Friday, December 21, 2012

"ಬರುವದೇನೆ ನೆಪ್ಪಿಗೆ".........................ಬೇಂದ್ರೆ



ಬರುವದೇನೆ ನೆಪ್ಪಿಗೆ
ನಮ್ಮ ನಿಮ್ಮ ಒಪ್ಪಿಗೆ
         ಎಲ್ಲೊ ಏನೊ ನೋಡಿದೆ
          ಹಾಗೆ ಬಂದು ಕೂಡಿದೆ.

                    ಬೆಳಕು ಬೆಂಕಿ ಬೆರೆತುಕೊಂಡು
                           ಭಾವವು ಹೊರದೂಡಿರೆ
                        ಬಾಳು ಮೊಳೆತು ಸುಗ್ಗಿ ನನೆತು
                               ಹೂವಿನಂತೆ ಮಾಡಿರೆ
                        ಆಹಾ ಚೆಲುವೆ ! ಎಂದು ಕುಣಿದೆ
                                ಮಿಕ್ಕ ಸಂಜೆ ಮಬ್ಬಿಗೆ
                        ಓಹೊ ಒಲವೆ ! ಎಂದು ಕರೆದೆ
                                 ಪಲ್ಲವಿಸಿದ ಹುಬ್ಬಿಗೆ.                                                           
ಅಂದು ಏನ ಬೇಡಿದೆ
ಏನ ನೆನಸಿ ಹಾಡಿದೆ
      ಬರುವದೇನೆ ನೆಪ್ಪಿಗೆ
       ಎದೆಗೆ ಎದೆಯ ಅಪ್ಪಿಗೆ.

ಬರುವದೇನೆ ನೆಪ್ಪಿಗೆ
ಕೂಡಿದೊಂದು ತಪ್ಪಿಗೆ
        ಏನೊ ಏನೊ ನೂತೆವು
         ಬದುಕಿನೆಳೆಗೆ ಜೋತೆವು

                        ಮೋಡದೊಂದು ನಾಡಿನಲ್ಲಿ
                                ಮಳೆಯ ಮಿಂಚು ಕಂಡೆವು
                        ಯಾವ ಫಲಕೆ ಇಳಿಯುತಿತ್ತೊ
                                 ಮಣ್ಣ ಬೀಜ ಉಂಡೆವು
                        ದುಃಖದೊಂದು ಶೂಲೆಯಲ್ಲಿ
                                  ನೋವಗೊಂಡು ತಿಣುಕಿದೆ
                        ಸುಖದ ತೊಟ್ಟು ತೊಟ್ಟಿಗಾಗಿ
                                   ಹತ್ತು ಕಡೆಗೆ ಹಣಿಕಿದೆ.

ಇಬ್ಬಗೆಗೂ ಸೋತೆವು
ಆಸರಾಗಿ ಆತೆವು
         ಬರುವದೇನೆ ನೆಪ್ಪಿಗೆ
          ಹೊರತಾದೆವು ಉಪ್ಪಿಗೆ.

ಬರುವದೇನೆ ನೆಪ್ಪಿಗೆ
ನಾವು ಬಿದ್ದ ಟೊಪ್ಪಿಗೆ
        ತಲೆಯ ತೆರೆದು ಬಂದಿತು
         ಎಚ್ಚರೆಚ್ಚರೆಂದಿತು.

                        ಯಾವ ಲೋಕದಿಂದಲಿಳಿದೊ
                                 ಹೊಸ ಸುಗಂಧ ಬೀರಿದೆ
                        ರಣೋತ್ಸಾಹ ಕಹಳೆಯಂತೆ
                                    ನವಚೇತನ ಊರಿದೆ
                        ಇಬ್ಬರನ್ನು ನೂಗಿಕೊಂಡು
                                    ಒಬ್ಬನಾಗಿ ಎದ್ದಿದೆ.
                        ಚಿತ್ತವೆಲ್ಲಿ ಎನುವಾಗಲೆ
                                ಕೊಡುವ ಮೊದಲೆ ಕದ್ದಿದೆ.

ಸಲ್ಲುವಲ್ಲಿ ಸಂದಿದೆ
ನಿಲ್ಲುವಲ್ಲಿ ನಿಂದಿದೆ
           ಬರುವದೇನೆ ನೆಪ್ಪಿಗೆ
             ಜೀವಜೀವದಪ್ಪಿಗೆ.
……………………………………………………………..
‘ಬರುವದೇನೆ ನೆಪ್ಪಿಗೆ’ ಕವನದಲ್ಲಿ ಬೇಂದ್ರೆಯವರು ತಮ್ಮ ಕೆಳದಿಯೊಡನೆ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ.  ಈ ನೆನಪುಗಳು ಮೂರು ಕಾಲಘಟ್ಟಗಳಲ್ಲಿ ಹಂಚಿಹೋಗಿವೆ. ಪ್ರತಿಯೊಂದು ಘಟ್ಟದ ಪ್ರಾರಂಭದಲ್ಲಿಯೂ ಬೇಂದ್ರೆಯವರು ತಮ್ಮ ಮಡದಿಗೆ ‘ಬಂದಿತೇನೆ ನೆನಪಿಗೆ?’ ಎಂದು ಕೇಳುತ್ತಿದ್ದಾರೆ.

ಗಂಡ-ಹೆಂಡತಿಯ ಮೊದಲ ನೆನಪು ತಮ್ಮ ಮದುವೆಯ ಸಮಯದ್ದೇ ಆಗಿರುತ್ತದೆಯಲ್ಲವೆ? ಬೇಂದ್ರೆಯವರು ತಮ್ಮ ಮಡದಿಗೆ ನೆನಪು ಮಾಡಿಕೊಡುವುದೂ ಅದನ್ನೇ!

“ಬರುವದೇನೆ ನೆಪ್ಪಿಗೆ
ನಮ್ಮ ನಿಮ್ಮ ಒಪ್ಪಿಗೆ
         ಎಲ್ಲೊ ಏನೊ ನೋಡಿದೆ
          ಹಾಗೆ ಬಂದು ಕೂಡಿದೆ.”

