Friday, December 6, 2013

ಇಲಸ್ಟ್ರೇಟೆಡ್ ವೀಕ್ಲಿ ಆ*ಫ್ ಇಂಡಿಯಾ……..ನೆನಪುಗಳು



ಭಾರತ ಆಂಗ್ಲಭಾಷಾ ಪತ್ರಿಕೆಗಳಲ್ಲಿ The Illustrated Weekly of Indiaಕ್ಕೆ ಮಹತ್ವದ ಸ್ಥಾನವಿದೆ. ೧೮೯೦ರಿಂದ Times of India ದಿನಪತ್ರಿಕೆಯ ಸಾಪ್ತಾಹಿಕ ಪುರವಣಿಯಾಗಿ ಪ್ರಕಟವಾಗುತ್ತಿದ್ದ ಈ ಪತ್ರಿಕೆ, The Illustrated Weekly of India ಎನ್ನುವ ಹೆಸರನ್ನು ಪಡೆದದ್ದು ೧೯೨೩ರಲ್ಲಿ. ೧೯೯೩ರಲ್ಲಿ ಈ ಪತ್ರಿಕೆ ಮುಚ್ಚಿತು. ಆ ಕಾಲದಲ್ಲಿ  ಇಂಗ್ಲಿಶ್ ಪತ್ರಿಕೆಗಳ ಸಂಖ್ಯೆಯೇ ವಿರಳವಾದದ್ದರಿಂದ ಈ ಪತ್ರಿಕೆ ಸುಮಾರಾಗಿ ಜನಪ್ರಿಯವಾಗಿತ್ತು ಹಾಗು ಇಂಗ್ಲಿಶ್ ಓದುಗರಿಗೆ ಅನಿವಾರ್ಯವಾದ ಪತ್ರಿಕೆಯಾಗಿತ್ತು. ಈ ಪತ್ರಿಕೆಯಲ್ಲಿ ಪ್ರಕಟವಾದ ಕೆಲ ಲೇಖನಗಳು ನನ್ನ ಮನಸ್ಸಿನಲ್ಲಿ ಇನ್ನೂ ಅಚ್ಚೊತ್ತಿವೆ. ಅವುಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತೇನೆ:

(೧) ಮುಂಬಯಿಯ ಕೊಳೆಗೇರಿಗಳ ನಿವಾಸಿಗಳನ್ನು ಸಂಘಟಿತ ಗುಂಡಾಗಳು ಶೋಷಿಸುವುದು ಹೊಸತೇನಲ್ಲ. ಪ್ರಧಾನಿ ಇಂದಿರಾ ಗಾಂಧಿಯವರು  ಫಕರುದ್ದೀನ ಅಲಿ ಅಹಮದ ಇವರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿದಾಗಲೂ ಸಹ (೧೯೭೪- ೧೯೭೭) ಈ ಶೋಷಣೆ ನಡೆಯುತ್ತಲೇ ಇತ್ತು. ಅದಕ್ಕಾಗಿ ಯಾರನ್ನೂ ನಾನು ದೂರುತ್ತಿಲ್ಲ. ಆದರೆ ಈ ಅವಧಿಯಲ್ಲಿ ಸಾಮಾಜಿಕ ಒಳಿತಿಗೆ ಬದ್ಧಳಾದ ಓರ್ವ ಅಮಾಯಕ ಯುವತಿಯ ಬರ್ಬರ ಹತ್ಯೆಯ ಬಗೆಗೆ ಓದಿದ ಬಳಿಕ ನನ್ನ ಜೀವ ಹಿಂಡಿ ಹೋಯಿತು. ಈ ಪ್ರಕರಣದಲ್ಲಿ ನಾವು ಯಾರನ್ನು ದೂರಬೇಕು ಎನ್ನುವುದೇ ತಿಳಿಯುವದಿಲ್ಲ.  The Illustrated Weekly of Indiaದಲ್ಲಿ ಪ್ರಕಟವಾದ ಆ ಪ್ರಕರಣ ಹೀಗಿದೆ:

ಸಮಾಜಶಾಸ್ತ್ರ ವಿಷಯದಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದ ಓರ್ವ ಹುಡುಗಿಗೆ ತನ್ನ ಅಧ್ಯಯನದ ಕಾರಣಗಳಿಂದಾಗಿ ಸಂಘಟಿತ ಗುಂಡಾಗಳ ಬಗೆಗೆ ಒಂದಿಷ್ಟು ಮಾಹಿತಿ ದೊರೆಯುತ್ತದೆ.  ದೊರೆತ ಮಾಹಿತಿಯನ್ನು ತನ್ನ ಹೊಟ್ಟೆಯಲ್ಲಿಟ್ಟುಕೊಂಡು ಸುಮ್ಮನೆ ಕೂತಿದ್ದರೆ ಈ ಹುಡುಗಿ ಜಾಣಳಾಗುತ್ತಿದ್ದಳು. ಆದರೆ ಈ ದಡ್ಡ ಹುಡುಗಿ ಭಾರತದ ರಾಷ್ಟ್ರಪತಿಗಳಿಗೆ ಒಂದು ‘ರಹಸ್ಯ ಪತ್ರ’ವನ್ನು ಬರೆಯುತ್ತಾಳೆ. ಮುಂದೆ ಏನಾಯಿತು, ಅಂತೀರಾ? ಆ ಗುಂಡಾಗಳನ್ನು ಬಂಧಿಸಲು ರಾಷ್ಟ್ರಪತಿಯವರು ಆದೇಶ ಕಳುಹಿಸಿದರೆ? ಆ ಗುಂಡಾ ಧಂಧೆ ಬಂದಾಗಿ ಹೋಯಿತೆ? No… ಈ ‘ರಹಸ್ಯ ಪತ್ರ’ ಬರೆದ ಕೆಲವೇ ದಿನಗಳಲ್ಲಿ ಆ ಹುಡುಗಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಯಿತು. ಇಲಸ್ಟ್ರೇಟೆಡ್ ವೀಕ್ಲಿಯಲ್ಲಿ ಈ ಹುಡುಗಿಯ ಮೊದಲಿನ ಫೋಟೋ ಹಾಗು ಚಿತ್ರಹಿಂಸೆಯ ನಂತರದ ಫೋಟೋವನ್ನು ಅಕ್ಕಪಕ್ಕದಲ್ಲಿ ಪ್ರಕಟಿಸಲಾಗಿತ್ತು. ಕರಳು ಹಿಂಡುವ ದೃಶ್ಯ.

ವಿಷಯ ಅದಲ್ಲ. ‘ರಹಸ್ಯ ಪತ್ರ’ದಲ್ಲಿದ್ದ ಮಾಹಿತಿ ಗುಂಡಾಗಳಿಗೆ ತಕ್ಷಣದಲ್ಲಿ ತಿಳಿದದ್ದು ಹೇಗೆ? ರಾಷ್ಟ್ರಪತಿಯವರ ಅಧಿಕಾರಿಗಳು ಇದನ್ನು ಬಯಲು ಮಾಡಿದರೆ? ಹಾಗಿದ್ದರೆ, ರಾಷ್ಟ್ರಪತಿಗಳು ಆ ನೀಚರ ಮೇಲೆ ಕ್ರಮ ಕೈಗೊಂಡರೆ? ಇಲಸ್ಟ್ರೇಟೆಡ್ ವೀಕ್ಲಿಯಲ್ಲಿ ಇದರ ಬಗೆಗೆ ಏನೂ ಮಾಹಿತಿ ಇರಲಿಲ್ಲ. ಆ ಎರಡು ಫೋಟೋಗಳನ್ನು ನೆನಸಿಕೊಂಡಾಗ, ಈಗಲೂ ನನಗೆ ಕಣ್ಣೀರು ಬರುವುದು ನಿಂತಿಲ್ಲ.

(೨) ಭಾರತವು ಧರ್ಮನಿರಪೇಕ್ಷ ದೇಶ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ
            (ಅ) ಭಾರತೀಯ ಶಾಸನಗಳು ಧರ್ಮನಿರಪೇಕ್ಷವಾಗಿವೆ.
            (ಆ) ಭಾರತೀಯ ನ್ಯಾಯದಾನವು ಧರ್ಮನಿರಪೇಕ್ಷವಾಗಿದೆ.
ಎಲ್ಲಾ ದೇಶಗಳಲ್ಲಿ ನಾವು ಇಂತಹ ಸ್ಥಿತಿಯನ್ನು ಕಾಣುವದಿಲ್ಲ. ಇಲಸ್ಟ್ರೇಟೆಡ್ ವೀಕ್ಲಿಯು ಪ್ರಕಟಿಸಿದ ಒಂದು ಲೇಖನವು ಕೊಲ್ಲಿ ದೇಶಗಳ ಶಾಸನ ಹಾಗು ನ್ಯಾಯದಾನ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುತ್ತದೆ.

