ಒಂದು ಕಾಲವಿತ್ತು. ಆ ಕಾಲದಲ್ಲಿ ಚಿಕ್ಕ ಮಕ್ಕಳಿಗೆ ಶುದ್ಧಬರಹವು
ಪಠ್ಯಕ್ರಮದ ಅನಿವಾರ್ಯ ಭಾಗವಾಗಿತ್ತು. ಕಲಿಸುವ ಶಿಕ್ಷಕರೂ ಸಹ ಕನ್ನಡವನ್ನು ಚೆನ್ನಾಗಿ ತಿಳಿದವರೇ
ಆಗಿರುತ್ತಿದ್ದರು. ಆದುದರಿಂದ ಬರಹದಲ್ಲಿ ಕಾಗುಣಿತದ ತಪ್ಪುಗಳು ಕಂಡು ಬರುತ್ತಿರಲಿಲ್ಲ. ಈಗ
ಕರ್ನಾಟಕದಿಂದ ಕನ್ನಡವೇ ಮಾಯವಾಗತೊಡಗಿದೆ. ಟೀವಿ ಹಾಗು ಆಕಾಶವಾಣಿಯ ಪ್ರಸಾರಗಳಲ್ಲಿ ಕನ್ನಡದ
ಪದಗಳನ್ನು ಇಂಗ್ಲೀಶ ಪದಗಳು ಒದ್ದೋಡಿಸುತ್ತಿವೆ. ಶಿಕ್ಷಕರಿಗೇ ಶುದ್ಧ ಕನ್ನಡ ತಿಳಿದಿಲ್ಲ. ಹೀಗಿರಲು ಕನ್ನಡ ಬರಹದಲ್ಲಿ ಕಾಗುಣಿತಕ್ಕೆ ಬೆಲೆ ಎಲ್ಲಿಯದು ಎನ್ನುವ ಪ್ರಶ್ನೆ ಸಹಜವಾದದ್ದೇ!
ಆದರೂ ಸಹ ಕನ್ನಡವನ್ನು ಉಳಿಸಬೇಕಾದ, ಬೆಳಸಬೇಕಾದ ಸಂಸ್ಥೆಗಳೇ ಕಾಗುಣಿತದ ತಪ್ಪುಗಳನ್ನು
ಮಾಡಬಾರದು. ಅದು ಮಹಾ ಅಪರಾಧ. ಅಂತಹ ಅಪರಾಧವನ್ನು ಶಿವಮೊಗ್ಗಿಯಲ್ಲಿಯ ನಮ್ಮ ಕುವೆಂಪು ವಿಶ್ವವಿದ್ಯಾಲಯವು
ಮಾಡಿದೆ. ಈ ವಿಶ್ವವಿದ್ಯಾಲಯದ ಕಟ್ಟಡದ ಮೇಲಿನ ಲಾಂಛನವನ್ನು ಗಮನಿಸಿರಿ.
ಈ ಲಾಂಛನದ ಒಳಗೆ ಬರೆದ ಧ್ಯೇಯವಾಕ್ಯವನ್ನು ಓದಿರಿ. ಅದು ಹೀಗಿದೆ:
‘ಮನುಜಮತ * ವಿಶ್ವಪಥ * ಸರ್ವೋದಯ * ಸಮನ್ವಯ * ಪೂರ್ಣದೃಷ್ಠಿ’
ಈ ಧ್ಯೇಯವಾಕ್ಯವು ರಾಷ್ಟ್ರಕವಿ ಕುವೆಂಪುರವರ ಜೀವನದ ಆದರ್ಶವೇ ಆಗಿದೆ.
ಈ ಪದಗಳಲ್ಲಿ ಕಾಗುಣಿತದ ತಪ್ಪೆಸುಗುವುದು ಕುವೆಂಪುರವರಿಗೆ ಮಾಡುವ ಅಪಚಾರವಲ್ಲವೆ? ಹೀಗಿದ್ದರೂ
ಕುವೆಂಫು ವಿಶ್ವವಿದ್ಯಾಲಯವು ಈ ಅಪರಾಧವನ್ನು ಎಸಗಿದೆ. ‘ಪೂರ್ಣದೃಷ್ಟಿ’ ಎಂದು ಬರೆಯುವ
ಬದಲು ‘ಪೂರ್ಣದೃಷ್ಠಿ’ ಎಂದು ಬರೆಯಲಾಗಿದೆ.
೧೯೮೭ರಲ್ಲಿ ಈ ವಿಶ್ವವಿದ್ಯಾಲಯವು ಪ್ರಾರಂಭವಾಯಿತು. ಅಲ್ಲಿಂದ
ಇಲ್ಲಿಯವರೆಗೆ ೬ ಜನ ಉಪಕುಲಪತಿಗಳು ಈ ವಿಶ್ವವಿದ್ಯಾಲಯವನ್ನು ಆಳಿದರು. ಈಗಿರುವವರು ಏಳನೆಯವರು.
