Thursday, November 25, 2010

ಮಳ್ಳ ಸ್ವಾಮಿ ಹಾಗು ಕಳ್ಳ ಶಿಷ್ಯರು

ಪ್ರಧಾನಿ ಮನಮೋಹನ ಸಿಂಗರನ್ನು ಮಠವೊಂದರ ಮಳ್ಳ ಸ್ವಾಮಿಗಳಿಗೆ ಹಾಗು ಅವರ ಸುತ್ತಲಿನ ರಾಜಕಾರಣಿಗಳನ್ನು ಕಳ್ಳ ಶಿಷ್ಯರಿಗೆ ಹೋಲಿಸಬಹುದೆ? ಮನಮೋಹನ ಸಿಂಗರು ಮಳ್ಳರಿದ್ದಾರೆ ಎಂದಲ್ಲ. ಅವರೂ ಸಹ ಚತುರ ರಾಜಕಾರಣಿಯೇ. ಆಳುವ ಪಕ್ಷಕ್ಕೆ ಗಂಡಾಂತರ ಬಂದಾಗಲೆಲ್ಲ ಅವರು ಆಕ್ರಮಿಕ ಅಥವಾ ನಿಷ್ಕ್ರಮಿಕ ತಂತ್ರಗಳನ್ನು ಪ್ರಯೋಗಿಸಿದ್ದಾರೆ. ಆಕ್ರಮಿಕ ತಂತ್ರವೆಂದರೆ ವಿರೋಧಿಗಳ ಮೇಲೆ ನಡೆಸುವ ಆದಾಯಕರ ಇಲಾಖೆಯ ಅಥವಾ ಕೇಂದ್ರ ಗುಪ್ತಚಾರ ಪಡೆಯ ದಾಳಿಗಳು ; ನಿಷ್ಕ್ರಮಿಕ ತಂತ್ರವೆಂದರೆ ಇಂತಹ ದಾಳಿಗಳನ್ನು ಸ್ಥಗಿತಗೊಳಿಸುವದು. ಅಂತರಂಗದಲ್ಲಿ ಇಷ್ಟೆಲ್ಲಾ ಜಾಣತನವಿದ್ದರೂ ಸಹ, ಬಹಿರಂಗದಲ್ಲಿ ಮನಮೋಹನ ಸಿಂಗರ ಮುಖದ ಮೇಲೆ ಒಂದು ಮಳ್ಳ ಕಳೆ ಕುಣಿದಾಡುತ್ತಿರುತ್ತದೆ.

