Monday, May 21, 2012

‘ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ?’--ದಿನಕರ ದೇಸಾಯಿ


ಕನ್ನಡದಲ್ಲಿ ನಾಲ್ಕು ಸಾಲುಗಳ ಚುಟುಕುಗಳನ್ನು ಜನಪ್ರಿಯ ಗೊಳಿಸಿದ ದಿನಕರ ದತ್ತಾತ್ರೇಯ ದೇಸಾಯಿಯವರನ್ನು ಕನ್ನಡಿಗರು ‘ಚುಟುಕು ಬ್ರಹ್ಮ’ ಎಂದೇ ಗುರುತಿಸುತ್ತಾರೆ. ಹಾಗಿದ್ದರೂ ಸಹ, ‘ಚುಟುಕು’ ಇದು ಅವರ ಪ್ರತಿಭೆಯ ಹಾಗು ಸಾಧನೆಯ ಒಂದು ಅತಿ ಸಣ್ಣ ಅಂಶ ಮಾತ್ರವಾಗಿದೆ.

ದಿನಕರ ದೇಸಾಯಿಯವರು ಬೆಂಗಳೂರಿನಲ್ಲಿ ಹಾಗು ಮೈಸೂರಿನಲ್ಲಿ ಪದವಿಶಿಕ್ಷಣ ಪೂರೈಸಿದರು. ಕೊನೆಯ ವರ್ಷದಲ್ಲಿ ಅವರಿಗೆ ಇತಿಹಾಸದಲ್ಲಿ ‘ಕ್ಯಾಂಡಿ ಪಾರಿತೋಷಕ’ ಲಭಿಸಿತು. ಬಳಿಕ ಸ್ನಾತಕೋತ್ತರ ಶಿಕ್ಷಣವನ್ನು ಹಾಗು ಕಾನೂನು ಪದವಿಯನ್ನು ದೇಸಾಯಿಯವರು  ಮುಂಬಯಿಯಲ್ಲಿ ಮುಗಿಸಿದರು.

ದಿನಕರ ದೇಸಾಯಿಯವರಿಗೆ ‘ದಿನಕರನ ಚೌಪದಿ’ ಕವನಸಂಕಲನಕ್ಕಾಗಿ ಕನ್ನಡ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.  ಆದರೆ ದೇಸಾಯಿಯವರು ಸಾಹಿತ್ಯದ ದಂತಗೋಪುರದಲ್ಲಿ  ಬದುಕಲಿಲ್ಲ. ಮುಂಬಯಿಯಲ್ಲಿ ಅವರಿಗೆ ಕಾರ್ಮಿಕ ಸಂಘಟನೆಗಳ ಮುಖಂಡರೊಡನೆ ಲಭಿಸಿದ ಸಂಪರ್ಕದಿಂದಾಗಿ ದೇಸಾಯಿಯವರು ತಮ್ಮ ಜೀವನವನ್ನೆಲ್ಲ ಶೋಷಿತವರ್ಗಗಳ ಪರವಾದ ಹೋರಾಟಕ್ಕೆ ಮುಡುಪಿಟ್ಟರು. ಗೋಕಾಕದ ಹತ್ತಿ ಗಿರಣಿಯ ಕಾರ್ಮಿಕರ ಪರವಾಗಿ ಅವರ ಹೋರಾಟದ ಜೀವನ ಪ್ರಾರಂಭವಾಯಿತು. ಬಳಿಕ ಮುಂಬಯಿಯಲ್ಲಿ  ಕಡಲಕಾರ್ಮಿಕರ ಸಂಘಟನೆಯಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡರು. ತಮ್ಮ ಪ್ರತಿಭಾವಂತ ಮಗನು ಸರಕಾರದ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾನೆಂದು ಹಾರೈಸುತ್ತ ಕುಳಿತಿದ್ದ ಬಡ ‘ದತ್ತಣ್ಣ ಮಾಸ್ತರ’ರಿಗೆ ಇದೊಂದು ನಿರಾಶಾದಾಯಕ ಸಂಗತಿಯಾಯಿತು. ( ದಿನಕರ ದೇಸಾಯಿಯವರು ಉತ್ತರ ಕನ್ನಡ ಜಿಲ್ಲೆಯವರಾದರೆ,ಇವರಂತೆಯೇ ಮುಂಬಯಿಯ ರೇಲ್ವೇ ಕಾರ್ಮಿಕರ ಸಂಘಟನೆಗಾಗಿ ದುಡಿದ ಜಾರ್ಜ ಫರ್ನಾಂಡಿಸರು ದಕ್ಷಿಣ ಕನ್ನಡ ಜಿಲ್ಲೆಯವರು ಎನ್ನುವದು ಗಮನಾರ್ಹವಾಗಿದೆ.)

ದೇಸಾಯಿಯವರು ತಮ್ಮ ಸೇವಾಕ್ಷೇತ್ರವನ್ನು ಮುಂಬಯಿಗೆ ಮಾತ್ರ ಸೀಮಿತಗೊಳಿಸಲ್ಲ. ತಮ್ಮ ತವರುಜಿಲ್ಲೆಯಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಚಳುವಳಿಯನ್ನು ಪ್ರಾರಂಬಿಸಿ ಐದು ವರ್ಷ ಗಡಿಪಾರು ಶಿಕ್ಷೆಯನ್ನು ಅನುಭವಿಸಿದರು.ಹಾಲಕ್ಕಿ ಜನಾಂಗದ ಬಗೆಗೆ ಅಧ್ಯಯನವನ್ನು ಪ್ರಕಟಿಸಿ, ಆ ಜನಾಂಗವನ್ನು ಗಿರಿಜನ ಸಮುದಾಯವೆಂದು ಗುರುತಿಸಲು ದಿನಕರ ದೇಸಾಯಿಯವರೇ ಕಾರಣರು.

ಉತ್ತರ ಕನ್ನಡ ಜಿಲ್ಲೆಯ ಶೈಕ್ಷಣಿಕ ಪ್ರಗತಿಗಾಗಿ, ವಿಶೇಷತಃ ಹಿಂದುಳಿದ ವರ್ಗಗಳ ಶೈಕ್ಷಣಿಕ ಪ್ರಗತಿಗಾಗಿ, ‘ಕೆನರಾ ವೆಲ್‍ಫೇರ್ ಟ್ರಸ್ಟ್’ ಸ್ಥಾಪಿಸಿ ಶಾಲೆ ಹಾಗು ಕಾಲೇಜುಗಳನ್ನು ತೆರೆದರು. ಅನೇಕ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಸಹಾಯ ನೀಡಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣದ ಜ್ಯೋತಿಯನ್ನು ಬೆಳಗಿದ ಶ್ರೇಯಸ್ಸು ದಿನಕರ ದೇಸಾಯಿಯವರಿಗೆ ಸಲ್ಲುತ್ತದೆ.

