Friday, August 16, 2013

ಯೇಟ್ಸ ಕವಿಯ ಕವನವೊಂದರ ಮೂರು ಅನುವಾದಗಳು



ಇಂಗ್ಲಿಶ್ ಸಾಹಿತ್ಯದ ಮಹಾನ್ ಕವಿಯಾದ ಯೇಟ್ಸ್ ಅವರು ಬರೆದ ಕವನವೊಂದು ಇಲ್ಲಿದೆ. ಮೂಲಕವನದ ಜೊತೆಗೆ ಆ ಕವನದ ಮೂರು ಅನುವಾದಗಳನ್ನೂ ಸಹ ಇಲ್ಲಿ ಕೊಡುತ್ತಿದ್ದೇನೆ. ಮೊದಲಿನ ಎರಡು ಅನುವಾದಗಳು ಕನ್ನಡದ ಉದ್ದಾಮ ಸಾಹಿತಿಗಳು ಮಾಡಿದ ಭಾಷಾಂತರಗಳಾಗಿವೆ. ಮೂರನೆಯ ಅನುವಾದವು ಬ್ಲಾ*ಗ್ ಲೋಕದಲ್ಲಿ ಸುಪರಿಚಿತರಾದ ಶ್ರೀ ಮಂಜುನಾಥ ಕೊಳ್ಳೇಗಾಲರದು.

Crazy Jane talks with the Bishop
I met the Bishop on the road
And much said he and I.
Those breasts are flat and fallen now,
Those veins must soon be dry;
Live in a heavenly mansion,
Not in some foul sty.’

`Fair and foul are near of kin,
And fair needs foul,’ I cried.
‘My friends are gone, but that’s a truth
Nor grave nor bed denied,
Learned in bodily lowliness
And in the heart’s pride.

`A woman can be proud and stiff
When on love intent;
But love has pitched his mansion in
The place of excrement;
For nothing can be sole or whole
That has not been rent.’

ಈ ಕವನವನ್ನು ಅನಂತಮೂರ್ತಿಯವರು ಅನುವಾದಿಸಿದ ಬಗೆ ಹೀಗಿದೆ:
ಮರಳಿ ಜೇನ್ ಗೌರವಾನ್ವಿತ ಬಿಶಪ್‍ಗೆ

ಬೀದಿಯಲ್ಲಿ ಬಿಶಪ್ ಸಿಕ್ಕ
ಅವನು ಅಂದ, ನಾನೂ ಅಂದೆ;
‘ಎಂಥ ಮೊಲೆಗಳೂ ಸೊರಗಿವೆ, ಜೋತಿವೆ,
ಅನಾಳಗಳೂ ಬತ್ತಲಿವೆ.
ನಿರ್ಮಲ ಸೌಧದಿ ಬಾಳೇ ಹೆಣ್ಣೆ,
ಮಲದ ಕೂಪ ತೊರೆಯೆ.
ನಿಜದ ಠಾವು ಅರಿಯೆ.’

ನಾನದ ಕೊಡೆ: ಕೇಳೋ ತಂದೆ
ಮಲ ನಿರ್ಮಲ ನೆಂಟರಂತೆ
ಮಲವಿದ್ದೇ ಅಮಲ;
ಸಖರೆಷ್ಟೋ ಸತ್ತರು—ನಿಜ
ಗೋರಿಯಷ್ಟೇ ಸುಖದ ಶಯ್ಯೆ
ಮರೆಮಾಚದ ನಿಜವದು.

ಅರಿತದ್ದೋ ಅದು—
ಪಾಪದ ತನು ವಿನಯದಲ್ಲಿ
ಹೃದಯ ಹೆಮ್ಮೆಯಲ್ಲಿ.
ರತ್ಯಾತುರ ಹೆಣ್ಣಿಗು ಇದೆ
ಲಜ್ಜೆಯ ಬಿಗುಮಾನ;
ಪ್ರೇಮವೆಬ್ಬಿಸಿದ ಸಿರಿಸೌಧದ ಠಾವೊ
ಮಲಮೂತ್ರದ ಜಘನ;

ಬಿಡಿ ನಿಂತಿದ್ದೂ ಇಡಿ ತುಂಬಿದ್ದೂ
ಬಗೆದದ್ದೇ ಎಲ್ಲ—ಹರಿಯದೆ
ಬಗೆದದ್ದೂ ಇಲ್ಲ.’

ಇದೇ ಕವನವನ್ನು ಲಂಕೇಶರು ಹೀಗೆ ಅನುವಾದಿಸಿದ್ದಾರೆ:
ಮಳ್ಳಿ ಜೇನ್ ಮತ್ತು ಬಿಶಪ್ ಮಾತಾಡಿದ್ದು
ಬೀದಿಯಲ್ಲೊಬ್ಬ ಪಾದ್ರಿ ಸಿಕ್ಕಿದ್ದ,
ಆಡಿದೆವು ಅದೂ ಇದೂ ಮಾತು.
ಅವನೆಂದ, ‘ಎಂಥ ಮೊಲೆ ಬತ್ತಿವೆ, ನರ
ಒಣಗಿ ಬೀಳಲಿವೆ ಜೋತು;
ಹೊಲಸು ಹಕ್ಕೆಯ ತೊರೆ, ಕಳೆ
ದಿನಗಳ ದೇವಾಲಯದಿ ಕೂತು.’

ಚೀರಿದೆ ನಾನು, ‘ಹೊಲಸಿಗೂ ಸೊಗಸಿಗೂ
ಬಿಡಿಸಲಾರದ ಮಿಲಾಖತ್ತು;
ಸಖರು ಹೊರಟುಹೋದರು—ಈ ವಾಸ್ತವ
ಹಾಸಿಗೆ, ಗೋರಿಗೂ ಗೊತ್ತು;
ದೇಹದ ಪತನಕೆ ಹಿಗ್ಗಿದೆ ಹೃದಯ,
ಪಡಕೊಂಡಿದೆ ಸುಖಸಂಪತ್ತು.’
ಹೆಣ್ಣು ಪ್ರೇಮಕ್ಕೆ ಮನದ ನೆಟ್ಟರೆ
ಉಬ್ಬಿ ಹೋಗುವುಳು ಸೆಡೆದು

ಕಾಮ ಮಾಡಿದ್ದೇನು, ಹಾಕಿದೆ ಡೇರೆ
ಮಲಮೂತ್ರ ಸ್ಥಾನ ಹಿಡಿದು,
ಇಲ್ಲಿ ಚಿಂದಿಯಾಗದೆ ಕಷ್ಟ, ಮತ್ತೆ
ಒಂದಾಗಿಸುವುದು ಹೊಲೆದು.’


ಈಗೊಂದು ಪ್ರಶ್ನೆ. ಮೂಲಕವನವು ಅರ್ಥವಾಗುವಷ್ಟು ಸರಳವಾಗಿ, ಮೂಲಕವನದ ಭಾವವು ಮನಸ್ಸಿಗೆ ತಟ್ಟುವಷ್ಟು ಸಮರ್ಥವಾಗಿ ಈ ಭಾಷಾಂತರಗಳು ಅರ್ಥವಾಗುತ್ತಿವೆಯೆ? ಈ ಎರಡೂ ಅನುವಾದಗಳು ಮೂಲಕವನದ ಛಂದಸ್ಸನ್ನು ನಿಖರವಾಗಿ ಹಿಂಬಾಲಿಸಿವೆ. ಎರಡೂ ಕವನಗಳಲ್ಲಿ ಪದಲೋಪವಾಗಿಲ್ಲ. ಆದರೆ ಕವನದ ಭಾವ(Spirit of the poem) ಹಾಗು ಸ್ವಭಾವ(Tone of the poem)ಗಳ ನಿರ್ಮಾಣದಲ್ಲಿ ಅನಂತಮೂರ್ತಿಯವರ ಅನುವಾದವು ಸಂಪೂರ್ಣವಾಗಿ ಸೋತು ಹೋಗಿದೆ. ಲಂಕೇಶರ ಅನುವಾದವು ಸ್ವಲ್ಪ ಮಟ್ಟಿಗೆ ಉತ್ತಮ.

