Sunday, August 28, 2011

ಸಂಭವಾಮಿ ಯುಗೇ ಯುಗೇ


ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ನಡೆಯಿಸುತ್ತಿರುವ ನಾಗರಿಕ ಆಂದೋಲನಕ್ಕೆ ಮೊದಲ ಹಂತದ ಜಯ ಲಭಿಸಿದೆ. ಇದು ಅರ್ಧ ಜಯ ಮಾತ್ರ ಎಂದು ಅಣ್ಣಾ ಎಚ್ಚರಿಕೆ ನೀಡಿದ್ದಾರೆ. ಯಾಕೆಂದರೆ ನಮ್ಮ ದುಃಶಾಸಕರು ಯಾವ ಧೂರ್ತ ರೀತಿಯಿಂದ ನಾಗರಿಕ ಆಂದೋಲನವನ್ನು ಭಗ್ನಗೊಳಿಸಬಹುದು ಎನ್ನುವದನ್ನು ಯಾರೂ ಹೇಳಲಾರರು.

ಭಾರತದಲ್ಲಿ ಪುರಾಣಕಾಲದಿಂದಲೂ ನಾಗರಿಕ ಆಂದೋಲನಗಳು ನಡೆದಿವೆ. ಬಹುಶ: ಶ್ರೀಕೃಷ್ಣನೇ ಭಾರತದ ನಾಗರಿಕ ಆಂದೋಲನಗಳ ಹರಿಕಾರ ಎನ್ನಬಹುದು. ತನ್ನ ಎಳೆಯ ವಯಸ್ಸಿನಲ್ಲಿಯೇ ಕೃಷ್ಣನು ಗೋಕುಲದ ನಿವಾಸಿಗಳಿಗೆ ಇಂದ್ರ ಮೊದಲಾದ ವೈದಿಕ ದೇವತೆಗಳ ಪೂಜೆಯ ಬದಲಾಗಿ ವೃಕ್ಷಪೂಜೆ ಹಾಗು ಗಿರಿಪೂಜೆಗಳಂತಹ ಅವೈದಿಕ ಪೂಜೆಗೆ ಮರಳಲು ಬೋಧಿಸಿದನು. ಇದರಿಂದ ಮುನಿದ ಇಂದ್ರನು ಗೋಕುಲವಾಸಿಗಳ ವಿರುದ್ಧ ಯುದ್ಧ ಸಾರಿದಾಗ, ತನ್ನೆಲ್ಲ ಬೆಂಬಲಿಗರೊಡನೆ ಕೃಷ್ಣನು ಗೋವರ್ಧನ ಗಿರಿಯ ಗುಹೆಗಳ ಆಶ್ರಯ ಪಡೆದು, ಇಂದ್ರನ ಮೇಲೆ ವಿಜಯ ಸಾಧಿಸಿದನು. ಇದು ಸ್ಥಾಪಿತ ವ್ಯವಸ್ಥೆಯ ವಿರುದ್ಧ ನಡೆದ ಪ್ರಥಮ ನಾಗರಿಕ ಆಂದೋಲನ. ಪ್ರಥಮ ಆಂದೋಲನದಲ್ಲಿ ಸಫಲನಾದ ಕೃಷ್ಣನು ತನ್ನ ವೈರಿಗಳ ವಿರುದ್ಧ ಹೋರಾಡಲಾರದೆ ಸೋತು ಹೋಗುತ್ತಾನೆ. ಹೀಗೆ ಸೋತು ಹೋದ ಕೃಷ್ಣನು ಮಥುರಾಪಟ್ಟಣದಿಂದ ತನ್ನ ಸಹಚರರೊಡನೆ ಪಲಾಯನಗೈದು, ಸುಮಾರು ಸಾವಿರ ಕಿಲೋಮೀಟರಗಳಷ್ಟು ದೂರದಲ್ಲಿರುವ ಪಶ್ಚಿಮತೀರದಲ್ಲಿ ದ್ವಾರಕಾಪಟ್ಟಣವನ್ನು ನಿರ್ಮಿಸುವದು ಈ ನಾಗರಿಕ ಆಂದೋಲನದ ಎರಡನೆಯ ಭಾಗವಾಗಿದೆ.

ಈ ರೀತಿಯಾಗಿ ಕೃಷ್ಣನೇ ಭಾರತದ ಪ್ರಪ್ರಥಮ ನಾಗರಿಕ ಆಂದೋಲನಕಾರ ಎನ್ನಬಹುದು. ತನ್ನ ನಂತರವೂ ಸಹ ಅನಿಷ್ಟ ವ್ಯವಸ್ಥೆಯ ವಿರುದ್ಧ ನಾಗರಿಕ ಆಂದೋಲನಗಳು ನಡೆಯುತ್ತಲೇ ಇರುತ್ತವೆ ಎನ್ನುವದನ್ನು ಕೃಷ್ಣನು ಗ್ರಹಿಸಿರಬಹುದು. ಆದುದರಿಂದಲೇ ಆತನು ತನ್ನ ಸಹಚರನಾದ ಅರ್ಜುನನಿಗೆ ಈ ರೀತಿ ಆಶ್ವಾಸನೆ ನೀಡಿದ್ದಾನೆ:

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||


ಕೃಷ್ಣನ ನಂತರವೂ ಭಾರತದಲ್ಲಿ ನಾಗರಿಕ ಆಂದೋಲನಗಳು ಜರುಗಿವೆ. ಶೂದ್ರಕನು ರಚಿಸಿದ ಮೃಚ್ಛಕಟಿಕಮ್ ಸಂಸ್ಕೃತ ನಾಟಕದ ಕೊನೆಯಲ್ಲಿ ಸಾಮಾನ್ಯ ಪ್ರಜೆಗಳು ( -ಹಿಂದುಳಿದವರು ಎಂದು ಯಾರಿಗೆ ಕರೆಯಲಾಗುತ್ತಿದೆಯೊ ಅಂಥವರು-) ರಾಜನ ವಿರುದ್ಧ ಬಂಡಾಯವೆದ್ದು, ಆತನನ್ನು ಪಟ್ಟದಿಂದ ಕೆಳಗಿಳಿಸಿದ ಪ್ರಸಂಗವಿದೆ. ಈ ನಾಗರಿಕ ಆಂದೋಲನವು ವಾಸ್ತವವಾದದ್ದೊ ಅಥವಾ ನಾಟಕಕಾರನ ಬಯಕೆಯ ಕಲ್ಪನೆಯೊ ತಿಳಿಯದು!

