Sunday, November 7, 2010

ಶಿಶುನಾಳ ಶರೀಫರ..............."ಅಗ್ಗದರವಿ ತಂದು.."

ಭಾರತೀಯರಿಗೆ ತತ್ವಜ್ಞಾನವು ರಕ್ತಗತವಾಗಿ ಬಂದಿದೆ. ಧರ್ಮಗ್ರಂಥಗಳನ್ನು ಓದದೇ ಇರುವ ಭಾರತೀಯರು ಸಹ ಪುನರ್ಜನ್ಮಗಳಲ್ಲಿ ನಂಬಿಕೆ ಇಡುತ್ತಾರೆ. ಭಗವದ್ಗೀತೆಯ ತಿರುಳನ್ನು ಭಾರತೀಯರು ಬಾಲ್ಯಸಂಸ್ಕಾರದ ಮೂಲಕವೇ ಬಲ್ಲರು. ಆ ಗ್ರಂಥದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಉಪದೇಶದಲ್ಲಿ ಪುನರ್ಜನ್ಮದ ವ್ಯಾಖ್ಯೆ ಈ ರೀತಿಯಾಗಿ ಬಂದಿದೆ:
“ವಾಸಾಂಸಿ ಜೀರ್ಣಾನಿ ಯಥಾ ವಿಹಾಯ
ನವಾನಿ ಗೃಹ್ಣಾತಿ ನರೋಪರಾಣಿ
ತಥಾ ಶರೀರಾಣಿ ವಿಹಾಯ ಜೀರ್ಣಾ-
ನ್ಯನ್ಯಾನಿ ಸಂಯಾತಿ ನವಾನಿ ದೇಹೀ”
(=ಮನುಷ್ಯರು ಹಳೆಯ ಬಟ್ಟೆಗಳನ್ನು ತೆಗೆದುಬಿಟ್ಟು ಹೊಸ ಬಟ್ಟೆಗಳನ್ನು ತೊಟ್ಟುಕೊಳ್ಳುವಂತೆ, ಜೀವಿಗಳು ಹಳೆಯ ದೇಹವನ್ನು ತ್ಯಜಿಸಿ, ಹೊಸ ದೇಹಗಳನ್ನು ಪಡೆಯುತ್ತಾರೆ.)
ಇದೇ ತತ್ವಜ್ಞಾನವನ್ನು ಶಿಶುನಾಳ ಶರೀಫರು ತಮ್ಮ “ಅಗ್ಗದರವಿ ತಂದು…” ಎನ್ನುವ ಗೀತೆಯಲ್ಲಿ ಸರಳವಾಗಿ ಹಾಡಿದ್ದಾರೆ. ಈ ಗೀತೆಯ ಪೂರ್ಣಪಾಠ ಹೀಗಿದೆ:

ಅಗ್ಗದರವಿ ತಂದು
ಹಿಗ್ಗಿ ಹೊಲಸಿದೆನಂಗಿ
ಹೆಗ್ಗಣ ವೈತವ್ವ ತಂಗೀ ಈ ಅಂಗೀ ||ಪಲ್ಲ||

ಅಗಣಿತ ವಿಷಯದ
ಆರು ಗೇಣಿನ ಕವಚ
ಬಗಲು ಬೆವರನು ಕಡಿದು
ಸಿಗದೆ ಹೋಯಿತವ್ವ ತಂಗೀ ಈ ಅಂಗೀ ||೧||

ಬುದ್ಧಿಗೇಡಿಗಳಾಗಿ
ನಿದ್ದಿ ಕೆಡಸಿಕೊಂಡು
ಎದ್ದು ನೋಡಲು ಕರ್ಮ
ಗುದ್ದಿನೊಳಡಗಿಕೊಂಡಿತವ್ವ ತಂಗೀ ಈ ಅಂಗೀ ||೨||

ಕಳೆದೆನೀಪರಿ ರಾತ್ರಿ
ಬೆಳಗಾಗೊ ಸಮಯದಿ
ಚೆಲುವ ಶಿಶುನಾಳಾಧೀಶ-
ನುಳುವಿ ಕೊಟ್ಟಾನವ್ವ ತಂಗೀ ಈ ಅಂಗೀ ||೩||

ಈ ಗೀತೆಯ ಪಲ್ಲವನ್ನು ಗಮನಿಸೋಣ :
ಅಗ್ಗದರವಿ ತಂದು
ಹಿಗ್ಗಿ ಹೊಲಸಿದೆನಂಗಿ
ಹೆಗ್ಗಣ ವೈತವ್ವ ತಂಗೀ ಈ ಅಂಗೀ||ಪಲ್ಲ||

ಶರೀಫರು ಹೊಸದೊಂದು ಜನ್ಮ ಪಡೆಯುವದನ್ನು ಹೊಸ ಅಂಗಿಯನ್ನು ಹೊಲೆಯಿಸಿಕೊಳ್ಳುವದಕ್ಕೆ ಹೋಲಿಸುತ್ತಿದ್ದಾರೆ. ಆದರೆ ಈ ಹೊಸ ಅಂಗಿಗಾಗಿ ಅವರು ಉತ್ತಮ ಬಟ್ಟೆಯನ್ನು ಖರೀದಿಸಿಲ್ಲ. ಅಗ್ಗದ ಅರವಿಯನ್ನು ತಂದಿದ್ದಾರೆ. ಅಗ್ಗದ ಬಟ್ಟೆ ಎಂದರೇನು? ಅಗ್ಗದ ಬಟ್ಟೆ ಒರಟು ಒರಟಾಗಿರುತ್ತದೆ ; ಇದಕ್ಕೆ ಒಳ್ಳೆಯ ಗುಣಗಳು ಇರುವದಿಲ್ಲ. ಬಟ್ಟೆಗೆ ಒಳ್ಳೆಯ ಗುಣಗಳು ಬರಬೇಕಾದರೆ, ಆ ಬಟ್ಟೆಯನ್ನು ಸರಿಯಾಗಿ ಸಂಸ್ಕರಿಸಬೇಕಾಗುತ್ತದೆ.  ಅದರಂತೆ ಒಳ್ಳೆಯ ಜನäವನ್ನು ಪಡೆಯಲು ಒಳ್ಳೆಯ ಸಂಸ್ಕಾರ, ಒಳ್ಳೆಯ ಕರ್ಮಗಳ ನೆರವು ಬೇಕಾಗುತ್ತದೆ. ಆದರೆ ಅರಿವೆ ಎಂತಹದೇ ಇರಲಿ, ಹೊಸ ಅಂಗಿ ತೊಡುವದೇ ಹುರುಪಿನ ವಿಷಯವಾಗಿರುತ್ತದೆ. ಹಳೆಯ ಜನä ತ್ಯಜಿಸಿದ ಆತ್ಮವು ಹೊಸ ಜನäಕ್ಕಾಗಿ ಮಿಡುಕಾಡುತ್ತಲೇ ಇರುತ್ತದೆ. ತನ್ನ ಪೂರ್ವಕರ್ಮಗಳಿಗೆ ಹಾಗು ಪೂರ್ವಸಂಸ್ಕಾರಗಳಿಗೆ ತಕ್ಕಂತಹ ಹೊಸ ಜನä ದೊರೆತ ತಕ್ಷಣ ಅದು ಹಿಗ್ಗುತ್ತದೆ. ಇದನ್ನೇ ಶರೀಫರು ಹೊಸದಾದ ಅಂಗಿಯನ್ನು ಹಿಗ್ಗಿನಿಂದ ಹೊಲಿಸಿದೆ ಎಂದು ಹೇಳುತ್ತಾರೆ.

ಶರೀಫರೇನೊ ತಮ್ಮ ಕರ್ಮಗಳಿಗೆ ಹಾಗು ಸಂಸ್ಕಾರಕ್ಕೆ ಅನುಗುಣವಾದ ಅಗ್ಗದ ಅರಿವೆಯನ್ನು ಪಡೆದುಕೊಂಡರು. ದೈವವು ಅವರಿಗೆ ಹೊಸ ಅಂಗಿಯನ್ನು ಹೊಲೆದು ಕೊಟ್ಟಾಗ, ಶರೀಫರು ಹಿಗ್ಗಿದರು. ಆದರೆ ಈ ಅಂಗಿಯನ್ನು ಜೋಪಾನವಾಗಿ ಇಟ್ಟುಕೊಳ್ಳಲು ಅವರಿಂದ ಆಗಲಿಲ್ಲ. ಈ ಅಂಗಿಯನ್ನು ಹೆಗ್ಗಣವೊಂದು ಒಯ್ದು ಬಿಟ್ಟಿತಂತೆ. ಹೆಗ್ಗಣವು ಬಹಳ ಚಾಲಾಕು ಪ್ರಾಣಿ. ರಾತ್ರಿಯ ಸಮಯದಲ್ಲಿ ಯಜಮಾನನು ನಿದ್ರೆಯಲ್ಲಿರುವಾಗ ಹೆಗ್ಗಣವು ಮನೆಯ ಗೋಡೆಗೆ ಕನ್ನ ಹಾಕಿ, ಮನೆಯಲ್ಲಿಟ್ಟ ಪದಾರ್ಥಗಳನ್ನು ಹಾಳು ಮಾಡುವದು. ಹೆಗ್ಗಣದ ಉಪದ್ರವ ತಪ್ಪಿಸಬೇಕಾದರೆ, ಯಜಮಾನನು ತನ್ನ ಮನೆಯನ್ನು ಭದ್ರವಾಗಿಟ್ಟುಕೊಳ್ಳಬೇಕು. ಹೆಗ್ಗಣವು ಗುದ್ದು ತೋಡಿ ಒಳಗೆ ಬರದಂತೆ ಕಾಯಬೇಕು. ಅಂದರೆ ಮಾತ್ರ ಆತನು ತನ್ನ ಪ್ರೀತಿಯ ಅಂಗಿಯನ್ನು ಕಾಯಬಲ್ಲನು.

