Tuesday, April 30, 2013

`ಬದುಕು ಮಾಯೆಯ ಮಾಟ'.................ಬೇಂದ್ರೆ



ಬದುಕು ಮಾಯೆಯ ಮಾಟ
ಮಾತು ನೊರೆ-ತೆರೆಯಾಟ
ಜೀವಮಾನದ ತುಂಬ ಗುಂಭ ಮುನ್ನೀರು
ಕರುಣೋದಯದ ಕೂಡ
ಅರುಣೋದಯವು ಇರಲು
ಎದೆಯು ತುಂಬುತ್ತಲಿದೆ ಹೊಚ್ಚ ಹೊನ್ನೀರು.

ನಿಜದಲ್ಲೆ ಒಲವಿರಲಿ
ಚೆಲುವಿನಲಿ ನಲಿವಿರಲಿ
ಒಳಿತಿನಲೆ ಬಲವಿರಲಿ ಜೀವಕೆಳೆಯಾ
ದೇವ ಜೀವನಕೇಂದ್ರ
ಒಬ್ಬೊಬ್ಬನೂ ಇಂದ್ರ
ಏನಿದ್ದರೂ ಎಲ್ಲ ಎಲ್ಲೆ ತಿಳಿಯಾ.

ಆತನಾಕೆಯ ನಮ್ಮ
ಜೀವನೌಕೆಯ ತಮ್ಮ
ಧ್ರುವ ಮರೆಯದಂತೆ ನಡೆಸುತ್ತಲಿರಲಿ
ಈ ನಾನು ಆ ನೀನು
ಒಂದೆ ತಾನಿನ ತಾನು
ತಾಳಲಯ ರಾಗಗಳು ಸಹಜ ಬರಲಿ.

ಬೇಂದ್ರೆಯವರ ಕಾಲವು ಆದರ್ಶದ ಕಾಲ. ಆ ಕಾಲದ ತರುಣರಿಗೆ ತಿಲಕ, ಗಾಂಧೀಜಿ, ಸುಭಾಸಚಂದ್ರ ಬೋಸ ಮೊದಲಾದವರಿಂದ ರಾಜಕೀಯ ಹೋರಾಟದ ಕೆಚ್ಚು ಬಂದರೆ, ರವೀಂದ್ರನಾಥ ಠಾಕೂರ ಮೊದಲಾದವರಿಂದ ಭಾರತೀಯ ಸಾಹಿತ್ಯ ಹಾಗು ಕಲೆಗಳ ಬಗೆಗೆ ಆದರಾಭಿಮಾನಗಳು ಮೂಡಿದ್ದವು. ವಿವೇಕಾನಂದ, ಅರವಿಂದ ಹಾಗು ಅನೇಕ ಸಾಧು-ಸಂತರಿಂದ ಈ ಯುವಕರಿಗೆ ಆಧ್ಯಾತ್ಮದತ್ತ ಒಲವು ಮೂಡಿತ್ತು. ಇವೆಲ್ಲ ಪ್ರೇರಣೆಗಳು ಆ ಕಾಲದ ಅನೇಕ ಯುವಕರ ಮನೋಧರ್ಮವನ್ನು ರೂಪಿಸಿದ್ದವು. ಬೇಂದ್ರೆಯವರಂತೂ ಬಹುಶ್ರುತರು. ಅವರ ಆದರ್ಶವು ಸಾಂಸ್ಕೃತಿಕ ಹಿರಿಮೆಯಾಗಿತ್ತು ಹಾಗು ದೈವಶ್ರದ್ಧೆಯು ಅವರ ಆದರ್ಶದ ತಳಹದಿಯಾಗಿತ್ತು. ಬೇಂದ್ರೆಯವರ ‘ಗೆಳೆಯರ ಗುಂಪು’ ಈ ಎಲ್ಲ ಆದರ್ಶಗಳನ್ನು ಮೈಗೂಡಿಸಿಕೊಂಡ ಕೂಟವಾಗಿತ್ತು. ಈ ವೈಶಿಷ್ಟ್ಯಗಳನ್ನು ‘ಬದುಕು ಮಾಯೆಯ ಮಾಟ’ ಎನ್ನುವ ಅವರ ಕವನದಲ್ಲಿ ನೋಡಬಹುದು.

ಬೇಂದ್ರೆಯವರು ಸ್ನೇಹಜೀವಿಗಳು. ಅದರಲ್ಲೂ ‘ಮಧುರಚೆನ್ನ’ (ಹಲಸಂಗಿ ಚೆನ್ನಮಲ್ಲಪ್ಪ)ರಂತಹ ಆಧ್ಯಾತ್ಮಸಾಧಕ, ಸಾಹಿತಿ ಗೆಳೆಯರಂತೂ ಅವರಿಗೆ ಪ್ರಾಣಪ್ರಿಯರು. ಈ ಕವನವನ್ನು ಓದಿದಾಗ, ಬೇಂದ್ರೆಯವರು ಮಧುರಚೆನ್ನರೊಡನೆ ಸಂಭಾಷಿಸುತ್ತಿದ್ದಾರೇನೊ ಎನ್ನುವ ಭಾಸವು ಆಗುವುದು.

ಮೊದಲನೆಯ ನುಡಿಯಲ್ಲಿ ಬೇಂದ್ರೆಯವರು ಈ ಪ್ರಪಂಚವು ದೇವರ ಲೀಲೆ ಹಾಗು ನಮ್ಮ ಬದುಕು ದೇವಸೃಷ್ಟಿ ಎಂದು ಹೇಳುತ್ತಾರೆ. ಎರಡನೆಯ ನುಡಿಯಲ್ಲಿ ಬದುಕಿಗಿರಬೇಕಾದ ಧ್ಯೇಯಾದರ್ಶಗಳನ್ನು ಗುರುತಿಸುತ್ತಾರೆ. ಮೂರನೆಯ ನುಡಿಯಲ್ಲಿ ಸಾರ್ಥಕ ಬದುಕಿಗೆ ಬೇಕಾದ ದೈವೀಕೃಪೆಯನ್ನು ಆಶಿಸುತ್ತಾರೆ.

ಕವನದ ಮೊದಲ ಸಾಲು ಬದುಕನ್ನು ಮಾಯೆಯ ಮಾಟಕ್ಕೆ ಹೋಲಿಸುತ್ತದೆ. ‘ಮಾಯೆ’ ಎನ್ನುವುದು ಅನೇಕ ಅರ್ಥಗಳನ್ನು ಹೊಂದಿದ್ದು, ಬೇಂದ್ರೆಯವರು ಯಾವ ಅರ್ಥದಲ್ಲಿ ಈ ಪದವನ್ನು ಬಳಸಿದ್ದಾರೆ ಎನ್ನುವುದನ್ನು ಪರಿಶೀಲಿಸೋಣ.

ಆದಿ ಶಂಕರಾಚಾರ್ಯರು ಈ ಪ್ರಪಂಚವನ್ನು ‘ಮಾಯಾಕಲ್ಪಿತ ದೇಶಕಾಲಕಲನಾ’ ಎಂದು ಕರೆದಿದ್ದಾರೆ. ದೇಶ ಹಾಗು ಕಾಲ ಇವು ಸತ್ಯವಲ್ಲ; ಇದು ಮಿಥ್ಯಾಪ್ರಪಂಚ ಎಂದು ಶಂಕರಾಚಾರ್ಯರು ಹೇಳುತ್ತಾರೆ. (ಖ್ಯಾತ ವಿಜ್ಞಾನಿ ಅಲ್ಬರ್ಟ ಐನಸ್ಟೈನ್ ಸಹ space ಅರ್ಥಾತ್ ದೇಶ ಹಾಗು time ಅರ್ಥಾತ್ ಕಾಲ ಇವು ಸಾಪೇಕ್ಷ ಎಂದೇ ಹೇಳುತ್ತಾನೆ.  ಆದರೆ ಶಂಕರಾಚಾರ್ಯರದು ತಾತ್ವಿಕ ಸಿದ್ಧಾಂತ; ಐನಸ್ಟೈನನದು ಭೌತಿಕ ಸಿದ್ಧಾಂತ!)

‘ಮಾಟ’ ಪದವು ‘ಮಾಡು’ ಪದದಿಂದ ಬಂದಿದೆ. (ಉದಾಹರಣೆಗೆ ‘ಆಡು’....‘ಆಟ’; ‘ಕೂಡು’...‘ಕೂಟ’ ಇತ್ಯಾದಿ). ಈ ಸಮಸ್ತ ಪ್ರಪಂಚವನ್ನು ‘ಮಾಡಿ’ದವಳು ಮಾಯೆ. ಈ ಮಿಥ್ಯಾಪ್ರಪಂಚವನ್ನು ಸೃಷ್ಟಿಸುವ ‘ಇಚ್ಛಾಶಕ್ತಿ, ಜ್ಞಾನಶಕ್ತಿ ಹಾಗು ಕ್ರಿಯಾಶಕ್ತಿ’ ಇರುವುದು ಈ ಮಾಟಗಾತಿಯಲ್ಲಿ ಮಾತ್ರ!  ಆದುದರಿಂದ ಬದುಕು ಎನ್ನುವುದು ‘ಮಾಯೆಯ ಮಾಟ’ವಾಗಿದೆ.

ಮಾಟ ಎನ್ನುವ ಪದಕ್ಕೆ witchcraft ಎನ್ನುವ ಅರ್ಥವೂ ಇದೆ. ‘ಮಾಟಗಾತಿ’ ಎಂದರೆ  witch ಎನ್ನುವ ಅರ್ಥವೇ ಇದೆ. ಆದುದರಿಂದ ಮಾಟಗಾತಿಯು ತನ್ನ ಮನಸೋಇಚ್ಛೆ ಈ ಪ್ರಪಂಚವನ್ನು ಸೃಷ್ಟಿಸಬಲ್ಲಳು ಹಾಗು ವಿನಾಶ ಮಾಡಬಲ್ಲಳು. ಆದುದರಿಂದಲೂ ಈ ಬದುಕು ಆ ಮಾಯೆಯ ‘ಮಾಟ’ವಾಗಿದೆ. ಆಡುಮಾತಿನಲ್ಲಿ ಮಾಯೆ ಎಂದರೆ ಜಾದೂ ಎನ್ನುವ ಅರ್ಥವಿದೆ ಹಾಗು ಅದೃಶ್ಯವಾಗುವುದು ಎನ್ನುವ ಅರ್ಥವೂ ಇದೆ. ಇವೆಲ್ಲದರ ಒಟ್ಟರ್ಥವೆಂದರೆ ಮಾಯೆ ಎಂದರೆ magic.

‘ಮಾಟ’ ಎನ್ನುವ ಪದಕ್ಕೆ ಸುಂದರವಾದದ್ದು ಎನ್ನುವ ಅರ್ಥವೂ ಇದೆ. (ಉದಾಹರಣೆಗೆ: ‘ಮಾಟವಾದ ಗೊಂಬೆ’.) ಬೇಂದ್ರೆಯವರ ಈ ಕವನದಲ್ಲಿ ಬದುಕಿನ ಆದರ್ಶ ಹಾಗು ಉತ್ಸಾಹಗಳು ತುಂಬಿರುವುದರಿಂದ, ಮಾಟ ಎಂದರೆ ಸುಂದರ ಎನ್ನುವ ಅರ್ಥವೂ ಅನ್ವಯವಾಗುತ್ತದೆ.