ಕನ್ನಡ ನಾಡಿನಲ್ಲಿಯೇ ನಡೆದ ಶರಣಚಳುವಳಿಯಂತೂ ನಮ್ಮ ಹೃದಯಕ್ಕೆ ಅತ್ಯಂತ ಹತ್ತಿರವಾದ ನಾಗರಿಕ ಆಂದೋಲನ. ಆ ಕಾಲದಲ್ಲಿ ಹುಟ್ಟಿ, ಶರಣಚಳುವಳಿಯಲ್ಲಿ ಭಾಗವಹಿಸಿದವರೇ ಭಾಗ್ಯವಂತರು. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಇವರನ್ನು ಕಣ್ಣಾರೆ ಕಂಡವರು, ಇವರ ಉಪದೇಶವನ್ನು ಮನನ ಮಾಡಿಕೊಂಡು ಶರಣರಾಗಿ ಬಾಳಿದವರೇ ನಿಜವಾದ ಪುಣ್ಯವಂತರು. ದುರ್ದೈವದಿಂದ ಈ ನಾಗರಿಕ ಆಂದೋಲನವು ಹಿಂಸಾತ್ಮಕವಾಗಿ ಕೊನೆಯಾಯಿತು. ಆದರೆ ಬಸವಣ್ಣನವರು ಹೊತ್ತಿಸಿದ ಜ್ಯೋತಿ ಶರಣರ ಹೃದಯದಿಂದ ಆರಿಹೋಗಲಿಲ್ಲ. ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ? ಎಂದು ಬಸವಣ್ಣನವರು ಉದ್ಘೋಷಿಸಿದಂತೆ ಆ ಜ್ಯೋತಿ ನಮ್ಮ ಕತ್ತಲನ್ನು ಇನ್ನೂ ದೂರಮಾಡುತ್ತಲೇ ಇದೆ.

ವಿಶ್ವದಲ್ಲಿಯ ಎಲ್ಲ ಆಧುನಿಕ ನಾಗರಿಕ ಆಂದೋಲನಗಳಿಗೆ ಮೂಲರೂಪವಾಗಿದ್ದು ಗಾಂಧೀಜಿವರು ದಕ್ಷಿಣ ಆಫ್ರಿಕಾದಲ್ಲಿ ನಡೆಯಿಸಿದ ನಾಗರಿಕ ಆಂದೋಲನ. ಸವಿನಯ ಕಾಯದೆಭಂಗ, ಧರಣಿ, ಉಪವಾಸ ಸತ್ಯಾಗ್ರಹ ಇವೆಲ್ಲ ದಕ್ಷಿಣ ಆಫ್ರಿಕಾದಲ್ಲಿ  ಗಾಂಧೀಜಿಯವರಿಂದಲೇ ರೂಪಗೊಂಡವು.  ಈ ಅಹಿಂಸಾತ್ಮಕ ಅಸ್ತ್ರಗಳನ್ನೇ ನಂತರ ಭಾರತದಲ್ಲಿ ಹಾಗು ವಿಶ್ವದ ಇತರ ಕಡೆಗಳಲ್ಲೂ ಬಳಸಲಾಯಿತು. ಅಮೇರಿಕಾದಲ್ಲಿಯ ಮಾರ್ಟಿನ್ ಲೂಥರ ಕಿಂಗ ಅವರ ನಾಗರಿಕ ಆಂದೋಲನಗಳು ಸಹ (೧೯೫೯-೬೮) ಗಾಂಧೀಜಿಯವರ ಅಹಿಂಸೆ ಹಾಗು ಭ್ರಾತೃತ್ವದ ನೀತಿಯನ್ನೇ ಅವಲಂಬಿಸಿದೆ.

ಅದರಂತೆಯೇ ಪೋಲ್ಯಾಂಡಿನಲ್ಲಿ ಲೆಕ್ ವ್ಯಾಲೇಸಾ ಅವರ `Solidarity' ಆಂದೋಲನವೂ ಸಹ (೧೯೮೦) ಗಾಂಧೀಜಿಯವರ ನಾಗರಿಕ ಆಂದೋಲನದ ಅಸ್ತ್ರಗಳನ್ನು ಬಳಸಿ ಯಶಸ್ವಿಯಾಯಿತು. ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಸಹ ಸಶಸ್ತ್ರ ಆಂದೋಲನವನ್ನು ತ್ಯಜಿಸಿ, ಅಹಿಂಸಾತ್ಮಕ ನಾಗರಿಕ ಆಂದೋಲನವನ್ನೇ ಅಪ್ಪಿಕೊಂಡರು.

ಸ್ವತಂತ್ರ ಭಾರತದಲ್ಲಿ ನಡೆದ ನಾಗರಿಕ ಆಂದೋಲನಗಳಲ್ಲಿ ಜಯಪ್ರಕಾಶ ನಾರಾಯಣರ ನಾಗರಿಕ ಆಂದೋಲನವು (೧೯೭೪-೭೭) ಅತ್ಯಂತ ಪ್ರಮುಖವಾದದ್ದು. ಸರ್ವಾಧಿಕಾರದತ್ತ ಸಾಗಿದ್ದ ಇಂದಿರಾ ಗಾಂಧಿಯವರನ್ನು ಸಿಂಹಾಸನದಿಂದ ಕೆಳಗಿಸಿದ ಆಂದೋಲನವಿದು!

೧೯೮೫ರಲ್ಲಿ ಮೇಧಾ ಪಾಟಕರ ಅವರು ಪ್ರಾರಂಭಿಸಿದ ‘ನರ್ಮದಾ ಬಚಾವೋ’ ಆಂದೋಲನವು ಇನ್ನೂ ಮುಕ್ತಾಯವಾಗಿಲ್ಲ. ಅಲ್ಲಿಯ  ಹೋರಾಟವು ಇನ್ನೂ ನಡೆದಿದೆ.

ಇದೀಗ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ನಾಗರಿಕ ಆಂದೋಲನ ನಡೆದಿದೆ. ಈ ಆಂದೋಲನಕ್ಕೆ ಇಡೀ ದೇಶವೇ ಬೆಂಬಲವನ್ನು ಸೂಚಿಸುತ್ತಿದೆ. ಆದರೆ ಅಗಸ್ಟ ೨೭ರಂದು ಜರುಗಿದ ಚರ್ಚೆಯಲ್ಲಿ ಲೋಕಸಭೆಯ ಅನೇಕ ಸದಸ್ಯರು ಅಣ್ಣಾ ಹಜಾರೆಯವರನ್ನು ವೈಯಕ್ತಿಕವಾಗಿ ದೂಷಿಸಿ ತಮ್ಮ ಸಂಸ್ಕೃತಿಯ ಮಟ್ಟವನ್ನು ಪ್ರದರ್ಶಿಸಿದರು. ಶಾಸಕರೂ ಸಹ ಲೋಕಪಾಲರ ಪರಿಶೀಲನೆಗೆ ಒಳಪಡಬೇಕು ಎನ್ನುವ ಅಂಶವನ್ನು ಯಾವ ಶಾಸಕರೂ ಒಪ್ಪಲಿಲ್ಲ. ಯಾವ ಕಳ್ಳನು ತಾನೆ ಪೋಲೀಸರ ಪರಿಶೀಲನೆಗೆ ಒಳಪಡಲು ಒಪ್ಪಿಕೊಳ್ಳುತ್ತಾನೆ?! ರಾಹುಲ ಗಾಂಧಿ ಹಾಗು ಇತರ ಕೆಲವು ಶಾಸಕರಂತೂ ಲೋಕಪಾಲ ಶಾಸನದಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಾಗುವದಿಲ್ಲ ಎಂದು ಸಾರುತ್ತಿದ್ದಾರೆ. ಇದು ಅವರ ಅಪೇಕ್ಷೆ ಎಂದಷ್ಟೇ ಹೇಳಬಹುದು!