ದಿನಕರ ದೇಸಾಯಿಯವರು  ಗೋಪಾಲಕೃಷ್ಣ ಗೋಖಲೆಯವರಿಂದ ಮುಂಬಯಿಯಲ್ಲಿ ಸ್ಥಾಪಿತವಾದ ‘ಭಾರತ ಸೇವಕ ಸಮಾಜ’ದ ಸದಸ್ಯರಾಗಿದ್ದರು. ಈ ಸಂಸ್ಥೆಯ ನಿಯಮಗಳ ಮೇರೆಗೆ ತಮಗೆ ಬಂದ ಯಾವುದೇ ಸಂಭಾವನೆಯನ್ನು ಸಂಸ್ಥೆಗೆ ಸಲ್ಲಿಸಿ, ಅತ್ಯಂತ ಕಡಿಮೆ ಖರ್ಚಿನಲ್ಲಿ ಜೀವನ ಸಾಗಿಸುತ್ತಿದ್ದರು. ತಾವು ಲೋಕಸಭಾ ಸದಸ್ಯರಾಗಿದ್ದಾಗ, ಆ ಪದನಿಮಿತ್ತ ಸಂಭಾವನೆಯನ್ನೂ ಸಹ ನೇರವಾಗಿ ಭಾರತ ಸೇವಕ ಸಮಾಜಕ್ಕೆ ಸಲ್ಲಿಸುತ್ತಿದ್ದರು. ಸ್ವಾಮಿ ವಿವೇಕಾನಂದರಂತೆ ಇವರೂ ಸಹ ದರಿದ್ರನಾರಾಯಣನಿಗೆ ಸಲ್ಲಿಸುವ ಸೇವೆಯೇ ನಿಜವಾದ ಹರಿಪೂಜೆ ಎಂದು ಭಾವಿಸಿದವರು. ಆ ಮನೋಭಾವವನ್ನು ಬಿಂಬಿಸುವ ಅವರ ಕವನ ಹೀಗಿದೆ:

ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ?
ಹರಿಯ ಒಲುಮೆ ಪಡೆದು ಪುಣ್ಯ ಗಳಿಸುತಿರುವೆಯಾ?

ಹುಚ್ಚ! ನೀನು ಹಳ್ಳಿಗೋಡು
ದೀನ ಜನರ ಪಾಡ ನೋಡು
ಇರಲು ಗುಡಿಯು ಇಲ್ಲವಲ್ಲ
ಹೊಟ್ಟೆ ತುಂಬ ಅನ್ನವಿಲ್ಲ!
ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ?

ದೀನಗೊಂದು ಗೂಡು ಸಾಕು
ದೇವಗೊಂದು ವಿಶ್ವ ಬೇಕು
ಮಣ್ಣ ಹುಲ್ಲ ಸಣ್ಣ ಗೂಡು
ಬಡವಗದುವೆ ಸಿರಿಯ ಬೀಡು
ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ?

ಜಗಕೆ ಗೋಡೆ ಹಾಕಿ ಗುಡಿಯ ಕಟ್ಟಬಲ್ಲೆಯಾ?
ಹರಿಗೆ ಎಂದು ಗುಡಿಯನೊಂದ ಕಟ್ಟುತಿರುವೆಯಾ?
ಹರಿಯ ವಿಶ್ವರೂಪವನ್ನು ಮರೆತುಬಿಟ್ಟೆಯಾ?
ದೀನಗಿಂತ ದೇವ ಬಡವನೆಂದು ಬಗೆದೆಯಾ?

ದಿನಕರ ದೇಸಾಯಿಯವರು ಶೋಷಿತರ ಪರವಾಗಿ ಹೋರಾಡಿದವರು. ಆದರೆ ಅವರು ಮಾರ್ಕ್ಸವಾದಿಗಳಲ್ಲ ಹಾಗು ನಾಸ್ತಿಕರಲ್ಲ. ಅವರಿಗೆ ಹರಿಯಲ್ಲಿ ನಂಬುಗೆ ಇದೆ. ಹಾಗೆಂದು ಹರಿಪೂಜೆಗಾಗಿ ಸಮಯವನ್ನು ‘ವ್ಯರ್ಥ’ ಮಾಡುವವರಲ್ಲ. ಸಾಮಾಜಿಕ ಹೋರಾಟದಲ್ಲಿ ಇದ್ದವರಾದರೂ ಸಹ ರಾಜಕಾರಣಿಯಲ್ಲ.  ಇವರು ಒಂದು ಅವಧಿಗಾಗಿ ಲೋಕಸಭಾ ಸದಸ್ಯರಾಗಿದ್ದರೂ ಸಹ ಯಾವುದೇ ರಾಜಕೀಯ ಪಕ್ಷದ ಸದಸ್ಯರಲ್ಲ. (ಭಾರತ ಸೇವಕ ಸಮಾಜದ ನಿಯಮಗಳ ಮೇರೆಗೆ ಇವರು ರಾಜಕೀಯ ಪಕ್ಷಗಳನ್ನು ಸೇರುವಂತಿರಲಿಲ್ಲ. ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದಾಗ, ದಿನಕರ ದೇಸಾಯಿಯವರಿಗೆ ಮಂತ್ರಿ ಪದವಿಯನ್ನು ನೀಡಲು ಸಿದ್ಧರಿದ್ದರು. ಆದರೆ ತತ್ವನಿಷ್ಠರಾದ ದೇಸಾಯಿಯವರು ಆ ಆಮಿಷವನ್ನು ತಿರಸ್ಕರಿಸಿದರು.)

ತಮ್ಮ ನಿಬಿಡ ಜನಸೇವಾ ಕಾರ್ಯಕ್ರಮಗಳ ನಡುವೆ ಇವರಿಗೆ ಸಾಹಿತ್ಯರಚನೆಗೆ ಸಮಯ ಸಿಕ್ಕುವದೇ ಅಪರೂಪವಾಗಿತ್ತು. ಹಾಗಿದ್ದರೂ ಸಹ ದಿನಕರ ದೇಸಾಯಿಯವರು ‘ಜನಸೇವಕ’ ಎನ್ನುವ ಪತ್ರಿಕೆಯನ್ನು ನಡೆಯಿಸಿದರು. ಐದು ಕವನಸಂಕಲನಗಳನ್ನು ಹಾಗು ‘ನಾ ಕಂಡ ಪಡುವಣ’ ಎನ್ನುವ ಪ್ರವಾಸಸಾಹಿತ್ಯವನ್ನು ರಚಿಸಿದರು. ಈ ಪ್ರವಾಸಕಥನವು ಅವರ ಸೂಕ್ಷ್ಮ ಸಾಮಾಜಿಕ ಹಾಗು ರಾಜಕೀಯ ಒಳನೋಟವನ್ನು ಪ್ರತಿಬಿಂಬಿಸುತ್ತದೆ. ಇವನ್ನೆಲ್ಲ ಗಮನಿಸಿದಾಗ ಸಮಯದ ಅಭಾವದ ಮೂಲಕ ದಿನಕರ ದೇಸಾಯಿಯವರು ಬಹುಶಃ ಚುಟುಕುಗಳ ಕಡೆಗೆ ಒಲಿದಿರಬಹುದು ಎನ್ನಿಸುತ್ತದೆ.

‘ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ?’ ಕವನವು ದಿನಕರ ದೇಸಾಯಿಯವರ ಸಾಮಾಜಿಕ ಸಂವೇದನೆಯನ್ನು ವ್ಯಕ್ತ ಪಡಿಸುತ್ತದೆ. ಈ ಕವನಕ್ಕೆ ಪ್ರತಿಯಾಗಿ ಪು.ತಿ. ನರಸಿಂಹಾಚಾರ್ಯರು ಒಂದು ಕವನವನ್ನು ರಚಿಸಿದ್ದಾರೆ ಎಂದು ಶ್ರೀ ವ್ಯಾಸ ದೇಶಪಾಂಡೆಯವರು ನನಗೆ ತಿಳಿಸಿದಾಗ ನಾನು ಚಕಿತನಾದೆ. ಅದ್ಭುತ ಸ್ಮರಣಶಕ್ತಿಯ ಶ್ರೀ ವ್ಯಾಸ ದೇಶಪಾಂಡೆಯವರು ಆ ಕವನವನ್ನು ತಮ್ಮ ನೆನಪಿನಿಂದಲೇ ನನಗೆ ಹೇಳಿದರು. ಅದನ್ನೇ ನಾನು ಇಲ್ಲಿ ಉದ್ಧರಿಸುತ್ತಿದ್ದೇನೆ:

ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆನು
ದೀನಗಿಂತ ದೇವ ಬಡವನೆಂದು ಬಗೆವೆನು.

