Friday, April 6, 2012

ಕನಿಷ್ಠ ಜ್ಞಾನವಿಲ್ಲದ ಸಂಯುಕ್ತ ಕರ್ನಾಟಕ

ಫೆಬ್ರುವರಿ ೧೧ರಂದು ‘ಸಂಯುಕ್ತ ಕರ್ನಾಟಕ’ದ ಮೂರನೆಯ ಪುಟದಲ್ಲಿ ಪ್ರಕಟವಾದ ಸಮಾಚಾರದ ತುಣುಕು ಹೀಗಿದೆ:
‘ಹೊರ ಭಾಷಿಕರು ಕನ್ನಡದ ಕನಿಷ್ಟ ತಿಳಿವಳಿಕೆ ಹೊಂದಲಿ’.

ಹೊರಭಾಷಿಕರಿಗೆ ಬೇಡ, ಒಳಭಾಷಿಕರಿಗೂ ಬೇಡ, ಕನಿಷ್ಠಪಕ್ಷ ಪತ್ರಕರ್ತರಿಗಾದರೂ ಭಾಷೆಯ ಬಗೆಗೆ ಕನಿಷ್ಠ ತಿಳಿವಳಿಕೆ ಇರಬೇಕಲ್ಲವೆ? ಸಂಯುಕ್ತ ಕರ್ನಾಟಕದ ಪತ್ರಕರ್ತರಿಗೆ ಅದೇ ಇಲ್ಲ ಎನ್ನುವದನ್ನು ಅವರು ‘ಕನಿಷ್ಟ’ ಎನ್ನುವ ಪ್ರಯೋಗದ ಮೂಲಕ ರುಜುವಾತು ಮಾಡಿದ್ದಾರೆ! ಇಂತಹ ಅನೇಕ ತಪ್ಪುಗಳು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರತಿ ದಿನವೂ ಘಟಿಸುತ್ತಿದ್ದು, ಈಗಾಗಲೇ ಅವುಗಳ ಬಗೆಗೆ ಇಲ್ಲಿ ಹಾಗು ಇಲ್ಲಿ ಬರೆಯಲಾಗಿದೆ.

ಇತ್ತೀಚೆಗೆ ಈ ಪತ್ರಿಕೆಯು ಮನೋರಂಜನೆಯ ಇನ್ನೂ ಅನೇಕ ಹೊಸ ವಿಧಾನಗಳ ಅನ್ವೇಷಣೆಯನ್ನು ಮಾಡಿದೆ. ಇಂತಹ ಒಂದು ವಿಧಾನಕ್ಕೆ ‘ಪದ ಕತ್ತರಿ ವಿಧಾನ’ ಎಂದು ಕರೆಯಬಹುದು. ಕಾಲಮ್ಮಿನ ಅಗಲಳತೆಯಲ್ಲಿ ಶೀರ್ಷಿಕೆಯನ್ನು ಕೂಡಿಸಲು ಆಗದಿದ್ದರೆ, ಯಾವುದಾದರೂ ಪದದ ಕೈಯನ್ನೋ, ಕಾಲನ್ನೋ ಕತ್ತರಿಸುವದು ಈ ವಿಧಾನದ ಲಕ್ಷಣ. ಕೆಲವೊಮ್ಮೆ ರುಂಡವನ್ನೇ ಹಾರಿಸಿದರೂ ನಡೆದೀತು. ಇದಂತೂ ಅತ್ಯುತ್ತಮ ಮಾರ್ಗ. ಕೆಳಗಿನ ಉದಾಹರಣೆಯನ್ನು ನೋಡಿರಿ:

ಅರ್ಥವಾಯಿತೆ? ‘ಭುವನೇಶ್ವರಿ’  ಎಂದು ಅಚ್ಚಿಸಲು ಜಾಗ ಸಾಲದು ಎಂದು ಮಧ್ಯಾಕ್ಷರವನ್ನು ಮಟಾಶ್ ಮಾಡಿ ‘ಭುವೇಶ್ವರಿ’ಯನ್ನಾಗಿ ಮಾಡಿದ್ದಾರೆ, ಅಷ್ಟೆ. ಇವಳು ನಮ್ಮ ಕನ್ನಡ ಭುವನೇಶ್ವರಿಯೇ ಹೌದು ಎಂದು ಸಂಪಾದಕರು ಅವಳ ತಲೆಯ ಮೇಲೆ ಆಣೆ ಇಟ್ಟು ಹೇಳಬೇಕಾಗಬಹುದು.

ಭುವನೇಶ್ವರಿಯಾದರೋ ಕನ್ನಡಿಗರ ಹೆತ್ತಮ್ಮ. ಆದುದರಿಂದ ಈ ಛೇದನವನ್ನು ಸಹಿಸಿಕೊಳ್ಳುವದು ಅವಳಿಗೆ ಅನಿವಾರ್ಯ. ಆದರೆ ಹುಬ್ಬಳ್ಳಿಯಂತಹ ಗಂಡುಮೆಟ್ಟಿನ ಶಹರದ ಮೆಣಸಿನಕಾಯಿಯವರು ಏಕೆ ಸುಮ್ಮನಿದ್ದಾರು?
ಕೆಳಗಿನ ಸುದ್ದಿಯನ್ನು ನೋಡಿರಿ.

 ಮೆಣಸಿನಕಾಯಿಯವರ ‘ನ’ ಮಂಗಮಾಯವಾಗಿ ‘ಮೆಣಸಿಕಾಯಿ’ಯಾಗಿದ್ದಾರೆ. ದಿವಂಗತರ ಬಳಗದ ಕಣ್ಣಿಗೆ ಈ ಮಂಗಾಟ ಬಿದ್ದಿರಲಿಕ್ಕಿಲ್ಲ. ಅಥವಾ ಬಿದ್ದರೂ ಸುಮ್ಮನಿದ್ದರೆ, ಅದು ಅವರ ಔದಾರ್ಯ!

ಸಂಯುಕ್ತ ಕರ್ನಾಟಕದಲ್ಲಿ ಕೇವಲ ಕತ್ತರಿ ಪ್ರಯೋಗವಷ್ಟೇ ಆಗುತ್ತದೆ ಎನ್ನುವ ತಪ್ಪು ಭಾವನೆ ಬೇಡ. ಕೆಲವೊಮ್ಮೆ ಕರ್ಮಣಿ ಪ್ರಯೋಗವೂ ಆಗುತ್ತದೆ ( ‘ಓದುಗರ ಕರ್ಮ’ ಎನ್ನುವ ಅರ್ಥದಲ್ಲಿ).
ಅಕ್ಷರಛೇದನದ ಪಾಪವನ್ನು ಕಳೆದುಕೊಳ್ಳುವ ಸಲುವಾಗಿ ಅಕ್ಷರವಿಸ್ತರಣೆಯನ್ನು ಮಾಡಿರುವ ಈ ಉದಾಹರಣೆಗಳನ್ನು ನೋಡಿರಿ:

ರೇವ್’ ಅನ್ನುವ ಆಂಗ್ಲ ಪದದ ‘ವ್’ಕಾರಕ್ಕೆ ಬಾಲ ಹಚ್ಚಿ ‘ರೇವು’ ಎಂದು ಕನ್ನಡೀಕರಿಸಿದ್ದಾರೆ. ಕನ್ನಡ ‘ಭುವೇಶ್ವರಿ’ಗೆ ಇದರಿಂದ ಖುಶಿ ಆದೀತು ಎಂದು ಭಾವಿಸೋಣ. 


