Sunday, November 8, 2009

"ತಮಂಧದ ಕೇಡು"----ಲೇ: ಅಮರೇಶ ನುಗಡೋಣಿ

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ ೧೯೬೦ರಲ್ಲಿ ಜನಿಸಿದ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ದೇವನೂರು ಮಹಾದೇವರ ನಂತರದ ಲೇಖಕರಲ್ಲಿ ಶೋಷಣಾವ್ಯವಸ್ಥೆಯ ವಿವಿಧ ಮುಖಗಳನ್ನು ನುಗಡೋಣಿಯವರಷ್ಟು ಸಮರ್ಥವಾಗಿ ಚಿತ್ರಿಸಿದ ಲೇಖಕರು ಇನ್ನೊಬ್ಬರಿಲ್ಲ ಎಂದು ಹೇಳಬಹುದು.

ಊಳಿಗಮಾನ್ಯಸಂಸ್ಕೃತಿಯ ಮೂಲರೂಪ ಅರ್ಥಾತ್ classical model of feudal structure ಇದರ ಮುಖ್ಯ ಗುಣವೆಂದರೆ, ಶೋಷಿತನು ತನ್ನ ತನು ಹಾಗು ಮನವನ್ನಷ್ಟೇ ಅಲ್ಲ, ತನ್ನ ಆತ್ಮವನ್ನೂ ಸಹ ತನ್ನ ಯಜಮಾನನ ಊಳಿಗಕ್ಕೆ ಬೇಶರತ್ತಾಗಿ ಒಪ್ಪಿಸಿಬಿಟ್ಟಿರುತ್ತಾನೆ. ಇದಕ್ಕೆ ಪ್ರತಿಯಾಗಿ ಯಜಮಾನನು ದರ್ಪ, ದಬ್ಬಾಳಿಕೆ ಹಾಗು ಸರ್ವಸ್ವಾಮಿತ್ವವನ್ನು ಪ್ರದರ್ಶಿಸುತ್ತಾನೆ. ಇಂತಹ ತಮಂಧದ ಕೇಡಿನಿಂದ ಹೊರಬರಬೇಕಾದರೆ ಶಿಕ್ಷಣದ ಬೆಳಕು ಬೇಕು. ಆದರೆ ಈ ವ್ಯವಸ್ಥೆಯು ಅಂತಹ ಶಿಕ್ಷಿತ ಪ್ರತಿಭಟನಾಕಾರರನ್ನೂ ಸಹ ನಿರ್ದಾಕ್ಷಿಣ್ಯವಾಗಿ ಹೊಸಕಿ ಹಾಕಿ ಬಿಡುತ್ತದೆ.

ನುಗಡೋಣಿಯವರ "ತಮಂಧದ ಕೇಡು" ಎನ್ನುವ ಕತೆಯಲ್ಲಿ ದುರುಗ ಎನ್ನುವ ಜೀತದಾಳಿನ ದುಃಸ್ವಪ್ನದೊಂದಿಗೆ ಕತೆ ಪ್ರಾರಂಭವಾಗುತ್ತದೆ. ತನ್ನ ಒಡೆಯನಾದ ಶಾಂತಗೌಡನ ಜಮೀನಿನಲ್ಲಿರುವ ಎರಡು ದೊಡ್ಡ ಮರಗಳ ನಡುವೆ ಜೋಪಡಿ
ಹಾಕಿಕೊಂಡು, ದುರುಗ ತನ್ನ ಹೆಂಡತಿ ಚಂದವ್ವ ಹಾಗು ಜೋಳಿಗೆ ಕೂಸು ಚೆನ್ನಮಲ್ಲಪ್ಪನೊಂದಿಗೆ ಬದುಕು ಸಾಗಿಸುತ್ತಿದ್ದಾನೆ.
ಒಡೆಯನಿಗೆ ನಿಷ್ಠೆಯಿಂದ ದುಡಿಯುವದರಿಂದ ದುರುಗ ಶಾಂತಗೌಡನ ನೆಚ್ಚಿನ ಆಳಾಗಿದ್ದಾನೆ. ಶಾಂತಗೌಡ ‘ದುರುಗಾ’ ಎಂದು ಕೂಗಿದಾಗ, ದುರುಗನಿಗೆ ಇದು ಪುಣ್ಯದ ಕರೆಯಂತೆ ಕೇಳಿಸುವಷ್ಟು ಈತ ಶಾಂತಗೌಡನ ದಾಸನಾಗಿದ್ದಾನೆ.

ಇಂತಹ ದುರುಗನ ಚಂದದ ಹೆಂಡತಿ ಚಂದಮ್ಮನ ಮೇಲೆ ಶಾಂತಗೌಡನಿಗೆ ಮನಸ್ಸಾಗುತ್ತದೆ.

