದ ! ಯಾವುದ ! ಯಾವುದ ಎಂದು,
ಕೇಳುವ ಹೇಳುವ ಹೊತ್ತಿನ ಒಳಗೆ’
ಎನ್ನುವ ವರ್ಣನೆ ಇದೆ.

ಈ ರೀತಿಯಾಗಿ, ಬೇಂದ್ರೆ ಮೂಲಕವನದ ಸಾಲುಗಳ ಅನುರಣನವನ್ನು ಅಣಕುವಾಡಿನಲ್ಲಿ ಅನುಸರಿಸಿದ್ದಾರೆ.

ಮೂಲಕವನವದ ಎರಡನೆಯ ನುಡಿಯಲ್ಲಿ ಹಕ್ಕಿಯ ಗರಿಗಳನ್ನು ವರ್ಣಿಸಲಾಗಿದೆ:
ಕರಿನೆರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ? ||೨||

ಅಣಕುವಾಡಿನಲ್ಲಿ ಬೆಕ್ಕಿನ ಮುಖವರ್ಣನೆ ಇದೆ.
ಕರಿ-ನೆರೆ ಬಣ್ಣದ ಮೊಸಡೆಯ ಗಂಟು
ಬಿಳಿ-ಹೊಳೆ ಬಣ್ಣದ ಮೀಸೆಗಳೆಂಟು
ಹಚ್ಚನ ಬೆಚ್ಚನ ಪಚ್ಚೆಯ ಪೈರಿನ
ಬಣ್ಣದ ಕಣ್ಣು ಕಿವಿ ಬದಿಗುಂಟು
ಬೆಕ್ಕು ಹಾರುತಿದೆ ನೋಡಿದಿರಾ? ||೨||

ಮೂಲಕವನದ ಮೂರನೆಯ ನುಡಿ ಹೀಗಿದೆ:
ನೀಲಮೇಘಮಂಡಲ-ಸಮ ಬಣ್ಣ !
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ !
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ? ||೩||

ಅಣಕುವಾಡಿನ ಮೂರನೆಯ ನುಡಿಯೂ ಸಹ ಬೆಕ್ಕಿನ ಬಣ್ಣದ ಬಣ್ಣನೆಯನ್ನು ಮಾಡುತ್ತದೆ.
ಕಾಡಿಗೆಗಿಂತಲು ಕಪ್ಪೋ ಬಣ್ಣಾ
ಕತ್ತಲಕೇ ಕಾಲೊಡೆದವೊ ಅಣ್ಣಾ
ಕೂದಲ ಕೂದಲ ನಿಗುರಿಸಿಕೊಂಡು
ಸೂರ್ಯ-ಚಂದ್ರರೊಲು ಮಾಡಿದೆ ಕಣ್ಣಾ
ಬೆಕ್ಕು ಹಾರುತಿದೆ ನೋಡಿದಿರಾ? ||೩||

ಮೂಲಕವನದಲ್ಲಿ ಹಕ್ಕಿಗೆ ಮಾಡಲಾದ ವರ್ಣನೆಯ ಸಮಾಂತರ ವರ್ಣನೆ ಅಣಕುವಾಡಿನಲ್ಲಿಯೂ ಇದೆ. ಅಲ್ಲದೆ ‘ಕತ್ತಲಕೇ ಕಾಲೊಡೆದವೊ ಅಣ್ಣಾ’
ಎನ್ನುವ ಸಾಲು ನಗುವನ್ನು ಉಕ್ಕಿಸುತ್ತದೆ.

ಮೂಲಕವನದ ನಾಲ್ಕನೆಯ ನುಡಿ ಕಾಲಪಕ್ಷಿಯ ಗಂಭೀರ-ಭಯಂಕರ ಕಾರ್ಯವನ್ನು ವರ್ಣಿಸುತ್ತದೆ:
ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ? ||೪||

ಅಣಕುವಾಡಿನಲ್ಲಿ ಬೆಕ್ಕು ಮಾಡುವ ಭಯಂಕರ ಕಾರ್ಯ(!)ಗಳ ವರ್ಣನೆ ಇದೆ:
ರಾಜ್ಯದ ಹೆಗ್ಗಣಗಳ ತಾನೊಕ್ಕಿ
ಜೊಂಡಿಗದಾ ಹುಲುಗಡಣವ ಮುಕ್ಕಿ
ಹಾರಿಸಿ ಹೇಂಟೆಯ ಹಿಂಡುಹಿಂಡುಗಳ
ಜಂಭದ ಕೋಳಿಯ ನೆತ್ತಿಯ ಕುಕ್ಕಿ
ಬೆಕ್ಕು ಹಾರುತಿದೆ ನೋಡಿದಿರಾ? ||೪||

ಕಾಲಪಕ್ಷಿ ಹಾಗೂ ಬೆಕ್ಕು ಇವುಗಳ ಘನತೆ ಬೇರೆಯಾಗಿರಬಹುದು. ಇವುಗಳ ಕಾರ್ಯರಂಗಗಳು ಬೇರೆಯಾಗಿರಬಹುದು. ಬೆಕ್ಕು ಮಾಡುವ ಕಾರ್ಯ ಹಾಸ್ಯವಾಗಿ ಕಾಣಲೂಬಹುದು. ಆದರೆ ಈ ಎರಡೂ ಕಾರ್ಯಗಳಲ್ಲಿಯ ಅಂತರಂಗ ಒಂದೇ ಆಗಿದೆ.