ಬೇಂದ್ರೆಯವರು ಮದುವೆಯಾದಾಗ ಅವರ ವಯಸ್ಸು ೨೩. ಅವರ ಹೆಂಡತಿಯ ವಯಸ್ಸು ೧೩ ! ಹಿರಿಯರೇ ಮದುವೆಯನ್ನು ನಿಶ್ಚಯಿಸುವ ಆ ಕಾಲದಲ್ಲಿ, ಮದುವೆಯಾಗುವ ಹುಡುಗನ ಹಾಗು ಹುಡುಗಿಯ ಒಪ್ಪಿಗೆಯನ್ನು ಕೇಳುವವರು ಯಾರು? ಅಂತೆಲೇ ಬೇಂದ್ರೆಯವರು ‘ನಮ್ಮ ನಿಮ್ಮ ಒಪ್ಪಿಗೆ’ ಎಂದು ವಿನೋದಿಸುತ್ತಾರೆ. ಅಂತಃಪಟವನ್ನು ಸರಿಸುವವರೆಗೂ ವಧುವರರು ಪರಸ್ಪರ ಮುಖವನ್ನು ಸಹ ನೋಡಿರುತ್ತಿರಲಿಲ್ಲ. ಆದುದರಿಂದಲೇ ಬೇಂದ್ರೆಯವರು ‘ಎಲ್ಲೊ ಏನೊ ನೋಡಿದೆ, ಹಾಗೆ ಬಂದು ಕೂಡಿದೆ’ ಎಂದು ಹೇಳುತ್ತಾರೆ. ತಮ್ಮ ಸಖೀಗೀತದಲ್ಲೂ ಸಹ, ಬೇಂದ್ರೆಯವರು ಈ ಪ್ರಸಂಗವನ್ನು “ಅಂತಃಪಟದಾಚೆ ವಿಧಿ ತಂದ ವಧು ನೀನು”  ಎಂದು ವರ್ಣಿಸಿದ್ದಾರೆ!

ಬೇಂದ್ರೆಯವರ ದಾಂಪತ್ಯಜೀವನ ಪ್ರಾರಂಭವಾಗುತ್ತದೆ. ದಾಂಪತ್ಯಧರ್ಮವನ್ನು ಅರಿತುಕೊಳ್ಳುವುದು ಬೆಳಕು. ದಂಪತಿಗಳಲ್ಲಿ ನೈಸರ್ಗಿಕವಾಗಿ ಜ್ವಲಿಸುತ್ತಿರುವುದು ಕಾಮದ ಬೆಂಕಿ. ಈ ಎರಡೂ ಸಮರಸವಾಗಿ ಬೆರೆತಿರಲು ದಂಪತಿಗಳ ಬದುಕು ಒಂದು ಹಬ್ಬ. ಇಂತಹ ಸಾಮರಸ್ಯದ ಬದುಕಿನಿಂದ ಮನದೊಳಗೆ ಭಾವೋದ್ದೀಪನವಾಗುತ್ತದೆ.
ತಮ್ಮ ‘ಸಖೀಗೀತ’ದಲ್ಲಿ ಬೇಂದ್ರೆಯವರು ಈ ತಾರುಣ್ಯದ ಹಬ್ಬವನ್ನು ಹೀಗೆ ವರ್ಣಿಸಿದ್ದಾರೆ:

“ಹಗಲೆಲ್ಲೊ ಹಾರಿದವು ಇರುಳೆಲ್ಲ ಜಾರಿದವು
ಋತು ನಿದ್ದೆಯಾಡಿದವು ಬುಗುರೆಯೊಲೆ”

ದಂಪತಿಗಳಲ್ಲಿ ಸಾಮರಸ್ಯ ಮೂಡಿದಾಗ ಬಾಳಿನಲ್ಲಿ ಉಲ್ಲಾಸ ಹಾಗು ಉತ್ಸಾಹ ಮೂಡುತ್ತವೆ.ಈ ಸಾಧನೆಯಾದಾಗ ಬಾಳು ಮೊಳೆಯುತ್ತದೆ. ಬಾಳಿನಲ್ಲಿ ಸುಗ್ಗಿ ಪ್ರವೇಶಿಸುತ್ತದೆ ಹಾಗು ಸುಖದ ಹೂವು ಅರಳುತ್ತದೆ. ಈ ಭಾಗವನ್ನು ಬೇಂದ್ರೆಯವರು ಹಾಡುವುದು ಹೀಗೆ:
                    ಬೆಳಕು ಬೆಂಕಿ ಬೆರೆತುಕೊಂಡು
                           ಭಾವವು ಹೊರದೂಡಿರೆ
                        ಬಾಳು ಮೊಳೆತು ಸುಗ್ಗಿ ನನೆತು
                               ಹೂವಿನಂತೆ ಮಾಡಿರೆ
                        ಆಹಾ ಚೆಲುವೆ ! ಎಂದು ಕುಣಿದೆ
                                ಮಿಕ್ಕ ಸಂಜೆ ಮಬ್ಬಿಗೆ
                        ಓಹೊ ಒಲವೆ ! ಎಂದು ಕರೆದೆ
                                 ಪಲ್ಲವಿಸಿದ ಹುಬ್ಬಿಗೆ.

ಈ ಕಾಲದಲ್ಲಿ ಗಂಡನ ಕಣ್ಣಿಗೆ ಹೆಂಡತಿ ಅಪ್ಸರೆಯೇ ಸೈ. ಅವಳ ಬೆಡಗು, ಬಿನ್ನಾಣ, ಅವಳ ಹುಬ್ಬಿನ ಕುಣಿತ ಅವನನ್ನು ಮರಳುಗೊಳಿಸುತ್ತವೆ. ಬೇಂದ್ರೆಯವರೂ ಇದಕ್ಕೆ ಹೊರತಾಗಿರಲಿಲ್ಲ.

(ಬೇಂದ್ರೆಯವರ ‘ಅಪರೂಪರಾಗ’ ಎನ್ನುವ ಕವನವು ಪ್ರಾರಂಭವಾಗುವುದೇ ‘ಆಹಾs ಚೆಲುವೆ’ ಎಂದು:
“ಆಹಾs ಚೆಲುವೆ, ಓಹೋs ಚೆಲುವೆ, ಏನುs ಚೆಲುವೆಯೋ
ನಿನ್ನ ನೀನೊ ಏನೊ ಏನೊ ನೋಡಿs ನಲಿವೆಯೋ”)

ತಾರುಣ್ಯದ ಈ ಮಬ್ಬು ಇಳಿದ ಬಳಿಕ, ದಂಪತಿಗಳು ತಾವು ಬಯಸಿದ್ದೇನು, ದೊರೆತದ್ದೇನು ಎಂದು ಯೋಚಿಸುತ್ತಾರೆ. ಬಯಸಿದ್ದೆಲ್ಲ ದೊರೆಯಲಿಕ್ಕಿಲ್ಲ. ಆದರೆ ಮೈಕಾವೇ ಅವರ ಮನಸ್ಸನ್ನೂ ಬೆಚ್ಚಗೆ ಮಾಡುತ್ತದೆ. ಅದೇ ಪರಸ್ಪರ ಪ್ರೀತಿಗೂ ಕಾರಣವಾಗುತ್ತದೆ. ಅದನ್ನು ಬೇಂದ್ರೆಯವರು ಹೇಳುವುದು ಹೀಗೆ:

ಅಂದು ಏನ ಬೇಡಿದೆ
ಏನ ನೆನಸಿ ಹಾಡಿದೆ
      ಬರುವದೇನೆ ನೆಪ್ಪಿಗೆ
       ಎದೆಗೆ ಎದೆಯ ಅಪ್ಪಿಗೆ.

