Thursday, November 24, 2011

ಚಿತ್ತಿಯ ಮಳೆಯ ಸಂಜೆ..........ದ.ರಾ.ಬೇಂದ್ರೆ


ಕುರುಡು ಪ್ರೀತಿಯ ಹಾಂಗ
ಕುರುಡು ಚಿತ್ತಿಯ ಮಳೆಯೆ
ಮುಗುಳು ನಗಿ ಸುತ್ತುರುಳಿಸಿ
ಸುರದsತ್ತ ಸುರದಾವ ||೧||

ಎತ್ತೇನೋ ಬಿತ್ತೇನೊ
ಮಿಂಚಿನ ಮುತ್ತೇನೊ
ಕಣ್ಮುಚ್ಚಿ ತೆರೆವುದರಾಗ
ಹರದಾsರಿಗೆ ಹರದಾವ ||೨||

ಇದಿರು ಗುಡ್ಡದ ತಲೆಗೆ
ಮೋಡ ಮುಸುಕೆಳೆವಾಗ
ಬದಿಯ ಗುಡ್ಡದ ಮ್ಯಾಲೆ
ಬಿಸಿಲು ಮೈಚಾಚ್ಯಾವ ||೩||

ತೋಪು ತೋಟದ ಗಾಳಿ
ನುಗ್ಗಿ ನುಸುಳಿ ಬಂದು
ಹುಲ್ಲುಗಾವಲಾ ಸವರಿ
ಬೈತಲಾ ಬಾಚ್ಯಾವ ||೪||

ಗಿಡಬಳ್ಳಿ ಎಲಿ ಎಲಿ
ತೊಯ್ದ ತೆಂಗಿನ ಗರಿ
ಬೆಳ್ಳಿಸುಳಿ ಬರೆಧಾಂಗ
ಮಿತಿಮೀsರಿ ಮಿಂಚ್ಯಾವ ||೫||

ಪಡುವಲಕ ಮುಗಿದ ಕಿರಣ
ಮೂಡಲಕ ಚಿಮ್ಮಿಕೊಂಡು
ಅರಿಷಿಣ ಕುಂಕುಮ ತಂದು
ಮರದ್ಹಣಿಗೆ ಹಂಚ್ಯಾವ ||೬||

ಸಂಜಿಸೂರ್ಯಾನ ಹೆಗಲ
ಜರದ ಸೆಲ್ಲೇದ ಸೋಗಿ
ನವಿಲಗೊರಳಿನ ಮುಗಿಲ
ಸೆರಿಗ್ಗೆ ಬೀಸ್ಯಾವ ||೭||

ಹೊಲದಂಚಿನ ಹಸಿರ ಬಯಲು
ಮುತ್ತಿನ ಸೇಸೆ ತಳೆದು
ದುಡಿದವರ ಪಾದಕ್ಕಂತ
ಹಡದಿ ಹಾಸ್ಯಾವ ||೮||

ದಿನಗೂಲಿಗೆ ದುಡಿದು ದಣಿದು
ತಣಿದು ಹೊರಟವರ ಮಾರಿ
ಎದಿಯೆತ್ತರ ಬೆಳೆಗೆ ಕಳಸ
ಇಟ್ಟಾಂsಗ ಮೆರೆದಾವ ||೯||

ಹದಕ್ಕ ಹವಣಾಗಿ ಬಂದ
ಮಳೆಗೆ ನೆನೆನೆನೆದು ನೆನಿಸಿ
ಬರುವ ಸುಗ್ಗಿಯ ಚಿತ್ರ
ಅವರ ಚಿತ್ತ ಬರೆದಾವ ||೧೦||

ಗದ್ದ ಗಲ್ಲದ ಹಂಚಿ
ಕಣ್ಜೋಗಿ ಹಸಿರ ಹಣಿ
ಇಳಿದ ಬೆವರಿನ ನಡುವೆ
ತೊಳೆದು ಎದ್ದಾವ ||೧೧||

ಸಿಂಗಾರಿಲ್ಲದೀ ಸೊಬಗು
ಸೊಗಸಿ-ಜೀವಕೆ ಮುದ್ದು;
ಸೋತ ದಾರಿಗರ ಕಣ್ಣು
ಮನಸು ಕದ್ದಾವ ||೧೨||

ಚವರಿ-ಜೋಳದ ತೆನೆಯೆ
ಎರಡು ಬದಿಗೆ ಸರಿದು
ಅವರ ಮುಖರೇದ ಮುಖಕೆ
ಚವರ ಹಿಡಿದಾವ ||೧೩||

ಹಗಲು ಮಲ್ಲಾಡಕೆ ಕಳೆದು
ಇರುಳು ವಸತಿಗಂತ
ಬೆಳ್ಳಕ್ಕಿ ತೋರಣಗಟ್ಟಿ
ಬೆಳವಲಕ್ಕೆ ನಡೆದಾವ ||೧೪||

ಬಯಲು ಗುಡಿಸಲದ ಜೀವ
ಕಾಡು-ಗೂಡಿನ ಹಕ್ಕಿ
ತಮ್ಮ ಸರಿಜೋಡಿ ಮಾಡಿ
ಸೋಬಾನೆ ಹೇಳ್ಯಾವ ||೧೫||

ಮುಚ್ಚಂಜೆ ಮುಗಿದಾಗ
ಸೀಗಿಗೌರಿಯ ದನಿಯೆ
ತೇಲಿ ಬರುವಂತೆ ನಾಡು
ಕಿವಿಯಾಗಿ ಕೇಳ್ಯಾವ ||೧೬||
……………………………………………………………………………………..
ಬೇಂದ್ರೆಯವರಿಗೆ ಶ್ರಾವಣ ಮಾಸ ಸಂಭ್ರಮದ ಮಾಸ.  
ರಭಸದಿಂದ ಹುಯ್ಯುವ ಶ್ರಾವಣದ ಮಳೆಯನ್ನು ಅವರು ರಾವಣನ ಕುಣಿತಕ್ಕೆ ಹೋಲಿಸುತ್ತಾರೆ:

‘ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ
ಬಂತು ಬೀಡಿಗೆ | ಶ್ರಾವಣಾ ಬಂತು ||
ಕಡಲಿಗೆ ಬಂತು ಶ್ರಾವಣಾ | ಕುಣಿದ್ಹಾಂಗ ರಾವಣಾ
ಕುಣಿದಾವ ಗಾಳಿ | ಭೈರವನೆ ರೂಪ ತಾಳಿ ||’

ಕಣ್ಣೆದುರಿಗೆ ಕುಣಿಯುವಂತಹ ಚಿತ್ರಗಳಿವು. ಇಷ್ಟೇ ಅಲ್ಲ, ಮಳೆಯ ಹುಯ್ಯಲಿನ ನಾದವನ್ನು ಈ ಕವನದಲ್ಲಿ ಆಲಿಸಬಹುದು. ಇದು ಬೇಂದ್ರೆಯವರ ಶ್ರಾವಣಪ್ರತಿಭೆ, ವರಕವಿಗೆ ಮಾತ್ರ ಸಾಧ್ಯವಾದ ವರಸಿದ್ಧಿ!

ಮಳೆಗಾಲ ಮುಂದುವರೆದಂತೆ, ಇಳೆಯಲ್ಲ ಹಸಿರಿನಿಂದ ತುಂಬುತ್ತದೆ.
ಆಗ ಭೂಮಿತಾಯಿಯು ಅವರಿಗೆ ಕಾಣಿಸುವದು ಹೀಗೆ:

‘ಹೂವ ಹಡಲಿಗೆಯನು ಹೊತ್ತ
ಭೂಮಿತಾಯಿ ಜೋಗಿತಿ,
ಮೈsತುಂಬಿ ಕುಣಿಯುತಿಹಳ-
ನಂತ ಕಾಲವೀ ಗತಿ.’

ಸಾಂಗತ್ಯಜೀವಿಯಾದ ಬೇಂದ್ರೆಯವರು ಇಂತಹ ನೋಟವನ್ನು ಸವಿಯಲು ತಮ್ಮ ನಲ್ಲೆಯನ್ನು ಆಹ್ವಾನಿಸುತ್ತಾರೆ.
‘ಏನು ಹಸಿರು, ಏನು ಹಳದಿ
ಸುತ್ತು ಮುತ್ತು ನೋಡು ಕೆಳದಿ!’

‘ಚಿತ್ತಿಯ ಮಳೆಯ ಸಂಜೆ’ ಕವನವು ಈ ಎಲ್ಲ ಕವನಗಳಿಗಿಂತ ತುಂಬ ಭಿನ್ನವಾದದ್ದು. ಇಲ್ಲಿರುವ ಕವಿ ಧ್ಯಾನಸ್ಥ ಕವಿ. ಆತ ಪ್ರಕೃತಿಯಲ್ಲಿ ಲೀನನಾಗಿ, ಪ್ರಶಾಂತ ಸ್ಥಿತಿಯಲ್ಲಿ ತನ್ನ ಸುತ್ತಲಿನ ಚರಾಚರ ಬದುಕನ್ನು ಅವಲೋಕಿಸುತ್ತಿದ್ದಾನೆ. ಈ ಸೃಷ್ಟಿಯು ಭಗವಂತನ ಲೀಲೆ ಎನ್ನುವ ಕಾಣ್ಕೆ ಅವನಿಗಾಗುತ್ತದೆ. ಈ ಕಾಣ್ಕೆಯ ನಿರೂಪಣೆಯನ್ನು ಈ ಕವನದಲ್ಲಿ ಕ್ರಮಶಃ ಮಾಡಲಾಗಿದೆ. ಅಂದರೆ ಕವನದ ಮೊದಲ ನುಡಿಯಿಂದ ಕೊನೆಯ ನುಡಿಯವರೆಗೆ ಈ ಕಾಣ್ಕೆಯ ಸಾವಯವ ಬೆಳವಣಿಗೆ ಇದೆ.


ಕವನದ ಮೊದಲರ್ಧವು (೧ನೆಯ ನುಡಿಯಿಂದ ೭ನೆಯ ನುಡಿಯವರೆಗೆ) ಮಳೆಯ ನಂತರದ ಪ್ರಕೃತಿಯ ಅವಲೋಕನೆಗೆ ಮೀಸಲಾಗಿದೆ. ಪ್ರಕೃತಿಯ ಅಂಶಗಳಾದ ಪಂಚಮಹಾಭೂತಗಳನ್ನು (ಅಂದರೆ ಗಾಳಿ,ನೀರು,ಸೂರ್ಯ,ಭೂಮಿ ಹಾಗು ಆಕಾಶಗಳನ್ನು) ಇಲ್ಲಿ ಮಾನುಷೀಕರಣಗೊಳಿಸಲಾಗಿದೆ. ಕವನದ ಉತ್ತರಾರ್ಧದಲ್ಲಿ (೮ನೆಯ ನುಡಿಯಿಂದ ೧೫ನೆಯ ನುಡಿಯವರೆಗೆ) ಪ್ರಕೃತಿಯೊಡನೆ ಸಮರಸವಾದ ಜೀವಸಂಕುಲದ ಬದುಕಿನ ವರ್ಣನೆ ಇದೆ. ಕೊನೆಯ ಅಂದರೆ ೧೬ನೆಯ ನುಡಿಯಲ್ಲಿ ಪ್ರಕೃತಿಯ ದೈವೀಕರಣವಿದೆ. ಆ ಮೂಲಕ ಸೃಷ್ಟಿ ಹಾಗು ಸೃಷ್ಟಿಮಾತೆಯ ಅಭಿನ್ನತೆಯ ದರ್ಶನವಿದೆ.   
............................................................................................................
ಮೊದಲನೆಯ ನುಡಿ:
ಕುರುಡು ಪ್ರೀತಿಯ ಹಾಂಗ
ಕುರುಡು ಚಿತ್ತಿಯ ಮಳೆಯೆ
ಮುಗುಳು ನಗಿ ಸುತ್ತುರುಳಿಸಿ
ಸುರದsತ್ತ ಸುರದಾವ ||೧||

ಮುಂಗಾರು ಮಳೆಯ ಕೊನೆಯ ಪಾದದಲ್ಲಿ ಬರುವದು ಚಿತ್ತಿ ಮಳೆ. ಭೂಮಿಯನ್ನು ಹಸಿಯಾಗಿಡಲು ಈ ಮಳೆ ಬೇಕು. ಆದರೆ ಅದು ಆದೀತು ಎನ್ನುವ ಭರವಸೆ ಇಲ್ಲ. ಆದುದರಿಂದಲೇ ಒಕ್ಕಲಿಗರು ಈ ಮಳೆಗೆ ‘ಕುರುಡು ಚಿತ್ತಿ’ ಎಂದೇ ಕರೆಯುತ್ತಾರೆ. ಬೇಂದ್ರೆಯವರು ಈ ಮಳೆಯ ಧಾಟಿಯನ್ನು ಕುರುಡು ಪ್ರೀತಿಗೆ ಹೋಲಿಸುತ್ತಾರೆ. ಕುರುಡು ಪ್ರೀತಿಗೆ ಸಮಚಿತ್ತ  ಎನ್ನುವದು ಇರುವದಿಲ್ಲ. ಕುರುಡು ಚಿತ್ತಿಯ ಮಳೆಯೂ ಸಹ ಎಲ್ಲೆಲ್ಲೋ ಸುರಿಯುತ್ತದೆ, ಅಷ್ಟೋ ಇಷ್ಟೋ ಸುರಿಯುತ್ತದೆ! ಈ ಚಿತ್ತಿಯ ಮಳೆರಾಯನ ಬಿಂಕವನ್ನು ನೋಡಿರಿ. ಭೂಮಿತಾಯಿಯ ಮಕ್ಕಳಿಗೆ ತಾನು ಅಗತ್ಯ ಎನ್ನುವದನ್ನು ಈ ಮಳೆರಾಯ ಅರಿತಿದ್ದಾನೆ. ಅಂತೆಯೇ ತಾನು ಬರುವಾಗ ಬಿಂಕದ ಮುಗುಳುನಗೆಯನ್ನು  ಸುತ್ತಲೂ ಉರುಳಿಸುತ್ತ ಬರುತ್ತಾನೆ! ಒಕ್ಕಲಿಗರಿಗೆ ಆಸೆಯನ್ನು ಹುಟ್ಟಿಸುತ್ತಾನೆ. ಅವರ ಮುಖದಲ್ಲೂ ಮುಗುಳುನಗೆಯನ್ನು ಅರಳಿಸುತ್ತಾನೆ. ಆದರೆ ಕೊನೆಗೆ ಎಲ್ಲೊ ಕೃಪೆ ತೋರಿಸಿ ಮಾಯವಾಗುತ್ತಾನೆ!
ಚಿತ್ತಿಯ ಮಳೆಯ ಚಿತ್ತವು ಕುರುಡಾಗಿರಬಹುದು, ಅದು ಸುರಿಯದೇ ಇರಬಹುದು. ಆದರೂ ಬೇಂದ್ರೆಯವರು ಈ ಮಳೆಯನ್ನು ಪ್ರೀತಿಯಿಂದ ‘ಕುರುಡು ಪ್ರೀತಿಯ ಹಾಗೆ’ ಎಂದು ಕರೆಯುತ್ತಾರೆ.

