ಮರುಳಲ್ಲ ನಾನು, ಮರುಳಾದೆನಯ್ಯ
ನನ್ನೆದೆಯ ಮರುಳಸಿದ್ಧ
ನಿಮ್ಮರುಳಿನಿಂದ ಮರ ಮರಳಿ ಅರಳಿ
ಸ್ಫುಟವಾಗಿ ಭಾವಶುದ್ಧ—
ನಿಮ್ಮಡಿಗೊ ಮುಡಿಗೊ ಮುಡಿಪಾಯ್ತು ಮಾತು
ಸಂತತದ ಏಕನಾದ
ಈ ಕೊರಳು-ಬೆರಳು, ಆ ಕರುಳು-ಅರಳು
ಮರುಳೂನು ತಂಪ್ರಸಾದ
ಬೇಂದ್ರೆಯವರ ಮೊದಲ ಕಾವ್ಯರಚನೆಯಾದ ‘ಕೃಷ್ಣಾಕುಮಾರಿ’ಯು ೧೯೨೨ರಲ್ಲಿ ಪ್ರಕಟವಾಯಿತು. ಅವರ ‘ಗಂಗಾವತರಣ’ ಕವನಸಂಕಲನವು ೧೯೫೧ರಲ್ಲಿ ಪ್ರಕಟವಾಯಿತು. ಈ ನಡುವಿನ ೨೯ ವರ್ಷಗಳಲ್ಲಿ ಗರಿ,ಮೂರ್ತಿ, ಕಾಮಕಸ್ತೂರಿ, ಸಖೀಗೀತ, ನಾದಲೀಲೆ, ಉಯ್ಯಾಲೆ, ಮೇಘದೂತ (ಅನುವಾದ), ಹಾಗು ಹಾಡು-ಪಾಡು ಎನ್ನುವ ಕವನಸಂಕಲನಗಳು ಮತ್ತು ‘ನಿರಾಭರಣ ಸುಂದರಿ’ (ಕಥಾಸಂಕಲನ) ಹಾಗು ‘ಸಾಹಿತ್ಯ ಮತ್ತು ಸಂಶೋಧನೆ’ ಎನ್ನುವ ಕೃತಿಗಳು ಪ್ರಕಟವಾದವು. ಆನಂತರದ ಐದು ವರ್ಷಗಳಲ್ಲಿ ಸೂರ್ಯಪಾನ, ಹೃದಯಸಮುದ್ರ, ಮುಕ್ತಕಂಠ, ಚೈತ್ಯಾಲಯ ಹಾಗು ಜೀವಲಹರಿ ಎನ್ನುವ ಐದು ಕವನಸಂಕಲನಗಳು ಹೊರಬಂದವು. ೧೯೫೬ರಲ್ಲಿ ಬೇಂದ್ರೆಯವರು ೬೦ ವರ್ಷಗಳನ್ನು ಪೂರೈಸಿದ ನೆನಪಿಗಾಗಿ, ಕೊನೆಯ ಐದು ಸಂಕಲನಗಳನ್ನು ಸಂಗ್ರಹಿಸಿ ‘ಅರಳು ಮರಳು’ ಸಂಕಲನವನ್ನು ಪ್ರಕಟಿಸಲಾಯಿತು. ಈ ಸಂಗ್ರಹಕ್ಕಾಗಿ ಬೇಂದ್ರೆಯವರು ಬರೆದ ಆತ್ಮನಿವೇದನೆಯ ಕೊನೆಯಲ್ಲಿ ಮೇಲಿನ ಕವನವಿದೆ.
