ಗೋಪಾಲಕೃಷ್ಣ ಅಡಿಗರು ಕನ್ನಡದಲ್ಲಿ ನವ್ಯಕಾವ್ಯದ ಜನಕರೆಂದೇ ಖ್ಯಾತರಾದವರು. ಗೌರೀಶ ಕಾÊಕಿಣಿಯವರು ಕನ್ನಡದ ಶ್ರೇಷ್ಠ ಸಾಹಿತ್ಯಚಿಂತಕರು. ಅಡಿಗರು ಒಮ್ಮೆ ಕಾÊಕಿಣಿಯವರನ್ನು ಗೋಕರ್ಣದಲ್ಲಿ ಭೆಟ್ಟಿಯಾದ ಸಂದರ್ಭದಲ್ಲಿ ಸಾಹಿತ್ಯ ಸಂವಾದ ನಡೆಯಿತು. ಆ ಸಂದರ್ಭದಲ್ಲಿ ಅಡಿಗರು ಕಾವ್ಯರಚನೆಯ ಪ್ರಯತ್ನ ಹಾಗು ಕಾವ್ಯಸಾಫಲ್ಯದ ಬಗೆಗೆ ಹೀಗೆ ಹೇಳಿದ್ದರು:
“ಕವಿಯ ಕಾವ್ಯರಚನಾಸಂಕಲ್ಪ ಹಾಗು ಆತನ ಕಾವ್ಯಸಿದ್ಧಿ ಇವುಗಳ ನಡುವೆ ಅಂತರವಿದ್ದೇ ಇರುತ್ತದೆ. ಕನ್ನಡದಲ್ಲಿ ಈ ಸಂಕಲ್ಪ ಹಾಗು ಸಿದ್ಧಿಗಳ ನಡುವೆ ಏನೂ ಅಂತರವಿಲ್ಲದ ಒಬ್ಬರೇ ಕವಿಯೆಂದರೆ ಬೇಂದ್ರೆ.”
ಬೇಂದ್ರೆಯವರ ‘ನಾದಲೀಲೆ’ ಕವನವನ್ನು ಅಭ್ಯಾಸ ಮಾಡಿದಾಗ, ಅಡಿಗರ ಮಾತಿನ ಸತ್ಯ ಗೋಚರಿಸುತ್ತದೆ.
‘ನಾದಲೀಲೆ’ ಕವನದ ತಿರುಳು ಹೀಗಿದೆ:
ಹುಟ್ಟು ಮತ್ತು ಸಾವು ಇವು ಸಾರ್ವತ್ರಿಕ ಸತ್ಯಗಳು. ಈ ಬದುಕೆಂದರೆ ಹುಟ್ಟು ಮತ್ತು ಸಾವಿನ ನಡುವಿನ ಆಟವಾಗಿದೆ. ಸಾವಿನ ಕತ್ತಿ ತಲೆಯ ಮೇಲೆಯೇ ತೂಗುತ್ತಿದ್ದರೂ ಸಹ ಅದರ ಅರಿವು ಮಾತ್ರ ಯಾವ ಜೀವಿಗೂ ಇರುವದಿಲ್ಲ. ಈ ಅಜ್ಞಾನಸುಖದಿಂದಲೇ ಪ್ರತಿ ಜೀವಿಯೂ ಜೀವನ್ಮುಖಿಯಾಗಿ ಬದುಕಿನ ಆಹ್ಲಾದವನ್ನು ಅನುಭವಿಸುತ್ತದೆ. ಆದರೆ ಈ ಜೀವಿಗೆ ತಿಳಿಯದಂತೆಯೇ ಮೃತ್ಯು ಅದನ್ನು ಹಿಂಬಾಲಿಸುತ್ತಿರುತ್ತದೆ. ಇದು ವಿಶ್ವಸತ್ಯ. ಹಾಗಿದ್ದರೆ ಈ ಬದುಕೊಂದು ನಿರರ್ಥಕ ಪ್ರಯಾಣವೆ? ಅಲ್ಲವೆನ್ನುತ್ತಾರೆ ಬೇಂದ್ರೆಯವರು. ಈ ಬದುಕು ದೇವನಾಡುತ್ತಿರುವ ಲೀಲೆ. ಆತ ನಮ್ಮ ಕಣ್ಣಿಗೆ ಕಾಣಲಾರ. ದೇವನು ಕಾಣದಿದ್ದರೂ ಸಹ ಆತನ ಸೃಷ್ಟಿಯ ಮಹತ್ತು ನಮ್ಮ ಕಣ್ಣೆದುರಿಗಿದೆ. ಅದನ್ನು ಅರಿತು ನಾವು ಬದುಕಿನ ಕೋಲಾಟದಲ್ಲಿ ಶ್ರದ್ಧೆಯಿಟ್ಟು ಭಾಗವಹಿಸಬೇಕು.
ಕವನದ ವಿಧಾನ ಹೀಗಿದೆ:
ಕವನವು ಪ್ರಾರಂಭವಾಗುವದು ಕೋಲಾಟದ ಹಾಡಿನ ಪಲ್ಲದೊಂದಿಗೆ. ವರ್ಷಾಕಾಲವು ಮುಗಿದು, ಆಹ್ಲಾದಕರ ವಾತಾವರಣವು ಎಲ್ಲೆಲ್ಲೂ ಹಬ್ಬಿರುವಾಗ, ಹೆಂಗಳೆಯರು ಕೋಲಾಟದ ಹಬ್ಬವನ್ನು ಉತ್ಸಾಹದಿಂದ ಜರುಗಿಸುತ್ತಾರೆ. ಮುಖ್ಯ ಹಾಡನ್ನು ಒಬ್ಬರು ಅಥವಾ ಇಬ್ಬರು ಹಾಡಿದರೆ, ಉಳಿದ ಗೆಳತಿಯರು ಗುಂಪಾಗಿ, “ಕೋಲೆ ಸಖೀ, ಚಂದ್ರಮುಖೀ…..” ಎಂದು ಪಲ್ಲವನ್ನು ಹಾಡುತ್ತಿರುತ್ತಾರೆ.
ಆದರೆ ಈ ಗೀತೆಯಲ್ಲಿ, ಹಾಡು ಹೇಳುತ್ತಿರುವ ವ್ಯಕ್ತಿ ಓರ್ವ ಗಂಡಸು. ಆತ ನಿಸರ್ಗದಲ್ಲಿಯ ಅರುಣೋದಯದ ಸಮಯದ ಮೂರು ದೃಶ್ಯಗಳನ್ನು ಮೂರು ನುಡಿಗಳಲ್ಲಿ ಬಣ್ಣಿಸಿ ತನ್ನ ನಲ್ಲೆಗೆ ಹೇಳುತ್ತಿದ್ದಾನೆ. ನಾಲ್ಕನೆಯ ನುಡಿಯಲ್ಲಿ ಆತನ ಕಾಣ್ಕೆ ಇದೆ.
ಅರುಣೋದಯವು ಬದುಕಿನ ಪ್ರಾರಂಭದ ಸಂಕೇತವಾಗಿದೆ. ಕವಿಯು ಅರುಣೋದಯದಲ್ಲಿ ನಿಸರ್ಗದಲ್ಲಿಯ ಜೀವಿಗಳ ಜೀವನೋತ್ಸಾಹವನ್ನು ಬಣ್ಣಿಸುತ್ತಲೇ, ಆ ಜೀವಿಗಳ ಕಣ್ಣಿಗೆ ಬೀಳದಂತಹ ಮೃತ್ಯುವಿನ ಕಡೆಗೆ ತನ್ನ ನಲ್ಲೆಯ ಗಮನ ಸೆಳೆಯುತ್ತಾನೆ. ಮೊದಲನೆಯ ನುಡಿಯಲ್ಲಿ ಕಾಡಿನ ಮುಗ್ಧ ಪ್ರಾಣಿಗಳಾದ ಚಿಗರಿಗಳ ಆಟವನ್ನು ವರ್ಣಿಸಲಾಗಿದೆ. ಎರಡನೆಯ ನುಡಿಯಲ್ಲಿ ನಾಡಿನ ಪ್ರಾಣಿಗಳಾದ ಗೋಸಮೂಹದ ಉಲ್ಲಾಸದ ವರ್ಣನೆ ಇದೆ. ಮೂರನೆಯ ನುಡಿಯಲ್ಲಿ ಮಾನವಜೀವಿಯ ಪ್ರಣಯದಾಟವಿದೆ. ಈ ಮೂರೂ ನುಡಿಗಳಲ್ಲಿ ಬದುಕಿನ ಕೋಲಾಟವನ್ನು ಕೆಡೆಯಬಲ್ಲ ಮೃತ್ಯುವಿನ ಸೂಚನೆ ಇದೆ. ಈ ಜೀವಿಗಳನ್ನು ಕಾಯುವ ಗೋಪಾಲಕ ಎಲ್ಲಿಹನೋ ಎಂದು ಕವಿಯು ಆತಂಕಗೊಳ್ಳುತ್ತಾನೆ. ಮರುಕ್ಷಣದಲ್ಲಿಯೇ ಆ ಗೋಪಾಲನ ವಿಶ್ವಾತ್ಮರೂಪವನ್ನು ಅರಿತುಕೊಳ್ಳುತ್ತಾನೆ; ನಾಲ್ಕನೆಯ ನುಡಿಯಲ್ಲಿ ಎಲ್ಲ ಜೀವಿಗಳ ರಕ್ಷಕನಾದ ಭಗವಂತನ ಕೋಲಾಟವಿದು ಎನ್ನುವ ದರ್ಶನವಿದೆ. ಕವಿಗೆ ದೇವನಲ್ಲಿಯ ಶ್ರದ್ಧೆ ದೃಢವಾಗುತ್ತದೆ.
‘ನಾದಲೀಲೆ’ ಕವನದ ಪೂರ್ತಿಪಾಠ ಹೀಗಿದೆ:
ಕೋಲು ಸಖೀ, ಚಂದ್ರಮುಖೀ, ಕೋಲೆ ನಾದಲೀಲೆ ||ಪಲ್ಲ||
ಮುಂಜಾವದ ಎಲರ ಮೂಸಿ ನೋಡುತಿಹವು ನಲ್ಲೆ
ತರಳ ಎರಳೆ, ಚಿಗುರ ಚಿಗುರೆ, ಹೂವು ಹೂವು ಹುಲ್ಲೆ,
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಅತ್ತಣಿಂದ ಬೇಟೆಗಾರ ಬರುವ ನಾನು ಬಲ್ಲೆ.
ಮುಂಜಾವದ ಎಲರ ಮೂಸಿ ನೋಡುತಿಹವು ನಲ್ಲೆ
ಕೋಲು ಸಖೀ. . . .
ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ
ಕರೆವ ಕರುವು, ಕುಣಿವ ಮಣಕ, ತೊರೆವ ಗೋಗಭೀರೆ,
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಕಾಣೆ ಕೊಳಲಿನವನ ಎನುವೆ, ಎಲ್ಲು ಇಹನು ಬಾರೆ.
ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ
ಕೋಲು ಸಖೀ. . . .
ಬೆಳ್ಳಿಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ; ಬಾಲೆ
ಮುಕುಲ, ಅಲರು, ಮಲರು, ಪಸರ ಕಂಡು ಕಣ್ಣು ಸೋಲೆ
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಕಾದಲನೆಡೆ ಬೇಡ ಬಹಳು ಕಾದಲೆ ಹೂಮಾಲೆ.
ಬೆಳ್ಳಿಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ ಬಾಲೆ
ಕೋಲು ಸಖೀ. . . .
ಬೇಟೆಯಲ್ಲ; ಆಟವೆಲ್ಲ; ಬೇಟದ ಬಗೆ, ನಾರಿ.
