ಅಡುಗೆಯ ಸ್ಟೋ, ಸೈಕಲ್ ಅಥವಾ ಮತ್ಯಾವುದೇ ಚಿಕ್ಕಪುಟ್ಟ ಯಂತ್ರೋಪಕರಣಗಳನ್ನು ರಿಪೇರಿ ಮಾಡಿಸಲು ಒಯ್ದಾಗ, ರಿಪೇರಿ ಮಾಡುವವನು , “ಇದರ ‘ವ್ಹಾಯ್ಸರ್’ ಹೋಗೇದರಿ; ಬ್ಯಾರೆ ವ್ಹಾಯ್ಸರ್ ಹಾಕಿಕೊಡ್ತೇನಿ”, ಎಂದು ಹೇಳುವದನ್ನು ನೀವು ಕೇಳಿರಬಹುದು. ಈ ‘ವ್ಹಾಯ್ಸರ್’ ಅನ್ನೋದು ನಿಜವಾಗಿಯೂ washer ಅನ್ನುವ ಆಂಗ್ಲ ಪದದ ಅಪಭ್ರಂಶ. ರಿಪೇರಿ ಮಾಡುವವನಿಗೆ ‘ವಾಶರ್’ ಅನ್ನೋದು ಸಾಕಷ್ಟು ಇಂಗ್ಲಿಶ್ ಅನ್ನಿಸುತ್ತಿರಲಿಕ್ಕಿಲ್ಲ. ಆಂಗ್ಲ ಪದವನ್ನು ಮತ್ತಷ್ಟು ಆಂಗ್ಲೀಕರಣ ಮಾಡುವ ಉದ್ದೇಶದಿಂದ ಆತ ‘ವಾಶರ್’ಅನ್ನು ‘ವ್ಹಾಯ್ಸರ್’ ಮಾಡಿದ್ದಾನೆ.
ಆಂಗ್ಲ ಪದಗಳನ್ನು ಇನ್ನಷ್ಟು ಆಂಗ್ಲೀಕರಿಸುವಂತೆಯೇ ಸಂಸ್ಕೃತ ಪದಗಳನ್ನು ಇನ್ನಷ್ಟು ಸಂಸ್ಕೃತೀಕರಿಸುವದರಲ್ಲಿಯೂ ನಮ್ಮವರಿಗೆ ಅಂದರೆ ಕನ್ನಡಿಗರಿಗೆ ತುಂಬಾ ಪ್ರೀತಿ ಹಾಗು ಅಪರಿಮಿತ ಕೌಶಲ್ಯ.
ಅದರಲ್ಲಿಯೂ ನಮ್ಮ ಕನ್ನಡ ಚಿತ್ರನಿರ್ಮಾಪಕರ ಕೈಯಲ್ಲಿ ಸಿಕ್ಕ ಪದಗಳ ಗೋಳನ್ನಂತೂ ಕೇಳುವದೇ ಬೇಡ.
ದ್ವಾರಕೀಶರು ‘ಗಿರಿಜಾ’ ಎನ್ನುವ ಯುವತಿಯನ್ನು ಚಿತ್ರೋದ್ಯಮಕ್ಕೆ ಪರಿಚಯಿಸುವಾಗ ಅವಳ ಹೆಸರನ್ನು ಬದಲಾಯಿಸಿ ‘ಶೃತಿ’ ಎಂದು ಕರೆದರು. ‘ಶೃತಿ’ ಪದಕ್ಕೆ cooked, boiled, dressed ಎನ್ನುವ ಅರ್ಥವಿದೆ. ‘ಶ್ರುತಿ’ ಪದಕ್ಕೆ ವೇದ, ಉಪನಿಷತ್ತು ಹಾಗು ಸಂಗೀತದ tuning ಎನ್ನುವ ಅರ್ಥವಿದೆ. ದ್ವಾರಕೀಶರ ಮನಸ್ಸಿನಲ್ಲಿ ಇರುವ ಅರ್ಥ ಯಾವುದೋ ಅವರಿಗೇ ಗೊತ್ತು. (ಹೌದೆ?) ಬಹುಶ: ಅವರಿಗೆ ‘ಶ್ರುತಿ’ ಇದು ‘ಶೃತಿ’ಯಷ್ಟು ಸಂಸ್ಕೃತ ಎನ್ನಿಸಿರಲಿಕ್ಕಿಲ್ಲ. ಒಟ್ಟಿನಲ್ಲಿ ದ್ವಾರಕೀಶರ ಕೈಯಲ್ಲಿ ಸಿಕ್ಕ ಗಿರಿಜಾ ಸಂಗೀತದ ಶ್ರುತಿಯಾಗುವ ಬದಲು ಬೇಯಿಸಿದ ಕೋಳಿಯಾಗಿ ಬಿಟ್ಟಳು!