ಈ ಮಾತನ್ನು ಚರ್ಚಿಸಲು ಕವನದ ಹಿನ್ನೆಲೆಯನ್ನು ಗಮನಿಸೋಣ. ಈ ಕವನದ ನಾಯಕಿ ಮೈಮಾರಿಕೊಂಡು ಜೀವಿಸುತ್ತಿರುವ,  ಹರೆಯವನ್ನು ದಾಟಿದ ಓರ್ವ ಸೂಳೆ. ಸಮಾಜದ ಚರಂಡಿಯಲ್ಲಿ ಬಿದ್ದುಕೊಂಡು ಬದುಕು ಕಟ್ಟಬೇಕಾದ ಪರಿಸ್ಥಿತಿ ಅವಳದು. ಅವಳು ದಾರಿಯಲ್ಲಿ ಹೋಗುತ್ತಿರುವಾಗ  ಅಕಸ್ಮಾತ್ತಾಗಿ ಆ ಭಾಗದ ಧರ್ಮಬೋಧಕನು ಅವಳನ್ನು ನೋಡುತ್ತಾನೆ. ‘ಪಾಪಿ’ಗಳನ್ನು ಉದ್ಧರಿಸುವುದೇ ಅವನ ಕರ್ತವ್ಯವಲ್ಲವೆ! ಈ ಸೂಳೆಯನ್ನು ಉದ್ಧರಿಸುವ ದಿವ್ಯ ಅಪೇಕ್ಷೆಯನ್ನು ಹೊಂದಿದ ಧರ್ಮಬೋಧಕನೇ ಅವಳೊಡನೆ ಮಾತನ್ನು ಪ್ರಾರಂಭಿಸುತ್ತಾನೆ ಹಾಗು ಇವಳು ಎಗ್ಗಿಲ್ಲದೆ ಅವನಿಗೆ ಪ್ರತಿಯಾಡುತ್ತಾಳೆ. ಇಷ್ಟೆಲ್ಲವನ್ನೂ ಏಟ್ಸ್ ಒಂದೇ ವಾಕ್ಯದಲ್ಲಿ ಹೇಳಿದ್ದಾನೆ:
I met the Bishop on the road
And much said he and I.
ಈ ಮಾತನ್ನು ಅನಂತಮೂರ್ತಿಯವರು ಅನುವಾದಿಸಿದ್ದು ಹೀಗೆ:
ಬೀದಿಯಲ್ಲಿ ಬಿಶಪ್ ಸಿಕ್ಕ
ಅವನು ಅಂದ, ನಾನೂ ಅಂದೆ;
ಬಿಶಪ್ಪನ ನೀತಿಬೋಧೆಯ ಆತುರವು ಈ ಅನುವಾದದಲ್ಲಿ ವ್ಯಕ್ತವಾಗುವುದಿಲ್ಲ. ಆ ನೀತಿಬೋಧೆಯಿಂದಾಗಿಯೇ ನಮ್ಮ ನಾಯಕಿಯು ಕೆರಳುತ್ತಾಳೆ ಎನ್ನುವುದೂ ಇಲ್ಲಿ ತಿಳಿಯುವುದಿಲ್ಲ!
ಇನ್ನು ಲಂಕೇಶರ ಅನುವಾದವನ್ನು ನೋಡೋಣ:
ಬೀದಿಯಲ್ಲೊಬ್ಬ ಪಾದ್ರಿ ಸಿಕ್ಕಿದ್ದ,
ಆಡಿದೆವು ಅದೂ ಇದೂ ಮಾತು.
‘ಬೀದಿಯಲ್ಲೊಬ್ಬ’ ಎಂದಾಗ ಅವನು ಯಾವುದೋ ಒಬ್ಬ ಪಾದ್ರಿ ಎನ್ನುವ ಗ್ರಹಿಕೆಯಾಗುವುದೇ ಹೊರತು, ಆ ಭಾಗದ ಧರ್ಮೋಪದೇಶಕ ಎನ್ನುವ ವಿಷಯ ತಿಳಿಯುವುದಿಲ್ಲ. ಇದು ತಪ್ಪು ಭಾಷಾಂತರ. ‘ಅದೂ ಇದೂ ಮಾತಾಡಿದೆವು’ ಎನ್ನುವಾಗ, ಆ ಪಾದ್ರಿ ಮತ್ತು ಸೂಳೆ ಲೋಕಾಭಿರಾಮವಾಗಿ ಮಾತನಾಡಿದರು ಎನ್ನುವ ಅರ್ಥವನ್ನು ಈ ಅನುವಾದವು ಕೊಡುತ್ತದೆ! ಇಲ್ಲಿ ಲಂಕೇಶರು ಅನಂತಮೂರ್ತಿಗಿಂತ ಕೆಟ್ಟದಾಗಿ ಅನುವಾದಿಸಿದ್ದಾರೆ.

ಮುಂದಿನ ನುಡಿಯಲ್ಲಿ, ನಮ್ಮ ಸೂಳೆಯ ಈಗಿನ ಅನಾಕರ್ಷಕ ರೂಪವನ್ನು ಆ ಧರ್ಮಬೋಧಕನು ನೇರವಾಗಿ ಹೀಗಳೆಯಲು ಪ್ರಾರಂಭಿಸುತ್ತಾನೆ. ಇದು ಅವನಿಗಿರುವ ಸಾಮಾಜಿಕ ಪ್ರತಿಷ್ಠೆಯ ಅಹಮ್ ಅನ್ನು ತೋರಿಸುತ್ತದೆ.
Those breasts are flat and fallen now,
Those veins must soon be dry;
Live in a heavenly mansion,
Not in some foul sty.’
ಈ ಮಾತನ್ನು ಬೋಧಿಸುವಾಗ ಒಬ್ಬ ಹೆಣ್ಣುಮಗಳಿಗೆ (--ಅವಳು ಸೂಳೆಯೇ ಯಾಕಾಗಿರಲಿ--) ಗೌರವ ಕೊಡುವ ಅವಶ್ಯಕತೆ ಅವನಿಗೆ ಕಾಣುವದಿಲ್ಲ.

ಧರ್ಮಬೋಧಕನ ಇಂತಹ ಪ್ರತಿಷ್ಠಿಕೆಯ ಮನೋಭಾವ ಅನಂತಮೂರ್ತಿಯವರ ಅನುವಾದದಲ್ಲಿ ಕಾಣುವುದಿಲ್ಲ. ಬದಲಾಗಿ ಓರ್ವ ನಿರಪೇಕ್ಷ ವ್ಯಕ್ತಿಯ ನೈಜ ಉಪದೇಶದಂತೆ ಭಾಸವಾಗುತ್ತದೆ. ಯಾಕೆಂದರೆ ಅನಂತಮೂರ್ತಿಯವರು ಈ ಬೋಧನೆಯನ್ನು ಶಿಷ್ಟ, ಸುಸಂಸ್ಕೃತ ಭಾಷೆಯಲ್ಲಿ ಅನುವಾದಿಸಿದ್ದಾರೆ:
‘ಎಂಥ ಮೊಲೆಗಳೂ ಸೊರಗಿವೆ, ಜೋತಿವೆ,
ಅನಾಳಗಳೂ ಬತ್ತಲಿವೆ.
ನಿರ್ಮಲ ಸೌಧದಿ ಬಾಳೇ ಹೆಣ್ಣೆ,
ಮಲದ ಕೂಪ ತೊರೆಯೆ.
ನಿಜದ ಠಾವು ಅರಿಯೆ.’

ಈ ಮಾತನ್ನು ಲಂಕೇಶರು ಅನುವಾದಿಸಿದ್ದು ಹೀಗೆ:
ಅವನೆಂದ, ‘ಎಂಥ ಮೊಲೆ ಬತ್ತಿವೆ, ನರ
ಒಣಗಿ ಬೀಳಲಿವೆ ಜೋತು;
ಹೊಲಸು ಹಕ್ಕೆಯ ತೊರೆ, ಕಳೆ
ದಿನಗಳ ದೇವಾಲಯದಿ ಕೂತು.’

ಲಂಕೇಶರ ಅನುವಾದದಲ್ಲಿ ಧರ್ಮಬೋಧಕನು ಬಳಸುವ ಅಶಿಷ್ಟ ಭಾಷೆಯು ಮೂಲಕವನದಲ್ಲಿ ಕಾಣಬರುವ ವ್ಯಂಗ್ಯಕ್ಕೆ ಸಮಾಂತರವಾಗಿದೆ. ಮೂಲಕವನದಲ್ಲಿ ಧರ್ಮಾಧಿಕಾರಿಯು ಬಳಸುವ ಚುಚ್ಚುಮಾತು ಹಾಗು ಅವಳ ಬಗೆಗೆ ಅವನಿಗೆ ಇರುವ ತಾತ್ಸಾರವು ಲಂಕೇಶರ ಅನುವಾದದಲ್ಲಿ ವ್ಯಕ್ತವಾದಂತೆ, ಅನಂತಮೂರ್ತಿಯವರ ಅನುವಾದದಲ್ಲಿ ವ್ಯಕ್ತವಾಗಿಲ್ಲ.