ಭಾರತದ ಲೋಕಸಭೆಯಲ್ಲಿ ತುಂಬಿದ ಭ್ರಷ್ಟಾಚಾರದ ಕತ್ತಲನ್ನು ದೂರ ಮಾಡಲು ಅಣ್ಣಾ ಹಜಾರೆ ಶ್ರಮಿಸುತ್ತಿದ್ದಾರೆ. ಅವರ ಕನಸು ಇಂದಲ್ಲ ನಾಳೆ ನನಸಾದೀತು.
‘ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ?’

Saturday, August 13, 2011

ಕರಡಿ ಕುಣಿತ............ದ.ರಾ.ಬೇಂದ್ರೆ

ಕಬ್ಬಿಣ ಕೈಕಡಗ, ಕುಣಿಕೋಲು, ಕೂದಲು
ಕಂಬಳಿ ಹೊದ್ದಾವಾ ಬಂದಾನ.
ಗುಣುಗುಣು ಗುಟ್ಟುತ, ಕಡಗವ ಕುಟ್ಟುತ
ಕರಡಿಯನಾಡಿಸುತ ನಿಂದಾನ.

                                    ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ
                                    ಜಾಂಬುವಂತನ ಹಿಡಿದು ತಂದಾನ
                                    ‘ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ,
                                    ಧಣಿ ದಾನ ಕೊಡುವನು’ ಅಂದಾನ

  ತ್ರೇತಾಯುಗ ರಾಮನ್ನ, ದ್ವಾಪರದ ಕೃಷ್ಣನ್ನ
  ಕಲಿಯುಗದ ಕಲ್ಕೀನ ಕಂಡಾನ
  ಜಾಂಬುನದಿ ತೀರದ ಜಂಬುನೀರಲ ಹಣ್ಣು
  ಕೃತಯುಗದ ಕೊನೆಗೀವಾ ಉಂಡಾನ

ಬಂದಾರ ಬರ್ರೆವ್ವ, ಕಂದನ ತರ್ರೆವ್ವ
ಅಂಜೀಕಿ ಗಿಂಜೀಕಿ ಕೊಂದಾನ
ರೋಮರೋಮಗಳಲ್ಲಿ ಭೀಮರಕ್ಷಿಯ ಬಲ
ಕೊರಳಾಗ ಕೊಟ್ಟಿರಿ ಒಂದಾನ

  ‘ಕುಣಿಯಲೆ ಮಗನ ನೀ’ ಅನ್ನೋದೊಂದೆ ತಡ
  ತನ್ನsನ ತಾsನನ ತಂದಾs
  ಮುದ್ದುಕೂಸಿನ ಹಾಗೆ ಮುಸುಮುಸು ಮಾಡುತ್ತ
  ಕುಣಿದಾನ ಕುಣಿತವ ಛಂದಾನ

ಹೊಟ್ಟೆಗಿಲ್ಲದವರ ಹೊಟ್ಟೆಗೆ ಹಾಕಲು
ನಡೆದಾನ ಪಡೆದಾನ ಬಂಧಾs
`ಕುಣಿಸುವವರ ಹೊಟ್ಟಿ ತಣ್ಣಗಾಗಲಿ’ ಎಂದು
ಮುಗಿಲಿಗೆ ಕೈಮುಗಿದು ನಿಂದಾನ

  ಮನಬಲ್ಲ ಮಾನವ ಕುಣಿದಾನ, ಕುಣಿಸ್ಯಾನ
  ಪ್ರಾಣದ ಈ ಪ್ರಾಣಿ ಹಿಂದಾs
  ಕರಡೀಯ ಹೆಸರೀಲೆ ಚರಿತಾರ್ಥ ನಡಿಸ್ಯಾನ
  ಪರಮಾರ್ಥ ಎಂಬಂತೆ ಬಂದಾನ

ಈ ಮನುಷಾ ಎಂದಿಂದೊ ಕವಲೆತ್ತು, ಕೋಡಗ
ತನಗಾಗಿ ಕುಣಿಸುತ್ತ ನಡೆದಾನ
ಕರಡಿ ಕುಣಿತಕ್ಕಿಂತ ನರರ ಬುದ್ಧಿಯ ಕುಣಿತ
ಮಿಗಿಲಹುದು ಕವಿ ಕಂಡು ನುಡಿದಾನ.            
……………………………………………………………………………
೧೯ನೆಯ ಶತಮಾನದಲ್ಲಿ ಬಾಳಿದ ಸಂತ ಶರೀಫರಿಗೂ, ೨೦ನೆಯ ಶತಮಾನದಲ್ಲಿ ಬಾಳಿದ ಬೇಂದ್ರೆಯವರಿಗೂ ಒಂದು ಸಾಮ್ಯವಿದೆ. ಇವರೀರ್ವರೂ ಜನರಿಗಾಗಿ, ಜನರ ನಡುವೆ ಹಾಡಿದ ಕವಿಗಳು. ಈರ್ವರೂ ಒಂದು ಸಾಮಾನ್ಯ ಘಟನೆಯನ್ನು ವರ್ಣಿಸುತ್ತ ಅದರಲ್ಲಿಯ ಅಸಾಮಾನ್ಯ ತಿರುಳನ್ನು ಬೋಧಿಸುತ್ತಿದ್ದರು. ಇವರೀರ್ವರ ನಡುವಿನ ಭೇದವೆಂದರೆ ಶರೀಫರು ಸಂತಕವಿಗಳು, ಬೇಂದ್ರೆಯವರು ಲೋಕಕವಿಗಳು.

 ‘ಸರಳತೆ’ಯು ಲೋಕಕವಿಯಾದ ಬೇಂದ್ರೆಯವರ ಅನೇಕ ಕವನಗಳ ಲಕ್ಷಣವಾಗಿದೆ. ಆಡಂಬರದ ಸಂಸ್ಕೃತಾಲಂಕಾರ ಅವರ ಕವನಗಳಲ್ಲಿ ಕಾಣಸಿಗದು. ಒಂದು ರೀತಿಯಲ್ಲಿ ಇದು  ಅವರ ಶೈಲಿಯ ದೌರ್ಬಲ್ಯ ಎನ್ನಬಹುದೇನೊ? ಏಕೆಂದರೆ ಬಗೆಬಗೆಯ ಸಂಸ್ಕೃತ ಪದಗಳಿಂದ ಅಲಂಕಾರಗೊಂಡ ಕಾವ್ಯವು `ಸುಲಭ ಓದುಗನನ್ನು ಮರಳು ಮಾಡುವಂತೆ, ಸರಳ ದೇಸಿ ಪದಗಳ ಕವನಗಳು ಮಾಡಲಾರವು.  ಬೇಂದ್ರೆಯವರ ಕವನಗಳನ್ನು ಸಹಜಸೌಂದರ್ಯದ ನಿರಾಭರಣ ಸುಂದರಿಗೆ ಹೋಲಿಸಬಹುದು. ನಿಜವಾದ ರಸಿಕಹಂಸರೇ ಈ ಕವನಗಳ ಚೆಲುವನ್ನು ಸವಿಯಬಲ್ಲರು.