ಚಂದಮ್ಮ ತನ್ನ ದಣಿಗೆ ಪ್ರತಿಭಟನೆ ಇಲ್ಲದೆ ವಶವಾದಳು. ಆದರೆ ಈ ಕೆಂಡವನ್ನು ಮನದಲ್ಲಿಯೇ ಇಟ್ಟುಕೊಂಡಿರಲು ಅವಳಿಂದ ಸಾಧ್ಯವಾದೀತೆ? ಕೊನೆಗೊಮ್ಮೆ ತನ್ನ ಗಂಡ ದುರುಗನೆದುರಿಗೆ ಅವಳು ತನ್ನ ಸಂಕಟವನ್ನು ಬಿಚ್ಚಿಟ್ಟಳು. ದುರುಗನಾದರೋ ತನ್ನ ತನು, ಮನಗಳನ್ನು ತನ್ನ ದಣಿಗೆ ಒಪ್ಪಿಸಿಬಿಟ್ಟ ಊಳಿಗದಾಳು. ಆತ ಏನು ಮಾಡಿಯಾನು?
ತಪ್ಪು ಮಾಡಿದವನು ದಣಿ. ಆದರೆ ದುರುಗನೇ ಆತನ ಕಾಲಿಗೆ ಬಿದ್ದು ಅತ್ತು ಬಿಡುತ್ತಾನೆ! ತನ್ನ ಹೆಂಡತಿಯನ್ನು ಮರಳಿ ಕರೆ ತರುತ್ತಾನೆ. ಶಾಂತಗೌಡ ದಣಿಯ ಹಕ್ಕನ್ನು ದುರುಗನ ಹೆಂಡತಿಯ ಮೇಲೆ ಮರುಸ್ಥಾಪಿಸುತ್ತಾನೆ. ಇಷ್ಟಾದರೂ ದುರುಗ ಆ ಹಳ್ಳಿಯನ್ನು ಬಿಟ್ಟು, ತನ್ನ ದಣಿಯನ್ನು ಬಿಟ್ಟು ಬೇರೆಲ್ಲೂ ಹೋಗುವದಿಲ್ಲ! ಯಾಕೆಂದರೆ ಆತ ತನ್ನ ದಾಸ್ಯತ್ವವನ್ನು ಕಾಯಾ, ವಾಚಾ, ಮನಸಾ ಒಪ್ಪಿಕೊಂಡು ಬಿಟ್ಟಿದ್ದಾನೆ.
ಇತ್ತ ಚಂದಮ್ಮನೂ ಬಹಳ ದಿನ ಬದುಕುವದಿಲ್ಲ. ದುರುಗನ ಮಗ ಊರ ಮಗನಾಗಿ ಬೆಳೆದವನು ಹೆಚ್ಚಿನ ಕಲಿಕೆಗಾಗಿ ಶಹರಕ್ಕೆ ಹೋಗುತ್ತಾನೆ. ಯಜಮಾನ ಶಾಂತಗೌಡ ತನ್ನ ನೆಚ್ಚಿನ ಬಂಟನ ಮಗನ ಶಿಕ್ಷಣಕ್ಕೆ ಉದಾರವಾಗಿ ನೆರವು ನೀಡುತ್ತಾನೆ. ಚೆನ್ನಮಲ್ಲಪ್ಪ ಆ ಶಹರದ ಶಾಲೆಯಲ್ಲಿಯೇ ಶಿಕ್ಷಕನಾಗುತ್ತಾನೆ.

ಶಾಂತಗೌಡನ ಒಬ್ಬಳೇ ಸಂತಾನವಾದ ಅಕ್ಕಮಹಾದೇವಿ ಕಲಿಯಲೆಂದು ಶಹರದಲ್ಲಿಯೇ ಇದ್ದವಳು ಚೆನ್ನಮಲ್ಲಪ್ಪನಲ್ಲಿ ಅನುರಕ್ತಳಾಗುತ್ತಾಳೆ. ಈ ಆಘಾತಕಾರಿ ಸುದ್ದಿ ತನಗೆ ಬಂದು ಮುಟ್ಟಿದೊಡನೆಯೆ ದುರುಗ ನಿರ್ವಿಣ್ಣನಾಗಿ ತನ್ನ ಮಗನಿಗೆ ಬುದ್ಧಿ ಹೇಳುತ್ತಾನೆ. ಆ ಬುದ್ಧಿಮಾತಿನಲ್ಲೂ ಸಹ ಆತನ ದಾಸ್ಯಭಾವ ಹೇಗೆ ಮೇಲುಗೈಯಾಗಿದೆಯೆನ್ನುವದನ್ನು ನೋಡಿರಿ:


"ನನ್ಗ ಇಲ್ಲಿ ಬುಡಾದ ನಂಟದ" ಎಂದು ಹೇಳುವ ದುರುಗನಿಗೆ ಇರುವ ನಂಟು ಎಂತಹದು? ದುರುಗ ಇರುತ್ತಿದ್ದ ಮರಗಳ ನಡುವಿನ ಜೋಪಡಿ ಈಗಿಲ್ಲ. ಮರಮಟ್ಟುಗಳನ್ನು ಮಾಡಿಸಲು ಶಾಂತಗೌಡ ಆ ಮರಗಳನ್ನು ಕಡಿಸಿ ಹಾಕಿದ್ದಾನೆ. ದುರುಗನಿಗೆ ಹಾಗೂ ನೂರಾರು ಹಕ್ಕಿಗಳಿಗೆ ಆಸರೆಯಾಗಿದ್ದ ಆ ಮರಗಳು, ಯಜಮಾನಿಕೆಯ ಉಪಭೋಗಕ್ಕಾಗಿ ನಷ್ಟವಾಗಿವೆ. ದುರುಗ ಹಾಗು ಆ ಮರಗಳ ನಡುವೆ ಭಾವನಾತ್ಮಕ ಸಂಬಂಧವಿತ್ತು. ದುರುಗ ದೈನಾಸಪಡುತ್ತ ಆ ಮರಗಳನ್ನು ಉಳಿಸಲು ಶಾಂತಗೌಡನಿಗೆ ಬೇಡಿಕೊಳ್ಳುವದು ಹೀಗೆ:
ಇದಕ್ಕೆ ಪ್ರತಿಯಾಗಿ ಶಾಂತಗೌಡನಲ್ಲಿರುವದು ದರ್ಪ ಹಾಗು ಸಿಟ್ಟಿನ ಸ್ವಭಾವ. ಎಲ್ಲವೂ ತನಗಾಗಿಯೇ, ತನ್ನ ಉಪಭೋಗಕ್ಕಾಗಿಯೇ ಇರುವದು ಎನ್ನುವ ಅಹಂಭಾವ. (‘ಶಾಂತಗೌಡ’ ಎನ್ನುವ ಹೆಸರಿನ ಅಸಂಗತತೆಯನ್ನು ಗಮನಿಸಿರಿ.) ದುರುಗನ ಮೇಲಿನ ತನ್ನ ಸಿಟ್ಟನ್ನು ಆತ ಇತರ ಆಳುಗಳ ಮೇಲೆ ಹಾಗು ಜಾನುವಾರುಗಳ ಮೇಲೆ ತಿರುಗಿಸುವದರ ವರ್ಣನೆ ಹೀಗಿದೆ:

ಶಾಂತಗೌಡ ಹೊಳೆಯ ಈಚೆಯ ಹಳ್ಳಿಯಲ್ಲಿದ್ದರೆ, ಹೊಳೆಯ ಆಚೆಯ ಬದಿಯಲ್ಲಿ ಅವನ ಅಕ್ಕ ಇದ್ದಾಳೆ. ವಿಧವೆಯಾದ ಮೇಲೆ
ತಾನೇ ಜಮೀನುದಾರಿಕೆಯನ್ನು ಗೌಡತಿಯ ಎಲ್ಲಾ ಗತ್ತಿನೊಂದಿಗೆ ನಡೆಯಿಸಿಕೊಂಡು ಹೋಗುತ್ತಿದ್ದಾಳೆ. ಸೇತುವೆ ಇಲ್ಲಿ ಇಲ್ಲದ್ದರಿಂದ ದುರುಗನೇ ಶಾಂತಗೌಡನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೊಳೆ ದಾಟಿಸುತ್ತಿದ್ದ.

ಶಾಂತಗೌಡನ ಮಗಳನ್ನು ತನ್ನ ಸೊಸೆಯನ್ನಾಗಿ ಮಾಡಿಕೊಂಡರೆ, ತಮ್ಮನ ಆಸ್ತಿ ಎಲ್ಲ ತನಗೇ ಬರುವದೆನ್ನುವ ಒಳ ಆಸೆ ಈ ಅಕ್ಕನಿಗಿದೆ. ಆದರೆ ಅಕ್ಕಮಹಾದೇವಿ ಊಳಿಗದ ಆಳಾದ ದುರುಗನ ಮಗ ಚೆನ್ನಮಲ್ಲಪ್ಪನಲ್ಲಿ ಅನುರಕ್ತಳಾಗಿದ್ದಾಳೆ. ಶಾಂತಗೌಡನು ದುರುಗನ ಹೆಗಲ ಮೇಲೆ ಸವಾರಿ ಮಾಡಿಕೊಂಡು, ಹೊಳೆ ದಾಟಿ ತನ್ನ ಅಕ್ಕನಿದ್ದಲ್ಲಿಗೆ ಬಂದು ಅವಳೊಡನೆ ಈ ಸಮಸ್ಯೆಯ ಬಗೆಗೆ ಆಪ್ತಾಲೋಚನೆ ಮಾಡುತ್ತಾನೆ.