ಧರ್ಮಬೋಧಕನು ಮಾಡುವ ನಾಯಕಿಯ ತುಚ್ಛೀಕರಣಕ್ಕೆ ಅವಳ ಪ್ರತಿಕ್ರಿಯೆ ಏನು? ‘I cried’ ಎಂದರೆ ಆ ಸೂಳೆಯು ಚೀರುತ್ತಾಳೆ.
`Fair and foul are near of kin,
And fair needs foul,’ I cried.
‘My friends are gone, but that’s a truth
Nor grave nor bed denied,
Learned in bodily lowliness
And in the heart’s pride.
ಧರ್ಮಬೋಧಕನ ನೀತಿಪಾಠವು ಅವಳನ್ನು ಕೆಣಕಿದೆ ಹಾಗು ಕೆರಳಿಸಿದೆ. ಕೊಳಚೆಯಲ್ಲಿ ಒತ್ತಲ್ಪಟ್ಟ ಆ ನಾಗಿಣಿಯ ಹೆಡೆಯನ್ನು ಅವನು ತುಳಿದಿದ್ದಾನೆ. ಈ ‘ಪ್ರತಿಷ್ಠಿತ, ಸಭ್ಯ ಪುರುಷನ’ ಪ್ರತಿಯಾಗಿ ಇರುವ ಅಸಹಾಯಕತೆ ಹಾಗು ರೋಷ ಅವಳನ್ನು ಭುಸುಗುಟ್ಟುವಂತೆ ಮಾಡಿದೆ

ಇದು ಅವಳ ಸಹಜ ಸ್ವಭಾವ ಇರಬಹುದು ಅಥವಾ ಧರ್ಮಾಧಿಕಾರಿಯ ಚುಚ್ಚು ಮಾತಿಗೆ ಪ್ರತಿಕ್ರಿಯೆಯಾಗಿರಬಹುದು. ಅಲ್ಲದೆ ತನ್ನ ಬದುಕು ಎಂತಹದೇ ಇದ್ದರೂ ಸಹ, ಇದು ಸಮಾಜದ್ದೇ ಸೃಷ್ಟಿ ಎನ್ನುವ ಅರಿವಿನಿಂದ ಅವಳು ಕುದಿಯುತ್ತಾಳೆ. ಆದುದರಿಂದಲೇ, ಸೊಗಸು ಹಾಗು ಕೊಳಕು ಎರಡೂ ಸಂಬಂಧಿಗಳು ಎಂದು ಕುಟುಕುತ್ತಾಳೆ. ಅರ್ಥಾತ್ ಉದಾತ್ತ ಪ್ರೇಮ ಹಾಗು ಕೊಳಕು ಕಾಮ ಇವೆರಡೂ ಬಿಡಿಸಲಾರದ ಜೋಡಿ ಎಂದು ಅವನ ಮುಖಕ್ಕೆ ರಾಚಿದಂತೆ ಹೇಳುತ್ತಾಳೆ. ತನ್ನ ಕಸುಬಿನ ದೈಹಿಕ ಅವಮಾನ ಏನೇ ಇದ್ದರೂ ಸಹ, ತನ್ನ ಆತ್ಮಗೌರವಕ್ಕೆ ಅದರಿಂದ ಚ್ಯುತಿ ಇಲ್ಲ ಎಂದು ಗಂಭೀರವಾಗಿ ಉಸುರುತ್ತಾಳೆ.

ನಾನದ ಕೊಡೆ: ಕೇಳೋ ತಂದೆ
ಮಲ ನಿರ್ಮಲ ನೆಂಟರಂತೆ
ಮಲವಿದ್ದೇ ಅಮಲ;
ಸಖರೆಷ್ಟೋ ಸತ್ತರು—ನಿಜ
ಗೋರಿಯಷ್ಟೇ ಸುಖದ ಶಯ್ಯೆ
ಮರೆಮಾಚದ ನಿಜವದು.
ಆ ಧರ್ಮಬೋಧಕನ ಮೇಲೆ ಇಷ್ಟೆಲ್ಲ ತಿರಸ್ಕಾರವಿರುವ ಆ ಹೆಣ್ಣು, ಅವನನ್ನು ‘ತಂದೆ’ ಎಂದು ಸಂಬೋಧಿಸಲು ಸಾಧ್ಯವೆ? ಕವನದ meter ಉಳಿಸಿಕೊಳ್ಳಲು ಅನಂತಮೂರ್ತಿಯವರು ಹಾಕಿರುವ ತಿಪ್ಪರಲಾಗ ಇದು! ಅಲ್ಲದೆ ಧರ್ಮಬೋಧಕನ ವಿರುದ್ಧ ಫೂತ್ಕರಿಸುತ್ತಿರುವ, ಕೊಳಚೆಯಲ್ಲಿ ಬದುಕುತ್ತಿರುವ ನಮ್ಮ ಸೂಳೆಯ ಬಾಯಿಯಿಂದ ಎಂತಹ ಅಭಿಜಾತ ಭಾಷೆ ಬರುತ್ತಿದೆ, ನೋಡಿರಿ!

ಮೂಲ ಇಂಗ್ಲಿಶ್ ಕವನವನ್ನು ಓದದೆ, ಈ ನುಡಿಯ ಅನುವಾದವನ್ನು ಮಾತ್ರ ಓದಿದರೆ, ಏನಾದರೂ ಅರ್ಥವಾದೀತೆ?  ಅಲ್ಲದೆ, ಧರ್ಮಬೋಧಕನ ಮಾತಿನಿಂದ ಆ ಹೆಣ್ಣಿಗೆ(--ಸೂಳೆಯಲ್ಲ, ಹೆಣ್ಣು--) ಆದ hurt ಕನ್ನಡ ಅನುವಾದದಲ್ಲಿ ಪ್ರತಿಫಲಿಸಿದೆಯೆ?

ಇನ್ನು ಈ ನುಡಿಯನ್ನು ಲಂಕೇಶರು ಹೇಗೆ ಅನುವಾದಿಸಿದ್ದಾರೆ?
ಚೀರಿದೆ ನಾನು, ‘ಹೊಲಸಿಗೂ ಸೊಗಸಿಗೂ
ಬಿಡಿಸಲಾರದ ಮಿಲಾಖತ್ತು;
ಸಖರು ಹೊರಟುಹೋದರು—ಈ ವಾಸ್ತವ
ಹಾಸಿಗೆ, ಗೋರಿಗೂ ಗೊತ್ತು;
ದೇಹದ ಪತನಕೆ ಹಿಗ್ಗಿದೆ ಹೃದಯ,
ಪಡಕೊಂಡಿದೆ ಸುಖಸಂಪತ್ತು.’
ಲಂಕೇಶರ ಅನುವಾದದ ಮೊದಲ ಎರಡು ಸಾಲುಗಳು ಮೂಲಕವನದ ಭಾವಕ್ಕೆ ಹೆಚ್ಚು ಹತ್ತಿರವಾಗಿದೆ ಎನ್ನಬಹುದು. ಆದರೆ ಕೊನೆಯ ಎರಡು ಸಾಲುಗಳ ಅನುವಾದದಲ್ಲಿ ಅವರು ಎಡವಿದ್ದಾರೆ. ‘Learned in bodily lowliness,
And in the heart’s pride’ ಎನ್ನುವಾಗ ಆ ಸೂಳೆಯು ‘ಹೊಲಸಿಗೂ ಸೊಗಸಿಗೂ ಬಿಡಿಸಲಾರದ ಮಿಲಾಖತ್ತು’ ಎನ್ನುವುದನ್ನು justify ಮಾಡುತ್ತಿರುವಳೇ ಹೊರತು, ‘ದೇಹದ ಪತನಕೆ ಹಿಗ್ಗಿದ ಹೃದಯ’ ಎಂದು ಭಾವಿಸುತ್ತಿಲ್ಲ.

ಕೊನೆಯ ನುಡಿಯಲ್ಲಿ ಯೇಟ್ಸ ಕವಿಯು ಪ್ರೇಮ-ಕಾಮಗಳ ವಾಸ್ತವತೆಯನ್ನು ಬಯಲು ಪಡಿಸುತ್ತಾನೆ.
`A woman can be proud and stiff
When on love intent;
But love has pitched his mansion in
The place of excrement;
For nothing can be sole or whole
That has not been rent.’

