Sunday, August 28, 2011

ಸಂಭವಾಮಿ ಯುಗೇ ಯುಗೇ


ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ನಡೆಯಿಸುತ್ತಿರುವ ನಾಗರಿಕ ಆಂದೋಲನಕ್ಕೆ ಮೊದಲ ಹಂತದ ಜಯ ಲಭಿಸಿದೆ. ಇದು ಅರ್ಧ ಜಯ ಮಾತ್ರ ಎಂದು ಅಣ್ಣಾ ಎಚ್ಚರಿಕೆ ನೀಡಿದ್ದಾರೆ. ಯಾಕೆಂದರೆ ನಮ್ಮ ದುಃಶಾಸಕರು ಯಾವ ಧೂರ್ತ ರೀತಿಯಿಂದ ನಾಗರಿಕ ಆಂದೋಲನವನ್ನು ಭಗ್ನಗೊಳಿಸಬಹುದು ಎನ್ನುವದನ್ನು ಯಾರೂ ಹೇಳಲಾರರು.

ಭಾರತದಲ್ಲಿ ಪುರಾಣಕಾಲದಿಂದಲೂ ನಾಗರಿಕ ಆಂದೋಲನಗಳು ನಡೆದಿವೆ. ಬಹುಶ: ಶ್ರೀಕೃಷ್ಣನೇ ಭಾರತದ ನಾಗರಿಕ ಆಂದೋಲನಗಳ ಹರಿಕಾರ ಎನ್ನಬಹುದು. ತನ್ನ ಎಳೆಯ ವಯಸ್ಸಿನಲ್ಲಿಯೇ ಕೃಷ್ಣನು ಗೋಕುಲದ ನಿವಾಸಿಗಳಿಗೆ ಇಂದ್ರ ಮೊದಲಾದ ವೈದಿಕ ದೇವತೆಗಳ ಪೂಜೆಯ ಬದಲಾಗಿ ವೃಕ್ಷಪೂಜೆ ಹಾಗು ಗಿರಿಪೂಜೆಗಳಂತಹ ಅವೈದಿಕ ಪೂಜೆಗೆ ಮರಳಲು ಬೋಧಿಸಿದನು. ಇದರಿಂದ ಮುನಿದ ಇಂದ್ರನು ಗೋಕುಲವಾಸಿಗಳ ವಿರುದ್ಧ ಯುದ್ಧ ಸಾರಿದಾಗ, ತನ್ನೆಲ್ಲ ಬೆಂಬಲಿಗರೊಡನೆ ಕೃಷ್ಣನು ಗೋವರ್ಧನ ಗಿರಿಯ ಗುಹೆಗಳ ಆಶ್ರಯ ಪಡೆದು, ಇಂದ್ರನ ಮೇಲೆ ವಿಜಯ ಸಾಧಿಸಿದನು. ಇದು ಸ್ಥಾಪಿತ ವ್ಯವಸ್ಥೆಯ ವಿರುದ್ಧ ನಡೆದ ಪ್ರಥಮ ನಾಗರಿಕ ಆಂದೋಲನ. ಪ್ರಥಮ ಆಂದೋಲನದಲ್ಲಿ ಸಫಲನಾದ ಕೃಷ್ಣನು ತನ್ನ ವೈರಿಗಳ ವಿರುದ್ಧ ಹೋರಾಡಲಾರದೆ ಸೋತು ಹೋಗುತ್ತಾನೆ. ಹೀಗೆ ಸೋತು ಹೋದ ಕೃಷ್ಣನು ಮಥುರಾಪಟ್ಟಣದಿಂದ ತನ್ನ ಸಹಚರರೊಡನೆ ಪಲಾಯನಗೈದು, ಸುಮಾರು ಸಾವಿರ ಕಿಲೋಮೀಟರಗಳಷ್ಟು ದೂರದಲ್ಲಿರುವ ಪಶ್ಚಿಮತೀರದಲ್ಲಿ ದ್ವಾರಕಾಪಟ್ಟಣವನ್ನು ನಿರ್ಮಿಸುವದು ಈ ನಾಗರಿಕ ಆಂದೋಲನದ ಎರಡನೆಯ ಭಾಗವಾಗಿದೆ.