ಬೇಂದ್ರೆ-ಬದುಕಿನ ಎರಡನೆಯ ಕಾಲಘಟ್ಟವು ೧೯೩೨ನೆಯ ಇಸವಿಯಿಂದ ಪ್ರಾರಂಭವಾಗುತ್ತದೆ ಎನ್ನಬಹುದು. ಬೇಂದ್ರೆಯವರು ಈಗಾಗಲೇ ಎರಡು ಗಂಡುಮಕ್ಕಳನ್ನು ಕಳೆದುಕೊಂಡಿದ್ದರು. ‘ನರಬಲಿ’ ಕವನವು ಅವರನ್ನು ಸೆರೆಮನೆಗೆ ಕಳಿಸಿತು. ೯ವರ್ಷಗಳವರೆಗೆ ಅಂದರೆ ೧೯೪೧ನೆಯ ಇಸವಿಯವರೆಗೆ ಅವರು ರಾಜಾಜ್ಞೆಯಿಂದಾಗಿ ಕೆಲಸವಿಲ್ಲದೆ ಅಲೆದಾಡಬೇಕಾಯಿತು. ಮದುವೆಯಾದದ್ದೇ ತಪ್ಪಾಯಿತೇನೊ ಎಂದು ಅವರಿಗೆ ಎನಿಸುವುದು ಸಹಜ. ಮಕ್ಕಳಾದದ್ದಂತೂ  ಮತ್ತೂ ದೊಡ್ಡ ತಪ್ಪು. ಇದೀಗ ಆ ತಪ್ಪಿನೊಡನೆ ಹೊಂದಿಕೊಂಡು ಹೋಗಲು ಏನೆಲ್ಲ ಕಸರತ್ತು ಮಾಡಬೇಕಲ್ಲವೆ? ಆದುದರಿಂದಲೇ ಬೇಂದ್ರೆಯವರು ತಮ್ಮ ಮಡದಿಗೆ ವಿಷಾದದಿಂದ ಹೇಳುತ್ತಾರೆ:

“ಬರುವದೇನೆ ನೆಪ್ಪಿಗೆ
ಕೂಡಿದೊಂದು ತಪ್ಪಿಗೆ
        ಏನೊ ಏನೊ ನೂತೆವು
         ಬದುಕಿನೆಳೆಗೆ ಜೋತೆವು”

‘ಏನೊ ಏನೊ ನೂತೆವು’ ಎಂದು ಹೇಳುವಾಗ ಬೇಂದ್ರೆಯವರು ಜೇಡರಹುಳದ ರೂಪಕವನ್ನು ಬಳಸುತ್ತಿದ್ದಾರೆ. ಬೇಂದ್ರೆ ದಂಪತಿಗಳು ತಾವೇ ಹೆಣೆದಂತಹ ಸಂಸಾರವೆನ್ನುವ ಬಲೆಯಲ್ಲಿ ಸಿಲುಕಿದ್ದಾರೆ!

ಮಕ್ಕಳ ಸಲುವಾಗಿಯಾದರೂ ಈ ದಂಪತಿಗಳು ಬದುಕಿನ ತೆಳು ಎಳೆಗೆ ಜೋತು ಬೀಳುವುದು ಅನಿವಾರ್ಯವಾಗಿತ್ತು.
ಧಾರವಾಡ ಬೇಂದ್ರೆಯವರನ್ನು ಹೊರಗೆ ಹಾಕಿತು. ಬೇಂದ್ರೆಯವರ ವಾಸ ಪುಣೆಯಲ್ಲಿ.
ಕಕ್ಕನ ಆಸರೆ ಹಾಗು ಹಿರಿಯಣ್ಣನಂತಹ ಮಾಸ್ತಿಯವರ ನೆರವಿನಿಂದ ಬದುಕನ್ನು ಸಾಗಿಸಿದರು. ಆಗ ಬೇಂದ್ರೆಯವರ ಪಾಲಿಗೆ ನಾಡೆಲ್ಲ ಮೋಡ ಕವಿದ ವಾತಾವರಣ, ಕಣ್ಣು ಹೊರಳಿಸಿದಲ್ಲೆಲ್ಲ ಕಾರುಕತ್ತಲೆ.

ಈ ಮಾತನ್ನು ಅವರು ವೈಯಕ್ತಿಕವಾಗಿ ಹಾಗೂ ರಾಜಕೀಯವಾಗಿ ಹೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ವೈಯಕ್ತಿಕವಾಗಿ ದೊರೆತ ನೆರವು ಅವರ ಪಾಲಿನ ಮಳೆಯ ಮಿಂಚು. ಏಕೆಂದರೆ ಈ ನೆರವು ಮಿಂಚಿನಂತೆ ಕ್ಷಣಿಕ ಹಾಗು ಅಲ್ಪ ಬೆಳಕನ್ನು ನೀಡುವಂತಹದು. ರಾಜಕೀಯವಾಗಿ ಹಾಗು ಸಾಮಾಜಿಕವಾಗಿ ಹೇಳುವದಾದರೆ, ಮಹಾತ್ಮಾ ಗಾಂಧಿ ಹಾಗು ಇತರ ದೇಶಭಕ್ತರು, ಮೋಡ ಕವಿದ ಭಾರತದಲ್ಲಿ ಮಿಂಚಿನಂತೆ ಬೆಳಕು ನೀಡುತ್ತಿದ್ದರು.

ಈ ಮಳೆ, ಈ ಮಿಂಚು ಬೇಂದ್ರೆ ಕುಟುಂಬಕ್ಕೆ ನೀಡಿದ ಫಲವೇನು? ‘ಮಣ್ಣಿನಲ್ಲಿ ಮಣ್ಣಾದ ಬೀಜ’ ಎಂದು ಬೇಂದ್ರೆ ಅದನ್ನು ವರ್ಣಿಸುತ್ತಾರೆ. ಅಂದರೆ ಅವರ ಹರಪ್ರಯತ್ನಗಳಿಗೆ ಯಾವ ಫಲವೂ ಸಿಗಲಿಲ್ಲ!
         ಮೋಡದೊಂದು ನಾಡಿನಲ್ಲಿ
                                ಮಳೆಯ ಮಿಂಚು ಕಂಡೆವು
                        ಯಾವ ಫಲಕೆ ಇಳಿಯುತಿತ್ತೊ
                                 ಮಣ್ಣ ಬೀಜ ಉಂಡೆವು
                        ದುಃಖದೊಂದು ಶೂಲೆಯಲ್ಲಿ
                                  ನೋವಗೊಂಡು ತಿಣುಕಿದೆ
                        ಸುಖದ ತೊಟ್ಟು ತೊಟ್ಟಿಗಾಗಿ
                                   ಹತ್ತು ಕಡೆಗೆ ಹಣಿಕಿದೆ.