ಶಂಕರಾಚಾರ್ಯರು ‘ಸೌಂದರ್ಯಲಹರಿ’ಯಲ್ಲಿ ‘ಈ ಸೃಷ್ಟಿಯೆಲ್ಲ ದೇವಿಯ ಅಭಿವ್ಯಕ್ತಿಯಾಗಿದೆ (ತ್ವಯಿ ಪರಿಣತಾಯಾಂ ನ ಹಿ ಪರಮ್)’ ಎನ್ನುತ್ತಾರೆ. ಅರವಿಂದರು ‘To be or to become something is the whole endeavor of the Nature' ಎಂದಿದ್ದಾರೆ. Nature ಎಂದರೆ ಪ್ರಕೃತಿಯೂ ಹೌದು, ಸ್ವಭಾವವೂ ಹೌದು. ಆದರೆ ಭಾರತೀಯ ದರ್ಶನಗಳು ದೇವರಿಗೆ ‘ಸ್ವಭಾವ’ ಇದೆ ಎಂದು ಗ್ರಹಿಸುವದಿಲ್ಲ. ದೇವರು ನಿರ್ವಿಕಲ್ಪನು; ಆತನನ್ನು ವಿಕಲ್ಪಕ್ಕೆ ಒಳಪಡಿಸುವುದೇ ಮಾಯೆ!

ಬಸವಣ್ಣನವರು ‘ಅಯ್ಯಾ,ನೀನು ನಿರಾಕಾರನಾಗಿರ್ದಲ್ಲಿ ನಾನು ಜ್ಞಾನವೆಂಬ ವಾಹನವಾಗಿರ್ದೆ ಕಾಣಾ; ಅಯ್ಯಾ, ನೀನು ನಾಟ್ಯಕ್ಕೆ ನಿಂದಲ್ಲಿ ನಾನು ಚೈತನ್ಯವೆಂಬ ವಾಹನವಾಗಿರ್ದೆ ಕಾಣಾ....’ ಎನ್ನುತ್ತಾರೆ. ಬಸವಣ್ಣನವರು ಹೇಳುವ ‘ವಾಹನ’ವು ದೇವನ ‘ಮಹಿಮೆ’ಯಾಗಿದ್ದು ಪ್ರಾಚೀನರು ಹೇಳುವ ಮಾಯೆಯೇ ಆಗಿದೆ.

ಸ್ವತಃ ಬೇಂದ್ರೆಯವರೇ ತಮ್ಮ ಮತ್ತೊಂದು ಕವನದಲ್ಲಿ ‘ಓ ತಾಯಿ, ಮಾಯಿ, ಶಿವಜಾಯಿ ಕಾಯಿ’ ಎನ್ನುವಾಗ ‘ಮಾಯಿ’ ಎನ್ನುವದನ್ನು ಅಂತಃಕರಣಪೂರಿತ ತಾಯಿ ಎನ್ನುವ ಅರ್ಥದಲ್ಲಿ ಬಳಸಿದ್ದಾರೆ. ‘ಬದುಕು ಮಾಯೆಯ ಮಾಟ’ ಎನ್ನುವಾಗ ಬೇಂದ್ರೆಯವರ ‘ಮಾಯೆ’ ಈ ಎಲ್ಲ ಅರ್ಥಗಳನ್ನು ಒಳಗೊಂಡಿದೆ.

ಬದುಕು ಮಾಯೆಯ ಸೃಷ್ಟಿ ಎಂದು ಹೇಳಿದ ನಂತರ, ಬೇಂದ್ರೆಯವರು ಈ ಸೃಷ್ಟಿಯ ಲಕ್ಷಣಗಳನ್ನು ಪರೀಕ್ಷಿಸುತ್ತಿದ್ದಾರೆ.   ಬದುಕು static ಅಲ್ಲ. ಇದಕ್ಕೆ ಅಂತರ್ಗತವಾದ ಚಲನೆ ಇದೆ, ವಿವಿಧರೂಪ ತಾಳಿದ ಜೀವಿಗಳಲ್ಲಿ ಅಬಾಧಿತ ಸಂಪರ್ಕವಿದೆ. ಅದನ್ನೇ ಬೇಂದ್ರೆಯವರು ‘ಮಾತು ನೆರೆ-ತೊರೆಯಾಟ’ ಎನ್ನುತ್ತಾರೆ. ಈ ಅಂತರ್-ಸಂಪರ್ಕ ಹಾಗು ಚಲನೆ ಇವೆಲ್ಲ ಸಮುದ್ರದ ನೊರೆ ಹಾಗು ತೆರೆ ಇದ್ದಂತೆ. ಸಮುದ್ರವು ಸಮುದ್ರವೆನಿಸುವುದೇ ತನ್ನ ತೆರೆಗಳಿಂದಾಗಿ. ಆದರೆ ಓರ್ವ ಜೀವಿಯ ಅಂತರಂಗದ ಬದುಕು ಈ ಮೇಲ್‍ಮೇಲಿನ ತೆರೆಗಳಿಗಿಂತ ತುಂಬ ಗಾಢವಾಗಿ, ಗಂಭೀರವಾಗಿ ಇರುತ್ತದೆ. ಮುನ್ನೀರು ಎಂದರೆ ಸಮುದ್ರ; ಗುಂಭ ಎಂದರೆ ಗಾಢವಾದದ್ದು. ಬದುಕು ಸಮುದ್ರದಂತೆ ಆಳವಾಗಿ ಇರುವದಾದರೂ, ಸಮುದ್ರದ ಮೇಲ್ಮೈಯಲ್ಲಿರುವ ತೆರೆಗಳಂತೆ, ಬದುಕಿನ ಮೇಲ್ಮೈಯಲ್ಲಿ ಸೃಷ್ಟಿಯ ಘಟನೆಗಳು ಜರಗುತ್ತಿರುತ್ತವೆ.

ಬೇಂದ್ರೆಯವರು ಸಮುದ್ರಕ್ಕೆ ‘ಮುನ್ನೀರು’ ಎನ್ನುವ ಪದವನ್ನು ಬಳಸಿದ್ದನ್ನು ಗಮನಿಸಬೇಕು. ಮಳೆನೀರು, ಒರತೆಯ ನೀರು ಹಾಗು ಹೊಳೆನೀರು ಸಂಗಮಿಸಿ ಸಮುದ್ರವಾಗಿರುತ್ತದೆ. ಆದುದರಿಂದ ಇದು ‘ಮೂರ್+ನೀರು’ = ಮುನ್ನೀರು. ಪ್ರತಿ ಜೀವಿಯ ವೈಯಕ್ತಿಕ ಬದುಕೂ ಸಹ ದೈವಕೃಪೆ, ಕರ್ಮಬಂಧನ ಹಾಗು ಸ್ವಪ್ರಯತ್ನಗಳಿಂದ ರೂಪಗೊಳ್ಳುತ್ತದೆ.

ಬದುಕು ಸಾರ್ಥಕವಾಗಲು ಎರಡು ಸಂಗತಿಗಳ ಅವಶ್ಯಕತೆ ಇದೆ. ಒಂದು ಕರುಣೋದಯ; ಎರಡನೆಯದು ಅರುಣೋದಯ. ಸಮಸ್ತ ಜೀವಿಗಳಲ್ಲಿ ಸ್ನೇಹಭಾವ ಬೆಳೆಯುವುದೇ ಕರುಣೋದಯ. ತನ್ನ ಬದುಕಿನಲ್ಲಿ ಭಗವಂತನ ಬೆಳಕು ಕಾಣುವುದೇ ಅರುಣೋದಯ! ಈ ಎರಡು ಸಾಧನೆಗಳಾದಾಗ ಮಾತ್ರ ‘ಎದೆಯು ತುಂಬುತ್ತಲಿದೆ ಹೊಚ್ಚ ಹೊನ್ನೀರು’. ಓರ್ವ ಜೀವಿಯು ಮೇಲಿನ ಸಾಧನೆಗಳಿಂದ ಪಕ್ವವಾದಾಗ ಮಾತ್ರ, ಆ ಜೀವಿಯ ಹಳೆಯ ಕೊಳೆಯಲ್ಲ ತೊಳೆದು ಹೋಗಿ, ಅವನ ಎದೆಯು ಅಂದರೆ ಅಂತರಂಗವು ಹೊಚ್ಚ ಹೊಸದಾದಂತಹ, ಆದುದರಿಂದ ಸ್ಫೂರ್ತಿದಾಯಕವಾದ ಹೊನ್ನೀರಿನಿಂದ ತುಂಬುವುದು. ಈ ಹೊಸ ಹೊನ್ನೀರು ಆ ಜೀವಿಗೆ ಹೊಸ ಬೆಳಕನ್ನು ತೋರುವುದರ ಮೂಲಕ ಸತ್‍ಪಥದಲ್ಲಿ ನಡೆಯಿಸುವುದು. (‘ಕರುಣಾಳು ಬಾ ಬೆಳಕೆ....ನೆನಪಾಗುವದಲ್ಲವೆ?)

ಆದಿ ಶಂಕರಾಚಾರ್ಯರ ‘ಸೌಂದರ್ಯಲಹರಿ’ಯಲ್ಲಿಯ ಸಾಲೊಂದನ್ನು ನೋಡಿರಿ:
‘ಜಗತ್ತ್ರಾತುಂ ಶಂಭೋರ್ಜಯತಿ ಕರುಣಾ ಕಾಚಿದರುಣಾ’
ಶಂಕರಾಚಾರ್ಯರು ದೇವಿಯನ್ನು ‘ಶಿವನ ಕರುಣೆ’ಗೆ ಹೋಲಿಸುತ್ತಾರೆ. ಈ ಕರುಣೆಯು ಅವ್ಯಾಜವಾಗಿರುವದರಿಂದ ಶ್ವೇತವರ್ಣದ್ದಾಗಿದೆ. ಶ್ವೇತವರ್ಣವು ನಿರ್ವಿಕಲ್ಪ ಸ್ಥಿತಿಯನ್ನೂ ಸೂಚಿಸುತ್ತದೆ. ಆದರೆ ಪ್ರಪಂಚವನ್ನು ಸೃಷ್ಟಿಸಲು ‘ರಾಗ’ಗಳ ಅವಶ್ಯಕತೆ ಇದೆ. ಆದುದರಿಂದ ದೇವಿಯು ಈ ಕರುಣಭಾವದಲ್ಲಿ ಕಿಂಚಿತ್ ಕೆಂಪು ಕೂಡಿದ ಅರುಣವರ್ಣದವಳಾಗಿದ್ದಾಳೆ! ಇದನ್ನೇ ಬೇಂದ್ರೆಯವರು ‘ಕರುಣೋದಯದ ಕೂಡ, ಅರುಣೋದಯವು ಇರಲು’ ಎಂದು ವರ್ಣಿಸುತ್ತಾರೆ. ಬೇಂದ್ರೆಯವರು ಓದಿದ್ದು, ಕೇಳಿದ್ದು ಎಲ್ಲವೂ, ಅವರ ಕಾವ್ಯಮೂಸೆಯಲ್ಲಿ ಮಾರ್ಪಾಡಾಗಿ ಒಂದಿಲ್ಲೊಂದು ರೂಪದಲ್ಲಿ ಕಾಣಿಸಿಕೊಳ್ಳುವದರ ಉದಾಹರಣೆ ಇದು.

