Sunday, January 10, 2010

‘ನನ್ನಾಸೆ’ (--ಶ್ರೀಮತಿ ಊರ್ಮಿಳಾ ದೇಶಪಾಂಡೆ)

ನಗರಸಂಸ್ಕೃತಿಯು ತನ್ನ ಒಡಲಿನಲ್ಲಿರುವ ನಾಗರಿಕರನ್ನು ಮರಳು ಮಾಡುವ ಮಾಯಾವಿ ಸಂಸ್ಕೃತಿಯಾಗಿದೆ. ಟೀವಿ, ಸಿನೆಮಾ ಮತ್ತು ಝಗಝಗಿಸುವ ಅಂಗಡಿಗಳು ನಾಗರಿಕರನ್ನು ಭ್ರಮಾಲೋಕಕ್ಕೆ ಸೆಳೆಯುತ್ತವೆ ಹಾಗು ಜೀವನವೆಂದರೆ ಇದೇ ಎನ್ನುವ ಭ್ರಮೆಯನ್ನು ಹುಟ್ಟಿಸುತ್ತವೆ. ಇದಕ್ಕೆ ತೀರ ವಿರುದ್ಧವಾದ, ಇದಕ್ಕಿಂತ ಹೆಚ್ಚು fulfilling ಆದಂತಹ ಬದುಕು ಸಾಧ್ಯವಿಲ್ಲವೆ? 
ಹಳ್ಳಿಗಳಲ್ಲಿ ಹಾಗು ನಿಸರ್ಗದ ಮಡಿಲಲ್ಲಿ ಬಾಳಿದ ನಮ್ಮ ಪೂರ್ವಜರ ಬದುಕು ನಗರಸಂಸ್ಕೃತಿಗಿಂತ ಹೆಚ್ಚು ಶ್ರೀಮಂತವಾಗಿತ್ತು. ಇಂತಹ ಒಂದು ಸಂಸ್ಕೃತಿಯ ಕನಸು ಶ್ರೀಮತಿ ಊರ್ಮಿಳಾ ದೇಶಪಾಂಡೆಯವರು ಬರೆದ ‘ನನ್ನಾಸೆ’ ಎನ್ನುವ ಈ ಕವನದಲ್ಲಿ ವ್ಯಕ್ತವಾಗಿದೆ.

 ಈ ಕವನದಲ್ಲಿ ಕವಯಿತ್ರಿಯ ಆಸೆಯನ್ನು ಎರಡು ವಿಧವಾಗಿ ವಿಶ್ಲೇಷಿಸಬಹುದು:
ಮೊದಲನೆಯದಾಗಿ ನಿಸರ್ಗದೊಡನೆ ಸಮರಸವಾಗಿ ಬಾಳುವ ಆಸೆ. ಎರಡನೆಯದಾಗಿ, ಯಾವುದೇ ಮಹತ್ವಾಕಾಂಕ್ಷೆ ಇಲ್ಲದ ಪುಟ್ಟ ಬದುಕೇ ಸಾಕು ಎನ್ನುವ ಆಸೆ,‘Small is beautiful’ ಎನ್ನುತ್ತಾರಲ್ಲ ಹಾಗೆ.
ಪರಿಮಳ ಬೀರುವ ಪುಟ್ಟ ಹೂವು, ಸ್ವಚ್ಛಂದವಾಗಿ ಹಾರುವ  ಮರಿಹಕ್ಕಿ, ಜುಳುಜುಳು ಹರಿಯುವ ಪುಟ್ಟ ತೊರೆ, ಕಮಲದೆಲೆಯ ಮೇಲಿನ ಇಬ್ಬನಿ ಇವು ಕವಯಿತ್ರಿ ಬಯಸುವ ಬದುಕಿನ ರೂಪಗಳು.

ಕೊನೆಯ ಸಾಲಿನಲ್ಲಿರುವ ಕಮಲದೆಲೆಯ ಮೇಲಿನ ಇಬ್ಬನಿಯ ಪ್ರತೀಕವನ್ನು ಗಮನಿಸಿರಿ. ಇಬ್ಬನಿಯ ಕ್ಷಣಭಂಗುರ ಜೀವನವನ್ನು ಈ ಪ್ರತೀಕ ಅಭಿವ್ಯಕ್ತಿಗೊಳಿಸುತ್ತದೆ. ಇದರೊಂದಿಗೇ ಭಾರತೀಯ ತತ್ವಜ್ಞಾನದ ಮಹತ್ವದ ಸಂದೇಶವೊಂದನ್ನೂ ಇದು ಸಾರುತ್ತದೆ: ‘ಕಮಲಪತ್ರಮಿವಾಂಭಸಿ.’ ಕಮಲದ ಎಲೆಯ ಮೇಲಿನ ನೀರಬಿಂದು ಹೇಗೆ ಕಮಲದೆಲೆಗೆ ಅಂಟಿಕೊಂಡಿರುವದಿಲ್ಲವೊ, ಅದೇ ರೀತಿಯಲ್ಲಿ  ಮನುಷ್ಯನು ಸಂಸಾರಕ್ಕೆ ಅಂಟಿಕೊಂಡಿರಬಾರದು ಎನ್ನುವದು ಈ ಸಂದೇಶ. ಆದರೆ, ಈ ಪ್ರತೀಕದಲ್ಲಿ ಇನ್ನೂ ಹೆಚ್ಚಿನ, ಇನ್ನೂ ಸುಂದರವಾದ ಮತ್ತೊಂದು ಸಂದೇಶವಿದೆ.
“ಸುತ್ತಲಿನ ನಿಸರ್ಗವನು ತನ್ನಲ್ಲಿ ಪ್ರತಿಫಲಿಸಿ……
.....ನನ್ನಲ್ಲಿ ಅಡಗಿದ ಆ ಸೌಂದರ್ಯವು ಅಮರವಹುದು…..”
ಸಂಸಾರಕ್ಕೆ ಅಂಟಿಕೊಳ್ಳಬಾರದು ಎನ್ನುವದು ನಿಜ. ಆದರೆ, ಈ ಜೀವನವೆಲ್ಲ ಭಗವಂತನ ನಿರ್ಮಿತಿ ; ಅದನ್ನು ತಾನು ಶುದ್ಧ ರೂಪದಲ್ಲಿ ಪ್ರತಿಫಲಿಸುತ್ತೇನೆ ಎನ್ನುವ ತಿಳಿವಳಿಕೆ ಈ ಸಾಲಿನಲ್ಲಿದೆ. ಇದು ಜೀವನವನ್ನು ‘ಸತ್ಯಮ್, ಶಿವಮ್, ಸುಂದರಮ್’ ಎಂದು ಭಾವಿಸುವ ತಿಳಿವಳಿಕೆ.


