Monday, September 20, 2010

‘ಮನುವಿನ ಮಕ್ಕಳು’...............ಬೇಂದ್ರೆ

ಅಂಬಿಕಾತನಯದತ್ತರ ‘ಮನುವಿನ ಮಕ್ಕಳು’ ಕವನವು ಅವರ ‘ನಾದಲೀಲೆ’ ಕವನಸಂಗ್ರಹದಲ್ಲಿ ಅಡಕವಾಗಿದೆ. ಈ ಕವನಸಂಕಲನವು ೧೯೩೮ರಲ್ಲಿ ಪ್ರಕಟವಾಯಿತು. ಭಾರತದಲ್ಲಿ ಹಾಗು ಜಗತ್ತಿನಲ್ಲಿ ಇದು ಉದ್ವಿಗ್ನತೆಯ ಕಾಲ. ಯುರೋಪಿಯನ್ನರ ಶೋಷಣಾ ನೀತಿಯಿಂದಾಗಿ ಏಶಿಯಾ ಹಾಗು ಆಫ್ರಿಕಾ ಖಂಡಗಳಲ್ಲಿದ್ದ ಅವರ ವಸಾಹುತುಗಳು ನಿರ್ಜೀವ ಅಸ್ಥಿಪಂಜರಗಳಾಗಿದ್ದವು. ಭಾರತದಲ್ಲಿಯೂ ಸಹ ಉಳ್ಳವರು ಇಲ್ಲದವರನ್ನು ಕಾಲ ಕೆಳಗೆ ತುಳಿದೇ ಮೇಲೇರುತ್ತಿದ್ದರು. ಅನೇಕ ಭಾರತನಿವಾಸಿಗಳಂತೆ ಬೇಂದ್ರೆಯವರೂ ಸಹ ಈ ಅವಧಿಯಲ್ಲಿ ವೈಯಕ್ತಿಕ ಸಂಕಷ್ಟಗಳನ್ನು ಅನುಭವಿಸಿದ್ದಾರೆ. ಆದರೆ ಅವರಲ್ಲಿಯ ಕವಿ ಹೃದಯವು ತನ್ನ ಬವಣೆಯನ್ನಷ್ಟೇ ನೋಡದೆ, ಈ ಸಂಕಟಕಾಲದ ಸಾರ್ವತ್ರಿಕತೆಯನ್ನು ಗ್ರಹಿಸಿಕೊಳ್ಳುತ್ತದೆ. ಈ ಅನುಭೂತಿಯ ಫಲವೇ ‘ಮನುವಿನ ಮಕ್ಕಳು’.

ಬ್ರಹ್ಮನಿರ್ಮಿತ ಸೃಷ್ಟಿಯಲ್ಲಿ ಸ್ವಾಯಂಭೂ ಮನು ಹಾಗು ಶತರೂಪಾ ಇವರು ಮೊದಲ ದಂಪತಿಗಳು. ಇವರಿಂದಲೇ ಪ್ರಜೆಗಳ ಉತ್ಪತ್ತಿಯಾಗಿದೆ. ಮನುವಿನ ಮಕ್ಕಳು ಮನುಜರು ಅಥವಾ ಮಾನವರು.
ನಿಸರ್ಗ-ಚೈತನ್ಯಗಳಾದ ಗಾಳಿ,ಬೆಳಕು ಹಾಗು ನೀರು ಇವೆಲ್ಲ ಜೀವಪೋಷಣೆಯಲ್ಲಿ ತೊಡಗಿವೆ. ಆದುದರಿಂದಲೆ ಇವು ದೇವತೆಗಳು. ಗಾಳಿಯು ವಾಯುದೇವನಾದರೆ, ನೀರು ಜಲದೇವಿ. ಬೆಳಕು ಕೊಡುವ ಸೂರ್ಯನೂ ಸಹ ದೇವನೇ.

ನಿಸರ್ಗ ಹಾಗು ಸಸ್ಯಸಂಕುಲದಲ್ಲಿ ಸಾಮರಸ್ಯವಿದೆ. ಆದರೆ ಪ್ರಾಣಿಸಂಕುಲದಲ್ಲಿ ಶ್ರೇಣೀಕೃತ ಭಕ್ಷಣೆಯೇ ವಾಡಿಕೆಯಾಗಿದೆ. ಪುರಾಣಕಾಲದಲ್ಲಿಯ ಭಾರತದ ಚಕ್ರವರ್ತಿಗಳಾದ ಶಿಬಿ, ದಿಲೀಪ ಹಾಗು ಸಂವೇದನಾಶೀಲ ವ್ಯಕ್ತಿಯಾದ ಜೀಮೂತವಾಹನರು ಈ ಭಕ್ಷಣೆಯನ್ನು ತಪ್ಪಿಸಲು ವೈಯಕ್ತಿಕ ಬಲಿದಾನಕ್ಕೂ ಸಹ ಮುಂದಾಗುತ್ತಿದ್ದರು. ಇಂತಹ ಪರಂಪರೆಯ ಭಾರತದಲ್ಲಿ  ಕಾಲಗತಿಯಿಂದಾಗಿ ವರ್ತಮಾನ ಪರಿಸ್ಥಿತಿಯು ವಿಪರ್ಯಸ್ತವಾಗಿದೆ.

 ‘ಮನುವಿನ ಮಕ್ಕಳು’ ಕವನದ ಪೂರ್ತಿಪಾಠ ಹೀಗಿದೆ:

ಗಾಳಿಯು ಸುಳಿ ಸುಳಿ ಸೂಸುವದು
               ಬಿಮ್ಮನೆ ಬೀಸುವದು.
     ಪ್ರಾಣತರಂಗಿಣಿ ತುಳುಕುವಳು
              ದಡಗಳ ದುಡುಕುವಳು.
ಹೂಗಂಪಿನ ಹುಡಿ ಮಿಸುಕುವದು
            ಗಮಗಮ ಮಸುಕುವದು.

ಬಾಳಿನ ಕೊಳಲುಲಿ ಕೇಳುವವರೆಗೂ
                    ಕೇಳಲು ಕಿವಿಯಿಲ್ಲ.
ಬೆಳುದಿಂಗಳು ಬಿಸಿಲಾಡಿದರೇನು—
                      ನಾಲಿಗೆ ಸವಿಯಿಲ್ಲ.
ಜಗವು ಕಲ್ಲಿಗೂ ಕಡೆಗಾಗಿರುವದು
                       ಜೀವವು ಕವಿಯಲ್ಲ.

ಪಾರಿವಾಳಗಳ ಮೈಜೋಡು
                                          ಗಿಡುಗದ ಮುಖಕೀಡು.
ಆವಿಗೆ ದಿನದಿನವೂ ಕುತ್ತು
                                         ಸಿಂಹಕೆ ಸವಿತುತ್ತು.
ಮಲಸಂಬಂಧದ ಭಾಗಾದಿ
                                    ಹದ್ದಿಗೆ ಹಳೆಹಾದಿ.

ಶಿಬಿ ದಿಲೀಪ ಜೀಮೂತವಾಹನರು
                                    ಮಣ್ಣನು ಮುಕ್ಕಿದರು.
ಸ್ವರ್ಗದೊಳಿದ್ದೂ ಸಂಶಯ ಬಂದಿತು
                             ಕಣ್ಗಳು ತಿಕ್ಕಿದರು.
ತಮ್ಮ ನಾಡಿನಲಿ ನಡೆದಿಹ ಲೀಲೆಯ
                               ನೋಡುತ ಬಿಕ್ಕಿದರು.

ದುಡಿವರ ಉಸಿರಿಗೆ ದಣಿವಿಲ್ಲ
                        ಕೊನೆಗೂ ತಣಿವಿಲ್ಲ.
ಕೂಸುಗಳಾಟಕೆ ಕಳೆಯಿಲ್ಲ
                         ಭೂಮಿಗೆ ಬೆಳೆಯಿಲ್ಲ.
ಹೆಣ್ಣಿನ ಕಂಬನಿ ತೊಡೆದಿಲ್ಲ
                         ಗಂಡಿಗೆ ಬಿಡುವಿಲ್ಲ.
                       
ಹಸಿವಿನ ಕೂಗಿನ ಕಹಳೆಯ ಕೇಳಿ
                         ಜೀವವು ನಡುಗುವದು.
   ಸಾವಿನ ಎದೆಗಳ ಭೇರಿಗೆ ಎತ್ತೋ
                           ಓಡಲು ತೊಡಗುವದು.
     ಮನುವಿನ ಮಕ್ಕಳ ಬೇಟೆಯ ಕಂಡು
                                    ತನ್ನೊಳಗಡಗುವದು.

ಧರ್ಮಕೆ ‘ಧರ್ಮs’ ಎನಬೇಡಾ
                        ಕರ್ಮವು ಇದು ನೋಡಾ;
ಹಗರಣದೊಳಗಿನ ಸೋಗುಗಳು
                        ಅವುಗಳ ಕೂಗುಗಳು.
ಜೀವದೇವನೇ ಮೈವೆತ್ತು
                        ನೀನೇ ತಲೆಯೆತ್ತು.

ವೇದಾಂತಿಯ ಮುಖಮುದ್ರೆಯ ನೋಡಿ
                        ಕನಿಕರ ಹುಟ್ಟುವದು.
ಹತ್ತವತಾರದ ಹೇಡಿತನಕ್ಕೆ
                                    ಮನ ಗೊಣಗುಟ್ಟುವದು.
ಗಾಳಿಗೆ ಗಾಳಿಯು ಬಯಲಿಗೆ ಬಯಲು
                                    ತಲೆ ರಣಗುಟ್ಟುವದು.