‘ಕರಡಿ ಕುಣಿತ’ವು ಬೇಂದ್ರೆಯವರ ‘ಸರಳ ಕವನ’ಗಳಲ್ಲೊಂದು. ಕವನವನ್ನು ಓದುತ್ತ ಹೋದಂತೆ, ಈ ಸರಳ ಕವನದ ಒಡಲಲ್ಲಿರುವ ಶೋಷಣೆಯ ಸಂಕೀರ್ಣತೆಯು ಓದುಗರ ಗಮನಕ್ಕೆ ಬಾರದಿರಲಾರದು.

 ‘ಕರಡಿ ಕುಣಿತ’ ಕವನದ ಮೊದಲ ನುಡಿಯನ್ನು ಗಮನಿಸೋಣ.
ಕಬ್ಬಿಣ ಕೈಕಡಗ, ಕುಣಿಕೋಲು, ಕೂದಲು
ಕಂಬಳಿ ಹೊದ್ದಾವಾ ಬಂದಾನ.
ಗುಣುಗುಣು ಗುಟ್ಟುತ, ಕಡಗವ ಕುಟ್ಟುತ
ಕರಡಿಯನಾಡಿಸುತ ನಿಂದಾನ.
ಕರಡಿಯನ್ನು ಆಡಿಸುವವನ ಚಿತ್ರಣದಿಂದ ಈ ಕವನ ಪ್ರಾರಂಭವಾಗುತ್ತದೆ. ನೋಡುಗನ ಕಣ್ಣಿಗೆ ಮೊದಲು ಕಾಣುವದು ಇವನ ಉಡುಗೆ-ತೊಡುಗೆ. ಈ ವೇಷಭೂಷಣಗಳು ಇವನ ವ್ಯಕ್ತಿತ್ವದ ಪ್ರತೀಕಗಳೂ ಆಗಿವೆ. ಈತನು ಹೆಗಲ ಮೇಲೆ ಕರಿಯ ಕಂಬಳಿಯನ್ನು ಹೊದ್ದುಕೊಂಡಿದ್ದಾನೆ ಹಾಗು ಮಣಿಕಟ್ಟಿನಲ್ಲಿ ಕಬ್ಬಿಣದ ಕಡಗವನ್ನು  ತೊಟ್ಟುಕೊಂಡಿದ್ದಾನೆ. ಅಲ್ಲದೆ ಕೈಯಲ್ಲಿ ಕುಣಿಗೋಲನ್ನೊಂದನ್ನು ಹಿಡಿದುಕೊಂಡಿದ್ದಾನೆ. ಇದು ಕರಡಿಯನ್ನು ತಿವಿಯಲು ಅವನು ಬಳಸುವ ಉಪಕರಣ. ಜೊತೆಗೆ ಕರಡಿಯದೇ ಕೂದಲುಗಳ ಗುಚ್ಛವೊಂದು ಅವನ ಮತ್ತೊಂದು ಕೈಯಲ್ಲಿ. ಇವೆಲ್ಲವು ಈ ಮನುಷ್ಯನ ನಿಷ್ಕರುಣತೆಯನ್ನು ಗಾಢವಾಗಿ ಬಿಂಬಿಸುತ್ತವೆ. ನೋಡುಗರನ್ನು ಆಕರ್ಷಿಸಲು ಈತ ಕಡಗವನ್ನು ಕುಟ್ಟುತ್ತ, ಏನೇನೋ ಗುಣುಗುಟ್ಟುತ್ತ ಕರಡಿಯನ್ನು ಆಡಿಸಲು ಬರುತ್ತಿದ್ದಾನೆ. ಈತನ ಕರ್ಕಶ ವ್ಯಕ್ತಿತ್ವವನ್ನು ನೋಡಿದಾಗ ಕವಿಯ ಮನಸ್ಸು ಕರಡಿಯ ಅಸಹಾಯಕ ಸ್ಥಿತಿಯನ್ನು ಚಿಂತಿಸುತ್ತದೆ. (ಈ ನುಡಿಯ ಸಾಲುಗಳಲ್ಲಿ ಪ್ರಧಾನವಾಗಿರುವ ‘ಕ’ಕಾರವು ಕರ್ಕಶತೆಯನ್ನು ಧ್ವನಿಸುವದನ್ನು ಗಮನಿಸಬೇಕು.)

ಎರಡನೆಯ ನುಡಿ:
ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ
ಜಾಂಬುವಂತನ ಹಿಡಿದು ತಂದಾನ
‘ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ,
ಧಣಿ ದಾನ ಕೊಡುವನು’ ಅಂದಾನ
ಅಡವಿಯಲ್ಲಿ ಸ್ವತಂತ್ರವಾಗಿ ಬದಕುತ್ತಿದ್ದ ಪ್ರಾಣಿ ಈ ಕರಡಿ. ಹೇರಳವಾಗಿ ಸಿಗುವ ಜೇನುತುಪ್ಪವನ್ನು ಮೆಲ್ಲುತ್ತ ನೆಮ್ಮದಿಯಿಂದ ಜೀವಿಸುತ್ತಿದ್ದ ಜೀವಿಯಿದು. ಅಲ್ಲದೆ, ಕರಡಿಯೆಂದರೇನು ಸಾಮಾನ್ಯ ಪ್ರಾಣಿಯೆ? ಇದು ಜಾಂಬುವಂತ. ಪರಮಾತ್ಮನು ರಾಮಾವತಾರ ಎತ್ತಿದಾಗ ಅವನಿಗೆ ನೆರವು ನೀಡಿದ ಪ್ರಾಣಿ. ಕೃಷ್ಣಾವತಾರದಲ್ಲಿ ಭಗವಂತನೊಡನೆಯೇ ಸೆಣಸಾಡಿಸಿದಂತಹ ಬಲಿಷ್ಠ ಪ್ರಾಣಿ. ಇದೀಗ ಮಾನವನ ಕುಟಿಲ ಜಾಲದಲ್ಲಿ ಸೆರೆಯಾಗಿ ಅವನ ಕೈಗೊಂಬೆಯಾಗಿದೆ. ಇಂತಹ ಪ್ರಾಣಿಗೆ ಈ ಮಾನವನ ತುಚ್ಛ ಆದೇಶವೇನು?---‘ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ’ ಎನ್ನುವ ಗುಲಾಮಗಿರಿಯ ಆದೇಶ! ಇದಕ್ಕೆ ಪ್ರತಿಫಲವೆಂದರೆ ಧಣಿ ಬಿಸಾಕುವ ‘ದಾನ’. ಈ ದಾನ ದೊರೆಯುವದೂ ಸಹ ಕುಣಿಸುವವನಿಗೇ! ಎಂತಹ ಹೃದಯವಿದ್ರಾವಕ ಚಿತ್ರವಿದು!