ಕಕ್ಕನ ನೆರವಿನಿಂದ ಪುಣೆಯಲ್ಲಿ ಕನ್ನಡ ಎಮ್.ಏ. ಪದವಿಯನ್ನು ಪೂರೈಸಿದ ಬೇಂದ್ರೆಯವರು ಒಂದು ಒಳಸಂಚಿನಿಂದಾಗಿ ಮೂರನೆಯ ದರ್ಜೆಯಲ್ಲಿ ಪಾಸಾದರು. ಆದುದರಿಂದ ಕಾಲೇಜು ಉಪನ್ಯಾಸಕ ಪದವಿಯನ್ನು ಪಡೆಯಲು ಅನರ್ಹರಾದರು! ಹೀಗಾಗಿ ೧೯೪೧ರಲ್ಲಿ ಗದುಗಿನ ವಿದ್ಯಾದಾನ ಸಮಿತಿ ಹೈಸ್ಕೂಲಿಗೆ ಹೆಡ್ ಮಾಸ್ತರ ಎಂದು ಹೋದರು. ೧೯೪೨ರಲ್ಲಿ ಹುಬ್ಬಳ್ಳಿಯ ನ್ಯೂ ಇಂಗ್ಲಿಶ್ ಸ್ಕೂಲಿಗೆ ಶಿಕ್ಷಕರಾಗಿ ಬಂದರು. ಇದನ್ನೇ ಅವರು ‘ಸುಖದ ತೊಟ್ಟು ತೊಟ್ಟಿಗಾಗಿ ಹತ್ತು ಕಡೆಗೆ ಹಣಿಕಿದೆ’ ಎಂದು ಬಣ್ಣಿಸುತ್ತಾರೆ!

ಈ ರೀತಿಯಲ್ಲಿ ಬೇಂದ್ರೆ ದಂಪತಿಗಳು ಗೃಹಸ್ಥಜೀವನದ ಮೊದಲೆರಡು ಪುರುಷಾರ್ಥಗಳಾದ ಧರ್ಮ ಹಾಗು ಅರ್ಥ ಇವುಗಳನ್ನು ಸಂಚಯಿಸುವುದರಲ್ಲಿ ವಿಫಲರಾದರು. ಈ ವೈಫಲ್ಯದಲ್ಲಿ ಗಂಡಹೆಂಡಿರೇ ಒಬ್ಬರೊಬ್ಬರಿಗೆ ಆಸರೆಯನ್ನು ಕೊಡಬೇಕಲ್ಲವೆ? ವರಕವಿಗಳು ಈ ವೈಪಲ್ಯವನ್ನು, ಈ ಪರಸ್ಪರ ಆಲಂಬನವನ್ನು ವರ್ಣಿಸುವುದು ಹೀಗೆ:

ಇಬ್ಬಗೆಗೂ ಸೋತೆವು
ಆಸರಾಗಿ ಆತೆವು
         ಬರುವದೇನೆ ನೆಪ್ಪಿಗೆ
          ಹೊರತಾದೆವು ಉಪ್ಪಿಗೆ.
ಉಪ್ಪೂ ಸಹ ಸಿಗಲಾರದಂತಹ ಸಂಕಟಕಾಲದ ವರ್ಣನೆ ಇದು.

ಬೇಂದ್ರೆಯವರ ನೆನಪುಗಳ ಮೂರನೆಯ ಕಾಲಘಟ್ಟ ಈಗ ಪ್ರಾರಂಭವಾಗುತ್ತದೆ:
೧೯೪೩ರಲ್ಲಿ ಬೇಂದ್ರೆಯವರು ಪುದುಚೆರಿಯಲ್ಲಿ ಶ್ರೀಮಾತಾ ಹಾಗು ಅರವಿಂದರ ದರ್ಶನವನ್ನು ಪಡೆದರು. ೧೯೪೪ರಲ್ಲಿ ಮಹಾರಾಷ್ಟ್ರವು (ಸೊಲ್ಲಾಪುರದ ಡಿ.ಏ.ವ್ಹಿ. ಕಾಲೇಜು) ಇವರಿಗೆ ಕನ್ನಡ ಪ್ರಾಧ್ಯಾಪಕ ಹುದ್ದೆ ಕೊಟ್ಟು ಆದರಿಸಿತು.

ಇದು ಸ್ವಾತಂತ್ರ್ಯ ಚಳುವಳಿಯ ಮಹಾಕಾಲವೂ ಅಹುದು.ದೇಶಪ್ರೇಮಿಗಳೆಲ್ಲರೂ ‘ಗಾಂಧೀ ಟೊಪ್ಪಿಗೆ’ಯನ್ನು ತೊಡುತ್ತಿದ್ದ ಕಾಲ. ಬೇಂದ್ರೆಯವರು ಅದನ್ನು ಬಣ್ಣಿಸುವುದು ಹೀಗೆ:

ಬರುವದೇನೆ ನೆಪ್ಪಿಗೆ
ನಾವು ಬಿದ್ದ ಟೊಪ್ಪಿಗೆ
        ತಲೆಯ ತೆರೆದು ಬಂದಿತು
         ಎಚ್ಚರೆಚ್ಚರೆಂದಿತು.

ಟೊಪ್ಪಿಗೆ ಹಾಕಿಸಿಕೊಳ್ಳುವುದು ಅಂದರೆ ಮೋಸಹೋಗುವುದು ಎಂದರ್ಥ. ಬದುಕು ಬೇಂದ್ರೆ ದಂಪತಿಗಳನ್ನು ಮೋಸಗೊಳಿಸಿತು. ಆದರೆ, ಬೇಂದ್ರೆಯವರು ಮತ್ತೊಂದು ಟೊಪ್ಪಿಗೆಯನ್ನೂ ನೆನೆಸಿಕೊಳ್ಳುತ್ತಿದ್ದಾರೆ. ಅದು ಗಾಂಧೀ ಟೊಪ್ಪಿಗೆ. ಗಾಂಧೀ ಟೊಪ್ಪಿಗೆಯು ನಾಡಿನ ಜನರನ್ನು ಜಾಗೃತಗೊಳಿಸಿದ ಟೊಪ್ಪಿಗೆ. ಸಾಮಾನ್ಯ ಜನರಲ್ಲಿಯೂ ದೇಶಪ್ರೇಮವನ್ನು ಬಿತ್ತಿದ ಟೊಪ್ಪಿಗೆ. ಅನೇಕ ಜನ ಯುವಕರು ರಣೋತ್ಸಾಹದಿಂದ ಸ್ವಾತಂತ್ರ್ಯಯುದ್ಧದಲ್ಲಿ ಪಾಲ್ಗೊಳ್ಳಲು ಪ್ರೇರಣೆ ಕೊಟ್ಟ ಟೊಪ್ಪಿಗೆ. ಇದನ್ನು ಬೇಂದ್ರೆಯವರು ಹೇಳುವುದು ಹೀಗೆ:
        ಯಾವ ಲೋಕದಿಂದಲಿಳಿದೊ
                                 ಹೊಸ ಸುಗಂಧ ಬೀರಿದೆ
                        ರಣೋತ್ಸಾಹ ಕಹಳೆಯಂತೆ
                                    ನವಚೇತನ ಊರಿದೆ
ಇದರ ಪರಿಣಾಮವು ಬೇಂದ್ರೆ ದಂಪತಿಗಳ ಮೇಲೆಯೂ ಆಯಿತು. ದಂಪತಿಗಳ ಸಂಬಂಧವು ಇನ್ನಷ್ಟು ಬಲವಾಯಿತು.         

