ಕೃಷ್ಣಾನಂದ ಕಾಮತರು (೧೯೩೪-೨೦೦೨) ಬಹುಮುಖ ಪ್ರತಿಭೆಯ ಅದ್ಭುತ ವ್ಯಕ್ತಿ. ನ್ಯೂಯಾರ್ಕ ವಿಶ್ವವಿದ್ಯಾಲಯದಿಂದ ಕೀಟಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಕಾಮತರ ಆಸಕ್ತಿಯ ವ್ಯಾಪ್ತಿ ವಿಸ್ತಾರವಾದದ್ದು. ಸಾಹಿತ್ಯ, ಚಿತ್ರಕಲೆ, ಫೋಟೊಗ್ರಾಫಿ ಇವೆಲ್ಲ ವಿಷಯಗಳಲ್ಲೂ ಅವರ ಸಾಧನೆ ಹೆಮ್ಮೆ ಪಡುವಂತಹುದು.
ಧಾರವಾಡದ ಕರ್ನಾಟಕ ಇತಿಹಾಸ ಸಂಶೋಧನ ಮಂಡಲವು ಕರ್ನಾಟಕ ರಾಜ್ಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ೫೦ ಕೃತಿಗಳನ್ನು ಹೊರತಂದಿದೆ. ಕೃಷ್ಣಾನಂದ ಕಾಮತರ ‘ನಾ ಕಂಡ ಕರ್ನಾಟಕ’ ಎನ್ನುವ ಕೃತಿಯು ಈ ಐವತ್ತು ಕೃತಿಗಳಲ್ಲಿ ಒಂದು. ಈ ಕೃತಿಯಲ್ಲಿ ೨೦ ಬಿಡಿ ಲೇಖನಗಳಿವೆ. ಇವುಗಳಲ್ಲಿ ‘ಕರ್ನಾಟಕದ ಚಿಕಣಿ ಚಿತ್ರಗಳು’ ಎನ್ನುವ ಒಂದು ಲೇಖನವನ್ನು ಬಿಟ್ಟರೆ, ಉಳಿದೆಲ್ಲ ಲೇಖನಗಳು ಈಗಾಗಲೇ ಪತ್ರಿಕೆಗಳಲ್ಲಿ ಮುದ್ರಣ ಕಂಡಂತಹ ಲೇಖನಗಳೇ. ಈ ಗ್ರಂಥದಲ್ಲಿ ಎರಡು ಭಾಗಗಳನ್ನು ಮಾಡಲಾಗಿದೆ. ಮೊದಲ ಭಾಗದ ಹೆಸರು ‘ಕಲಾಪ್ರಪಂಚ’. ‘ಕಲಾಪ್ರಪಂಚ’ದಲ್ಲಿರುವ ಹತ್ತೂ ಲೇಖನಗಳು ಚಿತ್ರಕಲೆಗೆ ಸಂಬಂಧಿಸಿದ ಲೇಖನಗಳು. ಎರಡನೆಯ ಭಾಗದ ಹೆಸರು ‘ಜನಜೀವನ’. ಇದರಲ್ಲಿರುವ ಲೇಖನಗಳು ಮಲೆನಾಡಿನ ಬಗೆಗೆ ಇರುವ ಲೇಖನಗಳು.
ವಿಶಾಲ ಕರ್ನಾಟಕದ ವಿವಿಧ ಸ್ಥಳಗಳಲ್ಲಿರುವ ದೇವಾಲಯಗಳಲ್ಲಿ ಹಾಗು ಮೈಸೂರು ಅರಮನೆಯ ಒಳಾಂಗಣದಲ್ಲಿ ರಚಿಸಲಾದ ಚಿತ್ರಗಳ ಸಮಗ್ರ ದರ್ಶನಕ್ಕೆ ಮೊದಲ ಭಾಗದ ಲೇಖನಗಳು ಮೀಸಲಾಗಿವೆ. ಕಾಮತರು ತಮ್ಮ ಲೇಖನಗಳಲ್ಲಿ ದೇವಾಲಯದ ಇತಿಹಾಸ, ದೇವಾಲಯದಲ್ಲಿಯ ಚಿತ್ರಗಳ ಇತಿಹಾಸ, ಚಿತ್ರಗಳ ರಚನೆಯ ತಂತ್ರ, ಚಿತ್ರಪರಂಪರೆ, ಚಿತ್ರವಿಮರ್ಶೆ, ಚಿತ್ರಗಳ ಮೂಲಕ ಕಲ್ಪಿಸಬಹುದಾದ ಆ ಕಾಲದ ಸಾಮಾಜಿಕ ಹಾಗು ರಾಜಕೀಯ ಸ್ಥಿತಿ ಇವೆಲ್ಲವುಗಳನ್ನು ತಿಳಿಯಾದ ಭಾಷೆಯಲ್ಲಿ ಬಣ್ಣಿಸುತ್ತಾರೆ. ಈ ಚಿತ್ರಗಳ ಸದ್ಯದ ಪರಿಸ್ಥಿತಿ, ಈ ಗ್ರಾಮಗಳಲ್ಲಿ ವೀಕ್ಷಕರಿಗೆ ಸಿಗಬಹುದಾದ ಅಥವಾ ಸಿಗಲಾರದ ಸೌಲಭ್ಯಗಳನ್ನೂ ಸಹ ಓದುಗರ ಅರಿವಿಗೆ ತಂದಿದ್ದಾರೆ.
ಈ ಸಂಕಲನದ ಮೊದಲನೆಯ ಲೇಖನದಲ್ಲಿ ಬರುವ ಲೇಪಾಕ್ಷಿ ದೇವಾಲಯವು ಸದ್ಯದ ಕರ್ನಾಟಕದ ರಾಜಕೀಯ ಗಡಿಯ ಆಚೆಗಿದೆ, ಅಂದರೆ ಈಗಿನ ಆಂಧ್ರ ಪ್ರದೇಶದಲ್ಲಿದೆ. ಲೇಖನದಲ್ಲಿ ಲೇಪಾಕ್ಷಿ ದೇವಾಲಯದ ಈಗಿನ ಸ್ಥಾನಿಕ ವಿವರಗಳನ್ನು ನೀಡುವದಲ್ಲದೇ, ದೇವಾಲಯದ ನಿರ್ಮಾಣಕಾಲ, ಇದರ ಶಿಲ್ಪಿಗಳು, ಕರ್ತೃಗಳು, ಯಜಮಾನಿಕೆ ಇವೆಲ್ಲವುಗಳ ಸಮಗ್ರ ವಿವರಗಳನ್ನು ಲೇಖಕರು ನೀಡಿದ್ದಾರೆ.
ಚಿತ್ರಗಾರರು ಈ ದೇವಾಲಯದ ನಿರ್ಮಾಣದ ಸಮಯದಲ್ಲಿಯೇ ಹಸಿ ಗಾರೆಯ ಮೇಲೆ ಕಪ್ಪುಬಣ್ಣದಿಂದ ರೇಖಾಚಿತ್ರಗಳನ್ನು ಎಳೆದು ಅದರಲ್ಲಿ ಸ್ಥಳೀಯವಾಗಿ ಸಿಗುವ ಹರಳು, ಸಸ್ಯ ಇವುಗಳಿಂದ ಬಣ್ಣವನ್ನು ತುಂಬಿರಬೇಕು ಎಂದು ಲೇಖಕರು ಸಪ್ರಮಾಣವಾಗಿ ಊಹಿಸಿದ್ದಾರೆ. ಅದರಂತೆ ಸ್ಥಿತ ವ್ಯಕ್ತಿಗಳಿಗೆ ಚಲನೆ ಇದ್ದಂತೆ ತೋರಿಸಲು ಕಲಾವಿದರು ಅನುಸರಿಸಿದ ತಂತ್ರವನ್ನು ಲೇಖಕರು ಓದುಗರಿಗೆ ಬಿಚ್ಚಿ ತೋರಿಸುತ್ತಾರೆ.
ಲೇಪಾಕ್ಷಿ ದೇವಾಲಯದ ಚಿತ್ರಗಳು ಅಜಂತಾ, ತಂಜಾವೂರು ಮತ್ತು ವಿಜಯನಗರ ಕಲೆಗಳ ಅನುಕರಣೆಯೆಂದು ಕೆಲವು ಕಲಾತಜ್ಞರು ಸಾಧಿಸಲು ಪ್ರಯತ್ನಿಸಿರುವದು ಸರಿಯಲ್ಲ ಎನ್ನುವ ಅಭಿಪ್ರಾಯವನ್ನು ಲೇಖಕರು ಸಾಧಾರವಾಗಿ ಮಂಡಿಸುತ್ತಾರೆ.
ಲೇಪಾಕ್ಷಿ ದೇವಾಲಯದಲ್ಲಿ ರಚಿಸಲಾದ ಭಿತ್ತಿಚಿತ್ರಗಳನ್ನು ೮ ವರ್ಗಗಳಲ್ಲಿ ವಿಭಾಗಿಸಲಾಗಿದೆ:
(೧) ಧಾರ್ಮಿಕ ಚಿತ್ರಗಳು (೨) ವ್ಯಕ್ತಿ ಚಿತ್ರಗಳು (೩) ಸ್ತ್ರೀಯರ ಚಿತ್ರಗಳು (೪) ಪುರುಷರ ಚಿತ್ರಗಳು (೫) ಸಸ್ಯ-ಪ್ರಾಣಿ ಚಿತ್ರಣ (೬) ದೇವದೇವತೆಗಳು ಹಾಗು ಗಣಗಳು.
