ಪ್ರಸ್ತಾವನೆ:
ಮೈತ್ರೇಯಿದೇವಿಯವರು (೧೯೧೪-೧೯೯೦) ಬಂಗಾಲದ
ಸುಪ್ರಸಿದ್ಧ ಲೇಖಕಿ. ಇವರು ಹದಿನೈದು ವರ್ಷದವರಿದ್ದಾಗಲೆ ಇವರ ಮೊದಲ ಕವನಸಂಕಲನ ‘ಉದಿತಾ’ದ ಪ್ರಕಟಣೆಯಾಯಿತು.
ಈ ಕವನಸಂಕಲನಕ್ಕೆ ರವೀಂದ್ರನಾಥ ಠಾಕೂರರು ಮುನ್ನುಡಿಯನ್ನು ಬರೆದಿದ್ದಾರೆ. ಇದಲ್ಲದೆ ಚಿತ್ತಛಾಯಾ,
ಹಿರಣ್ಮಯೀ ಪಾಖೀ (ಕವನಸಂಕಲನಗಳು), ಅಚೇನಾ ಚೀನ, ಚೀನೆ ಓ ಜಪಾನೆ, ಮಹಾಸೋವಿಯತ್ (ಪ್ರವಾಸಕಥನ), ಮೈತ್ರೇಯಿದೇವೀರ
ಗಲ್ಪ (ಕಥಾಸಂಕಲನ) ಇವು ಇವರ ಪ್ರಸಿದ್ಧ ಕೃತಿಗಳು. ರವೀಂದ್ರನಾಥರ ಬಗೆಗೆ ಇವರು ಬರೆದಿರುವ ಕುಟೀರಬಾಸಿ
ರವೀಂದ್ರನಾಥ, ಸ್ವರ್ಗೇರ್ ಕಾಚಾಕಾಚಿ, ರವೀಂದ್ರನಾಥ ಗೃಹೆ ಓ ವಿಶ್ವೆ ಇವು ಇವರ ಜನಪ್ರಿಯ ಕೃತಿಗಳು.
ಮೈತ್ರೇಯಿದೇವಿಯವರ ತಂದೆ ಸುರೇಂದ್ರನಾಥ ದಾಸಗುಪ್ತರು
(೧೮೮೭-೧೯೫೨) ಕೋಲಕತ್ತಾ ಹಾಗು ಕೇಂಬ್ರಿಜ್ ವಿಶ್ವವಿದ್ಯಾಲಯಗಳಿಂದ ಡಾ*ಕ್ಟರೇಟ್ ಪದವಿಯನ್ನು ಹಾಗು
ರೋಮ್ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿಯನ್ನು ಪಡೆದವರು. ಅನೇಕ ಅಂತರರಾಷ್ಟ್ರೀಯ ಧಾರ್ಮಿಕ ಹಾಗು
ತತ್ವಶಾಸ್ತದ ಸಮ್ಮೇಳನಗಳಲ್ಲಿ ಭಾಗವಹಿಸಿದವರು. ರವೀಂದ್ರನಾಥ ಠಾಕೂರರಿಗೆ ತುಂಬ ಹತ್ತಿರದವರು ಹಾಗು
ರವೀಂದ್ರ-ಸಾಹಿತ್ಯದಲ್ಲಿ ನಿಷ್ಣಾತರು ಎಂದು ಗಣಿಸಲ್ಪಟ್ಟವರು.