ಇದರಂತೆಯೇ ‘ಧ್ರುವ’ ಪದವನ್ನು ‘ಧೃವ’ ಎಂದು, ‘ಶ್ರದ್ಧಾ’ ಪದವನ್ನು ‘ಶೃದ್ಧಾ’ ಎಂದು ಬರೆದು ಮತ್ತಷ್ಟು ಸಂಸ್ಕೃತೀಕರಿಸುವ ಒಲವು ಹಲವು ಕನ್ನಡಿಗರಲ್ಲಿದೆ.
ಚಿತ್ರನಿರ್ಮಾಪಕರೇನೋ ಭಾಷಾ-ಅಜ್ಞಾನಿಗಳಿರಬಹುದು. ಆದರೆ ನಮ್ಮ ಪತ್ರಿಕೋದ್ಯಮಿಗಳ ಕತೆ ಏನು? ಅವರೂ ಅಜ್ಞಾನಿಗಳೇ? ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಉದಾಹರಣೆಯನ್ನೇ ತೆಗೆದುಕೊಳ್ಳಿರಿ. ಈ ಪತ್ರಿಕೆ ತನ್ನ ಸೋಮವಾರದ ಪುರವಣಿಯ ಶೀರ್ಷಿಕೆಯನ್ನು ‘ಸಿಂಧೂರ’ ಎಂದು ಢಾಳಾದ ಅಕ್ಷರಗಳಲ್ಲಿ ಮುದ್ರಿಸುತ್ತದೆ. ಸಿಂಧೂರ ಪದದ ಅರ್ಥ ‘ಆನೆ’. ಈ ಪುರವಣಿಯು ಮಹಿಳಾಪುರವಣಿ. ಮಹಿಳಾಪುರವಣಿಗೆ ‘ಸಿಂಧೂರ (=ಆನೆ)’ ಎಂದು ಕರೆಯುವ ಮೂಲಕ ಪತ್ರಿಕೆಯ ಸಂಪಾದಕರು ‘ಮಹಿಳೆಯರು ಆನೆಗಳಂತೆ’ ಎನ್ನುವ ಸಾಂಕೇತಿಕ ಅರ್ಥವನ್ನು ಸೂಚಿಸುತ್ತಿದ್ದಾರೆಯೆ? ‘ಸಿಂದೂರ’ ಎಂದರೆ ಕುಂಕುಮ. ಕುಂಕುಮಕ್ಕೂ ಭಾರತೀಯ ಮಹಿಳೆಯರಿಗೂ ಪುರಾತನ ಸಂಬಂಧವಿದೆ. ಹಾಗಿದ್ದರೆ ಮಹಿಳಾಪುರವಣಿಯನ್ನು ‘ಸಿಂದೂರ’ ಎಂದು ಕರೆಯಬೇಕಾಗಿತ್ತಲ್ಲವೆ? ಬಹುಶ: ಮಹಿಳಾ ಪುರವಣಿಯ ಅಲ್ಪಪ್ರಾಣೀಕರಣವು ಅವರಿಗೆ ‘ಅಸಂಸ್ಕೃತ’ ಎನ್ನಿಸಿರಬಹುದು! ಸಂಯುಕ್ತ ಕರ್ನಾಟಕ ಪತ್ರಿಕೆಯು ಇಂತಹ ಅನೇಕ ಮಹಾಪ್ರಾಣೀಕೃತ ಪದಗಳನ್ನು ಸೃಷ್ಟಿಸಿ ಸಂಸ್ಕೃತ ಶಬ್ದಕೋಶಕ್ಕೆ ಕಾಣಿಕೆಯಾಗಿ ನೀಡಿದೆ. ಉದಾಹರಣೆಗೆ: ಸರ್ವೋಚ್ಛ, ಉಚ್ಛಾರ ಇತ್ಯಾದಿ. ದುರದೃಷ್ಟವೆಂದರೆ, ಅಮಾಯಕ ಓದುಗರು, ವಿಶೇಷತಃ ಚಿಕ್ಕ ಹುಡುಗರು ಹಾಗು ವಿದ್ಯಾರ್ಥಿಗಳು ಈ ತಪ್ಪು ಪದಗಳನ್ನೇ ಸರಿಯಾದ ಪದಗಳೆಂದು ತಿಳಿದುಬಿಡುವದು.