ಕವನದ ಮೊದಲ ನುಡಿ:
ಗಾಳಿಯು ಸುಳಿ ಸುಳಿ ಸೂಸುವದು
               ಬಿಮ್ಮನೆ ಬೀಸುವದು.
     ಪ್ರಾಣತರಂಗಿಣಿ ತುಳುಕುವಳು
              ದಡಗಳ ದುಡುಕುವಳು.
ಹೂಗಂಪಿನ ಹುಡಿ ಮಿಸುಕುವದು
            ಗಮಗಮ ಮಸುಕುವದು.

ಗಾಳಿ ಹಾಗು ನೀರು ಇವು ಸಕಲ ಜೀವಿಗಳಿಗೆ ಅವಶ್ಯವಾದಂತಹ ನಿಸರ್ಗದ ಮೂಲ ಚೈತನ್ಯಗಳು. ಇವು ಸೃಷ್ಟಿಯಲ್ಲಿಯ ಜೀವಿಗಳನ್ನು ಪೋಷಿಸುತ್ತವೆ. ಗಾಳಿ ಹಾಗು ನೀರು ಇಲ್ಲದೆ ಯಾವ ಜೀವಿಯೂ ಬದುಕಲಾರದು. ಈ ನುಡಿಯ ಮೊದಲ ನಾಲ್ಕು ಸಾಲುಗಳಲ್ಲಿ ಕವಿಯು ಈ ಚೈತನ್ಯಗಳ ಸ್ವಭಾವವನ್ನು ಬಣ್ಣಿಸುತ್ತಾನೆ:

ಗಾಳಿಯು ಒಮ್ಮೊಮ್ಮೆ ಮೆಲ್ಲಗೆ ಸುಳಿಸುಳಿಯಾಗಿ ಸೂಸುತ್ತದೆ, ಮತ್ತೊಮ್ಮೆ ಬಿಮ್ಮನೆ(=ತೀವ್ರವಾಗಿ) ಬೀಸುತ್ತದೆ. ಈ ಎರಡೂ ಕ್ರಿಯೆಗಳು ಜೀವಿಗಳಿಗೆ ಉಲ್ಲಾಸ ನೀಡುವ ಕ್ರಿಯೆಗಳೇ ಆಗಿವೆ. ಗಾಳಿಯಂತೆಯೆ ನಿಸರ್ಗದ ಮತ್ತೊಂದು ಮೂಲ ಚೈತನ್ಯವಾದ ನೀರನ್ನು ಕವಿಯು ಪ್ರಾಣತರಂಗಿಣಿ ಎಂದು  ಬಣ್ಣಿಸುತ್ತಾನೆ. ತರಂಗಿಣಿ ಎಂದರೆ ತರಂಗಗಳು (=ಅಲೆಗಳು) ಇದ್ದಂಥವಳು ಅರ್ಥಾತ್ ನದಿ. ಈ ತರಂಗಗಳು ಅಂದರೆ ತೆರೆಗಳು ಸಕಲ ಪ್ರಾಣಿಗಳಿಗೆ ಜೀವಾಧಾರವಾಗಿವೆ. ಆದುದರಿಂದ ನದಿಯು ಪ್ರಾಣತರಂಗಿಣಿ. ಈ ವಾತ್ಸಲ್ಯಮಯಿ ನದಿಯು ಅರೆಬರೆಯಾಗಿ ಹರಿಯುತ್ತಿಲ್ಲ. ಅವಳು ಸಕಲ ಜೀವಿಗಳಿಗೆ ತನ್ನ ಪೋಷಣೆಯನ್ನು ಧಾರಾಳವಾಗಿ ಹಂಚಲು ತುಳುಕುತ್ತ ಧಾವಿಸುತ್ತಾಳೆ. ಈ ಆತುರದಲ್ಲಿ ನದಿಯು ತನ್ನ ದಡಗಳನ್ನು ಉಕ್ಕಿ ಹರಿಯುತ್ತಾಳೆ. ತಾಯಿಗೆ ಮಾತ್ರ ಸಹಜವಾದ ಈ ಸಂಭ್ರಮವನ್ನು ಸೂಚಿಸಲು ಕವಿಯು ಇವಳಿಗೆ ‘ದಡಗಳ ದುಡುಕುವಳು’ ಎಂದು ಬಣ್ಣಿಸುತ್ತಾನೆ. ಹಸುಗೂಸಿಗೆ ಮೊಲೆಯೂಡಿಸಲು ತಾಯಿ ಕಾತುರಳಾಗಿ ಬರುವಂತೆ, ನದಿಯೂ ಸಹ ‘ದಂಡೆಗಳನ್ನು ದುಡುಕುತ್ತಾಳೆ’.

ನಿಸರ್ಗದ ಈ ಚೈತನ್ಯಗಳಾದ ಗಾಳಿ ಹಾಗು ನೀರನ್ನು ಹೀರಿಕೊಂಡು ಬೆಳೆಯುವ ಸಸ್ಯಗಳು ಸುತ್ತಲೆಲ್ಲ ಸುಗಂಧವನ್ನು ಪಸರಿಸುತ್ತವೆ. ಹೂಗಂಪಿನ ಹುಡಿ (ಎಂದರೆ ಹೂವಿನ ಸುವಾಸನೆಯನ್ನು ಹೊತ್ತುಕೊಂಡಂತಹ ಪರಾಗರೇಣುಗಳು) ಎಲ್ಲೆಲ್ಲೂ ಹರಡಿಕೊಂಡು, ವಾತಾವರಣವನ್ನು ಸುಗಂಧಮಯವನ್ನಾಗಿ ಮಾಡುತ್ತವೆ.

ಗಾಳಿಯನ್ನು ವಾಯುದೇವ ಎಂದು ಕರೆಯುವ ವಾಡಿಕೆಯಿದೆ. ಆದುದರಿಂದ ಗಾಳಿ ಪುರುಷರೂಪಿ. ನದಿಯು ಜಲದೇವಿ, ಅಂದರೆ ಸ್ತ್ರೀರೂಪಿಣಿ. ಇವರು ಜಗತ್ತನ್ನು ಪೋಷಿಸುವದರಿಂದ, ಜಗದ ತಂದೆ-ತಾಯಿ ಇದ್ದಂತೆ. ಇವರ ಪೋಷಣೆಯನ್ನು ಪಡೆದ ಸಸ್ಯಸಂಕುಲವು ಇವರ ಸಂತತಿಯಿದ್ದಂತೆ. ಆದುದರಿಂದ ನಿಸರ್ಗದ ಚೈತನ್ಯಗಳಿಗೆ ಹಾಗು ನಿಸರ್ಗದಲ್ಲಿಯ ಸಸ್ಯಸಂಕುಲಕ್ಕೆ ಸಾಮರಸ್ಯವಿದೆ.
ಈ ಸಾಮರಸ್ಯವು ಪ್ರಾಣಿಸಂಕುಲದಲ್ಲಿ ಇಲ್ಲ ಎನ್ನುವದನ್ನು ಬೇಂದ್ರೆಯವರು ಮುಂದಿನ ನುಡಿಗಳಲ್ಲಿ ಹೇಳುತ್ತಾರೆ:

ಬಾಳಿನ ಕೊಳಲುಲಿ ಕೇಳುವ ವರೆಗೂ
                    ಕೇಳಲು ಕಿವಿಯಿಲ್ಲ.
ಬೆಳುದಿಂಗಳು ಬಿಸಿಲಾಡಿದರೇನು—
                      ನಾಲಿಗೆ ಸವಿಯಿಲ್ಲ.
ಜಗವು ಕಲ್ಲಿಗೂ ಕಡೆಗಾಗಿರುವದು
                       ಜೀವವು ಕವಿಯಲ್ಲ.

ಬಾಳಿನ ಕೊಳಲು ಎಂದರೆ ಬದುಕಿನಲ್ಲಿಯ ಸಾಮರಸ್ಯ. (ಕೃಷ್ಣ ಪರಮಾತ್ಮನ ಕೊಳಲಿಗೆ ಇಲ್ಲಿ ಸಾಮ್ಯವಿದೆ.) ಈ ಕೊಳಲ ಧ್ವನಿಯನ್ನು ಕೇಳುವ ಒಲವು ಇಲ್ಲದಿದ್ದಾಗ, ಕಿವಿಯು ಇದ್ದರೂ ಇಲ್ಲದಂತೆ. ಸಕಲ ಜೀವಿಗಳಿಗೆ ಸುಖವನ್ನು ನೀಡುವ ಬೆಳದಿಂಗಳು ನಿಸರ್ಗದ ಆಪ್ಯಾಯಮಾನತೆಗೆ ಒಂದು ಉದಾಹರಣೆ. ನಾಲಿಗೆಯು ಸಂವೇದನೆಯನ್ನು ಕಳೆದುಕೊಂಡಾಗ ಎಂತಹ ತೀವ್ರ ರುಚಿಯನ್ನೂ ಅದು ಅರಿಯಲಾರದು. ಅದರಂತೆಯೇ ಸಂವೇದನಾಶಕ್ತಿ ಇಲ್ಲದ ಜೀವಿಗೆ ನಿಸರ್ಗದ ಈ ಸುಖದಾಯಿ ಬೆಳದಿಂಗಳು ನಿಷ್ಪ್ರಯೋಜಕ. ಬೆಳದಿಂಗಳೇ ಆಗಲಿ, ಬಿಸಿಲೇ ಆಗಲಿ ಅದರಿಂದ ಏನೂ ವ್ಯತ್ಯಾಸವಾಗದು. ಕವಿ ಎಂದರೆ ಸಂವೇದನಾಶೀಲ ಜೀವಿ. ‘ಜೀವಿಯು ಕವಿಯಲ್ಲ’ ಅಂದರೆ ಅವನು ಸಂವೇದನಾಶೂನ್ಯನಾಗಿದ್ದಾನೆ ಎಂದರ್ಥ. ಕೊಳಲ ನಾದವನ್ನು ಕೇಳಲಾರದ, ಬೆಳದಿಂಗಳಲ್ಲಿ ಸುಖಿಸಲಾರದ ಇಂತಹ ಜೀವಿಯ ಪಾಲಿಗೆ ಈ ಜಗತ್ತು ನಿರ್ಜೀವವಾದ ಕಲ್ಲಿನಂತೆಯೇ ಸರಿ.

