Sunday, August 25, 2013

ಹಿಂದs ನೋಡದs (ಒಂದು ಹಳೆಯ ಚಿತ್ರವನ್ನು ಕುರಿತು).......ಬೇಂದ್ರೆ



ಹಿಂದs ನೋಡದs
(ಒಂದು ಹಳೆಯ ಚಿತ್ರವನ್ನು ಕುರಿತು)

ಹಿಂದs ನೋಡದs | ಗೆಳತಿ
               ಹಿಂದs ನೋಡದs

ಒಂದೇ ಬಾರಿ ನನ್ನ ನೋಡಿ
ಮಂದ ನಗೀ ಹಾಂಗs ಬೀರಿ
ಮುಂದs  ಮುಂದs ಮುಂದs ಹೋದ || ಹಿಂದs…

ಗಾಳಿ ಹೆಜ್ಜೆ ಹಿಡದ ಸುಗಂಧ
ಅತ್ತs ಅತ್ತs ಹೋಗುವಂದ
ಹೋತ ಮನಸು ಅವನ ಹಿಂದs || ಹಿಂದs…

ನಂದ ನನಗ ಎಚ್ಚರಿಲ್ಲ
ಮಂದಿಗೊಡವಿ ಏನs ನನಗs
ಒಂದೇ ಅಳತಿ ನಡದದ ಚಿತ್ತ || ಹಿಂದs…

ಸೂಜಿ ಹಿಂದ ಧಾರದಾಂಗ
ಕೊಳ್ಳದೊಳಗ ಜಾರಿಧಾಂಗ
ಹೋತs ಹಿಂದ ಬಾರಧಾಂಗ || ಹಿಂದs…
…………………………………………………………..

ಹದಿಹರೆಯವು ಪ್ರೇಮಾಕರ್ಷಣೆಯ ಕಾಲವಾಗಿದೆ. ಈ ಅನುಭವವು ಎಲ್ಲರಿಗೂ ಆಗಿರುವಂತಹದೆ. ಬೇಂದ್ರೆಯವರು ಸ್ವತಃ ಈ ಆಕರ್ಷಣೆಯ ಜಾಲದಲ್ಲಿ ಸಿಲುಕಿರಲಿಕ್ಕಿಲ್ಲ. ಅದರೆ ಅಂತಹ ಪ್ರಸಂಗಗಳನ್ನು ಅವರು ಕಂಡಿರಬಹುದು. ಅವರು ರಚಿಸಿದ ಇಂತಹ ಪ್ರೇಮಕವನಗಳು ಬಹುತೇಕವಾಗಿ ನಾಯಿಕಾ-ಪ್ರಧಾನವಾಗಿವೆಯೇ ಹೊರತು ನಾಯಕ-ಪ್ರಧಾನವಾಗಿಲ್ಲ ಎನ್ನುವುದು ಗಮನಾರ್ಹವಾಗಿದೆ. ಇದಕ್ಕೆ ಕಾರಣವೇನಿರಬಹುದು? ಹುಡುಗಿಯರು ಹುಡುಗರಿಗಿಂತ ಹೆಚ್ಚು ಭಾವಜೀವಿಗಳು ಎನ್ನುವುದು ಅವರ ಅಭಿಪ್ರಾಯವಾಗಿರಬಹುದೆ? ‘ಹುಡುಗರ ಭಾವನೆಗಳಲ್ಲಿ ವರ್ಣಿಸಲಿಕ್ಕೆ ಏನಿದೆ ಮಣ್ಣು?’ ಎನ್ನುವುದು ಅವರ ಅನಿಸಿಕೆಯಾಗಿರಬಹುದೆ!?