ಯಜಮಾನಸಂಸ್ಕೃತಿಯ ಪಟ್ಟದಲ್ಲಿರುವ ವ್ಯಕ್ತಿಗೆ ತನ್ನ ಪಟ್ಟದ ಭದ್ರತೆಯೊಂದೇ ಮುಖ್ಯ. ಸ್ವಾರ್ಥಸಾಧನೆಯ ಕ್ರೌರ್ಯ ಈ ವ್ಯಕ್ತಿಯ ಅಂತರಾಳದಲ್ಲಿ ಲಿಂಗಭೇದವಿಲ್ಲದೇ ಹುದುಗಿರುತ್ತದೆ. ತನ್ನ ತಮ್ಮನಿಗೆ ಅವಳು ಕೊಡುವ ಸಲಹೆಯು ಅವಳ ತಮ್ಮನನ್ನೂ ಸಹ ಒಂದು ನಿಮಿಷ ನಡುಗಿಸಿ ಬಿಡುತ್ತದೆ:
ಶಾಂತಗೌಡ ಹಳ್ಳಿಗೆ ಮರಳುವಾಗ ಮತ್ತೆ ದುರುಗನ ಮೇಲೆ ಸವಾರಿ ಮಾಡಿ ಹೊಳೆ ದಾಟಬೇಕು. ಹೊಳೆ ದಾಟುವಾಗ ತನ್ನ ದಣಿಯನ್ನು ಹೊಳೆಯಲ್ಲಿ ಮುಳುಗಿಸಿಬಿಡುವದು ದುರುಗನಿಗೆ ಸುಲಭವಾದ ಕೆಲಸ; ಆದರೆ ಸರಳವಾದ ಕೆಲಸವಲ್ಲ. ಯಾಕೆಂದರೆ ಜೀತದಾಳಾದ ಆತನು ತನ್ನ ಒಡೆಯನ ಕೇಡನ್ನು  ಕನಸುಮನಸಿನಲ್ಲೂ ಎಣಿಸಲಾರ. ದುರುಗನ ಮನದಲ್ಲಿ ನಡೆದ ತುಮುಲದ ವರ್ಣನೆಯನ್ನು ನುಗಡೋಣಿಯವರು ಈ ರೀತಿಯಾಗಿ ಮಾಡಿದ್ದಾರೆ:
ನುಗಡೋಣಿಯವರ ವೈಶಿಷ್ಟ್ಯವೆಂದರೆ, ಅವರು ಶೋಷಿತನ ಬವಣೆಯ ವರ್ಣನೆಗಿಂತ, ಶೋಷಣಾವ್ಯವಸ್ಥೆಯ ಚಿತ್ರಣಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಇಲ್ಲಿ ದರ್ಪವೇ ಮೂರ್ತಿವೆತ್ತ ಯಜಮಾನ ಹಾಗು ದಾಸ್ಯವೇ ಮೂರ್ತಿವೆತ್ತ ಊಳಿಗದಾಳನ್ನು ಕಾಣುತ್ತೇವೆ.
ಈ ಶೋಷಣಾವ್ಯವಸ್ಥೆಯಲ್ಲಿ ಯಜಮಾನನ ಮನೆತನಕ್ಕೊಬ್ಬ ಹಿತಚಿಂತಕ ಗುರುಗಳೂ ಇರುತ್ತಾರೆ. ಆದರೆ ಬುದ್ಧಿ ಹೇಳುವ ಶಕ್ತಿ ಅವರಿಗಿರುವದಿಲ್ಲ. ಇಂತಹ ಕತೆಗಳ ಅನಿವಾರ್ಯ ದುರಂತವನ್ನು ನಿರ್ಲಿಪ್ತ ಶೈಲಿಯಲ್ಲಿ ಚಿತ್ರಿಸುವದು ನುಗಡೋಣಿಯವರ ಹೆಗ್ಗಳಿಕೆ.

36 comments:

ಜಲನಯನ said...

ಊಳಿಗದ ಪದ್ಧತಿಯಲ್ಲಿ ಊಳಿಗದಾಳು ತನ್ನನ್ನು ಎಷ್ಟು ತನ್ನ ಧಣಿಗೆ ಸಮರ್ಪಿಸಿರುತ್ತಾನೆ ಎನ್ನುವುದಕ್ಕೆ ಉತ್ತಮ ದರ್ಶನ...ತನ್ನ ಹೆಂಡತಿಯನ್ನಿಟ್ಟುಕೊಂಡ ಧಣಿಯಿಂದ ತನ್ನ ಹೆಂಡತಿಯನ್ನು ಪಡೆಯಲು ಆತನ ಕಾಲಿಗೆ ಬಿದ್ದು ಅಳುವುದು...!!! ಈ ವ್ಯವಸ್ಥೆ ಈಗಲೂ ಇದೆಯೇ? ನನ್ನ ಹಿಂದೀ ಮಿತ್ರನೊಬ್ಬ ಬಿಹಾರ ಮತ್ತು ಕೆಲವು ಉತ್ತರ ಪ್ರದೇಶದ ಭಾಗಗಳಲ್ಲಿ ಈ ಪದ್ಧತಿ ಈಗಲೂ ಇದೆ ಎನ್ನುತ್ತಾನೆ...ಇದೊಂದು ಅನಿಷ್ಟ ಪದ್ದತಿ.....ಒಳ್ಲೆಯ ಕೃತಿಯ ಪರಿಚಯವಾಯಿತು...ಧನ್ಯವಾದ....

Keshav.Kulkarni said...

ಈ ಕತೆ ಮೇಲುನೋಟಕ್ಕೆ ನಮ್ಮ ಸಿನೆಮಾ ಕತೆಯಂತೆ ಕಾಣುತ್ತದೆ, ಆದರೆ ಅದರ ಒಡಲಿನಲ್ಲಿ ತುಂಬಿಕೊಂಡಿರುವ ಸಂಕೀರ‍್ಣತೆ, ನಮ್ಮ ಹೊಟ್ಟೆಯನ್ನು ಚುರ್ ಅನ್ನಿಸುತ್ತದೆ.