ಮುಗಿಲ ಬಾಯ ಗಾಳಿಕೊಳಲ ಬೆಳಕಹಾಡ ಬೀರಿ
(ಕಂಗೊಳಿಸುವ ಕೆಂಪು ಇರಲಿ, ಕಂಗೆಡಿಸುವ ಮಂಜು ಬರಲಿ)
ಕಳೆಯಲಿಲ್ಲೆ ಕತ್ತಲಂಥ ಕತ್ತಲವೇ ಜಾರಿ?
ಬೇಟೆಯಲ್ಲ; ಆಟವೆಲ್ಲ, ಬೇಟದ ಬಗೆ, ನಾರಿ.
ಕೋಲು ಸಖೀ. . . .
ಈಗ ಕವನದ ಮೊದಲ ನುಡಿಯನ್ನು ಗಮನಿಸೋಣ:
ಕೋಲು ಸಖೀ, ಚಂದ್ರಮುಖೀ, ಕೋಲೆ ನಾದಲೀಲೆ ||ಪಲ್ಲ||
ಮುಂಜಾವದ ಎಲರ ಮೂಸಿ ನೋಡುತಿಹವು ನಲ್ಲೆ
ತರಳ ಎರಳೆ, ಚಿಗುರ ಚಿಗುರೆ, ಹೂವು ಹೂವು ಹುಲ್ಲೆ,
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಅತ್ತಣಿಂದ ಬೇಟೆಗಾರ ಬರುವ ನಾನು ಬಲ್ಲೆ.
ಮುಂಜಾವದ ಎಲರ ಮೂಸಿ ನೋಡುತಿಹವು ನಲ್ಲೆ
ಕೋಲು ಸಖೀ. . . .
ಮುಂಜಾವಿನ ಹೊತ್ತಿನಲ್ಲಿ ಆಹ್ಲಾದಕರವಾದ ತಣ್ಣನೆಯ ಗಾಳಿಯು ಬೀಸುತ್ತಿರುತ್ತದೆ. ಕಾಡಿನ ಮುಗ್ಧ ಪ್ರಾಣಿಗಳಾದ ಚಿಗರೆಗಳು ಈ ಎಲರನ್ನು ಅಂದರೆ ಗಾಳಿಯನ್ನು ಮೂಸಿ ನೋಡುತ್ತ ಬದುಕಿನ ಆನಂದವನ್ನು ಸವಿಯುತ್ತಿವೆ. ಕವಿಯು ಸಾತ್ವಿಕ ಹಾಗು ಸುಂದರ ಪ್ರಾಣಿಗಳಾದ ಚಿಗರೆಗಳನ್ನಷ್ಟೇ ವರ್ಣಿಸುತ್ತಿರುವದನ್ನು ಗಮನಿಸಬೇಕು. ಈ ಚಿಗರೆಗಳಾದರೂ ಎಂತಹವು? ತರಳ ಎರಳೆ ಅಂದರೆ ಪುಟ್ಟ ಚಿಗರೆ ಮರಿ, ಚಿಗುರ ಚಿಗರೆ ಅಂದರೆ ಪ್ರಾಯವು ಚಿಗುರುತ್ತಿರುವ (=adolescent) ಚಿಗುರೆ ಹಾಗು ಹೂವು ಹೂವು ಹುಲ್ಲೆ ಅಂದರೆ ಗರ್ಭಧಾರಣೆಯ ಯೋಗ್ಯ ವಯಸ್ಸನ್ನು ತಲುಪಿದ ಚಿಗುರೆ. ಪ್ರಕೃತಿಯು ಸೃಷ್ಟಿಸುವದನ್ನು ಬಯಸುತ್ತದೆ, ಬೆಳೆಯುವದನ್ನು ಬಯಸುತ್ತದೆ ಎನ್ನುವ ಪ್ರಕೃತಿಯ ಹಂಬಲವನ್ನು ಈ ಎಳೆವಯಸ್ಸಿನ ಸಂಕೇತಗಳು ಹೇಳುತ್ತವೆ. ಈ ಸಾತ್ವಿಕ ಪ್ರಾಣಿಗಳ ಕಣ್ಣುಗಳ ಮುಂದೆ ಇರುವದು ಕಂಗೊಳಿಸುವ ಕೆಂಪು ಅಂದರೆ ಅರುಣೋದಯ, ಸೂರ್ಯೋದಯಕ್ಕಿಂತ ಮೊದಲು ಬಾನು ಕೆಂಪಾಗಿ ಕಾಣುವ ದೃಶ್ಯ. ಇದು ಬದುಕಿನಲ್ಲಿ ಉತ್ಸಾಹ ತುಂಬುವ ನೋಟ. ಆದರೆ ಈ ಮುಗ್ಧ ಪ್ರಾಣಿಗಳಿಗೆ ತಮ್ಮ ಹಿಂದೆ ಕಂಗೆಡಿಸುವ ಅಂದರೆ ಧೈರ್ಯಗುಂದಿಸುವಂತಹ ಮಂಜು ಇದೆ ಎನ್ನುವದು ಕಾಣುತ್ತಿಲ್ಲ. ಆ ಮಂಜಿನ ಪರದೆಯ ಹಿಂದೆ ಅಡಗಿರುವವನು ಬೇಟೆಗಾರ ಅಂದರೆ ಮೃತ್ಯು. ಇದರ ಅರಿವಿಲ್ಲದ ಈ ಮುಗ್ಧ ಪ್ರಾಣಿಗಳು ಜೀವಸ್ನೇಹಿಯಾದ ಮುಂಜಾವಿನ ಗಾಳಿಯನ್ನು ಸೇವಿಸುತ್ತ ಆನಂದದಿಂದಿವೆ.
(ಮೃತ್ಯುವು ಕ್ರೂರ ಪ್ರಾಣಿಗಳ ರೂಪದಲ್ಲಿಯೂ ಇರಬಹುದು ಎನ್ನುವ ಕಾರಣಕ್ಕಾಗಿ, ಕವಿಯು ಕೇವಲ ಸಾತ್ವಿಕ ಪ್ರಾಣಿಗಳ ಆಟವನ್ನು, ಆನಂದವನ್ನು ಬಣ್ಣಿಸಿದ್ದಾನೆ.)
ಈಗ ಎರಡನೆಯ ನುಡಿಯನ್ನು ನೋಡೋಣ:
ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ
ಕರೆವ ಕರುವು, ಕುಣಿವ ಮಣಕ, ತೊರೆವ ಗೋಗಭೀರೆ,
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಕಾಣೆ ಕೊಳಲಿನವನ ಎನುವೆ, ಎಲ್ಲು ಇಹನು ಬಾರೆ.
ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ
ಕೋಲು ಸಖೀ. . . .
ಎರಡನೆಯ ನುಡಿಯಲ್ಲಿಯೂ ಸಹ ಎಳೆಯ, ಮುಗ್ಧ, ಸಾತ್ವಿಕ ಪ್ರಾಣಿಗಳ ಸಂಕೇತಗಳಿವೆ. ಆದರೆ ಈ ಪ್ರಾಣಿಗಳು ಕಾಡಾಡಿ ಪ್ರಾಣಿಗಳಲ್ಲ. ಮನುಷ್ಯನ ನಾಗರಿಕತೆಯ ಮೊದಲ ಮೆಟ್ಟಲಿನಲ್ಲಿ ಅವನ ಜೊತೆಗೆ ನಾಡಿನಲ್ಲಿ ನೆಲೆಸಿದ ಗೋ-ಸಮೂಹ. ಕರೆವ ಕರು ಅಂದರೆ female calf. ಕುಣಿವ ಮಣಕ ಅಂದರೆ male calf. ಇವು ಸಂತಾನವನ್ನು ಬೆಳೆಯಿಸುವ ಉತ್ಸಾಹದಲ್ಲಿರುವ ಎಳೆ ಜೀವಿಗಳು. ‘ಗೋಗಭೀರೆ’ ಅಂದರೆ ಈಗಾಗಲೇ ಸಂತಾನವನ್ನು ಪಡೆದಿರುವ ಗೋವು. ಇವಳನ್ನು ‘ ತೊರೆವ ’ ಅಂದರೆ ಸಮೃದ್ಧಿಯಾಗಿ ಹಾಲು ನೀಡುತ್ತಿರುವ, ಪ್ರೌಢ ವಯಸ್ಸಿನ ಗೋವು ಎಂದು ಕವಿ ಬಣ್ಣಿಸುತ್ತಾನೆ. ಮುಂಜಾವಿನಲ್ಲಿ ಎಲ್ಲೆಲ್ಲೂ ಬೀಸುತ್ತಿರುವ ಪ್ರಾಣವಾಯುವನ್ನು (=oxygen) ಈ ಗೋ-ಸಮೂಹವೂ ಸಹ ಹೀರುತ್ತಿದೆ. ಇವುಗಳಿಗೂ ಸಹ ಅರುಣೋದಯದ ಕೆಂಪು ಕಾಣುತ್ತಿದೆಯೇ ಹೊರತು, ತಮ್ಮ ಹಿಂದೆ ಇರುವ ಮಂಜು ಕಾಣುತ್ತಿಲ್ಲ. ಈ ಗೋವುಗಳನ್ನು ಸಂರಕ್ಷಿಸಬೇಕಾದ, ಕೊಳಲು ಹಿಡಿದ ಗೋಪಾಲಕನು ಕವಿಗೆ ಕಾಣುತ್ತಿಲ್ಲ. ಆದರೆ ಆತನು ಎಲ್ಲೆಲ್ಲೂ ಇರುವನು ಹಾಗು ಈ ಗೋಸಮೂಹವನ್ನು ರಕ್ಷಿಸುವನು ಎನ್ನುವ ಭರವಸೆ ಕವಿಗಿದೆ. ಆದುದರಿಂದಲೇ ಗೋಪಾಲಕನು ‘ಎಲ್ಲು ಇಹನು’ ಎಂದು ಕವಿ ಹೇಳುತ್ತಾನೆ. ಕವಿಯು ಅಪ್ರತ್ಯಕ್ಷವಾಗಿ ವಿಶ್ವರಕ್ಷಕನಾದ ಭಗವಂತನ ಬಗೆಗೆ ಪ್ರಸ್ತಾವಿಸುತ್ತಾನೆ.
(‘ಗೋ’ ಪದಕ್ಕೆ ‘ಜೀವಿ’ ಎನ್ನುವ ಅರ್ಥವೂ ಇದೆ. ಆದುದರಿಂದ ಗೋಪಾಲನೆಂದರೆ ಎಲ್ಲ ಜೀವಿಗಳನ್ನು ಪಾಲಿಸುವ ಭಗವಂತನೇ ಆಗುತ್ತಾನೆ.)
ಮೂರನೆಯ ನುಡಿ ಹೀಗಿದೆ:
ಬೆಳ್ಳಿಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ; ಬಾಲೆ
ಮುಕುಲ, ಅಲರು, ಮಲರು, ಪಸರ ಕಂಡು ಕಣ್ಣು ಸೋಲೆ
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಕಾದಲನೆಡೆ ಬೇಡ ಬಹಳು ಕಾದಲೆ ಹೂಮಾಲೆ.
ಬೆಳ್ಳಿಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ ಬಾಲೆ
ಕೋಲು ಸಖೀ. . . .
