Thursday, June 30, 2011

`ಒಲುಮೆಯ ಕಿಚ್ಚು'...................................ದ.ರಾ.ಬೇಂದ್ರೆ

                                                ನೀರನ ನೋಟಕ್ಕ ನೀರು ಕಡೆದಿತು ಜೀವ
                                                ಧೀರ ಧೈರ್ಯಾವ ಕಳೆದಾನ ನನ್ನೊಂದ
ತೀರ ಮರುಳಿಯ ಮಾಡ್ಯಾನ  ||೧||

ಸುಗ್ಗಿ ನಗಿ ನಕ್ಕಾಗ ಮೊಗ್ಗಿ ಬಿಚ್ಚಿತು ಒಳಗ
ಹಿಗ್ಗಿ ಪಾಡಾಗಿ ಮಾಗಿಸಿತು ಹರೆಯವು
ಬಗ್ಗದ ಎದೆಯ ಬಾಗಿಸಿತು  ||೨||

ಮಾಗಿ ಮೂಡಲಗಾಳಿ ತಾಗಿದ ಬನಧಾಂಗ
ಸಾಗ್ಯದ ನನ್ನ ಹರೆಯವು ಕೋಗಿಲಾ
ಕೂಗಿ ಕರೆತಾರs ಸುಗ್ಗಿಯಾ  ||೩||

ಆಡಿ ಜೀವದ ಗಾಣಾ ನೋಡ ಹಿಂಡಿತು ಪ್ರಾಣಾ
ಕಾಡತಾನ್ಯಾಕs ಆ ಜಾಣ ಕೇಳಿಲ್ಲ
ಹಾಡು ತಲ್ಲಣದ ತಿಲ್ಲಾಣ  ||೪||

ಬಾತುಗೋಳಿ ಹಾಂಗ ಚಾತಕದ ಜಾತ್ಯಲ್ಲ
ನಾತನೀರಾಗ ಅದರಾಟ, ಇದರೂಟ
ಮೀಸಲಳಿಯದ ಮಳಿಯಾಗ  ||೫||

ಒಲುಮೆಯ ನಚ್ಚೊಂದು ಕುಲುಮೆಯ ಕಿಚ್ಚವ್ವ
ಹುಲುಜೀವ ಕಾದು ಕಮರೀತು ಒಳುಜೀವ
ಒಲುಮೀಗೆ ಹ್ಯಾಂಗೊ ಬಾಳೀತು  ||೬||
………………………………………………………………………………...............

ಬೇಂದ್ರೆಯವರು ಬಳಸದೆ ಇದ್ದ ಕಾವ್ಯಪ್ರಕಾರ ಉಂಟೆ? ಕನ್ನಡ ಕಾವ್ಯದಲ್ಲಿರುವ ಎಲ್ಲ ಛಂದೋಪ್ರಕಾರಗಳನ್ನು ಬೇಂದ್ರೆಯವರು ಬಳಸಿರುವ ಸಂಭಾವ್ಯತೆ ಇದೆ. ಮಾರ್ಗಕಾವ್ಯ, ದೇಸಿ ರಚನೆ, ಶರಣರ ವಚನಗಳು, ದಾಸರ ಕೀರ್ತನೆಗಳು, ಜಾನಪದ ಹಾಡುಗಳು, ನವೋದಯದ ಭಾವಗೀತೆ, ಅಷ್ಟಷಟ್ಪದಿ, ಮುಕ್ತ ಛಂದಸ್ಸು ಇವೆಲ್ಲವನ್ನೂ ಬೇಂದ್ರೆಯವರು ಮುಕ್ತವಾಗಿ ಹಾಗು ಸಮರ್ಥವಾಗಿ ತಮ್ಮ ಕಾವ್ಯರಚನೆಯಲ್ಲಿ ಬಳಸಿಕೊಂಡಿದ್ದಾರೆ.

ಜಾನಪದ ತ್ರಿಪದಿಯ ಮಾದರಿಯಲ್ಲಿರುವ ‘ಒಲುಮೆಯ ಕಿಚ್ಚು’ ಕವನವನ್ನು ಓದಿದಾಗ (ಅಥವಾ ಹಾಡಿಕೊಂಡಾಗ) ಈ ಕವನವು ಹಳ್ಳಿಯ ಹೆಣ್ಣುಮಕ್ಕಳು ಹಾಡುವ, ‘ಕುಟ್ಟುವ-ಬೀಸುವ ಹಾಡು’ ಎಂದೇ ಅನಿಸುವದು. ಆದರೆ ಕವನದ ಸುಸಂಬದ್ಧ ರಚನೆ ಹಾಗು ಭಾಷಾವೈಖರಿ ಇವು  ಬೇಂದ್ರೆಯವರ ಲೇಖನಿಯ ಕುರುಹನ್ನು ಸ್ಪಷ್ಟವಾಗಿ ತೋರಿಸುವವು!

‘ಒಲುಮೆಯ ಕಿಚ್ಚು’ ಕವನವು  ಹದಿಹರೆಯದ ಹಳ್ಳಿಯ ಹುಡುಗಿಯೊಬ್ಬಳ ಪ್ರಥಮ ಪ್ರೇಮ ಹಾಗು ವಿರಹಗಳ ಗೀತೆ. ಈ ಹುಡುಗಿಯು ೨೧ನೆಯ ಶತಮಾನದ ನಾಗರಿಕ ಹುಡುಗಿಯಲ್ಲ ಎನ್ನುವದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಆಗಿನ ಹುಡುಗಿಯರು ಪ್ರಣಯ,ಪ್ರೇಮಗಳಿಗೆ ಹಿಂಜರಿಯುತ್ತಿದ್ದರು ಎಂದೇನಲ್ಲ, ಆದರೆ ಸ್ವಲ್ಪ ನಾಚಿಕೊಳ್ಳುತ್ತಿದ್ದರು ಎಂದು ಹೇಳಬಹುದು! ಈ ಕವನದ ಮುಗುದೆ ಮೊದಲ ನೋಟದಲ್ಲಿ ಪ್ರೇಮಕ್ಕೆ ಬಲಿಯಾಗಿ, ಬಳಿಕ ವಿರಹದಲ್ಲಿ ಬಳಲುತ್ತಿದ್ದಾಳೆ. ತಾನು ಪ್ರೇಮದ ಬಲೆಗೆ ಸಿಲುಕಿದ ಪ್ರಸಂಗವನ್ನು  ಮತ್ತೆ ನೆನೆಸಿಕೊಳ್ಳುತ್ತಿದ್ದಾಳೆ (ಅಥವಾ ತನ್ನ ಜೀವದ ಗೆಳತಿಯ ಎದುರಿಗೆ ಬಿಚ್ಚಿಡುತ್ತಿದ್ದಾಳೆ.) ಆ ಸಂಗತಿಯ ಆತ್ಮನಿವೇದನೆ ಹೀಗಿದೆ:
ನೀರನ ನೋಟಕ್ಕ ನೀರು ಕಡೆದಿತು ಜೀವ
ಧೀರ ಧೈರ್ಯಾವ ಕಳೆದಾನ ನನ್ನೊಂದ
ತೀರ ಮರುಳಿಯ ಮಾಡ್ಯಾನ .

ಗಂಡಸರ ದೃಷ್ಟಿಗೆ ಅಂಜಿಕೊಳ್ಳುವಳಂಥವಳೇನಲ್ಲ ನಮ್ಮ ಹುಡುಗಿ. ಆದರೆ ಈ ನೀರನ(=ಗಂಡಿನ) ನೋಟಕ್ಕೆ ನಮ್ಮ ನೀರೆ ತಲ್ಲಣಿಸಿ ಹೋದಳು. ತನ್ನ ನೀರು (ಅಂದರೆ ಅಂತಃಸತ್ವವು) ಕಡೆಗೋಲಿನಿಂದ ಕಡೆದಂತೆ ಅವಳ ಜೀವವು ತಳಮಳಿಸಿತು. ನೀರು ಕಡೆದಿತು ಎಂದರೆ ಈ ಬಾಲೆಯು ಆತನ ನೋಟಕ್ಕೆ ಬೆವತು ಹೋದಳು ಎಂದೂ ಅರ್ಥವಾಗುತ್ತದೆ. ಈ ಹುಡುಗಿಯನ್ನು ನೆಟ್ಟ ನೋಟದಿಂದ ಸೋಲಿಸಿದ ಆ ಧೀರ ಗಂಡಸು ಅವಳ ಧೈರ್ಯವನ್ನೇ ಉಡುಗಿಸಿ ಬಿಟ್ಟ! ಇಷ್ಟೇ ಅಲ್ಲ, ಅವಳನ್ನು ಪೂರಾ ಮರುಳಿಯನ್ನಾಗಿ ಮಾಡಿದ, ಅಂದರೆ ಅವಳಿಗೆ ಇವನ ಹುಚ್ಚು ಹಿಡಿಯಿತು ಎನ್ನಬಹುದು.

ಈಗ ತಾನೇ ಬಾಲ್ಯಾವಸ್ಥೆಯನ್ನು ದಾಟುತ್ತಿರುವ ಇವಳಿಗೆ  ಇದು ಹೊಚ್ಚ ಹೊಸ ಅನುಭವ. ಇದೀಗ ಅವಳು ಹದಿಹರೆಯಕ್ಕೆ ಕಾಲಿಟ್ಟಿದ್ದಾಳೆ. ಅವಳ ಮಾತುಗಳಲ್ಲಿಯೇ ಈ ಬದಲಾವಣೆಯ ಅನುಭವವನ್ನು ಕೇಳಬಹುದು:
          ಸುಗ್ಗಿ ನಗಿ ನಕ್ಕಾಗ ಮೊಗ್ಗಿ ಬಿಚ್ಚಿತು ಒಳಗ
          ಹಿಗ್ಗಿ ಪಾಡಾಗಿ ಮಾಗಿಸಿತು ಹರೆಯವು
          ಬಗ್ಗದ ಎದೆಯ ಬಾಗಿಸಿತು.