ಈ ಮಳ್ಳ ಕಳೆಯನ್ನು ಹಾಗು ಅದರ ಹಿಂದೆ ಇರುವ ಕುಟಿಲ ತಂತ್ರಗಳನ್ನು ನೋಡಿದಾಗಲೆಲ್ಲ ನನಗೆ  ದೊಡ್ಡ ಮಠವೊಂದರ ನೆನಪು ಬರುತ್ತದೆ. ಈ ಮಠಕ್ಕೆ ಭಾರೀ ಆಸ್ತಿಯಿದೆ ; ಸಿಕ್ಕಾಪಟ್ಟೆ ಆದಾಯವೂ ಇದೆ. ಈ ಆದಾಯವನ್ನು ಕಬಳಿಸಲೆಂದೇ ಮಠವನ್ನು ಸೇರಿಕೊಂಡ ಶಿಷ್ಯವರ್ಗವಿದೆ. ಮಠದ ಮೊದಲಿನ ಸ್ವಾಮಿಗಳ ದೇಹಾಂತವಾದ ಬಳಿಕ, ಶಿಷ್ಯವರ್ಗವು ಹೊಸ ಸ್ವಾಮಿಯ ಬೇಟೆಯನ್ನು ಪ್ರಾರಂಭಿಸುತ್ತದೆ. ಈ ಶಿಷ್ಯರದು ಒಳ್ಳೆಯ ನಸೀಬು ಎನ್ನಬೇಕು. ದೊಡ್ಡ ದೊಡ್ಡ ಸರಕಾರಿ ಹುದ್ದೆಗಳಲ್ಲಿದ್ದು ನಿವೃತ್ತನಾದ ಪ್ರಾಮಾಣಿಕ ಸದ್ಗೃಹಸ್ಥನೊಬ್ಬ ಇವರ ಕಣ್ಣಿಗೆ ಬೀಳುತ್ತಾನೆ. ಯಾವದೂ ಆಮಿಷಕ್ಕೆ ಬಲಿಯಾಗದೆ ಬಾಳಿದ ಈ ಸಭ್ಯ ವ್ಯಕ್ತಿಗೆ, ಮಠದ ಸ್ವಾಮಿಯಾಗುವ ಆಮಿಷವನ್ನು ತಪ್ಪಿಸಿಕೊಳ್ಳುವದು ಸಾಧ್ಯವಾಗುವದಿಲ್ಲ. ಸರಿ, ಮಠದ ಸ್ವಾಮಿಯಾದ ಮೇಲೆ, ಈ ಪಟ್ಟವನ್ನು ಉಳಿಸಿಕೊಂಡು ಹೋಗಬೇಕಲ್ಲವೆ? ಅಂದ ಮೇಲೆ, ಮಠದ ಆಸ್ತಿಯನ್ನು ಮೇಯುತ್ತಿರುವ  ಶಿಷ್ಯ(ಹೆ)ಗ್ಗಣಕ್ಕೆ ಸ್ವಾಮಿಯು ಮೇವು ಹಾಕುತ್ತಲೇ ಇರಬೇಕು. ‘ಮಠಂ ರಕ್ಷತಿ ರಕ್ಷಿತಮ್.’ (ಮಠವನ್ನು ನೀನು ರಕ್ಷಿಸಿದರೆ, ಮಠವು ನಿನ್ನನ್ನು ರಕ್ಷಿಸುತ್ತದೆ!) ಇದು ಮನಮೋಹನ ಸಿಂಗರ ಧರ್ಮಸೂತ್ರ.
ಇಷ್ಟೇ ಆದರೆ, ‘ಹೋಗಲಿ ಬಿಡಪ್ಪ. ನಮ್ಮ ದೇಶದಲ್ಲಿ ಯಾವ ಸ್ವಾಮಿಗಳು ಶುದ್ಧರಿದ್ದಾರೆ?’ ಎಂದು ಅಂದು ಸುಮ್ಮನಾಗಬಹುದಿತ್ತು. ಆದರೆ ಈ ಸ್ವಾಮಿಗಳಿಗೆ ಜಾಗತಿಕ ಕೀರ್ತಿಯನ್ನು ಗಳಿಸುವ ತೆವಲು. ಅದಕ್ಕಾಗಿಯೇ ಅಮೆರಿಕಾ ಎನ್ನುವ ಮಠವೊಂದರ ಮರ್ಜಿಯನ್ನು ಕಾಯಲು, ಭಕ್ತರ ಲಂಗೋಟಿಯನ್ನೂ ಸಹ ಬಿಚ್ಚಿ, ಅಮೇರಿಕನ್ ಮಠದ ಸ್ವಾಮಿಗಳ ಪಾದಕ್ಕೆ ಹಾಸುತ್ತಿದ್ದಾರೆ. ವಿದೇಶದಲ್ಲಿ ನೆಲೆಸಿರುವ ನಮ್ಮ ಮಠದ ಭಕ್ತರ ಮೇಲೆ ದಾಳಿಗಳಾದಾಗ ಕಣ್ಣು ಮುಚ್ಚಿಕೊಂಡು ತಪಸ್ಸಿಗೆ ಕೂತು ಬಿಡುತ್ತಾರೆ. ನೆರೆಹೊರೆಯ ಮಠಗಳು ಈ ಮಠದ ಜಮೀನನ್ನು ಆಕ್ರಮಿಸಿಕೊಂಡರೆ, ‘ಮನುಜಕುಲಂ ತಾನೊಂದೆ ವಲಮ್!’ ಎಂದು ಶಾಂತಿಮಂತ್ರವನ್ನು ಜಪಿಸುತ್ತಾರೆ.

ಇತ್ತ ಮಠದ ಆಸ್ತಿಯನ್ನು ಮೇಯುತ್ತಿರುವ ಶಿಷ್ಯರಿಗೆ ಇದು ಸಮಾರಾಧನೆಯ ಕಾಲ.
ದಿನದಿನವೂ ಸುಗ್ಗಿ! ದಿನದಿನವೂ ಹುಗ್ಗಿ!!

ಈ ಮಠದ ಆಡಳಿತವನ್ನು ನೋಡಿಕೊಳ್ಳುತ್ತಿರುವ ಸರ್ವಾಧಿಕಾರಿಯೊಬ್ಬಳಿದ್ದಾಳೆ. ಮೊದಲು ತಾನೇ ಮಠದ ಸ್ವಾಮಿಯಾಗುವ ಪ್ರಯತ್ನದಲ್ಲಿದ್ದಳು. ಈಗಲಾದರೋ, ಈ ವ್ಯವಸ್ಥೆಯೇ ಇನ್ನೂ ಉತ್ತಮ ಎನ್ನುವ ಅರಿವಾಗಿದೆ ಇವಳಿಗೆ. ಏನಾದರೂ ಅಪಕೀರ್ತಿ ಬಂದರೆ ಮಠದ ಸ್ವಾಮಿಗೆ ; ಸೌಲಭ್ಯಗಳೆಲ್ಲ ತನಗೆ!
Power and privileges without any responsibility.