ನಿಜವು ವಿಷ್ಣು ವಿಶ್ವಕರನು, ವಿಶ್ವಧಾಮನು
ಒಂದೆ ಹೆಜ್ಜೆ ಇಟ್ಟು ಬುವಿಯ ನಾಕವಳೆದನು
ಬೆಳ್ಳಿಬೆಟ್ಟದೊಡೆಯ ಶಿವನು ಚಂದ್ರಮೌಳಿಯು
ಪ್ರೇಮಮೂರ್ತಿ ಗಿರಿಜೆ ಅವನ ಪ್ರಣಯಕಾರ್ತೆಯು

ಆದರವನ ಬೀಡು ಮಸಣ, ಲೇಪ ಬೂದಿಯು
ಚರ್ಮ ಉಡುಗೆ, ಹಾವು ತೊಡುಗೆ, ಬದುಕು ಬಿಕ್ಕೆಯು
ದೀನಗೊಂದು ವಿಶ್ವ ಸಾಲದಾಸೆ ತಣಿಸಲು
ದೇವನೆದೆಯ ಗುಡಿಯು ಸಾಕು ನಲಿದು ನಲಿಸಲು
                        (--ಪು.ತಿ.ನರಸಿಂಹಾಚಾರ್)

ದಿನಕರ ದೇಸಾಯಿಯವರ ಕವನಕ್ಕೆ ಸಾಮಾಜಿಕ ಪ್ರೇರಣೆ ಇದ್ದರೆ, ಪು.ತಿ. ನ. ಅವರ ಕವನಕ್ಕೆ ಆಧ್ಯಾತ್ಮಿಕ ಪ್ರೇರಣೆ ಇದೆ.
‘ಅವರವರ ಭಾವಕ್ಕೆ,
ಅವರವರ ಭಕುತಿಗೆ,
ಅವರವರ ತೆರನಾಗಿ
ಇರುತಿಹನು ಶಿವಯೋಗಿ’ ಎಂದುಕೊಳ್ಳಬಹುದಷ್ಟೆ!

ದಿನಕರ ದೇಸಾಯಿಯವರ ಮೂರು ಕವನಗಳು ನನ್ನ ಅಚ್ಚುಮೆಚ್ಚಿನ ಕವನಗಳು. ‘ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ?’ ಕವನವು ಅವುಗಳಲ್ಲೊಂದು. ‘ನನ್ನ ದೇಹದ ಬೂದಿ ಗಾಳಿಯಲಿ ತೂರಿ ಬಿಡಿ’ ಎನ್ನುವದು ಮತ್ತೊಂದು ಕವನ. ಈ ಕವನ ಹೀಗಿದೆ:

ನನ್ನ ದೇಹದ ಬೂದಿ-ಗಾಳಿಯಲಿ ತೂರಿ ಬಿಡಿ
ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ;
ಬೂದಿ-ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ

ನನ್ನ ದೇಹದ ಬೂದಿ-ಹೊಳೆಯಲ್ಲಿ ಹರಿಯಬಿಡಿ
ತೇಲಿ ಬೀಳಲಿ ಮೀನು ಹಿಡಿಯುವಲ್ಲಿ;
ಮುಷ್ಟಿಬೂದಿಯ ತಿಂದು ಪುಷ್ಟವಾಗಲು ಮೀನು
ಧನ್ಯವಾಯಿತು ಹುಟ್ಟು ಸಾವಿನಲ್ಲಿ

ನನ್ನ ದೇಹದ ಬೂದಿ-ಕೊಳದಲ್ಲಿ ಬೀರಿ ಬಿಡಿ
ತಾವರೆಯು ದಿನದಿನವು ಅರಳುವಲ್ಲಿ;
ಬೂದಿ ಕೆಸರನು ಕೂಡಿ ಹೊಸ ಪಂಕಜವು ಮೂಡೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ

ಸತ್ತ ಮೇಲಾದರೂ ದೇಹ ಸೇವೆಗೆ ನಿಲಲಿ
ಇಂದಿಗೀ ನರಜನ್ಮ ಸೇವೆಯಿಂದು
ತನ್ನ ಸ್ವಾರ್ಥವ ನೆನೆದು ವ್ಯರ್ಥವಾಗಿದೆ, ದೇವ,
ನಿಜ ಸೇವೆಗೈಯಲಿಕೆ ಬರಲಿ ಮುಂದು.

ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ ನೆಹರೂರವರು ಸಹ ತಮ್ಮ ಮೃತ್ಯುಪತ್ರದಲ್ಲಿ ತಮ್ಮ ದೇಹದ ಬೂದಿಯನ್ನು ಭಾರತದ ವಿವಿಧ ಪ್ರದೇಶಗಳಲ್ಲಿ ಹಾಗು  ನದಿಗಳಲ್ಲಿ ತೂರಿ ಬಿಡಲು ಬರೆದಿದ್ದಾರೆ. ನೆಹರೂರವರು ತಮ್ಮ ಮೃತ್ಯುಪತ್ರವನ್ನು ೧೯೪೮ರಲ್ಲಿಯೇ ಬರೆದಿದ್ದರೂ ಸಹ, ಅವರ ಮರಣದ ನಂತರ ಅಂದರೆ ೧೯೬೨ರಲ್ಲಿ ಅದು ಪ್ರಕಟವಾಯಿತು. ದಿನಕರ ದೇಸಾಯಿಯವರು ತಮ್ಮ ಈ ಕವನವನ್ನು ೧೯೬೨ಕ್ಕಿಂತ ಮೊದಲೇ ಬರೆದಿದ್ದಾರೆ.
ನೆಹರೂರ ಇಚ್ಛೆಯು ಭಾವನಾತ್ಮಕವಾಗಿದೆ. ದಿನಕರ ದೇಸಾಯಿಯವರ ಕವನದಲ್ಲಿ, ತನ್ನ ಬದುಕು ಹಾಗು ತನ್ನ ಸಾವು ಎರಡರಿಂದಲೂ ಈ ಜಗತ್ತಿಗೆ ಉಪಯೋಗವಾಗಲಿ ಎನ್ನುವ ತೀವ್ರ ಕಳಕಳಿಯಿದೆ.

ದಿನಕರ ದೇಸಾಯಿಯವರು ೧೯೮೨ ನವ್ಹಂಬರ ೬ರಂದು ತೀರಿಕೊಂಡರು. ಅವರ ಕವನದಲ್ಲಿಯ ಕೋರಿಕೆಯನ್ನು ಮನ್ನಿಸಲಾಯಿತೊ ಇಲ್ಲವೊ ತಿಳಿಯದು. ಆದರೆ ಕನ್ನಡನಾಡಿನ ಈ ಸುಪುತ್ರನ ಜನ್ಮವು ಜನಸೇವೆಯಲ್ಲಿ ಸಾರ್ಥಕವಾಗಿರುವದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ.

ಇಂದಿರಾ ಇವರು ದಿನಕರ ದೇಸಾಯಿಯವರ ಹೆಂಡತಿ. ಈ ಮರಾಠಿ ತರುಣಿ ದೇಸಾಯಿಯವರನ್ನು ಮದುವೆಯಾಗುವ ಬಯಕೆಯನ್ನು ವ್ಯಕ್ತ ಪಡಿಸಿದಾಗ, ದೇಸಾಯಿಯವರು, ‘ನನ್ನ ಅಂಗಿಗೆ ಜೇಬು ಇಲ್ಲ’ ಎಂದು ಹೇಳಿದ್ದರು. ‘ಅದಕ್ಕಾಗಿಯೇ ನಾನು ನಿಮ್ಮನ್ನು ಮದುವೆಯಾಗಲು ಬಯಸುವುದು’ ಎಂದು ಇಂದಿರಾ ಮರುನುಡಿದರಂತೆ!


