Thursday, October 20, 2011

‘ನಾನು ಹೋದರೆ ಹೋಗಬಹುದು’----ಕನಕದಾಸರು


ಶ್ರೀ ವ್ಯಾಸರಾಯರು (೧೪೪೭-೧೫೩೯) ವಿಜಯನಗರದ ರಾಜರಿಗೆ ಗುರುಸ್ಥಾನದಲ್ಲಿ ಇದ್ದವರು. ಭಕ್ತಿಪಂಥದ ದಾಸಕೂಟಕ್ಕೆ ಇವರು ಅಧ್ವರ್ಯರು. ಇಂತಹ ಉಚ್ಚ ತರಗತಿಯ ದಾಸಕೂಟದಲ್ಲಿ ಮೋಕ್ಷ ಪಡೆಯುವ ಯೋಗ್ಯತೆ ಇದ್ದವರು ಕೆಲವರಾದರೂ ಇದ್ದಿರಬಹುದಲ್ಲವೆ? ವ್ಯಾಸರಾಯರು ತಮ್ಮ ಶಿಷ್ಯರೆದುರಿಗೆ ಈ ಪ್ರಶ್ನೆಯನ್ನು ಇರಿಸುತ್ತಾರೆ: ‘ನಮ್ಮಲ್ಲಿ ವೈಕುಂಠಕ್ಕೆ ಯಾರು ಹೋಗಬಹುದು?’ ಉತ್ತರ ಹೇಳುವ ಧೈರ್ಯ ಕನಕದಾಸರನ್ನು ಬಿಟ್ಟರೆ ಯಾರಿಗೂ ಇರುವದಿಲ್ಲ.
ಕನಕದಾಸರು ಉತ್ತರಿಸುತ್ತಾರೆ: ‘ನಾನು ಹೋದರೆ ಹೋಗಬಹುದು!’

ಕನಕದಾಸರ ಉತ್ತರದ ಒಳಾರ್ಥವನ್ನು ತಿಳಿದವರು ಅದನ್ನು ನಮಗೂ ತಿಳಿಸಿದ್ದಾರೆ. ‘ನಾನು’ ಎಂದರೆ ಮನುಷ್ಯನ ಅಹಂಭಾವ. ಅಹಂಭಾವ ನಾಶವಾಗುವದೇ ಮೋಕ್ಷ ಇತ್ಯಾದಿ. ಅಹಂಭಾವಕ್ಕೆ  arrogance ಎನ್ನುವ ಅರ್ಥ ಇದ್ದಂತೆಯೇ self identity ಅಥವಾ ego ಎನ್ನುವ ಅರ್ಥವೂ ಇದೆ. ಕನಕದಾಸರು ‘ನಾನು’ ಎನ್ನುವ ಪದವನ್ನು arrogance ಎನ್ನುವ ಅರ್ಥದಲ್ಲಿ ಬಳಸಿಲ್ಲ. ಅವರು ಅದನ್ನು   self identity ಎನ್ನುವ ಅರ್ಥದಲ್ಲಿ ಬಳಸಿದ್ದಾರೆ. ಈ self identity ಎನ್ನುವ ಆಂಗ್ಲ ಪದಕ್ಕೆ ಕನ್ನಡದಲ್ಲಿ  ‘ಅಹಂಸಂಜ್ಞೆ’, ‘ಅಹಂಪ್ರಜ್ಞೆ’ ಅಥವಾ ‘ಅಹಮಿಕೆ’ ಎನ್ನುವ ಪದವನ್ನು ಬಳಸಬಹುದು. ಅಲ್ಲಮಪ್ರಭುಗಳು self identityಗೆ ‘ಕುರುಹು’ ಎನ್ನುವ ಪದವನ್ನು ಬಳಸಿದ್ದಾರೆ. ‘ಅಸ್ಮಿತೆ’ ಎನ್ನುವ ಪದವೂ ಬಳಕೆಯಲ್ಲಿದೆ. ನವೋದಯ ಕಾಲದ ಮಹಾನ್ ಚಿಂತಕರಾದ ಕುವೆಂಪು ಅವರು ಓ ನನ್ನ ಚೇತನಾ, ಆಗು ನೀ ಅನಿಕೇತನಾ!’ ಎನ್ನುವಾಗ ತಮ್ಮ ಅಪರಿಮಿತ ಚೈತನ್ಯಕ್ಕೆ ಯಾವುದೇ ಪರಿಮಿತ ಅಹಂಸಂಜ್ಞೆ ಬೇಡ ಎಂದೇ ಹೇಳುತ್ತಾರೆ.

`ನಾನು’ ಅಥವಾ ಅಹಂಪ್ರಜ್ಞೆಯು ವಿಕಸಿಸುವ ಬಗೆ ಹೇಗೆ? ಗರ್ಭಸ್ಥ ಭ್ರೂಣ ಹಾಗು  ನವಜಾತ ಶಿಶುವಿನಲ್ಲಿ ಇರುವ ಅಹಂಪ್ರಜ್ಞೆಯು ಜೈವಿಕ ಅಹಂಪ್ರಜ್ಞೆ ಅಥವಾ biological identity. ಹುಟ್ಟಿದ ಶಿಶುವು ಮಾಡುವ ಮೊದಲನೆಯ ಕೆಲಸವೆಂದರೆ ಹೊಟ್ಟೆ ತುಂಬಿಸಿಕೊಳ್ಳುವ ಕೆಲಸ. ಇದು ಅದರ ಜೈವಿಕ ಅವಶ್ಯಕತೆ. ಈ ಜೈವಿಕ ಅಹಂಪ್ರಜ್ಞೆಯು ಎಲ್ಲ ಜೀವಿಗಳಿಗೆ ಒಂದೇ ತೆರನಾಗಿರುತ್ತದೆ. ಕೆಲವೇ ತಿಂಗಳುಗಳಲ್ಲಿ ಆ ಶಿಶುವು ದೈಹಿಕ ಅಹಂಪ್ರಜ್ಞೆ ಅಥವಾ physiological identityಯನ್ನು ಬೆಳೆಯಿಸಿಕೊಳ್ಳುತ್ತದೆ. ತಾನು ದೈಹಿಕವಾಗಿ ಯಾವ ತರಹದ ಪ್ರಾಣಿ ಎನ್ನುವದನ್ನು ಆ ಜೀವಿ ಅರಿಯಲಾರಂಭಿಸುತ್ತದೆ. ಮೂರು ವರ್ಷದ ಬಾಲರಿಗೆ ಲಿಂಗ-ಕುರುಹು ಅಥವಾ gender identity ತಿಳಿದಿರುತ್ತದೆ ಎಂದು ಹೇಳುತ್ತಾರೆ. ತನ್ನ ತಾಯಿಯ ಜೊತೆಗಿರುವ ತನ್ನ ಸಂಬಂಧವನ್ನು ಗುರುತಿಸುವದು ಅದರ ಮೊದಲ ಸಾಮಾಜಿಕ ಅಹಂಸಂಜ್ಞೆ ಅಥವಾ social identity. ಇದೇ ರೀತಿಯಾಗಿ ಮನುಷ್ಯನ(ಳ) ‘ಕುರುಹು’ಗಳು ಬೆಳೆಯುತ್ತ ಹೋಗುತ್ತವೆ.

‘ನಾನು ಹೋದರೆ ಹೋಗಬಹುದು’ ಎಂದು ಹೇಳುವಾಗ ಕನಕದಾಸರಿಗೆ ಇದ್ದಂತಹ ಅಹಂಸಂಜ್ಞೆಗಳು ಯಾವವು?
ಕನಕದಾಸರು ಶಿಗ್ಗಾವಿ ತಾಲೂಕಿನಲ್ಲಿರುವ ಬಂಕಾಪುರದ ಹತ್ತಿರ ಇರುವ ‘ಬಾಡ’ ಹಳ್ಳಿಯಲ್ಲಿ ಹುಟ್ಟಿದವರು. ಬೀರನಾಯಕ ಎನ್ನುವದು ಇವರ ಮೊದಲಿನ ಹೆಸರು. ಇವರು ಪಾಳೆಯಗಾರಿಕೆಯ ವಂಶದವರು. ದಾಯಾದಿಕಲಹದಲ್ಲಿ ಇವರಿಗೆ ಪಾಳೆಯಗಾರಿಕೆ ದಕ್ಕುವದಿಲ್ಲ. ಆಗ ಇವರು ವಿಜಯನಗರದ ಫೌಜಿನಲ್ಲಿ ದಣಾಯಕರಾಗಿ ಸೇರ್ಪಡೆಯಾಗುತ್ತಾರೆ. ಸೇನೆಯಲ್ಲಿ ಇವರಿಗೆ ಒಳ್ಳೆಯ ಹೆಸರು ಹಾಗು ಅಧಿಕಾರ ದೊರೆತಿದ್ದವು. ಆ ಸಮಯದಲ್ಲಿ ಸಾಕಷ್ಟು ಸಂಪತ್ತನ್ನೂ ಸಂಪಾದಿಸಿದ ಇವರಿಗೆ ‘ಕನಕನಾಯಕ’ ಎನ್ನುವ ಹೆಸರು ಬಂದಿತು. ಈ ರೀತಿಯಾಗಿ ಸಂಪತ್ತಿನ ಹಾಗು ಅಧಿಕಾರದ ದರ್ಪ ಇವರಲ್ಲಿ ಒಂದುಗೂಡಿದವು. ಇದು ಅವರಲ್ಲಿದ್ದ ದೊಡ್ಡ ಅಹಂಸಂಜ್ಞೆ. ತಮ್ಮ ಕೀರ್ತನೆಯೊಂದರಲ್ಲಿ ತಮ್ಮ ಪೂರ್ವಜೀವನದ ಶೌರ್ಯದ ವರ್ಣನೆಯನ್ನು ಹಾಗು ತಮ್ಮ ಬಿಲ್ಲುಗಾರಿಕೆಯ ಪ್ರಶಂಶೆಯನ್ನು ಅವರು ಈ ರೀತಿಯಾಗಿ ಮಾಡಿದ್ದಾರೆ:

(೧) ಕನಕ ದಳದಲಿ ಬಂದು, ಕಲೆತನೆಂದರೆ ಫೌಜು
ಕನಕುಮನಕಾಗುವದು ಹರಿಯೆ.