೧೯೩೦ರಲ್ಲಿ ಮಿರ್ಚಾ ಇಲಿಯೇಡ (೧೯೦೭-೧೯೮೬)
ಎನ್ನುವ ರೋಮಾನಿಯದ ತತ್ವಶಾಸ್ತ್ರದ ವಿದ್ಯಾರ್ಥಿ ದಾಸಗುಪ್ತರಲ್ಲಿ ಸಂಸ್ಕೃತ ಹಾಗು ಭಾರತೀಯ ತತ್ವಶಾಸ್ತ್ರದ
ಅಧ್ಯಯನ ಮಾಡಲು ಬರುತ್ತಾನೆ. ದಾಸಗುಪ್ತರು ಅವನಿಗೆ ತಮ್ಮ ಮನೆಯಲ್ಲಿ ವಸತಿಯನ್ನು ಕಲ್ಪಿಸಿಕೊಟ್ಟರಲ್ಲದೆ,
ತಮ್ಮ ಮನೆಯಲ್ಲಿ ಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟರು. ೧೬ ವರುಷದ ಮೈತ್ರೇಯಿ ಹಾಗು ೨೩ ವರುಷದ ಮಿರ್ಚಾ
ಜೊತೆಗೂಡಿ, ದಾಸಗುಪ್ತರ ವಾಚನಾಲಯದ ಪುಸ್ತಕಗಳ ಗ್ರಂಥಸೂಚಿಯನ್ನು ತಯಾರಿಸುತ್ತಿದ್ದರು. ಯುರೋಪಿಯನ್
ನಾಗರಿಕತೆಯ ಮಿರ್ಚಾನು ಮೈತ್ರೇಯಿಯ ನಿಕಟ ಸಂಪರ್ಕವನ್ನು ಬಯಸಿದ್ದರಲ್ಲಿ ಅಚ್ಚರಿಯಾಗಲಿಕ್ಕಿಲ್ಲ. ಆಗ
ತಾನೇ ತರುಣಾವಸ್ಥೆಯಲ್ಲಿ ಕಾಲಿಡುತ್ತಿದ್ದಂತಹ ಮೈತ್ರೇಯಿಗೆ ಮಿರ್ಚಾನ ಮೇಲೆ ದ್ವಂದ್ವಭಾವವು ಮೂಡಿದ್ದರಲ್ಲಿಯೂ
ಅಚ್ಚರಿಯಾಗಲಿಕ್ಕಿಲ್ಲ. ಮೈತ್ರೇಯಿ, ಅವಳ ತಂಗಿ ಹಾಗು ಮಿರ್ಚಾ ಒಮ್ಮೆ ಕೆರೆಯ ದಂಡೆಯ ಮೇಲೆ ತಿರುಗಾಡಲು
ಹೋದಾಗ, ಮಿರ್ಚಾ ಅವಳನ್ನು ಬರಸೆಳೆದಪ್ಪಿ ಮುದ್ದಿಸಿದ. ಈ ಪ್ರಸಂಗವು ಬಯಲಾದ ಕ್ಷಣವೇ ದಾಸಗುಪ್ತರು
ಮಿರ್ಚಾನನ್ನು ಮನೆಯಿಂದ ಹೊರಗೆ ಕಳಿಸಿದರು. ಆದರೆ ಆಕರ್ಷಣೆ ಹಾಗು ವಿಕರ್ಷಣೆಗಳ ನಡುವೆ ಸಿಲುಕಿದ ಬಾಲೆ
ಮೈತ್ರೇಯಿದೇವಿ ಮಾತ್ರ ಈ ಘಟನೆಯಿಂದಾಗಿ ನಲುಗಿ ಹೋದಳು.
ನಾಲ್ಕು ವರ್ಷಗಳ ಬಳಿಕ ಮೈತ್ರೇಯಿಯ ಮದುವೆ
ಅವಳಿಗಿಂತ ಹದಿನಾಲ್ಕು ವರ್ಷ ದೊಡ್ಡವರಾದ ಮನಮೋಹನ
ಸೇನ ಎನ್ನುವ ವೈದ್ಯರ ಜೊತೆಗೆ ಜರುಗುತ್ತದೆ. ತುಂಬ ತಿಳಿವಳಿಕೆಯುಳ್ಳ, ತುಂಬ ಒಳ್ಳೆಯವರಾದ ಹಾಗು ಮೈತ್ರೇಯಿಯನ್ನು
ತುಂಬ ಪ್ರೀತಿಸುತ್ತಿದ್ದ ಗಂಡನ ಜೊತೆಗೆ ಮೈತ್ರೇಯಿಯ ದಾಂಪತ್ಯಜೀವನ ನಿರುದ್ವೇಗದಿಂದ ಸಾಗುತ್ತದೆ.
ಮಕ್ಕಳು, ಮೊಮ್ಮಕ್ಕಳು ಅವಳ ಸಂಸಾರವನ್ನು ತುಂಬುತ್ತಾರೆ.
