ನೀರನ ನೋಟಕ್ಕ ನೀರು ಕಡೆದಿತು ಜೀವ
ಧೀರ ಧೈರ್ಯಾವ ಕಳೆದಾನ ನನ್ನೊಂದ
ಧೀರ ಧೈರ್ಯಾವ ಕಳೆದಾನ ನನ್ನೊಂದ
ತೀರ ಮರುಳಿಯ ಮಾಡ್ಯಾನ ||೧||
ಸುಗ್ಗಿ ನಗಿ ನಕ್ಕಾಗ ಮೊಗ್ಗಿ ಬಿಚ್ಚಿತು ಒಳಗ
ಹಿಗ್ಗಿ ಪಾಡಾಗಿ ಮಾಗಿಸಿತು ಹರೆಯವು
ಬಗ್ಗದ ಎದೆಯ ಬಾಗಿಸಿತು ||೨||
ಮಾಗಿ ಮೂಡಲಗಾಳಿ ತಾಗಿದ ಬನಧಾಂಗ
ಸಾಗ್ಯದ ನನ್ನ ಹರೆಯವು ಕೋಗಿಲಾ
ಕೂಗಿ ಕರೆತಾರs ಸುಗ್ಗಿಯಾ ||೩||
ಆಡಿ ಜೀವದ ಗಾಣಾ ನೋಡ ಹಿಂಡಿತು ಪ್ರಾಣಾ
ಕಾಡತಾನ್ಯಾಕs ಆ ಜಾಣ ಕೇಳಿಲ್ಲ
ಹಾಡು ತಲ್ಲಣದ ತಿಲ್ಲಾಣ ||೪||
ಬಾತುಗೋಳಿ ಹಾಂಗ ಚಾತಕದ ಜಾತ್ಯಲ್ಲ
ನಾತನೀರಾಗ ಅದರಾಟ, ಇದರೂಟ
ಮೀಸಲಳಿಯದ ಮಳಿಯಾಗ ||೫||
ಒಲುಮೆಯ ನಚ್ಚೊಂದು ಕುಲುಮೆಯ ಕಿಚ್ಚವ್ವ
ಹುಲುಜೀವ ಕಾದು ಕಮರೀತು ಒಳುಜೀವ
ಒಲುಮೀಗೆ ಹ್ಯಾಂಗೊ ಬಾಳೀತು ||೬||
………………………………………………………………………………...............
ಬೇಂದ್ರೆಯವರು ಬಳಸದೆ ಇದ್ದ ಕಾವ್ಯಪ್ರಕಾರ ಉಂಟೆ? ಕನ್ನಡ ಕಾವ್ಯದಲ್ಲಿರುವ ಎಲ್ಲ ಛಂದೋಪ್ರಕಾರಗಳನ್ನು ಬೇಂದ್ರೆಯವರು ಬಳಸಿರುವ ಸಂಭಾವ್ಯತೆ ಇದೆ. ಮಾರ್ಗಕಾವ್ಯ, ದೇಸಿ ರಚನೆ, ಶರಣರ ವಚನಗಳು, ದಾಸರ ಕೀರ್ತನೆಗಳು, ಜಾನಪದ ಹಾಡುಗಳು, ನವೋದಯದ ಭಾವಗೀತೆ, ಅಷ್ಟಷಟ್ಪದಿ, ಮುಕ್ತ ಛಂದಸ್ಸು ಇವೆಲ್ಲವನ್ನೂ ಬೇಂದ್ರೆಯವರು ಮುಕ್ತವಾಗಿ ಹಾಗು ಸಮರ್ಥವಾಗಿ ತಮ್ಮ ಕಾವ್ಯರಚನೆಯಲ್ಲಿ ಬಳಸಿಕೊಂಡಿದ್ದಾರೆ.
ಜಾನಪದ ತ್ರಿಪದಿಯ ಮಾದರಿಯಲ್ಲಿರುವ ‘ಒಲುಮೆಯ ಕಿಚ್ಚು’ ಕವನವನ್ನು ಓದಿದಾಗ (ಅಥವಾ ಹಾಡಿಕೊಂಡಾಗ) ಈ ಕವನವು ಹಳ್ಳಿಯ ಹೆಣ್ಣುಮಕ್ಕಳು ಹಾಡುವ, ‘ಕುಟ್ಟುವ-ಬೀಸುವ ಹಾಡು’ ಎಂದೇ ಅನಿಸುವದು. ಆದರೆ ಕವನದ ಸುಸಂಬದ್ಧ ರಚನೆ ಹಾಗು ಭಾಷಾವೈಖರಿ ಇವು ಬೇಂದ್ರೆಯವರ ಲೇಖನಿಯ ಕುರುಹನ್ನು ಸ್ಪಷ್ಟವಾಗಿ ತೋರಿಸುವವು!