ಶ್ರೀಮತಿ ಊರ್ಮಿಳಾ ದೇಶಪಾಂಡೆ ನನ್ನ ತಾಯಿ. ಅತ್ಯಂತ ತೀಕ್ಷ್ಣ ಬುದ್ಧಿಯ ಇವಳು, ಮುಲ್ಕಿ (೭ನೆಯ) ತರಗತಿಯಲ್ಲಿದ್ದಾಗ, ತನ್ನ ತರಗತಿಯ ಅತ್ಯಂತ ಕಿರಿಯ ವಯಸ್ಸಿನ ವಿದ್ಯಾರ್ಥಿಯಾಗಿದ್ದಳು. ಕಾ^ಲೇಜಿನಲ್ಲಿ ಕಲಿಯುವಾಗ, ಹಣದ ಅಭಾವದಿಂದ ಪಠ್ಯಪುಸ್ತಕಗಳನ್ನು ಕೊಳ್ಳುವದು ಹೋಗಲಿ,ನೋಟುಬುಕ್ಕುಗಳನ್ನು  ಕೊಳ್ಳಲೂ ಇವಳಿಗೆ ಸಾಧ್ಯವಿರಲಿಲ್ಲ.

‘ಸಂಯುಕ್ತ ಕರ್ನಾಟಕ’ ಪತ್ರಿಕೆಯಲ್ಲಿಯ ಅಕ್ಷರಗಳನ್ನು ತೋರಿಸುತ್ತ ನನಗೆ ವರ್ಣಮಾಲೆಯನ್ನು ಕಲಿಸಿದ  ಗುರು ಇವಳು. ಸ್ವತಃ voracious reader ಆದ ಇವಳಿಂದಾಗಿಯೇ ನನಗೆ  ಹಾಗು ನನ್ನ ಒಡಹುಟ್ಟಿದವರಿಗೆ  ಸಾಹಿತ್ಯವನ್ನು ಓದುವ, ಬರೆಯುವ ಚಟ ಅಂಟಿಕೊಂಡಿತು.

ನಾಲ್ಕು ವರ್ಷಗಳ ಹಿಂದೆ, ತನ್ನ ಎಂಬತ್ತೊಂದನೆಯ ವಯಸ್ಸಿನಲ್ಲಿ , ನನ್ನ ತಾಯಿ ತೀರಿಕೊಂಡಳು.

56 comments:

L'Étranger said...

ಎಷ್ಟು ಸುಂದರ ಪದ್ಯ, ಎಷ್ಟು ಒಳ್ಳೆಯ ಮಾತುಗಳು! ಇಂತಹ ಅಮ್ಮಂದಿರುವವರೆಗೂ ಸಾಹಿತ್ಯಕ್ಕಾಗಲೀ, ಸಾಹತ್ಯಾಸಕ್ತರಿಗಾಗಲೀ ಕೊನೆ ಇರಲಾರದು!

ಮುಂಚೆ ಹಾಕಿದ್ದ ಚಿತ್ರವನ್ನು ಬದಲಾಯಿಸಿಬಿಟ್ಟರಲ್ಲ. ತುಂಬಾ ಚಂದವಾಗಿತ್ತು ಆ ಚಿತ್ರ ಸಹ!

sunaath said...

ಪ್ರಿಯರೆ,
ನನ್ನ ತಾಯಿ ಈ ಕವನವನ್ನು ಬರೆದಾಗ ಅವಳಿಗೆ ಎಂಬತ್ತು ವರ್ಷಗಳಾಗಿದ್ದವು. ಈ ಚಿತ್ರ ಸಹ ಅವಳ ಕೊನೆಯ ವರ್ಷಗಳಲ್ಲಿ ತೆಗೆದ ಚಿತ್ರ. ಹಾಗಾಗಿ ಅವಳ ಹರೆಯದ ವಯಸ್ಸಿನ ಚಿತ್ರವನ್ನು ಬದಲಿಸಿ, ಇಳಿವಯಸ್ಸಿನ ಚಿತ್ರವನ್ನೇ ಹಾಕಿದೆ!

ಮನಮುಕ್ತಾ said...

ಮನೆಯೆ ಮೊದಲ ಪಾಟ ಶಾಲೆ
ಜನನಿ ತಾನೆ ಮೊದಲ ಗುರುವು
ಜನನಿಯಿ೦ದ ಪಾಟ ಕಲಿತ ಜನರು ಧನ್ಯರು
ಘನತೆಯಿ೦ದಲವರು ಬಾಳ್ವರೆನುತ ನುಡಿವರು.