ಮೊದಲ ನುಡಿಯಲ್ಲಿ ಕವಿಯು ಕಾಡಿನಲ್ಲಿಯ ಸಾತ್ವಿಕ ಪ್ರಾಣಿಗಳನ್ನು ಬಣ್ಣಿಸಿದ್ದರೆ, ಎರಡನೆಯ ನುಡಿಯಲ್ಲಿ ನಾಡಿನಲ್ಲಿ ನೆಲೆ ನಿಂತ ಮಾನವ-ಸ್ನೇಹಿ ಮುಗ್ಧ ಜೀವಿಗಳನ್ನು ಬಣ್ಣಿಸಿದ್ದಾನೆ. ಇದೀಗ ಮೂರನೆಯ ನುಡಿಯಲ್ಲಿ ಸಂಸ್ಕೃತಿಯ ಮುಂದಿನ ಮೆಟ್ಟಲಾದ ಮಾನವರ ವಿಚಾರವಿದೆ. ಮಾನವರು ಪ್ರಾಣಿಗಳಿಗಿಂತ ಹೆಚ್ಚಿನ ಪ್ರಜ್ಞೆಯುಳ್ಳವರು. ಉತ್ಕ್ರಾಂತಿಯ ಕಾಲಮಾನದಲ್ಲಿ ಹೇಳುವದಾದರೆ, ಪ್ರಾಣಿಗಳು ಅರುಣೋದಯ ಕಾಲದವರಾದರೆ, ಮನುಷ್ಯ ಜೀವಿಗಳು ಬೆಳ್ಳಿಚುಕ್ಕೆ ಮುಳುಗಿದ ಕಾಲದವರು; ಅಂದರೆ ಅರುಣೋದಯದ ನಂತರದ ಸೂರ್ಯೋದಯದ ಕಾಲದವರು. ಅದನ್ನು ತೋರಿಸಲೆಂದು ಕವಿ ಬೆಳ್ಳಿಚುಕ್ಕೆಯು(=ಶುಕ್ರ ಗ್ರಹವು) ಈಗ ಚಿಕ್ಕೆಯಾಗಿ ಮುಳುಗಿದೆ ಎಂದು ಹೇಳುತ್ತಾನೆ. ಆದರೇನು, ಮಾನವರೂ ಸಹ ಪ್ರಕೃತಿಯ ಕೂಸುಗಳೇ. ಬದುಕಿನ ಮುಂದುವರಿಕೆಯು ಪ್ರಕೃತಿಯ ಅಪೇಕ್ಷೆಯಾಗಿದೆ. ಆದುದರಿಂದಲೇ ಇಲ್ಲಿ ಕಾದಲೆಯು ಅಂದರೆ ಪ್ರಿಯತಮೆಯು ತನ್ನ ಕಾದಲನಿಗೆ ಬೇಡಲು ಬರುತ್ತಿದ್ದಾಳೆ. ಅವಳು ಬೇಡುತ್ತಿರುವದು ಪ್ರಣಯವನ್ನು. ಪ್ರಣಯದ ಸಂಕೇತವಾದ ಹೂಮಾಲೆಯೇ ಅವಳಾಗಿದ್ದಾಳೆ. ಆದರೆ ಈ ಮಾನವರಿಗೂ ಸಹ ಕಣ್ಣು ಮುಂದಿನ ಕೆಂಪು ಕಾಣುತ್ತದೆಯೇ ಹೊರತು, ಅದರ ಹಿಂದಿನ ಮಂಜು ಕಾಣುತ್ತಿಲ್ಲ.
(ಇಲ್ಲಿ ಕೆಂಪು ಬಣ್ಣವು ಜೀವನದ ಸಂಕೇತವಾಗಿ, ಉತ್ಸಾಹದ ಸಂಕೇತವಾಗಿ ಬಂದಿದೆ, ಹಾಗು ಮಂಜು ನಮ್ಮ ಅರಿವಿಗೆ ಕಾಣದ ಮೃತ್ಯುವಿನ ಸಂಕೇತವಾಗಿದೆ.)
ಕೊನೆಯ ನುಡಿ ಹೀಗಿದೆ:
ಬೇಟೆಯಲ್ಲ; ಆಟವೆಲ್ಲ; ಬೇಟದ ಬಗೆ, ನಾರಿ.
ಮುಗಿಲ ಬಾಯ ಗಾಳಿಕೊಳಲ ಬೆಳಕಹಾಡ ಬೀರಿ
(ಕಂಗೊಳಿಸುವ ಕೆಂಪು ಇರಲಿ, ಕಂಗೆಡಿಸುವ ಮಂಜು ಬರಲಿ)
ಕಳೆಯಲಿಲ್ಲೆ ಕತ್ತಲಂಥ ಕತ್ತಲವೇ ಜಾರಿ?
ಬೇಟೆಯಲ್ಲ; ಆಟವೆಲ್ಲ; ಬೇಟದ ಬಗೆ, ನಾರಿ.
ಕೋಲು ಸಖೀ. . . .
ಮೊದಲ ಮೂರು ನುಡಿಗಳಲ್ಲಿ ಹುಟ್ಟು ಸಾವುಗಳ ನಡುವಿನ ಬದುಕಿನ ವರ್ಣನೆ ಇದ್ದರೆ, ಕೊನೆಯ ನುಡಿಯಲ್ಲಿ ಇದು ವಿಶ್ವಾತ್ಮನ ಆಟವೆನ್ನುವ ದರ್ಶನವಿದೆ. ಆದುದರಿಂದ ಇದು ಬೇಟೆಯಲ್ಲ. ಇದೆಲ್ಲ (ಅವನ) ಆಟ; ಇದು ಬೇಟ, ಅಂದರೆ ಪ್ರಣಯದ ಒಂದು ರೀತಿ ಎಂದು ಕವಿ ಹೇಳುತ್ತಾರೆ. ಈ ಪ್ರಣಯವು ಪ್ರಕೃತಿ ಹಾಗು ವಿಶ್ವಾತ್ಮನಾದ ಪುರುಷ ಇವರೀರ್ವರ ನಡುವಿನ ಪ್ರಣಯ. ಈ ‘ಪುರುಷ’ನ ಸ್ವರೂಪವನ್ನು ವಿಶದೀಕರಿಸಲು ಕವಿಯು “ಮುಗಿಲ ಬಾಯ ಗಾಳಿಕೊಳಲ ಬೆಳಕಹಾಡ ಬೀರಿ” ಎನ್ನುವ ಒಂದು ಅದ್ಭುತ ರೂಪಕವನ್ನು ಅಚಾನಕವಾಗಿ ಬಳಸಿ ಓದುಗರನ್ನು ಬೆರಗಿನಲ್ಲಿ ಸೆರೆ ಹಿಡಿಯುತ್ತಾರೆ.
ಆ ವಿಶ್ವಾತ್ಮನಿಗೆ ಮುಗಿಲೇ ಬಾಯಿ, ಗಾಳಿಯೇ ಅವನ ಕೊಳಲು ಹಾಗು ಬೆಳಕೇ ಆತನ ಹಾಡು. ಮುಗಿಲು, ಗಾಳಿ ಹಾಗು ಬೆಳಕು ಇವು ಪಂಚಮಹಾಭೂತಗಳಾದ ಪೃಥ್ವಿ, ಅಪ್, ತೇಜ, ಆಕಾಶ ಹಾಗು ವಾಯು ಇವುಗಳಲ್ಲಿ ಮೂರು ಮಹಾಭೂತಗಳ ಅಂದರೆ ಆಕಾಶ, ವಾಯು ಹಾಗು ತೇಜ ಇವುಗಳ ಸಂಕೇತವಾಗಿವೆ ಎನ್ನುವದನ್ನು ಗಮನಿಸಬೇಕು.
ಜೊತೆಜೊತೆಗೇ ವಿಶ್ವಾತ್ಮನನ್ನು ಕೃಷ್ಣನಿಗೆ ಹೋಲಿಸುವ ಕೆಲವು ಸಂಕೇತಗಳನ್ನು ಈ ಕವನದಲ್ಲಿ ಬಳಸಲಾಗಿದೆ. ತಾಯಿ ಯಶೋದೆಗೆ ಪುಟ್ಟ ಕೃಷ್ಣನು ತನ್ನ ಬಾಯಿಯಲ್ಲಿ ಸಕಲ ಲೋಕಗಳನ್ನು ಅನಿರೀಕ್ಷಿತವಾಗಿ ತೋರಿಸಿ ಬೆರಗುಗೊಳಿಸಿದನು. ಈ ಗೀತೆಯಲ್ಲಿ ಕವಿಯು ಗೋಪಾಲಕನನ್ನು ವಿಶ್ವಾತ್ಮನಿಗೆ ಹೋಲಿಸುವಂತಹ ರೂಪಕವನ್ನು ಥಟ್ಟನೆ ಬಳಸಿ ಓದುಗನನ್ನು ಬೆರಗಿನಲ್ಲಿ ಸೆರೆ ಹಿಡಿಯುತ್ತಾನೆ. ಕೃಷ್ಣನು ಅರ್ಜುನನಿಗೆ ತನ್ನ ವಿಶ್ವರೂಪವನ್ನು ತೋರಿಸುವಂತೆ, ಕವಿಯು ಓದುಗರಿಗೆ ‘ಮುಗಿಲ ಬಾಯ, ಗಾಳಿ ಕೊಳಲ, ಬೆಳಕ ಹಾಡ’ ಎನ್ನುವ ವಿಶ್ವರೂಪವನ್ನು ತೋರಿಸುತ್ತಾನೆ. ಓದುಗರನ್ನು ಸಾಧಾರಣ ನೋಟದಿಂದ ಅಸಾಧಾರಣ ನೋಟಕ್ಕೆ ಒಯ್ಯುವ ಈ ರೂಪಕವು ಕನ್ನಡ ಕಾವ್ಯದಲ್ಲಷ್ಟೇ ಅಲ್ಲ, ಜಗತ್ತಿನ ಕಾವ್ಯದಲ್ಲೇ ಒಂದು ಅದ್ಭುತ, ಅನನ್ಯ ರೂಪಕವಾಗಿದೆ.
ಈ ವಿಶ್ವಾತ್ಮನಲ್ಲಿ ನಂಬಿಕೆ ಇರುವ ಕಾರಣದಿಂದಲೇ ಕವಿಯ ಮನಸ್ಸಿನಲ್ಲಿ ಒಂದು ಸತ್ಯ ಹೊಳೆಯುತ್ತದೆ. ಅದನ್ನು ಕವಿಯು ತನ್ನ ನಲ್ಲೆಗೆ ಉದ್ಘೋಷಿಸುವದಿಲ್ಲ; ಉಸುರುತ್ತಾನೆ. ಆದುದರಿಂದ ಆ ಸತ್ಯದ ಪ್ರಥಮಾರ್ಧವನ್ನು ಸ್ವಗತರೂಪದಲ್ಲಿ, ಕಂಸಿನಲ್ಲಿ ತೋರಿಸಲಾಗಿದೆ: (ಕಂಗೊಳಿಸುವ ಕೆಂಪು ಇರಲಿ, ಕಂಗೆಡಿಸುವ ಮಂಜು ಬರಲಿ). ಹಾಗು ಈ ಸತ್ಯದ ದ್ವಿತೀಯಾರ್ಧವನ್ನು ಕವಿಯು ಅಪ್ತವಾಗಿ ತನ್ನ ನಲ್ಲೆಗೆ ಬೋಧಿಸುತ್ತಾನೆ: “ಕಳೆಯಲಿಲ್ಲೆ ಕತ್ತಲಂಥ ಕತ್ತಲವೇ ಜಾರಿ?”
ಕೋಲಾಟದ ಪಲ್ಲದೊಂದಿಗೆ ಈ ಗೀತೆ ಮುಗಿಯುತ್ತದೆ.
ಈ ಗೀತೆಯ ವೈಶಿಷ್ಟ್ಯಗಳು:
(೧) ಅನೇಕ ವೈಶಿಷ್ಟ್ಯಗಳ ಆಗರವಾಗಿದೆ ಈ ಗೀತೆ. ಮೊದಲನೆಯದಾಗಿ ಇದು ಕೋಲಾಟದ ಧಾಟಿಯಲ್ಲಿಯೇ ಹಾಡಬಹುದಾದ ಗೀತೆ. ಆದುದರಿಂದ ಇದನ್ನು ಕವನ ಎನ್ನುವದಕ್ಕಿಂತ ಗೀತೆ ಎನ್ನುವದೇ ಸರಿಯಾಗುತ್ತದೆ.