‘ಒಲುಮೆಯ ಕಿಚ್ಚು’ ಕವನವು ಹದಿಹರೆಯದ ಹಳ್ಳಿಯ ಹುಡುಗಿಯೊಬ್ಬಳ ಪ್ರಥಮ ಪ್ರೇಮ ಹಾಗು ವಿರಹಗಳ ಗೀತೆ. ಈ ಹುಡುಗಿಯು ೨೧ನೆಯ ಶತಮಾನದ ನಾಗರಿಕ ಹುಡುಗಿಯಲ್ಲ ಎನ್ನುವದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಆಗಿನ ಹುಡುಗಿಯರು ಪ್ರಣಯ,ಪ್ರೇಮಗಳಿಗೆ ಹಿಂಜರಿಯುತ್ತಿದ್ದರು ಎಂದೇನಲ್ಲ, ಆದರೆ ಸ್ವಲ್ಪ ನಾಚಿಕೊಳ್ಳುತ್ತಿದ್ದರು ಎಂದು ಹೇಳಬಹುದು! ಈ ಕವನದ ಮುಗುದೆ ಮೊದಲ ನೋಟದಲ್ಲಿ ಪ್ರೇಮಕ್ಕೆ ಬಲಿಯಾಗಿ, ಬಳಿಕ ವಿರಹದಲ್ಲಿ ಬಳಲುತ್ತಿದ್ದಾಳೆ. ತಾನು ಪ್ರೇಮದ ಬಲೆಗೆ ಸಿಲುಕಿದ ಪ್ರಸಂಗವನ್ನು ಮತ್ತೆ ನೆನೆಸಿಕೊಳ್ಳುತ್ತಿದ್ದಾಳೆ (ಅಥವಾ ತನ್ನ ಜೀವದ ಗೆಳತಿಯ ಎದುರಿಗೆ ಬಿಚ್ಚಿಡುತ್ತಿದ್ದಾಳೆ.) ಆ ಸಂಗತಿಯ ಆತ್ಮನಿವೇದನೆ ಹೀಗಿದೆ:
ನೀರನ ನೋಟಕ್ಕ ನೀರು ಕಡೆದಿತು ಜೀವ
ಧೀರ ಧೈರ್ಯಾವ ಕಳೆದಾನ ನನ್ನೊಂದ
ತೀರ ಮರುಳಿಯ ಮಾಡ್ಯಾನ .
ಗಂಡಸರ ದೃಷ್ಟಿಗೆ ಅಂಜಿಕೊಳ್ಳುವಳಂಥವಳೇನಲ್ಲ ನಮ್ಮ ಹುಡುಗಿ. ಆದರೆ ಈ ನೀರನ(=ಗಂಡಿನ) ನೋಟಕ್ಕೆ ನಮ್ಮ ನೀರೆ ತಲ್ಲಣಿಸಿ ಹೋದಳು. ತನ್ನ ನೀರು (ಅಂದರೆ ಅಂತಃಸತ್ವವು) ಕಡೆಗೋಲಿನಿಂದ ಕಡೆದಂತೆ ಅವಳ ಜೀವವು ತಳಮಳಿಸಿತು. ನೀರು ಕಡೆದಿತು ಎಂದರೆ ಈ ಬಾಲೆಯು ಆತನ ನೋಟಕ್ಕೆ ಬೆವತು ಹೋದಳು ಎಂದೂ ಅರ್ಥವಾಗುತ್ತದೆ. ಈ ಹುಡುಗಿಯನ್ನು ನೆಟ್ಟ ನೋಟದಿಂದ ಸೋಲಿಸಿದ ಆ ಧೀರ ಗಂಡಸು ಅವಳ ಧೈರ್ಯವನ್ನೇ ಉಡುಗಿಸಿ ಬಿಟ್ಟ! ಇಷ್ಟೇ ಅಲ್ಲ, ಅವಳನ್ನು ಪೂರಾ ಮರುಳಿಯನ್ನಾಗಿ ಮಾಡಿದ, ಅಂದರೆ ಅವಳಿಗೆ ಇವನ ಹುಚ್ಚು ಹಿಡಿಯಿತು ಎನ್ನಬಹುದು.
ಈಗ ತಾನೇ ಬಾಲ್ಯಾವಸ್ಥೆಯನ್ನು ದಾಟುತ್ತಿರುವ ಇವಳಿಗೆ ಇದು ಹೊಚ್ಚ ಹೊಸ ಅನುಭವ. ಇದೀಗ ಅವಳು ಹದಿಹರೆಯಕ್ಕೆ ಕಾಲಿಟ್ಟಿದ್ದಾಳೆ. ಅವಳ ಮಾತುಗಳಲ್ಲಿಯೇ ಈ ಬದಲಾವಣೆಯ ಅನುಭವವನ್ನು ಕೇಳಬಹುದು:
ಸುಗ್ಗಿ ನಗಿ ನಕ್ಕಾಗ ಮೊಗ್ಗಿ ಬಿಚ್ಚಿತು ಒಳಗ
ಹಿಗ್ಗಿ ಪಾಡಾಗಿ ಮಾಗಿಸಿತು ಹರೆಯವು
ಬಗ್ಗದ ಎದೆಯ ಬಾಗಿಸಿತು.