ಈ ಸಾಲುಗಳನ್ನು ನಿಮ್ಮ ತಾಯಿ ನಿಜಗೊಳಿಸಿದ್ದಾರೆ.
ಅ೦ತಹಾ ಉದಾತ್ತ ಮನಸ್ಸಿನ ತಾಯಿಯನ್ನು ಪಡೆದ ನೀವು ನಿಜಕ್ಕೂ ಧನ್ಯರು.

sunaath said...

ಮನಮುಕ್ತಾ,
ಧನ್ಯವಾದಗಳು.

ಚುಕ್ಕಿಚಿತ್ತಾರ said...

ನಿರ್ಮಲವಾದ ಆಸೆಗಳು... ಪದ್ಯ ಸು೦ದರವಾಗಿದೆ.
ನಿಮ್ಮ ತಾಯಿ ನೋಡುಗರಲ್ಲಿ ಗೌರವವನ್ನು ಮೂಡಿಸುವ೦ತಿದ್ದಾರೆ. ತಾಯಿ ಯಾವತ್ತೂ ತನ್ನ ಅಸ್ತಿತ್ವನ್ನು ತನ್ನ ಮಕ್ಕಳಲ್ಲಿ ಕಾಣಬಯಸುತ್ತಾಳೆ.ನಿಜವಾಗಿದೆ..ಅದು..

ವ೦ದನೆಗಳು.

umesh desai said...

ಕಾಕಾ ಕವಿತಾ ಛಂದದ, ನೀವು ಮಾಡಿದ ವಿಶ್ಲೇಷಣಾನೂ ಛಂದದ. ಗೀತಾದಾಗ ಮಾತದಂತ ಅದ್ರ ಮರಾಠಿ ಹಾಡು..."ಕ್ಷಣಭಂಗುರ ಹೆ ಸಂಸ್ಕೃತಿ ಆಹೆ ಖೇಳ ಸಾವಲ್ಯಾಂಚಾ.." ಎಂಬತ್ತರ ಇಳಿವಯಸ್ಸಿನ್ಯಾಗ ಬರದಿದ್ದು ಪ್ರೋತ್ಸಾಹ ಸಿಕ್ಕಿದ್ರ ಇನ್ನೂ ಛಂದನ್ನ ಕವಿತಾ ಅವರು ರಚಿಸಬಹುದಾಗಿತ್ತು...

Subrahmanya said...

ಕವಿತೆ ತುಂಬಾ ಚೆನ್ನಾಗಿದೆ..ಭಾವಪೂರ್ಣವಾಗಿದೆ. ನೂಲಿನಂತೆ ಸೀರೆ..ತಾಯಿಯಂತೆ ಮಕ್ಕಳು ಎಂಬುದು ನಿಮ್ಮ ವಿಷಯದಲ್ಲಿ ಅನ್ವರ್ಥವಾಗಿದೆ.

ಗೌತಮ್ ಹೆಗಡೆ said...

taayige takka maga:)

Ittigecement said...

ಸುನಾಥ ಸರ್...

ಎಷ್ಟು ಸುಂದರ ಕವನ...!
ಅದರ ಭಾವ..!
ನಿಮ್ಮ ಮಾತೋಶ್ರೀಯವರ ಆಶಯ ಓದಿ..
ಕುವೆಂಪುರವರ "ಸದ್ದಿರದ ಪಸಿರುಡೆಯ.. ಮಲೆನಾಡ ಬನಗಳಲಿ"
ಹಾಡಿನ ನೆನಪಾಯಿತು..

ವಾಹ್... !

ಅವರ ಪ್ರಭಾವದಿಂದಲೆ ನಿಮ್ಮ ಸಾಹಿತ್ಯ ಆಸಕ್ತಿಯಾಗಿದ್ದು..
ನಾವೆಲ್ಲ ಬೇಂದ್ರೆಯವರ, ಷರೀಫರ ಸಾಹಿತ್ಯ ವಿಮರ್ಶೆ ಓದುತ್ತಿರುವದು...

ಅಂಥಹ ಅಮ್ಮನನ್ನು ಪಡೆದ ನೀವು ಧನ್ಯರು...

ಅವರ ಅಕ್ಷರ ಕೂಡ ಚೆನ್ನಾಗಿ ಬರೆಯುತ್ತಿದ್ದರು..

ನಿಮ್ಮ ತಾಯಿಯವರನ್ನು ನಮಗೆಲ್ಲ ಪರಿಚಯಿಸಿದ್ದಕ್ಕೆ ಧನ್ಯವಾದಗಳು..

ರಾಜೀವ said...

ಒಂದು ನಿಮಿಷ ಮೈ ಝುಮ್ ಅನಿಸಿತು.
ಇಂದಿನ ಪೀಳಿಗೆಯವರು ತುಂಬಾ ಬುದ್ದಿವಂತರು, ಚಿಕ್ಕ ವಯಸ್ಸಿನಿಂದಲೇ ಹೆಚ್ಚೆಚ್ಚು ವಿಷಯಗಳನ್ನು ತಿಳಿದುಕೊಂಡಿರುತ್ತಾರೆ ಎಂದೆಲ್ಲಾ ಬೊಬ್ಬೆ ಹೊಡೆಯುವುದು ಸಾಮಾನ್ಯ. ಆದರೆ ನಾವು ಈ ಚಾಮ್ಪಿಟೆಟಿವ್ ಲೋಕದಲ್ಲಿ ಸದಾ ಬೇಟೆಯಾಡುವ ಹದ್ದಗಬೇಕೆಂದು ಆಸೆ ಪಡುತ್ತೇವೆ, ಪುಟ್ಟ ಮರಿಹಕ್ಕಿಯಲ್ಲ. ನಿಮ್ಮ ತಾಯಿಗೆ ನನ್ನ ನಮನಗಳು.