ವೈಯುಕ್ತಿಕವಾಗಿ ಹೊಳೆವ ಸತ್ಯವಾದರೆ ವೈಯಕ್ತಿಕ ಓದಿನ ಕವನವನ್ನು ರಚಿಸಬಹುದು. ಆದರೆ ಇಲ್ಲಿ ಕವಿ ತೋರಬಯಸುತ್ತಿರುವದು ಒಂದು ವಿಶ್ವಸತ್ಯವನ್ನು. ಆದುದರಿಂದಲೇ ಕವಿಯು ಒಂದು ಸಮೂಹಗೀತೆಯ ರಚನೆಯನ್ನು ಬಳಸಿಕೊಂಡಿದ್ದಾನೆ. ಅಲ್ಲದೆ ಬದುಕಿನ ವೈರುಧ್ಯಗಳ ನಡುವೆಯೂ ಸಹ, ಜೀವನೋತ್ಸಾಹವು ನಶಿಸಿ ಹೋಗಬಾರದು ಎನ್ನುವದನ್ನು ತೋರಿಸುವ ಉದ್ದೇಶದಿಂದಲೇ ಹುರುಪು ಹುಮ್ಮಸ್ಸಿನ ಪ್ರತೀಕವಾದ ಕೋಲಾಟದ ಧಾಟಿಯನ್ನು ಕವಿಯು ಉಪಯೋಗಿಸಿಕೊಂಡಿದ್ದಾನೆ. ಎರಡನೆಯದಾಗಿ ಕೋಲಾಟದ ಪದಗಳು ಹೆಚ್ಚಾಗಿ ಕೃಷ್ಣಲೀಲೆಯ ಪದಗಳು.
(ಉದಾ: ಕೋಲನಾಡುತ ಬಂದಾ / ಕಾವೇರಿ ರಂಗಾ).
ಈ ಗೀತೆಯಲ್ಲಿಯೂ ಸಹ ಬದುಕು ಮುರಲೀಧರನ ಲೀಲೆ ಎನ್ನುವ ಶ್ರದ್ಧೆ ವ್ಯಕ್ತವಾಗಿದೆ.
(೨) ವಿಶ್ವಸತ್ಯದ ಲಕ್ಷಣವೆಂದರೆ ಅದು ಅನಾದಿ ಕಾಲದ ಸತ್ಯ. ಆದುದರಿಂದ ಕವಿಯು ಉತ್ಕ್ರಾಂತಿಯ ವಿವಿಧ ಮಜಲುಗಳನ್ನು ಕಾಲಾನುಸಾರವಾಗಿ ತೋರಿದ್ದಾನೆ. ಮೊದಲ ನುಡಿಯಲ್ಲಿ ಕಾಡಿನ ಮುಗ್ಧ ಜೀವಿಗಳಾದ ಚಿಗರೆಗಳ ಸಂಕೇತವಿದ್ದರೆ, ಎರಡನೆಯ ನುಡಿಯಲ್ಲಿ ನಾಡಿನಲ್ಲಿ ಈಲಾದ ಗೋಸಮೂಹವಿದೆ. ಮೂರನೆಯ ನುಡಿಯಲ್ಲಿ ಪ್ರಜ್ಞಾವಂತ ಮಾನವಜೀವಿಗಳ ಸಂಕೇತವಿದೆ. ಮೊದಲ ಎರಡು ನುಡಿಗಳಲ್ಲಿ ಅರುಣೋದಯದ ಸಂಕೇತವಾಗಿ ‘ಕಂಗೊಳಿಸುವ ಕೆಂಪು’ ಎನ್ನುವ ವರ್ಣನೆ ಇದ್ದರೆ, ಮೂರನೆಯ ನುಡಿಯಲ್ಲಿ ಅರುಣೋದಯವು ಮುಗಿದು ಸೂರ್ಯೋದಯವು ಆಗುತ್ತಿರುವ ಸಂಕೇತವಾಗಿ ‘ಬೆಳ್ಳಿಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ ಬಾಲೆ’ ಎನ್ನುವ ವರ್ಣನೆ ಇದೆ. ಅರುಣೋದಯ ಹಾಗು ಸೂರ್ಯೋದಯಗಳು ಈ ಗೀತೆಯಲ್ಲಿ ಕಾಲಗತಿಯ ಮಾನದಂಡಗಳಾಗಿವೆ.
(೩) ಸಂಪೂರ್ಣ ಕವನವೇ ಪ್ರತಿಮಾಮಯವಾಗಿರುವದು ಈ ಕವನದ ಪ್ರಮುಖ ವೈಶಿಷ್ಟ್ಯವಾಗಿದೆ.
ಮೊದಲ ನುಡಿಯಲ್ಲಿ ಎಳೆಯ ಜೀವಿಗಳನ್ನು ಸೂಚಿಸುವ ಉದ್ದೇಶದಿಂದ ತರಳ, ಚಿಗುರು ಹಾಗು ಹೂವು ಎನ್ನುವ ವಿಶೇಷಣಗಳನ್ನು ಬಳಸಲಾಗಿದೆ. ಸಸ್ಯದಲ್ಲಿ ಮೊದಲು ಬರುವದು ಚಿಗುರು ಹಾಗು ಬಳಿಕ ಕಾಣುವದು ಹೂವು ಎನ್ನುವದನ್ನು ಗಮನಿಸಬೇಕು. ಅದರಂತೆ ಎರಡನೆಯ ನುಡಿಯಲ್ಲಿ ‘ಕರೆವ ಕರು ಹಾಗು ಕುಣಿವ ಮಣಕ’ಗಳು ಎಳೆತನವನ್ನು ಸೂಚಿಸಿದರೆ ‘ತೊರೆವ ಗೋಗಭೀರೆಯು’ ಪ್ರೌಢಾವಸ್ಥೆಯನ್ನು ಸೂಚಿಸುತ್ತಾಳೆ.
ಮೂರನೆಯ ನುಡಿಯಲ್ಲಿ ನಿಸರ್ಗದಲ್ಲಿ ಸಾಮರಸ್ಯದಿಂದ ಜೀವಿಸುತ್ತಿರುವ ಮಾನವ-ಜೀವಿಗಳ ವರ್ಣನೆ ಇದೆ. ಸಾಮರಸ್ಯವನ್ನು ಸೂಚಿಸುವ ಉದ್ದೇಶದಿಂದ, “ಮುಕುಲ, ಅಲರು, ಮಲರು, ಪಸರ ಕಂಡು ಕಣ್ಣು ಸೋಲೆ ” ಎನ್ನುವ ವರ್ಣನೆ ಬಂದಿದೆ.
(೪) ಬದುಕು ಬೆಳವಣಿಗೆಯ ದಿಕ್ಕಿನಲ್ಲಿ ಹರಿಯುತ್ತಿರುತ್ತದೆ ಎನ್ನುವದನ್ನು ತೋರಿಸಲು ಬೇಂದ್ರೆಯವರು ಕವನದ ಮೂರೂ ನುಡಿಗಳಲ್ಲಿ ನಿಸರ್ಗವಸ್ತುಗಳ ಬೆಳವಣಿಗೆಯನ್ನು ವಿಶೇಷಣಗಳಂತೆ ಬಳಸಿಕೊಂಡಿದ್ದಾರೆ. ಉದಾಹರಣೆಗಾಗಿ ಮೊದಲ ನುಡಿಯಲ್ಲಿ ಬರುವ “ತರಳ ಎರಳೆ, ಚಿಗುರ ಚಿಗುರೆ, ಹೂವು ಹೂವು ಹುಲ್ಲೆ” ಎನ್ನುವ ರೂಪಕವನ್ನು ನೋಡಿರಿ. ತರಳ(=ಎಳೆಯ), ಚಿಗುರ(=ಚಿಗುರಿದ) ಹಾಗು ಹೂವ(=ಪೂರ್ಣವಾಗಿ ಅರಳಿದ) ಎನ್ನುವ ಪ್ರತಿಮೆಗಳು ಸಸ್ಯದ ಬೆಳವಣಿಗೆಯ ದಿಕ್ಕನ್ನು ತೋರಿಸುತ್ತಿವೆ.
ಅದರಂತೆ ಮೂರನೆಯ ನುಡಿಯಲ್ಲಿ ಮುಕುಲ(=ಮೊಗ್ಗೆ), ಅಲರು(=ಬಿರಿಯುತ್ತಿರುವ ಹೂವು), ಹಾಗು ಮಲರು(=ಅರಳಿದ ಹೂವು) ಈ ಪ್ರತಿಮೆಗಳು ಕಾಲಗತಿಯನ್ನು ತೋರಿಸುವ ಪ್ರತಿಮೆಗಳಾಗಿವೆ.
ಎರಡನೆಯ ನುಡಿಯಲ್ಲಿ ಕರು/ಮಣಕ ಹಾಗು ಗೋವು ಇವು ಬದುಕಿನ ಬೆಳವಣಿಗೆಯ ಸಂಕೇತಗಳಾಗಿವೆ.
(೫) ಮೊದಲ ಮೂರು ನುಡಿಗಳ ಮೂರನೆಯ ಸಾಲಿನಲ್ಲಿ ಅಂದರೆ ನಡುವಿನ ಸಾಲಿನಲ್ಲಿ ಮೃತ್ಯುವಿನ ಆತಂಕವು ವ್ಯಕ್ತವಾಗಿದೆ: “ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ”. ಈ ಆತಂಕವನ್ನು ಎದುರಿಸುವ ಉದ್ದೇಶದಿಂದ ಪ್ರತಿ ನುಡಿಯ ಮೊದಲ ಹಾಗು ಕೊನೆಯ ಸಾಲುಗಳು ಬದುಕಿನಲ್ಲಿ ಭರವಸೆಯನ್ನು ನೀಡುವ ಸಾಲುಗಳಾಗಿವೆ. ಆದುದರಿಂದಲೇ ಪ್ರತಿ ನುಡಿಯ ಮೊದಲ ಸಾಲನ್ನು, ಕೊನೆಯ ಅಂದರೆ ಐದನೆಯ ಸಾಲಿನಲ್ಲಿ ಆವರ್ತಿಸಲಾಗಿದೆ.
ಉದಾಹರಣೆಗೆ:
ಮೊದಲ ನುಡಿಯ ಮೊದಲ ಹಾಗು ಕೊನೆಯ ಸಾಲು:
“ಮುಂಜಾವದ ಎಲರ ಮೂಸಿ ನೋಡುತಿಹವು ನಲ್ಲೆ”
ಎರಡನೆಯ ನುಡಿಯ ಮೊದಲ ಹಾಗು ಕೊನೆಯ ಸಾಲು:
“ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ”
ಮೂರನೆಯ ನುಡಿಯ ಮೊದಲ ಹಾಗು ಕೊನೆಯ ಸಾಲು:
ಬೆಳ್ಳಿಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ; ಬಾಲೆ
ಕೊನೆಯ ನುಡಿಯ ಮೊದಲ ಹಾಗು ಕೊನೆಯ ಸಾಲು:
ಬೇಟೆಯಲ್ಲ; ಆಟವೆಲ್ಲ; ಬೇಟದ ಬಗೆ, ನಾರಿ.
ಅಲ್ಲದೆ ಕೊನೆಯ ನುಡಿಯ ಮಧ್ಯದ ಸಾಲಿನಲ್ಲಿ ಮೃತ್ಯುವಿನ motifದಲ್ಲಿ ಆದ ಬದಲಾವಣೆಯನ್ನು ಗಮನಿಸಬೇಕು:
“(ಕಂಗೊಳಿಸುವ ಕೆಂಪು ಇರಲಿ, ಕಂಗೆಡಿಸುವ ಮಂಜು ಬರಲಿ)”.
ಈ ರೀತಿಯಾಗಿ ಕವಿಯು ಕೋಲಾಟದ ಗೀತೆಯು ಬದುಕಿನ ಗೀತೆ ಎನ್ನುವದನ್ನು ದೃಢಪಡಿಸುತ್ತಾನೆ.