(೨)ಮೊನೆಗಾರತನವೆಂಬ ಶನಿ ಬಿಡಿಸಿ ತವ ಪಾದ
ವನಜವನು ಸೇರಿಸಿದೆ ಹರಿಯೆ.

ತಮ್ಮ ಅಧಿಕಾರದರ್ಪದ ವರ್ಣನೆಯನ್ನು ಅವರು ಈ ರೀತಿಯಾಗಿ ಹಾಡಿದ್ದಾರೆ:

ಸ್ವಾರಿ ಹೊರಡಲು ಛತ್ರ, ಭೇರಿ, ನಿಸ್ಸಾಳಗಳು
ಭೋರೆಂಬ ಭೋಂಕಾಳೆ ಹರಿಯೆ
ಧೀರ ರಾಹುತರಾಣ್ಮ ಭಾರಿ ಪರಿವಾರದಹಂ-
ಕಾರಭಾರವ ತೊರೆದೆ ಹರಿಯೆ

ಸಂಪತ್ತು ಹಾಗು ಅಧಿಕಾರದ ಜೊತೆಗೆ ಕನಕದಾಸರಿಗೆ ಚೆಲುವಾದ ರೂಪವೂ ಇದ್ದಿರಬಹುದು. ಅವರ ಎರಡು ಕೀರ್ತನೆಗಳಲ್ಲಿ ಇದು ವ್ಯಕ್ತವಾಗುತ್ತದೆ:

(೧) ಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನು
ಚೆಲುವ ಕನಕಪ್ಪ ಕುಣಿದಾನ್ ಮ್ಯಾ.

(೨) ಮದರೂಪು ಬಿಡಿಸಿ ಸನ್ಮುದರೂಪು ಧರಿಸೆಂದು
ಹೃದಯದೊಳು ನೀ ನಿಂತೆ ಹರಿಯೆ.

ಇನ್ನು  ಕನಕದಾಸರ ಕೀರ್ತನೆಗಳ ಶೈಲಿಯನ್ನು ಗಮನಿಸೋಣ. ಅವರ ಅನೇಕ ಕೀರ್ತನೆಗಳಲ್ಲಿ ಪಾಂಡಿತ್ಯ ಎದ್ದು ಕಾಣುತ್ತದೆ. ಪುರಂದರದಾಸರ ಕೀರ್ತನೆಗಳಲ್ಲಿ ಕಾಣುವ ಸರಳತೆ ಕನಕದಾಸರ ಕೀರ್ತನೆಗಳಲ್ಲಿ ಇಲ್ಲ. ಮೋಹನತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ, ರಾಮಧಾನ್ಯಚರಿತ್ರೆ ಇವುಗಳಂತೂ ಪಂಡಿತರಿಗಾಗಿಯೇ ರಚಿತವಾದ ಕೃತಿಗಳಂತಿವೆ. ಅರ್ಥಾತ್ ಕನಕದಾಸರಲ್ಲಿ ಪಾಂಡಿತ್ಯವಿತ್ತು. ಈ ಪಾಂಡಿತ್ಯದ ಅಹಮಿಕೆಯೂ ಅವರಲ್ಲಿ ಮನೆ ಮಾಡಿರಬಹುದು.  

ಸಂಪತ್ತು,ಅಧಿಕಾರ, ರೂಪ, ಪಾಂಡಿತ್ಯ ಹಾಗು ಯೌವನ ಇವೆಲ್ಲ ಒಂದುಗೂಡಿದ ವ್ಯಕ್ತಿಗೆ ಅಹಂಕಾರ ಬಾರದಿದ್ದೀತೆ? ಅಲ್ಲದೆ ಆ ಕಾಲದ ಸರ್ವಾಧಿಕಾರಿ ಪುರುಷಪ್ರಧಾನ ವ್ಯವಸ್ಥೆಯಲ್ಲಿ, ಗಂಡಸಾಗಿರುವದೇ ಒಂದು ದೊಡ್ಡ ಅಹಮಿಕೆ.  ಅಹಂಕಾರಕ್ಕೆ ಕಾರಣವಾಗಬಹುದಾದ ಈ ಎಲ್ಲ ಅಂಶಗಳು ಇದ್ದರೂ ಸಹ, ಕನಕನಾಯಕರ ಮನಸ್ಸು ಸಮಾಜದ ಉದ್ಧಾರಕ್ಕಾಗಿ ಮಿಡಿಯುತ್ತಿರಬಹುದು. ಅವರು ದಾಸರಾದ ಬಳಿಕ ರಚಿಸಿದ ಕೀರ್ತನೆಗಳಲ್ಲಿ ಕಾಣುವ ಸಾಮಾಜಿಕ ಕಳಕಳಿಯು ಅವರ ಪೂರ್ವಜೀವನದಲ್ಲಿಯೂ ಇದ್ದಿರಲೇಬೇಕು. ಇವೆಲ್ಲ ಅಂಶಗಳು ಅವರ ಒಟ್ಟು ಅಹಂಸಂಜ್ಞೆಯ ಭಾಗಗಳಾಗಿವೆ. ಇಷ್ಟೆಲ್ಲ ಸಂಕೀರ್ಣ ವ್ಯಕ್ತಿತ್ವವಿದ್ದ ಹಾಗು ಸಮಾಜದಲ್ಲಿ ಸಾಕಷ್ಟು ಬೆಲೆ ಇದ್ದ ಕನಕನಾಯಕರಿಗೆ ಅಹಂಸಂಜ್ಞೆಯ ಜೊತೆಗೆ ಕಿಂಚಿತ್ತಾದರೂ ಅಹಂಕಾರವಿದ್ದರೆ ಆಶ್ಚರ್ಯವಿಲ್ಲ.  

ಪರಮಾತ್ಮನೆಂದರೆ ಒಂದು ಅನಂತಸಮುದ್ರವಿದ್ದಂತೆ. ಒಂದು ನೀರಗುಳ್ಳೆಯು ಎಷ್ಟು ಉಬ್ಬಿದರೇನು, ಅನಂತಸಮುದ್ರವಾಗಲು ಸಾಧ್ಯವಾದೀತೆ? ಸಮುದ್ರವಾಗಲು ಅರ್ಥಾತ್ ಮೋಕ್ಷ ಪಡೆಯಲು ಈ ನೀರಹನಿಗೆ ಒಂದೇ ಮಾರ್ಗವಿದೆ. ಸೀಮಿತವಾದ ತನ್ನತನವನ್ನು ತ್ಯಜಿಸಿ ಸೀಮೆಯಿಲ್ಲದ ಸಮುದ್ರದಲ್ಲಿ ಕರಗಿ ಹೋಗುವದೇ ಆ ಮಾರ್ಗ. ಅದಕ್ಕೆ ಭಗವಂತನ ಅನುಗ್ರಹವೂ ಅವಶ್ಯ. ಭಗವಂತನ ಅನುಗ್ರಹಕ್ಕೆ ಸ್ವಂತ ಸಾಧನೆಯೂ ಅತ್ಯವಶ್ಯ.ಆದರೆ ಭಗವಂತನ ಅನುಗ್ರಹವೆಂದರೆ ಲೌಕಿಕ ಸುಖದ ಹರಣವೆಂದೇ ಅರ್ಥ. ‘ನನ್ನ ಭಕ್ತರಿಂದ ನಾನು ಎಲ್ಲವನ್ನೂ ಅಪಹರಿಸುವೆ!’ ಎಂದು ಶ್ರೀಕೃಷ್ಣನೇ ಹೇಳಿಲ್ಲವೆ? ಕನಕನಾಯಕರನ್ನೂ ಸಹ ಶ್ರೀಕೃಷ್ಣನು ಅವಮಾನಕ್ಕೆ ಒಳಪಡಿಸಿದನು. ಅವರ ದರ್ಪ ಹಾಗು ಅಹಂಕಾರ ಚೂರು ಚೂರಾಗುವಂತಹ ಸನ್ನಿವೇಶವನ್ನು ತಂದನು. ರಣಶೂರರಾದ ಕನಕನಾಯಕರು ಕಾಳಗವೊಂದರಲ್ಲಿ ಪರಾಜಿತರಾದರು. ಅದರ ವರ್ಣನೆಯನ್ನು ಅವರು ಹೀಗೆ ಮಾಡಿದ್ದಾರೆ:

ಅರಿಗಳೂ ದಂಡೆತ್ತಿ ಬರಲು ನಾನವರೊಡನೆ
ಪರಿಪರೀ ಹೋರಾಡುತಿರೆ ಹರಿಯೆ
ದುರುಳರೆನ್ನ ಜಯಿಸಿ, ಹರಿದಟ್ಟಿ ಬಂದೆನ್ನ
ಧರೆಗುರುಳಿಸಿದರೊ ಹರಿಯೆ.

