Sunday, April 21, 2013

ನ್ಯಾಯವಿವೇಚನೆ-೩ನಮ್ಮ ದೇಶದಲ್ಲಿ ಶಾಸನವು ‘ಬಹುತೇಕವಾಗಿ’ ಧರ್ಮನಿರಪೇಕ್ಷವಾಗಿದೆ ಹಾಗು ನ್ಯಾಯದಾನವು ನೂರಕ್ಕೆ ನೂರರಷ್ಟು
ಧರ್ಮನಿರಪೇಕ್ಷವಾಗಿದೆ. (‘ಬಹುತೇಕ’ ಎನ್ನುವುದರ ಉದಾಹರಣೆಯನ್ನು ಮುಂದೆ ಕೊಡಲಾಗಿದೆ.) ನಮ್ಮ ಉಚ್ಚ ನ್ಯಾಯಾಲಯಗಳ ಹಾಗು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು (ಕೆಲವೊಂದು ಅಪವಾದಗಳ ಹೊರತಾಗಿ) ಉನ್ನತ ಸ್ತರದ ನ್ಯಾಯಮೂರ್ತಿಗಳಾಗಿದ್ದಾರೆ. ಆದುದರಿಂದ ಭಾರತದೇಶದಲ್ಲಿ ಸರ್ವರಿಗೂ ಸರ್ವಕಾಲಕ್ಕೂ ಉಚಿತ ನ್ಯಾಯವು ದೊರೆಯುತ್ತದೆ ಎಂದು ನಾವು ಭಾವಿಸಿದರೆ ತಪ್ಪಿಲ್ಲ. ಆದರೆ ವಸ್ತುಸ್ಥಿತಿ ಹೀಗಿಲ್ಲ. ಈ ಅನ್ಯಾಯದ ಕಾರಣವನ್ನು ಶೋಧಿಸಿದರೆ ಮೊದಲು ಕಾಣುವವರು ನ್ಯಾಯವಾದಿಗಳು; ಎರಡನೆಯದಾಗಿ ನಮ್ಮ ಶಾಸಕರು. ಎಲ್ಲ ನ್ಯಾಯವಾದಿಗಳು ಹಾಗು ಎಲ್ಲ ಶಾಸಕರು ಅನ್ಯಾಯಕ್ಕೆ ಕಾರಣರಾಗಿದ್ದಾರೆ ಎಂದು ಇದರರ್ಥವಲ್ಲ. ಇದು ಸಾರ್ವತ್ರಿಕ ವಾಸ್ತವವಲ್ಲ ಎಂದು ನಾನು ಮೊದಲೇ ಸ್ಪಷ್ಟೀಕರಿಸುತ್ತೇನೆ.

ತನ್ನ ಕಕ್ಷಿದಾರನ ಹಿತವನ್ನು ಕಾಪಾಡುವುದು ನ್ಯಾಯವಾದಿಯ ಕರ್ತವ್ಯವಾಗಿದೆ. ಆದರೆ ಎದುರುಪಕ್ಷದವನಿಗೆ ಅನ್ಯಾಯ ಮಾಡಿ ಇದನ್ನು ಸಾಧಿಸುವುದು ತಪ್ಪಲ್ಲವೆ? ಈ ಉದಾಹರಣೆಯನ್ನು ನೋಡಿರಿ:
ಧಾರವಾಡದ ವತನದಾರ ಗೃಹಸ್ಥನೊಬ್ಬನು ಕುತ್ತಿಗೆಯವರೆಗೆ ಸಾಲ ಮಾಡಿದ್ದ. ಸಾಲ ಕೊಟ್ಟವರು ಸುಮ್ಮನಿರುತ್ತಾರೆಯೆ? ‘ನಿನ್ನ ಜಮೀನು ಮಾರಿ ಸಾಲ ತೀರಿಸು’ ಎಂದು ಗಂಟು ಬಿದ್ದರು. ಈ ಭೂಪ ಅವರ ಸಾಲ ಮುಳುಗಿಸಲು ವಕೀಲರೊಬ್ಬರ ಸಲಹೆ ಕೇಳಿದ. ಆ ವಕೀಲರು ಇಂತಹ ಪ್ರಕರಣಗಳಲ್ಲಿ ಎತ್ತಿದ ಕೈ. ಆ ಗೃಹಸ್ಥನ ಹೆಂಡತಿ ಹಾಗು ಮಕ್ಕಳಿಂದ ಅವನ ಮೇಲೆ ದಾವೆ ಹೂಡಿಸಿ, ಎಲ್ಲ ಆಸ್ತಿಯನ್ನು ಹೆಂಡತಿ-ಮಕ್ಕಳ ಹೆಸರಿಗೆ ವರ್ಗಾಯಿಸಿ, ಇವನಿಗೆ pauper ಚೀಟಿ ಕೊಡಿಸಿದರು. ಇವನ ಆಸ್ತಿ ಇವನಿಗೆ ಉಳಿಯಿತು; ಸಾಲ ಕೊಟ್ಟವರು ಮುಳುಗಿದರು!