(೬) ಇಂಗ್ಲಿಶ್ ಕವನಗಳಲ್ಲಿ ಬಳಸಲಾಗುತ್ತಿರುವ enjambment ಅನ್ನುವ ಕವನವಿಶಿಷ್ಟತೆಯನ್ನು ಬೇಂದ್ರೆಯವರು ಈ ಗೀತೆಯಲ್ಲಿ ಬಳಸಿದ್ದಾರೆ. ಉದಾಹರಣೆಗೆ ಐದು ಸಾಲುಗಳ ನುಡಿಯ ಮಧ್ಯದ ಸಾಲು ಲಯಭಂಗದ ಮೂಲಕ, ಹಾಗು ಅರ್ಥಪಲ್ಲಟದ ಮೂಲಕ ಅರ್ಥವಿಸ್ತರಣೆಯನ್ನು ಸಾಧಿಸುತ್ತದೆ. ಇದೇ ವಿಶಿಷ್ಟತೆಯನ್ನು ಬೇಂದ್ರೆಯವರು ತಮ್ಮ “ಚಿಗರಿಗಂಗಳ ಚೆಲುವಿ” ಕವನದಲ್ಲಿಯೂ ಬಳಸಿದ್ದಾರೆ.
(೭) ವ್ಯಥೆಯನ್ನು ಒಳಗೊಂಡ ಕವನಗಳನ್ನು ಬರೆಯುವಾಗ ಬೇಂದ್ರೆಯವರು ಮೂರು ವಿಭಿನ್ನ ರೀತಿಗಳಲ್ಲಿ ಬರೆಯುವದನ್ನು ಗಮನಿಸಬೇಕು:
(i) ಸಾರ್ವತ್ರಿಕ ಅಥವಾ ತಾತ್ವಿಕ ಸ್ವರೂಪದ ವ್ಯಥೆ
(ii) ಸಂಪೂರ್ಣವಾಗಿ ವೈಯಕ್ತಿಕವಾದ ವ್ಯಥೆ
(iii) ಸಾರ್ವಜನಿಕ ಸಂಬಂಧವುಳ್ಳ ವೈಯಕ್ತಿಕ ವ್ಯಥೆ
(i) ಸಾರ್ವತ್ರಿಕ ಅಥವಾ ತಾತ್ವಿಕ ಸ್ವರೂಪದ ವ್ಯಥೆ:
‘ನಾದಲೀಲೆ’ ಕವನದಲ್ಲಿ ವ್ಯಕ್ತವಾಗುತ್ತಿರುವ ಮೃತ್ಯುವಿನ ಕಳವಳವು ಸಾರ್ವತ್ರಿಕ ಹಾಗು ತಾತ್ವಿಕ ಆತಂಕ. ಈ ಗೀತೆಯಲ್ಲಿ ಕವಿಯು ಗ್ರಾಂಥಿಕ ಕನ್ನಡವನ್ನು ಹಾಗು ಹಳೆಗನ್ನಡಕ್ಕೆ ಹತ್ತಿರವಾದ ಕನ್ನಡವನ್ನು ಬಳಸಿದ್ದಾನೆ. ಹಾಗು ಕವನದಲ್ಲಿ ಮೃದು ಪದಗಳನ್ನು ಬಳಸಲಾಗಿದೆ.
ಗೀತರಚನೆಯನ್ನು ಹಳೆಗನ್ನಡ ಕವನಗಳ ‘ಉತ್ಸಾಹ ಮಾತ್ರಾ’ ಛಂದಸ್ಸನ್ನು ಅನುಸರಿಸಿ ಮಾಡಲಾಗಿದೆ.
ಈ ಛಂದಸ್ಸಿನಲ್ಲಿ ಪ್ರತಿ ಪಾದದಲ್ಲಿ ಏಳು ತ್ರಿಮಾತ್ರಾಗಣಗಳು, ಕೊನೆಗೊಂದು ಗುರು ಬರುತ್ತವೆ. ಈ ರೀತಿಯಾದ ನಾಲ್ಕು ಸಾಲುಗಳು ಇರುತ್ತವೆ. ಬೇಂದ್ರೆಯವರು ಪ್ರತಿ ಪಾದದಲ್ಲಿ ಮೂರು ಮಾತ್ರೆಯ ಏಳು ಗಣಗಳನ್ನು ಇಟ್ಟುಕೊಂಡಿದ್ದಾರೆ. ಆದರೆ ಕೊನೆಯಲ್ಲಿ ಗುರುವನ್ನು ಇಟ್ಟುಕೊಂಡಿಲ್ಲ. ನಾಲ್ಕು ಸಾಲುಗಳ ಬದಲಾಗಿ ಐದು ಸಾಲುಗಳನ್ನು ಬಳಸಿಕೊಂಡಿದ್ದಾರೆ. (ಮಧ್ಯದ ಸಾಲನ್ನು enjambment ತರಹ ಉಪಯೋಗಿಸಿಕೊಂಡಿದ್ದಾರೆ.)
(ii) ಸಂಪೂರ್ಣವಾಗಿ ವೈಯಕ್ತಿಕವಾದ ವ್ಯಥೆ:
ಬೇಂದ್ರೆಯವರ ಅನೇಕ ಕವನಗಳು ವೈಯಕ್ತಿಕ ದುಃಖದ ಅಗ್ನಿಯಲ್ಲಿ ಬೆಂದು ಬಂದ ಚಿನ್ನದ ಒಡವೆಗಳಾಗಿವೆ.
‘ನೀ ಹೀಂಗ ನೋಡಬ್ಯಾಡ ನನ್ನ’, ‘ಬಿಸಿಲುಗುದುರೆ’, ‘ಹುದುಗಲಾರದ ದುಃಖ’, ‘ನನ ಕೈಯ ಹಿಡಿದಾಕೆ’ ಮೊದಲಾದ ಕವನಗಳು ಇಂತಹ ವೈಯಕ್ತಿಕ ದುಃಖದ ಕವನಗಳು. ಇಂತಹ ಕವನಗಳಲ್ಲಿ ಇರುವ ಭಾಷೆ ದೇಸಿ ಭಾಷೆ, ರಚನೆ ಸಹ ಸರಳವಾದ ದೇಸಿ ಶೈಲಿ, ಉಪಮೆಗಳು ದೇಸಿ ಉಪಮೆಗಳು.
(ಉದಾಹರಣೆ:
ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿ ಕಂಟಿಯಾ ಹಣ್ಣು
ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿ ಕಂಟಿಯಾ ಹಣ್ಣು
ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?)
(iii) ಸಾರ್ವಜನಿಕ ಸಂಬಂಧವುಳ್ಳ ವೈಯಕ್ತಿಕ ವ್ಯಥೆ:
ವೈಯಕ್ತಿಕ ದುಃಖಕ್ಕೆ ಸಾರ್ವಜನಿಕ ಸಂಬಂಧವಿದ್ದಾಗಿನ ಸಂದರ್ಭದಲ್ಲಿ ಬೇಂದ್ರೆಯವರು ಬರೆದ ಕವನಗಳು ಈ ವರ್ಗದಲ್ಲಿ ಬರುತ್ತವೆ. ಉದಾಹರಣೆಗೆ, ಬೇಂದ್ರೆಯವರು ಧಾರವಾಡವನ್ನು ಬಿಟ್ಟು ಹೋಗುವಂತಹ ಪರಿಸ್ಥಿತಿ ಉದ್ಭವವಾಯಿತು. ಧಾರವಾಡವೆಂದರೆ ಕವಿಗೆ ಜೀವದ ಉಸಿರು; ಆತನು ಹುಟ್ಟಿ, ಬೆಳೆದ ಊರು; ಗೆಳೆಯರ ಬಳಗವನ್ನು ಕಟ್ಟಿ ಸಾಹಿತ್ಯದ ಸಲ್ಲಾಪವಾಡಿದ ಊರು. ಆ ಹೊತ್ತಿನಲ್ಲಿ ಅವರಿಂದ ಹೊರಬಂದ ಕವನ: “ನಾವು ಬರತೇವಿನ್ನ”.
ಧಾರವಾಡದ ಕನ್ನಡವು ಪ್ರಾಕೃತ, ಪಾರಸಿ ಹಾಗು ಮರಾಠಿ ಭಾಷೆಗಳೊಡನೆ ಒಡನಾಡಿದ ಕನ್ನಡ. ಆದುದರಿಂದ ಈ ‘ವೈಯಕ್ತಿಕ-ಸಾರ್ವಜನಿಕ’ ಕವನದಲ್ಲಿ ಬೇಂದ್ರೆಯವರು ಇಂತಹ ಕನ್ನಡವನ್ನೇ ಬಳಸಿದ್ದಾರೆ. ಉದಾಹರಣೆಗೆಂದು ಈ ಕವನದ ಒಂದು ನುಡಿಯನ್ನು ಇಲ್ಲಿ ಕೊಡುತ್ತಿದ್ದೇನೆ:
“ಜೋಲಿ-- ಹೋದಾಗ ಆದಿರಿ ಕೋಲು
ಹಿಡಿದಿರಿ ನಮ್ಮ ತೋಲು
ಏನು ನಿಮ್ಮ ಮೋಲು-- ಲೋಕದಾಗ ?
ನಾವು-- ಮರತೇವದನ ಹ್ಯಾಂಗ ?”
(೮) `ನಾದಲೀಲೆ’ ಗೀತೆಯ ಪ್ರತಿಯೊಂದು ನುಡಿಯ ಮೊದಲೆರಡು ಸಾಲುಗಳು ಒಂದು ಭೌತಿಕ ನೋಟವನ್ನು (physical sight) ತೋರಿಸುತ್ತವೆ. ಉದಾಹರಣೆಗೆ ಚಿಗರಿಗಳು ಅಥವಾ ಹಸುಗಳು ಆಡುತ್ತಿರುವ ದೃಶ್ಯ. ಮೂರನೆಯ ಸಾಲು ಥಟ್ಟನೆ ಪಾರಭೌತಿಕ ಸತ್ಯವನ್ನು (metaphysical truth) ಹೇಳುತ್ತದೆ (“ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ”).
ಇದರಂತೆಯೇ ಮೊದಲ ಮೂರು ನುಡಿಗಳು ಭೌತಿಕ ವಿಷಯವನ್ನು ಹೇಳಿದರೆ, ಕೊನೆಯ ನುಡಿಯು ಪಾರಭೌತಿಕ ಸತ್ಯವನ್ನು ಹೇಳುತ್ತದೆ. ಕವಿಯು ಬದುಕಿನ ಸಾಧಾರಣ ಸಂಗತಿಗಳನ್ನು ಹೇಳುತ್ತಲೇ, ಅವುಗಳ ಹಿಂದೆ ನಿಹಿತವಾಗಿರುವ ಅಸಾಧಾರಣ ತತ್ವವನ್ನು ತೋರಿಸುತ್ತಿರುವದು ಗಮನಿಸಬೇಕಾದ ವಿಷಯವಾಗಿದೆ.
(೯) ಕಾವ್ಯಪ್ರತಿಭೆ ಎಂದರೆ ಏನು?