ಈ ಸಂವೇದನಾಶೂನ್ಯ ಪ್ರಾಣಿಸಂಕುಲದಲ್ಲಿ ಶ್ರೇಣೀಕೃತ ಶೋಷಣೆ ಇದೆ. ಗಿಡುಗವು ಪಾರಿವಾಳಗಳನ್ನು ಬೇಟೆಯಾಡುತ್ತಿದೆ. ಗೋವು ಸಿಂಹಕ್ಕೆ ಸಿಹಿತುತ್ತಾಗಿದೆ. ಹದ್ದಿನ ಭಾಗಾದಿ ಎಂದರೆ ಹಾವು. ಅದು ಹದ್ದಿನ ಊಟವಾಗಿದೆ:

ಪಾರಿವಾಳಗಳ ಮೈಜೋಡು
                                          ಗಿಡುಗದ ಮುಖಕೀಡು.
ಆವಿಗೆ ದಿನದಿನವೂ ಕುತ್ತು
                                         ಸಿಂಹಕೆ ಸವಿತುತ್ತು.
ಮಲಸಂಬಂಧದ ಭಾಗಾದಿ
                                    ಹದ್ದಿಗೆ ಹಳೆಹಾದಿ.

ಬೇಂದ್ರೆಯವರು ಇಲ್ಲಿ ಕೊಟ್ಟ ಮೂರೂ ಉದಾಹರಣೆಗಳು ಮೂರು ಪುರಾಣಕತೆಗಳನ್ನು ಅವಲಂಬಿಸಿವೆ.  ಮೊದಲನೆಯ ಕತೆ ಹೀಗಿದೆ. ಪುರಾಣಕಾಲದಲ್ಲಿ ಭಾರತದೇಶವನ್ನಾಳಿದ ಚಕ್ರವರ್ತಿಗಳಲ್ಲಿ ಶಿಬಿಯು ತನ್ನ ನ್ಯಾಯತತ್ಪರತೆಗೆ ಹೆಸರಾದವನು. ಒಮ್ಮೆ ಆತನ ಆಸ್ಥಾನಕ್ಕೆ ಪಾರಿವಾಳಗಳ ಜೋಡೊಂದು ಹಾರಿ ಬರುತ್ತದೆ ಹಾಗು ಆ ಪಾರಿವಾಳಗಳು ಶಿಬಿಯಲ್ಲಿ ರಕ್ಷಣೆಯನ್ನು ಕೋರುತ್ತವೆ. ಅದೇ ಸಮಯದಲ್ಲಿ ಅವುಗಳನ್ನು ಅಟ್ಟಿಸಿಕೊಂಡು ಒಂದು ಗಿಡುಗವು ಅಲ್ಲಿಗೆ ಬರುತ್ತದೆ. ಪಾರಿವಾಳಗಳು ತನ್ನ ಆಹಾರವಾಗಿದ್ದರಿಂದ ಅವುಗಳನ್ನು ತನಗೆ ಒಪ್ಪಿಸಬೇಕೆಂದು ಗಿಡುಗವು ನ್ಯಾಯ ಕೇಳುತ್ತದೆ. ಶಿಬಿಗೆ ಇದೊಂದು ಧರ್ಮಸಂಕಟ. ಆಗ ಆತನು ತನ್ನ ಮಾಂಸವನ್ನೇ ಗಿಡುಗಕ್ಕೆ ನೀಡಿ, ಪಾರಿವಾಳಗಳನ್ನು ರಕ್ಷಿಸುವ ನಿರ್ಧಾರ ಕೈಗೊಳ್ಳುತ್ತಾನೆ. ಪಕ್ಷಿವೇಷದಲ್ಲಿದ್ದ ದೇವತೆಗಳು ನಿಜರೂಪ ತಾಳಿ ಶಿಬಿಯನ್ನು ಶ್ಲಾಘಿಸುತ್ತಾರೆ.

ಎರಡನೆಯ ಕತೆಯು ರಘುವಂಶದ ಪ್ರಸಿದ್ಧ ಚಕ್ರವರ್ತಿಯಾದ ದಿಲೀಪನಿಗೆ ಸಂಬಂಧಿಸಿದ ಕತೆ. ದಿಲೀಪನಿಗೆ ಮಕ್ಕಳಿರಲಿಲ್ಲ. ಕಾಮಧೇನುವಿನ ಮಗಳಾದ ಸುರಭಿಯ ಸೇವೆಯನ್ನು ಮಾಡಿದರೆ ಮಕ್ಕಳಾಗುವರು ಎಂದು ಋಷಿಗಳು ಆತನಿಗೆ ಹೇಳುತ್ತಾರೆ. ದಿಲೀಪನು ಅಡವಿಯಲ್ಲಿ ಒಂದು ಆಶ್ರಮವನ್ನು ಕಟ್ಟಿಕೊಂಡು ಸುರಭಿಯ ಸೇವಾಕೈಂಕರ್ಯವನ್ನು ನಿಷ್ಠೆಯಿಂದ ಕೈಕೊಳ್ಳುತ್ತಾನೆ.

ಸುರಭಿಯನ್ನು ಒಮ್ಮೆ ಹುಲ್ಲು ಮೇಯಿಸಲೆಂದು ಕರೆದುಕೊಂಡು ಹೋದಾಗ, ಸಿಂಹವೊಂದು ಸುರಭಿಯನ್ನು ಅಡ್ಡಗಟ್ಟಿ ತಿನ್ನಲು ಸಿದ್ಧವಾಗುತ್ತದೆ. ದಿಲೀಪನು ಸಿಂಹಕ್ಕೆ ತನ್ನನ್ನೇ ಬಲಿ ಕೊಟ್ಟು ಸುರಭಿಯನ್ನು ಉಳಿಸಲು ಸಿದ್ಧನಾಗುತ್ತಾನೆ. ಆ ಸಿಂಹವು ಕೇವಲ ಮಾಯಾಸಿಂಹವಾಗಿದ್ದು, ದೇವತೆಗಳು ದಿಲೀಪನ ನಿಷ್ಠೆಯನ್ನು ಮೆಚ್ಚಿಕೊಳ್ಳುತ್ತಾರೆ.

ಮೂರನೆಯ ಕತೆಯು ಗರುಡ ಹಾಗು ಸರ್ಪಗಳ ವೈರಕ್ಕೆ ಸಂಬಂಧಿಸಿದ ಕತೆಯಾಗಿದೆ. ಗರುಡ ಹಾಗು ನಾಗರು ಒಂದೇ ತಂದೆಯ ಇಬ್ಬರು ಹೆಂಡಂದಿರಲ್ಲಿ ಹುಟ್ಟಿದವರು. ಮಲತಾಯಿ ಮಕ್ಕಳಾದ ಇವರನ್ನು  ಕವಿಯು ‘ಮಲಸಂಬಂಧದ ಭಾಗಾದಿ’ ಎಂದು ಬಣ್ಣಿಸುತ್ತಾರೆ. (ಭಾಗಾದಿ ಎಂದರೆ ಆಸ್ತಿಯಲ್ಲಿ ಭಾಗ ಪಡೆಯುವ ಹಕ್ಕನ್ನು ಹೊಂದಿದವನು.) ಹೀಗಾಗಿ ಇವರಲ್ಲಿ ಜಾತವೈರವಿರುತ್ತದೆ. ಗರುಡನು ನಾಗರಿಗಿಂತ ಬಲಿಷ್ಠನಾಗಿದ್ದರಿಂದ, ನಾಗರ ಪ್ರದೇಶದಲ್ಲಿ ಹೊಕ್ಕು, ಕಂಡಕಂಡ ನಾಗರನ್ನೆಲ್ಲ ಕುಕ್ಕಿ ತಿನ್ನಲು ಪ್ರಾರಂಭಿಸುತ್ತಾನೆ. ಆಗ ನಾಗರೆಲ್ಲರೂ ಗರುಡನೊಡನೆ ಒಂದು ಒಪ್ಪಂದವನ್ನು ಮಾಡಿಕೊಳ್ಳುತ್ತಾರೆ. ಒಪ್ಪಂದದ ಮೇರೆಗೆ ಪ್ರತಿದಿನವೂ ಸರದಿಯ ಪ್ರಕಾರ ಒಬ್ಬ ನಾಗನು ಗರುಡನಿಗೆ ಬಲಿಯಾಗಬೇಕು.

ಜೀಮೂತವಾಹನ ಎನ್ನುವ ವಿದ್ಯಾಧರನು ಅಕಸ್ಮಾತ್ತಾಗಿ ಬಲಿಗೆ ಸಿದ್ಧನಾದ ಓರ್ವ ನಾಗನನ್ನು ನೋಡುತ್ತಾನೆ. ರೋದಿಸುತ್ತಿರುವ ಅವನ ತಾಯಿಯನ್ನು ನೋಡಿ, ಮರುಕಗೊಂಡ ಜೀಮೂತವಾಹನನು ನಾಗನನ್ನು ಕಳುಹಿಸಿಬಿಟ್ಟು ತಾನೇ ಬಲಿವೇಷದಲ್ಲಿ ಅಲ್ಲಿ ನಿಂತುಕೊಳ್ಳುತ್ತಾನೆ. ಜೀಮೂತವಾಹನನನ್ನೇ ನಾಗನೆಂದು ಭಾವಿಸಿದ ಗರುಡನು ಅವನನ್ನು ಕುಕ್ಕಿ ತಿನ್ನುವಾಗ, ಈತನು ನಾಗನಲ್ಲ ಎಂದು ಅರಿಯುತ್ತಾನೆ. ಜೀಮೂತವಾಹನನನ್ನು ಬಿಡುಗಡೆ ಮಾಡಿದ ಗರುಡನು ನಾಗರ ಹತ್ಯೆಯನ್ನು ನಿಲ್ಲಿಸಿ ಬಿಡುತ್ತಾನೆ.