‘ಅರವತ್ತು ವರ್ಷಕ್ಕೆ ಅರಳು ಮರಳು’ ಎನ್ನುವ ಮಾತು ಕನ್ನಡದಲ್ಲಿದೆ. ಬೇಂದ್ರೆಯವರ ಪ್ರತಿಭೆಗೆ ಅರಳುಮರಳು ಎಂದೂ ಮುಸುಕಲಿಲ್ಲ. ಈ ಪ್ರತಿಭೆ ಇದೀಗ ಹೆಚ್ಚು ಅಂತರ್ಮುಖವಾಯಿತಷ್ಟೆ. ಇದೇ ಮಾತನ್ನು ಬೇಂದ್ರೆಯವರು ‘ಮರುಳಲ್ಲ ನಾನು, ಮರುಳಾದೆನಯ್ಯ’ ಎನ್ನುವದರ ಮೂಲಕ ಹೇಳುತ್ತಾರೆ. ‘ನಾನು ಹುಚ್ಚನಲ್ಲ, ಆದರೆ ನನಗೆ ನೀನು ಹುಚ್ಚು ಹಿಡಿಸಿರುವೆ’ ಎನ್ನುವ ಅವರ ಮಾತನ್ನು ಮೀರಾದೇವಿಯ ‘ಹರಿ ಕೀ ಮೈ ತೊ ಪ್ರೇಮದಿವಾನಿ’ ಎನ್ನುವ ಗೀತೆಗೆ ಹೋಲಿಸಬಹುದು. ಕನ್ನಡದ ಅಕ್ಕಮಹಾದೇವಿಯೂ ಸಹ ಚೆನ್ನಮಲ್ಲಿಕಾರ್ಜುನಗೆ ಮರುಳಾದವಳೇ!
ಬೇಂದ್ರೆಯವರು ತಮ್ಮ ಹೃದಯದಲ್ಲಿರುವ ಗುರುವನ್ನು ‘ಮರುಳಸಿದ್ಧ’ ಎಂದು ಕರೆಯುತ್ತಾರೆ. ಸಾಧನೆಯ ಕೊನೆಯ ಹಂತವನ್ನು ಮುಟ್ಟಿದ ಯೋಗಿಗಳು ಲೋಕದ ಕಣ್ಣಿಗೆ ‘ಮರುಳ’ರಂತೆಯೇ ಕಾಣುತ್ತಿರುತ್ತಾರೆ. (ಉದಾಹರಣೆಗೆ ರಾಮಕೃಷ್ಣ ಪರಮಹಂಸರು.) ಕೆಲವು ಯೋಗಿಗಳು ಉದ್ದೇಶಪೂರ್ವಕವಾಗಿ ಮರುಳರಂತೆ ನಟಿಸುತ್ತಿರುತ್ತಾರೆ. ಉದಾಹರಣೆಗೆ
ಬ್ರಹ್ಮಚೈತನ್ಯ ಮಹಾರಾಜರ ಗುರುಗಳಾದ ತುಕಾಮಾಯಿಯವರು. ಏನೆ ಇರಲಿ, ಇವರೆಲ್ಲ ದೇವರಿಗೆ ಮರುಳಾದಂತಹ ಸಿದ್ಧಪುರುಷರು ಎನ್ನುವದಂತೂ ನಿಜ. ಈ ಗುರುಗಳು ತಮ್ಮ ಶಿಷ್ಯರಿಗೂ ಅಲೌಕಿಕದ ಮರುಳು ಹಿಡಿಸಿದಂಥವರು.
ಮರುಳಸಿದ್ಧನು ಅರಳಿದವನು ಅಂದರೆ ಪೂರ್ಣತೆಯನ್ನು ಮುಟ್ಟಿದವನು. ಅರುವು ಅಂದರೆ ಜ್ಞಾನ. (‘ಓ ಗುರುವೆ, ಅರುವೆ, ಶರಣಾಗಿ ಬರುವೆ..’ ಎನ್ನುವ ಬೇಂದ್ರೆಯವರ ಕವನವನ್ನು ಗಮನಿಸಿರಿ.) ಮರುಳಸಿದ್ಧನ ಅರಳುವಿಕೆ ಆತನ ಸಾಧಕರನ್ನೂ ಸಹ ಅರಳಿಸುತ್ತದೆ ಅಂದರೆ ಉತ್ಕ್ರಾಂತಿಯ ಪರಮ ನೆಲೆಗೆ ತಲುಪಿಸುತ್ತದೆ. (--ಇದು ಅರವಿಂದರು ಹೇಳುವ Superhuman Evolution ಆಗಿದೆ.—)ಆದರೆ ಈ ಹಾದಿ ಬಲು ದುರ್ಗಮವಾದ ಪಥವಾಗಿದೆ. ‘ಮರ ಮರಳಿ’ ಎನ್ನುವ ಪದಗಳ ಮೂಲಕ ಬೇಂದ್ರೆಯವರು ಸಾಧಕನು ತನ್ನ ಹಾದಿಯಲ್ಲಿ ಮತ್ತೆ ಮತ್ತೆ ಹಿಂದೆ ಮರಳುತ್ತಿರುತ್ತಾನೆ ಹಾಗು ಮತ್ತೆ ಮುನ್ನಡೆಯುತ್ತಾನೆ ಎನ್ನುವದನ್ನು ಸೂಚಿಸುತ್ತಾರೆ.