ತನ್ನ ಸಂತಾನವೇ ಮುಂದಿನ ಸ್ವಾಮಿಯಾಗಬೇಕೆನ್ನುವ  ಆಸೆ ಇವಳಿಗಿದೆ. ಇದು ಸಹಜವೇ. ಆದರೆ ಈ ಪುತ್ರರತ್ನನಿಗೆ ಸ್ವಪ್ರಕಾಶ ಎನ್ನುವದೇ ಇಲ್ಲ. ಪರಪ್ರಕಾಶದಲ್ಲಿಯೇ ಈತ ಕಂಗೊಳಿಸುತ್ತಿದ್ದಾನೆ. ಈತನಿಗೆ ಪರದೇಶದ (ಗುಪ್ತ)ಸಂಗಾತಿ ಒಬ್ಬಳು ಇರುವಳೆನ್ನುವ ಒಂದು ವದಂತಿಯೂ, ಈತನ ಪಟ್ಟಾಭಿಷೇಕಕ್ಕೆ ದೊಡ್ಡ ಅಡಚಣಿಯಾಗಿದೆ. ‘ಅತ್ತೆ ಇಟಲಿಯವಳು, ಸೊಸೆ ಸ್ಪೇನಿನವಳು’ ಎನ್ನುವ ಅಪಪ್ರಚಾರವು ರಾಜಕೀಯ ಜೀವನಕ್ಕೆ ಮುಳುವಾದೀತೆನ್ನುವ ಹೆದರಿಕೆಯಿಂದ ಈತ ಇನ್ನೂ ಮದುವೆಯಾಗದೇ ಉಳಿದಿರಬಹುದೆ?

ಈ ಸ್ವಾಮಿ ಹಾಗು ಈ ಸರ್ವಾಧಿಕಾರಿಣಿ ಇತ್ತೀಚೆಗೆ ಸಭೆಯೊಂದನ್ನು ನಡೆಯಿಸಿ, ಹೆಚ್ಚುತ್ತಿರುವ ಅಪ್ರಾಮಾಣಿಕತೆಯ ಬಗೆಗೆ ತೀವ್ರ ಕಳವಳ ವ್ಯಕ್ತ ಪಡಿಸಿದ್ದಾರೆ. Best joke of the year!
ಈ ಕಳ್ಳ ಶಿಷ್ಯರಿಗೆಲ್ಲ ಈ ಮಳ್ಳ ಸ್ವಾಮಿಯ ಧರ್ಮಛತ್ರದ ರಕ್ಷಣೆ ಇದೆ.
ಕಳ್ಳ ಶಿಷ್ಯರನ್ನು ಹೇಗಾದರೂ ಓಡಿಸಬಹುದು. ಮಳ್ಳ ಸ್ವಾಮಿಯನ್ನು ಏನು ಮಾಡಬೇಕು?

35 comments:

PARAANJAPE K.N. said...

ಮಳ್ಳ ಸ್ವಾಮಿ, ಆಕೆಯ ಬೆನ್ನೆಲುಬಾಗಿರುವ ಸರ್ವಾಧಿಕಾರಿಣಿಯ ಬದುಕು ಮತ್ತು ಆ ಸರ್ವಾಧಿಕಾರಿಣಿಯ ಮಗ ಉತ್ತರ ಕುಮಾರನನ್ನು ಬಹಿರ೦ಗ ಪಡಿಸಿದ್ದೀರಿ. ಅವರ ಅನುಯಾಯಿ ಕಳ್ಳ ಶಿಷ್ಯರು ತಮ್ಮ ಕೈಲಾದಷ್ಟು ಬಾಚಿಕೊಳ್ಳುವಲ್ಲಿ ಮಗ್ನರಾಗಿದ್ದಾರೆ. ಚೆನ್ನಾಗಿದೆ ಬರಹ. ಇ೦ತಹ ಕಳ್ಳ-ಮಳ್ಳರು ಇರುವಷ್ಟು ದಿನ ದೇಶದ ಪ್ರಗತಿ ಅಸಾಧ್ಯ.

ಚುಕ್ಕಿಚಿತ್ತಾರ said...

:)-:)-:)

sunaath said...

ಪರಾಂಜಪೆಯವರೆ,
ಇದನ್ನು ಕಳ್ಳೆ-ಮಳ್ಳೆ ಆಟ ಎಂದು ಕರೆಯೋಣವೆ?

sunaath said...

ವಿಜಯಶ್ರೀ,
!!!!!!!!!!!!!!

ಮನಮುಕ್ತಾ said...

ಹೆ ಭಗವಾನ್ ಹಮ್ ತೆರೆ ಬಚ್ಚೆ ನಾದನ್..
ಕಾಪಾಡು ಅನ್ನೊದಷ್ಟೆ.
ರಾಜಕೀಯದ ವಿಚಿತ್ರ ವೇಷಗಳು ಜನರನ್ನು ಕಕ್ಕಾಬಿಕ್ಕಿಯಾಗಿಸುತ್ತಿವೆ.

V.R.BHAT said...