ಇಷ್ಟೇ ಅಲ್ಲ, ಕನಕನಾಯಕರು ಮೃತ್ಯುಮುಖವನ್ನೇ ಕಂಡರು:

ರಣದೊಳಗೆ ಅಂಗಾಂಗ ಖಂಡತುಂಡಾಗಿ ಪ್ರತಿ-
ರಣವನುತ್ತರಿಸಿ ಮರಣವ ತಾಳಿರೆ
ಪ್ರಣವಗೋಚರ ನೀನು ಗೋಚರಿಸಿ ಬಂದೆನ್ನ
ಹೆಣಕೆ ಪ್ರಾಣವ ಪ್ರಯೋಗಿಸಿದಂತರಾತ್ಮ

 ಈ ಆಘಾತದಿಂದ ಕನಕನಾಯಕರಲ್ಲಿ ಇದ್ದ ಅಹಂಕಾರ, ಅಹಂಸಂಜ್ಞೆ ಎಲ್ಲವೂ ಕರಗಿ ಹೋದವು.
‘ತನು ನಿನ್ನದು, ಜೀವನ ನಿನ್ನದು, ರಂಗಾ’ ಎನ್ನುವದು ಅವರಿಗೆ ಹೊಳೆಯಿತು. ಆ ಅರಿವಿನಿಂದ ಕನಕನಾಯಕರು ಕನಕದಾಸರಾದರು; ಲೌಕಿಕದ ಪ್ರತಿಷ್ಠೆಯನ್ನು ಬಿಟ್ಟು ಅಲೌಕಿಕದ ಸಾಧನೆಗೆ ಹೊರಳಿದರು. (ರಶಿಯನ್ ವರ್ತನಾವಿಜ್ಞಾನಿ ಪಾವ್ಲೋವನ ಸಂಶೋಧನೆಗಳನ್ನು ಇಲ್ಲಿ ನೆನಪಿಸಿಕೊಳ್ಳಬೇಕು.)

ನವ್ಯಕವಿ ಗೋಪಾಲಕೃಷ್ಣ ಅಡಿಗರು ತಮ್ಮ ‘ಭೂಮಿಗೀತೆ’ ಕವನದಲ್ಲಿ ಹೀಗೆ ಹೇಳಿದ್ದಾರೆ:
‘ತೆಗೆದುಕೋ ನೀ ಕೊಟ್ಟ ವಸ್ತ್ರವಿಲಾಸ,
ಈ ಶರಟು, ಈ ಶರಾಯಿ,
ಈ ಭಗ್ನ ಜೋಪಡಿಯೂ ನಿನ್ನದೇ,
ಬತ್ತಲಾಗದೆ ಬಯಲು ಸಿಕ್ಕದಿಲ್ಲಿ!’

ಕನಕನಾಯಕರು ತಮ್ಮ ರೂಪ, ಶೌರ್ಯ, ಸಂಪತ್ತು ಹಾಗು ಅಧಿಕಾರದ ವಸ್ತ್ರವಿಲಾಸವನ್ನು ಅಂದರೆ ಅಹಂಸಂಜ್ಞೆಗಳನ್ನು ಕಳೆದುಕೊಂಡು ದಾಸರಾದರು. ಬತ್ತಲಾದ ಅವರು ಬಯಲಿನಲ್ಲಿ ಅಡಗಿದ ಚೈತನ್ಯರೂಪನ ಹುಡುಕುವಿಕೆಯಲ್ಲಿ ನಿರತರಾದರು. ಆದರೆ ಅವರ ಎಲ್ಲ ಅಹಂಸಂಜ್ಞೆಗಳು ಕರಗಿ ಹೋದವೆ? ಕೆಲವು ಅಹಮಿಕೆಗಳು ತುಂಬ ಸೂಕ್ಷ್ಮವಾಗಿರುತ್ತವೆ. ಅವುಗಳಲ್ಲಿ ಒಂದು ಪಾಂಡಿತ್ಯದ ಅಹಮಿಕೆ.
‘‘ವರಕವಿಗಳ ಮುಂದೆ ನರಕವಿಗಳು ವಿದ್ಯೆ ತೋರಬಾರದು’ ಎನ್ನುವ ಅವರ ರಚನೆಯನ್ನು ಗಮನಿಸಿರಿ. ಇಲ್ಲಿ ‘ವರಕವಿ’ ಎಂದು ಅವರು ತಮ್ಮನ್ನು ತಾವೇ ಕರೆದುಕೊಳ್ಳುತ್ತಿದ್ದಾರೆ.

ಎರಡನೆಯದಾಗಿ ಅವರಿಗೆ ಸಮಾಜಸುಧಾರಕ ಎನ್ನುವ ಅಹಂಪ್ರಜ್ಞೆ  ಉಳಿದುಕೊಂಡಿರಬಹುದು.
ಕನಕದಾಸರು ತಮ್ಮ ಸುತ್ತಲಿನ ಜನರಿಗೆ, ವಿಶೇಷತಃ ಸಾಮಾಜಿಕವಾಗಿ ಕೆಳಸ್ತರದಲ್ಲಿ ಬದುಕುತ್ತಿರುವ ಜನರಿಗೆ ಹತ್ತಿರವಾಗಿ, ಅವರನ್ನು ಮೇಲೆತ್ತಲು, ಅವರಲ್ಲಿ ಘನತೆಯನ್ನು ತುಂಬಲು ಪ್ರಯತ್ನಿಸಿದವರು, ಆ ಜನರ ಆಡುಮಾತಿನಲ್ಲಿಯೇ ಹಾಡಿದವರು. ಇದರ ಉದಾಹರಣೆ ಎಂದು ಒಂದು ಗೀತೆಯನ್ನು ಭಾಗಶಃ (ಅಂದರೆ ಒಂದು ನುಡಿಯನ್ನು ಮಾತ್ರ) ಗಮನಿಸೋಣ:

ದ್ಯಾವಿ ನಮ್ಮ ದ್ಯಾವರು ಬಂದರು ಬನ್ನಿರೆ ||ಪಲ್ಲ||

ಕೆಂಗಣ್ಣ ಮೀನನಾಗಿ ನಮ್ಮ ರಂಗ
ಗುಂಗಾಡಿ ಸೋಮನನ್ನ ಕೊಂದಾನ್ ಮ್ಯಾ
ಗುಂಗಾಡಿ ಸೋಮನ ಕೊಂದು ವೇದವನು
ಬಂಗಾರದೊಡಲನಿಗಿತ್ತಾನ್ ಮ್ಯಾ

ಅಕ್ಕಿಯನ್ನು ಸವರ್ಣೀಯರಿಗೆ ಹಾಗು ರಾಗಿಯನ್ನು ಸಾಮಾಜಿಕವಾಗಿ ಕೆಳಸ್ತರದಲ್ಲಿದ್ದವರಿಗೆ ಹೋಲಿಸಿ ಅವರು ಬರೆದ ಗೀತೆಯೂ ಸಹ ತುಂಬ ಪ್ರಸಿದ್ಧವಿದೆ. ‘ರಾಮಧಾನ್ಯ ಚರಿತೆ’ ಎನ್ನುವ ಈ ದೀರ್ಘ ಗೀತೆಯಲ್ಲಿ ಕಪ್ಪು ವರ್ಣದ ರಾಗಿಗೆ ಹಾಗು ಬಿಳಿಯ ವರ್ಣದ ಅಕ್ಕಿಗೆ ಶ್ರೇಷ್ಠತೆಯ ವಿಷಯವಾಗಿ ವಾಗ್ವಾದ ಜರಗುತ್ತದೆ. ಈ ವಾದವನ್ನು ಬಗೆಹರಿಸಲೆಂದು ಭಗವಂತನು ಅಕ್ಕಿ ಹಾಗು ರಾಗಿ ಇವೆರಡನ್ನು ಕೆಲ ಅವಧಿಗೆ ಮುಚ್ಚಿ ಇಟ್ಟಾಗ ಅಕ್ಕಿ ಹಾಳಾಗಿರುತ್ತದೆ, ರಾಗಿ ಸರಿಯಾಗಿಯೇ ಇರುತ್ತದೆ. ಇದು ರಾಗಿಯ ಅಂದರೆ ಕಪ್ಪು ವರ್ಣದ ವಿಜಯದ ಸಂಕೇತ. ಅಲ್ಲದೆ ‘ರಾಗಿ’ ಎನ್ನುವದು ‘ರಾಘವ’ನ (--ಅವನೂ ಶ್ಯಾಮಲಕಾಯನೇ!--) ಮೊಟಕು ಹೆಸರೂ ಹೌದು.