ಈ ರೀತಿಯಾಗಿ ಕೃಷ್ಣನೇ ಭಾರತದ ಪ್ರಪ್ರಥಮ ನಾಗರಿಕ ಆಂದೋಲನಕಾರ ಎನ್ನಬಹುದು. ತನ್ನ ನಂತರವೂ ಸಹ ಅನಿಷ್ಟ ವ್ಯವಸ್ಥೆಯ ವಿರುದ್ಧ ನಾಗರಿಕ ಆಂದೋಲನಗಳು ನಡೆಯುತ್ತಲೇ ಇರುತ್ತವೆ ಎನ್ನುವದನ್ನು ಕೃಷ್ಣನು ಗ್ರಹಿಸಿರಬಹುದು. ಆದುದರಿಂದಲೇ ಆತನು ತನ್ನ ಸಹಚರನಾದ ಅರ್ಜುನನಿಗೆ ಈ ರೀತಿ ಆಶ್ವಾಸನೆ ನೀಡಿದ್ದಾನೆ:

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||


ಕೃಷ್ಣನ ನಂತರವೂ ಭಾರತದಲ್ಲಿ ನಾಗರಿಕ ಆಂದೋಲನಗಳು ಜರುಗಿವೆ. ಶೂದ್ರಕನು ರಚಿಸಿದ ಮೃಚ್ಛಕಟಿಕಮ್ ಸಂಸ್ಕೃತ ನಾಟಕದ ಕೊನೆಯಲ್ಲಿ ಸಾಮಾನ್ಯ ಪ್ರಜೆಗಳು ( -ಹಿಂದುಳಿದವರು ಎಂದು ಯಾರಿಗೆ ಕರೆಯಲಾಗುತ್ತಿದೆಯೊ ಅಂಥವರು-) ರಾಜನ ವಿರುದ್ಧ ಬಂಡಾಯವೆದ್ದು, ಆತನನ್ನು ಪಟ್ಟದಿಂದ ಕೆಳಗಿಳಿಸಿದ ಪ್ರಸಂಗವಿದೆ. ಈ ನಾಗರಿಕ ಆಂದೋಲನವು ವಾಸ್ತವವಾದದ್ದೊ ಅಥವಾ ನಾಟಕಕಾರನ ಬಯಕೆಯ ಕಲ್ಪನೆಯೊ ತಿಳಿಯದು!

ಕನ್ನಡ ನಾಡಿನಲ್ಲಿಯೇ ನಡೆದ ಶರಣಚಳುವಳಿಯಂತೂ ನಮ್ಮ ಹೃದಯಕ್ಕೆ ಅತ್ಯಂತ ಹತ್ತಿರವಾದ ನಾಗರಿಕ ಆಂದೋಲನ. ಆ ಕಾಲದಲ್ಲಿ ಹುಟ್ಟಿ, ಶರಣಚಳುವಳಿಯಲ್ಲಿ ಭಾಗವಹಿಸಿದವರೇ ಭಾಗ್ಯವಂತರು. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಇವರನ್ನು ಕಣ್ಣಾರೆ ಕಂಡವರು, ಇವರ ಉಪದೇಶವನ್ನು ಮನನ ಮಾಡಿಕೊಂಡು ಶರಣರಾಗಿ ಬಾಳಿದವರೇ ನಿಜವಾದ ಪುಣ್ಯವಂತರು. ದುರ್ದೈವದಿಂದ ಈ ನಾಗರಿಕ ಆಂದೋಲನವು ಹಿಂಸಾತ್ಮಕವಾಗಿ ಕೊನೆಯಾಯಿತು. ಆದರೆ ಬಸವಣ್ಣನವರು ಹೊತ್ತಿಸಿದ ಜ್ಯೋತಿ ಶರಣರ ಹೃದಯದಿಂದ ಆರಿಹೋಗಲಿಲ್ಲ. ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ? ಎಂದು ಬಸವಣ್ಣನವರು ಉದ್ಘೋಷಿಸಿದಂತೆ ಆ ಜ್ಯೋತಿ ನಮ್ಮ ಕತ್ತಲನ್ನು ಇನ್ನೂ ದೂರಮಾಡುತ್ತಲೇ ಇದೆ.

ವಿಶ್ವದಲ್ಲಿಯ ಎಲ್ಲ ಆಧುನಿಕ ನಾಗರಿಕ ಆಂದೋಲನಗಳಿಗೆ ಮೂಲರೂಪವಾಗಿದ್ದು ಗಾಂಧೀಜಿವರು ದಕ್ಷಿಣ ಆಫ್ರಿಕಾದಲ್ಲಿ ನಡೆಯಿಸಿದ ನಾಗರಿಕ ಆಂದೋಲನ. ಸವಿನಯ ಕಾಯದೆಭಂಗ, ಧರಣಿ, ಉಪವಾಸ ಸತ್ಯಾಗ್ರಹ ಇವೆಲ್ಲ ದಕ್ಷಿಣ ಆಫ್ರಿಕಾದಲ್ಲಿ  ಗಾಂಧೀಜಿಯವರಿಂದಲೇ ರೂಪಗೊಂಡವು.  ಈ ಅಹಿಂಸಾತ್ಮಕ ಅಸ್ತ್ರಗಳನ್ನೇ ನಂತರ ಭಾರತದಲ್ಲಿ ಹಾಗು ವಿಶ್ವದ ಇತರ ಕಡೆಗಳಲ್ಲೂ ಬಳಸಲಾಯಿತು. ಅಮೇರಿಕಾದಲ್ಲಿಯ ಮಾರ್ಟಿನ್ ಲೂಥರ ಕಿಂಗ ಅವರ ನಾಗರಿಕ ಆಂದೋಲನಗಳು ಸಹ (೧೯೫೯-೬೮) ಗಾಂಧೀಜಿಯವರ ಅಹಿಂಸೆ ಹಾಗು ಭ್ರಾತೃತ್ವದ ನೀತಿಯನ್ನೇ ಅವಲಂಬಿಸಿದೆ.