ಇವರ್ಯಾರೂ ಈ ತಪ್ಪನ್ನು ಗಮನಿಸಲಿಲ್ಲವೆ? ಕಟ್ಟಡದ ಮೇಲಿನ ಲಾಂಛನವು ಇವರ ಕಣ್ಣಿಗೆ
ಬಿದ್ದಿರಲಿಕ್ಕಿಲ್ಲ ಎಂದು ಇಟ್ಟುಕೊಳ್ಳೋಣ. ಆದರೆ ಉಪಕುಲಪತಿಗಳು ಬರೆಯುವ ನೂರಾರು ಪತ್ರಗಳ ಮೇಲೆ
ಹಾಗು ದಾಖಲೆಗಳ ಮೇಲೆ ಈ ಲಾಂಛನ ಇದ್ದೇ ಇರುತ್ತದೆಯಲ್ಲವೆ? ಅಲ್ಲಿಯೂ ಸಹ ಇವರ ಗಮನ ಹರಿಯಲಿಲ್ಲವೆ?
ಅಶಿಕ್ಷಿತರಿಗೆ ಹಾಗು ಅರೆಶಿಕ್ಷಿತರಿಗೆ ಈ ತಪ್ಪಿನ
ಅರಿವಾಗಲಿಕ್ಕಿಲ್ಲ. ಆದರೆ ಉಪಕುಲಪತಿಗಳು ಹಾಗು ವಿಶ್ವವಿದ್ಯಾಲಯದ ಕನ್ನಡ ಮತ್ತು ಸಂಸ್ಕೃತ
ಇಲಾಖೆಯ ಪ್ರಾಧ್ಯಾಪಕರು ಉಚ್ಚ ಶಿಕ್ಷಣ ಪಡೆದವರಾಗಿರುತ್ತಾರೆ. ಈ ತಪ್ಪನ್ನು ಗಮನಿಸಿಯೂ, ತೆಪ್ಪಗೆ
ಕುಳಿತರೆ ಇದು ಕುವೆಂಪುರವರಿಗೆ ಹಾಗು ಕನ್ನಡಮ್ಮನಿಗೆ
ಎಸಗುವ ಘೋರ ಅನ್ಯಾಯ. ಕುರುಡರು ತಾವಷ್ಟೇ ದಾರಿ ತಪ್ಪುತ್ತಾರೆ. ಆದರೆ ಕಣ್ಣಿದ್ದ ಈ
ಕುರುಡರು ಈ ವಿಶ್ವವಿದ್ಯಾಲಯದಲ್ಲಿ ಕಲಿತ ಹಾಗು ಕಲಿಯುತ್ತಿರುವ ಎಲ್ಲ ವಿದ್ಯಾರ್ಥಿಗಳನ್ನೂ ಈ
ವಿಷಯದಲ್ಲಿ ಹಾದಿಗೆಡಿಸುತ್ತಿದ್ದಾರೆ. ಸಂಚಿ ಹೊನ್ನಮ್ಮನ ಕವನದ ಸಾಲೊಂದನ್ನು ಎರವಲು ಪಡೆದು
ಹೇಳುವುದಾದರೆ, ಇವರು ’ಕಣ್ಣು ಕಾಣದ ಗಾವಿಲರು!’
ಈ ವಿಷಯದಲ್ಲಿ ಒಂದು ಸರಳ ಸೂತ್ರವನ್ನು ಇಲ್ಲಿ ಉಲ್ಲೇಖಿಸಿದರೆ,
ಉಪಯುಕ್ತವಾದೀತು. ಅದು ಹೀಗಿದೆ:
ಸಂಸ್ಕೃತದಲ್ಲಿ ಕ್ರಿಯಾಪದಗಳಿಂದ ಸಾಧಿತವಾದ ನಾಮಪದಗಳು ಅಥವಾ
ವಿಶೇಷಣಗಳ ಕೊನೆಯ ಅಕ್ಷರವು ಅಲ್ಪಪ್ರಾಣವಾಗಿರುತ್ತದೆ.
ಉದಾಹರಣೆಗಳು:
ಉದಾಹರಣೆಗಳು:
ಪುಷ್ (=ಪೋಷಣೆ ಪಡೆ) ... ಪುಷ್ಟಿ... ಪುಷ್ಟ
ದೃಷ್ (=ನೋಡು) .......... ದೃಷ್ಟಿ... ದೃಷ್ಟ
ತುಷ್ (=ಆನಂದಿಸು) .........ತುಷ್ಟಿ... ತುಷ್ಟ
ಇಷ್ (=ಬಯಸು) ............ ಇಷ್ಟಿ ....ಇಷ್ಟ ಇತ್ಯಾದಿ.