‘ಸುಗ್ಗಿ ನಗಿ ನಕ್ಕಾಗ’ ಎನ್ನುವದನ್ನು ಎರಡು ರೀತಿಯಲ್ಲಿ ಅರ್ಥೈಸಬಹುದು.
(೧)ಅವಳ ಜೀವನದಲ್ಲಿ ಸುಗ್ಗಿಯ ಕಾಲವು ಈಗ ಪ್ರವೇಶಿಸಿದೆ ಅಂದರೆ ಹೊಸ ಹರೆಯವು ಉಲ್ಲಾಸದ ನಗೆಯನ್ನು ಚಿಮ್ಮುತ್ತ ಬರುತ್ತಿದೆ.
(೨) ಅವಳ ಪ್ರಣಯಿಯು ‘ಸುಗ್ಗಿಯ ಸೊಬಗಿನ ನಗೆಯನ್ನು ನಕ್ಕಾಗ’ ಎಂದು ಭಾವಿಸಿದರೆ, ಆತನ ನಗೆಯಿಂದಲೇ ಅವಳ ಅಂತರಂಗದಲ್ಲಿ ವಸಂತಕಾಲ ಪ್ರವೇಶಿಸಿತು ಎಂದೂ ಅರ್ಥೈಸಬಹುದು.

ಈ ಹರೆಯದ ಸುಗ್ಗಿಯ ಕಾಲದಲ್ಲಿ ಮೊಗ್ಗುಗಳೆಲ್ಲ ಅರಳಿ ಹೂವಾಗಬೇಕಲ್ಲವೆ? ಇವಳ ‘ಒಳಗಿನ ಮೊಗ್ಗೂ’ ಸಹ ಈಗ ಬಿಚ್ಚಿಕೊಂಡು ಹಿಗ್ಗಿತು; ಅಂದರೆ ಅವಳ ಅಂತರಂಗವು ಅರಳಿತು. ‘ಹಿಗ್ಗುವದು’ ಎಂದರೆ ಉಲ್ಲಾಸವನ್ನು ಅನುಭವಿಸುವದು ಎಂದೂ ಅರ್ಥವಾಗುತ್ತದೆ. ಹದಿಹರೆಯವು ಹೊಸ ಉಲ್ಲಾಸವನ್ನು ತರುವದು ಸಹಜವೇ ಆಗಿದೆ.

‘ಮೊಗ್ಗು ಬಿಚ್ಚಿತು’ ಎನ್ನುವ ಪದಗುಚ್ಛವು ಮೊದಲನೆಯದಾಗಿ ಅವಳ ದೈಹಿಕ ಬದಲಾವಣೆಗಳನ್ನೂ ಸೂಚಿಸುತ್ತದೆ ಹಾಗು ಎರಡನೆಯದಾಗಿ ಸುಪ್ತಾವಸ್ಥೆಯಲ್ಲಿದ್ದ ಸಹಜ ಕಾಮನೆಗಳು ಈಗ ವ್ಯಕ್ತಾವಸ್ಥೆಗೆ ಬಂದವು ಎನ್ನುವದನ್ನೂ ಸೂಚಿಸುತ್ತದೆ. ಈ ದೈಹಿಕ ಹಾಗು ಮಾನಸಿಕ ಬೆಳವಣಿಗೆಯ ಮುಂದಿನ ಘಟ್ಟವೆಂದರೆ ‘ಪಾಡು’ ಆಗುವದು ಅರ್ಥಾತ್ ಪಕ್ವವಾಗುವದು. ಈ ಪದವೂ ಸಹ ದೈಹಿಕ ಹಾಗು ಮಾನಸಿಕ ಪಕ್ವತೆಯನ್ನು ಸೂಚಿಸುವವು. ಪಕ್ವತೆಯ ಮುಂದಿನ ಹಂತವು ‘ಮಾಗುವದು’ ಎಂದರೆ ಭೋಗಯೋಗ್ಯವಾಗುವದು. ಹರೆಯದ ವಸಂತ ಕಾಲದಲ್ಲಿ ಇದೆಲ್ಲ ಸಹಜವೇ! ಇನ್ನು ‘ಬಗ್ಗದ ಎದೆಯನ್ನು ಬಾಗಿಸಿತು’ ಎಂದರೆ, ಧಾಷ್ಟೀಕದ ಹುಡುಗತನವು ಹೋಗಿ, ನಮ್ರತೆಯ, ನಾಚಿಕೆಯ ಭಾವ ಅವಳಲ್ಲಿ ತುಂಬಿತು ಎಂದು ಅರ್ಥೈಸಬಹುದು.

ಇಂತಹ ಪ್ರಣಯಯೋಗ್ಯಳಾದ ಕನ್ಯೆಯನ್ನು ಒಬ್ಬ ಧೀರನು ದೃಷ್ಟಿಯುದ್ಧದಿಂದ ಸೋಲಿಸಿದ್ದಾನೆ. ಇದೀಗ ಆ ಧೀರನಿಗಾಗಿ, ಆ ನೀರನಿಗಾಗಿ ಈ ಮುಗ್ಧೆ ಹಂಬಲಿಸುತ್ತಿದ್ದಾಳೆ. ಅವಳು ತನ್ನ ವಿರಹವನ್ನು ತೋಡಿಕೊಳ್ಳುತ್ತಿರುವ ಪರಿ ಹೀಗಿದೆ:
ಮಾಗಿ ಮೂಡಲಗಾಳಿ ತಾಗಿದ ಬನಧಾಂಗ
ಸಾಗ್ಯದ ನನ್ನ ಹರೆಯವು ಕೋಗಿಲಾ
ಕೂಗಿ ಕರೆತಾರs ಸುಗ್ಗಿಯಾ.

ಮಾಘ ಮಾಸದಲ್ಲಿ ಅಂದರೆ ಚಳಿಗಾಲದಲ್ಲಿ ಮೂಡಲಗಾಳಿಯು ಬಿರ್ರನೆ ಬೀಸುತ್ತಿರುತ್ತದೆ. ಗಿಡ, ಮರಗಳೆಲ್ಲ ತಮ್ಮ ಎಲೆಗಳನ್ನು ಉದುರಿಸಿ ಬರಲಾಗಿ ನಿಲ್ಲುವವು. ಸೃಷ್ಟಿಕ್ರಿಯೆ ಪ್ರಾರಂಭವಾಗಲು ಅಂದರೆ ಮತ್ತೆ ಹೂಬಿಡಲು ಅವು ವಸಂತಕಾಲಕ್ಕಾಗಿ ಕಾಯಬೇಕು. ನಮ್ಮ ಹುಡುಗಿಯ ಪ್ರೇಮಿಯು ಅವಳನ್ನು ದೃಷ್ಟಿಯುದ್ಧದಲ್ಲಿ ಸೋಲಿಸಿದ್ದಾನೆ. ಆದರೆ ಅವಳನ್ನು ಸೆರೆಹಿಡಿದೊಯ್ಯುವ ಬದಲು ತಾನೇ ಮಾಯವಾಗಿದ್ದಾನೆ. ಹೀಗಾಗಿ ಅವಳ ಹರೆಯವೆಂಬ ಬನಕ್ಕೆ ವಿರಹವೆಂಬ ಮಾಘಮಾಸ ಕಾಲಿಟ್ಟಿದೆ. ಅವಳ ವಯೋವೈಭವವೆಲ್ಲ ಮುರುಟಿ, ವ್ಯರ್ಥವಾಗುತ್ತಿದೆ. ಈಗ ಅವಳ ನೆರವಿಗೆ ಬರುವರಾರು? ವಸಂತಕಾಲ ಕಾಲಿಟ್ಟೊಡನೆಯೇ ಗಂಡುಕೋಗಿಲೆಯು ಹೆಣ್ಣುಕೋಗಿಲೆಗೆ ತನ್ನ ಪಂಚಮಸ್ವರದಲ್ಲಿ ಪ್ರಣಯದ ಆಹ್ವಾನವನ್ನು ನೀಡುವದು ಪ್ರಕೃತಿಯ ನಿಯಮ. ಅದಕ್ಕೇ ನಮ್ಮ ಕಾವ್ಯನಾಯಕಿಯು ಆರ್ತಳಾಗಿ ಕೋಗಿಲೆಗೆ ವಿನಂತಿಯನ್ನು ಮಾಡಿಕೊಳ್ಳುತ್ತಿದ್ದಾಳೆ. ‘ಕೋಗಿಲೆಯೇ, ನೀನು ಕೂಗಿದರೆ ವಸಂತಕಾಲ ಬರುವದು. ದಯವಿಟ್ಟು ವಸಂತನನ್ನು ನನ್ನಲ್ಲಿಗೆ ಕರೆದುಕೊಂಡು ಬಾ!’ ಇಲ್ಲಿಯ ವೈಚಿತ್ರ್ಯವನ್ನು ಗಮನಿಸಿರಿ. ಕೋಗಿಲೆಯು ಕೂಗುವದು ವಸಂತಕಾಲದಲ್ಲಿ. ಆದರೆ ಅದು ಕೂಗುವದರಿಂದ ವಸಂತಕಾಲವು ಬರುವದಿಲ್ಲ. ವಿರಹದಲ್ಲಿ ಹುಚ್ಚಿಯಾದ ನಮ್ಮ ಕಾವ್ಯನಾಯಕಿಗೆ ಕೋಗಿಲೆಯ ಕೂಜನವೇ ವಸಂತನನ್ನು ಕರೆದುತರುವದು ಎಂದು ಭಾಸವಾಗುತ್ತಿದೆ!

