Sunday, July 12, 2009

ಬೆಕ್ಕು ಹಾರುತಿದೆ ನೋಡಿದಿರಾ?

ಬೇಂದ್ರೆಯವರ ಪ್ರತಿಭೆ ಕೇವಲ ಗಂಭೀರ ಸಾಹಿತ್ಯಕ್ಕೆ ಮಾತ್ರ ಮೀಸಲಾಗಿರಲಿಲ್ಲ. ವಿನೋದಸಾಹಿತ್ಯದಲ್ಲೂ ಅವರು ಕುಶಲರೇ. ಅವರ ಅಣಕುವಾಡುಗಳು ಹಾಗೂ ಅವರ ‘ಸಾಯೋ ಆಟ’ ನಾಟಕವು ಅವರ ಈ ಪ್ರತಿಭೆಗೆ ಉದಾಹರಣೆಗಳಾಗಿವೆ.

‘ಹಕ್ಕಿ ಹಾರುತಿದೆ ನೋಡಿದಿರಾ?’ ಕವನವನ್ನು ಬರೆದು, ಹಾಡಿ, ಕನ್ನಡಿಗರನ್ನು ಮೋಡಿ ಮಾಡಿದ ಬೇಂದ್ರೆಯವರು ಇದೇ ಹಾಡನ್ನು ಅಣಗಿಸಿ ‘ಬೆಕ್ಕು ಹಾರುತಿದೆ ನೋಡಿದಿರಾ?’ ಎನ್ನುವ ಕವನವನ್ನು ಬರೆದರು. ಇಂತಹ ಕವನಗಳಿಗೆ ‘ಅಣಕುವಾಡು’ ಎಂದು ಕರೆದರು. ‘ಒರದಾ ತಗಣಿ ಒರದಾ’ ಎನ್ನುವದು ಅವರ ಇನ್ನೊಂದು ಅಣಕುವಾಡು. ಇದು ‘ವರದಾ ಕಂಚಿ ವರದಾ’ ಎನ್ನುವ ದಾಸರ ಹಾಡಿನ ಮೇಲೆ ರೂಪಿತವಾಗಿದೆ.

‘ಬೆಕ್ಕು ಹಾರುತಿದೆ ನೋಡಿದಿರಾ?’ ಕವನವನ್ನು ಓದಿದಾಗ, ಬೇಂದ್ರೆಯವರ ವೈನೋದಿಕ ಕಲ್ಪನಾಸಾಮರ್ಥ್ಯದ ಅರಿವಾಗುವದು. ‘ಹಕ್ಕಿ ಹಾರುತಿದೆ ನೋಡಿದಿರಾ?’ ಕವನದಲ್ಲಿ ಆಟವಾಡಿದ ಕಲ್ಪನೆಯೇ ಈ ಕವನದಲ್ಲಿಯೂ ಆಟವಾಡಿದೆ. ಭಾಷೆ, ಛಂದಸ್ಸು ಎಲ್ಲವೂ ಮೂಲಕವನದ ಅನುಕರಣೆಗಳು. ಅಲ್ಲದೆ, ಪ್ರತಿಯೊಂದು ಸಾಲಿನಲ್ಲಿಯೂ ಮೂಲಕವನದ ಅಣಕನ್ನು ಕಾಣಬಹುದು.

‘ಬೆಕ್ಕು ಹಾರುತಿದೆ ನೋಡಿದಿರಾ?’ ಕವನದ ಪೂರ್ತಿಪಾಠ ಹೀಗಿದೆ:

ಈರುಳ್ಳ್ಯುರುಳಲು ಮಾಡವು ಬೆಳಗೆ
ಅತ್ತಲೆತ್ತಲು ಕತ್ತಲೆಯೊಳಗೆ
ಯಾವುದ ! ಯಾವುದ ! ಯಾವುದ ಎಂದು
ಕೇಳುವ ಹೇಳುವ ಹೊತ್ತಿನ ಒಳಗೆ
ಬೆಕ್ಕು ಹಾರುತಿದೆ ನೋಡಿದಿರಾ? ||೧||

ಕರಿ-ನೆರೆ ಬಣ್ಣದ ಮೊಸಡೆಯ ಗಂಟು
ಬಿಳಿ-ಹೊಳೆ ಬಣ್ಣದ ಮೀಸೆಗಳೆಂಟು
ಹಚ್ಚನ ಬೆಚ್ಚನ ಪಚ್ಚೆಯ ಪೈರಿನ
ಬಣ್ಣದ ಕಣ್ಣು ಕಿವಿ ಬದಿಗುಂಟು
ಬೆಕ್ಕು ಹಾರುತಿದೆ ನೋಡಿದಿರಾ? ||೨||

ಕಾಡಿಗೆಗಿಂತಲು ಕಪ್ಪೋ ಬಣ್ಣಾ
ಕತ್ತಲಕೇ ಕಾಲೊಡೆದವೊ ಅಣ್ಣಾ
ಕೂದಲ ಕೂದಲ ನಿಗುರಿಸಿಕೊಂಡು
ಸೂರ್ಯ-ಚಂದ್ರರೊಲು ಮಾಡಿದೆ ಕಣ್ಣಾ
ಬೆಕ್ಕು ಹಾರುತಿದೆ ನೋಡಿದಿರಾ? ||೩||