ತಾರತಮ್ಯಸೂಚಕ ಪದಗಳ ಅಂತವು superlative ಪದಗಳಲ್ಲಿ ಮಹಾಪ್ರಾಣವಾಗಿರುತ್ತದೆ. ಉದಾಹರಣೆಗಳು:
ಪಾಪೀ......... positive
ಪಾಪೀಯಸೀ.. comparative
ಪಾಪಿಷ್ಠ........superlative
ಕನೀ......... positive
ಕನೀಯಸೀ.. comparative
ಕನಿಷ್ಠ........superlative
ವರೀ......... positive
ವರೀಯಸೀ...comparative
ವರಿಷ್ಠ........superlative
ಗರೀ...........positive
ಗರೀಯಸೀ....comparative
ಗರಿಷ್ಠ........ superlative
ಇತ್ಯಾದಿ.
ಆದರೆ ನಮ್ಮ ವಿಶ್ವವಿದ್ಯಾಲಯಗಳು ಅಲ್ಪಪ್ರಾಣ ಕಾಗುಣಿತವನ್ನು
ಮಹಾಪ್ರಾಣಕ್ಕೂ ಹಾಗು ಮಹಾಪ್ರಾಣ ಕಾಗುಣಿತವನ್ನು ಅಲ್ಪಪ್ರಾಣಕ್ಕೂ ಬದಲಾಯಿಸಬಲ್ಲ
ಚತುರಮತಿಗಳಾಗಿವೆ.
ಕುವೆಂಪು ನಮ್ಮ ರಾಷ್ಟ್ರಕವಿ, ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯ
ಗೌರವವನ್ನು ತಂದುಕೊಟ್ಟ ಮೊದಲ ಲೇಖಕರು. ಅವರ
ಹೆಸರನ್ನು ಹೊತ್ತ ವಿಶ್ವವಿದ್ಯಾಲಯದಲ್ಲಿ ಈ ಮಟ್ಟದ ಅಜ್ಞಾನದ ಪ್ರದರ್ಶನವಾಗಬಾರದು. ಇದನ್ನು
ವಿಶ್ವವಿದ್ಯಾಲಯದ ಉಪಕುಲಪತಿಗಳ ಗಮನಕ್ಕೆ ತರುವುದು ಕನ್ನಡಿಗನಾದ ನನ್ನ ಕರ್ತವ್ಯ. ಹೀಗೆಂದುಕೊಂಡು
ಅವರಿಗೆ ಓಲೆಯೊಂದನ್ನು ಬರೆದಿದ್ದೇನೆ. ಅದನ್ನು ಕೆಳಗೆ ನೀಡುತ್ತಿದ್ದೇನೆ. ಸಿರಿಗನ್ನಡಂ ಗೆಲ್ಗೆ
ಎಂದರೆ ಸಾಲದು, ಸರಿಗನ್ನಡಂ ಗೆಲ್ಗೆ ಸಹ ನಮಗೆ ಬೇಕು ಎನ್ನುವುದನ್ನು ನಾವೆಲ್ಲರೂ ಅರಿಯಬೇಕಲ್ಲವೆ?
......................................................................
ಇವರಿಗೆ
ಉಪಕುಲಪತಿಗಳು,
ಕುವೆಂಪು ವಿಶ್ವವಿದ್ಯಾಲಯ,
ಶಿವಮೊಗ್ಗಿ
ಮಾನ್ಯರೆ,
ವಿಷಯ: ಕುವೆಂಪು ವಿಶ್ವವಿದ್ಯಾಲಯದ ಲಾಂಛನದಲ್ಲಿಯ ತಪ್ಪು ಕಾಗುಣಿತ
ದಿನಾಂಕ ೧೪-೮-೨೦೧೨ರ ‘ಸಂಯುಕ್ತ ಕರ್ನಾಟಕ’ ಸಮಾಚಾರ ಪತ್ರಿಕೆಯಲ್ಲಿ
ಛಾಪಿಸಲಾದ ವಿಶ್ವವಿದ್ಯಾಲಯದ ಲಾಂಛನದಲ್ಲಿಯ ಬರಹವನ್ನು ಓದಿ ಆಘಾತವಾಯಿತು. ಕನ್ನಡದ ಮೊದಲ
ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ಕುವೆಂಪುರವರ ಹೆಸರನ್ನು ಹೊತ್ತ ವಿಶ್ವವಿದ್ಯಾಲಯವು ತನ್ನ
ಲಾಂಛನದಲ್ಲಿ ಇಂತಹ ಕಾಗುಣಿತದ ತಪ್ಪನ್ನು ಮಾಡಬಹುದೆಂದು ಕಲ್ಪಿಸುವುದೂ ಸಾಧ್ಯವಿಲ್ಲ. ಇದು
ನಿಜವಾಗಿಯೂ ಲಾಂಛನಾಸ್ಪದ ವಿಷಯವಾಗಿದೆ. ನಿಮ್ಮ ಗಮನಕ್ಕಾಗಿ ಆ ಲಾಂಛನದ ಚಿತ್ರವನ್ನು ಕೆಳಗೆ
ಕೊಟ್ಟಿದ್ದೇನೆ:
ಉಪಕುಲಪತಿಗಳು ಲಾಂಛನದಲ್ಲಿಯ ಬರಹವನ್ನು ದಯವಿಟ್ಟು ಓದಬೇಕು.