ಕೊಲ್ಲಿ ದೇಶದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಕಾರ್ಮಿಕನ ಮೇಲೆ, ಅಕಸ್ಮಾತ್ತಾಗಿ ವಾಹನವೊಂದು ಚಲಿಸಿ, ಆ ಕಾರ್ಮಿಕ ಸಾವನ್ನಪ್ಪುತ್ತಾನೆ. ನ್ಯಾಯಾಲಯವು “ಈತ ಭಾರತೀಯನಾದುದರಿಂದ ಇಷ್ಟೇ ಪರಿಹಾರ ಸಾಕು” ಎನ್ನುವ ತೀರ್ಪನ್ನು ನೀಡುತ್ತದೆ. ಅಷ್ಟರಲ್ಲಿಯೇ ಈತನು ಹಿಂದು ಧರ್ಮದವನು ಎನ್ನುವುದು ಗೊತ್ತಾದಾಗ, ಪರಿಹಾರದಲ್ಲಿ ಮತ್ತೆ ಒಂದು ಮೂರಾಂಶವನ್ನು ಕಡಿತಗೊಳಿಸಲಾಗುತ್ತದೆ.

ಪುಣ್ಯಕ್ಕೆ ನಮ್ಮಲ್ಲಿ ಹಾಗಿಲ್ಲ. ಭಾರತೀಯ ನ್ಯಾಯವ್ಯವಸ್ಥೆಯು ದೇಶ ಹಾಗು ಧರ್ಮಗಳ ಆಧಾರದ ಮೇಲೆ ಭೇದವನ್ನು ಮಾಡುವುದಿಲ್ಲ. ಇನ್ನು ಮುಂದೆಯೂ ಸಹ ಅದು ಹಾಗೆ ಉಳಿದೀತೆ? ಈ ಸಂದೇಹಕ್ಕೆ ಕಾರಣವೇನೆಂದರೆ ಕೇಂದ್ರಸರಕಾರವು ಪ್ರಸ್ತಾವಿಸುತ್ತಿರುವ ‘ಜಾತೀಯ ಹಿಂಸಾಚಾರದ ಮಸೂದೆ.’ ಬಹುಶಃ ಇದು ಚುನಾವಣಾ-ಡೊಂಬರಾಟ ಇರಬಹುದು ಎಂದುಕೊಳ್ಳೋಣ. ಒಂದು ವೇಳೆ ಇದು ಶಾಸನವಾದರೆ, ನಮ್ಮ ಜಾತ್ಯತೀತತೆಯು ಅಲ್ಲಿಗೆ ಶಾಸನಬದ್ಧವಾಗಿ ಅಂತ್ಯಗೊಂಡಂತೆ!

(೩) ಯೇಶು ಕ್ರಿಸ್ತನ ಜನನದ ಬಗೆಗೆ ‘ವೀಕ್ಲಿ’ಯಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಕೆಲವು ಸಂಶೋಧಕರು ಯೇಶು ಯಹೂದಿ ವೇಶ್ಯೆಯೊಬ್ಬಳಿಗೆ ರೋಮನ್ ನಾವಿಕನಲ್ಲಿ ಹುಟ್ಟಿದ ಮಗ ಎಂದು ಬರೆದದ್ದನ್ನು ಅಲ್ಲಿ ಪ್ರಸ್ತಾವಿಸಲಾಗಿತ್ತು. ಆ ಲೇಖನದ ವಿರುದ್ಧ ಭಾರತದಲ್ಲೇ ಅಗಲಿ, ಯುರೋಪ ಅಥವಾ ಅಮೆರಿಕಾದಲ್ಲಿಯೇ ಆಗಲಿ, ಆ ಸಮಯದಲ್ಲಿ ಯಾವುದೇ ಪ್ರತಿಭಟನೆ ಆಗಲಿಲ್ಲ. ಈಗಲಾದರೋ ಎಂತೆಂಥಾ ಕಾರಣಗಳಿಗಾಗಿ ನಮ್ಮ ಜನ ಪ್ರತಿಭಟನೆ ಮಾಡುತ್ತಿದ್ದಾರೆ! ಬಂಜಗೆರೆಯವರು ಬಸವಣ್ಣನ ಬಗೆಗೆ ಬರೆದ ಸಂಶೋಧನಾ ಲೇಖನದ ವಿರುದ್ಧ, ಗಣಪತಿಯ ಅನಾರ್ಯತ್ವದ ವಿರುದ್ಧ, ಡ್ಯಾನ್ ಬ್ರೌನನ ‘ಡಾ ವಿಂಚಿ ಕೋಡ್’ ಕಾದಂಬರಿಯ ವಿರುದ್ಧ….!