ನುಗದೋಣಿಯವರ ಶೈಲಿಯಲ್ಲಿ ಕುಂವೀಯವರ ಆರ್ಭಟವಿಲ್ಲ, ದೇವನೂರರ ಧ್ಯಾನವಿದೆ.

- ಕೇಶವ

ಚುಕ್ಕಿಚಿತ್ತಾರ said...

ತಮ೦ಧದ ಕೇಡು.....ಇದರ ಕಥೆ ಹಾಗೂ ಅದನ್ನು ವಿಶ್ಲೇಷಿಸಿದ ರೀತಿ ಮನಸ್ಸಿಗೆ ತು೦ಬಾ ನಾಟಿತು. ತನು ಮನ ಜೊತೆಗೆ ತಮ್ಮ ಆತ್ಮವನ್ನೂ ಅರ್ಪಿಸಿಬಿಡುವ ಈ ಜೀತಮನಸ್ಥಿತಿಯಿ೦ದ ಹೊರಕ್ಕೆ ಬರುವುದು ಎಷ್ಟು ಕಷ್ಟ ಎನ್ನುವುದನ್ನು ಆಪ್ತವಾಗಿ ಚಿತ್ರಿಸಿದ ಅಮರೇಶ್ ಸುಗುಡೋಣಿಯವರಿಗೆ ಹಾಗೂ ಅದನ್ನು ತಿಳಿಸಿಕೊಟ್ಟ ತಮಗೂ ಧನ್ಯವಾದಗಳು.

sunaath said...

ಜಲನಯನ,
ಶ್ಯಾಮ ಬೆನಗಲ್ ಅವರ ‘ನಿಶಾಂತ’ ಚಿತ್ರದಲ್ಲಿಯೂ ಸಹ ಆಂಧ್ರಭಾಗದ ಜಮೀನುದಾರರ ದಬ್ಬಾಳಿಕೆಯನ್ನು ಇದೇ ರೀತಿಯಾಗಿ ಚಿತ್ರಿಸಿದ್ದಾರೆ. ಬಹುಶ: ಬಿಹಾರದಲ್ಲಿ ಈ ಪರಿಸ್ಥಿತಿ
ಇನ್ನೂ ಜೀವಂತವಿರಬಹುದು.

sunaath said...

ಕೇಶವ,
ದೇವನೂರರ ಹಾಗೂ ಕುಂವೀಯವರ ನಡುವಿನ ವ್ಯತ್ಯಾಸವನ್ನು ಸರಿಯಾಗಿ ಹೇಳಿದಿರಿ. ದೇವನೂರರ "ಮಾರಿಕೊಂಡವರು" ವಿಶ್ವಮಟ್ಟದ ಕತೆಯೆಂದು ನನ್ನ ಅನಿಸಿಕೆ.
ವ್ಯವಸ್ಥೆಯ structureಅನ್ನು ನುಗಡೋಣಿಯವರು ದೇವನೂರರಿಗಿಂತ ವಿಸ್ತಾರವಾಗಿ ತೋರುತ್ತಾರೆ. ಆದರೆ, ದೇವನೂರರ ಸಿದ್ಧಿ ನುಗಡೋಣಿಯವರ ಕತೆಗಳಲ್ಲಿ ಇನ್ನೂ ಬಂದಿಲ್ಲವೆನ್ನಬೇಕು.

sunaath said...

ವಿಜಯಶ್ರೀ,
ಅಮರೇಶ ನುಗಡೋಣಿಯವರ ಕತೆಗಳು ಗ್ರಾಮೀಣ ಪರಿಸರದ ಶೋಷಣೆಯನ್ನು ಚಿತ್ರಿಸುವ ಕತೆಗಳು. "ತಮಂಧದ ಕೇಡು", "ಸವಾರಿ" ಹಾಗೂ "ಮುಸ್ಸಂಜೆಯ ಕಥಾನಕಗಳು" ಎನ್ನುವ ಇವರ ಕಥಾಸಂಕಲನಗಳಲ್ಲಿ ಶೋಷಣೆಯ ವ್ಯಾಪಕ ರೂಪಗಳು ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿವೆ.

ಬಿಸಿಲ ಹನಿ said...

ಅಮರೇಶ್ ನುಗಡೊಣಿಯವರ “ತಮಂಧದ ಕೇಡು” ಕತೆಯನ್ನು ಎಳೆ ಎಳೆಯಾಗಿ ಬಿಡಿಸಿಡುವದರ ಮೂಲಕ ಊಳಿಗಮಾನ್ಯ ಪದ್ದತಿಯಂಥ ಅನಿಷ್ಟ ಪದ್ದತಿಯನ್ನು ಚನ್ನಾಗಿ ವಿಶ್ಲೇಷಿಸಿದ್ದೀರಿ.

Sushrutha Dodderi said...