ದಿನಕರ ದೇಸಾಯಿಯವರ ನನ್ನ ಮೆಚ್ಚಿನ ಮೂರನೆಯ ಕವನ: ‘ಟಿಕ್ ಟಿಕ್ ಗೆಳೆಯಾ, ಟಿಕ್ ಟಿಕ್ ಟಿಕ್!’
ಇದೊಂದು ಅದ್ಭುತ ಮಕ್ಕಳ ಗೀತೆ. ನಾನು ಕನ್ನಡ ಶಾಲೆಯಲ್ಲಿ ಕಲಿಯುತ್ತಿರುವಾಗ  ಈ ಕವನ ನಮ್ಮ ಪಠ್ಯದಲ್ಲಿತ್ತು.
ಕವನ ಹೀಗಿದೆ:

ಗಂಟೆಯ ನೆಂಟನೆ ಓ ಗಡಿಯಾರ,
ಬೆಳ್ಳಿಯ ಬಣ್ಣದ ಗೋಲಾಕಾರ,
ವೇಳೆಯ ತಿಳಿಯಲು ನೀನಾಧಾರ,
ಟಿಕ್ ಟಿಕ್ ಗೆಳೆಯಾ, ಟಿಕ್ ಟಿಕ್ ಟಿಕ್!

ಹಗಲೂ ಇರುಳೂ ಒಂದೇ ಬಾಳು,
ನೀನಾವಾಗಲು ದುಡಿಯುವ ಆಳು,
ಕಿವಿಯನು ಹಿಂಡಲು ನಿನಗದು ಕೂಳು
ಟಿಕ್ ಟಿಕ್ ಗೆಳೆಯಾ, ಟಿಕ್ ಟಿಕ್ ಟಿಕ್!

ಮುಖ ಒಂದಾದರು ದ್ವಾದಶ ನೇತ್ರ!
ಎರಡೇ ಕೈಗಳು ಏನು ವಿಚಿತ್ರ!
ಯಂತ್ರ ಪುರಾಣದ ರಕ್ಕಸ ಪುತ್ರ!
ಟಿಕ್ ಟಿಕ್ ಗೆಳೆಯಾ, ಟಿಕ್ ಟಿಕ್ ಟಿಕ್!

ಟಿಕ್ ಟಿಕ್ ಎನ್ನುತ ಹೇಳುವೆಯೇನು?
ನಿನ್ನೀ ಮಾತಿನ ಒಳಗುಟ್ಟೇನು?
‘ಕಾಲವು ನಿಲ್ಲದು’ ಎನ್ನುವಿಯೇನು?
ಟಿಕ್ ಟಿಕ್ ಗೆಳೆಯಾ, ಟಿಕ್ ಟಿಕ್ ಟಿಕ್!

ದುಡಿಯುವದೊಂದೇ ನಿನ್ನಯ ಕರ್ಮ
ದುಡಿಸುವದೊಂದೇ ನಮ್ಮಯ ಧರ್ಮ
ಇಂತಿರುವುದು ಕಲಿಯುಗದೀ ಮರ್ಮ
ಟಿಕ್ ಟಿಕ್ ಗೆಳೆಯಾ, ಟಿಕ್ ಟಿಕ್ ಟಿಕ್!

ಈ ಬಾಲಗೀತೆಯಲ್ಲಿಯೂ ಸಹ ದಿನಕರ ದೇಸಾಯಿಯವರ ಶೋಷಿತಸಂವೇದನೆಯ ಸಮಾಜಮುಖೀ ಧೋರಣೆ ವ್ಯಕ್ತವಾಗುತ್ತಿದೆ! ‘ನೀನಾವಾಗಲು ದುಡಿಯುವ ಆಳು’ ಹಾಗು ‘ಯಂತ್ರಪುರಾಣದ ರಕ್ಕಸಪುತ್ರ’ ಎನ್ನುವ ಸಾಲುಗಳು ಈ ಧೋರಣೆಯನ್ನು ಸ್ಪಷ್ಟಪಡಿಸುತ್ತವೆ.

ದಿನಕರ ದೇಸಾಯಿಯವರು ತಮ್ಮ ಜೀವನದ ಪ್ರತಿ ಗಳಿಗೆಯನ್ನು ಸಮಾಜಕ್ಕಾಗಿ ಮೀಸಲಿಟ್ಟಿದ್ದರು. ದೇವರಲ್ಲಿ ಅವರಿಗೆ ನಂಬುಗೆ ಇದ್ದರೆ, ಅದು ಅವರ ಅಂತರಂಗಕ್ಕೆ ಮಾತ್ರ ತಿಳಿದಿರಬಹುದು. ಮರಣಶಯ್ಯೆಯಲ್ಲಿದ್ದಾಗ ಅವರು ರಚಿಸಿದ ಚುಟುಕು ಹೀಗಿದೆ:

ಜಗದೀಶ್ವರನು ಮೊನ್ನೆ ಮಾಡಿ ಟೆಲಿಫೋನು
ಕೇಳಿದನು, ‘ದೇಸಾಯಿ, ಹೇಗಿದ್ದಿ ನೀನು?’
ಮುಗಿಯಲಿಲ್ಲವೆ ನಿನ್ನ ಚುಟುಕುಗಳ ಹುಚ್ಚು
ಇನ್ನೆರಡು ಬರೆದು ನೀ ಪುಸ್ತಕವ ಮುಚ್ಚು!’

ದಿನಕರ ದೇಸಾಯಿಯವರು ತಮ್ಮ ಅಂತ್ಯವನ್ನು ಅರಿತಿರಬಹುದು. ಅದಕ್ಕೂ ಮುಖ್ಯವೆಂದರೆ, ತನ್ನನ್ನು ಹಿಡಿದುಕೊಂಡೇ ಯಾರೂ ಅಮರನಾಗಿರುವಷ್ಟು ಮುಖ್ಯ ಅಲ್ಲ ಎಂದು ಅವರು ಅರಿತಿರಬಹುದು. ಅಥವಾ ಒಂದು ಜ್ಯೋತಿ ನಂದಿದರೆ, ಅದು ಹೊತ್ತಿಸಿದ ನೂರು ಜ್ಯೋತಿಗಳು ಅಲ್ಲಿ ಬೆಳಗುತ್ತವೆ ಎನ್ನುವುದನ್ನು ಅವರು ಅರಿತಿರಬಹುದು.

ಗೋಖಲೆ ಸೆಂಟೆನರಿ ಕಾಲೇಜಿನಲ್ಲಿ ಅವರ ಎದೆಯಳತೆಯ ಮೂರ್ತಿಯನ್ನು ಸ್ಥಾಪಿಸಲು ಅವರ ಶಿಷ್ಯರು ಬಯಸಿದ್ದರು. ಹಾಗೇನಾದರೂ ಮಾಡಿದರೆ ತಾನು ರಾಜೀನಾಮೆ ಕೊಡುವದಾಗಿ ದೇಸಾಯಿಯವರು ಬೆದರಿಕೆ ಹಾಕಿದರು. ದಿನಕರ ದೇಸಾಯಿಯವರ ನಿಧನದ ನಂತರ, ಅವರ ನೆನಪಿಗಾಗಿ ಎದೆಯಳತೆಯ ಪುತ್ಥಳಿಯೊಂದನ್ನು ಅಲ್ಲಿ ನಿಲ್ಲಿಸಲಾಗಿದೆ.

ದಿನಕರ ದೇಸಾಯಿಯವರು ಶೋಷಿತರ ಹಾಗು ತಮ್ಮ ಅನೇಕ ಶಿಷ್ಯರ ಹೃದಯಗಳಲ್ಲಿ ನಿರಂತರವಾಗಿ ಬೆಳಗುತ್ತಿದ್ದಾರೆ.

(ಈ ಲೇಖನದ ಬಹ್ವಂಶ ಮಾಹಿತಿಯನ್ನು ಒದಗಿಸಿದ ಶ್ರೀ ವ್ಯಾಸ ದೇಶಪಾಂಡೆಯವರಿಗೆ ನಾನು ಕೃತಜ್ಞನಾಗಿದ್ದೇನೆ.
                                                                                                                     -ಸುನಾಥ)

46 comments:

ಮಂಜುಳಾದೇವಿ said...