‘ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಠಿ’ ಎಂದು
ಬರೆದಿರುವುದನ್ನು ಗಮನಿಸಬೇಕು. ಈ ಬರಹದಲ್ಲಿ ‘ಪೂರ್ಣದೃಷ್ಟಿ’ ಎಂದು ಬರೆಯುವುದರ
ಬದಲು ‘ಪೂರ್ಣದೃಷ್ಠಿ’ ಎಂದು
ಬರೆಯಲಾಗಿದೆ.
ವಿಶ್ವವಿದ್ಯಾಲಯವು ಪ್ರಾರಂಭವಾದಾಗಿನಿಂದ, ಅಂದರೆ ೧೯೮೭ನೆಯ ಇಸವಿಯಿಂದ
ತಪ್ಪು ಕಾಗುಣಿತದ ಈ ಲಾಂಛನವು ವಿಶ್ವವಿದ್ಯಾಲಯದ ಕಟ್ಟಡದ ಮೇಲೆ ರಾರಾಜಿಸುತ್ತಿರಬಹುದು. ಬಹುಶಃ
ನೀವು ಹಾಗು ನಿಮ್ಮ ಮೊದಲಿನ ಯಾವ ಉಪಕುಲಪತಿಯೂ ತಮ್ಮ ಮುಖವನ್ನು ಮೇಲೆತ್ತಿ ಕಟ್ಟಡದ ಮೇಲೆ
ಕಂಗೊಳಿಸುತ್ತಿರುವ ಈ ಲಾಂಛನವನ್ನು ನೋಡಿರಲಿಕ್ಕಿಲ್ಲ ಎಂದುಕೊಳ್ಳೋಣ. ಆದರೆ ಉಪಕುಲಪತಿಗಳ ಎಲ್ಲ
ಓಲೆಗಳಲ್ಲಿ ಹಾಗು ವಿಶ್ವವಿದ್ಯಾಲಯದ ಎಲ್ಲ ದಾಖಲೆಗಳಲ್ಲಿ ಈ ಲಾಂಛನವು ಮುದ್ರಿತವಾಗಿರುವುದನ್ನು
ನೀವು ನೋಡಿರಲೇ ಬೇಕಲ್ಲವೆ? ಈವರೆಗೆ ವಿಶ್ವವಿದ್ಯಾಲಯದ ಈ ಎಲ್ಲ ಓಲೆಗಳು ಹಾಗು ದಾಖಲೆಗಳು ಅನೇಕ
ಸುಶಿಕ್ಷಿತರಿಗೆ ರವಾನೆಯಾಗಿರಬಹುದು. ಇದು ಎಂತಹ ಅವಮಾನ! ಸ್ವರ್ಗದಲ್ಲಿರುವ ಕುವೆಂಪುರವರ ಆತ್ಮವು
ತನ್ನ ಹೆಸರನ್ನು ಹೊತ್ತ ವಿಶ್ವವಿದ್ಯಾಲಯದಲ್ಲಿ ಕನ್ನಡಕ್ಕೆ ಆಗುತ್ತಿರುವ ಈ ಅಪಚಾರದಿಂದಾಗಿ
ದಿನವೂ ಕಣ್ಣೀರನ್ನು ಸುರಿಸುತ್ತಿರಬಹುದು!
ಮಾನ್ಯ ಉಪಕುಲಪತಿಗಳೆ,
ಇನ್ನೂ ಕಾಲ ಮಿಂಚಿಲ್ಲ. ಈ ತಪ್ಪನ್ನು ತ್ವರಿತವಾಗಿ ಸರಿಪಡಿಸುವ ಮೂಲಕ, ರಾಷ್ಟ್ರಕವಿ ಕುವೆಂಪುರವರ
ಆತ್ಮಕ್ಕೆ ಶೀಘ್ರವೇ ಶಾಂತಿಯನ್ನು ದೊರಕಿಸುವಿರಿ ಎಂದು ನಂಬಿದ್ದೇನೆ.