‘ಸುಗ್ಗಿ ನಗಿ ನಕ್ಕಾಗ’ ಎನ್ನುವದನ್ನು ಎರಡು ರೀತಿಯಲ್ಲಿ ಅರ್ಥೈಸಬಹುದು.
(೧)ಅವಳ ಜೀವನದಲ್ಲಿ ಸುಗ್ಗಿಯ ಕಾಲವು ಈಗ ಪ್ರವೇಶಿಸಿದೆ ಅಂದರೆ ಹೊಸ ಹರೆಯವು ಉಲ್ಲಾಸದ ನಗೆಯನ್ನು ಚಿಮ್ಮುತ್ತ ಬರುತ್ತಿದೆ.
(೨) ಅವಳ ಪ್ರಣಯಿಯು ‘ಸುಗ್ಗಿಯ ಸೊಬಗಿನ ನಗೆಯನ್ನು ನಕ್ಕಾಗ’ ಎಂದು ಭಾವಿಸಿದರೆ, ಆತನ ನಗೆಯಿಂದಲೇ ಅವಳ ಅಂತರಂಗದಲ್ಲಿ ವಸಂತಕಾಲ ಪ್ರವೇಶಿಸಿತು ಎಂದೂ ಅರ್ಥೈಸಬಹುದು.
ಈ ಹರೆಯದ ಸುಗ್ಗಿಯ ಕಾಲದಲ್ಲಿ ಮೊಗ್ಗುಗಳೆಲ್ಲ ಅರಳಿ ಹೂವಾಗಬೇಕಲ್ಲವೆ? ಇವಳ ‘ಒಳಗಿನ ಮೊಗ್ಗೂ’ ಸಹ ಈಗ ಬಿಚ್ಚಿಕೊಂಡು ಹಿಗ್ಗಿತು; ಅಂದರೆ ಅವಳ ಅಂತರಂಗವು ಅರಳಿತು. ‘ಹಿಗ್ಗುವದು’ ಎಂದರೆ ಉಲ್ಲಾಸವನ್ನು ಅನುಭವಿಸುವದು ಎಂದೂ ಅರ್ಥವಾಗುತ್ತದೆ. ಹದಿಹರೆಯವು ಹೊಸ ಉಲ್ಲಾಸವನ್ನು ತರುವದು ಸಹಜವೇ ಆಗಿದೆ.
‘ಮೊಗ್ಗು ಬಿಚ್ಚಿತು’ ಎನ್ನುವ ಪದಗುಚ್ಛವು ಮೊದಲನೆಯದಾಗಿ ಅವಳ ದೈಹಿಕ ಬದಲಾವಣೆಗಳನ್ನೂ ಸೂಚಿಸುತ್ತದೆ ಹಾಗು ಎರಡನೆಯದಾಗಿ ಸುಪ್ತಾವಸ್ಥೆಯಲ್ಲಿದ್ದ ಸಹಜ ಕಾಮನೆಗಳು ಈಗ ವ್ಯಕ್ತಾವಸ್ಥೆಗೆ ಬಂದವು ಎನ್ನುವದನ್ನೂ ಸೂಚಿಸುತ್ತದೆ. ಈ ದೈಹಿಕ ಹಾಗು ಮಾನಸಿಕ ಬೆಳವಣಿಗೆಯ ಮುಂದಿನ ಘಟ್ಟವೆಂದರೆ ‘ಪಾಡು’ ಆಗುವದು ಅರ್ಥಾತ್ ಪಕ್ವವಾಗುವದು. ಈ ಪದವೂ ಸಹ ದೈಹಿಕ ಹಾಗು ಮಾನಸಿಕ ಪಕ್ವತೆಯನ್ನು ಸೂಚಿಸುವವು. ಪಕ್ವತೆಯ ಮುಂದಿನ ಹಂತವು ‘ಮಾಗುವದು’ ಎಂದರೆ ಭೋಗಯೋಗ್ಯವಾಗುವದು. ಹರೆಯದ ವಸಂತ ಕಾಲದಲ್ಲಿ ಇದೆಲ್ಲ ಸಹಜವೇ! ಇನ್ನು ‘ಬಗ್ಗದ ಎದೆಯನ್ನು ಬಾಗಿಸಿತು’ ಎಂದರೆ, ಧಾಷ್ಟೀಕದ ಹುಡುಗತನವು ಹೋಗಿ, ನಮ್ರತೆಯ, ನಾಚಿಕೆಯ ಭಾವ ಅವಳಲ್ಲಿ ತುಂಬಿತು ಎಂದು ಅರ್ಥೈಸಬಹುದು.