ಸಮಾಜಸುಧಾರಕರಷ್ಟೇ ಅಲ್ಲ, ಕನಕದಾಸರು ಸಾಮಾಜಿಕ ಆಂದೋಲನಕಾರರೂ ಆಗಿದ್ದರು. ೧೨ನೆಯ ಶತಮಾನದಲ್ಲಿ ಜರುಗಿದ ಶರಣಚಳುವಳಿಯು ಆಢ್ಯವ್ಯವಸ್ಥೆಯ ವಿರುದ್ಧ ಹೋರಾಡಿತು. ವಿಜಯನಗರದ ಕಾಲದಲ್ಲಿ ಇದೇ ಶರಣರು ತಾವೇ ಆಢ್ಯತೆಯ ಪೋಷಕರಾದರು. ಈ ಸಮಯದಲ್ಲಿ ಧಾರ್ಮಿಕ ಹಾಗು ಸಾಮಾಜಿಕ ಆಢ್ಯತೆಯ ವಿರುದ್ಧ ಕನಕದಾಸರು ಹೋರಾಟ ನಡೆಸಿದರು. ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ, ಬಲ್ಲಿರಾ? ಎನ್ನುವ ಅವರ ಗೀತೆ ಅವರ ಹೋರಾಟಕ್ಕೆ ಒಂದು ಉತ್ತಮ ನಿದರ್ಶನವಾಗಿದೆ. ಇದಕ್ಕೂ ಪೂರ್ವದಲ್ಲಿ ತಮಿಳುನಾಡಿನಲ್ಲಿ ಶ್ರೀ ರಾಮಾನುಜಾಚಾರ್ಯರೂ ಸಹ ಜಾತಿವ್ಯವಸ್ಥೆಯನ್ನು ಧಿಕ್ಕರಿಸಿದ್ದರು. ಇದರಿಂದಾಗಿ ಅವರು ತಮಿಳುನಾಡಿನಿಂದ ಕರ್ನಾಟಕಕ್ಕೆ ಓಡಿ ಬರಬೇಕಾಯಿತು. ರಾಮಾನುಜಾರ್ಯರ ಪ್ರಭಾವವೂ ಕನಕದಾಸರ ಮೇಲೆ ಆಗಿದೆ.

ಸೋದೆಮಠದ ವಾದಿರಾಜರು ಕನಕದಾಸರ ಗಾಢ ಸ್ನೇಹಿತರಾಗಿದ್ದು, ಕನಕದಾಸರಿಗಾಗಿ ಉಡುಪಿಯ ಶ್ರೀಕೃಷ್ಣಮಂದಿರದ ಹಿಂಭಾಗದಲ್ಲಿ ಒಂದು ಕುಟೀರವನ್ನು ಕಟ್ಟಿಸಿಕೊಟ್ಟಿದ್ದಾಗಿ ಹೇಳಲಾಗುತ್ತದೆ.  ಕನಕದಾಸರು ಅಲ್ಲಿ ಕೃಷ್ಣದರ್ಶನಕ್ಕಾಗಿ ಮಾಡಿದ ಯತ್ನದ ಬಗೆಗೆ ಒಂದು ಮಾತನ್ನು ಹೇಳಬೇಕು. ಖ್ಯಾತ ನಾಟಕಕಾರ ಶ್ರೀ ವ್ಯಾಸ ದೇಶಪಾಂಡೆಯವರ ಅಭಿಮತದ ಮೇರೆಗೆ ಇದು ಕನಕದಾಸರ ವೈಯಕ್ತಿಕ ಯತ್ನ ಮಾತ್ರವಲ್ಲ ;  ಇದು ಅವರ ‘ಮಂದಿರ ಪ್ರವೇಶ’ದ ಸಾಮಾಜಿಕ ಆಂದೋಲನದ ಒಂದು ಭಾಗವಾಗಿತ್ತು. ಶ್ರೀ ವ್ಯಾಸ ದೇಶಪಾಂಡೆಯವರು ಕನಕದಾಸರನ್ನು ಭಕ್ತ ಹಾಗು ಸಮಾಜಸುಧಾರಕ ಎನ್ನುವ ಎರಡೂ ನೋಟಗಳಿಂದ ಪರಿಗಣಿಸಿ ಬಯಲು ಆಲಯ ಎನ್ನುವ ನಾಟಕವನ್ನು ಬರೆದಿದ್ದಾರೆ. [ ಬಯಲು ಎಂದರೆ ಸಾಮಾನ್ಯ ಜನತೆ ಹಾಗು ಆಲಯ ಎಂದರೆ ವ್ಯವಸ್ಥೆ ಎನ್ನುವ ಶ್ಲೇಷೆ ಇಲ್ಲಿದೆ.]

ಕನಕದಾಸರದು ತುಂಬ ಸಂಕೀರ್ಣ ವ್ಯಕ್ತಿತ್ವ. ಅವರ ಬಾಹ್ಯಪ್ರಜ್ಞೆಯಲ್ಲಿ, ಅಂತಃಪ್ರಜ್ಞೆಯಲ್ಲಿ ಹಾಗು ಸುಪ್ತಪ್ರಜ್ಞೆಯಲ್ಲಿ ಅನೇಕ ಸೂಕ್ಷ್ಮ ಅಹಂಸಂಜ್ಞೆಗಳು  ಕೂಡಿಕೊಂಡಿದ್ದವು. ಅವರಲ್ಲಿ ಪಾಂಡಿತ್ಯ ಹಾಗು ಸಮಾಜಸುಧಾರಣೆಯ ಸೂಕ್ಷ್ಮ ಅಹಮಿಕೆ ಉಳಿದುಕೊಂಡಿರಬಹುದು ಭಗವಂತನ ದರ್ಶನ ಲಭಿಸಬೇಕಾದರೆ ಅವರು ಇವುಗಳನ್ನು ದಾಟಿ ಹೋಗುವದು ಅವಶ್ಯವಾಗಿತ್ತು. ಅದನ್ನು ಅವರು ಸಾಧಿಸಿದರು. ‘ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ’ ಎಂದು ಕನಕದಾಸರು ಮೊರೆಯಿಟ್ಟಾಗ, ಭಗವಂತನ ಅನುಗ್ರಹವಾಗದೆ ‘ಅಂತರಂಗದ ಬಾಗಿಲು ತೆರೆಯುವದಿಲ್ಲ’, ಅದಕ್ಕಾಗಿ ತಾನು ತನ್ನೆಲ್ಲ ಅಹಂಸಂಜ್ಞೆಗಳನ್ನು ತೊರೆಯಬೇಕು ಎನ್ನುವದು ಕನಕದಾಸರಿಗೆ ಹೊಳೆದಿರಬೇಕು.
ಉಳಿದೆಲ್ಲ ಅಹಂಪ್ರಜ್ಞೆಗಳು ಕರಗಿ ಹೋಗಿ ಕೊನೆಗೊಮ್ಮೆ ಅವರಲ್ಲಿ ದಾಸಪ್ರಜ್ಞೆ ಮಾತ್ರ ಉಳಿದುಕೊಂಡಿತು. ಇಲ್ಲಿಗೆ ಕನಕದಾಸರ ‘ನಾನು’ ಹೋಯಿತು. ಕನಕದಾಸರು ಕೃತಾರ್ಥರಾದರು.

[ಟಿಪ್ಪಣಿ:
(I) ಅಲ್ಲಮಪ್ರಭುಗಳ ವಚನವೊಂದರಲ್ಲಿ ‘ಗುಹೇಶ್ವರ ಸತ್ತು ನಾನು ಉಳಿದೆ’ ಎನ್ನುವ ಸಾಲು ಬರುತ್ತದೆ.
ತುಂಬ ಸ್ವಾರಸ್ಯಕರ ಮಾತಿದು. ದೇವರು ಹಾಗು ಭಕ್ತ ಎನ್ನುವ ಭೇದವು ಇರುವ ತನಕ ಇದು ದ್ವೈತ. ಈ ದ್ವೈತ ಅಳಿಸಿ ಹೋದಾಗ ‘ದೇವರು ಸಾಯುತ್ತಾನೆ’! ಭಕ್ತನಷ್ಟೇ ‘ನಾನು’ ಆಗಿ ಉಳಿದು ಕೊಳ್ಳುತ್ತಾನೆ.
ಇದು ‘ಸತ್-ಚಿತ್-ಆನಂದರೂಪ’ವಾದ ನಾನು!