ದಿನಕರ ದೇಸಾಯಿಯವರ ಬದುಕಿನ ಇನ್ನೊಂದು ಮುಖದ ಪರಿಚಯ ಮಾಡಿಸಿ, ನನ್ನ ನೆಚ್ಚಿನ ಕವನಗಳನ್ನು ನೆನಪಿಸಿರುವಿರಿ. ನಿಮಗೆ ಧನ್ಯವಾದಗಳು ಸಾರ್

Swarna said...

ಚೆನ್ನಾಗಿದೆ ಸರ್.
ಗಡಿಯಾರದ ಪದ್ಯ ನಮ್ಮಮ್ಮ ಯಾವಾಗಲೂ ಹೇಳ್ ತಿರ್ತಾರೆ ನನ್ ಮಗಂಗೆ.ಬಹುಶಃ, ಶಾಲಾ ಪಾಠದಲ್ಲಿದ್ದ ಅಂಚೆಯಣ್ಣನ ಕುರಿತ ಪದ್ಯವೂ ದೇಸಾಯಿಯವರದ್ದೇ ?
ಸಾಧ್ಯವಾದರೆ ಇನ್ನಷ್ಟು ಚುಟುಕಗಳ ಬರೆಯಿರಿ.
ಸ್ವರ್ಣಾ

Kshama said...

Sir,
nimma blog post sogasaagi mooDi bandide. illi nanage ondu clarification bekagiruvudu pu.ti.na ravara geeteyalli:
aa geete sampoornavaagideye? ekendare nanage tilda haage koneya eradu saalugaLu miss agive.
eshtu chikkadenna hrudaya enu holasidu| illi neleya bEduvavana dainyaventhadu|| please verify if this is right.

sunaath said...

ಮಂಜುಳಾದೇವಿಯವರೆ,
ಧನ್ಯವಾದಗಳು.

sunaath said...

ಸ್ವರ್ಣಾ,
ಧನ್ಯವಾದಗಳು.‘ಅಂಚೆಯಣ್ಣನ’ ಪದ್ಯ ಯಾರದೆಂದು ನನಗೆ ತಿಳಿಯದು.

sunaath said...

ಕ್ಷಮಾ,
ಪು.ತಿ.ನ. ಅವರ ಕವನದಲ್ಲಿಯ ಲೋಪವನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು. ಈ ಕವನವನ್ನು ಹುಡುಕಲು ಪ್ರಯತ್ನಿಸುವೆ. ನಿಮಗೆ ಲಭ್ಯವಿದ್ದರೆ, ದಯವಿಟ್ಟು ಕಳುಹಿಸಿ.

Dayananda said...

ಹರಿಯ ವಿಶ್ವರೂಪವನ್ನು ಮರೆತುಬಿಟ್ಟೆಯಾ?
ದೀನಗಿಂತ ದೇವ ಬಡವನೆಂದು ಬಗೆದೆಯಾ? ”

V/S

ದೀನಗೊಂದು ವಿಶ್ವ ಸಾಲದಾಸೆ ತಣಿಸಲು
ದೇವನೆದೆಯ ಗುಡಿಯು ಸಾಕು ನಲಿದು ನಲಿಸಲು

Both are correct!ದೇಸಾಯಿ sir more correct!! because poem has heart.ಪು.ತಿ.ನ poem is just replay.
I don't understand why ಪು.ತಿ.ನ took it so seriously to write against another poem ?

Keshav.Kulkarni said...

Thanks for reminding Dinakar Desai.

ಮನದಾಳದಿಂದ............ said...

ಸುನಾಥ್ ಜೀ,
ದಿನಕರ ದೇಸಾಯಿಯವರ ಬದುಕಿನ ಸೂಕ್ಸ್ಮ ವಿಚಾರಗಳನ್ನು ಪರಿಚಯಿಸಿದ ನಿಮಗೆ ಧನ್ಯವಾದಗಳು.

Badarinath Palavalli said...

ದಿನಕರ ದೇಸಾಯಿಯವರ ಒಳ್ಳೆಯ ಪರಿಚಯ ಲೇಖನ. ಹೊಸ ತಲಮಾರಿನ ಬರಹಗಾರರಿಗೆ ಹಾಗೂ ನನ್ನಂತ ಕಲಿಕೆಯ ಮಜಲಿನಲ್ಲಿರುವ ಎಳವೆ ಕವಿಗಳಿಗೆ ಇವರಂತಹ ಸಶಕ್ತ ಲೇಖಕರ ಅಧ್ಯಯನ ತುಂಬಾ ಸಹಕಾರಿ.

ಶ್ರೀ ವ್ಯಾಸ ದೇಶಪಾಂಡೆಯವರ ಬಗ್ಗೆ ತಿಳಿಸಿರಿ ಸಾರ್.

ಸಲ್ಲಾಪದ ಬರಹಗಳನ್ನೇ ಸಾಹಿತ್ಯಾಸಕ್ತರ ಪಠ್ಯವಾಗಿಸಬಹುದು.

ಈ ಬರಹವನ್ನು ನನ್ನ ಫೇಸ್ ಬುಕ್ ವಾಲಿನಲ್ಲಿ ಹಂಚಿಕೊಂಡಿದ್ದೇನೆ.

sunaath said...

ದಯಾನಂದರೆ,
ಪು.ತಿ.ನ. ಅವರನ್ನು ಭಕ್ತಕವಿ ಎಂದು ಕರೆಯಬಹುದು. ದೇಸಾಯಿಯವರ ಕವನಕ್ಕೆ ಪ್ರತಿಯಾಗಿ ಪುತಿನ ಬರೆಯಬಾರದಿತ್ತು. ಆದರೂ ಸಹ ಪುತಿನ ಅವರ ಕವನದ ರಚನೆ ಚೆನ್ನಾಗಿದೆ ಎಂದು ಹೇಳಬಹುದು!

sunaath said...

ಕೇಶವ,
ಧನ್ಯವಾದಗಳು.

sunaath said...

ಪ್ರವೀಣರೆ,
ದಿನಕರ ದೇಸಾಯಿಯವರ ಸಾಧನೆಗಳ ಪರಿಚಯವು ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವಾಗಿರುವುದು ಖೇದದ ಸಂಗತಿ.
ಓರ್ವ ಸಾಹಿತಿ ಎನ್ನುವದಕ್ಕಿಂತ ಹೆಚ್ಚಾಗಿ ಅವರು ಒಬ್ಬ ಶ್ರೇಷ್ಠ humanist ಆಗಿದ್ದರು.

sunaath said...

ಬದರಿನಾಥರೆ,
ಧನ್ಯವಾದಗಳು. ವ್ಯಾಸ ದೇಶಪಾಂಡೆಯವರ ಪರಿಚಯವು ಕನ್ನಡ ವಿಕಿಪೀಡಿಯಾದಲ್ಲಿ ಲಭ್ಯವಿದೆ.

ಚುಕ್ಕಿಚಿತ್ತಾರ said...

ಕಾಕ
ಉತ್ತಮವಾಗಿ ದಿನಕರ ದೇಸಾಯಿಯವರ ಬಗೆಗಿನ ಪರಿಚಯವನ್ನು ಮಾಡಿಸಿದ್ದೀರಿ.
"‘ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ?’ ಈ ಪದ್ಯವನ್ನು ಕೇಳಿರಲಿಲ್ಲ. ಉಳಿದೆರಡರ ಪರಿಚಯವಿತ್ತು. ಆದರೆ ಅದರ ಹಿನ್ನೆಲೆ ಗೊತ್ತಿರಲಿಲ್ಲ. ತಿಳಿಸಿದ್ದಕ್ಕೆ ವ೦ದನೆಗಳು.

ಸಿಂಧು sindhu said...