ಈ ಮೂರೂ ಪುರಾಣಕತೆಗಳಲ್ಲಿ ಒಂದು ಸಂದೇಶವಿದೆ. ಬಲಿಷ್ಠ ಜೀವಿಯು ದುರ್ಬಲ ಜೀವಿಯನ್ನು ಭಕ್ಷಿಸುವದು ಪ್ರಾಣಿಸಂಕುಲದ ವ್ಯವಸ್ಥೆಯಾಗಿದೆ. ಮಾನವೀಯ ಸಂವೇದನೆಯುಳ್ಳ ಶಿಬಿ , ದಿಲೀಪ ಹಾಗು ಜೀಮೂತವಾಹನರು  ಸ್ವಂತ ಬಲಿದಾನದ ಮೂಲಕ ಈ ಶೋಷಣೆಯನ್ನು ತಪ್ಪಿಸಲು ಪ್ರಯತ್ನಿಸಿದರು. ಅದೇ ಪ್ರಕಾರ ಮಾನವ ಜಗತ್ತಿನಲ್ಲಿಯೂ ಸಹ ಶೋಷಣೆ ನಡದೇ ಇದೆ. ಬಲಿಷ್ಠರು ದುರ್ಬಲರನ್ನು ಶೋಷಿಸುವ ಸಾಮಾಜಿಕ ಶೋಷಣೆ ನಿರಂತರವಾಗಿದೆ.  ಇದನ್ನು ತಡೆಗಟ್ಟುವ ಶಿಬಿ, ದಿಲೀಪ ಹಾಗು ಜೀಮೂತವಾಹನರು ಮಾತ್ರ ಈಗ ಇಲ್ಲಿಲ್ಲ! ಈ ಆದರ್ಶವು ನಮ್ಮ ನಾಡಿನಲ್ಲಿ ಈಗ ಮಾಯವಾಗಿದೆ.
ಈ ಆಲೋಚನೆಯು ಕವನದ ಕೊನೆಯ ನುಡಿಯಲ್ಲಿ ವ್ಯಕ್ತವಾಗಿದೆ:

ಶಿಬಿ ದಿಲೀಪ ಜೀಮೂತವಾಹನರು
                                    ಮಣ್ಣನು ಮುಕ್ಕಿದರು.
ಸ್ವರ್ಗದೊಳಿದ್ದೂ ಸಂಶಯ ಬಂದಿತು
                             ಕಣ್ಗಳು ತಿಕ್ಕಿದರು.
ತಮ್ಮ ನಾಡಿನಲಿ ನಡೆದಿಹ ಲೀಲೆಯ
                               ನೋಡುತ ಬಿಕ್ಕಿದರು.

ಶಿಬಿ, ದಿಲೀಪ ಹಾಗು ಜೀಮೂತವಾಹನರು ಭಾರತೀಯ ಆದರ್ಶದ ಶಿಖರಗಳು. ಈ ಆದರ್ಶಗಳು ನಮ್ಮ ನಾಡಿನಲ್ಲಿ ಈಗ ಮಾಯವಾಗಿವೆ. ‘ಮಣ್ಣನು ಮುಕ್ಕಿದರು’ ಎಂದು ಹೇಳುವಾಗ ಈ ಆದರ್ಶಪುರುಷರು ಮರಣಹೊಂದಿದರು ಎಂದು ಹೇಳುತ್ತಲೇ, ಅವರ ಆದರ್ಶಗಳೂ ಸಹ ಮಣ್ಣು ಮುಕ್ಕಿದವು ಎಂದು ಕವಿಯು ಶ್ಲೇಷೆಯನ್ನು ಸೂಚಿಸುತ್ತಾನೆ. ಸ್ವರ್ಗಸ್ಥರಾದ ಅವರು ತಮ್ಮ ನಾಡಿನ ದುರವಸ್ಥೆಯನ್ನು ನೋಡಿದಾಗ, ‘ಇದು ನಿಜವೇ?!’ ಎಂದು ಕಣ್ಣುಗಳನ್ನು ವಿಸ್ಮಯದಿಂದ ತಿಕ್ಕಿಕೊಳ್ಳುತ್ತಾರೆ! ಮತ್ತು ತಮ್ಮ ನಾಡಿನ ನೈತಿಕ, ಸಾಂಸ್ಕೃತಿಕ ದುರವಸ್ಥೆಯನ್ನು ಕಂಡು ವ್ಯಥೆಯಿಂದ ಬಿಕ್ಕುತ್ತಿದ್ದಾರೆ ಎಂದು ಕವಿಯು ಹೇಳುತ್ತಾನೆ. ಇಂತಹ ವ್ಯವಸ್ಥೆ ಬದಲಾದೀತೆನ್ನುವ ಆಶಾಭಾವವನ್ನು ಕವನದ ಕೊನೆಯಲ್ಲಿ ಕವಿಯು ತೋರಿಸುವದಿಲ್ಲ. ಅನಾದಿ ಕಾಲದಿಂದ ನಡೆದು ಬಂದ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯವಿಲ್ಲ ಎನ್ನುವ ಅರಿವು ಕವಿಗಿದೆ.

ಶಿಬಿ ಮೊದಲಾದ ನಮ್ಮ ಪೂರ್ವಜರು ಪುಣ್ಯವಂತರು . ಅವರು ಸ್ವರ್ಗವಾಸಿಗಳು. ಆದರೆ ಅಲ್ಲಿಯೂ ಅವರು ಕಣ್ಣೀರಿಡುವಂತಹ ಯಾವ ಆಟವನ್ನು ಅವರು ಭಾರತದಲ್ಲಿ ನೋಡುತ್ತಲಿದ್ದಾರೆ ಎನ್ನುವದನ್ನು ಕವಿ ಮುಂದಿನ ನುಡಿಯಲ್ಲಿ ಹೇಳುತ್ತಾರೆ:

ದುಡಿವರ ಉಸಿರಿಗೆ ದಣಿವಿಲ್ಲ
                        ಕೊನೆಗೂ ತಣಿವಿಲ್ಲ.
ಕೂಸುಗಳಾಟಕೆ ಕಳೆಯಿಲ್ಲ
                         ಭೂಮಿಗೆ ಬೆಳೆಯಿಲ್ಲ.
ಹೆಣ್ಣಿನ ಕಂಬನಿ ತೊಡೆದಿಲ್ಲ
                                                                                ಗಂಡಿಗೆ ಬಿಡುವಿಲ್ಲ
 ಶೋಷಣಾಜಾಲದಲ್ಲಿ ಸಿಲುಕಿದ ಶ್ರಮಿಕರು ದಣಿವೆನ್ನದೇ ದುಡಿಯುತ್ತಲೆ ಇದ್ದಾರೆ. ಆದರೆ ಕೊನೆಗೂ ಇವರ ದುಡಿತಕ್ಕೆ ‘ತಣಿವು’ ಅಂದರೆ ತೃಪ್ತಿ ಸಿಗುತ್ತಿಲ್ಲ. ದುಡಿದವನಿಗೆ ತೃಪ್ತಿ ಸಿಗುವದು ಯಾವಾಗ? ತನ್ನ ಸಂಸಾರದ ಪ್ರಾಥಮಿಕ ಅವಶ್ಯಕತೆಗಳನ್ನಾದರೂ ಪೂರೈಸಲು ಅವನಿಗೆ ಶಕ್ಯವಾದಾಗ ತಾನೆ? ತನ್ನ ಹೆಂಡತಿ, ಮಕ್ಕಳಿಗೆ ಅರೆಹೊಟ್ಟೆ ಊಟ ಹಾಕಲೂ ಸಹ ಅವನಿಗೆ ಸಾಧ್ಯವಾಗದಿದ್ದರೆ? ಆ ಸಮಯದಲ್ಲಿ ಆಟವಾಡುವ ಮಕ್ಕಳೂ ಸಹ ಕಳಾಹೀನ ಮುಖ ಹೊತ್ತುಕೊಂಡು ನಿಲ್ಲುವರು. ಅದನ್ನು ನೋಡುತ್ತಿರುವ ತಾಯಿ ಕಣ್ಣೀರು ಹಾಕದಿರುವಳೆ? ಆದರೇನು, ಅಸರಂತ ದುಡಿಮೆಯ ಚಕ್ರದಲ್ಲಿ ಸಿಲುಕಿದ ಗಂಡಿಗೆ ತನ್ನ ಹೆಂಡತಿಯ ಕಣ್ಣೀರು ಒರೆಸಲೂ ಸಹ ಸಮಯವಿಲ್ಲ! ಆ ಕಾಲದ ನಮ್ಮ ನಾಡಿನ ಬಹುತೇಕ ಸಂಸಾರಗಳ ಬವಣೆಯನ್ನು ಕವಿ ಮೇಲಿನಂತೆ ಚಿತ್ರಿಸಿದ್ದಾರೆ.

ತನ್ನ ಸಂಸಾರದ ಸಂಕಷ್ಟವನ್ನು ಪರಿಹರಿಸಲಾಗದೆ, ಅಸಹಾಯಕತೆಯಿಂದ ಬಳಲುವವನ ಮನೋಸ್ಥಿತಿ ಹೇಗಿರುತ್ತದೆ? ಅದನ್ನು ಕವಿಯು ಹೀಗೆ ಬಣ್ಣಿಸುತ್ತಾನೆ:

ಹಸಿವಿನ ಕೂಗಿನ ಕಹಳೆಯ ಕೇಳಿ
                         ಜೀವವು ನಡುಗುವದು.
   ಸಾವಿನ ಎದೆಗಳ ಭೇರಿಗೆ ಎತ್ತೋ
                           ಓಡಲು ತೊಡಗುವದು.
     ಮನುವಿನ ಮಕ್ಕಳ ಬೇಟೆಯ ಕಂಡು
                                    ತನ್ನೊಳಗಡಗುವದು.