ಆದರೇನು? ಅವಳ ಆರ್ತತೆ ಅವಳ ಪ್ರಣಯಿಗೆ ಅರ್ಥವಾಗುತ್ತಿಲ್ಲ. ಅವಳ ಹೃದಯದ ಕರೆ ಅವನಿಗೆ ಕೇಳಿಸುತ್ತಿಲ್ಲ.
ಆಡಿ ಜೀವದ ಗಾಣಾ ನೋಡ ಹಿಂಡಿತು ಪ್ರಾಣಾ
ಕಾಡತಾನ್ಯಾಕs ಆ ಜಾಣ ಕೇಳಿಲ್ಲ
ಹಾಡು ತಲ್ಲಣದ ತಿಲ್ಲಾಣ.
ನಮ್ಮ ಹುಡುಗಿಯ ಬದುಕು ಒಂದು ದಿನನಿತ್ಯದ ಗಾಣವಾಗಿದೆ. ಪ್ರತಿದಿನವನ್ನು ಅವಳು ಗಾಣದೆತ್ತಿನಂತೆ ಕಳೆಯುತ್ತಿದ್ದಾಳೆ. ಆದರೆ ಈ ಗಾಣವು ಹಿಂಡುತ್ತಿರುವದೇನನ್ನು? ಅವಳ ಪ್ರಾಣವನ್ನೇ ಈ ಗಾಣ ಹಿಂಡುತ್ತಿದೆ. ಅದನ್ನೇ ಅವಳು ಸ್ವಗತದಲ್ಲಿ (ಅಥವಾ ತನ್ನ ಆಪ್ತಸಖಿಯಲ್ಲಿ ಹೇಳಿಕೊಳ್ಳುತ್ತಿದ್ದಾಳೆ.) ಇಷ್ಟೆಲ್ಲ ನೋವನ್ನು ಇವಳು ಅನುಭವಿಸುತ್ತಿರುವಾಗ, ಆ ಜಾಣನಿಗೆ ಇದು ಅರ್ಥವಾಗುತ್ತಿಲ್ಲವೆ? ಇವಳನ್ನು ವಿರಹದಲ್ಲಿ ನೂಕಿ ಅವನು ಏಕೆ ಕಾಡುತ್ತಿದ್ದಾನೆ? ಜಾಣ ಎನ್ನುವ ಪದವನ್ನು ನಮ್ಮ ಹುಡುಗಿಯು ದ್ವಂದ್ವಾರ್ಥಾದಲ್ಲಿ ಉಪಯೋಗಿಸುತ್ತಿರುವದನ್ನು ಗಮನಿಸಬೇಕು.

ತನ್ನ ಪ್ರೇಮಿ ಬಾರದೇ ಹೋಗಬಹುದು ಎನ್ನುವ ತಲ್ಲಣ ಅವಳಿಗಿದೆ. ಈ ವಿರಹರಾಗದ ತಿಲ್ಲಾಣವನ್ನು (ಅಂದರೆ ಪ್ರಾರಂಭಿಕ ಆಲಾಪವನ್ನು) ಆ ಪ್ರಣಯಜಾಣ ಕೇಳಿರಲಿಕ್ಕಿಲ್ಲ. ಯಾಕೆಂದರೆ ಇವಳ ಮೌನಸ್ವರವು ಆತನಿಗೆ ಕೇಳಿಸುವದಾದರೂ ಹೇಗೆ? ಕೇಳಿದ್ದರೆ ಆತ  ಸುಮ್ಮನೇ ಇರುತ್ತಿರಲಿಲ್ಲವೇನೊ? (ತಿಲ್ಲಾಣವೆಂದರೆ ಹಾಡಿನ ಪ್ರಾರಂಭದಲ್ಲಿ ಗಾಯಕರು ಆಲಾಪಿಸುವ ವರ್ಣಗಳು.) ಇದೀಗ ತಿಲ್ಲಾಣ ಪ್ರಾರಂಭವಾಗಿದೆ. ಈ ವಿರಹರಾಗವು ದೀರ್ಘಕಾಲೀನವಾಗಬಹುದೇನೊ ಎನ್ನುವ ಅಂಜಿಕೆಯು ನಮ್ಮ ಕವನನಾಯಕಿಯನ್ನು ಬಾಧಿಸುತ್ತಿದೆ.

ಇವಳ ದೀರ್ಘವಿರಹವನ್ನು ಪರಿಹರಿಸಲು ಆ ಮೊದಲ ಪ್ರೇಮಿಯೇ ಆಗಬೇಕೆ? ಬೇರೊಬ್ಬನನ್ನು ವರಿಸಿ, ಸುಖವಾಗಿ ಇರಬಹುದಲ್ಲವೆ? ಇಂತಹ ತಿಳಿಗೇಡಿ ಪ್ರಶ್ನೆಗೆ ಅವಳ ಉತ್ತರ ಹೀಗಿದೆ:
ಬಾತುಗೋಳಿ ಹಾಂಗ ಚಾತಕದ ಜಾತ್ಯಲ್ಲ
ನಾತನೀರಾಗ ಅದರಾಟ, ಇದರೂಟ
ಮೀಸಲಳಿಯದ ಮಳಿಯಾಗ.
ಅಕ್ಕಾ, ಬಾತುಗೋಳಿ ಹಾಗು ಚಾತಕ ಪಕ್ಷಿ ಇವುಗಳ ವ್ಯತ್ಯಾಸ ನಿನಗೆ ಗೊತ್ತೆ? ಬಾತುಗೋಳಿಯ ಆಟವೆಲ್ಲ ಕೊಳೆಯಾಗಿ ನಾರುತ್ತಿರುವ ನೀರಿನಲ್ಲಿ. ಚಾತಕ ಪಕ್ಷಿಯಾದರೋ ಮೊದಲ ಮಳೆಯ ಹನಿಯನ್ನು ಮಾತ್ರ ಆಸ್ವಾದಿಸುತ್ತದೆ. ನಾನು ಚಾತಕ ಪಕ್ಷಿಯೇ ಹೊರತು ಬಾತುಗೋಳಿಯಲ್ಲ. ಜೀವನದಲ್ಲಿ ಮೊದಲ ಪ್ರಣಯವು ಮೊದಲ ಮಳೆಯ ಹನಿ ಇದ್ದಂತೆ, ಅಂದರೆ ಮೀಸಲು ಅಳಿಯದ ಮಳೆಹನಿಯಿದ್ದಂತೆ. ಅದರಂತೆ ತಮ್ಮಿಬ್ಬರ ಪ್ರೀತಿಯೂ ಸಹ ಮೀಸಲು ಪ್ರೀತಿ ಎನ್ನುವದು ನಮ್ಮ ಹುಡುಗಿಯ ಸಂಕಲ್ಪ.

ಹಾಗಾದರೆ ಎಷ್ಟು ಕಾಲ ಈ ವಿರಹವನ್ನು ಸಹಿಸಿಕೊಳ್ಳುತ್ತ ಇರಲು ಸಾಧ್ಯ?
ಒಲುಮೆಯ ನಚ್ಚೊಂದು ಕುಲುಮೆಯ ಕಿಚ್ಚವ್ವ
ಹುಲುಜೀವ ಕಾದು ಕಮರೀತು ಒಳುಜೀವ
ಒಲುಮೀಗೆ ಹ್ಯಾಂಗೊ ಬಾಳೀತು.
ಒಂದು ಜೀವವನ್ನು ಪ್ರೀತಿಸಿ, ಆ ಜೀವವನ್ನೇ ನಚ್ಚಿಕೊಂಡು, ಆ ಜೀವದ ವಿರಹದಲ್ಲಿ ಬಾಳುವದು ಅಂದರೆ ‘ಕುಲುಮೆಯ ಕಿಚ್ಚು’ ಇದ್ದಂತೆ. ಕಮ್ಮಾರನು ಕಬ್ಬಿಣವನ್ನು ಕಾಯಿಸಲು ಬಳಸುವ ಒಲೆಗೆ ಕುಲುಮೆ ಎನ್ನುತ್ತಾರೆ. ಕಬ್ಬಿಣವನ್ನು ಮೆತ್ತಗೆ ಮಾಡುವ ಆ ಶಾಖದಷ್ಟೇ ಪ್ರಖರವಾಗಿರುವದು ವಿರಹದ ಶಾಖ. ಈ ಶಾಖಕ್ಕೆ ಹುಲುಜೀವಗಳು ಅಂದರೆ ಅಸ್ಥಿರ ಜೀವಗಳು ಕಾದು ಕಮರುತ್ತವೆ ಅಂದರೆ ಬಾಳುವ ಆಸೆಯನ್ನೇ ಕಳೆದುಕೊಳ್ಳುತ್ತವೆ. ಆದರೆ ಆ ತಾಪವನ್ನು ಸಹಿಸಿಕೊಳ್ಳುವ ಸಾಮರ್ಥ್ಯವಿರುವ ‘ಒಳುಜೀವ’ವು (=ಸಾತ್ವಿಕ ಸಾಮರ್ಥ್ಯದ ಜೀವವು) ಆ ಪ್ರೀತಿಯನ್ನೇ ನೆನೆಸಿಕೊಳ್ಳುತ್ತ ಹೇಗೋ ಬದಕುತ್ತದೆ!
(ಟಿಪ್ಪಣಿ: ನಮ್ಮ ಪುರಾಣ ಕತೆಗಳ ನಾಯಕಿರಾದ ಸೀತೆ ಹಾಗು ಶಕುಂತಲಾ ಇಂತಹ ಸಾಮರ್ಥ್ಯವನ್ನು ತೋರಿಸಿದ್ದಾರೆ.)
..........................................................................................