ಎರಡನೆಯ ನುಡಿ:
ಎತ್ತೇನೋ ಬಿತ್ತೇನೊ
ಮಿಂಚಿನ ಮುತ್ತೇನೊ
ಕಣ್ಮುಚ್ಚಿ ತೆರೆವುದರಾಗ
ಹರದಾsರಿಗೆ ಹರದಾವ ||೨||

ಬೇಂದ್ರೆಯವರು ಎರಡನೆಯ ನುಡಿಯಲ್ಲಿ ಈ ಮಳೆರಾಯನ ಅನಿಶ್ಚಿತ ನಡತೆಯನ್ನು ವರ್ಣಿಸಿದ್ದಾರೆ.
ಈ ನುಡಿಯನ್ನು ಎರಡು ರೀತಿಗಳಲ್ಲಿ ಅರ್ಥೈಸಬಹುದು
ಮೊದಲನೆಯ ಅರ್ಥ ಹೀಗಿದೆ:
‘ಎತ್ತೇನೋ’ ಅಂದರೆ ಎದ್ದಿತೇನೊ ಎನ್ನುವ ಅರ್ಥ ಹಾಗು ‘ಬಿತ್ತೇನೊ’ ಎಂದರೆ ಬಿದ್ದಿತೇನೊ ಎನ್ನುವ ಅರ್ಥ ಆಗುತ್ತದೆ. ಮಳೆಯು ಎದ್ದಿತೋ ಅಂದರೆ ಮೋಡ ಕಟ್ಟುತ್ತಿದೆ ಎನ್ನುವ ಅರ್ಥ. ಹಾಗು ಬಿದ್ದಿತೋ ಅಂದರೆ ಮಳೆ ನೆಲಕ್ಕೆ ಇಳಿದಿತೊ ಎನ್ನುವ ಅರ್ಥ.
ಅದಲ್ಲದೆ ಒಂದು ಜೀವಿಯು ದಿಕ್ಕೆಟ್ಟು ಓಡುವಾಗ, ‘ಎದ್ದಿತೋ, ಬಿದ್ದಿತೋ ಎನ್ನುವಂತೆ ಓಡುತ್ತಿದೆ’, ಎಂದು ಹೇಳುತ್ತಾರೆ. ಅದರಂತೆ ಚಿತ್ತಿಯ ಮಳೆಯ ಮೋಡಗಳು ನೋಡುನೋಡುತ್ತಿರುವಂತೆ ಕಟ್ಟಿಕೊಂಡು, ದಿಕ್ಕು ತಿಳಿಯದಂತೆ ಧಾವಿಸುತ್ತವೆ. ಈಗ ಇಲ್ಲಿ ಆಗುತ್ತಿದೆ ಎನ್ನುವಾಗಲೇ, ಮತ್ತೊಂದೆಡೆ ಮಳೆಯ ಹನಿಗಳು ಮಿಂಚಿನಿಂದ ಉದುರಿದ ಮುತ್ತುಗಳಂತೆ ಉದುರಿ ಹೋಗಿರುತ್ತವೆ. ಕಣ್ಮುಚ್ಚಿ ತೆರೆಯುವದರಲ್ಲಿಯೇ, ಕಣ್ಣಿಗೆ ಕಾಣಿಸದಷ್ಟು ದೂರ ಹೋಗಿರುತ್ತವೆ. ಬೇಂದ್ರೆಯವರು ಇದನ್ನು ಹರದಾರಿಗೆ (=ಸುಮಾರು ೫ ಕಿಲೋಮೀಟರುಗಳು) ಹರದು ಹೋದವು ಎಂದು ಹೇಳುತ್ತಾರೆ.

ಎರಡನೆಯ ಅರ್ಥ ಹೀಗಿದೆ:
ಬೀಜ ಬಿತ್ತಲು ಎತ್ತು ಬೇಕು. ಮಳೆಯ ಮೋಡಗಳು ಎತ್ತಿನಂತೆ ಮುಸುಗುಟ್ಟುತ್ತಿವೆ. ಅವು ಮಳೆಯ ಹನಿಗಳ ಬೀಜವನ್ನು ಬಿತ್ತಲು ಅಂದರೆ ಮಳೆಯೊಡೆಯಲು ಸಿದ್ಧವಾಗಿವೆ. ಮಿಂಚಿನ ಮೂಲಕ ಮುತ್ತಿನಂತಹ ಬೀಜಗಳನ್ನು ಅವು ಚೆಲ್ಲುತ್ತಿವೆ. ಈ ಎತ್ತುಗಳು ಎಷ್ಟು ಶೀಘ್ರವಾಗಿವೆ ಎಂದರೆ, ಕಣ್ಮುಚ್ಚಿ ತೆರೆಯುವದರಲ್ಲಿ ಹರದಾರಿಯಷ್ಟು ಧರೆಯನ್ನು ಹರದವು (=ಹರಗಿದವು=ಬೀಜ ಬಿತ್ತಿದವು). ಚಿತ್ತಿಯ ಮಳೆಯ ಸಮಯದಲ್ಲಿ ಕೆಲವು ರೈತರು ಗಳೆ ಹೊಡೆದು, ಹಿಂಗಾರು ಬಿತ್ತಿಗೆಯ ಮೊದಲ ಕ್ರಮಗಳನ್ನು ಆರಂಭಿಸುತ್ತಾರೆ ಎನ್ನುವದನ್ನು ಗಮನಿಸಬೇಕು.

ಈ ಮಳೆಯು ಬಿದ್ದರೆ, ತೆನೆಗಳಲ್ಲಿ ಮುತ್ತಿನಂತಹ ಕಾಳುಗಳು ತುಂಬಿಕೊಳ್ಳುವವು. ಆದುದರಿಂದ ಈ ಮಳೆಯ ಹನಿಗಳನ್ನು ಬೇಂದ್ರೆಯವರು ‘ಮುತ್ತು’ ಎಂದು ವರ್ಣಿಸುತ್ತಾರೆ.

ಮೂರನೆಯ ನುಡಿ:
ಇದಿರು ಗುಡ್ಡದ ತಲೆಗೆ
ಮೋಡ ಮುಸುಕೆಳೆವಾಗ
ಬದಿಯ ಗುಡ್ಡದ ಮ್ಯಾಲೆ
ಬಿಸಿಲು ಮೈಚಾಚ್ಯಾವ ||೩||

ಇದು ಮುಂಗಾರು ಮಳೆಗಾಲದ ಕೊನೆಯ ಹಂತ. ಈ ಕಾಲದಲ್ಲಿ ಮುಗಿಲಿನಲ್ಲಿ ದಟ್ಟವಾದ ಮೋಡಗಳು ಇರುವದಿಲ್ಲ. ಆದುದರಿಂದ ಪಶ್ಚಿಮದ ಸೂರ್ಯನ ಎದುರಿಗಿರುವ ಗುಡ್ಡದ ನೆತ್ತಿಯ ಮೇಲೆ ಅಳಿದುಳಿದ ಮೋಡಗಳು ಮುಸುಕು ಹಾಕಿದಂತೆ ಕಾಣುತ್ತದೆ.  ಈ ಗುಡ್ಡದ ಪಕ್ಕದಲ್ಲಿಯೇ ಇರುವ ಮತ್ತೊಂದು ಗುಡ್ಡದ ಮೇಲೆ ಮಾತ್ರ ಸೂರ್ಯಕಿರಣಗಳ ನಿಚ್ಚಳ ಬೆಳಕು ಬಿದ್ದಿರುತ್ತದೆ.
ಒಂದು ಗುಡ್ಡವು ತಲೆಯ ಮೇಲೆ ಮುಸುಕೆಳೆದುಕೊಂಡು ಅಪರಾಹ್ನದ ನಿದ್ರೆಗೆ ಇಳಿದರೆ, ಪಕ್ಕದ ಗುಡ್ಡದ ಮೇಲಿ ಬಿದ್ದ ಬಿಸಿಲೂ ಸಹ ಮೈಚಾಚಿಕೊಂಡು ನಿದ್ರೆಗೆ ಎಳಸುತ್ತಿದೆ!

‘ಬಿಸಿಲು ಮೈಚಾಚ್ಯಾವ’ ಎಂದು ಹೇಳುವದರ ಮೂಲಕ ಬೇಂದ್ರೆಯವರು ಇದು ಅಪರಾಹ್ನದ ಹೊತ್ತು ಎಂದು ಸೂಚಿಸುತ್ತಾರೆ. ಈ ಹೊತ್ತಿನಲ್ಲಿ ಸೂರ್ಯಕಿರಣಗಳು ದೀರ್ಘವಾಗಿ ಬೀಳುವದರಿಂದ ಬಿಸಿಲು ಮೈಚಾಚಿರುತ್ತದೆ. ಅಲ್ಲದೆ, ಮಧ್ಯಾಹ್ನದಲ್ಲಿ ಊಟ ಹೊಡೆದು ಮಲಗಿರುವವರೂ ಸಹ, ಅಪರಾಹ್ನದವರೆಗೆ ‘ಮೈಚಾಚಿರುತ್ತಾರೆ’ ಅಂದರೆ ವಾಮಕುಕ್ಷಿಯಾಗಿರುತ್ತಾರೆ. ‘ಬಿಸಿಲು’ ಕೂಡ ಭೋಜನ ಮುಗಿಸಿ ಮೈಚಾಚಿದೆ!  ಸೂರ್ಯನು ಕನ್ಯಾ ರಾಶಿಯಲ್ಲಿ ಸಂಚರಿಸುತ್ತಿರುವದರಿಂದ ಅವನಿಗೆ ಈ ಸಮಯದಲ್ಲಿ ಪ್ರಖರತೆ ಇರುವದಿಲ್ಲ. ಆ ಕಾರಣಕ್ಕಾಗಿ ಸಹ ‘ಬಿಸಿಲು ಮೈಚಾಚ್ಯಾವ’ ಎಂದು ಹೇಳಬಹುದು. ಬೇಂದ್ರೆಯವರು ಇಲ್ಲಿ ಬಿಸಿಲಿನ ಮಾನುಷೀಕರಣವನ್ನು ಮಾಡುತ್ತಿದ್ದಾರೆ. ಜೊತೆಗೇ ಪ್ರಕೃತಿಯೊಡನೆ ಆಪ್ತತ್ವವನ್ನು ಸಾಧಿಸುತ್ತಿದ್ದಾರೆ.