ಕಕ್ಷಿದಾರನ ಹಿತವೇ ವಕೀಲನ ಪರಮೋಚ್ಚ ಉದ್ದೇಶವೆನ್ನುವ ವಿತಂಡವಾದದ ಮೂಲಕ ನ್ಯಾಯವಾದಿಗಳು ಈ ಅನ್ಯಾಯವನ್ನು ಸಮರ್ಥಿಸಿಯಾರು. ಆದರೆ ತನ್ನದೇ ಕಕ್ಷಿದಾರರ ಕುತ್ತಿಗೆಯನ್ನು ಕೊಯ್ಯುವ ವಕೀಲರಿಗೆ ಏನೆನ್ನಬೇಕು?

ಇಂಗ್ಲೆಂಡಿನಲ್ಲಿ ಡಾ^ಕ್ಟರ್ ಎಂದು ಕೆಲಸ ಮಾಡುತ್ತಿದ್ದ ಓರ್ವ ಮಹನೀಯನು ಧಾರವಾಡದ ಓರ್ವ ಮುಗ್ಧ ಕನ್ಯೆಯನ್ನು ಮದುವೆಯಾಗಿ, ಇಂಗ್ಲೆಂಡಿಗೆ ಕರೆದುಕೊಂಡು ಹೋದ. ಆ ಮಹಿಳೆಗೆ ಒಂದು ಮಗುವೂ ಆಯಿತು. ಆಬಳಿಕ ಅವಳನ್ನು ಧಾರವಾಡಕ್ಕೆ ಮರಳಿ ಕರೆ ತಂದು ಅವಳ ತಂದೆಯ ಮನೆಯಲ್ಲಿಯೇ ಬಿಟ್ಟು ಈತ ಇಂಗ್ಲಂಡಿಗೆ ಓಡಿ ಹೋದ. (ಹೋಗುವಾಗ, ಅವಳ ತವರುಮನೆಯವರು ಮದುವೆಯಲ್ಲಿ ಕೊಟ್ಟಿದ್ದ ಚಿನ್ನವನ್ನೂ ಸಹ ತೆಗೆದುಕೊಂಡೇ ಹೋದ!) ಅಲ್ಲಿಂದಲೇ ಆಕೆಗೆ ವಿವಾಹ ವಿಚ್ಛೇದನ ಕೊಡಲು ಆತ ಇಂಗ್ಲೆಂಡ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ. ಆದರೆ ಇಂಗ್ಲೆಂಡಿನ ನ್ಯಾಯಾಲಯದಲ್ಲಿ ಅವನ ಅರ್ಜಿ ತಿರಸ್ಕೃತವಾದದ್ದರಿಂದ ಧಾರವಾಡದಲ್ಲಿಯ ನ್ಯಾಯಾಲಯದಲ್ಲಿಯೇ ವಿಚ್ಛೇದನಕ್ಕಾಗಿ ದಾವೆ ಮಾಡಬೇಕಾಯಿತು. ಇಲ್ಲಿಯೂ ಸಹ ಅವನ ದಾವೆ ತಿರಸ್ಕೃತವಾಯಿತು. ಅಷ್ಟೇ ಅಲ್ಲದೆ, ಅವನ ಹೆಂಡತಿಗೆ ಅವನು ತಾತ್ಪೂರ್ತಿಕವಾಗಿ ಮಾಸಿಕ ನಿರ್ವಹಣಾ ಮೊತ್ತವನ್ನು ಕೊಡಬೇಕೆಂದೂ ಸಹ ನ್ಯಾಯಾಲಯವು ಆದೇಶ ನೀಡಿತು. ಹಟಕ್ಕೆ ಬಿದ್ದ ಆತ, ಕರ್ನಾಟಕದ ಉಚ್ಚ ನ್ಯಾಯಾಲಯಕ್ಕೆ ಅಪೀಲು ಮಾಡಿದ. ಈ ಮಧ್ಯೆ ಆತನು ಮಾಸಿಕ ನಿರ್ವಹಣಾ ಮೊತ್ತವನ್ನು ಕೊಡದೇ ಇದ್ದುದರಿಂದ, ಅನೇಕ ವರ್ಷಗಳವರೆಗೆ ಕೂಡಿ ಬಿದ್ದ ಮೊತ್ತವೇ ಸುಮಾರು ಮೂರೂವರೆ ಲಕ್ಷ ರೂಪಾಯಿಗಳಷ್ಟು ಆಗಿತ್ತು. ಈ ಮಹಿಳೆಯ ಪರವಾಗಿ ಉಚ್ಚ ನ್ಯಾಯಾಲಯದಲ್ಲಿ ವಾದ ಮಾಡುತ್ತಿದ್ದ ನ್ಯಾಯವಾದಿಯು, ‘ತಾನು ವಿಚ್ಛೇದನ ದಾವೆಯ ಬಗೆಗಷ್ಟೇ ವಾದ ಮಾಡುತ್ತೇನೆ; ಆದುದರಿಂದ ಬಾಕಿ ವಸೂಲಿಗಾಗಿ ಬೇರೊಬ್ಬ ವಕೀಲನನ್ನು ನಿಯಮಿಸಿಕೊಳ್ಳಿ’ ಎಂದು ಹೇಳಿ, ಬೇರೊಬ್ಬ ವಕೀಲನನ್ನು ತಾನೇ ಗೊತ್ತು ಮಾಡಿ ಕೊಟ್ಟ. ಈ ಬೇರೊಬ್ಬ ವಕೀಲನು ತನ್ನ ಕಕ್ಷಿದಾರಳಿಂದ ತನ್ನ ವಕೀಲಿ ಫೀ ಅನ್ನು ಮುಂಗಡವಾಗಿ ವಸೂಲಿ ಮಾಡಿಕೊಂಡದ್ದಲ್ಲದೇ, ಎದುರಾಳಿಗಳೊಡನೆ ಮಿಲಾಪಿಯಾಗಿ ಬಿಟ್ಟ ಹಾಗು ಈ ಹೆಣ್ಣುಮಗಳಿಗೆ ಬರಬೇಕಾದ ಬಾಕಿಯನ್ನು ಕೊಡಿಸಲೇ ಇಲ್ಲ! ಆ ಅಸಹಾಯಕ ಹೆಣ್ಣುಮಗಳು ‘ತನ್ನ ಹಣೆಬರಹ’ ಎಂದುಕೊಂಡು ಸುಮ್ಮನಾದಳು.