ಈ ಕತೆ ನನ್ನ ಇಷ್ಟದ ಕತೆಗಳಲ್ಲೊಂದು. ಈ ಸಂಕಲನದ ಎಲ್ಲ ಕತೆಗಳೂ ಸೂಪರ್. ಮತ್ತೆ ಈ ಸಂಕಲನ ವಿಜಯ ಕರ್ನಾಟಕ ನಡೆಸಿದ ಟಾಪ್-೧೦ ಕನ್ನಡ ಕಥಾಸಂಕಲನಗಳ ಪಟ್ಟಿಯಲ್ಲಿ ಒಂದಾಗಿತ್ತು.

umesh desai said...

ಕಾಕಾ ಹೊಸದಾಗಿ ವ್ಯಾಖ್ಯಾನಿಸಿರಿ ಸೇರ್ತು ಕತಿನೂ ಹಂಗ ಛಂದದ. ನಿಮ್ಮ ಬರವಣಿಗಿ ಭಾಳ ಕಮ್ಮಿ ಇಡೀ ಕತಿನ ಕೊಟ್ಟೀರಿ
ಬ್ಯಾರೆ ಅನಿಸ್ತು....

ತೇಜಸ್ವಿನಿ ಹೆಗಡೆ said...

ಕಾಕಾ,

ಒಂದು ಉತ್ತಮ ಪುಸ್ತಕವನ್ನು ಚೆನ್ನಾಗಿ ಪರಿಚಯಿಸಿದ್ದೀರಿ. ಖಂಡಿತ ಬಹು ಬೇಗ ಓದಲೆತ್ನಿಸುವೆ. ಧನ್ಯವಾದಗಳು.

sunaath said...

ಉದಯ,
ಈ ಕಥೆಯನ್ನು ನೀವು ಇಡಿಯಾಗಿ ಓದಬೇಕು. ನುಗಡೋಣಿಯವರು ಊಳಿಗಮಾನ್ಯ ಪದ್ಧತಿಯಲ್ಲಿಯ ಶೋಷಣೆಯನ್ನು ನಿಖರವಾಗಿ ಚಿತ್ರಿಸಿದ್ದಾರೆ.

sunaath said...

ಸುಶ್ರುತ,
ಮಾಹಿತಿಗಾಗಿ ಧನ್ಯವಾದಗಳು. ನುಗಡೋಣಿಯವರ ಇನ್ನೆರಡು ಸಂಕಲನಗಳಲ್ಲಿ ಸಹ(‘ಸವಾರಿ, ಮುಸ್ಸಂಜೆಯ ಕಥಾನಕಗಳು’), ಗ್ರಾಮೀಣ ಪರಿಸರದ ಅತ್ಯುತ್ತಮ ಕತೆಗಳಿವೆ.

sunaath said...

ಉಮೇಶ,
ಬೆಳದಿಂಗಳಿನ ವ್ಯಾಖ್ಯಾನಕ್ಕಿಂತ ಬೆಳದಿಂಗಳs ಹೆಚ್ಚಿನದು ಅಲ್ಲೇನು? ನೀವು ಈ ಕಥೀನ್ನ ಇಡಿಯಾಗಿಯೇ ಓದಬೇಕು. ಸುಶ್ರುತ ಹೇಳಿಧಂಗ, ಈ ಕಥಾಸಂಕಲನದ ("ತಮಂಧದ ಕೇಡು")ಎಲ್ಲಾ ಕಥಿಗಳೂ ಸೂಪರ್.

sunaath said...

ತೇಜಸ್ವಿನಿ,
ನುಗಡೋಣಿಯವರ ಮೂರೂ ಕಥಾಸಂಕಲನಗಳನ್ನು ನೀವು ಓದಬೇಕು. ಕತೆಗಳಲ್ಲಿ ವೈವಿಧ್ಯ ಅದ.

ಸಾಗರದಾಚೆಯ ಇಂಚರ said...

ಕಥೆಯ ಒಳ ಅರ್ಥ ತುಂಬಾ ಚಿಂತನೆಗೆ ನೂಕುತ್ತದೆ,
ನನಗೆ ಅವರ ಬಗೆಗೆ ಗೊತ್ತಿರಲಿಲ್ಲ
ತಿಳಿಸಿದ್ದಕ್ಕೆ ಧನ್ಯವಾದಗಳು

sunaath said...

ಗುರುಮೂರ್ತಿ,
ಕನ್ನಡದ top ಲೇಖಕರಲ್ಲಿ ನುಗಡೋಣಿಯವರೂ ಒಬ್ಬರು.

ಮನಸು said...

ಸರ್,
ಈ ಊಳಿಗ ಪದ್ಧತಿಯಲ್ಲಿ ಹಲವಾರು ಕಣ್ಣೀರಧಾರೆಯ ಕಥೆಗಳಾಗಿವೆ.. ನಿಮ್ಮ ನಿರೂಪಣೆ ಕಣ್ಣು ಕಟ್ಟುವಂತಿದೆ. ಇಂತಹ ಕಥೆಯನ್ನು ಚಿತ್ರಿಸಿದ ಅಮರೇಶ್ ಅವರಿಗೂ ನಿಮಗೂ ಧನ್ಯವಾದಗಳು...
ಈ ಕಥೆಗಾರರ ಬಗ್ಗೆ ನಮಗೆ ತಿಳಿದಿರಲಿಲ್ಲ...ನಿಮಗೆ ನಮ್ಮ ಧನ್ಯವಾದಗಳು. ಅವರ ಪುಸ್ತಕಗಳನ್ನು ಓದಬೇಕೆಂಬ ಮನಸಾಗಿದೆ...

sunaath said...