ರಾಜ್ಯದ ಹೆಗ್ಗಣಗಳ ತಾನೊಕ್ಕಿ
ಜೊಂಡಿಗದಾ ಹುಲುಗಡಣವ ಮುಕ್ಕಿ
ಹಾರಿಸಿ ಹೇಂಟೆಯ ಹಿಂಡುಹಿಂಡುಗಳ
ಜಂಭದ ಕೋಳಿಯ ನೆತ್ತಿಯ ಕುಕ್ಕಿ
ಬೆಕ್ಕು ಹಾರುತಿದೆ ನೋಡಿದಿರಾ? ||೪||

ಹಾಲಿನ ಗಡಿಗೆಯ ತಳವನು ಒರಸಿ
ಮೊಸರಿನ ಮಡಿಕೆಯ ಮುಚ್ಚಳ ಸರಿಸಿ
ಉರುಳಿಸಿ ಹೊರಳಿಸಿ ಭಾಂಡ ಭಾಂಡಗಳ
ಬಿಸಿ ಹಾಲಲಿ ತುಸು ಮಜ್ಜಿಗೆ ಬೆರಸಿ
ಬೆಕ್ಕು ಹಾರುತಿದೆ ನೋಡಿದಿರಾ? ||೫||

ಇಲಿಗಳು ಬೆಳ್ಳಗೆ ಇದ್ದರು ಬಿಡದು
ಬೆಳ್ಳಗಿದ್ದದನು ಕುಡಿದೂ ಕುಡಿದೂ
ನೋಡಿ ಚಂದ್ರನನು ಬೆಣ್ಣೆಯದೆಂದೊ
ಮುಗಿಲಿನಂಗಳಕೆ ಸಿಟ್ಟನೆ ಸಿಡಿದು
ಬೆಕ್ಕು ಹಾರುತಿದೆ ನೋಡಿದಿರಾ? ||೬||

ಹಿಂದಕೆ ಮುಂದಕೆ ಚಾಚಿದೆ ಕಾಲ
ಉಬ್ಬಿಸೆಬ್ಬಿಸಿದೆ ಜೊಂಡಿನ ಬಾಲ
ಬೆಳುದಿಂಗಳ ಹಾಲೆನೆ ತಿಳುಕೊಂಡೊ
ಬಲ್ಲರು ಯಾರಿವರಪ್ಪನ ಸಾಲ!
ಬೆಕ್ಕು ಹಾರುತಿದೆ ನೋಡಿದಿರಾ? ||೭||
…………………………………………………………….
‘ಹಕ್ಕಿ ಹಾರುತಿದೆ ನೋಡಿದಿರಾ?’ ಮೂಲಕವನದ ಪೂರ್ತಿಪಾಠ ಹೀಗಿದೆ:
ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತುಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆ ತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ? ||೧||

ಕರಿನೆರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ? ||೨||

ನೀಲಮೇಘಮಂಡಲ-ಸಮ ಬಣ್ಣ !
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ !
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ? ||೩||

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ? ||೪||

ಯುಗ-ಯುಗಗಳ ಹಣೆಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನೆಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ? ||೫||

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ? ||೬||

ಮುಟ್ಟಿದೆ ದಿಗ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೊ
ಬಲ್ಲರು ಯಾರಾ ಹಾಕಿದ ಹೊಂಚ
ಹಕ್ಕಿ ಹಾರುತಿದೆ ನೋಡಿದಿರಾ? ||೭||
………………………………………………………………………………….................
‘ಹಕ್ಕಿ ಹಾರುತಿದೆ ನೋಡಿದಿರಾ?’ ಕವನದ ಮೊದಲ ನುಡಿಯನ್ನು ನೋಡಿರಿ:
ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತುಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆ ತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ? ||೧||

ಈಗ ‘ಬೆಕ್ಕು ಹಾರುತಿದೆ ನೋಡಿದಿರಾ?’ ಕವನದ ಮೊದಲ ನುಡಿಯನ್ನು ನೋಡಿರಿ:
ಈರುಳ್ಳ್ಯುರುಳಲು ಮಾಡವು ಬೆಳಗೆ
ಅತ್ತಲೆತ್ತಲು ಕತ್ತಲೆಯೊಳಗೆ
ಯಾವುದ ! ಯಾವುದ ! ಯಾವುದ ಎಂದು
ಕೇಳುವ ಹೇಳುವ ಹೊತ್ತಿನ ಒಳಗೆ
ಬೆಕ್ಕು ಹಾರುತಿದೆ ನೋಡಿದಿರಾ? ||೧||