ನ್ಯಾಯವಾದಿಗಳು ತಮ್ಮ ಕಕ್ಷಿದಾರರ ಸಲುವಾಗಿ, ಸತ್ಯವನ್ನು ಸುಳ್ಳು ಮಾಡಬಹುದು ಹಾಗು ಸುಳ್ಳನ್ನೇ ಸತ್ಯವನ್ನಾಗಿ ತಿರುಚಬಹುದು. ಆದರೆ ರಾಜಕೀಯ ಕಾರಣಗಳಿಗಾಗಿ, ನಮ್ಮ ಶಾಸಕರೇ ನಿಸ್ಸಹಾಯಕ ಮಹಿಳೆಯ ಮೇಲೆ ಗದಾಪ್ರಹಾರ ಮಾಡಿದರೆ, ಏನೆನ್ನಬೇಕು? ಮಧ್ಯಪ್ರದೇಶದ ಇಂದೂರಿನಲ್ಲಿದ್ದ ಶಾಹ ಬಾನೊ ಎನ್ನುವ ೬೨ ವರ್ಷದ ವೃದ್ಧೆಯೊಬ್ಬಳ ಪ್ರಖ್ಯಾತ ಪ್ರಕರಣವನ್ನು ನೋಡಿ: ಅವಳ ಗಂಡನು ಅವಳಿಗೆ ತಲಾಕ್ ಕೊಟ್ಟ. ಅವಳು ತನ್ನ ಹಾಗು ತನ್ನ ಮಕ್ಕಳ ಜೀವನನಿರ್ವಹಣೆಗಾಗಿ ನ್ಯಾಯಾಲಯಕ್ಕೆ ಮೊರೆ ಹೋಗಬೇಕಾಯಿತು.  ೭ ವರ್ಷಗಳ ಹೋರಾಟದ ನಂತರ ಸರ್ವೋಚ್ಚ ನ್ಯಾಯಾಲಯವು ‘ಕ್ರಿಮಿನಲ್ ಸಂಹಿತೆಯ ೧೨೫ನೆಯ ಸೆಕ್ಶನ್ನಿ’ನ ಆಧಾರದ ಮೇಲೆ ಅವಳಿಗೆ ಜೀವನನಿರ್ವಹಣೆಯನ್ನು ಕೊಡಿಸುವ ಆದೇಶ ನೀಡಿತು (೨೩-೪-೧೯೮೫). ರಾಜಕೀಯ ಕಾರಣಗಳಿಗಾಗಿ ೧೯೮೬ರಲ್ಲಿ ರಾಜೀವ ಗಾಂಧಿಯವರ ನೇತೃತ್ವದ ಲೋಕಸಭೆಯು ಒಂದು ಹೊಸ ಶಾಸನವನ್ನು ರೂಪಿಸುವ ಮೂಲಕ ಈ ನ್ಯಾಯದಾನವನ್ನು ಹೊಸಕಿ ಹಾಕಿತು. ಇಂತಹ ಶಾಸಕರಿಗೆ ನಾವು ದುಶ್ಶಾಸನರು ಎಂದು ಕರೆದರೆ ತಪ್ಪಾಗಲಿಕ್ಕಿಲ್ಲ! ಕೌರವಸಭೆಯು ದ್ರೌಪದಿಯ ಬಟ್ಟೆಗಳನ್ನು ಕಸಿದುಕೊಂಡರೆ, ಲೋಕಸಭೆಯು ಶಾಹ ಬಾನೋಳ  ಜೀವನನಿರ್ವಹಣೆಯನ್ನೇ ಕಸಿದುಕೊಂಡಿತು!