ಆದರೆ  ‘ಬದುಕು’ ಪದದ ‘ಬ’ ಅಕ್ಷರಕ್ಕೆ ಬಾಲವನ್ನು ಜೋಡಿಸಿ ‘ಬುದುಕು’ ಮಾಡುವುದರ ಉದ್ದೇಶ ಮಾತ್ರ ಅರ್ಥವಾಗುವದಿಲ್ಲ!

ಕತ್ತರಿ ಹಾಗು ಕರ್ಮಣಿ ಪ್ರಯೋಗಗಳಲ್ಲದೆ, ಇನ್ನೊಂದು ಪ್ರಯೋಗವನ್ನೂ ಈ ಪತ್ರಿಕೆಯವರು ವಿಕಾಸಗೊಳಿಸಿದ್ದಾರೆ. ಅದಕ್ಕೆ ‘ಇಕ್ಕಳ ಪ್ರಯೋಗ’ ಎನ್ನುವ ಹೆಸರನ್ನು ಕೊಡಬಹುದು. ಒಂದು ಪದವನ್ನು ಸರಿಯಾಗಿ ಬರೆಯಲು ಸ್ಥಳಾಭಾವವಾದರೆ, ಆ ಪದವನ್ನು ಇಕ್ಕಳದಲ್ಲಿ ಹಾಕಿ ಹಿಚುಕುವುದು ಈ ಪ್ರಯೋಗದ ವಿಧಾನವಾಗಿದೆ. ಕೆಳಗಿನ ಉದಾಹರಣೆಯನ್ನು ನೋಡಿರಿ:

‘ಭಗವದ್ಗೀತೆ’ ಎನ್ನುವ ಪದವು ಇಕ್ಕಳದಲ್ಲಿ ಸಿಲುಕಿ ‘ಭಗ್ವದ್ಗೀತೆ’ಯಾಗಿದೆ. ಈ ಪ್ರಯೋಗದ ಕೆಲವೊಂದು ಸಂಭಾವ್ಯತೆಗಳನ್ನು ಊಹಿಸಿ ನಾನು ಗಾಬರಿಯಾದೆ. ‘ಬಸವೇಶ್ವರರ ವಚನಗಳು’ ಪದಪುಂಜವನ್ನು ಈ ಪ್ರಯೋಗದಲ್ಲಿ ‘ಬಸ್ವೇಶ್ವರ ವಚ್ನಗ್ಳು’ ಎಂದೂ, ‘ಮೂರು ಸಾವಿರ ಮಠದ ಅಪ್ಪನವರು’ ಪದಪುಂಜವನ್ನು ‘ಮೂರ್ಸಾವ್ರ ಮಠ್ದಪ್ನೋರ್’ ಎಂದೂ ಬರೆದರೆ ಅನಾಹುತವಾಗಲಿಕ್ಕಿಲ್ಲವೆ? ಅಥವಾ ಅದುವೇ ‘ಸಂಯುಕ್ತ ಕರ್ನಾಟಕ’ದ ‘ಸ್ಟೈಲ್ಶೀಟ್’ (=style sheet) ಎಂದು ಹೇಳಬಹುದೆ?

ಸ್ಥಳವನ್ನು ಉಳಿಸಲು ಸಂ.ಕ.ದವರು ಅಧ್ಯಾಹರಣ, ಸಂಕ್ಷಿಪ್ತೀಕರಣದಂತಹ ಇನ್ನೂ ಅನೇಕ ಉಪಾಯಗಳನ್ನು  ಯೋಜಿಸಿದ್ದಾರೆ.
‘ಖಾಲೀ ಗಾಡಾ ಸ್ಪರ್ಧೆ’ ಎನ್ನುವ ಈ ಶೀರ್ಷಿಕೆಯನ್ನು ನೋಡಿರಿ.

ಖಾಲೀ ಗಾಡಾದ ಎಂತಹ ಸ್ಪರ್ಧೆ ಎಂದು ನೀವು ಅಚ್ಚರಿಗೊಳ್ಳಬಹುದು. ಇಲ್ಲಿ ‘ಓಡಿಸುವ’ ಎನ್ನುವುದು ಅಧ್ಯಾಹೃತವಾಗಿದೆ. ಈ ಪ್ರಯೋಗವನ್ನು ಹೇಗಾದರೂ ಸಹಿಸಿಕೊಳ್ಳಬಹುದು. ಆದರೆ ಈ ಕೆಳಗಿನ ತಲೆಬರಹದ ಅರ್ಥವೇನು?

ರಾಹುಲನು ತಮ್ಮ ಮೇಲೆ ಮಾಡಿದ ಟೀಕೆಯಿಂದ ಖತಿಗೊಂಡ ಸೋನಿಯಾ ಗಾಂಧಿಯವರು ಅವನನ್ನೇ ‘ಹುಚ್ಚ’ನೆಂದು ಮರು ಟೀಕಿಸಿದ್ದಾರೆನ್ನುವ ಅರ್ಥ ಬರುವದಲ್ಲವೆ? ಹಾಗೆ ಅರ್ಥೈಸಿಕೊಂಡರೆ, ಅದು ಓದುಗರದೇ ತಪ್ಪು ಎಂದು ಸಂ.ಕ.ದವರು ಹೇಳುತ್ತಾರೆ. ಯಾಕೆಂದರೆ ಇದು ‘ಸಂಕ್ಷಿಪ್ತೀಕರಣ ಪ್ರಯೋಗ’ ಎನ್ನುವುದು ಅವರ ಸಮಜಾಯಿಷಿ. 
ಇನ್ನೊಂದು ಉದಾಹರಣೆಯನ್ನು ನೋಡಿರಿ:

ಈ ಸುದ್ದಿ ತುಣುಕಿನಲ್ಲಿ ಯಾರು ವಿಷಾದ ಪಟ್ಟಿದ್ದಾರೆ ಎನ್ನುವುದು ಅಪ್ರಸ್ತುತ! ಅದನ್ನು ಮುಂದಿನ ಸಾಲುಗಳಲ್ಲಿ ಹುಡುಕಿಕೊಳ್ಳಿರಿ.  

ಸಂಕ್ಷಿಪ್ತೀಕರಣವು ಕೇವಲ ತಲೆಬರಹಗಳಿಗೆ ಮಾತ್ರ ಸೀಮಿತವಾಗಿಲ್ಲ. ಸುದ್ದಿಯನ್ನೇ ಸಂಕ್ಷಿಪ್ತೀಕರಣಗೊಳಿಸುವದು ಸಂ.ಕ.ದವರ ಸ್ಪೆಶಾಲಿಟಿ ಎನ್ನಬಹುದು. ಅದಕ್ಕೊಂದು ಉದಾಹರಣೆ:
 ಸಮಾಚಾರದ ಈ ತುಣುಕಿನಲ್ಲಿ ಏನಾದರೂ ಅರ್ಥವಾಗುತ್ತಿದೆಯೆ? ನಾಯಕರು ಬೆಂಗಳೂರಿನಿಂದ ಪ್ರವಾಸ ಹೊರಟು ಧಾರವಾಡಕ್ಕೆ ಬರುವರು ಹಾಗು ಸರ್ಕೀಟ್ ಹೌಸಿನಲ್ಲಿ ವಾಸ್ಯವ್ಯ ಮಾಡುವರು ಎನ್ನುವುದು ಓದುಗರ ಊಹೆಗೆ ಬಿಟ್ಟ ವಿಷಯವಾಗಿದೆ! ಇದು ಓದುಗರನ್ನು ತರ್ಕಕುಶಲರನ್ನಾಗಿ ಮಾಡುವ ಪ್ರಯತ್ನವಾಗಿರಬಹುದೆ?