ಸಮಾಂತರವಾಗಿ ಚಲಿಸುತ್ತಿದ್ದ ಈ ಎರಡೂ ಕವನಗಳು ಇನ್ನು ಮುಂದಿನ ನುಡಿಗಳಲ್ಲಿ ಸ್ವಲ್ಪ ಬೇರೆಯಾಗಿ ಸಾಗುತ್ತವೆ.
ಮೂಲಕವನದ ಐದನೆಯ ನುಡಿ ಹೀಗಿದೆ:
ಯುಗ-ಯುಗಗಳ ಹಣೆಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನೆಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ? ||೫||
ಮೂಲಕವನವು ಇಲ್ಲಿ ಶುಭ ಕೋರುವ ಕಾಲಪಕ್ಷಿಯಾಗಿದೆ. ಆದರೆ ಬೆಕ್ಕು ಮಾತ್ರ ತನ್ನ ಚಾಳಿಯನ್ನು ಬಿಡದು:
ಹಾಲಿನ ಗಡಿಗೆಯ ತಳವನು ಒರಸಿ
ಮೊಸರಿನ ಮಡಿಕೆಯ ಮುಚ್ಚಳ ಸರಿಸಿ
ಉರುಳಿಸಿ ಹೊರಳಿಸಿ ಭಾಂಡ ಭಾಂಡಗಳ
ಬಿಸಿ ಹಾಲಲಿ ತುಸು ಮಜ್ಜಿಗೆ ಬೆರಸಿ
ಬೆಕ್ಕು ಹಾರುತಿದೆ ನೋಡಿದಿರಾ? ||೫||
ಹಾಲಿನ ಗಡಿಗೆಯನ್ನು ಸ್ವಚ್ಛ ಮಾಡುವ ಈ ಬೆಕ್ಕು ಮೊಸರನ್ನೂ ಸಹ ನೆಕ್ಕುತ್ತದೆ. ಅಲ್ಲಿರುವ ಪಾತ್ರೆಗಳನ್ನೆಲ್ಲ ಉರುಳಿಸುತ್ತದೆ. ಇಷ್ಟಕ್ಕೆ ಇದರ ಕಿಡಿಗೇಡಿತನ ನಿಲ್ಲುವದಿಲ್ಲ. ಮನೆಯವರು ತೆಗೆದಿಟ್ಟ ಬಿಸಿ ಹಾಲಿನಲ್ಲಿ ತುಸು ಮಜ್ಜಿಗೆ ಬೆರಸಿಬಿಡುತ್ತದೆ. ಬೇಂದ್ರೆಯವರ ವಿನೋದಸೃಷ್ಟಿಗೆ ಈ ಸಾಲು ಅತ್ಯುತ್ತಮ ಉದಾಹರಣೆಯಾಗಿದೆ.

ಆರನೆಯ ನುಡಿಗಳಲ್ಲಿ ರಚನಾ ಸಾದೃಶ್ಯವಿದೆ.
ಮೂಲಕವನ ಹೀಗಿದೆ:
ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ? ||೬||

ಅಣಕುವಾಡು ಹೀಗಿದೆ:
ಇಲಿಗಳು ಬೆಳ್ಳಗೆ ಇದ್ದರು ಬಿಡದು
ಬೆಳ್ಳಗಿದ್ದದನು ಕುಡಿದೂ ಕುಡಿದೂ
ನೋಡಿ ಚಂದ್ರನನು ಬೆಣ್ಣೆಯದೆಂದೊ
ಮುಗಿಲಿನಂಗಳಕೆ ಸಿಟ್ಟನೆ ಸಿಡಿದು
ಬೆಕ್ಕು ಹಾರುತಿದೆ ನೋಡಿದಿರಾ? ||೬||

ಕಾಲಪಕ್ಷಿ ಮುಗಿಲಿನಲ್ಲಿ ಹಾರಾಡಿದರೆ, ಈ ಬೆಕ್ಕು ತಾನೂ ಸಹ ಮುಗಿಲಿನಲ್ಲಿರುವ ಚಂದ್ರನನ್ನು ಹಿಡಿಯಲು ಜಿಗಿಯುತ್ತದೆ, ಬೆಣ್ಣೆಯೆಂದು ತಿಳಿದು!

ಮೂಲಕವನದ ಏಳನೆಯ ನುಡಿಯಲ್ಲಿ ಕಾಲಪಕ್ಷಿಯ ಭವಿಷ್ಯತ್ ಯೋಜನೆಗಳ ಹೊಳಹು ಇದೆ:
ಮುಟ್ಟಿದೆ ದಿಗ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೊ
ಬಲ್ಲರು ಯಾರಾ ಹಾಕಿದ ಹೊಂಚ
ಹಕ್ಕಿ ಹಾರುತಿದೆ ನೋಡಿದಿರಾ? ||೭||