ಸಂಯುಕ್ತ ಕರ್ನಾಟಕ ಹಾಗು ವಿಜಯ ಕರ್ನಾಟಕ ಈ ಎರಡೂ ಪತ್ರಿಕೆಗಳು ‘ಅಲ್-ಕೈದಾ’ ವನ್ನು ‘ಅಲ್-ಖೈದಾ’ ಎಂದು ಮುದ್ರಿಸುತ್ತಾರೆ. ಯಾಕೆ? ಉಗ್ರಗಾಮಿಗಳು ಅಲ್ಪಪ್ರಾಣಿಗಳಾಗಿರಲು ಸಾಧ್ಯವಿಲ್ಲವೆಂದೆ? ಹಾಗಿದ್ದರೆ ‘ಕುರ್ಬಾನಿ’ಯಂತಹ(=ತ್ಯಾಗ) ಒಳ್ಳೆಯ ಪದವನ್ನು ‘ಖುರ್ಬಾನಿ’ ಎಂದು ಯಾಕೆ ಬರೆಯುತ್ತಾರೊ ತಿಳಿಯದು!
ಹಾಗೆಂದು ಎಲ್ಲಾ ಹಿಂದಿ/ಉರ್ದು ಪದಗಳನ್ನು ಮಹಾಪ್ರಾಣೀಕರಿಸುತ್ತಾರೆ ಎನ್ನುವಂತಿಲ್ಲ. ‘ಧಾಬಾ’ ಎನ್ನುವ ಹಿಂದಿ ಪದದ ಅರ್ಥ ಹುಲ್ಲಿನ ಗುಡಿಸಲು. ಇದನ್ನು ಕನ್ನಡದಲ್ಲಿ ‘ಡಾಬಾ’ ಮಾಡಲಾಗಿದೆ! ಒಟ್ಟಿನಲ್ಲಿ, ನಮ್ಮ ಪತ್ರಿಕೆಗಳು ಒಂದು ಭಾಷೆಯ ಪದವನ್ನು ಕನ್ನಡ ಭಾಷೆಗೆ ತೆಗೆದುಕೊಳ್ಳುವಾಗ ಅಪಭ್ರಂಶ ಮಾಡಲೇಬೇಕೆನ್ನುವದನ್ನು ವ್ಯಾಕರಣದ ನಿಯಮದಂತೆ ಪರಿಪಾಲಿಸುತ್ತಿದ್ದಾರೆ.
ಸಂಯುಕ್ತ ಕರ್ನಾಟಕ ಪತ್ರಿಕೆಯು ಮಾಡುತ್ತಿರುವ ಭಾಷಾದೋಷಗಳನ್ನು ಈ ಮೊದಲೇ ನಾನು ಇಲ್ಲಿ, ಹಾಗು ಇಲ್ಲಿ ತೋರಿಸಿದ್ದೇನೆ. ವಿಜಯ ಕರ್ನಾಟಕ ಪತ್ರಿಕೆಯೂ ಸಹ ಈ ವಿಷಯದಲ್ಲಿ ಹಿಂದೆ ಬೀಳಲು ಸುತರಾಮ್ ತಯಾರಿಲ್ಲ! ವಿಜಯ ಕರ್ನಾಟಕ ಪತ್ರಿಕೆಯ ‘ಪದೋನ್ನತಿ’ ಎನ್ನುವ ಸ್ಥಿರ ಶೀರ್ಷಿಕೆಯ ಅಡಿಯಲ್ಲಿ ಪ್ರಕಟವಾಗುವ ಮಾಹಿತಿಯು ಸಹ ತಪ್ಪಿನಿಂದ ಕೂಡಿರುತ್ತದೆ. ದಿ:೧೯ ಜನೆವರಿಯಂದು ಪ್ರಕಟವಾದ ಮಾಹಿತಿಯನ್ನು ಇಲ್ಲಿ ಕೊಡುತ್ತಿದ್ದೇನೆ:
‘ಶೀತ್ನಿ’ ಪದದ ಅರ್ಥ ‘ಸೀ ತೆನೆ’. ‘ಸೀ ತೆನೆ’ಗೆ ‘ಬೆಳಸಿ’ ಎಂದೂ ಕರೆಯುತ್ತಾರೆ, ‘ಹಾಲು ತೆನೆ’ ಎಂದೂ ಕರೆಯುತ್ತಾರೆ. ಜೋಳದ ಬೆಳೆಗೆ ತೆನೆ ಬಿಟ್ಟಾಗ, ಈ ತೆನೆಯು ಇನ್ನೂ ಬಲಿಯದೆ ಇದ್ದಾಗ, ಇದನ್ನು ಹಾಗೇ ತಿನ್ನಬಹುದು. ಆ ಕಾರಣಕ್ಕಾಗಿಯೇ ಇದಕ್ಕೆ ‘ಸೀ ತೆನೆ’, sweet corn ಎಂದು ಕರೆಯುವದು. ವಿಜಯ ಕರ್ನಾಟಕದ ‘ಪದೋನ್ನತಿ’ಯ ಪಂಡಿತರಿಗೆ ಇದು ಚಾದಂಗಡಿಯಲ್ಲಿ ದೊರೆಯುವ ‘ಸಿಹಿ ತಿನಿಸು’ ತರಹ ಕಂಡಿದ್ದು ಆಶ್ಚರ್ಯಕರವಾಗಿದೆ!
………………………………………………………………..
ಕನ್ನಡಿಗರು ವ್ಯಾಕರಣದ ನಿಯಮಗಳನ್ನು ನಾಲಿಗೆಗೆ ಅನುಕೂಲವಾಗುವಂತೆ ಹೊಂದಿಸಿಕೊಳ್ಳುವದರಲ್ಲಿ ನಿಸ್ಸೀಮರು. ‘ಹೆಣ್ಣು ಕೂಸು’ ಎನ್ನುವ ಜೋಡು ಪದವು ಮೊದಲು ‘ಹೆಂಗೂಸು’ ಆಗಿ, ಬಳಿಕ ‘ಹೆಂಗಸು’ ಆಯಿತು.
ಅದರತೆಯೇ, ‘ಗಂಡು ಕೂಸು’ ಪದವು ‘ಗಂಡಸು’ ಆಯಿತು. ಇದರಿಂದ ಉಚ್ಚಾರ ಸುಲಭವಾಯಿತು. ಆದರೆ ವ್ಯಾಕರಣಕ್ಕೇನೂ ಭಂಗ ಬರಲಿಲ್ಲ. ಇದೇ ಮಾತನ್ನು ‘ಆಕಳು’ ಪದಕ್ಕೆ ಹೇಳುವಂತಿಲ್ಲ. ‘ಆವು’ ಪದದ ಬಹುವಚನ ‘ಆವುಗಳು’. ಇದೇ ಕಾಲಾಂತರದಲ್ಲಿ ‘ಆಕಳು’ ಆಗಿದೆ. ಆದುದರಿಂದ ‘ಆಕಳು ಬಂದಿದೆ’ ಎಂದು ಹೇಳುವದು ಸರಿಯಲ್ಲ. ಇದು ‘ಆವು ಬಂದಿದೆ’ , ಅಥವಾ ‘ಆಕಳು ಬಂದಿವೆ’ ಎಂದು ಇರಬೇಕು!
ಕೆಲವೊಂದು ರೂಪಾಂತರಗಳಂತೂ ವಿನೋದವನ್ನು ಹುಟ್ಟಿಸುವಂತಿವೆ. ಬೀದರ ಜಿಲ್ಲೆಯಲ್ಲಿ ‘ಹುಡುಗಿ’ ಎನ್ನುವ ಊರಿದೆ. ಈ ಊರಿಗೆ ಹೋಗಬಯಸುವ ಬಸ್ ಪ್ರಯಾಣಿಕರು ನಿರ್ವಾಹಕನಿಗೆ “ಒಂದು ಹುಡುಗಿ ಕೊಡಪ್ಪಾ” ಎಂದು ಚೇಷ್ಟೆ ಮಾಡುವದು ಸಾಮಾನ್ಯವಾಗಿದೆ. ಹುಡುಗಿ ಪದದ ಮೂಲರೂಪ ‘ಪುದುಗಿ’. ‘ಪುದು’ ಇದರ ಅರ್ಥ ಹೊಸದಾದದ್ದು.