ಒಂದು ಸಾಲಿನ
ಉತ್ತರವನ್ನು ಹೊತ್ತ ನಿಮ್ಮ ಮಾರೋಲೆಯನ್ನು ನಾನು ನಿರೀಕ್ಷಿಸಬಹುದೆ?
.......................................................................................
ಪ್ರತಿಯನ್ನು ಘನತೆವೆತ್ತ ರಾಜ್ಯಪಾಲರು, ಕರ್ನಾಟಕ ಹಾಗು ಉಪಕುಲಪತಿಗಳು,
ಕುವೆಂಪು ವಿಶ್ವವಿದ್ಯಾಲಯ ಇವರಿಗೆ ಅವಗಾಹನೆಗಾಗಿ ಹಾಗಿ ಸಮುಚಿತ ಕ್ರಮಕ್ಕಾಗಿ
ಸಮರ್ಪಿಸಲಾಗುತ್ತಿದೆ.
ಪ್ರತಿಯನ್ನು
ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ವಿಧಾನಸೌಧ, ಬೆಂಗಳೂರು ಇವರಿಗೆ ಅವಗಾಹನೆಗಾಗಿ
ಹಾಗು ಸಮುಚಿತ ಕ್ರಮಕ್ಕಾಗಿ ಕಳುಹಿಸಲಾಗುತ್ತಿದೆ.
English copy of the letter is
forwarded with compliments to the VC, UGC, New Delhi for favour of information and suitable action.
38 comments:
Dear sir,
situation is very serious. we are not able to speak Kannada with out using english words for five minute.Forget about common public radio and TV anchors speak entirely different Kannada which can be understood,only if we know 3 to 4 language.
on lighter note,Please do not see udaya TV .Otherwise you need to write thousands of letter like this udaya TV.
ಸುನಾಥ್ ಸರ್,
ನಿಮ್ಮ ಸೂಕ್ಷ್ಮಾವಲೋಕನ ಹಾಗೂ ವಿಶ್ವವಿದ್ಯಾಲಯದ೦ತಹ ಮಾರ್ಗದರ್ಶಕ ಸ್ಥಾನದಲ್ಲಿರುವ ತಪ್ಪನ್ನು ತಿದ್ದಬೇಕೆನ್ನುವ ಜವಾಬ್ಧಾರಿಯ ಬಗ್ಗೆ ಸ೦ತಸವೆನಿಸಿತು. ಅದಕ್ಕಾಗಿ ವ೦ದನೆಗಳು
ದಯಾನಂದರೆ,
ಎಚ್ಚರಿಕೆ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು!
ಪ್ರಭಾಮಣಿಯವರೆ,
ಭಾಷೆಯ ಬಬೆಗೆ, ಬರಹದ ಬಗೆಗೆ ನಮ್ಮವರೂ ನಿಷ್ಕಾಳಜಿ ತೋರುತ್ತಿರುವುದು ದುರ್ದೈವದ ಸಂಗತಿ. ಕೊನೆಯ ಪಕ್ಷದಲ್ಲಿ ಶೈಕ್ಷಣಿಕ ಸಂಸ್ಥೆಗಳಾದರೂ ಸ್ವಲ್ಪ ಕಾಳಜಿ ತೋರಿಸಬೇಕಲ್ಲವೆ?
ನನ್ನಂತವರು ತಪ್ಪು ಮಾಡಿದರೆ ಅದು ತಪ್ಪೇ ಆದರೂ ಕ್ಷಮಾರ್ಹ, ಆದರೆ ಒಂದು ವಿಶ್ವವಿದ್ಯಾಲಯ, ಅದೂ ಕುವೆಂಪು ಹೆಸರು ಹೊತ್ತದ್ದು, ಅದರಲ್ಲೂ ಕಟ್ಟಡದ ಲಾಂಛನದಲ್ಲಿ, ಅದು ಖಂಡಿತ ಅಪರಾಧ, ೨೫ ವರುಷದಿಂದ. ಎಂದಿನಂತೆ ಒಳ್ಳೆಯ ಕೆಲಸ ಮಾಡಿದ್ದಿರಿ ಸುನಾಥರೆ.