ಅದರಂತೆಯೇ ಪೋಲ್ಯಾಂಡಿನಲ್ಲಿ ಲೆಕ್ ವ್ಯಾಲೇಸಾ ಅವರ `Solidarity' ಆಂದೋಲನವೂ ಸಹ (೧೯೮೦) ಗಾಂಧೀಜಿಯವರ ನಾಗರಿಕ ಆಂದೋಲನದ ಅಸ್ತ್ರಗಳನ್ನು ಬಳಸಿ ಯಶಸ್ವಿಯಾಯಿತು. ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಸಹ ಸಶಸ್ತ್ರ ಆಂದೋಲನವನ್ನು ತ್ಯಜಿಸಿ, ಅಹಿಂಸಾತ್ಮಕ ನಾಗರಿಕ ಆಂದೋಲನವನ್ನೇ ಅಪ್ಪಿಕೊಂಡರು.

ಸ್ವತಂತ್ರ ಭಾರತದಲ್ಲಿ ನಡೆದ ನಾಗರಿಕ ಆಂದೋಲನಗಳಲ್ಲಿ ಜಯಪ್ರಕಾಶ ನಾರಾಯಣರ ನಾಗರಿಕ ಆಂದೋಲನವು (೧೯೭೪-೭೭) ಅತ್ಯಂತ ಪ್ರಮುಖವಾದದ್ದು. ಸರ್ವಾಧಿಕಾರದತ್ತ ಸಾಗಿದ್ದ ಇಂದಿರಾ ಗಾಂಧಿಯವರನ್ನು ಸಿಂಹಾಸನದಿಂದ ಕೆಳಗಿಸಿದ ಆಂದೋಲನವಿದು!

೧೯೮೫ರಲ್ಲಿ ಮೇಧಾ ಪಾಟಕರ ಅವರು ಪ್ರಾರಂಭಿಸಿದ ‘ನರ್ಮದಾ ಬಚಾವೋ’ ಆಂದೋಲನವು ಇನ್ನೂ ಮುಕ್ತಾಯವಾಗಿಲ್ಲ. ಅಲ್ಲಿಯ  ಹೋರಾಟವು ಇನ್ನೂ ನಡೆದಿದೆ.

ಇದೀಗ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ನಾಗರಿಕ ಆಂದೋಲನ ನಡೆದಿದೆ. ಈ ಆಂದೋಲನಕ್ಕೆ ಇಡೀ ದೇಶವೇ ಬೆಂಬಲವನ್ನು ಸೂಚಿಸುತ್ತಿದೆ. ಆದರೆ ಅಗಸ್ಟ ೨೭ರಂದು ಜರುಗಿದ ಚರ್ಚೆಯಲ್ಲಿ ಲೋಕಸಭೆಯ ಅನೇಕ ಸದಸ್ಯರು ಅಣ್ಣಾ ಹಜಾರೆಯವರನ್ನು ವೈಯಕ್ತಿಕವಾಗಿ ದೂಷಿಸಿ ತಮ್ಮ ಸಂಸ್ಕೃತಿಯ ಮಟ್ಟವನ್ನು ಪ್ರದರ್ಶಿಸಿದರು. ಶಾಸಕರೂ ಸಹ ಲೋಕಪಾಲರ ಪರಿಶೀಲನೆಗೆ ಒಳಪಡಬೇಕು ಎನ್ನುವ ಅಂಶವನ್ನು ಯಾವ ಶಾಸಕರೂ ಒಪ್ಪಲಿಲ್ಲ. ಯಾವ ಕಳ್ಳನು ತಾನೆ ಪೋಲೀಸರ ಪರಿಶೀಲನೆಗೆ ಒಳಪಡಲು ಒಪ್ಪಿಕೊಳ್ಳುತ್ತಾನೆ?! ರಾಹುಲ ಗಾಂಧಿ ಹಾಗು ಇತರ ಕೆಲವು ಶಾಸಕರಂತೂ ಲೋಕಪಾಲ ಶಾಸನದಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಾಗುವದಿಲ್ಲ ಎಂದು ಸಾರುತ್ತಿದ್ದಾರೆ. ಇದು ಅವರ ಅಪೇಕ್ಷೆ ಎಂದಷ್ಟೇ ಹೇಳಬಹುದು!