ಬೇಂದ್ರೆಯವರ ಕವನಗಳಲ್ಲಿ ಕೆಲವೊಂದು ಪದಗಳು ಬೇರೆ ಬೇರೆ ರೂಪಗಳಲ್ಲಿ ಪುನರಾವರ್ತಿಸುತ್ತಿರುತ್ತವೆ. ಇಲ್ಲಿಯ ‘ಹೊನ್ನೀರು’ ಅವರ ‘ಹೃದಯ ಸಮುದ್ರ’ ಕವನದಲ್ಲಿ ‘ಬಂಗಾರ ನೀರ ಕಡಲಾಚೆಗೀಚೆಗಿದೆ’ ಆಗಿದೆ.

ಇಷ್ಟೆಲ್ಲದರ ಜೊತೆಗೆ, ಮತ್ತೂ ಒಂದು ಅರ್ಥವು ‘ಬದುಕು ಮಾಯೆಯ ಮಾಟ’ ಎನ್ನುವ ಹೇಳಿಕೆಯಲ್ಲಿ ಇದೆ.
ಶಂಕರಾಚಾರ್ಯರು ತಮ್ಮ ‘ದಕ್ಷಿಣಾಮೂರ್ತಿ ಸ್ತೋತ್ರ’ದಲ್ಲಿ ‘ಸ್ವಪ್ನೇ ಜಾಗೃತಿ ವಾ ಯ ಏಷ ಪುರುಷೋ ಮಾಯಾ ಪರಿಭ್ರಾಮಿತಃ’ ಎಂದು ಹೇಳುತ್ತಾರೆ, ಅಂದರೆ ನಮ್ಮ ಬದುಕು ಮಾಯೆ ಸೃಷ್ಟಿಸಿದ ಭ್ರಮೆ ಮಾತ್ರ!

ಮೊದಲ ನುಡಿಯಲ್ಲಿ ಬೇಂದ್ರೆಯವರು ಸೃಷ್ಟಿರಹಸ್ಯವನ್ನು ಹೇಳಿದರು. ಈ ದೈವೀಶಕ್ತಿಯ ಸಂತಾನವಾದ ನಾವು ಎಂತಹ ಬದುಕನ್ನು ಬದುಕಬೇಕು ಎನ್ನುವುದನ್ನು ಎರಡನೆಯ ನುಡಿಯಲ್ಲಿ ಹೇಳುತ್ತಿದ್ದಾರೆ:
ನಿಜದಲ್ಲೆ ಒಲವಿರಲಿ
ಚೆಲುವಿನಲಿ ನಲಿವಿರಲಿ
ಒಳಿತಿನಲೆ ಬಲವಿರಲಿ ಜೀವಕೆಳೆಯಾ

ಬದುಕಿನಲ್ಲಿ ವಂಚನೆ ಇರಬಾರದು. ನಮ್ಮದು ಸತ್ಯವಂತ ಜೀವನವಾಗಿರಬೇಕು. ಜೊತೆ ಜೊತೆಗೇ (ಎಲ್ಲರಲ್ಲೂ) ಪ್ರೀತಿ ಇರಬೇಕು. ನಾವು ಬದುಕುವ ರೀತಿಯಿಂದ ಬದುಕಿಗೆ ಒಂದು ಚೆಲುವು ಹಾಗು ಸಂತಸ ಬರಬೇಕು. ನಮ್ಮ ಒಳಿತು ದುರ್ಬಲರ ಒಳ್ಳೆಯತನ ಆಗಬಾರದು. (ಈ ಮಾತುಗಳು ಮಹಾತ್ಮಾ ಗಾಂಧೀಜಿಯವರ ಮಾತುಗಳೇ ಆಗಿವೆ.)

ನಿಜತೆ, ಒಲವು ಹಾಗು ಚೆಲುವು ಇವು ‘ಸತ್ಯಂ ಶಿವಂ ಸುಂದರಂ’ ಎನ್ನುವ ಆದರ್ಶವನ್ನೇ ಹೇಳುತ್ತವೆ. ಇದೇ ಅರ್ಥದ ಮತ್ತೊಂದು ಬೇಂದ್ರೆ-ಕವನ ಹೀಗಿದೆ:
‘ಸಿಂಹಮುಖಕ್ಕಿದೆ ನವಿಲಿನ ಸೋಗೆ
ಶಕ್ತಿ, ಶಾರದೆಯ ಮೇಳದ ಹಾಗೆ.’
ಬದುಕಿಗೆ ಶಾರದೆಯ ಸಂಸ್ಕೃತಿಯೂ ಬೇಕು; ಜೊತೆಗೇ ಕಾಳಿಯ ಶಕ್ತಿಯೂ ಬೇಕು!

ಬೇಂದ್ರೆಯವರು ಈ ಮಾತನ್ನೆಲ್ಲ ‘ಜೀವಕೆಳೆಯಾ’ ಅಂದರೆ ಪ್ರಾಣಸ್ನೇಹಿತನಿಗೆ ಸಂಬೋಧಿಸಿ ಹೇಳುತ್ತಿರುವುದನ್ನು ಗಮನಿಸಬೇಕು. ನಾವು ನಮ್ಮ ಆದರ್ಶಗಳನ್ನು, ನಮ್ಮ ಕನಸುಗಳನ್ನು ಹಂಚಿಕೊಳ್ಳುವುದು ಪ್ರಾಣಸ್ನೇಹಿತರ ಜೊತೆಗೇ ತಾನೆ? ಆದುದರಿಂದ ಇಲ್ಲಿ ಆ ತರಹದ ಸಂಬೋಧನೆ ಇದೆ. ಅಷ್ಟೇ ಅಲ್ಲ, ಬೇಂದ್ರೆಯವರ ಆದರ್ಶವು ಇಡೀ ಪ್ರಪಂಚವನ್ನೇ ಒಳಗೊಳ್ಳುವುದರಿಂದ (-‘ವಸುಧೈವ ಕುಟುಂಬಕಮ್’-) ಈ ಪ್ರಪಂಚದ ಸಮಸ್ತ ಜೀವಿಗಳು ಅವರಿಗೆ ‘ಜೀವಕೆಳೆಯರೇ’ ಆಗಿದ್ದಾರೆ!

‘ಸತ್ಯಂ ಶಿವಂ ಸುಂದರಮ್’ ಎನ್ನುವುದು ಬದುಕು ಹೇಗಿರಬೇಕು ಎನ್ನುವ ಸಾಂಸ್ಕೃತಿಕ ಆದರ್ಶವಾಯಿತು. ಆದರೆ ಇದಷ್ಟೇ ಬದುಕಿನ ಅಂತಿಮ ಗುರಿಯಾಗಲಾರದು. ಸಾಂಸ್ಕೃತಿಕ ಆದರ್ಶವು ಆಧ್ಯಾತ್ಮದತ್ತ ಕೈದೋರಬೇಕು. ಇದು ಬೇಂದ್ರೆಯವರ ಮುಂದಿನ ಕಾಣ್ಕೆಯಾಗಿದೆ:
ದೇವ ಜೀವನಕೇಂದ್ರ
ಒಬ್ಬೊಬ್ಬನೂ ಇಂದ್ರ
ಏನಿದ್ದರೂ ಎಲ್ಲ ಎಲ್ಲೆ ತಿಳಿಯಾ.

ನಮ್ಮ ಬದುಕು ಲೌಕಿಕ-ಕೇಂದ್ರಿತವಾಗಬಾರದು; ಆ ದೇವನೇ ಈ ಬದುಕಿನ ಕೇಂದ್ರ. ಪ್ರತಿ ಜೀವಿಯೂ ತನ್ನ ಬದುಕನ್ನು ತಾನೇ ಆಧ್ಯಾತ್ಮಿಕವಾಗಿ ರೂಪಿಸಿಕೊಳ್ಳುವ masterಆಗಬೇಕು; ಹಾಗು ಸಾಧನೆಯ ಉಚ್ಚ ಮಟ್ಟವನ್ನು ತಲುಪಿದರೂ ಸಹ ತನ್ನ ‘ಎಲ್ಲೆ’ಯನ್ನು ಅಂದರೆ ಸೀಮೆಯನ್ನು ತಿಳಿದುಕೊಳ್ಳಬೇಕು. ವಿಧಿವಿಲಾಸದ ಎದುರಿಗೆ ತಾನು ಅಲ್ಪ ಎನ್ನುವ ಸತ್ಯವನ್ನು ನಾವು ಅರಿಯಬೇಕು. ಈ ಸಂದರ್ಭದಲ್ಲಿ ಡಿ.ವಿ.ಜಿ.ಯವರ ‘ಬದುಕು ಜಟಕಾ ಬಂಡಿ, ವಿಧಿಯದರ ಸಾಹೇಬ...’ ಎನ್ನುವ ಸಾಲು ನೆನಪಾಗದೇ ಇರದು. ಒಬ್ಬೊಬ್ಬನೂ ಇಂದ್ರ ಎಂದಾಗ, ಪ್ರತಿ ಜೀವಿಯೂ ಇಂದ್ರಿಯ ಸುಖಗಳನ್ನು ಬಯಸುವವನೇ ಆಗಿರುತ್ತಾನೆ; ಆದರೆ ದೇವನೇ ಈ ಜೀವನದ ಕೇಂದ್ರವನ್ನಾಗಿ ಆತನು ಮಾಡಿಕೊಳ್ಳಬೇಕು ಎನ್ನುವ ಅರ್ಥವೂ ಇಲ್ಲಿದೆ.

ಮೊದಲ ನುಡಿಯಲ್ಲಿ ಬೇಂದ್ರೆಯವರು ‘ಮಾಯೆ ನಮಗೆ ಬದುಕನ್ನು ಕೊಟ್ಟವಳು’ ಎಂದು ಹೇಳಿದರು. ಎರಡನೆಯ ನುಡಿಯಲ್ಲಿ, ಬದುಕಿನಲ್ಲಿ ಪ್ರತಿ ಜೀವಿಯು ಸಾಧಿಸಬೇಕಾದ ಆದರ್ಶಗಳನ್ನು ಉಸುರಿದರು. ಕೊನೆಯ ನುಡಿಯಲ್ಲಿ ಈ ಸಾಧನೆಗೆ ಬೇಕಾದ ನೋಟ ಹಾಗು ಭಗವತ್‍ಕೃಪೆಯ ಅವಶ್ಯಕತೆಯ ಬಗೆಗೆ ಹೇಳುತ್ತಿದ್ದಾರೆ.
ಆತನಾಕೆಯ ನಮ್ಮ
ಜೀವನೌಕೆಯ ತಮ್ಮ
ಧ್ರುವ ಮರೆಯದಂತೆ ನಡೆಸುತ್ತಲಿರಲಿ