‘ಮರಳು’ವದು ಎಂದರೆ ಕುದಿಯುವದು ಎನ್ನುವ ಅರ್ಥವೂ ಇದೆ. ಪರಿಶುದ್ಧ ಮೂಲವಸ್ತುವನ್ನು ಬೇರ್ಪಡಿಸುವ ಉದ್ದೇಶದಿಂದ ರಸಾಯನತಜ್ಞರು ಮಿಶ್ರವಸ್ತುವನ್ನು ಕುದಿಸುತ್ತಾರೆ ಎನ್ನುವದು ತಿಳಿದಿರುವ ಸಂಗತಿ. ಇದರಂತೆಯೇ ಮನೋವಿಕಾರಗಳಿಂದ ಕೂಡಿದ ಚೈತನ್ಯವನ್ನು ಮತ್ತೆ ಮತ್ತೆ ಕುದಿಸಿ, ಕಶ್ಮಲಗಳನ್ನು ಬೇರ್ಪಡಿಸಿ, ಮರುಳಸಿದ್ಧನು ಸಾಧಕನನ್ನು ಪರಿಶುದ್ಧಾತ್ಮನನ್ನಾಗಿ ಮಾರ್ಪಡಿಸುತ್ತಾನೆ. (‘ಬೆಂದರೆ ಅದು ಬೇಂದ್ರೆ’ ಎಂದು ಬೇಂದ್ರೆಯವರೇ ಹೇಳಿದ್ದಾರೆ.) ಇದೀಗ ಸಾಧಕನ ಭಾವವು ಶುದ್ಧವಾಗುತ್ತದೆ ಹಾಗು ಸ್ಫುಟವಾಗುತ್ತದೆ ಅಂದರೆ ಸ್ಫಟಿಕದಂತೆ ನಿಚ್ಚಳವಾಗುತ್ತದೆ.
ಶ್ರುತಿಶುದ್ಧವಾದ ‘ಕಿನ್ನರಿ’ ವಾದ್ಯದಿಂದ ಸತತವಾಗಿ ಒಂದೇ ಸುನಾದ ಹೊರಹೊಮ್ಮುತ್ತದೆ. ಅದರಂತೆ ಕವಿ ಬೇಂದ್ರೆಯವರ ಅಂತಃಕರಣದಿಂದ ಈಗ ಗುರುಗೀತೆ ಮಾತ್ರ ಹೊರಹೊಮ್ಮುತ್ತಿದೆ. ಅವರ ‘ಮಾತು’ ಅಂದರೆ ಈ ಗೀತೆ ಈಗ ಗುರು ಮರುಳಸಿದ್ಧರ ಕೀರ್ತನೆಗೆ ಮಾತ್ರ ಮೀಸಲಾಗಿದೆ. ಈ ಮುಡಿಪಾದ ಭಕ್ತಿಪುಷ್ಪವನ್ನು ಸಾಧಕನು ಮೊದಲು ಅರ್ಪಿಸುವದು ಗುರುವಿನ ಅಡಿಗಳಿಗೆ, ತನ್ನಂತರ ಆತನ ಮುಡಿಗೆ. ಸಾಧಕನ ಈ ನಿವೇದನೆಗೆ ಅಂದರೆ ನೈವೇದ್ಯಕ್ಕೆ ಗುರುವು ಪ್ರಸನ್ನನಾಗಿ ಪ್ರಸಾದವನ್ನು ಅನುಗ್ರಹಿಸುತ್ತಾನೆ. ಬೇಂದ್ರೆಯವರಿಗೆ ದೊರೆತ ಪ್ರಸಾದ ಏನು? ...... ‘ಕೊರಳು ಮತ್ತು ಬೆರಳು’, ಅಂದರೆ ಹಾಡು ಮತ್ತು ಕಾವ್ಯ. ತನ್ನಂತರ ಬೇಂದ್ರೆಯವರು ಹಾಡುವದು ‘ಮರುಳಸಿದ್ಧನ’ ಗೀತೆಯನ್ನು ಹಾಗು ರಚಿಸುವದು ‘ಅವನ’ ಕಾವ್ಯವನ್ನು ಮಾತ್ರ.