ಭಾರತದ ಲೋಕಸಭೆಯಲ್ಲಿ ತುಂಬಿದ ಭ್ರಷ್ಟಾಚಾರದ ಕತ್ತಲನ್ನು ದೂರ ಮಾಡಲು ಅಣ್ಣಾ ಹಜಾರೆ ಶ್ರಮಿಸುತ್ತಿದ್ದಾರೆ. ಅವರ ಕನಸು ಇಂದಲ್ಲ ನಾಳೆ ನನಸಾದೀತು.
‘ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ?’

31 comments:

prabhamani nagaraja said...

'ಸತ್ಯಕ್ಕೆ ನಿಧಾನವಾದರೂ ಜಯ ಲಭಿಸುತ್ತದೆ' ಎನ್ನುವುದಕ್ಕೆ ಇದೊ೦ದು ನಿದರ್ಶನ. ಸಕಾಲಿಕ ಲೇಖನಕ್ಕಾಗಿ ಧನ್ಯವಾದಗಳು ಸರ್.

Subrahmanya said...

ಮ.ಮೋ. ಸಿಂಗರ ಕಣ್ಣಿಗೆ ಬಟ್ಟೆ ಕಟ್ಟಲಾಗಿದೆ !. ರಾಹುಲ ಗಾಂಧಿಗೆ ಜಾಣಕುರುಡನಂತಿರಲು ಹೇಳಲಾಗಿದೆ !. ಇಷ್ಟೆಲ್ಲದರ ನಡುವೆಯೂ ತಾತ್ವಿಕ ಜಯ ಸಿಕ್ಕಿರುವುದು ಜನಪರ ಹೋರಾಟಕ್ಕೆ ಸಂದ ಬೆಲೆ ಎನ್ನಬಹುದು.
ಕಾಂಗ್ರೇಸಿನ ಕೆಟ್ಟಚಾಳಿ ಎಂದರೆ ’ಡಿಗ್ಗಿ’ ಗಳಂತಹ ಬಾಯಿಬಡುಕರಿಕೆ ಮಾತನಾಡಲು ಬಿಡುವುದು !.

Thanks for the timely article.

sunaath said...

ಪ್ರಭಾಮಣಿಯವರೆ,
ನಿಮಗೂ ಧನ್ಯವಾದಗಳು.

sunaath said...

ಎಂಜಲು ಬಾಚಿಕೊಳ್ಳಲು ಬಾಯಿ ತೆರೆದಿರುವ ಡಿಗ್ಗಿ, ಪಿಗ್ಗಿ ಇವರ ಬಾಯಿಗೆ ಬೀಗ ಹಾಕುವರು ಯಾರು?!

ಚುಕ್ಕಿಚಿತ್ತಾರ said...

ಸಕಾಲಿಕ ಲೇಖನ.ಇನ್ನೂ ಕಾಯುವುದು ಮತ್ತು ಕಾವಲು ಎರಡೂ ಬೇಕಾಗಿದೆ.

sunaath said...

ವಿಜಯಶ್ರೀ,
ನೀವು ಹೇಳುವುದು ನಿಜ. ಕಾಯುವದು ಹಾಗು ಕಾವಲು ಇನ್ನೂ ಬೇಕಾಗಿದೆ.

ನಾಗರಾಜ್ .ಕೆ (NRK) said...

Hope for the BEST, prepare for the WORST. All of us always need to be ARMED. Thanks for the write up sir.

Kalavatimadhisudan said...

prastuta pristitiyannu bimbisuva lekhanakkaagi dhanyavaadagalu.

sunaath said...

ನಾಗರಾಜರೆ,
ಆಶಾವಾದಿಗಳಾಗಿರೋಣ, ಅಲ್ಲವೆ?

sunaath said...

ಕಲರವ,
ಧನ್ಯವಾದಗಳು.

ಗಿರೀಶ್.ಎಸ್ said...