ಈ ಎಲ್ಲ ವರ್ಗಗಳಲ್ಲಿ ರಚಿಸಲಾದ ಚಿತ್ರಗಳ ವಿವರವಾದ ವರ್ಣನೆ ಹಾಗು ವೈಶಿಷ್ಟ್ಯಗಳನ್ನು ಕಾಮತರು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಜೊತೆಗೇ ಅನೇಕ ಸುಂದರ ಛಾಯಾಚಿತ್ರಗಳೂ ಇಲ್ಲಿವೆ.
ದುರ್ದೈವದಿಂದ ಈ ಚಿತ್ರಗಳ ರಕ್ಷಣೆಯು ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಇವುಗಳ ರಕ್ಷಣೆಯ ಹೊಣೆಗಾರಿಕೆಯ ಬಗೆಗೆ ಕಾಮತರ ತಳಮಳ ಹಾಗು ಕನ್ನಡಿಗರಿಗೆ ಅವರು ಕೊಡುವ ಎಚ್ಚರಿಕೆ ಹೀಗಿದೆ:
“ಶತಕಗಳ ಅಲಕ್ಷ್ಯದಿಂದಾಗಿ ಕನ್ನಡಿಗರ ಈ ಕಲಾಸಿರಿ ಕಣ್ಮರೆಯಾಗುವದರಲ್ಲಿದೆ. ಕನ್ನಡ ಸಂಸ್ಕೃತಿ, ಕಲೆಗಳು ಎಲ್ಲಿಯೇ ಇದ್ದರೂ ಅವನ್ನು ಭಾವೀ ಪೀಳಿಗೆಗಾಗಿ ರಕ್ಷಿಸಿಡುವದು ಕರ್ನಾಟಕ ಲಲಿತ ಕಲಾ ಅಕಾಡೆಮಿಯಂಥ ಸಂಸ್ಥೆಗಳ ಹೊಣೆ. ಲೇಪಾಕ್ಷಿಯನ್ನು ಕರ್ನಾಟಕದಲ್ಲಿ ಸೇರಿಸುವದು ಅಸಾಧ್ಯವಾಗಿರಬಹುದು. ಆದರೆ ಕರ್ನಾಟಕದ ಸಂಸ್ಕೃತಿಯ ಪ್ರತೀಕಗಳಾದ ಚಿತ್ರ-ಸಿರಿಯನ್ನು ಛಾಯಾಚಿತ್ರಗಳಲ್ಲಿ, ವಿಡಿಯೋ ರೂಪದಲ್ಲಿ ಸಚಿತ್ರ ಗ್ರಂಥದಲ್ಲಿ ಕಾಯ್ದಿರಿಸುವ ಕೆಲಸ ತ್ವರಿತವಾಗಿ ಆಗಲೇಬೇಕಾಗಿದೆ.”
ಪಕ್ಷಿ ಹಾಗು ಪ್ರಾಣಿಗಳ ಶಿಲ್ಪ ಮತ್ತು ಚಿತ್ರಗಳು ನಮ್ಮ ದೇವಾಲಯಗಳ ವೈಶಿಷ್ಟ್ಯವೆನ್ನಬಹುದು. ಕಾಮತರ ಎರಡನೆಯ ಲೇಖನವು ಈ ರಚನೆಗಳ ಬಗೆಗಿದೆ. ಈ ಶಿಲ್ಪಗಳಲ್ಲಿ ಪ್ರಾಣಿಗಳ ನೈಸರ್ಗಿಕ ಚಿತ್ರಗಳಲ್ಲದೆ, ಚಮತ್ಕಾರಿಕ ಚಿತ್ರಗಳೂ ಇವೆ. ಇಂತಹ ಕೆಲವು ಚಿತ್ರಗಳ ಸುಂದರ ವಿವರಣೆ ಹಾಗೂ ಅವುಗಳ ತದ್ರೂಪ ಚಿತ್ರಗಳು ಇಲ್ಲಿವೆ.
ಕಾಮತರ ಮುಂದಿನ ಲೇಖನವು ಕರ್ನಾಟಕದಲ್ಲಿಯ ತಾಳೆಗರಿಯ ಚಿತ್ರಲೇಖನವನ್ನು ವರ್ಣಿಸುತ್ತದೆ. ತಾಳೆಗರಿಯ ಚಿತ್ರಲೇಖನವು ಕರ್ನಾಟಕದಲ್ಲಿ ಕ್ರಿಸ್ತಪೂರ್ವದಲ್ಲಿಯೇ ಹುಟ್ಟಿದರೂ ಸಹ ಸದ್ಯಕ್ಕೆ ಓಡಿಸಾದಲ್ಲಿ ಮಾತ್ರ ಜೀವಂತವಾಗಿದೆ. ತಾಳೆಗರಿಗಳ ಪೂರ್ವಸಿದ್ಧತೆ, ಚಿತ್ರರಚನೆ ಹಾಗು ಸಂರಕ್ಷಣೆಯ ವೈಜ್ಞಾನಿಕ ತಂತ್ರ ಇವುಗಳನ್ನು ಕಾಮತರು ಇಲ್ಲಿ ವಿವರವಾಗಿ ತಿಳಿಸಿದ್ದಾರೆ. ಅಲ್ಲದೆ ತಾಳೆಗರಿಗಳ ಮೇಲೆ ಚಿತ್ರರೂಪದ ಅಕ್ಷರಗಳನ್ನು ಬರೆಯುವ ಪದ್ಧತಿಯು ಕರ್ನಾಟಕದಲ್ಲಿ ತನ್ನದೇ ವಿಧಾನದಲ್ಲಿ ಬಳಕೆಯಲ್ಲಿ ಇತ್ತೆಂಬುದಕ್ಕೆ ಪ್ರಮಾಣ ನೀಡಿದ್ದಾರೆ.
ಕರ್ನಾಟಕದ ಕರಾವಳಿಯ ದೇವಾಲಯದಲ್ಲಿರುವ ಕಾವಿ ಚಿತ್ರಗಳು ರಚನೆ ಹಾಗೂ ಶೈಲಿಯಲ್ಲಿ ಇತರ ಚಿತ್ರಗಳಿಗಿಂತ ತುಂಬ ಭಿನ್ನವಾಗಿವೆ. ಇವುಗಳ ವರ್ಣನೆಯನ್ನು ನಾಲ್ಕನೆಯ ಲೇಖನದಲ್ಲಿ ಮಾಡಲಾಗಿದೆ. ಕರಾವಳಿಯ ಆರ್ದ್ರ ಹವೆಯಿಂದಾಗಿ ವರ್ಣಚಿತ್ರಗಳು ಬೇಗನೇ ಹಾಳಾಗಿ ಹೋಗುತ್ತವೆ. ಆ ಕಾರಣದಿಂದಾಗಿ ಕರಾವಳಿಯ ದೇವಾಲಯ ಹಾಗೂ ಇತರ ಕೆಲವೊಂದು ಕಟ್ಟಡಗಳಲ್ಲಿ ವರ್ಣಚಿತ್ರಗಳ ಬದಲಾಗಿ ಕಾವಿ ಚಿತ್ರಗಳನ್ನು ರಚಿಸಬೇಕಾಯಿತು ಎಂದು ಕಾಮತರು ವಿವರಿಸುತ್ತಾರೆ. ಕಲೆಗೆ ಸಂಬಂಧಿಸಿದಂತೆ ಕಾಮತರ ಸೂಕ್ಷ್ಮಗ್ರಹಣಶಕ್ತಿಯನ್ನು ಹಾಗು ಐತಿಹಾಸಿಕ ಜ್ಞಾನವನ್ನು ಅರಿಯಬೇಕಾದರೆ, ಆ ಲೇಖನದ ಈ ಪರಿಚ್ಛೇದಗಳನ್ನು ಗಮನಿಸಬೇಕು:
“ ಚಿತ್ರಕ್ಕಾಗಿ ಮೀಸಲಿಟ್ಟ ಸ್ಥಳವನ್ನು ಪೂರ್ಣವಾಗಿ ಸದುಪಯೋಗಿಸುವದು ಕಲಾಕಾರನ ಉದ್ದೇಶ. ಅಂತೆಯೇ ಚೂರೂ ಬಿಡದೆ ಗಿಡ-ಮರಗಳನ್ನು ಹೂ ಬಳ್ಳಿಗಳನ್ನು, ಗುಳೋಪು, ಪತಾಕೆ, ನಕ್ಷೆಗಳನ್ನು ಜೋಡಿಸುತ್ತಾನೆ. ಇವುಗಳಲ್ಲಿ ಛಾಯಾಚಿತ್ರಗಳ ವಿವರ ತುಂಬಿಸುವದಕ್ಕಿಂತ, ಸಾಂಕೇತಿಕವಾಗಿ ರೂಪಿಸುವದು ವಾಡಿಕೆ. ವರ್ತುಲ, ಅರೆವರ್ತುಲ, ಲಂಬವರ್ತುಲಗಳನ್ನು ಬಳಸಿ ನಿರ್ಮಿಸಿದ ಗೋಲಕ ಒಂದು ಹೂವನ್ನು ಪ್ರತಿನಿಧಿಸಿದರೆ, ಅದಕ್ಕೊಂದು ಬೊಡ್ಡೆ, ಎಲೆ, ಕಾಯಿ, ಹಣ್ಣು ಜೋಡಿಸಿದರೆ ಮರವಾಗಿ ಬಿಡುತ್ತದೆ….ಕರಾವಳಿಯಲ್ಲಿ ಕುದುರೆಗಳ ಬಳಕೆ ಇರದಿದ್ದರೂ, ಹಲವಾರು ಯೋಧರು, ಸೈನಿಕರು, ಸರದಾರರು ಅಶ್ವಾರೋಹಿಗಳಾಗಿ ಚಿತ್ರಿತವಾಗಿದ್ದಾರೆ. ಬಹುಶಃ ವಿಜಯನಗರದ ಆಳರಸರು ತಮ್ಮ ಸೈನ್ಯಕ್ಕೆ ಬೇಕಾಗುವ ಕುದುರೆಗಳನ್ನು ಅರಬಸ್ತಾನದಿಂದ ಕರಾವಳಿಯ ಈ ಬಂದರುಗಳ ಮೂಲಕವೇ ಆಮದು ಮಾಡಿಸಿಕೊಳ್ಳಲಾರಂಭಿಸಿದ ನಂತರ ಈ ಪರಂಪರೆ ಬೆಳೆದು ಬಂದಿರಬೇಕು.”