೧೯೭೨ರಲ್ಲಿ, ಅಂದರೆ ಮೈತ್ರೇಯಿದೇವಿಯವರಿಗೆ
೫೮ ವರ್ಷ ತುಂಬಿದ ಸಮಯದಲ್ಲಿ, ಕೋಲಕತ್ತಾದಲ್ಲಿ ಅಕಸ್ಮಾತ್ತಾಗಿ ಒಬ್ಬ ಯುರೋಪಿಯನ್ ವ್ಯಕ್ತಿಯ ಭೆಟ್ಟಿಯಾಗುತ್ತದೆ.
“ಮಿರ್ಚಾ ಏಲಿಯೇಡ್ ಬರೆದ ಪುಸ್ತಕದಿಂದಾಗಿ ನೀವು ಯುರೋಪ
ಖಂಡದಲ್ಲೆಲ್ಲ ತುಂಬ ಪ್ರಸಿದ್ಧರಾಗಿದ್ದೀರಿ” ಎಂದು ಆತ ಹೇಳಿದಾಗ, ಮೈತ್ರೇಯಿದೇವಿಯವರಿಗೆ ಆಶ್ಚರ್ಯವಾಗುತ್ತದೆ.
ಮಿರ್ಚಾ ಎಲಿಯೇಡ್ ಬರೆದ ಪುಸ್ತಕದ ಹೆಸರು:
‘ಮೈತ್ರೇಯಿದೇವಿ’. ಇದನ್ನು ‘ಬಂಗಾಲದ ರಾತ್ರಿಗಳು’ ಎಂದೂ ಕರೆಯಲಾಗಿದೆ.
ಕಥೆ:
ದಾಸಗುಪ್ತರಿಂದ ಹೊರದೂಡಿಸಿಕೊಂಡ ಮಿರ್ಚಾ ಕೆಲವು
ಕಾಲ ಹಿಮಾಲಯದಲ್ಲಿ ಸನ್ಯಾಸಿಯಂತೆ ತಿರುಗಾಡುತ್ತಾನೆ. ಈ ಸಮಯದಲ್ಲಿ ಅಲ್ಲಿಯ ಆಧ್ಯಾತ್ಮಕ ಸಾಧಕರ ಜೊತೆಗೆ
ನಿಕಟ ಸಂಬಂಧವನ್ನು ಪಡೆಯುತ್ತಾನೆ. ಇದರಿಂದಾಗಿ ಯೋಗ ಹಾಗು ಭಾರತೀಯ ಧರ್ಮಕಲ್ಪನೆಯ ಮೇಲೆ ಕೃತಿಗಳನ್ನು
ರಚಿಸಲು ಅವನಿಗೆ ಅನುಕೂಲವಾಗುತ್ತದೆ. ಇದೇನೇ ಆದರೂ ಮೈತ್ರೇಯಿದೇವಿಯ ಮೇಲೆ ಮನಸ್ಸಿಟ್ಟಿದ್ದ ಮಿರ್ಚಾ
‘ಮೈತ್ರೇಯಿದೇವಿ’ ಅಥವಾ ‘ಬಂಗಾಲದ ರಾತ್ರಿಗಳು’ ಎನ್ನುವ ತನ್ನ ಆತ್ಮಚರಿತ್ರೆಯ ರೂಪದ ಕಾದಂಬರಿಯನ್ನು
ಬರೆಯುತ್ತಾನೆ. ವಾಸ್ತವಕ್ಕೆ ತೀರ ವಿರುದ್ಧವಾದ ಈ ಕಾದಂಬರಿಯಲ್ಲಿ, ಮೈತ್ರೇಯಿದೇವಿಯ ಬಗೆಗೆ ತನಗೆ
ನಿಷ್ಕಾಮ ಪ್ರೇಮವಿತ್ತು, ಆದರೆ ಅವಳೇ ತನ್ನನ್ನು ಕಾಮಶಯ್ಯೆಗೆ ಸೆಳೆದಳು; ಅವಳು ಈ ಮೊದಲೂ ಸಹ ಕನ್ಯೆಯಾಗಿರಲಿಕ್ಕಿಲ್ಲ