ಶರಣ ಕ್ರಾಂತಿ ಮತ್ತು ಕಾಯಕ ಕ್ರಾಂತಿ ಮಾಡಿದ ಬಸವಣ್ಣ ನವರನ್ನು ಆಗ್ ಹೇಗೆ ಕೊಂದರೋ ಅದೇ ರೀತಿ ಈಗಲೂ ಅಣ್ಣ ಹಜಾರೆ ಯವರನ್ನು ಈ ಕೇಂದ್ರ ಸರ್ಕಾರ ಒಮ್ಮೆ ಜೈಲಿಗೆ ಅಟ್ಟಿದೆ..ಬೇರೆ ರಾತಿ ಕ್ರಮ ಕೈಗೊಂಡರು ಅದರಲ್ಲಿ ಯಾವುದೇ ಆಶ್ಚರ್ಯ ಇಲ್ಲ..... ಉತ್ತಮೆ ಲೇಖನ ಸರ್...ಸುಭ್ರಮಣ್ಯರು ಹೇಳಿದಂತೆ ಮನಮೋಹನ ಸಿನ್ಗಿಗೆ ಬರಿ ಕಣ್ಣಿಗೆ ಬಟ್ಟೆ ಅಲ್ಲ.ಬಾಯಿಗೆ ಬಟ್ಟೆ ಕೂಡ ತುರುಕಿದ್ದಾರೆ....

ಮನಮುಕ್ತಾ said...

ಒಳ್ಳೆಯ ಸಕಾಲಿಕ ಲೇಖನ..

ಬಾಲು said...

ನಾಗರೀಕ ಹೋರಾಟವನ್ನು ಹಳ್ಳ ಹಿಡಿಸಲು ನಮ್ಮ ರಾಜಕಾರಣಿಗಳು ಪ್ರಯತ್ನಿಸುವುದು ನಿಜಕ್ಕೂ ಆತಂಕ ಕಾರಿ ವಿಷಯ. ದಿಗ್ವಿಜಯ್, ಕಪಿಲ್ ಸಂಗಡಿಗರು, ಮಾನ್ಯ ಪ್ರಧಾನಿಗಳು ಬ್ರಷ್ಟಾಚಾರ ನ ಹೊಡೆದೋಡಿಸಲು ಸಾದ್ಯ ಇಲ್ಲ ಎನ್ನುವುದು ... ಎಂತ ದುರಂತ ಅಲ್ವ?
ಹೇಗೂ ಇರಲಿ, ಈಗ ಸಿಕ್ಕಿದ್ದು ಅರ್ದ ಜಯ, ಮುಂದಿನ ಹೋರಾಟ ನಮ್ಮ ಚುನಾವಣ ವ್ಯವಸ್ತೆ ಬದಲಾವಣೆಗೆ !

ಹಾಗೆಯೇ ನೀವು ಕೊಟ್ಟ ಮೃಚ್ಛಕಟಿಕ ಉದಾಹರಣೆ ಚೆನ್ನಾಗಿತ್ತು. ಶಕಾರ ನಿಗೂ, ಕಾಂಗ್ರೆಸ್ಸ್ ಪಟಾಲಂ ಗು ವ್ಯತ್ಯಾಸವೇ ಇಲ್ಲವಾಗಿದೆ.

ಅನಂತ್ ರಾಜ್ said...

ಸತ್ಯಕ್ಕೆ ದೊರಕಿರುವು ತಾತ್ಕಾಲಿಕ ಜಯ, ನಿರಾಶೆಯ ಮರುಭೂಮಿಯಲ್ಲಿ ಒ೦ದು ಓಯಸಿಸ್ ಎನ್ನಬಹುದಲ್ಲವೆ ಸರ್? ಸಕಾಲಿಕ ಲೇಖನಕ್ಕೆ ಧನ್ಯವಾದಗಳು.

ಅನ೦ತ್

ಈಶ್ವರ said...

ಎಲ್ಲಾ ಅಣ್ಣಮಯ, ಸ್ವಲ್ಪಸಮಯದಲ್ಲಿ ಅಣ್ಣಾಮಾಯ ಆಗದಿದ್ರೆ ಸಾಕು . ಒಳ್ಳೆ ಲೇಖನ ಕಾಕಾ.. ಹಬ್ಬದ ಹಾರ್ಧಿಕ ಶುಭಾಶಯಗಳು.

http://bhavakirana.blogspot.com/2011/08/blog-post_3467.html

sunaath said...

ಗಿರೀಶರೆ,
ಶರಣಚಳುವಳಿಯನ್ನು ಧಾರ್ಮಿಕ ಹಾಗು ರಾಜಕೀಯ ಪ್ರಭುತ್ವವು ಹೊಸಕಿ ಹಾಕಿತು. ಆದರೆ ರಾಜಕೀಯ ಬೆಂಬಲ ದೊರೆತ ಮೇಲೆ ಶರಣರು ಶರಣರಾಗಿ ಉಳಿಯಲಿಲ್ಲ. Power corrupts ಎಂದು ಹೇಳುವದು ಅದಕ್ಕೇ ಅಲ್ಲವೆ!?