ಕೆಲವು ಕಲಾಸಂಶೋಧಕರು ಆತುರದಲ್ಲಿ ಎಸಗುವ ತಪ್ಪುಗಳು ಕಾಮತರ ಸೂಕ್ಷ್ಮ ದೃಷ್ಟಿಗೆ ಬೀಳದೆ ಇಲ್ಲ.ಅದೇ ಲೇಖನದ ಕೆಳಗಿನ ಪರಿಚ್ಛೇದವನ್ನು ಗಮನಿಸಿರಿ:
“ಜರ್ಮನಿಯ ಶಿಷ್ಯವೇತನ ಪಡೆದು ಗೋವಾದ ಕಲೆ ಅಭ್ಯಸಿಸಿದ ಸಂಶೋಧಕಿ ಗ್ರಿಟ್ಲಿ ಯು. ಮಿಟರ್ವಾಲನ್ಳು ಇದು ಮೂಲತಃ ಇಟಾಲಿಯ ಗ್ರಾಫಿಟಿ (ಗೀರುಚಿತ್ರ) ಚಿತ್ರಕಲೆಯಾಗಿದ್ದು, ಪೋರ್ಚುಗೀಜರು ಇದನ್ನು ಭಾರತಕ್ಕೆ ತಂದು, ಚರ್ಚುಗಳಿಗೆ ಹಸ್ತಾಂತರಿಸಿದರೆಂದೂ ಅನಂತರ ಹಿಂದೂಗಳು ಅದನ್ನು ತಮ್ಮದನ್ನಾಗಿ ಮಾಡಿಕೊಂಡಿದ್ದಾರೆಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾಳೆ. ಇದೆಂತಹ ಸಂಶೋಧನೆ! ಪೋರ್ಚುಗೀಜರು ಗೋವಾದ ದೇವಾಲಯಗಳ ಧ್ವಂಸ ಕಾರ್ಯವನ್ನು ಪ್ರಾರಂಭಿಸುವ ಮೊದಲೇ ಅಲ್ಲಿಯ ಸಾರಸ್ವತರ ದೇವಾಲಯಗಳ ಮೇಲೆಲ್ಲ ಈ ಚಿತ್ರಗಳು ನಳನಳಿಸುತ್ತಿದ್ದವು. ಆ ಸಂಶೋಧಕಿ, ದಕ್ಷಿಣ ಕನ್ನಡ ನಾಡಿನ ಕರಾವಳಿಯಲ್ಲೂ ರಾರಾಜಿಸುತ್ತಿದ್ದ ಕಾವಿಚಿತ್ರಗಳನ್ನು ಅಭ್ಯಸಿಸಿದ್ದರೆ, ಇವುಗಳಲ್ಲಿರುವ ಮಣ್ಣಿನ ವಾಸನೆ ಅವಳಿಗೂ ಅರಿವಾಗದೇ ಇರುತ್ತಿರಲಿಲ್ಲ. ಆದರೆ ದುರ್ದೈವದಿಂದ ಅಭಿಮಾನ್ಯಶೂನ್ಯರಾದ ನಾವು ಅವುಗಳನ್ನು ಭರದಿಂದ ನಾಶ ಮಾಡಹತ್ತಿದ್ದೇವೆ. ಸರ್ವನಾಶವಾಗುವ ಮೊದಲೇ ಪುಣ್ಯಾತ್ಮ ಕಲಾಪ್ರೇಮಿಗಳು ಅವನ್ನು ಅಭ್ಯಸಿಸಿ, ಛಾಯಾಚಿತ್ರಗಳಲ್ಲಿ ಸೆರೆ ಹಿಡಿದು, ಗ್ರಂಥರೂಪದಲ್ಲಿ ಅವನ್ನು ಮುಂದಿನ ಪೀಳಿಗೆಗಾಗಿ ರಕ್ಷಿಸಿಡುವದರಿಂದ ಈ ಕಲೆಗೆ ಗೌರವ ಸಲ್ಲಿಸಬಹುದಾಗಿದೆ.”
ಕಾಮತರೇ ಇಂತಹ ಅನೇಕ ಚಿತ್ರಗಳನ್ನು ಛಾಯಾಚಿತ್ರಗಳಲ್ಲಿ ಸೆರೆ ಹಿಡಿದು ಕಲಾಸಂರಕ್ಷಣೆಯ ಪುಣ್ಯಕಾರ್ಯವನ್ನು ಮಾಡಿದ್ದಾರೆ ಎಂದು ಧಾರಾಳವಾಗಿ ಹೇಳಬಹುದು.
ಕಾಮತರ ಮುಂದಿನ ಲೇಖನ ಸೀಬಿ ಎನ್ನುವ ಕುಗ್ರಾಮದಲ್ಲಿಯ ನರಸಿಂಹ ದೇವಾಲಯದ ಭಿತ್ತಿಚಿತ್ರಗಳನ್ನು ವರ್ಣಿಸುತ್ತದೆ. ನರಸಿಂಹ ದೇವಾಲಯದ ಒಳಭಾಗದ ರಚನೆ ಹಾಗು ಹೊರಭಾಗದ ರಚನೆಗಳು ಬೇರೆ ಬೇರೆ ಕಾಲದ ನಿರ್ಮಾಣಗಳೆಂದು ಲೇಖಕರು ಊಹಿಸಿದ್ದಾರೆ. ಸೀಬಿಯ ಚಿತ್ರಗಳ ವರ್ಗೀಕರಣವನ್ನು ಈ ರೀತಿಯಾಗಿ ಮಾಡಲಾಗಿದೆ:
(೧) ಸಾಮಾಜಿಕ (೨) ನೈಸರ್ಗಿಕ (೩) ವ್ಯಕ್ತಿಗತ (೪) ಲೈಂಗಿಕ ಹಾಗು (೫) ಚಾರಿತ್ರಿಕ
ಸೀಬಿಯ ದೇವಾಲಯದ ಈ ಎಲ್ಲ ಚಿತ್ರಗಳನ್ನು ಅಭ್ಯಸಿಸಿ, ವಿವಿಧ ಅಂಶಗಳನ್ನು ಗುರುತಿಸಿದ ನಂತರ ಲೇಖಕರು ಈ ತರಹದ ನಿರ್ಣಯಕ್ಕೆ ಬರುತ್ತಾರೆ:
“……ಇಲ್ಲಿಯ ಕಲಾಶೈಲಿಯು ವಿಜಯನಗರ, ಮಹಾರಾಷ್ಟ್ರ ಮತ್ತು ಪಾಶ್ಚಾತ್ಯ ಪ್ರಭಾವಗಳಿಂದ ಬೆಳೆದು ಬಂದದ್ದು ಎಂದು ಪ್ರತಿಯೊಂದು ಚಿತ್ರವನ್ನು ಕೂಲಂಕಷವಾಗಿ ಅಭ್ಯಸಿಸಿದಾಗ ಅರಿವಾಗುವದು. ಬಹುಮಟ್ಟಿಗೆ ಕ್ರಿ.ಶ. ಸುಮಾರು ೧೭೯೦ರ ವೇಳೆಗೆ ಇವುಗಳು ಅಸ್ತಿತ್ವದಲ್ಲಿ ಬಂದವೆಂದು ಹೇಳಬಹುದು.”