`ಕರುಳು’ ಅಂದರೆ ಪ್ರೀತಿ. ಭಗವಂತನನ್ನು ಮಾತ್ರವಲ್ಲದೆ, ಆತನ ಸಕಲ ಸೃಷ್ಟಿಯನ್ನೂ ಸಹ ಬೇಂದ್ರೆಯವರು ಪ್ರೀತಿಸುತ್ತಾರೆ. ಇದು ಅವರ ‘ಕರುಳು’. ‘ಅರಳು’ ಎಂದರೆ ಜ್ಞಾನ. ಪ್ರೀತಿ ಹಾಗು ಜ್ಞಾನ ಇವೆರಡೂ ದೊರೆತಾಗಲೆ, ಸಾಧಕನಿಗೆ ಸಿದ್ಧಿಯಾಗುವದು. ಇವೆರಡೂ ದೊರೆಯುವದು ಭಗವಂತನ ಪ್ರಸಾದದಿಂದಲೇ. ಇಷ್ಟೇ ಏಕೆ? ದೇವರಿಗೆ ಮರುಳಾಗಿರುವ ಸಾಧಕನ ‘ಮರುಳೂ’ ಸಹ ಭಗವಂತನ ಪ್ರಸಾದವೇ ಅಲ್ಲವೆ! ‘ಮರುಳೂನು ತಂ ಪ್ರಸಾದ’ ಎಂದು ಬೇಂದ್ರೆಯವರು ಏಕೋಭಾವದಿಂದ ಆ ಹುಚ್ಚನ್ನು ಒಪ್ಪಿಕೊಂಡಿದ್ದಾರೆ, ಅಪ್ಪಿಕೊಂಡಿದ್ದಾರೆ.
ಕರುಳು ಎಂದರೆ ದೇಹವೆಂದೂ ಅರ್ಥವಾಗುತ್ತದೆ. ಅರಳು ಎಂದರೆ ತಾನು ಈ ದೇಹ ಅಲ್ಲ ಎನ್ನುವ ಜ್ಞಾನ. ದೇಹವನ್ನು ಕೊಟ್ಟವನೇ, ‘ಈ ದೇಹ ತಾನಲ್ಲ’ ಎನ್ನುವ ಜ್ಞಾನವನ್ನೂ ಕೊಡುತ್ತಾನೆ. ಆ ಜ್ಞಾನ ಲಭಿಸುವವರೆಗೆ ಜೀವಿಯು ಮರುಳಿನಲ್ಲಿ ಅಂದರೆ ಮಾಯೆಯಲ್ಲಿರುತ್ತಾನೆ. ಆದುದರಿಂದ ದೇಹ, ದೇಹದ ಅಜ್ಞಾನ ಹಾಗು ಸುಜ್ಞಾನ ಇವೆಲ್ಲವೂ ಆ ಜಗದ್ಗುರು ನೀಡುವ ಪ್ರಸಾದವೇ ಆಗಿವೆ!