ಹದಿನೆಂಟನೆಯ ಶತಮಾನದಲ್ಲಿ ಬದುಕಿದ್ದ ಫ್ರೆಂಚ ಸಾಹಿತಿ ವೋಲ್ಟೇರನ ವಿಚಾರವನ್ನು ಪ್ರಜ್ಞಾವಂತ ಭಾರತೀಯರೇ (ಜ್ಞಾನಪೀಠಿಗಳನ್ನು ಒಳಗೊಂಡು) ಮರೆಯುತ್ತಿರುವುದು ಸೋಜಿಗದ ಸಂಗತಿ: “ನೀನು ಹೇಳುವುದನ್ನು ನಾನು ಒಪ್ಪುವುದಿಲ್ಲ. ಆದರೆ ಹಾಗೆ ಹೇಳಲು ನಿನಗಿರುವ ಸ್ವಾತಂತ್ರ್ಯವನ್ನು ನನ್ನ ಜೀವ ಕೊಟ್ಟಾದರೂ ರಕ್ಷಿಸುತ್ತೇನೆ.”
ಈಗಿನ ನಮ್ಮ ಭಾರತೀಯ ‘ನಾಗರಿಕರು’ ವಿರೋಧಿಗಳ ಜೀವ ತೆಗೆಯುವುದನ್ನೇ ಇಷ್ಟಪಡುತ್ತಾರೆ! (ಗಿರೀಶ ಕಾರ್ನಾಡರು ಮುಂಬಯಿಯ ಅಂತರರಾಷ್ಟ್ರೀಯ ಸಾಹಿತ್ಯಮೇಳದಲ್ಲಿ ಸಲ್ಮಾನ ರಶ್ದಿಯ ವಿರುದ್ಧ ಕೆಂಡ ಕಾರಿದ್ದನ್ನು ನೆನಪಿಸಿಕೊಳ್ಳಿರಿ.)

ಈ ಸಂದರ್ಭದಲ್ಲಿ ನಮ್ಮ ಸಂವೇದನೆಗಳು ಸೀಮಿತವಾಗುತ್ತಿರುವುದನ್ನೂ ಸಹ ನಾವು ಲಕ್ಷಿಸಬೇಕು. ಯಾವುದೋ ಒಂದು ಧರ್ಮದ ಪ್ರಾರ್ಥನಾ ಮಂದಿರವನ್ನು ಕಿಡಿಗೇಡಿಗಳು ಹಾನಿಗೊಳಿಸಿದಾಗ, ಕೇವಲ ಆ ಸಮುದಾಯದವರಷ್ಟೇ ಪ್ರತಿಭಟನಾ ಮೆರವಣಿಗೆಯನ್ನು ಮಾಡುತ್ತಾರೆ. ಹೀಗೇಕೆ? ಇಂತಹ ದುರುಳ ಕೃತ್ಯವು ಇತರರಲ್ಲಿ ಅಸಮಾಧಾನವನ್ನು ಏಕೆ ಹುಟ್ಟಿಸಬಾರದು? ನಾಗರಿಕರೆನ್ನಿಸಿಕೊಳ್ಳುವವರೆಲ್ಲ ಒಟ್ಟಾಗಿ ಏಕೆ ಪ್ರತಿಭಟಿಸಬಾರದು?