ಸಂಕಲನದ ಏಳನೆಯ ಲೇಖನದ ಶೀರ್ಷಿಕೆ: ‘ಮೈಸೂರು ಅರಸರ ಕಾಲದ ಚಿತ್ರಗಳಲ್ಲಿ ಒಳಾಂಗಣ ದೃಶ್ಯಗಳು’ ಎಂದಿದೆ. ಈವರೆಗಿನ ಪಾರಂಪರಿಕ ಚಿತ್ರಕಲೆಗೂ ಮೈಸೂರು ಒಳಾಂಗಣ ಚಿತ್ರಕಲೆಗೂ ಇರುವ ವ್ಯತ್ಯಾಸಗಳನ್ನು ಇಲ್ಲಿ ಗುರುತಿಸಲಾಗಿದೆ. ಅಲ್ಲದೆ ಈ ವ್ಯತ್ಯಾಸದ ಕಾರಣಗಳನ್ನೂ ಇಲ್ಲಿ ನೀಡಲಾಗಿದೆ. ಅವೆಲ್ಲವನ್ನು ಕಾಮತರ ಭಾಷೆಯಲ್ಲಿಯೇ ಓದೋಣ:
“…..ಸಾಂಪ್ರದಾಯಿಕವಾಗಿ ಬಳಸುವ ಕಲ್ಲು ಮತ್ತು ಕಾಡಿಗೆಗಳಿಂದ ತಯಾರಿಸಿದ ವರ್ಣಗಳ ಬದಲಾಗಿ ರಾಸಾಯನಿಕಗಳಿಂದ ಉತ್ಪಾದಿಸಿದ ಪಾಶ್ಚಾತ್ಯ ಬಣ್ಣಗಳನ್ನು ಬಳಸಿದ್ದರಿಂದ ಅವು ಮಳೆ,ಗಾಳಿ,ಬಿಸಿಲುಗಳಿಗೆ ತಮ್ಮತನ ಕಳೆದುಕೊಳ್ಳಲಾರಂಭಿಸಿದವು. ಇದನ್ನು ದಕ್ಷಿಣದ ಪ್ರವಾಸದ ಹೊತ್ತಿಗೆ ಕಂಡುಕೊಂಡ ಗವರ್ನರ ಜನರಲ್ ಡಾಲಹೌಸಿಯು, ಅವುಗಳ ನವೀಕರಣಕ್ಕೆ ಶಿಫಾರಸು ಮಾಡಿದ್ದ……….ಇಂದಿನ ಛಾಯಾಚಿತ್ರಕಾರರು ಕಲಾಕಾರರಾಗಲು ಯತ್ನಿಸಿದರೆ, ಅಂದಿನ ಚಿತ್ರಕಾರರು ಛಾಯಾಚಿತ್ರಗಾರರಾಗಲು ಯತ್ನಿಸಿದ್ದಾರೆ!”
ಮೈಸೂರು ಅರಮನೆಯ ಒಳಾಂಗಣ ಚಿತ್ರಗಳ ವಿವರಗಳನ್ನು ಅಂದರೆ ಆ ಕಾಲದ ವೇಷಭೂಷಣಗಳನ್ನು, ಅಧಿಕಾರಿಗಳನ್ನು-ಸೇವಕರನ್ನು, ಸಂಗೀತ ಉಪಕರಣಗಳನ್ನು ಕಾಮತರು ವಿವರವಾಗಿ ವರ್ಣಿಸಿದ್ದಾರೆ. ಅದರಂತೆ ಶ್ರವಣಬೆಳಗೊಳದ ಜೈನ ಮಠದ, ಮೈಸೂರಿನ ಪರಕಾಲ ಮಠದ ರಸ್ತೆಯಲ್ಲಿರುವ ವೆಂಕಟರಮಣಸ್ವಾಮಿ ದೇವಾಲಯದ, ಮೈಸೂರಿನ ಅರಮನೆಯ ಆವಾರದಲ್ಲಿರುವ ಪ್ರಸನ್ನ ಕೃಷ್ಣಸ್ವಾಮಿ ದೇವಾಲಯದ ಒಳಾಂಗಣ ಚಿತ್ರಗಳನ್ನು ಕಾಮತರು ವಿವರಿಸಿದ್ದಾರೆ. ಈ ಚಿತ್ರಗಳು ನಶಿಸಿ ಹೋಗುತ್ತಿರುವದನ್ನು ಗಮನಿಸಿದ ಕಾಮತರು ಎಚ್ಚರಿಕೆಯನ್ನೂ ನೀಡಿದ್ದಾರೆ:
“ಕರ್ನಾಟಕದಲ್ಲಿ ಶತಕಗಳ ಹಿಂದೆ ವಿರಚಿತವಾಗಿ ಅಳಿದುಳಿದ ಚಿತ್ರಗಳನ್ನೇ ಅಭ್ಯಸಿಸಿ ಗ್ರಂಥರೂಪದಲ್ಲಿ ಪ್ರಕಟಿಸದೇ ಇರುವದು ಅತ್ಯಂತ ಶೋಚನೀಯ. ಅವು ಸಂಪೂರ್ಣ ನಶಿಸಿ ಹೋಗುವ ಮೊದಲು ಈ ಕಾರ್ಯವಾಗಲೇಬೇಕು.”
“ಕರ್ನಾಟಕದ ಚಿಕಣಿ ಚಿತ್ರಗಳು” ಇದು ಈ ಸಂಕಲನದ ಎಂಟನೆಯ ಲೇಖನ. ಉತ್ತರ ಭಾರತದಲ್ಲಿ ಈ ಚಿತ್ರಕಲೆಯನ್ನು ಪ್ರಾರಂಭಿಸಿದವರು ರಜಪೂತರು. ಕರ್ನಾಟಕದಲ್ಲಿ ಅತಿ ಪುರಾತನ ಚಿಕಣಿ ಚಿತ್ರಗಳೆಂದರೆ ಮೂಡಬಿದಿರೆಯ ಜೈನ ಮಠದಲ್ಲಿರುವ ತಾಳೆಗರಿ ಗ್ರಂಥಗಳಲ್ಲಿರುವ ಚಿಕಣಿ ಚಿತ್ರಗಳು. (ಕ್ರಿ.ಶ.೧೧೨೦-೧೧೪೩). ಅದರಂತೆ ವಿಜಾಪುರದ ಸುಲ್ತಾನರ ಗ್ರಂಥಗಳಲ್ಲಿಯೂ ಚಿಕಣಿ ಚಿತ್ರಗಳಿದ್ದು, ಈ ಚಿತ್ರಗಳಲ್ಲಿ ಇರಾನದ ವರ್ಚಸ್ಸು ಕಾಣುತ್ತದೆ ಎನ್ನುವದು ಲೇಖಕರ ಅಭಿಪ್ರಾಯವಾಗಿದೆ.
ಮೈಸೂರಿನಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರರು ಅಧಿಕಾರಕ್ಕೆ ಬಂದಬಳಿಕ ಸಾಂಪ್ರದಾಯಕ ಸಚಿತ್ರ ಗ್ರಂಥಗಳಿಗೆ ಪ್ರೋತ್ಸಾಹ ದೊರೆಯಿತು. ಅವರ ಕಾಲದಲ್ಲಿ ರಚಿತವಾದ ‘ತತ್ವನಿಧಿ’ ಎನ್ನುವ ಗ್ರಂಥದಲ್ಲಿ ೨೨೭೫ ಚಿಕಣಿ ಚಿತ್ರಗಳನ್ನು ಬರೆಯಲಾಗಿದೆಯಂತೆ! ಈ ಕೃತಿಯಲ್ಲಿಯ ‘ಗೃಹನಿಧಿ’ ಎನ್ನುವ ಭಾಗದಲ್ಲಿ ಹಕ್ಕಿಗಳಿಂದ ಹಿಡಿದು ಕೀಟಗಳವರೆಗೆ ಸಕಲ ಪ್ರಾಣಿಗಳನ್ನು ಚಿತ್ರಿಸಲಾಗಿದೆ.
ಕಾಮತರು ಈ ಚಿತ್ರಕೋಶವನ್ನು ದೊರಕಿಸಲು ಪ್ರಯತ್ನಪಟ್ಟು ವಿಫಲರಾದ ಕತೆಯನ್ನು ಅವರ ಮಾತಿನಲ್ಲಿಯೇ ಕೇಳಿರಿ:
“ ಈ ಚಿತ್ರಕೋಶವೂ ಮೈಸೂರಿನ ಒರಿಯಂಟಲ್ ಲೈಬ್ರರಿ ಮತ್ತು ಸಂಶೋಧನಾ ಕೇಂದ್ರದಲ್ಲಿದ್ದು ಅದರ ಪ್ರಕಾಶನಕ್ಕೆ ಧನಸಹಾಯದ ಕೊರತೆಯ ಜೊತೆಗೆ ಗ್ರಂಥದ ಸ್ವಾಮಿತ್ವ ಯಾರಿಗೆ ಸೇರಿದ್ದು? ಎಂದು ನಿರ್ಧರಿಸಲಾರದೇ, ಕಲಾಪ್ರೇಮಿಗಳಿಗೆ ನಿಲುಕದೇ ಮೂಲೆಗುಂಪಾಗಿದೆ. ಅದನ್ನು ವೀಕ್ಷಿಸಲು ಕಷ್ಟಪಟ್ಟು ಅಪ್ಪಣೆ ಪಡೆದಾಗ ಕೆಲವೇ ಪುಟಗಳ ಮೇಲೆ ಕೆಲನಿಮಿಷ ಕಣ್ಣು ಓಡಿಸಲು ಮಾತ್ರ ಅನುವು ಮಾಡಿಕೊಟ್ಟರು. ಇದರ ಇನ್ನೊಂದು ಪ್ರತಿ ಮೈಸೂರಿನ ಯುವರಾಜ ಶ್ರೀಕಂಠದತ್ತ ಒಡೆಯರ ಒಡೆತನದಲ್ಲಿದೆ ಎಂದು ಅರಿತು,ಅವರಿಂದ ಮುಂಚಿತವಾಗಿ ಅನುಮತಿ ಪಡೆದೇ ಅರಮನೆಗೆ ಹೋದರೆ ಕೀಲಿಕೈಗಳಿಲ್ಲ ಎಂಬ ಕುಂಟ ನೆಪ ಮಾಡಿ ನುಣುಚಿಕೊಂಡರು…..”
ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದ ಇನ್ನಿತರ ಕೃತಿಗಳಾದ ‘ಸೌಗಂಧಿಕಾ ಪರಿಣಯ’ ‘ವೃಷಭೇಂದ್ರ ವಿಜಯ, ಹಾಗು ‘ಬಸವ ಪುರಾಣ’ ಈ ಕೃತಿಗಳ ಹಾಗೂ ಅವುಗಳಲ್ಲಿರುವ ಚಿತ್ರಗಳ ಪರಿಚಯವನ್ನೂ ಕಾಮತರು ಈ ಲೇಖನದಲ್ಲಿ ಮಾಡಿದ್ದಾರೆ. ಇದರಂತೆ ಅನೇಕ ಧಾರ್ಮಿಕ ವ್ಯಕ್ತಿಗಳ, ಉಚ್ಚ ಅಧಿಕಾರಿಗಳ ಹಾಗು ಮೈಸೂರು ಮಹಾರಾಜರ ಭಾವಚಿತ್ರಗಳ ಬಗೆಗೆ ಕಾಮತರು ವಿವರ ನೀಡಿದ್ದಾರೆ. ‘ಸೌಗಂಧಿಕಾ ಪರಿಣಯ’ದ ೧೦೪೩ನೆಯ ಪರಿಚ್ಛೇದದಿಂದ ೧೦೭೨ನೆಯ ಪರಿಚ್ಛೇದದವರೆಗೆ ಸಸ್ಯಶಾಸ್ತ್ರದ ಸಚಿತ್ರ ವಿವರಣೆಯಿರುವದಾಗಿ ಕಾಮತರು ತಿಳಿಸಿದ್ದಾರೆ. ಈ ವಿವರಣೆಗಳಲ್ಲಿ ತಿಳಿಸಲಾದ ಸಾಂಪ್ರದಾಯಿಕ ನಂಬಿಕೆಗಳಲ್ಲಿ ಗಟ್ಟಿ ಅಂಶವೆಷ್ಟು, ಟೊಳ್ಳೆಷ್ಟು ಎನ್ನುವದನ್ನು ನಮ್ಮ ಕೃಷಿಸಂಸ್ಥೆಗಳು ಹಾಗು ವಿಶ್ವವಿದ್ಯಾಲಯಗಳು ಸಂಶೋಧಿಸಬೇಕೆಂದು ಕಾಮತರು ಅಭಿಪ್ರಾಯ ಪಡುತ್ತಾರೆ.
ಚಿಕಣಿ ಚಿತ್ರಗಳಲ್ಲಿ ಮುಖ್ಯವಾದವುಗಳು ರಾಗಮಾಲಾ ಚಿತ್ರಗಳು. ಬಿಜಾಪುರದ ಸುಲ್ತಾನನಾದ ಇಬ್ರಾಹಿಮ್ ಆದಿಲ್ ಶಹಾ ರಚಿಸಿದ ‘ಕಿತಾಬ್-ಏ-ನೌರಸ್’ದಲ್ಲಿರುವ ೯ ರಾಗ-ರಾಗಿಣಿಯರ ಚಿತ್ರಗಳ ವಿವರಗಳನ್ನು ಹಾಗು ‘ಶ್ರೀ ತತ್ವನಿಧಿ’ ಯಲ್ಲಿರುವ ೩೬ ರಾಗ-ರಾಗಿಣಿಯರ ಚಿತ್ರಗಳ ವಿವರಗಳನ್ನು ಕಾಮತರು ನೀಡಿದ್ದಾರೆ.
ಎರಡನೆಯ ಭಾಗವು ಮಲೆನಾಡಿನ ವಿಸ್ತೃತವಾದ ಪರಿಚಯಕ್ಕೆ ಮೀಸಲಾಗಿದೆ. ಈ ಭಾಗದಲ್ಲಿ ಲೇಖಕರು ಮಲೆನಾಡಿನ ಪ್ರಾಕೃತಿಕ ಸಂಪತ್ತಿನ ವಿವರಣೆ ನೀಡಿದ್ದಾರೆ. ಇಲ್ಲಿಯ ಘಟ್ಟಪ್ರದೇಶ, ನದಿಗಳು, ಅವುಗಳ ದ್ವೀಪಗಳು ಇವೆಲ್ಲವುಗಳ ವರ್ಣನೆ ಇಲ್ಲಿದೆ. ಹಾಗೆಂದು ಇದು ಬರಿ ಭೌಗೋಲಿಕ ವರ್ಣನೆ ಅಲ್ಲ! ಇದು ಪಶ್ಚಿಮ ಘಟ್ಟಗಳ ಅವಸಾನದ ಇತಿಹಾಸವೂ ಹೌದು. ಕಾಮತರು ತಾವು ಚಿಕ್ಕವರಿದ್ದಾಗ ಇಲ್ಲಿ ಇದ್ದಂತಹ ಪುಷ್ಟ ಪರಿಸರ ಹಾಗೂ ಈಗಿನ ನಷ್ಟಪರಿಸರವನ್ನು ಮರುಕದಿಂದ ವರ್ಣಿಸಿದ್ದಾರೆ. ಅದು ಈಗ ನಷ್ಟವಾಗುತ್ತಿರುವ ಬಗೆಯನ್ನೂ ವಿವರಿಸಿದ್ದಾರೆ. ಕೇವಲ ನಿಸರ್ಗವರ್ಣನೆಯಿಂದ ತೃಪ್ತರಾಗದ ಕಾಮತರು ಇಲ್ಲಿ ವಾಸಿಸುತ್ತಿರುವ ವಿವಿಧ ಜನಸಮೂಹಗಳ ವರ್ಣನೆಯನ್ನೂ ಮಾಡಿದ್ದಾರೆ. ಈ ಸಮುದಾಯಗಳ ವೈಶಿಷ್ಟ್ಯಗಳನ್ನೂ ವಿವರಿಸಿದ್ದಾರೆ.
ಈ ಭಾಗದ ಒಂದು ಲೇಖನವು ‘ಅಂಜದೀವ್’ ನಡುಗಡ್ಡೆಗೆ ಮೀಸಲಾಗಿದೆ. ಕಾಮತರ ಮೊದಲ ಕುತೂಹಲವೆಂದರೆ ಈ ನಡುಗಡ್ಡೆಗೆ ಅಂಜದೀವ್ ಎನ್ನುವ ಹೆಸರು ಹೇಗೆ ಬಂದಿತು ಎನ್ನುವದು. ಅವರ ಪ್ರಶ್ನೆ ಹೀಗಿದೆ:
“ಉತ್ತರ ಕನ್ನಡ ಜಿಲ್ಲೆಯ ಕರಾವಳಿಗುಂಟ ಇರುವ ಹಲವಾರು ದ್ವೀಪಗಳಿಗೆ ಸ್ಥಾನೀಯರು ‘ಕುರ್ವೆ’(ಮಾವಿನಕುರ್ವೆ, ಮಲ್ಲಿಕುರ್ವೆ, ಕುರುಕುರ್ವೆ, ಪಾವಿನಕುರ್ವೆ)ಗಳೆಂದು ಗುರುತಿಸುವದು ವಾಡಿಕೆ. ಅವುಗಳ ಮೇಲೆ ಕೋಟೆಯಿದ್ದರೆ “ದುರ್ಗ”ವೆಂದು ಕರೆಯುವರು. (ಬಸವರಾಜದುರ್ಗ). ಛತ್ರಪತಿ ಶಿವಾಜಿಯ ವರ್ಚಸ್ಸಿಗೆ ಒಳಗಾದ ಕಾರವಾರದ ತೀರದಲ್ಲಿಯ ಜಲದುರ್ಗಗಳಿಗೆ ‘ಗಡ’ ಎಂಬ ಪ್ರತ್ಯಯ ಜೋಡಿಸುವದು ಪರಿಪಾಠ. ದೇವಗಡ, ಕೂರ್ಮಗಡ, ಮಧುಲಿಂಗಗಡ ಮುಂತಾದವು ಈ ಗುಂಪಿಗೆ ಸೇರಿದವು. ಇವುಗಳ ಜೊತೆಯಲ್ಲೇ ಇದ್ದ ಈ ನಡುಗಡ್ಡೆಗೆ ‘ಅಂಜದೀವ್’ ಎಂಬ ವಿಶಿಷ್ಟ ಹೆಸರು ಯಾಕೆ? ಎಂಬ ಕುತೂಹಲ ಕೆರಳಿತು.”