ಮೂಲಕವನದ ಮೊದಲ ಸಾಲಿನಲ್ಲಿ ‘ಇರುಳಿರುಳಳಿದು ದಿನ ದಿನ ಬೆಳಗೆ’ ಎನ್ನುವ ವಾಕ್ಯವಿದ್ದರೆ, ಅಣಕುಕವನದಲ್ಲಿ ‘ಈರುಳ್ಳ್ಯುರುಳಲು ಮಾಡವು ಬೆಳಗೆ’ ಎನ್ನುವ ಸಾಲಿದೆ.
ಇವೆರಡೂ ಸಾಲುಗಳು ಶ್ರವಣಕ್ಕೆ ಒಂದೇ ತೆರನಾಗಿವೆ. ಆದರೆ ಮೂಲಕವನದ ಸಾಲು ಹಕ್ಕಿಯ ಬೆಳಗಿನ ಹಾರಾಟದೊಂದಿಗೆ ಕಾರ್ಯಾರಂಭ ಮಾಡಿದರೆ, ಅಣಕುವಾಡಿನ ಸಾಲು ಕತ್ತಲೆಯಲ್ಲಿ ಬೆಕ್ಕು ಮಾಡುವ ಹಾರಾಟವನ್ನು ಚಿತ್ರಿಸುತ್ತದೆ.
ಈ ಬೆಕ್ಕು ಮಾಡಕ್ಕೆ ಜಿಗಿದು ಅಲ್ಲಿ ಇಟ್ಟ ಈರುಳ್ಳಿಗಳನ್ನೆಲ್ಲ ಉರುಳಿಸುವದರೊಂದಿಗೆ ಕವನ ಪ್ರಾರಂಭವಾಗುತ್ತದೆ.
ಮೂಲಕವನದ ಮುಂದಿನ ಸಾಲುಗಳಲ್ಲಿ
‘ಗಾವುದ ಗಾವುದ ಗಾವುದ ಮುಂದೆ,
ಎವೆ ತೆರೆದಿಕ್ಕುವ ಹೊತ್ತಿನ ಒಳಗೆ ’
ಎನ್ನುವ ವರ್ಣನೆ ಇದ್ದರೆ, ಅಣಕವಾಡಿನಲ್ಲಿ
‘ಯಾವುದ ! ಯಾವುದ ! ಯಾವುದ ಎಂದು,
ಕೇಳುವ ಹೇಳುವ ಹೊತ್ತಿನ ಒಳಗೆ’
ಎನ್ನುವ ವರ್ಣನೆ ಇದೆ.

ಈ ರೀತಿಯಾಗಿ, ಬೇಂದ್ರೆ ಮೂಲಕವನದ ಸಾಲುಗಳ ಅನುರಣನವನ್ನು ಅಣಕುವಾಡಿನಲ್ಲಿ ಅನುಸರಿಸಿದ್ದಾರೆ.

ಮೂಲಕವನವದ ಎರಡನೆಯ ನುಡಿಯಲ್ಲಿ ಹಕ್ಕಿಯ ಗರಿಗಳನ್ನು ವರ್ಣಿಸಲಾಗಿದೆ:
ಕರಿನೆರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ? ||೨||

ಅಣಕುವಾಡಿನಲ್ಲಿ ಬೆಕ್ಕಿನ ಮುಖವರ್ಣನೆ ಇದೆ.
ಕರಿ-ನೆರೆ ಬಣ್ಣದ ಮೊಸಡೆಯ ಗಂಟು
ಬಿಳಿ-ಹೊಳೆ ಬಣ್ಣದ ಮೀಸೆಗಳೆಂಟು
ಹಚ್ಚನ ಬೆಚ್ಚನ ಪಚ್ಚೆಯ ಪೈರಿನ
ಬಣ್ಣದ ಕಣ್ಣು ಕಿವಿ ಬದಿಗುಂಟು
ಬೆಕ್ಕು ಹಾರುತಿದೆ ನೋಡಿದಿರಾ? ||೨||

ಮೂಲಕವನದ ಮೂರನೆಯ ನುಡಿ ಹೀಗಿದೆ:
ನೀಲಮೇಘಮಂಡಲ-ಸಮ ಬಣ್ಣ !
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ !
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ? ||೩||

ಅಣಕುವಾಡಿನ ಮೂರನೆಯ ನುಡಿಯೂ ಸಹ ಬೆಕ್ಕಿನ ಬಣ್ಣದ ಬಣ್ಣನೆಯನ್ನು ಮಾಡುತ್ತದೆ.
ಕಾಡಿಗೆಗಿಂತಲು ಕಪ್ಪೋ ಬಣ್ಣಾ
ಕತ್ತಲಕೇ ಕಾಲೊಡೆದವೊ ಅಣ್ಣಾ
ಕೂದಲ ಕೂದಲ ನಿಗುರಿಸಿಕೊಂಡು
ಸೂರ್ಯ-ಚಂದ್ರರೊಲು ಮಾಡಿದೆ ಕಣ್ಣಾ
ಬೆಕ್ಕು ಹಾರುತಿದೆ ನೋಡಿದಿರಾ? ||೩||

ಮೂಲಕವನದಲ್ಲಿ ಹಕ್ಕಿಗೆ ಮಾಡಲಾದ ವರ್ಣನೆಯ ಸಮಾಂತರ ವರ್ಣನೆ ಅಣಕುವಾಡಿನಲ್ಲಿಯೂ ಇದೆ. ಅಲ್ಲದೆ ‘ಕತ್ತಲಕೇ ಕಾಲೊಡೆದವೊ ಅಣ್ಣಾ’
ಎನ್ನುವ ಸಾಲು ನಗುವನ್ನು ಉಕ್ಕಿಸುತ್ತದೆ.