‘ಹಿಂದs ನೋಡದs’ ಎನ್ನುವ ಕವನವು ಹದಿಹರೆಯದಲ್ಲಿ ಆಕರ್ಷಣೆಯ ಜಾಲಕ್ಕೆ ಮೊದಲ ಸಲ ಸಿಲುಕಿದ ಬಾಲೆಯೊಬ್ಬಳ ಭಾವಗೀತೆಯಾಗಿದೆ. ಆದರೆ ಈ ಅನುಭವದ ಅನೇಕ ವರ್ಷಗಳ ನಂತರ ಅವಳು ತನ್ನ ಸಖಿಯಲ್ಲಿ ಈ ಹಳೆಯ ಕತೆಯನ್ನು ಬಿಚ್ಚಿಡುತ್ತಿದ್ದಾಳೆ. ಆ ಕಾರಣದಿಂದಾಗಿಯೇ, ಕವನದ ಶೀರ್ಷಕದ ಕೆಳಗೆ `ಒಂದು ಹಳೆಯ ಚಿತ್ರವನ್ನು ಕುರಿತು’ ಎನ್ನುವ ಸೂಚನೆಯನ್ನು ವರಕವಿಗಳು ನೀಡಿದ್ದಾಳೆ. ಕಾಲವು ನೀರಿನಂತೆ ಹರಿದು ಹೋಗಿದೆ. ಆದರೆ  ಚಿಕ್ಕ ಮಕ್ಕಳು  ತಮ್ಮ ಪುಸ್ತಕದಲ್ಲಿ ನವಿಲುಗರಿಯನ್ನು ಪ್ರೀತಿಯಿಂದ ಇಟ್ಟುಕೊಳ್ಳುವಂತೆ ಈ ಹೆಣ್ಣುಮಗಳು ತನ್ನ ಮೊದಲ ಪ್ರೇಮಾನುಭವವನ್ನು ತನ್ನ ಹೃದಯದಲ್ಲಿ ಕಾಪಿಟ್ಟಿದ್ದಾಳೆ. ಆ ಅನುಭವವನ್ನು ವಾಸ್ತವ ದೃಷ್ಟಿಕೋನದಿಂದ ವಿಶ್ಲೇಷಿಸಿ ಹೇಳುವ ಪ್ರೌಢತೆ ಅವಳಿಗೆ ಈಗ ಬಂದಿದೆ.
……………………………………………………………
`ಹಿಂದs ನೋಡದs | ಗೆಳತಿ
               ಹಿಂದs ನೋಡದs’ ಎನ್ನುವ ಪದಪುಂಜವು ಈ ಕವನದಲ್ಲಿ ೫ ಸಲ ಉಕ್ತವಾಗಿದೆ. ಪ್ರತಿ ಸಲವೂ ಈ ಪದಪುಂಜಕ್ಕೆ ಬೇಂದ್ರೆಯವರು ವಿಭಿನ್ನ ಅರ್ಥವನ್ನೇ ನೀಡಿದ್ದಾರೆ. ‘ಹಿಂದೆ ನೋಡುವುದು’ ಎಂದರೆ ಹಳೆಯದನ್ನು ನೆನಪಿಸಿಕೊಳ್ಳುವುದು. ಸಖಿಯ ಜೊತೆಗೆ ತನ್ನ ಹಳೆಯ ಅನುಭವವನ್ನು ಹಂಚಿಕೊಳ್ಳುತ್ತಿರುವ ನಮ್ಮ ನಾಯಕಿಯು ‘ಹಿಂದs ನೋಡದs’ ಎಂದು ಹೇಳುವುದೇ ಒಂದು ವಿರೋಧಾಲಂಕಾರವಾಗಿದೆ.

ನಮ್ಮ ನಾಯಕಿಯನ್ನು ಈ ಪರಿ ಆಕರ್ಷಿಸಿದ ತರುಣನು ಅವಳಿಗೆ ಅಪರಿಚಿತ. ಅಕಸ್ಮಾತ್ತಾಗಿ ಅವಳಿಗೆ ಜಾತ್ರೆಯಲ್ಲಿ ಅಥವಾ ಒಂದು ಸಾರ್ವಜನಿಕ ಜಾಗದಲ್ಲಿ ಕಂಡವನು. ಅವನನ್ನು ನೋಡಿದ ತಕ್ಷಣ ನಮ್ಮ ನಾಯಕಿಯು ಅವನಿಗೆ ತನ್ನ ಹೃದಯವನ್ನು ಅರ್ಪಿಸಿದಳು. ಆತ ಯಾರು, ಆತನ ಕುಲಗೋತ್ರವೇನು ಇದಾವದನ್ನೂ ಅರಿಯದೆ ಅವನಿಗೆ ಮಾರು ಹೋದ ಹುಡುಗಿ ಇವಳು. ಆದುದರಿಂದಲೇ ತನ್ನ ಸಖಿಗೆ ಇವಳು  ‘ಹಿಂದೆ ಮುಂದೆ ನೋಡದೆ’ ಅವನಿಗೆ ಮರುಳಾದೆ ಎಂದು ಹೇಳುತ್ತಿದ್ದಾಳೆ. ‘ಹಿಂದs ನೋಡದs’ ಎನ್ನುವ ಪದಪುಂಜದ ಮೊದಲನೆಯ ಅರ್ಥವಿದು.