ಭಾರತವನ್ನು ಕಟ್ಟಲು ಮೊದಲಾಗಿ ಪ್ರಯತ್ನಿಸಿದ ಟಾಟಾ ಮನೆತನದವರು ಕಳ್ಳ ರಾಜಕಾರಣಿಗಳಿಂದ ಹಿಂದೂ ಇಂದೂ ನೋವನ್ನು ಅನುಭವಿಸಿದ್ದಾರೆ. ಟಾಟಾ ಪಾರ್ಸಿಗಳೇ ಆದರೂ ಮಾತಿಗೆ ಮತ್ತು ನೀತಿಗೆ ಮೌಲ್ಯಕೊಡುವ ಜನ ಅವರು. ನುಡಿದಂತೇ ನಡೆದುಕೊಳ್ಳುವ ಅಪ್ಪಟ ಹೃದಯವಂತರು ಟಾಟಾಗಳು. ತಮ್ಮನ್ನು ಭಾರತದಲ್ಲಿ ಇಟ್ಟುಕೊಳ್ಳಲು ಅವರ ಗುರು ಮೊದಲು ಕೊಟ್ಟ ಮಾತಿನಂತೇ ಭಾರತದಲ್ಲಿದ್ದದ್ದಕ್ಕೆ ಕಾಣಿಕೆಯಾಗಿ ಭಾರತವನ್ನು ಬೆಳೆಸಲು ತೊಡಗಿದರು. ಅದರಲ್ಲಿ ಟಾಟಾಗಳು ಬರೇ ತಮ್ಮ ಸ್ವಾರ್ಥಲಾಲಸೆಯಿಂದ ಕೆಲಸಮಾಡಿದವರಲ್ಲ. ಅಂತ ಟಾಟಾಗಳನ್ನೇ ಕಡೆಗಣಿಸಿ, ಧಿಕ್ಕರಿಸಿದ ಕುಖ್ಯಾತಿ ಕಾಂಗ್ರೆಸ್ಸಿಗರಿಗೆ ಸಲ್ಲುತ್ತದೆ. ’ಮಳ್ಳ ಸ್ವಾಮಿ ಮತ್ತು ಕಳ್ಳ ಶಿಷ್ಯರು’ ಸದ್ಯಕ್ಕೆ ನಮ್ಮಿಂದ ಪರಿಹರಿಸಲಾಗದ ಪರಿಸ್ಥಿತಿ. ಇಂತಹ ರಾಜಕಾರಣಿಗಳನ್ನೆಲ್ಲಾ ಇಡೀ ಪ್ರಜಾಸಮುದಾಯವೇ ಎದ್ದು ಸದೆಬಡಿಯಬೇಕು. ಲೇಖನ ಕುತ್ಸಿತ ರಾಜಕಾರಣದ ಮೇಲೆ ಬೆಳಕು ಚೆಲ್ಲಿದೆ, ಧನ್ಯವಾದಗಳು

sunaath said...

ಮನಮುಕ್ತಾ,
ಭಗವಂತನೇ ತನ್ನ ನಾದಾನ್ ಬಚ್ಚಾಗಳನ್ನು ಈ ಲುಚ್ಚಾಗಳಿಂದ ಕಾಪಾಡಬೇಕು!

sunaath said...

ಭಟ್ಟರೆ,
ಅವರು ಕಟ್ಟಿದರು; ಇವರು ದೋಚುತ್ತಲಿದ್ದಾರೆ!

Anonymous said...

lekhana chennaagide
chennaagi nakka mEle nanna desha nenedu gantalu ubbi bantu

-mala

shivu.k said...

ಸುನಾಥ್ ಸರ್,

ನಮ್ಮ ಕಾಂಗ್ರೇಸ್ ಸರ್ಕಾರವನ್ನು ಮಠಕ್ಕೆ ಮತ್ತು ಅದರ ಸ್ವಾಮೀಜಿ ಇತ್ಯಾದಿಗಳನ್ನು ಚೆನ್ನಾಗಿ ಹೋಲಿಸಿದ್ದೀರಿ. ಮತ್ತು ಅವರ ಅವ್ಯವವಹಾರ ಚಾಣಕ್ಯತನವನ್ನು ಸೂಕ್ಷ್ಮವಾಗಿ ವಿವರಿಸಿದ್ದೀರಿ...
ಥ್ಯಾಂಕ್ಸ್.

sunaath said...

ಅನಾಮಿಕಾ ಮಾಲಾ ಅವರೆ,
ನಮ್ಮ ರಾಜಕೀಯವನ್ನು ಕಂಡಾಗ, ಅಳಬೇಕೊ, ನಗಬೇಕೊ ತಿಳಿಯದಾಗುತ್ತದೆ!

sunaath said...

ಶಿವು,
ಈ ಮಠಾಧೀಶರ ಕೈಗೆ ಸಿಕ್ಕ ನಮ್ಮ ದೇಶ ಒಳಗಿನ ಹಾಗು ಹೊರಗಿನ ಸಮಸ್ಯೆಗಳಿಂದಾಗಿ ಮುಳುಗಿ ಹೋಗುವ ಹಂತದಲ್ಲಿದೆ!

Mahantesh said...

yaaru sari illa sir.... alli Malla swami ,kalla shishyaru,nammalli kallane swamy :)-

ತೇಜಸ್ವಿನಿ ಹೆಗಡೆ said...