ಮೂಲಕವನದ ನಾಲ್ಕನೆಯ ನುಡಿ ಕಾಲಪಕ್ಷಿಯ ಗಂಭೀರ-ಭಯಂಕರ ಕಾರ್ಯವನ್ನು ವರ್ಣಿಸುತ್ತದೆ:
ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ? ||೪||

ಅಣಕುವಾಡಿನಲ್ಲಿ ಬೆಕ್ಕು ಮಾಡುವ ಭಯಂಕರ ಕಾರ್ಯ(!)ಗಳ ವರ್ಣನೆ ಇದೆ:
ರಾಜ್ಯದ ಹೆಗ್ಗಣಗಳ ತಾನೊಕ್ಕಿ
ಜೊಂಡಿಗದಾ ಹುಲುಗಡಣವ ಮುಕ್ಕಿ
ಹಾರಿಸಿ ಹೇಂಟೆಯ ಹಿಂಡುಹಿಂಡುಗಳ
ಜಂಭದ ಕೋಳಿಯ ನೆತ್ತಿಯ ಕುಕ್ಕಿ
ಬೆಕ್ಕು ಹಾರುತಿದೆ ನೋಡಿದಿರಾ? ||೪||

ಕಾಲಪಕ್ಷಿ ಹಾಗೂ ಬೆಕ್ಕು ಇವುಗಳ ಘನತೆ ಬೇರೆಯಾಗಿರಬಹುದು. ಇವುಗಳ ಕಾರ್ಯರಂಗಗಳು ಬೇರೆಯಾಗಿರಬಹುದು. ಬೆಕ್ಕು ಮಾಡುವ ಕಾರ್ಯ ಹಾಸ್ಯವಾಗಿ ಕಾಣಲೂಬಹುದು. ಆದರೆ ಈ ಎರಡೂ ಕಾರ್ಯಗಳಲ್ಲಿಯ ಅಂತರಂಗ ಒಂದೇ ಆಗಿದೆ.

ಸಮಾಂತರವಾಗಿ ಚಲಿಸುತ್ತಿದ್ದ ಈ ಎರಡೂ ಕವನಗಳು ಇನ್ನು ಮುಂದಿನ ನುಡಿಗಳಲ್ಲಿ ಸ್ವಲ್ಪ ಬೇರೆಯಾಗಿ ಸಾಗುತ್ತವೆ.
ಮೂಲಕವನದ ಐದನೆಯ ನುಡಿ ಹೀಗಿದೆ:
ಯುಗ-ಯುಗಗಳ ಹಣೆಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನೆಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ? ||೫||
ಮೂಲಕವನವು ಇಲ್ಲಿ ಶುಭ ಕೋರುವ ಕಾಲಪಕ್ಷಿಯಾಗಿದೆ. ಆದರೆ ಬೆಕ್ಕು ಮಾತ್ರ ತನ್ನ ಚಾಳಿಯನ್ನು ಬಿಡದು:
ಹಾಲಿನ ಗಡಿಗೆಯ ತಳವನು ಒರಸಿ
ಮೊಸರಿನ ಮಡಿಕೆಯ ಮುಚ್ಚಳ ಸರಿಸಿ
ಉರುಳಿಸಿ ಹೊರಳಿಸಿ ಭಾಂಡ ಭಾಂಡಗಳ
ಬಿಸಿ ಹಾಲಲಿ ತುಸು ಮಜ್ಜಿಗೆ ಬೆರಸಿ
ಬೆಕ್ಕು ಹಾರುತಿದೆ ನೋಡಿದಿರಾ? ||೫||
ಹಾಲಿನ ಗಡಿಗೆಯನ್ನು ಸ್ವಚ್ಛ ಮಾಡುವ ಈ ಬೆಕ್ಕು ಮೊಸರನ್ನೂ ಸಹ ನೆಕ್ಕುತ್ತದೆ. ಅಲ್ಲಿರುವ ಪಾತ್ರೆಗಳನ್ನೆಲ್ಲ ಉರುಳಿಸುತ್ತದೆ. ಇಷ್ಟಕ್ಕೆ ಇದರ ಕಿಡಿಗೇಡಿತನ ನಿಲ್ಲುವದಿಲ್ಲ. ಮನೆಯವರು ತೆಗೆದಿಟ್ಟ ಬಿಸಿ ಹಾಲಿನಲ್ಲಿ ತುಸು ಮಜ್ಜಿಗೆ ಬೆರಸಿಬಿಡುತ್ತದೆ. ಬೇಂದ್ರೆಯವರ ವಿನೋದಸೃಷ್ಟಿಗೆ ಈ ಸಾಲು ಅತ್ಯುತ್ತಮ ಉದಾಹರಣೆಯಾಗಿದೆ.