ಇವಳ ನೋಟಕ್ಕೆ ಆ ತರುಣನ ಪ್ರತಿಕ್ರಿಯೆ ಏನು?
ಒಂದೇ ಬಾರಿ ನನ್ನ ನೋಡಿ
ಮಂದ ನಗೀ ಹಾಂಗs ಬೀರಿ
ಮುಂದs  ಮುಂದs ಮುಂದs ಹೋದ || ಹಿಂದs…
ಆತ ಇವಳ ಪ್ರೇಮಕಟಾಕ್ಷವನ್ನು ಒಪ್ಪಿಕೊಳ್ಳುತ್ತಾನೆ, ಆದರೆ ಉತ್ತೇಜಿಸುವದಿಲ್ಲ. ಒಂದೇ ಸಲ ಇವಳನ್ನು ನೋಡುತ್ತಾನೆ. ಸಭ್ಯತೆಯ ಸಂಕೇತವೆಂಬಂತೆ ಒಂದು ಮುಗುಳುನಗೆಯನ್ನು ಬೀರಿ ಆತ ಮುನ್ನಡೆಯುತ್ತಾನೆ.  `ಹಾಂಗs ಬೀರಿ’ ಎನ್ನುವಾಗ ‘ತನಗೆ ಈ ಹುಡುಗಿಯೇನೂ ವಿಶೇಷವಲ್ಲ’ ಎನ್ನುವ ಭಾವನೆ ಇದೆ. ಆತ ಅಲ್ಲಿಯೇ ನಿಂತು ಇವಳೊಡನೆ ‘ಕಣ್ಣಾಟ’ವಾಡಬಹುದಾಗಿತ್ತು. ಆದರೆ ಅವನು ಅಂಥವನಲ್ಲ! ಹಾಗಾಗಿ ಆತನು ಹಿಂದೆ ತಿರುಗಿ ಸಹ ನೋಡುವದಿಲ್ಲ. ತನ್ನ ವಿಚಾರಗಳಲ್ಲಿಯೇ ಮಗ್ನನಾದ ಆತನು ಹಾಗೇ ಮುಂದೆ ಹೋಗಿ ಬಿಡುತ್ತಾನೆ. ‘ಹಿಂದs ನೋಡದs’ ಎನ್ನುವ ಪದಪುಂಜದ ಎರಡನೆಯ ಅರ್ಥವಿದು.

ಆ ತರುಣನ ಇಂತಹ ಪ್ರತಿಕ್ರಿಯೆಯು ಅವನಲ್ಲಿ ಅವಳಿಗಿರುವ ಸೆಳೆತವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆತ ಕಾಣದಿದ್ದರೇನಾಯಿತು? ಅವಳ ಮನಸ್ಸು ಇಂದ್ರಿಯಾತೀತವಾಗಿ ಅವನ ಹಿಂದೆ ಹೋಗಿದೆಯಲ್ಲವೆ? ಅದನ್ನು ಅವಳು ಹೀಗೆ ಹೇಳುತ್ತಾಳೆ:
ಗಾಳಿ ಹೆಜ್ಜೆ ಹಿಡದ ಸುಗಂಧ
ಅತ್ತs ಅತ್ತs ಹೋಗುವಂದ
ಹೋತ ಮನಸು ಅವನ ಹಿಂದs || ಹಿಂದs…
ಹೂವಿನ ಸುಗಂಧವು ಗಾಳಿಯ ಜೊತೆಗೆ ಬೆರೆತು, ಗಾಳಿ ಹೋದಲ್ಲೆಲ್ಲ ಹೋಗುತ್ತದೆ. ಗಾಳಿ ಬೀಸಿದಾಗ ಮೊದಲು ಅದರ ಸ್ಪರ್ಶದ ಅನುಭವ ಆಗುತ್ತದೆ. ಆಬಳಿಕ ಅದರ ಜೊತೆಗಿರುವ ಕಂಪಿನ ಅನುಭವ ಆಗುತ್ತದೆ. ಆದುದರಿಂದ ಸುಗಂಧವು ಗಾಳಿಯನ್ನು ಹಿಂಬಾಲಿಸುತ್ತದೆ.

‘ಹೆಜ್ಜೆ ಹಿಡಿದು ಹೋಗುವುದು’ ಎನ್ನುವುದಕ್ಕೆ ಇರುವ ಒಂದು ವಿಶೇಷ ಅರ್ಥವನ್ನೂ ಸಹ ಇಲ್ಲಿ ಗಮನಿಸಬೇಕು. ಬೇಟೆಗಾರನು ತನ್ನ ಬೇಟೆಯನ್ನು ಹಿಂಬಾಲಿಸುವದಕ್ಕೆ ‘ಹೆಜ್ಜೆ ಹಿಡಿಯುವುದು’ ಎನ್ನುತ್ತಾರೆ. ಅದರಂತೆ ನಮ್ಮ ನಾಯಕಿಯ ಪ್ರೇಮಿಯು ಎಲ್ಲಿಯೇ ಚಲಿಸುತ್ತಿರಲಿ, ಅವಳ ಮನಸ್ಸು ಆತನ ಹೆಜ್ಜೆಯನ್ನು ಕಂಡು ಹಿಡಿದು, ಅವನನ್ನು ಹಿಂಬಾಲಿಸುತ್ತಿದೆ. ಹಾಗೆಂದು ಅವಳ ಆಕರ್ಷಣೆಯ ಬಗೆಗೆ ತಪ್ಪು ತಿಳಿಯಬಾರದು. ಅದು ಸುಗಂಧಮಯ, ಅದು ಸುಮನಸ್ಸು. ಗಾಳಿಯ ವಿರುದ್ಧ ದಿಕ್ಕಿನಲ್ಲಿ ಈ ಸುಗಂಧ ಚಲಿಸಲಾರದು. ಅದರ ದಾರಿಯು ನಿಶ್ಚಿತವಾಗಿದೆ. ಇದು ‘ಹಿಂದs ನೋಡದs’  ಎನ್ನುವ ಪದಪುಂಜದ ಮೂರನೆಯ ಅರ್ಥ.