ಕಹಳೆ ಮತ್ತು ಭೇರಿ ಇವು ರಣರಂಗದಲ್ಲಿ ಬಳಸುವ ವಾದ್ಯಗಳು. ಕವಿಯು ನೋಡುತ್ತಿರುವದು ಸಂಸಾರದ ರಣರಂಗ. ಇಲ್ಲಿ ಈತನು ಎದುರಿಸುತ್ತಿರುವದು ಹಸಿವು ಹಾಗು ಸಾವು ಎನ್ನುವ ವೈರಿಗಳನ್ನು. ‘ಹಸಿವು, ಹಸಿವು’ ಎನ್ನುವ ಕೂಗೇ ಇವನಿಗೆ ಕಹಳೆಯ ಧ್ವನಿಯಂತೆ ಕೇಳುತ್ತದೆ. ಹಸಿವು ಹಾಗು ರೋಗ ರುಜಿನ ಇವು ಶೋಷಿತರ ಸಾವಿನ ಸರಣಿಯನ್ನೇ ಹೆಣೆದಿವೆ. ಇವರ ಎದೆಗಳ ತೊಗಲನ್ನೇ ಭೇರಿ ಮಾಡಿ ಬಾರಿಸಲಾಗುತ್ತಿದೆ. ಆದರೆ ಈ ರಣರಂಗದಲ್ಲಿ 
ಶೋಷಿತರಿಗೆ ಹೋರಾಡುವ ಅವಕಾಶವೇ ಇಲ್ಲ. ಆದುದರಿಂದ ಇಲ್ಲಿ ನಡೆದದ್ದು ಬರಿ ಯುದ್ಧವಲ್ಲ, ಮಾನವ-ಬೇಟೆ.

ಈ ಬೇಟೆಯಲ್ಲಿ ಶೋಷಿತನು ಪ್ರತಿಕ್ರಿಯಿಸುವ ಬಗೆ ಹೇಗೆ? ಪ್ರಾಣಿಗಳ ಬೇಟೆಯನ್ನು ನೋಡಿರುವಿರಾ? ಬೇಟೆಗಾರರ ಸದ್ದಿಗೆ ಬೇಟೆಯ ಮೊದಲ ಪ್ರತಿಕ್ರಿಯೆ ಎಂದರೆ ಭಯ. ಬಳಿಕ ಈ ಪ್ರಾಣಿಯು ಬೇಟೆಗಾರರಿಂದ ತಪ್ಪಿಸಿಕೊಳ್ಳಲು ದಾರಿ ಕಂಡತ್ತ ಓಡತೊಡುಗುವದು. ಬೇಟೆಗಾರನ ಕೈಗೆ ಸಿಕ್ಕಿಬೀಳುವ ಸಂದರ್ಭ ಬಂದಾಗ ಬೇಟೆಯು ತನ್ನಲ್ಲೇ ಮುರುಟಿಕೊಳ್ಳುವದು. ಈ ಪ್ರತಿಕ್ರಿಯೆಗಳನ್ನು ಕವಿಯು ಶೋಷಿತರಿಗೂ ಅನ್ವಯಿಸಿ, ‘ಜೀವವು ನಡುಗುವದು…ಓಡಲು ತೊಡಗುವದು………ತನ್ನೊಳು ಅಡಗುವದು.’ ಎಂದು ಹೇಳಿದ್ದಾನೆ. ಆದರೆ ಇಲ್ಲಿ ನಡೆಯುತ್ತಿರುವದು ಪ್ರಾಣಿ-ಬೇಟೆಯಲ್ಲ; ಮನುವಿನ ಮಕ್ಕಳ ಬೇಟೆ, ಮಾನವ-ಬೇಟೆ.

ಇದಕ್ಕೆ ಪರಿಹಾರವೇನು? ನಮ್ಮ ಭಾರತೀಯ ತಾತ್ವಿಕತೆಯಲ್ಲಿ ಇದಕ್ಕೆ ಪರಿಹಾರವಿಲ್ಲವೆಂದು ಕವಿಯು ಸಂಕಟದಿಂದ ಹೇಳುತ್ತಾನೆ.

ಧರ್ಮಕೆ ‘ಧರ್ಮs’ ಎನಬೇಡಾ
                        ಕರ್ಮವು ಇದು ನೋಡಾ;
ಹಗರಣದೊಳಗಿನ ಸೋಗುಗಳು
                        ಅವುಗಳ ಕೂಗುಗಳು.
ಜೀವದೇವನೇ ಮೈವೆತ್ತು
                        ನೀನೇ ತಲೆಯೆತ್ತು.

ಯಾವುದಕ್ಕೆ ನಾವು ‘ಧರ್ಮಮಾರ್ಗ’ ಎಂದು ಉನ್ನತಭಾವದಲ್ಲಿ ನೋಡುತ್ತ ಬಂದಿದ್ದೇವೆಯೋ ಅದು ನಿಜವಾಗಿಯೂ ಧರ್ಮವೇ ಅಲ್ಲ.  ಈ ತಪ್ಪು ಕರ್ಮದ ಫಲವನ್ನು ನಾವೀಗ ಉಣ್ಣಬೇಕಾಗಿದೆ! ಧರ್ಮ, ನೀತಿ ಇಂತಹ ದೊಡ್ಡ ದೊಡ್ಡ ಮಾತುಗಳೆಲ್ಲ ಹಗರಣಗಳ(=ಪ್ರಕರಣಗಳ=ನಾಟಕದ) ಸೋಗುಗಳ(=ಪಾತ್ರಗಳ) ಬುಡುಬುಡಿಕೆ ಅಷ್ಟೇ! ಈ ನಾಟಕವನ್ನು ನೋಡುತ್ತ ಕೂಡಬೇಡಿರಿ ಎಂದು ಕವಿ ಕರೆ ನೀಡುತ್ತಾರೆ. ಪ್ರತಿವ್ಯಕ್ತಿಯು ತನ್ನ ಅಂತರಂಗದ ವಿವೇಚನೆಯನ್ನು ಅನುಸರಿಸಬೇಕೇ ಹೊರತು ಕುರುಡು ಧರ್ಮಶಾಸ್ತ್ರಗಳನ್ನಲ್ಲ ಎನ್ನುವದು ಕವಿಯ ಕರೆಯಾಗಿದೆ. ಈ ಕರೆಯು ಶೋಷಿತರಿಗಿಂತ ಹೆಚ್ಚಾಗಿ ಶೋಷಕರಿಗೆ ನೀಡಿದ ಕರೆಯಾಗಿದೆ. ನಮ್ಮ ನಾಡಿನವರೇ ಆದ ಶೋಷಕವರ್ಗವೂ ಸಹ ಶ್ರಮಿಕರ ಶೋಷಣೆಯಲ್ಲಿ ಹಿಂದೆ ಬಿದ್ದಿರಲಿಲ್ಲ. ಈ ಶೋಷಕರಿಗೆ ಕವಿಯು ಕೊಡುತ್ತಿರುವ ಕರೆ ಇದು: “ಧರ್ಮದ ಒಣ ಸೋಗುಗಳನ್ನು ಬಿಟ್ಟು ಬಿಡಿ, ನೀವೇ ಒಳಿತನ್ನು ಅರಿತುಕೊಂಡು ಜೀವದೇವರಾಗಿರಿ!”

ಇಲ್ಲಿಯವರೆಗೆ ಭಾರತದಲ್ಲಿ ನಡೆದ ಒಣ ವೇದಾಂತ, ಒಣ ಶಾಸ್ತ್ರಾರ್ಥಗಳು ಜೀವೋಪಕಾರಿಯಾಗಿಲ್ಲ ಎಂದು ಕವಿಯು ಬೇಸರಿಸುತ್ತಾನೆ. ಇಂತಹ ತತ್ವಜ್ಞಾನಿಗಳ ಬಗೆಗೆ ಅವನಿಗೆ ಕನಿಕರವೇ ಹುಟ್ಟುತ್ತದೆ:

ವೇದಾಂತಿಯ ಮುಖಮುದ್ರೆಯ ನೋಡಿ
                        ಕನಿಕರ ಹುಟ್ಟುವದು.
ಹತ್ತವತಾರದ ಹೇಡಿತನಕ್ಕೆ
                                    ಮನ ಗೊಣಗುಟ್ಟುವದು.
ಗಾಳಿಗೆ ಗಾಳಿಯು ಬಯಲಿಗೆ ಬಯಲು
                                    ತಲೆ ರಣಗುಟ್ಟುವದು.

‘ಧರ್ಮವನ್ನು ಸ್ಥಾಪಿಸಲು ಪುನ: ಪುನ: ಹುಟ್ಟುತ್ತೇನೆ’ ಎನ್ನುವ ಭರವಸೆ ನೀಡಿದ ದೇವರ ಹತ್ತು ಅವತಾರಗಳು ಧರ್ಮವನ್ನು ಸ್ಥಾಪಿಸಿದವೆ? ಶೋಷಣೆಯಿಂದ ಮಾನವನನ್ನು ಪಾರು ಮಾಡಿದವೆ? ಇದನ್ನು ಸಾಧ್ಯ ಮಾಡಲಾರದ ಈ ದಶಾವತಾರಗಳು ಹೇಡಿ ಅವತಾರಗಳು ಎಂದು ಕವಿಯು ತನ್ನಲ್ಲಿ ತಾನೇ ಗೊಣಗಿಕೊಳ್ಳುತ್ತಾನೆ. ಯಾಕೆಂದರೆ, ಈ ಮಾತನ್ನು ಉದ್ಘೋಷಿಸಿ ಕ್ರಾಂತಿಯನ್ನು ಮಾಡೇನು ಎನ್ನುವ ವಿಶ್ವಾಸ ಆತನಲ್ಲಿ ಇಲ್ಲ. ಗಾಳಿಗೆ ಗಾಳಿ ಡಿಕ್ಕಿ ಹೊಡೆದರೆ ಅಥವಾ ಬಯಲಿಗೆ ಬಯಲು ಡಿಕ್ಕಿ ಹೊಡೆದರೆ, ವಾಸ್ತವ ಬದುಕು ಬದಲಾಗುವದಿಲ್ಲ. ನಮ್ಮ ಸಮಾಜದಲ್ಲಿ ಕ್ರಾಂತಿ ಹುಟ್ಟುವದಿಲ್ಲ. ಇದು ಕವಿಯ ಅಸಹಾಯಕ ನಿರ್ಣಯ. ಈ ಮಾತಿನ ಮನವರಿಕೆಯಿಂದಾಗಿ ಆತನ ತಲೆ ರಣಗುಟ್ಟುತ್ತಿದೆ.