ಈ ಸೃಷ್ಟಿ ಸಾಧ್ಯವಾಗಬೇಕಾದರೆ ‘ಶಿವ’ ಹಾಗು ‘ಶಕ್ತಿ’ ಈರ್ವರೂ ಬೇಕು. ಈ ಮಾತನ್ನು emphasize ಮಾಡಲೆಂದೇ, ಬೇಂದ್ರೆಯವರು ‘ಆತನಾಕೆ’ ಎನ್ನುತ್ತಾರೆ. ಆತನ (ಶಿವನ) ಆಕೆಯು (ಶಕ್ತಿಯು) ನಮ್ಮ ಜೀವನನೌಕೆಯನ್ನು ನಡೆಯಿಸಲಿ ಎನ್ನುವುದು ಕವಿಯ ಅಪೇಕ್ಷೆ. ಹಳೆಯ ಕಾಲದ ನಾವಿಕರು ನೌಕಾಯಾನದಲ್ಲಿ ಗುರಿ ತಪ್ಪದಿರಲು, ಧ್ರುವ ನಕ್ಷತ್ರವನ್ನು ಗಮನದಲ್ಲಿ ಇಟ್ಟುಕೊಂಡಿರುತ್ತಿದ್ದರು. ಧ್ರುವನಕ್ಷತ್ರವು ಶಾಶ್ವತವಾದದ್ದು. ಅದರಂತ ತಮ್ಮ ಜೀವನನೌಕೆಯು ಅಂದರೆ ಪ್ರತಿಯೊಬ್ಬರ ಜೀವನನೌಕೆಯು ಶಾಶ್ವತವಾದದ್ದರ ಕಡೆಗೆ ಸಾಗಲಿ; ಆ ಗುರಿಯು ತಪ್ಪದಂತೆ ದೇವಿಯು ನಮ್ಮ ನೌಕೆಯನ್ನು ನಡೆಯಿಸಲಿ ಎಂದು ಕವಿಯು ಪ್ರಾರ್ಥಿಸುತ್ತಾರೆ. ‘ಶಿವ’ ಎಂದರೆ ಒಳಿತಾದದ್ದು. ಶಿವನೊಡನೆ ಶಕ್ತಿ ಕೂಡಿದಾಗ ಮಾತ್ರ ಬದುಕನ್ನು ಸರಿಯಾದ ಧ್ಯೇಯದೆಡೆಗೆ ಕೊಂಡೊಯ್ಯಬಹುದು.

ಬೇಂದ್ರೆಯವರ ನೌಕೆಯು ವಿಶ್ವನೌಕೆ. ಈ ನೌಕೆಯಲ್ಲಿ ಸಮಸ್ತ ಜೀವಿಗಳು ಪಯಣಿಸುತ್ತಿವೆ. ಆದುದರಿಂದ ಬೇಂದ್ರೆ ತಮ್ಮ ಸಹಪ್ರಯಾಣಿಕರಿಗೆ ಹೇಳುವುದು ಹೀಗೆ:
ಈ ನಾನು ಆ ನೀನು
ಒಂದೆ ತಾನಿನ ತಾನು
ತಾಳಲಯ ರಾಗಗಳು ಸಹಜ ಬರಲಿ.

ನೌಕೆಯ ಸಹಪ್ರಯಾಣಿಕರಲ್ಲಿ ಅಂದರೆ ಬದುಕಿನಲ್ಲಿ ನಮ್ಮ ಜೊತೆಯಲ್ಲಿದ್ದವರಲ್ಲಿ ಸಾಮರಸ್ಯ ಇರಬೇಕು. ಹಾಗಾದಾಗ, ‘ನಾನು’, ‘ನೀನು’ ಅಳಿಸಿ ಹೋಗಿ ನಾವು ‘ತಾನು’ ಆಗುತ್ತೇವೆ. ಭಗವಂತನ ತಾನಿನ (=ಸಂಗೀತದ) ತಾನು (=ಸಂಗೀತ) ಆಗುತ್ತೇವೆ. ಮತ್ತೊಂದು ಅರ್ಥವೆಂದರೆ ತಾನು ಎಂದರೆ self ಅರ್ಥಾತ್ ಭಗವಂತನೇ ಆಗುತ್ತೇವೆ. ಹಿತಮಯವಾದ ಬದುಕಿಗೆ ಬೇಕಾದ ತಾಳ, ಲಯ ಹಾಗು ರಾಗಗಳು ‘ಸಹಜ’ವಾಗಿ ಬರಲಿ ಎಂದರೆ ಅವುಗಳಲ್ಲಿ ಸೃಷ್ಟಿಗೆ ಅಸಹಜವಾದದ್ದು (unnatural ಆದದ್ದು), ಆ ಕಾರಣದಿಂದ ವಿಕಾರವಾದದ್ದು ಬರದಿರಲಿರಲಿ ಎಂದು ಕವಿ ಆಶಿಸುತ್ತಾರೆ.

‘ಬದುಕು ಮಾಯೆಯ ಮಾಟ’ ಕವನವು ಕವಿಯ ತಾತ್ವಿಕ ತಿಳಿವು ಹಾಗು ಅವನ ಕನಸುಗಳ ಅಭಿವ್ಯಕ್ತಿಯಾಗಿ ಒಡಮೂಡಿದೆ. ಕೇವಲ ಮೂರು ನುಡಿಗಳ ಸರಳ ಕವನದಲ್ಲಿ ಬೇಂದ್ರೆಯವರು ವಿಶ್ವವ್ಯಾಪಿಯಾದ ಜೀವನದರ್ಶನವನ್ನು ಕಾಣಿಸಿದ್ದಾರೆ.
ಬೇಂದ್ರೆಯವರು ಈ ಕವನದಲ್ಲಿ ಬಳಸಿದ ‘ನಾನು’, ‘ನೀನು’ ಹಾಗು ‘ತಾನು’ ಇವು ಅವರ ‘ನಾಕು ತಂತಿ’ ಕವನದಲ್ಲಿ ಪುನರಾವರ್ತಿಸಿವೆ. ಇದು ಅವರ ಜೀವನದೃಷ್ಟಿಯೇ ಆಗಿದೆ.

‘ಬದುಕು ಮಾಯೆಯ ಮಾಟ’ ಕವನವು ‘ಗಂಗಾವತರಣ’ ಕವನಸಂಕಲನದಲ್ಲಿ ಅಡಕವಾಗಿದೆ.

Sunday, April 21, 2013

ನ್ಯಾಯವಿವೇಚನೆ-೩



ನಮ್ಮ ದೇಶದಲ್ಲಿ ಶಾಸನವು ‘ಬಹುತೇಕವಾಗಿ’ ಧರ್ಮನಿರಪೇಕ್ಷವಾಗಿದೆ ಹಾಗು ನ್ಯಾಯದಾನವು ನೂರಕ್ಕೆ ನೂರರಷ್ಟು
ಧರ್ಮನಿರಪೇಕ್ಷವಾಗಿದೆ. (‘ಬಹುತೇಕ’ ಎನ್ನುವುದರ ಉದಾಹರಣೆಯನ್ನು ಮುಂದೆ ಕೊಡಲಾಗಿದೆ.) ನಮ್ಮ ಉಚ್ಚ ನ್ಯಾಯಾಲಯಗಳ ಹಾಗು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು (ಕೆಲವೊಂದು ಅಪವಾದಗಳ ಹೊರತಾಗಿ) ಉನ್ನತ ಸ್ತರದ ನ್ಯಾಯಮೂರ್ತಿಗಳಾಗಿದ್ದಾರೆ. ಆದುದರಿಂದ ಭಾರತದೇಶದಲ್ಲಿ ಸರ್ವರಿಗೂ ಸರ್ವಕಾಲಕ್ಕೂ ಉಚಿತ ನ್ಯಾಯವು ದೊರೆಯುತ್ತದೆ ಎಂದು ನಾವು ಭಾವಿಸಿದರೆ ತಪ್ಪಿಲ್ಲ. ಆದರೆ ವಸ್ತುಸ್ಥಿತಿ ಹೀಗಿಲ್ಲ. ಈ ಅನ್ಯಾಯದ ಕಾರಣವನ್ನು ಶೋಧಿಸಿದರೆ ಮೊದಲು ಕಾಣುವವರು ನ್ಯಾಯವಾದಿಗಳು; ಎರಡನೆಯದಾಗಿ ನಮ್ಮ ಶಾಸಕರು. ಎಲ್ಲ ನ್ಯಾಯವಾದಿಗಳು ಹಾಗು ಎಲ್ಲ ಶಾಸಕರು ಅನ್ಯಾಯಕ್ಕೆ ಕಾರಣರಾಗಿದ್ದಾರೆ ಎಂದು ಇದರರ್ಥವಲ್ಲ. ಇದು ಸಾರ್ವತ್ರಿಕ ವಾಸ್ತವವಲ್ಲ ಎಂದು ನಾನು ಮೊದಲೇ ಸ್ಪಷ್ಟೀಕರಿಸುತ್ತೇನೆ.

ತನ್ನ ಕಕ್ಷಿದಾರನ ಹಿತವನ್ನು ಕಾಪಾಡುವುದು ನ್ಯಾಯವಾದಿಯ ಕರ್ತವ್ಯವಾಗಿದೆ. ಆದರೆ ಎದುರುಪಕ್ಷದವನಿಗೆ ಅನ್ಯಾಯ ಮಾಡಿ ಇದನ್ನು ಸಾಧಿಸುವುದು ತಪ್ಪಲ್ಲವೆ? ಈ ಉದಾಹರಣೆಯನ್ನು ನೋಡಿರಿ:
ಧಾರವಾಡದ ವತನದಾರ ಗೃಹಸ್ಥನೊಬ್ಬನು ಕುತ್ತಿಗೆಯವರೆಗೆ ಸಾಲ ಮಾಡಿದ್ದ. ಸಾಲ ಕೊಟ್ಟವರು ಸುಮ್ಮನಿರುತ್ತಾರೆಯೆ? ‘ನಿನ್ನ ಜಮೀನು ಮಾರಿ ಸಾಲ ತೀರಿಸು’ ಎಂದು ಗಂಟು ಬಿದ್ದರು. ಈ ಭೂಪ ಅವರ ಸಾಲ ಮುಳುಗಿಸಲು ವಕೀಲರೊಬ್ಬರ ಸಲಹೆ ಕೇಳಿದ. ಆ ವಕೀಲರು ಇಂತಹ ಪ್ರಕರಣಗಳಲ್ಲಿ ಎತ್ತಿದ ಕೈ. ಆ ಗೃಹಸ್ಥನ ಹೆಂಡತಿ ಹಾಗು ಮಕ್ಕಳಿಂದ ಅವನ ಮೇಲೆ ದಾವೆ ಹೂಡಿಸಿ, ಎಲ್ಲ ಆಸ್ತಿಯನ್ನು ಹೆಂಡತಿ-ಮಕ್ಕಳ ಹೆಸರಿಗೆ ವರ್ಗಾಯಿಸಿ, ಇವನಿಗೆ pauper ಚೀಟಿ ಕೊಡಿಸಿದರು. ಇವನ ಆಸ್ತಿ ಇವನಿಗೆ ಉಳಿಯಿತು; ಸಾಲ ಕೊಟ್ಟವರು ಮುಳುಗಿದರು!

ಕಕ್ಷಿದಾರನ ಹಿತವೇ ವಕೀಲನ ಪರಮೋಚ್ಚ ಉದ್ದೇಶವೆನ್ನುವ ವಿತಂಡವಾದದ ಮೂಲಕ ನ್ಯಾಯವಾದಿಗಳು ಈ ಅನ್ಯಾಯವನ್ನು ಸಮರ್ಥಿಸಿಯಾರು. ಆದರೆ ತನ್ನದೇ ಕಕ್ಷಿದಾರರ ಕುತ್ತಿಗೆಯನ್ನು ಕೊಯ್ಯುವ ವಕೀಲರಿಗೆ ಏನೆನ್ನಬೇಕು?