(II) ಕನಕದಾಸರ ಪ್ರಾರ್ಥನೆಯನ್ನು ಮನ್ನಿಸಿದ ಶ್ರೀಕೃಷ್ಣನು ಗೋಡೆಯಲ್ಲಿ ಬಿರಿದ ಕಿಂಡಿಯೊಂದರ ಮೂಲಕ ಅವರಿಗೆ ದರ್ಶನವಿತ್ತನು ಎಂದು ಹೇಳಲಾಗುತ್ತದೆ. ಈ ಘಟನೆಯ ಬಗೆಗೆ ನಾಲ್ಕು ಸಂಭಾವ್ಯತೆಗಳಿವೆ:
(೧) ಈ ಘಟನೆ ನಡದೇ ಇಲ್ಲ. ಇದು ಕೇವಲ ದಂತಕಥೆ.
(೨) ಈ ಪವಾಡ ನಿಜವಾಗಿಯೂ ನಡೆಯಿತು.
(೩) ಕನಕದಾಸರ ಪರಾಮನೋಶಕ್ತಿಯ ಬಲದಿಂದ ಗೋಡೆಯಲ್ಲಿ ಕಿಂಡಿಯಾಯಿತು ಹಾಗು ಕೃಷ್ಣವಿಗ್ರಹವು ಆ ದಿಕ್ಕಿಗೆ ತಿರುಗಿತು.
(೪) ಕನಕದಾಸರು ಆ ಸಮಯದಲ್ಲಿ, ವ್ಯಾಸರಾಯರಿಂದ ಹಾಗು ವಾದಿರಾಜರಿಂದ ಮನ್ನಣೆ ಪಡೆದ ಗಣ್ಯ ಹರಿದಾಸರಾಗಿದ್ದರು. ಅವರಿಗೆ ಮಂದಿರದಲ್ಲಿ ಪ್ರವೇಶ ಕೊಡಲೂ ಆಗದೆ, ಬಿಡಲೂ ಆಗದೆ, ಮಠದ ಅಧಿಕಾರಿಗಳು ಮಧ್ಯದ ಮಾರ್ಗವೊಂದನ್ನು ಹುಡುಕಿದರು. ಅರ್ಥಾತ್, ಕನಕದಾಸರಿಗೆ ಕಿಂಡಿಯ ಮೂಲಕ ವಿಗ್ರಹದರ್ಶನ ಮಾಡಿಸಿದರು!

(III) ಕನಕದಾಸರ ಬಗೆಗೆ ಉಪಯುಕ್ತ ಮಾಹಿತಿ ನೀಡಿದ ಶ್ರೀ ವ್ಯಾಸ ದೇಶಪಾಂಡೆಯವರಿಗೆ ನಾನು ಕೃತಜ್ಞನಾಗಿದ್ದೇನೆ.]

40 comments:

Swarna said...

ತುಂಬಾ ಚೆನ್ನಾಗಿದೆ ಸರ್.
ದಾಸರ ಕೆಲವು ಕೀರ್ತನೆಗಳನ್ನೂ ಅರ್ಥೈಸುವಿರಾ ?
ಧನ್ಯವಾಗಳು
ಸ್ವರ್ಣ

ಚುಕ್ಕಿಚಿತ್ತಾರ said...

ಕಾಕ..
ಕನಕದಾಸರ ಬಗೆಗೆ ಅನೇಕ ವಿಚಾರಗಳನ್ನು ಸರಳವಾಗಿ ವಿವರಿಸಿ ತಿಳಿಸಿದ್ದೀರಿ. ಅವರ ಬಗೆಗಿನ ದ೦ತಕಥೆಗಳಲ್ಲದೇ ಮತ್ತೆ ಹೆಚ್ಚಿಗೆ ತಿಳಿದಿರಲಿಲ್ಲ.. ತಮಗೆ ತು೦ಬಾ ಧನ್ಯವಾದಗಳು.

hallimanasublogspot.com said...

Sunnath avare Tumba Dhanyavadagalu - Halli

ಸಿಂಧು sindhu said...

ಆಹಾ! ಪ್ರಿಯ ಸುನಾಥ,

ಇಂತಹ ಒಂದು ರಸಪಾಕಕ್ಕಾಗಿ ಕಾಯುತ್ತ ಇದ್ದೆ. ಒಂದು ಒಣ ದಿನದಲ್ಲಿ ಎಂತಹ ರಸೋತ್ಪತ್ತಿ!

ಕನಕದಾಸರ ಬಗೆಗೆ ವಿಶಿಷ್ಟ ವಿಷಯಗಳನ್ನು ತಿಳಿಸಿದ್ದೀರಿ. ಸಂಶೋಧನ್ ಪ್ರಬಂಧಗಳಲ್ಲಿ ಮಾತ್ರ ಉಳಿದುಹೋಗಬಹುದಾದ ಈ ವಿಷಯವನ್ನು ಇಷ್ಟು ಮಧುರವಾಗಿ ಬರೆದಿದ್ದೀರಿ. ನಾವು ಅವಸರದ ಓದುಗರಿಗೆ ಇದು ವರದಾನ.

ಶ್ರೀ ವ್ಯಾಸ ದೇಶಪಾಂಡೆಯವರ ಬಗ್ಗೆ ಬರೆದಿದ್ದು ತುಂಬ ಒಳ್ಳೆಯ ಕೆಲಸ.

ಈ ಸಾಲು ಮತ್ತೆ ಮತ್ತ ಓದುತ್ತಾ ಇದೀನಿ. "ಈ ದ್ವೈತ ಅಳಿಸಿ ಹೋದಾಗ ‘ದೇವರು ಸಾಯುತ್ತಾನೆ’! ಭಕ್ತನಷ್ಟೇ ‘ನಾನು’ ಆಗಿ ಉಳಿದು ಕೊಳ್ಳುತ್ತಾನೆ. ಇದು ‘ಸತ್-ಚಿತ್-ಆನಂದರೂಪ’ವಾದ ನಾನು!"

ಹೊಸ ಕಾಣ್ಕೆಗಳ ಶೇಂಗಾವನ್ನು ಸಾಹಿತ್ಯದ ಬೆಲ್ಲದಲ್ಲಿ ಅಚ್ಚಿಳಿಸಿದ ಚಿಕ್ಕಿಯ ರುಚಿ! ಆಹಾ!

ಶರಣು ನಿಮಗೆ.

ಪ್ರೀತಿಯಿಂದ,
ಸಿಂಧು

Badarinath Palavalli said...

ಉತ್ತಮ ಲೇಖನ ಸಾರ್.

ಅಹಮಿಕೆ, ಸಾಮಾಜಿಕ ಅಹಂಸಂಜ್ಞೆ ಮತ್ತು ಲಿಂಗ ಕುರುಹುಗಳ ಬಗ್ಗೆ ಒಳ್ಳೆಯ ವಿಶ್ಲೇಷಣೆ ಕೊಟ್ಟಿದ್ದೀರಿ.

ಕನಕದಾಸರ ಪೂರ್ವಾಶ್ರಮ, ಕನಕನಾಯಕನ ಅಹಂಸಂಜ್ಞೆಯನ್ನು ಅವನ ಕೆಲ ಕೀರ್ತನೆಗಳ ಮುಖೇನ ಗುರುತಿಸಿದ್ದೀರಿ.

ಪಾಂಡಿತ್ಯದ ಅಹಂಕಾರ! ಮತ್ತು ಕನಕ ಪುರಂದರ ಶೈಲಿಯಲ್ಲಿನ ವ್ಯತ್ಯಾಸಗಳು ಚೆನ್ನಾಗಿ ಮೂಡಿವೆ.

ಪಾವ್ಲೋನ ಬಗ್ಗೆ ಪುಸ್ತಕಗಳು ಹುಡುಕಿ ಓದುತ್ತೇನೆ ಸುನಾತ್ ಸಾರ್.

ಬತ್ತಲಾಗದೆ ಬಯಲು ಸಿಗದಿಲ್ಲಿ, ಎನ್ನುವಲ್ಲೇ ಕವಿಯ ಮ್ಹಮಿಕೆಯ ಸುಳುಹು ಇದೆ ಸಾರ್. ನನಗೂ ಇಂತಹ ಕೊಬ್ಬು ಸ್ವಲ್ಪ ಮಟ್ಟಿಗೆ ಇದೆ!

ಕುಲ ಕುಲ ಕುಲವೆಂದು ಪ್ರಸಿದ್ಧ ಗೀತೆಯ ಹಿನ್ನಲೆ ಈಗ ನನಗೆ ಅರಿವಾಯಿತು.

ಟಿಪ್ಪಣಿಗಳನ್ನು ನಾನು ಕಾಪಿ ಮಾಡಿಟ್ಟುಕೊಂಡಿದ್ದೇನೆ. ಇವು ನನ್ನ ಮುಂದಿನ ಓದಿಗೆ ದಾರಿದೀಪ.

Dr.D.T.Krishna Murthy. said...

ಸುನಾತ್ ಸರ್;ಮಾಹಿತಿ ಪೂರ್ಣ ಲೇಖನ.ಧನ್ಯವಾದಗಳು.

sunaath said...