ಅಣ್ಣಾ ಚಳುವಳಿಯನ್ನು ಕೊಲ್ಲಬಯಸುವ ರಾಜಕೀಯ ಮುಂದಾಳುಗಳು ತುಂಬ ಧೂರ್ತರಾಗಿದ್ದಾರೆ. Trojan Horseದ ಹೊಟ್ಟೆಯೊಳಗಿಂದ ಈಗಾಗಲೇ ಕೆಲವು ಶತ್ರುಗಳು ಹೊರಬಂದಿದ್ದಾರೆ.

sunaath said...

ಮನಮುಕ್ತಾ,
ಧನ್ಯವಾದಗಳು.

sunaath said...

ಬಾಲು,
ಹಹ್ಹಹ್ಹಾ! ಮೃಚ್ಛಕಟಿಕಮ್ ನಾಟಕದಲ್ಲಿ ಒಬ್ಬ ಶಕಾರನಿದ್ದರೆ, ನಮ್ಮಲ್ಲಿ ಲಾಲೂ, ಸಿಬ್ಬಲ್, ದಿಗ್ಗಿ, ಶರದ ಯಾದವ ಇವರೆಲ್ಲ ಒಬ್ಬರನ್ನೊಬ್ಬರು ಮೀರಿಸುವ ಶಕಾರರೇ!

sunaath said...

ಅನಂತರಾಜರೆ,
ನನಗೂ ಸಹ ಅಣ್ಣಾ ಹಜಾರೆಯವರ ಚಳುವಳಿಯು ಭ್ರಷ್ಟಾಚಾರದ ಮರುಭೂಮಿಯ ನಡುವಿನ ಓಯಾಸಿಸ್‍ದಂತೆ ಕಾಣುತ್ತಿದೆ. ಸರಿಯಾದ ಹೋಲಿಕೆ.

sunaath said...

ಈಶ್ವರ ಭಟ್ಟರೆ,
ದೇವರಲ್ಲಿ ಅದೇ ಪ್ರಾರ್ಥನೆ: ಅಣ್ಣ ಮಾಯವಾಗದಿರಲಿ!

Badarinath Palavalli said...

ಕೃಷ್ಣ ಭಾರತದ ಪ್ರಪ್ರಥಮ ನಾಗರೀಕ ಆಂದೋಲನದ ಹರಿಕಾರ ಎನ್ನುವ ನಿಮ್ಮ ಮಾತು ಶತ ಪ್ರತಿಶತಃ ಸತ್ಯವಾದ ಮಾತು. ಅಂತೆಯೇ ಆತನು ಉತ್ತಮ ರಾಜ್ಯ ಭಾರ ನಡೆಸಿದ ಎನ್ನುವುದನ್ನೂ ಎಲ್ಲೋ ಓದಿದ್ದೇನೆ.

ಹಜಾರೆಯವರ ನಾಗರೀಕ ಆಂದೋಲನವು ಸುಲಭದಲ್ಲಿ ತನ್ನ ಪ್ರತಿಫಲವನ್ನು ಹುಟ್ಟಿಸದೇ ಹೋದರೂ, ಅದು ಭಾರತೀಯ ಸಮಾನ ಮನಸ್ಸುಗಳನ್ನಾದರೂ ಒಂದುಗೂಡಿಸುತ್ತಿವೆ ಮತ್ತು ದೇಶದಾದ್ಯಂತ ಒಂದು ಉತ್ತಮ ವಿಚಾರಕ್ಕೆ ಜನಸ್ತೋಮ ಜಾತಿ ಬೇಧ, ಭಾಷಾ ಬೇಧ, ವಯಸ್ಸಿನ ಬೇಧಗಳನ್ನು ಎತ್ತಿಟ್ಟು ಒಂದಾಗುತ್ತಿವೆ ಎನ್ನುವುದು ಆರೋಗ್ಯಕರ ಬೆಳವಣಿಗೆ.

’ಮೃಚ್ಛಕಟಿಕಮ್’ ನೀವು ಉಲ್ಲೇಖಿಸಿದಂತೆ ಶೂಧ್ರನ ಆಶಯವೇ ಇರಬಹುದು. ಇದೂ ಬಂಡಾಯದ ಸೂಚನೆಯೇ.

ಶರಣ ಚಳುವಳಿಯು ಕೆಳ ಮತ್ತು ಮಧ್ಯಮ ಜಾತಿಗಳನ್ನು ಒಗ್ಗೂಡಿಸುತ್ತಾ, ತನ್ಮೂಲಕ ಸಾಮಾಜಿಕ ಅಸಮಾನತೆಯನ್ನು ಬಗೆಹರಿಸುವ ಪ್ರಯತ್ನ. ಜೊತೆಗೆ ಶರಣ ಚಳುವಳಿಯು ನೀಡಿದ ಅತ್ಕೃಷ್ಠ ಕೊಡುಗೆಯಾದ ವಚನ ಸಾಹಿತ್ಯವು ಅದು ಅಂದಿನ ಶತಮಾನದಲ್ಲಿ ರಚಿತವಾಗಿದ್ದರೂ ಇಂದಿನ ಕಾಲಕ್ಕೂ ಹೊಂದುವ ಭಾಷೆ ಹಾಗೂ ಹೂರಣ ಹೊಂದಿದ್ದು. ಈಗಲೂ ನಮಗೆ ದಾರಿ ದೀಪವೇ ಅಲ್ಲವೇ!