ಆರನೆಯ ನುಡಿಗಳಲ್ಲಿ ರಚನಾ ಸಾದೃಶ್ಯವಿದೆ.
ಮೂಲಕವನ ಹೀಗಿದೆ:
ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ? ||೬||

ಅಣಕುವಾಡು ಹೀಗಿದೆ:
ಇಲಿಗಳು ಬೆಳ್ಳಗೆ ಇದ್ದರು ಬಿಡದು
ಬೆಳ್ಳಗಿದ್ದದನು ಕುಡಿದೂ ಕುಡಿದೂ
ನೋಡಿ ಚಂದ್ರನನು ಬೆಣ್ಣೆಯದೆಂದೊ
ಮುಗಿಲಿನಂಗಳಕೆ ಸಿಟ್ಟನೆ ಸಿಡಿದು
ಬೆಕ್ಕು ಹಾರುತಿದೆ ನೋಡಿದಿರಾ? ||೬||

ಕಾಲಪಕ್ಷಿ ಮುಗಿಲಿನಲ್ಲಿ ಹಾರಾಡಿದರೆ, ಈ ಬೆಕ್ಕು ತಾನೂ ಸಹ ಮುಗಿಲಿನಲ್ಲಿರುವ ಚಂದ್ರನನ್ನು ಹಿಡಿಯಲು ಜಿಗಿಯುತ್ತದೆ, ಬೆಣ್ಣೆಯೆಂದು ತಿಳಿದು!

ಮೂಲಕವನದ ಏಳನೆಯ ನುಡಿಯಲ್ಲಿ ಕಾಲಪಕ್ಷಿಯ ಭವಿಷ್ಯತ್ ಯೋಜನೆಗಳ ಹೊಳಹು ಇದೆ:
ಮುಟ್ಟಿದೆ ದಿಗ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೊ
ಬಲ್ಲರು ಯಾರಾ ಹಾಕಿದ ಹೊಂಚ
ಹಕ್ಕಿ ಹಾರುತಿದೆ ನೋಡಿದಿರಾ? ||೭||

ಅಣಕುವಾಡಿನಲ್ಲಿಯೂ ಸಹ ಬೆಕ್ಕು ತನ್ನ ಭವಿಷ್ಯದ ಕಾರ್ಯಗಳಿಗಾಗಿ ಹೊಂಚಿ ನಿಂತಿರುವ ವರ್ಣನೆ ಇದೆ:
ಹಿಂದಕೆ ಮುಂದಕೆ ಚಾಚಿದೆ ಕಾಲ
ಉಬ್ಬಿಸೆಬ್ಬಿಸಿದೆ ಜೊಂಡಿನ ಬಾಲ
ಬೆಳುದಿಂಗಳ ಹಾಲೆನೆ ತಿಳುಕೊಂಡೊ
ಬಲ್ಲರು ಯಾರಿವರಪ್ಪನ ಸಾಲ!
ಬೆಕ್ಕು ಹಾರುತಿದೆ ನೋಡಿದಿರಾ? ||೭||

ಈ ರೀತಿಯಾಗಿ ಮೂಲಕವನದ ತದ್ವತ್ ಅನುಕರಣೆಯನ್ನು ಈ ಅಣಕುವಾಡು ಮಾಡುತ್ತದೆ.
ಮೂಲಕವನವು ಬೇಂದ್ರೆಯವರ ದಾರ್ಶನಿಕ ಪ್ರತಿಭೆಯನ್ನು ತೋರಿಸಿದರೆ, ಅಣಕುವಾಡು ಅವರ ವಿನೋದಸೃಷ್ಟಿಯ ಪ್ರತಿಭೆಯನ್ನು ತೋರಿಸುತ್ತದೆ. ಆದರೆ, ಈ ಎರಡೂ ರಚನೆಗಳಲ್ಲಿ ಕಂಡುಬರುವ ಕಾವ್ಯರಚನಾ ಕೌಶಲ್ಯವು ಅಪ್ರತಿಮವಾಗಿದೆ.
‘ಬೆಕ್ಕು ಹಾರುತಿದೆ ನೋಡಿದಿರಾ?’ ಕವನವನ್ನು ಸ್ವತಂತ್ರ ಕವನವೆಂದು ಓದಿದರೂ ಸಹ , ಇದು ಅಷ್ಟೇ ಸ್ವಾರಸ್ಯಪೂರ್ಣವಾದ ಕವನವಾಗಿದೆ.

34 comments:

ಜಲನಯನ said...

ಶರೀಫರ ಚೋಳ ಕಡಿತು...ನಂತರ ಬೇಂದ್ರೆಯವರ ಎರಡು ಕೃತಿಗಳ ತುಲನಾತ್ಮಕ ವಿಮರ್ಶೆ...ಚನ್ನಾಗಿದೆ ಸರ್, ನನಗೆ ನನ್ನ ಕಾಲೇಜ್ ದಿನಗಳಲ್ಲಿ ಪ್ರೊ.ಓಂಕಾರಪ್ಪ (೧೯೭೫-೭೭ ರಲ್ಲಿ Govt Science College, Bangalore ನಲ್ಲಿ ನಮಗೆ ಕನ್ನಡ ನಾಟಕಗಳನ್ನು ಬೊಧಿಸುತ್ತಿದ್ದರು...ಅವರ ಪಾಠಗಳು ಅವಕ್ಕೇ ಸೀಮಿತವಾಗಿರುತ್ತಿರಲಿಲ್ಲ...ಅವರ ಪಾಠ ಕೇಳಲು..Bsc ಹುಡುಗರೂ ನಮ್ಮ ಪಿಯುಸಿ ಕ್ಲಾಸಿನಲ್ಲಿ ಬಂದು ಕೂಡುತ್ತಿದ್ದರು) ನವರ ವಿವರಣೆ ನೀಡುವ ಶೈಲಿ ನೆನಪಾಗುತ್ತದೆ. ಹಕ್ಕಿಹಾರುತಿದೆ..ಪ್ರಕೃತಿಯ ವಿಹಂಗಮಕ್ಕೆ ಕನ್ನಡಿಯಾದರೆ...ಬೆಕ್ಕು ಚಲ್ಲಾಟಕ್ಕೆ (ಹಾಸ್ಯ ಲೇಪಿತ ವಿಚಾರಧಾರೆ) ಮುನ್ನುಡಿಯಂತೆ ಅಲ್ಲವೇ..??,,,thanks ಸುನಾಥ್ ಸರ್.