ನಾಲ್ಕನೆಯ ನುಡಿ:
ತೋಪು ತೋಟದ ಗಾಳಿ
ನುಗ್ಗಿ ನುಸುಳಿ ಬಂದು
ಹುಲ್ಲುಗಾವಲಾ ಸವರಿ
ಬೈತಲಾ ಬಾಚ್ಯಾವ ||೪||

ಈ ಕಾಲದಲ್ಲಿ ಮೋಡಗಳು ಕಡಿಮೆ, ಆದರೆ ಗಾಳಿಯ ಅರ್ಭಟಕ್ಕೇನೂ ಕೊರತೆ ಇಲ್ಲ. ಈ ಗಾಳಿಯು ಮಾವಿನ ತೋಪುಗಳಲ್ಲಿ ಹಾಗು ಪೇರಲ ಹಣ್ಣಿನ ತೋಟಗಳಲ್ಲಿ ನುಗ್ಗುತ್ತದೆ. (ಆ ಕಾಲದಲ್ಲಿ ಬೇಂದ್ರೆಯವರು ವಾಸಿಸುತ್ತಿದ್ದ ಸಾಧನಕೇರಿಯಲ್ಲಿ ಮಾವಿನ ತೋಪುಗಳು ಹಾಗು ಪೇರಲ ತೋಟಗಳು ವಿಪುಲವಾಗಿದ್ದವು.) ಅಲ್ಲಿ ಧಾವಿಸಿ ಬಂದು, ಸಿಕ್ಕಿಹಾಕಿಕೊಂಡ ಗಾಳಿಯು ನುಸುಳಿ ಹೊರಬಂದಾಗ ಅದರ ವೇಗ ಕಡಿಮೆಯಾಗಿರುತ್ತದೆ. ಅಲ್ಲದೆ ಗುಡ್ಡಕ್ಕೆ ಢಿಕ್ಕಿ ಹೊಡೆದ ಗಾಳಿಯ ವೇಗವು ಕಡಿಮೆಯಾಗುತ್ತದೆ. ಹೀಗಾಗಿ ಗುಡ್ಡದ ಮೇಲೆ ಹಾಸಿರುವ ಹುಲ್ಲುಗಾವಲನ್ನು ಗಾಳಿಯು ಸವರಿ ಹೋಗುವಾಗ, ಹುಲ್ಲು ಇಬ್ಭಾಗವಾಗಿ, ತಲೆಗೂದಲಿನ ಬೈತಲೆಯನ್ನು ಬಾಚಿದಂತೆ ಕಾಣುತ್ತದೆ.
ಬೀಸುಗಾಳಿಯ ವೇಗವು ಕ್ರಮವಾಗಿ ಕಡಿಮೆಯಾಗುವದನ್ನು ಬೇಂದ್ರೆಯವರು ನುಗ್ಗಿ, ನುಸುಳಿ ಹಾಗು ಸವರಿ ಎನ್ನುವ ಕ್ರಿಯಾಪದಗಳ ಮೂಲಕ ಸೂಚಿಸಿದ್ದಾರೆ.

ಐದನೆಯ ನುಡಿ:
ಗಿಡಬಳ್ಳಿ ಎಲಿ ಎಲಿ
ತೊಯ್ದ ತೆಂಗಿನ ಗರಿ
ಬೆಳ್ಳಿಸುಳಿ ಬರೆಧಾಂಗ
ಮಿತಿಮೀsರಿ ಮಿಂಚ್ಯಾವ ||೫||

ಇನ್ನು ತೋಟದಲ್ಲಿರುವ ಎಲೆಗಳು ಹೇಗೆ ಕಾಣಿಸುತ್ತಿವೆ?
ಮಳೆಯ ಒಂದು ಝಳಕು ಬಂದು ಹೋದ ಬಳಿಕ, ವಾತಾವರಣದಲ್ಲಿರುವ ಧೂಳೆಲ್ಲ ಕರಗಿ, ಹರಿದು ಹೋಗುತ್ತದೆ. ಆದುದರಿಂದ ಸೂರ್ಯನ ಕಿರಣಗಳ ಹರಡುವಿಕೆ (=diffraction) ಆಗುವದಿಲ್ಲ. ಹೀಗಾಗಿ ತೋಟದಲ್ಲಿರುವ ತೆಂಗು, ಅಡಕೆ, ಮಾವು ಈ ಮರಗಳ ಎಲೆಗಳ ಮೇಲೆ ಸೂರ್ಯನ ನೇರವಾದ ಕಿರಣಸ್ಪರ್ಶವಾಗುತ್ತದೆ. ಆಗ ಈ ಎಲೆಗಳ ಮೇಲಿರುವ ಮಳೆಯ ಹನಿಗಳು ಸೂರ್ಯಕಿರಣಗಳನ್ನು ಪ್ರತಿಫಲಿಸುತ್ತ ಹೊಳೆಯುತ್ತವೆ. ತೆಂಗಿನ ಗರಿಗಳ ಅಂಚಿನಲ್ಲಿ ಪೋಣಿಸಿದ ಹನಿಗಳ ಮೇಲೆ ಬಿದ್ದ ಕಿರಣಗಳು ಬೆಳ್ಳಿಗೋಲವನ್ನು ಬರೆದಂತೆ ಕಾಣಿಸುತ್ತವೆ. ನೋಡಿದವರ ಕಣ್ಣು ಕೋರೈಸುವಂತೆ ಇವು ಮಿತಿಮೀರಿ ಮಿಂಚುತ್ತವೆ.

ಆರನೆಯ ನುಡಿ:
ಪಡುವಲಕ ಮುಗಿದ ಕಿರಣ
ಮೂಡಲಕ ಚಿಮ್ಮಿಕೊಂಡು
ಅರಿಷಿಣ ಕುಂಕುಮ ತಂದು
ಮರದ್ಹಣಿಗೆ ಹಂಚ್ಯಾವ ||೬||

ಇಲ್ಲಿಯವರೆಗೆ ಬೇಂದ್ರೆಯವರು ನೋಟವು ಮೇಲಿನಿಂದ ಕೆಳಗಿಳಿಯುತ್ತ,  ಆಕಾಶದಲ್ಲಿ ಕಟ್ಟಿಕೊಂಡ ಮೋಡಗಳನ್ನು,, ಗುಡ್ಡ ಹಾಗು ತೋಪುಗಳನ್ನು ಬಳಿಕ ಮಳೆಯಿಂದ ತೊಯ್ದ ಗಿಡಮರಗಳನ್ನು ತನ್ನ ಹರವಿನಲ್ಲಿ ತೆಗೆದುಕೊಂಡಿತು. ಈಗ ಅವರ ದೃಷ್ಟಿ ಇನ್ನೂ ಕೆಳಗೆ ಇಳಿದು ಕ್ಷಿತಿಜವನ್ನು ನೋಡಿದೆ.

 ತನ್ನ ಕರ್ತವ್ಯವನ್ನು ಪೂರೈಸಿದ ಬಳಿಕ ಪಶ್ಚಿಮ ದಿಕ್ಕಿನಲ್ಲಿ ಇಳಿದ ಸೂರ್ಯನು ಕಿರಣಗಳೆಂಬ ತನ್ನ ಕರಗಳ ಮೂಲಕ ವಿಶ್ವಚೈತನ್ಯಕ್ಕೆ ನಮಸ್ಕರಿಸುತ್ತಿದ್ದಾನೆ. ಇದನ್ನು ಬೇಂದ್ರೆಯವರು ‘ಪಡುವಲಕ ಮುಗಿದ ಕಿರಣ’ ಎಂದು ಹೇಳಿದರು. ‘ಮುಗಿದ ಕಿರಣ’ ಎನ್ನುವದು ಸೂರ್ಯನು ‘ಕೈಮುಗಿದನು’ ಎಂದು ಸೂಚಿಸುವದರ ಜೊತೆಗೇ, ಸೂರ್ಯನ ಕರ್ತವ್ಯವು ಮುಗಿಯಿತು ಎಂದೂ ಸೂಚಿಸುತ್ತದೆ.

ಈ ಕಿರಣಗಳ ಬೆಳಕು ಪೂರ್ವದಿಕ್ಕಿಗೂ ಸಹ ಚಿಮ್ಮುತ್ತದೆ. ಬಾನೆಲ್ಲ ಆಗ ಹಳದಿ ಹಾಗು ಕೆಂಪು ಬಣ್ಣಗಳಿಂದ ತುಂಬುತ್ತದೆ. ಈ ಬಣ್ಣಗಳು ಗಿಡಮರಗಳ ಮೇಲೂ ಪ್ರತಿಫಲಿಸುತ್ತವೆ. ಬೇಂದ್ರೆಯವರು ಈ ಬೆಡಗನ್ನು ‘ಅರಿಶಿಣ ಕುಂಕುಮ ತಂದು ಮರದ್ಹಣಿಗೆ ಹಂಚ್ಯಾವ’ ಎಂದು ಹೇಳುತ್ತಾರೆ. ನಿಸರ್ಗದೇವಿಗೆ ಅರಿಶಿಣ ಕುಂಕುಮ ಹಚ್ಚುವದರ ಮೂಲಕ ಸೂರ್ಯಕಿರಣಗಳು ಅವಳಿಗೆ ಮಂಗಳವನ್ನು  ಕೋರುತ್ತಿವೆ.

ಇಲ್ಲಿ ಪ್ರಕೃತಿಯ ಮಾನುಷೀಕರಣವಷ್ಟೇ ಅಲ್ಲ, ದೈವೀಕರಣವೂ ಆಗಿದೆ. ಬೇಂದ್ರೆಯವರಿಗೆ ಚೈತನ್ಯದ ಎಲ್ಲ ರೂಪಗಳು ದೈವದ ರೂಪಗಳೇ ಆಗಿವೆ.

ಏಳನೆಯ ನುಡಿ:
ಸಂಜಿಸೂರ್ಯಾನ ಹೆಗಲ
ಜರದ ಸೆಲ್ಲೇದ ಸೋಗಿ
ನವಿಲಗೊರಳಿನ ಮುಗಿಲ
ಸೆರಿಗ್ಗೆ ಬೀಸ್ಯಾವ ||೭||

ಕಾಲ ಸರಿದಂತೆ, ಮೈಚಾಚಿದ ಬಿಸಿಲು ಇನ್ನೂ ಕೆಳಗೆ ಇಳಿದು ಸೂರ್ಯನು ಅಸ್ತಮಾನನಾಗುತ್ತಿದ್ದಾನೆ.
ಸೂರ್ಯನ ಸುತ್ತಲೂ ಅಲ್ಲಲ್ಲಿ ಹರಡಿರುವ ಮೋಡಗಳು ಬಣ್ಣಗಳಿಂದ ತುಂಬಿವೆ. ಇವು ಬೇಂದ್ರೆಯವರಿಗೆ ಸೂರ್ಯನು ತನ್ನ ಹೆಗಲ ಮೇಲೆ ಹೊತ್ತುಕೊಂಡಿರುವ ಶಾಲಿನಂತೆ ಕಾಣುತ್ತದೆ. ಮೋಡಗಳ ಅಂಚು ಹೊಳೆಯುವದರಿಂದ, ಅದು ಶಾಲಿನ ಅಂಚಿನ ಜರದಂತೆ ಕಾಣುತ್ತದೆ. ಈ ಜರದ ಅಂಚನ್ನು ಬೇಂದ್ರೆಯವರು ಸೋಗಿಗೆ (=eyeliner) ಹೋಲಿಸುತ್ತಾರೆ.

ಆಕಾಶದ ಉಳಿದ ಭಾಗವೆಲ್ಲ ಕಡುನೀಲಿಯಾಗಿಯೇ ಉಳಿದಿರುವದರಿಂದ, ಬೇಂದ್ರೆಯವರು ಅದನ್ನು ‘ನವಿಲಗೊರಳಿನ ಮುಗಿಲ ಸೆರಗು’ ಎಂದು ಬಣ್ಣಿಸುತ್ತಾರೆ. ಮುಳುಗುತ್ತಿರುವ ಸೂರ್ಯನ ಜರದಂಚಿನ ಶಾಲು ಕ್ಷಣಕ್ಷಣಕ್ಕೂ ಬದಲಾಗುತ್ತಿರುವದರಿಂದ, ನೀಲ ಮುಗಿಲಿನ ಸೆರಗಿಗೆ ಬೀಸುತ್ತಿರುವಂತೆ ಭಾಸವಾಗುತ್ತಿದೆ.
ಈ ನುಡಿಯಲ್ಲಿರುವ ರೂಪಕಗಳು ಅಪೂರ್ವ ಎಂದು ಹೇಳಬೇಕು.

ಎಂಟನೆಯ ನುಡಿ:
ಹೊಲದಂಚಿನ ಹಸಿರ ಬಯಲು
ಮುತ್ತಿನ ಸೇಸೆ ತಳೆದು
ದುಡಿದವರ ಪಾದಕ್ಕಂತ
ಹಡದಿ ಹಾಸ್ಯಾವ ||೮||

ಇಲ್ಲಿಯವರೆಗೆ ಬೇಂದ್ರೆಯವರು ಸುತ್ತಲಿನ ಪ್ರಕೃತಿಯ ರಮ್ಯತೆಯನ್ನು ವರ್ಣಿಸಿದರು. ಇದೀಗ ಹೊತ್ತು ಮುಳುಗುತ್ತಿದೆ. ಹೊಲಗಳಲ್ಲಿ ದುಡಿಯುತ್ತಿರುವ ಒಕ್ಕಲು ಮಕ್ಕಳು ಇನ್ನು ಮನೆಗೆ ಮರಳಬೇಕು. ಭೂಮಿತಾಯಿ ಹಾಗು ಈ ಒಕ್ಕಲುಮಕ್ಕಳ ನಡುವೆ ಅನ್ಯೋನ್ಯ ಸಂಬಂಧವಿದೆ. ಚಿತ್ತಿಯ ಮಳೆ ಇವರಿಬ್ಬರನ್ನೂ ಪುಲಕಿತಗೊಳಿಸಿದೆ.