ಗೋಪಾಲಕೃಷ್ಣ ಅಡಿಗರು ಹೇಳಿದಂತೆ ಕವಿಯ ಸಂಕಲ್ಪ ಹಾಗು ಕಾವ್ಯಸಿದ್ಧಿಯಲ್ಲಿ ಅಂತರ ಇರುತ್ತದೆ. ಕಾವ್ಯಸಂಕಲ್ಪವನ್ನು ಪೂರ್ಣವಾಗಿ ಸಿದ್ಧಿಯಲ್ಲಿ ಪರಿವರ್ತಿಸಬಲ್ಲವನೇ ಪ್ರತಿಭಾವಂತ ಕವಿ. ಕೆಲವರು ಪ್ರತಿಭೆ ಎನ್ನುವದನ್ನು ಒಪ್ಪುವದಿಲ್ಲ. ಜಾಗೃತ ಮನಸ್ಸು, ಅರೆಜಾಗೃತ ಮನಸ್ಸು ಹಾಗು ಸುಪ್ತ ಮನಸ್ಸುಗಳ ಸುಸಂಯೋಜಿತ ಪರಿಶ್ರಮವೇ ಪ್ರತಿಭೆಯಂತೆ ಭಾಸವಾಗುತ್ತದೆ ಎಂದು ಇವರು ಹೇಳುತ್ತಾರೆ. ಇದ್ದಿರಬಹುದು. ಆದರೆ ಇತರರಿಗೆ ಪರಿಶ್ರಮವೆನ್ನುವದು ಈ ಪ್ರತಿಭಾವಂತರಿಗೆ ಅನಾಯಾಸವಾಗಿರುತ್ತದೆ. ಒಂದು ಉದಾಹರಣೆ ಕೊಡಬಹುದಾದರೆ ಗಣಿತಪ್ರತಿಭೆಯ ಶ್ರೀಮತಿ ಶಕುಂತಲಾದೇವಿಯವರು ೧೩ ಅಂಕಿಗಳುಳ್ಳ ಎರಡು ಸಂಖ್ಯೆಯ ಗುಣಾಕಾರವನ್ನು ೨೮ ಸೆಕೆಂಡುಗಳಲ್ಲಿ ಉತ್ತರಿಸಿದ್ದರ ದಾಖಲೆಯಿದೆ. ಇದು ಅನಾಯಾಸದ ಪ್ರತಿಭೆ. ಬೇಂದ್ರೆಯವರ ಕಾವ್ಯಪ್ರತಿಭೆಯು ಇದೇ ರೀತಿಯದು. ಅನೇಕ ವೈಶಿಷ್ಟ್ಯಗಳ ಈ ಗೀತೆಯು ಅವರ ಅನಾಯಾಸ ಪ್ರತಿಭೆಯ ಫಲವಾಗಿದೆ.
(೧೦) ‘ನಾದಲೀಲೆ’:
ಈ ವಿಶ್ವವು ಕೃಷ್ಣನ ಕೊಳಲಿನ ಮೋಹಕ ನಾದವನ್ನು ಪಸರಿಸುವ ಕೋಲಾಟವಾಗಿದೆ. ಕೋಲಾಟಕ್ಕೆ ಗೆಳೆಯ, ಗೆಳತಿಯರ ಸಮೂಹ ಬೇಕು. ಅದರಂತೆ ಪರಮಾತ್ಮನಿಗೂ ಸಹ ವಿಶ್ವವು ಬೇಕು. (ಮುಗಿಲ ಬಾಯ ಗಾಳಿಕೊಳಲ ಬೆಳಕಹಾಡ ಬೀರಿ). ಆದುದರಿಂದ ಈ ಗೀತೆಗೆ ‘ನಾದಲೀಲೆ’ ಎನ್ನುವ ಶೀರ್ಷಿಕೆ ಸಾರ್ಥಕವಾಗಿದೆ.
‘ನಾದಲೀಲೆ’ ಕವನಸಂಕಲನವು ೧೯೩೮ರಲ್ಲಿ ಪ್ರಕಟವಾಯಿತು.
42 comments:
ನಾದಲೀಲೆಯನ್ನು ಪರಿಚಯಿಸಿದ ಈ ಲೇಖನಕ್ಕೆ ತುಂಬ ಧನ್ಯವಾದಗಳು. ಈ ಕವನ ಅರ್ಥವಾಗದೇ ಒದ್ದಾಡಿದ್ದೇನೆ. ಈ ಗೀತೆಯನ್ನು ಬೇಂದ್ರೆ ಹೇಗೆ ಹಾಡುತ್ತಿದ್ದರು ಎನ್ನುವುದು ಇನ್ನೂ ಗೊತ್ತಾಗಲಿಲ್ಲವಲ್ಲ?
- ಕೇಶವ
ಸುನಾಥ್ ಸರ್,
ನಾದಲೀಲೆಯ ಬಗ್ಗೆ ಒಂದು ಉತ್ತಮ ಪರಿಚಯ. ಕವನ ಓದಲು ನನಗೂ ಸ್ವಲ್ಪ ಕಷ್ಟವೇ ಆದರೂ ನಿಮ್ಮ ನಿರೂಪಣೆಯಿಂದ ಎಲ್ಲಾ ಅರ್ಥವಾಗಿಬಿಡುತ್ತದೆ. ಅದಕ್ಕಾಗಿ ಧನ್ಯವಾದಗಳು.
ಕೇಶವ,
ಬೇಂದ್ರೆಯವರು ಹಾಡಿದ್ದನ್ನು ನಾನು ಕೇಳಿಲ್ಲ. ನನ್ನ ಸಂಗೀತ ಜ್ಞಾನವೂ ಸಹ ಶೂನ್ಯಮಟ್ಟದ್ದು! ಬೇಂದ್ರೆಯವರ ಕವನಗಳನ್ನು ಇತ್ತೀಚೆಗೆ ‘ಬೇಂದ್ರೆ ಭವನ’ದಲ್ಲಿ ಬೇಂದ್ರೆ ಟ್ರಸ್ಟಿನವರು ಹಾಡಿಸುತ್ತಿರುತ್ತಾರೆ. ಅಲ್ಲಿ ಮಾಹಿತಿ ದೊರೆತರೆ ನಿಮಗೆ ತಿಳಿಸುವೆ.
ಶಿವು,
ಬೇಂದ್ರೆಯವರ ಕವನಗಳನ್ನು ನಾನು ಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇನೆ ಎಂದು ಹೇಳುವದೆಂದರೆ ನಾನು ಶಾಂತಸಾಗರವನ್ನು ಈಜಿದ್ದೇನೆ ಎಂದು ಹೇಳಿದಂತೆ! ನನಗೆ ತಿಳಿದಷ್ಟನ್ನು ನಿಮ್ಮೆದುರಿಗೆ ಇಟ್ಟಿದ್ದೇನೆ. ನೀವು ಅದನ್ನು ಮೆಚ್ಚಿಕೊಂಡರೆ ಅದು ನನ್ನ ಭಾಗ್ಯ!.
ಸುನಾಥ್ ಕಾಕಾ,
ನಾದಲೀಲೆ ತರದ ಶ್ರೇಷ್ಠ ಕವನ(ಗೀತೆ)ಯನ್ನು ನೀನು ಅರ್ಥೈಸಿದ ರೀತಿ ಸುಂದರ. ಅದಕ್ಕಾಗಿ ನಿಮಗೆ ನಮನಗಳು.
ಅಂದಾಗೆ ಈ ಸಾಲಿನಲ್ಲಿ "ಹಿಂದೆಕಾದಲನೆಡೆ ಬೇಡ ಬಹಳು ಕಾದಲೆ" ಉಪಯೋಗಿಸಿದ ’ಕಾದಲ’ಮತ್ತು ’ಕಾದಲೆ’ಶಬ್ದಗಳು ತಮಿಳನ ’ಕಾದಲ್’ ತರ ಇವೆ. ಈ ಶಬ್ದಗಳ ಮೂಲ ಗೊತ್ತಿದ್ದರೆ ತಿಳಿಸಿ.
nimma nirupane saralavaagi ellarigu arthavaaguva haage ide sir... tumbaa dhanyavaada.
ಬೇ೦ದ್ರೆಯವರ ’ನಾದಲೀಲೆ’ಯನ್ನು ಪರಿಚಯಿಸಿ ಸರಳವಾಗಿ ಅರ್ಥೈಸಿ ತಿಳಿಸಿದ ಚೆ೦ದದ ಲೇಖನ...
ನಿಮ್ಮ ಬರಹಗಳಿ೦ದ ಅನೇಕ ಅಮೂಲ್ಯ ವಿಚಾರಗಳು ತಿಳಿದು ಬರುತ್ತಿದೆ.. ಧನ್ಯವಾದಗಳು ಕಾಕಾ.
ಕಾಕಾ ಹಬ್ಬದಶುಭಾಶಯಗಳು.
ಕವಿತಾ ಓದುವಾಗ ಶಬ್ದಗಳ ಚಿತ್ತಾರ ಮಾತ್ರ ಕಾಣಿಸುತ್ತದೆ. ನಿಮ್ಮ ವಿಶ್ಲೇಷಣೆ ಓದಿದಾಗ ಎಲ್ಲ ತಿಳಿಯಾಯಿತು.
ಅಪ್ಪ-ಅಮ್ಮ,
ಕಾದಲ ಪದವು ತಮಿಳಿನಲ್ಲಿಯೂ ಇದೆ. ಈ ಪದವು ‘ಕಾದು’ ಅಂದರೆ burn ಪದದಿಂದ ಬಂದಿದೆ ಎಂದು ಕೆಲವು ಕೋಶಕಾರರು ಹೇಳುತ್ತಾರೆ. ಬಹುಶ: ಪ್ರೇಮಿಗಳು ಒಬ್ಬರನ್ನೊಬ್ಬರು burn ಮಾಡುತ್ತಾರೆಯೊ ಏನೋ!
ದಿನಕರ,
ನಿಮಗೇ ನನ್ನ ಧನ್ಯವಾದಗಳು ಸಲ್ಲಬೇಕು.
ಮನಮುಕ್ತಾ,
ನಾದಲೀಲೆಯ ಕವಿಗೆ ನಾವಿಬ್ಬರೂ ಧನ್ಯವಾದಗಳನ್ನು ಹೇಳಬೇಕಷ್ಟೆ!
ದೇಸಾಯರ,
ಗಣೇಶ ಚವತಿಯ ಶುಭಾಶಯಗಳು.
ಕಣ್ಣಿಗೆ ಕಾಣಸ್ತಿರತsದ. ಅದು ಮನಸ್ಸಿನೊಳಗs ಇರತsದ.
ಪರಸ್ಪರ ಸಲ್ಲಾಪದಾಗ ಅದು ಹೊಳೀತsದ!
||ಓಂಕಾರದ ಶಂಖನಾದಕಿಂತ ಕಿಂಚಿದೂನ |
|ಕನಿಯ ಏಕತಾನ, ಕವನದಂತೆ ನಾದಲೀನಾ ||
ಹೀಗೆ ಬೇಂದ್ರೆಯವರೆ ತಮ್ಮ ಕಾವ್ಯದರ್ಶನವನ್ನು ಕಂಡವರೆಂದು ಓದಿ ತಿಳಿದಿದ್ದೇನೆ. "ಕೋಲು ಸಖಿ.. " ಯನ್ನು ನಾನು ಹೈಯರ್ ಪ್ರೈಮರಿಯಲ್ಲಿದ್ದಾಗ ಸಮೂಹಗಾನದಲ್ಲಿ ರಾಗವಾಗಿ ಹಾಡಿದ್ದ ನೆನೆಪಿದೆ. ( ಪೂರ್ಣ ಭಾವಾರ್ಥ ತಿಳಿದುಕೊಂಡಿದ್ದು ಈಗಲೇ !). ನಿಮ್ಮ ವಿವರಣೆ, ವಿಶ್ಲೇಶಣೆಗಳು ಸರಳ-ಸುಂದರವಾಗಿರುವುವಾದ್ದರಿಂದ ಚೆನ್ನಾಗಿ ಅರ್ಥವಾಯಿತು.
ಆಂಗ್ಲ ಸಾಹಿತ್ಯದ ಝಲಕ್ ಗಳನ್ನೂ ಬೇಂದ್ರೆಯವರು ಬಳಸಿದ್ದಾರೆಮ್ದು ತಿಳಿದು ಆಶ್ಚರ್ಯವಾಯಿತು. ಕುವೆಂಪುರವರಂತೆ ಬೇಂದ್ರೆಯವರೇನೂ ಆಂಗ್ಲಸಾಹಿತ್ಯವನ್ನು ಅಭ್ಯಸಿಸದವರೆಲ್ಲವೆಂದು ನಾನು ಅಂದುಕೊಂಡಿದ್ದೇನೆ (ಸರಿಯೇ ?), ಬೇಂದ್ರೆಯವರ ಕಾವ್ಯಗಳು ದೈವದತ್ತವಾದ ಮತ್ತು ಸಾಂದರ್ಭಿಕ ಭಾವಸೃಷ್ಟಿಯೆನಿಸುತ್ತದೆ.