ನಿಮ್ಮ ಲೇಖನಗಳ ಪಾಂಡಿತ್ಯ ಎಲ್ಲಿಂದ ಹರಿದು ಬಂದಿತೆಂದು ಈಗ ಸ್ಪಷ್ಟವಾಗಿ ಕಾಣುತ್ತಿದೆ.

PARAANJAPE K.N. said...

ಸುನಾಥ ಜೀ,
ನಿಮ್ಮ ತಾಯಿಯವರು ತಮ್ಮ ಎ೦ಭತ್ತರ ಹರೆಯದಲ್ಲಿ ಬರೆದ ಕವನದ ಕೈಬರಹ ಪ್ರತಿಯನ್ನು ಪ್ರಕಟಿಸಿ, ಅದರ ಬಗ್ಗೆ ಪುಟ್ಟ ವಿಶ್ಲೇಷಣೆ ಮಾಡಿದ್ದೀರಿ. ಕವನ, ಅದರೊಳಗಿನ ಆಶಯ, ನಿಮ್ಮ ವಿಶ್ಲೇಷಣೆ, ಎಲ್ಲವೂ ಚ೦ದ ಚ೦ದ. ಅ೦ತಹ ಅಮ್ಮನನ್ನು ಪಡೆದ ನೀವು ಧನ್ಯರು. ನಿಮ್ಮ ಸಾಹಿತ್ಯಾಸಕ್ತಿಗೆ ನಿಮ್ಮ ಅಮ್ಮನೇ ಸ್ಪೂರ್ತಿ ಅ೦ತ ಗೊತ್ತಾಯ್ತು. ಅವರನ್ನು ಬ್ಲಾಗ್ ಮೂಲಕ ಪರಿಚಯಿಸಿದ್ದಕ್ಕೆ ಧನ್ಯವಾದಗಳು.

sunaath said...

ವಿಜಯಶ್ರೀ,
ತಾಯಿಯಂತಹ ಗುರು ಮತ್ತೊಬ್ಬರಿಲ್ಲ ಎಂದು ಹೇಳಬಹುದು.

sunaath said...

ದೇಸಾಯರ,
ನಮ್ಮ ಅವ್ವ ಸಾಕಷ್ಟು ಕವನ ಹಾಗು ಕತೆಗಳನ್ನು ಬರದು ಇಟ್ಟಿದ್ದಳು. ತನ್ನ ಮಕ್ಕಳ ಹಾಗು ಗೆಳತಿಯರ ಎದುರಿಗೆ ಓದಿ ತೋರಿಸುತ್ತಿದ್ದಳು. ಆಕಿ ಬರದಂತಹ ಒಂದು ನಾಟಕವನ್ನು ಮತ್ತೊಬ್ಬರಿಗೆ ಕೊಟ್ಟುಬಿಟ್ಟಳು--ರೇಡಿಯೋ ನಾಟಕ ಅಂತ ಅವರ ಹೆಸರಿನಲ್ಲೇ ಪ್ರಸಾರ ಆಗಲಿಕ್ಕೆ. ಅವೆಲ್ಲಾ ಎಲ್ಲೋ ಕಳೆದು ಹೋಗಿ ಬಿಟ್ಟವು. ಇದೊಂದು ಕವನ ಅಕಸ್ಮಾತ್ತಾಗಿ ಸಿಕ್ಕಿತು. ಅದನ್ನ ನಿಮ್ಮ ಎದುರಿಗೆ ಇಟ್ಟೇನಿ.

sunaath said...

ಸುಬ್ರಹ್ಮಣ್ಯರೆ,
ನಮ್ಮ ತಾಯಿ ವಿವಿಧ aspectsಗಳಲ್ಲಿ ಪರಿಣತಳಿದ್ದಳು. ಸಾಹಿತ್ಯದ ಆಸಕ್ತಿ ಮಾತ್ರ ನಮ್ಮಲ್ಲೆ ಇಳಿದು ಬಂದಿತು.

sunaath said...

ಗೌತಮ,
ಅವಳ ಮಕ್ಕಳಾದ ನಾವ್ಯಾರೂ ಅವಳಿಗೆ ತಕ್ಕ ಮಕ್ಕಳೆಂದು ಹೇಳಲಾರೆ.

sunaath said...

ಪ್ರಕಾಶ,
ನಮ್ಮ ತಾಯಿಯ ಕೈಬರಹ ಸುಂದರವಾಗಿರುತ್ತಿತ್ತು. ಅದನ್ನು ತೋರಿಸಲೆಂದೇ, ಅವಳು ಪೆನ್ಸಿಲಿನಲ್ಲಿ ಬರೆದ ಹಸ್ತಪ್ರತಿಯನ್ನು, ಬಾ^ಲ್ ಪೆನ್ನಿನಿಂದ ತೀಡಿ, scan ಮಾಡಿಸಿ, ಇಲ್ಲಿ ಪ್ರಕತಿಸಿದೆ. ಅವಳ ಇಳಿವಯಸ್ಸಿನ ಕೈಬರಹ ಇದು ಎಂದರೆ, ಅಚ್ಚರಿಯಾಗುವದು, ಅಲ್ಲವೆ?

sunaath said...