ಇದು ಯಾವ ಹೆಗ್ಗಣ? ಬಲಿಷ್ಠವಾದ ಅರಿಷಡ್ವರ್ಗಗಳ ಅಂದರೆ ಕಾಮ, ಕ್ರೋಧ, ಲೋಭ, ಮೋಹ, ಮದ ಹಾಗು ಮತ್ಸರಗಳ ಸಮೂಹಕ್ಕೆ ಶರೀಫರು ಹೆಗ್ಗಣ ಎಂದು ಕರೆಯುತ್ತಾರೆ. ಮನಸ್ಸು ಎನ್ನುವ ಮನೆಗೆ ಈ ಅರಿಷಡ್ವರ್ಗಗಳು ಕಳ್ಳತನದಿಂದ ಕನ್ನ ಕೊರೆಯುತ್ತವೆ. ಆಗ ಮನಸ್ಸಿನಲ್ಲಿಯ ಒಳ್ಳೆಯ ಗುಣಗಳು ಹಾಗು ಉತ್ತಮ ಸಂಸ್ಕಾರಗಳು ನಾಶವಾಗುತ್ತವೆ. ನೀಚ ಕರ್ಮಗಳು ಘಟಿಸುತ್ತವೆ. ಈ ಜನ್ಮವೆಂಬ ಅಂಗಿಯನ್ನು ಈ ಅರಿಷಡ್ವರ್ಗಗಳು ಹೊತ್ತೊಯ್ದು ಹಾಳು ಮಾಡುತ್ತವೆ. ಹಾಲು ಉಕ್ಕಿದ ಮೇಲೆ ಹಳಹಳಸಿದಂತೆ, ‘ಹೆಗ್ಗಣವು ಈ ಅಂಗಿಯನ್ನು ಒಯ್ದಿತಲ್ಲ’ ಎಂದು ಶರೀಫರು ವ್ಯಥೆ ಪಡುತ್ತಾರೆ.ಇದೇ ಮಾತನ್ನು ಪುರಂದರದಾಸರೂ ಸಹ ಹೀಗೆ ಹೇಳಿದ್ದಾರೆ :
 “ಮಾನವ ಜನ್ಮ ಬಲು ದೊಡ್ಡದು
ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ!”

ಮೊದಲನೆಯ ನುಡಿ ಹೀಗಿದೆ:
ಅಗಣಿತ ವಿಷಯದ
ಆರು ಗೇಣಿನ ಕವಚ
ಬಗಲು ಬೆವರನು ಕಡಿದು
ಸಿಗದೆ ಹೋಯಿತವ್ವ ತಂಗೀ ಈ ಅಂಗೀ||೧||

ಆರು ಗೇಣಿನ ಕವಚ ಎಂದರೆ ಸ್ಥೂಲ ದೇಹ. ಈ ಸ್ಥೂಲ ದೇಹಕ್ಕೆ ಸುಖ ಕೊಡುವ ವಿಷಯಗಳನ್ನಷ್ಟೇ ಮಾನವನು ಬಯಸುತ್ತಾನೆ. ಉದಾಹರಣೆಗೆ ಪರಿಶ್ರಮದಿಂದ ದುಡಿದು ತಿನ್ನುವದು ಮನುಷ್ಯನಿಗೆ ಬೇಡ. ಸೋಮಾರಿತನವೇ ಆತನ ದೇಹಕ್ಕೆ ಸುಖ ನೀಡುತ್ತದೆ. ಮಾದಕ ಪದಾರ್ಥಗಳ ಸೇವನೆಯು ಕೆಟ್ಟದ್ದೆಂದು ಗೊತ್ತಿದ್ದರೂ ಸಹ ದೇಹವು ಅದನ್ನು ಬಯಸುತ್ತದೆ. ಲೆಕ್ಕವಿಲ್ಲದಷ್ಟಿರುವ ಇಂತಹ ದೈಹಿಕ ಬಯಕೆಗಳಿಗೆ ಶರೀಫರು ‘ಅಗಣಿತ ವಿಷಯ’ ಎನ್ನುತ್ತಾರೆ. ಕೇವಲ ವಿಷಯಸುಖಕ್ಕೇ ಮನಸ್ಸು ನೀಡಿದರೆ, ಅದು ದೇಹವನ್ನು ಬೇಕಾರ ಮಾಡುತ್ತದೆ. ಶರೀಫರು ಅದನ್ನು ಬಗಲಿನಿಂದ ಬರುವ ಬೆವರಿಗೆ ಹೋಲಿಸುತ್ತಾರೆ. ಈ ಬಗಲ ಬೆವರು ಅರ್ಥಾತ್ ಕೊಳೆಯಾದ ಬಯಕೆಗಳು ಈ ಅಂಗಿಯನ್ನು ಕಡಿದು ಹಾಕುತ್ತವೆ. ನಮಗೆ ದೊರೆತ ಅಂಗಿಯ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗದೇ ನಾವು ‘ಸಿಗದೇ ಹೋಯಿತವ್ವ ತಂಗೀ’ ಎಂದು ವ್ಯಥೆ ಪಡಬೇಕಾಗುತ್ತದೆ.

ಎರಡನೆಯ ನುಡಿ ಹೀಗಿದೆ :
ಬುದ್ಧಿಗೇಡಿಗಳಾಗಿ
ನಿದ್ದಿ ಕೆಡಸಿಕೊಂಡು
ಎದ್ದು ನೋಡಲು ಕರ್ಮ
ಗುದ್ದಿನೊಳಡಗಿಕೊಂಡಿತವ್ವ ತಂಗೀ ಈ ಅಂಗೀ ||೨||

ಈ ರೀತಿಯಾಗಿ ಜೀವಿಯು ಪ್ರಾಪಂಚಿಕ ವಿಷಯಸುಖಗಳಲ್ಲೇ  ಮಗ್ನವಾದಂತಹ ಕಾಲವನ್ನು  ರಾತ್ರಿಗೆ ಹೋಲಿಸಲಾಗುತ್ತದೆ. ಬುದ್ಧಿವಂತ ಮಾನವನು ರಾತ್ರಿಯಲ್ಲಿ ನಿದ್ರಿಸಬೇಕು ಎಂದು ಶರೀಫರು ಹೇಳುತ್ತಾರೆ. ಇದರರ್ಥವೆಂದರೆ ಮಾನವನು ಪ್ರಾಪಂಚಿಕ ಸುಖಗಳನ್ನು ಬಯಸಬಾರದು. ಆದರೆ ಇದಕ್ಕೆ ವಿಪರೀತವಾಗಿ, ಬುದ್ಧಿಗೇಡಿ ಮಾನವನು ರಾತ್ರಿಯ ವ್ಯವಹಾರಗಳಲ್ಲಿ ಮುಳುಗುತ್ತಾನೆ.  ನಿದ್ರೆಯನ್ನು ಕೆಡಸಿಕೊಳ್ಳುತ್ತಾನೆ. ಅಂದರೆ ಆಧ್ಯಾತ್ಮಿಕ ವ್ಯವಹಾರದ ಬದಲಾಗಿ ಪ್ರಾಪಂಚಿಕ ವ್ಯವಹಾರದಲ್ಲಿ ಮುಳುಗುತ್ತಾನೆ.  ಬೆಳಗಾದ ಬಳಿಕ ಅಂದರೆ ಹೊಸ ಜನ್ಮ ಪಡೆಯುವ ಸಮಯದಲ್ಲಿ, ಅವನಿಗೆ ತನ್ನ ಕರ್ಮಫಲ ಕಾಣಿಸುವದಿಲ್ಲ. ಅದು ಅವನ ಮನೆಯ ಮೂಲೆಯಲ್ಲಿ ಗುದ್ದು ಮಾಡಿಕೊಂಡು, ಅಡಗಿಕೊಂಡು ಕೂತಿರುತ್ತದೆ. ಆತನು ಹೊಸ ಜನ್ಮವನ್ನು ಪಡೆಯಲು ಸಿದ್ಧನಾದಾಗ, ಅವನ ಪೂರ್ವಜನ್ಮದ ಈ ಕರ್ಮವು ಆತನನ್ನು ಬೆಂಬತ್ತಿ ಬರುತ್ತದೆ. (ಈ ಕರ್ಮಕ್ಕೆ ‘ಪ್ರಾರಬ್ಧ ಕರ್ಮವೆನ್ನುತ್ತಾರೆ.)
ಈ ಕರ್ಮಬಂಧನದ ಚಕ್ರದಿಂದ ಬಿಡುಗಡೆ ಇಲ್ಲವೆ? ಇದಕ್ಕೆ ಉತ್ತರ ಕೊನೆಯ ನುಡಿಯಲ್ಲಿದೆ.
ಕಳೆದೆನೀಪರಿ ರಾತ್ರಿ
ಬೆಳಗಾಗೊ ಸಮಯದಿ
ಚೆಲುವ ಶಿಶುನಾಳಾಧೀಶ-
ನುಳುವಿ ಕೊಟ್ಟಾನವ್ವ ತಂಗೀ ಈ ಅಂಗೀ||೩||