ಗಾಂಧೀಜಿ, ಲೆಕ್ ಪ್ಯಾಲೆಸಾ, ಜಯ ಪ್ರಕಾಶ್ ನಾರಾಯಣ್, ಮೇಧಾ ಪಾಟ್ಕರ್ ಹಾಗೂ ಇದೀಗ ಅಣ್ಣಾ ನಮ್ಮ ಜಡ್ಡು ಹಿಡಿದು ಅನ್ಯಾಯವನ್ನೇ ಪಂಚಾಮೃತವೆಂದು ಸ್ವೀಕರಿಸುವ ಮನೋಗುಣವನ್ನು ಎಚ್ಚರಿಸುತ್ತಿರುತ್ತದೆ.

ಎದ್ದೇಳು ಭಾರತೀಯ... ’ತಮಸೋಮ ಜೋತಿರ್ಗಮಯ’...

ಅತ್ಯುತ್ತಮ ಲೇಖನ ಓದಿ ಮನಸ್ಸು ಪ್ರಫುಲ್ಲವಾಯಿತು.

Badarinath Palavalli said...

ಸರ್, ಇದೇ ತಿಂಗಳಲ್ಲಿ ನಮ್ಮ ಕಸ್ತೂರಿ ಟೀವಿಯು ಹುಬ್ಬಳ್ಳಿಯಲ್ಲಿ ’ನಾ ಹಾಡಲು ನೀವು ಹಾಡಬೇಕು’ ಮತ್ತು ’ಜಾಕ್ ಪಾಟ್’ ಕಾರ್ಯಕ್ರಮಗಳನ್ನು ಆಯೋಜಿಸಿದೆ. ನಾನು ಶೂಟಿಂಗಿಗಾಗಿ ಹುಬ್ಬಳ್ಳಿ ಬರುವನಿದ್ದೇನೆ.

ನಿಮ್ಮ ಈಮೈಲ್ ವಿಳಾಸ ಅಥವ ಫೋನ್ ನಂಬರ್ ನನ್ನ ಹತ್ತಿರ ಇಲ್ಲದಿರುವುದರಿಂದ ಇಲ್ಲಿ ಬರೆದುಕೊಂಡೆ.

ನಾನು ನಿಮ್ಮನ್ನು ಭೇಟಿಯಾಗಲೇ ಬೇಕು ಸಾರ್. ನೀವು ನನ್ನಂತಹ ಅಲ್ಪನಿಗೆ ಕಾವ್ಯ ಪ್ರೋತ್ಸಾಹ ಕೊಡುತ್ತಲೇ ಬಂದಿದ್ದೀರಿ. ನಿಮ್ಮ ಭೇಟಿ ನನಗೆ ಸಂತಸ ತರುತ್ತದೆ.

ನನ್ನ ಮೊಬೈಲ್ ಸಂಖ್ಯೆ :

ನನ್ನ ಮೊಬೈಲ್ ಸಂಖ್ಯೆ : 9972570061


ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com
www.badaripoems.wordpress.com

Face book Profile : Badarinath Palavalli

sunaath said...

ಬದರಿನಾಥರೆ,
ನನ್ನ ಈ-ಮೇಲ್ ವಿಳಾಸವನ್ನು ಇಲ್ಲಿ ಕೊಡುತ್ತಿದ್ದೇನೆ. ನೀವು ಬರುವಾಗ ದಯವಿಟ್ಟು ತಿಳಿಸಿ.
sunaath@gmail.com

ಜಲನಯನ said...