ಶ್ರೀನಿವಾಸ ಮ. ಕಟ್ಟಿ said...

ಈ ಕವನದಲ್ಲಿ ಕೇವಲ ಅಣಕು ಮಾತ್ರ ಇದೆಯೆ ? ಮತ್ತೇನೂ ಇಲ್ಲವೆ ? ಹಕ್ಕಿ ಕಾಲನ ರೂಪ ಪಡೆದು ದಿಗ್-ದಿಗಂತಗಳಲ್ಲಿ, ಬ್ರಹ್ಮಾಂಡದ ಪರಿಧಿಯನ್ನು ದಾಟಿ, ಪುರುಷ ಸೂಕ್ತದ "ತ್ವತ್ತಿಷ್ಟದ್ದಶಾಂಗುಲಮ್" ವರೆಗೆ ಹಾರಿದೆ. ಬೆಕ್ಕು ಬಹುಶಃ ಮಾನವನ ಸಂಕೇತವಿರಬೇಕು. ಕಾಲ ( ಹಕ್ಕಿ) ಎಷ್ಟು ಬಲವಂತನೋ, ಮಾನವನು ಅಷ್ತೇ ನಿರ್ಬಲ. ಹಕ್ಕಿ ಮಾಡಿದ್ದನ್ನು, ಬೆಕ್ಕು ಮಾಡಲು ಹೋಗಿ ಅಣಕಿಗೆ ಈಡಾಗಿದೆಯೆ ?

sunaath said...

ಜಲನಯನ,
ಪ್ರೊ.ಓಂಕಾರಪ್ಪರಂತಹ ಅಧ್ಯಾಪಕರನ್ನು ಪಡೆದ ನೀವು ಪುಣ್ಯವಂತರು ಎಂದು ಭಾಸವಾಗುತ್ತದೆ.
ಬೇಂದ್ರೆಯವರು ಹಕ್ಕಿಯಂತೆ ಹಾರಲೂ ಬಲ್ಲರು; ಬೆಕ್ಕಿನಂತೆ ಚೆಲ್ಲಾಟವನ್ನೂ ಆಡಬಲ್ಲರು!

sunaath said...

ಕಟ್ಟಿಯವರೆ,
ಬೇಂದ್ರೆಯವರ ಕವನಗಳಲ್ಲಿ ಹುಡುಕಿದಷ್ಟೂ ಅರ್ಥ ಸಿಗುತ್ತದೆ. ಅದೇ ಅವರ ಹೆಚ್ಚುಗಾರಿಕೆ.

Shivashankara Vishnu Yalavathi said...

huduki kottiddakke dhanyavadagalu...


with regards,

shivagadag.blogspot.com

sunaath said...

ಯಳವತ್ತಿಯವರೆ,
Pleasure is mine!

umesh desai said...

ತಮ್ಮದೇ ಕವಿತೆಯಬಗ್ಗೆ ತಾವೇ ಅಣಕ ಆಡೋದು ವಿಚಿತ್ರ ಅನಿಸ್ತದ ಆದ್ರೂ ಅವರ ಕವಿತಾ ಅಣಕಮಾಡೂ ಧೈರ್ಯ ಬ್ಯಾರೆ ಯಾರಿಗಿತ್ತು...ಬೆಕ್ಕು ಹಾಗೂ ಹಕ್ಕಿ ಪ್ರತಿಮಾ ಅದ್ಭುತ ಹಂಗ ನಿಮ್ಮ ವಿಶ್ಲೇಷಣಾನೂ.....!

sunaath said...

ದೇಸಾಯರ,
ನೀವು ಹೇಳೋದು ಖರೇ ಅದ.
ಬೇಂದ್ರೆಯವರ ಕವಿತಾನ ಅಣಕು ಮಾಡೋ ಪ್ರತಿಭಾ ಬೇಂದ್ರೆಯವರನ್ನ ಬಿಟ್ಟರ ಯಾರಿಗಿದ್ದೀತು?

ಶ್ರೀನಿಧಿ.ಡಿ.ಎಸ್ said...

ಈ ಪದ್ಯ ಕೊಟ್ಟಿದ್ದಕ್ಕ್ ಥ್ಯಾಂಕ್ಸ್ ರೀ ಸರ:)

sunaath said...

ಶ್ರೀನಿಧಿ,
ನಿಮ್ಮ ಧನ್ಯವಾದಗಳನ್ನ ಬೇಂದ್ರೆಯವರಿಗೇ ರವಾನಿಸ್ತಾ ಇದ್ದೇನಿ!

PARAANJAPE K.N. said...