ಕೇವಲ ಒಂದು ಜನ್ಮದಲ್ಲಿ ಅಲ್ಲ, ಇಂತಹ ಅನೇಕ ಜನ್ಮಗಳಲ್ಲಿ ಪ್ರಾಪಂಚಿಕ ಆಮಿಷಗಳಿಗೆ ಕೆಲವೊಮ್ಮೆ ಬಲಿಯಾಗುತ್ತ, ಕೆಲವೊಮ್ಮೆ ಈ ಆಮಿಷಗಳ ವಿರುದ್ಧ ಹೋರಾಡುತ್ತ ಶರೀಫರು ರಾತ್ರಿ  ಎನ್ನುವ (=ಪ್ರಪಂಚದಲ್ಲಿ ಇರುವ ) ಅವಧಿಯನ್ನು ಕಳೆದಿದ್ದಾರೆ. ಈ ಹೋರಾಟದ ಫಲವಾಗಿ, ಈಗ ಪರಮಾತ್ಮನ ಅನುಗ್ರಹವಾಗುವ ಸಮಯ ಬಂದಿದೆ. ಇಂತಹ ಅನುಗ್ರಹ ಮಾಡುವ ಪರಮಾತ್ಮನು ನಿಷ್ಕಲಂಕನಾದವನು, ಹೀಗಾಗಿ ಆತನಲ್ಲಿ ದಿವ್ಯ ಸೌಂದರ್ಯವಿದೆ. ಆದುದರಿಂದಲೇ ಆತನು ‘ಚೆಲುವ’ನು. ಇಂತಹ ಚೆಲುವ ಶಿಶುನಾಳಾಧೀಶನು ಶರೀಫರ ಶ್ರದ್ಧೆಯಿಂದ ಪ್ರೀತನಾಗಿ ಅವರಿಗೆ ಅನುಗ್ರಹಿಸಿದ್ದಾನೆ. ಅವರಿಗೆ ಲಭ್ಯವಾದ ಈ ಅಂಗಿಯು (=ಜನ್ಮವು) ಹಾಳಾಗದಂತೆ ಅದನ್ನು ಅವರಿಗೆ ಪರಮಾತ್ಮನು ಉಳುವಿ (=ಉಳಿಸಿ) ಕೊಟ್ಟಿದ್ದಾನೆ. ಈ ಅಂಗಿಯು ವಿಕಾರಗಳಿಂದ ಕೂಡಿದ ಸ್ಥೂಲ ಶರೀರವಲ್ಲ. ಅರಿಷಡ್ವರ್ಗಗಳೆನ್ನುವ ಹೆಗ್ಗಣದಿಂದ ಬಾಧೆ ಪಡುತ್ತಿರುವ ಶರೀರವಲ್ಲ. ಪರಮಾತ್ಮನಲ್ಲಿಯೇ ಮಗ್ನವಾದ ಸೂಕ್ಷ ಶರೀರವಿದು.

ಶರೀಫರ ಗೀತೆಗಳ ವೈಶಿಷ್ಟ್ಯ:
ಶರೀಫರ ಅನೇಕ ಗೀತೆಗಳು ಒಂದು ಭೌತಿಕ ದೃಶ್ಯದ ವರ್ಣನೆಯೊಂದಿಗೆ ಪ್ರಾರಂಭವಾಗುತ್ತವೆ. ‘ಗಿರಣಿ ವಿಸ್ತಾರ ನೋಡಮ್ಮ’, ‘ಬಿದ್ದೀಯಬೆ ಮುದುಕಿ’, ‘ಹುಬ್ಬಳ್ಳಿಯೊಳು ಮನಿ ಮಾಡಿದ್ಯಾ’, ‘ತೋಟವ ನೋಡಿದ್ಯಾ’ ಹಾಗು ‘ಅಗ್ಗದರವಿ ತಂದು’ ಮೊದಲಾದ ಗೀತೆಗಳು ಈ ವರ್ಗಕ್ಕೆ ಸೇರಿದವು. ಗೀತೆ ಮುಂದುವರಿದಂತೆ ಭೌತಿಕ ವರ್ಣನೆಯು ಪಾರಭೌತಿಕ ವರ್ಣನೆಯಲ್ಲಿ ಬದಲಾಗುತ್ತದೆ.

ಶರೀಫರ ಗೀತೆಗಳ ಮತ್ತೊಂದು ವೈಶಿಷ್ಟ್ಯವೆಂದರೆ ಗ್ರಾಮೀಣ ಪದಗಳ ಬಳಕೆ. ಉಚ್ಚತಮ ತತ್ವಜ್ಞಾನವನ್ನೂ ಸಹ ಶರೀಫರು ಹಳ್ಳಿಯ ದಿನಬಳಕೆಯ ಪದಗಳಲ್ಲಿಯೇ ಹೇಳುತ್ತಾರೆ. ಹೀಗಾಗಿ ಈ ತತ್ವಜ್ಞಾನವು ಕೇಳುಗರ ಮನಸ್ಸನ್ನು ನೇರವಾಗಿ ಪ್ರವೇಶಿಸುತ್ತದೆ ಹಾಗು ಗಾಢ ಪರಿಣಾಮವನ್ನು ಮಾಡುತ್ತದೆ.

ಮೂರನೆಯದಾಗಿ ಶರೀಫರು ತಮ್ಮ ಅನೇಕ ಗೀತೆಗಳಲ್ಲಿ ‘ತಂಗಿ’ ಎಂದು ಸಂಬೋಧಿಸಿರುವದನ್ನು ಕಾಣಬಹುದು. ಇದರ ಕಾರಣಗಳನ್ನು ಹೀಗೆ ಊಹಿಸಬಹುದು:
ಗಂಡಸರಿಗಿಂತ ಹೆಣ್ಣು ಮಕ್ಕಳಿಗೆ ಪ್ರಪಂಚದ ಜೊಂಜಾಟ, ವ್ಯಾಪ ಜಾಸ್ತಿಯಾಗಿರುತ್ತದೆ. ಆದರೂ ಸಹ ದೈವಿಕತೆಯ ಬಗೆಗಿನ ಒಲವು ಗಂಡಸರಿಗಿಂತ ಹೆಣ್ಣುಮಕ್ಕಳಲ್ಲಿಯೇ ಜಾಸ್ತಿ. ಅಲ್ಲದೆ ಅಣ್ಣ ಹಾಗು ತಂಗಿಯರಲ್ಲಿ ಇರುವ ಸತ್ತೆ ಹಾಗು ಅಕ್ಕರೆ ಇತರರಲ್ಲಿ ಕಂಡು ಬರುವದಿಲ್ಲ. ಆದುದರಿಂದ ಶರೀಫರು ತತ್ವಬೋಧನೆಯ ಪದಗಳನ್ನು ‘ತಂಗಿ’ಗೆ ಸಂಬೋಧಿಸಿ ಹಾಡಿದ್ದಾರೆ.

(ಟಿಪ್ಪಣಿ: ಈ ಗೀತೆಯ ವ್ಯಾಖ್ಯಾನ ಬರೆಯುವಾಗ ಸಲಹೆ, ಸೂಚನೆ ನೀಡಿದ ನನ್ನ ಅರ್ಧಾ೦ಗಿನಿ ಶ್ರೀಮತಿ ವನಮಾಲಾ ಇವರಿಗೆ ನಾನು ಕೃತಜ್ಞನಾಗಿದ್ದೇನೆ.)