ಈಗ ಈ ಕೆಳಗಿನ ಉದಾಹರಣೆ ನೋಡಿರಿ:

ದುರಿಯಿಂದ’ ಎನ್ನುವ ಪದವು ತಪ್ಪು ಎನ್ನುವುದು ಎಂತಹ ದಡ್ಡನಿಗೂ ಗೊತ್ತಾಗುತ್ತದೆ. ಹಾಗಿದ್ದರೆ ಸಂಯುಕ್ತ ಕರ್ನಾಟಕದವರಿಗೆ ಏಕೆ ಗೊತ್ತಾಗಲಿಲ್ಲ ಎನ್ನುವ ಸಂದೇಹ ನಿಮಗೆ ಬರಬಹುದು. ಇದು  ‘ಸರಿಯಾದ ಅಕ್ಷರವನ್ನು ಊಹಿಸಿರಿ’ ಎನ್ನುವ ಸ್ಪರ್ಧೆಯಾಗಿದ್ದು, ಅದನ್ನು ಪತ್ರಿಕೆಯವರು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದಾರೆ. ಅದನ್ನೂ ಸಹ ಜಾಣರಾದ ಓದುಗರೇ ಊಹಿಸಿಕೊಳ್ಳಬೇಕು.

ಇರುವ ಪದಗಳನ್ನು ಬದಲಾಯಿಸಿ, ಹೊಸ ಪದಗಳನ್ನು ಸೃಷ್ಟಿಸುವದರಲ್ಲಿ ಸಂಯುಕ್ತ ಕರ್ನಾಟಕಕ್ಕೆ ಅತೀವ ಆಸಕ್ತಿ. ‘ಖಾಲಿ ಗಾಡಿ ಓಡಿಸಿ’ ಎನ್ನುವ ವಾಕ್ಯದಲ್ಲಿಯ ‘ಗಾಡಿ’ ಪದವು ಸಂ.ಕ.ದ ಪತ್ರಕರ್ತರಿಗೆ ಪಸಂದು ಬಿದ್ದಂತೆ ಕಾಣುವದಿಲ್ಲ. ‘ಗಾಡಿ’ಯನ್ನು ‘ಗಾಡಾ’ ಮಾಡಿದರೆ ಅದು ‘ಜಾಸ್ತಿ ಹಿಂದೀ’ ಪದದಂತೆ ಕಾಣಬಹುದು ಎನ್ನುವದು ಅವರ ಗ್ರಹಿಕೆಯಾಗಿರಬಹುದೆ? ಗಾಡಿ ಎನ್ನುವದೇ ಹಿಂದೀ ಪದವಾಗಿರುವಾಗ ಈ ಕಸರತ್ತು ಯಾಕೆ ಎಂದು ಕೇಳುವಿರಾ? ಅದು ಪತ್ರಕರ್ತರ ಪ್ರಿವಿಲೇಜ್ ಅಲ್ಲವೆ? ಗಾಡಿ ಎನ್ನುವದು ಒಂದು ನಿರ್ಜೀವ ವಸ್ತುವಿನ ಹೆಸರು. ಗಾಡಾ ಎನ್ನಿರಿ, ಘೋಡಾ ಎನ್ನಿರಿ, ಅದರಿಂದ ಗಾಡಿಗೆ ಏನೂ ಅನ್ನಿಸುವದಿಲ್ಲ. ಆದರೆ ಸಜೀವ ವ್ಯಕ್ತಿಗಳ ಹೆಸರನ್ನು ಬದಲಾಯಿಸಿದರೆ? ಖ್ಯಾತ ಹಿಂದೀ ಸಿನೆಮಾ ನಟ ಆಮೀರನು ಸಂ.ಕ.ದ ಕೈಯಲ್ಲಿ ಸಿಕ್ಕು ಅಮೀರನಾಗಿದ್ದಾನೆ, ಅಂದರೆ ಶ್ರೀಮಂತನಾಗಿದ್ದಾನೆ. ಭಲೆ ಆಮೀರನ ಅದೃಷ್ಟವೆ!

ಕನ್ನಡದ ಮೇರುನಟ ರಾಜಕುಮಾರರು ಈ ಗಳಿಗೆಯಲ್ಲಿ ನಮ್ಮ ಜೊತೆಗಿಲ್ಲ. ಅವರು 
ಬದುಕಿದ್ದರೆ ಸಂ.ಕ.ದವರು ಅವರನ್ನು ರಜಾಕುಮಾರರನ್ನಾಗಿ ಮಾರ್ಪಡಿಸುತ್ತಿದ್ದರೋ ಏನೋ! ವ್ಯಕ್ತಿಯ ಹೆಸರನ್ನೇ ಬದಲಾಯಿಸುವ ಸಾಮರ್ಥ್ಯ ಉಳ್ಳವರು ಲೇಖಕರ ಕೃತಿಯ ಹೆಸರನ್ನು ಬಿಡಬಹುದೆ? ಕನ್ನಡದ ವಿನಾಯಕ ಗೋಕಾಕರು ತಮ್ಮ ಮಹಾಕಾವ್ಯ ‘ಭಾರತ ಸಿಂಧುರಶ್ಮಿ’ಗಾಗಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದರು. ಕನ್ನಡ ಹಾಗು ಇಂಗ್ಲಿಶ್ ಭಾಷಾಪಾಂಡಿತ್ಯದಲ್ಲಿ ಇವರನ್ನು ಮೀರಿಸಿದವರಿಲ್ಲ. ಇಂಥವರು ತಮ್ಮ ಕೃತಿಯ ಹೆಸರಿನಲ್ಲಿ ಕಾಗುಣಿತದ ತಪ್ಪನ್ನು ಮಾಡಿರುವರು ಎನ್ನುವುದು ಸಂ.ಕ. ಪಂಡಿತರ ಅಭಿಪ್ರಾಯ. ಆದುದರಿಂದ ಆ ಹೆಸರನ್ನು ‘ಭಾರತ ಸಿಂಧುರಶ್ಮೀ’ ಎಂದು ಬದಲಾಯಿಸಿದ್ದಾರೆ.

ಕೃತಿಯ ಹೆಸರನ್ನು ತೆಗೆದುಕೊಂಡು ಏನು ಮಾಡುವಿರಿ, ಕವಿಯನ್ನೇ ಬದಲಾಯಿಸುವ ಶಕ್ತಿ ನಮಗಿದೆ ಎನ್ನುವುದು ಸಂ.ಕ.ದವರ ಬುಡುಬುಡಿಕೆ ಎಂದು ತಿಳಿಯಬೇಡಿ. ನಮ್ಮ ಮು.ಮಂ. ಸದಾನಂದ ಗೌಡರು ತಮ್ಮ ಬಜೆಟ್ ಭಾಷಣದಲ್ಲಿ ಓದಿದ ಕವನವನ್ನು ‘ಚನ್ನವೀರ ಕಣವಿ’ಯವರ ಕವನವೆಂದು ಸಂ.ಕ.ದವರು ಘೋಷಿಸಿದ್ದಾರೆ.