ಮೂರನೆಯ ನುಡಿ:
ತ್ರೇತಾಯುಗ ರಾಮನ್ನ, ದ್ವಾಪರದ ಕೃಷ್ಣನ್ನ
ಕಲಿಯುಗದ ಕಲ್ಕೀನ ಕಂಡಾನ
ಜಾಂಬುನದಿ ತೀರದ ಜಂಬುನೀರಲ ಹಣ್ಣು
ಕೃತಯುಗದ ಕೊನೆಗೀವಾ ಉಂಡಾನ
ಕೃತಯುಗ ಅಥವಾ ಸತ್ಯಯುಗದಲ್ಲಿ ಎಲ್ಲ ಜೀವಿಗಳು ನಿಸರ್ಗಸಹಜ ಜೀವನ ನಡೆಯಿಸುತ್ತಿದ್ದರು. ಈ ಯುಗದ ಅಂತ್ಯದವರೆಗೆ ಜಾಂಬುವಂತನು ಅಂದರೆ ಕರಡಿಯು ಜಾಂಬುನದಿಯ ದಂಡೆಯ ಮೇಲೆ ಬೆಳೆಯುತ್ತಿದ್ದ ಜಂಬುನೀರಲ ಹಣ್ಣುಗಳನ್ನು ತಿಂದು ಜೀವಿಸುತ್ತಿತ್ತು. ಆನಂತರದ ತ್ರೇತಾಯುಗ, ದ್ವಾಪರಯುಗ ಹಾಗು ಕಲಿಯುಗಗಳಲ್ಲಿ ಭಗವಂತನು ರಾಮಾವತಾರ, ಕೃಷ್ಣಾವತಾರ ಹಾಗು ಕಲ್ಕಿಯ ಅವತಾರಗಳನ್ನು ಎತ್ತಿ ದುಷ್ಟಸಂಹಾರ ಮಾಡಿದನು. ಇವು ನಾಗರಿಕ ಯುಗಗಳಾಗಿದ್ದುದರಿಂದ ಜಾಂಬುವಂತನು ನಿಸರ್ಗಸಹಜ ಜೀವನಕ್ಕೆ ಕೊನೆ ಹಾಡಿದನು. ಈ ಎಲ್ಲ ಯುಗಗಳನ್ನು ಕಂಡವನಾದುದರಿಂದ ಜಾಂಬುವಂತನು ಪುರಾಣಪುರುಷನು.

[ಟಿಪ್ಪಣಿ: ಹಿಮಾಲಯಪರ್ವತಶ್ರೇಣಿಯ ಭಾಗವಾದ ಕೈಲಾಸ ಶಿಖರದ ಸಮೀಪದಲ್ಲಿರುವ ಮಾನಸ ಸರೋವರದ ಸುತ್ತಲೂ ಏಳು ದ್ವೀಪಗಳಿವೆ ಎಂದು ಪುರಾಣಗಳು ಹೇಳುತ್ತವೆ. ಇವು ಬಹುಶಃ ಏಳು ಖಂಡಗಳು. ದಕ್ಷಿಣ ದಿಕ್ಕಿನಲ್ಲಿರುವ ಖಂಡಕ್ಕೆ ಜಂಬೂದ್ವೀಪ (=ಭಾರತ) ಎಂದು ಕರೆಯುತ್ತಾರೆ. ಈ ಜಂಬೂದ್ವೀಪದಲ್ಲಿ ಹರಿಯುತ್ತಿರುವ ನದಿಯೇ ಜಾಂಬುನದಿ. ಅಲ್ಲಿಯ ನಿವಾಸಿಗಳು ಜಾಂಬುವಂತರು. ಇವರೇ ಭಾರತದ ಮೂಲನಿವಾಸಿಗಳು. ಈ ನದೀತೀರದಲ್ಲಿ ಬೆಳೆಯುವ ವೃಕ್ಷಗಳು ಜಂಬು ನೀರಲ ವೃಕ್ಷಗಳು. ಜಾಂಬುವಂತರು ಈ ಮರದ ನೀರಲ ಹಣ್ಣುಗಳನ್ನು ತಿಂದು ಬದಕುತ್ತಿದ್ದರು. ಮಾನಸ ಸರೋವರದ ನಡುವಿನಲ್ಲಿಯೂ ಸಹ ಒಂದು ಬೃಹತ್ ಜಂಬೂವೃಕ್ಷ ಅಂದರೆ ನೀರಲ ಮರವಿದೆ. ಇದರಿಂದ ಬೀಳುವ ಜಂಬೂಫಲಗಳನ್ನು ಅಲ್ಲಿಯ ವಾಸಿಗಳಾದ ‘ನಾಗ’ರು ತಿಂದು ಜೀವಿಸುತ್ತಿದ್ದರು. ಸ್ವತಂತ್ರವಾಗಿ ಬಾಳುತ್ತಿದ್ದ ಈ ಆದಿವಾಸಿಗಳು ಆಯುಧಕುಶಲವಾದ ಜನಾಂಗಕ್ಕೆ ಸೋತು ಆಳಾಗಿ ಬಾಳಬೇಕಾಯಿತು.

ಜಂಬುದ್ವೀಪದಲ್ಲಿರುವ ಜಾಂಬುನದಿಯ ದಂಡೆಗಳಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಜಂಬುನೀರಲ ಹಣ್ಣುಗಳನ್ನು ತಿನ್ನುತ್ತ ಈ ಜಾಂಬುವಂತರು ಸ್ವತಂತ್ರವಾಗಿ, ಸುಖವಾಗಿ ಇರುತ್ತಿದ್ದರು. ಇದು ಕೃಷಿ ಸಂಸ್ಕೃತಿಗಿಂತಲೂ ಮೊದಲಿನ ಜೀವನಪದ್ಧತಿಯನ್ನು ಸೂಚಿಸುತ್ತದೆ. ಈ ಯುಗದ ಅಂದರೆ ಕೃತಯುಗದ ಲಕ್ಷಣವೇನು? ಈ ಯುಗದಲ್ಲಿ ಕಬ್ಬಿಣದ ಆವಿಷ್ಕಾರವಾಗಿರಲಿಲ್ಲ. ಆದುದರಿಂದ ಕೃಷಿಸಂಸ್ಕೃತಿಯೂ ಪ್ರಾರಂಭವಾಗಿರಲಿಲ್ಲ. ಸಸ್ಯಾಹಾರಿಗಳು ಗಡ್ಡೆ ಗೆಣಸುಗಳನ್ನು ಹಾಗು ಹಣ್ಣು ಹಂಪಲಗಳನ್ನು ತಿಂದು ಬದಕುತ್ತಿದ್ದರು. ಈ ಯುಗದಲ್ಲಿ ‘ಗುಂಪು ಜೀವನ’ವಿತ್ತು. ಯಾವುದೇ ಒಬ್ಬ ವ್ಯಕ್ತಿಯ ಆಳ್ವಿಕೆ ಪ್ರಾರಂಭವಾಗಿರಲಿಲ್ಲ; ಹಾಗು ಈ ಯುಗದ ಮನುಷ್ಯರು ‘ಆಟವಿಕರು’, ಅಂದರೆ ಅಡವಿಯ ನಿವಾಸಿಗಳು.