ಈ ಕುತೂಹಲದ ಬೆನ್ನತ್ತಿ ಹೋದ ಕಾಮತರು ಅಂಜದೀವದ ಇತಿಹಾಸವನ್ನೆಲ್ಲ ಶೋಧಿಸಿದ್ದಾರೆ.
ಆರ್ಯದೇವಿಯ ಸ್ಮರಣಾರ್ಥವಾಗಿ ‘ಆರ್ಯದ್ವೀಪ’ವೆಂದು ಕರೆಯಲಾಗುತ್ತಿದ್ದ ಈ ನಡುಗಡ್ಡೆ ವಿದೇಶಿ ನಾವಿಕರ ಬಾಯಲ್ಲಿ ಅಂಜನಿದ್ವೀಪ ಎಂತಲೂ, ಅನಂತರದ ಮಾಪಿಳ್ಳೆ ನಿವಾಸಿಗಳು ಇದನ್ನು ಅಂಜಿದೀವಾ ಎಂದು ಕರೆದರೆಂದೂ ಕಾಮತರು ಟ್ರೇಸ್ ಮಾಡುತ್ತಾರೆ. ಪೋರ್ತುಗೀಜರು ಇಲ್ಲಿ ನೆಲೆ ಊರಿದಾಗ ಈ ಅಂಜಿದೀವಾವನ್ನು ಅಂಜದೀವ್ ಎಂದು ಮಾರ್ಪಡಿಸಿದರೆಂದು ಕಾಮತರು ವಿವರಿಸುತ್ತಾರೆ.
ಕೊನೆಯ ಭಾಗದಲ್ಲಿ ಕಾಮತರು ಪ್ರಗತಿ ಎನ್ನುವ ಮಾಯಾಮೃಗವು ನಿಸರ್ಗಸಂಪತ್ತಿನ ಮಲೆನಾಡನ್ನು ಹೇಗೆ ಬೋಳು ಮಾಡಿದೆ ಎಂದು ವಿಷಾದದಿಂದ ವಿವರಿಸಿದ್ದಾರೆ.
ಕಾಮತರು ಈ ಕೃತಿಯಲ್ಲಿ ಪ್ರಾಚೀನ ಕರ್ನಾಟಕದ ಕಲಾಪ್ರಪಂಚವನ್ನು, ಜನಜೀವನವನ್ನು ಹಾಗೂ ಆಧುನಿಕ ಕಾಲದ ಪರಿಸರ ನಾಶವನ್ನು ಒಬ್ಬ ಕಲಾರಸಿಕನಂತೆ, ಒಬ್ಬ ಸೌಹಾರ್ದ ಸ್ನೇಹಿತನಂತೆ ಆತ್ಮೀಯವಾಗಿ ವಿವರಿಸಿದ್ದಾರೆ. ಆದರೆ ಕೃತಿಯುದ್ದಕ್ಕೂ ಕಂಡು ಬರುವ ಅವರ ಐತಿಹಾಸಿಕ ಜ್ಞಾನ, ಕಲೆಯ ತಿಳುವಳಿಕೆ, ವಿವಿಧ ವಿಷಯಗಳ ಪಾಂಡಿತ್ಯ ,ಕೊನೆಯರಿಯದ ಪರಿಶ್ರಮ ಹಾಗು ಕಲಾರಕ್ಷಣೆಯ ಕಳಕಳಿ ಇವು ಅಚ್ಚರಿಗೊಳಿಸುವಂತಿವೆ.
ಕಾಮತರ ಬಿಡಿ ಲೇಖನಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ, ಸಂಕಲಿಸಿ ಕರ್ನಾಟಕ ಇತಿಹಾಸ ಸಂಶೋಧನ ಮಂಡಲಕ್ಕೆ ಪ್ರಕಟಣೆಗಾಗಿ ನೀಡಿದವರು ಶ್ರೀಮತಿ ಜ್ಯೋತ್ಸ್ನಾ ಕಾಮತ. ಇಂತಹ ಒಂದು ಸ್ವಾರಸ್ಯಕರ ಕೃತಿಯನ್ನು ಕನ್ನಡಿಗರಿಗೆ ನೀಡಿದ್ದಕ್ಕಾಗಿ ಅವರಿಗೆ ನಮ್ಮ ಅಭಿನಂದನೆಗಳು ಸಲ್ಲುತ್ತವೆ.
Tuesday, October 6, 2009
Subscribe to:
Post Comments (Atom)
26 comments:
ಒಬ್ಬ ಹೊಸ ಸಂಶೊಧಕರ ಪರಿಚಯವಾಯ್ತು, ನಮ್ಮ ಮುತ್ತಜ್ಜ ಕೂಡ ಕಿತ್ತೂರಿನ ಇತಿಹಾಸ ಸಂಶೊಧನೆ ಮಾಡಿದ್ದರು, ಎಲ್ಲೊ ಹಳ್ಳಿ ಹಳ್ಳಿಗಳಲ್ಲಿ ಉಳಿದು ಜಾನಪದ ಗೀತೆ ಕೇಳಿ ತಿಳಿದು ಬರೆದದ್ದೇ ಬರೆದದ್ದು, ಈಗ ಅವರು ಬರೆದ ಕೃತಿಗಳೂ ನಮ್ಮಲಿಲ್ಲ ಅನ್ನೊದೇ ವಿಷಾದ.
ಕೃಷ್ಣಾನಂದ ಕಾಮತರ ಜೀವನ-ಸಾಧನೆ-ಸ೦ಶೋಧನೆ- ಆಶಯ-ಪರಿಸರಾಸಕ್ತಿ ಬಗ್ಗೆ ಬಹಳ ಚೆನ್ನಾದ ಲೇಖನವನ್ನು ಕೊಟ್ಟಿದ್ದೀರಿ. ಇಂತಹ ಮಹನೀಯರ ವ್ಯಕ್ತಿ ಪರಿಚಯ ಮಾಲಿಕೆ ನಿಮ್ಮ ಬ್ಲಾಗಿನಲ್ಲಿ ಇನ್ನಷ್ಟು ಪ್ರಕಟವಾಗಲಿ.
ಸುನಾಥ್ ಅವರೆ,
ಕೃಷ್ಣಾನಂದ ಕಾಮತರ ಪರಿಚಯ ಮಾಡಿ ಅವರ ಅದ್ಭುತ ಲೇಖನದ ಸಾರಾಂಶವು ಹೆಚ್ಚು ಜನರಿಗೆ ಮುಟ್ಟುವಂತೆ ಮಾಡಿದ್ದೀರ. ಕೈಯ್ಯಲ್ಲಿರುವ ಪುಸ್ತಕಗಳನ್ನು ಓದಿ, ಇದನ್ನು ಕೋಳ್ಳುವೆ.
ದೇವಸ್ಥಾನಗಳ ರಕ್ಷಣೆ ಸೆರಿಯಾಗಿ ಆಗುತ್ತಿಲ್ಲ. ಇತಿಹಾಸವನ್ನೇ ಬಿಂಬಿಸುವಂತಹ ಚಿತ್ರಗಳು, ಶಿಲ್ಪಗಳು ಕಣ್ಣೆದುರೇ ನಾಶವಾಗುತ್ತಿದೆ. ಮೊನ್ನೆ ಆದ ಪ್ರವಾಹದಲ್ಲಿ ಹಲವಾರು ದೇವಾಲಯಗಳು, ಅದರೊಂದಿಗೆ ಅಮರಶಿಲ್ಪಿ ಜಕಣಾಚಾರಿ ನಿರ್ಮಿಸಿದ ಶಿಲ್ಪಗಳು ಧ್ವಂಸವಾಗಿದೆ ಎಂದು ಕೇಳ್ಪಟ್ಟೆ. ಇತಿಹಾಸವನ್ನು ನೆನಪಿಸಲು "ನಾ ಕಂಡ ಕರ್ನಾಟಕ" ಎಂಬ ಕೃತಿಗಳಲ್ಲಾದರೂ ಇರುತ್ತದಲ್ಲ, ಅದೇ ಸಮಾಧಾನದ ವಿಷಯ.
ಪ್ರಭುರಾಜ,
ನಿಮ್ಮ ಮುತ್ತಜ್ಜ ಸಹ ಇತಿಹಾಸ ಸಂಶೋಧಕರೆಂದು ತಿಳಿದು ಸಂತೋಷವಾಯಿತು. ಅವರ ಕೃತಿಗಳು ಉಳಿದಿದ್ದರೆ ಚೆನ್ನಾಗಿರುತ್ತಿತ್ತು. ಕಿತ್ತೂರಿನ ಬಗೆಗೆ ನಿಮಗೆ ಏನಾರೂ ವಿಶೇಷ ಮಾಹಿತಿ ಇದ್ದರೆ, ದಯವಿಟ್ಟು ನಿಮ್ಮ blog ಮೂಲಕ ಎಲ್ಲರಿಗೂ ತಿಳಿಸಿ.