ಚಿತ್ತಿಯ ಮಳೆಯ ಕಾಲದಲ್ಲಿ ಮುಂಗಾರು ಫಸಲು ತೆನೆ ಹಿಡಿಯುವ ಹಂತಕ್ಕೆ ಬಂದಿರುತ್ತದೆ. ಕೆಲವಾರು ರೈತರು ಹಿಂಗಾರು ಬಿತ್ತಿಗೆಯನ್ನು ಪ್ರಾರಂಭಿಸಿರುತ್ತಾರೆ. ದುಡಿತ ಮುಗಿಸಿ ಬರುತ್ತಿರುವ ಈ ಕಾಯಕನಿಷ್ಠಜೀವಿಗಳಿಗೆ ಭೂಮಿತಾಯಿಯು ತನ್ನ ಮಮತೆ ಹಾಗು ಮನ್ನಣೆಯನ್ನು ತೋರಿಸುವ ಬಗೆಯನ್ನು ಬೇಂದ್ರೆಯವರು ವರ್ಣಿಸುವ ಪರಿ ಅಪೂರ್ವವಾಗಿದೆ:

ಹೊಲದ ಅಂಚಿನಲ್ಲಿರುವ ಹಸಿರು ಬಯಲಿನಲ್ಲಿ ಚಿತ್ತಿ ಮಳೆ ಉದುರಿಸಿದ ಮಳೆಯ ಹನಿಗಳು ಮುತ್ತಿನಂತೆ ಬಿದ್ದಿವೆ. ಭೂಮಿತಾಯಿಯು ಈ ನೀರಮುತ್ತುಗಳನ್ನೇ ಅಕ್ಷತೆಯನ್ನಾಗಿ (=ಸೇಸೆ) ಮಾಡಿಕೊಂಡು ದುಡಿದು ಬರುತ್ತಿರುವ ತನ್ನ ಮಕ್ಕಳ ಪಾದಗಳ ಕೆಳಗೆ ಅಕ್ಷತೆಯ ವಸ್ತ್ರವನ್ನೇ ಹಾಸುತ್ತಿದ್ದಾಳೆ!
(ಹಡದಿ ಎಂದರೆ ಅಗಸನು ಒಗೆದು ಕೊಟ್ಟ ಬಟ್ಟೆ.)
ಒಕ್ಕಲುಮಕ್ಕಳಿಗೆ ಇದಕ್ಕಿಂತ ಹೆಚ್ಚಿನ ಗೌರವವು ಯಾವ ಕವನದಲ್ಲೂ ವ್ಯಕ್ತವಾಗಿರಲಿಕ್ಕಿಲ್ಲ!

ಒಂಬತ್ತನೆಯ ನುಡಿ:
ದಿನಗೂಲಿಗೆ ದುಡಿದು ದಣಿದು
ತಣಿದು ಹೊರಟವರ ಮಾರಿ
ಎದಿಯೆತ್ತರ ಬೆಳೆಗೆ ಕಳಸ
ಇಟ್ಟಾಂsಗ ಮೆರೆದಾವ ||೯||

ಇನ್ನೀಗ ಬೇಂದ್ರೆಯವರು ಈ ಒಕ್ಕಲುಮಕ್ಕಳು ಯಾವ ರೀತಿಯಲ್ಲಿ ತಮ್ಮ ಕಾಯಕದಲ್ಲಿ ಹಾಗು ತಮ್ಮ ಸುತ್ತಲಿನ ಪ್ರಕೃತಿಯಲ್ಲಿ ಸಮರಸರಾಗಿದ್ದಾರೆ ಎನ್ನುವದರ ಅವಲೋಕನವನ್ನು ಮಾಡುತ್ತಾರೆ.

ಈಗ ಮನೆಗೆ ಮರಳುತ್ತಿರುವ ಶ್ರಮಜೀವಿಗಳೆಲ್ಲ ದಿನಗೂಲಿಗಾಗಿ ಜಮೀನುಗಳಲ್ಲಿ ದುಡಿದವರು. ಇಡೀ ದಿನವೆಲ್ಲ ಇವರು ದುಡಿದು ದಣಿದಿದ್ದಾರೆ. ಇಷ್ಟೇ ಅಲ್ಲ, ತಮ್ಮ ಕಾಯಕದಲ್ಲಿ ಶ್ರದ್ಧೆ ಇರುವ ಈ  ಶ್ರಮಿಕರು ‘ತಣಿದಿದ್ದಾರೆ’ , ಅಂದರೆ ಸಂತೃಪ್ತರಾಗಿದ್ದಾರೆ. ಯಾಕೆಂದರೆ ಇವರದು ನಿಷ್ಠಾವಂತ ದುಡಿಮೆ, ವಂಚನೆಯಿಲ್ಲದ ದುಡಿಮೆ.  ಆದುದರಿಂದ ಭೂಮಿತಾಯಿಯು ಅನುಗ್ರಹಿಸಿದ, ಎದೆಯೆತ್ತರ ಬೆಳೆದ ಫಸಲಿನ ಮೇಲೆ ಕಾಣುವ ಇವರ ಮುಖಗಳು ಆ ಫಸಲಿಗೆ ಕಳಸವಿಟ್ಟಂತೆ ಮೆರೆಯುತ್ತಿವೆ.

ಹತ್ತನೆಯ ನುಡಿ:
ಹದಕ್ಕ ಹವಣಾಗಿ ಬಂದ
ಮಳೆಗೆ ನೆನೆನೆನೆದು ನೆನಿಸಿ
ಬರುವ ಸುಗ್ಗಿಯ ಚಿತ್ರ
ಅವರ ಚಿತ್ತ ಬರೆದಾವ ||೧೦||

ಈ ಕಾಲದಲ್ಲಿ ಜಮೀನಿನಲ್ಲಿರುವ ಪೀಕು ಬೆಳವಣಿಗೆಯ ಒಂದು critical  ಹಂತದಲ್ಲಿದೆ. ಇದನ್ನು  ‘ಹದ’ ಎನ್ನುತ್ತಾರೆ. ಈ ಪೈರು ಉತ್ತಮವಾಗಿ ಫಲಿಸಲು ಹವಣಾದ ಮಳೆ (= optimum rainfall) ಬೇಕು. ಅಂತಹ ಮಳೆ ಇದೀಗ ಬಿದ್ದಿದೆ. ಅದರಿಂದ ಉಲ್ಲಸಿತರಾದ ಆಳುಮಕ್ಕಳು ಆ ಮಳೆಯಲ್ಲಿ ನೆನೆದು ಹೋಗಿದ್ದಾರೆ. ಅದನ್ನೇ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದಾರೆ. ಅವರ ಮನೋಪಟಲದಲ್ಲಿ ಇಂತಹ ಒಳ್ಳೆಯ ಮಳೆಯಿಂದ ಬರಬಹುದಾದ ಉತ್ತಮ ಸುಗ್ಗಿಯ ಚಿತ್ರ ಮೂಡುತ್ತಿದೆ. ಪ್ರಕೃತಿ ಫಲಿಸಬೇಕು, ನಿಸರ್ಗ ಸುಭಿಕ್ಷವಾಗಬೇಕು; ಪಶು, ಪಕ್ಷಿ ಹಾಗು ಎಲ್ಲ ಜೀವಿಗಳೂ ಸಮರಸರಾಗಿ ಸುಖದಿಂದ ಬದುಕಬೇಕು ಎನ್ನುವ ಭಾವನೆ ಇದ್ದವರಿಗೆ ಮಾತ್ರ ಇಂತಹ ಆಲೋಚನೆ ಬರಲು ಸಾಧ್ಯ.
ಇದನ್ನು emphasize ಮಾಡುವ ಉದ್ದೇಶದಿಂದ, ಬೇಂದ್ರೆಯವರು ‘ಚಿತ್ತ’ ಪದವನ್ನು ಬಳಸಿದ್ದಾರೆ. (ಚಿತ್ತ ಅಂದರೆ ಅರಿವಿನ ಮೂಲರೂಪ ಎಂದು ಹೇಳಬಹುದು.)

 ಹನ್ನೊಂದನೆಯ ನುಡಿ:
ಗದ್ದ ಗಲ್ಲದ ಹಂಚಿ
ಕಣ್ಜೋಗಿ ಹಸಿರ ಹಣಿ
ಇಳಿದ ಬೆವರಿನ ನಡುವೆ
ತೊಳೆದು ಎದ್ದಾವ ||೧೧||

ಈ ಆಳುಮಕ್ಕಳಲ್ಲಿ ಗಂಡಾಳು ಹಾಗು ಹೆಣ್ಣಾಳು ಇಬ್ಬರೂ ಇರುತ್ತಾರೆ. ಗಂಡಾಳು ಹಾಗು ಹೆಣ್ಣಾಳು ಜೋಡಿಯಾಗಿಯೇ ಕೆಲಸಕ್ಕೆ ಹೋಗುವದು ಸಾಮಾನ್ಯವಾಗಿದೆ. ದುಡಿದು ದಣಿದ ಇಂತಹ ಹೆಣ್ಣಾಳುಗಳು ಹೇಗೆ ಕಾಣುತ್ತಿದ್ದಾರೆ?

ಈಗೆಲ್ಲ tattooing ಒಂದು ಫ್ಯಾಶನ್ ಆಗಿದೆ. ಬೇಂದ್ರೆಯವರ ಕಾಲದಲ್ಲಿ ಇದಕ್ಕೆ ಹಚ್ಚಿ (=ಹಂಚಿ) ಚುಚ್ಚಿಕೊಳ್ಳುವದು ಎನ್ನುತ್ತಿದ್ದರು. ಗದ್ದ, ಗಲ್ಲ ಹಾಗು ಹಣೆಯ ಮೇಲೆ ಹಸಿರು ಹಚ್ಚಿಯನ್ನು ಚುಚ್ಚಿಸಿಕೊಂಡು, ಹೆಂಗಳೆಯರು ತಮ್ಮ ಚೆಲುವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಕಣ್ಜೋಗಿ ಎಂದರೆ ಕಣ್ಣಿನ ಸೋಗಿ (=eyeliner). ಇದೂ ಕೂಡ ಹಸಿರು ಹಚ್ಚಿಯೇ. ದುಡಿದು ಬೆವರಿದ ಇವರ ಮುಖದಲ್ಲಿ ಈ ಹಚ್ಚಿಗಳೆಲ್ಲ ಬೆವರಿನಿಂದಲೇ ತೊಳೆದು ಇನ್ನಿಷ್ಟು ನಿಚ್ಚಳವಾಗಿ ಕಾಣುತ್ತಿವೆ. ಈ ಹೆಣ್ಣುಮಕ್ಕಳ ಚೆಲುವು ದುಡಿತದ ಚೆಲುವು.

ಹನ್ನೆರಡನೆಯ ನುಡಿ:
ಸಿಂಗಾರಿಲ್ಲದೀ ಸೊಬಗು
ಸೊಗಸಿ-ಜೀವಕೆ ಮುದ್ದು;
ಸೋತ ದಾರಿಗರ ಕಣ್ಣು
ಮನಸು ಕದ್ದಾವ ||೧೨||

ಈ ಹೆಣ್ಣುಮಕ್ಕಳು ಶ್ರಮಜೀವನದಿಂದ ಬದುಕುವಂಥವರು. ಇವರಿಗೆ ಶೃಂಗಾರ ಮಾಡಿಕೊಳ್ಳಲು ವೇಳೆ ಹಾಗು ಹಣ ಸಿಕ್ಕೀತೆ? ಮುಖದ ಮೇಲೆ ಮೂರು ಹಸಿರು ಹಚ್ಚಿಗಳಾದರೆ ಸಾಕು. ಅವರಿಗೆ ಅದೇ ದೊಡ್ಡ ಶೃಂಗಾರ.
ಸಿಂಗಾರವಿಲ್ಲದಿದ್ದರೇನಾಯಿತು; ಸೊಬಗು ಇರಲಾರದೆ? ಅಂತಹ ಸೊಬಗನ್ನು ಮೆಚ್ಚುವವರು ‘ಸೊಗಸಿ-ಜೀವ’ಗಳು, ನಿರಾಭರಣ ಚೆಲುವನ್ನು ಮೆಚ್ಚಿ, ಮುದ್ದು ಮಾಡುವ ಅವರ ಜೊತೆಗಾರರು! ದಾರಿಯನ್ನು ನಡೆನಡೆದು ಈ ದಾರಿಗರು ಸೋತಿದ್ದರೂ ಸಹ, ತಮ್ಮ ಜೊತೆಗಾತಿಯರ ಈ ನಿರಾಭರಣ, ಶ್ರಮಿಕ ಚೆಲುವಿಗೆ ಮನಸೋತಿದ್ದಾರೆ. ‘ದಾರಿಗರು’ ಎನ್ನುವ ಪದವನ್ನು ಗಮನಿಸಿರಿ. ಇವರು ಕ್ರಮಿಸುತ್ತಿರುವದು ಬದುಕಿನ ದಾರಿ. ಈ ದಾರಿಯನ್ನು ಹಗುರಾಗಿ ಕ್ರಮಿಸಲು ಬೇಕಾಗುವದು ಪರಸ್ಪರ ಪ್ರೀತಿಯೇ ಹೊರತು ಶೃಂಗಾರ ಸಾಧನವಲ್ಲ!