ನೋಡಲೇನೋ ಇದು ಜಾನಪದ ಮಾದರಿಯ ಗೀತೆ. ಆದರೆ ಅರ್ಥ ಹೊಳೆದಂತೆಲ್ಲ, ಇದು ಜಾನಪದವನ್ನು ಮೀರಿದ ಗೀತೆ ಎನ್ನುವ ಅರಿವಾಗುವದು. ಜಾನಪದ ಗೀತೆಗಳಲ್ಲಿಯೂ ಪ್ರತಿಭೆಯನ್ನು ಹಾಗು ಪಾಂಡಿತ್ಯವನ್ನು ನಾವು ಕಾಣುತ್ತೇವೆ. ಆದರೆ ಬೇಂದ್ರೆಯವರಿಗೇ ವಿಶಿಷ್ಟವಾದ ಕೆಲವು ಅಂಶಗಳು ಈ ಕವನದಲ್ಲಿವೆ. ಮೊದಲನೆಯದಾಗಿ ಬೇಂದ್ರೆ-ಕಾವ್ಯದಲ್ಲಿ ಕಾಣುವ ಸುಸಂಬದ್ಧ ಬೆಳವಣಿಗೆ. 

ಈ ಕವನದ ನಾಯಕಿಯು ತನ್ನ ಪ್ರಥಮ ಪ್ರೇಮಜಾಲದಲ್ಲಿ ಬೀಳುವ ನಿವೇದನೆಯಿಂದ ಕವನವನ್ನು ಪ್ರಾರಂಭಿಸಿದ ಬೇಂದ್ರೆಯವರು, ಈ ಘಟನೆಗೆ ಕಾರಣವನ್ನು ಅಂದರೆ ಹದಿಹರೆಯಕ್ಕೆ ಅವಳು ಕಾಲಿಡುತ್ತಿರುವದನ್ನು ಎರಡನೆಯ ನುಡಿಯಲ್ಲಿ ವರ್ಣಿಸಿದ್ದಾರೆ. ಮೂರೇ ಸಾಲುಗಳ ಈ ನುಡಿಯಲ್ಲಿ ಅವಳ ದೈಹಿಕ ಹಾಗು ಮಾನಸಿಕ ಬೆಳವಣಿಗೆಯ ಪೂರ್ಣ ವಿವರಣೆಯನ್ನು ಬೇಂದ್ರೆಯವರು ಸಾಂಕೇತಿಕವಾಗಿ ಸೂಚಿಸಿದ್ದಾರೆ!  ಮುಂದಿನ ನುಡಿಗಳಲ್ಲಿ ಬರುವದು ಅವಳ ವಿರಹದ ಹಾಗು ಅವಳ ಸಂಕಲ್ಪದ ವರ್ಣನೆ. ಈ ರೀತಿಯಲ್ಲಿ ಕ್ರಮಬದ್ಧ ರಚನೆಯನ್ನು ನಾವು ಕಾಣುವದು ಬೇಂದ್ರೆಯವರ ಕಾವ್ಯದಲ್ಲಿಯೇ.

ಬೇಂದ್ರೆಯವರ ಭಾಷಾಪ್ರತಿಭೆಯಂತೂ ಅಪ್ರತಿಮವಾದದ್ದು. ಅಂತರಂಗದ ತಳಮಳವನ್ನು ‘ನೀರು ಕಡೆದಿತು ಜೀವ’ ಎಂದು ಬಣ್ಣಿಸುವಾಗ, ಹರೆಯಕ್ಕೆ ಕಾಲಿಡುವ ಸಮಯದ ಎಲ್ಲ ಬೆಳವಣಿಗೆಗೆಳನ್ನು ‘ಮೊಗ್ಗಿ ಬಿಚ್ಚಿತು ಒಳಗ’ ಎಂದು ಸೂಚನೆ ಕೊಡುವಾಗ, ನಾಯಕಿಯ ಪ್ರೀತಿಯನ್ನು ‘ಮೀಸಲಳಿಯದ ಮಳೆಹನಿಯಂತೆ’ ಎಂದು ವರ್ಣಿಸುವಾಗ ಬೇಂದ್ರೆಯವರು ಬಳಸುವ ದೇಸಿ ರೂಪಕಗಳು, ಅವರ ರೂಪಕಪ್ರತಿಭೆಗೆ ಸಾಕ್ಷಿಯಾಗಿವೆ.

ಬೇಂದ್ರೆಯವರು ಭಾಷಾಚಮತ್ಕಾರಗಳನ್ನು ಕೇವಲ ರಂಜನೆಗಾಗಿಯೇ ಬಳಸುವದಿಲ್ಲ. ಕಾವ್ಯದ ಸರಾಗತೆಯೇ ಅವರ ಉದ್ದೇಶವಾಗಿರುತ್ತದೆ. ಮೊದಲ ನುಡಿಯಲ್ಲಿ ಬರುವ ‘ರ’ಕಾರಪ್ರಾಸವನ್ನು (ಉದಾ: ನೀರ, ಧೀರ ಇ.), ಎರಡನೆಯ ನುಡಿಯಲ್ಲಿ ಬರುವ ‘ಗ’ಕಾರಪ್ರಾಸವನ್ನು (ಉದಾ: ಸುಗ್ಗಿ, ಹಿಗ್ಗು, ಮೊಗ್ಗಿ ಇ.), ಅದೇ ರೀತಿಯಲ್ಲಿ ಇತರ ನುಡಿಗಳಲ್ಲಿಯ ಅಕ್ಷರಪ್ರಾಸಗಳನ್ನೂ ಸಹ ನಾವು ಇಲ್ಲಿ ಗಮನಿಸಬಹುದು.

ನೋಡಲು ಇಷ್ಟು ಸರಳವಾಗಿ ಕಾಣುವ ಈ ಕವನದ ರಚನೆಯಲ್ಲಿಯ ಕ್ಲಿಷ್ಟತೆಯನ್ನು ಗಮನಿಸಿರಿ:
ಪ್ರತಿ ನುಡಿಯ ಎರಡನೆಯ ಸಾಲಿನ ಕೊನೆಯ ಪದವು, ಮುಂದಿನ ಸಾಲಿಗೆ ಸಂಬಂಧಪಟ್ಟ ಪದವಾಗಿದೆ.
ಉದಾಹರಣೆ:
ನೀರನ ನೋಟಕ್ಕ ನೀರು ಕಡೆದಿತು ಜೀವ
ಧೀರ ಧೈರ್ಯಾವ ಕಳೆದಾನ ನನ್ನೊಂದ
ತೀರ ಮರುಳಿಯ ಮಾಡ್ಯಾನ .
‘ಧೀರ ಧೈರ್ಯಾವ ಕಳೆದಾನ’ ಎನ್ನುವಲ್ಲಿಗೆ ವಾಕ್ಯ ಪೂರ್ಣವಾಗುತ್ತದೆ. ‘ನನ್ನೊಂದ’  ಇದು ಈ ಸಾಲಿನ ಕೊನೆಯ ಪದವಾದರೂ ಸಹ, ಮುಂದಿನ ಸಾಲಿನೊಂದಿಗೆ ಅದರ ಸಂಬಂಧವಿದೆ. ‘ನನ್ನೊಂದ ತೀರ ಮರುಳಿಯ ಮಾಡ್ಯಾನ’ ಎನ್ನುವದು ಪೂರ್ಣ ವಾಕ್ಯವಾಗುತ್ತದೆ. ಈ ರೀತಿಯಲ್ಲಿ ಪದಗಳನ್ನು ಒಡೆಯುವದನ್ನು ಸಂಸ್ಕೃತ ಶ್ಲೋಕಗಳಲ್ಲಿ ಕಾಣಬಹುದು.

ಕೊನೆಯದಾಗಿ, ಬೇಂದ್ರೆಯವರ ಹೆಚ್ಚಾನುಹೆಚ್ಚು ಪ್ರಣಯಗೀತೆಗಳೆಲ್ಲವೂ ದೇಸಿ ಪ್ರಕಾರದಲ್ಲಿಯೇ ಇರುವದನ್ನು ಗಮನಿಸಬೇಕು. 
` ಒಲುಮೆಯ ಕಿಚ್ಚು’ ಕವನವು ‘ಕಾಮಕಸ್ತೂರಿ’ ಸಂಕಲನದಲ್ಲಿ ಅಡಕವಾಗಿದೆ.

42 comments:

Guruprasad Timmapur said...

Dear Sir,

It is for the first time i'm reading this blog.. it motivates me to read more and more about Sri Bendre. I knew Bendre till now only through 'Bhaavageete' and through the poems we had in for our text. But he was never explained this way.

Heartfelt thanks to you
Guruprasad

ಪ್ರಸನ್ನ said...

ಇತ್ತೀಚಿನ ಕೆಲ ದಿನಗಳ ಹಿ೦ದೆ ಪರಿಚಯವಾದ ನಿಮ್ಮ ಸಲ್ಲಾಪವನ್ನು ಓದುತ್ತಿದ್ದೇನೆ..
ಬೇ೦ದ್ರೆಯವರ ಕಾವ್ಯದ ಒಳ ಹೊರಗನ್ನು ಮನ ಮುಟ್ಟುವ೦ತೆ ತೆರೆದಿಡುತ್ತಿದ್ದೀರಿ.
ತು೦ಬಾನೆ ಧನ್ಯವಾದಗಳು..

Ittigecement said...