ಪರಾಂಜಪೆ,
ಕಾಮತರ ಬದುಕಿನ ಬಗೆಗೆ ನಾನು ಬಹಳ ಬರೆದಿಲ್ಲ. ಅಮೆರಿಕದಿಂದ ಹಿಂದಿರುಗಿದ ಬಳಿಕ ಅವರಿಗೆ ಕಾಲೇಜಿನಲ್ಲಿ ಒಂದು ಉಪನ್ಯಾಸಕರ ಹುದ್ದೆ ಸಹ ದೊರೆಯಲಿಲ್ಲ. ಅವರು ತಮ್ಮದೇ ಆದ Scientific Photography Studio ತೆಗೆದು ಜೀವನ ನಿರ್ವಹಣೆ ಮಾಡಿದರು. ಜೊತೆ ಜೊತೆಗೇ ತಮ್ಮ ಇತರ ಎಲ್ಲ ಆಸಕ್ತಿಗಳಲ್ಲಿ ಸಾಧನೆ ಮಾಡಿದರು.
ಸುನಾಥ್ ಅವರೆ,
ಕೃಷ್ಣಾನಂದ ಕಾಮತರದು ನಿಜವಾಗಿಯೂ ಅದ್ಭುತ ಪ್ರತಿಭೆ.
ಅವರ 'ನಾನು ಅಮೆರಿಕೆಗೆ ಹೋಗಿದ್ದೆ', 'ಕೀಟ ಪ್ರಪಂಚ' ಪುಸ್ತಕಗಳನ್ನು ಓದಿದ್ದೇನೆ. ಅವರ ಲೇಖನಗಳು ಬಹಳ ಇಶ್ಟವಾಗಿದ್ದವು. ಅದಾದ ನಂತರದಲ್ಲಿ ಅವರ ಮತ್ಯಾವ ಲೇಖನಗಳನ್ನು ಓದಲಾಗಿರಲಿಲ್ಲ. ವಿಜ್ನಾನವನ್ನು ಅತ್ಯಂತ ಸರಳೀಕರಿಸಿ ಬರೆಯುವ ಕಲೆ ಅವರಲ್ಲಿತ್ತು.
ಅವರ 'ನಾ ಕಂಡ ಕರ್ನಾಟಕ’ ಲೇಖನಗಳ ಸಂಗ್ರಹ ಬಿಡುಗಡೆಯಾದ ಬಗ್ಗೆ ತಿಳಿದಿರಲಿಲ್ಲ. ಬಹಳ ಸುಂದರವಾಗಿ ಪುಸ್ತಕದ ವಿವರಣೆ ನೀಡಿದ್ದೀರಿ. ಮತ್ತು ಅದನ್ನು ಓದುವ ಆಸಕ್ತಿಯನ್ನೂ ಮೂಡಿಸಿದ್ದೀರಿ. ಧನ್ಯವಾದಗಳು.ಖಂಡಿತವಾಗಿಯೂ ಓದುತ್ತೇನೆ.
ಮತ್ತು ನೀವು ಹೇಳಿದಂತೆ ಜ್ಯೋತ್ಸ್ನಾ ಕಾಮತ ಅವರಿಗೆ ಇಂತಹ ಒಂದು ಸ್ವಾರಸ್ಯಕರ ಕೃತಿಯನ್ನು ಕನ್ನಡಿಗರಿಗೆ ನೀಡಿದ್ದಕ್ಕಾಗಿ ನಮ್ಮ ಅಭಿನಂದನೆಗಳು ಸಲ್ಲಬೇಕು.
-
ಗೋದಾವರಿ
ಸುನಾಥ ಸರ್,
ಬಹಳ ಚೆನ್ನಾಗಿ ತಿಳಿಸಿದ್ದೀರಿ... ನಮಗೆ ಇವರ ಬಗ್ಗೆ ತಿಳಿದಿರಲಿಲ್ಲ... ಅವರು ಹೇಳು ಮಾತು ನಿಜವೆನಿಸುತ್ತೆ ಹಳೆಯ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಪ್ರಯತ್ನ ಮಾಡಬೇಕಿದೆ....
ಇಂತ ಮಹನೀಯರ ಬಗ್ಗೆ ವಿವರಿಸಿದ ರೂಪ ಬಹಳ ಮೆಚ್ಚನಾರ್ಹ... ನಿಮ್ಮ ಬರವಣಿಗೆಯಲ್ಲಿ ಆಕರ್ಷಣ ಶಕ್ತಿ ಇದೆ... ಸರಾಗವಾಗಿ ಅತಿ ಸುಲಭವಾಗಿ ಎಲ್ಲವನ್ನು ಪರಿಚಯಿಸುತ್ತೀರಿ...
ಮತ್ತಷ್ಟು ಹೀಗೆ ಬರುತ್ತಲಿರಲಿ
ವಂದನೆಗಳು
ಮನಸು...
ರಾಜೀವ,
ಈ ಪುಸ್ತಕವು ಎಲ್ಲೆಡೆ ಸಿಗುತ್ತಿಲ್ಲ. ನೀವು ಇದನ್ನು ಕೆಳಗಿನ ವಿಳಾಸದಿಂದ ಪಡೆಯಬಹುದು:
ಶ್ರೀ ಆ. ರಾ. ಪಂಚಮುಖಿ,
ಕಾರ್ಯಾಧ್ಯಕ್ಷರು,
ಕರ್ನಾಟಕ ಇತಿಹಾಸ ಸಂಶೋಧನ ಮಂಡಲ,
ಆಲೂರು ವೆಂಕಟರಾವ ವೃತ್ತ,
ಧಾರವಾಡ
ಗೋದಾವರಿ,
ಕಾಮತರದು ತುಂಬ ಆಪ್ತವಾದ ಹಾಗು ವಿನೋದಮಯ ಶೈಲಿ. ನಾನೂ ಸಹ ಅವರ ಕೃತಿಗಳನ್ನು ಮೆಚ್ಚಿಕೊಂಡಿದ್ದೇನೆ.
ನಗಿಸು,
ಹಳೆಯ ಕಲೆ, ಹಳೆಯ ದೇವಾಲಯ ಹಾಗು ಶಿಲ್ಪಗಳು ನಮಗೆ ನಮ್ಮ ಪೂರ್ವಜರಿಂದ ಬಂದ ಬಳುವಳಿ. ನಾವು ಅದರ ಮಹತ್ವವನ್ನು ಅರಿಯದೇ, ಕಡೆಗಣಿಸುತ್ತಿರುವದು ನಮ್ಮ ದುರ್ದೈವದ ಸಂಗತಿಯಾಗಿದೆ.
ಕಾಕಾ ರವಿವಾರ ಬೇಲೂರು ಹಳೇ ಬೀಡ ,ಬೆಳಗೊಳ ಕ್ಕೆ ಹೋಗಿದ್ದೆ. ನಾವು ಎಷ್ಟು ಕೃತಘ್ನರು ಎನ್ನೋದು ಆ ಶಿಲ್ಪಗಳ ಸ್ಥಿತಿ ನೋಡಿದ್ರೆ ಗೊತ್ತಾಗುತ್ತದೆ ಮಹಮದೀಯ ದಂಡುಕೋರರು ಮಾತ್ರ ಅಲ್ಲ ನಮ್ಮ ದೇಸಿ ದಾಳಿಕೋರರು, ಸಹ ಈ ಹೇಯಕೆಲಸಕೆ
ಕೈ ಜೋಡಿಸಿದ್ದಾರೆ. ಎಲ್ಲ ಬಿಟ್ಟು ವಿರಾಗಿಯಾಗಿ ಗುಡ್ಡದ ಮೇಲೆ ನಿಂತ ಬಾಹುಬಲಿಗೂ ಈ ಶಾಖ ತಟ್ಟದೇ ಬಿಟ್ಟಿಲ್ಲ....!
ಉಮೇಶ,
ವಿದೇಶಿ ಹಾಗು ಸ್ವದೇಶಿ ದಾಳಿಕೋರರಂತೂ ವಿಗ್ರಹಗಳನ್ನು ಹಾಳುಗೆಡವಿದರು. ಅಳಿದುಳಿದದ್ದನ್ನು ಸಂರಕ್ಷಿಸಲೂ ನಮ್ಮ ಕುಂಭಕರ್ಣ ಸರಕಾರಕ್ಕೆ ಆಗುತ್ತಿಲ್ಲವಲ್ಲ!
ನಿಜಕ್ಕೂ ಒಳ್ಳೆಯ ಅರ್ಥಪೂರ್ಣ ಲೇಖನ,
ಓದಿ ಬಹಳಷ್ಟು ತಿಳಿದುಕೊಂಡೆ
ಉತ್ತಮ ಲೇಖನ.
ಧನ್ಯವಾದಗಳು .
ಮಾಹಿತಿಯುಕ್ತ ಲೇಖನ...
ಕೃಷ್ಣಾನಂದ ಕಾಮತರ ಪರಿಚಯ ಮಾಡಿಕೊಟ್ಟು, ಅವರ ಕೃತಿಗಳ ಬಗ್ಗೆ ತಿಳಿಸಿ ಹೇಳಿದ್ದಕ್ಕೆ ಧನ್ಯವಾದಗಳು...