ಈ ನಿಸರ್ಗಸಹಜ ಜೀವನ ಕೊನೆಗೊಂಡಿದ್ದು ಕೃತಯುಗದ ಅಂದರೆ ಸತ್ಯಯುಗದ ಕೊನೆಯಲ್ಲಿ. ಸತ್ಯಯುಗದ ಬಳಿಕ ಬಂದದ್ದು ತ್ರೇತಾಯುಗ, ಆನಂತರ ಬಂದದ್ದು ದ್ವಾಪರ ಯುಗ. ತ್ರೇತಾಯುಗದಲ್ಲಿ ಕಬ್ಬಿಣದ ಶೋಧವಾಗಿತ್ತು. ಈ ಯುಗದಲ್ಲಿಯೇ ಸೂರ್ಯವಂಶದವರ ವಂಶಪಾರಂಪರಿಕ ಪ್ರಭುತ್ವ ಬೆಳೆದು ಬಂದಿತು. ಇವರು ನಗರಿಗಳಲ್ಲಿ ಜೀವಿಸುವವರು ಅಂದರೆ ‘ನಾಗರಿಕರು.’ ಶ್ರೀರಾಮಚಂದ್ರನು ಕಬ್ಬಿಣದ ಬಿಲ್ಲು ಬಾಣಗಳನ್ನು ಉಪಯೋಗಿಸಿ, ಶಿಲಾಯುಧ ಹಾಗು ಕಟ್ಟಿಗೆಯ ಗದೆಗಳನ್ನು  ಬಳಸುತ್ತಿದ್ದ ಮೂಲನಿವಾಸಿಗಳನ್ನು ಅಂದರೆ ‘ಆಟವಿಕ’ರನ್ನು ಸೋಲಿಸಿದನು. ಆಯುಧಕುಶಲ ಜನಾಂಗವು ನಿಸರ್ಗಸಹಜ ಜೀವಿಗಳನ್ನು ಮಣಿಸಿತು. ಅವರನ್ನು ತನ್ನ ಅಧೀನರನ್ನಾಗಿ ಮಾಡಿತು. ಸಮಾಜದಲ್ಲಿ ವಿವಿಧ ವರ್ಣಗಳು ಪ್ರಾರಂಭವಾದವು. ಪ್ರಭುತ್ವದಿಂದ ಗುಲಾಮಗಿರಿಯವರೆಗಿನ ಪಿರ್ಯಾಮಿಡ್ ರೂಪುಗೊಂಡಿತು. ಇದು ಯಜಮಾನ ಸಂಸ್ಕೃತಿಯ ಪ್ರಾರಂಭವನ್ನು ಸೂಚಿಸುತ್ತದೆ.

ವಿಭಿನ್ನ ಜನಾಂಗಗಳ ಅಥವಾ ಗುಂಪುಗಳ ನಡುವೆ ಹೋರಾಟ ನಡೆದಾಗ ಗೆದ್ದವನೇ ಯಜಮಾನ, ಸೋತವನೇ ಗುಲಾಮ!
ಸತ್ಯಯುಗದ ಕೊನೆಯಲ್ಲಿ ಸೋತು ಹೋದ ‘ಜಾಂಬುವಂತರು’ ತ್ರೇತಾಯುಗ, ದ್ವಾಪರಯುಗ ಹಾಗು ಕಲಿಯುಗಗಳಲ್ಲಿ ವಿಭಿನ್ನ ಅಧಿಪತಿಗಳನ್ನು ಕಂಡರು. ತಾವು ಮಾತ್ರ ಗುಲಾಮರಾಗಿಯೇ ಉಳಿದರು.]

ನಾಲ್ಕನೆಯ ನುಡಿ:
ಬಂದಾರ ಬರ್ರೆವ್ವ, ಕಂದನ ತರ್ರೆವ್ವ
ಅಂಜೀಕಿ ಗಿಂಜೀಕಿ ಕೊಂದಾನ
ರೋಮರೋಮಗಳಲ್ಲಿ ಭೀಮರಕ್ಷಿಯ ಬಲ
ಕೊರಳಾಗ ಕೊಟ್ಟಿರಿ ಒಂದಾನ
ಮೊದಲನೆಯ ನುಡಿಯಲ್ಲಿ ಕರಡಿಯನ್ನು ಆಡಿಸುವವನ ಚಿತ್ರಣವನ್ನು ಹಾಗು ಎರಡನೆಯ ಮತ್ತು ಮೂರನೆಯ ನುಡಿಗಳಲ್ಲಿ ಕರಡಿಯ ಚರಿತ್ರೆಯನ್ನು ಬಣ್ಣಿಸಿದ ಬೇಂದ್ರೆಯವರು ನಾಲ್ಕನೆಯ ನುಡಿಯಲ್ಲಿ ಕರಡಿಯನ್ನು ಆಡಿಸುವವನ ಮಾಯದ ಮಾತುಗಳನ್ನು ವರ್ಣಿಸುತ್ತಾರೆ.

ಕುಣಿತವನ್ನು ನೋಡಲು ಬರುವವರನ್ನು ಮರಳು ಮಾಡಿ ತನ್ನ ಹೊಟ್ಟೆ ತುಂಬಿಕೊಳ್ಳುವದೇ ಕುಣಿಸುವವನ ಮುಖ್ಯ ಉದ್ದೇಶವಾಗಿರುತ್ತದೆ. ಈ ಉದ್ದೇಶ ಸಾಧಿಸಲು ಆತನು ಅಲ್ಲಿ ನೆರೆದ ತಾಯಂದಿರ ಭಾವನೆಗಳ ಮೇಲೆ ಆಟ ಆಡುತ್ತಾನೆ. ಚಿಕ್ಕ ಮಕ್ಕಳು ಯಾವಾಗಲೋ ಅಳುತ್ತಿರುತ್ತಾರೆ. ಮಗು ಅಂಜಿರಬಹುದು ಅಥವಾ ಅದಕ್ಕೆ ಕೆಟ್ಟ ದೃಷ್ಟಿ ತಾಗಿರಬಹುದು ಎಂದು ಹೆದರಿದ ತಾಯಂದಿರು ‘ದೃಷ್ಟಿಯನ್ನು ನಿವಾಳಿಸಿ’ ಚೆಲ್ಲುತ್ತಾರೆ. ‘ಕಣ್ಣಿಗೆ ಕಾಮನ ರಕ್ಷಿ, ಬೆನ್ನಿಗೆ ಭೀಮನ ರಕ್ಷಿ’ ಎಂದು ದೈವದ ರಕ್ಷಣೆ ಕೋರುತ್ತಾರೆ. ಅಂತಹ ಅಮಾಯಕ ತಾಯಂದಿರ ಎದುರಿಗೆ ಕರಡಿ ಕುಣಿಸುವವನು ‘ಈ ಕರಡಿಯ ಕೂದಲುಗಳಲ್ಲಿ ಭೀಮರಕ್ಷಿಯ ಬಲವಿದೆ’ ಎಂದು ಹೇಳುವಾಗ ಕರಡಿಯ ದೈಹಿಕ ಸಾಮರ್ಥ್ಯದ ಜೊತೆಗೇ ಅದಕ್ಕೊಂದು ದೈವಿಕ ಸಾಮರ್ಥ್ಯವನ್ನು ಆರೋಪಿಸುತ್ತಾನೆ. ಅದು ನಿಜವಿದ್ದರೆ, ಕರಡಿ ಮನುಷ್ಯನ ಆಳಾಗಿ ಬಾಳುತ್ತಿತ್ತೆ!?