60 comments:

ಸೀತಾರಾಮ. ಕೆ. / SITARAM.K said...

ಈ ಕವನವನ್ನ ಕೇಳಿದ್ದರು ಪೂರ್ಣ ಪ್ರಮಾಣದ ಅರಿವು ಬಂದಿರಲಿಲ್ಲ. ಅದನ್ನು ತಮ್ಮ ಕವನ ಸಮರ್ಥವಾಗಿ ಮಾಡಿದೆ.
. ವಿಶದವಾಗಿ ಒಪ್ಪವಾಗಿ ವಿವರಿಸಿದ್ದಿರಾ,,,

ಆದರೆ ಅಲ್ಲಲ್ಲಿ ಟೈಪಿಸಿದ ಕಾಗುಣಿತದಲ್ಲಿನೋ ತಪ್ಪಾಗಿ ಜೀರಾÚನಿ,ಪುನರÓನ್ಮ,ಅರುÓನನಿಗೆ, "ರ" ಕಾರ ಒಟ್ಟು ಸ್ವಲ್ಪ ತೊಂದರೆಯಾಗಿದೆ.

ಮಹೇಶ said...

ಶಿಶುನಾಳ ಶರೀಫರ ಈ ಕವನವನ್ನು ಇನ್ನೂವರೆಗೆ ಕೇಳಿರಲಿಲ್ಲ. ಧನ್ಯವಾದಗಳು

ಅನಂತ್ ರಾಜ್ said...

ಶಿಶುನಾಳ ಶರೀಫರ ತತ್ವಪದಗಳ ವಿಶ್ಲೇಷಣೆ ತು೦ಬಾ ವಿಚಾರಪೂರಿತವಾಗಿತ್ತು ಸುನಾತ್ ಸರ್. ದಾಸ ಸಾಹಿತ್ಯದ "ದಾಸರ ಮು೦ಡಿಗೆಗಳು" ಪ್ರಾಕಾರದಲ್ಲಿ ತತ್ವಪದಗಳ ಮಹಾಪೂರವೇ ಹರಿದು ಬಿಟ್ಟಿದೆ. ತತ್ವ ಸುವ್ವಾಲಿಗಳನ್ನು ಹಾಡುತ್ತಾ ಪ್ರಾಕೃತಿಕ ವಿಚಾರಗಳಿ೦ದ ನಮ್ಮನ್ನು ಎಚ್ಚರಿಸಿ, ಅಧ್ಯಾತ್ಮದ ಅರಿವನ್ನು ಮೂಡಿಸುವ ಸ೦ತರ ನಾಡಿನಲ್ಲಿ ಜನಿಸಿದ ನಾವೇ ನಿಜಕ್ಕೂ ಧನ್ಯರು ಅನಿಸುತ್ತದೆ ಅಲ್ಲವೆ? ಧನ್ಯವಾದಗಳು ಸರ್.

ಅನ೦ತ್

umesh desai said...

ಕಾಕಾ ಶಿಶುನಾಳ ಶರೀಫರ ನಾ ಆಗಾಗ ಗುನುಗುನಿಸುವ ಹಾಡಿದು. ಎಂದಿನಂತೆ ನಿಮ್ಮ ವಿಶ್ಲೇಷಣೆ ಸೊಗಸಾಗಿದೆ.
ಆದ್ರ ನಿಮ್ಮಿಂದ ಒಂದು ಸಂಶಯ ನಿವಾರಣಾ ಆಗಬೇಕು. ಶರೀಫರು ಪವಾಡ ಮಾಡತಿದ್ರು ಅಂತ ಕೇಳೇನಿ ಇದು ಖರೆ
ಏನು ಯಾಕಂದ್ರ ಶಿಶುನಾಳ ಶರೀಫ ಸಿನೇಮಾ ನೋಡಿ ಅನೇಕರು ಮೂಗು ಮುರಿದಿದ್ರು ಯಾಕಂದ್ರ ಅದರಾಗ ಒಂದೂ
ಪವಾಡ ತೋರಿಸಿಲ್ಲ ಅಂತ...ತತ್ವ ಹೇಳಾವ್ರು ಪವಾಡ ಮಾಡಲಾರ್ರು ಇದು ನನ್ನ ನಂಬಿಕೆ ನೀವೆನಂತೀರಿ

sunaath said...

ಸೀತಾರಾಮರೆ,
ಕಾಗುಣಿತದ ತಪ್ಪುಗಳನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು. ಇದೀಗ ಅವನ್ನು ಸರಿಪಡಿಸಿದ್ದೇನೆ.

sunaath said...

ಮಹೇಶ,
ಶರೀಫರ ಈ ಹಾಡು ಧ್ವನಿಮುದ್ರಿತವಾದಂತೆ ಕಾಣುವದಿಲ್ಲ.
ಸ್ಪಂದನೆಗಾಗಿ ಧನ್ಯವಾದಗಳು.

sunaath said...

ಅನಂತರಾಜರೆ,
ನೀವು ಹೇಳುವದು ಸರಿಯಾಗಿದೆ. ಕನ್ನಡ ನಾಡಿನಲ್ಲಿ ವಚನಕಾರರು ಹಾಗು ದಾಸರು ಜನಸಾಮಾನ್ಯರನ್ನು ಆಧ್ಯಾತ್ಮಿಕತೆಯತ್ತ ಸೆಳೆದರೆ, ಭಾರತದ ಇತರ ಭಾಗಗಳಲ್ಲಿ ಭಕ್ತಿಪಂಥದ ಅಧ್ವರ್ಯರು ಈ ಕಾರ್ಯವನ್ನು ಮಾಡಿದ್ದಾರೆ. ಅವರಿಗೆಲ್ಲ ನಮ್ಮ ನಮನಗಳು ಸಲ್ಲುತ್ತವೆ.

sunaath said...

ದೇಸಾಯರ,
ಶರೀಫರು ತಮ್ಮ ಕೆಲವು ಗೀತೆಯೊಳಗ, ದೇವರು ತನಗೆ ಪವಾಡ ಮಾಡುವ ಶಕ್ತಿಯನ್ನು ಕೊಡಲಿಲ್ಲ ಎಂದು ಹೇಳಿಕೊಂಡಿದ್ದಾರೆ. ‘ಎಲ್ಲರಂಥವನಲ್ಲ ನನ ಗಂಡ’ ಹಾಗು ‘ನಡಿ ನಡಿಯುತ ಗಂಡ ನಡಮುರಿದೊದೆದೆನ್ನ’ ಗೀತೆಗಳು ಈ ಸೂಚನೆಯನ್ನು ನೀಡುತ್ತವೆ.ಇನ್ನು, ಅವರು ಅಮವಾಸ್ಯೆಯೆಂದು ಚಂದ್ರನನ್ನು ತೋರಿಸಿದ ಕತೆಯನ್ನು ನಂಬಲು ಸಾಧ್ಯವಿಲ್ಲ!

PARAANJAPE K.N. said...

ಗೀತೆಯ ಸಾರ ಶಿಶುನಾಳ ಶರೀಫರ ಗೀತೆಯಲ್ಲಿರುವುದನ್ನು ಗುರುತಿಸಿ ವಿಶ್ಲೇಷಿಸಿದ್ದೀರಿ. ಎ೦ದಿನ೦ತೆ ನಿಮ್ಮ ವಿಶ್ಲೇಷಣೆ ultimate . ತು೦ಬಾ ಚನ್ನಾಗಿದೆ. ಸ೦ಗ್ರಹಯೋಗ್ಯ.

sunaath said...

ಪರಾಂಜಪೆಯವರೆ,
ಗೀತೆಯ ಸಾರವು ಬಹುತೇಕ ನಮ್ಮ ಎಲ್ಲ ಸಂತರ ಹಾಡುಗಳಲ್ಲಿ ಅಡಕವಾಗಿದೆ.ಗೀತೆಯನ್ನು ಭಾರತೀಯ ತತ್ವಜ್ಞಾನದ ಕೈಪಿಡಿ ಎಂದು ಕರೆಯಬಹುದೇನೊ?

ಮನಮುಕ್ತಾ said...

ಕಾಕಾ,
ಇವತ್ತು ಬೆಳಿಗ್ಗೆಯಷ್ಟೆ ಕರ್ಮ ಫಲ,ಆತ್ಮ,ಪೂರ್ವ ಜನ್ಮ,ಮು೦ದಿನ ಜನ್ಮ,ಇವುಗಳ ಬಗ್ಗೆ ನಾನು ನಮ್ಮೆಜಮಾನರು ಮಾತಾಡಿದ್ದೆವು.
ನಿಮ್ಮ ಈ ಲೇಖನ ತು೦ಬಾ ಇಷ್ಟವಾಯ್ತು.ನನ್ನವರಿಗೆ ನಿಮ್ಮ ಲೇಖನ ಓದಲು ತಿಳಿಸುವೆ.
ಧನ್ಯವಾದಗಳು ಕಾಕ.

sunaath said...