 ಇಬ್ಬರನ್ನು ನೂಗಿಕೊಂಡು
  ಒಬ್ಬನಾಗಿ ಎದ್ದಿದೆ.
              ಚಿತ್ತವೆಲ್ಲಿ ಎನುವಾಗಲೆ
              ಕೊಡುವ ಮೊದಲೆ ಕದ್ದಿದೆ.

ಬೇಂದ್ರೆಯವರು ತಮ್ಮ ಮತ್ತೊಂದು ಕವನದಲ್ಲಿ ‘ಕೊಡುವುದೇನು, ಕೊಂಬುವುದೇನು? ಒಲವು, ಸ್ನೇಹ, ಪ್ರೇಮ!’ ಎಂದಿದ್ದಾರೆ. ಈ ಅನುರಾಗ ಭಾವನೆಯನ್ನು ನಮಗರಿವಾಗದಂತೆಯೇ ಪರಸ್ಪರ ಕೊಟ್ಟುಕೊಂಡಿರುತ್ತೇವೆ.

ತಮ್ಮ ಬದುಕಿನಲ್ಲಿ ಬೇಂದ್ರೆ ದಂಪತಿಗಳು ಅನೇಕ ಸುಖ, ದುಃಖಗಳನ್ನು ಅನುಭವಿಸಿದರು. ಈ ಅನುಭವಗಳಿಂದ ಅವರಿಗೆ ದಕ್ಕಿದ ಕಾಣ್ಕೆ ಏನು?

ಸಲ್ಲುವಲ್ಲಿ ಸಂದಿದೆ
ನಿಲ್ಲುವಲ್ಲಿ ನಿಂದಿದೆ
           ಬರುವದೇನೆ ನೆಪ್ಪಿಗೆ
             ಜೀವಜೀವದಪ್ಪಿಗೆ.

‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ’ ಎಂದಿದ್ದಾರೆ ಬಸವಣ್ಣನವರು. ನಮ್ಮ ಮನಸ್ಸನ್ನು ಮಾಗಿಸುವುದೇ ಭಗವಂತನ ಇಚ್ಛೆ. ಈ ನೋವು, ನಲಿವಿನ ಅನುಭವಗಳಿಂದ ಬೇಂದ್ರೆ ದಂಪತಿಗಳ ಮನಸ್ಸು ಮಾಗಿದೆ. ಕಳೆದು ಹೋದ ದಿನಗಳ ಬಗೆಗೆ ಅವರಿಗೆ ಯಾವುದೇ ಸಂತಾಪವಿಲ್ಲ, ಅವರ ‘ತಾಪ’ವೆಲ್ಲ ‘ತಪಸ್ಸಾ’ಗಿ ಪರಿವರ್ತಿತವಾಗಿದೆ. ಅಂತೆಯೇ ಅವರು ‘ಸಲ್ಲುವಲ್ಲಿ ಸಂದಿದೆ, ನಿಲ್ಲುವಲ್ಲಿ ನಿಂದಿದೆ’ ಎಂದು ಅರಿತಿದ್ದಾರೆ.

ದಾಂಪತ್ಯಜೀವನದ ಮೊದಲಲ್ಲಿ,‘ಎದೆಗೆ ಎದೆಯ ಅಪ್ಪುಗೆ’ ಎಂದು ಹಾಡಿದ ಬೇಂದ್ರೆಯವರು, ತಮ್ಮ ಹಾಡಿನ ಕೊನೆಯಲ್ಲಿ ‘ಜೀವಜೀವದಪ್ಪಿಗೆ’ ಎನ್ನುತ್ತಾರೆ. ಇದು ದಂಪತಿಗಳ ಕಾಮವು ಪ್ರೇಮವಾಗಿ ಪರಿವರ್ತಿತವಾಗಿದ್ದನ್ನು ಹಾಗು ಅವರ ದಾಂಪತ್ಯದ ಸಫಲತೆಯನ್ನು ಸೂಚಿಸುತ್ತದೆ.

ಏಕಾಂತದಲ್ಲಿ ಜರಗುವ ನೆನಪುಗಳ ಇಂತಹ ಸಿಂಹಾವಲೋಕನದ ಉದ್ದೇಶವೇನು? ಹಳೆಯದನ್ನು ನೆನೆಸಿಕೊಂಡಾಗಲೇ ಬದುಕಿನ ಅರ್ಥವು ಹೊಳೆಯುತ್ತದೆ.ಇದನ್ನೇ ಬೇಂದ್ರೆಯವರು ತಮ್ಮ ‘ಸಖೀಗೀತ’ದಲ್ಲಿ ಹೀಗೆ ಹೇಳಿದ್ದಾರೆ:

“ಇರುಳು-ತಾರೆಗಳಂತೆ ಬೆಳಕೊಂದು ಮಿನುಗುವದು
ಕಳೆದ ದುಃಖಗಳಲ್ಲಿ ನೆನೆದಂತೆಯೆ
ಪಟ್ಟ ಪಾಡೆಲ್ಲವು ಹುಟ್ಟು-ಹಾಡಾಗುತ
ಹೊಸವಾಗಿ ರಸವಾಗಿ ಹರಿಯುತಿವೆ.”

ಬೇಂದ್ರೆಯವರು ಇರುಳತಾರೆಗಳ ಈ ಬೆಳಕನ್ನು, ಈ ಸರಸವಾದ ರಸವನ್ನು, ತಮಗೆ ಕಂಡ ಕಾಣ್ಕೆಯನ್ನು ಸಹೃದಯರೊಡನೆ ಹಂಚಿಕೊಳ್ಳಲು ಬಯಸುತ್ತಾರೆ. ಅವರು ಸಹೃದಯರನ್ನು ಆಹ್ವಾನಿಸುವುದು ಹೀಗೆ:

“ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ
ಕಲ್ಲು ಸಕ್ಕರೆಯಂಥ  ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ.”

ವರಕವಿಯ ಈ ಕರೆಗೆ ಕನ್ನಡಿಗರ ಹೃದಯ ಕರಗಬಹುದೆ?

22 comments:

ಜಲನಯನ said...