ಶ್ರೀ ಗುರುಭ್ಯೋ ನಮಃ,
ಈ ಬರಹ ನನ್ನ ಕಣ್ಣೂ ತೆರೆಸಿತು. ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಯಾವ ಪದದ ಕೊನೆ ಅಕ್ಷರವು ಅಲ್ಪ ಪ್ರಾಣವಾಗುತ್ತದೆ ಮತ್ತು ಯಾವ ಕೊನೆ ಅಕ್ಷರವು ಮಹಾಪ್ರಾಣವಾಗುತ್ತದೆ ಎಂಬುದು ಈಗಷ್ಟೇ ಅರಿವಾಯಿತು.
ಕುವೆಂಪು ವಿಶ್ವವಿದ್ಯಾಲವು ಆದಷ್ಟು ಬೇಗ ತಮ್ಮ ಪತ್ರಕ್ಕೆ ಪ್ರತಿಕ್ರಿಯಿಸಿ, ಬದಲಾವಣೆ ಮಾಡಿಕೊಳ್ಳಲಿ. ಜೊತೆಗೆ ತಪ್ಪು ತಿದ್ದಿದ ನಿಮ್ಮನ್ನೂ ಗೌರವಿಸಲಿ ಎಂದು ಆಶಿಸುತ್ತೇನೆ.
ಬೇಸರದ ಸ೦ಗತಿ.. :(
ವಿಶ್ವವಿದ್ಯಾಲಯದವರು ಬೇಗ ತಪ್ಪನ್ನು ಸರಿಪಡಿಸಲಿ.
ಈಗ ಕನ್ನಡ ಬರೆವ ಅಭ್ಯಾಸ ಕಡಿಮೆಯಾಗಿದೆ .
ನಮ್ಮ ಮುಂದಿನ ಪೀಳಿಗೆಯವರಿಗೆ ನಮ್ಮಷ್ಟೂ ಕನ್ನಡ ಬರೆಯಲು ಬರುತ್ತೊ ಇಲ್ಲವೋ ?
ಬ್ಲಾಗ್ ಬರಹಗಳಲ್ಲೂ ತಪ್ಪುಗಳಿದ್ದರೆ ದಯವಿಟ್ಟು ತಿಳಿಸಿ.
ವಂದನೆಗಳೊಂದಿಗೆ
ಸ್ವರ್ಣಾ
ನಿಮ್ಮ ಕನ್ನಡದ ಬಗೆಗಿನ ಕಾಳಜಿಗೆ ಅನಂತ ಧನ್ಯವಾದಗಳು ಸಾರ್.ನಮ್ಮ ಭಾಷೆ ಉಳಿಯಲು,ಬೆಳೆಯಲು ನಿಮ್ಮಂಥವರ ಮಾರ್ಗದರ್ಶನದ ಅವಶ್ಯಕತೆಯಿದೆ, ಮುಂದುವರೆಸಿ.
ಅನಿಲರೆ,
ಕುವೆಂಪು ವಿಶ್ವವಿದ್ಯಾಲಯಕ್ಕೆ ೨೫ ವರ್ಷಗಳಾಗಿರುವುದು ನನಗೆ ಅರಿವಾಗಿರಲಿಲ್ಲ. ನಿಮ್ಮ ಸ್ಪಂದನವನ್ನು ಓದಿದ ಬಳಿಕ ‘ಎಲಾ ಇವನ! ಕಾಗುಣಿತದ ತಪ್ಪಿನ ರಜತ ಮಹೋತ್ಸವ ಆಚರಿಸಬೇಕಾಯ್ತಲ್ಲ!’ ಎಂದು ವಿಚಿತ್ರ ಸಂಭ್ರಮವಾಯಿತು!
ಬದರಿನಾಥರೆ,
ಇದು ಕೇವಲ ಒಂದು ಸೂಚಕ ಅಷ್ಟೆ. ಇನ್ನು ಬೇರೆ ಬೇರೆ ಪದಗಳಿಗೆ ಬೇರೆ ಬೇರೆ ಸೂಚಕಗಳೂ ಇವೆ.
ಮನಮುಕ್ತಾ,
ಶೈಕ್ಷಣಿಕ ಸಂಸ್ಥೆಗಳಂತೆಯೇ ಪತ್ರಿಕೆಗಳು ಸಹ ಜ್ಞಾನಪ್ರಸಾರದ ಸಾಧನಗಳಷ್ಟೆ! ನೀವು ‘ಸಂಯುಕ್ತ ಕರ್ನಾಟಕ’ ಪತ್ರಿಕೆಯನ್ನು ಓದುತ್ತಿಲ್ಲ ಎಂದು ತಿಳಿಯುತ್ತೇನೆ. ದಿನವೂ ಆ ಪತ್ರಿಕೆಯನ್ನು ಓದುವ ನಾನು ತಲೆ ಚಚ್ಚಿಕೊಂಡು ಒದ್ದಾಡುತ್ತಿದ್ದೇನೆ. ಕಾಗುಣಿತದ ತಪ್ಪುಗಳು ಹಾಗು ವಾಸ್ತವಕ್ಕೆ ವಿರೋಧವಾದ ಮಾಹಿತಿಯನ್ನೆಲ್ಲ ಈ ಪತ್ರಿಕೆಯು ತುಂಬ ದಕ್ಷತೆಯಿಂದ ನಿರ್ವಹಿಸುತ್ತಿದೆ!