ಹದಿಮೂರನೆಯ ನುಡಿ:
ಚವರಿ-ಜೋಳದ ತೆನೆಯೆ
ಎರಡು ಬದಿಗೆ ಸರಿದು
ಅವರ ಮುಖರೇದ ಮುಖಕೆ
ಚವರ ಹಿಡಿದಾವ ||೧೩||

ಈ ಶ್ರಮಿಕರಲ್ಲಿ ಶೃಂಗಾರಪ್ರಸಾದನವಿರಲಿಕ್ಕಿಲ್ಲ. ಆದರೆ ಪ್ರಕೃತಿಯೇ ಇವರಿಗೆ ಶೃಂಗಾರವನ್ನು ತೊಡಿಸುತ್ತದೆ. ಅದು ಹೇಗೆ? ನಿಸರ್ಗದ ಪ್ರತಿಯೊಂದು ವಸ್ತುವಿನಲ್ಲೂ ಜೀವವಿದೆ. ಅದು ಪ್ರೇಮ ಹಾಗು ಕರುಣೆಗೆ ಸ್ಪಂದಿಸುತ್ತದೆ. ಆದುದರಿಂದ ಅಲ್ಲಿ ಬೆಳೆದು ನಿಂತ ಜೋಳದ ಪೀಕು ಸಹ ಈ ಆಳುಮಕ್ಕಳೊಡನೆ ಒಂದಾಗಿ ಆಡಬಯಸುತ್ತದೆ. ಅವರೊಡನೆ ಅದು ಸ್ಪಂದಿಸುವ ರೀತಿಯನ್ನು ನೋಡಿರಿ:

ಈ ಆಳುಮಕ್ಕಳು ಹೊಲದಲ್ಲಿ ಹಾದು ಹೋಗುವಾಗ, ತೆನೆ ಹೊತ್ತ ಚವರಿ-ಜೋಳವು ಎರಡು ಭಾಗವಾಗಿ, ಅವರಿಗೆ ದಾರಿ ಮಾಡುತ್ತದೆ. (ಚವರಿ ಎಂದರೆ ಜೋಳದ ಒಂದು ಪ್ರಕಾರ. ಚವರಿ ಪದಕ್ಕೆ ಹೆಣ್ಣುಮಕ್ಕಳು ಹೆರಳಿನ ಕೊನೆಗೆ ಜೋಡಿಸಿಕೊಳ್ಳುವ ಗೊಂಡೆ ಎನ್ನುವ ಅರ್ಥವೂ ಇದೆ.) ಈ ತೆನೆಗಳು ಆಗ ದೇವರಿಗೆ ಬೀಸುವ ಚಾಮರದಂತೆ ಕಾಣುತ್ತವೆ. ಈ ಆಳುಮಕ್ಕಳು ಮೌನಿಯಾಗಿ ನಡೆದಿಲ್ಲ. ಮಾತನಾಡುತ್ತ ಹಾಗು ನಗುತ್ತ ಹೊರಟಿದ್ದಾರೆ. (ಮುಖರೇದ ಅಂದರೆ ಮಾತುಗುಳಿ ಎನ್ನುವ ಅರ್ಥ.) ಉಲ್ಲಾಸದಿಂದ ಸಂಭಾಷಿಸುತ್ತಿರುವ ಅವರ ಮಾತುಗಾರ ಮುಖಕ್ಕೆ ಈ ತೆನೆಗಳು ಚಾಮರ ಹಿಡಿದಂತೆ ಕಾಣುತ್ತಿವೆ.


ಹದಿನಾಲ್ಕನೆಯ ನುಡಿ:
ಹಗಲು ಮಲ್ಲಾಡಕೆ ಕಳೆದು
ಇರುಳು ವಸತಿಗಂತ
ಬೆಳ್ಳಕ್ಕಿ ತೋರಣಗಟ್ಟಿ
ಬೆಳವಲಕ್ಕೆ ನಡೆದಾವ ||೧೪||


ಮಾನವಜೀವಿಗಳ ಚಟುವಟಿಕೆಯನ್ನು ಬಣ್ಣಿಸಿದ್ದಾಯ್ತು. ಇನ್ನು ಇತರ ಜೀವಿಗಳೂ ಸಹ ಈ ಪರಿಸರದ ವಾಸಿಗಳೇ ಅಲ್ಲವೆ? ಬೇಂದ್ರೆಯವರು ಆಗಸದಲ್ಲಿ ಹಾರುತ್ತ, ತಮ್ಮ ಗೂಡಿನತ್ತ ಮರಳುತ್ತಿರುವ ಹಕ್ಕಿಗಳನ್ನು ನೋಡುತ್ತಾರೆ.

ಬೆಳ್ಳಕ್ಕಿಗಳ ಹಿಂಡು ಹಗಲು ಹೊತ್ತಿನಲ್ಲಿ ಮಲೆನಾಡಿಗೆ ತೆರಳಿ, ಅಲ್ಲಿ ತನ್ನ ಭೋಜನವನ್ನು ಮುಗಿಸಿಕೊಂಡು, ಈಗ ಇರುಳಿನಲ್ಲಿ ತಮ್ಮ ವಸತಿಗೆ ಅಂದರೆ ಗೂಡಿಗೆಂದು ಬೆಳವಲಕ್ಕೆ ತೆರಳುತ್ತಿವೆ. ಒಂದು ಶಿಸ್ತಿನಲ್ಲಿ ಹಾರುವ ಬೆಳ್ಳಕ್ಕಿಯ ಸಾಲು ತೋರಣದಂತೆ ಕಾಣುವದು ಸಹಜವೆ!

ಧಾರವಾಡವು ಮಲೆನಾಡು ಹಾಗು ಬೆಳವಲದ ಸಂಧಿಸ್ಥಾನದಲ್ಲಿದೆ. ಈ ಹಕ್ಕಿಗಳು ಹಗಲಿನಲ್ಲಿ ಧಾರವಾಡದ ಪಶ್ಚಿಮಕ್ಕೆ ಚಲಿಸಿ ಹೇರಳವಾಗಿ ಸಿಗುವ ಕಾಳುಕಡಿ ಹಾಗು ಕೀಟಗಳನ್ನು ಭಕ್ಷಿಸುವವು. ಸಂಜೆಯಾದೊಡನೆ ಧಾರವಾಡದ ಪೂರ್ವಕ್ಕೆ, ಹೆಚ್ಚು ಸುರಕ್ಷಿತವಾದ ವಾಸಸ್ಥಾನಕ್ಕೆ ತೆರಳುವವು.

ಹದಿನೈದನೆಯ ನುಡಿ:
ಬಯಲು ಗುಡಿಸಲದ ಜೀವ
ಕಾಡು-ಗೂಡಿನ ಹಕ್ಕಿ
ತಮ್ಮ ಸರಿಜೋಡಿ ಮಾಡಿ
ಸೋಬಾನೆ ಹೇಳ್ಯಾವ ||೧೫||

ಬೇಂದ್ರೆಯವರು ಈಗ ಪ್ರಕೃತಿಯ ಜೀವಿಗಳಲ್ಲಿಯ ಸಾಮ್ಯತೆಯನ್ನು ಗಮನಿಸುತ್ತಾರೆ.
ಹೊಲದಲ್ಲಿ ದುಡಿದು ವಿಶ್ರಾಂತಿಗೆಂದು ಗುಡಿಸಲಿಗೆ ಮರಳುತ್ತಿರುವ ಮಾನವ ಜೀವಿಗಳಿಗೆ ಹಾಗು ಆಹಾರಕ್ಕಾಗಿ ಹಾರಾಡಿ, ಈಗ ಗೂಡಿಗೆ ಮರಳುತ್ತಿರುವ ಹಕ್ಕಿಗಳಿಗೆ ಇರುವ ಸಾಮ್ಯತೆ ಏನು?

ಒಕ್ಕಲುಮಕ್ಕಳು ಬಯಲಲ್ಲಿ ಗುಡಿಸಲು ಹಾಕಿಕೊಂಡು ಬದುಕುವ ಬಡಜೀವಿಗಳು; ಹಕ್ಕಿಗಳು ಕಾಡಿನಲ್ಲಿ ಗೂಡು ಕಟ್ಟಿಕೊಂಡು ಇರುವ ಜೀವಿಗಳು. ಈ ಎರಡೂ ಜೀವಿಗಳು ಅವತ್ತಿನ ಅನ್ನವನ್ನು ಅವತ್ತಿನ ದುಡಿತದಿಂದ ಪಡೆಯುವ, ಲೋಭವಿಲ್ಲದ ಸರಳ ಜೀವಿಗಳು ಹಾಗು ಪ್ರಕೃತಿಯೊಡನೆ ಸಮರಸವಾಗಿ ಬಾಳುವ ಜೀವಿಗಳು.

ಇರುಳು ಸರಿದು ಬಂದಂತೆ, ಈ ಮುಗ್ಧಜೀವಿಗಳು ತಮ್ಮ ತಮ್ಮ ಜೊತೆಗಾರ/ಜೊತೆಗಾತಿಯನ್ನು ಜೋಡಿ ಮಾಡಿಕೊಂಡು ಸೋಬಾನೆ ಹಾಡುತ್ತ ಆನಂದಿಸುತ್ತಾರೆ. ಸೋಬಾನೆ ಹಾಡುವದು ಎನ್ನುವ ಪದಪುಂಜ ತುಂಬ ಅರ್ಥಪೂರ್ಣ ಬಳಕೆಯಾಗಿದೆ. ಇದು ಈ ಮುಗ್ಧ ಜೀವಿಗಳ  ಸಾಮುದಾಯಿಕ ಬದುಕನ್ನು ತೋರಿಸುವದಲ್ಲದೆ, ಸೋಬಾನೆ(=ಶೋಭನ) ಅಂದರೆ ಪ್ರೇಮಮಗ್ನವಾಗುವ ನೈಸರ್ಗಿಕ ಕ್ರಿಯೆಯನ್ನು ಸೂಚಿಸುತ್ತದೆ.

ಹದಿನಾರನೆಯ ನುಡಿ:
ಮುಚ್ಚಂಜೆ ಮುಗಿದಾಗ
ಸೀಗಿಗೌರಿಯ ದನಿಯೆ
ತೇಲಿ ಬರುವಂತೆ ನಾಡು
ಕಿವಿಯಾಗಿ ಕೇಳ್ಯಾವ ||೧೬||

ಸಂಜೆ ಮುಗಿದು ಇರುಳು ಮುಸುಕುತ್ತಿದೆ. ಈ ಹಕ್ಕಿಗಳು ಹಾಗು ಈ ಕಾಯಕಜೀವಿಗಳು ಹಾಡುವ ‘ಸೋಬಾನೆ’ ಹಾಡು ಪರಿಸರವನ್ನು ತುಂಬಿಕೊಳ್ಳುತ್ತಿದೆ. ಇದು ಸೀಗಿಹುಣ್ಣಿವೆ ಬರುವ ಚೆಲುವಿನ ಕಾಲ. ಸೀಗಿಹುಣ್ಣಿವೆಯಂದು ಒಕ್ಕಲಿಗರು ಹೊಲದಲ್ಲಿ ಚರಗ ಚೆಲ್ಲಿ ಪ್ರಕೃತಿದೇವಿಗೆ ನಮಿಸುತ್ತಾರೆ. ಆದುದರಿಂದ ಈ ಸೋಬಾನೆ ಹಾಡು ಸೀಗಿಗೌರಿಯ ದನಿಯಂತೆಯೇ ಭಾಸವಾಗುತ್ತಿದೆ. ಗಾಳಿಯಲ್ಲಿ ತೇಲಿ ಬರುವ ಈ ಹಾಡನ್ನು ಇಡೀ ನಾಡೇ ಕಿವಿಯಾಗಿ ಕೇಳುತ್ತಿದೆ. ನಾಡು ಎನ್ನುವ ಪದವು ಚರಾಚರ ಜಗತ್ತನ್ನೆಲ್ಲ ಸೂಚಿಸುತ್ತದೆ. ಭಗವಂತನ ಸೃಷ್ಟಿಯೆಲ್ಲ ಈ ನಾದದಲ್ಲಿ ಲೀನವಾಗಿದೆ.

ಈ ಕವನದ ಪ್ರತಿ ನುಡಿಯ ಕೊನೆಯಲ್ಲಿ ಬರುವ ಕ್ರಿಯಾಪದವು ಬಹುವಚನದಲ್ಲಿ ಇದ್ದುದನ್ನು ಗಮನಿಸಬೇಕು. ಉದಾಹರಣೆಗೆ ‘ ಬಿಸಿಲು ಮೈಚಾಚ್ಯಾವ, ಬೈತಲಾ ಬಾಚ್ಯಾವ’ ಇತ್ಯಾದಿ. ಆಡುನುಡಿಯಲ್ಲಿ ಸಹ ಇಂತಹದೇ ಪ್ರಯೋಗವು ಸಾಮಾನ್ಯವಾಗಿದೆ.

 ಈ ರೀತಿಯ ಪ್ರಯೋಗದಿಂದ ಬೇಂದ್ರೆಯವರು ಬಹು ವಸ್ತುಗಳು ಏಕರೂಪವಾಗಿ ಕ್ರಿಯೆಯಲ್ಲಿ ತೊಡಗುವದನ್ನು ಅರ್ಥಾತ್ ಸಮರಸದ ಕ್ರಿಯೆಯನ್ನು ತೋರಿಸುತ್ತಿದ್ದಾರೆ. ಇಂತಹ ಪ್ರಯೋಗದ ಮತ್ತೊಂದು ಪ್ರಯೋಜನವೆಂದರೆ, ಬಿಸಿಲು, ಗಾಳಿ ಈ ಮೊದಲಾದ ವಸ್ತುಗಳ ಕ್ರಿಯಾಪ್ರದೇಶಗಳು ವೈಶಾಲ್ಯವನ್ನು ಪಡೆಯುತ್ತವೆ.

 ಕೊನೆಯ ನುಡಿಯಲ್ಲಿ ‘ನಾಡು ಕೇಳ್ಯಾವ’ ಎನ್ನುವಾಗ ‘ನಾಡು’ ಏಕವಚನದಲ್ಲಿದ್ದರೂ ಸಹ ಕ್ರಿಯಾಪದವು ಬಹುವಚನದಲ್ಲಿದೆ. ಏಕೆಂದರೆ ನಾಡಿನಲ್ಲಿಯ ಎಲ್ಲ ಚರಾಚರ ವಸ್ತುಗಳು ಈ ಹಾಡನ್ನು ಕೇಳುತ್ತಿವೆ.
ಉದ್ದೇಶಕ್ಕೆ ತಕ್ಕಂತೆ ‘ವ್ಯಾಕರಣವನ್ನು ಬಗ್ಗಿಸಿಕೊಳ್ಳುವ’ ಈ ಕಲೆ ಚಮತ್ಕಾರಿಕವಾದದ್ದು!