ಈ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿಯವರು ತಮ್ಮ ‘ಹಿಂದ ಸ್ವರಾಜ” ಪತ್ರಿಕೆಯಲ್ಲಿ ಬ್ರಿಟಿಶ್ ಪಾರ್ಲಿಮೆಂಟಿನ ಬಗೆಗೆ ಮಾಡಿದ ಟೀಕೆಯೊಂದು ನೆನಪಾಗುತ್ತದೆ: "British Parliament is a prostitute and a sterile woman "! ಇಂತಹ ಅವಹೇಳನಕಾರಿ ಹೇಳಿಕೆಯ ಕಾರಣವನ್ನೂ ಅವರು ಸ್ಪಷ್ಟಪಡಿಸಿದರು. ‘ವೇಶ್ಯೆಗೆ ತನ್ನ ಗಿರಾಕಿಗಳ ಮೇಲೆ ಏನೂ ಪ್ರೀತಿ ಇರುವುದಿಲ್ಲ; ಅವಳಿಗೆ ತನ್ನ ಸಂಪಾದನೆಯೇ ಮುಖ್ಯ. ಅದರಂತೆ ಈ ಪಾರ್ಲಿಮೆಂಟಿನ ಸದಸ್ಯರಿಗೆ, ತಮ್ಮ ಪ್ರಜೆಗಳ ಬಗೆಗೆ ಏನೂ ಕಳಕಳಿ ಇಲ್ಲ; ತಮ್ಮ ದಂಭಾಚಾರವೆ ಇವರಿಗೆ ಮುಖ್ಯವಾಗಿದೆ. ಬಂಜೆ ಹೆಣ್ಣುಮಗಳು ಫಲವತಿಯಾಗಲಾರಳು. ಬ್ರಿಟಿಶ್ ಪಾರ್ಲಿಮೆಂಟ್ ಸಹ ಬಂಜೆ ಹೆಂಗಸಿನಂತೆ ಒಳ್ಳೆಯ ಫಲಗಳನ್ನು ಕೊಡಲಾರದಾಗಿದೆ. ಗಾಂಧೀಜಿಯವರ ಮಾತು ನಮ್ಮ ಲೋಕಸಭೆಗೂ ಅನ್ವಯವಾಗುವುದೆ?
  