(೪) ಇಲಸ್ಟ್ರೇಟೆಡ್ ವೀಕ್ಲಿಯು ಪ್ರಕಟಿಸಿದ ಒಂದು ನಗೆಹನಿಯು ಅನೇಕ ವರ್ಷಗಳ ಬಳಿಕ ವಿಪರ್ಯಾಸವಾಗಿ ರೂಪಾಂತರಗೊಂಡಿದ್ದು ಆಶ್ಚರ್ಯದ ಸಂಗತಿಯಾಗಿದೆ. ಆ ನಗೆಹನಿ ಹೀಗಿದೆ:
ರಶಿಯಾದಲ್ಲಿ ಮಹಾಕ್ರಾಂತಿ ಜರುಗಿದ ನಂತರ ಕಮ್ಯುನಿಸ್ಟ ಅಧಿಕಾರಿಯೊಬ್ಬನು ಓರ್ವ ಪ್ರಜೆಗೆ ಪ್ರಶ್ನೆ ಕೇಳುತ್ತಿದ್ದಾನೆ.
ಅಧಿಕಾರಿ: ರಶಿಯದ ಮಹಾಕ್ರಾಂತಿ ಜರುಗುವ ಮೊದಲು ನೀನು ಯಾವ ಊರಿನಲ್ಲಿದ್ದಿ?
ಪ್ರಜೆ: ಸೇಂಟ ಪೀಟರ್ಸಬರ್ಗನಲ್ಲಿದ್ದೆ, ಸ್ವಾಮಿ.
ಅಧಿಕಾರಿ: ಕ್ರಾಂತಿ ಜರಗುವ ಅವಧಿಯಲ್ಲಿ?
ಪ್ರಜೆ: ಪೆಟ್ರೋಗ್ರ್ಯಾಡ್‍ನಲ್ಲಿ, ಸ್ವಾಮಿ.
ಅಧಿಕಾರಿ: ಕ್ರಾಂತಿಯ ನಂತರ?
ಪ್ರಜೆ: ಲೆನಿನ್‍ಗ್ರ್ಯಾಡ್‍ನಲ್ಲಿ ಇದ್ದೇನೆ, ಸ್ವಾಮಿ.
ಅಧಿಕಾರಿ: ಈ ಮೂರು ಶಹರಗಳಲ್ಲಿ ನಿನಗೆ ಅತಿ ಮೆಚ್ಚಿಗೆಯಾಗುವ ಊರು ಯಾವುದು?
ಪ್ರಜೆ: ಸೇಂಟ ಪೀಟರ್ಸಬರ್ಗ, ಸ್ವಾಮಿ!
(ಟಿಪ್ಪಣಿ: ಸೇಂಟ ಪೀಟರ್ಸಬರ್ಗ ಎನ್ನುವ ಪಟ್ಟಣದ ಹೆಸರನ್ನು ೧೯೧೪ರಲ್ಲಿ ಪೆಟ್ರೋಗ್ರ್ಯಾಡ್‍ ಎಂದು ಬದಲಾಯಿಸಲಾಯಿತು. ೧೯೨೪ರಲ್ಲಿ ಲೆನಿನ್‍ಗ್ರ್ಯಾಡ್‍ ಎಂದು ಬದಲಾಯಿಸಲಾಯಿತು. !)

ವೀಕ್ಲಿ ಈ ನಗೆಹನಿಯನ್ನು ಪ್ರಕಟಿಸಿ ಸುಮಾರು ೨೦-೨೫ ವರ್ಷಗಳ ನಂತರ ರಶಿಯಾ ದೇಶ glasnost ಹಾಗು perestroikaದ ಪರಿಣಾಮದಿಂದ ಒಡೆದು ತುಂಡಾಯಿತು. ಲೆನಿನ್‍ಗ್ರ್ಯಾಡ್ ಎನ್ನುವ ಹೆಸರನ್ನು ೧೯೯೧ರಲ್ಲಿ ಮತ್ತೊಮ್ಮೆ ಸೇಂಟ ಪೀಟರ್ಸಬರ್ಗ ಎಂದು ಬದಲಾಯಿಸಲಾಯಿತು.
ಎಂತಹ ವಿಪರ್ಯಾಸ!

14 comments:

Subrahmanya said...

ಕಾಂಗ್ರೇಸ್ ಪಕ್ಷವು ತನ್ನ ಅಧಃಪತನದ ಕಾಲ ಬಂದಾಗಲೆಲ್ಲಾ 'ಒಡೆದು ಆಳುವ ನೀತಿಯನ್ನು' ಪಾಲಿಸಿಕೊಂಡು ಬಂದಿರುವುದನ್ನು ಇತಿಹಾಸವೇ ಹೇಳುತ್ತದೆ. ದೇಶಕ್ಕೆ ಒದಗಿ ಬರುತ್ತಿರುವ ದುಃಸ್ಥಿತಿಯನ್ನು ನೆನೆಸಿಕೊಂಡರೆ ಬೇಸರವಾಗುತ್ತದೆ.

"ಜೆಸ್ಸಿಕಾಳು ಸತ್ತಿದ್ದು ಕೊಲೆಯಿಂದ" ಆದರೆ "No one killed jessica " ಎನ್ನುವುದು ವಿಪರ್ಯಾಸವೇ ಸರಿ.

ಇತಿಹಾಸವನ್ನು ಕಂಡವರಿಗೆ ವರ್ತಮಾನದ ಬೊಬ್ಬಿರಿಯುವಿಕೆಗಳು 'ಜೋಕ್' ಅನ್ನಿಸುವುದರಲ್ಲಿ ತಪ್ಪೇನೂ ಇಲ್ಲ !.