ಇಂತಹ ಪ್ರಣಯಯೋಗ್ಯಳಾದ ಕನ್ಯೆಯನ್ನು ಒಬ್ಬ ಧೀರನು ದೃಷ್ಟಿಯುದ್ಧದಿಂದ ಸೋಲಿಸಿದ್ದಾನೆ. ಇದೀಗ ಆ ಧೀರನಿಗಾಗಿ, ಆ ನೀರನಿಗಾಗಿ ಈ ಮುಗ್ಧೆ ಹಂಬಲಿಸುತ್ತಿದ್ದಾಳೆ. ಅವಳು ತನ್ನ ವಿರಹವನ್ನು ತೋಡಿಕೊಳ್ಳುತ್ತಿರುವ ಪರಿ ಹೀಗಿದೆ:
ಮಾಗಿ ಮೂಡಲಗಾಳಿ ತಾಗಿದ ಬನಧಾಂಗ
ಸಾಗ್ಯದ ನನ್ನ ಹರೆಯವು ಕೋಗಿಲಾ
ಕೂಗಿ ಕರೆತಾರs ಸುಗ್ಗಿಯಾ.
ಮಾಘ ಮಾಸದಲ್ಲಿ ಅಂದರೆ ಚಳಿಗಾಲದಲ್ಲಿ ಮೂಡಲಗಾಳಿಯು ಬಿರ್ರನೆ ಬೀಸುತ್ತಿರುತ್ತದೆ. ಗಿಡ, ಮರಗಳೆಲ್ಲ ತಮ್ಮ ಎಲೆಗಳನ್ನು ಉದುರಿಸಿ ಬರಲಾಗಿ ನಿಲ್ಲುವವು. ಸೃಷ್ಟಿಕ್ರಿಯೆ ಪ್ರಾರಂಭವಾಗಲು ಅಂದರೆ ಮತ್ತೆ ಹೂಬಿಡಲು ಅವು ವಸಂತಕಾಲಕ್ಕಾಗಿ ಕಾಯಬೇಕು. ನಮ್ಮ ಹುಡುಗಿಯ ಪ್ರೇಮಿಯು ಅವಳನ್ನು ದೃಷ್ಟಿಯುದ್ಧದಲ್ಲಿ ಸೋಲಿಸಿದ್ದಾನೆ. ಆದರೆ ಅವಳನ್ನು ಸೆರೆಹಿಡಿದೊಯ್ಯುವ ಬದಲು ತಾನೇ ಮಾಯವಾಗಿದ್ದಾನೆ. ಹೀಗಾಗಿ ಅವಳ ಹರೆಯವೆಂಬ ಬನಕ್ಕೆ ವಿರಹವೆಂಬ ಮಾಘಮಾಸ ಕಾಲಿಟ್ಟಿದೆ. ಅವಳ ವಯೋವೈಭವವೆಲ್ಲ ಮುರುಟಿ, ವ್ಯರ್ಥವಾಗುತ್ತಿದೆ. ಈಗ ಅವಳ ನೆರವಿಗೆ ಬರುವರಾರು? ವಸಂತಕಾಲ ಕಾಲಿಟ್ಟೊಡನೆಯೇ ಗಂಡುಕೋಗಿಲೆಯು ಹೆಣ್ಣುಕೋಗಿಲೆಗೆ ತನ್ನ ಪಂಚಮಸ್ವರದಲ್ಲಿ ಪ್ರಣಯದ ಆಹ್ವಾನವನ್ನು ನೀಡುವದು ಪ್ರಕೃತಿಯ ನಿಯಮ. ಅದಕ್ಕೇ ನಮ್ಮ ಕಾವ್ಯನಾಯಕಿಯು ಆರ್ತಳಾಗಿ ಕೋಗಿಲೆಗೆ ವಿನಂತಿಯನ್ನು ಮಾಡಿಕೊಳ್ಳುತ್ತಿದ್ದಾಳೆ. ‘ಕೋಗಿಲೆಯೇ, ನೀನು ಕೂಗಿದರೆ ವಸಂತಕಾಲ ಬರುವದು. ದಯವಿಟ್ಟು ವಸಂತನನ್ನು ನನ್ನಲ್ಲಿಗೆ ಕರೆದುಕೊಂಡು ಬಾ!’ ಇಲ್ಲಿಯ ವೈಚಿತ್ರ್ಯವನ್ನು ಗಮನಿಸಿರಿ. ಕೋಗಿಲೆಯು ಕೂಗುವದು ವಸಂತಕಾಲದಲ್ಲಿ. ಆದರೆ ಅದು ಕೂಗುವದರಿಂದ ವಸಂತಕಾಲವು ಬರುವದಿಲ್ಲ. ವಿರಹದಲ್ಲಿ ಹುಚ್ಚಿಯಾದ ನಮ್ಮ ಕಾವ್ಯನಾಯಕಿಗೆ ಕೋಗಿಲೆಯ ಕೂಜನವೇ ವಸಂತನನ್ನು ಕರೆದುತರುವದು ಎಂದು ಭಾಸವಾಗುತ್ತಿದೆ!
ಆದರೇನು? ಅವಳ ಆರ್ತತೆ ಅವಳ ಪ್ರಣಯಿಗೆ ಅರ್ಥವಾಗುತ್ತಿಲ್ಲ. ಅವಳ ಹೃದಯದ ಕರೆ ಅವನಿಗೆ ಕೇಳಿಸುತ್ತಿಲ್ಲ.