ಲೋಕಸಭೆಯಲ್ಲಿ ಇತ್ತೀಚೆಗೆ ಒಂದು ಅತ್ಯಾಚಾರ-ವಿರೋಧಿ ವಿಧೇಯಕದ ಬಗೆಗೆ ನಡೆದ ಚರ್ಚೆಯನ್ನು ಟೀವಿ ಚಾನೆಲ್ಲುಗಳು ಪ್ರಸಾರ ಮಾಡಿದವು. ಆ ಚರ್ಚೆಯನ್ನು ನೋಡಿದವರಿಗೆ, ನಮ್ಮ ಪುರುಷ ಶಾಸಕರು ಅತ್ಯಾಚಾರದಂತಹ ವಿಷಯವನ್ನು ಎಷ್ಟು ಹಗುರವಾಗಿ ತೆಗೆದುಕೊಳ್ಳುತ್ತಾರೆ ಎನ್ನುವುದರ ಆಘಾತಕಾರಿ ಅರಿವು ಆಗುತ್ತದೆ. ಒಂದು ವಿರೋಧಿ ಪಕ್ಷದ ಒಬ್ಬ ಗಣ್ಯ ಧುರೀಣರಂತೂ ‘ಹೆಂಗಸನ್ನು ಹಿಂಬಾಲಿಸದ ಗಂಡಸು ಯಾರಿದ್ದಾರೆ?’ ಎಂದು ಅಪಹಾಸ್ಯ ಮಾಡುವ ಮೂಲಕ ತಾವು male chauvinistic pig ಇರುವುದನ್ನು ಸಾಬೀತುಪಡಿಸಿದರು! ವಿಧೇಯಕವನ್ನು ರೂಪಿಸುವಾಗಲೂ ಸಹ ಅನೇಕ ಶಾಸಕರು ವಿಷಯದ ಬಗೆಗಿರುವ ತಮ್ಮ ಅಜ್ಞಾನವನ್ನು ಧಾರಾಳವಾಗಿ ಪ್ರಕಟಪಡಿಸಿದರು. ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗೆ ಹೆಚ್ಚಿನ ಶಿಕ್ಷೆ ವಿಧಿಸಿದರೆ ಮಾತ್ರ ಸಾಲದು. ಪ್ರಕರಣವನ್ನು ದಾಖಲು ಮಾಡಿಕೊಳ್ಳುವುದನ್ನು ನಿರಾಕರಿಸುವ ಅಥವಾ ವಿಲಂಬ ಮಾಡುವ ಪೋಲೀಸ ಅಧಿಕಾರಿಯನ್ನು ಕೆಲಸದಿಂದ ವಜಾ ಮಾಡುವುದು ಅತ್ಯಂತ ಅವಶ್ಯವಾಗಿದೆ. ಇದಕ್ಕಿಂತ ಒಳ್ಳೆಯ ವ್ಯವಸ್ಥೆ ಎಂದರೆ, ಅತ್ಯಾಚಾರದ ಪ್ರಕರಣದಲ್ಲಿ ತಕರಾರನ್ನು ದಾಖಲಿಸಿಕೊಳ್ಳಲು ಒಂದು ಪ್ರತ್ಯೇಕ ಸೆಲ್ ಮಾಡಬೇಕು. ಈ ಸೆಲ್‍ ನ್ಯಾಯಾಲಯದ ಆವರಣದಲ್ಲಿ ಇರಬೇಕು. ಈ ಸೆಲ್‍ನ ಮುಖ್ಯಸ್ಥರು ಒಬ್ಬ ನೋಟರಿ ಆಗಿರಬೇಕು. ಈ ಸೆಲ್‍ಗೆ ಸದಸ್ಯರನ್ನಾಗಿ ಮಹಿಳೆಯರನ್ನು ಹಾಗು NGO ಸದಸ್ಯರನ್ನು ನಿಯಮಿಸಬೇಕು. ಈ ಸೆಲ್‍ನಲ್ಲಿ ತಕರಾರು ಅರ್ಜಿಯನ್ನು ಸ್ವೀಕರಿಸಿದ ತಕ್ಷಣ, ಸಂಬಂಧಿಸಿದ ಪೋಲೀಸ್ ಠಾಣೆಗೆ ಕಳುಹಿಸಿ, ಅದರ ಪ್ರಗತಿಯನ್ನು ವಿಮರ್ಶಿಸುವ ವ್ಯವಸ್ಥೆಯಾಗಬೇಕು. ಹಾಗಾದಾಗ ಮಾತ್ರ ಪೋಲೀಸರಿಂದಲೇ ನ್ಯಾಯದಾನದ ಗರ್ಭಪಾತವಾಗುವ ಸಂದರ್ಭಗಳು ತಪ್ಪಬಹುದು! ಆದರೆ ಇಂತಹ ಮುಖ್ಯ ಸಂಗತಿಯೇ ನಮ್ಮ ಶಾಸಕರಿಗೆ ಹೊಳೆಯಲಿಲ್ಲ. ಅಥವಾ ಇದು ಉದ್ದೇಶಪೂರ್ವಕ ವಿಸ್ಮರಣೆಯಾಗಿರಬಹುದೆ?

ನ್ಯಾಯವಾದಿಗಳು, ಪೋಲೀಸರು ಹಾಗು (ಶಾಸಕರು ರೂಪಿಸುತ್ತಿರುವ) ಅನರ್ಥಕ ಶಾಸನಗಳು ಎನ್ನುವ ಮೂರು ತಡೆಗಳನ್ನು ಹಾರಿ ನ್ಯಾಯಾಲಯದಿಂದ ನ್ಯಾಯ ಪಡೆಯಬಲ್ಲ ಸಮರ್ಥರು ನಮ್ಮಲ್ಲಿ ಯಾರಾದರೂ ಇದ್ದಾರೆಯೆ?

14 comments:

Badarinath Palavalli said...

ಮೂರನೇ ಭಾಗಕ್ಕೆ ಧನ್ಯವಾದಗಳು.

ನ್ಯಾಯವಾದಿಗಳ ಪ್ರತಿಭೆಯ ಮೇಲೆ ಪ್ರಕರಣದ ಸೋಲು ಗೆಲುವು ಮತ್ತು ಅದು ತೆಗೆದುಕೊಳ್ಳುವ ಕಾಲಾವದಿಯೂ ನಿಂತಿರುತ್ತದೆ ಎನ್ನುವುದು ಬಹುತೇಕ ವಾಸ್ತವ. ಆದರೆ, ಪ್ರತಿಭೆಯುಳ್ಳ ನ್ಯಾಯವಾದಿ ಅನ್ಯಾಯದ ಕಡೆ ನಿಂತಿದ್ದಾನೋ? ಅಥವಾ ನ್ಯಾಯವನ್ನು ಎತ್ತಿ ಹಿಡಿಯಲು ನಿಂತಿದ್ದಾನೋ ಎಂಬುದು ಅಸಲೀ ಪ್ರಶ್ನೆ!