ಎಂದು ಬರೆದಿದ್ದಾನೆ. ಒಬ್ಬ ಯುರೋಪಿಯನ್ ಅಳಿಯನನ್ನು ಬಯಸುತ್ತಿದ್ದ ದಾಸಗುಪ್ತರು, ತನ್ನ ಮಗಳನ್ನು
ಉತ್ತೇಜಿಸುತ್ತಿದ್ದರು ಎಂದೂ ಸಹ ಇದರಲ್ಲಿ ಸೂಚಿಸಲಾಗಿದೆ. ಮದುವೆಯನ್ನು ಅನಿವಾರ್ಯ ಮಾಡುವ ಉದ್ದೇಶದಿಂದ,
ಬಸಿರಾಗ ಬಯಸಿದ ಮೈತ್ರೇಯಿ ಮತ್ತೊಬ್ಬ ಕೀಳು ಮನುಷ್ಯನೊಡನೆ ಸಂಗವನ್ನು ಮಾಡಿದಳು ಎಂದೂ ಮಿರ್ಚಾ ಆ ಕಾದಂಬರಿಯಲ್ಲಿ
ಬರೆದಿದ್ದಾನೆ. ಸ್ಥಳೀಯ ಸಾಹಿತ್ಯಕ್ಕೆ ರಮ್ಯವಿಲಾಸಿ, ರಂಗೀನ ಕಾದಂಬರಿಯನ್ನು (Exotic novel) ಪರಿಚಯಿಸಿದವನೆಂದು
ಮಿರ್ಚಾನಿಗೆ ವಿಮರ್ಶಕರ ಮನ್ನಣೆ ಸಿಗುತ್ತದೆ!
ವ್ಯಥೆ:
ಈ ಪುಸ್ತಕವು ಪ್ರಕಟವಾದ ಸುಮಾರು ೪೦ ವರ್ಷಗಳ
ಬಳಿಕ, ಮೈತ್ರೇಯಿದೇವಿಯವರಿಗೆ ಇದು ಓದಲು ಲಭ್ಯವಾಯಿತು. ಅದನ್ನು ಓದಿದ ಮೈತ್ರೇಯಿದೇವಿಯವರು ತನ್ನ ಚಾರಿತ್ರ್ಯಹನನದಿಂದ
ಹಾಗು ಆಮೂಲಕ ತನಗೆ ದೊರೆತ ಅಪಖ್ಯಾತಿಯಿಂದ ಆಘಾತಗೊಂಡರು. ಇದರಿಂದ ತುಂಬ ನೊಂದುಕೊಂಡ ಅವರು ೧೯೭೭ರಲ್ಲಿ
(-ಅಂದರೆ ಅವರಿಗೆ ೬೩ ವರ್ಷಗಳಾದಾಗ-) ‘ನ ಹನ್ಯತೆ’ ಎನ್ನುವ ಕಾದಂಬರಿರೂಪದ ಕೃತಿಯನ್ನು ರಚಿಸಿದರು.
ಆ ಕೃತಿಯಲ್ಲಿ ತನ್ನ ಹಾಗು ಮಿರ್ಚಾನ ನಡುವಿನ ಸಂಬಂಧವನ್ನು ಅವರು ವಿವರಿಸಿದ್ದಾರೆ. ಮಿರ್ಚಾನ ಮೇಲೆ
ತನಗೆ ಹದಿಹರೆಯದ ಆಕರ್ಷಣೆ ಇದ್ದದ್ದು ನಿಜ, ಆದರೆ (ಸಾಂಪ್ರದಾಯಕ ಮನೆಯಲ್ಲಿ ಬೆಳೆದ) ತಾನು ಎಂದೂ ನೀತಿಮಾರ್ಗವನ್ನು
ಅತಿಕ್ರಮಿಸಲಿಲ್ಲ, ಈಗಲಾದರೂ ಸಹ ಆತನ ಮೇಲೆ ತನಗೆ ಪ್ರೀತಿ ಇದೆ, ಇದು ಮಾನವಪ್ರೀತಿ ಎಂದು ಅವರು ಹೇಳುತ್ತಾರೆ.