ಮರುಳಸಿದ್ಧ ಹಾಗು ಕಿನ್ನರಿಗೆ ಒಂದು ಹಿನ್ನೆಲೆಯಿದೆ. ಬೇಂದ್ರೆಯವರ ‘ಮಾಯಾಕಿನ್ನರಿ’ ಎನ್ನುವ ಕವನದಲ್ಲಿ ಆ ಹಿನ್ನೆಲೆ ಲಭ್ಯವಾಗುತ್ತದೆ. ಮರುಳಸಿದ್ಧ ಎನ್ನುವ ಮಹಾತ್ಮರೊಬ್ಬರು ಉತ್ತರಭಾರತದಲ್ಲಿ ತಮ್ಮ ದಿಗ್ವಿಜಯವನ್ನು ಪೂರೈಸಿ, ಕರ್ನಾಟಕದಲ್ಲಿರುವ ಕೊಲ್ಲಾಪುರಕ್ಕೆ (--ಇದೀಗ ಮಹಾರಾಷ್ಟ್ರದಲ್ಲಿದೆ--) ಬರುತ್ತಾರೆ. ಅಲ್ಲಿರುವ ‘ಮಾಯೆ’ ಎನ್ನುವ ಯೋಗಿನಿಯು ಸಾವಿರ ಯೋಗಿಗಳನ್ನು ಸೋಲಿಸಿ, ತನ್ನ ಮಂತ್ರಬಲದಿಂದ ತನ್ನ ಊಳಿಗಕ್ಕೆ ತೊಡಗಿಸಿರುತ್ತಾಳೆ. ಮರುಳಸಿದ್ಧರೊಡನೆ ಅನೇಕ ದಿನಗಳವರೆಗೆ ವಾಗ್ವಾದ ನಡೆದು ಮಾಯೆ ಸೋಲುತ್ತಾಳೆ. ಮಂತ್ರಬಲದಿಂದ ಮರುಳಸಿದ್ಧರನ್ನು ಸೋಲಿಸಲು ಮಾಯೆ ಹವಣಿಸುತ್ತಾಳೆ. ಆದರೆ ಮರುಳಸಿದ್ಧರು ಮಾಯೆಯನ್ನೇ ಒಂದು ಕಿನ್ನರಿಯಾಗಿ ಪರಿವರ್ತಿಸಿ, ತಮ್ಮೊಡನೆ ಒಯ್ಯುತ್ತಾರೆ. ಈ ಕಿನ್ನರಿಯು ಮೊದಮೊದಲು ಹಟ ಮಾಡಿದರೂ, ಕೊನೆಗೆ ಮರುಳಸಿದ್ಧರಿಗೆ ಮರುಳಾಗಿ, ಅವರಿಗೆ ಒಲಿದು ದಿವ್ಯ ಸಂಗೀತವನ್ನು ಹೊರಡಿಸುತ್ತದೆ.
ಈ ಗೀತೆಯಲ್ಲಿ ಬೇಂದ್ರೆಯವರು ಗುರುರೂಪಿ ಭಗವಂತನನ್ನು ಮರುಳಸಿದ್ಧನಿಗೆ ಹಾಗು ಮಾಯೆಯಲ್ಲಿ ಸಿಲುಕಿದ ತಮ್ಮನ್ನು ಕಿನ್ನರಿಗೆ ಹೋಲಿಸುತ್ತಿದ್ದಾರೆ. ಯಾವ ಸಾಧಕರೂ ಸಾಧನಾಪಥದೆಡೆಗೆ ಸರಳವಾಗಿ ಆಕರ್ಷಿತರಾಗುವದಿಲ್ಲ. ಅನೇಕ ಜನ್ಮಗಳ ಆಕರ್ಷಣೆ ಹಾಗು ವಿಕರ್ಷಣೆಗಳ ಬಳಿಕ ಸಾಧಕನಿಗೆ ‘ಮರುಳಸಿದ್ಧ’ ಎಂದರೆ ಆತನ ಗುರು ದೊರೆಯುತ್ತಾನೆ. ಗುರುವಿನ ಜೊತೆಗೆ ಶಿಷ್ಯನ ವಾಗ್ವಾದ ನಡೆದೇ ಇರುತ್ತದೆ. ಒಮ್ಮೆ ಅರಿವು ಮೂಡಿದ ಬಳಿಕ ಶಿಷ್ಯನು ‘ಗುರುವಿನ ಗುಲಾಮ’ನಾಗುತ್ತಾನೆ. (ವಿವೇಕಾನಂದ ಹಾಗು ರಾಮಕೃಷ್ಣ ಪರಮಹಂಸರು ಈ ಮಾತಿಗೆ ಉಜ್ವಲ ನಿದರ್ಶನರಾಗಿದ್ದಾರೆ.)