ಮನಮುಕ್ತಾ,
What a coincidence!
ನಿಮಗೆ ಸ್ವಾಗತ.

ಚುಕ್ಕಿಚಿತ್ತಾರ said...

ಕಾಕ
ಶರೀಫರ ಪದಗಳನ್ನು ವಿಶ್ಲೇಷಿಸಿದ ರೀತಿ ತು೦ಬಾ ಚನ್ನಾಗಾಗಿದೆ. ಮನಸ್ಸು ಎನ್ನುವುದನ್ನು ಪಳಗಿಸಲು ಈ ದಾಸಪದಗಳು ಸಹಾಯ ಮಾಡುತ್ತವೆ. ಇರುವ ಜನ್ಮವನ್ನು ಸು೦ದರವಾಗಿಸಿಕೊಳ್ಳಲು ಭೌತಿಕದ ಜೊತೆ ಪಾರಮಾರ್ಥಿಕವೂ ಸೇರಿದರೆ ಸಾರ್ಥಕ ಜೀವನ ನಮ್ಮದಾಗುತ್ತದೆ..

ಥ್ಯಾ೦ಕ್ಯೂ ಕಾಕ..

sunaath said...

ವಿಜಯಶ್ರೀ,
ನೀವು ಹೇಳಿದಂತ, ದಾಸರ ಪದಗಳು ಹಾಗು ಇತರ ಸಂತರ ಪದಗಳು, ನಮ್ಮ ಮನಸ್ಸನ್ನು ಒಂದು ಹದಕ್ಕೆ ತರಲು ತುಂಬಾ ಸಹಾಯ ಮಾಡುತ್ತವೆ.

V.R.BHAT said...

ಶರೀಫರು ಗುರು ಗೋವಿಂದಭಟ್ಟರಂತಹ ಸದ್ಗುರುವನ್ನು ಪಡೆದರು. ಸಮಾಜದ ವಿನಾಶಕಾರೀ ಅಂಶಗಳನ್ನು ಮರ್ದಿಸಿ ತನ್ನ ಶಿಷ್ಯನಿಗೆ ಜನಿವಾರ ಹಾಕಿದ ಪುಣ್ಯಾತ್ಮ ಆ ಗುರು! ಅಂತೆಯೇ ಗುರುವಿನ ಸಂಪೂರ್ಣ ತತ್ವಬೋಧೆಯನ್ನೂ ಪಡೆದು ಅದನ್ನು ರಕ್ತಗತಮಾಡಿಕೊಂಡು ಹಾದಿಬೀದಿಗಳಲ್ಲಿ ಅಲೆಯುತ್ತಾ ತತ್ವವನ್ನು ಬೋಧಿಸಿದವರು ಶರೀಫರು. ಜ್ಞಾನಿಗೆ-ಮುಮುಕ್ಷುವಿಗೆ ಇರುವುದು ಒಂದೇ ಧರ್ಮ, ಅದು ಎಲ್ಲರ ಒಳಿತನ್ನು ಬಯಸುವ ಮಾನವ ಧರ್ಮ. ಹಲವಾರು ಸ್ತುತ್ಯಾರ್ಹ ಕೃತಿಗಳನ್ನು ಅನುಭವದಿಂದ ರಚಿಸಿ ಹಾಡಿದ ಶರೀಫರು ಕನಕ-ಪುರಂದರರಂತೇ ಇನ್ನೊಂಡು ವಿಧದಲ್ಲಿ ದಾಸರು, ಸಜ್ಜನರು, ಶ್ರೇಷ್ಠರು. ಅವರ ಕೃತಿಯೊಂದನ್ನು ಸಮರ್ಪಕವಾಗಿ ಅರ್ಥೈಸಿ ಉಣಬಡಿಸಿದ ತಮ್ಮ ನಿರೂಪಣೆ ಚೆನ್ನಾಗಿದೆ,ಮತ್ತಷ್ಟು ಹೀಗ ಅಮೃತಧಾರೆ ನಮಗೆ ತಮ್ಮಿಂದ ಸಿಗಲಿ ಎಂದು ಹಾರೈಸುತ್ತೇನೆ, ಅನಂತ ಕೃತಜ್ಞತೆಗಳು

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಕಾಣುವುದಕ್ಕೆ ಸರಳವಾಗಿರುವ ಶಿಶುನಾಳ ಶರೀಫರ ಕವನದ ತತ್ವಾರ್ಥವನ್ನು ಸು೦ದರವಾಗಿ ನಿರೂಪಿಸಿದ್ದೀರಿ.ಇಷ್ಟೊ೦ದು ನನಗೂ ಗೊತ್ತಿರಲಿಲ್ಲ,ಧನ್ಯವಾದಗಳು ಸಾರ್.

sunaath said...

ಭಟ್ಟರೆ,
ಗುರು ಗೋವಿಂದ ಭಟ್ಟರಿಗೆ ಹಾಗು ಶಿಷ್ಯ ಶರೀಫರಿಗೆ ನಮ್ಮೆಲ್ಲರ ಕೃತಜ್ಞತೆಗಳು ಸಲ್ಲುತ್ತವೆ.

sunaath said...

ಕುಮಾರರೆ,
ಶಿಶುನಾಳ ಶರೀಫರ ಗೀತೆಗಳು ಕಾಣುವದಕ್ಕೆ ಸಾಮಾನ್ಯ. ಒಳಗಿನ ತಿರುಳು ಅಸಾಮಾನ್ಯ!

ಮೃತ್ಯುಂಜಯ ಹೊಸಮನೆ said...

ಶರೀಫರ ಪದ್ಯಕ್ಕೆ ಸೂಕ್ತ ವಿವರಣೆ. ಶರೀಫರು ತಮ್ಮ ತತ್ವಗಳನ್ನು ಹೇಳಲು ಅಥವಾ ಹಾಡಲು ಕೆಲವು ಪ್ರತೀಕಗಳನ್ನು ಬಳಸಿಕೊಳ್ಳುತ್ತಾರೆ. ಅಗ್ಗದ ಅರಿವಿ, ಮನೆಯ ಮಾಳಿಗಿ..ಇತ್ಯಾದಿ.ಆದರೆ ಈ ಪ್ರತೀಕಗಳ ಅರ್ಥ ಪದ್ಯದ ಚೌಕಟ್ಟಿನಲ್ಲಿ ಹುಟ್ಟುವುದಿಲ್ಲ.ಪದ್ಯ ಬೆಳೆದಂತೆ ಅರ್ಥವ್ಯಾಪ್ತಿ ಬೆಳೆಯುವುದಿಲ್ಲ. ಬದಲಿಗೆ ಪದ್ಯದ ಆರಂಭದಲ್ಲಿಯೇ ಅವಕ್ಕೆ ನಾವು ಒಂದು ಅರ್ಥ ಆರೋಪಿಸಿದರೆ ಮಾತ್ರ ಪದ್ಯದ ತತ್ವ ಅರ್ಥವಾಗುತ್ತದೆ. ನೀವು ವಿಶ್ಲೇಷಿಸಿದ ಪದ್ಯದಲ್ಲಿ ಅಗ್ಗದ ಅರಿವಿಯನ್ನು ಅಗ್ಗದ ಜ್ಞಾನಕ್ಕೂ ಸಮೀಕರಿಸಬಹುದು ಅಂತ ನನ್ನ ಭಾವನೆ. ಈ ಸಮೀಕರಣದ ಹಿನ್ನೆಲೆಯಲ್ಲೂ ಪದ್ಯವನ್ನು ಅರ್ಥೈಸಬಹುದಲ್ಲವಾ?

Narayan Bhat said...

ಶಿಶುನಾಳ ಶರೀಫರ ಈ ತತ್ವ ಪದಕ್ಕೆ ನಿಮ್ಮ ವಿಶ್ಲೇಷಣೆ ನನಗೆ ತುಂಬಾ ಹಿಡಿಸಿತು..ಕೃತಜ್ಞತೆಗಳು.

sunaath said...