ಈ ನುಡಿಯಲ್ಲಿಯ ಈ ಸಾಲುಗಳನ್ನು ಗಮನಿಸಿ:
`A woman can be proud and stiff
When on love intent;’

ಯೇಟ್ಸರ ನಾಯಕಿ ಸೂಳೆಯೇ ಆದರೂ ಸಹ ಅವಳಿಗೂ ಪ್ರೇಮಿಸಬಲ್ಲ ಹೃದಯ ಹಾಗು ಆತ್ಮಗೌರವ ಇವೆ. ತನ್ನ ನೈಜಪ್ರೇಮಿಯ ಜೊತೆಗೆ ಕೂಡುವಾಗ ಅವಳಿಗೆ ಪ್ರೇಮ ಹಾಗು ಕಾಮದ ಉತ್ಕಟತೆಯ ಅನುಭವ ಆಗಬಹುದು. ಅಂತಹ ಸ್ಥಿತಿಯನ್ನು ಅನಂತಮೂರ್ತಿಯವರು ‘ರತ್ಯಾತುರ ಹೆಣ್ಣು’ ಎಂದು ವರ್ಣಿಸುತ್ತಿದ್ದಾರೆ. ಅಂದರೆ ಮೂಲಕವನದಲ್ಲಿ ಇಲ್ಲದ ಅರ್ಥವನ್ನು ಅನಂತಮೂರ್ತಿಯವರು ತಮ್ಮ ಕವನದಲ್ಲಿ ಅನವಶ್ಯಕವಾಗಿ ಸೇರಿಸಿದ್ದಾರೆ. ಆದರೆ ‘ಹೆಣ್ಣು ಪ್ರೇಮಕ್ಕೆ ಮನದ ನೆಟ್ಟರೆ ಉಬ್ಬಿ ಹೋಗುವುಳು ಸೆಡೆದು’ ಎಂದು ಲಂಕೇಶರು ಅನುವಾದಿಸಿದ್ದು ಮೂಲಕ್ಕೆ ಹೆಚ್ಚು ಹತ್ತಿರವಾಗಿದೆ!

ಯೇಟ್ಸನ ಕವನದ ಕೊನೆಯ ನಾಲ್ಕು ಸಾಲುಗಳು ಹೀಗಿವೆ:
But love has pitched his mansion in
The place of excrement;
For nothing can be sole or whole
That has not been rent.’

ಕೊನೆಯ ಸಾಲುಗಳು ತುಂಬ ಅರ್ಥಗರ್ಭಿತವಾಗಿವೆ. ಯಾವುದನ್ನು ನಾವು ‘ಪ್ರೇಮ’ ಎಂದು ಕರೆಯುತ್ತೇವೆಯೋ, ಅದಕ್ಕೆ ಕಾಮದ drive ಬೇಕು.  ದಿವ್ಯಪ್ರೇಮವೆಂದು ಕರೆಯುವ ಭಾವವು ಮಲದ ಗುಂಡಿಯಲ್ಲಿಯೇ ತನ್ನ ಡೇರೆಯನ್ನು ಹೊಡೆದಿದೆ. ಇಲ್ಲಿ ಮತ್ತೊಂದು ಶ್ಲೇಷೆಯನ್ನು ಗಮನಿಸಬೇಕು:

ಇಂಗ್ಲೀಶಿನಲ್ಲಿ ನಪುಂಸಕಲಿಂಗದ ವಸ್ತುಗಳನ್ನು ಪುಲ್ಲಿಂಗ ಅಥವಾ ಸ್ತ್ರೀಲಿಂಗದಲ್ಲಿ ಯೋಜಿಸುವುದು ವಾಡಿಕೆಯ ಮಾತಾಗಿದೆ. ಉದಾಹರಣೆಗೆ ship ಇದನ್ನು ಸ್ತ್ರೀಲಿಂಗದಲ್ಲಿ she ಎಂದು ಅವರು ಕರೆಯುತ್ತಾರೆ. ಇಲ್ಲಿ loveಅನ್ನು ಪುಲ್ಲಿಂಗದಲ್ಲಿ ಬಳಸುತ್ತ, `ಅವನು’ ತನ್ನ ಭವ್ಯಸೌಧವನ್ನು …..’ ಎಂದು ಹೇಳಲಾಗಿದೆ. ಅರ್ಥಾತ್ ಈ ಪ್ರೇಮ-ಕಾಮದ ವಿಪರ್ಯಾಸವು ಗಂಡಸರ ಕರಾಮತ್ತು ಎನ್ನುವ ಭಾವನೆ ಇಲ್ಲಿ ವ್ಯಕ್ತವಾಗುತ್ತಿದೆ.  ಎರಡನೆಯದಾಗಿ ಮೊದಲನೆಯ ನುಡಿಯಲ್ಲಿ ಧರ್ಮಬೋಧಕನು ಹೇಳುವ ‘Live in a heavenly mansion..’ ಎನ್ನುವಲ್ಲಿಯ mansionಗೆ ವ್ಯಂಗ್ಯವಾಗಿ, ನಮ್ಮ ನಾಯಕಿಯು  ‘But love has pitched his mansion..’ ಎಂದು ಹೇಳುತ್ತಿದ್ದಾಳೆ. ಈ ಎರಡು mansionಗಳ ನಡುವಿನ ಅಂತರವನ್ನು ಗಮನಿಸಬೇಕು! ಈ ವ್ಯಂಗ್ಯ ಅನಂತಮೂರ್ತಿಯವರ ಅನುವಾದದಲ್ಲಾಗಲೀ, ಲಂಕೇಶರ ಅನುವಾದದಲ್ಲಾಗಲೀ ಕಾಣುವದಿಲ್ಲ.


ಒಟ್ಟಿನಲ್ಲಿ, ಈ ಸಾಲುಗಳಲ್ಲಿರುವ ಅಡಗಿರುವ ಅರ್ಥವನ್ನು ಅನುವಾದದಲ್ಲಿ ತರಲು ಅನಂತಮೂರ್ತಿ ಹಾಗು ಲಂಕೇಶರು ಸೋತು ಹೋಗಿದ್ದಾರೆ. ಆದರೆ ಈ ಸಾಲುಗಳಲ್ಲಿರುವ ಭಾವವನ್ನು ಸೂಚಿಸುವಂತಹ ತ್ರಿಪದಿಯೊಂದು ಕನ್ನಡದಲ್ಲಿ ಇದೆ! ಆ ತ್ರಿಪದಿಯನ್ನು ಓದುವ ಮೊದಲು ಅದರ ಹಿಂದಿನ ಕತೆಯನ್ನಷ್ಟು ಕೇಳೋಣ:

ಹದಿನೇಳನೆಯ ಶತಮಾನದ ಮಹಾನ್ ಕವಿ ಹಾಗು ಲೋಕಶಿಕ್ಷಕನಾದ ಸರ್ವಜ್ಞನು ವೇಶ್ಯೆಯರ ಬಗೆಗೆ ಅನುದಾರವಾಗಿ ವಚನಿಸುವುದನ್ನು ಕಂಡ ಹೆಣ್ಣುಮಗಳೊಬ್ಬಳು ಅವನಿಗೆ ವಚನರೂಪದಲ್ಲಿಯೇ ಈ ರೀತಿಯಾಗಿ ತಿವಿಯುತ್ತಾಳಂತೆ:

ಉಚ್ಚೆಯಾ ಬಚ್ಚಲವು ತುಚ್ಛವೆನ್ನಲು ಬೇಡ    
ಅಚ್ಯುತನು ಬಿದ್ದ, ಅಜ  ಬಿದ್ದ, ನಿಮ್ಮಪ್ಪ
ಎಚ್ಚತ್ತೆ ಬಿದ್ದ, ಸರ್ವಜ್ಞ!

ಈ ತ್ರಿಪದಿಯನ್ನು ಹೇಳಿದ ಹೆಣ್ಣಿಗೆ ಇರುವ ಆತ್ಮಗೌರವ ಹಾಗು ಅವಳು ಬಳಸುವ ಭಾಷೆಗೂ, ಯೇಟ್ಸನ ನಾಯಕಿಗೆ ಇರುವ ಆತ್ಮಗೌರವ ಹಾಗು ಅವಳು ಬಳಸುವ ಭಾಷೆಗೂ ಸಾಮ್ಯತೆ ಇದೆಯಲ್ಲವೆ? ಯೇಟ್ಸನ ಕವನದಂತೆ ಈ ತ್ರಿಪದಿಯೂ ಸಹ ಭಾಷೆಯಲ್ಲಿ ಸರಳವಾಗಿ ಹಾಗು ಭಾವದಲ್ಲಿ ಸಂಕೀರ್ಣವಾಗಿ ಇರುವುದಲ್ಲವೆ! ಮೂಲಕವನದಲ್ಲಿ ಇರುವ ಸರಳತೆಯು ಅನಂತಮೂರ್ತಿಯವರ ಅನುವಾದದಲ್ಲಿ ಮಾಯವಾಗಿದೆ; ಅನುವಾದವು ಅರ್ಥವಾಗದಂತೆ ಜಟಿಲವಾಗಿದೆ. ಒಟ್ಟಿನಲ್ಲಿ ಅನಂತಮೂರ್ತಿ ಹಾಗು ಲಂಕೇಶರ ಅನುವಾದಗಳು ತಿಣುಕಾಟದ ಭಾಷಾಂತರಗಳಾಗಿವೆ.