‘ಪುದು’=new ;`ಗಿ’=habitat.
ಹುಡುಗಿ=ಪುದುಗಿ= new habitat=ಹೊಸೂರು.
ತಮಿಳಿನಲ್ಲಿ ಹುಡುಗಿ ಅಥವಾ ಪುದುಗಿ ಎನ್ನುವ ಪದಕ್ಕೆ ಸಮಾನವಾದ ಪದ=ಪುದುಚೆರಿ.
ಇಲ್ಲಿಯೂ ಸಹ ಪುದು=ಹೊಸ ಹಾಗೂ ಚೆರಿ=ಊರು.
ಅದರಂತೆಯೇ ಹೊಸದಾಗಿ ಜನ್ಮ ಪಡೆದ ಕೂಸು ಪುದುಕ ಅಥವಾ ಪುದುಕಿಯಾಯಿತು. ಈ ಪದಗಳೇ ಕಾಲಾಂತರದಲ್ಲಿ ‘ಹುಡುಗ’, ‘ಹುಡುಗಿ’ ಎಂದು ಮಾರ್ಪಾಡಾಗಿವೆ.
ಪುದು ಪದಕ್ಕೆ ವಿರುದ್ಧವಾದದ್ದು ಮುದು ಎನ್ನುವ ಪದ. ಮುದು=old. ಈ ಪದದಿಂದಲೇ ಮುದುಕ, ಮುದುಕಿ ಎನ್ನುವ ಪದಗಳು ಬಂದಿವೆ. ಮುದಗಲ್ಲು ಎನ್ನುವ ಊರಿನ ಅರ್ಥ ಹಳೆಯ ಊರು. ಇದಕ್ಕೆ ಸಮಾನವಾದ ಮತ್ತೊಂದು ಕನ್ನಡ ಪದ ಹಳೇಬೀಡು.
ಕನ್ನಡ ನುಡಿಯಲ್ಲಿ ‘ಪ’ಕಾರವು ‘ಹ’ಕಾರವಾಗಿ ಮಾರ್ಪಟ್ಟಿದ್ದರಿಂದ ಅನೇಕ ಪದಗಳ ಉಚ್ಚಾರಗಳು ಬದಲಾದವು. ಉದಾಹರಣೆಗೆ ‘ಪಾವು’ ಪದವು ‘ಹಾವು’ ಎಂದು ಬದಲಾಯಿತು ; ‘ಪಣ್ಣು’ ಪದವು ‘ಹಣ್ಣಾ’ಯಿತು; ‘ಪೆಣ್ಣು’ ‘ಹೆಣ್ಣಾ’ದಳು. ಸಂಸ್ಕೃತದ ‘ಪರ್ವ’ವು ಕನ್ನಡದಲ್ಲಿ ‘ಹಬ್ಬ’ವಾಯಿತು. ಆದರೆ ‘ಪೆಂಟಿ’ ಎನ್ನುವ ಪದವು ‘ಹೆಂಟಿ’ಯಾಗಿ ಬದಲಾದಾಗ, ರೂಪಾಂತರದೊಡನೆ ಅರ್ಥಾಂತರವೂ ಆಯಿತು. ಬೆಲ್ಲದ ಗಟ್ಟಿಗೆ ಬೆಲ್ಲದ ಪೆಂಟಿ ಎಂದು ಕರೆಯುತ್ತೇವೆ, ಬೆಲ್ಲದ ಹೆಂಟಿ ಎಂದು ಕರೆಯುವದಿಲ್ಲ. ಹೆಂಟಿ ಪದವು ಮಣ್ಣಿನ ಗಟ್ಟಿಗೆ reserve ಆಗಿದೆ. ಇದೇ ರೀತಿಯಲ್ಲಿ ಗೆಳತಿ ಪದವು ಕೆಳದಿ ಪದದಿಂದಲೇ ಬಂದಿದ್ದರೂ ಸಹ ಅರ್ಥಗಳಲ್ಲಿ ಅಜಗಜಾಂತರವಿದೆ.