ಹೊಸಮನೆಯವರೆ,
ಹೊಸದೊಂದು ದೃಷ್ಟಿಕೋನವನ್ನು ತೋರಿಸಿರುವಿರಿ. ನೀವು ಹೇಳಿದಂತೆ, ಶರೀಫರ ಪ್ರತೀಕಗಳಿಗೆ ಅರ್ಥವನ್ನು ಮೊದಲೇ ಆರೋಪಿಸಬೇಕಾಗುತ್ತದೆ. ಆದರೆ ನನಗೆ ಅನಿಸುವಂತೆ, ಈ ಪ್ರತೀಕವನ್ನು ಆಧರಿಸಿಯೇ, ಕವನವು ವಿಸ್ತಾರಗೊಳ್ಳುತ್ತ ಹೋಗುತ್ತದೆ. ‘ಅಗ್ಗದ ಅರಿವಿ’ಗೆ ಅಲ್ಪಜ್ಞಾನ ಎನ್ನುವ ಅರ್ಥವನ್ನು ಕೊಡಬಹುದು. ಆದರೆ ನನ್ನ ಮನಸ್ಸು ಏಕೋ ಈ ಅರ್ಥಕ್ಕೆ ಹೊಂದಿಕೊಳ್ಳುತ್ತಿಲ್ಲ!

sunaath said...

ನಾರಾಯಣ ಭಟ್ಟರೆ,
ನಿಮ್ಮ ಮೆಚ್ಚುಗೆಗೆ ನಾನು ಕೃತಜ್ಞನಾಗಿದ್ದೇನೆ.

sunaath said...

ವಸಂತರೆ,
ಶಿಶುನಾಳ ಶರೀಫರು ನಮ್ಮ ನಾಡಿನ ದೊಡ್ಡ ಸಂತರು ಹಾಗು ಕವಿಗಳು. ಅವರ ಗೀತೆಗಳನ್ನು ತಿಳಿದುಕೊಳ್ಳುವದೇ ಒಂದು ಖುಶಿ!

SATISH N GOWDA said...

sisunala shariparannu nenendu manassu hagura vayitu......

Sushrutha Dodderi said...

ಥ್ಯಾಂಕ್ಯೂ ವೆರಿ ಮಚ್ ಕಾಕಾ.. ಬೆಂಗ್ಳೂರ್ ಬಂದಾಗ ನಿಮ್ಗೂ ಆಂಟಿಗೂ ಚಾಕ್ಲೇಟ್ ಕೊಡಿಸ್ತೀನಿ. :-)

sunaath said...

ಹೌದು ಸತೀಶ, ಮನಸ್ಸಿಗೆ ನೆಮ್ಮದಿ ತರುವ ಸಾಮರ್ಥ್ಯವು
ಸಂತರ ಗೀತೆಗಳಿಗೆ ಇರುತ್ತದೆ!

sunaath said...

ಅಪ್ಪಾ ಸುಶ್ರುತ,
ಚಾಕ್‍ಲೇಟಿಗಾಗಿ ಬೆಂಗಳೂರುವರೆಗೆ ಬರೋದು ಆಗೋದಿಲ್ಲ. ಈ-ಮೇಲ್ ಮೂಲಕ ಕಳಿಸ್ಕೊಟ್ಟರೆ ಸಾಕು.
-ಕಾಕಾ

Manu said...

ಈ ..............."ಅಗ್ಗದರವಿ ತಂದು.." CD ಹಾಕೊಂಡು ೧೦, ೨೦, ೫೦, ಬಾರಿ ಕೇಳಿದರು ಓಂದು ನಯಾ ಪೈಸಾನು ಅರ್ತ ಆಗಿರಲಿಲ್ಲ.
ಬಟ್ ಆದರು ಯಾವದೋ ಅಲೌಕಿಕ ಆನಂದ ಹತ್ತಿರ ಸುಳಿದ ಅನುಬವ ಆಗಾಗ ಆಗ್ತಿತ್ತು!
ನಿಮ್ಮ ವಿಶ್ಲೇಷಣೆ ಓದಿದ ಮೇಲೆ ಇನ್ನೂ ದೈರ್ಯ ವಾಗಿ ಅದನ್ನ ಕೇಳ್ತಾ ಕುತ್ಕೊಬಹುದು.
ದನ್ಯವಾದಗಳು ನಿಮಗೂ ಹಾಗೂ e-link ಕಳಿಸಿದ ನಿಮ್ಮ ಚಾಕೊಲೆಟ್ ಗೆಳೆಯ ಸುಶ್ರುತ ದೊಡ್ಡೇರಿಗೂ.

sunaath said...

ಮನು,
ಸುಶ್ರುತ ಈಗಾಗಲೇ ನನಗೆ ಚಾಕೊಲೇಟ್ ಕಳಿಸಿ ಬಿಟ್ಟಿದ್ದಾರೆ. ಹೀಗಾಗಿ ನೀವು ಅವರಿಗೇ ಧನ್ಯವಾದ ಹೇಳಿದರೆ ಸಾಕು!

shivu.k said...

ಸುನಾಥ್ ಸರ್,

ಶಿಶುನಾಳರ ಈ ಕವಿತೆಯು ನನಗೆ ಗೊತ್ತಿರಲಿಲ್ಲ. ಅದನ್ನು ಗೊತ್ತುಮಾಡಿಸುವುದರ ಜೊತೆಗೆ ಸಂಪೂರ್ಣವಿವರವನ್ನು ಅವಲೋಕಿಸಿದ್ದೀರಿ. ಅದಕ್ಕಾಗಿ ಧನ್ಯವಾದಗಳು.

sunaath said...

ಶಿವು,
ಶರೀಫರ ಎಲ್ಲ ಗೀತೆಗಳಿಗೂ ಸರಿಸಮವಾದ ಮನ್ನಣೆ ಸಿಕ್ಕಿಲ್ಲ.
‘ಕೋಡಗನ್ನ ಕೋಳಿ ನುಂಗಿತ್ತ’, ‘ಬಿದ್ದೀಯಬೆ ಮುದುಕಿ’ ಇಂತಹ ಗೀತೆಗಳು ಹೆಚ್ಚು ಜನಮನ್ನಣೆ ಪಡೆದಿವೆ.

Badarinath Palavalli said...

ಸರ್,

ಶರೀಫ್ ಒಬ್ಬ ಅಪ್ರತಿಮ ತತ್ವಪದ ರಚನಕಾರ. ಅಗ್ಗದರವಿಯಲ್ಲಿ ಅಡಗಿರುವ ಸತ್ವವನ್ನು ನೀವು ಅರ್ಠವತ್ತಾಗಿ ಬಿಚ್ಚಿಟ್ಟಿದ್ದೀರಿ ಅದಕ್ಕಾಗಿ ಧನ್ಯವಾದಗಳು.
ಶಿಶುನಾಳದೀಶನಿಗೂ ಗೋವಿಂದ ಭಟ್ಟರಿಗೂ ಸಾಷ್ಟಾಂಗ ನಮಸ್ಕಾರಗಳು.

ಅಂದ ಹಾಗೇ ’ನನ್ನ ಕೂಸೇ’ ಕವನ ಸ್ವಲ್ಪ ಬದಲಾವಣೆಯಾಗಿದೆ. ಓದಿ ಕಮೆಂಟ್ ಹಾಕಿ..

http://badari-poems.blogspot.com/2010/11/blog-post.html

email: cameraman@rediffmail.com

I am in Facebook search “Badarinath.Palavalli”

sunaath said...

ಬದರಿನಾಥರೆ,
ನಿಮ್ಮ ಜೊತೆಗೇ ನನ್ನದೂ ಪ್ರಣಾಮಗಳು.

AntharangadaMaathugalu said...

ಕಾಕಾ...
ನಾನು ಈ ಪದ ಕೇಳಿಲ್ಲ. ಆಡಿಯೋ ಕೊಂಡಿ ಏನಾರ ಇದ್ರೆ ಕೊಡಿ ಕಾಕಾ. ನಿಮ್ಮ ಅರ್ಥ ವಿಶ್ಲೇಷಣೆ ನಂಗೆ ತುಂಬಾ ಇಷ್ಟವಾಯಿತು. ನಿಜವಾಗಲೂ ಎಷ್ಟು ಸರಳವಾಗಿ ಆಧ್ಯಾತ್ಮವನ್ನು ತಿಳಿಸಿ ಬಿಟ್ಟಿದ್ದಾರೆ. ಅದನ್ನು ಅರಿಯುವುದೂ ಕೂಡ ನಮ್ಮಿಂದ ಸಾಧ್ಯವಾಗದೇ ಹೋಗಿದೆ. ಓದಿದವರಿಗೆಲ್ಲಾ ಅರ್ಥವಾಗುವಂತೆ ತಿಳಿಸಿಕೊಟ್ಟಿದ್ದೀರಿ ಕಾಕಾ.. ಬರೆಯಲು ಸಲಹೆ, ಪ್ರೇರಣೆ ಕೊಟ್ಟಿದ್ದಕ್ಕೆ ಆಂಟೀಗೂ, ನಿಮಗೂ ಇಬ್ಬರಿಗೂ ಧನ್ಯವಾದಗಳು... :-)
ಶ್ಯಾಮಲ

ಅಪ್ಪ-ಅಮ್ಮ(Appa-Amma) said...