ಹಾಗಿದ್ದರೆ ಸಮರ್ಪಕ ಅನುವಾದ ಅಥವಾ ‘ಸಾರ್ಥಕ ಅನುವಾದ’ವೆಂದು ಯಾವುದಕ್ಕೆ ಹೇಳಬೇಕು? ಪದಶಃ ಅನುವಾದವು ಕೇವಲ ಭಾಷಾಂತರವಾಗುತ್ತದೆಯೇ ಹೊರತು ‘ಸಾರ್ಥಕ ಅನುವಾದ’ವಾಗುವುದಿಲ್ಲ. ಮೂಲಕವನದ ಭಾವ(Spirit) ಹಾಗು ಸ್ವಭಾವ(Tone) ಇವು ಅನುವಾದದಲ್ಲಿ ಮೂಡಬೇಕು. ಯೇಟ್ಸನ ಕವನವು ಸರಳವಾಗಿದೆ. ಅದರ ಭಾವವು ಸ್ಪಷ್ಟವಾಗಿದೆ. ಆದರೆ ಅನಂತಮೂರ್ತಿಯವರ ಕವನದಲ್ಲಿ ಮೂಲಕವನದ ಭಾವವು ಕಾಣದಾಗಿದೆ. ಸಮಾಜದ ದೃಷ್ಟಿಯಲ್ಲಿ ಪತಿತಳಾದ ಈ ಹೆಣ್ಣಿನ Self, ಭದ್ರಸಮಾಜದವರಿಗಿಂತ ಕಡಿಮೆಯದಲ್ಲ ಎನ್ನುವ ಭಾವವು ಅನಂತಮೂರ್ತಿಯವರ ಅನುವಾದದಲ್ಲಿ ವ್ಯಕ್ತವಾಗುವುದಿಲ್ಲ. ಲಂಕೇಶರ ಅನುವಾದದ ಹಣೆಬರಹವೂ ಅಷ್ಟೇ. ಅನಂತಮೂರ್ತಿ ಹಾಗು ಲಂಕೇಶ ಇವರೀರ್ವರೂ ಈ ಕವನದಲ್ಲಿ ಕಾಮಕ್ಕೆ ನೀಡಲಾದ ಸ್ಥಾನದ ಬಗೆಗೆ ಹೆಚ್ಚು ಉತ್ಸುಕರಾಗಿದ್ದಾರೆಯೇ ಹೊರತು, ಆ ಸೂಳೆಯು ಸಮಾಜದ ದ್ವಂದ್ವ ಮುಖದಿಂದ ತ್ರಸ್ತಳಾಗಿದ್ದಾಳೆ ಎನ್ನುವ ಮಹತ್ವದ ಅಂಶವನ್ನು ನಿರ್ಲಕ್ಷಿಸಿದ್ದಾರೆ.

ಇನ್ನು ಕವನದ ಸ್ವಭಾವವನ್ನು (Tone) ನಿಶ್ಚಿತಗೊಳಿಸುವದು ಅಲ್ಲಿ ಬಳಸಲಾದ ಭಾಷೆಯ ಕೆಲಸ. ಈ ಉದ್ದೇಶದಿಂದ ಯೇಟ್ಸ ಕವಿಯು ಸೂಳೆಯಾಡುವ ಭಾಷೆಯಲ್ಲಿ ಗಾವಿಲತನವನ್ನು ಬಳಸಿದ್ದಾನೆ. ಆದರೆ, ಅನಂತಮೂರ್ತಿಯವರದಾದರೋ ಸುಸಂಸ್ಕೃತ ಪಾಂಡಿತ್ಯಭರಿತ ಭಾಷೆ! ಎಂತಹ ಆಭಾಸ! ಲಂಕೇಶರ ಭಾಷೆಯು ಅನಂತಮೂರ್ತಿಯವರ ಭಾಷೆಗಿಂತ ಮೂಲಕವನಕ್ಕೆ ಹತ್ತಿರವಾಗಿದೆ ಎಂದಷ್ಟೇ ಹೇಳಬಹುದು.

ಸಮರ್ಪಕ ಅನುವಾದವನ್ನು ಹೇಗೆ ಮಾಡಬೇಕೆಂದು ಅರಿಯಬೇಕಾದರೆ, ಬೇಂದ್ರೆಯವರ ಅನುವಾದಗಳ ಅಧ್ಯಯನವನ್ನು ಮಾಡಬೇಕು. ವಿವೇಕಾನಂದರು ರಚಿಸಿದ ಕವನವೊಂದರ ಅನುವಾದವನ್ನು ಇಲ್ಲಿ ನೋಡಬಹುದು. ಅದರಂತೆ ಫಿಲಿಪೀನಾದ ಸ್ವಾತಂತ್ರ್ಯಯೋಧನಾದ ಜೋಸೆ ರಿಝಾಲನು ಗಲ್ಲಿಗೇರುವ ಮೊದಲು ರಚಿಸಿದ ಕವನದ ಅನುವಾದವನ್ನು ಬೇಂದ್ರೆ ಮಾಡಿದ್ದಾರೆ. ವಿಶ್ವಸಾಹಿತ್ಯದ ಶ್ರೇಷ್ಠ ಅನುವಾದಗಳಲ್ಲಿ ಈ ಅನುವಾದವನ್ನು ಸೇರಿಸಬಹುದು.

ಇನ್ನು ಕಾಳಿದಾಸನ ‘ಮೇಘದೂತ’ ಕಾವ್ಯದ ಬೇಂದ್ರೆಯವರ ಅನುವಾದವನ್ನು ಸ್ವಲ್ಪ ಪರಿಶೀಲಿಸೋಣ. ಆ ಕಾವ್ಯದ ನುಡಿಯೊಂದು ‘ಆಷಾಢಸ್ಯ ಪ್ರಥಮೇ ದಿವಸೇ’ (=ಆಷಾಢಮಾಸದ ಮೊದಲ ದಿನದಂದು) ಎಂದು ಪ್ರಾರಂಭವಾಗುತ್ತದೆ. ಬೇಂದ್ರೆಯವರು ಈ ಸಾಲನ್ನು ಪದಶಃ ಅನುವಾದಿಸದೆ, ‘ಕಾರಹುಣ್ಣಿವೆಯ ಮಾರನೆಯ ದಿನ’ ಎಂದು ಅನುವಾದಿಸಿದ್ದಾರೆ. ಇದರ ಕಾರಣವೆಂದರೆ, ಉತ್ತರ ಭಾರತದಲ್ಲಿ ಪ್ರತಿ ಮಾಸವು ಹುಣ್ಣಿವೆಯ ಮಾರನೆಯ ದಿನದಿಂದ ಪ್ರಾರಂಭವಾದರೆ, ದಕ್ಷಿಣ ಭಾರತದಲ್ಲಿ ಅಮವಾಸ್ಯೆಯ ಮಾರನೆಯ ದಿನದಿಂದ ಪ್ರಾರಂಭವಾಗುತ್ತದೆ. ಅನುವಾದಕರಿಗೆ ಇಂತಹ ಔಚಿತ್ಯಪ್ರಜ್ಞೆ ಅವಶ್ಯವಾಗಿದೆ. ಈ ಸಾಲನ್ನು ಪದಶಃ ಭಾಷಾಂತರಿಸಿದ್ದರೆ, ಅರ್ಥವು ಅನರ್ಥವಾಗುತ್ತಿತ್ತು!

ಯೇಟ್ಸ ಕವಿಯ ಕವನವನ್ನು ಅನುವಾದಿಸಿದವರು ವಿಶ್ವವಿದ್ಯಾಲಯದ ಬೋಧಕವರ್ಗದಲ್ಲಿದ್ದಂತಹ ಪಂಡಿತರು. ಆವರ ಅನುವಾದಗಳನ್ನಲ್ಲದೆ, ಶ್ರೀ ಮಂಜುನಾಥ ಕೊಳ್ಳೇಗಾಲರು ತಮ್ಮ ಬ್ಲಾ॑ಗಿನಲ್ಲಿ ಪ್ರಕಟಿಸಿದ ಅನುವಾದವೊಂದನ್ನು ಇಲ್ಲಿ ಕೊಡುತ್ತಿದ್ದೇನೆ. ಇವರ ಅನುವಾದವು  ಅನಂತಮೂರ್ತಿ ಹಾಗು ಲಂಕೇಶ ಇವರ ಭಾಷಾಂತರಗಳಿಗಿಂತ ಉತ್ತಮವಾಗಿರುವದನ್ನು ಗಮನಿಸಬಹುದು. ಇದರ ತಾತ್ಪರ್ಯವೇನೆಂದರೆ, ಒಂದು ಕವನದ ‘ಸಾರ್ಥಕ ಅನುವಾದ’ಕ್ಕೆ ಬೇಕಾದದ್ದು ಸರಿಯಾದ ಮನೋಧರ್ಮವೇ ಹೊರತು ವಿಶ್ವವಿದ್ಯಾಲಯದ ಪಾಂಡಿತ್ಯವಲ್ಲ!