ವೈಹಾಹಿಕ ಸಾಮರಸ್ಯದ ಕವನ ವಿವರಣೆ:
ದಂಪತಿಗಳಲ್ಲಿ ಸಾಮರಸ್ಯ ಮೂಡಿದಾಗ ಬಾಳಿನಲ್ಲಿ ಉಲ್ಲಾಸ ಹಾಗು ಉತ್ಸಾಹ ಮೂಡುತ್ತವೆ.ಈ ಸಾಧನೆಯಾದಾಗ ಬಾಳು ಮೊಳೆಯುತ್ತದೆ. ಬಾಳಿನಲ್ಲಿ ಸುಗ್ಗಿ ಪ್ರವೇಶಿಸುತ್ತದೆ ಹಾಗು ಸುಖದ ಹೂವು ಅರಳುತ್ತದೆ.
ಎಂತಹ ಅನುಭವಾಮೃತಸಾರ..!!!
ಆಧಿನಿಕತೆಯ ಅಮಲಿನಲ್ಲಿರುವ ಇಮ್ದಿನ ಯುವತೆಗೆ ಬಹುಶಃ ಬೇಂದ್ರೆಯವರ ಕವನ ಸಾರವಾಗಿ
ಗಂಡನ ಕಣ್ಣಿಗೆ ಹೆಂಡತಿ ಅಪ್ಸರೆಯೇ ಸೈ. ಅವಳ ಬೆಡಗು, ಬಿನ್ನಾಣ, ಅವಳ ಹುಬ್ಬಿನ ಕುಣಿತ ಅವನನ್ನು ಮರಳುಗೊಳಿಸುತ್ತವೆ
ಈ ವಿವರಣೆ ....ತುಂಬಾ ಇಷ್ಟವಾಯಿತು.

ಪ್ರಬುದ್ಧ ಮತ್ತು ಅನುಭವಿ ಕವಿಯ ಲೇಖನಿಯಿಂದ ಎಂತೆಂತಹ ಕವನಗಳು..ಅವಕ್ಕೆ ನಿಮ್ಮ ಪೂರಕ ವಿವರಣೆ....ಸಲಾಂ ಸುನಾಥಣ್ಣ.

Swarna said...

ಕಾಕಾ,
ವರಕವಿಗೆ ಕರಗದ ಅಂತರಂಗ ಉಂಟೆ ?
'ಜೀವಜೀವದಪ್ಪಿಗೆ ' ದಾಂಪತ್ಯದ ಸುಂದರ ಸಫಲತೆ
ಸುಂದರ ವಿವರಣೆ

Ashok.V.Shetty, Kodlady said...

ಸುನಾಥ್ ಸರ್...

ಹದವಾಗಿ ಪಾಕಗೊಂಡ ರಸವತ್ತಾದ ಜೀವನ ಮೌಲ್ಯಗಳ ಮಿಶ್ರಣವನ್ನು ನಾವು ಬೇಂದ್ರೆಯವರ ಕವನಗಳಲ್ಲಿ ಕಾಣುತ್ತೇವೆ.... ಅವರ ಕವನ 'ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು, ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು ' ಸಂಸಾರ ದಲ್ಲಿನ ಸಾಮರಸ್ಯಕ್ಕೆ ಕೈಗನ್ನಡಿ ಯಂತಿದೆ.

ಬೇಂದ್ರೆಯವರ ಕವನಗಳನ್ನು ಅತೀ ಸರಳವಾಗಿ ಅರ್ಥಮಾಡಿಕೊಳ್ಳುವ ಹಾಗೆ ನೀವು ಮಾಡುವ ವಿಮರ್ಶೆ ಅಸಾಮಾನ್ಯವಾದುದು. ಹಾಲನ್ನು ಕಾಯಿಸಿ, ಹೆಪ್ಪು ಹಾಕಿ, ಕಡೆಗೋಲಿನಿಂದ ಕಡೆದು ಬೆಣ್ಣೆಯನ್ನು ತೆಗೆಯುವಂತೆ ನೀವು ಬೇಂದ್ರೆಯವರ ಕವನಗಳನ್ನು ವಿಮರ್ಶಿಸುತ್ತೀರಿ. ಧನ್ಯವಾದಗಳು ಸರ್....

vaishu said...

ಸಲ್ಲುವಲ್ಲಿ ಸಂದಿದೆ
ನಿಲ್ಲುವಲ್ಲಿ ನಿಂದಿದ
ಬರುವದೇನೆ ನೆಪ್ಪಿಗೆ
ಜೀವಜೀವದಪ್ಪಿಗೆ
ಬೇಂದ್ರೆಯವರ ಈ ಕವನವು ಕೂಡ ಅವರ ಇತರ ಕವನದಂತೆ ಆಪ್ತ.ನಿಮ್ಮ ಸುಂದರ ವಿವರಣೆ ಅದನಿನ್ನೂ ಅಪ್ತವಾಗಿಸಿತು.ಧನ್ಯವಾದಗಳು ಕಾಕಾ.:-)

Badarinath Palavalli said...

ಮೊದಲ ಚರಣದಲ್ಲೇ ಅಜ್ಜ ಒಲುಮೆಯ ಸಾಕ್ಷಾತ್ಕಾರ ತೋರಕೊಟ್ಟಿದ್ದಾರೆ.

ಕೂಡಿದೊಂದು ತಪ್ಪಿಗೆ ಎನ್ನುವಾಗ ನೊಗದ ಅನಿವಾರ್ಯತೆಯ ಅನಾವರಣ.

ತಮ್ಮಿಂದ ನಾನು ಕಲಿತ ಪ್ರಯೋಗವೆಂದರೆ ’ಕೆಳದಿ’.

ತಮ್ಮ ದಾಂಪತ್ಯ ಜೀವನವನ್ನು ವಿಶ್ಲೇಷಿಸುತ್ತಲೇ ಕವಿಯು ನಮ್ಮೆಲ್ಲರ ಪರಿಪಾಟಲನ್ನು ಸಮರ್ಥವಾಗಿ ಚಿತ್ರಿಸಿಕೊಟ್ಟಿದ್ದಾರೆ.

ನರಬಲಿ ಕವನವು ಅವರ ಬದುಕಲಿ ಮಾಡಿದ ಅವಾಂತರಗಳು ಅವ ಸಂಸಾರ ಜೀವನಕ್ಕೂ ಕೊಟ್ಟ ಪರಿಪಾಟಲೇ.

ಮಣ್ಣಿನಲ್ಲಿ ಮಣ್ಣಾದ ಬೀಜ’ ಬಹುಶಃ ಇದಕಿಂತ ಬದುಕಿನ ಸಾರವೇ ಇಲ್ಲವೇನೋ?

ಈ ಸಾಲಂತೂ ನನ್ನ ಬದುಕಿಗೂ ಅನ್ವಯಿಸುತ್ತದೆ, ಸುಖದ ತೊಟ್ಟು ತೊಟ್ಟಿಗಾಗಿ ಹತ್ತು ಕಡೆಗೆ ಹಣಿಕಿದೆ’!

ಕವಿಯ ಆಶಯದಂತೆ ಕಲ್ಲು ಕರಗುವ ಸಮಯವೂ ಬಂದೀತು. ಆದರೆ, ಮನುಜನ ಮನಸ್ಸು ಹದಗೊಳ್ಳುವ ಯಾವುದೇ ಮುನ್ಸೂಚನೆ ಇಲ್ಲಿಯವರೆಗೂ ಸಿಕ್ಕಿಲ್ಲ ಸಾರ್.