ಪ್ರೀತಿಯ ಸುನಾಥ ಕಾಕ,

ಎನ್ನ ದೇಹದ ಬೂದಿ ಗಾಳಿಯಲಿ ತೂರಿ ಬಿಡಿ, ಮತ್ತು ಹರಿಗೆ ಎಂದು ಗುಡಿಯನೊಂದ ಕಟ್ಟುತಿರುವೆಯಾ ಈ ಎರಡೂ ನನ್ನ ಇಷ್ಟದ ಗೀತೆಗಳು ಕೂಡ.
ದೇಸಾಯರ ಬಗ್ಗೆ ತುಂಬಾ ಕಡಿಮೆ ವಿಚಾರ ಗೊತ್ತಿತ್ತು.ಏಳವೆಯಿಂದಲೂ "ಎನ್ನ ದೇಹದ ಬೂದಿ" ಬರೆದ ಅವರೆಂದರೆ ನನಗೆ ನಿಷ್ಕಾರಣ ಪ್ರೀತಿ. ನಿಮ್ಮಿಂದ ಅದು ದುಪ್ಪಟ್ಟಾಗಿದೆ.
ಬೂದಿ-ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ "ಧನ್ಯವಾಯಿತು ಹುಟ್ಟು ಸಾವಿನಲ್ಲಿ" ಎಂಥ ಸಾಲು!

ಪು.ತಿ.ನ ಅವರ ಹರಿಗೆ ಎದೆಯಲೊಂದು ಗುಡಿಯ kattutiruvenu ಕೂಡ ಸುಂದರ ಕವಿತೆ. "ಆದರವನ ಬದುಕು ಭಿಕ್ಷೆಯು" ಎಂಬಲ್ಲಿ ಪು.ತಿ.ನ. ದೇವರನ್ನ ಮಾನುಶವಾಗಿ ನಮ್ಮ ಸಂಕಟಗಳಿಗೆ ಹತ್ತಿರವಾಗಿ ಚಿತ್ರಿಸಿದ್ದಾರೆ ಅನಿಸ್ತದೆ. ಲೋಕೋ ಭಿನ್ನ ರುಚಿ: ಪುತಿನ ಅವರು ದೇಸಾಯರ ಕವಿತೆಗೆ ಸ್ಪಂದಿಸಿ ಬರೆದದ್ದು ಎಂದರೂ ಇದು ಅವರ ಭಕ್ತ ಮನಸ್ಸಿನ ಆರೋಗ್ಯಕರ ಸ್ಪಂದನ. ಕೆಸರು ಎರಚಾಟವಲ್ಲ. ಇದನ್ನು ಪ್ರಸ್ತಾವಿಸಿ ಹೊಸ ನೋಟ ಕೊಟ್ಟಿದೀರಿ.

ದೇಸಾಯರ ಬಗ್ಗೆ ಬರೆದ ನಿಮಗೂ, ಇದಕ್ಕೆ ಪ್ರೇರಣೆಯಾದ ಶ್ರೀ ವ್ಯಾಸ ದೇಶಪಾಂಡೆ ಯವರಿಗೂ ನನ್ನ ನಮನಗಳು.

ಪ್ರೀತಿಯಿಂದ,
ಸಿಂಧು

sunaath said...

ವಿಜಯಶ್ರೀ,
ದಿನಕರ ದೇಸಾಯಿಯವರು ಕರ್ನಾಟಕದ ಹಾಗು ಭಾರತದ ಶ್ರೇಷ್ಥ, ಪ್ರಾಮಾಣಿಕ, ಮಾನವತಾವಾದಿ ಹೋರಾಟಗಾರರು. ಅವರನ್ನು ನಾವು ನೆನಪಿಟ್ಟುಕೊಳ್ಳುತ್ತಿರುವುದು ಕೇವಲ ಚುಟುಕುಕವಿ ಎಂದು! ಅವರ ಚರಿತ್ರೆಯನ್ನು ನಮ್ಮ ಇತಿಹಾಸದಲ್ಲಿ ನಾವು ಸೇರಿಸಬೇಕು.

sunaath said...

ಸಿಂಧು,
ನಿಮ್ಮ ಬ್ಲಾಗ್ ಅನೇಕ ದಿನಗಳಿಂದ ಸ್ತಬ್ಧವಾಗಿದೆ. ಏಕೆ?
-ಕಾಕಾ

shivu.k said...

ಸುನಾಥ್ ಸರ್,
ತುಂಬಾ ದಿನಗಳ ನಂತರ ಮತ್ತೆ ಎಲ್ಲರ ಬ್ಲಾಗಿಗೆ ಬರುತ್ತಿದ್ದೇನೆ. ದಿನಕರ ದೇಸಾಯಿಯವರ ಬಗ್ಗೆ ವಿವರಣೆ ಸಂಗ್ರಹ್ಯ ಯೋಗ್ಯವೆನಿಸಿದೆ. ಶೋಷಿತರ ಬಗ್ಗೆ ಅವರ ಕಾಳಜಿ,ಮಾನವೀಯತೆ, ಕವನದ ಮೂಲಕ ವ್ಯಕ್ತಪಡಿಸಿರುವುದನ್ನು ಚೆನ್ನಾಗಿ ವಿವರಿಸಿದ್ದೀರಿ...ಧನ್ಯವಾದಗಳು.

Shashi Dodderi said...

Dear Sir,
what to say, I never knew Mr.Desai's personality and his support for the workers- excellent information- beautiful poems- Thanks for such a beautiful blog-
waiting for the next one
Shashi

Sushrutha Dodderi said...

ಮನಸು ತುಂಬಿತು ಕಾಕಾ. ಥ್ಯಾಂಕ್ಸ್ ಎ ಲಾಟ್!

sunaath said...

ಶಿವು,
ನೀವಿಲ್ಲದೇ ಬ್ಲಾಗ್‍ಲೋಕ ಬರಡಾಗಿತ್ತು. ನಿಮ್ಮ ಲೇಖನಗಳನ್ನು ಹಾಗು ಛಾಯಾಚಿತ್ರಗಳನ್ನು ಮತ್ತೇ ಪ್ರತೀಕ್ಷಿಸುತ್ತೇನೆ.

sunaath said...

ಶಶಿ,
ಇವರೆಲ್ಲ ನಮ್ಮ ಇತಿಹಾಸಪುರುಷರು. ಇವರ ಬಗೆಗೆ ನಮ್ಮ ಪಠ್ಯಗಳಲ್ಲಿ ಚಕಾರವೂ ಇರದಿರುವುದು ಖೇದದ ಸಂಗತಿ.

sunaath said...

ಸುಶ್ರುತ,
ನೀವು ಇಷ್ಟು ಬೇಗನೇ `honeymoon mood'ನಿಂದ ಬಹಿರ್ಮುಖರಾಗಿರುವುದು ಅಚ್ಚರಿಯ ಸಂಗತಿ!

Subrahmanya said...

ಪೂರಕ ಮಾಹಿತಿಯೊಂದಿಗೆ ದೇಸಾಯರ ಕವನದ ವಿವರಣೆ ನೀಡಿದ್ದಕ್ಕೆ ನಿಮಗೆ ಅನೇಕ ಧನ್ಯವಾದಗಳು.

sunaath said...

ಸುಬ್ರಹ್ಮಣ್ಯರೆ,
ನಿಮಗೂ ಧನ್ಯವಾದಗಳು.

Anonymous said...

ದಿನಕರ ದೇಸಾಯಿಯವರ ಕವನಗಳನ್ನೂ, ಅವುಗಳ ಸಮಾಜ ಮುಖಿತ್ವವನ್ನೂ ಚೆನ್ನಾಗಿ ಪ್ರಸ್ತಾಪಿಸಿದ್ದೀರಿ ಸರ್, ಉತ್ತಮ ಲೇಖನಕ್ಕಾಗಿ ಧನ್ಯವಾದಗಳು. ನನ್ನ ಬ್ಲಾಗ್ ಗೂ ಬನ್ನಿ.

sunaath said...