ಐದನೆಯ ನುಡಿ:
‘ಕುಣಿಯಲೆ ಮಗನ ನೀ’ ಅನ್ನೋದೊಂದೆ ತಡ
ತನ್ನsನ ತಾsನನ ತಂದಾs
ಮುದ್ದುಕೂಸಿನ ಹಾಗೆ ಮುಸುಮುಸು ಮಾಡುತ್ತ
ಕುಣಿದಾನ ಕುಣಿತವ ಛಂದಾನ
ನೆರೆದವರ ಮನರಂಜನೆಗಾಗಿ ಕರಡಿಯನ್ನು ಕುಣಿಸಬೇಕಲ್ಲವೆ? ಕರಡಿಯಾದರೇನು ಮನುಷ್ಯನಾದರೇನು, ಜೀವಜಗತ್ತಿನಲ್ಲಿ ಎಲ್ಲರೂ ಸಮಾನರೇ. ಆದರೆ ಮನುಷ್ಯನು ತಾನೇ ಜೀವಜಗತ್ತಿನ ಅಂತಿಮ ಸೃಷ್ಟಿ ಎಂದು ಭಾವಿಸಿಬಿಟ್ಟಿದ್ದಾನೆ. ಹಾಗೆಂದುಕೊಂಡು ಕರಡಿಯನ್ನು ತನಗಿಂತ ಕೆಳದರ್ಜೆಯ ಪ್ರಾಣಿಯನ್ನಾಗಿ ಮಾಡಿದ ಮನುಷ್ಯನು ಆ ಜೀವಿಗೆ ‘ಕುಣಿಯಲೆ ಮಗನ ನೀ’ ಎಂದು ಆದೇಶ ನೀಡುತ್ತಾನೆ. ಪಾಪದ ಕರಡಿಗಂತೂ ಮೊದಲೇ ತರಬೇತಿ ಸಿಕ್ಕಿರುತ್ತದೆ. ಕುಣಿಸುವವನಿಂದ ಹೊರಡುವ ಧ್ವನಿ ಹಾಗು ಕುಣಿಗೋಲಿನ ಸನ್ನೆಗೆ ಅದು ಆಳಾಗಿ ಬಿಟ್ಟಿದೆ. ಇಂತಹ ವರ್ತನೆಯನ್ನು ೧೯ನೆಯ ಶತಮಾನದಲ್ಲಿದ್ದ ರಶಿಯಾದ ಖ್ಯಾತ ವರ್ತನಾ-ವಿಜ್ಞಾನಿ ಪಾವ್ಲೋವರು ‘ರೂಢಿಸಿದ ಪ್ರತಿಕ್ರಿಯೆ’ (=Conditioned Reaction) ಎಂದು ಕರೆದಿದ್ದಾರೆ. ಆದುದರಿಂದ  ಅದರ ಕುಣಿತವು ಸುಖದ ಕುಣಿತವಲ್ಲ. ಕುಣಿಗೋಲಿಗೆ ಹೆದರಿಕೊಳ್ಳುವ ಮುಗ್ಧ ಕರಡಿಯ ಕುಣಿತವನ್ನು ಬೇಂದ್ರೆಯವರು ‘ಮುದ್ದು ಕೂಸಿನ ಮುಸುಮುಸು’ ವರ್ತನೆಗೆ ಹೋಲಿಸುತ್ತಿದ್ದಾರೆ. ಕೂಸು ಎಂದರೆ ಅಸಹಾಯಕ ಜೀವಿ. ಅದಕ್ಕೆ ಅಸಮಾಧಾನವಾದಾಗ ಅದು ಮುಸುಮುಸು ಮಾಡುತ್ತದೆ. ಅದರಂತೆ ಕರಡಿಯ ಕುಣಿತವೂ ಸಹ ಅಸಹಾಯಕ ಜೀವಿಯ ಮುಸುಮುಸು ಕುಣಿತ. ಆದರೆ ನೋಡುಗರಿಗೆ ಅದು ‘ಛಂದಾನ ಕುಣಿತ’!

ಆರನೆಯ ನುಡಿ:
ಹೊಟ್ಟೆಗಿಲ್ಲದವರ ಹೊಟ್ಟೆಗೆ ಹಾಕಲು
ನಡೆದಾನ ಪಡೆದಾನ ಬಂಧಾs
`ಕುಣಿಸುವವರ ಹೊಟ್ಟಿ ತಣ್ಣಗಾಗಲಿ’ ಎಂದು
ಮುಗಿಲಿಗೆ ಕೈಮುಗಿದು ನಿಂದಾನ
ಕರಡಿಯ ಕುಣಿತವು ತನ್ನ ಹೊಟ್ಟೆಪಾಡಿಗಲ್ಲ. ಅದನ್ನು ಹಿಡಿದುಕೊಂಡು ಬಂದವನ ಹೊಟ್ಟೆಪಾಡಿಗಾಗಿ. ‘ನಡೆದಾನ’ ಎಂದರೆ ಅನಾದಿಕಾಲದಿಂದಲೂ ಇದು ನಡೆದು ಬಂದಿದೆ. ‘ಪಡೆದಾನ ಬಂಧಾsನ’ ಎಂದರೆ ಈ ಬಂಧನವು ಆ ಕರಡಿಯ ಹಣೆಬರಹವಾಗಿದೆ. ಆದುದರಿಂದಲೇ ಆತ ಜನರೆದುರಿಗೆ ಬಂದು ಕುಣಿಯುತ್ತಿದ್ದಾನೆ. ಕರಡಿಯನ್ನು ಆಡಿಸುವವನ ಹೊಟ್ಟೆ ಭಗಭಗ ಎನ್ನುತ್ತಿರುವಷ್ಟು ಸಮಯವೆಲ್ಲ, ಕರಡಿ ಕುಣಿಯುತ್ತಲೇ ಇರಬೇಕು. ಅವನ ಹೊಟ್ಟೆ ತಣ್ಣಗಾದಾಗಲೇ ಕರಡಿ ಪಡುವ ಕಷ್ಟವೂ ಕಡಿಮೆಯಾದೀತು. ಅದಕ್ಕೆಂದೇ ಇದು ಮುಗಿಲಿಗೆ ಕೈ ಮಾಡಿ ದೇವರನ್ನು ಪ್ರಾರ್ಥಿಸುತ್ತದೆ: ನನ್ನನ್ನು ಕುಣಿಸುತ್ತಿರುವವನ ಹೊಟ್ಟೆ ತಣ್ಣಗಿರಲಿ, ದೇವರೆ!
ಅನಾಥೋ ದೇವರಕ್ಷಕಃ!