ಈ ಕಾದಂಬರಿಯಲ್ಲಿ ಮೈತ್ರೇಯಿದೇವಿಯವರು ತನ್ನ ಮನದ ತೊಳಲಾಟವನ್ನು ಬಗೆಬಗೆಯಲ್ಲಿ ಚಿತ್ರಿಸಿದ್ದಾರೆ.
ಈ ಕೃತಿಯಲ್ಲಿ ವ್ಯಕ್ತವಾದ ಅವರ ಭಾಷಾಪ್ರಭುತ್ವವು
ಅಚ್ಚರಿ ಮೂಡಿಸುವಂತಹದಾಗಿದೆ.
‘ನ ಹನ್ಯತೇ’ ಇದು ಕಠೋಪನಿಷತ್ತಿನಲ್ಲಿ ಯಮಧರ್ಮನು ನಚಿಕೇತನಿಗೆ ಆತ್ಮದ ಬಗೆಗೆ ಹೇಳುವ ವರ್ಣನೆ:
“ಅಜೋ ನಿತ್ಯಃ ಶಾಶ್ವತೋಯಂ ಪುರಾಣೋ,
ನ
ಹನ್ಯತೇ ಹನ್ಯಮಾನೇ ಶರೀರೇ.”
ಶರೀರವು ನಾಶವಾದರೂ ಸಹ ಆತ್ಮವು ನಾಶವಾಗುವುದಿಲ್ಲ.
ಮೈತ್ರೇಯಿದೇವಿಯವರು ‘ಯಾವ ಘಟನೆಯೂ, ಯಾವ ಪ್ರೀತಿಯೂ
ನಾಶವಾಗುವುದಿಲ್ಲ; ಅದು ನೆನಪಿನಲ್ಲಿ ಚಿರಸ್ಥಾಯಿ’ ಎನ್ನುವ ಅರ್ಥದಲ್ಲಿ, ಇಲ್ಲಿ ಇದನ್ನು ಶೀರ್ಷಿಕೆಯನ್ನಾಗಿ
ಬಳಸಿಕೊಂಡಿದ್ದಾರೆ.
೧೯೮೮ರಲ್ಲಿ ಎಲಿಯೇಡನ ಕಾದಂಬರಿಯನ್ನು ‘Bengali
Nights’ ಎನ್ನುವ ಚಲನಚಿತ್ರವನ್ನಾಗಿ ಮಾಡಲಾಯಿತು. ಹ್ಯೂ ಗ್ರ್ಯಾಂಟ ಈ ಚಲನಚಿತ್ರದ ನಾಯಕ ಹಾಗು ಸುಪ್ರಿಯಾ
ಪಾಠಕ ನಾಯಕಿ. ಇದೊಂದು ಅಶ್ಲೀಲ ಚಲನಚಿತ್ರವೆಂದು ಪ್ರತಿಭಟನೆಗಳಾದಾಗ, ಭಾರತದಲ್ಲಿ ಇದನ್ನು ನಿಷೇಧಿಸಲಾಯಿತು.
ಕೊನೆಯ
ಕಣ್ಣೀರು:
ಮೈತ್ರೇಯಿದೇವಿಯವರು ತಮ್ಮ ಸಾಹಿತ್ಯ ಹಾಗು
ಪಾಂಡಿತ್ಯದ ಕಾರಣದಿಂದಾಗಿ ದೇಶವಿದೇಶಗಳ ಮನ್ನಣೆ ಹಾಗು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ‘ನ
ಹನ್ಯತೆ’ ಕಾದಂಬರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
೧೯೭೧ರಲ್ಲಿ ಬಂಗ್ಲಾ ಯುದ್ಧದ ನಿರಾಶ್ರಿತ ಬಾಲಕರಿಗಾಗಿ
ಇವರು ‘ಖೇಲಾಘರ’ ಸ್ಥಾಪಿಸಿದರು. ಅಲ್ಲದೆ ‘ಕ್ವೇಕರ್ಸ ಸೊಸಾಯಿಟಿ ಆ*ಫ್ ಫ್ರೆಂಡ್ಸ’ ಹಾಗು ‘ಗಾಂಧಿ
ಶಾಂತಿ ಪ್ರತಿಷ್ಠಾನ’ದ ಜೊತೆಗೂ ಇವರು ದುಡಿದಿದ್ದಾರೆ. ೧೯೭೭ರಲ್ಲಿ ಭಾರತ ಸರಕಾರವು ಇವರಿಗೆ ಪದ್ಮಶ್ರೀ
ಪ್ರಶಸ್ತಿಯನ್ನು ಪ್ರದಾನಿಸಿತು.