ಎ೦ದಿನ೦ತೆ ಬಹಳ ಚೆನ್ನಾದ ವಿಮರ್ಶೆ. ನನಗೆ ಗೊತ್ತಿಲ್ಲದ ಹಲವು ವಿಚಾರಗಳು ನಿಮ್ಮ ಬ್ಲಾಗಿನಿ೦ದ ತಿಳಿದು ಕೊ೦ಡ೦ತಾಯ್ತು.

sunaath said...

ಪರಾಂಜಪೆಯವರೆ,
ಧನ್ಯವಾದಗಳು.

shivu.k said...

ಸುನಾಥ್ ಸರ್,

ಬೇಂದ್ರೆಯವರ ಆಣಕವಾಡು ಪದ್ಯಗಳ ಬಗ್ಗೆ ನನಗೆ ಗೊತ್ತಿರಲಿಲ್ಲ.

ನೀವು ಅದರ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ. ಬೇಂದ್ರೆಯವರ ವಿನೋಧ ಮುಖ ಪರಿಚಯವಾದಂತಾಯಿತು.

sunaath said...

ಶಿವು,
ಬೇಂದ್ರೆಯವರು ಒಂದೆರಡು ಅಣಕುವಾಡುಗಳನ್ನಲ್ಲದೆ, ಕೆಲವೊಂದು ವಿನೋದಕವನಗಳನ್ನೂ ಬರೆದಿದ್ದಾರೆ. ಅದರಲ್ಲಿಯೂ
ಸಹ ಅವರ ಪ್ರತಿಭೆ ವ್ಯಕ್ತವಾಗುತ್ತದೆ.

ಏಕಾಂತ said...

ಬರಹ ಬಹಳ ಅಗಾಧವಾಗಿದೆ. ಇದೊಂದು ಹೊಸ ವಿಶ್ಲೇಷಣೆ.

sunaath said...

ಏಕಾಂತ,
ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

ಅಂತರ್ವಾಣಿ said...

ಸುನಾಥಂಕಲ್,
ಇದು ತುಂಬಾ ಹಾಸ್ಯಮಯವಾಗಿದೆ. ಬಹುಶಃ ಇದನ್ನು ಯಾರು ಹಾಡಿರಲಾರರು.
ಬೇಂದ್ರೆಯವರು ಈ ರೀತಿಯಾಗಿ ಬರೆಯುತ್ತಿದ್ದರು ಎಂದು ತಿಳಿಸಿಕೊಟ್ಟಿದ್ದೀರ. ವಂದನೆಗಳು

sunaath said...

ಜಯಶಂಕರ,
ಬೇಂದ್ರೆಯವರಲ್ಲಿದ್ದ ವಿನೋದದೃಷ್ಟಿ ಹಾಗೂ ಭಾಷಾಕೌಶಲ್ಯಕ್ಕೆ
ಈ ಕವನವು ಒಂದು ಉದಾಹರಣೆಯಾಗಿದೆ.

Dileep Hegde said...

Sunaath

ಬೆಕ್ಕು ಹಾರುತಿದೆ ಕೇಳಿದ್ದೆ... ಓದಿರಲಿಲ್ಲ.. ಓದುವ ಭಾಗ್ಯ ಕಲ್ಪಿಸಿದ್ದಕ್ಕೆ ಮತ್ತು ಮೂಲ ಪದ್ಯದ ಜೊತೆ ತುಲನಾತ್ಮಕ ವಿವರಣೆ ಒದಗಿಸಿದ್ದಕ್ಕೆ ತುಂಬಾ thanks....

Prabhuraj Moogi said...

ಬೆಕ್ಕಿಗೂ ಹಕ್ಕಿಗೂ ಎಲ್ಲಿಂದ ಎಲ್ಲಿ ಸಂಬಂಧ... ಕವಿಗಳು ಎಲ್ಲಿ ಬೇಕಾದರೂ ಅಷ್ಟು ಚೆಂದವಾಗಿ ಕಲ್ಪಿಸಿಬಿಡುತ್ತಾರೆ.. ಒಂಥರ ಕೋಗಿಲೆಯೆಲ್ಲೊ ಮಾಮರವೇಲ್ಲೊ ಅನ್ನೊ ಹಾಗೆ... ವಿಷ್ಲೇಷಣೆ ಬಗ್ಗೆ ಎರಡು ಮಾತಿಲ್ಲ, ಬಹಳ ಚೆನ್ನಾಗಿದೆ, ಹಾಗೆ ನಿಮ್ಮಿಂದಾಗಿ ಈ ಹಿರಿಯ ಸಾಹಿತಿಗಳ ಕಾವ್ಯ ಪರಿಚಯ ನಮಗಾಗುತ್ತಿದೆ..

VENU VINOD said...

ಯಾರೋ ಬರೆದ ಗೀತೆಗಳನ್ನು ಬೇರೆಯವರು ಅಣಕವಾಡೋದು ಇದ್ದೇ ಇದೆ. ತಮ್ಮದೇ ಕವನವನ್ನು ಇಷ್ಟು ಚೆನ್ನಾಗಿ ಅಣಕವಾಡಿದ ಬೇಂದ್ರೆ, ಇಂಥ ವಿಷಯದ ಬಗ್ಗೆ ವಿಸ್ತೃತ ರೂಪದಲ್ಲಿ ಕೊಟ್ಟ ಸುನಾಥ್ ಇಬ್ಬರಿಗೂ ನಮನ...