ಸುನಾಥಣ್ಣ..ಜನ ಸಾಮನ್ಯನ ಮನದ ಮಾತು ಅಣ್ಣಾ ಆಗಿದ್ದಾರೆ ಅವರ ಈ ಅಗಾಧ ಬೆಂಬಲ ಹೀಗೇ ಮತ್ತೂ ಹೆಚ್ಚಾಗಬೇಕಾದರೆ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಒಲವನ್ನು ತೋರಬಾರದು...ಇದೊಂದೇ ನನ್ನ ಹಾರೈಕೆ ಮತ್ತು ಆಶಯ...ಸಕಾಲಿಕ ಲೇಖನ..ನಾನೇ ತಡ ಬಂದದ್ದು...
ನಿಮ್ಮ ಹಿಂದಿನ ಪದ್ಯ (ಕರಡಿ ಕುಣಿತ) ನಾನು ನನ್ನ ಸ್ನೇಹಿತನ ಜೊತೆ ವೇಷ ಹಾಕಿ ಕುಣಿದು ಹಾಡಿದ್ವಿ ಸ್ಕೂಲಲ್ಲಿ ಗಣೇಶನ ಹಬ್ಬದ ದಿನಗಳಲ್ಲಿ....ಬಹಳ ಇಷ್ಟವಾದದ್ದು ಆಗ ...ಆದರೆ ಅದರ್ಲ್ಲಿ ಹುದುಗಿರುವ ಅರ್ಥ ಬಹಳ ಮಾರ್ಮಿಕ ಮತ್ತು ವಾಸ್ತವಗಳ ಕನ್ನಡಿ...ಧನ್ಯವಾದ

sunaath said...

ಜಲನಯನ,
ನಿಮ್ಮ ಕರಡಿ ಕುಣಿತ ವೇಷವನ್ನು ಒಮ್ಮೆ ನೋಡುವ ಆಸೆ ಆಗುತ್ತಿದೆ.

V.R.BHAT said...

ಒಡೆಯಾ, ಸೃಷ್ಟಿಯ ನಿಯಮ ಕೂಡ ಭಗವಂತನ ಅದೇ ಸಂದೇಶವನ್ನು ಸಾರುತ್ತದೆ. ಎಲಾ ಮತಗಳ ಆರಾಧಕರೂ ಕೊನೆಗೊಮ್ಮೆ ಸೇರುವುದು ಅದೇ ಜಗನ್ನಿಯಾಮಕನನ್ನೇ ಅಲ್ಲವೇ ? ಕಾಲಚಕ್ರ ಉರುಳುತ್ತದೆ, ಸತ್ಯ ಹರಿಶ್ಚಂದ್ರನಿಗೆ ಜಯಸಿಗುವ ವೇಳೆ ಆತ ಭಿಕಾರಿಯಾಗಿದ್ದ, ಸ್ಮಶಾನದ ಕಾವಲುಗಾರನಾಗಿದ್ದ ! ಕೊನೆಗೂ ಸತ್ಯಕ್ಕೆ ಜಯದೊರೆಯಿತು, ಹಾಗೇ ಸತ್ಯಕ್ಕೆ ಜಯದೊರಕುವುದು ತಡವಾಗಿಯೇ ಆಗುತ್ತದೆ ಎಂಬುದೂ ಕೂಡ ನನ್ನ ಅನಿಸಿಕೆ, ಲೇಖನ ಸಮಯೋಚಿತವಾಗಿದೆ, ನಿಮ್ಮೊಟ್ಟಿಗೆ ನನ್ನದನಿಯೂ ಅದನ್ನೇ ಹೇಳಿದೆ.

umesh desai said...

kaka good article. anna may have won the first leg of battle. but still long way to go

sunaath said...

ಭಟ್ಟರೆ,
"ಸತ್ಯ ಹರಿಶ್ಚಂದ್ರನಿಗೆ ಜಯ ದೊರೆಯುವ ವೇಳೆಗೆ ಆತ ಭಿಕಾರಿಯಾಗಿದ್ದ!" ನಿಜವಾಗಿಯೂ ಇದೇ ಕಠೋರ ಸತ್ಯವಾಗಿದೆ!

sunaath said...

ದೇಸಾಯರ,
‘ತಾಳಿದವ ಬಾಳ್ಯಾನು, ಬದುಕಿದವ ಉಂಡಾನು
ಸರ್ವೋದಯದ ಕೊನೆಯ ಪ್ರಸ್ತದೂಟ!’
-ಬೇಂದ್ರೆ

ಸಿಂಧು sindhu said...

Dear Sunath,

read this now.
your style reminds me of Khandekar! and i just love reading you and him anytime.

‘ತಾಳಿದವ ಬಾಳ್ಯಾನು, ಬದುಕಿದವ ಉಂಡಾನು
ಸರ್ವೋದಯದ ಕೊನೆಯ ಪ್ರಸ್ತದೂಟ!’
-ಬೇಂದ್ರೆ

Beautiful!


rgds,
sindhu

ಸೀತಾರಾಮ. ಕೆ. / SITARAM.K said...

ನಾಗರಿಕ ಅಂದೋಲನಗಳ ಮುಲವನ್ನು ದ್ವಾಪರದಿಂದ ಹೆಕ್ಕಿ ನೀಡಿದ್ದೀರಾ.. ತಮ್ಮ ಅಧ್ಯಯನಶೀಲತೆ ನಮಗೆ ಜ್ಞಾನ ನೀಡುತ್ತಿವೆ.