ಅದ್ಯಾವನೋ ಬೇಂದ್ರೆ ಎನ್ನುವವನು ಆ ಕವನವನ್ನು ‘ಬೈರಾಗಿಯ ಹಾಡು’ ಎನ್ನುವ ತಲೆಬರಹ ಕೊಟ್ಟು ‘ಸಖೀಗೀತ’ ಎನ್ನುವ ಕವನಸಂಕಲನದಲ್ಲಿ ಅಚ್ಚು ಹಾಕಿಸಿಕೊಂಡಿದ್ದಾನೆ. ಇಲ್ಲಿದೆ ನೋಡಿ ಆ ಕವನ. (ಇದರಲ್ಲಿಯೂ ಸಹ ಮಾಡಲಾದ ಕಾಗುಣಿತದ ತಪ್ಪುಗಳನ್ನು ಕೆಂಪು ಗೆರೆಯಿಂದ ಗುರುತಿಸಲಾಗಿದೆ.)

‘ಕನ್ನಡಪ್ರಭಾ’ದವರೂ ಸಹ ಚನ್ನವೀರ ಕಣವಿಯವರ ಹೆಸರನ್ನೇ ಹಾಕಿದ್ದಾರೆ. ಸಂಯುಕ್ತ ಕರ್ನಾಟಕದವರೇನು ಹೆಚ್ಚುಗಾರಿಕೆ ಎನ್ನುವಿರಾ? 
ಸ್ವಾಮಿ, ಒಂದು ಸಂಸ್ಥೆಯನ್ನೇ ಕಿತ್ತಿ ಮತ್ತೊಂದು ಜಾಗದಲ್ಲಿ ಸ್ಥಾಪಿಸಬಲ್ಲ ಶಕ್ತಿ ಯಾರಿಗಿದೆ? ಅಲ್ಲಾಉದ್ದೀನನ ‘ಶೀಶೆಯಲ್ಲಿಯ ಭೂತ’ಕ್ಕೆ ಮಾತ್ರ ಇಂಥ ಶಕ್ತಿ ಇದೆ ಎಂದು ನೀವು ತಿಳಿದಿರುವಿರಾ? ಸಂ.ಕ.ದ ಪತ್ರಕರ್ತರು ಈ ‘bottle ಭೂತ’ಕ್ಕಿಂತ ಏನೂ ಕಡಿಮೆ ಇಲ್ಲ.

ರಾ.ಹ.ದೇಶಪಾಂಡೆ ಮೊದಲಾದ ಧಾರವಾಡದ ಕನ್ನಡಪ್ರಿಯ ಗೃಹಸ್ಥರ ಪ್ರಯತ್ನದಿಂದಾಗಿ, ೧೮೯೦ನೆಯ ಇಸವಿಯಲ್ಲಿ ಧಾರವಾಡದಲ್ಲಿ ‘ಕರ್ನಾಟಕ ವಿದ್ಯಾವರ್ಧಕ’ ಸಂಸ್ಥೆಯ ಸ್ಥಾಪನೆಯಾಯಿತು. ಆ ಸಂಸ್ಥೆಯನ್ನು ಅದರ ಕಟ್ಟಡದ ಜೊತೆಗೆ ಅನಾಮತ್ತಾಗಿ ಎತ್ತಿ ಹುಬ್ಬಳ್ಳಿಯಲ್ಲಿ ಇರಿಸಿದ ಕೀರ್ತಿ ಸಂ.ಕ.ದ bottle ಭೂತ’ಕ್ಕೆ ಸಲ್ಲುತ್ತದೆ! ‘ಭಾರತ ಸಿಂಧು ರಶ್ಮೀ’ ಎಂದು ಮೇಲೆ ಬರೆಯಲಾದಂತಹ ವರದಿಯಲ್ಲಿಯೇ ಧಾರವಾಡದಲ್ಲಿರುವ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಹುಬ್ಬಳ್ಳಿಗೆ ಎತ್ತಿಡಲಾದ ರೋಚಕ ಮಾಹಿತಿ ಸಹ ನಿಮಗೆ ಲಭ್ಯವಾಗುತ್ತದೆ. After all ಧಾರವಾಡ ಹಾಗು ಹುಬ್ಬಳ್ಳಿ ಇವೆರಡೂ ಒಂದೇ ಮಹಾನಗರಪಾಲಿಕೆಗೆ ಸೇರಿವೆಯಲ್ಲ ಎಂದು ಸಮಾಧಾನ ಪಟ್ಟುಕೊಳ್ಳೋಣ.

ಸಂ.ಕ.ದವರು ಬಳಸುವ ಪದಗಳು ಕೆಲವೊಮ್ಮೆ ಓದುಗನನ್ನು ದೀರ್ಘ ಆಲೋಚನೆಯಲ್ಲಿ ಮುಳುಗಿಸುತ್ತವೆ. 
ಈ ತುಣಕನ್ನು ನೋಡಿರಿ:

‘ವಿದೇಶೀಯ ಬಂಡವಾಳ ಅನನ್ಯ’ ಎಂದು ಇಲ್ಲಿ ಸಾರಲಾಗಿದೆ. ಇದರ ಅರ್ಥ ಏನಿದ್ದೀತು? ಅನ್ಯ ಎಂದರೆ ಬೇರೆಯವನು. ಅನನ್ಯ ಎಂದರೆ ‘ಬೇರೆ ಅಲ್ಲ’ ಎಂದರ್ಥ. ಅವನ ಸಾಧನೆ ಅನನ್ಯವಾಗಿದೆ ಎಂದರೆ ಅವನಂತೆ ಬೇರಾರೂ ಆ ಸಾಧನೆಯನ್ನು ಮಾಡಿಲ್ಲ ಎನ್ನುವ ಅರ್ಥವಾಗುತ್ತದೆ. ಆದುದರಿಂದ ಈ ಸುದ್ದಿಯ ಅರ್ಥವು ವಿದೇಶೀ ಬಂಡವಾಳದಂತೆ ಬೇರೆ ಯಾವ ಬಂಡವಾಳವೂ ಇಲ್ಲ ಎಂದು ತಿಳಿಯಬೇಕಾಗುವದಲ್ಲವೆ? ಇದನ್ನು ‘ಬಂಡ್ವಾಳಿಲ್ಲದ ಬಡಾಯಿ’ ಎಂದು ಕರೆಯಬಹುದೆ!?

ಇನ್ನು  ವಿದೇಶೀ ಬಂಡವಾಳಕ್ಕಾಗಿ ಕರ್ನಾಟಕ ಸರಕಾರದವರು ಪರದೇಶಗಳಲ್ಲಿ ‘ರೋಡ್ ಶೋ’ ಮಾಡುವವರಿದ್ದಾರೆ ಎನ್ನುವ ಸಮಾಚಾರ ಓದಿ ನನಗೆ ಆಘಾತವಾಯಿತು.