ರಾಜೀವ,
ನಮ್ಮ ತಾಯಿ ಹಳೆಯ ಕಾಲದವಳು. ಸಾಂಪ್ರದಾಯಕ ಆದರ್ಶಗಳನ್ನು ಮೈಗೂಡಿಸಿಕೊಂಡವಳು. ಅಂತಹ ಆದರ್ಶಗಳೇ ಬಹುಶ: ಸಮಾಜಕ್ಕೆ ಒಳ್ಳೆಯದೇನೊ ಎಂದು ಕೆಲವೊಮ್ಮೆ ಅನಿಸುತ್ತದೆ.

sunaath said...

ಪರಾಂಜಪೆಯವರೆ,
ಅವಳು ತುಂಬಾ ಜಾಣೆ. ಆದರೆ, ಆ ಕಾಲದ ಪದ್ಧತಿಯಂತೆ,
ಮನೆಗೆಲಸಕ್ಕೆ ಹಾಗು ಮಕ್ಕಳ ಲಾಲನೆ ಪಾಲನೆಗೆ ತನ್ನನ್ನು ಸಮರ್ಪಿಸಿಕೊಂಡವಳು. ಅಂತಹ ಪರಿಮಿತಿಯಲ್ಲಿಯೇ ಇದನ್ನೆಲ್ಲ ಸಾಧಿಸಿದವಳು!

Unknown said...

ಆಹಾ.. ಎಷ್ಟೊಂದು ಸುಂದರ ಕವನ... ಕಪಟ ಮನವಿಲ್ಲದ ನಿಷ್ಕಲ್ಮಶ ಪುಟ್ಟ ಪುಟ್ಟ ಆಶೆಗಳು...ಆ ಕೈಬರಹ ಅವರದ್ದೆನ??

ಇಂತಹ ಬೇರೆ ಕವನಗಳಿದ್ದರೆ ಬ್ಲಾಗ್ ಗೆ ಹಾಕಿ ಸಾರ್... ಧನ್ಯವಾದ..

ಚಿತ್ರಾ said...

ಕಾಕಾ
ಬಹಳ ಅರ್ಥಬದ್ಧವಾದ ಕವನ . ನಿಮ್ಮ ಸಾಹಿತ್ಯಾಸಕ್ತಿ ನಿಮ್ಮ ತಾಯಿಯಿಂದ ಬಳುವಳಿಯಾಗಿ ಬಂದಿದ್ದು ಎಂಬುದರಲ್ಲಿ ಸಂಶಯವೇ ಇಲ್ಲ !
ಅವರ ಬಗ್ಗೆ ಓದುವಾಗ ನನ್ನ ಅಜ್ಜಿಯ ನೆನಪಾಯಿತು . ಆಕೆ ಕೂಡ ಬರೀ ೨ ನೇ ತರಗತಿಯವರೆಗೆ ಕಲಿತರೂ ಸಾಹಿತ್ಯದಲ್ಲಿ ಅತ್ಯಂತ ಆಸಕ್ತಿಯುಳ್ಳವರಾಗಿದ್ದರು. ತಾವೇ ಬರೆದ ಸಾಂಪ್ರದಾಯಿಕ ಹಾಡುಗಳ ಎರಡು ಪುಸ್ತಕಗಳನ್ನು ಆಕೆ ಬಿಡುಗಡೆ ಮಾಡಿದ್ದರು. ತಮ್ಮ ೮೧ನೇ ವಯಸ್ಸಿನಲ್ಲಿ ತೀರಿಕೊಳ್ಳುವರೆಗೂ ಏನಾದರೂ ಚಟುವಟಿಕೆಗಳಲ್ಲಿ ಮುಳುಗಿರುತ್ತಿದ್ದ ಅವರ ಜೀವನೋತ್ಸಾಹ ನಮ್ಮನ್ನು ಬೆರಗುಗೊಳಿಸುತ್ತಿತ್ತು.

Sushrutha Dodderi said...

Now I know the source of Sunath Kaka's "literature love gene"! ;)

ಮುತ್ತುಮಣಿ said...

ಸರ್,

ಕವನ-ಲೇಖನ ಬಹಳ ಚೆನ್ನಾಗಿದೆ. ಮನ ತುಂಬಿ ಬಂತು.

shivu.k said...

ಸುನಾಥ್ ಸರ್,

ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಅಂತಾರೆ...

ಅಂತ ತಾಯಿಯ ಮಗನಾಗಿರುವ ನೀವೆ ಧನ್ಯವಂತರು.

RJ said...

ಸರ್,
ನಿಮ್ಮ ತಾಯಿಯವರ ಪದ್ಯ ಸರಳ ಮತ್ತು ಅಷ್ಟೇ ಸುಂದರವಾಗಿದೆ.
ಪದ್ಯದಲ್ಲೇ ಗದ್ಯವನ್ನೂ ಕೂಡ ಎರಕ ಹೊಯ್ದಂತಿದೆ!
ಎಲ್ಲಕ್ಕಿಂತ ಹೆಚ್ಚಾಗಿ ಅವರು ಆ ಕಾಲದಲ್ಲೇ ಕಾಲೇಜು ಮೆಟ್ಟಿಲು ಹತ್ತಿದ್ದರೆಂಬ
ವಿಷಯ ತಿಳಿದು ಖುಷಿ ಮತ್ತು ಹೆಮ್ಮೆ ಎರಡೂ ಉಂಟಾದವು.

ಶಿವಪ್ರಕಾಶ್ said...