ಸುನಾಥ್ ಕಾಕಾ,

ನೀವು ಹೇಳಿದ ಹಾಗೇ ನಾವು ಭಾರತೀಯರಿಗಷ್ಟೇ ಪುನರ್ಜನ್ಮದ ಬಗ್ಗೆ ಸ್ಪಲ್ಪ ಹೆಚ್ಚಿನ ಆಸಕ್ತಿ-ಉಲ್ಲೇಖಗಳಿವೆ.

ಶರೀಫ್‍ರ ಅಗ್ಗದರವಿ ತಂದು ನಮಗೆಲ್ಲಾ ಅರ್ಥ ಮಾಡಿಸಿದ್ದಕ್ಕೆ ಧನ್ಯವಾದಗಳು.

ವನಮಾಲ ಚಾಚಿಗೂ ನಮಸ್ಕಾರಗಳು

sunaath said...

ಶ್ಯಾಮಲಾ,
ಈ ಗೀತೆಗೆ ವ್ಯಾಖ್ಯಾನ ಬರೆಯಲು ಪ್ರೇರಣೆ ಕೊಟ್ಟವರು ಸುಶ್ರುತ ದೊಡ್ಡೇರಿಯವರು. ಬರೆಯುವಾಗ ಸಲಹೆ ನೀಡಿದವರು ನನ್ನ ಪತ್ನಿ ವನಮಾಲಾ. ಇವರೀರ್ವರಿಗೂ ಅಲ್ಲದೆ, ಪ್ರೀತಿಯಿಂದ ಓದುತ್ತಿರುವ ನಿಮಗೂ ಸಹ ನನ್ನ ಕೃತಜ್ಞತೆಗಳು.

sunaath said...

ಅಪ್ಪ-ಅಮ್ಮ,
ನಿಮ್ಮ ವಂದನೆಗಳನ್ನು ಚಾಚಿಗೆ ತಿಳಿಸಿದೆ. ಅವರು ನಿಮಗೆ ಮರುವಂದನೆ ಹೇಳಿದ್ದಾರೆ.

ದಿನಕರ ಮೊಗೇರ said...

sunaath sir,
ee kavana keLiralilla...

iadara jote vyaakhyaana kottiddarinda innu anukulavaayitu sir...

dhanyavaada....

ಮೃತ್ಯುಂಜಯ ಹೊಸಮನೆ said...

ನೀವು ಹೇಳುವುದು ಸರಿ. ಶರೀಫರ ತತ್ವಪದಗಳು ಪ್ರತೀಕ/ಪ್ರತಿಮೆಗೆ ಮೊದಲೇ ಆರೋಪಿತಗೊಂಡ ಅರ್ಥದ ಆಧಾರದಲ್ಲಿ ಬೆಳೆಯುತ್ತವೆ. ಗಮನಿಸಬೇಕಾದ ಒಂದು ಅಂಶವೆಂದರೆ ಕವನ ಬೆಳೆದಂತೆ ಈ ಪ್ರತೀಕ/ಪ್ರತಿಮೆಯ ಅರ್ಥ ವಿಸ್ತಾರವಾಗುವುದಿಲ್ಲ. ನೀವು ಬೇಂದ್ರೆಯವರನ್ನು ತುಂಬಾ ಆಳವಾಗಿ ಅಭ್ಯಾಸ ಮಾಡಿರುವ ಹಿನ್ನೆಲೆಯಲ್ಲಿ ಹೇಳುವುದಾದರೆ, ಬೇಂದ್ರೆಯವರ ಕವನಗಳಲ್ಲಿ, ಕವನ ಬೆಳೆದಂತೆ ಪ್ರತಿಮೆ/ಪ್ರತೀಕದ ಅರ್ಥ ವಿಸ್ತರಣೆ ನಡೆಯುತ್ತದೆ.(ನಿಮ್ಮ ಲೇಖನಗಳಲ್ಲಿ ತುಂಬಾ ಸೂಕ್ಷ್ಮವಾಗಿ ಅದನ್ನು ಗುರುತಿಸಿದ್ದೀರಿ.) ಉದಾಹರಣೆಗೆ ಅವರ ಬೆಳಗು ಕವಿತೆಯನ್ನು ಗಮನಿಸಿ. ಸಾಧಾರಣವಾದ,ದಿನನಿತ್ಯ ಸಂಭವಿಸುವ ಬೆಳಗು "ಬರಿ ಬೆಳಗಲ್ಲೋ ಅಣ್ಣಾ" ಎಂದಾಗಲು ಬೇಕಾದ ಸಿದ್ಧತೆ ಕವನದ ಒಳಗಿಂದಲೇ ಬೆಳೆಯುತ್ತದೆ. ಮಂಜು ಅಮೃತದ ಬಿಂದುವಾಗುವುದು, ಪ್ರಕೃತಿ ಹಕ್ಕಿಹಾಡುಗಳಿಗೆ ಕೊರಳಾಗುವುದು..ಇತ್ಯಾದಿ.ಶರೀಫರ ಕವನಗಳಲ್ಲಿ ಈ ಮಟ್ಟದ ಕಾವ್ಯಸಿದ್ಧಿ ಕಾಣುವುದಿಲ್ಲ. ಬಹುಷಃ ಶರೀಫರಿಗೆ ತತ್ವ ಪ್ರಚಾರ ಕಾವ್ಯಸಿದ್ಧಿಗಿಂತ ಮುಖ್ಯ ಅನಿಸಿರಬಹುದು.(ಜನಸಾಮಾನ್ಯರಿಗೆ ತತ್ವ ಪ್ರಚಾರ ಮಾಡುವವರು ಸರಳವಾಗಿ ಹೇಳುತ್ತಾರೆ.ಪುರಂದರ,ಕನಕದಾಸರ ಪದ್ಯಗಳನ್ನು ಗಮನಿಸಬಹುದು.ಶರೀಫರು ಈ ಪ್ರತೀಕಗಳನ್ನು ಬಳಸಿಕೊಂಡ ಕಾರಣವೇನಿರಬಹುದು?)

ಹಳ್ಳಿ ಹುಡುಗ ತರುಣ್ said...

sunaath sir,

sharifa ra ee kavite nanu kelrililla....

sundarvada kaviteyanna arta ottagi vivarisidakke danyavaadagalu.. .

mattastu sharifh ra kavitegalu (dwani mudrita agade irodu) iddare post maadi...

prabhamani nagaraja said...

ಶಿಶುನಾಳ ಶರೀಫರ ಈ ಕವನವನ್ನು ಬಹಳ ಚೆನ್ನಾಗಿ ವಿಶ್ಲೇಷಿಸಿ ಅರ್ಥವನ್ನು ತಿಳಿಸಿದ್ದಕ್ಕಾಗಿ ಅನೇಕ ಧನ್ಯವಾದಗಳು ಸರ್. ನಿಮ್ಮಿ೦ದ ಇನ್ನೂ ಹೆಚ್ಚು ಇ೦ಥಾ ಬರಹಗಳನ್ನು ನಿರೀಕ್ಷಿಸುತ್ತೇನೆ

sunaath said...

Dear Dinakar,
Unable to comment in Kannada.
Thank you so much for giving your time to the article.

sunaath said...

Dear Hosamane sir,
You have correctly pointed out the difference between the Dasas and Shareef. Shareef was a 100% village man. Whatever he observed in the villages provoked him to describe it in a poetic way and transform into a metaphysical message.

However all the dasas put themselves a little away from the ordinary folks and passed philosophical advice to them.

This is what I feel. However there can be other views.
Please let me know your view-point.

sunaath said...

ಹಳ್ಳಿ ಹುಡುಗ ತರುಣರೆ,
ಖಂಡಿತವಾಗಿಯೂ ಮಾಡುವೆ.

sunaath said...

ಮೇಡಂ
ನಿಮಗೆ ಧನ್ಯವಾದಗಳು.

ಅನಿಕೇತನ ಸುನಿಲ್ said...

ತುಂಬಾ ಧನ್ಯವಾದ ಸರ್..........ಶರೀಫರ ತತ್ವ ಪದಗಳನ್ನ ಅರ್ಥ ಮಾಡಿಕೊಂದಾಗೆಲ್ಲ ಒಂದು ಹೊಸ ಸಂಚಲನ ಮೂಡುತ್ತದೆ .
ಹೀಗೆಯೇ ತಾವು ಇನ್ನು ಹೆಚ್ಚಿನ ಅವರ ಪಧ್ಯಗಳನ್ನ ಅರ್ಥ ಸಹಿತ ವಿರಿಸಿ ಅನ್ನೋ ಕೋರಿಕೆ ನನ್ನದು.
ಸುನಿಲ್.

ಅನಿಕೇತನ ಸುನಿಲ್ said...