ಕಾಕಾ,

ಈ ಮಳ್ಳ ಸ್ವಾಮಿ- ಕಳ್ಳ ಶಿಷ್ಯರ ಆಟ ಕರ್ನಾಟಕದಲ್ಲೂ ತುಂಬಾ ಜೋರಾಗೇ ನಡೆಯುತ್ತಿದೆಯಲ್ಲಾ!!! ಎಲ್ಲಾ ಕಡೆಯೂ ಇದೇ ಆಟ. ನೋಡುವುದಷ್ಟೇ ನಮ್ಮ ಕರ್ಮವೇ? ನನಗಂತೂ ಮುಂದಿನ ಚುನಾವಣೆಗೆ ಓಟು ಹಾಕಲೇ ಮನಸು ಬರುತ್ತಿಲ್ಲ! :(

sunaath said...

ತುಂಬ ಸರಿಯಾಗಿ ಹೇಳಿದಿರಿ, ಮಹಾಂತೇಶ! ನಮ್ಮಲ್ಲಿ ದೊಡ್ಡ ಕಳ್ಳನೇ ಸ್ವಾಮಿ ಪಟ್ಟ ಏರಿದ್ದಾನೆ.

sunaath said...

ತೇಜಸ್ವಿನಿ,
ಮುಂದಿನ ಚುನಾವಣೆಯಲ್ಲಿ ನಾನೂ ಸಹ ಮತ ಹಾಕುವದಿಲ್ಲ. ಇಂದು ಕಾಂಗ್ರೆಸ್‍ನಲ್ಲಿದ್ದವರು ನಾಳೆ ಬಿಜೆಪಿ, ನಾಡದು ಜೆಡಿಎಸ್. ಯಾವ ಪಕ್ಷಕ್ಕೆ ಮತ ಹಾಕಬೇಕು?

umesh desai said...

ಕಾಕಾ ಪೊಗದಸ್ತಾದ ಲೇಖನ.ಮನಮೋಹನ್ ಏನೆಲ್ಲ ದುರ್ಬಲ ಅನಿಸಿಕೊಂಡ್ರು ಭ್ರಷ್ಟ ಅಲ್ಲ. ಏನುಮಾಡುವುದು
ನಮ್ಮ ದೇಶದ ನಸೀಬಿದು...ಊಟಮಾಡಲಿಕ್ಕೂ ಸೋನಿಯಾಜಿ "ಜೀ" ಅನ್ನಬೇಕೇಣೊ ಅವರಿಗೆ..!

sunaath said...

ದೇಸಾಯರ,
ಜೀ ಹಾಂ!

ಬಿಸಿಲ ಹನಿ said...

ಸರ್,
ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯ ವ್ಯಕ್ತಿ ಚಿತ್ರಣವನ್ನು ವ್ಯಂಗ್ಯದ ಮೂಲಕ ಚನ್ನಾಗಿ ಸೆರೆಹಿಡಿದಿದ್ದೀರಿ. ನೀವು ಹೇಳಿದಂಗೆ ಅವರು ಇದ್ದಾರೆ.

Badarinath Palavalli said...

good article.

ನಮಸ್ಕಾರ,
ನನ್ನ ಪದ್ಯದ ಬ್ಲಾಗ್ ಜೊತೆಗೆ, ನನಗನಿಸಿದ್ದು ಬರೆವ ಹೊಸ ಬ್ಲಾಗ್ ಆರಂಭಿಸಿದ್ದೇನೆ. ಓಮ್ಮೆ ಹೊಸ ಬ್ಲಾಗಿಗೆ ಬನ್ನಿ ಮತ್ತು ನಿಮಗೇನು ಅನಿಸಿತು ಹೇಳಿ..
ನಿಮ ಪ್ರೀತಿ ಹೀಗೆ ಇರಲಿ...

http://badari-notes.blogspot.com/

sunaath said...

ಉದಯರೆ,
ಸೋನಿಯಾ ಮತ್ತು ಸಿಂಗ ಟೀಮು ಭಾರತವನ್ನು ಮಾರಾಟ ಮಾಡುತ್ತಿದೆ. ಏನು ಮಾಡುವದು?

sunaath said...

ಬದರಿನಾಥರೆ,
ಹೊಸ ತಾಣಕ್ಕೆ ಶುಭಾಶಯಗಳು.

ಅಪ್ಪ-ಅಮ್ಮ(Appa-Amma) said...

ಸುನಾಥ್ ಕಾಕಾ,

ಖಾದಿ ಮತ್ತು ಕಾವಿ ನಡುವಿನ ವ್ಯತ್ಯಾಸ ಗತಿಸಿ ಹೋಗಿ ಎಷ್ಟು ಕಾಲವಾಯಿತೋ ಏನೋ..

ಕಾವಿ ತೊಟ್ಟವರು ಖಾದಿ ತೊಟ್ಟವರಿಗೆ ಎನೋ ಕಡಿಮೆಯಿಲ್ಲದಂತೆ ರಾಜಕೀಯ ಮಾಡಿದ ಪ್ರಸಂಗಗಳು ನಮ್ಮ ಕಣ್ಮುಂದೆ ಇವೆ..