Anonymusರೆ,
ದಯವಿಟ್ಟು ನಿಮ್ಮ ಕೊಂಡಿಯನ್ನು ಕೊಡಿ.

prabhamani nagaraja said...

`ದಿನಕರ ದೇಸಾಯಿಯವರ ಕವನಗಳನ್ನೂ, ಅವುಗಳ ಸಮಾಜ ಮುಖಿತ್ವವನ್ನೂ ಚೆನ್ನಾಗಿ ಪ್ರಸ್ತಾಪಿಸಿದ್ದೀರಿ ಸರ್, ಉತ್ತಮ ಲೇಖನಕ್ಕಾಗಿ ಧನ್ಯವಾದಗಳು. ನನ್ನ ಬ್ಲಾಗ್ ಗೂ ಬನ್ನಿ.' ಈ ಅಭಿಪ್ರಾಯ ನನ್ನದೇ ಸರ್, ಸ್ವಲ್ಪ ತೊ೦ದರೆಯಿ೦ದಾಗಿ ಲಿಂಕ್ ಪ್ರಕಟವಾಗಲಿಲ್ಲ! ಕ್ಷಮಿಸಿ.

sunaath said...

ಪ್ರಭಾಮಣಿಯವರೆ,
ಧನ್ಯವಾದಗಳು. ನಿಮ್ಮ blogಇನ regular ಓದುಗ ನಾನು. ಕೆಲವೊಂದು ತೊಂದರೆಗಳಿಂದಾಗಿ, ಇತ್ತೀಚೆಗೆ ಯಾವ blogಇಗೂ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ಕ್ಷಮಿಸಿ.

Archu said...

wow ಕಾಕಾ ..ಚಂದದ ವಿವರಣೆ . ಥಾಂಕ್ಯೂ !!

--ಅರ್ಚನಾ

sunaath said...

ಅರ್ಚನಾ,
ಧನ್ಯವಾದಗಳು.

ಜಲನಯನ said...

ಸುನಾಥಣ್ಣ... ನನಗೆ ತುಂಬಾ ಸಂತೋಷ ಆಯ್ತು... ನನ್ನ ಬಾಲ್ಯದ ಮೆಚ್ಚಿನ ಕವಿಗಳಲ್ಲಿ ಜಿಪಿರಾಜರತ್ನಂ ಮತ್ತು ದಿನಕರ ದೇಸಾಯಿ ಅತಿ ಪ್ರಿಯರು...ಕಾರಣ ಅವರ ಪದ್ಯಗಳು ಮತ್ತು ಚುಟುಕಗಳು...
ಇವರ ಪರಿಚಯ ಒಳನೋಟ ಸಲ್ಲಾಪದಲ್ಲಾಗುತ್ತಿರುವುದು ನನಗೆ ಉಲ್ಲಾಸ.... ಗಂಟೆಯ ನೆಂಟನೆ ಓ ಗಡಿಯಾರ..ಇದಕ್ಕೆ ನನ್ನ ಸ್ನೇಹಿತ ಗಡಿಯಾರದಂತೆ ರಟ್ಟಿನ ಮಾದರಿ ಕಟ್ಟಿಕೊಂಡೂ ನಟಿಸಿದ್ದು ನಾನು ನನ್ನದೇ ಧಾಟಿಯಲ್ಲಿ ಈ ಪದ್ಯ ಹಾಡಿದ್ದು ಇನ್ನೂ ನೆನೆಪಿದೆ....

Anil Talikoti said...

ನಾಳೆಗಳ ಮಾಡುವವರ ನಡುವೊಬ್ಬ
ಅನ್ಕೊಂಡೆ ಚುಟುಕು ಗೀಚುವವನಿವನೋಬ್ಬಾ
ತಪ್ಪ ತಿಳಿಯಿತು, ಕಣ್ ತೆರೆಯಿತು ಅಬ್ಬಬ್ಬಾ
ಸೂರ್ಯ ಪ್ರಭೆ ಕರಗಿಸಿತು ಮುಸುಕಿದ ಮಬ್ಬಾ
-ಅನೀಲ

sunaath said...

ಜಲನಯನ,
ನೀವು ಈ ಕವನವನ್ನು ಶಾಲೆಯಲ್ಲಿ ಹಾಡಿದ್ದು ತಿಳಿದು ಖುಶಿಯಾಯಿತು. ಇದು ನನ್ನ ಮೆಚ್ಚಿನ ಗೀತೆಯೂ ಹೌದು.

sunaath said...

ಅನಿಲ,
ನಮ್ಮ ನಡುವೆ ಅನೇಕ ಇತಿಹಾಸಪುರುಷರು ಬದುಕಿ ಹೋದರೂ ಸಹ, ನಮ್ಮ ಇತಿಹಾಸಕಾರರು ಅವರ ಬಗೆಗೆ ಕಣ್ಣು ಮುಚ್ಚಿಕೊಂಡು ಕೂತಿದ್ದಾರೆ! ದಿನಕರ ದೇಸಾಯಿಯವರ ಬಗೆಗೆ ನಮ್ಮ ಪಠ್ಯಪುಸ್ತಕಗಳಲ್ಲಿ ಒಂದು ಪುಟವಾದರೂ ಇರಬೇಕಾಗಿತ್ತು.

shridhar said...

Kaka .. mahitiyukta Lekhana ..
more than that i got the poem which i was searching from last few days . Ondina beligge yako school days nenapagi namma sir obbaru nanna dehada boodi hadanna hadiddu nenapagittu .. avattinda naanu e hadanna intenretnalli search madtane idini .. now i got the lyrics .. but idara haadu idre kalisuvira ...

sunaath said...

ಶ್ರೀಧರ,
ನಿಮಗೆ ಹಾಡಿನ ಲಿರಿಕ್ಸ್ ಲಭ್ಯವಾಗಿದ್ದರಿಂದ ನನಗೆ ಖುಶಿಯಾಗಿದೆ. ಹಾಡು ನನಗೂ ಎಲ್ಲೂ ಸಿಕ್ಕಿಲ್ಲ. ಸಿಕ್ಕರೆ ಲಿಂಕ್ ಹೇಳುವೆ.

swapnageleya said...

ತುಂಬಾ ಉತ್ತಮ ಲೇಖನ...
www.ravindratalkies.blogspot.in

V.R.BHAT said...