ಇತ್ತ ಮಿರ್ಚಾ ಏಲಿಯೇಡ ಸಹ ಯುರೋಪ ಖಂಡದಲ್ಲಿ
ತನ್ನ ತಾತ್ವಿಕ ಹಾಗು ಸಾಹಿತ್ಯಕ ಕೃತಿಗಳಿಗಾಗಿ ಮನ್ನಣೆಯನ್ನು ಪಡೆದ. ಎರಡು ಸಲ ಮದುವೆಯನ್ನೂ ಆದ.
ವಾಸ್ತವದಲ್ಲಿ ಸಾಧ್ಯವಾಗದ ಬಯಕೆಗಳನ್ನು ವ್ಯಕ್ತಿಯು
ಕನಸಿನಲ್ಲಿ ತೀರಿಸಿಕೊಳ್ಳುತ್ತಾನೆ ಎಂದು ಮನೋಶಾಸ್ತ್ರಜ್ಞ ಫ್ರಾ*ಯ್ಡ ಹೇಳುತ್ತಾನೆ. ಏಲಿಯಡ್ ತನ್ನ ಕನಸುಗಳಲ್ಲಿ ಏನಾದರೂ
ಮಾಡಿಕೊಳ್ಳಲಿ, ಆದರೆ ಮೈತ್ರೇಯಿದೇವಿಯ ಜೊತೆಗೆ ಶರೀರಸಂಪರ್ಕ ಸಾಧ್ಯವಾಗಲಿಲ್ಲ ಎನ್ನುವ ರೊಚ್ಚಿನಿಂದ
ಅವಳ ಮೇಲೆ ಮಾನಸಿಕ ಅತ್ಯಾಚಾರವನ್ನು ಹಾಗು ಸಾಹಿತ್ಯಕ
ಅಪಪ್ರಚಾರವನ್ನು ಮಾಡಿದ್ದು ಅನ್ಯಾಯದ ಸಂಗತಿ. ಓರ್ವ ಅಮಾಯಕ ಸ್ತ್ರೀಯ ಚಾರಿತ್ರ್ಯಹನನವನ್ನು ಮಾಡಿದ ಮಿರ್ಚಾ ಏಲಿಯಡ್ನಿಗೆ
ಧಿಕ್ಕಾರವಿರಲಿ!
ಟಿಪ್ಪಣಿ:
‘ನ ಹನ್ಯತೆ’ ಕೃತಿಯನ್ನು ಪ್ರಾಧ್ಯಾಪಕಿ ಗೀತಾ
ವಿಜಯಕುಮಾರ ಇವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದು ಸಾಹಿತ್ಯ ಅಕಾಡೆಮಿ, ನವದೆಹಲಿಯಿಂದ ೨೦೦೮ರಲ್ಲಿ
ಪ್ರಕಟವಾಗಿದೆ.
20 comments:
ಈ ದಿನದಿಂದ ‘ನ ಹನ್ಯತೇ’ಯ ಕನ್ನಡ ಭಾಷಾನುವಾದ ಹುಡುಕುತ್ತೇನೆ.
ಮನುಷ್ಯನ ಕೀಳು ಮನಸ್ಥಿತಿ ಮತ್ತು ಅದರ ರೋಚಕ ಅನಾವರಣ ಇಡೀ ಪ್ರಸಂಗದ ಹೂರಣ! ಆತನ ವ್ಯಾಪಾರೀ ಬುದ್ದಿಯ ಅಶ್ಲೀಲ ಕಾದಂಬರಿ, ಆ ಚಲನಚಿತ್ರ ಮತ್ತು ಆಕೆಯ ಈ ಪುಸ್ತಕ ಒಂದಕ್ಕೊಂದು ತಳಕು ಹಾಕಿಕೊಂಡೇ ಚರಿತ್ರೆಯಲ್ಲಿ ಉಳಿದುಹೋಗುವ 'ಕಪ್ಪು ಚುಕ್ಕೆಗಳು'.