ದಾರಿಯಲ್ಲಿ ಆ ಪಾದ್ರಿ ಸಿಕ್ಕಿದ್ದ
ಅದೂ ಇದೂ ಮಾತಾಡಿದೆವು.
"ಎಂಥ ಮೊಲೆ, ಹೇಗೆ ಬತ್ತಿಹೋಗಿವೆ ನೋಡು,
ನರಗಳಿನ್ನೇನು ಸೊರಗುವುವು;
ನಡೆಯಿನ್ನಾದರು ಸ್ವರ್ಗದಲಿ ಬದುಕು
ಸಾಕೀ ನರಕದ ಕೊಳೆ ಬದುಕು"

"ಕೊಳಕಿಗು ಥಳುಕಿಗು ಬಿಡದಿಹ ನಂಟು
ಅಗಲಿ ಇರವು ಅವು" - ಚೀರಿದೆ ನಾನು,
"ಸಖರು ಹೋದರೂ ಗೋರಿಯೂ ತಿಳಿದಿದೆ
ಸುಖದ ಶಯ್ಯೆಯೂ ನಿಜವಿದನು.
ಈ ಪತಿತ ದೇಹದಲೆ, ವಿನಯದಿ ಹೆಮ್ಮೆಯ
ಮನದಿ ಅರಿತೆನೀ ಸತ್ಯವನು"

"ಹೆಣ್ಣು ಉಬ್ಬುವಳು ಸೆಡೆತು ಬೀಗುವಳು
ಪ್ರೇಮದುನ್ನತಾವಸ್ಥೆಯಲಿ;
ಆದರಾ ಪ್ರೇಮ ಸೌಧದ ನೆಲೆಯೋ
ಹೊಲಸೇ ತುಂಬಿದ ಠಾವಿನಲಿ!
ಹರಿಯದ ಬಿರಿಯದ ಒಂದಿದ್ದರೆ ಅದ
ಹೊಲೆವುದು ತಾನೇ ಎಲ್ಲಿ?"

ಮೂಲಕವನದ ಭಾವಕ್ಕೆ ಮಂಜುನಾಥರ ಅನುವಾದವು ಹತ್ತಿರದಲ್ಲಿದೆ ಎನ್ನಬಹುದು.

ಯೇಟ್ಸ ಕವಿಯ ಈ ಕವನದಲ್ಲಿ ಸಾಮಾಜಿಕ ವೈಷಮ್ಯದ ಜೊತೆಗೆ, ಪುರುಷಪ್ರಧಾನ ಸಮಾಜವ್ಯವಸ್ಥೆಯ ಭಂಡತನವೂ ಸಹ ವ್ಯಕ್ತವಾಗುತ್ತಿದೆ ಎನ್ನುವುದನ್ನು ಗಮನಿಸಬೇಕು.

30 comments:

ಸಿಂಧು sindhu said...

kaakaa,

what an enriching post!
will write later.
Thanks for this.

namaste, sindhu

Swarna said...

ಕಾಕಾ ,
ನೀವು ಕವಿತೆಯನ್ನು ಅರ್ಥೈಸುವ ಬಗೆ ಬಲು ಸೊಗಸು.
'For nothing can be sole or whole That has not been rent.' ಸಾಲು ಅದ್ಭುತ.
ಒಂದಾಗಿ ಬಿಡಿಯಾಗುವ,ಬಿಡಿಯಾಗಿ ಮತ್ತೆ ಒಂದಾಗುವುದೇ ಲೋಕದ ಚಲನ ಶಕ್ತಿಯ ಪ್ರೇರಕವಲ್ಲವೇ? ಸುಂದರ ಕವಿತೆಯೊಂದನ್ನು ಪರಿಚಯಿಸಿ , ಅನುವಾದದ ಬಗೆಗೆ ತಿಳಿಸಿದ್ದಕ್ಕೆ ವಂದನೆಗಳು
ಸ್ವರ್ಣಾ

ಈಶ್ವರ said...

ಅತ್ಯುತ್ತಮವಾದ ಲೇಖನ. ಇದು ನಿಜವಾದ ಅನುವಾದ. ಖುಷಿಯಾಯಿತು ಕಾಕಾ.
ಅನುವಾದವೆಂದರೆ ಅರ್ಥವಾಗದಂತೆ ಬರೆಯುವುದೇ ಕ್ರಿಯೆ ಅಲ್ಲವೇ?
ಮಂಜುನಾಥ ಕೊಳ್ಳೆಗಾಲರ ಕವನ ಅವೆರಡಕ್ಕಿಂತಲೂ ಸೊಗಸಾಗಿದೆ.

ವಂದನೆಗಳು.

sunaath said...

ಸಿಂಧು,
ಅನುವಾದದಂತಹ ಕಷ್ಟದ ಸಾಹಿತ್ಯಕಾರ್ಯ ಮತ್ತೊಂದಿಲ್ಲ!

sunaath said...

ಸ್ವರ್ಣಾ,
'For nothing can be sole or whole That has not been rent’ ಎನ್ನುವ ಸಾಲನ್ನು ಯೇಟ್ಸ ಕವಿ ಎಷ್ಟೆಲ್ಲ ಬಗೆಯಿಂದ ಅರ್ಥಪೂರ್ಣ ಮಾಡಿದ್ದಾನಲ್ಲವೆ?

sunaath said...

ಈಶ್ವರ ಭಟ್ಟರೆ,
ಅನಂತಮೂರ್ತಿ ಹಾಗು ಲಂಕೇಶರು ಅನುವಾದಕ್ಕು ಮೊದಲು ಕವನವನ್ನು ಅರ್ಥ ಮಾಡಿಕೊಂಡರೆ?--ಎನ್ನುವ ಸಂದೇಹ ನನಗಿದೆ! ಮಂಜುನಾಥರು ತಮ್ಮ ಅನುವಾದ-ಸಾಮರ್ಥ್ಯವನ್ನು ತೋರಿಸಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ.

Badarinath Palavalli said...

ತುಂಬಾ ಖುಷಿಯಾಯಿತು ಸಾರ್. ಇಂತಹ ಬರಹ ನನಗೆ ಸಂಗ್ರಹ ಯೋಗ್ಯ. ಮಂಜುನಾಥ ಸಾರ್ ಅವರ ಅನುವಾದವೂ ಚೆನ್ನಾಗಿದೆ.

sunaath said...

ಧನ್ಯವಾದಗಳು, ಬದರಿನಾಥರೆ!

ಮಂಜುಳಾದೇವಿ said...

ಸಾರ್ಥಕ ಅನುವಾದದ ಅರ್ಥವನ್ನು ಬಿಡಿಸಿಟ್ಟ ರೀತಿ ಇಷ್ಟವಾಯ್ತು.ಅತ್ಯುತ್ತಮವಾದ ಲೇಖನ ಸಾರ್.....

ಮನಸು said...

ಕಾಕ,
ನಿಜಕ್ಕೂ ಈ ಲೇಖನ ಓದಿ ಖುಷಿಯಾಯಿತು. ಮೂಲ ಕವನಗಳನ್ನು ಭಾಷಾಂತರಿಸುವಾಗ ಭಾವನೆಗಳಿಗೆ ಕೊರತೆ ಬರುತ್ತದೇನೋ ಎಂದು ಎಷ್ಟೋ ಸರಿ ಯೋಚಿಸಿದ್ದೀನಿ.
ನೀವು ನೀಡಿದ ವಿಶ್ಲೇಷಣೆ ನಿಜಕ್ಕೂ ಅರ್ಥಗರ್ಭಿತವಾಗಿದೆ ಮೂರು ಕವನಗಳಲ್ಲಿ ಮಂಜುನಾಥ್ ಸರ್ ಅವರ ಕವನ ನೀವು ಹೇಳಿದಂತೆ ಸೊಗಸಾಗಿದೆ ಹೆಚ್ಚು ಮೂಲ ಕವನಕ್ಕೆ ಹೊಂದುತ್ತದೆ.
ಧನ್ಯವಾದಗಳು ಕಾಕ

ದಿನಕರ ಮೊಗೇರ said...

prati baari nimma lekhana odidaagalu namma bagge namage abhimaana hecchatte...yaakendare naanu nimma lekhana oduttiddeve...

superb sir... nivu kavanagaLanna vishleshaNe maaDuva reeti wonderful..