ಬೇಂದ್ರೆಯವರು ಮೊದಲಿನಿಂದಲೂ ಭಕ್ತಕವಿಗಳು. ಈ ಭಕ್ತಿ ಅವರ ಕವನಗಳಲ್ಲಿ ವಿವಿಧ ಬಗೆಗಳಲ್ಲಿ ವ್ಯಕ್ತವಾಗಿದೆ. ತಾಯಿ, ತಾಯಿನಾಡು, ತಾಯಿನುಡಿ, ಪ್ರಕೃತಿ ಇವೆಲ್ಲವುಗಳ ಮೇಲಿನ ಅವರ ಪ್ರೀತಿ ಭಕ್ತಿಗೆ ಹತ್ತರವಾದದ್ದು. ಅವರ ಅಜ್ಜಿ ಹಾಗು ತಾಯಿ ಆ ಕಾಲದಲ್ಲಿ ಮಹಾರಾಷ್ಟ್ರದಲ್ಲಿದ್ದ ಸಂತಶ್ರೇಷ್ಠ
ಬ್ರಹ್ಮಚೈತನ್ಯ ಮಹಾರಾಜರಿಂದ ಉಪದೇಶ ಪಡೆದವರು.ಸ್ವತಃ ಬೇಂದ್ರೆಯವರಿಗೆ ಚಿಕ್ಕಂದಿನಲ್ಲಿ ಅವರ ದರ್ಶನಲಾಭವಾಗಿತ್ತು. ಗುಳವಣಿ ಮಹಾರಾಜ ಹಾಗು ಟೇಂಬೆ ಮಹಾರಾಜರಂತಹ ಸಂತರನ್ನೂ ಬೇಂದ್ರೆಯವರು ಕಂಡಿದ್ದರು. ಅರವಿಂದರು ಬೇಂದ್ರೆಯವರ ಮಾನಸ ಗುರುಗಳು. ಶರಣ ಸಾಹಿತ್ಯದಿಂದ ಪ್ರಭಾವಿತರಾದ ಬೇಂದ್ರೆಯವರಿಗೆ ಅಲ್ಲಮಪ್ರಭುಗಳಲ್ಲಿ ವಿಶೇಷ ಒಲವು. ಇವೆಲ್ಲ ಬೇಂದ್ರೆಯವರನ್ನು ಸಾಧನಾಪಥಕ್ಕೆ ಎಳೆದ ಅಂಶಗಳು.
ಲೌಕಿಕ ದೃಷ್ಟಿಯಲ್ಲಿ ಈ ಸಾಧನಾಪಥವು ಹುಚ್ಚಿನ ಹಾದಿ. ಈ ಸಾಧನೆಯಲ್ಲಿ ಸಿದ್ಧಿ ಪಡೆದವರನ್ನು ಗುರುತಿಸಲಾಗದ ಲೋಕವು, ಅವರನ್ನು ‘ಮರುಳಸಿದ್ಧ’ ಎಂದು ಕರೆದರೆ ಆಶ್ಚರ್ಯವಿಲ್ಲ. ಆದರೆ ಇಂತಹ ಯೋಗಿಗಳ ಮಹತ್ತನ್ನು ಅರಿತವರು, ಇವರನ್ನು ಸದಾಕಾಲವೂ ತಮ್ಮ ಹೃದಯಕಮಲದಲ್ಲಿ ಇಟ್ಟುಕೊಳ್ಳುತ್ತಾರೆ. (‘ನಂಬಿರುವೀ ಎದೆ ಹೂವನೆ ಆಸನ ಮಾಡಿರುವಿರಿ’ ಎಂದು ಬೇಂದ್ರೆಯವರು ಮತ್ತೊಂದು ಕವನದಲ್ಲಿ ಹಾಡಿದ್ದಾರೆ.) ಆದುದರಿಂದಲೇ ಬೇಂದ್ರೆಯವರು ತಮ್ಮ ಗುರುವನ್ನು ‘ನನ್ನೆದೆಯ ಮರುಳಸಿದ್ಧ’ ಎಂದು ಕರೆದಿದ್ದಾರೆ. ಈ ಮರುಳಸಿದ್ಧರು ತೋರಿಸುವ ಹಾದಿಯು ಅಗ್ನಿಪಥವಾಗಿದೆ. ಇದರಲ್ಲಿ ಹಾಯ್ದು ಹೊರಬರಬಂದಾಗ, ಸಾಧಕನ ಅಂತಃಕರಣವು ಸ್ಫಟಿಕದಂತೆ ಶುದ್ಧವಾಗಿರುತ್ತದೆ. ಆನಂತರದ ಆತನ ಕ್ರಿಯೆ ಎಲ್ಲವೂ ಗುರುಸಮರ್ಪಿತವಾದ ನೈವೇದ್ಯ! ಇದು ಬೇಂದ್ರೆಯವರ ಕಾವ್ಯಧರ್ಮ ಹಾಗು ಜೀವನಧರ್ಮ.