Ittigecement said...

ಸುನಾಥ ಸರ್....

ಸ್ವಲ್ಪ ಕೆಲಸದ ಒತ್ತಡದಿಂದ ಬರಲು ತಡವಾಯಿತು...
ಕ್ಷಮೆ ಇರಲಿ...

ಬೇಂದ್ರೆಯವರು ಜೀವನವನ್ನು ಎಷ್ಟು ಅನುಭವಿಸಿರ ಬಹುದು...?
ಅವರ ಅನುಭವ, ಓದು ಅಧ್ಯಯನಗಳು...
ಡಿವಿಜಿಯವರ ನೆನಪಾಗುತ್ತದೆ...

ಬೇಂದ್ರೆಯವರ ಹೆಚ್ಚಾಗಿ ಬರೆದದ್ದು ತಮ್ಮ ಆಡು ಭಾಷೆಯಲ್ಲಿ...
ಅದನ್ನು ಓದುವದೇ ಸೊಗಸು...

ಅಷ್ಟೇ ಸೊಗಸಾಗಿ,
ವಿವರವಾಗಿ ಅರ್ಥ ತಿಳಿಸಿಕೊಡವ ನಿಮಗೆ
ನಾವೆಲ್ಲ ಎಷ್ಟು ಕ್ರತಜ್ಞರಾಗಿದ್ದರೂ ಸಾಲದು...

ನಿಮಗೆ
ನನ್ನ ಸಲಾಮುಗಳು...

ASHRAF said...

ನೀವು ಬರೆದ ಕಮೆಂಟನ್ನು ನಾನು ನೇರದಾರಿ ಯಲ್ಲಿ ಕೋಪಿ ಮಾಡಿ ಹಾಕಿದ್ದೇನೆ. ಕಮೆಂಟ್ ಬರೆದದ್ದಕ್ಕೆ ಧನ್ಯವಾದಗಳು.http://neradaari.blogspot.com/

sunaath said...

ದಿಲೀಪ,
ಓದಿ ಪ್ರತಿಕ್ರಿಯಿಸಿದ್ದಕ್ಕಾಗಿ ನಿಮಗೂ ಧನ್ಯವಾದಗಳು.

sunaath said...

ಪ್ರಭುರಾಜ,
ಕವಿಗಳು ತಮ್ಮ ಕಲ್ಪನೆಯಲ್ಲಿ ಬೆಕ್ಕನ್ನು ಹಕ್ಕಿಯನ್ನಾಗಿ ಮಾಡಬಲ್ಲರು, ಅಲ್ಲವೆ!

sunaath said...

ವೇಣು ವಿನೋದ,
ಬೇಂದ್ರೆಯವರ ಅಣಕು ಪ್ರತಿಭೆ ಅಗಾಧವಾದದ್ದೇ ಆಗಿದೆ!

sunaath said...

ಪ್ರಕಾಶ,
ಬೇಂದ್ರೆಯವರು ತಮ್ಮ ಜೀವನದಲ್ಲಿ ಅನುಭವಿಸಿದ್ದು ಕಡಿಮೆಯೇ?
ಅದಕ್ಕೇ ಅವರು ಹೇಳಿದ್ದಾರೆ:
"ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ;
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ!"

sunaath said...

ಅಶ್ರಫ,
‘ನೇರದಾರಿ’ಯಲ್ಲಿ ಕಮೆಂಟ್ ಹಾಕಿದ್ದಕ್ಕಾಗಿ ನಿಮಗೆ ಧನ್ಯವಾದಗಳು.

Unknown said...

ಕಾಕಾ....ಎಂದಿನಂತೆ ಶೃತಿಗೊಂಡ ಬರಹ

sunaath said...

ಮಾಲಿನಿ, ತುಂಬ ಧನ್ಯವಾದಗಳು.

Unknown said...

ಅದಕ್ಕೇ ಹೇಳೋದಲ್ಲವೆ ರವಿ ಕಾಣದ್ದನ್ನು ಕವಿ ಕಂಡ ಅಂತಾ...

sunaath said...

Unknownರೆ, ಬೇಂದ್ರೆಯವರಂತೂ ವರಕವಿಗಳು. ಇವರು ಕಂಡಿದ್ದು ಹಾಗು ಇವರ ಕಾಣ್ಕೆ ಎರಡೂ ಅಗಾಧವಾದವು.

surabhilatha said...

ತುಂಬಾ ಚೆನ್ನಾಗಿ ದೆ ಮತ್ತೆ ಮತ್ತೆ ಓದುವ ತವಕ ಹೆಚ್ಚಾಗಿದೆ

sunaath said...

ಧನ್ಯವಾದಗಳು, ಸುರಭಿಲತಾ ಮೇಡಮ್. ಬೇಂದ್ರೆಯವರ ಕವನದ ಎಲ್ಲ ಅರ್ಥವನ್ನು ಎಲ್ಲ ಚೆಲುವನ್ನು ಗ್ರಹಿಸುವುದು ಕಷ್ಟಸಾಧ್ಯವೇ ಆಗಿದೆ.