ಬೇಂದ್ರೆಯವರ ಕವನಗುಚ್ಛ
‘ಗರಿ’ ೧೯೩೨ರಲ್ಲಿ ಪ್ರಕಟವಾಯಿತು. ‘ನರಬಲಿ’ ಕವನವು
ಈ ಮೊದಲೇ ‘ಜಯಕರ್ನಾಟಕ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಈ ಸಂಕಲನದಲ್ಲಿ ಅಡಕವಾಗಿತ್ತು.
‘ನರಬಲಿ’ ಕವನವು ರಾಜದ್ರೋಹದ ಸಂದೇಶವನ್ನು ನೀಡುತ್ತದೆ ಎಂದು
ನಿರ್ಣಯಿಸಿದ ಬ್ರಿಟಿಶ್ ಜಿಲ್ಲಾಧಿಕಾರಿಗಳು ಬೇಂದ್ರೆಯವರಿಗೆ ಸೆರೆಮನೆಯ ಶಿಕ್ಷೆಯನ್ನು ವಿಧಿಸಿದರು.
ಬೇಂದ್ರೆಯವರು ಮೂರು ತಿಂಗಳು ಅವಧಿಯನ್ನು ಹಿಂಡಲಗಿಯ ಸೆರೆಮನೆಯಲ್ಲಿ ಕಳೆದ ಬಳಿಕ, ಇವರ ಕಕ್ಕನ ಅನಾರೋಗ್ಯದ
ಕಾರಣದಿಂದಾಗಿ ಇವರನ್ನು ಮುಗದ ಎನ್ನುವ ಹಳ್ಳಿಯಲ್ಲಿ ನಜರಬಂದಿಯಲ್ಲಿ ಇಡಲಾಯಿತು. ಬೇಂದ್ರೆ ಅಲ್ಲಿ
ಒಂಬತ್ತು ತಿಂಗಳುಗಳವರೆಗೆ ಇದ್ದರು. ಈ ನಡುವೆ ತಪ್ಪೊಪ್ಪಿಗೆಯ ಹೇಳಿಕೆಯನ್ನು ನೀಡಿದರೆ, ಅವರನ್ನು
ಬಿಡುಗಡೆ ಮಾಡುವ ಆಮಿಶವನ್ನು ಬ್ರಿಟಿಶ್ ಸರಕಾರ ತೋರಿಸಿತ್ತು. ಆದರೆ ಬೇಂದ್ರೆಯವರು ಅದಕ್ಕೆ ಒಪ್ಪಲಿಲ್ಲ.
ನನ್ನ ಕವನವು ದೇಶಪ್ರೇಮದ ಕವನವೇ ಹೊರತು ದೇಶದ್ರೋಹದ ಕವನವಲ್ಲ ಎಂದು ಅವರು ಹೇಳಿದರು. ಈ ಘಟನೆಯನ್ನು
ಬೇಂದ್ರೆಯವರು ತಮ್ಮ ‘ಸಖೀಗೀತ’ದಲ್ಲಿ ಹೀಗೆ ವರ್ಣಿಸಿದ್ದಾರೆ:
‘ನರಬಲಿ’ ಕವನವು ಬಲಿ ಮಾಡಿತೆನ್ನನು
ಹೆಳವನಿದ್ದಲ್ಲಿಗೆ ಹೊಳೆ ಬಂದಿತು
……………………………
…………………………….
ಪ್ರಾಣದ ಒಗರಷ್ಟು ಹಿಂಡಿತು ಹಿಂಡಲಿಗೆ
ಮುಗದದ ಮಳೆಗಾಳಿ ಮುಂದೆಳೆದಿತು.
ಬೇಂದ್ರೆಯವರ ಅನೇಕ
ಶ್ರೇಷ್ಠ ಕವನಗಳು ಈ ಅಗ್ನಿಪರೀಕ್ಷೆಯ ಅವಧಿಯಲ್ಲಿ ಹುಟ್ಟಿದವು. ಅವರ ಅತ್ಯುತ್ತಮ ಕವನಗಳಲ್ಲಿ ಒಂದಾದ
‘ಭಾವಗೀತೆ’ಯು ಸಹ ಇದೇ ಕಾಲದಲ್ಲಿ ರಚಿತವಾಯಿತು. ಆ
ಕವನದ ಹುಟ್ಟಿಗೆ ಕಾರಣವಾದ ಘಟನೆ ಹೀಗಿದೆ:
ಮುಗದದಲ್ಲಿ ನಜರಬಂದಿಯಲ್ಲಿ
ಇದ್ದ ಬೇಂದ್ರೆಯವರು, ಅಲ್ಲಿಯ ದೇವಿಯ ಗುಡಿಯೊಂದರಲ್ಲಿ ಒಮ್ಮೆ ಜೊಂಪಿಸುತ್ತ ಕೂತಿದ್ದಾಗ, ಹತ್ತಿರದಲ್ಲಿರುವ
ಬಿದಿರಮೆಳೆಯಲ್ಲಿರುವ ಗುಂಗೀಹುಳವೊಂದು ಬಿದಿರನ್ನು ಕೊರೆಯುತ್ತಿರುವ ಧ್ವನಿ ಬೇಂದ್ರೆಯವರ ಕಿವಿಗೆ
ಬೀಳುತ್ತದೆ. ನಾದಲೋಲರಾದ ಈ ವರಕವಿಯ ಮನದಲ್ಲಿ ಭಾವಲಹರಿಯೊಂದು ಉದ್ಭವಿಸಿ ಕವನವಾಗಿ ಹೊರಹೊಮ್ಮಿತು.
ಅದೇ ‘ಭಾವಗೀತೆ’. ಈ ಕವನದ ಪೂರ್ತಿಪಾಠ ಹೀಗಿದೆ:
‘ಭಾವಗೀತೆ’
“ಭೃಂಗದ ಬೆನ್ನೇರಿ
ಬಂತು ಕಲ್ಪನಾವಿಲಾಸ”
ಮಸೆದ ಗಾಳಿ ಪಕ್ಕ ಪಡೆಯುತಿತ್ತು
ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು
ಒಂದು ಮಂದಹಾಸಾ
ಭೃಂಗದ ಬೆನ್ನೇರಿ ಬಂತು….
ಏನು ಏನು? ಜೇನು ಜೇನು?
ಎನೆ ಗುಂಗುಂ ಗಾನಾ
ಓಂಕಾರದ ಶಂಖನಾದಕಿಂತ
ಕಿಂಚಿದೂನಾ
ಕವಿಯ ಏಕತಾನ ಕವನದಂತೆ
ನಾದಲೀನಾ
ಭೃಂಗದ ಬೆನ್ನೇರಿ
ಬಂತು….
ಒಡಲ ನೂಲಿನಿಂದ ನೇಯುವಂತೆ
ಜೇಡ ಜಾಲಾ
ತನ್ನ ದೈವರೇಷೆ ಬರೆಯುವಂತೆ
ತಾನೆ ಭಾಲಾ
ಉಸಿರಿನಿಂದ ಹುಡುಕುವಂತೆ
ತನ್ನ ಬಾಳ ಮೇಲಾ
ಭೃಂಗದ ಬೆನ್ನೇರಿ ಬಂತು….
ತಿರುಗುತಿತ್ತು ತನ್ನ
ಸುತ್ತು ಮೂಕಭಾವ ಯಂತ್ರಾ
ಗರ್ಭಗುಡಿಯ ಗರ್ಭದಲ್ಲಿ
ಪಡಿನುಡಿಯುವ ಮಂತ್ರಾ
ಮೂಡಿ ಮೂಡಿ ಮುಳುಗಿ
ಮುಳುಗಿ ಮೊಳಗುವೊಲು ಸ್ವತಂತ್ರಾ
ಭೃಂಗದ ಬೆನ್ನೇರಿ
ಬಂತು….
ಎಲ್ಲೆಲ್ಲೂ ಸೃಷ್ಟಿದೇವಿಗಿಟ್ಟ
ಧೂಪ ಧೂಮಾ
ಲಹರಿ ಲಹರಿ ಕಂಪಬಳ್ಳಿ;
ಚಿತ್ತರಂಗ ಭೂಮಾ
ದಾಂಗುಡಿಗಳ ಬಿಡುತಲಿತ್ತು
ಅರಳಲಿತ್ತು, ಪ್ರೇಮಾ
ಭೃಂಗದ ಬೆನ್ನೇರಿ
ಬಂತು….
ವಜ್ರಮುಖವ ಚಾಚಿ ಮುತ್ತುತಿತ್ತು
ಹೂವ ಹೂವಾ
ನೀರ ಹೀರಿ ಹಾರುತಿತ್ತು
ನೀರಸವಾ ಜಾವಾ
ಅಯ್ಯೊ ನೋವೆ! ಅಹಹ
ಸಾವೆ! ವಿಫಲ ಸಫಲ ಜೀವಾ
ಭೃಂಗದ ಬೆನ್ನೇರಿ ಬಂತು….
ಗಾಳಿಯೊಡನೆ ತಿಳ್ಳಿಯಾಡುತದರ
ಓಟಾ
ದಿಕ್ತಟಗಳ ಹಾಯುತಿತ್ತು;
ಅದರ ಬಿದಿಗೆ ನೋಟಾ
ನಕ್ಕ ನಗುವ ಚಿಕ್ಕೆಯೊಡನೆ
ಬೆಳೆಸುತಿತ್ತು ಕೂಟಾ
ಭೃಂಗದ ಬೆನ್ನೇರಿ
ಬಂತು….
ಅಂತು ಇಂತು ಪ್ರಾಣತಂತು
ಹೆಣೆಯುತಿತ್ತು ಬಾಳಾ
ಅಲ್ಲು ಇಲ್ಲು ಚೆಲುವು
ನಿಂತು ಹಾಕುತಿತ್ತು ತಾಳಾ
‘ಬಂತೆಲ್ಲಿಗೆ?’ ಕೇಳುತಿದ್ದನೀಯನಂತ
ಕಾಳಾ
ಭೃಂಗದ
ಬೆನ್ನೇರಿ ಬಂತು….
ಮಾತು ಮಾತು ಮಥಿಸಿ
ಬಂದ ನಾದದ ನವನೀತಾ
ಹಿಗ್ಗ ಬೀರಿ ಹಿಗ್ಗಲಿತ್ತು
ತನ್ನ ತಾನೆ ಪ್ರೀತಾ
ಅರ್ಥವಿಲ್ಲ ಸ್ವಾರ್ಥವಿಲ್ಲ
ಬರಿಯ ಭಾವಗೀತಾ
ಭೃಂಗದ
ಬೆನ್ನೇರಿ ಬಂತು….
ಭೃಂಗದ ಬೆನ್ನೇರಿ ಬಂತು
ಕಲ್ಪನಾ ವಿಲಾಸಾ
ಮಸೆದ ಗಾಳಿ ಪಕ್ಕ ಪಡೆಯುತಿತ್ತು
ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು
ಒಂದು ಮಂದಹಾಸಾ
ಭೃಂಗದ ಬೆನ್ನೇರಿ ಬಂತು….
ಕವನಗಳು ಹುಟ್ಟುವುದನ್ನು
ಕುರಿತೇ ಬೇಂದ್ರೆಯವರು ಅನೇಕ ಕವನಗಳನ್ನು ಬರೆದಿದ್ದಾರೆ. ಬೇಂದ್ರೆಯವರ ಕವನಗಳ ವೈಶಿಷ್ಟ್ಯವೆಂದರೆ,
ಅವರು ಕವನಗಳನ್ನು ಕಟ್ಟುವದಿಲ್ಲ. ಅವರ ಮಾನಸ ಸರೋವರದಲ್ಲಿ ತರಂಗಗಳು ಎದ್ದಂತೆ ಅವರ ಕವನಗಳು ಹುಟ್ಟುತ್ತವೆ!
‘ಭಾವಗೀತೆ’ ಕವನದ ಮೊದಲ ನುಡಿಯನ್ನು ನೋಡಿರಿ:
“ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ”
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
ಭೃಂಗದ ಬೆನ್ನೇರಿ ಬಂತು….