ಈ ಬರಹವನ್ನು ನಾನು ನನ್ನ ಫೇಸ್ ಬುಕ್ ಪುಟದಲ್ಲಿ ಹಂಚಿಕೊಳ್ಳುತ್ತೇನೆ. ಅನುಮತಿಸಿ.

sunaath said...

ಜಲನಯನ,
ತಮ್ಮ ಹೆಂಡತಿ ಹಾಗು ತಮ್ಮ ಜೀವನವು ಹಾಸುಹೊಕ್ಕಾಗಿದ್ದದ್ದನ್ನು ತಿಳಿದೇ ಬೇಂದ್ರೆಯವರು ತಮ್ಮ ಬಾಳಚರಿತ್ರೆಗೆ ‘ಸಖೀಗೀತ’ ಎಂದು ಹೆಸರಿಟ್ಟರು! Of course ಇದು ಎಲ್ಲ ದಂಪತಿಗಳಿಗೂ ಅನ್ಯಯಿಸುತ್ತದೆ!

sunaath said...

ಸ್ವರ್ಣಾ,
‘ಸುಖ ದುಃಖ ಸಂಗಮವಾದ ಹೃದ್ರಂಗವು ಪಾವನವೆಂಬೆನೆ ಯಾವಾಗಲೂ’--ಇದು ಬೇಂದ್ರೆ ದೃಷ್ಟಿ!

sunaath said...

ಅಶೋಕರೆ,
ಒಲವೆ ಸಂಪತ್ತಾದವರಿಗೆ, ಬೇರೆ ಸಂಪತ್ತು ಯಾಕೆ ಬೇಕು?
ಹಳೆಯ ಕನ್ನಡ ಸಿನೆಮಾ ಹಾಡೊಂದು ಈ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ:
‘ಪ್ರೀತಿಯೇ ಆ ದ್ಯಾವ್ರು ಕೊಟ್ಟಾ
ಒಡವೆ ನಮ್ಮಾ ಪಾಲಿಗೆ
ಹಸಿವಿನಲ್ಲೂ ಹಬ್ಬಾನೆ,
ದಿನವು ನಿತ್ಯ ಉಗಾದಿಯೇ!’

sunaath said...

ವೈಶು,
ಬೇಂದ್ರೆಯವರ ಕವನಗಳು ನಮ್ಮ ನಿಮ್ಮ ಕವನಗಳಂತೆ ಅನಿಸುತ್ತವೆ, ಅಲ್ಲವೆ? ಆಪ್ತತೆ ಅವರ ಕವನಗಳ ಒಂದು ಪ್ರಧಾನ ಲಕ್ಷಣವಾಗಿದೆ ಎನಿಸುತ್ತದೆ.

sunaath said...

ಬದರಿನಾಥರೆ,
ಕೆಳದಿ ಹಾಗು ಗೆಳತಿ ಪದಗಳ ಸಾಮ್ಯವನ್ನು ಗಮನಿಸಿ. ಗೆಳತಿಯೇ ಕೆಳದಿಯಾಗಬಹುದು. ಆದರೆ ಕೆಳದಿ ಗೆಳತಿಯಾಗುತ್ತಾಳೆ ಎನ್ನುವಂತಿಲ್ಲ!
ನನ್ನ ಯಾವುದೇ ಲೇಖನವನ್ನು ನಿಮಗೆ ಇಷ್ಟವಾದಂತೆ ನೀವು ಬಳಸಬಹುದು. ನಿಮಗೆ ನನ್ನ ಪೂರ್ವಾನುಮತಿ ಬೇಕಿಲ್ಲ!

ಗಿರೀಶ್.ಎಸ್ said...

ಬೇಂದ್ರೆ ಅವರ ಜೀವನಾಧಾರಿತ "ಗಂಗಾವತರಣ" ಎಂಬ ನಾಟಕವನ್ನು ಕೆಲ ದಿನಗಳ ಹಿಂದೆ ನೋಡಿದ್ದೆ .ಆ ನಾಟಕದಿಂದ ಅವರ ಬದುಕಿನ ಕೆಲವು ಘಟನೆಗಳು,ಸನ್ನಿವೇಶಗಳನ್ನು ಅರಿತಿದ್ದೆ...ಇನ್ನು ಈ ಲೇಖನದಲ್ಲಿ ಅವರ ವೈವಾಹಿಕ ಜೀವನದ ಬಗ್ಗೆ ತಿಳಿದಂತಾಯಿತು,ಹಾಗೆ ಅವರ ವೃತ್ತಿಯ ಬಗ್ಗೆ ಕೂಡ.

ಜೊತೆಗೆ ನೀವು ಇಷ್ಟು ಚೆಂದವಾಗಿ ವಿವರಣೆ ಕೊಡುವಾಗ ಮನ,ಹೃದಯ ಕರಗದೆ ಇರಲು ಸಾಧ್ಯವೇ?

ಮೌನ ವೀಣೆ said...

Nice written.

ಸಿಂಧು sindhu said...

ಕಾಕಾ,
"ವರಕವಿಯ ಈ ಕರೆಗೆ ಕನ್ನಡಿಗರ ಹೃದಯ ಕರಗಬಹುದೆ?.." ಕರಗದೆ ಇದ್ದರೆ ಅದು ಸಹೃದಯತೆಯೂ ಅಲ್ಲ, ಕನ್ನಡತನವೂ ಅಲ್ಲ.
ವರಕವಿಯ ಅಕ್ಷರಕಾವ್ಯ ಪುಸ್ತಕದೊಳಗಿಟ್ಟ ಸುಗಂಧದಂತಹುದು. ಅದನ್ನು ಒಂದೊಂದೇ ಬತ್ತಿಯಾಗಿ ಹೊರತೆಗೆದು ನಿಮ್ಮ ಅರ್ಥಗಾರಿಕೆಯ ಕಡ್ದಿ ಕೊರೆದು ಸಲ್ಲಾಪದ ಕರಡಿಗೆಯಲ್ಲಿ ಸಿಕ್ಕಿಸಿ ಇಂಥ ಅಪ್ಯಾಯ ಸುಗಂಧ ಬೀರಿದರೆ ಅದನ್ನು ಆಘ್ರಾಣಿಸದ ಮೂಗು ಮತ್ತು ಆ ಆಹ್ಲಾದ ಸವಿಯರಿಯದ ಮನಸ್ಸು ಎರಡೂ ಇದ್ದೂ ವ್ಯರ್ಥ.