ರೋಡ್ ಶೋ ಮಾಡುವದು ಚುನಾವಣೆ ಸಮಯದಲ್ಲಿ ಎನ್ನುವುದು ನನ್ನ ಕಲ್ಪನೆ.  ವಿದೇಶದಿಂದ ಬಂಡವಾಳ ಆಹ್ವಾನಿಸಲು ರೋಡ್ ಶೋ ಮಾಡುತ್ತಾರೆಯೆ? ಅಥವಾ ರಸ್ತೆಯ ಬದಿಗೆ ನಿಂತು ಎತ್ತುವ ಭಿಕ್ಷೆಗೆ ಸಂ.ಕ.ದವರು ‘ರೋಡ್ ಶೋ’ ಎನ್ನುವ ಪರ್ಯಾಯ ಪದ ಬಳಸಿದ್ದಾರೆಯೆ!?

ಪತ್ರಕರ್ತರಿಗೆ ಅತ್ಯವಶ್ಯವಾದದ್ದು ಭಾಷಾಜ್ಞಾನ. ಕನ್ನಡ ಪತ್ರಕರ್ತರಿಗೆ ಕನ್ನಡ, ಸಂಸ್ಕೃತ ಹಾಗು ಇಂಗ್ಲಿಶ್ ಭಾಷೆಗಳ ಉತ್ತಮ ಜ್ಞಾನವು ಅವಶ್ಯವೆಂದು ಹೇಳಬೇಕಾಗಿಲ್ಲ. ಇದರ ಜೊತೆಗೆ ಕರ್ನಾಟಕದ ನೆರೆರಾಜ್ಯಗಳ ಭಾಷೆಗಳ ಜ್ಞಾನವೂ ಕೊಂಚ ಮಟ್ಟಿಗಾದರೂ ಇರುವದು ಒಳ್ಳೆಯದು. ಸಂ.ಕ.ದವರ ಕನ್ನಡ ಭಾಷೆಯ ಜ್ಞಾನವು ಪ್ರಾಥಮಿಕ ಶಾಲೆಯ ಬಾಲಕರ ಮಟ್ಟದ್ದು ಎಂದು ಹೇಳಬಹುದು. ಇಲ್ಲಿರುವ ಎರಡು ವರದಿಗಳನ್ನು ನೋಡಿದರೆ ಈ ಮಾತಿನ ಸತ್ಯ ಹೊಳೆದೀತು.ಇನ್ನು ಈ ಕೆಳಗಿನ ಎರಡು ಮಾಹಿತಿಗಳು ಪತ್ರಕರ್ತರಿಗೆ ಸಂಬಂಧಿಸಿಲ್ಲ. ಆದರೆ ಬೇರೆ ಭಾಷೆಯನ್ನು ತಿಳಿಯದವರು ತಮ್ಮ ಭಾಷಾ ಅಜ್ಞಾನವನ್ನು ಹೇಗೆ ಹರಡುತ್ತಾರೆ ಎನ್ನುವದಕ್ಕೆ ಇವು ಅತ್ಯುತ್ತಮ ಉದಾಹರಣೆಗಳಾಗಿವೆ:

(೧) ಕೆಲ ವರ್ಷಗಳ ಹಿಂದೆ ರಂಗಕರ್ಮಿ ಪ್ರಸನ್ನರು ಸಂಯುಕ್ತ ಕರ್ನಾಟಕದಲ್ಲಿ ಪ್ರತಿ ವಾರವೂ ಒಂದು ಲೇಖನ ಬರೆಯುತ್ತಿದ್ದರು. ಒಂದು ಸಲ ಪ್ರವಾಸದ ಸಮಯದಲ್ಲಿ ಅವರ ಆತಿಥೇಯರು ಅವರಿಗೆ `ಥಾಲೀಪೆಟ್ಟು ಎನ್ನುವ ತಿನಿಸನ್ನು ಉಣಬಡಿಸಿದ್ದರು. ಸ್ಥಾಲೀ ಎನ್ನುವ ಸಂಸ್ಕೃತ ಪದದಿಂದ ಥಾಲೀ ಎನ್ನುವ ಮರಾಠೀ ಪದ ಹುಟ್ಟಿದೆ. ಇದರ ಅರ್ಥ ಬಟ್ಟಲು. ಪಿಷ್ಟ ಎನ್ನುವ ಸಂಸ್ಕೃತ ಪದದ ಅರ್ಥ ಹಿಟ್ಟು. ಮರಾಠಿಯಲಿ ಇದು ‘ಪೀಠ’ ಆಗಿದೆ. ಮರಾಠಿಯ ಈ ಥಾಲೀಪೀಠವು ಕನ್ನಡದಲ್ಲಿ ಥಾಲಿಪೆಟ್ಟು ಆಗಿದೆ. ಆದುದರಿಂದ ‘ಥಾಲೀಪೀಠ’ ಅಥವಾ ಥಾಲಿಪೆಟ್ಟು ಎಂದರೆ ಬಟ್ಟಲಿನಲ್ಲಿ ನಾದಿ ಎಣ್ಣೆಯಲ್ಲಿ ಬೇಯಿಸಿದ ಹಿಟ್ಟಿನ ಪದಾರ್ಥ. ನಮ್ಮ ಪ್ರಸನ್ನರಿಗೆ ಈ ಭಾಷಾಜ್ಞಾನವಿಲ್ಲ. ‘ತಾಲಿಯಲ್ಲಿ ಹಾಕಿ ಪೆಟ್ಟು ಕೊಟ್ಟು ಮಾಡುವದರಿಂದ ಈ ತಿನಿಸಿಗೆ ‘ತಾಲಿಪೆಟ್ಟು’ ಎಂದು ಕರೆಯುತ್ತಾರೆ’ ಎನ್ನುವ ತಮ್ಮ ವಿಶ್ಲೇಷಣೆಯನ್ನು ಅವರು ಸಂಯುಕ್ತ ಕರ್ನಾಟಕದ ಮೂಲಕ ಉದ್ಘೋಷಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಪತ್ರಿಕೆಯ ಸಂಪಾದಕರು ಲೇಖಕರನ್ನು ಸಂಪರ್ಕಿಸಿ, ಸರಿಯಾದ ತಿಳಿವಳಿಕೆಯನ್ನು ಕೊಡಬೇಕು. ಇದು ಸಂಪಾದಕರ ಜವಾಬ್ದಾರಿ.

(೨) ಪ್ರಸನ್ನರಿಗೆ ಮರಾಠೀ ಭಾಷೆಯ ಜ್ಞಾನವಿರಲಿಕ್ಕಿಲ್ಲ. ಅವರನ್ನು ಕ್ಷಮಿಸೋಣ. ಆದರೆ ಕನ್ನಡ ಹಾಗು ಸಂಸ್ಕೃತಗಳ ಉದ್ದಾಮ ಪಂಡಿತರಾದ ಬನ್ನಂಜೆ ಗೋವಿಂದಾಚಾರ್ಯರು ಮಾಡಿದ ಪ್ರಮಾದಕ್ಕೆ ಏನನ್ನೋಣ? ತಮ್ಮ ‘ಕನಕೋಪನಿಷತ್’ ಎನ್ನುವ ಉತ್ತಮ ಕೃತಿಯಲ್ಲಿ ಬನ್ನಂಜೆಯವರು ‘ಗೋಡಖಿಂಡಿ’ ಪದದ ಅರ್ಥವನ್ನು ಬಿಡಿಸಿದ್ದಾರೆ. ‘ಗೋಡೆ’ಯಲ್ಲಿ ‘ಖಿಂಡಿ’ ಇರುವದೇ ಗೋಡಖಿಂಡಿ. ಆದುದರಿಂದ ‘ಗೋಡಖಿಂಡಿ’ ಎನ್ನುವ ಅಡ್ಡಹೆಸರಿನವರು ಕನಕನ ಖಿಂಡಿಗೆ ಸಂಬಂಧಪಟ್ಟವರು ಎನ್ನುವುದು ಬನ್ನಂಜೆಯವರ ಅಭಿಪ್ರಾಯ.