ಆಡಿ ಜೀವದ ಗಾಣಾ ನೋಡ ಹಿಂಡಿತು ಪ್ರಾಣಾ
ಕಾಡತಾನ್ಯಾಕs ಆ ಜಾಣ ಕೇಳಿಲ್ಲ
ಹಾಡು ತಲ್ಲಣದ ತಿಲ್ಲಾಣ.
ನಮ್ಮ ಹುಡುಗಿಯ ಬದುಕು ಒಂದು ದಿನನಿತ್ಯದ ಗಾಣವಾಗಿದೆ. ಪ್ರತಿದಿನವನ್ನು ಅವಳು ಗಾಣದೆತ್ತಿನಂತೆ ಕಳೆಯುತ್ತಿದ್ದಾಳೆ. ಆದರೆ ಈ ಗಾಣವು ಹಿಂಡುತ್ತಿರುವದೇನನ್ನು? ಅವಳ ಪ್ರಾಣವನ್ನೇ ಈ ಗಾಣ ಹಿಂಡುತ್ತಿದೆ. ಅದನ್ನೇ ಅವಳು ಸ್ವಗತದಲ್ಲಿ (ಅಥವಾ ತನ್ನ ಆಪ್ತಸಖಿಯಲ್ಲಿ ಹೇಳಿಕೊಳ್ಳುತ್ತಿದ್ದಾಳೆ.) ಇಷ್ಟೆಲ್ಲ ನೋವನ್ನು ಇವಳು ಅನುಭವಿಸುತ್ತಿರುವಾಗ, ಆ ಜಾಣನಿಗೆ ಇದು ಅರ್ಥವಾಗುತ್ತಿಲ್ಲವೆ? ಇವಳನ್ನು ವಿರಹದಲ್ಲಿ ನೂಕಿ ಅವನು ಏಕೆ ಕಾಡುತ್ತಿದ್ದಾನೆ? ಜಾಣ ಎನ್ನುವ ಪದವನ್ನು ನಮ್ಮ ಹುಡುಗಿಯು ದ್ವಂದ್ವಾರ್ಥಾದಲ್ಲಿ ಉಪಯೋಗಿಸುತ್ತಿರುವದನ್ನು ಗಮನಿಸಬೇಕು.
ತನ್ನ ಪ್ರೇಮಿ ಬಾರದೇ ಹೋಗಬಹುದು ಎನ್ನುವ ತಲ್ಲಣ ಅವಳಿಗಿದೆ. ಈ ವಿರಹರಾಗದ ತಿಲ್ಲಾಣವನ್ನು (ಅಂದರೆ ಪ್ರಾರಂಭಿಕ ಆಲಾಪವನ್ನು) ಆ ಪ್ರಣಯಜಾಣ ಕೇಳಿರಲಿಕ್ಕಿಲ್ಲ. ಯಾಕೆಂದರೆ ಇವಳ ಮೌನಸ್ವರವು ಆತನಿಗೆ ಕೇಳಿಸುವದಾದರೂ ಹೇಗೆ? ಕೇಳಿದ್ದರೆ ಆತ ಸುಮ್ಮನೇ ಇರುತ್ತಿರಲಿಲ್ಲವೇನೊ? (ತಿಲ್ಲಾಣವೆಂದರೆ ಹಾಡಿನ ಪ್ರಾರಂಭದಲ್ಲಿ ಗಾಯಕರು ಆಲಾಪಿಸುವ ವರ್ಣಗಳು.) ಇದೀಗ ತಿಲ್ಲಾಣ ಪ್ರಾರಂಭವಾಗಿದೆ. ಈ ವಿರಹರಾಗವು ದೀರ್ಘಕಾಲೀನವಾಗಬಹುದೇನೊ ಎನ್ನುವ ಅಂಜಿಕೆಯು ನಮ್ಮ ಕವನನಾಯಕಿಯನ್ನು ಬಾಧಿಸುತ್ತಿದೆ.
ಇವಳ ದೀರ್ಘವಿರಹವನ್ನು ಪರಿಹರಿಸಲು ಆ ಮೊದಲ ಪ್ರೇಮಿಯೇ ಆಗಬೇಕೆ? ಬೇರೊಬ್ಬನನ್ನು ವರಿಸಿ, ಸುಖವಾಗಿ ಇರಬಹುದಲ್ಲವೆ? ಇಂತಹ ತಿಳಿಗೇಡಿ ಪ್ರಶ್ನೆಗೆ ಅವಳ ಉತ್ತರ ಹೀಗಿದೆ:
ಬಾತುಗೋಳಿ ಹಾಂಗ ಚಾತಕದ ಜಾತ್ಯಲ್ಲ
ನಾತನೀರಾಗ ಅದರಾಟ, ಇದರೂಟ
ಮೀಸಲಳಿಯದ ಮಳಿಯಾಗ.