ಸ್ವರ್ಣಾ ಅವರೆ,
ದಾಸರ ಅನುಗ್ರಹವಿದ್ದರೆ ಸಾಧ್ಯವಾದೀತು!

sunaath said...

ವಿಜಯಶ್ರೀ,
ವಾಸ್ತವ ಚರಿತ್ರೆಯನ್ನು ದಂತಕತೆಗಳು ಮಸಕು ಮಾಡುತ್ತವೆ. ಇದು ಭಾರತೀಯರ ದೌರ್ಬಲ್ಯವೇನೊ!

sunaath said...

ಹಳ್ಳಿಮನಸು,
ನಿಮಗೆ ಧನ್ಯವಾದಗಳು.

sunaath said...

ಸಿಂಧು,
ನಿಮಗೆ ‘ಚಿಕ್ಕಿ’ ರುಚಿಸಿತಲ್ಲ! ಧನ್ಯೋಸ್ಮಿ!

sunaath said...

ಬದರಿನಾಥರೆ,
ಮನೋವಿಜ್ಞಾನದ ಒಂದು ಭಾಗವಾದ ವರ್ತನಾವಿಜ್ಞಾನದಲ್ಲಿ ರಶಿಯನ್ ವಿಜ್ಞಾನಿ ಪಾವ್ಲೋವನು ಮಹತ್ವದ ಸಂಶೋಧನೆಗಳನ್ನು ಮಾಡಿದ್ದಾನೆ. ಆ ಮಾಹಿತಿಯು ತುಂಬ ಉಪಯುಕ್ತವಾಗುವದರಲ್ಲಿ ಸಂದೇಹವಿಲ್ಲ.

sunaath said...

ಕೃಷ್ಣಮೂರ್ತಿಯವರೆ,
ಲೇಖನಕ್ಕೆ ಸ್ಪಂದಿಸಿ, ಪ್ರತಿಕ್ರಿಯಿಸಿದ್ದೀರಿ. ಧನ್ಯವಾದಗಳು.

Subrahmanya said...

ಕಾಕಾ,

ತುಂಬ ಚೆನ್ನಾಗಿದೆ. 'ನಾನು ಹೋದರೆ' ಎನ್ನುವುದನ್ನು 'ನಾನು' ಎಂದು ಪೂರ್ಣಗೊಳ್ಳುವ ದೇಹದ ಮತ್ತು ದೇಹೇಂದ್ರಿಯಗಳಿಂದ ಉಂಟಾಗುವ ವ್ಯಾಮೋಹವು ಹೋದರೆ ಉಳಿಯುವುದು ವೈರಾಗ್ಯ , ವಿರಾಗದಿಂದ ಮುಮುಕ್ಷುತ್ವ ಎನ್ನುವ ಅರ್ಥದಲ್ಲೂ ಹೇಳಿರಬಹುದೇ ? . ಅಹಮಿಕೆ ಅಥವಾ ಕುರುಹು ಎನ್ನುವುದು 'ನಾನು' ಎನ್ನುವ ದೇಹವನ್ನು ಸೂಚಿಸಿ ಯಾವುದೂ ಅಲ್ಲದ ನಿತ್ಯಮುಕ್ತ ನಿರ್ಗುಣ ಬ್ರಹ್ಮನನ್ನು ಸೂಚಿಸಬಹುದೆ ? . ಕನಕದಾಸರ ಕಿಂಡಿಯ ಕುರಿತಾಗಿ ವೈವಿಧ್ಯ ವಿಷಯಗಳನ್ನು ನಿಮ್ಮದೇ ಶೈಲಿಯಲ್ಲಿ ಸೊಗಸಾಗಿ ತೆರೆದಿಟ್ಟು ಮನದಟ್ಟು ಮಾಡಿದಿರಿ.
ಇಡೀ ಲೇಖನ ಸುಂದರವಾಗಿತ್ತು. ಅಲ್ಲಮಪ್ರಭುಗಳ ವಚನದಿಂದಲೂ ಒಂದೆರೆಡನ್ನು ಹೆಕ್ಕಿ ತಿಳಿಸಿಕೊಡಿ.

ಧನ್ಯವಾದಗಳು.

sunaath said...

ಸುಬ್ರಹ್ಮಣ್ಯರೆ,
ನಾನು ಎಂದರೆ ದೇಹದ ಈಷಣೆ ಹಾಗು ಅಹಮಿಕೆ ಎಂದು ಕನಕದಾಸರು ಹೇಳುತ್ತಾರೆ. ಈ ಗುಣಗಳು ಹೋದರೆ ವೈರಾಗ್ಯ ಸಿದ್ಧಿಸುವದೇನೊ ಸರಿಯೆ. ಆದರೆ ಮಧ್ವ ಸಿದ್ಧಾಂತವನ್ನು ಸ್ವೀಕರಿಸಿದ ಕನಕದಾಸರು ನಿರ್ಗುಣ ಬ್ರಹ್ಮನನ್ನು ಒಪ್ಪುತ್ತಾರೆ ಎಂದು ಅನಿಸುವದಿಲ್ಲ.

ಚಿನ್ಮಯ ಭಟ್ said...

ನಾನು ಈ ಮಾತನ್ನು ಪೀಯೂಸಿಯಲ್ಲಿ ಮಮತಾ ಮೇಡಂ ಹತ್ರ ಕೇಳಿದ್ದೆ... ಆದರೆ ಅದರ ಹಿಂದೆ ಇಂತಹ ಅರ್ಥ ಇದೆ ಅಂತಾ ಗೊತ್ತಿರ್ಲಿಲ್ಲಾ,..


ಚೆನ್ನಾಗಿದೆ....ಧನ್ಯವಾದಗಳು.

ಬನ್ನಿ ನಮ್ಮನೆಗೂ,
http://chinmaysbhat.blogspot.com/


ಇತಿ ನಿಮ್ಮನೆ ಹುಡುಗ,
ಚಿನ್ಮಯ ಭಟ್

ಮನಸು said...

ನಾನು ಹೋದರೆ ಅಬ್ಬಾ!! ಎಷ್ಟೆಲ್ಲಾ ಅರ್ಥವಿದೆ... ಕಾಕ, ತುಂಬಾ ಧನ್ಯವಾದಗಳು... ಓದುತ್ತಿದ್ದರೆ ಓದುತ್ತಲೇ ಇರಬೇಕು ಎನಿಸುತ್ತೆ ನಿಮ್ಮ ಲೇಖನ.. ನನಗೆ ಅಲ್ಲಮ ಪ್ರಭುಗಳ ವಚನ ವಿಚಾರಗಳನ್ನು ತಿಳಿಯುವ ಆಸೆಯಿದೆ.. ತುಂಬಾ ದಿನಗಳಿಂದ ನಿಮ್ಮನ್ನ ಕೇಳಬೇಕು ಎಂದೆನಿಸಿತು...

ಈಶ್ವರ said...

ಕನಕದಾಸರ ನಳ ಚರಿತ್ರೆಯನ್ನು ಮತ್ತೆ ಅವರ ಕೀರ್ತನೆಗಳನ್ನ ಓದಿದ್ದೇನೆ. ನಿಮ್ಮ ಈ ಲೇಖನ ತುಂಬಾ ಉಪಯೋಗವಾಗಿದೆ ಕಾಕಾ.
ಇನ್ನೂ ತುಂಬಾ ನಿರೀಕ್ಷೆಗಳು ..

http://bhavakirana.blogspot.com/

ಮಂಜುಳಾದೇವಿ said...

ಸುನಾಥ್ ಸಾರ್,
ಕನಕದಾಸರ ಬಗ್ಗೆ ತುಂಬಾ ಉಪಯುಕ್ತವಾದ ಲೇಖನ.ಅಭಿನಂದನೆಗಳು

ಅನಂತ್ ರಾಜ್ said...

ಕನಕದಾಸರ ಭಕ್ತಿಸಾಗರದ ಸಾರದಲ್ಲಿ ಒ೦ದಿಷ್ಟು ಹೆಕ್ಕಿ ನಮಗೂ ಬಡಿಸಿದ್ದೀರಿ. ಧನ್ಯೋಸ್ಮಿ. ಅಹ೦ಸ೦ಜ್ಞೆಯ ವಿಶ್ಲೇಷಣೆ ದಾಸರಿಗೆ ’self identity'ಯ ಬಗ್ಗೆ ಆಗಿತ್ತು ಎನ್ನುವ ತಮ್ಮ ಅಭಿಪ್ರಾಯ ಸೂಕ್ತವಾಗಿದೆ. ಅಲ್ಲಮಪ್ರಭುಗಳ "ಕುರುಹನ್ನು ಅಳಿಸುವುದು"(ದೇವನನ್ನು ಸಾಯಿಸುವುದು!)ನಿರ್ಗುಣ ಬ್ರಹ್ಮನನ್ನು ಹೊ೦ದುವತ್ತ ಸಾಗುವ ಪ್ರಯತ್ನ ಎನ್ನಬಹುದೆ? ಆದರೆ ದಾಸರ ಸ೦ದೇಶ ಹೆಸರೇ ಸೂಚಿಸುವ೦ತೆ ಈಶ-ದಾಸರ ಸ೦ಬ೦ಧವನ್ನು ತಿಳಿಸುವುದೇ ಆಗಿರಬಹುದು ಅಲ್ಲವೆ? ಅಭಿನ೦ದನೆಗಳು.