ಹರಿಗೆ ಗುಡಿಗೆ ಕಟ್ಟುವ ಬಗೆಗೆ ಮೂರು ಕವಿಗಳು ಬರೆದ ಕವನಗಳನ್ನು ಪ್ರಸ್ತುತಪಡಿಸಿದ್ದೀರಿ. ಇವತ್ತು ಹರಿಯ ಹೆಸರಿನಲ್ಲಿ ಗುಡಿಕಟ್ಟಿ ತಮ್ಮ ಉಡಿ ತುಂಬಿಸಿಕೊಳ್ಳುವ ಜನರಿಗೇನೂ ಕಮ್ಮಿ ಇಲ್ಲ! ಕಾಲವೊಂದರಲ್ಲಿ ದೇವಸ್ವ, ಬ್ರಹ್ಮಸ್ವ ಇವುಗಳನ್ನೆಲ್ಲಾ ತಿನ್ನಬಾರದು ಎಂಬ ನೀತಿ ಜನಜೀವನದಲ್ಲಿ ಹಾಸುಹೊಕ್ಕಾಗಿತ್ತು; ಇಂದು ನೀತಿಗಳೇ ಇಲ್ಲದ ಸ್ವೇಚ್ಛೆಯ ಜೀವನಕ್ರಮದಲ್ಲಿ ದೇವರಹೆಸರಲ್ಲೋ ಕೈಲಾಗದ ಅನಾಥರ ಹೆಸರಲ್ಲೋ ಗುಡಿ-ಆಶ್ರಮ ಕಟ್ಟಿ ಲೂಟಿಹೊಡೆಯುವವರ ಸಂಖ್ಯೆ ಬೆಳೆಯುತ್ತಲೇ ಇದೆ. ಅರಿಯದ ಮಂದಿಗೆ ವೇದಿಕೆಯಲ್ಲಿ ಸನ್ಮಾನಿಸುತ್ತಾ ಅವರ ನಿಜಜೀವನಕ್ಕೆ ನೀಡಬೇಕಾದ ಸವಲತ್ತುಗಳನ್ನು ಕೊಡದೇ ಮಾತನಾಡುವ ಅವರ ಬಾಯಿಗೆ ಮಾತನಾಡದಂತೇ ಬರೆಹಾಕುವ ಕಾರ್ಯ ನಡೆಯುತ್ತಿದೆ. ಮುಗ್ಧೆ ಸಾಲುಮರದ ತಿಮ್ಮಕ್ಕ ತಮ್ಮ ಜೀವಿತಕಾಲದಲ್ಲಿ ಹೆರಿಗೆ-ಗುಡಿ[ಹೆರಿಗೆ ಆಸ್ಪತ್ರೆ]ಯೊಂದನ್ನು ಕಟ್ಟಿಸಿಕೊಡಿ ಎಂದು ಸರಕಾರವನ್ನು ಕೇಳುತ್ತಲೇ ಇದ್ದಾಳೆ-ಆ ಬಗ್ಗೆ ಯಾವುದೇ ಸಂಘ-ಸಂಸ್ಥೆಯಾಗಲೀ, ಸರಕಾರವಾಗಲೀ ಇನ್ನೂ ಆಸಕ್ತಿ ತಳೆದಿಲ್ಲ, ಮಕ್ಕಳಿಲ್ಲದ ತಿಮ್ಮಕ್ಕನಿಗೆ ಇತ್ತೀಚೆಗೆ ಗಂಡನೂ ತೀರಿಕೊಂಡು ಒಂಟಿಯಾಗಿದ್ದಾಳೆ-ಯಾವುದೇ ಆರ್ಥಿಕ ಆಧಾರವಿಲ್ಲ, ಮುಪ್ಪಿನ ವಯಸ್ಸಿನಲ್ಲಿ ದುಡಿಮೆ ಸಾಧ್ಯವಿಲ್ಲ, ಇಂತಹ ಕೆಲವರಿಗಾದರೂ ಜೀವಿತಕ್ಕೆ ಅನುಕೂಲ ಕಲ್ಪಿಸಿದ್ದರೆ ಅದು ನಿಜಕ್ಕೂ ಹರಿಗೆ ಕಟ್ಟುವ ಗುಡಿಯಾಗಿರುತ್ತದೆ. ಕವಿಗಳ ಆಶಯ ಅದೇ ಎಂಬುದು ನನ್ನ ಅಭಿಮತ.

sunaath said...

ಸ್ವಪ್ನಗೆಳೆಯ,
ಧನ್ಯವಾದಗಳು. In fact, ಆ ವ್ಯಕ್ತಿಯೇ ಅದ್ಭುತ, ಅಲ್ಲವೆ?

sunaath said...

ಭಟ್ಟರೆ,
ಈಗೀಗ, ನರಿಗೆ ಗುಡಿ ಕಟ್ಟಿ ಹೊಟ್ಟೆ ತುಂಬಿಸಿಕೊಳ್ಳುವ ನರರೇ ಜಾಸ್ತಿಯಾಗಿದ್ದಾರೆ!

ಸೀತಾರಾಮ. ಕೆ. / SITARAM.K said...

"ನನ್ನ ದೇಹದ ಬೂದಿ" ಮತ್ತು "ಹರಿಗೆ ಎಂದು ಗುಡಿಯನೊಂದು" ಇವೆರಡು ನನನ್ನ ಮೆಚ್ಚಿನ ಕವನಗಳು. ದಿನಕರರ ಚುಟುಕುಗಳ ಓದೇ, ನಾನು ಚುಟುಕು ಬರೆಯುವ ಹುಚ್ಚು ಹತ್ತಿಸಿಕೊಂಡು.. ಕ್ರಮೇಣ ಅದು ನನ್ನ ಸಾಹಿತ್ಯಾಸಕ್ತಿಯಾಯಿತು. ದಿನಕರರ ಸಾಮಾಜಿಕ ಜೀವನದ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದ ತಮಗೂ ವ್ಯಾಸ ದೇಶಪಾಂಡೆಯವರಿಗೂ ಧನ್ಯವಾದಗಳು. ನನ್ನ ಮಗನ ಮೆಚ್ಚಿನ ಪದ್ಯ "ಟಿಕ್ ಟಿಕ್ ಗೆಳೆಯ" ದಿನಕರರದೆಂದು ಗೊತ್ತಿರಲಿಲ್ಲ. ನನ್ನ ಹತ್ತಿರ ಇರುವ ಅದರ ದ್ವನಿ ಸುರುಳಿಯಲ್ಲಿ ಕೇವಲ ಎರಡೇ ನುಡಿಗಳಿದ್ದವು. ಪೂರ್ತಿ ಸಾಹಿತ್ಯ ನೀಡಿದ್ದಕ್ಕೆ ಧನ್ಯವಾದಗಳು.

sunaath said...

ದಿನಕರ ದೇಸಾಯಿಯವರು ದೊಡ್ಡ ಸಾಹಿತಿಯಾದಂತೆಯೇ ದೊಡ್ಡ ವ್ಯಕ್ತಿಯೂ ಹೌದು. ಅವರ ಬಗೆಗೆ ಮಾಹಿತಿ ನೀಡಿದ ವ್ಯಾಸ ದೇಶಪಾಂಡೆಯವರಿಗೆ ನಾನು ಆಭಾರಿಯಾಗಿದ್ದೇನೆ.

Unknown said...

ನನ್ನೂರ ಮೆಚ್ಹ್ಸಿನ ಕವಿ ದಿನಕರ ದೇಸಾಯಿಯವರನ್ನು ನೆನಪಿಸಿ ಆನಂದಗೊಲಿಸಿದಿರಿ. ಅದೇನೋ ಅಭಿಮಾನ ನಾವು ಅನ್ಕೊಲೆಯವರಿಗೆ ದಿನಕರ ದೇಸಾಯಿಯವರ ಮೇಲೆ. ನಾನು ಹಾಡಿದ್ದ ಮೊತ್ತಮೊದಲ ಪದ್ಯ ದಿನಕರ ದೆಸಾಯಿಯವರದ್ದು. ಆ ನಂತರ ಶಾಲಾದಿನಗಳ ಪ್ರತಿ ಗಾಯನ ಸ್ಪರ್ಧೆ, ಕವಿತವಾಚನದಲ್ಲಿಯೂ ಅವರ ಪದ್ಯ, ಚುಟುಕಗಳನ್ನೇ ಉದ್ಧರಿಸಿದ್ದೇನೆ. ಶಕ್ತಿ ಏತಕೆ ಎನಗೆ ಭಕ್ತಿಭಾವನೆಯಿರಲಿ ಕೂಡ ಈ ಪದ್ಯಗಳ ಭಾವಗಳನ್ನು ಹೊಳುವಂಥದ್ದು. ಅವರ ಅಳಗೆರಿಯಲಿ ಕುಡಿದೆ ಎಳೆನೀರು ತಾಜಾ (ಬೆಂಗಳೂರಿನ ಹಾದಿಯಲ್ಲಿ), ಚಿಕ್ಕವಳಿದ್ದಾಗ ನನ್ನ ಫೆವರಿಟ್ ಪದ್ಯವಾಗಿತ್ತು.
ಅವರ ನನ್ನ ದೇಹದ ಬೂದಿ ಪದ್ಯ ತುಂಬಾ ತುಂಬಾ ಇಷ್ಟದ ಪದ್ಯ.

sunaath said...

Thank you, Unknown, for your response.