ಅಕ್ಕಾ, ಬಾತುಗೋಳಿ ಹಾಗು ಚಾತಕ ಪಕ್ಷಿ ಇವುಗಳ ವ್ಯತ್ಯಾಸ ನಿನಗೆ ಗೊತ್ತೆ? ಬಾತುಗೋಳಿಯ ಆಟವೆಲ್ಲ ಕೊಳೆಯಾಗಿ ನಾರುತ್ತಿರುವ ನೀರಿನಲ್ಲಿ. ಚಾತಕ ಪಕ್ಷಿಯಾದರೋ ಮೊದಲ ಮಳೆಯ ಹನಿಯನ್ನು ಮಾತ್ರ ಆಸ್ವಾದಿಸುತ್ತದೆ. ನಾನು ಚಾತಕ ಪಕ್ಷಿಯೇ ಹೊರತು ಬಾತುಗೋಳಿಯಲ್ಲ. ಜೀವನದಲ್ಲಿ ಮೊದಲ ಪ್ರಣಯವು ಮೊದಲ ಮಳೆಯ ಹನಿ ಇದ್ದಂತೆ, ಅಂದರೆ ಮೀಸಲು ಅಳಿಯದ ಮಳೆಹನಿಯಿದ್ದಂತೆ. ಅದರಂತೆ ತಮ್ಮಿಬ್ಬರ ಪ್ರೀತಿಯೂ ಸಹ ಮೀಸಲು ಪ್ರೀತಿ ಎನ್ನುವದು ನಮ್ಮ ಹುಡುಗಿಯ ಸಂಕಲ್ಪ.
ಹಾಗಾದರೆ ಎಷ್ಟು ಕಾಲ ಈ ವಿರಹವನ್ನು ಸಹಿಸಿಕೊಳ್ಳುತ್ತ ಇರಲು ಸಾಧ್ಯ?
ಒಲುಮೆಯ ನಚ್ಚೊಂದು ಕುಲುಮೆಯ ಕಿಚ್ಚವ್ವ
ಹುಲುಜೀವ ಕಾದು ಕಮರೀತು ಒಳುಜೀವ
ಒಲುಮೀಗೆ ಹ್ಯಾಂಗೊ ಬಾಳೀತು.
ಒಂದು ಜೀವವನ್ನು ಪ್ರೀತಿಸಿ, ಆ ಜೀವವನ್ನೇ ನಚ್ಚಿಕೊಂಡು, ಆ ಜೀವದ ವಿರಹದಲ್ಲಿ ಬಾಳುವದು ಅಂದರೆ ‘ಕುಲುಮೆಯ ಕಿಚ್ಚು’ ಇದ್ದಂತೆ. ಕಮ್ಮಾರನು ಕಬ್ಬಿಣವನ್ನು ಕಾಯಿಸಲು ಬಳಸುವ ಒಲೆಗೆ ಕುಲುಮೆ ಎನ್ನುತ್ತಾರೆ. ಕಬ್ಬಿಣವನ್ನು ಮೆತ್ತಗೆ ಮಾಡುವ ಆ ಶಾಖದಷ್ಟೇ ಪ್ರಖರವಾಗಿರುವದು ವಿರಹದ ಶಾಖ. ಈ ಶಾಖಕ್ಕೆ ಹುಲುಜೀವಗಳು ಅಂದರೆ ಅಸ್ಥಿರ ಜೀವಗಳು ಕಾದು ಕಮರುತ್ತವೆ ಅಂದರೆ ಬಾಳುವ ಆಸೆಯನ್ನೇ ಕಳೆದುಕೊಳ್ಳುತ್ತವೆ. ಆದರೆ ಆ ತಾಪವನ್ನು ಸಹಿಸಿಕೊಳ್ಳುವ ಸಾಮರ್ಥ್ಯವಿರುವ ‘ಒಳುಜೀವ’ವು (=ಸಾತ್ವಿಕ ಸಾಮರ್ಥ್ಯದ ಜೀವವು) ಆ ಪ್ರೀತಿಯನ್ನೇ ನೆನೆಸಿಕೊಳ್ಳುತ್ತ ಹೇಗೋ ಬದಕುತ್ತದೆ!
(ಟಿಪ್ಪಣಿ: ನಮ್ಮ ಪುರಾಣ ಕತೆಗಳ ನಾಯಕಿರಾದ ಸೀತೆ ಹಾಗು ಶಕುಂತಲಾ ಇಂತಹ ಸಾಮರ್ಥ್ಯವನ್ನು ತೋರಿಸಿದ್ದಾರೆ.)
..........................................................................................