ಸತೀಶ್ ನಾಯ್ಕ್ said...

ಇವತ್ತು ಅನೇಕ ಪತ್ರಿಕೆಗಳು ಮುಚ್ಚುತ್ತಾ ಇರೋದು ನ್ಯಾಯಾಭಿಮಾನದ ಉತ್ತಮ ಧೋರಣೆಯ ಪ್ರತಿಫಲದಿಂದ ಮಾತ್ರವಲ್ಲ, ಶೋಷಣೆಯಿಂದ, ಅಪೋಷಣೆಯಿಂದ.

ಜಾಹಿರಾತು, ಸಿನಿಮಾ, ಕ್ರೀಡೆಗಳಿಗಷ್ಟೇ ಪ್ರಾಶಾಸ್ತ್ಯ ಕೊಡುವ ಅದೆಷ್ಟು ಪತ್ರಿಕೆಗಳನ್ನು ನಾವು ಓದಿಲ್ಲ. ಈಗೀಗ ರಾಜಕೀಯವಾಗಲಿ, ಸಾಮಾಜಿಕವಾಗಲಿ ಅಥವಾ ಇನ್ನಾವುದೇ ಆಗಲಿ ಸುದ್ಧಿಗಳನ್ನು ಎಷ್ಟು ಮಾತ್ರ ತಲುಪಿಸಬೇಕೋ ಅಷ್ಟು ಮಾತ್ರ ತಲುಪಿಸುವುದು ತಮ್ಮ ಕರ್ತವ್ಯ ಅಂದುಕೊಂಡ ಮಾಧ್ಯಮಗಳೇ ಹೆಚ್ಚು. ವಿಷಯಗಳಿಗಿಂತ ವಿಷಯಾಂತರದ ಸುದ್ಧಿಗಳೇ ಹೆಚ್ಚು.

Illustrated weekly of India ನಾನು ಆ ಪತ್ರಿಕೆಯನ್ನ ಎಂದಾದರು ಓದಿದ್ದೇನೋ ಇಲ್ಲವೋ ನೆನಪಿಲ್ಲ. ಆದರೆ ನಿಮ್ಮ ಈ ಲೇಖನ ಓದಿದ ಮೇಲೆ ಒಳ್ಳೆ ಪತ್ರಿಕೆಯೊಂದು ಅವಸಾನವಾದ ಬಗೆಗೆ ಬೇಸರಿಸಿದ್ದು ನಿಜ.

sunaath said...

ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿಯಿಂದಾಗಿಯೇ, ದೇಶವು ಅಧೋಗತಿಗೆ ಜಾರಿದೆ!

sunaath said...

ಒಳ್ಳೆಯ ಪತ್ರಿಕೆಗಳಿಗೆ ಇದು ಒಳ್ಳೆಯ ಕಾಲವಲ್ಲ!

Swarna said...

ಕಾಕಾ ,
ನಿಮ್ಮಿಂದ ಇಂತಹ ಬರಹಗಳನ್ನ ಓದಿದಾಗ ನಾವು ಕಳೆದು ಕೊಂಡದ್ದರ ಬಗ್ಗೆ, ಮುಂದಿನ ಪೀಳಿಗೆಗೆ ನಾವು ಹಸ್ತಾಂತರಿಸಬೇಕಿದ್ದ ಆದರೆ ಕುಲಗೆಡಿಸಿರುವ ಸಮಾಜ ಸ್ವಾಸ್ಥ್ಯದ ಬಗ್ಗೆ ಬೇಸರವಾಗುತ್ತದೆ. ಆದರೆ ಮತ್ತೆ ಎಲ್ಲೋ ಒಂದು ಆಶಾ ಕಿರಣ ಬೆಳಗಬಹುದೆಂಬ ಸಣ್ಣ ನಂಬಿಕೆ.
ಸತ್ಯೇಂದ್ರ ದುಬೆ, ಮಂಜುನಾಥ್ ನಂಥ ಯುವಕರು ಪಬ್ಲಿಕ್ ಸೆಕ್ಟರ್ ಗಳನ್ನು ಸ್ವಚ್ಚ ಮಾಡಲು ಹೋಗಿ ಕೊಲೆಯಾದರು . ನೀವು ಹೇಳಿದಂತೆ ಸಮಾಜ ಒಟ್ಟಾಗಿ ದುರಾಚಾರಗಳ ವಿರುಧ್ಧ ಹೋರಾಡುವವರೆಗೂ ಇಂತಹ ಘಟನೆಗಳು ನಿಲ್ಲುವುದಿಲ್ಲ.
ಪತ್ರಿಕೆಯನ್ನು ಪರಿಚಯಿಸಿದ್ದಕ್ಕಾಗಿ ವಂದನೆಗಳು

sunaath said...