ಕೆಲವು ತಿಂಗಳ ಹಿಂದೆ, ಕಿರಂ ಅವರ ಮತ್ತೆ ಮತ್ತೆ ಬೇಂದ್ರೆ ಓದುವಾಗ ಈ ಕವಿತೆಯ ಪರಿಚಯ ಮತ್ತು ಕೆಲವು ಸಾಲುಗಳು ನನ್ನ ಗಾಢವಾಗಿ ಕಾಡಿದವು. "ಬರುವದೇನೆ ನೆಪ್ಪಿಗೆ.. ಕೂಡಿದೊಂದು ತಪ್ಪಿಗೆ... ಏನೊ ಏನೊ ನೂತೆವು ... ಬದುಕಿನೆಳೆಗೆ ಜೋತೆವು
ನೀವು ನೋಡಿದರೆ ಇಲ್ಲಿ ಇಡೀ ಕವಿತೆಯನ್ನ ರಸಾಸ್ವಾದನೆಗೆ ನೀಡಿದ್ದೀರಿ.
ಒಂದೊಂದ್ಸಲ ಅನ್ನಿಸುತ್ತದೆ ಈ ಅದ್ಭುತ ಸಾಲುಗಳಿಗೆ ಮಾತಿನ ಫ್ರೇಮು ಹಾಕದೆ "ಆಹ್" ಎಂದು ಉದ್ಗರಿಸಿ ತಲೆಬಾಗಿದರೆ ಅಷ್ಟೆ ಗೌರವ ಎಂದು.

ಆದರೆ ದೂರದೂರಿನಲ್ಲಿ ಕೂತು ನಿಮ್ಮ ಪಾಕಕ್ಕೆ ಹದವಾದದ್ದನ್ನ ನಾವು ಓದುಪ್ರೀತಿಯ ಎಲ್ಲರಿಗೆ ಉಣಿಸುವ ನಿಮ್ಮ ಪ್ರಯತ್ನಕ್ಕೆ ನಾನಿಲ್ಲಿ ಪರದೆಯ ಮುಂದೆ ಉದ್ಗರಿಸಿದರೆ, ಕಣ್ಣಂಚು ಒದ್ದೆಯಾದರೆ ನಿಮಗೆ ತಲುಪಿಸುವುದು ಹೇಗೆ? ಹೀಗಾಗಿ ಈ ಸಾಲುಗಳ ಉದ್ಧಟತನ ಮಾಡುತ್ತೇನೆ. ಕಿರಿಯಳ ತಂಟೆಗೆ ನೀವು ಯಾವತ್ತು ಅಜ್ಜನ ಪ್ರೀತಿ ನೀಡಿದ್ದೀರಿ.
ಇನ್ನಷ್ಟು ಮತ್ತಷ್ಟು ಬೇಕು. ಬರೆಯಬೇಕು ನೀವು. ಓದಬೇಕು ನಾವು.
ಪ್ರೀತಿಯಿಂದ,ಸಿಂಧು

ಮಂಜುಳಾದೇವಿ said...

ಮನ ಮಿಡಿಯುವ ಕವನವನ್ನು ನಾನು ಅರ್ಥೈಸಿಕೊಡಿದ್ದು ನಿಮ್ಮ ವಿವರಣೆಯಿಂದಲೇ.ಇಲ್ಲದಿರೆ ಪ್ರಾಸವನ್ನು ಮೆಚ್ಚಿ ಸುಮ್ಮನಾಗುತ್ತಿದ್ದೆ ಎನ್ನಿಸುತ್ತದೆ.ನಿಮ್ಮಿಂದ ಬೇಂದ್ರೆಯವರನ್ನ ಮತ್ತು ಅವರ ಕವನಗಳನ್ನು ಅರಿಯುವ ಭಾಗ್ಯ ನಮ್ಮದು.ಧನ್ಯವಾದಗಳು ಸಾರ್.

sunaath said...

ಗಿರೀಶರೆ,
ಬೇಂದ್ರೆಯವರ ‘ಸಖೀಗೀತ’ ಖಂಡಕಾವ್ಯದಲ್ಲಿ ಹಾಗು ಅವರ ಇತರ ಕೌಟಂಬಿಕ ಕವನಗಳಲ್ಲಿ ಅವರ ಜೀವನದ ಕೆಲವು ವಿವರಗಳು ಲಭ್ಯವಾಗುತ್ತವೆ. ‘ಬೆಂದರೇ ಅದು ಬೇಂದ್ರೆ’ ಅಲ್ಲವೆ!

sunaath said...

ಮೌನವೀಣೆ,
ನಿಮಗೆ ಧನ್ಯವಾದಗಳು.

sunaath said...

ಸಿಂಧು,
ಧನ್ಯವಾದಗಳು ಎಂದಷ್ಟೇ ಹೇಳಬಲ್ಲೆ!

sunaath said...

ಮಂಜುಳಾದೇವಿಯವರೆ,
ಬೇಂದ್ರೆಯವರನ್ನು ಅರಿಯುವ ನನ್ನ ಪ್ರಯತ್ನದಲ್ಲಿ ನೀವೆಲ್ಲರೂ ಕೈಗೂಡಿಸುತ್ತಿದ್ದೀರಿ. ನಿಮಗೂ ನನ್ನ ಧನ್ಯವಾದಗಳು.

umesh desai said...

ಕಾಕಾ ಎಂಥಾ ಅದ್ಭುತ ವಿಶ್ಲೇಷಣೆ
ವರಕವಿಯ ಒಳಗನ್ನು ಹೊಕ್ಕಿ ಬಂದಂಗ ಆತು..

sunaath said...

ದೇಸಾಯರ,
ಇದು ವರಕವಿಯ ಅಂತರಂಗವನ್ನು ನೋಡುವ ಒಂದು ಪ್ರಯತ್ನ ಅಷ್ಟೇ! ಬೇಂದ್ರೆಯವರ ಕವನಗಳ ವಿವಿಧಾರ್ಥಗಳನ್ನು ಕಾಣುವುದು ಕಷ್ಟಸಾಧ್ಯ!

ಈಶ್ವರ said...

ಸುನಾಥ ಕಾಕಾ,
ಬೇಂದ್ರೆಯವರ ಒಂದೊಂದು ಕವನಕ್ಕೂ ಒಂದೊಂದು ಪುಸ್ತಕ ಮಾಡುವಷ್ಟು ಅರ್ಥ ವೈಶಾಲ್ಯತೆ ಇದೆ. ಅಬ್ಬಾ! ಆಳ, ವಿಸ್ತಾರ ಇರುವಂತಹ ಕವನಗಳ ಆಳಕ್ಕಿಳಿಸುತ್ತೀರಲ್ಲಾ ಅದೇ ನಮ್ಮ ಭಾಗ್ಯ. ಬೇಂದ್ರೆಯವರು ಇದನ್ನು ಓದುವಂತಿದ್ದರೆ ಎಷ್ಟು ಖುಷಿಪಡುತ್ತಿದ್ದರೋ ಏನೋ :)

ನಮಸ್ತೇ.

sunaath said...

ಬೇಂದ್ರೆಯವರು ಇದನ್ನು ಓದಿದ್ದರೆ, ಇದರಲ್ಲಿಯ ಎಷ್ಟು ತಪ್ಪುಗಳನ್ನು ತೋರಿಸುತ್ತಿದ್ದರೋ ಏನೊ!