ಸರ್,
ನಿಮ್ಮ ತಾಯಿಯವರ ಈ ಕವನ ತುಂಬಾ ಇಷ್ಟವಾಯಿತು..
ಅವರ ಸುಂದರವಾದ ಕವನ ನಮ್ಮ ಜೊತೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು...

sunaath said...

ರವಿಕಾಂತ,
ಅವರು ಪೆನ್ಸಿಲಿನಲ್ಲಿ ಬರೆದಿದ್ದರು. scanning ಮಾಡುವ ಸಲುವಾಗಿ,ನಾನು ಬಾಲ್ ಪೆನ್ನಿನಿಂದ ತೀಡಿದ್ದೇನೆ. ಅವರ ಉಳಿದ ಕವನಗಳು ಹಾಗು ಕತೆಗಳು ಕಾಲನ ದಾಳಿಯಲ್ಲಿ ಮಾಯವಾಗಿವೆ.

sunaath said...

ಚಿತ್ರಾ,
ನಿಮ್ಮ ಅಜ್ಜಿ ಹಾಗು ನನ್ನ ತಾಯಿ ಇವರೆಲ್ಲ ಬಹಳ positive ಆಗಿ ಬದುಕಿದರು ಎಂದು ಅನಿಸುತ್ತದೆ. ಹೀಗಾಗಿಯೇ ಅವರಿಗೆ ಏನೆಲ್ಲವನ್ನೂ ಸಾಧಿಸಲು ಶಕ್ಯವಾಯಿತು.

Narayan Bhat said...

ತಮ್ಮ ಮಾತೋಶ್ರೀಯವರ ಸರಳ, ಸುಂದರ ಮತ್ತು ಅರ್ಥಗರ್ಭಿತ ಕವನವನ್ನು ನಮಗೆ ಪರಿಚಯಿಸಿದ್ದಕ್ಕೆ ಥ್ಯಾಂಕ್ಸ್.

ಆನಂದ said...

ಸುಂದರ ಕವನ ಕಾಕಾ,
ಅದೇನೋ ಗೊತ್ತಿಲ್ಲ, ಹಿಂದಿನ ತಲೆಮಾರಿನವರ ಜೀವನೋತ್ಸಾಹ ನಮಗಿಂತಾನೂ‌ ಜಾಸ್ತಿ ಅಂತ ಅನ್ನಿಸುತ್ತೆ.
ನನ್ನ ಮುತ್ತಜ್ಜಿ ಇವತ್ತಿಗೂ‌ ಅವರ ಬಟ್ಟೆಗಳನ್ನು ಅವರೇ‌ ತೊಳೆದುಕೊಳ್ತಾರೆ. ನಾನು ಧೋಬಿಗೆ ಕೊಡ್ತೀನಿ!

ಮನಸು said...

oh enta sundara kavana manasooregonditu. inta taayi padeyalu neevu puNya maadideeri. taayi endare vishesha taayi allave.

nijakku istavaayitu nimma taayiyavara bagge tiLisiddu bahaLastu kushi needide.

dhanyavadagaLu

sunaath said...

ಸುಶ್ರುತ,
She provided an environment for the love of literature.

sunaath said...

ಮುತ್ತುಮಣಿ,
ನಿಮಗೆ ಧನ್ಯವಾದಗಳು.

sunaath said...

ಶಿವು,
ಸಾಹಿತ್ಯಪ್ರೇಮಿ ಹಾಗು ಕಲಾಪರಿಣತಳಾದ ತಾಯಿಯನ್ನು ಪಡೆದ ನಾವು
ನಿಜವಾಗಿಯೂ ಧನ್ಯರು.

sunaath said...

RJ,
ಎಂತಹ ಆರ್ಥಿಕ ಸಮಸ್ಯೆಗಳ ನಡುವೆಯೂ ಸಹ ಅವಳು ತನ್ನ ಕಾ^ಲೇಜು ಶಿಕ್ಷಣವನ್ನು ಸರಳವಾಗಿ ಪೂರೈಸಿದಳು. ತಾನು ಏಕಪಾಠಿ ಎಂದು ಅವಳು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಳು.

sunaath said...

ಶಿವಪ್ರಕಾಶ,
ಕವನವನ್ನು ಇಷ್ಟಪಟ್ಟಿದ್ದೀರಿ. ಇದು ನನಗೆ ಸಂತಸದ ವಿಷಯ.

sunaath said...

ನಾರಾಯಣ ಭಟ್ಟರೆ,
ಧನ್ಯವಾದಗಳು.

sunaath said...

ಆನಂದ,
ಹಳೆಯ ಪೀಳಿಗೆಯವರ ಜೀವನೋತ್ಸಾಹ, ಅವರ ಆದರ್ಶಗಳು ಹಾಗು ಅವರ positive attitude towards life ಇವೆಲ್ಲ ನಮ್ಮಲ್ಲಿ ಕಡಿಮೆಯಾಗಿವೆ ಎಂದು ನನಗೂ ಅನ್ನಿಸುತ್ತದೆ.

sunaath said...

ಮನಸು,
ಆ ತಾಯಿ ಸಾಹಿತ್ಯವೆನ್ನುವ ಸುಂದರ ತೋಟವನ್ನು ತೋರಿಸಿದಳು. ಅಲ್ಲಿಯ ಫಲಗಳನ್ನು ಅವಳ ಮಕ್ಕಳಾದ ನಾವು ಸವಿಯುತ್ತಿದ್ದೇವೆ.

ಸೀತಾರಾಮ. ಕೆ. / SITARAM.K said...

tamma tayiyavara kavya a0davaagide.
taayiya mamate haagu tyaaaga guruvaagi niduva baala shikshana ellara baala butti.
adakkondu sahasra namana

Raghu said...