ಗುಂಗೀಹುಳವೊಂದರ ಗುಂಯ್ಗುಡುವಿಕೆಯೇ
‘ಭಾವಗೀತೆ’ಯ ಹುಟ್ಟಿಗೆ ಕಾರಣವಾಗಿದೆ. ಬೇಂದ್ರೆಯವರು ಹೇಳಿಕೇಳಿ ನಾದಲೋಲರು. ಭ್ರಮರನಾದದಲ್ಲಿ ತಲ್ಲೀನರಾದ ಅವರಿಗೆ ಕಲ್ಪನೆಯ ಪ್ರವಾಹವು
ಹರಿಯಲು ಇಷ್ಟೇ ಸಾಕಾಯಿತು. “ಭೃಂಗದ ಬೆನ್ನೇರಿ ಬಂತು
ಕಲ್ಪನಾ ವಿಲಾಸ” ಎನ್ನುವ ಸಾಲು ಹೊರಹೊಮ್ಮಿತು.
ಗುಂಗು ಪದಕ್ಕೆ ತಲ್ಲೀನತೆ
ಹಾಗು ಮರುಳು ಎನ್ನುವ ಅರ್ಥಗಳು ಇವೆ. ಭೃಂಗ ಅಥವಾ ಗುಂಗೀ ಹುಳುವು ತದೇಕಚಿತ್ತವಾಗಿ ಮರವನ್ನು ಕೊರೆಯುವಂತೆಯೇ
ಕವಿಯೂ ಸಹ ತನ್ನ ಕಾವ್ಯಸೃಷ್ಟಿಯಲ್ಲಿ, ಕಾವ್ಯದ ನಾದದಲ್ಲಿ ತಲ್ಲೀನನಾಗುತ್ತಾನೆ. ಕಾವ್ಯದ ಕಲ್ಪನಾವಿಲಾಸವನ್ನು ಹಿಂಬಾಲಿಸಿ
ಹೋಗುತ್ತಾನೆ. ಇದು ಈ ಸಾಲಿನ ಮೇಲುನೋಟದ ಅರ್ಥ.
ಈ ಮೇಲುನೋಟದ ಅರ್ಥದೊಡನೆ,
ಒಂದು ಒಳನೋಟದ ಅರ್ಥವೂ ಇಲ್ಲಿದೆ. ಅದು ಕವಿಕುಲಗುರು ಕಾಳಿದಾಸನ ಸ್ಮರಣೆ. ಕಾಳಿದಾಸನ ‘ಅಭಿಜ್ಞಾನ ಶಾಕುಂತಲಮ್’
ನಾಟಕದಲ್ಲಿ, ಶಕುಂತಲಾ ಹಾಗು ದುಷ್ಯಂತರ ಪ್ರಣಯಕ್ಕೆ ಕಾರಣವಾಗುವುದೇ ಒಂದು ಭ್ರಮರ. ಈ ರಮ್ಯ ಕಲ್ಪನಾವಿಲಾಸವನ್ನು
ಅನುಸರಿಸಿಕೊಂಡು, ನಾಟಕ ಮುಂದುವರಿಯುತ್ತದೆ. ಆದುದರಿಂದಲೇ “ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ” ಎಂದು ಹೇಳುವಾಗ ವರಕವಿ ಬೇಂದ್ರೆಯವರು ಕವಿಕುಲಗುರು
ಕಾಳಿದಾಸನನ್ನು ಪರೋಕ್ಷವಾಗಿ ಸ್ಮರಿಸುತ್ತಿದ್ದಾರೆ. ಈ ಒಳಅರ್ಥದ ಸೂಚನೆ ಕೊಡಲೆಂದೇ ಆ ಸಾಲನ್ನು
inverted commasದಲ್ಲಿ ಬರೆದಿದ್ದಾರೆ.
(ಬೇಂದ್ರೆಯವರು ನಾದಲೋಲ
ಕವಿಗಳು. ಅವರ ಕಾವ್ಯ ಜನಿಸುವುದೇ ನಾದದಲ್ಲಿ! ‘ನಾದಬೇಕು,
ನಾದಬೇಕು, ನಾದಾನ್ನ ನಾದಬೇಕು’ ಎನ್ನುವ ಬೇಂದ್ರೆಯವರ ಕವನವೊಂದರ ಸಾಲುಗಳನ್ನು ನೆನೆಪಿಸಿಕೊಳ್ಳಿರಿ.
ಇಲ್ಲಿ ನಾದ ಪದಕ್ಕೆ ನಾಲ್ಕು ಅರ್ಥಗಳಿವೆ. ಮೊದಲನೆಯದು ಧ್ವನಿ ಎನ್ನುವ ಅರ್ಥ. ಎರಡನೆಯದು ತಲ್ಲೀನತೆ
ಎನ್ನುವ ಅರ್ಥ. ಮೂರನೆಯದಾಗಿ knead ಎನ್ನುವ ಅರ್ಥ. ನಾಲ್ಕನೆಯದಾಗಿ ‘ನಾದ’ ಪದಕ್ಕೆ ‘ಮರುಳು’ ಎನ್ನುವ ಅರ್ಥವೂ
ಇದೆ. ಇದಲ್ಲದೆ, ‘ನಾದಾನ್ನ’ ಪದವನ್ನು innocent
ಎನ್ನುವ ಅರ್ಥದಲ್ಲಿಯೂ ಬಳಸಲಾಗಿದೆ.)
ಕಲ್ಪನಾವಿಲಾಸ ಪ್ರಾರಂಭವಾದರೆ
ಸಾಕೆ? ಅದು ಕಾವ್ಯವಾಗಲು ಲಯ ಹಾಗು ತಾಳ ಬೇಡವೆ? ವರಕವಿ ಬೇಂದ್ರೆಯವರಿಗೆ ಇದು ಸಹಜಸಿದ್ಧಿ. ಗಾಳಿಯೇ
ಚಿಟ್ಟೆಯಾಗಿ ಹಾರಲಾರಂಭಿಸಿದರೆ, ಅದರ ಮಸೆದಾಟವೇ ಅದರ ಪಕ್ಕಗಳಾಗುತ್ತವೆ. ಒಂದು ಪಕ್ಕ ತಾಳವಾದರೆ,
ಮತ್ತೊಂದು ಪಕ್ಕ ಲಯ ಆಗುತ್ತದೆ. ವರಕವಿಯ ಭಾವಗೀತೆಗೆ ಗಾಳಿಯಾಟದಷ್ಟೇ ಸಹಜವಾಗಿ ಲಯ, ತಾಳ ಹಾಗು ಪ್ರಾಸ
ಲಭಿಸುತ್ತವೆ. ಅಂತೆಯೇ ಅವರು ‘ಮಸೆದ ಗಾಳಿ ಪಕ್ಕ ಪಡೆಯುತಿತ್ತು
ಸಹಜ ಪ್ರಾಸಾ’ ಎನ್ನುತ್ತಾರೆ. ಆ ಸ್ವಚ್ಛಂದ ಹಾರಾಟದ ರೇಷೆಯೇ (line
of flight) ಒಂದು ಮಂದಹಾಸದಂತೆ ಮಿಂಚಿ ಮಾಯವಾಗುತ್ತದೆ. ( ಈ ಮಾತಿಗಾಗಿ
ಬೇಂದ್ರೆಯವರ ಅನೇಕ ಕವನಗಳ ಉದಾಹರಣೆಗಳನ್ನು ನೀಡಬಹುದು. ಲೇಖನ ಕೈಮೀರಬಾರದೆಂದು ಅವುಗಳನ್ನು ಉಲ್ಲೇಖಿಸುತ್ತಿಲ್ಲ.)
ಕವಿಯು ಈ ನಾದವನ್ನು
ಅನುಭವಿಸುತ್ತಾನೆ. ಅದನ್ನು ಅರಿತುಕೊಳ್ಳಲು ಅದರಲ್ಲಿಯೇ ಮುಳುಗುತ್ತಾನೆ. ಈ ಮಾತನ್ನು ಎರಡನೆಯ ನುಡಿಯಲ್ಲಿ
ಈ ರೀತಿಯಾಗಿ ಹೇಳಲಾಗಿದೆ:
ಏನು ಏನು? ಜೇನು ಜೇನು? ಎನೆ ಗುಂಗುಂ ಗಾನಾ
ಓಂಕಾರದ ಶಂಖನಾದಕಿಂತ ಕಿಂಚಿದೂನಾ
ಕವಿಯ ಏಕತಾನ ಕವನದಂತೆ ನಾದಲೀನಾ
ಭೃಂಗದ ಬೆನ್ನೇರಿ
ಬಂತು….
ವಿಶ್ವದ ಸೃಷ್ಟಿಯಾಗುವಾಗ
ಮೊದಲು ಹುಟ್ಟಿದ್ದೇ ಓಂಕಾರ ನಾದ. ಆದುದರಿಂದ ಪ್ರಣವವು (ಓಂಕಾರವು) ಪರಬ್ರಹ್ಮಸ್ವರೂಪಿಯಾಗಿದೆ. ಗುಂಗೀಹುಳದ
ಗುಂಗುಂ ಗಾಯನವನ್ನು ಕೇಳಿದ ಕವಿಗೆ ಅದು ಜೇನಿನಷ್ಟು ಸಿಹಿಯಾದ ನಾದದಂತೆ ಭಾಸವಾಗುತ್ತದೆ. ಅದು ಪ್ರಣವನಾದಕ್ಕೆ
ಅತಿ ಹತ್ತಿರವಾದ ನಾದವೆನ್ನಿಸುತ್ತದೆ. ಕವಿಯ ಕವನದಲ್ಲಿ
ಅನುಭವಿಸಬಹುದಾದ ಏಕತಾರಿಯ ನಾದಕ್ಕೆ ಸಮಾನವಾದ ನಾದವು ಇದಾಗಿದೆ.
ನಾದದಲ್ಲಿ ಲೀನವಾದ
ಈ ಕಲ್ಪನಾವಿಲಾಸಕ್ಕೆ ಕಾವ್ಯರೂಪವು ಇನ್ನೂ ದೊರೆತಿಲ್ಲ. ಅದು ಕಾವ್ಯವಾಗಿ ಪರಿವರ್ತನೆಯಾಗುವ ವಿವಿಧ
ಹಂತಗಳನ್ನು ಬೇಂದ್ರೆಯವರು ಹೇಳುತ್ತಾರೆ. ಮೂರನೆಯ ನುಡಿಯಲ್ಲಿ ಮೊದಲ ಹಂತದ ವರ್ಣನೆ ಇದೆ:
ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ
ತನ್ನ ದೈವರೇಷೆ ಬರೆಯುವಂತೆ ತಾನೆ ಭಾಲಾ
ಉಸಿರಿನಿಂದ ಹುಡುಕುವಂತೆ ತನ್ನ ಬಾಳ ಮೇಲಾ
ಭೃಂಗದ ಬೆನ್ನೇರಿ
ಬಂತು….
ಮುಂಡಕೋಪನಿಷತ್ತಿನಲ್ಲಿ
ಹೇಳುವಂತೆ, ಈ ವಿಶ್ವದ ಸೃಷ್ಟಿಗೆ ಕಾರಣನಾದ ಭಗವಂತನಿಗೆ ‘ಊರ್ಣನಾಭ’ ಎನ್ನುತ್ತಾರೆ. ಊರ್ಣ ಎಂದರೆ
ಉಣ್ಣೆ. ಜೇಡವು ತನ್ನ ಹೊಕ್ಕಳಿನಿಂದ ಸ್ರವಿಸುವ ಊರ್ಣ ಅಥವಾ ನೂಲಿನಿಂದಲೇ ತನ್ನ ಬಲೆಯನ್ನು ಕಟ್ಟುತ್ತದೆ.
ಭಗವಂತನೂ ಸಹ ಯಾವ ವಸ್ತುಗಳನ್ನೂ ಅವಲಂಬಿಸದೆ ತನ್ನಿಂದಲೇ ಈ ವಿಶ್ವವನ್ನು ಲೀಲೆಯಿಂದಲೇ ಸೃಷ್ಟಿಸುತ್ತಾನೆ.