ನಿಮ್ಮ ಉಪಮಾ ಕತೆ ಚೆನ್ನಾಗಿತ್ತು..

Subrahmanya said...

ಎಲ್ಲಾ ಹೀಗೆ ಆದ್ರೆ ದೇಶದ್ ಕತೆ ಏನು ಕಾಕಾ ? ಮುಂದಿನ ದಾರಿಯೇ ಕಾಣ್ತಿಲ್ಲ !

sunaath said...

ಅಪ್ಪ-ಅಮ್ಮ,
ಖಾದಿ ಹಾಗು ಕಾವಿಯ ಅಪವಿತ್ರ ನಂಟು ದೇಶವನ್ನು ವಿನಾಶದೆಡೆಗೆ ಒಯ್ಯುತ್ತಿದೆ. ಬೇಲಿಯೇ ಹೊಲ ಮೇಯುತ್ತಿರುವಾಗ ಮಾಡುವದೇನು?

sunaath said...

ಪುತ್ತರ್,
ದೇಶದ ಗತಿಯನ್ನು ದುರ್ಗತಿ ಎಂದು ಹೇಳದೇ ವಿಧಿಯಿಲ್ಲ!

ದೀಪಸ್ಮಿತಾ said...

ಯಾರಿಗೆ ಓಟ್ ಹಾಕಬೇಕು ಎಂದೇ ತಿಳಿಯುವುದಿಲ್ಲ. ಅಧಿಕಾರದಲ್ಲಿರುವವರು ಅವರ ಮೇಲಿನವರ ಕೈಗೊಂಬೆ, ಇನ್ನಿತರರು ಇನ್ಯಾರದೋ ಕೈಗೊಂಬೆ. ಒಟ್ಟಿನಲ್ಲಿ ಜನರು ಮಳ್ಳರಿಲ್ಲಿ

sunaath said...

ಅಹುದು ದೀಪಸ್ಮಿತಾ ಅವರೆ. ಯಾರಿಗೆ ವೋಟು ಹಾಕಬೇಕು ಎನ್ನುವದು ಯಾರಿಂದ ನೇಣು ಹಾಕಿಸಿಕೊಳ್ಳಬೇಕು ಎನ್ನುವದಕ್ಕೆ ಸಮನಾಗಿದೆ!

Anonymous said...

Test

ಸೀತಾರಾಮ. ಕೆ. / SITARAM.K said...

tumbaa atyuttama vidambane.
ee kalla mallara aatta desha puraa haraduttide. panchaaayati mattadallu nadediruvadu namma prajaprabhutvada dodda vifalate.

sunaath said...

ಸೀತಾರಾಮರೆ,
ಈ ಕಳ್ಳ-ಮಳ್ಳರ ಆಟವು ನಮ್ಮ ದೇಶಕ್ಕೆ ತಗುಲಿದ ಏಡ್ಸ್ ರೋಗವಾಗಿದೆ.

ಅನಿಕೇತನ ಸುನಿಲ್ said...

sakaalika hagu sundara baraha ;-)

ಶಿವಪ್ರಕಾಶ್ said...

ಈ ಸ್ವಾಮಿ ಹಾಗು ಈ ಸರ್ವಾಧಿಕಾರಿಣಿ ಇತ್ತೀಚೆಗೆ ಸಭೆಯೊಂದನ್ನು ನಡೆಯಿಸಿ, ಹೆಚ್ಚುತ್ತಿರುವ ಅಪ್ರಾಮಾಣಿಕತೆಯ ಬಗೆಗೆ ತೀವ್ರ ಕಳವಳ ವ್ಯಕ್ತ ಪಡಿಸಿದ್ದಾರೆ. Best joke of the year!

ha ha ha... :)

Anonymous said...

ನಮಸ್ಕಾರಗಳು ಸರ್. ನಿಮ್ಮ ಬ್ಲಾಗನ್ನು ತುಂಬಾ ಸಮಯದಿಂದ ಆಸಕ್ತಿಯಿಂದ ಓದುತ್ತಿದ್ದೇನೆ. ನಿಮ್ಮ ಬರಹ ಶೈಲಿ ಚೆನ್ನಾಗಿದೆ. ಇಲ್ಲಿಯವರೆಗೂ ಬರಗಳಿಗೆ ಪ್ರತಿಕ್ರಿಯೆ ನೀಡಿರಲಿಲ್ಲ.

ಆದರೆ ಇತ್ತೀಚಿನ ವಿಕಿಲೀಕ್ಸ್ ಪ್ರಕರಣದ ನಂತರ ಈ ಲೇಖನಕ್ಕೆ ಒಂದು ಪ್ರತಿಕ್ರಿಯೆ ಬರೆಯೋಣ ಎನ್ನಿಸಿತು, ಅದೂ ನಮ್ಮ ಯುವಶಕ್ತಿಯ ಆಕರ್ಷಣೆ ಎಂದೇ ಬಿಂಬಿಸಲ್ಪಡುತ್ತಿರುವ ರಾಹುಲ್ ಗಾಂಧಿ ಅಲಿಯಾಸ್ ರೌಲ್ ವಿಂಚಿ (ಹೆಚ್ಚಿನ ಮಾಹಿತಿಗೆ ನೋಡಿ: http://www.youtube.com/watch?v=z5As3uAc0vU). (ಈ ವಿಡಿಯೋದೊಡನೆ ಬರುವ ಸಂಬಂಧಿತ ವಿಡಿಯೋಗಳನ್ನೂ ನೋಡಿ).