ಆಕೆ ಅದೆಷ್ಟು ಮನನೊಂದಿರಬಹುದು ಎನ್ನುವುದು ಕಲ್ಪನೆಗೂ ಸಿಗಲಾರದು.
ನಿಮ್ಮ ಈ ಬರಹ ಸ್ವಾತಂತ್ರ್ಯ ಪೂರ್ವದ ಭಾರತೀಯ ಮನೆಗಳ ಅಂತರ್ಯವನ್ನೂ ತೆರೆದಿಡುತ್ತದೆ.
ಬದರಿನಾಥರೆ,
ಈ ಪುಸ್ತಕವು ಬಹುಶಃ ‘ಸಪ್ನಾ’ದಲ್ಲಿ ದೊರಕಬಹುದು.
Oh my god . .
ಓಹ್ !. ಅತ್ಯಾಚಾರವನ್ನು ಹೀಗೂ ಮಾಡಬಹುದೆ ?!.
ಮೈತ್ರೇಯಿದೇವಿಯವರ ವಿಚಾರ ಆಂಗ್ಲ ವಿಕಿಪೀಡೀಯದಲ್ಲಿರುವುದರಿಂದ ದಯಮಾಡಿ ಅದನ್ನು ಅನುವಾದಿಸಿ ಕನ್ನಡ ವಿಕಿಪೀಡಿಯದಲ್ಲೂ ಹಾಕಿರೆಂದು ವಿನಂತಿ.
Tumba dhanyavadagaLu sir ee aparoopada book bagge mahiti kottiddakke.. huduki Odalu yatnisuve...
ಅತ್ಯಾಚಾರಕ್ಕದೆಷ್ಟು ರೂಪಗಳು. ಸಿಗದ ದ್ರಾಕ್ಷಿ ಹುಳಿ
ಪರಿಚಯಿಸಿದ್ದಕ್ಕೆ ವಂದನೆಗಳು ಕಾಕಾ
ಹೀಗೂ ನಡೆಯಬಹುದೇ...??!!
ಕೆಟ್ಟ ಮನಸ್ಥಿತಿಯ ಜನ ಏನೆಲ್ಲಾ ಅನಾಹುತಗಳನ್ನು ಸೃಷ್ಟಿಸಬಲ್ಲರು ಎಂಬುದನ್ನು ಮನವರಿಕೆ ಮಾಡಿರುವಿರಿ.... ಧನ್ಯವಾದಗಳು ಸಾರ್...
ನಾಗರಾಜರೆ,
ದೇವರೇ ಗತಿ!
ಸುಬ್ರಹ್ಮಣ್ಯರೆ,
ಕನ್ನಡ ವಿಕಿಪೀಡಿಯಾಕ್ಕೆ ಮಾಹಿತಿ ನೀಡುವುದನ್ನು ನಾನು ಬಿಟ್ಟುಬಿಟ್ಟಿದ್ದೇನೆ. ದಯವಿಟ್ಟು ಕ್ಷಮಿಸಿ.
ತೇಜಸ್ವಿನಿ,
ಧನ್ಯವಾದಗಳು.
ಸ್ವರ್ಣಾ,
ದ್ರಾಕ್ಷಿಯನ್ನು ಹುಳಿ ಎಂದು ನಿಂದಿಸುವುದು ನರಿಬುದ್ಧಿಯೇ ಅಲ್ಲವೆ?!
ಮಂಜುಳಾದೇವಿಯವರೆ,
ಹುಡುಗಿಯರ ಮುಖಕ್ಕೆ acid ಎರಚುವುದನ್ನು ಕೇಳಿದ್ದೇವೆ. ಇದೂ ಒಂದು ಅಂತಹದೇ ಸಂಗತಿ ಎನಿಸುತ್ತದೆ.