ನಂದ ನನಗ ಎಚ್ಚರಿಲ್ಲ
ಮಂದಿಗೊಡವಿ ಏನs ನನಗs
ಒಂದೇ ಅಳತಿ ನಡದದ ಚಿತ್ತ || ಹಿಂದs…
ಹೀಗೆ ಪರವಶಳಾಗಿ ಕುಳಿತಿರುವ ಹದಿಹರೆಯದ ಹುಡುಗಿಯನ್ನು ನೋಡಿದವರು ಏನಂದಾರು?
ಆದರೆ ತನ್ನ ಖಬರೇ ತನಗೆ ಇಲ್ಲದವಳು ಮಂದಿಯ ಮಾತಿಗೆ ಗಮನ ಕೊಡುವಳೆ?
ಅವಳ ಚಿತ್ತವು ಬಾಹ್ಯ ಪರಿಸರದತ್ತ ಗಮನ ಹರಿಸದೇ ತನ್ನ ಅಂತರಂಗದ ಭಾವದಲ್ಲಿಯೇ ತಲ್ಲೀನವಾಗಿ, ಸಮವೇಗದಲ್ಲಿ ನಡೆದಿದೆ. ಅವಳ ಮನಸ್ಸು ಪ್ರೇಮದ ದಾರಿಯಲ್ಲೇ ಮುನ್ನಡೆಯುವುದು. ಇದು ಈ ಪದಪುಂಜದ ನಾಲ್ಕನೆಯ ಅರ್ಥ.

ತನ್ನ ಪ್ರೇಮವು ತಾತ್ಪೂರ್ತಿಕ ಆಕರ್ಷಣೆಯಲ್ಲ. ತನ್ನ ಮನಸ್ಸು ಆ ತರುಣನಲ್ಲಿ ಶಾಶ್ವತವಾಗಿ ನೆಟ್ಟಿದೆ ಎಂದು ಅವಳು ಹೇಳುತ್ತಾಳೆ:
ಸೂಜಿ ಹಿಂದ ಧಾರದಾಂಗ
ಕೊಳ್ಳದೊಳಗ ಜಾರಿಧಾಂಗ
ಹೋತs ಹಿಂದ ಬಾರಧಾಂಗ || ಹಿಂದs…
ಸೂಜಿಯಲ್ಲಿ ಸಿಲುಕಿಸಿದ ದಾರವು ಸೂಜಿಯನ್ನೇ ಹಿಂಬಾಲಿಸುವುದು ಅನಿವಾರ್ಯ. ಕೊಳ್ಳದಲ್ಲಿ ಜಾರುವುದು ಒಂದು ಆಕಸ್ಮಿಕ. ಹಾಗೆ ಜಾರಿದ ವ್ಯಕ್ತಿ ಮತ್ತಿಷ್ಟು ಜಾರುತ್ತ ಹೋಗುವುದೇ ಸಹಜವಾದದ್ದು. ನಮ್ಮ ನಾಯಕಿಯ ಮನಸ್ಸು ಸಹ ಹಿಂದೆ ಬಾರದಂತೆ, ಅಂದರೆ ಬದಲಾಯಿಸಲು ಅಶಕ್ಯವಾದಂತೆ ಆ ತರುಣನಲ್ಲಿ ಸಿಲುಕಿದೆ. ನಮ್ಮ ನಾಯಕಿಯು ತನ್ನ ನಿರ್ಧಾರದಲ್ಲಿ ಹಾಗು ನಿಷ್ಠೆಯಲ್ಲಿ ಅಚಲಳಾಗಿದ್ದಾಳೆ. ಆದುದರಿಂದಲೇ ಅವಳು ‘ಹಿಂದs ನೋಡದs’ ಎಂದು ಹೇಳುತ್ತಿದ್ದಾಳೆ. ಇದು ಈ ಪದಪುಂಜದ ಐದನೆಯ ಅರ್ಥ.