ಕವಿಯೂ ಸಹ ತನ್ನ ಕಾವ್ಯಸೃಷ್ಟಿಯನ್ನು ತನ್ನ ಕಲ್ಪನೆಯಿಂದಲೇ,
ನಿರಾಯಾಸವಾಗಿ ಮಾಡುತ್ತಾನೆ.
ಬ್ರಹ್ಮಸೃಷ್ಟಿಯ ಹಣೆಬರಹವನ್ನು
ಬ್ರಹ್ಮನು ಬರೆಯುತ್ತಾನೆ. ಕವನದ ಹಣೆಬರಹವನ್ನು, ಬೇಂದ್ರೆಯವರ ಮೇರೆಗೆ ಕವನವೇ ಬರೆಯುತ್ತದೆ: ‘ತನ್ನ ದೈವರೇಷೆ
ಬರೆಯುವಂತೆ ತಾನೆ ಭಾಲಾ’! (ಭಾಲ = ಹಣೆ)
‘ಬಾಳ ಮೇಲಾ’ ಅಂದರೆ
ಬಾಳಿನ ಉನ್ನತಿ ಅಥವಾ ಶ್ರೇಯಸ್ಸು. ಭ್ರೂಣಾವಸ್ಥೆಯಲ್ಲಿರುವ ಕವನವು ತನ್ನ ಉಸಿರನ್ನು ಹುಡುಕಿಕೊಂಡು
(ಅಂದರೆ ಪ್ರಾಣಾಯಾಮದ ಮೂಲಕ) ತನ್ನ ಬಾಳಿನ ಮೇಲ್ಮೆಯನ್ನು ಸಾಧಿಸಬೇಕು. ಈ ಪ್ರಾಣವಾಯುವನ್ನು ಈ ಭ್ರೂಣಕ್ಕೆ
ಅನುಗ್ರಹಿಸುವವರು ಯಾರು? ಅವಳೇ ವಾಗ್ದೇವಿ. ಬೇಂದ್ರೆಯವರು ತಮ್ಮ ಮತ್ತೊಂದು ಕವನದಲ್ಲಿ ಈ ದೇವಿಯನ್ನು
ಹೀಗೆ ಪ್ರಾರ್ಥಿಸುತ್ತಾರೆ:
‘ಮಾತುಗಳ ಮಾತೆ ನೀನು
ಮಾತಿನಲಿ ಹೂತು ಬರಬಾರದೇನು?
ಉಸಿರುಗಳ ಉಸಿರೆ ನೀನು
ಉಸಿರಿನಲಿ ಹಸಿರಾಗಿ ಹರಿದೆ ನಾನು.”
ಕಾವ್ಯಭ್ರೂಣಕ್ಕೆ ಉಸಿರಿನ
ಅನುಗ್ರಹವಾದಾಗ, ಅದು ಸಜೀವವಾಗಿ ಸಂಚಲನೆಯನ್ನು ಪಡೆಯುವುದು.
ನಾಲ್ಕನೆಯ ನುಡಿಯಲ್ಲಿ
ಕಾವ್ಯಭ್ರೂಣದ ಎರಡನೆಯ ಅವಸ್ಥೆಯ ವರ್ಣನೆ ಇದೆ:
ತಿರುಗುತಿತ್ತು ತನ್ನ ಸುತ್ತು ಮೂಕಭಾವ ಯಂತ್ರಾ
ಗರ್ಭಗುಡಿಯ ಗರ್ಭದಲ್ಲಿ ಪಡಿನುಡಿಯುವ ಮಂತ್ರಾ
ಮೂಡಿ ಮೂಡಿ ಮುಳುಗಿ ಮುಳುಗಿ ಮೊಳಗುವೊಲು ಸ್ವತಂತ್ರಾ
ಭೃಂಗದ ಬೆನ್ನೇರಿ
ಬಂತು….
ಸ್ಥೂಲರೂಪಿಯಾದ ಈ ಕಾವ್ಯಭ್ರೂಣಕ್ಕೆ
ಜೀವವೇನೊ ಬಂದಿತು. ಆದುದರಿಂದ ಅದರಲ್ಲಿ ಚಲನೆಯೂ ಬಂದಿತು. ಆದರೆ ಅದರಲ್ಲಿ ಇನ್ನೂ ‘ನುಡಿ’ ಬಂದಿಲ್ಲ. ಅದರ ಕಾವ್ಯಭಾವವು ಅದರೊಳಗೇ ಇನ್ನೂ
ನಿಶ್ಶಬ್ದವಾಗಿಯೇ ಇದೆ. ಆದುದರಿಂದ ಅದು ಮೂಕಯಂತ್ರದಂತೆ ತನ್ನ ಸುತ್ತಲೂ ತಾನೇ ತಿರುಗುತ್ತ ವಾಕ್ ರೂಪವನ್ನು
ಪಡೆಯಲು ಪ್ರಯತ್ನಿಸುತ್ತಿದೆ. ತನ್ನನ್ನು ಅರಿತುಕೊಳ್ಳುವ ಈ ಪ್ರಯತ್ನವೇ ‘ತಪಸ್’ ಆಗಿದೆ. ತಪಸ್ಸಿನ
ಮೂಲಕವೇ ಸ್ವರೂಪದರ್ಶನ ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಹೊಮ್ಮುವ ವಾಕ್ ಅಥವಾ ಅಭಿವ್ಯಕ್ತಿ ಅಂದರೆ
ಸತತವಾಗಿ ಝೇಂಕಾರವಾಗುತ್ತಿರುವ ಮಂತ್ರ. ಈ ವಾಕ್ ಕಾವ್ಯಗರ್ಭದಲ್ಲಿ
ಒಂದೇ ಸವನೆ ಪಡಿನುಡಿಯುತ್ತಿದೆ ಅಂದರೆ ಪ್ರತಿಧ್ವನಿಸುತ್ತಿದೆ.
(‘ವಾಕ್’ಗೆ ನಾಲ್ಕು
ಅವಸ್ಥೆಗಳು: ಪರಾ, ಪಶ್ಯಂತೀ, ಮಧ್ಯಮಾ, ವೈಖರೀ. ನಿಷ್ಪಂದವಾಗಿ ಪರಾ ಅವಸ್ಥೆಯಲ್ಲಿರುವ ವಾಕ್, ಕೊನೆಯದಾದ
ವೈಖರೀ ಅವಸ್ಥೆಯಲ್ಲಿ ವ್ಯಕ್ತರೂಪವನ್ನು ಪಡೆಯುತ್ತದೆ.)
ಬೇಂದ್ರೆಯವರಿಗೆ ಕಾವ್ಯವೆಂದರೆ ಮಂತ್ರ! ‘ನಾನೃಷಿ: ಕುರುತೇ ಕಾವ್ಯಮ್’ ಎನ್ನುವ ಮಾತೇ ಇದೆಯಲ್ಲ. ಬೇಂದ್ರೆಯವರೇ ತಮ್ಮ ಮತ್ತೊಂದು ಕವನದಲ್ಲಿ, ‘ಇದು ಮಂತ್ರ; ಅರ್ಥಕೊಗ್ಗದ ಶಬ್ದಗಳ ಪವಣಿಸುವ ತಂತ್ರ;’ ಎಂದು ಹೇಳಿದ್ದಾರೆ. ಅದರಂತೆಯೆ ನಾದದ ಗರ್ಭದಲ್ಲಿ ಅಭಿವ್ಯಕ್ತಿಯನ್ನು ಪಡೆಯುವ ಉದ್ದೇಶದಿಂದ ತನ್ನ ಸುತ್ತಲೂ ತಾನೇ ತಿರುಗುತ್ತಿರುವ ಈ ಕಾವ್ಯಭ್ರೂಣವು ಮತ್ತೆ ಮತ್ತೆ ಕವಿಕಲ್ಪನೆಯಲ್ಲಿ ಮೂಡುತ್ತದೆ, ಮತ್ತೆ ಮತ್ತೆ ಮುಳುಗುತ್ತದೆ. ಈ ಕ್ರಿಯೆಯಲ್ಲಿ ಅದು ಸಂಪೂರ್ಣ ಸ್ವತಂತ್ರವಾದದ್ದು. ಕವಿಯ ಬಂಧನವೂ ಅದಕ್ಕೆ ಇರುವುದಿಲ್ಲ.
ಐದನೆಯ ನುಡಿ ಹೀಗಿದೆ:
ಎಲ್ಲೆಲ್ಲೂ ಸೃಷ್ಟಿದೇವಿಗಿಟ್ಟ ಧೂಪ ಧೂಮಾ
ಲಹರಿ ಲಹರಿ ಕಂಪಬಳ್ಳಿ; ಚಿತ್ತರಂಗ ಭೂಮಾ
ದಾಂಗುಡಿಗಳ ಬಿಡುತಲಿತ್ತು ಅರಳಲಿತ್ತು, ಪ್ರೇಮಾ
ಭೃಂಗದ ಬೆನ್ನೇರಿ
ಬಂತು….
ಭ್ರೂಣಾವಸ್ಥೆಯು ಮುಗಿದು,
ಈ ಕವನದ ‘ಸೃಷ್ಟಿ’ ಅಂದರೆ ಹೆರಿಗೆ ಪ್ರಾರಂಭವಾಗಬೇಕು. ಆ ಸಮಯದಲ್ಲಿ ಕವಿಯ ಮನಸ್ಸು ಸಂತೋಷವನ್ನು,
ಮಂಗಳವನ್ನು ಅನುಭವಿಸುತ್ತದೆ ಎನ್ನುವುದನ್ನು ‘ಎಲ್ಲೆಲ್ಲೂ ಸೃಷ್ಟಿದೇವಿಗಿಟ್ಟ ಧೂಪ ಧೂಮಾ’ ಎಂದು ಬೇಂದ್ರೆಯವರು
ವರ್ಣಿಸಿದ್ದಾರೆ. ಕಾವ್ಯದ ಛಂದಸ್ಸು ತನ್ನಿಂದ ತಾನೇ ಹುಟ್ಟಿಕೊಳ್ಳುತ್ತದೆ ಎನ್ನುವುದನ್ನು ‘ಲಹರಿ
ಲಹರಿ ಕಂಪಬಳ್ಳಿ’ ಎನ್ನುವ ಮೂಲಕ ಹೇಳುತ್ತಿದ್ದಾರೆ. ಕವನದ ಹುಟ್ಟಿಗೆ ಕಾರಣವಾದ ಮನೋಲಹರಿಗೆ ಸುಗಂಧವನ್ನೀಯುತ್ತಿರುವ
ಬಳ್ಳಿ ದೊರಕುತ್ತಿದೆ. ಅರ್ಥಾತ್ ಛಂದಸ್ಸು ಲಭಿಸುತ್ತಿದೆ. (“ಹಬ್ಯಾವ ಛಂದದ ಬಳ್ಳಿ” ಎನ್ನುವ ಬೇಂದ್ರೆಯವರ ಕವನವನ್ನು ನೆನಪಿಸಿಕೊಳ್ಳಿ.) ಈ ಸಮಯದಲ್ಲಿ
ಕವಿಯ ಮನಸ್ಸು ತಾಯಿಯ ಮನಸ್ಸಿನಂತೆ ಭೂಮರೂಪವನ್ನು ಅಂದರೆ ವೈಶಾಲ್ಯತೆಯನ್ನು ತಳೆದಿರುತ್ತದೆ, ಅಂದರೆ
ಅದರಲ್ಲಿ ಯಾವುದೇ ಅಲ್ಪತನವು ಇರುವುದಿಲ್ಲ. ಅದು ಪ್ರೇಮಪೂರ್ಣವಾಗಿರುತ್ತದೆ. ಆದುದರಿಂದಲೇ ಅದು ಹೂವಿನ
ಮೊಗ್ಗೆಗಳನ್ನು ಬಿಟ್ಟು, ಅರಳಲು ಉದ್ಯುಕ್ತವಾಗಿರುತ್ತದೆ.