ಸುನ್ನಾಥ್ ಸರ್,
ಈ ಹಾಡು ತುಂಬಾ ಹಿಂದೆಯ ಧ್ವನಿಮುದ್ರಿತವಾಗಿದೆ .
ಪೂಜ್ಯ ಸಿ ಅಶ್ವಥ್ ಅವರು ಸ್ವರ ಸಂಯೋಜಿಸಿದ್ದಾರೆ.
ಸುನಿಲ್.

sunaath said...

ಸುನೀಲರೆ,
ಶರೀಫರ ತತ್ವಪದಗಳನ್ನು ಕಾಲಕಾಲಕ್ಕೆ ಖಂಡಿತವಾಗಿಯೂ ವಿವರಿಸುವೆ. ಈ ಗೀತೆಯು ಧ್ವನಿಮುದ್ರಿತವಾಗಿದ್ದದು ಗೊತ್ತಿರಲಿಲ್ಲ. ಧನ್ಯವಾದಗಳು.

Subrahmanya said...

ಕಾಕಾಶ್ರೀ,

ಎಷ್ಟು ಚೆನ್ನಾಗಿ ಅರ್ಥೈಸಿದ್ದೀರಿ !. ಎಂದೋ ಎಲ್ಲೋ ಕೇಳಿದ್ದ ಈ ಪದ್ಯದ ಅರ್ಥವೇನೂ ತಿಳಿದಿರಲಿಲ್ಲ, ಈಗ ತಿಳಿದುಕೊಂಡತಾಯಿತು. ’ಹೆಗ್ಗಣ’ದ ಮರ್ಮವನ್ನು ಕೆಲವೇ ಪದಗಳಲ್ಲಿ ಹಿಡಿದಿಟ್ಟಿರುವ ಶರೀಫರಿಗೆ ಶರಣು ಹೇಳಲೇಬೇಕು.

ಶರೀಫರ ತತ್ವಪದಗಳು ದಾಸರಪದಗಳಿಗಿಂತಲೂ ಹೆಚ್ಚು ಆಪ್ಯಾಯಮಾನವಾಗುವುದು ಅವರ ಪದ್ಯಗಳಲ್ಲಿ ಕಂಡುಬರುವ ಸರಳ ಶೈಲಿ ಮತ್ತು ಗ್ರಾಮೀಣ ಸೊಗಡಿನ ಪದಬಳಕೆ. ದಾಸರ ಪದಗಳಲ್ಲಿ ಬದುಕನ್ನು ಕಲೆಯಾಗಿ ಸ್ವೀಕರಿಸಬೇಕೆನ್ನುವ ಸಂದೇಶ ಬಹು ಕಡಿಮೆಯೆಂದೇ ಹೇಳಬಹುದು ( ಕೆಲವನ್ನು ಬಿಟ್ಟು. ಉದಾ : ಮಾನವ ಜನ್ಮದೊಡ್ಡದು, ಇತ್ಯಾದಿ). ಮನುಷ್ಯನೇನೂ ಅಲ್ಲ ಎಲ್ಲವೂ ಪರಮಾತ್ಮನೇ ಎನ್ನುವ ಭರದಲ್ಲಿ ಬದುಕಿನ ಸ್ವಾರಸ್ಯವನ್ನು ಮುಚ್ಚಿಹಾಕಿದ್ದಾರೆ ಎನ್ನುತ್ತೇನೆ. ಆದರೂ ದಾಸರ ಪದಗಳಿಗೆ ತನ್ನದೇ ಆದ ವಿಶಿಷ್ಟತೆಯಿದೆ ಎನ್ನುವುದನ್ನು ನಂಬುತ್ತೇನೆ.


ಮೊದಲಿಗೆ ಗೀತೆಯ ಶ್ಲೋಕವೊಂದನ್ನು ಹೇಳಿದ್ದೀರಿ, ಅದೊಂದೇ ಅಲ್ಲ, ಗೀತೆಯ ತುಂಬೆಲ್ಲಾ ಅದ್ವೈತ ದರ್ಶನವೇ ಕಂಡುಬರುತ್ತದೆ. ಇಂತಹ ಅದ್ವೈತವನ್ನು ಕೊಡಮಾಡಿದ ಕೃಷ್ಣನನ್ನು ದ್ವೈತಪಂಥದವನೆಂದು ಕೊಂಡಾಡುವುದೇಕೆ ? :)
ಅಥವ ಆತನೇ ಬೇರೆ ವಾಸುದೇವನೆ ? ಗೀತೆಯ ರಚನಕಾರರು ಕೃಷ್ಣದ್ವೈಪಾಯನರೆ (ವ್ಯಾಸರು) ?

(ಇದು ಸುಮ್ಮನೆ ಕೂತೂಹಲಕ್ಕೆ ಕೇಳಿದ್ದೇನೆ, ನಾನಂತೂ ಯಾವ ಪಂಥಕ್ಕೂ ಸೇರಿದವನಲ್ಲ :) )

ಧನ್ಯವಾದಗಳು ಕಾಕಶ್ರೀ ನಿಮಗೆ.

KalavathiMadhusudan said...

ಸುನಾಥ್ ಸರ್ ಷರೀಫ್ ರ ಒಂದು ಪದದಲ್ಲಿ ಎಂಥ ನೀತಿ,ಎಷ್ಟು ಸವಿಸ್ತಾರವಾಗಿ ಅಡಗಿದೆ ಎಂಬುದದನ್ನು ಸವಿವರವಾಗಿ ತಿಳಿಸಿರುವುದಕ್ಕೆ ತಮಗೆ ಹೃತ್ಪೂರ್ವಕ ಧನ್ಯವಾದಗಳು.
--

sunaath said...

ಪುತ್ತರ್,
ಭಗವದ್ಗೀತೆಯನ್ನು ಎಲ್ಲ ಉಪನಿಷತ್ತುಗಳ ಸಾರ ಎಂದು ಕೊಂಡಾಡುತ್ತಾರೆ. ಗೀತೆಯನ್ನು ತಮ್ಮದೇ ಆದ ರೀತಿಯಲ್ಲಿ ಅನೇಕ ವ್ಯಾಖ್ಯಾನಕಾರರು ಅರ್ಥೈಸಿದ್ದಾರೆ. ಈ ವಿಷಯದಲ್ಲಿ ನಾನು ಅಜ್ಞ.
In fact, ನನ್ನದೊಂದು ಕಲ್ಪನೆಯೇ ಬೇರೆಯಾಗಿದೆ. ಶ್ರೀಕೃಷ್ಣನು ಅವೈದಿಕ ಸಂಪ್ರದಾಯದವನು ಹಾಗು ಗೀತೆಯಲ್ಲಿ ಆ ಸೂಚನೆ ಬಂದಿದೆ ಎಂದು ನನಗೆ ಭಾಸವಾಗುತ್ತದೆ. ಈ ಅವೈದಿಕ ಸಂಪ್ರದಾಯಗಳ ಬಗೆಗೆ ಮತ್ತೊಮ್ಮೆ ಬರೆಯುವೆ!

sunaath said...

ಕಲರವರೆ,
ತಮ್ಮ ಸ್ಪಂದನೆಗಾಗಿ ವಂದನೆಗಳು.

Kavitha said...

Hi Sanath,
Although the kannada on this page is readable, it doesn't look like the regular kannada in books. The way google or any tool that you are using to generate kannada script is producing these lines makes it quiet different. "Vattakshara, dheerga etc. are quiet different from the routine kannada writing. Please take care of that. However its a beautiful write up. Keep it up. Thanks for sharing your thoughts.
Kavitha.

ಶಿವಪ್ರಕಾಶ್ said...

ಗೀತೆ ತುಂಬ simple ಅನ್ಸುತ್ತೆ. ಆದರೆ, ಅದರ ಒಳಗೆ ಬಹಳಷ್ಟು ಅರ್ಥ ಅಡಗಿದೆ...

santhosh said...

ಅರ್ಥಪೂರ್ಣವಾಗಿ ತುಂಬ ಚೆನ್ನಾಗಿಯೇ ವಿವರಿಸಿದ್ದೀರ ಸಾರ್ .ಧನ್ಯವಾದಗಳು.

sunaath said...

ಸಂತೋಷ, ನಿಮ್ಮ ಪ್ರತಿಕ್ರಿಯೆಯಿಂದ ಸಂತೋಷವಾಯಿತು; ಧನ್ಯವಾದಗಳು.

Bhanu said...

ನಿಮ್ಮ ಈಮೈಲ್ ವಿಳಾಸ ಕೊಡಿ ದಯವಿಟ್ಟು

sunaath said...

ಪ್ರಿಯ ಭಾನು,
ನನ್ನ ಮೇಲ್ ವಿಳಾಸ ಹೀಗಿದೆ:
sunaath@gmail.com

Anonymous said...

Hrutpoorvaka Dhanyawaadagalu 🙏

sunaath said...

ಧನ್ಯವಾದಗಳು, Unknownರೆ.