ಮೊದಲ ಪ್ರೇಮದ ವಿವಿಧ ಸ್ಥಿತಿಗಳನ್ನು ಬೇಂದ್ರೆಯವರು ಸುಸಂಬದ್ಧವಾಗಿ ಇಲ್ಲಿ ವರ್ಣಿಸಿದ್ದಾರೆ. ಈ ಸುಸಂಬದ್ಧತೆ ಅವರ ಕವನಗಳ ವೈಶಿಷ್ಟ್ಯವೇ ಆಗಿದೆ. ಇನ್ನು ‘ಹಿಂದs ನೋಡದs’ ಎನ್ನುವ ಪದಪುಂಜವನ್ನು ವಿಭಿನ್ನಾರ್ಥಗಳಲ್ಲಿ ಬಳಸಿರುವುದು ಬೇಂದ್ರೆ-ಪ್ರತಿಭೆಯ ದ್ಯೋತಕವಾಗಿದೆ!

‘ಹಿಂದs ನೋಡದs’ ಕವನವು ‘ಗಂಗಾವತರಣ’ ಕವನಸಂಕಲನದಲ್ಲಿ ಅಡಕವಾಗಿದೆ.

32 comments:

Badarinath Palavalli said...

ಹಳೆಯ ನೆನಪುಗಳನ್ನು ಮೀಟಬಲ್ಲ ಓದು ಮನಸ್ಸಿಗೆ ಚಿರ ಕಾಲ ನಿಲ್ಲುವ ಕಾವ್ಯ. ಅದು ಬೇಂದ್ರೆ ಅಜ್ಜನ ಗಿರಿಮೆ.

ಇಲ್ಲಿನ ವೈಶಿಷ್ಟ್ಯ ನೀವು ಗುರುತಿಸಿದಂತೆ ವಿರೋಧಾಲಂಕಾರ.

ನನ್ನ ಮಟ್ಟಿಗೆ ಆ ’ಹಿಂದs ನೋಡದs’" ಯಾವುದೋ ನೆನಪಿಗೆ ಜಾರಿಸುವ ಪದ ಜೋಡಿ.

ಧನ್ಯವಾದಗಳು ಸಾರ್.

Shubhada said...

ಸೂಪರ್ ಕಾಕಾ.

ಕವನಗಳನ್ನು ನೀವು analyse ಮಾಡಿ ವರ್ಣಿಸುವ ಪರಿಯೇ ಸೊಗಸು. ನಾನು ಹಲವಾರು ಕಡೆ ಹಾಡಿರುವ, ನನಗಿಷ್ಟದ ಹಾಡು ಇದು. ನಿಮ್ಮ ವರ್ಣನೆಯಿಂದ ಇನ್ನಷ್ಟು ಮನಸ್ಸಿಗೆ ಹತ್ತಿರವಾಯ್ತು. ಧನ್ಯವಾದಗಳು

sunaath said...

ಬದರಿನಾಥರೆ,
ಬೇಂದ್ರೆಯವರ ಕವನವು ನಮ್ಮನ್ನೂ ಸಹ ಹಿಂದೆ ಕರೆದೊಯ್ದು ಒಂದು ರಸಸಾಗರದಲ್ಲಿ ಮೀಯಿಸುತ್ತದೆ!

sunaath said...

ಶುಭದಾ,
ನೀವು ಈ ಗೀತೆಯನ್ನು ಹಾಡಿರುವುದನ್ನು ಕೇಳಿ ಸಂತಸವಾಯಿತು. ಇದು ನನಗೂ ಸಹ ಇಷ್ಟವಾದ ಕವನ.

ಚುಕ್ಕಿಚಿತ್ತಾರ said...

ಕಾಕ ಬೇಂದ್ರೆಯವರ ಕವನದ ಮೊದಲ ಪ್ರೇಮದ ಭಾವವನ್ನು
ಅಷ್ಟೇ ಸುಂದರವಾಗಿ ಕಟ್ಟಿಕೊಟ್ಟಿದ್ದೀರಿ.. ವಂದನೆಗಳು

Swarna said...

ಹರೆಯದ ಮಧುರ ಆಕರ್ಷಣೆಯನ್ನು ಬೇಂದ್ರೆ ಅಜ್ಜ ವರ್ಣಿಸಿದ ಪರಿ ಕಾಕಾ ವಿವರಿಸಿದ ಪರಿ ಎರಡೂ ಸೊಗಸು.ಹೆಣ್ಣೊಬ್ಬಳನ್ನು ಹರೆಯದ ನೆನಪಿಗೆ ಕೊಂಡೊಯ್ಯಲು 'ಹಿಂದs ನೋಡದs ' ಎನ್ನುವ ಪದ ಪುಂಜವೇ ಸಾಕು.ಸೃಷ್ಟಿಸಿದ ಅಜ್ಜನಿಗೊಂದು ಸಲಾಮು.

sunaath said...

ಚುಕ್ಕಿ,
ಮಧುರ ಪ್ರೇಮದ ಮಧುರ ಕವನ. ಇಂತಹ ಕವನವನ್ನು ನೀಡಿದ ಬೇಂದ್ರೆಯವರಿಗೆ ನಾವು ಕೃತಜ್ಞರಾಗಿರಬೇಕು.

sunaath said...