ಆರನೆಯ ನುಡಿ ಹೀಗಿದೆ:
ವಜ್ರಮುಖವ ಚಾಚಿ ಮುತ್ತುತಿತ್ತು ಹೂವ ಹೂವಾ
ನೀರ ಹೀರಿ ಹಾರುತಿತ್ತು ನೀರಸವಾ ಜಾವಾ
ಅಯ್ಯೊ ನೋವೆ! ಅಹಹ ಸಾವೆ! ವಿಫಲ ಸಫಲ ಜೀವಾ
ಭೃಂಗದ ಬೆನ್ನೇರಿ
ಬಂತು….
ಕಾವ್ಯಭ್ರೂಣವು ಕವಿಯ
ಅಂದರೆ ತಾಯಿಯ ಮನಸ್ಸಿನಲ್ಲಿ ಅರಳಿರುವ ಹೂವುಗಳನ್ನು ವಜ್ರಮುಖದಿಂದ ಮುತ್ತುತ್ತಿದೆ ಎಂದು ಬೇಂದ್ರೆಯವರು
ಹೇಳುತ್ತಿದ್ದಾರೆ. ಕವಿಯ ಮನಸ್ಸಿನಲ್ಲಿ ಅರಳಿರುವ ಅನೇಕ ನಾದರೂಪಗಳನ್ನು ಇಲ್ಲಿ ಅರಳಿರುವ ಹೂವುಗಳಿಗೆ
ಹೋಲಿಸಲಾಗಿದೆ. ಕಾವ್ಯಭ್ರೂಣವನ್ನು ಜೇನುಹುಳಕ್ಕೆ ಹೋಲಿಸಲಾಗಿದೆ. ಹೂವುಗಳಿಂದ ಜೇನು ಸಂಗ್ರಹಿಸುವ
ಜೇನುಹುಳದಂತೆ, ಕಾವ್ಯಭೃಂಗವು ಕವಿಯ ಚಿತ್ತದಲ್ಲಿ ಝೇಂಗುಟ್ಟುತ್ತಿರುವ ನಾದದ ಸಾರವನ್ನು ಹೀರಿ, ಪದಗಳನ್ನಾಗಿ
ಪರಿವರ್ತಿಸುತ್ತದೆ.
ವಜ್ರಮುಖ ಅಂದರೆ ಜೇನುಹುಳದ
ಕೊಂಡಿ. ಆ ಕೊಂಡಿಯಿಂದ ನೀರನ್ನು ಅಂದರೆ ವಾಕ್-ಸಾರವನ್ನು ಹೀರಿದ ಬಳಿಕ ಹೂವು ನೀರಸವಾಗಲೇ ಬೇಕಲ್ಲವೆ!?
ಇದು ಹೂವಿಗೆ ನೋವು ಹಾಗು ಸಾವನ್ನು ಕೊಡುವಂತಹದು. ಆದುದರಿಂದ ಹೂವಿನ ಬಾಳು ಇಲ್ಲಿಗೆ ಮುಗಿಯಿತು. ಆದರೆ
ಕಾವ್ಯಭೃಂಗಕ್ಕೆ ಪೋಷಣೆ ನೀಡಿರುವದರಿಂದ ಅದರ ಜೀವನವು ಸಫಲವೂ ಆಗಿದೆ!
ಏಳನೆಯ ನುಡಿ ಹೀಗಿದೆ:
ಗಾಳಿಯೊಡನೆ ತಿಳ್ಳಿಯಾಡುತದರ ಓಟಾ
ದಿಕ್ತಟಗಳ ಹಾಯುತಿತ್ತು; ಅದರ ಬಿದಿಗೆ ನೋಟಾ
ನಕ್ಕ ನಗುವ ಚಿಕ್ಕೆಯೊಡನೆ ಬೆಳೆಸುತಿತ್ತು ಕೂಟಾ
ಭೃಂಗದ ಬೆನ್ನೇರಿ
ಬಂತು….
ಕಲ್ಪನಾವಿಲಾಸವನ್ನು
ಹೊತ್ತುಕೊಂಡು ಹುಟ್ಟಲು ಎಳಸುತ್ತಿರುವ ಈ ಕಾವ್ಯಶಿಶುವಿನ ಅನಂತ ಸಾಮರ್ಥ್ಯವನ್ನು ಬೇಂದ್ರೆ ಬಣ್ಣಿಸುತ್ತಾರೆ:
ಅದರ ಓಟವು ಗಾಳಿಯೊಡನೆ ತಿಳ್ಳಿಯಾಟವನ್ನು ಆಡುತ್ತಿತ್ತು ಹಾಗು ದಿಕ್ಕುಗಳನ್ನು ಹಾಯುತ್ತಿತ್ತು. ಬಿದಿಗೆ
ಚಂದ್ರನನ್ನು ಹೋಲುವ ಅದರ ನೋಟವು ನಗುವ ಚಿಕ್ಕೆಯೊಡನೆ ಕೆಳೆತನವನ್ನು ಬೆಳೆಸುತ್ತಿತ್ತು ಎಂದು ಬೇಂದ್ರೆ
ಹೇಳುತ್ತಾರೆ. ಮನೋವೇಗವೇ ಪರಮವೇಗವೆಂದ ಮೇಲೆ ಕಲ್ಪನೆಯ ಸವಾರಿಯನ್ನು ಮಾಡುತ್ತಿರುವ ಕಾವ್ಯಶಿಶುವಿಗೆ ದಿಕ್ಕುಗಳನ್ನು ಹಾಯುವ ಸಾಮರ್ಥ್ಯವಿರುವುದು ಸಹಜವೇ ಆಗಿದೆ.
ಇನ್ನು ಅದರ ನೋಟವು (ಶುಕ್ಲಪಕ್ಷದ) ಬಿದಿಗೆಯ ನೋಟವೇಕೆ? ಇದು ಇದೀಗ ಜನಿಸಬೇಕಾದ ಶಿಶು. ಆದುದರಿಂದ
ಅದು (ಶುಕ್ಲಪಕ್ಷದ) ಬಿದಿಗೆಯ ಚಂದ್ರನಂತೆ ಇನ್ನೂ ಪುಟ್ಟದಾಗಿದ್ದು, ಪ್ರವರ್ಧಮಾನಕ್ಕೆ ಬರುವಂತಹದಾಗಿದೆ.
‘ನಕ್ಕು ನಗುವ ಚಿಕ್ಕೆ’ ಎಂದರೆ ಶುಕ್ರಗ್ರಹ. ಅಮವಾಸ್ಯೆಯ ನಂತರ, ಬಿದಿಗೆಯ ಚಂದ್ರನು ಸೂರ್ಯ, ಬುಧ
ಹಾಗು ಶುಕ್ರಗ್ರಹಗಳಿಗೆ ಸನಿಹದಲ್ಲಿಯೇ ಇರುತ್ತಾನೆ. ಆದುದರಿಂದ ಸೂರ್ಯಾಸ್ತದ ನಂತರ ಅಥವಾ ಸೂರ್ಯೋದಯಕ್ಕೂ
ಮೊದಲು, ಶುಕ್ರ ಹಾಗು ಚಂದ್ರಮರು ಸಂಗಮಿಸುವ ಸಾಧ್ಯತೆಗಳಿರುತ್ತವೆ. ಇದರಿಂದಾಗಿ ಬೆಳದಿಂಗಳು ಹೆಚ್ಚು
ಪ್ರಕಾಶಮಾನವಾಗಿರುತ್ತದೆ. ಇದೀಗ ಹೊರಬರುತ್ತಿರುವ ಕಾವ್ಯಶಿಶು ವೇಗಶಾಲಿ ಹಾಗು ಪ್ರಕಾಶಮಾನವಾಗಿದೆ.
ಎಂಟನೆಯ ನುಡಿಯಲ್ಲಿ
ಬೇಂದ್ರೆಯವರು ಕಾವ್ಯಶಿಶುವಿನಲ್ಲಿ ಪ್ರಾಣಸಂಚಾರವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಚೆಲುವು ತಾನೇ
ತಾನಾಗಿ ತಾಳವನ್ನು ಹಾಕುತ್ತಿದೆ. ಇದೆಲ್ಲವೂ ನಿರಾಯಾಸವಾದ ಲೀಲೆ ಎಂದು ಬೇಂದ್ರೆಯವರು ಹೇಳುತ್ತಿದ್ದಾರೆ.
ಅಂತು ಇಂತು ಪ್ರಾಣತಂತು ಹೆಣೆಯುತಿತ್ತು ಬಾಳಾ
ಅಲ್ಲು ಇಲ್ಲು ಚೆಲುವು ನಿಂತು ಹಾಕುತಿತ್ತು ತಾಳಾ
‘ಬಂತೆಲ್ಲಿಗೆ?’ ಕೇಳುತಿದ್ದನೀಯನಂತ ಕಾಳಾ
ಭೃಂಗದ
ಬೆನ್ನೇರಿ ಬಂತು….
ಇನ್ನು ಈ ಭ್ರೂಣದ ಪ್ರಸವವಾಗಬೇಕಷ್ಟೆ?
ಅದು ಕವಿಯನ್ನು ಅವಲಂಬಿಸಿರುವದಿಲ್ಲ. ಆಗುವದೆಲ್ಲವೂ ನಿಯತಿಯನ್ನು ಅನುಸರಿಸುತ್ತದೆ. ಆ ‘ಸಮಯವು ಬಂದಿತೆ?’
ಎಂದು ಕಾಲನು ಕೇಳುತ್ತಿದ್ದಾನೆ. ಆತನಿಗೆ ಅವಸರವಿಲ್ಲ. ಯಾಕೆಂದರೆ ಆತನು ಅನಂತನು; ಇಂತಹ ಅನೇಕೆ ಹೆರಿಗೆಗಳನ್ನು
ಆತ ಕಂಡಿದ್ದಾನೆ.
(ಬೇಂದ್ರೆಯವರು ಇಲ್ಲಿ
ಸಂಸ್ಕೃತದ ಕವಿ ಭವಭೂತಿಯನ್ನು ನೆನಸುತ್ತಿದ್ದಾರೆ. ‘ಕಾಲವು
ಅನಂತವಾಗಿದೆ, ಪೃಥ್ವಿ ವಿಶಾಲವಾಗಿದೆ. ನನ್ನ ಕಾವ್ಯವನ್ನು ಆನಂದಿಸುವ ಒಬ್ಬನು ಇದ್ದೇ ಇರುತ್ತಾನೆ.’
ಎಂದು ಹೇಳಿದ ಕವಿ ಈತ.)
ಒಂಬತ್ತನೆಯ ನುಡಿ ಹೀಗಿದೆ:
ಮಾತು ಮಾತು ಮಥಿಸಿ ಬಂದ ನಾದದ ನವನೀತಾ
ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತಾ
ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ
ಭೃಂಗದ
ಬೆನ್ನೇರಿ ಬಂತು….
ಬೇಂದ್ರೆಯವರು ಈ ರೀತಿಯಲ್ಲಿ
ಜನಿಸಿದ ಭಾವಗೀತೆಯ ಲಕ್ಷಣಗಳನ್ನು ವಿವರಿಸುತ್ತಿದ್ದಾರೆ.