ಇಂಗ್ಲೆಂಡಿನಲ್ಲಿ ಡಾ^ಕ್ಟರ್ ಎಂದು ಕೆಲಸ ಮಾಡುತ್ತಿದ್ದ ಓರ್ವ ಮಹನೀಯನು ಧಾರವಾಡದ ಓರ್ವ ಮುಗ್ಧ ಕನ್ಯೆಯನ್ನು ಮದುವೆಯಾಗಿ, ಇಂಗ್ಲೆಂಡಿಗೆ ಕರೆದುಕೊಂಡು ಹೋದ. ಆ ಮಹಿಳೆಗೆ ಒಂದು ಮಗುವೂ ಆಯಿತು. ಆಬಳಿಕ ಅವಳನ್ನು ಧಾರವಾಡಕ್ಕೆ ಮರಳಿ ಕರೆ ತಂದು ಅವಳ ತಂದೆಯ ಮನೆಯಲ್ಲಿಯೇ ಬಿಟ್ಟು ಈತ ಇಂಗ್ಲಂಡಿಗೆ ಓಡಿ ಹೋದ. (ಹೋಗುವಾಗ, ಅವಳ ತವರುಮನೆಯವರು ಮದುವೆಯಲ್ಲಿ ಕೊಟ್ಟಿದ್ದ ಚಿನ್ನವನ್ನೂ ಸಹ ತೆಗೆದುಕೊಂಡೇ ಹೋದ!) ಅಲ್ಲಿಂದಲೇ ಆಕೆಗೆ ವಿವಾಹ ವಿಚ್ಛೇದನ ಕೊಡಲು ಆತ ಇಂಗ್ಲೆಂಡ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ. ಆದರೆ ಇಂಗ್ಲೆಂಡಿನ ನ್ಯಾಯಾಲಯದಲ್ಲಿ ಅವನ ಅರ್ಜಿ ತಿರಸ್ಕೃತವಾದದ್ದರಿಂದ ಧಾರವಾಡದಲ್ಲಿಯ ನ್ಯಾಯಾಲಯದಲ್ಲಿಯೇ ವಿಚ್ಛೇದನಕ್ಕಾಗಿ ದಾವೆ ಮಾಡಬೇಕಾಯಿತು. ಇಲ್ಲಿಯೂ ಸಹ ಅವನ ದಾವೆ ತಿರಸ್ಕೃತವಾಯಿತು. ಅಷ್ಟೇ ಅಲ್ಲದೆ, ಅವನ ಹೆಂಡತಿಗೆ ಅವನು ತಾತ್ಪೂರ್ತಿಕವಾಗಿ ಮಾಸಿಕ ನಿರ್ವಹಣಾ ಮೊತ್ತವನ್ನು ಕೊಡಬೇಕೆಂದೂ ಸಹ ನ್ಯಾಯಾಲಯವು ಆದೇಶ ನೀಡಿತು. ಹಟಕ್ಕೆ ಬಿದ್ದ ಆತ, ಕರ್ನಾಟಕದ ಉಚ್ಚ ನ್ಯಾಯಾಲಯಕ್ಕೆ ಅಪೀಲು ಮಾಡಿದ. ಈ ಮಧ್ಯೆ ಆತನು ಮಾಸಿಕ ನಿರ್ವಹಣಾ ಮೊತ್ತವನ್ನು ಕೊಡದೇ ಇದ್ದುದರಿಂದ, ಅನೇಕ ವರ್ಷಗಳವರೆಗೆ ಕೂಡಿ ಬಿದ್ದ ಮೊತ್ತವೇ ಸುಮಾರು ಮೂರೂವರೆ ಲಕ್ಷ ರೂಪಾಯಿಗಳಷ್ಟು ಆಗಿತ್ತು. ಈ ಮಹಿಳೆಯ ಪರವಾಗಿ ಉಚ್ಚ ನ್ಯಾಯಾಲಯದಲ್ಲಿ ವಾದ ಮಾಡುತ್ತಿದ್ದ ನ್ಯಾಯವಾದಿಯು, ‘ತಾನು ವಿಚ್ಛೇದನ ದಾವೆಯ ಬಗೆಗಷ್ಟೇ ವಾದ ಮಾಡುತ್ತೇನೆ; ಆದುದರಿಂದ ಬಾಕಿ ವಸೂಲಿಗಾಗಿ ಬೇರೊಬ್ಬ ವಕೀಲನನ್ನು ನಿಯಮಿಸಿಕೊಳ್ಳಿ’ ಎಂದು ಹೇಳಿ, ಬೇರೊಬ್ಬ ವಕೀಲನನ್ನು ತಾನೇ ಗೊತ್ತು ಮಾಡಿ ಕೊಟ್ಟ. ಈ ಬೇರೊಬ್ಬ ವಕೀಲನು ತನ್ನ ಕಕ್ಷಿದಾರಳಿಂದ ತನ್ನ ವಕೀಲಿ ಫೀ ಅನ್ನು ಮುಂಗಡವಾಗಿ ವಸೂಲಿ ಮಾಡಿಕೊಂಡದ್ದಲ್ಲದೇ, ಎದುರಾಳಿಗಳೊಡನೆ ಮಿಲಾಪಿಯಾಗಿ ಬಿಟ್ಟ ಹಾಗು ಈ ಹೆಣ್ಣುಮಗಳಿಗೆ ಬರಬೇಕಾದ ಬಾಕಿಯನ್ನು ಕೊಡಿಸಲೇ ಇಲ್ಲ! ಆ ಅಸಹಾಯಕ ಹೆಣ್ಣುಮಗಳು ‘ತನ್ನ ಹಣೆಬರಹ’ ಎಂದುಕೊಂಡು ಸುಮ್ಮನಾದಳು.

ನ್ಯಾಯವಾದಿಗಳು ತಮ್ಮ ಕಕ್ಷಿದಾರರ ಸಲುವಾಗಿ, ಸತ್ಯವನ್ನು ಸುಳ್ಳು ಮಾಡಬಹುದು ಹಾಗು ಸುಳ್ಳನ್ನೇ ಸತ್ಯವನ್ನಾಗಿ ತಿರುಚಬಹುದು. ಆದರೆ ರಾಜಕೀಯ ಕಾರಣಗಳಿಗಾಗಿ, ನಮ್ಮ ಶಾಸಕರೇ ನಿಸ್ಸಹಾಯಕ ಮಹಿಳೆಯ ಮೇಲೆ ಗದಾಪ್ರಹಾರ ಮಾಡಿದರೆ, ಏನೆನ್ನಬೇಕು? ಮಧ್ಯಪ್ರದೇಶದ ಇಂದೂರಿನಲ್ಲಿದ್ದ ಶಾಹ ಬಾನೊ ಎನ್ನುವ ೬೨ ವರ್ಷದ ವೃದ್ಧೆಯೊಬ್ಬಳ ಪ್ರಖ್ಯಾತ ಪ್ರಕರಣವನ್ನು ನೋಡಿ: ಅವಳ ಗಂಡನು ಅವಳಿಗೆ ತಲಾಕ್ ಕೊಟ್ಟ. ಅವಳು ತನ್ನ ಹಾಗು ತನ್ನ ಮಕ್ಕಳ ಜೀವನನಿರ್ವಹಣೆಗಾಗಿ ನ್ಯಾಯಾಲಯಕ್ಕೆ ಮೊರೆ ಹೋಗಬೇಕಾಯಿತು.  ೭ ವರ್ಷಗಳ ಹೋರಾಟದ ನಂತರ ಸರ್ವೋಚ್ಚ ನ್ಯಾಯಾಲಯವು ‘ಕ್ರಿಮಿನಲ್ ಸಂಹಿತೆಯ ೧೨೫ನೆಯ ಸೆಕ್ಶನ್ನಿ’ನ ಆಧಾರದ ಮೇಲೆ ಅವಳಿಗೆ ಜೀವನನಿರ್ವಹಣೆಯನ್ನು ಕೊಡಿಸುವ ಆದೇಶ ನೀಡಿತು (೨೩-೪-೧೯೮೫). ರಾಜಕೀಯ ಕಾರಣಗಳಿಗಾಗಿ ೧೯೮೬ರಲ್ಲಿ ರಾಜೀವ ಗಾಂಧಿಯವರ ನೇತೃತ್ವದ ಲೋಕಸಭೆಯು ಒಂದು ಹೊಸ ಶಾಸನವನ್ನು ರೂಪಿಸುವ ಮೂಲಕ ಈ ನ್ಯಾಯದಾನವನ್ನು ಹೊಸಕಿ ಹಾಕಿತು. ಇಂತಹ ಶಾಸಕರಿಗೆ ನಾವು ದುಶ್ಶಾಸನರು ಎಂದು ಕರೆದರೆ ತಪ್ಪಾಗಲಿಕ್ಕಿಲ್ಲ! ಕೌರವಸಭೆಯು ದ್ರೌಪದಿಯ ಬಟ್ಟೆಗಳನ್ನು ಕಸಿದುಕೊಂಡರೆ, ಲೋಕಸಭೆಯು ಶಾಹ ಬಾನೋಳ  ಜೀವನನಿರ್ವಹಣೆಯನ್ನೇ ಕಸಿದುಕೊಂಡಿತು!

ಈ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿಯವರು ತಮ್ಮ ‘ಹಿಂದ ಸ್ವರಾಜ” ಪತ್ರಿಕೆಯಲ್ಲಿ ಬ್ರಿಟಿಶ್ ಪಾರ್ಲಿಮೆಂಟಿನ ಬಗೆಗೆ ಮಾಡಿದ ಟೀಕೆಯೊಂದು ನೆನಪಾಗುತ್ತದೆ: "British Parliament is a prostitute and a sterile woman "! ಇಂತಹ ಅವಹೇಳನಕಾರಿ ಹೇಳಿಕೆಯ ಕಾರಣವನ್ನೂ ಅವರು ಸ್ಪಷ್ಟಪಡಿಸಿದರು. ‘ವೇಶ್ಯೆಗೆ ತನ್ನ ಗಿರಾಕಿಗಳ ಮೇಲೆ ಏನೂ ಪ್ರೀತಿ ಇರುವುದಿಲ್ಲ; ಅವಳಿಗೆ ತನ್ನ ಸಂಪಾದನೆಯೇ ಮುಖ್ಯ. ಅದರಂತೆ ಈ ಪಾರ್ಲಿಮೆಂಟಿನ ಸದಸ್ಯರಿಗೆ, ತಮ್ಮ ಪ್ರಜೆಗಳ ಬಗೆಗೆ ಏನೂ ಕಳಕಳಿ ಇಲ್ಲ; ತಮ್ಮ ದಂಭಾಚಾರವೆ ಇವರಿಗೆ ಮುಖ್ಯವಾಗಿದೆ. ಬಂಜೆ ಹೆಣ್ಣುಮಗಳು ಫಲವತಿಯಾಗಲಾರಳು. ಬ್ರಿಟಿಶ್ ಪಾರ್ಲಿಮೆಂಟ್ ಸಹ ಬಂಜೆ ಹೆಂಗಸಿನಂತೆ ಒಳ್ಳೆಯ ಫಲಗಳನ್ನು ಕೊಡಲಾರದಾಗಿದೆ. ಗಾಂಧೀಜಿಯವರ ಮಾತು ನಮ್ಮ ಲೋಕಸಭೆಗೂ ಅನ್ವಯವಾಗುವುದೆ?
  