ನಗಿಸು,
ಅಮರೇಶ ನುಗಡೋಣಿಯವರ ನಾಲ್ಕು ಕಥಾಸಂಕಲನಗಳು (ನನಗೆ ಅರಿವಿರುವ ಮಟ್ಟಿಗೆ) ಪ್ರಕಟಗೊಂಡಿವೆ:
(೧) ಮಣ್ಣು ಸೇರಿತು ಬೀಜ
(೨) ತಮಂಧದ ಕೇಡು
(೩) ಸವಾರಿ
(೪) ಮುಸ್ಸಂಜೆಯ ಕಥಾನಕಗಳು

ಬಹುಶ: ಬೆಂಗಳೂರಿನ ಅಂಕಿತ ಪ್ರಕಾಶನದವರೆ ಈ ಕೃತಿಗಳ ಪ್ರಕಟಣೆ ಮಾಡಿರಬಹುದು.
ನೀವು ಇವರ ಕತೆಗಳನ್ನು ಮೆಚ್ಚುವಿರಿ ಎನ್ನುವ ಭರವಸೆ ನನಗಿದೆ.

ಶಿವಪ್ರಕಾಶ್ said...
This comment has been removed by the author.
ಶಿವಪ್ರಕಾಶ್ said...

ಸರ್,
ನಿಮ್ಮ ನಿರೂಪಣೆ ತುಂಬಾ ಚನ್ನಾಗಿದೆ.
ನಾನು, ನಿಮ್ಮ ಈ ಲೇಖನ ಓದುವಾಗ Full involve ಆಗಿಬಿಟ್ಟಿದ್ದೆ..
'ತಮಂಧದ ಕೇಡು' ಕಥಾಸಂಕಲನ ನಮಗೆ ಪರಿಚಯಿಸಿ, ಅದರ ಸುಂದರವಾದ ನಿರೂಪಣೆಯನ್ನು ನಮಗೆ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್..

sunaath said...

ಶಿವಪ್ರಕಾಶ,
ಕನ್ನಡದ ಒಳ್ಳೆಯ ಸಾಹಿತ್ಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ ನನಗೆ. ನೀವೂ ಸಹ ಈ ಸಾಹಿತ್ಯವನ್ನು enjoy ಮಾಡಿದಾಗ ಧನ್ಯನಾಗುತ್ತೇನೆ.

ದಿನಕರ ಮೊಗೇರ said...

ಸುನಾಥ್ ಸರ್,
ಕನ್ನಡದ ಕೆಲವೇ ಕೆಲವು ಲೇಖಕರನ್ನು ನಾನು ಯಾವಾಗಲೂ ಓದುತ್ತೇನೆ.... ನಮಗೆ ಗೊತ್ತಿಲ್ಲದವರನ್ನು ಪರಿಚಯಿಸಿ ಕೊಟ್ಟಿದ್ದೀರಿ ಸರ್, ತುಂಬಾ ಥ್ಯಾಂಕ್ಸ್..... ಅವರ ಸಂಕಲನ 'ಕೊಂಡು' ಓದುತ್ತೇನೆ.....

sunaath said...

ದಿನಕರ,
ನಿಮ್ಮ ಆಸಕ್ತಿಗಾಗಿ ಧನ್ಯವಾದಗಳು. ಸದ್ಯದ ಲೇಖಕರಲ್ಲಿ ವಸುಧೇಂದ್ರ ಹಾಗೂ ನುಗಡೋಣಿಯವರ ಕತೆಗಳು ಸ್ವಾರಸ್ಯಕರವಾಗಿವೆ.

Prabhuraj Moogi said...

ಸೂಪರ್, ಕೊನೆಗೆ ಅಲ್ಲಿ ದುರುಗನ ತಲೆ ಮೇಲೆ ಕುಂತ ಗೌಡ ಬೀಳುತ್ತಾನೋ ಇಲ್ವೋ ಅಂತ ಕುತೂಹಲವಂತೂ ತೊಂಬಾ ಹೆಚ್ಚಾಗಿತ್ತು... ಅಲ್ಲಿ ಸೃಷ್ಟಿಸಿರುವ ಕಾತುರತೆ, ಕುತೂಹಲ ಬಹಳೆ ಚೆನ್ನಾಗಿದೆ, ನಿಮ್ಮ ಈ ಲೇಖನದಿಂದಾಗಿ ಒಳ್ಳೆ ಹೊಸದೇನೊ ಓದಲು ಸಿಕ್ಕಿತು...

sunaath said...

ಪ್ರಭುರಾಜ,
ನುಗಡೋಣಿಯವರ ಎಲ್ಲ ಸಂಕಲನಗಳನ್ನೂ ಓದಿರಿ. ಕರ್ನಾಟಕದ ಗ್ರಾಮೀಣ ಜೀವನದ ದುರಂತ ಅವರ ಕತೆಗಳಲ್ಲಿ ಚೆನ್ನಾಗಿ ವ್ಯಕ್ತವಾಗಿದೆ.