ಭಾವಗೀತೆಯ ರಚನೆಯ ಸಮಯದಲ್ಲಿ
ವಿಭಿನ್ನ ಪದಗಳ ಮಂಥನ ನಡೆಯುತ್ತದೆ. ಈ ಮಂಥನದಲ್ಲಿ ಅತ್ಯಂತ ಸಮಂಜಸವಾದ ಪದವು ಮಜ್ಜಿಗೆಯಲ್ಲಿ ಬೆಣ್ಣೆ
ತೇಲಿ ಬರುವಂತೆ ಸಹಜವಾಗಿ ತೇಲಿ ಬರುತ್ತದೆ. ಇದು ಕವನದ ‘ನಾದ’ಕ್ಕೆ ಯುಕ್ತವಾಗಿರಬೇಕು. (‘ನವನೀತ’ವೆಂದರೆ
‘ಹೊಸದಾಗಿ ಕಡೆದಂತಹ’ ಎನ್ನುವ ಅರ್ಥವಿದೆ.) ಮಾತು ಎಂದರೆ ‘ವಾಕ್’. ನಾದದಲ್ಲಿ ತೇಲುವ ನವನೀತವೆಂದರೆ ಆ ವಾಕ್ ಪ್ರತಿಪಾದಿಸುವ
ಅರ್ಥ. ಇವೆರಡರಲ್ಲಿ ಸಾಮರಸ್ಯವಿರಬೇಕು. ಆವಾಗಲೇ ಅದು ‘ಹೊಸ ಬೆಣ್ಣೆ’ಯ ಸವಿಯನ್ನು ನೀಡುವುದು. ಇಂತಹ
ಸಿದ್ಧಿ ತನ್ನ ಕಾವ್ಯದಲ್ಲಿ ಸಾಧಿಸಲಿ ಎನ್ನುವುದಕ್ಕಾಗಿಯೇ ಕಾಳೀದಾಸನು ತನ್ನ ‘ಕುಮಾರಸಂಭವ’ ಕಾವ್ಯದ
ಮೊದಲಲ್ಲಿ ದೇವರಲ್ಲಿ ಹೀಗೆ ಪ್ರಾರ್ಥಿಸಿದ್ದಾನೆ:
“ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ.”
( “ವಾಕ್ ಮತ್ತು ಅರ್ಥಗಳ
ಸುಯೋಗಕ್ಕಾಗಿ, ವಾಕ್ ಮತ್ತು ಅರ್ಥಗಳಂತೆ ಹೆಣೆದುಕೊಂಡಿರುವ, ಜಗತ್ತಿನ ತಂದೆ-ತಾಯಿಯರಾದ, ಪಾರ್ವತೀಪರಮೇಶ್ವರರನ್ನು
ಪ್ರಾರ್ಥಿಸುತ್ತೇನೆ.”)
ಇದೀಗ ಜನಿಸಿದ ಈ ಕಾವ್ಯಶಿಶು
‘ಹಿಗ್ಗ ಬೀರಿ ಹಿಗ್ಗುವುದು’. ಅಂದರೆ ಸುತ್ತಲಿದ್ದವರಿಗೆ, ಎತ್ತಿಕೊಂಡವರಿಗೆ ಅದು ಹಿಗ್ಗನ್ನು ಕೊಡುತ್ತದೆ
ಹಾಗು ಆ ಮೂಲಕ ತಾನೂ ಹಿಗ್ಗುತ್ತದೆ. ಹಿಗ್ಗುತ್ತದೆ ಅಂದರೆ ಆನಂದಿಸುತ್ತದೆ ಎನ್ನುವ ಅರ್ಥವಲ್ಲದೆ ಬೆಳೆಯುತ್ತದೆ
ಅನ್ನುವ ಅರ್ಥವೂ ಇದೆ. ಭಾವಗೀತೆ ಎನ್ನುವ ಈ ಕೂಸು ಸ್ವಸಂತೋಷದಲ್ಲಿ ಮುಳುಗಿದೆ. ಕವಿಯ ಕಲ್ಪನೆಯಲ್ಲಿ
ಹುಟ್ಟಿದ ಭಾವಗೀತೆ ಎನ್ನುವ ಈ ಕೂಸಿನ ಸಂತೋಷಕ್ಕೆ ಹೊರಗಿನ ಯಾವ ವಸ್ತುವೂ ಬೇಕಿಲ್ಲ. ತನ್ನಷ್ಟಕ್ಕೆ
ತಾನೇ ಕೈಕಾಲು ಬಡಿಯುತ್ತ, ಆಡುತ್ತಿರುವ ಶಿಶುವನ್ನು ನೋಡಿದವರಿಗೆ, ಇದು (ಪರಬ್ರಹ್ಮನಂತೆ) ಸ್ವಂತ
ಆನಂದಲ್ಲಿ ಮುಳುಗಿದೆ ಎನ್ನುವುದರ ಭಾಸವಾಗುವುದು. ಅದನ್ನೇ ಬೇಂದ್ರೆಯವರು ‘ತನ್ನ ತಾನೆ ಪ್ರೀತಾ’ ಎನ್ನುವುದರ
ಮೂಲಕ ಹೇಳುತ್ತಾರೆ. ಈ ಕೂಸಿನ ಆನಂದದ ಆಟಕ್ಕೆ ಏನಾದರೂ ಅರ್ಥವಿದೆಯೆ? ಅಥವಾ ಯಾವುದಾದರೂ ಸ್ವಾರ್ಥಪರ
ಉದ್ದೇಶದಿಂದ ಕೂಸು ಈ ಆಟವನ್ನು ಆಡುತ್ತಿದೆಯೆ? ಭಾವಗೀತೆಯೂ
ಸಹ ತನ್ನಲ್ಲಿಯೇ ಆನಂದವನ್ನು ಹುಟ್ಟಿಸುತ್ತದೆ ಹಾಗು ಆ ಆನಂದವನ್ನು ಇತರರೂ ಅನುಭವಿಸುತ್ತಾರೆ. ಆದುದರಿಂದ
ಬೇಂದ್ರೆಯವರು ಭಾವಗೀತೆಯನ್ನು ‘ಅರ್ಥವಿಲ್ಲ, ಸ್ವಾರ್ಥವಿಲ್ಲ
ಬರಿಯ ಭಾವಗೀತೆ’ ಎಂದು ಬಣ್ಣಿಸುತ್ತಾರೆ.
ಕೊನೆಯ ನುಡಿ:
ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾ
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
ಭೃಂಗದ ಬೆನ್ನೇರಿ ಬಂತು….
ಮೊದಲನೆಯ ನುಡಿಯನ್ನೇ
ಬೇಂದ್ರೆಯವರು ಕೊನೆಯಲ್ಲಿ ಮರುಕಳಿಸಿದ್ದಾರೆ. ಆದರೆ ಇಲ್ಲಿ ‘ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸಾ’
ಎನ್ನುವ ಪದಪುಂಜಕ್ಕೆ inverted commas ಬಳಸಿಲ್ಲ.
ಯಾಕೆಂದರೆ ಮೊದಲ ನುಡಿಯಲ್ಲಿ ಅವರು ಕಾಳೀದಾಸನನ್ನು ಸ್ಮರಿಸಿದ್ದಾರೆ. ಇಲ್ಲಿ ಮಾತ್ರ ಅವರು ತಮ್ಮ ಕಾವ್ಯಾನುನುಭವವನ್ನೇ
ಹೇಳುತ್ತಿದ್ದಾರೆ! ಭಾವಗೀತೆಯ ಕಾವ್ಯಾನುಭವವು ಆನಂದಮಯವಾದದ್ದು. ಬೇಂದ್ರೆಯವರ ಕಠಿಣಕಾಲದಲ್ಲಿ ಈ ಆನಂದದ ಗೀತೆ ಹುಟ್ಟಿರುವುದನ್ನು ಗಮನಿಸಿದಾಗ ಈ ಕವನವನ್ನು ‘ಅಗ್ನಿಯಲ್ಲಿ ಅರಳಿದ ಆನಂದದ ಹೂವು’ ಎನ್ನಬಹುದಲ್ಲವೆ?
………………………………………………………………
(ಟಿಪ್ಪಣಿ:
ಬೇಂದ್ರೆಯವರು ಮುಗದ
ಹಳ್ಳಿಯಲ್ಲಿ ನಜರಬಂದಿಯಲ್ಲಿ ಇದ್ದರು. ಮುಗದವು ಹಳಿಯಾಳ ರಸ್ತೆಯ ಮೇಲೆ ಧಾರವಾಡದಿಂದ ಸುಮಾರು ೧೩ ಕಿಲೋಮೀಟರುಗಳ
ದೂರದಲ್ಲಿದೆ. ‘ಗೆಳೆಯರ ಗುಂಪಿ’ನ ಗೆಳೆಯರಲ್ಲಿ ಒಬ್ಬರಾದ ಹಾಗು ಮನೋಹರ ಗ್ರಂಥಮಾಲೆಯನ್ನು ಸ್ಥಾಪಿಸಿದ
ಶ್ರೀ ಜಿ.ಬಿ.ಜೋಶಿಯವರು ಪ್ರತಿ ದಿನವೂ ಸೈಕಲ್ ಮೇಲೆ ಹೋಗಿ ಬೇಂದ್ರೆಯವರಿಗೆ ಊಟವನ್ನು ಕೊಟ್ಟು ಬರುತ್ತಿದ್ದರು.
ಈ ಮಾಹಿತಿಯನ್ನು ಶ್ರೀ ವ್ಯಾಸ ದೇಶಪಾಂಡೆ ನೀಡಿದ್ದಾರೆ. ಅವರಿಗೆ ನಾನು ಋಣಿಯಾಗಿದ್ದೇನೆ.)
49 comments:
ದುಂಬಿಯ ಭಾವದ ಸಾಂಧರ್ಭಿಕ ವಿವರಣೆ ತುಂಬಾ ಅರ್ಥಗರ್ಭಿತವಾಗಿದೆ, Nice :)
ಬೇಂದ್ರೆ ಅಜ್ಜನ ಕಾರಾಗೃಹವಾಸದ ವಿಚಾರ ನನಗೆ ಗೊತ್ತಿರಲಿಲ್ಲ. ಆ ನರ ಬಲಿ ಎಲ್ಲಿಯಾದರೂ ಸಿಕ್ಕರೆ ಓದಬೇಕು.
ಭಾವಗೀತೆ ಅತ್ಯುತ್ತಮ ಕಾವ್ಯ ಸೃಷ್ಟಿ.
ಕವನ ಹುಟ್ಟುವ ಸಮಯ ದಾಖಲಿಸಿದ ಅಪ್ರತಿಮ ಕವಿ.
ನಾದಬೇಕುವನ್ನು ಅವರು ಬಳಸಿಕೊಂಡ ರೀತಿಯೇ ನನಗೆ ಮಾದರಿ.
ಹಲ ಶಾಸ್ತ್ರಗಳನ್ನು ಓದಿಕೊಂಡ, ಜಗತ್ತನ್ನು ಬೆರಗು ಕಣ್ಣಿನಿಂದ ನೋಡುವ ಬೇಂದ್ರೆ ಅಜ್ಜನ ಕಾವ್ಯ ಪ್ರಪಂಚ ಅಮೋಘ.
ನಿಮ್ಮಿಂದ ನನಗೆ ವಾಕ್ ಬಗೆಯೂ ತಿಳಿಯಿತು.
ಇನ್ನು ಮೇಲೆ ನಾನೂ ನನ್ನ ಕವನಗಳಿಗೂ ಟಿಪ್ಪಣಿ ಹಾಕುತ್ತೇನೆ.
ಪ್ರಶಾಂತ,
ಬೇಂದ್ರೆಯವರ ಅನೇಕ ಕವನಗಳು ಸಂದರ್ಭದ ಮೇಲೆಯೇ ಆಧಾರಿತವಾದಂತಹವು. ಅವರ ಕವನಸಂಕಲನಗಳ ಹಳೆಯ ಆವೃತ್ತಿಗಳಲ್ಲಿ ಈ ಸೂಚನೆಗಳು ಲಭ್ಯವಾಗುತ್ತವೆ.
ಬದರಿನಾಥರೆ,
ಬೇಂದ್ರೆಯವರು ತಮ್ಮ ಕವನಗಳಿಗೆ ಬರೆದ ಟಿಪ್ಪಣಿಗಳು ಹಳೆಯ ಆವೃತ್ತಿಗಳಲ್ಲಿ ಸಿಗುತ್ತವೆ. ವಾಮನ ಬೇಂದ್ರೆಯವರು ಸಂಪಾದಿಸಿದ ಸಂಕಲನಗಳಲ್ಲಿ, ಅವರೇ ಟಿಪ್ಪಣಿಗಳನ್ನು ಹಾಕಿದ್ದಾರೆ.