ಓಹೋ ದೇವಾ ಎಂಥಾ ವಿಪರ್ಯಾಸದ ಕಥೆ ನಿಜಕ್ಕೂ ಇಂತಹ ಅನ್ಯಾಯಗಳಿಗೆ ಧಿಕ್ಕಾರವರಲಿ.. ಅನುವಾದಿದ ಪುಸ್ತಕವನ್ನು ಹುಡುಕಿ ಓದುತ್ತೇನೆ.. ಧನ್ಯವಾದಗಳು ಕಾಕ ಈ ಅಪರೂಪ ಪುಸ್ತಕ ಪರಿಚಯಕ್ಕೆ
ಮನಸು,
ಇದು ಸಾಹಿತ್ಯ ಅಕಾಡೆಮಿಯ ಪುಸ್ತಕವಿರುವದರಿಂದ ‘ಸಪ್ನಾ’ದಲ್ಲಿ ದೊರೆಯಬಹುದು.
ಸುನ್ನತ್ ರವರೆ..
ನಿಮ್ಮ ಈ ಲೇಖನದಲ್ಲಿ ಮಿರ್ಜಾ ಏಳಿಯಡ್ ನ ರಮ್ಯವಿಲಾಸಿ ರಂಗೀನ ಕಾದಂಬರಿಯಾದ 'ಮೈತ್ರಿದೇವಿ' ಮತ್ತು ಬೆಂಗಾಲಿ ನೈಟ್ಸ್ ಚಲನಚಿತ್ರದಿಂದ ಮೈತ್ರೇಯಿದೇವಿಗೆ ಬಂದ ಕಳಂಕ, ಅವಮಾನ ಮತ್ತು 'ನ ಹನ್ಯತೆ' ಎಂಬ ಕಾದಂಬರಿಯ ಮೂಲಕ ಮೈತ್ರಿ ದೇವಿಯು ತನ್ನ ತೊಳಲಾಟ ಹೇಳಿಕೊಂಡ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ.ಮಿರ್ಜಾ ಏಲಿಯಡ್ ನ ಮನಸ್ಥಿತಿ ನಿಜಕ್ಕೂ ಅಸಹನೀಯವೆನಿಸಿತು.ನನಗೆ ನಿಮ್ಮ ಬರಹ ಇಷ್ಟವಾಯಿತು. ನನಗೂ 'ನ ಹನ್ಯತೆ' ಕಾದಂಬರಿ ಓದಬೇಕು.
ಚಂದ್ರಶೇಖರರೆ,
ಇದು ಸಾಹಿತ್ಯ ಅಕಾಡೆಮಿಯ ಪ್ರಕಟಣೆಯಾಗಿರುವದರಿಂದ, ‘ಸಪ್ನಾ’ದಲ್ಲಿ ಸಿಗಬಹುದು.
ಪ್ರಿಯ ಸುನಾಥ,
‘ನ ಹನ್ಯತೆ’ ಕಾದಂಬರಿಯನ್ನು ನಾನು ಓದಿದ್ದೇನೆ. ಮೈತ್ರೇಯಿದೇವಿಯ ಮಾನಸಿಕ ತೊಳಲಾಟವು ಇಲ್ಲಿ ಅದ್ಭುತವಾಗಿ ಚಿತ್ರಿತವಾಗಿದೆ. ಅವರ ಭಾಷಾಪ್ರಭುತ್ವವೂ ಸಹ ಪ್ರಶಂಸನೀಯ. ನಿಮ್ಮ ವ್ಯಾಖ್ಯಾನಕ್ಕಾಗಿ ಅಭಿನಂದನೆಗಳು.
-ಸುಮಾಲಿನಿ
ಸುಮಾಲಿನಿ,
ಧನ್ಯವಾದಗಳು.
Keelu manashtithiya obba vyakhti tanna baavanegalannu hathotiyallidalaagade tanage aashraya kotta manege kanna haahuva avana ketta buddhi ge dhikkara . Nimma blog bahala sundaravaagide . Saakashtu olleya barahagalive. Naanu illi modala sari bandiddene . Matte matte baruva manassagide.
ಆರತಿಯವರೆ,
ನಿಮಗೆ ಸುಸ್ವಾಗತ. ನಿಮ್ಮ ನಲ್ಮೆಗಾಗಿ ಧನ್ಯವಾದಗಳು.
Post a Comment