ಸ್ವರ್ಣಾ,
ಬೇಂದ್ರೆ ಎಂದರೆ ಪದ-ಮಾಂತ್ರಿಕ! ಅವರ ಓದುಗರನ್ನು ತಮ್ಮ ಮಾಯೆಯಲ್ಲಿ ಸಿಲುಕಿಸಿ ಬಿಡುತ್ತಾರೆ.

ಮಂಜುಳಾದೇವಿ said...

ಈ ಕವನವನ್ನು ನಾನು ಅನೇಕ ಸಾರಿ ಓದಿದ್ದೇನೆ...ಕೇಳಿದ್ದೇನೆ...ಆದರೆ "ಹಿಂದs ನೋಡದs" ಪದ ಪ್ರಯೋಗದಲ್ಲಿ ಐದಾರು ಅರ್ಥಗಳಿವೆ ಎನ್ನುವುದು ನಿಮ್ಮ ಈ ಲೇಖನ ಓದಿದ ನಂತರವೇ ತಿಳಿದಿದ್ದು....!!ಧನ್ಯವಾದಗಳು ಸಾರ್.

sunaath said...

ಮಂಜುಳಾದೇವಿಯವರೆ,
ನಿಮಗೂ ಧನ್ಯವಾದಗಳು.

ಈಶ್ವರ said...

ಅಜ್ಜ ಬರೆದ ಹಾಡುಗಳಿಗೆ
ಕಾಕಾ ಬರೆದ ಅರ್ಥಗಳಿಗೆ
ಮನಸು ಮೆಚ್ಚಿ ಹೌದೆನುತಿತ್ತು..

ಹಿಂದಾ ನೋಡದಾ :)

ಸೂಪರ್ ಸುನಾಥ್ ಕಾಕಾ.. ತುಂಬಾ ಇಷ್ಟವಾಯ್ತು. ಜನ್ಮಾಷ್ಟಮಿ ಶುಭಾಶಯಗಳು.

sunaath said...

ಧನ್ಯವಾದಗಳು, ಹಿಂದೆ ನೋಡದೆ!

bilimugilu said...

hi ಸುನಾಥ್,
ಬೇ೦ದ್ರೆಯವರ ಕವನವೇನೋ ಪ್ರೇಮಕವನ ಸರಿ,ಅದರ ಭಾವಗಳಿಗೆ ಹತ್ತಿರವಾಗಿಸಿದ್ದು, ಕವನವನ್ನು ಇನ್ನಷ್ಟು ಪ್ರೀತಿಸುವ೦ತೆ ಮಾಡಿದ್ದು, ನಾಯಕಿಯ ಪ್ರೇಮ ಪರವಶಕ್ಕೆ ನಮ್ಮನ್ನು ಒಲಿಸಿದ್ದು, ನಿಮ್ಮ ಸಾರಾ೦ಶ ಹಾಗು ವಿವರಣೆ.....
Enjoyed Reading It.
ರೂಪ

Unknown said...

ಸುನಾಥ್ ಸರ್ ,
ಬೇಂದ್ರೆ ಅಜ್ಜನ ಹಾಡನ್ನ ತುಂಬಾ ಚಂದದಿ ಕಟ್ಟಿಕೊಟ್ಟಿದ್ದೀರಿ ..
ಅಷ್ಟಾಗಿ ಕವನಗಳ ಇಷ್ಟಪಡದವರೂ ಕೂಡಾ ಇಷ್ಟ ಪಡೋ ಚಂದದ ಭಾವ :)
ಥಾಂಕ್ ಯು

Ashok.V.Shetty, Kodlady said...

ಕವನದಲ್ಲಿ ಬಂದ 'ಹಿಂದ ನೋಡದ' ಎಂಬುದರ ಐದು ತರಹದ ಅರ್ಥ ಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಈ ಕವನವನ್ನು ಹಲವು ಸಲ ಓದಿದ್ದೆ , ಆದರೆ ಈಗ ಅದರ ಸುಂದರ ಭಾವಾರ್ಥವನ್ನು ಓದಿದ ಮೇಲೆ ಈ ಕವನ ಇನ್ನೂ ಇಷ್ಟವಾಯಿತು ಸರ್ .... ಧನ್ಯವಾದಗಳು ಸರ್ ....

sunaath said...

ಬಿಳಿಮುಗಿಲು,
ಈ ಕವನವೇ ಅಮೃತಪಾನದಂತಿದೆ. ನಿಮಗದನ್ನು ಬಟ್ಟಲಿನಲ್ಲಿ ನೀಡಿದ್ದಷ್ಟೇ ನನ್ನ ಕೆಲಸ!

sunaath said...

ಭಾಗ್ಯಾ,
ನೀವು ಕವನಗಳನ್ನು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇನೆ.

sunaath said...