ಪ್ರಕೃತಿಯು ಪಂಚಭೂತಾತ್ಮಕವಾಗಿದೆ. ಪೃಥ್ವಿ, ಅಪ್, ತೇಜ, ಆಕಾಶ, ವಾಯು ಇವು ಈ ಪಂಚಮಹಾಭೂತಗಳು. ‘ಚಿತ್ತಿ ಮಳೆಯ ಸಂಜೆ’ ಕವನದಲ್ಲಿ ಪ್ರಕೃತಿಯ ಪೂಜೆಯಿದೆ. ಮೊದಲೆರಡ ನುಡಿಗಳಲ್ಲಿ ಅಪ್ ಅಂದರೆ ಮಳೆಯ ವರ್ಣನೆಯಿದ್ದರೆ, ಮೂರನೆಯ, ಐದನೆಯ ಹಾಗು ಆರನೆಯ ನುಡಿಗಳಲ್ಲಿ ತೇಜ ಅಂದರೆ ಸೂರ್ಯನ ವರ್ಣನೆ ಇದೆ. ನಾಲ್ಕನೆಯ ನುಡಿಯಲ್ಲಿ ವಾಯುವಿನ ವರ್ಣನೆ ಇದ್ದರೆ ಕೊನೆಯಲ್ಲಿ ಪೃಥ್ವಿ ಅಂದರೆ ಭೂತಾಯಿಯ ವರ್ಣನೆ ಇದೆ. ಜೀವಸಂಕುಲವೂ ಸಹ ಪಂಚಭೂತಗಳಿಂದಲೇ ಸೃಷ್ಟಿಯಾದದ್ದು. ಮಾನವ ಹಾಗು ಪಕ್ಷಿಗಳನ್ನು ಒಳಗೊಂಡ ಈ ಜೀವಸಂಕುಲವು ಪ್ರಕೃತಿಯೊಡನೆ ಸಮರಸವಾಗಿ ಬಾಳುವ ಸ್ಥಿತಿಯನ್ನು ೮ರಿಂದ ೧೫ನೆಯ ವರೆಗಿನ ನುಡಿಗಳು ವರ್ಣಿಸುತ್ತವೆ. ೧೬ನೆಯ ನುಡಿಯು ಈ ಪ್ರಕೃತಿಯು ದೈವೀ ಚೈತನ್ಯ ಎಂದು ಸಾರುತ್ತದೆ.

ಬೇಂದ್ರೆಯವರ ಕವನಗಳು ತೋರಿಕೆಗೆ ತುಂಬ ಸರಳವಾದ ಕವನಗಳು. ದೇಸಿ ನುಡಿಯಲ್ಲಿರುವದರಿಂದ  ಸಂಸ್ಕೃತ ಪದಗಳ ಸಮಾಸಜೋಡಣೆಯ ಲಾಭ ಇಲ್ಲಿ ಸಿಗುವದಿಲ್ಲ. ಬೇಂದ್ರೆಯವರಿಗೆ ಅದು ಬೇಕಾಗಿಯೇ ಇಲ್ಲ. ದೇಸಿ ಪದಗಳನ್ನೇ ಬಳಸಿ ಅವರು ಅಪೂರ್ವ ಅರ್ಥಸಾಧನೆಯನ್ನು ಮಾಡಬಲ್ಲರು. ‘ಸಿಂಗಾರಿಲ್ಲದೀ ಸೊಬಗು’ ಹಾಗು ‘ಸೊಗಸಿ-ಜೀವ’ ಎನ್ನುವ ಪದಗಳ ಅರ್ಥಗರ್ಭಿತೆಯನ್ನು ಉದಾಹರಣೆಗೆಂದು ನೋಡಬಹುದು. 

ಬೇಂದ್ರೆಯವರು ನಿಸರ್ಗದ ಸಾಧಾರಣ ಎನ್ನಿಸಬಹುದಾದ ನೋಟಗಳನ್ನು ಸರಳವಾಗಿ ವಿವರಿಸುತ್ತಲೇ, ಸಂಕೀರ್ಣವಾದ ಕವನವನ್ನು ರಚಿಸಬಲ್ಲರು. ಚಿತ್ತಿಯ ಮಳೆಯ ಸಂಜೆಯು ತರುವ ಆಹ್ಲಾದದಿಂದ ಪ್ರಾರಂಭವಾಗುವ ಕವನವು, ಸುತ್ತಲಿನ ಪ್ರಕೃತಿಯ ಲಾಸ್ಯವನ್ನು ಕ್ರಮಬದ್ಧವಾಗಿ ವರ್ಣಿಸುತ್ತಲೇ, state of blissಗೆ ಹೋಗಿ ತಲುಪತ್ತದೆ.

‘ಚಿತ್ತಿಯ ಮಳೆಯ ಸಂಜೆ’ ಕವನವು ಕೇವಲ ಪ್ರಕೃತಿವರ್ಣನೆಯ ಕವನವಲ್ಲ. ಇದು ಋಷಿಹೃದಯದ ಕವಿಯೊಬ್ಬನ ದಾರ್ಶನಿಕ ಕವನ.

‘ನಾನೃಷಿಃ ಕುರುತೇ ಕಾವ್ಯಮ್!’

[ಟಿಪ್ಪಣಿ: ಬೇಂದ್ರೆಯವರು ಈ ಕವನದಲ್ಲಿ ತಲುಪಿದ ರಸಸಿದ್ಧಿಯ ಸಮರ್ಪಕ ವ್ಯಾಖ್ಯಾನವು ನನಗೆ ಸಾಧ್ಯವಾಗಿಲ್ಲ ಎನ್ನುವ ಅರಿವು ನನಗಿದೆ.]

46 comments:

Swarna said...

ಸಿಂಗಾರಿಲ್ಲದೀ ಸೊಬಗುಸೊಗಸಿ-ಜೀವಕೆ ಮುದ್ದು
ಚೆಂದದ ಸಾಲು. ಚೆಂದದ ವಿವರಣೆ ಸರ್. ಧನ್ಯವಾದಗಳು
ಸ್ವರ್ಣ

sunaath said...

ಸ್ವರ್ಣಾ,
ಇದು ತುಂಬ ಚೆಲುವಾದ ಸಾಲು. ಧನ್ಯವಾದಗಳು,ಸ್ವರ್ಣಾ.

Badarinath Palavalli said...

ಕುಣಿಸ ಬಲ್ಲ ಕವಿ ಬೇಂದ್ರೆ.

ಅದೆಷ್ಟು ಬೆಂದರೆ ಕವಿಯಾಗ ಬಲ್ಲ ಒಬ್ಬ ಬೇಂದ್ರೆ!

ಪದ ಪದಗಳಲೂ ಲಾಲಿತ್ಯವನ್ನು ತುಂಬುತ್ತಿದ್ದ ಅವರ ಕಾವ್ಯವನ್ನು ಅರ್ಥ ಪೂರ್ಣವಾಗಿ ಬರಹವಾಗಿದ್ದೀರ ಸಾರ್.

ಧನ್ಯವಾದಗಳು.

ಮಂಜುಳಾದೇವಿ said...

ಸುನಾಥ್ ಸಾರ್,
ಬೇಂದ್ರೆಯವರ ಮತ್ತೊಂದು ಕವನದ ಅರ್ಥಪೂರ್ಣ ವ್ಯಾಖ್ಯಾನ ಮನಸ್ಸನ್ನು ಹಿಡಿದು ನಿಲ್ಲಿಸಿತು. ಮತ್ತೊಮ್ಮೆ ಮಗದೊಮ್ಮೆ ಓದುವಂತೆ ಪ್ರ‍ೇರೆಪಿಸಿತು.ನಿಮ್ಮ ಬರಹಗಳನ್ನು ಕಾಯುವಂತೆ ಮಾಡುವ ವಿವರಣೆಗಳು ನಿಮ್ಮ ಬರಹದ ವೈಶಿಷ್ಟ್ಯ.ಅಭಿನಂದನೆಗಳು.

ಮನಮುಕ್ತಾ said...

ಕಾಕಾ,
ಅದ್ಭುತ ಸಾಲುಗಳು.. ತಕ್ಕ೦ತೆ ಸು೦ದರ ಅರ್ಥ ವಿವರಣೆ.ಒ೦ದಕ್ಕಿ೦ತ ಒ೦ದು ಸು೦ದರ ಸಾಲುಗಳು..!
ಓದಿ ತು೦ಬಾ ಖುಶಿಯಾಯ್ತು ಕಾಕಾ,

"ಸ೦ಜಿ ಸೂರ್ಯನ ಹೆಗಲಜರದ ಸಲ್ಲೇದ ಸೋಗಿನವಿಲಗೊರಳಿನ ಮುಗಿಲಸೆರಿಗ್ಗೆ ಬೀಸ್ಯಾವ." ಸಾಲು ಅದಕ್ಕೆ ನೀಡಿರುವ ಅರ್ಥ.. ಓದಿ ಮತ್ತಷ್ಟು ಖುಷಿಯಾಯ್ತು.

sunaath said...

ಬದರಿನಾಥರೆ,
ಸಾಗರಕ್ಕೆ ಸಾಗರವೇ ಉಪಮೆ ಎಂದು ಹೇಳುತ್ತಾರೆ. ಬೇಂದ್ರೆಯವರಿಗೆ ಬೇಂದ್ರೆಯವರೇ ಉಪಮೆ!

sunaath said...

ಮಂಜುಳಾದೇವಿಯವರೆ,
ಬೇಂದ್ರೆ ಕವನಗಳೇ ಹಾಗೆ. ಎಷ್ಟು ಮೆಲ್ಲಿದರೂ ಇನ್ನಷ್ಟು ಬೇಕೆನಿಸುವ ಸಿಹಿ ರುಚಿ.

sunaath said...

ಮನಮುಕ್ತಾ,
‘ಸಂಜೆಸೂರ್ಯನ ಹೆಗಲ ಜರದ ಸೆಲ್ಲೇದ ಸೋಗಿ..’ ಒಂದು ಅದ್ಭುತ ರೂಪಕ. ಈ ಕವನವನ್ನು ರೂಪಕಗಳ ಕವನ ಎನ್ನಬಹುದೇನೊ?

Subrahmanya said...

ಕವಿಯು ತಲುಪಿರಬಹುದಾದ ಪರಿಪೂರ್ಣ ರಸಸಿಧ್ಧಿಯ ಭಾವವನ್ನು ತಲುಪುವುದು ಯಾವುದೇ ವಿಮರ್ಷಕನಿಗೂ ವ್ಯಾಖ್ಯಾನಕಾರನಿಗೂ ಆಗದ ಮಾತೇ ಸರಿ. ನಮ್ಮ ವಿವರಣೆಗಳೇನಿದ್ದರೂ ನಮ್ಮ ನೆಲವಿಗಷ್ಟೇ ಸೀಮಿತವಾಗಿರುತ್ತದೆ. ರಸಸಿದ್ಧಿಯ ಭಾವವನ್ನು ಬೇಂದ್ರೆಯವರೇ ವಿವರಿಸಿ ಹೇಳಿ ಹೋಗಬೇಕಿತ್ತು ಅಷ್ಟೆ !. ಅದೇನಿದ್ದರೂ....
ನಿಮ್ಮ ವಿವರಣೆಗಳು ನಮಗೆ ಹಬ್ಬದೂಟದಂತೆ.

Manjunatha Kollegala said...

ಸೊಗಸಾದ ವಿವರಣೆ, ಎಂದಿನಂತೆ. ರವಿ ಕಾಣದ್ದನ್ನು ಕವಿ ಕಂಡ, ಕವಿ ಕಾಣದ್ದನ್ನು ವಿಮರ್ಶಕ ಕಂಡ ಅನ್ನೋಣವೆಂದರೆ ಇದು ವಿಮರ್ಶೆಯಲ್ಲ :) ಸೊಗಸಾದ ರಸಯಾತ್ರೆ. ಧನ್ಯವಾದ

sunaath said...

ಸುಬ್ರಹ್ಮಣ್ಯರೆ,
ಬೇಂದ್ರೆಯವರು ವಿವಿಧ ಪದಾರ್ಥಗಳನ್ನು ಬಳಸಿ, ಧಾರವಾಡ ಪೇಢೆ ತಯಾಸಿದ್ದಾರೆ. ವಿಮರ್ಶಕನು ‘ಖೋವಾ ಇಷ್ಟು ಪ್ರಮಾಣದಲ್ಲಿದೆ, ಸಕ್ಕರೆಯ ಅಳತೆ ಇಷ್ಟಿದೆ’ ಎಂದು ಹೇಳಿದರೆ, ಪೇಢೆಯ ರುಚಿ ಸಿಗಲು ಸಾಧ್ಯವೆ?!

sunaath said...

ಮಂಜುನಾಥರೆ,
ನನ್ನ ವ್ಯಾಖ್ಯಾನದ ಬಗೆಗೆ ನನಗೆ ತೀವ್ರ ಅತೃಪ್ತಿಯಿದೆ. ಈ ಕವನದ ಕೆಲವೊಂದು ಅಂಶಗಳ ಬಗೆಗೆ ನಾನು ಬರೆದಿರಬಹುದು. ಆದರೆ ಕವನದ ಸಮಗ್ರ ರಸಗ್ರಹಣ ಇಲ್ಲಿ ಸಾಧ್ಯವಾಗಿಲ್ಲ!