ಸುನಾಥ ಸರ್..

ನೀವು ಬರೆದ ಅರ್ಥ ವಿವರಣೆ ಓದಿದ ಮೇಲೆ ಮತ್ತೆ ಕವನವನ್ನು ಓದುವ ಅನುಭವವೇ ಬೇರೆ..
ಎಷ್ಟೆಲ್ಲ ಅರ್ಥ ಇಟ್ಟು ಬರೆಯುತ್ತಿದ್ದರು ನಮ್ಮ ಬೇಂದ್ರೆ ಅಜ್ಜ.. !

ಅದ್ಭುತ.. !!

ತುಂಬಾ ತುಂಬಾ ಧನ್ಯವಾದಗಳು..

Manjunatha Kollegala said...

ಒಂದೊಂದು ಚರಣವನ್ನೂ ಒಂದೊಂದು ಸಾಲನ್ನೂ ಬಿಡಿಸಿಬಿಡಿಸಿ ಹೇಳುವ ನಿಮ್ಮ ಪರಿಯೇ ಚಂದ. ಸುಂದರ ವಿವರಣೆ.

ಒಂದೆರಡು ಗಮನಿಕೆಗಳು:

"ನೀರು ಕಡೆದಿತು ಜೀವ" ಅನ್ನುವುದಕ್ಕೆ "ತನ್ನ ನೀರು (ಅಂದರೆ ಅಂತಃಸತ್ವವು) ಕಡೆಗೋಲಿನಿಂದ ಕಡೆದಂತೆ ಅವಳ ಜೀವವು ತಳಮಳಿಸಿತು" ಅನ್ನುವ ವಿವರಣೆ ಸರಿಹೊಂದುತ್ತದೆ. ಆದರೆ "ನೀರು ಕಡೆ" ಅನ್ನುವುದಕ್ಕೆ ಬೆವತು ಹೋಗು ಅನ್ನುವ ಅರ್ಥ ಇದೆಯಲ್ಲವೇ? (ಧಾರವಾಡದ ಕಡೆ ಗೊತ್ತಿಲ್ಲ). "ಅವನ ನೋಟಕ್ಕೆ ಜೀವ ತಲ್ಲಣಿಸಿ ಬೆವರೊಡೆಯಿತು" ಅನ್ನುವುದು ಸಹಜವಾದ expression ಅನ್ನಿಸಿತು. ಅದೇನೇ ಇರಲಿ ಎರಡರ ಅರ್ಥವೂ ತಲ್ಲಣಿಸುವುದು ಎಂದೇ.

ಮತ್ತೊಂದು, ತಿಲ್ಲಾಣ = ತಿಲ್ಲಾನವೆಂದರೆ ಹಾಡಿನ ಪ್ರಾರಂಭದಲ್ಲಿ ಗಾಯಕರು ಆಲಾಪಿಸುವ ವರ್ಣಗಳಲ್ಲ, ಬದಲಿಗೆ ಅವು ಸ್ವತಂತ್ರ ಹಾಡುಗಳೇ; ನೃತ್ಯವನ್ನೇ ಗಮನದಲ್ಲಿಟ್ಟುಕೊಂಡು ರಚಿಸಿದ ಗೇಯ ರಚನೆಗಳು, ಆಲಾಪನೆಯಲ್ಲ. ಈ ಅರ್ಥ, ಸಂದರ್ಭಕ್ಕೂ ಹೊಂದುತ್ತದೆಯೆನ್ನಿಸುತ್ತದೆ. ಗಾಣಕ್ಕೆ ಸಿಕ್ಕ ಜೀವ ಬರೀ ಹಾಡುವುದಿಲ್ಲ (ಅಲ್ಲಿ ಆಲಾಪನೆಯ ನವಿರಿಲ್ಲ) ಬದಲಿಗೆ ನೋಯುತ್ತದೆ, ತಲ್ಲಣಿಸುತ್ತದೆ, ಅದುರುತ್ತದೆ, ಧೀಂಕಿಡುತ್ತದೆ - ಅದು ತಲ್ಲಣದ ತಿಲ್ಲಾನ (ಅಥವಾ ಪ್ರಾಸಕ್ಕೆ ತಕ್ಕಂತೆ ತಿಲ್ಲಾಣ). ಹೊಸ ಯೌವನ, ನವಪ್ರೇಮಕ್ಕೆ ಸಿಕ್ಕಿ ನಲುಗಿದ ತರುಣಿಯ ಭಾವಗಳು ನವಿರೇ ಹೌದು, ಆದರೆ ಈ ಸುಕುಮಾರಿಗೆ ಅದು ನವಿರೆನ್ನಿಸುವುದಿಲ್ಲ, ಬದಲಿಗೆ ಅದೇ ಸಹಿಸಲಸಾಧ್ಯವಾದ ತಲ್ಲಣ, ಅದು ಹಾಡಿಸುತ್ತದೆ, ಪಾಡಿಸುತ್ತದೆ, ನೋವಿಗೆ ಕುಣಿಸುತ್ತದೆ ಕೂಡ.

umesh desai said...

ಕಾಕಾ ಬೇಂದ್ರೆ ಅಜ್ಜನ ಕವಿತಾ ನಿಮ್ಮ ಕಡೆಯಿಂದನ ಕೇಳಬೇಕು
ಅವಾಗ ಮಜಾ ದುಪ್ಪಟ್ಟ ಆಗ್ತದ
ಹೇಳ್ರಿ ಬೇಂದ್ರೆಯವರು ನಿಮ್ಮ ತಲಿಮ್ಯಾಲ ಕೈ ಇಟ್ಟು ಹೋಗಿದ್ರೇನು
ಅತ್ಯಂತ ಸರಳ,ಸುರಳೀತ ಅದ ನಿಮ್ಮ ವಿಶ್ಲೇಷಣ
ನಿಮಗೊಂದು ಬೋ ಪರಾಕ್

ಮಂಜುಳಾದೇವಿ said...

ನಿಮ್ಮ ವಿವರವಾದ ವಿಶ್ಲೇಷಣೆಯನ್ನು ಓದಿದ ಮೇಲೆ ಬೇಂದ್ರೆಯವರ ಕವನಗಳ ಒಳಾರ್ಥ ಚೆನ್ನಾಗಿ ಮನದಟ್ಟಾಗುತ್ತದೆ.ಧನ್ಯವಾದಗಳು

Vanamala Deshpande said...

ಸುನಾಥರೆ,
ನಿಮ್ಮ ವಿಶ್ಲೇಷಣೆಯಿಂದ ನಾಯಕಿಯ ಭಾವನೆಗಳು ಸುಲಭವಾಗಿ ಅರ್ಥವಾಗುತ್ತವೆ.

ಚುಕ್ಕಿಚಿತ್ತಾರ said...

ಕಾಕ,
ಪ್ರಣಯದಲ್ಲಿ ಸಿಲುಕಿದ ಮುಗುದೆಯ ಕುರಿತಾದ ಈ ಗೀತೆಯ ಭಾವಾರ್ಥವನ್ನು ಸು೦ದರವಾಗಿ ವಿವರಿಸಿದ್ದೀರಿ.
ಧನ್ಯವಾದಗಳು.

ನಾಗರಾಜ್ .ಕೆ (NRK) said...

"ಹುಡುಗಿಯಲ್ಲಿ ಒಲುಮೆಯ ಕಿಚ್ಚು, ನಿಮ್ಮ ವಿವರಣೆ ಓದಿದ ಮೇಲೆ ಯಾರಿಗಾದರೂ ಬೇಂದ್ರೆಯವರನ್ನ ಓದಬೇಕೆನ್ನುವ ಕಿಚ್ಚು ಶುರುವಾಗುತ್ತೆ"

ಬಹುಶಃ ನನ್ನ ತಲೆಮಾರಿನವರಿಗ್ಯಾರಿಗಾದರು ಕವಿತೆಗಳ ಕಡೆ ಒಲವಿದ್ದರೆ, ಬೇಂದ್ರೆಯವರನ್ನ ಆಸ್ವಾದಿಸಬೇಕೆಂದಿದ್ದರೆ ಮೊದಲು "ಸಲ್ಲಾಪ" ಬ್ಲಾಗ್ ಓದು ಮೊದ್ಲು ಅಂತ ಹೇಳ್ಬೇಕು ಅನ್ಸುತ್ತೆ.
ಬೇಂದ್ರೆಯವರನ್ನ ಇಷ್ಟು ಚೆನ್ನಾಗಿ, ಎಳೆ ಎಳೆಯಾಗಿ ಬಿಡಿಸಿಕೊಡುವವರು ಇವತ್ತಿನ ಸಾಹಿತ್ಯ ವಲಯದಲ್ಲಿ ಕೂಡ ತುಂಬಾ ಕಡಿಮೆಯೇ ಅಂತ ನನ್ನ ಅನಿಸಿಕೆ. ನಾವಂತೂ ಲಕ್ಕಿ ಫೆಲ್ಲೋಸ್, ನಮಗೆ ನೀವಿದಿರ. ಕವಿಶ್ರೇಷ್ಠ ಬೇಂದ್ರೆ ಈ ಮುಖೇನ ಇನ್ನು ಹೆಚ್ಚು ಜನಕ್ಕೆ ತಲುಪುವಂತಾಗಲಿ. ನನ್ನ ಇಷ್ಟದ ಕವಿ ಬೇಂದ್ರೆ, ಆದ್ರೆ ನಿಮ್ಮ ವಿಶ್ಲೇಷಣೆಗಳನ್ನ ಓದಿದ ಮೇಲೆ ಅನ್ಸ್ತಾಯಿದೆ ಇಷ್ಟು ವರ್ಷ ನನಗೆ ಅರ್ಥ ಆಗಿದ್ದು ಬರೀ ಮೇಲಿನ ಒಂದು ಪದರು. ಇನ್ನಾದರು ಆಳಕ್ಕಿಳಿಯುವ ಪ್ರಯತ್ನ ಮಾಡ್ತೇನೆ.
ಸರ್, ಯು ಆರ್ ರಿಯಲಿ ವಂಡರ್ಫುಲ್ . ಥ್ಯಾಂಕ್ ಯು

Mahantesh said...