Manjunatha Kollegala said...

ಕೆಲಸದ ಒತ್ತಡದಿಂದ ಕೆಲಕಾಲ ಬ್ಲಾಗ್ ಲೋಕದ ಕಡೆ ತಲೆಹಾಕಲಾಗಿರಲಿಲ್ಲ. ಮೊನ್ನೆ ಈಶ್ವರಭಟ್ಟರ facebook link ಹಿಡಿದು ಇಲ್ಲಿ ಬಂದರೆ ಇಲ್ಲೊಂದು ಖುಶಿ ತುಂಬಿದ ಆಶ್ಚರ್ಯವಿತ್ತು! ಅನಂತಮೂರ್ತಿ ಮತ್ತು ಲಂಕೇಶರ ಅನುವಾದಗಳ ಜೊತೆ ನನ್ನ ಅನುವಾದವನ್ನೂ ಇಲ್ಲಿ ಕಂಡು ಥ್ರಿಲ್ ಆಯಿತು. ಬೇಂದ್ರೆ, ಅಡಿಗರೇ ಮೊದಲಾದ ಹಿರಿ ಕವಿಗಳ ಕಾವ್ಯವನ್ನು ಸವಿಯಲು ಇಲ್ಲಿ ಬರುತ್ತಿದ್ದ ನನಗೆ ನನ್ನನ್ನೇ ಇಲ್ಲಿ ಕಂಡು ಗಲಿಬಿಲಿಯಾದದ್ದಂತು ನಿಜ - ನಾಟಕ ನೋಡಲು ಬಂದ ಪ್ರೇಕ್ಷಕನನ್ನೇ ರಂಗಸ್ಥಳದ ಮೇಲೆ ಕರೆತಂದಂತೆ. ಹಿರಿಯರ ಅಭಿಮಾನ ಯಾವತ್ತೂ ಹಿರಿದೇ. ಅದಕ್ಕೆ ನಾನು ಋಣಿ.

sunaath said...

ಮಂಜುಳಾದೇವಿಯವರೆ,
ಬಿ.ಎಮ್.ಶ್ರೀಕಂಠಯ್ಯನವರ ‘ಕರುಣಾಳು ಬಾ ಬೆಳಕೆ’ ಕವನಕ್ಕೆ ‘ಸಾರ್ಥಕ ಅನುವಾದ’ ಎನ್ನಬಹುದು, ಅಲ್ಲವೆ?

sunaath said...

ಮನಸು,
ಧನ್ಯವಾದಗಳು. ಬೇರೆ ಭಾಷೆಯ ಕವನವೊಂದನ್ನು ನಾವೇ ಅನುವಾದಿಸಲು ಪ್ರಯತ್ನಿಸುತ್ತಿದ್ದರೆ, ಮೂಲಕವನದ ಅನೇಕ ವೈಶಿಷ್ಟ್ಯಗಳು ಹೊಳೆಯುತ್ತವೆ. ಇದೇ ರೀತಿಯಲ್ಲಿ ಯಾರೊಬ್ಬರ ಅನುವಾದವನ್ನು ಪರೀಕ್ಷಿಸುತ್ತಿದ್ದಾಗಲೂ ಸಹ, ಮೂಲಕವನದ ಸೊಗಸು ಮತ್ತಷ್ಟು ಚೆನ್ನಾಗಿ ಅರ್ಥವಾಗುತ್ತದೆ!

sunaath said...

ದಿನಕರ,
Thanks. ನಾನು ತಿಳಿದದ್ದು ಸ್ವಲ್ಪ. ಅದನ್ನೇ ನಿಮ್ಮ ಎದುರಿಗೆ ಇಡುತ್ತಿದ್ದೇನೆ. ನೀವು ಅದನ್ನು ಪ್ರೀತಿಯಿಂದ ಸ್ವೀಕರಿಸುತ್ತಿದ್ದೀರಿ!

sunaath said...

ಮಂಜುನಾಥರೆ,
ನಿಮ್ಮ ಬಗೆಗೆ ಅಭಿಮಾನವಿದ್ದರೆ, ಅದಕ್ಕೆ ನಿಮ್ಮ ಬರಹಗಳೇ ಕಾರಣ!

Subrahmanya said...

ಕಾಕಾ,

ಮೂರೂ ಅನುವಾದಗಳನ್ನು ಇಲ್ಲಿ ಕೊಟ್ಟು ವಿವರಿಸಿದ್ದಕ್ಕೆ ಧನ್ಯವಾದ. ಮತ್ತೆ,

"ಮಂಜುನಾಥರೆ,
ನಿಮ್ಮ ಬಗೆಗೆ ಅಭಿಮಾನವಿದ್ದರೆ, ಅದಕ್ಕೆ ನಿಮ್ಮ ಬರಹಗಳೇ ಕಾರಣ! "

This is perfect !. :)

sunaath said...

ಪುತ್ತರ್,
ನೀವೆಲ್ಲರೂ ನನಗೆ ಭಾಷೆಯ ಸುಖ ಹಾಗು ಸಾಹಿತ್ಯದ ಸುಖವನ್ನು ಕೊಡುತ್ತಿದ್ದೀರಿ. ನಿಮ್ಮ ಬಗೆಗೆ ಪ್ರೀತಿ ಹಾಗು ಅಭಿಮಾನ ಸಹಜವೇ ಆಗಿದೆ.

bilimugilu said...

Hi Sunaath,
Simply enjoyed reading through.....
ನನ್ನ೦ತ ಸಾಮಾನ್ಯಳಿಗೂ ಅರ್ಥವಾಗುವ ಹಾಗೆ ಸಾಲು ಸಾಲಾಗಿ ವಿವರಿಸಿರುವ ಪರಿ ಮೆಚ್ಚಬೇಕು....
ಒಂದು ಕವನದ ‘ಸಾರ್ಥಕ ಅನುವಾದ’ಕ್ಕೆ ಬೇಕಾದದ್ದು ಸರಿಯಾದ ಮನೋಧರ್ಮವೇ ಹೊರತು ವಿಶ್ವವಿದ್ಯಾಲಯದ ಪಾಂಡಿತ್ಯವಲ್ಲ!
ಈ ಸಾಲು ಅತ್ಯ೦ತ - ಅತ್ಯ೦ತ ಇಷ್ಟವಾಯಿತು. Replicating Wisdom of Thought, Expression & Presentation!
ಇನ್ನು ಮ೦ಜುನಾಥರ ಅನುವಾದಿತ ಕವನ Hats Off.... ಬೇರೊ೦ದು ಮಾತಿಲ್ಲ.....
- ರೂಪ ಸತೀಶ್

sunaath said...

ರೂಪಾ,
ನಿಮ್ಮ ಸ್ಪಂದನಕ್ಕೆ ಧನ್ಯವಾದಗಳು. ಆದರೆ, ‘ನನ್ನಂಥ ಸಾಮಾನ್ಯಳಿಗೂ’ ಎನ್ನುವ ನಿಮ್ಮ ಮಾತನ್ನು ನಾನು ಒಪ್ಪುವುದಿಲ್ಲ. ಸಾಹಿತ್ಯಾಸಕ್ತರು ಸಾಮಾನ್ಯರಾಗಲು ಸಾಧ್ಯವೆ?

http://nishachara.blogspot.in/ said...

Sir,
You made my day. Such a wonderful intellectual stuff to think and ponder all day. I wish and meet you some day and listen to you about Bendre and poems.
Thanks
Shashi

sunaath said...

ಶಶಿ,
ಧನ್ಯವಾದಗಳು. ನೀವು ಮೆಚ್ಚಿಕೊಂಡರೆ ನಾನು ಧನ್ಯ.

Vikram Nayak said...

Good criticism

sunaath said...

Thank you, Vikram!

Unknown said...