ಚುಕ್ಕಿಚಿತ್ತಾರ said...

ಕಾಕ..
ಕವಿತೆಯನ್ನು ಮೊದಲು ಓದಿದಾಗ ಏನೇನೂ ಅರ್ಥವಾಗಲಿಲ್ಲ.. ನಿಮ್ಮ ವಿವರಣೆಯ ಜೊತೆ ಓದಿದಾಗ ಹೌದೌದೆನಿಸಿತು.. ಬೇ೦ದ್ರೆಯವರ ಕವಿತೆಗಳು ಕಭ್ಭಿಣದ ಕಡಲೆಯೇ ಸರಿ.!!

sunaath said...

ವಿಜಯಶ್ರೀ,
ಬೇಂದ್ರೆಯವರ ಕವನಗಳು ಮೇಲ್ನೋಟಕ್ಕೆ ಸರಳ, ತಿರುಳು ತಿಳಿದಷ್ಟೂ ಇನ್ನೂ ಇರುತ್ತದೆ!

V.R.BHAT said...

ಸ್ವಲ್ಪ ನಿಧಾನಗತಿಯಲ್ಲಿ ನಿಮ್ಮೊಡನೆ ಹೆಜ್ಜೆಹಾಕುತ್ತಿದ್ದೇನೆ-ಓದುವುದಕ್ಕೆ. ಯಾವ ಘಳಿಗೆಯಲ್ಲಿ ಏನು ಸ್ಫುರಿಸಿತ್ತು ಎಂಬುದನ್ನು ಅದರ ಒಳಹೊರಗು ತಿರುಗಿಸಿ ಅಳೆದವರೇ ಹೇಳಬಲ್ಲರೇ ವಿನಃ ಹಾಗೇ ಸುಮ್ಮನೇ ಹಾಡು-ಹಾಡಿಗೊಂದಷ್ಟು ಅರ್ಥ ವ್ಯರ್ಥಾಲಾಪವಾಗುತ್ತದೆ. ಆದರೆ ಬೇಂದ್ರೆಯವರನ್ನು ಖುದ್ದಾಗಿ ಕಂಡು ಅವರ ರಸನಿಮಿಷಗಳನ್ನು ನಿಮ್ಮದೇ ಸ್ವಂತ ಸೊಗಡಿನೊಂದಿಗೆ ಬರೆದಿದ್ದನ್ನು ಹಿಂದೆಯೇ ’ಬೇಂದ್ರೆ ಕವನಗಳಿಗೆ ಸುನಾಥರ ಭಾಷ್ಯ’ ಎಂದು ಹೇಳಿದ್ದೇನೆ. ರುಚಿಕಟ್ಟಾದ ಅಡಿಗೆ, ಉಣ್ಣಬೇಕೆನಿಸುತ್ತದೆ ಇಲ್ಲಿಗೆ ಬಂದು ಅಡಿಗಡಿಗೆ ! ಧನ್ಯವಾದಗಳು.

sunaath said...

ಭಟ್ಟರೆ,
‘ಬೇಂದ್ರೆ ಕವನಗಳಿಗೆ ಸುನಾಥರ ಭಾಷ್ಯ’ ಅನ್ನುವದು ದೊಡ್ದ ಮಾತು.ಎಲ್ಲಿಯ ಬೇಂದ್ರೆ, ಎಲ್ಲಿಯ ಸುನಾಥ! ನಿಮ್ಮ ವಿಶ್ವಾಸಕ್ಕೆ ಋಣಿ.

prabhamani nagaraja said...

ಬೆ೦ದ್ರೆಯವರ ಕವನವನ್ನು ಆಸ್ವಾಧಿಸಲು ನಿಮ್ಮ ವಿವರಣಾತ್ಮಕ ಲೇಖನ ಪೂರಕವಾಗಿದೆ ಸರ್. ಧನ್ಯವಾದಗಳು.

ದಿನಕರ ಮೊಗೇರ said...

first ...thank you....

ellarigu artha aaguva haage kavanavannu vivarisiddiraa sir...

thank you very much....

ಮನಸು said...

ಕಾಕ ಧನ್ಯವಾದಗಳು ಸಾಲು ಸಾಲುಗಳ ಅರ್ಥ ನಮ್ಮಂತವರಿಗೆಲ್ಲ ಅರ್ಥವಾಗುವಂತೆ ತಿಳಿಸಿದ್ದೀರಿ... ಬೇಂದ್ರೆಯಜ್ಜನ ಸಾಲುಗಳು ಅಷ್ಟೇ ಮುದನೀಡುವಂತಹವು..

sunaath said...

ದಿನಕರ,
ಬೇಂದ್ರೆಯವರ ಕವನದ ರಸದೂಟವನ್ನು ಉಣಬಡಿಸುವದು ನನಗೂ ಖುಶಿಯ ಸಂಗತಿಯೇ. ನಿಮಗೂ ಧನ್ಯವಾದಗಳು.

sunaath said...

ಪ್ರಭಾಮಣಿಯವರೆ,
ನಿಮಗೂ ಧನ್ಯವಾದಗಳು.

sunaath said...

ಮನಸು,
ಬೇಂದ್ರೆಯವರ ಕವನಗಳು ಸರ್ವಕಾಲಕ್ಕೂ ಮುದ ನೀಡುವಂತಹವು. ನಿಮಗೂ ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಮೊದಲು ಕವಿತೆಯನ್ನಷ್ಟೇ ಓದಿದಾಗ,ಬರೇ ಒಂದು ಮಳೆ ಬೀಳುವ ಪ್ರಕ್ರಿಯೆಯನ್ನು ಬೇಂದ್ರೆಯವರು ಎಷ್ಟೊಂದು ಬೇರೆ ಬೇರೆ ಅರ್ಥಗಳಲ್ಲಿ ಕಟ್ಟಿಕೊಡುತ್ತಾರಲ್ಲ ಅಂತ ಅನಿಸಿತು.ಆದರೆ ನಿಮ್ಮ ವಿವರಣೆಯನ್ನೂ ಓದಿದ ಮೇಲೆ
ಅದಕ್ಕಿರುವ ಬೇರೆ ಬೇರೆ ಆಯಾಮಗಳು ಮತ್ತು ಸಾಧ್ಯತೆಗಳನ್ನು ಗಮನಿಸಿ ಬೆರಗು ಹೆಚ್ಚಿತು.
"ತೋಪು ತೋಟದ ಗಾಳಿ
ನುಗ್ಗಿ ನುಸುಳಿ ಬಂದು
ಹುಲ್ಲುಗಾವಲಾ ಸವರಿ
ಬೈತಲಾ ಬಾಚ್ಯಾವ"
ಇಂಥ ಸಾಲುಗಳು ಬೇಂದ್ರೆಯವರು ನೋಡಿದ ಮಳೆಯನ್ನು ನಮ್ಮ ಕಣ್ಣಮುಂದೆ ತಂದು ನಿಲ್ಲಿಸುತ್ತವೆ.ಜೊತೆಗೆ ನಮ್ಮ ಅನುಭವ,ಗ್ರಹಿಕೆಯ ಗಾತ್ರ ಹಿಗ್ಗಿಸುತ್ತವೆ ಎಂದರೂ ಅಡ್ಡಿಯಿಲ್ಲ.

sunaath said...

RJ,
ನಾವು ಅನುಭವಿಸಿದ್ದನ್ನೇ ಬೇಂದ್ರೆಯವರು ಕವನಿಸಿದಾಗ, ನಮ್ಮ ಅನುಭವದ ಆಳ ಹಾಗು ವಿಸ್ತಾರ ನಮಗೇ ಅರಿವಾಗುತ್ತದೆ ಎನ್ನಬಹುದಲ್ಲವೆ?

Uma Bhat said...

ಕುರುಡು ಪ್ರೀತಿಯ ಹಾಂಗ ಕುರುಡು ಚಿತ್ತಿಯ ಮಳೆಯೆ, ................ಆ ಹುಚ್ಚು ಮಳೆಗೆ ಎಷ್ಟು ಅದ್ಭುತ ಹೋಲಿಕೆ. ಧನ್ಯವಾದಗಳು ಕಾಕಾ. .......ನಿಮ್ಮ ಎಲ್ಲಾ ಕವನಗಳನ್ನೂ ಓದಿ ಮುಗಿಸುತ್ತಿದ್ದೇನೆ. ಮತ್ತೊಮ್ಮೆ ಧನ್ಯವಾದಗಳು.

ಗಿರೀಶ್.ಎಸ್ said...

ಪ್ರಕೃತಿಯಲ್ಲಿ ಆಗುವ ಬದಲಾವಣೆಗಳು,ಪ್ರಕೃತಿಯ ಆಟ,ಇವುಗಳನ್ನು ಒಳಗೊಂಡಿರುವ ಈ ಕವಿತೆಯನ್ನು ಇನ್ನಷ್ಟು ಸವಿವರವಾಗಿ ಅರ್ಥೈಸಿದ್ದಿರಾ ಸರ್...

sunaath said...

ಉಮಾ ಅವರೆ,
ಉಪಮಾಪ್ರತಿಭೆಯಲ್ಲಿ ಬೇಂದ್ರೆಯವರು ಕಾಳಿದಾಸನಿಗೆ ಸರಿಸಾಟಿಯಾಗಿ ನಿಲ್ಲಬಲ್ಲರೇನೊ ಎಂದು ಅನಿಸುತ್ತದೆ!

sunaath said...

ಗಿರೀಶ,
‘ಪ್ರಕೃತಿಯ ಆಟ’ ಎನ್ನುವ ನಿಮ್ಮ ಹೇಳಿಕೆ ತುಂಬ ಸಮರ್ಪಕವಾಗಿದೆ. ಈ ಆಟದಿಂದ ಬೆರಗಾದ ಬೇಂದ್ರೆಯವರು ತಮ್ಮ ಕವನಗಳಿಂದ ನಮ್ಮನ್ನೂ ಬೆರಗುಗೊಳಿಸುತ್ತಾರೆ!

ಸಿಂಧು sindhu said...

ಪ್ರೀತಿಯ ಸುನಾಥ ಕಾಕಾ,

ಓದಿ, ಮತ್ತೆ ಮತ್ತೆ ಓದಿ ಮುದವೊಂದನ್ನೇ ಹೊದ್ದು ಕೂತಿದ್ದೇನೆ ಇಲ್ಲಿ.
ಯಾಂತ್ರೀಕೃತವಾದ ತಂತ್ರಜ್ಞಾನದ ಈ ಊರಲ್ಲಿ ಹಗಲಲ್ಲೇ ಲೈಟು ಹಚ್ಚಿ ಕೂಡುವ ಜಾತ್ರೆಯಲ್ಲಿ ಈ ಕವಿತೆಯ ಹಳ್ಳಿತನ ಜೀವಂತಿಕೆ ನನ್ನನ್ನ ಒದ್ದೊದ್ದೆ ಮಾಡಿದೆ.
ಈ ಸೊಗಸಾದ ಕವಿತೆಗೆ ಅಷ್ಟೇ ಸೊಗಸಾದ ವ್ಯಾಖ್ಯಾನ ಬರೆದಿದ್ದೀರಿ. ನೀವು ಪ್ರಾಜ್ಞರು. ನಿಮಗೆ ಈ ಚೆಲುವನ್ನ ಇನ್ನಷ್ಟು ತಿದ್ದುವ ಬಯಕೆಯಿದ್ದಿರುವುದು ಸಹಜ. ನಾನು ಸಾಮಾನ್ಯ ಓದುಗಳಿಗೆ ನಿಮ್ಮ ಈ ವ್ಯಾಖ್ಯಾನ ರಸಪಾಕವೇ ಆಗಿದೆ. ಮುಂಚೆ ಒಮ್ಮೆ ಬರೆದಿದ್ದೆ ನೀವು ರಸಶಾಸ್ತ್ರಜ್ಞರಿದ್ದೀರಿ ಎಂದು. ಆ ಮಾತು ಈ ವ್ಯಾಖ್ಯಾನಕ್ಕೆ ಇನ್ನಷ್ಟು ಪ್ರಭಾವಳಿಯೊಂದಿಗೆ ಸೊಗಯಿಸುತ್ತದೆ.
ಕುರುಡು ಚಿತ್ತಿ ಎಂಬ ಮಾತು ಕೇಳಿದ್ದೆನಾದರೂ ಅದರ ಉಪಯೋಗ ಮತ್ತು ಉತ್ಪತ್ತಿ ಗೊತ್ತಿರಲಿಲ್ಲ. ಚಿತ್ತೀ ಮಳಿ ತತ್ತೀ ಹಾಕುತಿತ್ತು ಸ್ವಾತಿ ಮುತ್ತೀನೊಳಗ.. ಅನ್ನುವ ಸಾಲು ಕೇಳಿ ಆ ಸಾಲಿನ ಚಮತ್ಕಾರಕ್ಕೆ ಬೆರಗಾಗಿದ್ದೆ.
ಎತ್ತೇನೋ ಬಿತ್ತೇನೋ ಎಂಬ ಸಾಲಿನ ಹಿರಿ,ಕಿರಿ ಅರ್ಥವೆರಡನ್ನೂ ಕೊಟ್ಟು ಆ ನುಡಿಯ ಚೆಲುವನ್ನ ಇಮ್ಮಡಿಸಿದ್ದೀರಿ.
ಇದಿರು ಗುಡ್ಡದ ತಲೆಗೆಮೋಡ ಮುಸುಕೆಳೆವಾಗಬದಿಯ ಗುಡ್ಡದ ಮ್ಯಾಲೆಬಿಸಿಲು ಮೈಚಾಚ್ಯಾವ ಸಹಜವಾದ ಚೆಂದದ ನುಡಿ. ಅದರ ಒಳ ಅರ್ಥಗಳನ್ನ ನೀವು ವಿವರಿಸಿದ ಬಗೆ ಅಷ್ಟೇ ಮೋಹಕವಾಗಿ ಬಂದಿದೆ.
ಎಲ್ಲ ನುಡಿಗಳೂ ಒಂದಕ್ಕಿಂತ ಇನ್ನೊಂದು ಚೆಲುವಾಗಿವೆ. ನವಿಲಗೊರಳಿನ ಮುಗಿಲ ಸೆರಿಗು - ಈ ಪ್ರಯೋಗಕ್ಕೆ ನಾನು ಮಾರುಹೋಗಿಬಿಟ್ಟೆ.
ಕವಿತೆಯ ದಾರ್ಶನಿಕತೆಗೆ ಹಸಿರಬಯಲು ದುಡಿದು ಮುಗಿಸಿ ಮನೆಗೆ ತೆರಳುವ ಒಕ್ಕಲಿಗರ ಹಾದಿಗೆ ಸೇಸೆ ಚೆಲ್ಲುವ, ಹಡದಿ ಹಾಸುವ ಚಿತ್ರಣವೇ ಸಾಕು. ಎಂತ ಕಣ್ಣು, ಎಂತಹ ಕಾಣ್ಕೆ ಅದನ್ನ ಸಿರಿಕನ್ನಡದ ಮುತ್ತುಗಳಲ್ಲಿ ಪೋಣಿಸಿ ನಮ್ಮ ಚಿತ್ತಗೊರಳಿಗೆ ಹಾರವಾಗಿಸಿದ ಕವಿಗೆ, ಈ ಸೊಗಸಾದ ಕವಿತೆಯನ್ನ ನಮಗೆ ಪರಿಚಯಿಸಿ, ರಸಧಾರೆ ಹರಿಸಿದ ನಿಮಗೆ ಶರಣು ಶರಣು.