ಬನ್ನಂಜೆಯವರೆ, ‘ಆನೆಖಿಂಡಿ’ ಎನ್ನುವ ಊರಿನ ಹೆಸರನ್ನು ನೀವು ಕೇಳಿರುವಿರಾ? ಆನೆಗಳು ವಾಸಿಸುವ ಜಾಗಕ್ಕೆ ಅಥವಾ ನೀರು ಕುಡಿಯಲು ಬರುವ ಜಾಗಕ್ಕೆ ಆನೆಖಿಂಡಿ ಎನ್ನುತ್ತಾರೆಯೆ ಹೊರತು ಆನೆಯಲ್ಲಿ ಇರುವ ಖಿಂಡಿಗೆ ಅಲ್ಲ! ಅದರಂತೆ ಘೋಡಾ ಅಂದರೆ ಕುದುರೆಗಳನ್ನು ನೀರು ಕುಡಿಸಲು ಒಯ್ಯುವ ಜಾಗಕ್ಕೆ ಘೋಡಖಿಂಡಿ ಎನ್ನುತ್ತಾರೆ. ಅದೇ ಗೋಡಖಿಂಡಿ ಆಗಿದೆ. ಇಲ್ಲಿ ಖಿಂಡಿ ಎನ್ನುವುದು water hole ಎನ್ನುವ ಅರ್ಥವನ್ನು ಕೊಡುತ್ತದೆ.

ಸಂಯುಕ್ತ ಕರ್ನಾಟಕದ ಪತ್ರಕರ್ತರಿಗೆ ಮತ್ತೊಂದು ದುರಭ್ಯಾಸವಿದೆ. ಎಲ್ಲ  ಸಂಸ್ಕೃತ ಪದಗಳು ಮಹಾಪ್ರಾಣ ಪದಗಳು ಎನ್ನುವ ತಪ್ಪು ತಿಳುವಳಿಕೆಯೇ ಅವರ ಈ ದಡ್ಡತನದ ಕಾರಣವಾಗಿರಬಹುದು. 
ಮೂರು ಉದಾಹರಣೆಗಳನ್ನು ನೋಡಿರಿ:


ಸಂ.ಕ.ದವರಿಗೆ ನನ್ನದೊಂದು ವಿನಮ್ರ ವಿನಂತಿ:
ನಿಮ್ಮ ಪತ್ರಿಕೆಯಲ್ಲಿ ಬರೆಯುವ ವರದಿಗಳನ್ನು ಸಂಕಲಿಸಿ, ಒಂದು ಕೈಪಿಡಿಯನ್ನು ತಯಾರಿಸಿರಿ. ‘ಪತ್ರಿಕಾವರದಿ’ಯನ್ನು ಹೇಗೆ ಬರೆಯಬಾರದು ಹಾಗು ಪತ್ರಿಕೆಯಲ್ಲಿಯ ಪದದೋಷಗಳು’ ಎನ್ನುವುದಕ್ಕೆ ಇದೊಂದು ಆದರ್ಶ ಮಾದರಿಯಾಗಬಹುದು!!

35 comments:

Subrahmanya said...

ನೀವಿನ್ನೂ ಆ ಪತ್ರಿಕೆ ಓದುತ್ತಿದ್ದೀರಾ !?:-).
ಸಂಯುಕ್ತಕರ್ನಾಟಕ ಓದೋದರಿಂದ ಮನರಂಜನೆ ಸಿಗುತ್ತದೆ ಅನ್ನುವುದು ನೀವಿಲ್ಲಿ ತೋರಿಸಿರುವ ಅಂಶಗಳಿಂದ ಮನದಟ್ಟದಾಗುತ್ತದೆ. ಕನ್ನಡ ಪತ್ರಿಕೆಗೆ ಒಳ್ಳೆಯ ಸಂಪಾದಕರೂ ಇಲ್ಲವೆ ?. ನಾನೊಂದು ಪತ್ರ ಬರೆಯುತ್ತೇನೆ. ಹಣಮಂತರಾಯ ನು ಪತ್ರಿಕೆಯ ಸಿಬ್ಬಂದಿಯವರಿಗೆ ಒಳ್ಳೆಯ ಕನ್ನಡ ಬರೆಯಿಸುವ ಶಕ್ತಿಯನ್ನು 'ಕೊಡಲಿ'(ಪೆಟ್ಟು!). ನಿಮ್ಮ ಯತ್ನ ನಿರರ್ಥಕವಾಗದಿರಲಿ ಎಂದು ಬಯಸುತ್ತೇನೆ !.

Anonymous said...

alalalalalalala.......

Anonymous said...

ಎಲ್ಲ ಪತ್ರಿಕೆಗಳಲ್ಲಿಯೂ ತಪ್ಪಾಗುವುದು ಸಹಜ..ಆದರೆ ಇದೊಂದೆ ಪತ್ರಿಕೆಯ ಮೇಲೆ ಗೂಬೆ ಕೂರಿಸುವುದು ಸರಿ ಅಲ್ಲ....

Badarinath Palavalli said...

ಏನೋ ನನ್ನಂತಹ ಪುಡಿ ಕವಿಗಳು ಕಾಗುಣಿತ ತಪ್ಪು ಮಾಡಿದರೆ, ನಿಮ್ಮಂತ ಙ್ಞಾತಿಗಳು ತಿದ್ದಬಹುದೇನೋ!

ಆದರೆ ರಾಜ್ಯ ಮಟ್ಟದ ಪತ್ರಿಕೆಯೊಂದು ಇಂತಹ ತಪ್ಪು ಮಾಡಿದರೆ ಅದು ಅಕ್ಷಮ್ಯ ಅಪರಾಧ.

ಒಳ್ಳೆ ಬರಹ ಮತ್ತು ಸಂಗ್ರಹಕ್ಕಾಗಿ ಧನ್ಯವಾದಗಳು.

ಚುಕ್ಕಿಚಿತ್ತಾರ said...

ಕಾಕ..
ಉತ್ತಮ ಬರಹ ಮತ್ತು ಪಾಠ... ಪತ್ರಿಕೆಗಳನ್ನು ಓದಿ ಕನ್ನಡ ಕಲಿತರೆ ನಮ್ಮ ಭಾಷೆಯೂ ಕನಿಷ್ಠವಾಗುವುದು ಸತ್ಯ...!

sunaath said...

ಸುಬ್ರಹ್ಮಣ್ಯರೆ,
ಹಳೆಯ ಚಟ. ಈ ಪತ್ರಿಕೆ(?)ಯನ್ನು ಓದುವ ದುರಭ್ಯಾಸ ಬಿದ್ದಿದೆ. ಏನು ಮಾಡಲಿ!

sunaath said...