ಅಣಕುವಾಡಿನಲ್ಲಿಯೂ ಸಹ ಬೆಕ್ಕು ತನ್ನ ಭವಿಷ್ಯದ ಕಾರ್ಯಗಳಿಗಾಗಿ ಹೊಂಚಿ ನಿಂತಿರುವ ವರ್ಣನೆ ಇದೆ:
ಹಿಂದಕೆ ಮುಂದಕೆ ಚಾಚಿದೆ ಕಾಲ
ಉಬ್ಬಿಸೆಬ್ಬಿಸಿದೆ ಜೊಂಡಿನ ಬಾಲ
ಬೆಳುದಿಂಗಳ ಹಾಲೆನೆ ತಿಳುಕೊಂಡೊ
ಬಲ್ಲರು ಯಾರಿವರಪ್ಪನ ಸಾಲ!
ಬೆಕ್ಕು ಹಾರುತಿದೆ ನೋಡಿದಿರಾ? ||೭||

ಈ ರೀತಿಯಾಗಿ ಮೂಲಕವನದ ತದ್ವತ್ ಅನುಕರಣೆಯನ್ನು ಈ ಅಣಕುವಾಡು ಮಾಡುತ್ತದೆ.
ಮೂಲಕವನವು ಬೇಂದ್ರೆಯವರ ದಾರ್ಶನಿಕ ಪ್ರತಿಭೆಯನ್ನು ತೋರಿಸಿದರೆ, ಅಣಕುವಾಡು ಅವರ ವಿನೋದಸೃಷ್ಟಿಯ ಪ್ರತಿಭೆಯನ್ನು ತೋರಿಸುತ್ತದೆ. ಆದರೆ, ಈ ಎರಡೂ ರಚನೆಗಳಲ್ಲಿ ಕಂಡುಬರುವ ಕಾವ್ಯರಚನಾ ಕೌಶಲ್ಯವು ಅಪ್ರತಿಮವಾಗಿದೆ.
‘ಬೆಕ್ಕು ಹಾರುತಿದೆ ನೋಡಿದಿರಾ?’ ಕವನವನ್ನು ಸ್ವತಂತ್ರ ಕವನವೆಂದು ಓದಿದರೂ ಸಹ , ಇದು ಅಷ್ಟೇ ಸ್ವಾರಸ್ಯಪೂರ್ಣವಾದ ಕವನವಾಗಿದೆ.

Friday, July 3, 2009

ಚೋಳ ಕಡಿತು, ನನಗೊಂದು ಚೋಳ ಕಡಿತು

‘ಚೋಳ ಕಡಿತು, ನನಗೊಂದು ಚೋಳ ಕಡಿತು’ – ಇದು ಶರೀಫರು ರಚಿಸಿದ ಗೀತೆ.
ಸಾಮಾನ್ಯವಾಗಿ ಕುಂಡಲಿನಿ ಶಕ್ತಿಯನ್ನು ಅಂದರೆ ಮನುಷ್ಯನಲ್ಲಿ ನಿಹಿತವಾದ ದೈವಿ ಶಕ್ತಿಯನ್ನು ಸರ್ಪರೂಪವಾಗಿ ಕಲ್ಪಿಸುತ್ತಾರೆ. ಈ ಕವನದಲ್ಲಿ ಶರೀಫರು ತಮ್ಮ ಬದುಕನ್ನು ಬದಲಾಯಿಸಿದ ಘಟನೆಯನ್ನು, ಅದಕ್ಕೆ ಕಾರಣವಾದ ಶಕ್ತಿಯನ್ನು ಚೋಳಿನ ರೂಪದಲ್ಲಿ ಬಣ್ಣಿಸಿದ್ದಾರೆ. ಶರೀಫರ ಗೀತೆಯ ಪೂರ್ಣಪಾಠ ಹೀಗಿದೆ:

ಚೋಳ ಕಡಿತು ನನಗೊಂದು ಚೋಳ ಕಡಿತು
ಕಾಳಕತ್ತಲದೊಳಗೆ ಕೂತಿತ್ತು, ನನಕಂಡ ಬಂತು ||ಪಲ್ಲ||

ಎಷ್ಟು ದಿನದ ಸಿಟ್ಟು ಇಟ್ಟಿತ್ತು, ತೀರಿಸಿ ಬಿಟ್ಟಿತು
ಯಾರಿಗೆ ಹೇಳಿದರ ಏನ ಆದೀತು
ಗುರುತಾತು ಈ ಮಾತು
ಹುಟ್ಟಿದ ಮಗಳ ಕಂಡಿದ್ದಿಲ್ಲ
ಇದರ ಕಷ್ಟ ಶಿವನೇ ಬಲ್ಲ
ಘಟ್ಟಿಯಾಗಿ ಮುಳ್ಳು ಚುಚ್ಚಿತ್ತು ಮಾಯವಾಗಿ ಹೋತು ||೧||

ಮೂರು ದೇಹದೊಳಗ ತಾನಿತ್ತ
ಪರಮಾತ್ಮನಾದದೊಳು ತಾನು ಬೆಳೆದಿತ್ತ
ಸಾರಿಬಂದು ಎನ್ನ ನೋಡುತ
ಮೂರು ಲೋಕ ಬೆಳಗು ಮೇಲು ಮೀರಿದುನ್ಮನಿ ಹಾರಿ ನಿಂತಿತು ||೨||

ದೇವರಮನಿ ಮೂಲೆಯೊಳಗಿತ್ತು
ಆಧಾರ ಹಿಡಿದು ಊರ್ಧ್ವಮುಖದಿ ಕೊಂಡಿ ಮಾಡಿತ್ತು
ಕಾಲ ಕಳೆದು ಸ್ಥೂಲದೇಹದೊಳಗೆ ಮಲಗಿತ್ತು
ಕಲಿಕರ್ಮ ನುಂಗಿತ್ತು
ದೇವಶಿಶುನಾಳಧೀಶನ ಧ್ಯಾನದೊಳಗಾ ಚೋಳು ಇತ್ತು
ಕಚ್ಚುತಿರಲು ಎಚ್ಚರಾದಿತು, ಹುಚ್ಚು ಹಿಡಿದಂಗಾತು ||೩||