ಈ ಕವನದ ಕೆಲವು ವೈಶಿಷ್ಟ್ಯಗಳು:
(೧) ಸಂವೇದನಾಶೀಲನಾದ ಕವಿಯ ನಿಟ್ಟುಸಿರಿನ ಕವನವಿದು. ಆದುದರಿಂದ ಈ ಕವನದಲ್ಲಿ ಅಬ್ಬರವಿಲ್ಲ, ಆಕ್ರೋಶವಿಲ್ಲ. ಇಂತಹ ಕವನಕ್ಕೆ ಅವಶ್ಯವಾದ ಪುಟ್ಟ ಪದಗಳ, ಪುಟ್ಟ ಸಾಲುಗಳ ಛಂದಸ್ಸನ್ನು ಕವಿ ಬಳಸಿದ್ದಾನೆ. ಕವನದಲ್ಲಿ ಬಳಕೆಯಾದ ಪದಗಳೂ ಸಹ ಮೃದು ಪದಗಳೇ ಆಗಿವೆ. ಪದಗಳು ಹಾಗು ಛಂದಸ್ಸು ಇವು ಕವಿತೆಯ ದೇಹವಿದ್ದಂತೆ. ಕಾವ್ಯವಸ್ತು ಅಂದರೆ ಕವನದ ಆತ್ಮವಿದ್ದಂತೆ. ಇವೆರಡೂ ಈ ಕವನದಲ್ಲಿ ಒಂದಕ್ಕೊಂದು ಸಂಪೂರ್ಣ ಅನುರೂಪವಾಗಿವೆ.

(೨) ಪದ-ಸಂರಚನೆಯು ಬೇಂದ್ರೆಯವರಲ್ಲಿ ಕಂಡು ಬರುವ ಒಂದು ವಿಶಿಷ್ಟವಾದ ಅದ್ಭುತ ಪ್ರತಿಭೆ. ‘ಪ್ರಾಣತರಂಗಿಣಿ’ ಎನ್ನುವ ಪದ-ಸಂರಚನೆಯನ್ನೇ ನೋಡಿರಿ. ತರಂಗಗಳು ಇರುವದರಿಂದ ನದಿಯನ್ನು ತರಂಗಿಣಿ ಎಂದು ಸ್ತ್ರೀರೂಪದಲ್ಲಿ ಕರೆಯಬಹುದು. ಪ್ರಾಣಪೋಷಣೆ ಮಾಡುವ ಇವಳ ಕಾರ್ಯವನ್ನು ಸೂಚಿಸಲು ಬೇಂದ್ರೆಯವರು ನದಿಯನ್ನು ‘ಪ್ರಾಣತರಂಗಿಣಿ’ ಎಂದು ಸಂಕೇತಿಸಿದ್ದಾರೆ.

(೩) ಪದ-ಸಂರಚನೆಯಷ್ಟೇ ಅಲ್ಲ, ಪದಗಳ ಅರ್ಥವನ್ನೇ ಬದಲಾಯಿಸಬಲ್ಲ ಸಾಮರ್ಥ್ಯ ಬೇಂದ್ರೆಯವರಿಗಿದೆ. ‘ದುಡುಕು’ ಪದಕ್ಕೆ `ಅವಿವೇಕದಿಂದ ಮುನ್ನುಗ್ಗು’ ಎನ್ನುವ ಅರ್ಥವಿದೆ. ಈ ಕವನದಲ್ಲಿ ನದೀದೇವಿಯು ‘ದಡಗಳ ದುಡುಕುವಳು’ ಎನ್ನುವ ಸಾಲನ್ನು ಪರೀಕ್ಷಿಸಿರಿ. ನದೀದೇವಿಯು ಇಲ್ಲಿ ವಿವೇಚನೆಯಿಲ್ಲದ ಕೆಲಸ ಮಾಡುತ್ತಿಲ್ಲ. ಆದರೆ ವಾತ್ಸಲ್ಯಮಯಿ ತಾಯಿಯು ತನ್ನ ಕೂಸುಗಳಿಗೆ ಮೊಲೆಯೂಡಿಸಲು ಧಾವಿಸುವಂತೆ, ಜೀವಪೋಷಣೆಗಾಗಿ ಅವಳು ತನ್ನ ದಂಡೆಗಳನ್ನು ಮೀರಿ ಹರಿಯುತ್ತಿದ್ದಾಳೆ. ಈ ಮಮತಾಸ್ವರೂಪದ ಅರ್ಥವನ್ನು ಎರಡೇ ಪದಗಳಲ್ಲಿ ಸಂಗ್ರಹಿಸಿ ಬಿಂಬಿಸಲು ಬೇಂದ್ರೆಯವರು ‘ದಡಗಳ ದುಡುಕುವಳು’ ಎಂದು ಹೇಳಿದ್ದಾರೆ. ಪದದ ಅರ್ಥವನ್ನು ಮಾರ್ಪಡಿಸಬಲ್ಲ ಪ್ರತಿಭೆ ಎಂದರೆ ಇದು! ವರಕವಿಗೆ ಮಾತ್ರ ಇದು ಸುಲಭದ ಸಿದ್ಧಿ!

33 comments:

PARAANJAPE K.N. said...

ಬೇ೦ದ್ರೆಯವರ ‘ಮನುವಿನ ಮಕ್ಕಳು" ಕವನದ ಪೂರ್ಣಪಾಠದೊ೦ದಿಗೆ, ಕವಿಯ ಸ೦ವೇದನೆ,
ಛ೦ದಸ್ಸು , ಲಾಲಿತ್ಯ, ಪದಗಳ ಅರ್ಥವಿಸ್ತಾರ, ಹೀಗೆ ಅನೇಕ ವಿಚಾರಗಳ ಮೇಲೆ ಬೆಳಕು ಚೆಲ್ಲಿದ್ದೀರಿ.
ವರಕವಿಯ ರಚನೆಗಳನ್ನು ನಿಮ್ಮ ವಿಶ್ಲೇಷಣೆಯ ಮೂಲಕ ಅರ್ಥೈಸಿಕೊಳ್ಳುವುದರಲ್ಲಿ ಮುದವಿದೆ.

ಮನಸು said...

dhanyavadagaLu, intaha kavi hRudayavanna artapoorNavagi namage needidakke....

sunaath said...

ಪರಾಂಜಪೆಯವರೆ,
ವರಕವಿಯ ಕವನಗಳ ಪೂರ್ಣ ಸೊಬಗನ್ನು ನಾನು ಅರಿತಿದ್ದೇನೆಂದು ಹೇಳಲಾರೆ. ಪ್ರತಿ ಸಲ ಓದುವಾಗಲೂ ಹೊಸ ಹೊಸ ಅರ್ಥಗಳು ಹೊಳೆಯುತ್ತಿರುತ್ತವೆ!

sunaath said...

ಮನಸು,
ಬೇಂದ್ರೆಯವರ ಕವನಾಮೃತವನ್ನು ಹಂಚಿಕೊಳ್ಳುವದೇ ಒಂದು ಖುಶಿ. ನಿಮಗೂ ಧನ್ಯವಾದಗಳು.

ಮನಮುಕ್ತಾ said...

ಕಾಕಾ,
ತು೦ಬಾ ಅರ್ಥವತ್ತಾದ ಕವನವನ್ನು ಕೊಟ್ಟ ಸ೦ವೇದನಾ ಶೀಲ ಕವಿಗೆ,ಅದನ್ನು ಸು೦ದರವಾಗಿ ವಿವರಿಸಿ ಎಲ್ಲರಿಗೂ ತಿಳಿಸಿದ ನಿಮಗೆ ತು೦ಬಾ ಧನ್ಯವಾದಗಳು.

sunaath said...

ಮನಮುಕ್ತಾ,
ಸಂವೇದನಾಶೀಲ ಕವಿಯು ಉತ್ತಮ ಕಾವ್ಯರಚನೆ ಮಾಡುತ್ತಾನೆ. ಅದನ್ನು ಓದುವವನೂ ಸಹ ಸಹೃದಯನೇ ಆಗಿರಬೇಕು. ಇಂತಹ ಕವಿ ಮತ್ತು ಇಂತಹ ಓದುಗನನ್ನು ಕುರಿತು ಬೇಂದ್ರೆ ಹೀಗೆ ಹೇಳಿದ್ದಾರೆ:
"ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ.
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ."

Subrahmanya said...

ಕಾಕಾಶ್ರೀ,

ಧನ್ಯೋಸ್ಮಿ.

ಕವನದ ರಚನೆಯ ಕಾಲಘಟ್ಟವನ್ನು ತೆಗೆದುಕೊಂಡು ವಿವರಿಸಿರುವುದರಿಂದ ಕವನದ ಮಹತ್ವ ಏನೆಂಬುದು ಸಾದೃಷ್ಯವಾಗುತ್ತದೆ. ಇಂದಿಗೂ ಅಂತಹ ಪರಿಸ್ಥಿತಿ ಬದಲಾಗಿಲ್ಲ ಎನ್ನುವುದು ವಿಪರ‍್ಯಾಸ !.