ಬದರಿನಾಥರೆ,
ನೀವು ಪುಡಿಕವಿಯೂ ಅಲ್ಲ, ನಾನು ಜ್ಞಾನಿಯೂ ಅಲ್ಲ. ಇಬ್ಬರೂ blogಮಿತ್ರರು!

sunaath said...

ವಿಜಯಶ್ರೀ,
ಈ ಪತ್ರಿಕೆಯನ್ನು ಓದುತ್ತಲೇ ನಾನು ಕನ್ನಡ ಕಲಿತೆ. ಈಗ ಈ ಪತ್ರಿಕೆಯನ್ನು ಓದಿದರೆ, ಕಲಿತ ಕನ್ನಡವೆಲ್ಲ ಕೆಟ್ಟು ಹೋಗುವುದು ಖಂಡಿತ!

ಮಂಜುಳಾದೇವಿ said...

ಅತ್ಯುತ್ತಮವಾದ ಲೇಖನ. ನಿಮ್ಮ ಸುಧೀರ್ಘ ವಿವರಣೆ ಮನಸೆಳೆಯಿತು. ಅಭಿನಂದನೆಗಳು

ಮನಸು said...

ಒಳ್ಳೆಯ ಲೇಖನ...... ಧನ್ಯವಾದಗಳು

sunaath said...

ಮಂಜುಳಾದೇವಿಯವರೆ,
ಧನ್ಯವಾದಗಳು.

sunaath said...

ಮನಸು,
ಧನ್ಯವಾದಗಳು.

Dayananda said...

S K people better than our Udaya TV people.Udaya TV is bigger threat to kannada.Not even single U tv staff is capable of speaking in kannada with out using English.
(I am writting this in english sir, so that you will not point any mistake in mygannada...Just for joke)

sunaath said...

ದಯಾನಂದರೆ,
ನಮ್ಮ ಟೀವೀ ವಾಹಿನಿಗಳು ಕನ್ನಡ ಭಾಷೆಗೆ ದೊಡ್ಡ virus attackನಂತೆ ಇರುವದು ಸುಳ್ಳೇನಲ್ಲ!

sunaath said...

ಅನಾಮಿಕರೆ,
ಅಲಲಲಲಲಾ!

sunaath said...

ಅನಾಮಿಕರೆ,
(೧)ಸಂಯುಕ್ತ ಕರ್ನಾಟಕವು ನಾನು ಓದುವ ದಿನಪತ್ರಿಕೆ. ಹೀಗಾಗಿ ಇತರ ಪತ್ರಿಕೆಗಳ ದೋಷಗಳು ನನಗೆ ಸಹಸಾ ಗೊತ್ತಿರುವದಿಲ್ಲ. ಇತರ ಪತ್ರಿಕೆಗಳಲ್ಲಿ ಏನಾದರೂ ದೋಷವಿದ್ದರೆ ತಿಳಿಸಿ.
(೨)ನಾನು ತೋರಿಸಿದ ಲೋಪದೋಷಗಳಲ್ಲಿ ಏನಾದರೂ ತಪ್ಪಾಗಿದ್ದರೆ, ದಯವಿಟ್ಟು ಹೇಳಿ.
(೩)ಸಂ.ಕ.ಪತ್ರಿಕೆಯ ತಲೆಯ ಮೇಲೆ ಗೂಬೆಯನ್ನು ಕೂರಿಸಿದವರು ಅದರ ಸಂಪಾದಕರು ಹಾಗು ಸಿಬ್ಬಂದಿ;ನಾನಲ್ಲ!

AntharangadaMaathugalu said...

ಕಾಕಾ..
ಎಷ್ಟೊಂದು ತಪ್ಪುಗಳನ್ನು ಸಂಗ್ರಹ ಮಾಡಿಟ್ಟು ತೋರಿಸಿದ್ದೀರಿ. ಈ ತಪ್ಪುಗಳನ್ನು ಓದೋಕ್ಕೆ.. "ಎಲ್ಲರಿಗೂ ಸಂಯುಕ್ತ ಕರ್ನಾಟಕ"ನೇ ಬೇಕು ಅಂತ ಶ್ರೀಶಂಕರ ವಾಹಿನಿಯಲ್ಲಿ ಬೇರೆ ತೋರಿಸ್ತಾರೆ...!!

ಶ್ಯಾಮಲ

Santhosh Rao said...

ಸಂಯುಕ್ತ ಕರ್ನಾಟಕ ಒಂದು ಕಾಲದಲ್ಲಿ ಅತೀ ಹೆಚ್ಚು ಖ್ಯಾತಿ ಪಡೆದಂತ ಪತ್ರಿಕೆ..ಖಾದ್ರಿ ಶಾಮಣ್ಣನವರಂತ ಮಹಾನ್ ಪತ್ರಕರ್ತರು ಸೇವೆ ಸಲ್ಲಿಸಿದ್ದ ಪತ್ರಿಕೆ ಹೀಗೆ ಅಧೋಗತಿಗೆ ಹೋಗುತ್ತಿರುವುದು ವಿಷಾದನೀಯ.

sunaath said...

ಶ್ಯಾಮಲಾ ಮೇಡಮ್,
ಇದೇನೂ ಅಲ್ಲ. ಸಂ.ಕ.ಪತ್ರಿಕೆಯಲ್ಲಿ ದಿನದಿನವೂ ನಮ್ಮನ್ನು ಬೆಚ್ಚಿಬೀಳಿಸುವಂತಹ ಅನೇಕ ತಪ್ಪುಗಳು ಆಗುತ್ತಲೇ ಇರುತ್ತವೆ!

sunaath said...

ಸಂತೋಷರೆ,
ಸಂಯುಕ್ತ ಕರ್ನಾಟಕದ ದುರ್ಗತಿಯು ನನಗೆ ತುಂಬ ದುಃಖದ ಸಂಗತಿಯಾಗಿದೆ. ಎಂತಹ ಪತ್ರಿಕೆ ಏನಾಯಿತಲ್ಲ ಎಂದು ಸಂಕಟವಾಗುತ್ತದೆ.

ಸುಷ್ಮಾ ಮೂಡುಬಿದಿರೆ said...

ನಿಜಕ್ಕೂ ಆಶ್ಚರ್ಯವಾಯಿತು ಸಂಯುಕ್ತ ಕರ್ನಾಟಕದ ಬಗ್ಗೆ....!

sunaath said...

ಸುಷ್ಮಾ,
Read to believe it!

Anil Talikoti said...