ಆಧ್ಯಾತ್ಮಪಥದಲ್ಲಿ ಸಾಗಿದವರ ಜೀವನದಲ್ಲಿ ನಡೆಯುವ ಒಂದೆರಡು ಘಟನೆಗಳಿಂದಾಗಿ ಅವರ ಜೀವನವೇ ಬದಲಾಗಿ ಬಿಡುತ್ತದೆ. ಇಂತಹ ಸಂದರ್ಭವನ್ನು ಅನೇಕ ಸಾಧಕರು ಕಾವ್ಯದ ಮೂಲಕ ವರ್ಣಿಸಿದ್ದೂ ಉಂಟು.
ತಮ್ಮ ಬದುಕಿನಲ್ಲಿಯ ಇಂತಹ ಘಟನೆಯೊಂದನ್ನು ಶರೀಫರು “ಚೋಳ ಕಡಿತು ನನಗೊಂದು ಚೋಳ ಕಡಿತು”.
ಎನ್ನುವ ಚಿಕ್ಕ ಗೀತೆಯಲ್ಲಿ ಬಣ್ಣಿಸಿದ್ದಾರೆ.

ಯಾವ ಜೀವಿಗೂ ತನ್ನ ಮುಂದಿನ ಕ್ಷಣದ ಭವಿಷ್ಯದ ಅರಿವಿರುವದಿಲ್ಲ. ಭವಿಷ್ಯವೆಂದರೆ ಕಪ್ಪುಕತ್ತಲೆಯೇ ಸೈ. ಇಂತಹ ಕಪ್ಪು ಕತ್ತಲೆಯಲ್ಲಿ ತನ್ನ ಬಲಿಯನ್ನು ಜಪ್ಪಿಸಿಕೊಂಡು ಈ ಚೋಳು ಕೂತಿರುತ್ತದೆ. ಬಲಿಗೆ ಚೋಳು ಕಾಣಲಿಕ್ಕಿಲ್ಲ. ಆದರೆ ಚೋಳಿಗೆ ಬಲಿಯು ಸುಸ್ಪಷ್ಟ.
ಆದುದರಿಂದ ಇದನ್ನು “ಕಾಳಕತ್ತಲದೊಳಗೆ ಕೂತಿತ್ತು, ನನಕಂಡ ಬಂತು” ಎಂದು ಶರೀಫರು ಬಣ್ಣಿಸುತ್ತಾರೆ.

ಈ ಚೋಳು ಅಕಸ್ಮಾತ್ತಾಗಿ ಶರೀಫರನ್ನು ಕಂಡದ್ದಲ್ಲ. ಅದು ಎಷ್ಟೋ ದಿನದಿಂದ ಇವರ ಮೇಲೆ ಸಿಟ್ಟು ಇಟ್ಟುಕೊಂಡು ಕಾಯುತ್ತ ಕೂತಿದೆ. ಆದುದರಿಂದಲೇ ಚೋಳು ಕಚ್ಚಿಸಿಕೊಂಡ ಬಳಿಕ ಶರೀಫರು ವಿಸ್ಮಯಗೊಳ್ಳುತ್ತಾರೆ. “ಎಷ್ಟು ದಿನದ ಸಿಟ್ಟು ಇಟ್ಟಿತ್ತು, ಈಗ ತೀರಿಸಿ ಬಿಟ್ಟಿತು”, ಎನ್ನುತ್ತಾರೆ.
ಈ ಚೋಳಿಗೆ ಶರೀಫರ ಮೇಲೆ ದೀರ್ಘಕಾಲದ ಸಿಟ್ಟು ಯಾಕೆ ಎನ್ನುವ ಪ್ರಶ್ನೆ ಬರುತ್ತದೆ.
ಶರೀಫರ ಜನ್ಮಾಂತರಗಳ ಕರ್ಮಫಲವೇ ಈ ಚೋಳು. ಆದುದರಿಂದ ಅದರ ಸಿಟ್ಟು ಎಷ್ಟೋ ಜನ್ಮಗಳ ಸಿಟ್ಟು. ಈ ಚೋಳು ಕಡಿದ ಸಂಗತಿಯನ್ನು ಅಥವಾ ಅದರ ನೋವನ್ನು ಯಾರಿಗೆ ಹೇಳಿದರೂ ಪ್ರಯೋಜನವಿಲ್ಲ, ಕರ್ಮಫಲವನ್ನು ಬದಲಿಸಲು ಯಾರೂ ತಮಗೆ ಸಹಾಯ ಮಾಡಲಾರರು ಎನ್ನುವದು ಶರೀಫರ ಮನಸ್ಸಿಗೆ ಅನುಭವವಾಗುತ್ತದೆ. ಅದಕ್ಕೇ ಸ್ವಗತದಲ್ಲಿ ಎಂಬಂತೆ ಶರೀಫರು ನುಡಿಯುತ್ತಾರೆ:
“ಯಾರಿಗೆ ಹೇಳಿದರ ಏನ ಆದೀತು
ಗುರುತಾತು ಈ ಮಾತು”.