ಅಶೋಕರೆ,
ಬೇಂದ್ರೆಯವರ ಕವನಗಳಲ್ಲಿ ಹುಡುಕಿದಷ್ಟೂ ಅರ್ಥ ಹೆಚ್ಚುತ್ತಿರುತ್ತದೆ. ಕೆಲವೊಮ್ಮೆ,‘ಎಲಾ, ಇದು ನನಗೆ ಹೊಳೆದೇ ಇರಲಿಲ್ಲ!’ ಎಂದು ಚಕಿತರಾಗುತ್ತೇವೆ!

ಸಂಧ್ಯಾ ಶ್ರೀಧರ್ ಭಟ್ said...

ಕಾಕ,

ಬೇಂದ್ರೆ ಅಜ್ಜನ ಸಾಹಿತ್ಯಕ್ಕೆ ಅಷ್ಟೇ ಚಂದದ ಸಂಗೀತದಲ್ಲಿ ಸಂಗೀತ ಕಟ್ಟಿಯವರು ಕಟ್ಟಿಕೊಟ್ಟ ಈ ಭಾವ ನನಗೆ ತುಂಬಾ ಇಷ್ಟ ..

ಹಾಡಿನ ಇಂಪಿಗಿಂತ ಸಾಹಿತ್ಯದ ಕಂಪು ಇಲ್ಲಿ ಖುಷಿ ಕೊಡುತ್ತದೆ ...

ನೀವು ಕೊಟ್ಟ ಅರ್ಥಗಳೂ ಕೂಡಾ ... ಹಿಂದ ನೋಡದಾ ... ಅಂತ ಗುನುಗಿಕೊಳ್ಳುವಾಗೆಲ್ಲ ಅದರಲ್ಲಿ ಇಷ್ಟು ಅರ್ಥಗಳಿರಬಹುದೆಂದು ಗೊತ್ತಿರಲಿಲ್ಲ ...

ಇನ್ನೊಮ್ಮೆ ಆ ಹಾಡು ಕೇಳಲು ಇಯರ್ ಫೋನ್ ಕಿವಿಗಿಟ್ಟುಕೊಳ್ಳುತ್ತಿದ್ದೇನೆ ...

sunaath said...

ಸಂಧ್ಯಾ,
ಈ ಕವನದ ಸಾಹಿತ್ಯ ಸುಂದರವಾಗಿದೆ. ಸಂಗೀತಾ ಕಟ್ಟಿಯವರ ಹಾಡುಗಾರಿಕೆ ಮಧುರವಾಗಿದೆ. ಎರಡೂ ಬೆರೆತಾಗ ಹಾಲು,ಜೇನು ಬೆರೆತಂತಹ ಅನುಭವ!

Unknown said...

ಬೇಂದ್ರೆಯವರ ಮೊದಲ ಪ್ರೇಮದ ಭಾವವನ್ನು ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ. ಈ ಕವನವನ್ನು ಈಗ ನಿಮ್ಮಿಂದಾಗಿ ಓದಿದ್ದೇನೆ. ನನಗೂ ಈ ಹಾಡನ್ನು ಇಯರ್ ಫೋನ್ ಇಟ್ಟೇ ಕೇಳಬೇಕು. ನಿಮ್ಮ ಲೇಖನ ತುಂಬಾ ಇಷ್ಟವಾಯಿತು.

sunaath said...

ಚಂದ್ರಶೇಖರರೆ,
ಧನ್ಯವಾದಗಳು. ಈ ಹಾಡು ಓದಲು ಹಾಗು ಕೇಳಲೂ ಸಹ ತುಂಬ ಸೊಗಸು.

AntharangadaMaathugalu said...

ಕಾಕಾ ನಮಸ್ತೆ...

ಎಂದಿನಂತೇ.. ಸುಲಭ, ಸರಳ ಅರ್ಥ ವಿವರಣೆ, ಚೆನ್ನಾಗಿದೆ. ಒಂದೇ ಸಾಲಿನ ಪದಗಳಿಗೆ ವಿಭಿನ್ನ ಅರ್ಥಗಳನ್ನು ಯೋಚಿಸಬೇಕಾದರೆ ಬೇಂದ್ರೆ ಅಜ್ಜನವರ ಸಾಹಿತ್ಯದಲ್ಲಿ ಆಳಕ್ಕೆ ಇಳಿಯಲೇಬೇಕು. ಬೇಂದ್ರೆ ಅಜ್ಜನವರ ಕಾವ್ಯವನ್ನು ನಮ್ಮ ನಿಲುಕಿಗೆ ಸಿಗುವಂತೆ ಅರ್ಥೈಸುವ ನಿಮಗೆ ಧನ್ಯವಾದಗಳು.. :-)

ಶ್ಯಾಮಲ

sunaath said...

ಶ್ಯಾಮಲಾ,
ಧನ್ಯವಾದಗಳು. ಬೇಂದ್ರೆಯವರ ಕವನಗಳೇ ಹಾಗೆ!

Subrahmanya said...