ಏಳನೆಯ ನುಡಿ:
ಮನಬಲ್ಲ ಮಾನವ ಕುಣಿದಾನ, ಕುಣಿಸ್ಯಾನ
ಪ್ರಾಣದ ಈ ಪ್ರಾಣಿ ಹಿಂದಾs
ಕರಡೀಯ ಹೆಸರೀಲೆ ಚರಿತಾರ್ಥ ನಡಿಸ್ಯಾನ
ಪರಮಾರ್ಥ ಎಂಬಂತೆ ಬಂದಾನ
ಪ್ರಾಣಿಗಳಿಗೆ ಹಾಗು ಮನುಷ್ಯರಿಗೆ ಇರುವ ಭೇದವೇನು? ಪ್ರಾಣಿಗಳಲ್ಲಿ ಇರುವದು ಪ್ರಾಣಶಕ್ತಿ (vitality). ಮನುಷ್ಯನಲ್ಲಿರುವದು ಬುದ್ಧಿಶಕ್ತಿ. ಬುದ್ಧಿಶಕ್ತಿ ಎನ್ನುವದು ಧೂರ್ತತನವೂ ಆಗಬಲ್ಲದು. ಮನಬಲ್ಲ ಮಾನವ ಎನ್ನುವಾಗ ಬೇಂದ್ರೆಯವರು ಮನುಷ್ಯನ ಈ ಧೂರ್ತ ಬುದ್ಧಿಯನ್ನು ಸೂಚಿಸುತ್ತಿದ್ದಾರೆ ಹಾಗು ಪ್ರಾಣದ ಪ್ರಾಣಿ ಎನ್ನುತ್ತ ಕರಡಿ ಹಾಗು ಇತರ ಪ್ರಾಣಿಗಳ ಪ್ರಾಣಶಕ್ತಿಯನ್ನು ಸೂಚಿಸುತ್ತಿದ್ದಾರೆ. ಈ ಧೂರ್ತಬುದ್ಧಿಯಿಂದಲೇ ಮಾನವನು ಪ್ರಾಣಶಕ್ತಿಯ ಪ್ರಾಣಿಗಳನ್ನು ಸೋಲಿಸಿದ್ದಾನೆ. ಈ ಧೂರ್ತಬುದ್ಧಿಯಿಂದಲೇ ಇತರ ಅಮಾಯಕ ಮಾನವರನ್ನು ಮರಳು ಮಾಡಿದ್ದಾನೆ. ತನ್ನ ಹೊಟ್ಟೆಪಾಡಿಗೆ ಪರಮಾರ್ಥದ ವೇಷವನ್ನು ತೊಡಿಸಿದ್ದಾನೆ.

ಎಂಟನೆಯ ನುಡಿ
ಈ ಮನುಷಾ ಎಂದಿಂದೊ ಕವಲೆತ್ತು, ಕೋಡಗ
ತನಗಾಗಿ ಕುಣಿಸುತ್ತ ನಡೆದಾನ
ಕರಡಿ ಕುಣಿತಕ್ಕಿಂತ ನರರ ಬುದ್ಧಿಯ ಕುಣಿತ
ಮಿಗಿಲಹುದು ಕವಿ ಕಂಡು ನುಡಿದಾನ.              

ಬೇಂದ್ರೆಯವರು ಕೊನೆಯಲ್ಲಿ ಕವನದ ತತ್ವಸಾರವನ್ನು ಹೇಳಿದ್ದಾರೆ. ಸಾಧಾರಣವೆಂದು ಕಾಣಿಸುವ ಈ ತತ್ವಸಾರವನ್ನು ಯಾವ ಉದ್ದೇಶಕ್ಕಾಗಿ ಬೇಂದ್ರೆಯವರು ಇಲ್ಲಿ ಹೇಳಿದ್ದಾರೆ? ಕವನಕ್ಕಿಂತ ಹೆಚ್ಚಾಗಿ ಕವಿಯ ಅಸ್ಮಿತೆಯನ್ನು ಗುರುತಿಸುವದು ಈ ಕೊನೆಯ ನುಡಿಯ ಉದ್ದೇಶವಾಗಿದೆ. ಬೇಂದ್ರೆಯವರು ತಮ್ಮನ್ನು ಯಾವಾಗಲೂ ಸಾಧಾರಣ ಜನರ ನಡುವಿನ ಕವಿ ಎಂದು ಗುರುತಿಸಿಕೊಳ್ಳುತ್ತಿದ್ದರು. ಹಳ್ಳಿಯಲ್ಲಿಯ ಕಟ್ಟೆಯೊಂದರ ಮೇಲೆ ಹತ್ತು ಜನರ ನಡುವೆ ಕುಳಿತುಕೊಂಡು ಕೈಯೆತ್ತಿ ಹಾಡುವ ಕವಿಯೊಬ್ಬನನ್ನು ಕಲ್ಪಿಸಿಕೊಳ್ಳಿರಿ. ಬಹುಶಃ ಬೇಂದ್ರೆಯವರ ಸ್ವ-ಕಲ್ಪನೆಯೂ ಅದೇ ಇದ್ದಿತೇನೋ? ಅಂತಹ ಕವಿಯೊಬ್ಬ ತನ್ನ ಕೇಳುಗರಿಗೆ ಕೊನೆಯಲ್ಲಿ ಕವನದ ತಿರುಳನ್ನು ಹೇಳುತ್ತಾನೆ, ಒಂದು ನೀತಿಬೋಧೆಯನ್ನು ಮಾಡುತ್ತಾನೆ. ಆದುದರಿಂದಲೇ ಬೇಂದ್ರೆಯವರು ಕವಿಯಾಗಿ ತನಗೆ ಕಂಡ ದರ್ಶನವನ್ನು ಇಲ್ಲಿ ಇತರರಿಗೂ ತಿಳಿಸುತ್ತಿದ್ದಾರೆ. ತಾವು ‘ಲೋಕಕವಿ’ ಎನ್ನುವ ಅಸ್ಮಿತೆಯನ್ನು ಸಮರ್ಥಿಸಿಕೊಂಡಿದ್ದಾರೆ.