ಸರ್ ಬೇಂದ್ರೆಯವರು ಜೈಲು ವಾಸ ಅನುಭವಿಸಿದ್ದು ತಿಳಿದಿರಲಿಲ್ಲ... ನಿಜವಾಗಲು ಈ ಭಾವಗೀತೆ ಅಗ್ನಿಯಲ್ಲಿ ಅರಳಿದ ಆನಂದದ ಹೂವು ಅನ್ನಲೇ ಬೇಕು...ಈ ಕವಿತೆ ಬರೆದ ಹಿನ್ನೆಲೆ ಮತ್ತು ಬಿಡಿ ಬಿಡಿ ಆಗಿ ಅರ್ಥ ಆಗುವ ಹಾಗೆ ತುಂಬ ಒಳ್ಳೆಯ ವಿವರಣೆ ಕೊಟ್ಟಿದ್ದೀರ...
ಅಂಬಿಕಾತನಯರ ವಾಕ್ಕು,ಕಾಳಿದಾಸ, ಉಪನಿಷತ್ತು ಎಷ್ಟು ತಿಳಿಸಿದ್ದಿರಿ ಕಾಕಾ ! ಲಲಿತೆಯ ಪುತ್ರನಿಗೆ ವಾಕ್ಕು ಸುಲಭ, ನಿಮಗೆ ವಿವರಿಸುವುದು.
ವಂದನೆಗಳು
ಸ್ವರ್ಣಾ
ಗಿರೀಶರೆ,
ಬೇಂದ್ರೆಯವರಿಗೆ ಸೆರೆಮನೆಯ ಶಿಕ್ಷೆಯಾಗಿದ್ದ್ದಲ್ಲದೇ, ಏಳು ವರ್ಷಗಳವರೆಗೆ ಎಲ್ಲಿಯೂ ನೌಕರಿ ಕೊಡಕೂಡದೆನ್ನುವ ಸರಕಾರೀ ಆದೇಶವೂ ಆಗಿತ್ತು. ಹೀಗಾಗಿ ಬೇಂದ್ರೆಯವರು ಆ ಅವಧಿಯಲ್ಲಿ ತುಂಬ ಕಷ್ಟ ಅನುಭವಿಸಿದರು.
ಬೇಂದ್ರೆಯವರಿಗೆ ಸಹಾಯ ಮಾಡುವ ಉದ್ದೇಶದಿಂದಲೇ ಮಾಸ್ತಿಯವರು ‘ಜೀವನ’ ಮಾಸಪತ್ರಿಕೆಯನ್ನು ಪ್ರಾರಂಭಿಸಿ, ಬೇಂದ್ರೆಯವರನ್ನು ಅದರ ಸಂಪಾದಕರನ್ನಾಗಿ ಮಾಡಿದ್ದರು!
ಸ್ವರ್ಣಾ,
ಬೇಂದ್ರೆಯವರು ಗರುಡ; ಗರುಡನ ಹಾರಾಟವನ್ನು ನನ್ನಿಂದ ಅಳೆಯಲಾದೀತೆ?
कहां राजा भॊज,कहां गंगू तॆली?
ಆದರೂ ಸಾಹಿತ್ಯವನ್ನು ಒಳಲಿನಲ್ಲಿ ತುಂಬಿ ನಮ್ಮಂತ ಶಿಶುಗಳಿಗೆ ಉಣಿಸುವ ನಿಮ್ಮ ಶೈಲಿ ನನಗೆ ನೆಚ್ಚಿಗೆ.
ಬದರಿನಾಥರೆ,
ನೀವು ಪ್ರಬುದ್ದರೇ ಇದ್ದೀರಿ! ನಿಮ್ಮನ್ನು ಶಿಶು ಎಂದು ಕಡಿಮೆ ಮಾದಿಕೊಳ್ಳದಿರಿ!
ಬೇಂದ್ರೆಯವರ "ಭಾವಗೀತೆ"ಯನ್ನು ಅದೆಷ್ಟು ಬಾರಿ ಕೇಳಿದ್ದೇನೆ.
ಆದರೆ ಅದರಲ್ಲಿ ಇಷ್ಟೆಲ್ಲಾ ಭಾವವಿದೆ ಎಂದು ನನಗೆ ತಿಳಿದೇ ಇರಲಿಲ್ಲ.ನಿಮ್ಮ ಬರವಣೆಗೆಯನ್ನು
ಓದುತ್ತಿದ್ದರೆ ನನ್ನ ಕಾಲೇಜಿನ ದಿನಗಳ ಕನ್ನಡ ಕ್ಲಾಸ್ ಗಳ ನೆನಪಾಗುತ್ತದೆ. ನಿಮ್ಮ ಬ್ಲಾಗಿನಲ್ಲಿ ವಿಹರಿಸುವುದು ನನಗೆ ತುಂಬಾ ಇಷ್ಟ.
ಒಂದೊಂದು ಕವನದ ಆಳಕ್ಕಿಳಿದು,ಕವಿಯ ಭಾವವನ್ನು ಅರಿತು ,ಮನಮುಟ್ಟುವಂತೆ ವರ್ಣಿಸುವ ನಿಮ್ಮ ಪ್ರತಿಭೆಗೆ ನನ್ನ ನಮನಗಳು ಸುನಾಥ್ ಸಾರ್.
ಮಂಜುಳಾದೇವಿಯವರೆ,
ನಿಮ್ಮ ಸ್ಪಂದನೆಗಾಗಿ ಧನ್ಯವಾದಗಳು.
ಆಕಾಶವಾಣಿಯಲ್ಲೋ,ಸಂಚಾರಿ ದೂರವಾಣಿಯಲ್ಲೋ ಹಾಗೇ ಭಾವಗೀತೆಗಳನ್ನು,ಕವಿತೆಗಳನ್ನು ಕೇಳಿ,ಅದ್ಭುತ ಎಂದೆಣಿಸಿಕೊಂಡು ಸುಮ್ಮನಾಗುತ್ತೇವೆ..ಆದರೆ ಆ ಗೀತೆಗಳೆಲ್ಲಾ ಏಕೆ ಅದ್ಭುತವಾದವು???ಅದನ್ನು ಬರೆದವರೆಲ್ಲಾ ಏಕೆ ಮಹನೀಯರಾದರು ಎನ್ನುವುದನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದೀರಿ,ಕವನಗಳ ಅರ್ಥವನ್ನೂ ಅರ್ಥೈಸಿದ್ದೀರಿ...ಧನ್ಯವಾದಗಳು ನಿಮಗೆ ಅದಕ್ಕಾಗಿ..
ಬರಿತಾ ಇರಿ..
ಹಾಂ ನಾನೂ ಬೇಂದ್ರೆಯವರ ಎರಡು ಕವನ ಸಂಕಲನಗಳನ್ನು ತಂದು,ಏನೂ ಅರ್ಥವಾಗದೇ ಬದಿಯಲ್ಲಿ ಇಟ್ಟಿದ್ದೇನೆ..ಇನ್ನಾದರೂ ಓದಲಾದೀತೇ ನೋಡುವಾ..
ನಮಸ್ತೆ.
ಭಟ್ಟರೆ,
ಧನ್ಯವಾದಗಳು.
'ಅರ್ಥವಿಲ್ಲ, ಸ್ವಾರ್ಥವಿಲ್ಲ ಬರಿಯ ಭಾವಗೀತೆ'- ಭಾವಗೀತೆಗೆ ಇದಕ್ಕಿಂತ ಸುಂದರವಾಗಿ ಅರ್ಥ ಬರೆಯುವುದು ಕಷ್ಟ. ಈ ಕವನವನ್ನು ತುಂಬ ಚನ್ನಾಗಿ ಬಿಡಿಸಿ ಈ ಭಾವಗೀತೆಯನ್ನು ಇನ್ನೂ ಚೆನ್ನಾಗಿ ಸವಿಯುವಂತೆ ಮಾಡಿದ್ದೀರಿ. ತುಂಬ ಧನ್ಯವಾದಗಳು.
ಕೇಶವ,
ಕವನ, ಭಾವಗೀತೆ ಇವುಗಳ ಬಗೆಗೆ ಬೇಂದ್ರೆಯವರು ಬರೆದ ಗೀತೆಗಳೇ ತುಂಬ ಅರ್ಥವತ್ತಾಗಿವೆ ಹಾಗು ಸೊಗಸಾಗಿವೆ. ಸ್ಪಂದನೆಗೆ ಧನ್ಯವಾದಗಳು.
ಕವನ ಹುಟ್ಟುವ ಪರಿಯ ಬಗ್ಗೆ ಪ್ರಾಯಶಃ ಹಲವಾರು ಬರಹಗಾರರು ಯೋಚಿಸಿರಲೇಬೇಕು.. ನಾನೂ ಯೋಚಿಸಿದ್ದೇನೆ. ಬೇಂದ್ರೆ ಅಜ್ಜನವರು ಈ ವಿಷಯವಾಗಿಯೇ ಹಲವಾರು ಕವಿತೆಗಳನ್ನೇ ಬರೆದಿದ್ದಾರೆ ಅಂತ ತಿಳಿದು ಬಹಳ ಸಂತೋಷವಾಗುತ್ತಿದೆ. ಅಷ್ಟೇ ಅಲ್ಲ, ಒಂದೇ ಪದಕ್ಕೆ, ಒಂದೇ ಸಾಲಿಗೆ, ಹೇಗೆ ವಿವಿಧ ಆಯಾಮಗಳಿರಬಹುದು, ಎಂದು ತಿಳಿಯಲು ಖುಶಿಯಾಗುತ್ತದೆ. ನಿಮ್ಮ ವಿವರಣೆಯಂತೂ ಎಂದಿನಂತೆ ಅದ್ಭುತ.. ಮತ್ತೆ ಪುನರಾವರ್ತಿಸುತ್ತೇನೆ. ನಿಮ್ಮ ಬ್ಲಾಗ್ ನಮ್ಮ ಪಾಠಶಾಲೆ :-) ತುಂಬಾ ಧನ್ಯವಾದ ಕಾಕಾ
ಮಂಜುಳಾ,
ಬೇಂದ್ರೆಯವರ ಕವನಗಳಲ್ಲಿರುವ ಕಲ್ಪನೆ ಹಾಗು ವಿವಿದಾರ್ಥಗಳು ಓದಿದಷ್ಟೂ ಹೆಚ್ಚು ಅನುಭವಕ್ಕೆ ಬರುತ್ತವೆ! ಅವರು ಮಹಾಕವಿ!
ಅದಂತೂ ಎಂದೆಂದಿಗೂ ಸತ್ಯವಾದ ಮಾತು
ಇದು ನನ್ನ ಮೆಚ್ಚಿನ ಬೇಂದ್ರೆ ಕವನವಾದರೂ ಇದರ ಇಷ್ಟೊಂದು ಅರ್ಥ ವೈಶ್ಯಾಲ್ಯತೆ ನಿಮ್ಮ ಲೇಖನದಿಂದಲೇ ವೇದ್ಯವಾಯಿತು.
ಬೇ೦ದ್ರೆಯವರನ್ನು ನಾನು ಸುನಾತ್ ಸರ್ ಅವರ ಮೂಲಕ ಅರ್ಥೈಸಿಕೊ೦ಡಿದ್ದೇ ಹೆಚ್ಚು. ಅದ್ಭುತ ಪ್ರತಿಭೆಗೆ ಅದ್ಭುತ ವಿಶ್ಲೇಷಣೆ. ನಾನು ಪುನರ್ನುಡಿಯುತ್ತಿದ್ದೇನೆ, ನಿಮ್ಮ ತಾಣ ನಿಜವಾಗಿಯೂ ಒ೦ದು ಪಾಠಶಾಲೆ. ಗೌರವಗಳೊ೦ದಿಗೆ,
ಅನ೦ತ್
ಕಾಕಾ, ನೀವು ಅದೆಷ್ಟು ವಿಷದವಾಗಿ ಬರೆಯುತ್ತೀರಿ!