ಗುರುಮೂರ್ತಿಯವರೆ,
ಕಾಮತರು ಮಾಡಿದ ಕೆಲಸ ದೊಡ್ಡದು. ನಮ್ಮ ಪ್ರಾಚೀನ ಶಿಲ್ಪಗಳನ್ನು, ಚಿತ್ರಗಳನ್ನು ಸಂರಕ್ಷಿಸುವದು ಸರಕಾರದ ಆದ್ಯ ಕರ್ತವ್ಯವಾಗಿದೆ.
ಸಂದೀಪ,
ಇದು ಕಾಮತರಿಗೊಂದು ಶ್ರದ್ಧಾಂಜಲಿ.
ಶಿವಪ್ರಕಾಶ,
ನೀವು Kamat's pot purry ಜಾಲತಾಣಕ್ಕೆ ಹೋದರೆ ನಿಮಗೆ ಅವರ ಸಾಧನೆಗಳ ಹೆಚ್ಚಿನ ಮಾಹಿತಿ ದೊರಕುವದು.
Good article. Thanks.
- Keshav
Thank you, Keshav!
ಸುನಾಥ್ ಕಾಕಾ,
ತುಂಬಾ ಮಾಹಿತಿಪೂರ್ಣ ಲೇಖನ . ನಶಿಸುತ್ತಿರುವ ನಮ್ಮ ಪಾರಂಪರಿಕ ಚಿತ್ರಕಲೆಗಳ ಬಗ್ಗೆ, ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ.
ಕೃಷ್ಣಾನಂದ ಕಾಮತ್ ರಿಗೆ ನಿಜಕ್ಕೂ ಧನ್ಯವಾದಗಳನ್ನು ಹೇಳಬೇಕು .
ವಿದೇಶಗಳಲ್ಲಿ ತಮ್ಮ ಸಂಸ್ಕೃತಿಗೆ ಸಂಬಂಧಿಸಿದ ತುಂಬಾ ಚಿಕ್ಕ ಚಿಕ್ಕ ವಿಷಯಗಳನ್ನೂ ಅತ್ಯಂತ ಹೆಮ್ಮೆಯಿಂದ, ಜೋಪಾನ ಮಾಡುತ್ತಾರೆ. ನಾವು ಅದರ ಮಹತ್ವವನ್ನೇ ತಿಳಿಯದೆ ( ತಿಳಿಯದೆ ಎನ್ನುವುದಕ್ಕಿಂತ , ತಿಳಿಯುವ ಪ್ರಯತ್ನವನ್ನೂ ಮಾಡದೇ ) ನಾಶ ಮಾಡುತ್ತಿದ್ದೇವೆ ಎನ್ನುವುದು ಬೇಸರದ ಸಂಗತಿ ಅಲ್ಲವೇ?!!
(ಅಂದಹಾಗೆ , ಈ ಕಾಮೆಂಟ್ ಅನ್ನು ಲೇಖನ ಪ್ರಕಟವಾದ ದಿನವೇ ಹಾಕಿದ್ದೆ. ನಿಮಗೆ ತಲುಪಲಿಲ್ಲವೇಕೋ !!! )
ಚಿತ್ರಾ,
ನಮ್ಮ ಕಲಾಪರಂಪರೆಯನ್ನು ಉಳಿಸಿಕೊಳ್ಳದೆ, ನಾವು ಕರ್ತವ್ಯಚ್ಯುತರಾಗುತ್ತಿದ್ದೇವೆ. ಇದರಲ್ಲಿ ಸರಕಾರದ ಪಾಲಿನಷ್ಟೇ ಸ್ಥಳೀಯರ ಪಾಲೂ ಇದೆ.
(ನಿಮ್ಮ ಪ್ರತಿಕ್ರಿಯೆ ಈ ಮೊದಲೇ ದಾಖಲಾಗದಿರುವದಕ್ಕೆ ಬಹುಶಃ
ತಾಂತ್ರಿಕ ಸಮಸ್ಯೆಯ ಕಾರಣವಿರಬಹುದು.)
ಸುನಾಥ್ ಸರ್,
ನಾನು ಬ್ಲಾಗ್ ಲೋಕಕ್ಕೆ ಬರಲು ಪರೋಕ್ಷವಾಗಿ ಕಾರಣವೆಂದರೇ ಕೃಷ್ಣನಂದ ಕಾಮತ್ರವರು ಅಂತ ಹೇಳಬಹುದು. ಮಲ್ಲಿಕಾರ್ಜುನ್ ಫೋಟೊಗಳನ್ನು ಅವರ ಬ್ಲಾಗಿನಲ್ಲಿ ಹಾಕುತಿದ್ದಾಗ ನಾನು ಕುತೂಹಲದಿಂದ ನೋಡುತ್ತಿದ್ದೆ. ಅವರ ಬಗ್ಗೆ ಮಲ್ಲಿಕಾರ್ಜುನ್ ಆಗಾಗ ಹೇಳುವುದನ್ನು ಕುತೂಹಲದಿಂದ ಕೇಳುತ್ತಿದ್ದೆ.
ಕಾಮತರ ಬಗ್ಗೆ ನನಗೆ ಹೆಚ್ಚು ತಿಳಿದಿದ್ದು ನನ್ನಮತ್ತೊಬ್ಬ ಗೆಳೆಯರು[ಅವರ ವಯಸ್ಸು ೬೦ ಆಗಿದ್ದರೂ ಇನ್ನೂ ಯುವಕರಂತೆ ಚಟುವಟಿಕೆಯಿಂದಿರುವವರು, ನನ್ನ ಪುಸ್ತಕಕ್ಕೆ ಸೊಗಸಾದ ಬೆನ್ನುಡಿಯನ್ನು ಬರೆದುಕೊಟ್ಟಿದ್ದಾರೆ]ಡಾ.ಶೇಷಾಶಾಸ್ತ್ರಿ ಎನ್ನುವವರು. ಕಾಮತರ ಆತ್ಮೀಯರಾಗಿದ್ದ ಅವರು ತುಂಬಾ ಕಾಮತರ ಚಟುವಟಿಕೆಗಳ ಚೆನ್ನಾಗಿ ಹೇಳಿ ನಮ್ಮನ್ನು ಹುರಿದುಂಬಿಸುತ್ತಿದ್ದರು.
ಕಾಮತರ ಪುಸ್ತಕವನ್ನು ನಾನು ಓದಿಲ್ಲ. ಅವರ ಬಗ್ಗೆ, ಅವರ ಪುಸ್ತಕ, ಬರವಣಿಗೆ, ಛಾಯಾಗ್ರಾಹಣ, ಇತ್ಯಾದಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಿದ್ದೀರಿ...
ಸಾಧ್ಯವಾದರೆ ಅವರ ಪುಸ್ತಕವನ್ನು ಓದುತ್ತೇನೆ..
ಧನ್ಯವಾದಗಳು.
ಕಾಮತ್ ಸರ್...ಛೇ..ಕ್ಷಮಿಸಿ..ಸುನಾಥ್ ಸರ್...ವಿವರಣೆ ಕಾಮತ್ ರವರೇ ಸ್ವತಃ ಬರೆದಂತಿತ್ತು.
ವಿಷಯ ಪರಿಚಯ ಅಂತ ಕಾಮತ್ ರ ಹಿನ್ನೆಲೆ, ನಂತರ ಅವರ ಅಧ್ಯಾಯಗಳ ಸಂಪೂರ್ಣ ವಿವರಮ ಮಧ್ಯೆ ಮಧ್ಯೆ ಕಾಮತರ ಕೃತಿಗಳ ಕುರಿತು ವಿವರ..ಮುದ್ದಣನ ಮಾತು (ಸಲ್ಲಾಪದಲ್ಲಿ...ನಿಮ್ಮದಲ್ಲ...ಮುದ್ದನ ಮನೋರಮೆಯರ ಸಲ್ಲಾಪದಲಿ) ನೆನಪಾಯ್ತು... "ಕರಿಮಣಿ ಸರದಲ್ಲಿ ಕೆಂಪು ಹವಳವ ಕೋದಂತೆ" ನಿಮ್ಮ ಲೇಖನದ ತೂಕ ಹೆಚ್ಚಿಸಿದೆ...ಕರ್ನಾಟಕ ಪರಿಚಯ ನಿಜಕ್ಕೂ ನನಗೆ ಆಗಬೇಕಿದೆ,
ಜಲನಯನ,
ಕಾಮತರ ಪರಿಚಯವನ್ನು ಹಾಗೂ ಕೃತಿಯನ್ನು ಮೆಚ್ಚಿಕೊಂಡಿದ್ದೀರಿ. ನಿಮಗೆ ಧನ್ಯವಾದಗಳು. ಕಾಮತರ ಬಗೆಗೆ ಹೆಚ್ಚಿನ ಮಾಹಿತಿ ಬೇಕಾದರೆ, Kamat's potpurri ಎಂದು ಗೂಗಲ್ ನಲ್ಲಿ ಹುಡುಕಿದರೆ, ನಿಮಗೆ ಈ ವಿಷಯಕ್ಕೆ ಸಂಬಂಧಿಸಿದ ಚಿತ್ರಗಳು ಹಾಗೂ ಇತರ ಅನೇಕ ಮಾಹಿತಿಗಳು ಸಿಗುವವು.
Post a Comment