ನ್ಯಾಯಮೂರ್ತಿಗಳು ಸದಾ ಕಾಲ ನಿರಪರಾಧಿಗೇ ನ್ಯಾಯ ಒದಗಿಸಬೇಕು ಎನ್ನುವುದು ನಿಜವಾದರು. ನ್ಯಾಯಾಂಗ ವ್ಯವಸ್ಥೆ ಭಾವನಾತ್ಮಕ ನೆಲಗಟ್ಟಿನಲ್ಲಿ ನಿಂತಿರದೆ, ಅದು ಸಾಕ್ಷಿ ಪುರಾವೆಗಳ ಸುತ್ತ ನಡೆಯುವುದರಿಂದ ಹಲವು ಬಾರಿ ನ್ಯಾಯ ಮೂರ್ತಿಗಳೂ ಅಸಹಾಯಕರೇ.

ಭಾರತದಾದ್ಯಂತ ಹಲವಾರು ನ್ಯಾಯಮೂರ್ತಿಗಳ ಸ್ಥಾನಗಳು ಖಾಲಿ ಬಿದ್ದಿದ್ದು, ಅವುಗಳನ್ನು ತತಕ್ಷಣಕ್ಕೆ ತುಂಬದೇ ತ್ವರಿತ ಗತಿಯಲ್ಲಿ ಇತ್ಯರ್ಥಗಳು ಆಗಲಾರವು.

ತಾವು ಉಲ್ಲೇಖಿಸಿದ ಪಾಪರ್ ಚೀಟಿ ಪ್ರಕರಣಗಳು ನಾನು ಹಲವಾರು ನೋಡಿದ್ದೇನೆ. ಸಾಲ ಕೊಟ್ಟ ಕೋಡಂಗಿ ಮನೆ ಮಠ ಮಾರಿಕೊಂಡದ್ದು ಕಂಡಿದ್ದೇನೆ.

ವಿಚ್ಛೇದನ ಪ್ರಕರಣಗಳಂತೂ ಕೌಟುಂಬಿಕ ನ್ಯಾಯಾಲಯಗಳ ಅಮಾನವೀಯ ವ್ಯವಸ್ಥೆ. ಅಲ್ಲಿ ಹೆಂಗಸರನ್ನು ಕೇಳುವ ಪ್ರಶ್ನೆಗಳು ತುಂಬಾ ಕೀಳು ಮಟ್ಟವಾಗಿರುತ್ತವೆ.

ಇಂದು ರಾಜಕೀಯ ಮತ್ತು ಹಣಕಾಸಿನ ಭಲಾಡ್ಯರು ನ್ಯಾಯಾಧಿಕರಣ ವ್ಯವಸ್ಥೆಯನ್ನು ತಿರಚುವಲ್ಲಿ ಪ್ರವೀಣರು.

ತಾವು ಕಡೆಯಲ್ಲಿ ವ್ಯಕ್ತ ಪಡಿಸಿದ ಮೂರು ಹಂತಗಳು ಅಬೇಧ್ಯ ಎತ್ತರದ ಗೋಡೆಗಳಾಗಿದ್ದು, ಅವನ್ನು ಮೀರಿ ನ್ಯಾಯವನ್ನು ಪಡೆದುಕೊಳ್ಳುವುದು ಇಂದಿನ ಸ್ಥಿತಿಯಲ್ಲಿ ಕನಸಿನ ಮಾತೇ ಸರಿ.

shivu.k said...

ಸುನಾಥ್ ಸರ್,
ಈಗಿನ ನ್ಯಾಯಾದಿಕರಣದಲ್ಲಿ ಕಂಡರೂ ಕಾಣದಂತ ಸೂಕ್ಷ್ಮವಾದ ಮತ್ತು ಅಷ್ಟೇ ಮಹತ್ವವೆನಿಸುವ ತಪ್ಪುಗಳನ್ನು ಅನ್ಯಾಯಗಳ ಬಗ್ಗೆ ಬೆಳಕಿಂಡಿಯನ್ನು ತೋರಿಸಿದ್ದೀರಿ. ನೀವು ಹೇಳಿದಂತೆ ನಮ್ಮ ಕಾನೂನು ಮತ್ತು ವಿದೇಯಕಗಳು ತುಂಬಾ ಬದಲಾಗಬೇಕಿದೆ.

sunaath said...

ಬದರಿನಾಥರೆ,
ನಿಮ್ಮ ಪ್ರತಿಕ್ರಿಯೆಯ ಮೂಲಕ ಈ ವಿಷಯದ ಮೇಲೆ ಸಾಕಷ್ಟು
ಬೆಳಕನ್ನು ಚೆಲ್ಲಿದ್ದೀರಿ. ಧನ್ಯವಾದಗಳು.

sunaath said...