ಚೋಳಿನ ಕಡಿತದಷ್ಟು ಶರೀಫರ ಮನಸ್ಸಿಗೆ ಆಘಾತ ಕೊಡುವ ಯಾವ ಘಟನೆ ನಡೆದಿರಬಹುದೆನ್ನುವ ಸೂಚನೆ ಮುಂದಿನ ಸಾಲಿನಲ್ಲಿ ಸಿಗುತ್ತದೆ:
“ಹುಟ್ಟಿದ ಮಗಳ ಕಂಡಿದ್ದಿಲ್ಲ
ಇದರ ಕಷ್ಟ ಶಿವನೇ ಬಲ್ಲ
ಘಟ್ಟಿಯಾಗಿ ಮುಳ್ಳು ಚುಚ್ಚಿತ್ತು ಮಾಯವಾಗಿ ಹೋತು ”

ಶರೀಫರ ಮೊದಲ ಹಾಗೂ ಒಂದೇ ಸಂತತಿಯಾದ ಹೆಣ್ಣು ಕೂಸು, ಅವರ ಹೆಂಡತಿಯ ತವರು ಮನೆಯಲ್ಲಿ ಜನಿಸಿ, ಸ್ವಲ್ಪೇ ದಿನಗಳಲ್ಲಿ ತೀರಿಕೊಳ್ಳುತ್ತದೆ. ಇದೊಂದು ತೀವ್ರ ದುಃಖದ ಅನುಭವ. ಅದಕ್ಕೇ ‘ಇದರ ಕಷ್ಟ ಶಿವನೇ ಬಲ್ಲ’ ಎಂದು ಶರೀಫರು ದುಃಖದಿಂದ ಹೇಳುತ್ತಾರೆ. ಇದು ಎದೆಯಲ್ಲಿ ಮುಳ್ಳು ಚುಚ್ಚಿದಂತಹ ಅನುಭವವಾಗಿರಬೇಕು. ಆ ಸಮಯದಲ್ಲಿ ಅಧ್ಯಾತ್ಮದ ಕಡೆಗೆ ಹೆಚ್ಚೆಚ್ಚಾಗಿ ತಿರುಗಿದ ಶರೀಫರು ‘ಮಾಯವಾಗಿ ಹೋತು’ ಎಂದು ಹೇಳುತ್ತಾರೆ.

ಈ ‘ಮಾಯವಾಗಿ ಹೋತು’ ಎನ್ನುವ ವಾಕ್ಯ ಅನೇಕ ಅರ್ಥಗಳಿಂದ ಕೂಡಿದೆ. ಇದೀಗ ಹುಟ್ಟಿದ ಕೂಸು ಕೆಲವೇ ದಿನಗಳಲ್ಲಿ ಮಾಯವಾಗಿ ಹೋಯಿತು ಎನ್ನುವದು ಒಂದು ಅರ್ಥ. ಚುಚ್ಚಿದ ಮುಳ್ಳು ಮಾಯವಾಗಿ ಹೋಯಿತು ಎಂದು ತಿಳಿದರೆ ಸಂಸಾರದಲ್ಲಿ ಯಾವದೂ ಶಾಶ್ವತವಲ್ಲ; ಸುಖ ಹಾಗೂ ದುಃಖಗಳು ಬರುತ್ತವೆ ಹಾಗೂ ಹೋಗುತ್ತವೆ ಎನ್ನುವದು ಮತ್ತೊಂದುಅರ್ಥ. ಸಂಸಾರದಲ್ಲಿ ಮುಳುಗಿದ ಶರೀಫರಿಗೆ ಕವಿದ ಮೋಹದ ಮಾಯೆ ಮಾಯವಾಗಿ ಹೋಯಿತು ಎನ್ನುವದು ಮೂರನೆಯ ಅರ್ಥ.

ಇಂತಹ ದುಃಖದ ಅನುಭವದ ನಂತರ ಶರೀಫರು ಇದೀಗ ಕಣ್ಣು ತೆರೆದ ವ್ಯಕ್ತಿ. ಹೀಗಾಗಿ ಆ ಚೋಳನ್ನು ಕೇವಲ ಆಘಾತ ನೀಡುವ ಕರ್ಮಫಲವೆಂದು ತಿಳಿಯದೆ, ಜ್ಞಾನದ ಬೆಳಕು ನೀಡುವ ಶಕ್ತಿಯೆಂದು ಅವರು ಭಾವಿಸುತ್ತಾರೆ. ಈ ಚೋಳು ಕೇವಲ ಕಷ್ಟ ಕೊಡುವ ಚೋಳಲ್ಲ, ಕಷ್ಟದ ಮೂಲಕ ಪರಮಜ್ಞಾನದ ಕಡೆಗೆ ಮನಸ್ಸನ್ನು ತಿರುಗಿಸುವ ಚೋಳು ಎನ್ನುವದು ಅವರಿಗೆ ಅರಿವಾಗುತ್ತದೆ. ಅದರ ನಿಜಸ್ವರೂಪ ಅವರಿಗೆ ಈಗ ನಿಚ್ಚಳವಾಗತೊಡಗಿದೆ. ಈ ಗೂಢಾರ್ಥ ಅವರ ಮುಂದಿನ ನುಡಿಗಳಲ್ಲಿ ಸ್ಪಷ್ಟವಾಗಿದೆ.