ಸ್ವರ್ಣಾ,
ಎಂತೆಂತಹ ಕತ್ತಲೆಯ ನಡುವೆಯೂ, ಬೆಳಕಿನ ಹೋರಾಟ ನಡೆದಿಲ್ಲವೆ? ಭಾರತದಲ್ಲಿಯೇ ಬುದ್ಧ, ಗಾಂಧಿಯ ನಂತರ ಇದೀಗ ಅಣ್ಣಾ ಹಜಾರೆ ಹಾಗು ಕೇಜರಿವಾಲಾ ಹೋರಾಟ ನಡೆಸುತ್ತಿಲ್ಲವೆ? ಕತ್ತಲೆಗೆ ಹತ್ತು ತಲೆಗಳು. ಅವನ್ನು ಕತ್ತರಿಸಲು ಒಂದೇ ರಾಮಬಾಣ ಸಾಕು.

ಬಸವಣ್ಣನವರ ಮಾತಿನಲ್ಲಿ ವಿಶ್ವಾಸವಿಡೋಣ:
‘ತಮಂಧ ಘನ, ಜ್ಯೋತಿ ಕಿರಿದೆನ್ನಬಹುದೆ?’

Badarinath Palavalli said...

ಸುನಾಥ್ ಸಾರ್ ಅವರ ಈ ಲೇಖನ ಓದಿರಿ:
ಇಲಿಸ್ಟ್ರೆಡ್ ವೀಕ್ಲೀ ಆಫ್ ಇಂಡಿಯಾ ಎಂದೊಡನಡ ನೆನಪಾಗುವುದು - ಅದರ ವಿಶಿಷ್ಟ ಆಕಾರ ಮತ್ತು ಕುಶ್ವಂತ್ ಸಿಂಗ್.

- ‘ರಹಸ್ಯ ಪತ್ರ’ದ ಲೇಖನವು, ಭಾರತೀಯ ರಾಜಕೀಯ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ.
- ಕೊಲ್ಲಿ ದೇಶದ ಲೇಖನ ಅಲ್ಲಿನ ಅಮಾನವೀಯತೆಯನ್ನು ಚಿತ್ರಿಸಿದರೆ, ಸದರೀ ‘ಜಾತೀಯ ಹಿಂಸಾಚಾರದ ಮಸೂದೆ’ ನೀವು ಹೇಳಿದಂತೆ ರಾಜಕೀಯ ದೊಂಬರಾಟವೇ.
- ಆ ಕಾಲದಲ್ಲಿ ಅದು ಸಂಘರ್ಷಕ್ಕೆ ನಾಂದಿ ಹಾಡದಿರಬಹುದು ಸಾರ್, ಆದರೆ ಈಗಿನ ಮೀಡಿಯಾ ಮತ್ತು ಟಿ.ಆರ್.ಪಿ. ಸಮರದಲ್ಲಿ ಎಂತ ಚಿಕ್ಕ ಸುದ್ದಿಯೂ ದೊಡ್ಡಮಟ್ಟದ ಚರ್ಚೆಗೆ ಮೂಲವಾಗುತ್ತಿದೆ. ಇದೂ ಅಪಾಯವೇ!
- ಇದಂತೂ ಹಾಸ್ಯಾಸ್ಪದವೇ ಸಾರ್. ನಮ್ಮಲ್ಲೂ ತಮಾಷೆ ಶರುವಾಗುತ್ತದೆ ಬಲು ಬೇಗ Bangalore v/s Bengaluru v/s Bengalooru!!!!

ಒಟ್ಟಾರೆಯಾಗಿ ’ಇಲಿಸ್ಟ್ರೆಡ್ ವೀಕ್ಲೀ ಆಫ್ ಇಂಡಿಯಾ’ ತನ್ನ ಪ್ರಯೋಗಗಳ ಮೂಲಕ ವಿಭಿನ್ನ ಪತ್ರಿಕೆ.

(ತಮ್ಮ ಈ ಲೇಖನವನ್ನು ಪೇಸ್ ಬುಕ್ಕಿನ 3K ಗುಂಪಿನಲ್ಲಿ guest post ಅಡಿಯಲ್ಲಿ share ಮಾಡಿದ್ದೇನೆ ಸಾರ್ :) )

https://www.facebook.com/photo.php?fbid=676805222363930&set=o.191375717613653&type=3&theater

ಚುಕ್ಕಿಚಿತ್ತಾರ said...