ಮತ್ತೊಂದು ಚಂದದ ಕವನ
ಸುಂದರ ವಿಶ್ಲೇಷಣೆ.....

ಅವರ ವಿರಹ ಕವನಗಳೇ ಜಾಸ್ತಿ ಅನಸುತ್ತೆ.

ಬೇಂದ್ರೆ ಅಜ್ಜನಿಗೆ ಅವರೇ

ಮನಮುಕ್ತಾ said...

nice explanation...

sunaath said...

ಗುರುಪ್ರಸಾದರೆ,
ಬೇಂದ್ರೆಯವರ ಕವನಗಳು ಓದುಗನನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುವಂತಹವು. ನಿಮ್ಮ ಬೇಂದ್ರೆ-ಓದು ನಿಮಗೆ ಖುಶಿ ಕೊಡಲಿ ಎಂದು ಹಾರೈಸುತ್ತೇನೆ.

sunaath said...

ಪ್ರಸನ್ನ,
ಬೇಂದ್ರೆ ಕಾವ್ಯವನ್ನು ಸವಿಯುತ್ತಿರುವ ನಿಮಗೂ ಧನ್ಯವಾದಗಳು.

sunaath said...

ಪ್ರಕಾಶ,
ವಿಮರ್ಶಕ ಆಮೂರರು ಬೇಂದ್ರೆಯವರನ್ನು ‘ಭುವನದ ಭಾಗ್ಯ’ ಎಂದು ಬಣ್ಣಿಸಿದ್ದಾರೆ. ಕನ್ನಡಿಗರು ಪುಣ್ಯವಂತರು.

sunaath said...

ಮಂಜುನಾಥರೆ,
ನೀರು ಕಡೆಯುವದು ಎನ್ನುವ ಪದಪುಂಜಕ್ಕೆ ಬೆವರುವದು ಎನ್ನುವ ಅರ್ಥವೂ ಸಹ ಸರಿ ಹೊಂದುತ್ತದೆ. ಇದನ್ನು ನನ್ನ ಲೇಖನದಲ್ಲಿ ಉಲ್ಲೇಖಿಸುತ್ತೇನೆ.

ನಾನು ತಿಲ್ಲಾಣ(=ತಿಲ್ಲಾನ)ದ ಅರ್ಥವನ್ನು ಕಿಟ್ಟೆಲ್ ಅವರ ನಿಘಂಟುವಿನಿಂದ ಎತ್ತಿಕೊಂಡಿದ್ದೇನೆ. ತಿಲ್ಲಾನವೆಂದರೆ humming a tune without meaning ಎನ್ನುವ ಅರ್ಥವನ್ನು ಅಲ್ಲಿ ಕೊಡಲಾಗಿದೆ. ಬೇಂದ್ರೆಯವರ ‘ತಿಲ್ಲಾಣ’ ಎನ್ನುವ ಕವನದಲ್ಲಿಯೂ ಸಹ ಅವರ ಪುತ್ರ ವಾಮನ ಬೇಂದ್ರೆಯವರು ಇದೇ ಅರ್ಥವನ್ನು ಹೇಳಿದ್ದಾರೆ.

sunaath said...

ದೇಸಾಯರ,
ಬೇಂದ್ರೆ ಅಜ್ಜನ ಕೈ ಪ್ರತಿಯೊಬ್ಬ ಕನ್ನಡಿಗನ ತಲೀ ಮ್ಯಾಲ ಅದ!

sunaath said...

ಮಂಜುಳಾದೇವಿಯವರೆ,
ನಿಮ್ಮ ಕಾವ್ಯಾಸಕ್ತಿಗೆ ಧನ್ಯವಾದಗಳು.

sunaath said...

ವನಮಾಲಾ,
ಧನ್ಯವಾದಗಳು.

sunaath said...

ವಿಜಯಶ್ರೀ,
ಕವನವೇ ಸುಂದರವಾಗಿದೆ. ವ್ಯಾಖ್ಯಾನವು ಅದರ ಹಿಂದೆ ಸಾಗಿದೆ, ಅಷ್ಟೇ!

sunaath said...

ನಾಗರಾಜರೆ,
ಬೇಂದ್ರೆಯವರ ಕವನಗಳನ್ನು ಓದುತ್ತ ಹೋದಂತೆ, ಅದರೊಳಗಿನ ಹೊಸ ಹೊಸ ಅರ್ಥಗಳು ತಿಳಿಯುತ್ತಲೇ ಹೋಗುತ್ತವೆ. ಇದು ಬೇಂದ್ರೆ ವೈಶಿಷ್ಟ್ಯ!

sunaath said...

ಮಹಾಂತೇಶ,
ವಿರಹ ಕವನಗಳೇ ಜಾಸ್ತಿ ಅಂತೇನಿಲ್ಲ. ಸುಂದರ ಪ್ರಣಯಕವನಗಳೂ ಇವೆ.ಅವರ ‘ಕಾಮಕಸ್ತೂರಿ’ ಸಂಕಲನದಲ್ಲಿರುವ ‘ನನ್ನವಳು’ ಒಂದು ಅತ್ಯುತ್ತಮ ಪ್ರೇಮಗೀತೆ. ಅದರಂತೆ ತಮ್ಮ ಹೆಂಡತಿಯ ಜೊತೆ ಮುನಿಸಿಕೊಂಡ ಗೀತೆಗಳೂ ಸಾಕಷ್ಟಿವೆ!

sunaath said...

ಮನಮುಕ್ತಾ,
Thank you for the appreciation!

prabhamani nagaraja said...

ಹೊಸ ಹರಯದ ಹುಡುಗಿಯ ಭಾವಗಳನ್ನು ತೆರೆದಿಟ್ಟ ಬೆ೦ದ್ರೆಯವರ ಕವನವನ್ನು ಅರ್ಥಪೂರ್ಣವಾಗಿ ವಿವರಿಸಿದ್ದೀರಿ ಸರ್, ಅಭಿನ೦ದನೆಗಳು.

Manjunatha Kollegala said...

ಸುನಾಥರೇ,

ಕಿಟೆಲ್ ಡಿಕ್ಷನರಿಯು ತಿಲ್ಲಾನದ ಅರ್ಥವನ್ನು ಹೀಗೆ ಕೊಡುತ್ತದೆ. "An unmeaning sound, used in humming over a tune (My.)" ಆದರೆ ಬೇರೆ ಯಾವ ಬಳಕೆಯ ಉದಾಹರಣೆಯನ್ನೂ ನಿರುಕ್ತವನ್ನೂ ಕೊಡದೇ ಕೇವಲ (My. = Mysore) ಎಂದಷ್ಟೇ ಹೇಳಿ ಕೈ ಬಿಟ್ಟಿದ್ದಾರೆಂಬುದನ್ನು ಗಮನಿಸಿ.

ಸಂಗೀತದ ಸಂದರ್ಭದಲ್ಲಿ ತಿಲ್ಲಾನವೂ ಮತ್ತಾವುದೇ ವರ್ಣ/ಕೃತಿಗಳಂತೆ ನಿಬದ್ಧ (metered) ರಚನೆಯೇ, ಆಲಾಪನೆಯಲ್ಲ. ಅದರಲ್ಲೂ ಇತರ ನಿಬದ್ಧ ರಚನಗಳಂತೆ ಪಲ್ಲವಿ, ಅನುಪಲ್ಲವಿ ಚರಣಗಳಿರುತ್ತವೆ. ಆದರೆ ಅದಾವುದೂ ಅರ್ಥ ಕೊಡುವ ಪದಪುಂಜಗಳಲ್ಲ. ಬದಲಿಗೆ ತಕಿಟ ಧಿಕಿಟ ತನನ ಮತ್ತು ಸಂಗೀತದ ಸರಿಗಮಪಧನಿ ಗಳ ಮಿಶ್ರಣ. ರಚನೆಯ ಕೊನೆಯಲ್ಲೊಂದು ಸಾಲು ಅರ್ಥಭರಿತ ವಾಕ್ಯವನ್ನು ಹೊಂದಿರುತ್ತದೆಯಾದರೂ ಅದು ಕೇವಲ ರಚಯಿತನ ಗುರುತು ಕೊಡುವುದಕ್ಕಷ್ಟೇ ಸೀಮಿತವಾಗಿರುತ್ತದೆ. ಈ ದೃಷ್ಟಿಯಿಂದ unmeaning ಎಂಬರ್ಥದಲ್ಲಿ ಕಿಟೆಲ್ಲರ ಅರ್ಥ ಸರಿಯೇ (ಆದರೆ ಅದು ಕಿಟೆಲ್ ತಿಳಿಸಿದಂತೆ humming ಆಗಲೀ ಕೇವಲ sound ಆಗಲೀ ಅಲ್ಲ). ಬೇರೆ ಸಾಹಿತ್ಯಸಹಿತ ಕೃತಿಗಳಂತಲ್ಲದೆ, ಇಲ್ಲಿ ಕೇವಲ ತಾಳ-ರಾಗಭಾವಗಳಿಗಷ್ಟೇ ಪ್ರಾಮುಖ್ಯ, ಸಾಹಿತ್ಯಕ್ಕಲ್ಲ (ಇದು ಹಿಂದೂಸ್ತಾನೀ ಸಂಗೀತಪದ್ಧತಿಯ "ತರಾನಾ"ದಿಂದ ಹೊರಟು ಕರ್ನಾಟಕ ಸಂಗೀತಪದ್ಧತಿಯಲ್ಲಿ ತಿಲ್ಲಾನವಾಗಿ ಬೆಳೆದಿದೆ)