ಕೆಲವೇ ಪದಗಳಲ್ಲಿ ಸಾವಿರ ಪುಟಗಳಿಗಾಗುವಷ್ಟು ಅರ್ಥವನ್ನು ಹಿಡಿದಿಡುವುದು ಅಂಬಿಕಾತನಯದತ್ತರಿಗಷ್ಟೇ ಸಾಧ್ಯವೆನಿಸುತ್ತದೆ. ( ಅತ್ಯಂತ ಸಾಂಧರ್ಭಿಕವಾಗಿ ಮತ್ತು ಆಶುಕವಿಯೂ ಆಗಿ ).

ಭವಿಷ್ಯದ (ಈಗಲೂ) ಅಂತರ್ಜಾಲ ಬಳಕೆದಾರರಿಗೆ ಬೇಂದ್ರೆಯವರ ಕಾವ್ಯಾರ್ಥಗಳು ಸಿಗುವ ಉತ್ತಮ ತಾಣ "ಸಲ್ಲಾಪ" ವಾಗಲೆಂದು ತಮ್ಮಲ್ಲಿ ವಿನಂತಿ. ಧನ್ಯವಾದಗಳು.

umesh desai said...

ಕಾಕಾ ನಿಮಗೂ ಹಾಗೂ ಬೇಂದ್ರೆಯವರಿಗೂ ಯಾವುದೋ ಜನ್ಮದ ಎಳೆ ಬಂಧಿಸಿದೆ
ಶಿಬಿ, ದಿಲೀಪರ ಕತೆಮರೆತೇ ಹೋಗಿತ್ತು. ಸುಂದರ ಕವಿತೆ ಅದನ್ನು ತೀರ ಅರ್ಥವಾಗುವ ರೀತಿಯಲ್ಲಿ
ಪ್ರಸ್ತುತ ಪಡಿಸಿದ ನಿಮ್ಮ ಶೈಲಿ ಮೆಚ್ಚಬೇಕಾದದ್ದೇ.

ಅನಂತ್ ರಾಜ್ said...

ಬೇ೦ದ್ರೆಯವರ ಮೇರು ಕೃತಿಗಳ ಪರಿಚಯ, ಪಾಠ ಹೇಳುವ೦ತೆ ಅತ್ಯ೦ತ ನವಿರಾಗಿ ನಿರೂಪಿಸಿದ್ದೀರಿ ಸುನಾತ್ ಸರ್. ಸ೦ಸ್ಕೃತ ಭಾಷಯಲ್ಲಿ "ಪದ"ಗಳನ್ನು ಸ೦ದಭೋ೯ಚಿತವಾಗಿ ಉಪಯೋಗಿಸುತ್ತ ಬೇರೆ ಬೇರೆ ರೀತಿ ಅರ್ಥೈಸುವುದನ್ನು ಕೇಳಿದ್ದೇವೆ. ಕನ್ನಡ ಭಾಷೆಯಲ್ಲಿಯೂ ಈ ಪ್ರಯೋಗಗಳನ್ನು ಬೇ೦ದ್ರೆಯವರ೦ತಹ ಮೇರುಕವಿಗೆ ಮಾತ್ರ ಮಾಡಲು ಸಾಧ್ಯವಿದೆ ಎನಿಸುತ್ತದೆ. ‘ದಡಗಳ ದುಡುಕುವಳು’ ಉತ್ತಮ ಉದಾಹರಣೆ ಆಗಬಹುದಲ್ಲೆವೆ?
ವ೦ದನೆಗಳು ಸರ್.

ಅನ೦ತ್

Subrahmanya said...

ಕಾಕಾಶ್ರೀ,

ನನ್ನ ಬಳಿಯಿರುವ ನಾದಲೀಲೆ ಕವನಸಂಕಲನದ ಪುಸ್ತಕದಲ್ಲಿ ಇದೇ ಕವನಕ್ಕೆ ೧೨ ಚರಣಗಳಿವೆ. ನೀವಿಲ್ಲಿ ಆರು ಚರಣಗಳನ್ನು ಪೂರ್ಣಪಾಠವೆಮ್ದು ಹೇಳಿದ್ದೀರಿ...ಮಿಕ್ಕುಳಿದ ಆರು ಚರಣಗಳು ಇತ್ತೀಚೆಗೆ ಸೇರಿರುವುದೆ ? (ಪರಿಷ್ಕರಣೆಯ ಸಂದರ್ಭದಲ್ಲಿ ಸಿಕ್ಕಿರಬಹುದೆ ? . ನನ್ನ ಬಳಿಯಿರುವುದು ವಾಮನಬೇಂದ್ರೆಯವರು ಸಂಪಾದಿಸಿರುವ ಹೊಸ ಪುಸ್ತಕ, ಹಾಗಾಗಿ)

AntharangadaMaathugalu said...

ಕಾಕಾ..
ನಿಮ್ಮ ವಿಶ್ಲೇಷಣೆಯನ್ನು ಪ್ರಶಂಸಿಸಲು ಪದಗಳು ಸಿಗುತ್ತಿಲ್ಲ. ನಿಮ್ಮ ತಾಣ ನಿಜವಾಗಿ ಬೇಂದ್ರೆಯವರ ಮೇರು ಕಾವ್ಯಗಳನ್ನೋದಿ ಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗದ ನನ್ನಂತಹವರಿಗ್ ಪಾಠಶಾಲೆಯಂತಿದೆ. ಪ್ರಾಣ ತರಂಗಿಣಿ ತುಳುಕುವಳು... ದಡಗಳ ದುಡುಕುವಳು... ಎಂಬ ಪ್ರಯೋಗಗಳನ್ನು ಬೇಂದ್ರೆಯವರು ಮಾತ್ರವೇ ಮಾಡಲು ಸಾಧ್ಯ... ಧನ್ಯವಾದಗಳು ಕಾಕಾ...

ಶ್ಯಾಮಲ

sunaath said...

ಪುತ್ತರ್,
ಬೇಂದ್ರೆಯವರ ಅನೇಕ ಕವನಗಳು ರಾಷ್ಟ್ರದ ಪರಿಸ್ಥಿತಿಯಿಂದ ಮನನೊಂದು ಬರೆದಂತಹ ಕವನಗಳೇ ಆಗಿವೆ.‘ಕುರುಡು ಕಾಂಚಾಣ’, ‘ಕನಸಿನೊಳಗೊಂದು ಕಣಸು’, ‘ಕರಿಮರಿ ನಾಯಿ’ ಇವು ಕೆಲವು ಉದಾಹರಣೆಗಳು. ‘ರುದ್ರವೀಣೆ’ ಹಾಗು ‘ನನ್ನ ಹರಣ’ ಇವನ್ನು ವಿಶ್ವಪ್ರಜ್ಞೆಯ ಕವನಗಳೆಂದೇ ಹೇಳಬಹುದು. ವಿಮರ್ಶಕರು ಈ ವಾಸ್ತವತೆಯನ್ನು ಗುರುತಿಸಿದಂತೆ ಕಾಣುವದಿಲ್ಲ.

sunaath said...

ದೇಸಾಯರ,
ಶಿಬಿ, ದಿಲೀಪರ ಕತೆಯನ್ನಷ್ಟೇ ನಾವು ಮರತೇವಿ. ನಮ್ಮ ಮುಂದಿನ ಪೀಳಿಗೆಯವರು ‘Who is that?' ಅಂತ ಕೇಳಬಹುದು!

sunaath said...

ಅನಂತರಾಜರೆ,
ರತ್ನಾಕರ ವರ್ಣಿಯು ತನ್ನ ‘ಭರತೇಶ ವೈಭವ’ ಕಾವ್ಯದಲ್ಲಿ ಭರತ ಚಕ್ರವರ್ತಿಯನ್ನು ‘ಭುವನದ ಭಾಗ್ಯ’ ಎಂದು ಬಣ್ಣಿಸಿದ್ದಾನೆ. ಹಿರಿಯ ವಿಮರ್ಶಕ ಆಮೂರರು ಬೇಂದ್ರೆಯವರನ್ನೇ ‘ಭುವನದ ಭಾಗ್ಯ’ ಎಂದು ಕರೆದಿದ್ದಾರೆ.
ಬೇಂದ್ರೆಯವರು ‘ಕನ್ನಡದ ಭಾಗ್ಯ’ವಂತೂ ಹೌದು.

sunaath said...

ಪುತ್ತರ್,
ನನ್ನ ತಪ್ಪನ್ನು ತೋರಿಸಿದ್ದಕ್ಕಾಗಿ ಅನೇಕ ಧನ್ಯವಾದಗಳು. ನಾನು ‘ನಾದಲೀಲೆ’ ಕವನಸಂಗ್ರಹದ PDF ಒಂದನ್ನು ನೋಡಿ ಈ ಲೇಖನ ಬರೆದಿದ್ದೆ. ಅದರಲ್ಲಿ ಈ ಕವನದ ಎರಡನೆಯ ಪುಟ ಬಿಟ್ಟು ಹೋಗಿದೆ. ತಪ್ಪು ತಿದ್ದಿಕೊಳ್ಳಲು ಪ್ರಯತ್ನಿಸುತ್ತೇನೆ.

sunaath said...

ಶ್ಯಾಮಲಾ,
ಪ್ರಶಂಸೆ ಎಲ್ಲ ಬೇಂದ್ರೆಯವರಿಗೇ ಸೇರತಕ್ಕದ್ದು. ಮೊದಲೊಮ್ಮೆ ಹೇಳಿದಂತೆ ನಾನೊಬ್ಬ tourist guide ಮಾತ್ರ!

Ashok.V.Shetty, Kodlady said...