ನನಗೆ ಎಲ್ಲಕ್ಕಿಂತ ಹೆಚ್ಚು ಕ್ಷೋಭೆ ತಂದಿದ್ದೆಂದರೆ ರಾಹುಲ್ ಗಾಂಧಿಯ ಲೈಂಗಿಕ ಬದುಕಿನ ಬಗೆಗೆ ಅಮೆರಿಕ ದೂತಾವಾಸದ ಮಾಹಿತಿ. ಅದೆಂದರೆ, ನಮ್ಮ ಭಾವೀ ಪ್ರಧಾನಿ ಒಬ್ಬ ಗೇ (gay) ಅಂತೆ (http://www.cnewsworld.com/world-news/asia/rahul-gandhi-is-gay-wikileaks-update-us-embassy-in-delhi-reports/)!!!

ಅಯ್ಯೋ ಎಂಥಾ ದುರ್ಗತಿ ಬಂತು ನಮ್ಮ ದೇಶಕ್ಕೆ. ಎಂತೆಂಥವರೆಲ್ಲಾ ಈ ದೇಶವನ್ನು ಆಳಿ ಹೋಗಿದ್ದಾರೆ. ಅತ್ಯಂತ ಸ್ತ್ರೀ ಲಂಪಟರಿಂದ ಹಿಡಿದು ಸನ್ಯಾಸಿಗಳಾದವರವರೆಗೆ ನಮ್ಮ ದೇಶ ಆಡಳಿತಗಾರರನ್ನು ಕಂಡಿದೆ. ಆದರೆ ಒಬ್ಬ ಸಲಿಂಗಕಾಮಿ, ಛೇ ಇಲ್ಲವೇ ಇಲ್ಲ. ಸೋನಿಯಾ ಗಾಂಧಿ (ಆಂಟೋನಿಯಾ ಮೈನೋ) ಗೆ ಇನ್ನು ಬೇರೆ ಉಪಾಯವೇ ಇಲ್ಲ. ಮುದ್ದಿನ ಮಗಳು ಪ್ರಿಯಾಂಕಾ ಹಾಗೂ ಅವಳ ಸಂತಾನವನ್ನು ಇನ್ನು ಮುಂದೆ ರಾಜಕೀಯಕ್ಕೆ ಇಳಿಸಿದಲ್ಲಿ ಮಾತ್ರ ಕುಟುಂಬ ರಾಜಕೀಯ ಮುಂದುವರೆಯಲಿದೆ. ಇದೇ ರಾಹುಲನನ್ನು ನಂಬಿಕೊಂಡಲ್ಲಿ ಅದೂ ಸಾಧ್ಯವಿಲ್ಲ.

ಈ ಕುಟುಂಬದಿಂದ ನಮ್ಮ ದೇಶ ಇನ್ನೂ ಏನೇನು ನಾಚಿಕೆಗೇಡು ಪ್ರಕರಣಗಳನ್ನು ಅನುಭವಿಸಬೇಕೋ ತಿಳಿಯದಾಗಿದೆ. ದಿಗ್ವಿಜಯ್ ಸಿಂಗ್-ನಂಥಾ ನರರಹಿತ ಭಟ್ಟಂಗಿಗಳಿರುವವರೆಗೆ ಈ ಕುಟುಂಬದ ಆಟಾಟೋಪಕ್ಕೆ ಎಣೆಯೇ ಇಲ್ಲ. ಯಾರು ಏನಾದರೂ ಅನಾಚಾರ ಮಾಡಲಿ, ಅಧಿಕಾರ ಮಾತ್ರ ನಮ್ಮ ಕುಟುಂಬಕ್ಕಿರಲಿ ಎಂಬ ಸರಳ ಸೂತ್ರದಡಿ ಈ ಸರಕಾರ ನಡೆಯುತ್ತಿದೆ.

ನಿರಂಜನ್

Anonymous said...

ನಮಸ್ಕಾರಗಳು ಸರ್. ನಿಮ್ಮ ಬ್ಲಾಗನ್ನು ತುಂಬಾ ಸಮಯದಿಂದ ಆಸಕ್ತಿಯಿಂದ ಓದುತ್ತಿದ್ದೇನೆ. ನಿಮ್ಮ ಬರಹ ಶೈಲಿ ಚೆನ್ನಾಗಿದೆ. ಇಲ್ಲಿಯವರೆಗೂ ಬರಗಳಿಗೆ ಪ್ರತಿಕ್ರಿಯೆ ನೀಡಿರಲಿಲ್ಲ.