ತಿಲ್ಲಾನದ ಉದಾಹರಣೆಯಾಗಿ ನನಗೆ ತುಂಬ ಹಿಡಿಸಿದ ಎರಡು ವಿಡಿಯೋ ಲಿಂಕ್ ಇಲ್ಲಿ ಕೊಡುತ್ತಿದ್ದೇನೆ:

http://www.youtube.com/watch?v=uCp-2Kudaqk&feature (Savita Shastry - Dance)

http://www.youtube.com/watch?v=Emc18GpAeRY (Dr. Balamurali Krishna - Vocal)


ನೀವು ಉಲ್ಲೇಖಿಸಿದ "ತಿಲ್ಲಾಣ" ಕವನದಲ್ಲಿ ಬರುವ ತಿಲ್ಲಾಣದ ವಿವರ ಹೀಗಿದೆ:

"ಕೈಯ ತಾರಮ್ಮಯ್ಯಕ್ಕೆ ತೊದಲ ನುಡಿಯ ತಿಲ್ಲಾಣ"

ಮತ್ತೆ

"ತಿಲ್ಲಾಣದಲ್ಲಿ ಪಲ್ಲವಿಸಿ, ಮುಂದೆ ಪಾಡಿಗೆ ಬರುವ ನಿನ್ನೀ ಪಾಡು
ವಾಚಾಮಗೋಚರವೇ – ಈ ನಿನ್ನ ಧ್ವನಿ ಕಾವ್ಯ"

ಅಜ್ಜಿಯೋ ತಾತನೋ ಮಗುವಿನ ಮುಂದೆ ಕೈ ತಾರಮ್ಮಯ್ಯ ಆಡಿಸುತ್ತಿದ್ದರೆ, ಮಗು ಅದಕ್ಕೆ ತೊದಲುನುಡಿಯ ತಿಲ್ಲಾಣವನ್ನೊದಗಿಸುತ್ತದೆ. ಅದಕ್ಕೆ ಮಾತು ಬರದು, ಭಾವವಿದೆ. ತಿಲ್ಲಾನಕ್ಕೆ ನರ್ತಕಿಯು ಕುಣಿಯಬೇಕು, ಆದರೆ ಇಲ್ಲಿ ತಾರಮ್ಮಯ್ಯದ ನೃತ್ಯಕ್ಕೇ ಮಗು ತಿಲ್ಲಾಣ ನುಡಿಯುತ್ತಿದೆ. ಗಮನಿಸಿ, ತೊದಲುವ ಮಗು ಹಾಡುವುದಿಲ್ಲ (humming ಅಲ್ಲ), ಬದಲಿಗೆ ನುಡಿಯುತ್ತದೆ, ತೊದಲು ನುಡಿಯುತ್ತದೆ (ತಕಿಟ ತನನ ದಂತೆ). ಅದಕ್ಕೆ ಅರ್ಥವಿಲ್ಲ, ಆದರೆ ಲಯವಿದೆ, ಭಂಗಿಯಿದೆ, ಭಾವವಿದೆ. ಅದಕ್ಕೇ ಕವಿ ಕೇಳುತ್ತಾನೆ:

ಇದಾವ ಹಾಡು? ಇದಾವ ತಾಲ? ಇದಾವ ರಾಗ?
ಇದಾವ ರಸ? ಇದಾವ ಭಾವ? ಇದಾವ ಹಾವ?
ಇದಾವ ರೀತಿ? ಇದಾವ ಗಮಕ? ಇದಾವ ಯಮಕ? ನನ್ನ ಪುಟ್ಟ ಪುರಂದರ ವಿಠಲಾ !


ವಾಮನ ಬೇಂದ್ರೆಯವರು ಇದಕ್ಕೆ "ಗಾಯನ ಪ್ರಾರಂಭಿಸುವ ಮೊದಲು ಅನ್ನುವ ವರ್ಣಗಳು" ಎಂಬ ಅರ್ಥವನ್ನು ಹೇಗೆ ಹಚ್ಚಿದರೋ ತಿಳಿಯದು. ಬಹುಶಃ "ತಿಲ್ಲಾಣದಲ್ಲಿ ಪಲ್ಲವಿಸಿ..." ಎಂಬ ನುಡಿಯಿಂದಿರಬಹುದು, ಗೊತ್ತಿಲ್ಲ. ಆದರೆ ಮೇಲೆ ಹೇಳುವ ತಾಲ, ಯಮಕ ಇತ್ಯಾದಿಯೆಲ್ಲಾ ಬರುವುದು ತಿಲ್ಲಾನದಲ್ಲೇ ಹೊರತು ಗಾಯನದ ಮೊದಲು ಮಾಡುವ ಆಲಾಪನೆಯಲ್ಲಲ್ಲ. ಆದರೆ "ತಿಲ್ಲಾಣದಲ್ಲಿ ಪಲ್ಲವಿಸಿ..." ಎಂಬಲ್ಲಿ ಮೊದಲ ಆಲಾಪವನ್ನು ಸೂಚಿಸುವುದಕ್ಕಿಂತ ಬೇರೆ ಉದ್ದೇಶ ಕವಿಗೆ ಇರುವಂತೆ ತೋರುತ್ತದೆ, ಅದು ಹೀಗೆ:

ಸಧ್ಯದ ಮಗುವಿನ ಸ್ಥಿತಿಯೆಂದರೆ ಮಾತಿಗೆ ನಿಲುಕದ್ದು (ಯಾವ ಅರ್ಥದಲ್ಲೂ); ಅದು ಈಗಷ್ಟೇ ಅರಳತೊಡಗಿದೆ (ಅರ್ಥಹೀನ ತೊದಲು, ತಿಲ್ಲಾನದಂಥದ್ದು); ಮುಂದೆ ಪಾಡಿಗೆ ಬರುತ್ತದೆ (ಹಣ್ಣಾಗುತ್ತದೆ, ಅರ್ಥಪೂರ್ಣವಾಗುತ್ತದೆ), ಅದೇ ಅದರ ಪಾಡು, ಅದುವರೆಗೂ ಅದು ವಾಚಾಮಗೋಚರ. ಅದು ತಿಲ್ಲಾಣವಾದದ್ದು ಮಾತಿನ ಮೊದಲು ಬಂತು ಎಂದಲ್ಲ, ಬದಲಿಗೆ ಅರ್ಥಕ್ಕೆ ಸಿಗದ ಭಾವ ಅನ್ನುವ ಕಾರಣಕ್ಕೆ.

ಇಲ್ಲಿ ಇನ್ನೊಂದು ನೋಟವೂ ಇದೆ. ದೊಡ್ಡವರು "ಅರ್ಥಪೂರ್ಣವಾಗಿಯಾದರೂ ಗಳಹುತ್ತಿದ್ದರೆ ಅದು ಬುದ್ಧಿಗೆ ತಟ್ಟಬಹುದು, ಆದರೆ ಭಾವಕ್ಕೆ ಮುಟ್ಟುತ್ತದೆಯೇ? ಆದರೆ ಮಗು ಹೀಗೆ ಅರ್ಥವಿಲ್ಲದೆಯೇ ತೊದಲುತ್ತಿದ್ದರೂ ಅದೇ ಒಂದು ಭಾವತುಂಬಿದ ಕಾವ್ಯ! (ಮಾತಿಗೊಂದು ಅರ್ಥಬೇಕೆ?). ಆದ್ದರಿಂದ ಇಲ್ಲಿ "ವಾಚಾಮಗೋಚರವೇ" ಎನ್ನುವುದರ ಭಾವ ಈ ರೀತಿಯಲ್ಲೂ ತುಂಬುತ್ತದೆ. ಜೊತೆಗೆ ಅಲ್ಲಿ ಕೈ ತಾರಮ್ಮಯ್ಯಾ ಆಡಿಸುತ್ತಿರುವ ಅಜ್ಜ-ಅಜ್ಜಿ, ಅದಕ್ಕೆ ಪೊಟ್ಟುಪೊಟ್ಟು ಮಾತಾಡುತ್ತಾ ಮೇಳಕಟ್ಟುವ ಮಗು - ಈ ಚಿತ್ರ ತಿಲ್ಲಾನದೊಡನಿನ ನೃತ್ಯದಂತೆ ಕವಿಯ ಕಣ್ಣಿಗೆ ಕಟ್ಟುತ್ತದೆ.

ಕಾಮೆಂಟು ತುಸು ಉದ್ದವಾಯಿತು, ಕ್ಷಮಿಸಿ :)

V.R.BHAT said...

ವಿದ್ವನ್ಮಂಡನೆಗಳು ಆರಂಭವಾದಾಗ ಸುಮ್ಮನೇ ನೋಡುವುದು ನಮಗೂ ಹಲವನ್ನು ಅರಿಯಲು ಸಹಕಾರಿಯಾಗುತ್ತದೆ. ಪ್ರಾಯಶಃ ಸ್ವತಃ ಬೇಂದ್ರೆಯವರೇ ಈಗ ಇದ್ದಿದ್ದರೆ ಭಾಷ್ಯ ಬರೆಯುವ ನಿಮ್ಮೆ ಹಾಗೂ ಅದನ್ನು ಕಡೆಯುವ ಮಂಜುನಾಥರನ್ನು ಸೇರಿಸಿ ಕಾವ್ಯ ಸರಸದಲ್ಲಿ ಇನ್ನೇನೇನೋ ಸೃಷ್ಟಿಯಾಗುತ್ತಿತ್ತೋ ಎನಿಸುತ್ತದೆ! ಭಲೇ ಬಹಳ ಇಷ್ಟವಾಯ್ತು. ಅಭಿನಂದನೆಗಳು. ಮೂವರಿಗೂ !