ಸುನಾಥ್ ಸರ್,

ಹೃದಯ ಪೂರ್ವಕ ಧನ್ಯವಾದಗಳು ಸರ್. "ಮನುವಿನ ಮಕ್ಕಳು'' ವರಕವಿ ಅವರ ಈ ಕವನದ ಭಾವಾರ್ಥವನ್ನು ತುಂಬಾ ನವಿರಾಗಿ ನಿರೂಪಿಸಿದ್ದೀರಿ.ಬೇಂದ್ರೆ ಯವರ ಕವನಗಳ ವಿಶ್ಲೇಷಣೆಯನ್ನು ಈ ರೀತಿಯಾಗಿ ಮಾಡಿದ್ದನ್ನು ಎಲ್ಲಿಯೂ ನೋಡಿಲ್ಲ. ಮುಂದಿನ ಕವನದ ವಿಶ್ಲೇಷಣೆಯನ್ನು ಕಾಡು ನೋಡುತ್ತಿರುವ ನಿಮ್ಮ ಅಭಿಮಾನಿ....

ದಿನಕರ ಮೊಗೇರ said...

ಸುನಾಥ್ ಸರ್,
ನಿಮ್ಮ ಬ್ಲಾಗ್ ಮಾಹಿತಿಗಳ ಕಣಜ ಸರ್.... ಒಳ್ಳೊಳ್ಳೆ ಮಾಹಿತಿ, ವಿವರಣೆ, ಕಾವ್ಯ ಚರ್ಚೆ, ವಿಮರ್ಶೆ ನಿಮ್ಮಲ್ಲಿದೆ..... ತುಂಬಾ ತುಂಬಾ ಧನ್ಯವಾದ ಸರ್.....

sunaath said...

ಅಶೋಕ,
‘ಕೆಲವಂ ಬಲ್ಲವರಿಂದ ಕಲ್ತು’ ಎಂದು ಹೇಳುತ್ತಾರೆ. ಬೇಂದ್ರೆಯವರ ಕವನಗಳನ್ನು ಅರ್ಥ ಮಾಡಿಕೊಳ್ಳಲು ನನ್ನ ಪೂರ್ವಸೂರಿಗಳಿಂದ ನನಗೆ ತುಂಬ ಸಹಾಯವಾಗಿದೆ.

sunaath said...

ದಿನಕರ,
ಬೇಂದ್ರೆಗಳ ಕವನಗಳು ಇರುವದೇ ಹಾಗೆ. ಒಂದು ರೀತಿಯಲ್ಲಿ ಈ ಕವನಗಳು ತಮ್ಮ ಕಾಲದ documentation ತರಹ ಇವೆ. ಅವರ ಕಾಲದ ಸ್ಥಿತಿಯು ಅವರ ಕವನಗಳಲ್ಲಿ ಪ್ರತಿಬಿಂಬಿಸಿದೆ.

ಅಪ್ಪ-ಅಮ್ಮ(Appa-Amma) said...

ಸುನಾಥ್ ಕಾಕಾ,

ನಿಮ್ಮ ಅಧ್ಯಯನ-ನಿಮ್ಮ ಕಾವ್ಯ ಪ್ರೀತಿ ದೊಡ್ಡದು.
ಅಮೋಘವಾದ ಸಾಹಿತ್ಯ ವಿಶೇಷಗಳನ್ನು ನಮಗೆ ಪರಿಚಯಿಸುತ್ತಿದ್ದಕ್ಕೆ ಮತ್ತೊಂದು ನಮನಗಳು.

ಅಂದಾಗೆ
’ಹತ್ತವತಾರದ ಹೇಡಿತನಕ್ಕೆ ಮನ ಗೊಣಗುಟ್ಟುವದು’

ಇಲ್ಲಿ ಹತ್ತವತಾರದ ಹೇಡಿತನವೆಂದರೆ..ಹತ್ತು ಅವತಾರ ಎತ್ತಿದರೂ ದುಷ್ಟ ಸಂಹಾರ ಸಾಧ್ಯವಾಗಲಿಲ್ಲವೆಂದೋ ಅಥವಾ ಇನ್ನೂ ಹತ್ತು ಅವತಾರ ಎತ್ತಿದರೂ ಎನೂ ಪ್ರಯೋಜನವಿಲ್ಲವೆಂದೋ ?

sunaath said...

ಪ್ರಿಯ ಅಪ್ಪ-ಅಮ್ಮ,
ಈಗಾಗಲೇ ಎತ್ತಿದ ಹತ್ತು ಅವತಾರಗಳಿಂದ ಲೋಕದ ಉದ್ಧಾರವಾಗಲಿಲ್ಲ ಎನ್ನುವದು ಎಲ್ಲರಿಗೂ ತಿಳಿದದ್ದೇ. ಇನ್ನೂ ಹತ್ತು ಅವತಾರ ಎತ್ತಿದರೂ ಪ್ರಯೋಜನವಿಲ್ಲ ಎಂದು ಊಹಿಸಬಹುದಷ್ಟೇ!

ಮನದಾಳದಿಂದ............ said...

ಸುನಾಥ್ ಜೀ........
ಬೇಂದ್ರೆಯವರ ಕವನಗಳ ಅರ್ಥವನ್ನು ಸುಂದರವಾಗಿ ವಿವರಿಸುವುದರ ಜೊತೆಗೇ ಸಾಕಷ್ಟು ಮಾಹಿತಿಗಳನ್ನು ಒದಗಿಸುತ್ತಿದ್ದೀರಾ........
ಧನ್ಯವಾದಗಳು.

sunaath said...

ಪ್ರವೀಣರೆ,
ಬೇಂದ್ರೆಯವರ ಕವನಗಳೇ ಹಾಗೆ. ಹುಡುಕಿದಷ್ಟೂ ಹೊಸ ಅರ್ಥ, ವಿಷಯ ಹೊರಹೊಮ್ಮುವಂತಹವು!

shivu.k said...

ಸುನಾಥ್ ಸರ್,

ಮನುವಿನ ಮಕ್ಕಳು ಕವನ ಓದಿದಾಗ ಮೊದಲಿಗೆ ಪೂರ್ತಿ ಅರ್ಥವಾಗುವುದಿಲ್ಲ. ನೀವು ಅದರ ಪೂರ್ತಿ ವಿವರಣೆಗಳು, ಬರಹಗಾರನ ಭಾವನೆಗಳು, ಪದಗಳ ಜೋಡಣೆ, ಇತ್ಯಾದಿ ವಿಚಾರಗಳ ಬಗ್ಗೆ ಸೊಗಸಾಗಿ ವಿವರಿಸುತ್ತೀರಿ. ಆ ರೀತಿ ಬಿಡಿಬಿಡಿಯಾಗಿ ಬಿಚ್ಚಿಡುವುದನ್ನು ಓದುವುದೇ ಒಂದು ಸೊಗಸು. ಧನ್ಯವಾದಗಳು.

Vasant Chitguppi said...

Only through such masterly commentaries as yours I can understand what DRB wants to convey.
Vasant Chitguppi

sunaath said...

ಶಿವು,
ಬೇಂದ್ರೆಯವರ ಕವನಗಳನ್ನು ಎಷ್ಟು ವಿವರಿಸಿದರೂ ಕಡಿಮೆಯೇ!
ಧನ್ಯವಾದಗಳು.

sunaath said...

Dear Vasant,
Thank you very much. I value your appreciation.

V.R.BHAT said...

ಮನುವಿನ ಮಕ್ಕಳ ಗಾಥೆ ! ವರಕವಿ ಎಂದಿದ್ದು ಬರಿದೇ ಅಲ್ಲ! ಅದು ಸಾಮಾನ್ಯರಿಗೆ ಕೊಡುವ ಪಟ್ಟವೇ ? ಕವಿಯ ಭಾವಗಳು ಹಲವು, ಅದರ ಭಾವಾರ್ಥಗಳು ಇನ್ನೂ ಹಲವು,ನಿಮ್ಮ ಪ್ರಯತ್ನ ಬಹಳ, ನೀವು ಹೇಳುವ ರೀತಿ ಸರಳ, ನಿಮ್ಮ ಭಾಷ್ಯಕ್ಕೆ ನಾನಾದೆ ಮರುಳ! ನಿಜಕ್ಕೂ ಇಂಥದ್ದು ವಿರಳ, worth reading ! ನಮೋನ್ನಮಃ

sunaath said...

ಭಟ್ಟರೆ,
ನಿಮಗೂ ಸಹ ನಮೋನ್ನಮಃ!

ಮನಸಿನಮನೆಯವನು said...

ತುಂಬಾ ವಿಷಯ ತಿಳಿದಂತಾಯ್ತು..
ಕೆಲವು ಸಾಲುಗಳು ಮೈ ಜುಮ್ಮೆನಿಸುವಂತಿವೆ..

sunaath said...

ಬೆಳಕಿನ ಮನೆಯವರೆ,
ಕವನದಿಂದ ರೋಮಾಂಚನಗೊಳ್ಳುವುದು ನಿಮ್ಮ ಕಾವ್ಯಪ್ರೇಮವನ್ನು ತೋರುತ್ತದೆ!

ಸೀತಾರಾಮ. ಕೆ. / SITARAM.K said...

ಬೇಂದ್ರೆಯವರ "ಮನುವಿನ ಮಕ್ಕಳು" ಕವನದ ಭಾವಾರ್ಥವನ್ನ ಅದ್ಭುತವಾಗಿ ತಿಳಿಸಿದ್ದಿರಾ..
ಬೇಂದ್ರೆಯವರ ಕವನದ ನಿಜರಸಸ್ವಾದನ ತಮ್ಮ ಒಕ್ಕನೆಯೋದನೆ ಆಗುತ್ತಿರುವದು ನಮ್ಮ ಸುಕೃತ. ಆ ಮೇರು ಕವಿಗೆ ಮತ್ತು ಅವರ ಸಕಾವ್ಯದ ತಿರುಳನ್ನು ಬಿಡಿಸಿಕೊಡುವ ಕೈಕರ್ಯದಲ್ಲಿ ತೊಡಗಿಸಿರುವ ತಮಗೆ ನಮ್ರ ವಂದನೆಗಳು.