ಸ್ವರ್ಣಾ,
ಇನ್ನೆರಡು ತಲೆಮಾರುಗಳಲ್ಲಿ ಕರ್ನಾಟಕದಲ್ಲಿ ಕನ್ನಡ ಉಳಿದರೆ ಸಾಕು!
ಮಂಜುಳಾದೇವಿಯವರೆ,
ಪ್ರಯತ್ನವೇನೊ ನಮ್ಮದು; ಫಲ ದೈವೇಚ್ಛೆ!
ಸುನಾಥ್,
ಈ ವಿಷಯವನ್ನು ನೀವೇನಾದರೂ ಕುವೆಂಪು ವಿಶ್ವವಿದ್ಯಾಲಯದ ಗಮನಕ್ಕೆ ತರುವ ಪ್ರಯತ್ನ ಮಾಡಿದಿರೆ?
ಕವಿತಾ
ಕವಿತಾ,
ಈ ಲೇಖನದಲ್ಲಿ ಕೊಟ್ಟಿರುವ ಪತ್ರವನ್ನು ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ರವಾನಿಸಿದ್ದೇನೆ.
ಕಾಕ,
ಉತ್ತಮ ಪ್ರಯತ್ನ. ನಮಗೆ ಮಾರ್ಗದರ್ಶನ..
ಕಾಕಾ, ನನಗೂ ಈ ಅಲ್ಪಪ್ರಾಣ ಮತ್ತು ಮಹಾಪ್ರಾಣ ಯಾವಾಗ ಬರುತ್ತವೆ ಎಂಬುದರ ಬಗ್ಗೆ ಗೊಂದಲವಿತ್ತು. ಈ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದ.
ವಿಶ್ವವಿದ್ಯಾಲಯಕ್ಕೆ ನೀವು ತಿಳಿಸಿದ್ದೀರಿ. ಅವರು ಆದಷ್ಟು ಬೇಗ ಈ ತಪ್ಪು ಸರಿಪಡಿಸುತ್ತಾರೆ ಎಂದು ಆಶಿಸೋಣ.
ಕಾಕಾ ನಿಮ್ಮ ಕಳಕಳಿ ಕಿವುಡ ಕಿವಿಗೆ ಮುಟ್ಟಲಿ ಇದೇ ನನ್ನ ಹಾರೈಕೆ
ಚುಕ್ಕಿ,
ಧನ್ಯವಾದಗಳು!
ವಿ.ರಾ;
ವಿಶ್ವವಿದ್ಯಾಲಯದವರು ಎಚ್ಚೆತ್ತುಕೊಂಡಾರೆ?
ದೇಸಾಯರ,
ಕಲ್ಲು ಒಗೆದಿದ್ದೇನೆ. ತಾಕಿದರೆ ನನ್ನ ಪುಣ್ಯ!
ನಿಮ್ಮ ಕಳಕಳಿಯ ಪತ್ರದ ಮೇಲಾದರೂ ಸಂಬಂಧಿಸಿದವರ ಪೂರ್ಣದೃಷ್ಟಿ ಬೀಳಲಿ. ಅಷ್ಟೊಂದು ವರುಷಗಳಿಂದ ಲೆಟರ್ ಹೆಡ್ ಗಳ ಮೇಲೂ ತಪ್ಪೇ ಇದೆ ಎಂದರೆ, shame shame !.
They are shameless!
ಸರ್,
ಇದೇ ರೀತಿ ಅನೇಕ ಕಡೆ ಕನ್ನಡದ ಕೊಲೆಯಾಗುತ್ತಿರುವುದನ್ನು ನೋಡಿಯೂ ನೋಡದಂತೆ ನಾವಿದ್ದೇವೆ. ಅಂತದ್ದರಲ್ಲಿ ನಿಮ್ಮ ಪ್ರಯತ್ನ ನಿಜವಾಗಿಯೂ ಶ್ಲಾಘನೀಯ. ಹಾಗೆ ನಮ್ಮ ಬ್ಲಾಗ್ ಬರಹಗಳಲ್ಲಿ ಅಂತಹ ತಪ್ಪುಗಳು ಕಂಡು ಬಂದಲ್ಲಿ ದಯವಿಟ್ಟು ನಮ್ಮ ಗಮನಕ್ಕೆ ತಂದುಕೊಡಿ ಸರ್....ನಿಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.