ಶೆಟ್ಟರು (Shettaru) said...

ಕಾಕಾ,

"ತಮ೦ಧದ ಕೇಡು" ಒಳ್ಳೆಯ ಕಥಾ ಸಂಕಲನ, ರಾಯಚೂರು ಕನ್ನಡ ಓದಲು ಅಷ್ಟೆ ಸೋಗಸಾಗಿದೆ. ಮೊನ್ನೆ ಊರಿಗೆ ಹೋದಾಗ ತಂದೆಯವರು ಸಾರ್ವಜನಿಕ ಗ್ರಂಥಾಲಯದಿಂದ ಇದನ್ನು ತಂದಿದ್ದರು, ಒಂದೆ ದಿನದಲ್ಲಿ ಬಿಟ್ಟೆಳದೆ ಓದಿ ಮುಗಿಸಿದೆ.

ಅವರ ಇನ್ನುಳಿದ ಸಂಕಲನಗಳನ್ನು ಓದಲು ಅವಕಾಶಕ್ಕಾಗಿ ಕಾಯುತ್ತಿದ್ದೆನೆ, ಎಂದಿನಂತೆ ನಿಮ್ಮ ವಿಮರ್ಷೆ ಚೆನ್ನಾಗಿದೆ.

-ಶೆಟ್ಟರು

sunaath said...

ಶೆಟ್ಟರ,
ನುಗಡೋಣಿಯವರ ರಾಯಚೂರು ಭಾಷೆ ಸೊಗಸಾಗಿದೆ,ಅಲ್ಲ? ಸಂಭಾಷಣೆಗಳಲ್ಲಿ ಪ್ರಾದೇಶಿಕ ಭಾಷೆಯ ಬಳಕೆಯಿಂದ ಕತೆಗೆ ಕಳೆ ಬರ್ತದ, ನೋಡ್ರಿ.

ಮಲ್ಲಿಕಾರ್ಜುನ.ಡಿ.ಜಿ. said...

ಈ ಪುಸ್ತಕ ಓದಬೇಕೆನಿಸಿದೆ. ತುಂಬಾ ಚೆನ್ನಾಗಿ ಈ ಕಥೆಯ ಬಗ್ಗೆ ವಿವರಿಸಿದ್ದೀರಿ. ಧನ್ಯವಾದಗಳು.

sunaath said...

ಮಲ್ಲಿಕಾರ್ಜುನ,
ಈ ಸಂಕಲನದ ಎಲ್ಲ ಕತೆಗಳೂ ಉತ್ತಮವಾಗಿವೆ. ದಯವಿಟ್ಟು ಓದಿರಿ.

Unknown said...

ಅಮರೇಶ ನುಗಡೋಣಿ ಯವರು ’ಶೂನ್ಯಸಂಪಾದನೆ’ಯ ಬಗ್ಗೆ ತಾವೇ ಒಂದು ಬರಹ ಬರೆದು ಮತ್ತು ಬೇರೆ ಬರಹಗಾರರ ಹಲವು ಬರಹಗಳನ್ನು ಕಲೆ ಹಾಕಿರುವ ಒಂದು ಹೊತ್ತಿಗೆ ಹಂಪಿ ಕನ್ನಡ ವಿ.ವಿ.ಯವರು ಹೊರತಂದಿದ್ದಾರೆ.

ನನ್ನಿ, ಈ ಬರಹ ಓದಿದ ಮೇಲೆ ಅಮರೇಶ ನುಗಡೋಣಿ ಯವರ ನೆಗೞ್ಚುಗಳನ್ನು ಇನ್ನು ಹೆಚ್ಚು ಹೆಚ್ಚು ಓದಬೇಕೆಂಬ ಆಸೆ ಮೂಡಿದೆ.

ದೇವನೂರರ ’ಅಮಾಸ’ ಅಂತ ಒಂದು ಪಾಟ ನಮ್ಮ ಕಲಿಮನೆಯಲ್ಲಿ ಓದಿದ್ದ ನೆನಪು.

sunaath said...

ಭರತ,
ಮಾಹಿತಿಗಾಗಿ ಧನ್ಯವಾದಗಳು.

Anonymous said...

thank you sirr... sankalana tagonde :)

sunaath said...

ಮಹೇಶ,
ಧನ್ಯವಾದಗಳು. I am sure you will like the stories.

Unknown said...

ಒಳ್ಳೆಯ ಕಥೆ ಊಳಿಗಮಾನ್ಯ ಪದ್ಧತಿ ಕೆಲವು ಕಡೆ ಇನ್ನು ಇದೆ ಎಂದು ಹೇಳಲು ಈ ಕಥೆ ನಿದರ್ಶನ ವಾಗಿದೆ.

sunaath said...

ಅಮರೇಶ ನುಗಡೋಣಿಯವರು ಪ್ರಸ್ತುತ ಸಂದರ್ಭದಲ್ಲಿ ಕನ್ನಡದ ಶ್ರೇಷ್ಠ ಕತೆಗಾರರಾಗಿದ್ದಾರೆ!

Anonymous said...

Nija ri