ಶಿವು,
ನ್ಯಾಯದಾನದಲ್ಲಿ ಈ ಸಮಸ್ಯೆಗಳಲ್ಲದೆ, ಇನ್ನೂ ಒಂದು ಸಮಸ್ಯೆ ಇದೆ. Justice delayed is justice denied ಎಂದು ಹೇಳುತ್ತಾರಲ್ಲವೆ? ಭಾರತದಲ್ಲಿ ನ್ಯಾಯದಾನದ ವಿಳಂಬವು ಸಾಮಾನ್ಯವಾಗಿದೆ. ಇದೂ ಸಹ ನಮ್ಮಲ್ಲಿಯ ಅನ್ಯಾಯಕ್ಕೆ ಕಾರಣವಾಗಿದೆ.

Srikanth Manjunath said...

ಅಧಿಕಾರಕ್ಕೆ ಬರಲು ಮ, ಮೋ, ಮಾಂ ಉಪಯೋಗಿಸುವ ಈ ಮಂದಿಗಳಿಗೆ ಅತ್ಯಾಚಾರ, ಬಲಾತ್ಕಾರ ಇವೆಲ್ಲ ಕೇವಲ ಪದಗಳು. ರಾಜನ ಹತ್ತಿರಾನೆ ಕೀಯನ್ನು ಕಸಿದು ಕೊಳ್ಳುವ ಈ ವಕೀಲ (ವಂಚಕ ಕೀಚಕ ಲಂಪಟರು) ಉಂಡ ಮನೆಗೆ ಎರಡು ಬಗೆವರು. ಮನೋಜ್ಞವಾಗಿದೆ ನಿಮ್ಮ ಲೇಖನ ಸರ್. ನಮ್ಮ ದೇಶದ ಕಾನೂನು, ಸಂವಿಧಾನ ನಿಯಮಗಳು ಉದಾತ್ತಾವಾಗಿವೆ, ಆದರೆ ಅದನ್ನ ತಿರುಚಿ, ತಮಗೆ ಬೇಕಾದಂತೆ ರೂಪಿಸಿಕೊಳ್ಳುವ ಈ ಗಬ್ಬು ಮಂದಿಗಳನ್ನು ತಿಪ್ಪೆಗೆ ಎಸೆಯಲು ನೂರು ಪ್ರತಿಶತ ಮತ "ದಾನವಾಗದೆ" ಚಲಾಯಿಸಿದಾಗ ಮಾತ್ರ ಪರಿವರ್ತನೆ ಸಾಧ್ಯ ಎನ್ನಿಸುತ್ತದೆ.

Swarna said...

ಅಂಧೇರ ನಗರಿ ಚೌಪಟ್ ರಾಜ ..
ಮಾನ್ಯ ಗೃಹ ಮಂತ್ರಿಗಳೇ ಅತ್ಯಾಚಾರ ಬರೀ ದೆಹಲಿಯಲ್ಲಿ ಮಾತ್ರವೇ ?ಎಲ್ಲಾ ಊರಲ್ಲೂ ನಡೆಯೋಲ್ವ ?
ಎನ್ನುವ ಅರ್ಥದ ಹೇಳಿಕೆ ನೀಡಿದ ಮೇಲೆ ಇನ್ಣೇನನ್ನ ಅಪೇಕ್ಷಿಸಬಹುದು ?ನಿಮ್ಮ ಕೊನೆಯ ಪ್ರಶ್ನೆಯೇ ನಮ್ಮದೂ

ಮಂಜುಳಾದೇವಿ said...

ನಿಮ್ಮ ಮೂರನೇ ಕಂತಿಗೆ ಧನ್ಯವಾದಗಳು ಸಾರ್. ನೀವು ನೀಡಿರುವ ಉದಾಹರಣೆಗಳನ್ನು ಓದುತ್ತಿದ್ದರೆ ನ್ಯಾಯಸಮ್ಮತ ತೀರ್ಮಾನಗಳಿಗಾಗಿ ಕೆಲವು ಬದಲಾವಣೆ ತರುವ ಅಗತ್ಯವಿದೆ ಎನ್ನಿಸುತ್ತದೆ.

sunaath said...

ಶ್ರೀಕಾಂತರೆ,
ಸರಿಯಾದ ಪ್ರಜಾಪ್ರತಿನಿಧಿಗಳನ್ನು ಚುನಾಯಿಸುವುದು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಅದರ ಫಲವನ್ನು ನಾವು ಉಣ್ಣುತ್ತಿದ್ದೇವೆ.
‘People get the government they deserve!'

sunaath said...

ಸ್ವರ್ಣಾ,
ಅಂಧೇರ್ ನಗರಿಯಲ್ಲಿಯ ಪ್ರಜೆಗಳಿಗೆ ದೇವರೇ ಗತಿ!

sunaath said...

ಮಂಜುಳಾದೇವಿಯವರೆ,
ಭಾರತದಲ್ಲಿ ನ್ಯಾಯದಾನವು ಸುಧಾರಿಸಬೇಕಾದರೆ ಅನೇಕ ಬದಲಾವಣೆಗಳು ಅವಶ್ಯವಾಗಿವೆ!