ನಮಗೂ ಅಲ್ಪಪ್ರಾಣ ಮಹಾಪ್ರಾಣಗಳ ಬಗ್ಗೆ ತಿಳುವಳಿಕೆ ನೀಡಿ ಇಂತಹ ಸೂಕ್ಷ್ಮತೆಗಳನ್ನು ಗಮನಿಸಲು ಅವಕಾಶವಿತ್ತಿದ್ದೀರಿ ಧನ್ಯೋಸ್ಮಿ
ಅಶೋಕ,
ಕನ್ನಡದ ಕೊಲೆ ಎಲ್ಲೆಲ್ಲೂ ಆಗುತ್ತಿದೆ. ಕೊನೆಯ ಪಕ್ಷ ದೊಡ್ಡ ಸ್ಥಳಗಳಲ್ಲಿಯಾದರೂ ಹೀಗೇ ಆಗದಿರಲಿ ಎನ್ನುವುದಕ್ಕೆ ಇದೆಲ್ಲ ಒದ್ದಾಟ!
ಶ್ರೀಗುರುವೇ,
ನಿಮಗೂ ಧನ್ಯವಾದಗಳು.
ಸರ್,ಅಲ್ಪಪ್ರಾಣ-ಮಹಾಪ್ರಾಣದ ಬಗ್ಗೆ ನೀವು ಕೊಟ್ಟ ಉದಾಹರಣೆ ಅವಶ್ಯಕವಾಗಿತ್ತು.ನೀವು ವಿಶ್ವವಿದ್ಯಾಲಯ ಮತ್ತು ಇನ್ನಿತರ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ರವಾನಿಸಿದ್ದು ಒಳ್ಳೆಯದು.
ಅವರಿಂದ ಉತ್ತರವೇನಾದರೂ ಬಂದರೆ ಅದನ್ನೂ ಬ್ಲಾಗ್ ನಲ್ಲಿ ಹಂಚಿಕೊಳ್ಳಿ.ಖುಷಿಯಾಗುತ್ತೆ..
-RJ
RJ,
ಉತ್ತರ ಬಂದರೆ...! ಖಂಡಿತವಾಗಿಯೂ ಹಂಚಿಕೊಳ್ಳುತ್ತೇನೆ.
Dear Sir,
Also there is one more mistake. In the word 'sarvOdaya', 'arkavattu' and the 'dIrgha' symbols should be interchabed. Please highlight this error also.
Ranganath/Bangalore.
Thank you, Ranganath. I shall communicate this to the autorities.
naanu drushtti haage bareyuttidde. nimminda nanna tappu tiddikondiddene. vishwa vidhyalayavu tiddikollali endu aashisuttene,
ಸೀತಾರಾಮರೆ,
ತಿಳಿವನ್ನು ಹಂಚಿಕೊಳ್ಳುತ್ತ ಹೋಗೋಣ. ನಿಮ್ಮ blog ಅನೇಕ ದಿನಗಳಿಂದ ಮೌನವಾಗಿದ್ದು, ಇದೀಗ ಮತ್ತೆ ಬರೆದಿದ್ದೀರಿ. ಇದು ಖುಶಿಯ ಸಂಗತಿ.
ಕಾಕಾ, ಇದಕ್ಕೆ ಏನಾದರೂ ಉತ್ತರ ಬಂತಾ?
ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರು ದಿನಾಂಕ ೩-೯-೧೨ರಂದು ಪತ್ರ ಬರೆದು, ಈ ತಪ್ಪನ್ನು ನಿಯಮಾನುಸಾರವಾಗಿ ಸರಿ ಪಡಿಸುವದಾಗಿ ಹೇಳಿದ್ದಾರೆ. ಆದರೆ ಸರಿ ಪಡಿಸಿದ ಬಗೆಗೆ ನನಗೆ ಮಾಹಿತಿ ಇಲ್ಲ. ಅವರಿಗೆ ಮತ್ತೊಂದು ಪತ್ರ ಬರೆದು ಮಾಹಿತಿ ಪಡೆಯುವೆ. ನಿಮ್ಮ ಕಳಕಳಿಗಾಗಿ ಸಂತೋಷವಾಗುತ್ತಿದೆ. ಧನ್ಯವಾದಗಳು.
ಧನ್ಯವಾದ. ಅವರ ಕುರಿತು ಚಿಕ್ಕವನಿರುವಾಗ ಪತ್ರಿಕೆಗಳಲ್ಲಿ ಓದಿದ್ದೆ.
ಗುಡಸಿಯವರೆ,
ನಿಮಗೂ ಧನ್ಯವಾದಗಳು.
Post a Comment