ಅನ೦ತ್

Manjunatha Kollegala said...

ಸೊಗಸಾದ ವಿಶ್ಲೇಷಣಾತ್ಮಕ ಲೇಖನ. ಹರಿದಾಸಪರಂಪರೆ ಬಹುತೇಕವಾಗಿ ದ್ವೈತ ನಿಲುವನ್ನು ಹೊಂದಿದ್ದೆಂದೂ, ಕನಕದಾಸರನ್ನು ಹರಿದಾಸಪರಂಪರೆಯ ದಿಗ್ಗಜವೆಂದೂ ಹೇಳಿಕೆಯಿದೆ. ಆದರೆ ಕನಕರ ಆಧ್ಯಾತ್ಮಿಕ ನಿಲುವುಗಳು ಬಹುತೇಕ ಒಂದು ಪಂಥಕ್ಕಾಗಲಿ ಸಂಪ್ರದಾಯಕ್ಕಾಗಲಿ ಕಟ್ಟುಬಿದ್ದುದಲ್ಲ - ಆನೆ ನೆಡೆದದ್ದೇ ದಾರಿಯೆಂಬಂತೆ. ಆದ್ದರಿಂದ ಕನ್ನಡ ಹರಿದಾಸಸಾಹಿತ್ಯದ ಪ್ರಪಂಚದಲ್ಲಿ ಒಂದು ವಿಶಿಷ್ಟ ಹೆಸರು ಕನಕದಾಸರದು. ಇಂಥ ವ್ಯಕ್ತಿತ್ವದ ಬಗ್ಗೆ ಒಂದು ಬಹುಶ್ರುತ ವಿಶ್ಲೇಷಣೆ ಕೊಟ್ಟಿದ್ದೀರಿ, ಧನ್ಯವಾದ.

sunaath said...

ಮನಸು,
ಅಲ್ಲಮ ಪ್ರಭುಗಳ ವಚನವಿವೇಚನೆ ತುಂಬ ಕಷ್ಟದ ಕೆಲಸ. ಆದರೂ ಪ್ರಯತ್ನಿಸುತ್ತೇನೆ.

sunaath said...

ಈಶ್ವರ ಭಟ್ಟರೆ,
ಕನಕದಾಸರದು ಸೊಗಸಾದ ಸಾಹಿತ್ಯ. ಮನಸ್ಸಿಗೆ ಖುಶಿಯನ್ನು ಕೊಡುವಂತಹದು. ಅಲ್ಲವೆ?

sunaath said...

ಮಂಜುಳಾದೇವಿಯವರೆ,
ಕನಕದಾಸರ ಕತೆಯು ತುಂಬ ದೊಡ್ಡದು. ಸಾಧ್ಯವಾದಷ್ಟನ್ನು ಇಲ್ಲಿ ಹಿಡಿದಿದ್ದೇನೆ. ನಿಮಗೆ ಧನ್ಯವಾದಗಳು.

sunaath said...

ಅನಂತರಾಜರೆ,
ತಮ್ಮ ಅಭಿಪ್ರಾಯ ಅತ್ಯಂತ ಸರಿಯಾಗಿದೆ. ದಾಸಸಂಪ್ರದಾಯಕ್ಕೆ ಅನುಗುಣವಾಗಿ ಕನಕದಾಸರು ಸಗುಣೋಪಾಸಕರಾದರೆ, ಅಲ್ಲಮಪ್ರಭುಗಳು ನಿರ್ಗುಣ ಪರಮಾತ್ಮ ಅದ್ವೈತಿಗಳು. ಅಕ್ಕ ಮಹಾದೇವಿ ಹಾಗು ಬಸವೇಶ್ವರರೂ ಸಹ ಸಗುಣೋಪಾಸಕರೇ! ಬಸವೇಶ್ವರರಂತೂ ಶಿವನಿಗೆ, "ಹಳೆಯ ನಾನು, ಕೆಳೆಯ ನೀನು" ಎಂದು ಹೇಳುವ ಮೂಲಕ ಶಿವ ಹಾಗು ಸೃಷ್ಟಿಯ ನಡುವಿನ ಸಂಬಂಧವನ್ನು ಅನಾದಿ ಪ್ರೇಮಿಗಳಂತೆ ರೂಪಿಸಿದ್ದಾರೆ.

sunaath said...

ಮಂಜುನಾಥರೆ,
ಬನ್ನಂಜೆ ಗೋವಿಂದಾಚಾರ್ಯರು ವಿವರಿಸುವ ಪ್ರಕಾರ, ಕನಕದಾಸರು ಮೊದಲು,
(೧) ಹರಿ, ಹರರಲ್ಲಿ ಭೇದವೆಣಿಸುತ್ತಿರಲಿಲ್ಲ. ನಂತರ,
(೨)ಶ್ರೀ ರಾಮಾನುಜಾರ್ಯರ ಮತವನ್ನು ಪರಿಗಣಿಸಿದರು ,
(೩)ಕೊನೆಯದಾಗಿ, ಮಧ್ವಸಿದ್ಧಾಂತವನ್ನು ಒಪ್ಪಿಕೊಂಡರು.
ಒಟ್ಟಿನಲ್ಲಿ, ದಾಸಕೂಟದ ಈ ಒಂಟಿ ಸಲಗ ನಡೆದದ್ದೇ ದಾರಿ ಎನ್ನುವದು ಸತ್ಯ!

Ittigecement said...

ಸುನಾಥ ಸರ್...

ಬೇಂದ್ರೆಯವರ, ಷರೀಫರ, ಕನಕದಾಸರ ...
ಹೀಗೆ ಅನೇಕರ ಕವನಗಳ ಭಾವಾರ್ಥ ವಿಶ್ಲೇಶಿಸುವ ನಿಮ್ಮ ಲೇಖನ ತುಂಬಾ ಅರ್ಥಪೂರ್ಣವಾಗಿರುತ್ತವೆ..

ನಿಮ್ಮ ಆಳವಾದ ಅಧ್ಯಯನ ನಮಗೆ ತುಂಬಾ ಉಪಯುಕ್ತ...

ಜಾತಿ ಪದ್ಧತಿ ವಿರೋಧಿಸಿ..
ಜಾತಿಯನ್ನು ಮೀರಿ ನಿಂತ ಅನೇಕ ಮಹನೀಯರಿಗೂ ಜಾತಿ" ಹಣೆ ಪಟ್ಟಿ ಕಟ್ಟಿದ್ದು ನಮ್ಮ ಸ್ವತಂತ್ರ ಭಾರತದ ಹೆಗ್ಗಳಿಕೆ...

ಅಲ್ಲವೆ?

sunaath said...

ಪ್ರಕಾಶ,
ಸ್ವತಂತ್ರ ಭಾರತವು ಜಾತಿ ಪದ್ಧತಿಯನ್ನು ಮತ್ತಷ್ಟು ಬೆಳೆಸುತ್ತಿದೆ.
ಮನೆಗೆ ಬೆಂಕಿ ಇಕ್ಕಿ, ಕೋಳಿಯನ್ನು ಬೇಯಿಸಿಕೊಳ್ಳುವ ಜನರ ಕೆಲಸ ಇದು!

ಜಲನಯನ said...

ಸುನಾಥಣ್ಣ...ನಿಜ..ದಾಸರು, ಶರಣರು ಸೂಫಿಗಳು ಸಮಾಜದ-ಮನದ ಡೊಂಕನ್ನು ತಿದ್ದಿದವರು ಸ್ವತಃ ಏನೂ ಅಲ್ಲ ಎನ್ನುವಂತಿದ್ದವರು...ತುಂಬಿದ ಕೊಡಗಳು...
ಎಂತಹಾ ಅರ್ಥಭರಿತ ವಾಕ್ಯ..."ನಾನು ಹೋದರೆ ಹೋಗಬಹುದು"
ಅರ್ಥೈಸಿಕೊಳ್ಳುವವರಿಗೆ ಬಿಟ್ಟದ್ದು...ಅವರ ಮನೋಭಾವ, ಜೀವನ ರೀತಿ ಬೆಳೆದುಬಂದ ಹಾದಿ ತಿಳಿದವರಿಗೆ...ಆಹಾ ಎಂಥಾ ದಾರ್ಶನೀಕ ಉತ್ತರ ಎನಿಸೋದು ಸಹಜ, ಅರ್ಧ ಬೆಂದವರು...ಓಹೋ ಏನು...?? ಇವ್ನೂ ಹೋಗಬಹುದು ಅಂತಾನಾ,,,>??!! ಮತ್ತೆ ಏನೂ ತಿಳಿಯದವರು...ದಾಸರೂ ಹೋಗ್ತಾರಂತೆ ಅನ್ನೋ ನಿರ್ಲಿಪ್ತತೆ ಅಥವಾ ದೈವೀರೂಪದರ್ಶಿತ ಭಾವ...
ನಮ್ಮನ್ನು ನಾವು ಎಷ್ಟು ಕಡಿಮೆಯೆಂದುಕೊಳ್ಳುತ್ತೇವೆಯೋ ಅಷ್ಟೇ ಬೆಳೆಯುವ ಸಾಧ್ಯತೆ ಇರುತ್ತದಂತೆ...
ಬಹಳ ಚನ್ನಾಗಿ ವಿವರಿಸಿದ್ದೀರಿ ಕನಕರ ಕೀರ್ತನಸಾರವನ್ನು...