ನೀವು ಹೇಳಿದ್ದು ಸಂಪೂರ್ಣವಾಗಿ ಒಪ್ಪುವಂತಹದು, ಪತ್ರಕರ್ತರಿಗಿ ಅವಶ್ಯವಾಗಿ ಇರಬೇಕಾದ ಕನಿಷ್ಠ ತಿಳವಳಿಕೆ ಅದು. ನನ್ನಂತ ಹೊರದೇಶಿಕರು ಕಾಗುಣಿತದಲ್ಲಿ ಮಾಡುವ ತಪ್ಪನ್ನು ಓದುಗರ ಅಭಾವ ಎಂದೂ, ವೇಳೆಯ ಅಭಾವವೆಂದೂ ತಳ್ಳಿ ನುಣಿಚಿಕೊಳ್ಳಬಹುದು - ಪಾಪ ಸಂಯಕ್ತಕರ್ನಾಟಕ ದವರು ಎಲ್ಲಿ ಅಡಗಿಕೊಳ್ಳಬೇಕು? ಮುಂಚೆ 'ಮುದ್ರಾ ರಾಕ್ಷಸ' ಎನ್ನುತಿದ್ದರಲ್ಲ , ಅದಕ್ಕೆ ಇಗ ಬೇರೆ ಬೇರೆ ಹೆಸರುಗಳಿವೆ ಎಂದು ಗೊತ್ತಾಯಿತು.
-ಅನಿಲ ತಾಳಿಕೋಟಿ

sunaath said...

ಅನಿಲರೆ,
ನಾವು ಮಾಡುವ ತಪ್ಪುಗಳು ಕ್ಷಮ್ಯ. ಆದರೆ ಪತ್ರಿಕೆಗಳು ಮಾಡುವ ತಪ್ಪುಗಳು ಅಕ್ಷಮ್ಯ. ಸದ್ಯಕ್ಕೆ ಸಂ.ಕ.ದ ಸಂಪಾದಕ ವರ್ಗವು ಜವಾಬುದಾರಿಯಿಂದ ವರ್ತಿಸುತ್ತಿಲ್ಲ ಎನಿಸುತ್ತಿದೆ.

V.R.BHAT said...

cಸುಧೀಂದ್ರರೇ, ನೀವು ಸಂಯುಕ್ತ ಕರ್ನಾಟಕದ ಬಗ್ಗೆ ಬರೆದಿದ್ದೀರಿ, ಇಲ್ಲಿ ಕನ್ನಡಪ್ರಭವನ್ನು ನೀವು ಓದಬೇಕು, ಆ ಕುರಿತು ನಾನೊಂದು ಲೇಖನ ಬರೆಯಬೇಕು ಎಂದುಕೊಂಡಿದ್ದೇನೆ. ಬಹಳ ಬೇಸರ ಮೂಡಿಸುವ ಕೆಲಸ ಎಂದರೆ ಕನ್ನಡದ ಕಾಗುಣಿತ ಮತ್ತು ವ್ಯಾಕರಣ ಗೊತ್ತಿರದ ಹೊಟ್ಟೆಪಾಡಿನ ಬರಹಗಾರರು ಪತ್ರಿಕೆಗಳಲ್ಲಿ ಬರೆಯುತ್ತಿರುವುದು ಮತ್ತು ಟಂಕಿಸುತ್ತಿರುವುದು ! ಲೇಖನ ಕಳೆದವರ್ಷ ಹೇಳಿದಂತೇ ಪತ್ರಿಕೆಯಲ್ಲಿನ ದೋಷಗಳನ್ನು ಎತ್ತಿ ತೋರಿಸುತ್ತಿದೆ, ಸಂಯುಕ್ತ ಕರ್ನಾಟಕದ ವಿಭಾಗೀಯ ಕಚೇರಿಗೆ ಅದು ತಲ್ಪಿದರೆ ಸ್ವಲ್ಪವಾದರೂ ಪರಿಣಾಮವಾದೀತು, ಧನ್ಯವಾದಗಳು.

sunaath said...

ಭಟ್ಟರೆ,
‘ಕನ್ನಡ ಪ್ರಭಾ’ದ ಬಗೆಗಿನ ನಿಮ್ಮ ಲೇಖನವನ್ನು ಎದುರು ನೋಡುತ್ತಿರುವೆ.

ಪ್ರವೀಣ್ ಭಟ್ said...

samanya tappaguvudu sahaja .. adare illi nodidare sari iddidde kammi annisutte :) .. idannu nodi tiddikollali samyukta karnatakadavaru.. 100% alde idru 80 - 90 % ..

pravi

sunaath said...

Praveenare,
samyukta karnataka patrikeyannu omme Odi nOdi. nIvu digilu bILuviri!

Anonymous said...

ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ತಪ್ಪುಗಳನ್ನು ತೋರಿಸಿರುವುದು ಸಂತೋಷ.ಆದರೆ ಉಳಿದ ಪತ್ರಿಕೆಗಳಲ್ಲಿ ತಪ್ಪುಗಳು ಬರಲ್ವಾ ಅಥವಾ ತಪ್ಪುಗಳನ್ನು ನೋಡಿದ್ದರೂ ನಿಮಗೆ ಹೇಳುವುದಕ್ಕೆ ಸಾಧ್ಯವಾಗ್ತಾ ಇಲ್ವಾ..ಎಲ್ಲ ಪತ್ರಿಕೆಗಳಲ್ಲೂ ತಪ್ಪು ಆಗುವುದನ್ನು ನಾನು ನೋಡಿದ್ದೇನೆ.ಇದೊಂದರ ಮೇಲೆ ಗೂಬೆ ಕೂರಿಸುವುದನ್ನು ನೋಡಿದರೆ ನಿಮ್ಮ ಬೆನ್ನ ಮೇಲೆ ಕೈಯಾಡಿಸಬೇಕು....

sunaath said...

ನಾನು ‘ಸಂಯುಕ್ತ ಕರ್ನಾಟಕ’ ಪತ್ರಿಕೆಯನ್ನು ಮಾತ್ರ ನಿಯತವಾಗಿ ಓದುತ್ತೇನೆ. ಉಳಿದ ಪತ್ರಿಕೆಗಳಲ್ಲಿ ಆಗುವ ತಪ್ಪುಗಳನ್ನು ನಾನು ಅರಿಯೆ. ನಿಮಗೆ ತಿಳಿದಿದ್ದರೆ, ನೀವು ತಿಳಿಸಿ. You are welcome. ನನ್ನ ಬೆನ್ನ ಮೇಲೆ ಕೈಯಾಡಿಸುವ ಮೊದಲು, ನಿಮ್ಮ ಬೆನ್ನನ್ನಷ್ಟು ನೋಡಿಕೊಳ್ಳಿ!

pragalbha said...

Seeing some of the crucial words misspelt really hurts...even for a kanglish person like me.

sunaath said...

Thanks, Pragalbha.
It appears the newspaper is neither serious about the content of the report nor about the language thereof.

Harisha - ಹರೀಶ said...

ಹಹ್ಹಾಹ್ಹಾಹ್ಹಾ!

ಒಳ್ಳೇ ಲೇಖನ ಕಾಕಾ.. ಪಾಪ ಸಂ.ಕ :-)

sunaath said...

ಧನ್ಯವಾದಗಳು, ಹರೀಶ!

ಸೀತಾರಾಮ. ಕೆ. / SITARAM.K said...

ಸಂಯುಕ್ತ ಕರ್ನಾಟಕ ಓದಿಯೇ ನಾನು ಕನ್ನಡ ಕಲಿತದ್ದು...
ಈ ಪತ್ರಿಕೆ ಈಗ ನೇಪಥಕ್ಕೆ ಸೇರಿದೆ ಎಂದು ಕೇಳಿದ್ದೇನೆ... ಏಕೆ ಎಂಬುವದು ಈಗ ಅರ್ಥವಾಗುತ್ತಿದೆ.