ಲೋಕಸಭೆಯಲ್ಲಿ ಇತ್ತೀಚೆಗೆ ಒಂದು ಅತ್ಯಾಚಾರ-ವಿರೋಧಿ ವಿಧೇಯಕದ ಬಗೆಗೆ ನಡೆದ ಚರ್ಚೆಯನ್ನು ಟೀವಿ ಚಾನೆಲ್ಲುಗಳು ಪ್ರಸಾರ ಮಾಡಿದವು. ಆ ಚರ್ಚೆಯನ್ನು ನೋಡಿದವರಿಗೆ, ನಮ್ಮ ಪುರುಷ ಶಾಸಕರು ಅತ್ಯಾಚಾರದಂತಹ ವಿಷಯವನ್ನು ಎಷ್ಟು ಹಗುರವಾಗಿ ತೆಗೆದುಕೊಳ್ಳುತ್ತಾರೆ ಎನ್ನುವುದರ ಆಘಾತಕಾರಿ ಅರಿವು ಆಗುತ್ತದೆ. ಒಂದು ವಿರೋಧಿ ಪಕ್ಷದ ಒಬ್ಬ ಗಣ್ಯ ಧುರೀಣರಂತೂ ‘ಹೆಂಗಸನ್ನು ಹಿಂಬಾಲಿಸದ ಗಂಡಸು ಯಾರಿದ್ದಾರೆ?’ ಎಂದು ಅಪಹಾಸ್ಯ ಮಾಡುವ ಮೂಲಕ ತಾವು male chauvinistic pig ಇರುವುದನ್ನು ಸಾಬೀತುಪಡಿಸಿದರು! ವಿಧೇಯಕವನ್ನು ರೂಪಿಸುವಾಗಲೂ ಸಹ ಅನೇಕ ಶಾಸಕರು ವಿಷಯದ ಬಗೆಗಿರುವ ತಮ್ಮ ಅಜ್ಞಾನವನ್ನು ಧಾರಾಳವಾಗಿ ಪ್ರಕಟಪಡಿಸಿದರು. ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗೆ ಹೆಚ್ಚಿನ ಶಿಕ್ಷೆ ವಿಧಿಸಿದರೆ ಮಾತ್ರ ಸಾಲದು. ಪ್ರಕರಣವನ್ನು ದಾಖಲು ಮಾಡಿಕೊಳ್ಳುವುದನ್ನು ನಿರಾಕರಿಸುವ ಅಥವಾ ವಿಲಂಬ ಮಾಡುವ ಪೋಲೀಸ ಅಧಿಕಾರಿಯನ್ನು ಕೆಲಸದಿಂದ ವಜಾ ಮಾಡುವುದು ಅತ್ಯಂತ ಅವಶ್ಯವಾಗಿದೆ. ಇದಕ್ಕಿಂತ ಒಳ್ಳೆಯ ವ್ಯವಸ್ಥೆ ಎಂದರೆ, ಅತ್ಯಾಚಾರದ ಪ್ರಕರಣದಲ್ಲಿ ತಕರಾರನ್ನು ದಾಖಲಿಸಿಕೊಳ್ಳಲು ಒಂದು ಪ್ರತ್ಯೇಕ ಸೆಲ್ ಮಾಡಬೇಕು. ಈ ಸೆಲ್‍ ನ್ಯಾಯಾಲಯದ ಆವರಣದಲ್ಲಿ ಇರಬೇಕು. ಈ ಸೆಲ್‍ನ ಮುಖ್ಯಸ್ಥರು ಒಬ್ಬ ನೋಟರಿ ಆಗಿರಬೇಕು. ಈ ಸೆಲ್‍ಗೆ ಸದಸ್ಯರನ್ನಾಗಿ ಮಹಿಳೆಯರನ್ನು ಹಾಗು NGO ಸದಸ್ಯರನ್ನು ನಿಯಮಿಸಬೇಕು. ಈ ಸೆಲ್‍ನಲ್ಲಿ ತಕರಾರು ಅರ್ಜಿಯನ್ನು ಸ್ವೀಕರಿಸಿದ ತಕ್ಷಣ, ಸಂಬಂಧಿಸಿದ ಪೋಲೀಸ್ ಠಾಣೆಗೆ ಕಳುಹಿಸಿ, ಅದರ ಪ್ರಗತಿಯನ್ನು ವಿಮರ್ಶಿಸುವ ವ್ಯವಸ್ಥೆಯಾಗಬೇಕು. ಹಾಗಾದಾಗ ಮಾತ್ರ ಪೋಲೀಸರಿಂದಲೇ ನ್ಯಾಯದಾನದ ಗರ್ಭಪಾತವಾಗುವ ಸಂದರ್ಭಗಳು ತಪ್ಪಬಹುದು! ಆದರೆ ಇಂತಹ ಮುಖ್ಯ ಸಂಗತಿಯೇ ನಮ್ಮ ಶಾಸಕರಿಗೆ ಹೊಳೆಯಲಿಲ್ಲ. ಅಥವಾ ಇದು ಉದ್ದೇಶಪೂರ್ವಕ ವಿಸ್ಮರಣೆಯಾಗಿರಬಹುದೆ?

ನ್ಯಾಯವಾದಿಗಳು, ಪೋಲೀಸರು ಹಾಗು (ಶಾಸಕರು ರೂಪಿಸುತ್ತಿರುವ) ಅನರ್ಥಕ ಶಾಸನಗಳು ಎನ್ನುವ ಮೂರು ತಡೆಗಳನ್ನು ಹಾರಿ ನ್ಯಾಯಾಲಯದಿಂದ ನ್ಯಾಯ ಪಡೆಯಬಲ್ಲ ಸಮರ್ಥರು ನಮ್ಮಲ್ಲಿ ಯಾರಾದರೂ ಇದ್ದಾರೆಯೆ?

Monday, April 8, 2013

ನ್ಯಾಯವಿವೇಚನೆ-೨



ಸರ್ವಸಮಾನವಾದ ಹಾಗು ಧರ್ಮನಿರಪೇಕ್ಷವಾದ ನ್ಯಾಯನಿರ್ಣಯವು ಆಧುನಿಕ ನ್ಯಾಯವಿವೇಚನೆಯ ಪ್ರಮುಖ ಲಕ್ಷಣವಾಗಿದೆ. ೧೮೬೧ನೆಯ ಇಸವಿಯಲ್ಲಿ ಬ್ರಿಟಿಶರು ಮುಂಬಯಿ ಪ್ರಾಂತದಲ್ಲಿ Criminal Procedure Code‍ಅನ್ನು ಜಾರಿಗೆ ತಂದರು. ಇದರಿಂದಾಗಿ ಅಪರಾಧಿಯ ಧರ್ಮ,ಜಾತಿ ಅಥವಾ ಅಂತಸ್ತನ್ನು ಗಣನೆಗೆ ತಾರದೆ, ನಿರ್ದಿಷ್ಟ ಅಪರಾಧಕ್ಕೆ ನಿರ್ದಿಷ್ಟ ಶಿಕ್ಷೆ ಎಂದು ನಿರ್ಧರಿಸುವುದು ಸಾಧ್ಯವಾಯಿತು. ಆದರೆ ಸರ್ವಸಮಾನ ಸಿವಿಲ್ ಕೋಡ್‍ಅನ್ನು ಜಾರಿಗೆ ತರುವ ದರ್ದು ಅವರಿಗೆ ಇರಲಿಲ್ಲ. ಈಗಂತೂ ಅದು ರಾಜಕೀಯ ಆಟವಾಗಿದೆ.

ಕೊನೆಯ ಪಕ್ಷ ಕ್ರಿಮಿನಲ್ ಅಪರಾಧಗಳಲ್ಲಿಯಾದರೂ, ಶಾಸನ ಹಾಗು ನ್ಯಾಯದಾನ ಇವೆರಡೂ ಧರ್ಮನಿರಪೇಕ್ಷವಾಗಿ ಇರಬೇಕೆನ್ನುವ ಕಲ್ಪನೆ ಕೆಲವೊಂದು ಧರ್ಮಾಧಾರಿತ ರಾಷ್ಟ್ರಗಳಲ್ಲಿ ಇಲ್ಲವೇ ಇಲ್ಲ. ಅನೇಕ ವರ್ಷಗಳ ಹಿಂದೆ The Illustrated Weekly of India ಎನ್ನುವ ಇಂಗ್ಲಿಶ್ ಭಾಷೆಯ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನವು ಈ ಮಾತಿಗೆ ಉತ್ತಮ ಉದಾಹರಣೆಯಾಗಿದೆ. ಆ ಲೇಖನದ ವಿವರಗಳು ನನ್ನ ಸ್ಮರಣೆಯಿಂದ ಜಾರಿವೆ. ಆದುದರಿಂದ ನೆನಪಿನಲ್ಲಿ ಇದ್ದಷ್ಟನ್ನೇ ಇಲ್ಲಿ ಉಲ್ಲೇಖಿಸುತ್ತಿದ್ದೇನೆ.

ಕೊಲ್ಲಿ ರಾಷ್ಟ್ರವೊಂದರ ಫ್ಯಾಕ್ಟರಿಯಲ್ಲಿ ದುಡಿಯುತ್ತಿದ್ದ ಬಡ ಭಾರತೀಯ ಕಾರ್ಮಿಕನ ಕತೆ ಇದು. ಆ ಕಾರಖಾನೆಯಲ್ಲಿ ಮೇಲುಸ್ತುವಾರಿ ಮಾಡುತ್ತಿದ್ದ ಗ್ರೀಕ ರಾಷ್ಟ್ರೀಯನೊಬ್ಬನು, ಕಾರಖಾನೆಯ ಒಳಭಾಗದಲ್ಲಿ, ಕಾರಖಾನೆಯ ಉಸ್ತುವಾರಿ ವಾಹನವನ್ನು ಓಡಿಸಿಕೊಂಡು ಬರುತ್ತಿದ್ದಾಗ, ತನ್ನ ಅಜಾಗರೂಕತೆಯಿಂದ ಭಾರತೀಯ ಕಾರ್ಮಿಕನ ಮೇಲೆ ವಾಹನ ಚಲಾಯಿಸಿ ಬಿಟ್ಟ. ಭಾರತೀಯ ಕಾರ್ಮಿಕನಿಗೆ ತೀವ್ರ ಸ್ವರೂಪದ ಜಖಮ್ ಆಯಿತು. ಆತನಿಗೆ ಪರಿಹಾರ ಸಿಗಬೇಕಲ್ಲ. ಆದುದರಿಂದ ನ್ಯಾಯಾಲದಲ್ಲಿ ಪ್ರಕರಣ ದಾಖಲಾಯಿತು. ಪರಿಹಾರದ ಮೊತ್ತವು ಎಷ್ಟಿತ್ತು ಎನ್ನುವುದು ನನಗೆ ನೆನಪಿಲ್ಲ. ಆದುದರಿಂದ ನ್ಯಾಯಾಧೀಶರು ಪರಿಹಾರಕ್ಕಾಗಿ ಪರಿಗಣಿಸಿದ ಅಂಶಗಳನ್ನಷ್ಟೇ ಇಲ್ಲಿ ನೀಡುತ್ತಿದ್ದೇನೆ.