ನೋಡಲೇನೋ ಇದು ಜಾನಪದ ಮಾದರಿಯ ಗೀತೆ. ಆದರೆ ಅರ್ಥ ಹೊಳೆದಂತೆಲ್ಲ, ಇದು ಜಾನಪದವನ್ನು ಮೀರಿದ ಗೀತೆ ಎನ್ನುವ ಅರಿವಾಗುವದು. ಜಾನಪದ ಗೀತೆಗಳಲ್ಲಿಯೂ ಪ್ರತಿಭೆಯನ್ನು ಹಾಗು ಪಾಂಡಿತ್ಯವನ್ನು ನಾವು ಕಾಣುತ್ತೇವೆ. ಆದರೆ ಬೇಂದ್ರೆಯವರಿಗೇ ವಿಶಿಷ್ಟವಾದ ಕೆಲವು ಅಂಶಗಳು ಈ ಕವನದಲ್ಲಿವೆ. ಮೊದಲನೆಯದಾಗಿ ಬೇಂದ್ರೆ-ಕಾವ್ಯದಲ್ಲಿ ಕಾಣುವ ಸುಸಂಬದ್ಧ ಬೆಳವಣಿಗೆ.
ಈ ಕವನದ ನಾಯಕಿಯು ತನ್ನ ಪ್ರಥಮ ಪ್ರೇಮಜಾಲದಲ್ಲಿ ಬೀಳುವ ನಿವೇದನೆಯಿಂದ ಕವನವನ್ನು ಪ್ರಾರಂಭಿಸಿದ ಬೇಂದ್ರೆಯವರು, ಈ ಘಟನೆಗೆ ಕಾರಣವನ್ನು ಅಂದರೆ ಹದಿಹರೆಯಕ್ಕೆ ಅವಳು ಕಾಲಿಡುತ್ತಿರುವದನ್ನು ಎರಡನೆಯ ನುಡಿಯಲ್ಲಿ ವರ್ಣಿಸಿದ್ದಾರೆ. ಮೂರೇ ಸಾಲುಗಳ ಈ ನುಡಿಯಲ್ಲಿ ಅವಳ ದೈಹಿಕ ಹಾಗು ಮಾನಸಿಕ ಬೆಳವಣಿಗೆಯ ಪೂರ್ಣ ವಿವರಣೆಯನ್ನು ಬೇಂದ್ರೆಯವರು ಸಾಂಕೇತಿಕವಾಗಿ ಸೂಚಿಸಿದ್ದಾರೆ! ಮುಂದಿನ ನುಡಿಗಳಲ್ಲಿ ಬರುವದು ಅವಳ ವಿರಹದ ಹಾಗು ಅವಳ ಸಂಕಲ್ಪದ ವರ್ಣನೆ. ಈ ರೀತಿಯಲ್ಲಿ ಕ್ರಮಬದ್ಧ ರಚನೆಯನ್ನು ನಾವು ಕಾಣುವದು ಬೇಂದ್ರೆಯವರ ಕಾವ್ಯದಲ್ಲಿಯೇ.
ಈ ಕವನದ ನಾಯಕಿಯು ತನ್ನ ಪ್ರಥಮ ಪ್ರೇಮಜಾಲದಲ್ಲಿ ಬೀಳುವ ನಿವೇದನೆಯಿಂದ ಕವನವನ್ನು ಪ್ರಾರಂಭಿಸಿದ ಬೇಂದ್ರೆಯವರು, ಈ ಘಟನೆಗೆ ಕಾರಣವನ್ನು ಅಂದರೆ ಹದಿಹರೆಯಕ್ಕೆ ಅವಳು ಕಾಲಿಡುತ್ತಿರುವದನ್ನು ಎರಡನೆಯ ನುಡಿಯಲ್ಲಿ ವರ್ಣಿಸಿದ್ದಾರೆ. ಮೂರೇ ಸಾಲುಗಳ ಈ ನುಡಿಯಲ್ಲಿ ಅವಳ ದೈಹಿಕ ಹಾಗು ಮಾನಸಿಕ ಬೆಳವಣಿಗೆಯ ಪೂರ್ಣ ವಿವರಣೆಯನ್ನು ಬೇಂದ್ರೆಯವರು ಸಾಂಕೇತಿಕವಾಗಿ ಸೂಚಿಸಿದ್ದಾರೆ! ಮುಂದಿನ ನುಡಿಗಳಲ್ಲಿ ಬರುವದು ಅವಳ ವಿರಹದ ಹಾಗು ಅವಳ ಸಂಕಲ್ಪದ ವರ್ಣನೆ. ಈ ರೀತಿಯಲ್ಲಿ ಕ್ರಮಬದ್ಧ ರಚನೆಯನ್ನು ನಾವು ಕಾಣುವದು ಬೇಂದ್ರೆಯವರ ಕಾವ್ಯದಲ್ಲಿಯೇ.
ಬೇಂದ್ರೆಯವರ ಭಾಷಾಪ್ರತಿಭೆಯಂತೂ ಅಪ್ರತಿಮವಾದದ್ದು. ಅಂತರಂಗದ ತಳಮಳವನ್ನು ‘ನೀರು ಕಡೆದಿತು ಜೀವ’ ಎಂದು ಬಣ್ಣಿಸುವಾಗ, ಹರೆಯಕ್ಕೆ ಕಾಲಿಡುವ ಸಮಯದ ಎಲ್ಲ ಬೆಳವಣಿಗೆಗೆಳನ್ನು ‘ಮೊಗ್ಗಿ ಬಿಚ್ಚಿತು ಒಳಗ’ ಎಂದು ಸೂಚನೆ ಕೊಡುವಾಗ, ನಾಯಕಿಯ ಪ್ರೀತಿಯನ್ನು ‘ಮೀಸಲಳಿಯದ ಮಳೆಹನಿಯಂತೆ’ ಎಂದು ವರ್ಣಿಸುವಾಗ ಬೇಂದ್ರೆಯವರು ಬಳಸುವ ದೇಸಿ ರೂಪಕಗಳು, ಅವರ ರೂಪಕಪ್ರತಿಭೆಗೆ ಸಾಕ್ಷಿಯಾಗಿವೆ.