ರಾಘವೇಂದ್ರ ಜೋಶಿ said...

ಸುನಾಥ ಸರ್,
ನಿಮ್ಮ ವಿವರಣೆಯೊಂದು ಇಲ್ಲದಿದ್ದಲ್ಲಿ ಇಂಥದೊಂದು ಕವನವನ್ನು ಅರ್ಥೈಸಿಕೊಳ್ಳಲು ಬಹುಶಃ ಸಾಧ್ಯವಾಗುತ್ತಿರಲಿಲ್ಲ.ಕೆಲವೊಂದು ಕವಿತೆಗಳು ಅರ್ಥವಾಗಲು ಅವುಗಳ ಸಾಂದರ್ಭಿಕತೆ ಮುಖ್ಯ
ಪಾತ್ರವಹಿಸುತ್ತದೆ ಅಂತ ಅನಿಸುತ್ತದೆ.ಇಲ್ಲಿ ನಿಮ್ಮ ಮತ್ತು ಮಂಜುನಾಥ ಕೊಳ್ಳೇಗಾಲರವರ ವಿವರಣೆ ತುಂಬ ಖುಷಿ ಕೊಟ್ಟವು.
ನೋಡಿ,ನೀವೆಲ್ಲ ನಮ್ಮನ್ನು professional readers ಆಗಿ ಬದಲಾಯಿಸುತ್ತಿದ್ದೀರಿ!
:-)

sunaath said...

ಮಂಜುನಾಥರೆ,
ನಿಮ್ಮ ಸ್ಪಂದನೆ ದೀರ್ಘವಾಗಿರುವಂತೆಯೇ ಉಪಯುಕ್ತವೂ ಆಗಿದೆ. ಇಷ್ಟೆಲ್ಲ ಮಾಹಿತಿಯನ್ನು ತಾಳ್ಮೆಯಿಂದ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ನೀವು ನೀಡಿದ ಕೊಂಡಿಗಳಿಗೆ ಹೋಗಿ, ಶ್ರೀಮತಿ ಶೆಟ್ಟಿಯವರ ನೃತ್ಯದಲ್ಲಿ ತಿಲ್ಲಾನವನ್ನು ನೋಡಿ ಹಾಗು ಬಾಲಮುರಳಿ ಕೃಷ್ಣ ಅವರ ಹಾಡುಗಾರಿಕೆಯಲ್ಲಿ ತಿಲ್ಲಾನವನ್ನು ಕೇಳಿ ಆನಂದಪಟ್ಟೆ. ತುಂಬ ಧನ್ಯವಾದಗಳು.

sunaath said...

ಭಟ್ಟರೆ,
ಮೂವರಿಗೂ ಅಭಿನಂದನೆಗಳು ಎಂದಿದ್ದೀರಿ. ಬೇಂದ್ರೆಯವರಂತೂ ಇಲ್ಲಿಲ್ಲ. ಆದುದರಿಂದ ಮೂವರ ಪಂಕ್ತಿಯಲ್ಲಿ ನಿಮ್ಮನ್ನೇ ಸೇರಿಸಿಕೊಳ್ಳಬೇಕಾಗುತ್ತದೆ!

sunaath said...

RJ,
ನಮ್ಮೆಲ್ಲರ ಸರಸಸಲ್ಲಾಪದ ಚರ್ಚೆಯಿಂದಲೇ, ಹೆಚ್ಚಿನ ತಿಳಿವು ನಮಗೆಲ್ಲರಿಗೂ ಹೊಳೆಯುತ್ತಿದೆ.
ಧನ್ಯವಾದಗಳು.

sunaath said...

ಪ್ರಭಾಮಣಿಯವರೆ,
ಬೇಂದ್ರೆಯವರು ಹೊಸ ಪ್ರೇಮದ ಪರಿಯನ್ನು ಸಮರ್ಥವಾಗಿ ಹಿಡಿದಿದ್ದಾರೆ. ಅವರ ಪದಜಾಲದಲ್ಲಿ ಅಡಗಿರುವ ಅರ್ಥವನ್ನೆಲ್ಲ ಗ್ರಹಿಸುವದು ಕಷ್ಟವೇ!

Subrahmanya said...

ಕವನದ ಭಾವಾರ್ಥದ ಜೊತೆಗೆ ಉಪಯುಕ್ತ ಮಾಹಿತಿಯೂ ದೊರಕಿತು. ಇಂತಹ ಚರ್ಚೆಗಳು ಹೊಸ ಹೊಳಹನ್ನು ನೀಡುತ್ತದೆ.
ಧನ್ಯವಾದಗಳು.

sunaath said...

ಸುಬ್ರಹ್ಮಣ್ಯಮ್,
ವಾದೇ ವಾದೇ ಜಾಯತೇ ತತ್ವವಿಚಾರಃ!

ಮನಸು said...

ಈ ರೀತಿ ನೀವು ವಿವರಿಸದೇ ಹೋದಲ್ಲಿ ನಮಗೆ ಅರ್ಥವಾಗುತ್ತಲೇ ಇರಲಿಲ್ಲವೇನೋ.... ಕಾಕ ನಮ್ಗೆ ಇಂತಹ ಸವಿಯನ್ನು ನೀಡುತ್ತಲೇ ಬಂದಿದ್ದೀರಿ ನಿಮಗೆ ಅನಂತ ಧನ್ಯವಾದಗಳು

sunaath said...

ಮನಸು,
ಅರ್ಥವು ಮನಸ್ಸಿಗೆ ತಟ್ಟಿರುತ್ತದೆ. ಚರ್ಚೆಯಲ್ಲಿ ಅದು ವಿಶದವಾಗುತ್ತದೆ. ಅಲ್ಲವೆ?

ಅನಂತ್ ರಾಜ್ said...

ಸುಮ್ಮನೇ ಓದುತ್ತ.. ರಸಸ್ವಾದ ಮಾಡುತ್ತ.. ಭಾವದೊಳಗೆ ವಿಹರಿಸುತ್ತ.. ಅನುಭೂತಿಸುತ್ತ....ಇರುವುದಷ್ಟೇ ನಮ್ಮ ಕೆಲಸ. ಅಭಿನ೦ದನೆಗಳು ಸುನಾತ್ ಸರ್.

ಅನ೦ತ್

sunaath said...

ಅನಂತರಾಜರೆ,
ನೀವು ನಿಜವಾಗಿಯೂ ಸಹೃದಯ,ರಸಿಕ ಓದುಗರು.

AntharangadaMaathugalu said...

ಕಾಕಾ
ನಿಮ್ಮ ವಿವರಣೆ ಸುಮ್ಮನೆ ಮನದಾಳಕ್ಕೆ ಇಳಿದು ಬಿಡುತ್ತದೆ. ಅದನ್ನು ಓದುವುದು ನನಗೆ ತುಂಬಾ ಇಷ್ಟವಾಗುತ್ತದೆ. ೨ - ೩ ದಿನಗಳ ನಂತರ ಮತ್ತೆ ಬಂದು... ನಿಧಾನವಾಗಿ ಮತ್ತೊಮ್ಮೆ ಓದುವ ಅಭ್ಯಾಸ ಆಗಿ ಬಿಟ್ಟಿದೆ ಈಗ. ಧನ್ಯವಾದಗಳು ಕಾಕಾ


ಶ್ಯಾಮಲ

sunaath said...

ಶ್ಯಾಮಲಾ,
ಬೇಂದ್ರೆ ಕವನಗಳ ಪ್ರಭಾವವೇ ಹಾಗೆ. ಓದಿದಷ್ಟೂ ರಸಸೃಷ್ಟಿಯನ್ನು ಮಾಡುತ್ತವೆ.

ಜಲನಯನ said...

ಸುನಾಥಣ್ಣ
ನೀರನ ನೋಟಕ್ಕ ನೀರು ಕಡೆದಿತು ಜೀವ
ಎಂಥ...ಪದ ಬಳಕೆ...!!! ನೀರ-ನೀರೆ-ನೀರು...
ಎಂದಿನಂತೆ ಎಳೆಗಳ ಬಳೆಗಳನಾದ...ನಿಮ್ಮ ವಿವರಣೆಯಲ್ಲಿ....
ಧನ್ಯವಾದ..ಧನ್ಯವಾದ...

sunaath said...

ಜಲನಯನ,
ಪದಗಳ ಸೊಬಗಿನ ಸಿರಿಗೆ ಕಾರಣರಾದ ವರಕವಿಗೆ ನಮೋನ್ನಮಃ!

ಸೀತಾರಾಮ. ಕೆ. / SITARAM.K said...

ಈ ಕವನ ನನ್ನ ಮೆಚ್ಚಿನ ಕವನ. ಆದರೆ ಇಷ್ಟೊಂದು ಅರ್ಥ ನನಗೆ ವೇದ್ಯವಾಗಿರಲಿಲ್ಲ. ತಮ್ಮ ವಿವರಣೆಗೆ ಧನ್ಯವಾದಗಳು.

suragange said...

it is very unique blog for common unprofessional reader like us,to understand the Bendre and other gaints in kannada.
It is like what C Ashwat for the KSN .this blog doing same thing for the Bendre master,bringing him closer and closer to heart.
Please sir,do not forget to write about 'nalku tanthi'