ಪ್ರೀತಿಯಿಂದ,
ಸಿಂಧು

ತೇಜಸ್ವಿನಿ ಹೆಗಡೆ said...

ಪ್ರಿಯ ಕಾಕಾ,

ಸಿಂಧು ಅವರ ಪ್ರತಿಕ್ರಿಯೆಗೆ ನನ್ನ ಪ್ರತಿಕ್ರಿಯೆಯನ್ನು ಸೇರಿಸುತ್ತಿದ್ದೇನಷ್ಟೇ:)

ತೋಪು ತೋಟದ ಗಾಳಿ
ನುಗ್ಗಿ ನುಸುಳಿ ಬಂದು
ಹುಲ್ಲುಗಾವಲಾ ಸವರಿ
ಬೈತಲಾ ಬಾಚ್ಯಾವ

ಈ ಸಾಲುಗಳಲ್ಲೇ ನಾನು ಕಳೆದು ಹೋದೆ... ಬೇಂದ್ರೆಯಜ್ಜ ಎಂದರೇ ಸಾಕು "ಬಂಗಾರ ನೀರ ಕಡಲಾಚೆಗೀಚೆ.." ಹಾಡು ನೆನಪಾಗಿ ಕಾಡುವುದು. ನೋಡದೇಯೇ.. ಮಾತನಾಡಿಸದೇಯೇ ನನ್ನ ಅತಿ ಆತ್ಮೀಯರಂತೇ ಕಾಣುತ್ತಾರೆ ಇವರು. ಇಂತಹವರ ಅಪೂರ್ವ ಕೃತಿಗಳನ್ನು ಸರಳಗೊಳಿಸಿ ನಮಗೆ ಬಡಿಸುತ್ತಿದ್ದೀರಿ.. ಪಾಕಶಾಸ್ತ್ರರೇ ಸೈ ನೀವು :)

surangange said...

Please do not stop.keep writing

sunaath said...

ಸಿಂಧು,
ಬೇಂದ್ರೆಯವರ ‘ಹಳ್ಳಿಯ ಜೀವಂತಿಕೆ’ಯನ್ನು ನೀವು ಗುರುತಿಸಿದ್ದು ನಿಮ್ಮ ಸೂಕ್ಷ್ಮಗ್ರಹಣಕ್ಕೆ ಸಾಕ್ಷಿಯಾಗಿದೆ. ಬೇಂದ್ರೆಯವರ ‘ಪಾತರಗಿತ್ತಿ ಪಕ್ಕಾ’ ಕವನದಲ್ಲೂ ಸಹ ಇಂತಹ ಹಳ್ಳಿಯ ಜೀವಂತಿಕೆ ಇದೆ. In fact ಬೇಂದ್ರೆಯವರೆ, ಪಾತರಗಿತ್ತಿಯ ಕುಣಿತವನ್ನು ‘ಹುಲ್ಲುಗಾವಲದಾಗ, ಹಳ್ಳಿ ಹುಡುಗಿ ಹಾಂಗ’ ಎಂದು ಹಾಡಿದ್ದಾರೆ. ಅದೇ ಮಾತನ್ನು ಅವರ ಕವನಗಳಿಗೂ ಅನ್ವಯಿಸಬಹುದೇನೊ!
ನಿಮ್ಮ ಪ್ರೀತಿಗೆ ಋಣಿಯಾಗಿದ್ದೇನೆ.

sunaath said...

ತೇಜಸ್ವಿನಿ,
ಕವಿಯನ್ನು ಹಾಗೂ ಸಹೃದಯ ಓದುಗನನ್ನು ಬೆಸೆಯುವ ಭಾವವು ಬೇಂದ್ರೆಯವರ ಪ್ರತಿ ಕವನದಲ್ಲೂ ಕಾಣುತ್ತದೆ. ಇದು ಅವರನ್ನು ನಮಗೆ ಆತ್ಮೀಯರನ್ನಾಗಿ ಮಾಡುತ್ತದೆ, ಅಲ್ಲವೆ?

sunaath said...

ಸುರಗಂಗೆ,
ಸಹೃದಯ ಮಿತ್ರರೊಡನೆ ಸಲ್ಲಾಪವು ನಿಲ್ಲಬಹುದೆ? ಧನ್ಯವಾದಗಳು.

ಜಲನಯನ said...

ಸುನಾಥಣ್ಣ ಇದು ಮಿಸ್ ಆಯ್ತು ನನಗೆ ...ಚಿತ್ತೆ ಮಳೆಯ ಬಹುಮುಖ ಪರಿಚಯ ಅದೂ ವರಕವಿಯ ರತ್ನನುಡುಗಳ ಮೂಲಕ ಸೊಗಸಾಗಿದೆ... ಬಿಡಿಸಿಟ್ಟ ಹಲಸು ತಿನ್ನೋದೇ ಒಂದು ಸೊಗಸು ಮಕ್ಕಳಿಗೆ...ಅಲ್ವಾ ಸುನಾಥಣ್ಣಾ!!!!???

sunaath said...

ಜಲನಯನ,
ಬೇಂದ್ರೆಯವರ ಕವನಗಳೆಂದರೆ ಹಲಸಿನ ಹಣ್ಣೇ ಸರಿ!

ಶ್ರೀನಿವಾಸ ಮ. ಕಟ್ಟಿ said...

ನಿಮ್ಮ ಬರವಣಿಗೆಯೇ ಚೆಂದ. ಅದರಲ್ಲೂ ಬೇಂದ್ರೆಯವರ ಬಗ್ಗೆ ಬರೆಯುವಾಗ ತುಂಬಾ ಭಾವುಕರಾಗಿಬಿಡುತ್ತೀರಿ. ಬೇಂದ್ರೆಯವರ ಕಾವ್ಯ ಇರುವದೇ ಹಾಗೆ ! ಮನಸ್ಸಿನ ಭಾವನೆಗಳು ಪ್ರೋತ್ತುಂಗವಾಗಿ ಗಂಗಾಸಲಿಲದಂತೆ ಹೃದಯದಿಂದಲೇ ಬರುತ್ತವೆ. ಅದಕ್ಕೇ ಅವ್ಯ್ ಅಷ್ಟು ಶ್ರೇಷ್ಠವಾಗಿವೆ. ಕನ್ನಡಕ್ಕೇ ಅಂತಹ ಕವಿ ಸಿಗುವದು ಇನ್ನೆಂದೋ, ದೇವರೇ ಬಲ್ಲ !!

sunaath said...

ಕಟ್ಟಿಯವರೆ,
ನೀವು ಹೇಳುವದು ನಿಜ. ಬೇಂದ್ರೆಯವರೆಂದರೆ ಭುವನದ ಭಾಗ್ಯ. ಅವರ ಕವನಗಳನ್ನು ಓದುತ್ತಿರುವ ನಾವೇ ಭಾಗ್ಯವಂತರು.

Kalavatimadhisudan said...

sunath sir adbhutavaada bendreyavara sogssaagide
kaavyada vimarshegaagi dhanyavaadagalu.

sunaath said...

ಕಲರವ,
ಬೇಂದ್ರೆಯವರ ಕಾವ್ಯವೇ ಅದ್ಭುತ.
ನಿಮಗೆ ಧನ್ಯವಾದಗಳು.

AntharangadaMaathugalu said...

ಕಾಕಾ... ತುಂಬಾ ಸೊಗಸಾದ ವಿವರಣೆ....

ಶ್ಯಾಮಲ

ಸೀತಾರಾಮ. ಕೆ. / SITARAM.K said...

ತಾವು ಬೇಂದ್ರೆ ಕಂಡ ಕಲ್ಪನೆಯಷ್ಟು ವ್ಯಾಖ್ಯಾನ ಮಾದಿಲ್ಲದಿರಬಹುದು... ಆದರೆ ತಾವು ಮಾಡಿರುವ ವ್ಯಾಖ್ಯಾನ ನಮ್ಮ ಕಲ್ಪನೆಯನ್ನು ಮೀರಿದ್ದು....ಸುಂದರ ಕವನವನ್ನು ಅದರ ಪ್ರತಿಮೆಗಳ ವಿವರಣೆ ಜೊತೆಗೆ ಅದ್ಭುತವನ್ನಾಗಿಸಿದ್ದಿರಿ ನಮ್ಮಂಥ ಸಾಮಾನ್ಯ ಓದುಗರಿಗೆ.

Manjunatha Kollegala said...

ಓಹ್, ಕೆಲಕಾಲ ಇತ್ತ ತಲೆಹಾಕಲಾಗದಿದ್ದಿಕ್ಕೆ ಎಷ್ಟೊಂದು ಬರಹ ಬಂದುಬಿಟ್ಟಿದೆ!

ಸುನಾಥರೇ, ಸುಂದರ ಒಳನೋಟ ನೀಡಿದ್ದೀರಿ, ಎಂದಿನಂತೆ.

SP said...
This comment has been removed by the author.
SP said...

September 11, 2018 at 7:22 PM
ಸುನಾಥರೇ, ಎಂದಿನಂತೆ ಅದ್ಭುತ ವಿವರಣೆ. ಮೇಲ್ನೋಟಕ್ಕೆ ಸಾಮಾನ್ಯ ವೆನಿಸುವ ವಿವರಣೆಯ ಪದ್ಯದ ಹಿಂದಡಗಿದ ಸ್ವಾರಸ್ಯವನ್ನು ಬಿಡಿಸಿ ಧಾರವಾಡ ಫೇಡೆದ ಹಂಗ ಹಂಚೀರಿ! ಆದರ ಒಂದು ಡೌಟ: 13 ರಾಗ ಮುಖರೇದ ಮುಖ ಅಂದರ ನತ್ತ ಅಥವಾ ಮೂಗಿನ ಒಡವೆ (ಮುಖರ) ಯ ಮುಖ ಯಾಕ ಆಗ ಬಾರದು. (ಜೀ ವಿ ನಿಘಂಟು)12 ಮತ್ತು 13 ರಲ್ಲಿ ಹೆಣ್ಮಕ್ಕಳ ಸಂಬಂಧ ಅದ. ಸಿಂಗಾರಿಲ್ಲದ ಸೊಬಗು, ಚವರಿ ಇ. 13ರ ‘ಅವರ’ ಆ ಹೆಂಗಳೆಯರ ವರ್ಣನೆಗೇ ತಳುಕು ಹಾಕುತ್ತದೆ ಅಂತ ಅನಸತದ. ಮಾತಿನ ಮುಖಕ್ಕಿಂತ ನತ್ತಿನ ಮಕಕ್ಕ ಚವರಿ ಹಿಡದರ ಛಂದ ಅಲ್ಲ?

sunaath said...

SP, ನಿಮ್ಮ ಮಾತು ಖರೇ ಅದ. ಮುಖರ ಪದಕ್ಕೆ ನತ್ತು ಎನ್ನುವ ಅರ್ಥ ಇದೆ ಎಂದು ನನಗೆ ಗೊತ್ತಿರಲಿಲ್ಲ. ತಿಳಿಸಿದ್ದಕ್ಕಾಗಿ ಧನ್ಯವಾದಗಳು. ಈ ವರ್ಣನೆಯು ಆ ನುಡಿಯನ್ನು ಇನ್ನಷ್ಟು ಸುಂದರವಾಗಿಸುತ್ತದೆ.