“ಮೂರು ದೇಹದೊಳಗ ತಾನಿತ್ತ
ಪರಮಾತ್ಮನಾದದೊಳು ತಾನು ಬೆಳೆದಿತ್ತ
ಸಾರಿಬಂದು ಎನ್ನ ನೋಡುತ
ಮೂರು ಲೋಕ ಬೆಳಗು ಮೇಲು ಮೀರಿದುನ್ಮನಿ ಹಾರಿ ನಿಂತಿತು”

ಈ ಚೋಳು ಇರುವ ಮೂರು ದೇಹಗಳು ಅಂದರೆ ಸ್ಥೂಲ ಶರೀರ, ಸೂಕ್ಷ್ಮ ಶರೀರ ಹಾಗೂ ಕಾರಣಶರೀರಗಳು. ಸ್ಥೂಲಶರೀರವೆಂದರೆ ಯಾವುದೇ ಒಂದು ಜನ್ಮದಲ್ಲಿ ನಮಗಿರುವ ದೇಹ. ಸೂಕ್ಷ್ಮಶರೀರವೆಂದರೆ ವಾಸನಾಶರೀರ. ಇದು ಸ್ಥೂಲಶರೀರವು ನಾಶವಾದ ನಂತರವೂ ಉಳಿದಿರುವ ವಾಸನೆಗಳ ಹಾಗೂ ಕರ್ಮಫಲಗಳ ಶರೀರ. ಕಾರಣಶರೀರವೆಂದರೆ ಆತ್ಮವು ದೇಹವನ್ನು ಧರಿಸಲು ಬೇಕಾಗುವ ಮೂಲ ಪ್ರೇರಣಾ ಶರೀರ. ಈ ಮೂರೂ ದೇಹಗಳಲ್ಲಿ ಈ ಚೋಳು ಇರುತ್ತದೆ ಎಂದು ಶರೀಫರು ಹೇಳುತ್ತಾರೆ. ಅಂದರೆ, ಈ ಚೋಳು ನಮಗೆ ಹೊರಗಿನದಲ್ಲ, ನಮ್ಮಲ್ಲೇ ಸದಾಕಾಲ ಇರುವಂಥಾದ್ದು. ನಮ್ಮನ್ನು ತಪ್ಪು ಮಾರ್ಗದಿಂದ ಬಿಡಿಸಿ ಸನ್ಮಾರ್ಗಕ್ಕೆ ಹಚ್ಚುವಂಥಾದ್ದು. ಈ ಚೋಳಿಗೆ ಇರುವ ಸ್ವಭಾವ ಯಾವುದು ಎಂದರೆ ‘ಪರಮಾತ್ಮನಾದದೊಳು ತಾನು ಬೆಳೆದಿತ್ತ’.
ಯಾವಾಗಲೂ ಪರಮಾತ್ಮನನ್ನು ಚಿಂತಿಸುತ್ತ ಅದೇ ನಾದದಲ್ಲಿ, ಅದೇ ಧ್ಯಾನದಲ್ಲಿ ಇರುವ ಜೀವಿ ಇದು. ಹಾಗಿದ್ದರೆ ಇದಕ್ಕೆ ನೋವು ಕೊಡುವ ಕೊಂಡಿ ಏಕೆ ಇದೆ ಎಂದು ಕೇಳಬಹುದು. ಮನುಷ್ಯನಿಗೆ ನೋವಿನ ಅನುಭವವಾಗದೇ ಅವನ ಮನಸ್ಸು ಪರಮಾರ್ಥದ ಕಡೆಗೆ ಹೊರಳದು. ಆದುದರಿಂದ ನಮ್ಮ ಒಳಗೇ ಇರುವ ಈ ಜ್ಞಾನಶಕ್ತಿಯು ಚೋಳಿನ ರೂಪ ಧರಿಸಿರುತ್ತದೆ. ಸಕಾಲದಲ್ಲಿ ನೋವಿನ ಕೊಂಡಿಯಿಂದ ಚುಚ್ಚಿ, ನಮ್ಮನ್ನು ಎಚ್ಚರಕ್ಕೆ ತರುತ್ತದೆ. ಸರಿಯಾದ ಸಮಯದಲ್ಲಿ ಇದು ಸಾರಿ ಬಂದು ಅಂದರೆ ಧಾವಿಸಿ ಬಂದು, ಶರೀಫರನ್ನು ನೋಡಿತು. ಆ ಚೋಳು ನೋಡಿದ್ದೇ ಒಂದು ಅನುಗ್ರಹ! ಆ ಚೋಳಿನಲ್ಲಿರುವ ಬೆಳಕು ಎಂತಹದಂದರೆ, ಮೂರು ಲೋಕಗಳನ್ನೂ ಬೆಳಗುವ ಬೆಳಕು ಅದು. ಮೂರು ಲೋಕಗಳೆಂದರೆ ಸ್ವರ್ಗ, ಮರ್ತ್ಯ ಹಾಗೂ ಪಾತಾಳ. ಆತ್ಮವು ತನ್ನ ವಿವಿಧ ಅವಸ್ಥೆಗಳಲ್ಲಿ ಈ ಲೋಕಗಳಲ್ಲಿ ವಾಸಿಸುತ್ತದೆ. ಯಾವುದೇ ಲೋಕದಲ್ಲಿರಲಿ, ಅಲ್ಲಿ ಈ ಎಚ್ಚರಿಕೆ ನೀಡುವ ಚೋಳು ಆತ್ಮವನ್ನು ದಿಟ್ಟಿಸುತ್ತಲೇ ಇರುತ್ತದೆ. ಹಾಗು ಈ ಮೂರೂ ಲೋಕಗಳ ಮೇಲಿರುವ ಉನ್ಮನಿ ಅವಸ್ಥೆಯಲ್ಲಿ ಈ ಚೋಳು ಹಾರಿ ಐಕ್ಯವಾಗುತ್ತದೆ. (ಉನ್ಮನಿ ಅವಸ್ಥೆ ಎಂದರೆ ಸಾಧನೆಯ ಒಂದು ಅವಸ್ಥೆ. ಈ ಅವಸ್ಥೆಯಲ್ಲಿ ಸಾಧಕನ ಪ್ರಜ್ಞೆಯು ಲೋಕಸಾಮಾನ್ಯ ಸ್ಥಿತಿಯಲ್ಲಿ ಇರುವದಿಲ್ಲ. ಹೀಗಾಗಿ ಆ ವ್ಯಕ್ತಿಯು ಜನರ ಕಣ್ಣಿಗೆ ಹುಚ್ಚನಂತೆ ಕಾಣಬಹುದು. ರಾಮಕೃಷ್ಣ ಪರಮಹಂಸರು ಈ ಅವಸ್ಥೆಯಲ್ಲಿ ಇದ್ದಾಗ ಹುಚ್ಚರಂತೆ ವರ್ತಿಸುತ್ತಿದ್ದರು ಎಂದು ಹೇಳಲಾಗುತ್ತದೆ.)