ಸುನಾಥ ಕಾಕಾ,
ಅತ್ಯುತ್ತಮವಾದ ಲೇಖನ. ನನ್ನಂಥ ಎಳಸರಿಗೆ ಇದು ಅತ್ಯಂತ ಉಪಯುಕ್ತ, ಶಕ್ತ ಉದಾಹರಣೆಯೊಂದಿಗೆ, ಮೂಲವನ್ನು ಬಗೆಯುವ ವಿಧಾನ ಹೇಳಿಕೊಡುವ ಪರಿ ಅದ್ಭುತ. it is like - "ಅನುವಾದ For Dummies, A Reference for the Rest of Us" ಎನ್ನುವಂತಿದೆ. "ವಿಶ್ವವಿದ್ಯಾಲಯದ ಬೋಧಕವರ್ಗದಲ್ಲಿದ್ದಂತಹ ಪಂಡಿತರ" ಅನುವಾದದಲ್ಲಿ ಹೇಗೋ ಕವನದ ಅರ್ಥ ಧ್ವನಿಸಿರುತ್ತದೆ ಎಂದುಕೊಂಡಿದ್ದೆ - ಅವರಿಗಿರುವ ಓದಿನ ಆಳ ಹಾಗೂ ಕವಿಯ,ಕವನದ ಹಿನ್ನೇಲೆಯಿಂದಾಗಿ -ಇದು ತಪ್ಪು ಅನಿಸಿಕೆ ಎಂದು ಯಾಕೋ ಒಪ್ಪಲಾಗುತ್ತಿಲ್ಲ. ಎರಡು ಸಾಧ್ಯತೆಗಳು (by no means am I trying to justify) -೧) ಅನಂತಮೂರ್ತಿ/ಲಂಕೇಶ ಇದನ್ನು ಬಹಳ ಹಿಂದೆ ಬರೆದಿರಬಹುದೆ? ೨)ಯಾವದೋ ಒತ್ತಡದಲ್ಲಿ/ಪದಶಃ ಭಾಷಾಂತರಿಸಿದರೆ? ಏನೇ ಇದ್ದರೂ ನೀವು ಹೇಳಿದಂತೆ ಇವೆರಡು ಅನುವಾದದಲ್ಲಿ ಮನೋಧರ್ಮದ ಕೊರತೆ ಎದ್ದು ಕಾಣುತ್ತದೆ.
ಇನ್ನೊಂದು ಪ್ರಶ್ನೆ - ಇದು ನನ್ನಂಥ ಅವಡಾ-ಸವಡಾ ಆದ್ಮಿಗಾಗಿ(ಶಾಲೆಯಲ್ಲಿ ಸಾಹಿತ್ಯ ಓದದವರಿಗಾಗಿ) ಹೆಚ್ಚು ಉಪಯೋಗಿ ಎನಿಸುತ್ತಿರುವದರಿಂದ ಉದ್ಭವವಾದದ್ದು- This poem is the sixth in a series of seven in which Crazy Jane is the persona. ಇಂಥವನ್ನು ಅನುವಾದ ಮಾಡಲು Yeats ನನ್ನು ಅರೆದು ಕುಡಿದಿರಬೇಕೆ? ಪೂರ್ತಿಯಾಗಿ ಆ series ಅನ್ನು ಆಳವಾಗಿ ಅಭ್ಯಸಿಸಬೇಕೆ? ಪೂರ್ತಿಯಾಗಿ ಓದಿದ್ದರೆ ಖಂಡಿತವಾಗಿಯೂ ಸಾಮಾಜಿಕ ವೈಷಮ್ಯ, ಭಂಡ ಪುರುಷರ ಮಾತಿನ ಧ್ವನಿ ಇನ್ನೂ ಶಕ್ತವಾಗಿ ಮೋಡಬಹುದೋ ಏನೋ?
ವಂದನೆಗಳು.
-ಅನಿಲ ತಾಳಿಕೋಟಿ

sunaath said...

ಅನಿಲರೆ,
ಪ್ಯಾಬ್ಲೊ ನೆರೂಡಾನ ಕವನದ ನಿಮ್ಮ ಅನುವಾದವನ್ನು ಇದೀಗ ತಾನೆ ಓದಿದೆ. ಆ ಕವನದ ಭಾವ ಹಾಗು ಸ್ವಭಾವ ನಿಮ್ಮ ಅನುವಾದದಲ್ಲಿ ಸಮರ್ಥವಾಗಿ ಹೊರಹೊಮ್ಮಿವೆ
ಯಾವುದೇ ಕವಿಯ ಆಳವಾದ ಅಧ್ಯಯನವು ಆತನ ಕವನಗಳ ಸರಿಯಾದ ಅನುವಾದಕ್ಕೆ ನೆರವಾಗಬಹುದಷ್ಟೆ. ಆದರೆ ಅನುವಾದಕನ ಮನೋಧರ್ಮವು ಮಹತ್ವದ factor ಆಗಿದೆ!

Sharath Bhat S said...

I am a big fan of your blog. Looks like UR Anantha Moorthi translated it twice. The one in his book ಶತಮಾನದ ಕವಿ ಯೇಟ್ಸ್ is different from the one that you have given.

This is URA's version as given in the book:
ಮರುಳಿ ಜೇನ್‌ ಪಾದ್ರಿಗೆ
ನನ್ನನು ಹಂಗಿಸಿ ಹೇಳಿದ ಪಾದ್ರಿ
ರಸ್ತೆಯ ಬದಿಯಲ್ಲಿ:
‘ಜೋತಿವೆ ಮೊಲೆ, ರಸ ಬತ್ತುತ
ಯೋನಿನಾಳದಲ್ಲಿ;
ಪಡಿ ಶ್ರೇಯಸ್ಸನು ಭಗವಂತನ ಸೌಧದಿ
ನೀನಿದಿ ಪ್ರೇಯದ ಬಿಲದಲ್ಲಿ.’
‘ಪ್ರೇಯಸ್‌, ಶ್ರೇಯಸ್‌ ನೆಂಟೋ ಪಾದ್ರಿ
ಅದಕಿದು ಬೇಕಾದ್ದೆ;
ಸುಕ್ಕಿದ ಈ ಮೈ ತಿಳಿಯುವ ಮರ್ತ್ಯತೆ
ಸೊಕ್ಕಿದ ಹೃದಯಕು ಹೊಳೆದದ್ದೆ;
ಮರಣದ ದಿಟ ಬರಿ ಗೋರಿ ಸಾರಿತೆ ಗುರು?
ಹಾಸಿಗೆ-
ಬೆಸೆಯುವ ಸುಖಕೂ ದಕ್ಕಿದ್ದೆ.
ಆದರೇನು ಬಿಡು, ಅನುರಕ್ತೆ ಕೊಬ್ಬಿ
ನೆಲಕಾಣದಂಥ ನಲ್ಲೆ;
ಪ್ರೇಮವೆಬ್ಬಿಸಿದೆ ಭವ್ಯಸೌಧ
ಅಮೇಧ್ಯದ ಸ್ಥಲದಲ್ಲೆ;
ಒಡೆಯದೆ ಇದ್ದುದು ಇಡಿಯಾದ್ದಿದೆಯೆ ಗುರು?
ಪಡದೇ ಫಲವುಂಟೆ?
ಶ್ರೇಯಸ್ಸೇನು? ಪ್ರೇಯಸ್ಸೇನು?
ಕೇಳೋ ಸಾಧು,
ಅದೆ ಇದು ಅಲ್ಲೇನು?’

Your points are valid nonetheless. URA's translations fail to convey the tone and theme of the original poems.

sunaath said...

ಪ್ರಿಯ ಶರತ್,
ನೀವು ಹೇಳಿದಂತೆ ಅನಂತಮೂರ್ತಿಯವರು ಎರಡು ಸಲ ಅನುವಾದ ಮಾಡಿರಬೇಕು. ನಾನು ಗ್ರಂಥಾಲಯದಲ್ಲಿ ಈ ಅನುವಾದಗಳನ್ನು ಹುಡುಕಿ ನೋಡುವೆ. ಧನ್ಯವಾದಗಳು.

ಮಹಿಮಾ said...

ಎಂಥ ಸುಂದರ ವಿಚಾರಪೂರ್ಣ ಲೇಖನ,ಮಂಜುನಾಥ ಕೊಳ್ಳೇಗಾಲ ಅವರ ಭಾವಾನುವಾದ (ಅನ್ನಬಹುದಾ) ಬಹಳ ಹತ್ತಿರದ್ದು ಮೂಲ ಕವಿತೆಯ ನಿಜ ಭಾವಕ್ಕೆ,ಇಂತಹ ಪೋಸ್ಟುಗಳು ಓದಲು ಸಿಕ್ಕುವುದೆ ಭಾಗ್ಯ, ನಿಮ್ಮ ಸಾಹಿತ್ಯ ಸಲ್ಲಾಪ ಸಾಗುತ್ತಿರಲಿ, ನಮಗೆ ಬಗೆನೂರ ದಾರಿಗೆ ಬೆಳಕು ಬೀರುತ್ತಿರಲಿ

sunaath said...

ಧನ್ಯವಾದಗಳು, ಮಹಿಮಾ. ನನ್ನ ಅಲ್ಪಮತಿಗೆ ತಿಳಿದದ್ದನ್ನು ಹೇಳಿದ್ದೇನೆ. ನೀವು ಪ್ರೀತಿಯಿಂದ ಸ್ವೀಕರಿಸಿದ್ದೀರಿ.