ಅರ್ಥಗರ್ಭಿತವಾದ ಸಾಲು...
ನಿಮ್ಮವ,
ರಾಘು.

ಸಿಂಧು sindhu said...

ಪ್ರಿಯ ಸುನಾಥ,

ಕವಿತೆ ಚಂದವಾಗಿದ್ದು ಅರ್ಥಪೂರ್ಣವಾಗಿದೆ.
ನಿಮ್ಮ ಅಮ್ಮನ ಕವಿತೆ ಎಂದು ತಿಳಿದಾಗ ಮತ್ತೆ ಓದಿ ಮುದವೆನಿಸಿತು.

ಇಂತಹ ಅಮ್ಮನ ಮಡಿಲು ದೊರಕಿದ ನೀವೇ ಭಾಗ್ಯವಂತರು.
ಅವರ ಸಾಹಿತ್ಯಾಸಕ್ತಿ ನಿಮ್ಮಲ್ಲಿ ಜೀವಿಸುತ್ತಿರುವುದನ್ನು ನಿಮ್ಮ ಬರಹಗಳೇ ಸಾರುತ್ತವೆ.

ಇಂತಹ ಅಪರೂಪದ ಮಣಿಯನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

ಪ್ರೀತಿಯಿಂದ
ಸಿಂಧು

sunaath said...

ಸೀತಾರಾಮರೆ,
ತನ್ನ ಮಗುವಿನ ಮೇಲೆ ಅವನ ಅಮ್ಮ ಬೀರುವಂತಹ ಪ್ರಭಾವವನ್ನು
ಬೇರೆ ಯಾರೂ ಮಾಡಲಾರರು. ಅವಳು ಕೊಟ್ಟಿದ್ದೇ ಬಾಳಬುತ್ತಿ ಎಂದು ನೀವು ಹೇಳಿದ್ದು ಸರಿಯಾದ ಮಾತು.

sunaath said...

ರಾಘು,
ತುಂಬಾ ಧನ್ಯವಾದಗಳು.

sunaath said...

ಸಿಂಧು,
ನನ್ನ ತಾಯಿಯ ಕವನವನ್ನು ‘ಮಣಿ’ ಎಂದು ಕರೆದಿರುವಿರಿ. ನಿಜವಾಗಿಯೂ ಅವರ ಕಾವ್ಯಮಣಿಯೇ ಇದು. ಅವರ ಸಾಹಿತ್ಯಪ್ರೇಮದಿಂದಾಗಿಯೇ, ನಮ್ಮಲ್ಲೂ ಸಾಹಿತ್ಯಾಭಿರುಚಿ ಇಳಿದು ಬಂದಿತು.
ಧನ್ಯವಾದಗಳು.

ಜಲನಯನ said...

ಸುನಾಥ್ ಸರ್, ಮಾತೃಶ್ರೀಯ ಕವನದ ಜಾಡು ನಿಮಗೆ ಸಿಕ್ಕಿದ್ದು ಎಂತಹ ಸುಕೃತ ನಿಮ್ಮದು...ಜನನಿ ತಾನೆ ಮೊದಲ ಗುರುವು...? ಎಷ್ಟು ನಿಜ ಅಲ್ಲವಾ?

ಶಾಂತಲಾ ಭಂಡಿ (ಸನ್ನಿಧಿ) said...

ಅಂಕಲ್...
ಸೂಕ್ಷ್ಮಮನಸ್ಸಿನ ಚಂದದ ಆಸೆಗಳನ್ನೆಲ್ಲ ಒಟ್ಟಾಗಿಸಿ ಸುಂದರ ಗೀತೆಯೊಂದನ್ನು ಕಟ್ಟಿಕೊಟ್ಟ ತಾಯಿಗೆ ನನ್ನ ನಮನಗಳು.
ಅದನ್ನಿಲ್ಲಿ ಓದುವ ಅವಕಾಶ ದೊರಕಿಸಿದ ನಿಮಗೆ ಧನ್ಯವಾದ.

sunaath said...

ಜಲನಯನರೆ,
ಅವಳು ಬರೆದ ಕವನಗಳಲ್ಲಿ ಒಂಾದರೂ ಸಿಕ್ಕಿದ್ದು ನನ್ನ ಪುಣ್ಯ.
ಅವಳ ಋಣವನ್ನು ಈ ರೀತಿಯಲ್ಲಾದರೂ ತೀರಿಸಲು, ಸ್ವಲ್ಪ ಮಟ್ಟಿಗಾದರೂ ಸಾಧ್ಯವಾಯಿತು.

sunaath said...

ಶಾಂತಲಾ,
ಬಹುಶ: ಎಲ್ಲ ತಾಯಂದಿರೂ ಹೀಗೆಯೆ ಅಂತ ಕಾಣುತ್ತದೆ. ತಮ್ಮ ಮಟ್ಟಿಗೆ ಸಣ್ಣ ಆಸೆಗಳನ್ನು ಮಾತ್ರ ಇಟ್ಟುಕೊಂಡು, ದೊಡ್ಡ ಆಸೆಗಳನ್ನು ತಮ್ಮ ಮಕ್ಕಳಿಗಾಗಿ ಇಟ್ಟುಕೊಳ್ಳುತ್ತಾರೆ!

Unknown said...