ಬೇಂದ್ರೆಯವರ ಈ ಗೀತೆ ನನ್ನ ಇಷ್ಟದ ಭಾವಗೀತೆಗಳಲ್ಲಿ ಒಂದು. ಈ ಹಾಡಿನ ಹುಟ್ಟಿನ ಹಿಂದಿನ ಕಥೆ ಗೊತ್ತಾಗಿ ಖುಷಿಯಾಯಿತು. ಪ್ರತಿ ಪ್ಯಾರಾವನ್ನು ನೀವು ಬಿಡಿಸಿಡುವ ರೀತಿ ಅನನ್ಯವಾದದ್ದು. ಹಲಸಿನ ತೊಳೆ ಬಿಡಿಸಿಟ್ಟ ಹಾಗೆ!
ಸುನಾಥ ಕಾಕಾ,
ಬೇಂದ್ರೆಯವರ ಕಾವ್ಯವನ್ನು ಓದುವುದು ಒಂದು ಯೋಗ. ಅದೂ ನಿಮ್ಮಂತವರು ಉಣಿಸುವ ಈ ಸುಂದರ ಕವನ. ನಿಮ್ಮ ಉದಾಹರಣೆಗಳು, ಕವನದ ಸಾಲು ಸಾಲಿಗೂ ಕೊಟ್ಟ ವಿಚಾರಗಳು ಎಲ್ಲವನ್ನೂ ಓದಿ ಧನ್ಯನಾದೆ. ಸ್ವಲ್ಪವೂ ಉತ್ಪ್ರೇಕ್ಷೆಯಿಲ್ಲ. ನಿಮಗೆ ನೀವೇ ಸಾಟಿ. ಇನ್ನೂ ಬಡಿಸಿ ಇಂತಹ ರಸಪಾಕವನ್ನು.
ಹೌದು ಕಾಕಾ ಅನಂತರಾಜ್ ಹೇಳಿದಹಾಗೆ ಬೇಂದ್ರೆ ಛಲೋ ಅರ್ಥ ಆಗೋದು ನಿಮ್ಮ ವಿಶ್ಲೇಷಣೆಯಿಂದ..
ಇನ್ನೂ ಇನ್ನೂ ಅನ್ನೋ ಹಪಾಪಿ ಆ ವರಕವಿಗೆ ಇತ್ತೋ ಇಲ್ಲವೋ ಆದ್ರ ನಿಮ್ಮಿಂದ ಇನ್ನೂ ಇನ್ನೂ ಹೆಚ್ಚಿನ
ಬೇಂದ್ರೆಕವಿತಾ ಅರ್ಥನಿರೂಪಣಾ ಬರಲಿ ..
ಗೀತೆಯ ಭಾವ ಮತ್ತು ಅದರ ಹುಟ್ಟಿನ ಕಾರಣಗಳನ್ನು ತೆರೆದಿಟ್ಟು ವಿವರಣೆಗೊಂದು ಹೊಸ ಮೆರುಗು ಕೊಟ್ಟಿದ್ದೀರಿ. ತುಂಬ ವಿಷಯಗಳನ್ನು ತಿಳಿದಂತಾಯಿತು.
ಅದೆಂತಹ ಕಡುಕಷ್ಟಗಳನ್ನು ಅನುಭವಿಸಿದರೂ ಕಲ್ಲುಸಕ್ಕರೆಯನ್ನೇ ಬೇಂದ್ರೆಯವರು ನಮಗೆ ನೀಡಿದ್ದಾರೆ !.
ಧನ್ಯವಾದಗಳು.
ಸೀತಾರಾಮರೆ,
ಧನ್ಯವಾದಗಳು.
ಅನಂತರಾಜರೆ,
ಧನ್ಯವಾದಗಳು.
ಶ್ರೀನಿಧಿ,
ಧನ್ಯವಾದಗಳು. In fact ನಿಮ್ಮ ಕವನಗಳನ್ನೂ ಸಹ ನಾನು ತುಂಬ ಮೆಚ್ಚಿಕೊಂಡಿದ್ದೇನೆ. ಆದರೆ ಇತ್ತೀಚೆಗೆ ನಿಮ್ಮ ಹೊಸ ಕವನಗಳು ಬಂದಿಲ್ಲ.
ಈಶ್ವರ ಭಟ್ಟರೆ,
ಬೇಂದ್ರೆಯವರ ಕವನಗಳೇ ರಸವತ್ತಾಗಿ ಇರುವಾಗ, ನಾನು ಬರೆಯುತ್ತಿರುವ ವ್ಯಾಖ್ಯಾನ ಹೆಚ್ಚಿನದೇನಲ್ಲ!
ದೇಸಾಯರ,
ಆ ವರಕವಿ ನುಡಿದದ್ದೆಲ್ಲ ಕವನ!
ಗುಂಗೀಹುಳದ ಕೊರೆತದ ನಾದ ಕಿವಿಗೆ ಬಿದ್ದಾಗ ಭಾವಗೀತೆಯ ಸೃಷ್ಟಿಯಾಯಿತು. ಕಾಯಿಪಲ್ಲೆ ಮಾರಾಟ ಮಾಡುವವಳನ್ನು ಕಂಡಾಗ ‘ಟೊಂಕದ ಮ್ಯಾಲೆ ಕೈ ಇಟಗೊಂಡು’ ಎಂದು ಹಾಡಿದರು. ಬೇಸಿಗೆಯ ಬಿಸಿಲಿನಲ್ಲಿ ‘ಕವಿಗೇನು ಬೇಕ? ಹೂತ ಹುಣಸಿ ಮರ ಸಾಕ!’ಎಂದರು!ಬಾಳು ಬೇಸರವಾದಾಗ ‘ಕುಣಿಯೋಣು ಬಾರ’ ಎಂದು ಕೆಳದಿಯನ್ನು ಕರೆಯುತ್ತ, ‘ಹದಿನಾಲ್ಕು ಲೋಕಕ್ಕ ಚಿಮ್ಮಲಿ ಈ ಸುಖ’ ಎಂದು ಹಾರೈಸಿದರು!
ಅಂತೆಯೇ ಆಮೂರರು ಬೆಂದ್ರೆಯವರರ ಬಗೆಗೆ ಬರೆದ ತಮ್ಮ ಕೃತಿಗೆ ‘ಭುವನದ ಭಾಗ್ಯ’ ಎಂದು ಕರೆದಿದ್ದಾರೆ.
ಸುಬ್ರಹ್ಮಣ್ಯರೆ,
ನೀವು ನಿಮ್ಮ blog ಮುಖಪುಟದಲ್ಲಿಯೇ ಬೇಂದ್ರೆ ಘೋಷಣೆಯನ್ನು ಹಾಕಿದ್ದೀರಲ್ಲ: ‘ಕಷ್ಟಗಳನ್ನು ಹ್ಯಾಂಗರ ತಡಕೋಬಹುದು, ಸುಖಾ ಬಂದಾಗ ತಡಕೊಳ್ಳೋದು ಕಷ್ಟ!’
ನಿಮ್ಮಿ೦ದ ನಾವು ಕಲಿಯಬೇಕಾದದ್ದು ಬಹಳವಿದೆ ಸರ್, ಬೇ೦ದ್ರೆಯವರ ಕವನಗಳು ಅ೦ತರಾರ್ಥದಿ೦ದ ಕೂಡಿದ್ದು ಅವುಗಳನ್ನು ಬಹಳ ಆಪ್ತವಾಗಿ ಅರ್ಥೈಸುತ್ತೀರಿ. ಧನ್ಯವಾದಗಳು.
ಈ ಕವನವನ್ನು ಓದಿದ್ದೆ..ಅರ್ಥವಾಗಿದೆ ಅ೦ದುಕೊಡಿದ್ದೆ.. ಆದರೆ ನಿಜವಾಗಿ ಅದರ ಅರ್ಥವನ್ನು ನಿಮ್ಮ ವಿವರಣೆಯು ತಿಳಿಸಿಕೊಟ್ಟಿತು. ಧನ್ಯವಾದಗಳು ಕಾಕ.
ಸುನಾಥ್ ಕಾಕಾ,
ಎಂತಹ ಅಪ್ರತಿಮ ಕವನಕ್ಕೆ ಅಷ್ಟೇ ಸುಂದರ ವ್ಯಾಖ್ಯಾನ !
ನಿಮ್ಮ ವಿವರಣೆಯ ಒಂದೊಂದು ಸಾಲಿನಲ್ಲೂ ಅದರ ಬಗ್ಗೆ ನಿಮ್ಮ ಅಧ್ಯಯನದ ಆಳದ ಅರಿವಾಗುತ್ತದೆ.
ನಿಮಗೆ ಒಂದು ಪ್ರೀತಿಯ ಶರಣು !
ಮನಮುಕ್ತಾ,
ನಿಮಗೂ ಧನ್ಯವಾದಗಳು
ಅಪ್ಪ-ಅಮ್ಮ,
ನಮ್ಮೆಲ್ಲರ ಶರಣು ಬೇಂದ್ರೆಯವರಿಗೆ, ಅಲ್ಲವೆ!
ಕಾಕಾ
ಈ ಹಾಡಿಗೆ ಇಷ್ಟೊಂದು ಅರ್ಥವಿದೆಯೇ? ತಿಳಿದಿದದ್ದೇ ಈಗ.. ನನ್ನ ಅಲ್ಪಮತಿಗಿಳಿದ ಅಲ್ಪಜ್ಞಾನಾನ್ನು ಸುವಿಶಾಲಗೊಳಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಬೇಂದ್ರೆಯಜ್ಜ ದಿನಗಳೆದಂತೇ ಹೆಚ್ಚು ಹೆಚು ಹುಚ್ಚಾಗಿ ನನ್ನೊಳಗೆ ಬೆಳೆಯುತ್ತಿದ್ದಾರೆ. ನನ್ನ ಅಚ್ಚುಮೆಚ್ಚಿನ ಕವಿ.... ದಾರ್ಶನಿಕ ವ್ಯಕ್ತಿ ಇವರು.
ತೇಜಸ್ವಿನಿ,
ಬೇಂದ್ರೆಯವರ ಕವನಕ್ಕೆ ಇರುವ ಆಯಾಮಗಳು ಅನೇಕ. ಅವರ ಜ್ಞಾನ ಅಪಾರ ಹಾಗು ಅಗಾಧ. ಓದುತ್ತ ಹೋದಂತೆ ಮೊದಲು ಕಾಣದ ಅರ್ಥಗಳು ಹೊಳೆಯುತ್ತಲೇ ಹೋಗುತ್ತವೆ!
ಪ್ರೀತಿಯ ಸುನಾಥ ಕಾಕಾ,
ನಿಮ್ಮ ಈ ಪೋಸ್ಟ್ ದೀಪಾವಳಿಗಿಂತ ಮುಂಚಿನ ವಾರ ಓದಿದೆ. ಆದ್ರೆ ಕಮೆಂಟು ಹಾಕಲು ಸಮಯ ಇರಲಿಲ್ಲ.
ಇವತ್ತೇ ಆಗಿದ್ದು.
ಆಹ್ಲಾದದ ಮೊಗ್ಗಿನ ಜಡೆ ಎಂದೆನಿಸಿತು ಓದುತ್ತಾ. ನಾನು ಚಿಕ್ಕವಳಿದ್ದಾಗ ಇಷ್ಟ ಪಟ್ಟ ಪದ್ಯ ಇದು. ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ ಎಂಬ ಸಾಲು ನನ್ನ ಯಾವ್ ಯಾವ ಸಂದರ್ಭದಲ್ಲೋ ಕಾಡಿವೆ. ಆದರೆ ಇಡೀ ಹಾಡನ್ನು ಹೀಗೆ ಕಬ್ಬು ನುರಿದ ಹಾಗೆ ರಸವಿಳಿಸಿ, ಇತಿಹಾಸದ ವಿವರಗಳ ನಿಂಬೆಹುಳಿ ಹಿಂಡಿ ಕೊಟ್ಟರೆ ಬಿಂದಿಗೆ ಹಾಲೂ ಕುಡಿದೇನು.