ಅದರಂತೆ, ತ ಮತ್ತು ದ ಧ್ವನಿಗಳು ಬದಲಾಗಬಲ್ಲ ಧ್ವನಿಗಳಾದರೂ ಸಹ (ಉದಾಹರಣೆ: ಹುಲಿಯ ತೊಗಲು=ಹುಲಿದೊಗಲು), ತಣಿವು ಮತ್ತು ದಣಿವು ಈ ಪದಗಳು ಅರ್ಥದಲ್ಲಿ ಪೂರ್ಣ ವಿಭಿನ್ನವಾಗಿವೆ.
ಒಂದು ಕಾಲದಲ್ಲಿ ದ್ರಾವಿಡ ಭಾಷೆಗಳಿಗೆಲ್ಲ common ಆದ ಕೆಲವು ಪದಗಳು ಕಾಲಾಂತರದಲ್ಲಿ ಒಂದೆರಡು ಭಾಷೆಗಳಿಂದ ವಜಾ ಆಗಿಬಿಟ್ಟಿವು. ಉದಾಹರಣೆಗೆ ತುಳು ಭಾಷೆಯಲ್ಲಿಯ ‘ವಣಸ’ ಪದವನ್ನೇ ತೆಗೆದುಕೊಳ್ಳಿರಿ. ತುಳು ಭಾಷೆಯಲ್ಲಿ ‘ಊಟ ಆಯಿತೆ?’ ಎಂದು ಕೇಳಲು ‘ವಣಸ ಆಂಡಾ?’ ಎಂದು ಕೇಳುತ್ತಾರೆ. ಈ ಪದವು ಕನ್ನಡದಲ್ಲಿಯೂ ಒಮ್ಮೆ ಬಳಕೆಯಲ್ಲಿ ಇದ್ದಿರಬಹುದು. ವಣಸ ಪದದಿಂದ ವಾಣಸಿಗ ಪದ ಉತ್ಪನ್ನವಾಗಿದ್ದು, ಕನ್ನಡದಲ್ಲಿ ಅದು ‘ಬಾಣಸಿಗ’ ಎಂದು ಮಾರ್ಪಟ್ಟಿದೆ.
ಇದರಂತೆಯೇ ‘ಬಾಗಿಲು’ ಎನ್ನುವ ಪದ.
ತುಳುವಿನಲ್ಲಿ ಮನೆ ಪದಕ್ಕೆ ಇಲ್ ಎನ್ನುವ ಪದವನ್ನೇ ಇನ್ನೂ ಬಳಸುತ್ತಾರೆ. ಇಲ್ (=ಮನೆ) ಹಾಗೂ ವಾಯಿ(=ಬಾಯಿ) ಪದಗಳು ಕೂಡಿ ‘ವಾಯಿಲ್’ (=ಮನೆಯ ಬಾಯಿ) ಪದವು ಉತ್ಪನ್ನವಾಯಿತು. ವಾಯಿಲ್ ಪದವು ವಾಕಿಲ್ ಆಯಿತು. ಕಾಲಾಂತರದಲ್ಲಿ ಇದೇ ಪದವು ಬಾಗಿಲು ಎಂದು ರೂಪಾಂತರಗೊಂಡಿತು. ಅದರಂತೆ ಇಲ್ (ಮನೆ) ಹಾಗೂ ಹಿಂತು ಪದಗಳು ಕೂಡಿ ‘ಹಿಂತಿಲ್’ (=ಹಿತ್ತಲು) ಪದ ರೂಪಗೊಂಡಿದೆ. ‘ಹಿಂತಿಲು’ ಈಗ ಹಿತ್ತಲಾಗಿದೆ. ಕನ್ನಡಿಗರು ‘ಇಲ್’ ಪದದ ಬದಲಾಗಿ ‘ಮನೆ’ಗೆ ಅಂಟಿಕೊಂಡಿದ್ದರಿಂದ, ಬಾಗಿಲು, ಹಿತ್ತಲು ಇವುಗಳ ಮೂಲರೂಪಗಳು ಮಸುಕಾಗಿ ಬಿಟ್ಟಿವೆ.
ಪದಮೂಲವನ್ನು ಶೋಧಿಸುವದು ನದೀಮೂಲವನ್ನು ಶೋಧಿಸುವಷ್ಟೇ ಸಾಹಸಕರವಾಗಿದೆ!