ಆದರೆ ಇತ್ತೀಚಿನ ವಿಕಿಲೀಕ್ಸ್ ಪ್ರಕರಣದ ನಂತರ ಈ ಲೇಖನಕ್ಕೆ ಒಂದು ಪ್ರತಿಕ್ರಿಯೆ ಬರೆಯೋಣ ಎನ್ನಿಸಿತು, ಅದೂ ನಮ್ಮ ಯುವಶಕ್ತಿಯ ಆಕರ್ಷಣೆ ಎಂದೇ ಬಿಂಬಿಸಲ್ಪಡುತ್ತಿರುವ ರಾಹುಲ್ ಗಾಂಧಿ ಅಲಿಯಾಸ್ ರೌಲ್ ವಿಂಚಿ (ಹೆಚ್ಚಿನ ಮಾಹಿತಿಗೆ ನೋಡಿ: http://www.youtube.com/watch?v=z5As3uAc0vU). (ಈ ವಿಡಿಯೋದೊಡನೆ ಬರುವ ಸಂಬಂಧಿತ ವಿಡಿಯೋಗಳನ್ನೂ ನೋಡಿ).

ನನಗೆ ಎಲ್ಲಕ್ಕಿಂತ ಹೆಚ್ಚು ಕ್ಷೋಭೆ ತಂದಿದ್ದೆಂದರೆ ರಾಹುಲ್ ಗಾಂಧಿಯ ಲೈಂಗಿಕ ಬದುಕಿನ ಬಗೆಗೆ ಅಮೆರಿಕ ದೂತಾವಾಸದ ಮಾಹಿತಿ. ಅದೆಂದರೆ, ನಮ್ಮ ಭಾವೀ ಪ್ರಧಾನಿ ಒಬ್ಬ ಗೇ (gay) ಅಂತೆ (http://www.cnewsworld.com/world-news/asia/rahul-gandhi-is-gay-wikileaks-update-us-embassy-in-delhi-reports/)!!!

ಅಯ್ಯೋ ಎಂಥಾ ದುರ್ಗತಿ ಬಂತು ನಮ್ಮ ದೇಶಕ್ಕೆ. ಎಂತೆಂಥವರೆಲ್ಲಾ ಈ ದೇಶವನ್ನು ಆಳಿ ಹೋಗಿದ್ದಾರೆ. ಅತ್ಯಂತ ಸ್ತ್ರೀ ಲಂಪಟರಿಂದ ಹಿಡಿದು ಸನ್ಯಾಸಿಗಳಾದವರವರೆಗೆ ನಮ್ಮ ದೇಶ ಆಡಳಿತಗಾರರನ್ನು ಕಂಡಿದೆ. ಆದರೆ ಒಬ್ಬ ಸಲಿಂಗಕಾಮಿ, ಛೇ ಇಲ್ಲವೇ ಇಲ್ಲ. ಸೋನಿಯಾ ಗಾಂಧಿ (ಆಂಟೋನಿಯಾ ಮೈನೋ) ಗೆ ಇನ್ನು ಬೇರೆ ಉಪಾಯವೇ ಇಲ್ಲ. ಮುದ್ದಿನ ಮಗಳು ಪ್ರಿಯಾಂಕಾ ಹಾಗೂ ಅವಳ ಸಂತಾನವನ್ನು ಇನ್ನು ಮುಂದೆ ರಾಜಕೀಯಕ್ಕೆ ಇಳಿಸಿದಲ್ಲಿ ಮಾತ್ರ ಕುಟುಂಬ ರಾಜಕೀಯ ಮುಂದುವರೆಯಲಿದೆ. ಇದೇ ರಾಹುಲನನ್ನು ನಂಬಿಕೊಂಡಲ್ಲಿ ಅದೂ ಸಾಧ್ಯವಿಲ್ಲ.

ಈ ಕುಟುಂಬದಿಂದ ನಮ್ಮ ದೇಶ ಇನ್ನೂ ಏನೇನು ನಾಚಿಕೆಗೇಡು ಪ್ರಕರಣಗಳನ್ನು ಅನುಭವಿಸಬೇಕೋ ತಿಳಿಯದಾಗಿದೆ. ದಿಗ್ವಿಜಯ್ ಸಿಂಗ್-ನಂಥಾ ನರರಹಿತ ಭಟ್ಟಂಗಿಗಳಿರುವವರೆಗೆ ಈ ಕುಟುಂಬದ ಆಟಾಟೋಪಕ್ಕೆ ಎಣೆಯೇ ಇಲ್ಲ. ಯಾರು ಏನಾದರೂ ಅನಾಚಾರ ಮಾಡಲಿ, ಅಧಿಕಾರ ಮಾತ್ರ ನಮ್ಮ ಕುಟುಂಬಕ್ಕಿರಲಿ ಎಂಬ ಸರಳ ಸೂತ್ರದಡಿ ಈ ಸರಕಾರ ನಡೆಯುತ್ತಿದೆ.

ನಿರಂಜನ್