(೧) ಮೊದಲ ಹಂತದಲ್ಲಿ ನಿರ್ಧರಿಸಲಾದ ಪರಿಹಾರ ಹಾಗು ಪರಿಗಣಿಸಲಾದ ಅಂಶಗಳು:
‘ಈ ಕಾರ್ಮಿಕನು ಭಾರತೀಯನಿರುವುದರಿಂದ ಈತನಿಗೆ ಹೆಚ್ಚಿನ ಪರಿಹಾರ ನೀಡುವ ಕಾರಣವಿಲ್ಲ. ಆದುದರಿಂದ ಈತನಿಗೆ ‘ಇಷ್ಟು’ ಪರಿಹಾರ ಕೊಟ್ಟರೆ ಸಾಕು!’
(೨) ಅಷ್ಟರಲ್ಲಿಯೇ ಈ ಭಾರತೀಯ ಕಾರ್ಮಿಕನು ಹಿಂದೂ ಧರ್ಮದವನು ಎನ್ನುವ ಅಂಶವನ್ನು ನ್ಯಾಯಾಧೀಶರ ಗಮನಕ್ಕೆ ತರಲಾಯಿತು. ಆಗ ನ್ಯಾಯಾಧೀಶರು, ಹೀಗೋ! ಹಾಗಿದ್ದರೆ ಈಗ ಹೇಳಲಾದ ಪರಿಹಾರದ ೨/೩ದಷ್ಟು ಮಾತ್ರ ಪರಿಹಾರವನ್ನು ಕೊಡಬಹುದು” ಎನ್ನುವ ನ್ಯಾಯನಿರ್ಣಯವನ್ನು ನೀಡಿದರು.

ಇಲ್ಲಿ ಮಾನವನೊಬ್ಬನ ಬೆಲೆಯನ್ನು ಅವನ ರಾಷ್ಟ್ರೀಯತೆ, ಧರ್ಮ ಹಾಗು ಅಂತಸ್ತುಗಳ ಮೇಲೆ ನಿರ್ಧರಿಸಲಾಗಿದೆ. ಇದೆಂತಹ ನ್ಯಾಯದಾನ? ಭಾರತದಲ್ಲಿಯ ಕತೆ ಇನ್ನೂ ಸ್ವಾರಸ್ಯಕರವಾಗಿದೆ. ನ್ಯಾಯಾಧೀಶರೇನೋ ಅಪರಾಧಿಗೆ ತಕ್ಕ ಶಿಕ್ಷೆಯನ್ನು ವಿಧಿಸುತ್ತಾರೆ. ಆದರೆ ಅಪರಾಧಿಯು ಫಿಲ್ಮ್ ಸ್ಟಾರ್ ಆಗಿದ್ದರೆ, ಆತನಿಗೆ ಕ್ಷಮಾದಾನ ದೊರಕಿಸಲು ಲಾಗ ಹಾಕುವ ಕೋಡಂಗಿಗಳೇ ಇಲ್ಲಿ ಸಾಕಷ್ಟಿದ್ದಾರೆ.

ಇನ್ನು ಅಪರಾಧಿಯು ಪರರಾಷ್ಟ್ರೀಯನಾಗಿದ್ದರೆ, ನಮ್ಮ ರಾಜಕಾರಣಿಗಳು ತುಂಬ ಉದಾರಹೃದಯಿಗಳಾಗುತ್ತಾರೆ. ಭೋಪಾಲ ಹಾಗು ಪುರೂಲಿಯಾಗಳ ಖಳನಾಯಕರಿಗೆ ಇಲ್ಲಿ ರಾಜಾತಿಥ್ಯ ದೊರೆಯುತ್ತದೆ. ಅಂದ ಮೇಲೆ ಇಟಲಿಯ ಕೊಲೆಗಾರ ನಾವಿಕರಿಗೂ ಸಹ ಕ್ಷಮಾದಾನ ಸಿಗುವ ಸಾಧ್ಯತೆಗಳೇ ಹೆಚ್ಚಾಗಿವೆಯಲ್ಲವೆ?

Thursday, April 4, 2013

ನ್ಯಾಯವಿವೇಚನೆ-೧

ಕನ್ನಡದ ಸುಪ್ರಸಿದ್ಧ ನಾಟಕಕಾರ ಕೈಲಾಸಮ್ ಅವರ ತಂದೆ ಮದ್ರಾಸ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದರು. ಅವರನ್ನು ಛೇಡಿಸುತ್ತಾ, ಕೈಲಾಸಮ್ ಹೇಳುತ್ತಿದ್ದದ್ದು ಹೀಗೆ: ‘ನ್ಯಾಯ ಇರುವುದು ಇತ್ತ; ನ್ಯಾಯಾಧೀಶರು ಇರುವುದು ಅತ್ತ!’

ಕರ್ನಾಟಕದ ಉಚ್ಚ ನ್ಯಾಯಾಲಯದ ಇತ್ತೀಚಿನ ನಿರ್ದೇಶನವೊಂದನ್ನು ನೋಡಿದಾಗ ಕೈಲಾಸಮ್ ಅವರ ವ್ಯಂಗ್ಯದ ಸತ್ಯ ಅರ್ಥವಾಗುವುದು. ವಕೀಲರಿಗೆ ಕೊಡಬೇಕಾಗುವಷ್ಟು ಕಾಸು ತಮ್ಮಲ್ಲಿ ಇಲ್ಲದಿರುವದರಿಂದ, ತಮ್ಮ ಪ್ರಕರಣದಲ್ಲಿ ತಮಗೇ ವಾದಿಸಲು ಅವಕಾಶ ಮಾಡಿಕೊಡಬೇಕೆಂದು  ವಯೋವೃದ್ಧರೊಬ್ಬರು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಮನವಿ ಮಾಡಿಕೊಂಡರು. ಅಲ್ಲದೆ, ತಮಗೆ ಇಂಗ್ಲಿಶ್ ಬಾರದಿರುವದರಿಂದ, ಕನ್ನಡದಲ್ಲಿ ವಾದಿಸಲು ಅನುಮತಿ ನೀಡಬೇಕೆಂದೂ ಸಹ ಪ್ರಾರ್ಥಿಸಿದರು.

ಈ ಪ್ರಕರಣದಲ್ಲಿ ನ್ಯಾಯ ನೀಡಬೇಕಾದ ಇಬ್ಬರು ನ್ಯಾಯಾಧೀಶರಲ್ಲಿ ಒಬ್ಬರು ಕನ್ನಡವನ್ನು ತಿಳಿಯದವರು. ಪತ್ರಿಕೆಗಳಲ್ಲಿ ಪ್ರಕಟವಾದ ವರದಿಯಂತೆ, ಕನ್ನಡ ಬರುವ ಮತ್ತೊಬ್ಬ ನ್ಯಾಯಾಧೀಶರು ವಯೋವೃದ್ಧರ ಈ ಮನವಿಯಿಂದ ಕೆರಳಿದರಂತೆ! ‘ಅಹಾ! ಉಚ್ಚ ನ್ಯಾಯಾಲಯಗಳಿಗೆ ಬೇರೆಡೆಯಿಂದ  ವರ್ಗವಾಗಿ ಬರುವ ನ್ಯಾಯಾಧೀಶರಿಗೆ ಸ್ಥಳೀಯ ಭಾಷೆ ತಿಳಿಯುವುದಾದರೂ ಹೇಗೆ? ಆದುದರಿಂದ ನೀವು ಇಂಗ್ಲೀಶಿನಲ್ಲಿಯೇ ವ್ಯವಹರಿಸಬೇಕಾಗುವುದು’ ಎನ್ನುವುದು ಆ ನ್ಯಾಯಾಧೀಶರ ನಿರ್ದೇಶನದ ತಿರುಳಂತೆ. 

ಒಪ್ಪಿಕೊಳ್ಳೋಣ, ಇಂಗ್ಲಿಶ್ ಹಾಗು ಹಿಂದಿ ಇವು ಉಚ್ಚ ಹಾಗು ಸರ್ವೋಚ್ಚ ನ್ಯಾಯಾಲಯಗಳಲ್ಲಿ ಬಳಕೆಯಾಗುವ ಭಾಷೆಗಳೆಂದು ಅಂಗೀಕರಿಸಲ್ಪಟ್ಟಿವೆ. ಆದುದರಿಂದ ಕನ್ನಡದಲ್ಲಿ ವ್ಯವಹರಿಸಲು ಅನುಮತಿಸಲಾಗದು ಎನ್ನುವ ನ್ಯಾಯಾಧೀಶರ ನಿರ್ದೇಶನವು ನಿಯಮಗಳ ಮೇರೆಗೆ ಸರಿಯಾಗಿಯೇ ಇದೆ. ಇಲ್ಲಿಗೆ ನ್ಯಾಯಕ್ಕಾಗಿ ನಮ್ಮ ವಯೋವೃದ್ಧರು ಮಾಡಿದ ಪ್ರಾರ್ಥನೆಯ ಸಮಾಧಿಯಾಯಿತು ಎಂದು ತಿಳಿಯಬಹುದಲ್ಲವೆ? ಆದರೆ ನಿಯಮಗಳ ಹೊರತಾಗಿ ತಾತ್ವಿಕ ವಿವೇಚನೆಯನ್ನು ಮಾಡಿದಾಗ ಜನಸಾಮಾನ್ಯನ ಮನದಲ್ಲಿ ಏಳುವ ಪ್ರಶ್ನೆ ಹೀಗಿದೆ: ‘ನ್ಯಾಯಾಲಯಗಳು ಹಾಗು ನ್ಯಾಯಾಧೀಶರು ಇರುವುದಾದರೂ ಏತಕ್ಕೆ? ನೊಂದವರ ಅಳಲನ್ನು ಬಗೆಹರಿಸಿ ಅವರಿಗೆ ನ್ಯಾಯ ಕೊಡಿಸಲು ತಾನೆ? ಈ ವಯೋವೃದ್ಧರು ಕನ್ನಡದಲ್ಲಿ ಮಾಡುವ ವಾದವನ್ನು, ಇಂಗ್ಲೀಶಿಗೆ ಅನುವಾದಿಸಿ ಹೇಳಲು, ನಮ್ಮ ನ್ಯಾಯಾಧೀಶರಿಗೆ ಅನುವಾದಕರು ಸಿಗುತ್ತಿರಲಿಲ್ಲವೆ? ಒಂದು ವೇಳೆ, ಯಾವುದೋ ಒಂದು ಪ್ರಕರಣದಲ್ಲಿ ವಾದಿ, ಪ್ರತಿವಾದಿ ಅಥವಾ ಸಾಕ್ಷಿಯು ಹಳ್ಳಿಯ ಅನಕ್ಷರಸ್ಥನಾಗಿದ್ದು, ಅವನ ಹೇಳಿಕೆಯನ್ನು ಉಚ್ಚ ನ್ಯಾಯಾಲಯದಲ್ಲಿ ಮರುಪರಿಶೀಲಿಸುವುದು ಅವಶ್ಯವಾದಂತಹ ಸಂದರ್ಭದಲ್ಲಿ, ಇಂತಹ ಹೇಳಿಕೆಯನ್ನು ಅವನ ತಾಯಿನುಡಿಯಲ್ಲಿಯೇ ಪಡೆದು, ಅದನ್ನು ಇಂಗ್ಲೀಶಿಗೆ ಅನುವಾದಿಸುತ್ತಿರಲಿಲ್ಲವೆ?’