ಈಗಿನ ಆಧುನಿಕ ಮನೆಗಳಲ್ಲಿ ಚೋಳು ಕಾಣಸಿಗುವದಿಲ್ಲ. ಆದರೆ ಮೊದಲು ಹಳ್ಳಿಗಳಲ್ಲಿ ಕಟ್ಟಿರುತ್ತಿದ್ದ ಮಣ್ಣಿನ ಮನೆಗಳಲ್ಲಿ ಇವು ಸಾಮಾನ್ಯವಾಗಿರುತ್ತಿದ್ದವು. ಮನೆಯ ಕೋಣೆಗಳ ಮೂಲೆಗಳಲ್ಲಿ ಇವು ಸಿಗುತ್ತಿದ್ದವು. ಶರೀಫರು ತಮ್ಮ ಈ ಚೋಳು ದೇವರ ಕೋಣೆಯ ಮೂಲೆಯೊಳಗಿತ್ತು ಎಂದು ಹೇಳುತ್ತಾರೆ. ಅಂದರೆ ಈ ಚೋಳನ್ನು ನೀವು ಕಾಣಬೇಕಾದರೆ ಅಥವಾ ಈ ಚೋಳಿನಿಂದ ಕಡಿಸಿಕೊಳ್ಳಬೇಕಾದರೆ, ದೇವರ ಕೋಣೆಯೊಳಗೆ ನೀವು ಪ್ರವೇಶಿಸಬೇಕು ಅರ್ಥಾತ್ ನಿಮ್ಮ ಮನಸ್ಸು ಪರಮಾತ್ಮದ ಕಡೆಗೆ ತಿರುಗಬೇಕು! ದೇವರ ಮನೆ ಎಂದರೆ ಮನುಷ್ಯನ ಮನಸ್ಸು ಎಂದೂ ಅರ್ಥವಾಗಬಹುದು. ಅಲ್ಲಿ ಈ ಚೋಳು ಆಧಾರ ಹಿಡಿದು ಕೊಂಡಿಯನ್ನು ಮೇಲ್ಮುಖವಾಗಿ ಮಾಡಿಕೊಂಡಿತ್ತು.
“ದೇವರಮನಿ ಮೂಲೆಯೊಳಗಿತ್ತು
ಆಧಾರ ಹಿಡಿದು ಊರ್ಧ್ವಮುಖದಿ ಕೊಂಡಿ ಮಾಡಿತ್ತು
ಕಾಲ ಕಳೆದು ಸ್ಥೂಲದೇಹದೊಳಗೆ ಮಲಗಿತ್ತು
ಕಲಿಕರ್ಮ ನುಂಗಿತ್ತು
ದೇವಶಿಶುನಾಳಧೀಶನ ಧ್ಯಾನದೊಳಗಾ ಚೋಳು ಇತ್ತು
ಕಚ್ಚುತಿರಲು ಎಚ್ಚರಾದಿತು, ಹುಚ್ಚು ಹಿಡಿದಂಗಾತು ”