ಗಿರೀಶ್.ಎಸ್ said...

ಇಷ್ಟು ಕಂತುಗಳನ್ನು ಓದಿದ ಮೇಲೆ ನಮ್ಮ ದೇಶದ ನ್ಯಾಯಾಧಿಕರಣ ಎಷ್ಟರ ಮಟ್ಟಿಗೆ ಸಾತ್ವಿಕತೆಯಿಂದ ಕೂಡಿದೆ ಎಂಬುದು ಗೊತ್ತಾಗುತ್ತದೆ .. ಬದಲಾವಣೆ ಆಗದ ಹೊರತು ಅಮಾಯಕರು ಮತ್ತು ದುಡ್ಡು ಕೊಡಲಾಗದವರು ಹೆಚ್ಚು ಹೆಚ್ಚು ಬಲಿಯಾಗುತ್ತಾರೆ ..

ಸತೀಶ್ ನಾಯ್ಕ್ said...

ಕೊಟ್ಟೋನು ಕೋಡಂಗಿ ಇಸಕೊಂಡೋನು ಈರಭದ್ರ ಅನ್ನೋ ಗಾದೆಗಳನ್ನ ಇಂಥಾ ಪ್ರಕರಣಗಳನ್ನ ನೋಡಿನೇ ಹುಟ್ಟು ಹಾಕಿದರೋ ಏನೋ..?? ಬಡವರಿಗೆ ನ್ಯಾಯ ದಕ್ಕದ ಹಾಗೆ ಇರೋಕೆ ಒಂದು ಕಡೆ ಹೈ ಗ್ರಾಫಿನ ಲಾಯರ್ ಫೀಜು ಕೂಡಾ ಒಂದು ಕಾರಣವೇ ಸಾರ್.. ಬಡವ, ಹಣವಿಲ್ಲದವ ತನ್ನ ಪರವಾಗಿ ತಾನೇ ವಾದ ಮಾಡುವುದನ್ನ ಎಲ್ಲಾ ನ್ಯಾಯಾಲಯಗಳು ಅಂಗೀಕರಿಸಬೇಕು.. ಆಗಲೇ ನ್ಯಾಯ ಕೊಡಿಸುವ ಹೆಸರಿನ ಲಾಯರ್ ಗಳ ಅಮಾನುಷ ವ್ಯವಹಾರಗಳಿಗೆ ಸೂಕ್ತ ಮಟ್ಟದ ತಡೆಯೊಡ್ಡಲಿಕ್ಕೆ ಸಾಧ್ಯ..

ಇನ್ನು ಅತ್ಯಾಚಾರದ ಕುರಿತಾಗಿ ತಾವು ಹೇಳಿದಂತೆ ಪ್ರತ್ಯೇಕ ಸೆಲ್ ಗಳ ಆರಂಭೀಕರಣ ವಾಗಬೇಕು.. ಇದಾದಲ್ಲಿ ಅತ್ಯಾಚಾರ ತಡೆಗಟ್ಟಲು ಸಾಧ್ಯವಿಲ್ಲದೆ ಇದ್ದರೂ, ಪೋಲೀಸರ ಸಹಯೋಗದಿಂದ ಬೆಳಕಿಗೆ ಬಾರದ ಅದೆಷ್ಟೋ ಘಟಾನುಘಟಿಗಳ ಪ್ರಕರಣಗಳು ಬೆಳಕಿಗೆ ಬಂದು ಅವರ ಬಣ್ಣ ಬಯಲಾಗಹುದು.. ನ್ಯಾಯಾಂಗ ವ್ಯವಸ್ಥೆಯಲ್ಲಿನ ನೂರಾರು ತೂತುಗಳಲ್ಲಿ ಒಂದನಾದರೂ ಮುಚ್ಚುವ ಪ್ರಯತ್ನ ಮಾಡಬಹುದು..

ಮೂರನೇ ಕಂತು ಇನ್ನಷ್ಟು ಘಟನೆಗಳೊಂದಿಗೆ ಕೆಲವೊಂದು ಸಾಧ್ಯತೆಗಳ ಕಡೆ ಬೆಳಕು ಚೆಲ್ಲಿದೆ.. ಧನ್ಯವಾದಗಳು ಸಾರ್.. :)

sunaath said...

ಗಿರೀಶರೆ,
‘ಅಜಾಪುತ್ರಂ ಬಲಿಂ ದದ್ಯಾತ್’ ಎನ್ನುವ ಸುಭಾಷಿತವೇ ಇದೆಯಲ್ಲ!

sunaath said...

ಸತೀಶರೆ,
ಸಹೃದಯತೆಯಿಂದ ಲೇಖನವನ್ನು ಅವಲೋಕಿಸಿದ್ದೀರಿ. ನಿಮಗೂ ಧನ್ಯವಾದಗಳು.