(ಇದರ ಬಗ್ಗೆ ನನಗೆ ಸಂಪೂರ್ಣ ಅರಿವಿಲ್ಲ).
ಎಂದಿನಂತೆ ನಿಮ್ಮ ಭಾವಾರ್ಥ ಚೆನ್ನಾಗಿತ್ತು. ಧನ್ಯವಾದಗಳು. ಹಾಗೆಯೇ ಮುಂದೆಂದಾದರೂ ನಾದಲೀಲೆಯ "ಮನುವಿನ ಮಕ್ಕಳು" ಕವನದ ಭಾವಾರ್ಥವನ್ನು ತಿಳಿಸಿರೆಂದು ವಿನಂತಿ.
ಪುತ್ತರ್,
ಬೇಂದ್ರೆಯವರು ತಮ್ಮ ಕಾವ್ಯವನ್ನು ಬೇರೆ ಬೇರೆ ಸಂದರ್ಭಗಳಲ್ಲಿ
ವಿವಿಧ ರೀತಿಗಳಲ್ಲಿ ವರ್ಣಿಸಿದ್ದಾರೆ. ಜೀವನ-ತತ್ವ-ದರ್ಶನದ ಸಮಯದಲ್ಲಿ ಕಾವ್ಯವು ಓಂಕಾರಕ್ಕೆ ಕಿಂಚಿತ್ ಊನವಾಗಿರುತ್ತದೆ.
ಹಿಗ್ಗಿನಿಂದ ಹಾಡುವಾಗ ಅದು "ಗಾಳಿ ಕಿರಿಸುಳಿ ಹುಟ್ಟಿತು, ಕವನ ವೇಷವ ತೊಟ್ಟಿತು"!
ಬೇಂದ್ರೆಯವರು ಆಂಗ್ಲ,ಸಂಸ್ಕೃತ ಹಾಗು ಕನ್ನಡ ಸಾಹಿತ್ಯಗಳನ್ನು ಆಳವಾಗಿ ಅಧ್ಯಯನ ಮಾಡಿದವರು. ಆಂಗ್ಲ ಸಾಹಿತ್ಯದಲ್ಲಿ A.E. ಹಾಗು Shelley ಅವರ ಮೆಚ್ಚಿನ ಕವಿಗಳು.
ಸಾರ್,
ಮೊದಲಿಗೆ ನನ್ನ ಬ್ಲಾಗ್ಗೆ ಬಂದು ಕಮೆಂಟ್ ಮಾಡಿದ್ದಕ್ಕಾಗಿ ಧನ್ಯವಾದಗಳು.
ಅಡಿಗರು ನನ್ನ ಮೆಚ್ಚಿನ ಕವಿ. ಬೇಂದ್ರೆಯವರ ಕಾವ್ಯವನ್ನು ಓದಿದ್ದೆ. ಆದರೆ ಸರಿಯಾಗಿ ಬೇಂದ್ರೆಯವರ ಕವ್ಯದ ಹುಚ್ಚನ್ನು ಹಚ್ಚಿಸಿದ್ದು ನನ್ನ ಕ್ಯಾಮರಾ ಮುಖ್ಯಸ್ಥರಾಗಿದ್ದ ಧಾರವಾಡದವರೇ ಅದ ಸತ್ಯ ಬೋಧ ಜೋಶಿ. ಮತ್ತೆ ಹಳೇ ನೆನಪುಗಳನ್ನು ಮೀಟಿದ್ದಕ್ಕಾಗಿ ಇನ್ನೊಮ್ಮೆ ಧನ್ಯವಾದಗಳು.
ಉತ್ತಮ ಲೇಖನ
ಸುನಾಥ್ ಸರ್,
'ನಾದಲೀಲೆ' ಯನ್ನು ಓದಿದ್ದೆ. ಅದರ ಭಾವಾರ್ಥವನ್ನು ಇಷ್ಟು ಚೆನ್ನಾಗಿ ತಿಳಿದಿರಲಿಲ್ಲ.ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು..ಉಪಯುಕ್ತ ಲೇಖನ.
ಬದರಿನಾಥರೆ,
ಬೇಂದ್ರೆಯವರು ವರಕವಿಗಳು ನಿಜ. ಆದರೆ ನನಗಾದರೂ ಅಡಿಗರೇ ಮೆಚ್ಚಿನ ಕವಿ! ನಮ್ಮ ಅಭಿರುಚಿಗಳು ಈ ಅಂಶದಲ್ಲಿ ಒಂದೇ ಆಗಿವೆ.
ಪ್ರಿಯ ಅಶೋಕ,
ಬೇಂದ್ರೆಯವರ ಕವನಗಳನ್ನು ಎಷ್ಟೆಷ್ಟು ಓದುತ್ತ ಹೋಗುತ್ತೇವೆಯೋ ಅಷ್ಟಷ್ಟು ಹೊಸ ಅರ್ಥ ಹೊಳೆಯುತ್ತ ಹೋಗುತ್ತದೆ. ಆದುದರಿಂದಲೇ ‘ಓದುಗನನ್ನು ಬೆಳೆಯಿಸುವ ಕವಿ’ ಎಂದು ಬೇಂದ್ರೆಯವರನ್ನು ಕರೆಯಲಾಗುತ್ತದೆ.
ಬೇ೦ದ್ರೆಯವರ ನಾದಲೀಲೆ ಕವನದ ಬಗ್ಗೆ, ಮತ್ತು ಸಮಕಾಲೀನವಾಗಿ ಕನ್ನಡ ನವ್ಯ ಕಾವ್ಯದ ಜನಕ ಅಡಿಗರ ಬಗ್ಗೆ ಸರಳ ನಿರೂಪಣೆಯೊ೦ದಿಗೆ ಉಪಯುಕ್ತ ಲೇಖನ ನೀಡಿದ್ದೀರಿ. ಚೆನ್ನಾಗಿದೆ. ಸ೦ಗ್ರಹಯೋಗ್ಯಮಾಹಿತಿ.
ಪರಾಂಜಪೆಯವರೆ,
ಧನ್ಯವಾದಗಳು.
ಕಾಕಾ...
ನಿಮ್ಮ ವಿಶ್ಲೇಷಣೆ ಓದಿದ ನಂತರ ಅರ್ಥವಾಯಿತು ಅನ್ನಿಸತ್ತೆ... ಎಂದಿನಂತೆ ತುಂಬಾ ಚೆನ್ನಾಗಿದೆ. ಧನ್ಯವಾದಗಳು..
ಶ್ಯಾಮಲ
ಶ್ಯಾಮಲಾ,
‘ಅರ್ಥವಾಯಿತು ಅಂತ ಅನ್ನಿಸತ್ತೆ’ ಏಕೆ!
ಆಹಾ! ನಾನು ಶಾಲೆಯಲ್ಲಿ ಓದುತ್ತಿದ್ದಾಗ ಕೋಲಾಟವಾಡಿದ ಹಾಡು ಇದು. ಬೇಂದ್ರೆಯವರ ಕವನ ಎಂಬುದೇನೋ ಗೊತ್ತಿತ್ತು. ಆದರೆ ಅದರ ಹಿಂದೆ ಇಂಥ ಅದ್ಭುತ, ಮಾರ್ಮಿಕ ಅರ್ಥ ಇದೆ ಎನ್ನುವ ಕಲ್ಪನೆಯೂ ಇರಲಿಲ್ಲ. ಪ್ರತೀ ಬಾರಿಯೂ ನಿಮ್ಮ ಲೇಖನಗಳನ್ನು ಓದಿದ ಮೇಲೆ ನನಗೇನೂ ತಿಳಿದಿಲ್ಲ ಅನ್ನುವ ಜ್ಞಾನೋದಯವಾಗುತ್ತದೆ ನನಗೆ :-) ಗೊತ್ತಿರದ ಅದೆಷ್ಟೋ ವಿಷಯಗಳನ್ನು ಕಲೆಹಾಕಿ ಉಣಬಡಿಸುತ್ತಿರುವ ನಿಮಗೆ ಹಾರ್ದಿಕ ಧನ್ಯವಾದಗಳು ಕಾಕಾ.
ಧನ್ಯವಾದಗಳು ಸರ್, ಒಳ್ಳೆಯ ಮಾಹಿತಿ ನೀಡಿದ್ದೀರಿ..... ನಾದಲೀಲೆ ಮೊದಲು ಓದಿದಾಗ ನನಗೂ ಅರ್ಥವಾಗಿರಲಿಲ್ಲ ನಿಮ್ಮ ವಿವರ ಎಷ್ಟೊಂದು ತಿಳಿಸಿದೆ... ಧನ್ಯವಾದಗಳು ಮತ್ತೊಮ್ಮೆ
ಸುನಾಥ್ ಸರ್
ನಾದಲೀಲೆಯ ಪರಿಚಯಕ್ಕೆ ಥ್ಯಾಂಕ್ಸ್
ನಿಮ್ಮ ಬರಹ ಯಾವಾಗಲೂ ಸಂಗ್ರಹ ಯೋಗ್ಯ
ಶುಭದಾ,
ಬೇಂದ್ರೆಯವರ ಕವನಗಳು ಮೇಲ್ನೋಟಕ್ಕೆ ಸರಳವಾಗಿ ಇರುತ್ತವೆ. ಬಿಡಿಸಿದಂತೆ ಅರ್ಥಗಳು ಹೊಳೆಯುತ್ತ ಹೋಗುತ್ತವೆ. ಈ ಅರ್ಥಗ್ರಹಣಕ್ಕೆ ಸ್ವಲ್ಪ ಅಭ್ಯಾಸವಾದರೆ ಸಾಕು.
ಮನಸು,
ನಾದಲೀಲೆ ನನಗೂ ಸಹ ಮೊದಲ ಓದಿಗೆ ಅರ್ಥವಾಗಿರಲಿಲ್ಲ. ಬೇತಾಳನಂತೆ ನಾನೂ ಸಹ ಬೇಂದ್ರೆಯವರ ಹೆಗಲೇರಿ ಕುಳಿತೆ.
‘ಅರ್ಥ ತಿಳಿದಿದ್ದೂ ಹೇಳದಿದ್ದರೆ...!’ ಎಂದು ಬೆದರಿಕೆ ಹಾಕಿದೆ. ಬಳಿಕ......!
ಗುರುಮೂರ್ತಿಯವರೆ,
ನೀವು blogನಲ್ಲಿ ಬರೆದ ಲೇಖನವು ‘ಸಂಯುಕ್ತ ಕರ್ನಾಟಕ’ ಪುರವಣಿಯಲ್ಲೂ ಸಹ ಬಂದಿದೆ. ಮತ್ತೊಮ್ಮೆ ಓದಿ ಆನಂದಿಸಿದೆ.
ನಾದಲೀಲೆ ಬಗ್ಗೆ ಸಮಗ್ರ ಮಾಹಿತಿ ಸರಳವಾಗಿ ನೀಚ್ದಿದ್ದಿರಾ.. ಈ ಕವನಕ್ಕೆ ನಾನು ಹಲವರು ವಿಮರ್ಶೆ ಓದಿ ಅರ್ಥೈಸಿಕೊಂಡಿದ್ದೆ. ಆದರೆ ನೀವು ಹೇಳಿದಷ್ಟು ಸ್ಪಷ್ತ್ತವಾಗಿ ವಿಸ್ತಾರಾವಾಗಿ ಮತ್ತು ಸರಳವಾಗಿ ಎಲ್ಲೂ ಓದಿದ ನೆನಪಿಲ್ಲ. ಈ ನಿಟ್ಟಿನಲ್ಲಿ ಬೇಂದ್ರೆ ಕಾವ್ಯಕ್ಕೆ ನಿಮ್ಮ ನಿರೂಪಣೆ ತುಂಬಾ ಸೂಕ್ತ. ಮಾಹಿತಿಗೆ ಮತ್ತು ತಮ್ಮ ಅಧ್ಯಯನಕ್ಕೆ ನಮಸ್ಕಾರಗಳು ಮತ್ತು ಧನ್ಯವಾದಗಳು.