ಶರೀಫರು ಈ ಸಾಲಿನಲ್ಲಿ ಯೋಗಸಾಧನೆಯ ಪರಿಭಾಷೆಯನ್ನು ಬಳಸುತ್ತಾರೆ. ಆಧಾರ ಎಂದರೆ ಮೂಲಾಧಾರ ಚಕ್ರ. ಅಲ್ಲಿ ಈ ಚೋಳು ಊರ್ಧ್ವಮುಖಿಯಾಗಿತ್ತು ಅಂದರೆ ಇದರ ಗಮನ ಮೂಲಾಧಾರದ ಮೇಲಿರುವ ಚಕ್ರಗಳತ್ತ ಇದೆ. (ಮೂಲಾಧಾರದ ಮೇಲಿನ ಚಕ್ರಗಳು ಹೀಗಿವೆ: ಸ್ವಾಧಿಸ್ಠಾನ, ಮಣಿಪೂರ, ಅನಾಹತ, ವಿಶುದ್ಧಿ ಹಾಗೂ ಆಜ್ಞಾಚಕ್ರ.) ಸಾಧಕನನ್ನು ಮೇಲ್ಮುಖವಾಗಿ ಕರೆದೊಯ್ಯುವ ಶಕ್ತಿ ಇದು. ತನ್ನ ಸಮಯ ಬರುವವರೆಗೆ ಇದು ಸ್ಥೂಲದೇಹದಲ್ಲಿ ಅಂದರೆ ಜ್ಞಾನವಿಹೀನ ದೇಹದಲ್ಲಿ ನಿದ್ರಿಸುತ್ತಿರುತ್ತದೆ. (ಕುಂಡಲಿನಿ ಶಕ್ತಿಯು ಮೂಲಾಧಾರದಲ್ಲಿ ಸರ್ಪರೂಪದಲ್ಲಿ ಮಲಗಿರುತ್ತದೆ ಎನ್ನುವದು ಯೋಗಶಾಸ್ತ್ರದ ಪರಿಭಾಷೆ.) ಹಾಗೂ ಕಲಿಕರ್ಮವನ್ನು ಅಂದರೆ ದುಷ್ಕರ್ಮಗಳನ್ನು ನುಂಗುತ್ತ ತಕ್ಕ ಸಮಯಕ್ಕಾಗಿ ಕಾಯುತ್ತಿತ್ತು. ಸಮಯ ಬರುವ ವರೆಗೂ ಈ ಚೋಳು ಪರಮಾತ್ಮನ ಧ್ಯಾನದಲ್ಲಿಯೇ ಮಗ್ನವಾಗಿತ್ತು. ಅರ್ಥಾತ್ ಪರಮಾತ್ಮನ ಹೊರತಾಗಿ ಈ ಶಕ್ತಿಗೆ ಮತ್ತೇನೂ ಬೇಕಾಗಿಲ್ಲ. ಅಂತಹ ಚೈತನ್ಯ ವು ಕುಟುಕಿದಾಗ, ಶರೀಫರು ತಮಗೆ ಎಚ್ಚರಾಯಿತು, ಅಷ್ಟೇ ಅಲ್ಲ ಹುಚ್ಚು ಹಿಡಿದ ಹಾಗಾಯಿತು ಎಂದು ಹೇಳುತ್ತಾರೆ.
ಪರಮಾರ್ಥದ ಜ್ಞಾನ ದೊರೆತ ಬಳಿಕ ಜೀವಿಯು ಪರಮಾತ್ಮನ ಹುಚ್ಚಿನಲ್ಲಿ ಮುಳುಗುವದು ಸಹಜವೇ ಆಗಿದೆ!

[ಟಿಪ್ಪಣಿ:
ಪರಮಾರ್ಥದ ಜ್ಞಾನಕ್ಕಾಗಿ ನೋವಿನ ಅನುಭವ ಅನಿವಾರ್ಯವೇನೊ? ಕರ್ನಾಟಕದ ಇನ್ನಿಬ್ಬರು ಸಂತರ ಬಾಳಿನಲ್ಲಿಯೂ ಇಂತಹ ವಿಷಾದಕರ ಘಟನೆಗಳು ನಡೆದಿವೆ. ಮೊದಲನೆಯವರು ಬಸವಣ್ಣ. ತಮ್ಮ ಮಗ ಸಂಗಬಸವಣ್ಣ ನಿಧನ ಹೊಂದಿದಾಗ ಅವರು ಉದ್ಗರಿಸಿದ ವಚನ ಹೀಗಿದೆ:
“ಪಕ್ವವಾದ ಫಲವಿರಲು ಕಸುಕಾಯನೆತ್ತಿಕೊಂಡನು ಶಿವನು”.
ಪರಮಾತ್ಮನು ವಯಸ್ಸಾದ ತನಗೆ ಸಾವು ಕೊಡುವ ಬದಲು ಚಿಕ್ಕ ಬಾಲಕನಿಗೆ ಸಾವು ಕೊಟ್ಟನಲ್ಲ ಎನ್ನುವ ಈ ವಚನದಲ್ಲಿ ವ್ಯಕ್ತವಾಗುವ anguish ಹಾಗೂ resignation to God’s will ಇವು ಬೇರೆ ಯಾವ ಭಾಷೆಯ ಸಾಹಿತ್ಯದಲ್ಲೂ ಸಿಗಲಿಕ್ಕಿಲ್ಲ.
ಎರಡನೆಯವರು ಪುರಂದರದಾಸರು. ತಮ್ಮ ಮಗನ ಮರಣದ ಸಂದರ್ಭದಲ್ಲಿ ಇವರು ಹಾಡಿದ ಗೀತೆಯೂ ಸಹ ಶೋಕರಸದ ಅನನ್ಯ ಗೀತೆಯಾಗಿದೆ:
“ಗಿಳಿಯು ಪಂಜರದೊಳಿಲ್ಲ
ಬರಿದೆ ಪಂಜರವಾಯಿತಲ್ಲ!”]