ಕಾನೂನನ್ನು ಕನ್ನಡ ಮಾಧ್ಯಮದಲ್ಲಿಯೇ ಕಲಿತು ಪದವಿಯನ್ನು ಪಡೆಯಲು ಈಗ ಅವಕಾಶವಿದೆ. ಹಾಗಿದ್ದಾಗ ವಾದವನ್ನು ಕನ್ನಡದಲ್ಲಿಯೇ ಮಂಡಿಸಲು ಯಾಕೆ ಅವಕಾಶವಿಲ್ಲ? ಕನ್ನಡ ಮಾಧ್ಯಮದಲ್ಲಿ ಕಲಿತು ಪದವಿಯನ್ನು ಪಡೆದ ವಕೀಲರೆಲ್ಲ ಕೇವಲ ಜಿಲ್ಲಾ ಮಟ್ಟದವರೆಗಿನ ನ್ಯಾಯಾಲಯಗಳಿಗೆ ಸೀಮಿತರೆ? ಈ ಧೋರಣೆಯಲ್ಲಿ ಕಾಣಬರುವುದು ಆಂಗ್ಲರು ಸೃಷ್ಟಿಸಿದ ಭಾಷಾ ಅಹಂಕಾರ. ಸದ್ಯಕ್ಕೆ ಇಂಗ್ಲೀಶ್ ಅಲ್ಲದೆ ಹಿಂದಿಯನ್ನೂ ಬಳಸಬಹುದು. ಇದನ್ನು ಹಿಂದೀ ಭಾಷೆಯ ಅಹಂಕಾರ ಎನ್ನೋಣವೆ? ಪ್ರತಿ ರಾಜ್ಯದಲ್ಲಿ ಆ ರಾಜ್ಯದ ಭಾಷೆಯನ್ನೂ ಸಹ ನ್ಯಾಯಾಲಯದ ಭಾಷೆಯನ್ನಾಗಿ ಬಳಸುವುದು ತಪ್ಪೆ?
 

ನೊಂದವರಿಗೆ ನ್ಯಾಯ ನೀಡಲು ನಿರಾಕರಿಸುವುದು ಧರ್ಮವಲ್ಲ. ತಮ್ಮ ರೋಗಿ ಶತ್ರುವೇ ಆಗಿದ್ದರೂ ಸಹ ಅವನಿಗೆ ವೈದ್ಯಕೀಯ ಉಪಚಾರ ನೀಡುತ್ತೇನೆ ಎನ್ನುವ ಶಪಥವನ್ನು ವೈದ್ಯರು ತೆಗೆದುಕೊಳ್ಳುತ್ತಾರೆ. ಇದು ನ್ಯಾಯದಾನಕ್ಕೂ ಸಹ ಅನ್ವಯಿಸುತ್ತದೆ. ನ್ಯಾಯದಾನದ ನಿರಾಕರಣೆ ಮಾಡುವ ನ್ಯಾಯಾಧೀಶರು ತಮ್ಮ ತಿಂಗಳ ಸಂಬಳ ತೆಗೆದುಕೊಳ್ಳುವ ಮೊದಲು, ತಾನು ಆ ತಿಂಗಳ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದೆನೆ ಅಥವಾ ತನ್ನ ವೈಯಕ್ತಿಕ ಲೋಪಗಳಿಂದಾಗಿ ಅಥವಾ ನಿಯಮಾವಳಿಗಳ ದೋಷಗಳಿಂದಾಗಿ ಯಾರಾದರೂ ಕಣ್ಣೀರು ಹರಿಸಿದ್ದಾರೆಯೆ ಎಂದು ಒಂದು ನಿಮಿಷ ಆಲೋಚಿಸುವುದು ಒಳ್ಳೆಯದು.
 
ನ್ಯಾಯಪರಿಜ್ಞಾನ ಹಾಗು ನ್ಯಾಯನಿಷ್ಠುರತೆ ಈ ಎರಡು ಗುಣಗಳು ನ್ಯಾಯಾಧೀಶರಿಗೆ ಇರಬೇಕಾದ ಪ್ರಾಥಮಿಕ ಅವಶ್ಯಕತೆಗಳಾಗಿವೆ. ನಮ್ಮ ಭಾರತದೇಶದಲ್ಲಿಯೇ ಇದಕ್ಕೆ ಜ್ವಲಂತ ನಿದರ್ಶನಗಳಿವೆ. ನ್ಯಾಯಪರಿಜ್ಞಾನದ ಬಗೆಗೆ ಹೇಳುವುದಾದರೆ ಛತ್ರಪತಿ ಶಿವಾಜಿಯ ಉದಾಹರಣೆಯನ್ನು ತೆಗೆದುಕೊಳ್ಳಬಹುದು. ಶಿವಾಜಿಯು ತನ್ನ ಮಗ ಸಂಭಾಜಿಯನ್ನು ತನ್ನ ಸೈನ್ಯದ ಒಂದು ತುಕಡಿಯ ಮನಸಬದಾರನನ್ನಾಗಿ ನೇಮಿಸಿದ್ದನು. ಸಂಭಾಜಿಯು ಮರಾಠಾ ರಾಜ್ಯದ ಗಡಿಗೆ ಹತ್ತಿಕೊಂಡಿದ್ದ ಮೊಗಲ ಪ್ರದೇಶದ ಮೇಲೆ ದಾಳಿ ಮಾಡಿ, ಅಲ್ಲಿಯ ಸರದಾರನ ಸೊಸೆಯನ್ನು ಅಪಹರಿಸಿಕೊಂಡು ಬರುತ್ತಾನೆ. ಇದರಿಂದ ಕ್ರುದ್ಧನಾದ ಶಿವಾಜಿಯು ತನ್ನ ಮಗನ ಮೇಲೆ ನ್ಯಾಯವಿಚಾರಣೆ ಪ್ರಾರಂಭಿಸುತ್ತಾನೆ.

ಎಲ್ಲಾ ಕಾಲದಲ್ಲಿಯೂ, ಎಲ್ಲಾ ದೇಶಗಳಲ್ಲಿಯೂ Devil's advocates ಎನ್ನುವ ಕೆಲವರು ಇರುತ್ತಾರೆ, ನೋಡಿ! ಸಂಭಾಜಿಗೂ ಇಂತಹ ‘ದೆವ್ವದ ವಕೀಲ’ನೊಬ್ಬ ಸಿಕ್ಕ. ‘ಶಿವಾಜಿಯ ರಾಜ್ಯದ ಸೀಮೆಯಲ್ಲಿ ಸಂಭಾಜಿಯು ಯಾವುದೇ ಅಪರಾಧವನ್ನು ಮಾಡಿರುವದಿಲ್ಲ. ಆದುದರಿಂದ ಸಂಭಾಜಿಯ ವಿಚಾರಣೆಯ ಹಕ್ಕು ಶಿವಾಜಿಯ ನ್ಯಾಯಾಧೀಶರಿಗೆ ಇರುವುದಿಲ್ಲ’ ಎನ್ನುವುದು ಈ ವಕೀಲನ ವಾದ. (ಕೇರಳದ ಮೀನುಗಾರರನ್ನು ಗುಂಡಿಕ್ಕಿ ಕೊಂದ ಇಟಲಿಯ ನಾವಿಕರೂ ಇಂತಹದೇ ವಾದವನ್ನು ಮಂಡಿಸುತ್ತಿದ್ದಾರೆ, ಅಲ್ಲವೆ?) 

ಶಿವಾಜಿಯು ಇದನ್ನು ಒಪ್ಪಲಿಲ್ಲ. ಅಪರಾಧಿಯು ಮರಾಠಾ ರಾಜ್ಯದ ಅಧಿಕಾರಿಯಾಗಿದ್ದಾನೆ. ಆದುದರಿಂದ ಮರಾಠಾ ನ್ಯಾಯಾಧೀಶರು ಆತನ ವಿಚಾರಣೆಯನ್ನು ಮಾಡಬಹುದು ಎಂದು ಹೇಳಿದ ಶಿವಾಜಿಯು, ಮೊಗಲ ಸರದಾರನ ಸೊಸೆಯನ್ನು ಮರ್ಯಾದೆಯೊಂದಿಗೆ ಮರಳಿ ಕಳುಹಿಸುತ್ತಾನೆ ಹಾಗು ಸಂಭಾಜಿಯನ್ನು ಸೆರೆಮನೆಗೆ ಕಳುಹಿಸುತ್ತಾನೆ. ಇದು ನ್ಯಾಯಪರಿಜ್ಞಾನ.

ಪೇಶವಾ ಆಡಳಿತದಲ್ಲಿ ಪುಣೆಯ ನ್ಯಾಯಾಧೀಶನಾಗಿದ್ದ ರಾಮಾಶಾಸ್ತ್ರಿಯು ನ್ಯಾಯನಿಷ್ಠುರತೆಗೆ ಹೆಸರಾದವನು. ಸ್ವತಃ ಪೇಶವೇಗೆ ಮರಣಶಿಕ್ಷೆಯನ್ನು ವಿಧಿಸಿದ ಖ್ಯಾತಿ ಇವನದು. ಆದರೆ ಆ ತೀರ್ಪನ್ನು ಜಾರಿಗೊಳಿಸಲು ತನ್ನಿಂದ ಸಾಧ್ಯವಾಗದೇ ಹೋದಾಗ ತನ್ನ ಹುದ್ದೆಗೇ ರಾಜೀನಾಮೆ ಕೊಟ್ಟು ಹೋದವನೀತ!

ಆಧುನಿಕ ಭಾರತದಲ್ಲಿಯೂ ಸಹ ಕೆಲವು ನ್ಯಾಯಾಧೀಶರು ನ್ಯಾಯನಿಷ್ಠುರತೆಗೆ ಹೆಸರಾಗಿದ್ದಾರೆ. ಇಂದಿರಾ ಗಾಂಧೀಯವರ ವಿರುದ್ಧ ತೀರ್ಪು ಕೊಟ್ಟಂತಹ ಅಲಹಾಬಾದ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಜಗಮೋಹನ ಲಾಲ ಸಿಂಹಾ, ತುರ್ತು ಪರಿಸ್ಥಿತಿಯಲ್ಲಿ ಸರಕಾರಕ್ಕೆ ಬಗ್ಗದೆ, ನೇರವಾಗಿ ನಿಂತುಕೊಂಡಂತಹ, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಂಸರಾಜ ಖನ್ನಾ ಇವರೆಲ್ಲ ಈ ಪಟ್ಟಿಯಲ್ಲಿ ಸೇರುವವರು. 

ಇನ್ನು ಕೆಲವು ನ್ಯಾಯಮೂರ್ತಿಗಳು ನಮ್ಮ ದೇಶದಲ್ಲಿದ್ದಾರೆ. ಇಂಗ್ಲಿಶ್ ಹಾಗು ಹಿಂದಿ ಇವು ಉಚ್ಚ ನ್ಯಾಯಾಲಯದ ಭಾಷೆಯಾಗಿವೆ. ಇವನ್ನು ಬಿಟ್ಟು ಇತರ ಭಾಷೆಗಳಿಗೆ ನನ್ನ ಕಿವಿಗಳು ಕಿವುಡಾಗಿವೆ ಎಂದು ಇವರು ಹೇಳುತ್ತಾರೆ!