ಬೇಂದ್ರೆ ಅಜ್ಜ ಒಂದು ನುಡಿಯಿಂದ ಇನ್ನೊಂದು ನುಡಿಗೆ ಚಿಟ್ಟೆಯಂತೆ ಸಾಗಿದ್ದರೆ, ನೀವು ಆ ಹೆಜ್ಜೆಗಳ ಜಾಡನ್ನೂ ಹುಡುಹುಡುಕಿ ಒಗಟು ಬಿಡಿಸಿ ಚಿತ್ರಕವಾಗಿ ವಿವರಿಸಿದ್ದೀರಿ.
ನಾದಲೋಲ'ರ ನಾದವನ್ನ ಕೇಳಲು ನಿಜವಾದ ಕಿವಿ ಬೇಕು. ಆ ಕಿವಿಗೆ ಕಣ್ಣೂ ಇರಬೇಕು. ಕಣ್ಣು ಕಿವಿಗೆ ಇಳಿದದ್ದನ್ನು ಪರಿಷ್ಕರಿಸಲು ಹದವಾದ ಮಸ್ತಿಷ್ಕ ಬೇಕು. ಅದೆಲ್ಲವನ್ನೂ ಮಾಡಿ ಆ ನಾದವನ್ನ ನನ್ನಂತಹ ಪಾಮರಳ ಓದಿಗೆ ಸುರಳೀತವಾಗಿ ದಕ್ಕುವ ಹಾಗೆ ಮಾಡಿದ ನಿಮಗೆ ಶರಣು.
ಬೇಂದ್ರೆಯವರ ಕಾವ್ಯದ ಹಕ್ಕಿ ಹಾರುವ ಆಕಾಶದ ವಿಸ್ತರದುದ್ದಕ್ಕೂ ಹರಿವ ನಿಮ್ಮ ಕಣ್ಣಿಗೆ ಮಹಾಶರಣು. ಇಂತಹ ಒಂದು ಭಾವಲೋಕವನ್ನು ಕಟ್ಟಿಕೊಟ್ಟ ಬೇಂದ್ರೆಯವರಿಗೆ ಮೊದಲ ಶರಣು.
ಪ್ರೀತಿಯಿಂದ,
ಸಿಂಧು
ಸಿಂಧು,
ಬೇಂದ್ರೆಯವರ ಕವನ-ರಸವನ್ನು ನಿಮ್ಮೊಡನೆ ಹಂಚಿಕೊಳ್ಳುವ ಭಾಗ್ಯ ನನ್ನದು. ಅದೇ ನನ್ನ ಸಂತೋಷ.
ಸುನಾಥಣ್ಣ...ಬೇಂದ್ರೆಯವರನ್ನು ಸ್ವಲ್ಪ ಮಟ್ಟಿಗಾದರೂ ನಾವು ಅರ್ಥ ಮಾಡಿಕೊಳ್ಳಬೇಕಾದರೆ ನಿಮ್ಮ ಈ ಅಮೂಲ್ಯ ಕವನ ವಿಶದೀಕರಣ ಒಂದು ಉತ್ತಮ ಮೆಟ್ಟಿಲು ಎನ್ನುವುದರಲ್ಲಿ ಸಂಶಯವೇ ಇಲ್ಲ. ನಮ್ಮ ಪದಾರ್ಥ ಚಿಂತಾಮಣಿಯಲ್ಲಿ ಕೆಲವರು ಈ ಬಗ್ಗೆ ಕೇಳಿಯೂ ಇದ್ದಾರೆ.
ನಿಮ್ಮ ಈ ಅಮೂಲ್ಯ ಲೇಖನಗಳನ್ನು ಒಂದು ಪುಸ್ತಕವಾಗಿಸಿದರೆ ಕನ್ನಡ ಸಾಹಿತ್ಯಲೋಕದ ನಮ್ಮಂತಹವರಿಗೆ ಬಹಳ ಸಹಾಯವಾಗುತ್ತದೆ. ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ ... ನಾವು ವೃಂದಗಾನ ಸ್ಪರ್ಧೆಯಲ್ಲಿ ಭಾಗವಹಿಸಿ ಅಂತರ ಕಾಲೇಜ್ ಸ್ಪರ್ಧೆಯಲ್ಲಿ ಹಾಡಿದ್ದೆವು...ಆದರೆ ಇದರ ಭಾವಾರ್ಥ ತಿಳಿಯದೆಯೇ ...ಅದನ್ನು ಅರಿತು ಹಾಡಿದರೆ ಗಾಯನಕ್ಕೆ ಎಂತಹ ಪ್ರೌಢಿಮೆ ಕೊಡಬಹುದು ಎನ್ನುವುದನ್ನು ನಾನು ಊಹಿಸಬಲ್ಲೆ.. ಸುಂದರ ವಿವರಣೆ...
ಅಂದಹಾಗೆ ಸುನಾಥಣ್ಣ ನೀವು ಇಂತಹ ಪುಸ್ತಕ ಹೊರತರುವುದಾದರೆ ನನ್ನ ಕೈಲಾದ ಧನಸಹಾಯ (ಕನ್ನಡ ಸೇವಾರ್ಥ) ನಾನು ಮಾಡಲು ಸಿದ್ಧ.
ಜಲನಯನ,
Facebookನಲ್ಲಿ ಕೇಳಿದ ಸಂದೇಹಕ್ಕೆ, ಅಲ್ಲಿಯೇ ಲಿಂಕ್ ಕೊಟ್ಟಿದ್ದೇನೆ. ನಿಮ್ಮ ಪ್ರೀತಿಗೆ ನಾನು ಋಣಿಯಾಗಿದ್ದೇನೆ. ಇನ್ನು ಪುಸ್ತಕರೂಪದ ಅವಶ್ಯಕತೆ ಇಲ್ಲ ಎಂದು ನನ್ನ ಅನಿಸಿಕೆ!
ಭಾವನೆಗಳು ಸಹಜವಾಗಿ ತಂತಾನೇ ಸ್ಫುರಿಸಿದಾಗ ಮತ್ತು ಆ ಭಾವನೆಗಳನ್ನು ಹೊರನಿಂಟು ನೋಟಕನಾಗಿ ನೋಡುವ ಸಾಮರ್ಥ್ಯ ವ್ಯಕ್ತಿಗೆ ಬೆಳೆದಾಗ ವ್ಯಕ್ತಿ ಕವಿಯಾಗುವ ಪ್ರಥಮ ಹಂತ, ಅದು ಮೊಟ್ಟೆಯೊಡೆದು ಲಾರ್ವಾ ಹೊರಬರುವ ಪರಿ, ಹೊರಬಂದ ಲಾರ್ವಾ ಜಗತ್ತಿನಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತದೆ, ಅದಕ್ಕೆ ಹೊರಜಗದ ಆಗು-ಹೋಗುಗಳು ಬಾಧಿಸುತ್ತವೆ. ಲಾರ್ವಾ ಬದುಕಿದ್ದು ರೆಕ್ಕೆಗಳನ್ನು ಪಡೆದಾಗ ಅದು ಚಿಟ್ಟೆಯಾಗುತ್ತದೆ ಅಲ್ಲವೇ ? ಲಾರ್ವಾ ಚಿಟ್ಟೆಯಾದ ಪರಿಯಂತೇ ಕವಿಯ ಜನ್ಮ ! ಬರೆಯಲು ಬೇಕು ಅಂದುಕೊಂಡವರಿಗೆಲ್ಲಾ ಬರೆಯಲು ಬರುವುದಿಲ್ಲ, ಬರೆಯಲು ತಯಾರಾದವರಿಗೆ ಪದಗಳ ಕೊರತೆ ಕಾಡುತ್ತದೆ. ಬರೆಯಲು ಹಲವು ವಿಷಯಗಳಿದ್ದರೂ ಬರೆಯುವುದೇ ಸಾಧ್ಯವಾಗದ ಮಂದಿಯೂ ಇದ್ದಾರೆ. ಬೇಂದ್ರೆಯವರ ವಿಷಯ ಬಿಡಿ-ಅದು ಕನ್ನಡದ ಒಂದು ರಸಶೃಂಗ! ಅವರು ಹುಟ್ಟಿದ್ದೇ ಕವಿಯಾಗಿ! ಅಂಥಾ ವರಕವಿಯ ಮನೋಜ್ಞ ಕವನಕ್ಕೆ ಭಾಷ್ಯಬರೆದ ತಮಗೆ ವಂದನೆಗಳು, ಅಭಿನಂದನೆಗಳು.
ಭಟ್ಟರೆ,
ಕವಿಯ ಜನ್ಮವನ್ನು ಸೂಕ್ಷ್ಮವಾಗಿ ವಿವರಿಸಿದ್ದೀರಿ.ಧನ್ಯವಾದಗಳು.
ಅಬ್ಬಾ.... ತುಂಬ ಚೆಂದದ ವಿವರಣೆ ಸರ್. ಧನ್ಯವಾದಗಳು...🙏😊ಬೇಂದ್ರೆಯವರು ನರಬಲಿ ಕವನ ಬರೆದು ಜೈಲುವಾಸ ಅನುಭವಿಸಿದ ಬಗ್ಗೆ "ತುಮ್ಕೂರಾಗೂ ಬೇಂದ್ರೆ" ಕಾರ್ಯಕ್ರಮದಲ್ಲಿ ಮುಖ್ಯ ಅತಿತಿ ಉಪನ್ಯಾಸಕರಾದ ಜಿ.ಕುಲಕರ್ಣಿ ಸರ್ ವಿವರಿಸಿದ್ದರು. ನಿಜಕ್ಕೂ ಅಗಿನ ಬೇಂದ್ರೆಯವರ ಸ್ಥಿತಿ ಶೋಚನೀಯ.
ಒಂದು ಗೀತೆಯು ಎಷ್ಟೊಂದು ಒಳ ಅರ್ಥ ಹೊಂದಿರುತ್ತದೆ ಎನ್ನುವುದನ್ನು ನೀವು ತುಂಬ ಅಧ್ಯಯನ ಮಾಡಿ ತಿಳಿದಿರುವಿರಿ. ನಿಮ್ಮ ಸೂಕ್ಷ್ಮ ಅವಲೋಕನಕ್ಕೆ ಅನಂತ ಧನ್ಯವಾದಗಳು...😊🙏
ಸವಿತಾ ಮೇಡಮ್, ಸ್ಪಂದನೆಗಾಗಿ ನಿಮಗೆ ಧನ್ಯವಾದಗಳು.
ಬೇಂದ್ರೆಯವರ ಕವನ ಓದುವುದೆಂದರೆ ಭಾವಲೋಕದಲ್ಲಿ ನಾದದ ಗುಂಗು ಹಿಡಿದು ಉನ್ಮಾದದಿ ವಿಹರಿಸುವಂತಾಗುತ್ತಿತ್ತು.ಇನ್ನು ಅವರ ಕವನ ಅರ್ಥೈಸುವುದೆಂದರೆ ಸಾಹಿತ್ಯ ಪಂಡಿತರೇ ಸರಿ.ನಿಮ್ಮಷ್ಟು ಸರಳವಾಗಿ ವಿವರಿಸಿರುವುನ್ನ ನಾನು ನೋಡಿಲ್ಲ.ಧನ್ಯವಾದಗಳು ಸಾರ್
ಧನ್ಯವಾದಗಳು, Unknownರೆ.
ವರ ಕವಿ ಬೇಂದ್ರೆ ಅವರಿಗೆ ನರಬಲಿ ಕೃತಿ ಗೆ ಬ್ರಿಟಿಷರು ಜೈಲು ಶಿಕ್ಷೆ ಕೊಟ್ಟು ಅವರು ಹೊರಬಂದಮೇಲೆ, ಗದುಗಿನ ನಾಡಗೀತೆ ಬರೆದ ಶ್ರೀ ಹುಯಿಲಗೋಳ ನಾರಾಯಣರಾವ್ ಅವರು ತಮ್ಮ ಗದುಗಿನ ವಿದ್ಯಾದಾನ ಸಮಿತಿ ಶಾಲೆಯಲ್ಲಿ ಕರೆದು ಅವರನ್ನು ಪ್ರಾಂಶುಪಾಲರನ್ನಾಗಿ ಮಾಡಿ ಸಹಾಯ ಮಾಡಿದರು
Post a Comment