ಬೇಂದ್ರೆಯವರು ಭಾಷಾಚಮತ್ಕಾರಗಳನ್ನು ಕೇವಲ ರಂಜನೆಗಾಗಿಯೇ ಬಳಸುವದಿಲ್ಲ. ಕಾವ್ಯದ ಸರಾಗತೆಯೇ ಅವರ ಉದ್ದೇಶವಾಗಿರುತ್ತದೆ. ಮೊದಲ ನುಡಿಯಲ್ಲಿ ಬರುವ ‘ರ’ಕಾರಪ್ರಾಸವನ್ನು (ಉದಾ: ನೀರ, ಧೀರ ಇ.), ಎರಡನೆಯ ನುಡಿಯಲ್ಲಿ ಬರುವ ‘ಗ’ಕಾರಪ್ರಾಸವನ್ನು (ಉದಾ: ಸುಗ್ಗಿ, ಹಿಗ್ಗು, ಮೊಗ್ಗಿ ಇ.), ಅದೇ ರೀತಿಯಲ್ಲಿ ಇತರ ನುಡಿಗಳಲ್ಲಿಯ ಅಕ್ಷರಪ್ರಾಸಗಳನ್ನೂ ಸಹ ನಾವು ಇಲ್ಲಿ ಗಮನಿಸಬಹುದು.
ನೋಡಲು ಇಷ್ಟು ಸರಳವಾಗಿ ಕಾಣುವ ಈ ಕವನದ ರಚನೆಯಲ್ಲಿಯ ಕ್ಲಿಷ್ಟತೆಯನ್ನು ಗಮನಿಸಿರಿ:
ಪ್ರತಿ ನುಡಿಯ ಎರಡನೆಯ ಸಾಲಿನ ಕೊನೆಯ ಪದವು, ಮುಂದಿನ ಸಾಲಿಗೆ ಸಂಬಂಧಪಟ್ಟ ಪದವಾಗಿದೆ.
ಉದಾಹರಣೆ:
ನೀರನ ನೋಟಕ್ಕ ನೀರು ಕಡೆದಿತು ಜೀವ
ಧೀರ ಧೈರ್ಯಾವ ಕಳೆದಾನ ನನ್ನೊಂದ
ತೀರ ಮರುಳಿಯ ಮಾಡ್ಯಾನ .
‘ಧೀರ ಧೈರ್ಯಾವ ಕಳೆದಾನ’ ಎನ್ನುವಲ್ಲಿಗೆ ವಾಕ್ಯ ಪೂರ್ಣವಾಗುತ್ತದೆ. ‘ನನ್ನೊಂದ’ ಇದು ಈ ಸಾಲಿನ ಕೊನೆಯ ಪದವಾದರೂ ಸಹ, ಮುಂದಿನ ಸಾಲಿನೊಂದಿಗೆ ಅದರ ಸಂಬಂಧವಿದೆ. ‘ನನ್ನೊಂದ ತೀರ ಮರುಳಿಯ ಮಾಡ್ಯಾನ’ ಎನ್ನುವದು ಪೂರ್ಣ ವಾಕ್ಯವಾಗುತ್ತದೆ. ಈ ರೀತಿಯಲ್ಲಿ ಪದಗಳನ್ನು ಒಡೆಯುವದನ್ನು ಸಂಸ್ಕೃತ ಶ್ಲೋಕಗಳಲ್ಲಿ ಕಾಣಬಹುದು.
ಕೊನೆಯದಾಗಿ, ಬೇಂದ್ರೆಯವರ ಹೆಚ್ಚಾನುಹೆಚ್ಚು ಪ್ರಣಯಗೀತೆಗಳೆಲ್ಲವೂ ದೇಸಿ ಪ್ರಕಾರದಲ್ಲಿಯೇ ಇರುವದನ್ನು ಗಮನಿಸಬೇಕು.
` ಒಲುಮೆಯ ಕಿಚ್ಚು’ ಕವನವು ‘ಕಾಮಕಸ್ತೂರಿ’ ಸಂಕಲನದಲ್ಲಿ ಅಡಕವಾಗಿದೆ.
` ಒಲುಮೆಯ ಕಿಚ್ಚು’ ಕವನವು ‘ಕಾಮಕಸ್ತೂರಿ’ ಸಂಕಲನದಲ್ಲಿ ಅಡಕವಾಗಿದೆ.