ಉತ್ತಮ ಕವನ ಹಾಗೂ ವಿಶ್ಲೇಷಣೆ ಕೂಡ. ಅಜ್ಜಿ ಎಂದಾಕ್ಷಣ ನನ್ನ ಒಂದೆರಡು ಮಾತುಗಳು. ನ್ನನ್ನಜ್ಜಿ, ವಯಸ್ಸು ೯೬ ದಾಟಿದೆ. ಈಗಲೂ ತನ್ನ ಕೆಲಸ ತಾನು ಮಾಡಿಕೊಳ್ಳುವಷ್ಟು ಗಟ್ಟಿ. ಪ್ರಕೃತಿಯ ಮದಿಲಿನಲ್ಲಿದ್ದು ಅದರೊಳಗೆ ಬೆರೆತಿರುವುದೇ ಒಂದು ಕಾರಣವಾಗಿರಬಹುದು.ಹಳ್ಳಿಯಲ್ಲಿರುವವರಿಗೆ "Practical thinking" ಅಥವಾ "broadmindedness" ಕಡಿಮೆ ಎನ್ನುವ ವಿಚಾರಕ್ಕೆ ನನ್ನಜ್ಜಿ ಒಂದು ಸವಾಲು. ಅವರ ಅನುಭವದ ಮಾತುಗಳು ಎಷ್ಟೊಂದು ನೇರ ಹಾಗೂಅರ್ಥಗರ್ಭಿತ.

Srik said...

ಸುನಾಥ್, ಬಹಳ ಬಹಳ ಸೊಗಸಾದ ಪದ್ಯವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಮೈ ಜುಮ್ ಎನ್ನಿಸುವ ಪದ್ಯವನ್ನು ಓದಿ ಬಹಳ ಖುಷಿಯಾಯಿತು. ಸೊಗಸಾದ ಪದ್ಯಕ್ಕೆ ಇನ್ನು ಸೊಗಸಾದ ವಿಶ್ಲೇಷಣೆಯನ್ನು ಕೊಟ್ಟಿರುವ ನಿಮಗೆ ನನ್ನ ನಮನ. ನಿಮ್ಮ ತಾಯಿಯ ಬರಹ ಆದ್ಭುತ.

sunaath said...

ಕೃಷ್ಣ,
ನಗರಜೀವನದ ಸೌಲಭ್ಯಗಳು ಎಷ್ಟೇ ಇದ್ದರೂ, ಹಳ್ಳಿಯ ಸರಳ ಜೀವನದ ಚೆಲುವು, ನಗರಜೀವನಕ್ಕೆ ಬರಲಾರದು ಎನಿಸುತ್ತದೆ. ನಿಮ್ಮ ಅಜ್ಜಿ ಆ ಸರಳತೆಯಲ್ಲಿ ಬೆಳೆದಿದ್ದರಿಂದಲೇ broadminded ಆಗಿರಬಹುದು.

sunaath said...

ಶ್ರೀಕಾಂತ,
ನನ್ನ ತಾಯಿ ಬರೆದ ಕವನಮಣಿಗಳಲ್ಲಿ ಒಂದು ದೊರೆತದ್ದು ನನ್ನ ಪುಣ್ಯವೆಂದು ಭಾಸವಾಗುತ್ತದೆ.

ತೇಜಸ್ವಿನಿ ಹೆಗಡೆ said...

ಕಾಕಾ,

ಈಗರ್ಥವಾಯಿತು ನಿಮ್ಮಲ್ಲಿರುವ ಈ ಅಗಾಧ ಪಾಂಡಿತ್ಯಕ್ಕೆ ಕಾರಣೀಕರ್ತರು ಯಾರೆಂದು :) ಕವನವಂತೂ ತುಂಬಾ ಚೆನ್ನಾಗಿದೆ. ಬಹು ಸುಂದರವಾಗಿದೆ. ಸುಮ್ಮನೇ ಹೇಳಿಲ್ಲ "ತಾಯಿಯೇ ಮೊದಲ ಗುರು" ಎಂದು.

sunaath said...

ತೇಜಸ್ವಿನಿ,
ನನ್ನಲ್ಲಿ ಅಗಾಧ ಪಾಂಡಿತ್ಯವೇನೂ ಇಲ್ಲ. ನನ್ನ ತಾಯಿಯ ಜಾಣ್ಮೆ ನನ್ನಲ್ಲಿ ಬಂದಿಲ್ಲ. ಆದರೆ ಅವಳಿಂದ ಓದುವ ಹುಚ್ಚು ಮಾತ್ರ ಬಂದಿದೆ!

ಶ್ರೀನಿವಾಸ ಕಟ್ಟಿ said...

ಸುನಾಥರಿಗೆ ವಂದನೆಗಳು.
ಬಃಅಳ ದಿನಗಳ ಮೇಲೆ ಸಲ್ಲಾಪಕ್ಕೆ ಬರುತ್ತಿದ್ದೇನೆ. ಈ ಕವಿತೆಯನ್ನು ಅವರು ನನಗೆ ಧಾರವಾಡದಲ್ಲಿ ಓದಿ ತೋರಿಸಿದ್ದರು ಎಂದು ನೆನಪು. ಇದನ್ನು ಓದುವಾಗ ನಾವು, ಅಂದರೆ ನಾನು, ನನ್ನ ಅರ್ಧಾಂಗಿ ಸೌ. ಗೀತಾ ಅತ್ಯಂತ ಭಾವ ಪರವಶವಾಗಿದ್ದೂ ನನಗೆ ನೆನಪಿದೆ.

aalapini said...

uncle, eshto sala ankoLtidde... nimma barevnige, samskaara... aah. intha ammana maganaagiddakke idhella saadhyvaagiddu. che naa nimmanege bandhaga ajji hogi 2 varsha aagittu ansatte...