ಮುಂಗಾರಿನ ಸಮಯದ ತಣ್ಣನೆಯ ಗಾಳಿಯಂತಿದೆ , ಕವನ ಮತ್ತು ವಿವರಣೆ. ಧನ್ಯವಾದ.

sunaath said...

ಸುಬ್ರಹ್ಮಣ್ಯರೆ,
ಸುಂದರ ಉಪಮೆಯೊಂದಿಗೆ ಪ್ರತಿಕ್ರಿಯಿಸಿದ್ದೀರಿ. ಧನ್ಯವಾದಗಳು.

ದುರಹಂಕಾರಿ said...

ಹಿಂದಿರುವುದನ್ನು ಉಪೇಕ್ಷಿಸುತ್ತ ಅಥವಾ ಉಪೇಕ್ಷಿಸಲೆತ್ನಿಸುತ್ತ, ಹಿಂದಿನದ್ದೆಲ್ಲ ಮರೆತು, ತಡವರಿಸದೇ ಏಕಪ್ರಕಾರವಾಗಿ, ಹಿಂದೆಮರಳಲವಕಾಶವಿರದಂತೆ, ಗಾಳಿಹೆಜ್ಜೆಯ ಸುಗಂಧ ಹಿಡಿಯುವುದರಂದದಲಿ, ನಾವೂ ಅಂದತ್ತರ ಕಾವ್ಯದಹಿಂದೆ ಹಿಂದೆ ಮರುಳಾಗಿ... ಆಹ್! ಎಂಥಾ ಗೀತವನ್ನು ತಿರುಗಿ ನೋಡಿಕೊಳ್ಳಲು ಕೊಟ್ಟಿದ್ದೀರಿ!

sunaath said...

ಧನ್ಯವಾದಗಳು, ದುರಹಂಕಾರಿಯವರೆ!

Unknown said...

ಸುನಾಥ ಕಾಕಾ,
ಎಂದಿನಂತೆ ಸುಲಿದ ಬಾಳೆಯಂತೆ ನಿಮ್ಮ ಬರಹ ಸುಲಲಿತ. ನಿಮ್ಮಿಂದ ಬೇಂದ್ರೆ ಅಷ್ಟೊ, ಇಷ್ಟೋ ಅರ್ಥ ಆಗುತ್ತಾರೆ. ಕೊನೆಯ ಸಾಲು "ಹೋತs ಹಿಂದ ಬಾರಧಾಂಗ" -ಇಲ್ಲಿ ಹೋತ ಎಂದರೆ 'ಹೋದದ್ದು' ಅಷ್ಟೆ ಅಲ್ಲದೆ ಹೋತ=ಗಂಡಾಡು ಕೂಡಾ ಆಗಬಹುದಾದ ಸಾಧ್ಯತೆ ಇದೆಯೆ? ಅಂದ್ರೆ ಆ ಹುಡಗಿಗೆ ಸಿಕ್ಕದೆ ಹೋದ ಗಂಡು (ಪಾಪ ಸಂಭಾವಿತ ಹುಡುಗ) ಎಂಬ ಅರ್ಥದಲ್ಲಿ?
-ಅನಿಲ ತಾಳಿಕೋಟಿ

sunaath said...

ಅನಿಲರೆ,
ಬೇಂದ್ರೆಯವರಿಗೆ ಒಂದು ಪದದ ಎಲ್ಲ ಅರ್ಥಗಳೂ ಹೊಳೆದಿರುತ್ತವೆ. ಅವರು ಅದನ್ನು imply ಮಾಡಿರುವರೋ ಇಲ್ಲವೋ ಅನ್ನುವುದನ್ನು ಹೇಳುವುದು ಕಷ್ಟ!

ಭಾನು ರಾ ಚಂದ್ರ said...

ಬೇಂದ್ರೇ ಅಂದ್ರೆ ಭಾಷೆ, ಭಾವಗಳ ಸಮ್ಮಿಲನ....ಕೆಲವೊಮ್ಮೆ ಭಾವ ನಿಲುಕಿದರು ಭಾಷೆ ನಿಲಕಲ್ಲ.ನಿಮ್ಮ ವಿವರಣೆ ಅಂದವಾಗಿದೆ.

sunaath said...

ಭಾನು,
ನಿಮ್ಮ ವ್ಯಾಖ್ಯಾನ ತುಂಬ ಸರಿಯಾಗಿದೆ. ಕವನದ ಭಾವ ಓದುಗನಿಗೆ ತಟ್ಟುವಂತಹದೇ. ಆದರೆ, ಕವಿಯ ಭಾಷೆ ಮುಚ್ಚುಭಾಷೆ, ಬಿಚ್ಚುಭಾಷೆ,ಸ್ವಕೇಂದ್ರಿತ ಭಾಷೆಯಾಗಿರಬಹುದು. ಇದೇ ಕವನದ ಸೊಬಗು!