KalavathiMadhusudan said...

sir kanakadaasara vicharavannu savivaravaagi tilisiruvudakkaagi dhanyavaadagalu.

sunaath said...

ಜಲನಯನ,
ನೀವು ಹೇಳುವದು ಸರಿ. ಬಸವಣ್ಣನವರಾದರೂ ಸಹ ‘ನನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎಂದು ಹೇಳಿಲ್ಲವೆ?

sunaath said...

ಕಲರವ,
ಧನ್ಯವಾದಗಳು. ಕನಕದಾಸರ ಜೀವನದ ಬಗೆಗೆ ಇನ್ನಷ್ಟು ಸಂಶೋಧನೆಯಾಗಬೇಕು. ಅವರ ಬಗೆಗೆ ನಾವು ತಿಳಿದುಕೊಂಡದ್ದು ಅತ್ಯಲ್ಪ.

ಮನಮುಕ್ತಾ said...

ಕಾಕಾ,
ಒಳ್ಳೆಯ ವಿವರಣೆ...

ನಿಮಗೆ ಹಾಗೂ ನಿಮ್ಮ ಮನೆಯವರೆಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.

sunaath said...

ಮನಮುಕ್ತಾ,
ಧನ್ಯವಾದಗಳು. ನಿಮಗೂ ಸಹ ಹಾಗು ನಿಮ್ಮ ಕುಟುಂಬವರ್ಗಕ್ಕೆ ದೀಪಾವಳಿಯ ಹಾರ್ದಿಕ ಶುಭಾಶಯಗಳು.

ರಾಘವೇಂದ್ರ ಜೋಶಿ said...

ಸುನಾಥ್ ಸರ್,
ನೀವು ಆಯ್ದುಕೊಳ್ಳುವ ವಿಷಯ ಮತ್ತು ಅವುಗಳ ವಿವರಣೆಯಲ್ಲಿ ನೀವು ತೋರುವ ಅದ್ಭುತ ತಾಳ್ಮೆ ನನ್ನಲ್ಲಿ ಕುತೂಹಲ ಹುಟ್ಟಿಸುತ್ತವೆ.ನಿಮ್ಮ ಕೈಗೆನಾದರೂ ಒಂದು ಗರಿಕೆ ಕೊಟ್ಟರೂ ಅದರ ಜಾತಿ,ಒಳಜಾತಿ,ಅದರ ಸೀಳು,ಅದು ಹ್ಯಾಗೆ ಬೆಳೆಯುತ್ತದೆ-ಇದೆಲ್ಲವನ್ನೂ ನೀವು ಒಂದು ಗಂಭೀರವಾದ ಆದರೆ ಬೋರ್ ಹೊಡೆಸದ ಫ್ರೇಮಿನಲ್ಲಿ ಕಟ್ಟಿ ಕೊಡಬಲ್ಲಿರಿ!
ಒಟ್ಟಿನಲ್ಲಿ ಬರಹದ ಮೂಲಕ ನಮ್ಮೆಲ್ಲರನ್ನೂ ನಿಮ್ಮೊಂದಿಗೆ ಬೆಳೆಸುತ್ತಿದ್ದೀರಿ..
ಧನ್ಯವಾದಗಳು.

sunaath said...

RJ,
ತಿಳಿದಂತೆ ತೋರಿದ್ದನ್ನು ಸಮಾನ ಆಸಕ್ತಿಯುಳ್ಳವರ ಜೊತೆ ಹಂಚಿಕೊಳ್ಳುವ ತವಕ ಇದು!

prabhamani nagaraja said...

ಕನಕದಾಸರನ್ನು ವಿವಿಧ ಆಯಾಮಗಳಲ್ಲಿ ಪರಿಚಯಿಸಿದ ಅರ್ಥಪೂರ್ಣ ಲೇಖನ ನೀಡಿದ್ದಕ್ಕಾಗಿ ವ೦ದನೆಗಳು ಸರ್. ನಿಮ್ಮಿ೦ದ ಇ೦ಥಾ ಲೇಖನಗಳು ಮೂಡಿಬರಲಿ ಎ೦ದು ನಿರೀಕ್ಷಿಸುತ್ತೇನೆ.

V.R.BHAT said...

ಸ್ವಾಮೀ, ನನ್ನ ಪ್ರಾಥಮಿಕ ವಿದ್ಯಾಭ್ಯಾಸದಲ್ಲಿ ಒಮ್ಮೆ ನಮ್ಮ ಶಿಕ್ಷಕರು ಹೇಳಿದ ಕಥೆ 'ನಾನು ಹೋದರೆ ಹೋಗಬಹುದು'. ಅದು ಅಂದು ನಮಗೆ ಅರ್ಥವಾಗುತ್ತಿರಲಿಲ್ಲ ; ಈಗ ಅರ್ಥವಾದರೂ 'ನಾನು' ಹೋಗಲಿಕ್ಕೆ ಲೋಕದ ಸೆಳೆತ ಪೂರ್ತಿ ಅವಕಾಶ್ ಮಾಡಿಕೊಡುವುದಿಲ್ಲ! ನನಗೆ ಗೊತ್ತಾಗದ ಹಾಗೇ ಸುಮ್ಮನೇ ಜಿರಲೆ ಸಂದಿಯಲ್ಲಿ ಸೇರಿದ ಹಾಗೇ 'ನಾನು' ಸೇರಿಕೊಳ್ಳುವುದು ಅಚ್ಚರಿ ಮೂಡಿಸುತ್ತದೆ, ಆದಷ್ಟೂ ಅದನ್ನು ದಮನಿಸಲು ಪ್ರಯತ್ನ ನಡೆದೇ ಇದೆ, ಆದರೂ ಕಷ್ಟವಪ್ಪ. ಕೀರ್ತನೆಯ ವಿವರ ಪರಿಪೂರ್ಣವಾಗಿದೆ, 'ಯಾರೂ ಇಲ್ಲದಲ್ಲಿ ತಿಂದು ಬರುವ' ಕಥೆಯನ್ನು ನಿಮ್ಮಿಂದ ಕೇಳಬಯಸುತ್ತೇನೆ, ಧನ್ಯವಾದಗಳು.

sunaath said...

ಪ್ರಭಾಮಣಿ ಮೇಡಮ್,
ಕನಕದಾಸರದು ಬಹುಮುಖೀ ಸಂಕೀರ್ಣ ವ್ಯಕ್ತಿತ್ವ. ಅವರ ವ್ಯಕ್ತಿತ್ವ ಹಾಗು ಸಾಧನೆಯ ಪೂರ್ಣ ಪರಿಚಯ ನಮಗೆ ಅಲಭ್ಯವಾಗಿದೆ. ಅವರ ಕೀರ್ತನೆಗಳ ಮೂಲಕ, ‘ಇದು ಹೀಗಿರಬಹುದು’ ಎಂದು ತಿಳಿದುಕೊಳ್ಳುವ ಪ್ರಯತ್ನವಿದು!

sunaath said...

ಭಟ್ಟರೆ,
‘ನಾನು’ ಹೋದರೆ ಉಳಿಯುವದೇನು?-- ಈ ಚಿಂತೆ ನಮ್ಮನ್ನು ಕಾಡುತ್ತದೆ. ಹೀಗಾಗಿ ನಮ್ಮ ‘ನಾನು’ ಹೋಗುವದೇ ಇಲ್ಲ!

ಸೀತಾರಾಮ. ಕೆ. / SITARAM.K said...

ತಡವಾಗಿ ಓದುತ್ತಿದೇನೆ. ಇದರ ಲಾಭ ಜೊತೆ ಸಿಗುವ ಅಡಿಟಿಪ್ಪಣೆಗಳನ್ನು ಓದುವದು. ಕನಕದಾಸರ ಪುರ್ವಾಸ್ರಮದ ಬಗ್ಗೆ ಮಾಹಿಟಿ ನೀಡುತ್ತಾ ಅಹಮ್ಮಿಕೆ ಕಳೆದುಕೊಳ್ಳುವದು ಹೇಗೆ ಎಂಬ ನಿದರ್ಶ ಮತ್ತು ಎಲ್ಲ ವಿಚರಗಲ್ ಸೂಕ್ತ ವಿವರಣೆ ನೀಡಿ ನಮ್ಮ ಜ್ಞಾನವನ್ನು ಹೆಚ್ಚಿಸಿದ್ದಿರಾ... ಧನ್ಯವಾದಗಳು.