ಕನ್ನಡದ ನನ್ನ ಮೆಚ್ಚಿನ ಕವಿಗಳಲ್ಲಿ ಬೇಂದ್ರೆ ಒಬ್ಬರು, ಅವರು ಅನುಭವಿಸಿದ ಬಡತನದಿಂದ ಅವರಿಗೆ ಕಾವ್ಯ ಸೃಜಿಸಲು ಅದೇ ನಾಂದಿಯಾಯಿತಿರಬಹುದು. ಅಡಿಗರಿಗೆ ಬೇಂದ್ರೆಯವರ ವ್ಯಕ್ತಿತ್ವದ ಕಲ್ಪನೆ ಬಂದಿದ್ದರಿಂದ ಹಾಗೆ ಹೇಳಿದ್ದಾರೆ. ನಿಜಕ್ಕೂ ಕವಿಯ ಕಾವಿ ಸಂಕಲ್ಪಕ್ಕೂ ಸಿದ್ಧಿಗೂ ಬಹಳ ಅಂತರವಿದೆ, ಅದೂ ಗೇಯ ಗೀತೆಗಳಲ್ಲಿ ಈ ಎರಡೂ ಒಂದಾದರೆ ಮಾತ್ರ ಕಾವ್ಯ ಪರಿಪೂರ್ಣವಾಗುತ್ತದೆ ಎಂಬುದು ನನ್ನ ವೈಯಕ್ತಿಕ ಅನಿಸಿಕೆ. ಬೇಂದ್ರೆ ಸಂಸ್ಕೃತದ ಗಾಳಿ ಇದ್ದವರು, ಅದರ ಗಂಧ ಹಚ್ಚಿಕೊಂಡವರು, ಯಾರಿಗೆ ಸಂಸ್ಕೃತದ ಅರಿವಿದೆಯೋ, ಆ ಭಾಷೆಯೇ ಬಗ್ಗೆ ಗೌರವವಿದೆಯೋ, ಅದನ್ನು ತಕ್ಕ ಮಟ್ಟಿಗೆ ಅಭ್ಯಸಿಸಿದ್ದಾರೋ ಅಂತವರು ಸಹಜವಾಗಿ ಸುಸಂಕೃತರಾಗುತ್ತಾರೆ. ನಾವು ಒಂದೇ ಗಿಳಿಯ ಎರಡು ಮರಿಗಳು ಬೇರೆಯಾಗಿ ಕಟುಕನ ಮನೆಯಲ್ಲೊಂದು ಮತ್ತು ಸನ್ಯಾಸಿಯ ಮನೆಯಲ್ಲೊಂದು ಬೆಳೆದು, ಪರಿಸರಕ್ಕೆ ತಕ್ಕಂತೆ ಶಬ್ದಗಳನ್ನು ಉಲಿಯುವುದನ್ನು ಕಥೆಯಲ್ಲಿ ಕೇಳಿದ್ದೇವೆ, ಅದೇ ರೀತಿ ಯಾರು ಸಂಸ್ಕೃತದ ಮನೆಯಲ್ಲಿ ಬೆಳೆದವರೋ ಅಂತವರ ಸಂಸ್ಕಾರ,ಸಂಸ್ಕೃತಿ ಮತ್ತು ಕೃತಿ ಬಹುತೇಕ ಉತ್ತಮವಾಗೇ ಇರುತ್ತದೆ,ಎಲ್ಲೋ ಅಪವಾದ ಇರಬಹುದು. ವರಕವಿ ಬೇಂದ್ರೆ ವೇದಗಳ ಸಾರವನ್ನು ಕಾವ್ಯದಲ್ಲಿ ಕಡೆದಿರಿಸಿದ ಮಹಾನುಭಾವ. ಬೇಂದ್ರೆಗೆ ಸರಕಾರ ಕೊಟ್ಟ ಗೌರವ ಅಪೂರ್ಣ ಮತ್ತು ಅಸಮರ್ಪಕ[ಇದು ಪ್ರಾಯಶಃ ಬೇಂದ್ರೆ ಮೇಲ್ವರ್ಗದವರಿದ್ದಿದ್ದಕ್ಕೆ ಮಾಡಿದ ಪಕ್ಷಪಾತವಿರಬಹುದು] ಇದನ್ನು ಕೇಳುವವರಾರು ? ಕನ್ನಡದಲ್ಲಿ ಬೇಂದ್ರೆಯಂತಹ ಅನುಭಾವೀ ಕವಿ ಹುಟ್ಟಿಬರಲಿಲ್ಲ, ತಾವು ಎಳೆ ಎಳೆಯಾಗಿ ಬೇಂದ್ರೆಯವರ ಲೋಕವನ್ನು ಉಣಬಡಿಸುತ್ತಿದ್ದೀರಿ, ತಮ್ಮ ಅರ್ಥಪೂರ್ಣ ನಿರೂಪಣೆ ಬಹಳ ಇಷ್ಟವಾಯಿತು,ನಮಸ್ಕಾರ-ಬೇಂದ್ರೆಯವರಿಗೂ ಮತ್ತು ಅವ್ರ ಕಾವ್ಯವನ್ನು ಮಾತನಾಡಿಸಿದ ನಿಮಗೂ.
ಡಿಗ್ರೀಯಲ್ಲಿ ನಾದಲೀಲೆಯ ಬಗ್ಗೆ ಓದಿ ನೋಟ್ಸ್ ಮಾಡುವಾಗ ಒಂದೆರಡು ಪುಸ್ತಕದ ಹಾಳೆಗಳನ್ನು ಮಗುಚಿ ಏನೋ ಗೀಚಿದ್ದಿದೆ. ನಿಜದ ಅರ್ಥ, ಭಾವಗಳ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆಗ ಏನೇನು ಓದಲು/ಅರ್ಥೈಸಿಕೊಳ್ಳಲು ಕಳೆದುಕೊಂಡಿದ್ದೆ ಅನ್ನೋದು ತಮ್ಮ ಲೇಖನದಿಂದ ಅರ್ಥ ಅಗ್ತಾ ಇದೆ. ಬಹಳ ಚೆಂದದ ಉಪಯುಕ್ತ ಲೇಖನ
ಸೀತಾರಾಮರೆ,
ಬೇಂದ್ರೆ ಕವನಗಳಲ್ಲಿ ಒಬ್ಬರಿಗೆ ಹೊಳೆದದ್ದು ಮತ್ತೊಬ್ಬರಿಗೆ ಹೊಳೆದಿರುವದಿಲ್ಲ. ಆದುದರಿಂದ ಅವರ ಕವನಗಳ ವಿಭಿನ್ನ ವಿಮರ್ಶೆಗಳನ್ನು ಓದಿದರೆ ಹೆಚ್ಚಿನ ಹೊಳಹು ಸಿಗುವದು.
ಭಟ್ಟರೆ,
ಬೇಂದ್ರೆಯವರು ಕನ್ನಡ,ಸಂಸ್ಕೃತ ಹಾಗು ಇಂಗ್ಲೀಶ್ ಸಾಹಿತ್ಯದ ಆಳವಾದ ಅಧ್ಯಯನ ಮಾಡಿದವರು. ಭಾರತೀಯ ತತ್ವಶಾಸ್ತ್ರವನ್ನು ಅರೆದು ಕುಡಿದವರು. ಮರಾಠಿ ಅವರ ಮಾತೃಭಾಷೆಯಾಗಿದ್ದರಿಂದ ಆ ಭಾಷೆಯನ್ನೂ ಚೆನ್ನಾಗಿ ಬಲ್ಲವರು. ಮರಾಠಿಯಲ್ಲೂ ಅವರು ೬ ಗ್ರಂಥಗಳನ್ನು ಬರೆದಿದ್ದು, ಅವುಗಳ ಪೈಕಿ ‘ಸಂವಾದ’ ಎನ್ನುವ ಕೃತಿಗೆ ‘ಕೇಳಕರ ಪ್ರಶಸ್ತಿ’ ದೊರೆತಿದೆ.
ಸಾಗರಿ,
ಬೇಂದ್ರೆಯವರ ಕಾವ್ಯವನ್ನು ನಾನು ಮೊದಲು ಓದಿದಾಗ ನನಗೂ ಸಹ ಜಾಸ್ತಿ ಅರ್ಥವಾಗಿರಲಿಲ್ಲ. ವಿಭಿನ್ನ ಶಾಸ್ತ್ರಗಳಲ್ಲಿ ನಮ್ಮ ಅಧ್ಯಯನ ಬೆಳೆದಂತೆ, ಬೇಂದ್ರೆಯವರ ಕವನಗಳಲ್ಲಿ ಅಡಗಿದ ಅರ್ಥ ತಿಳಿಯುತ್ತ ಹೋಗುತ್ತದೆ. ಆದುದರಿಂದಲೇ ಅವರನ್ನು
ಓದುಗನನ್ನು ಬೆಳೆಯಿಸುವ ಕವಿ ಎಂದು ಕರೆಯುತ್ತಾರೆ.
ಸುನಾಥಣ್ಣ...ಶಾಂತಸಾಗರದ ಬಿಂದುವಾದರೂ ನಮಗೆ ಅರ್ಥವಾದರೆ ನಾವೇ ಧನ್ಯ...ಅದನ್ನು ನೀವು ನಮಗೆ ನೀಡಿದ್ದೀರಿ...ಬೇಂದ್ರೆಯವರನ್ನು ಬಹಳ ಸುಲಲಿತವಾಗಿ ಹಲಸಿನ ತೊಳೆಯಂತೆ ಬಿಡಿಸಿ ಮುಂದಿಟ್ಟಾಗ ಸವಿಯುವುದೇ ಆನಂದ. ನಿಮ್ಮ ಬ್ಲಾಗ್ ಲೇಖನಗಳು ನಮಗೆ .."ನಾವೆಲ್ಲಿದ್ದೇವೆ ?" ಎನ್ನುವುದನ್ನು ನೆನಪಿಸುತ್ತವೆ.
ಸುನಾಥ ಕಾಕಾ,
ಧನ್ಯವಾದಗಳು. ಬೇಂದ್ರೆ ಕಾವ್ಯವನ್ನು ಮುಟ್ಟಲು ಇನ್ನೂ ಹೆದರುತ್ತಿರುವ ನನಗೆ ನಿಮ್ಮ ಬರಹಗಳನ್ನು ಓದುವುದು ಪರೀಕ್ಷೆಗೆ ಮುನ್ನ ತಯಾರಿ ನಡೆಸಿದಂತೆ :)
ಜಲನಯನ,
‘ಬಿಂದು ಬಿಂದು ಸೇರಿ ಸಿಂಧು....’ ಅಲ್ಲವೆ?
ಆನಂದ,
Pleasure is mine!
ಸುನಾಥ ಕಾಕಾ,
ಪದ್ಯವನ್ನು ಅಚ್ಚುಕಟ್ಟಾಗಿ ಪಾಠ ಹೇಳಿದಕ್ಕೆ ಧನ್ಯವಾದ. ಇದು ಕರ್ನಾಟಕ ಮುಕ್ತ ವಿವಿದ ಕನ್ನಡ ಎಂ.ಎ. ಪಠ್ಯದಲ್ಲಿದೆ. ನೀವು ಪಾಠ ಮಾಡಿದಷ್ಟು ಬರೆದರೆ ೧೦೦% ಗ್ಯಾರಂಟಿ :)
ಧನ್ಯವಾದಗಳು,
ಶ್ರೀಕಾಂತ
ಶ್ರೀಕಾಂತರೆ,
ಪ್ರಶಸ್ತಿಯನ್ನು ನೀಡುತ್ತಿದ್ದೀರಿ. ನಿಮಗೆ ಧನ್ಯವಾದಗಳು.
Thank you
thank ypu, Unknown!
Post a Comment