ಕಾಕ .. ಈ ರಾಜಕೀಯದವರ ಒಲೈಸುವಿಕೆಗೆ ಒಂದು ನೀತಿ ನಿಯಮಾವಳಿ ಎನ್ನುವುದಿಲ್ಲ.. ಹಾಕಲೂ ಅವರು ಬಿಡುವುದಿಲ್ಲ.. ಒಟ್ಟಿನಲ್ಲಿ ಸಾಮಾನ್ಯರು ಬದುಕಲು ಹರ ಸಾಹಸವನ್ನೇ ಪಡಬೇಕು.. ಎಲ್ಲರೂ , ಎಲ್ಲವೂ ಕೆಟ್ಟಿಲ್ಲ ಅನ್ನುವ ಆಶಾವಾದವನ್ನು ನೆಚ್ಚಿಕೊಳ್ಳುವುದೊಂದೇ ದಾರಿ..
ಪತ್ರಿಕೆಯನ್ನು ಪರಿಚಯಿಸಿ ಆಲೋಚನೆಗೆ ಹಚ್ಚುವ ಲೇಖನ ಚನ್ನಾಗಿದೆ ಕಾಕ..

sunaath said...

ಬದರಿನಾಥರೆ,
ಕೊಲ್ಲಿ ರಾಷ್ಟ್ರಗಳಲ್ಲಿಯೂ ಮಾನವರು ಇದ್ದಾರೆ. ಆದರೆ ಅವರ ಇತಿಹಾಸ ಬೇರೆ. ನಮ್ಮ ಇತಿಹಾಸ ಬೇರೆ. ಹೀಗಾಗಿ ಅವರ philosophy ಬೇರೆ, ನಮ್ಮ philosophy ಬೇರೆ!

3Kದಲ್ಲಿ ಶೇರ್ ಮಾಡಿದ್ದಕ್ಕಾಗಿ ಧನ್ಯವಾದಗಳು.

sunaath said...

ವಿಜಯಶ್ರೀ,
ಕಾಲ ಯಾವಾಗಲೂ ಇಷ್ಟೇ. ಒಳ್ಳೆಯದಕ್ಕಾಗಿ ಹೋರಾಡಲೇ ಬೇಕು. ಪ್ರವಾಹದ ವಿರುದ್ಧ ಈಸಬೇಕು, ಈಸಿ ಜಯಿಸಬೇಕು ಅಶೋಕ ಖೇಮಾರ ಹಾಗೆ!

Unknown said...

ನಿಮ್ಮ ಈ ಲೇಖನ ನನ್ನನ್ನು ಕುತೂಹಲದಿಂದ ಓದುವಂತೆ ಮಾಡಿತು. The Illustrated Weekly of India ದಲ್ಲಿ ಪ್ರಕಟವಾದ ರಾಷ್ಟ್ರಪತಿಯವರಿಗೆ ಬರೆದ ರಹಸ್ಯ ಪತ್ರದ ಬಗ್ಗೆ ಓದಿದಾಗ ಬೇಸರವಾಯಿತು.ಯಾವುದೋ ಒಂದು ಧರ್ಮದ ಪ್ರಾರ್ಥನಾ ಮಂದಿರವನ್ನು ಕಿಡಿಗೇಡಿಗಳು ಹಾನಿಗೊಳಿಸಿದಾಗ, ಕೇವಲ ಆ ಸಮುದಾಯದವರಷ್ಟೇ ಪ್ರತಿಭಟನಾ ಮೆರವಣಿಗೆಯನ್ನು ಮಾಡುತ್ತಾರೆ. ಇಂತಹ ದುರುಳ ಕೃತ್ಯವು ಇತರರಲ್ಲಿ ಅಸಮಾಧಾನವನ್ನು ಏಕೆ ಹುಟ್ಟಿಸಬಾರದು? ನಾಗರಿಕರೆನ್ನಿಸಿಕೊಳ್ಳುವವರೆಲ್ಲ ಒಟ್ಟಾಗಿ ಏಕೆ ಪ್ರತಿಭಟಿಸಬಾರದು? ಎಂಬ ಮಾತು ನನಗೂ ಪ್ರಶ್ನೆಯಾಗಿ ಕಾಡಿತು.

Srikanth Manjunath said...

ನೀನು ಹೇಳುವುದನ್ನು ನಾನು ಒಪ್ಪುವುದಿಲ್ಲ. ಆದರೆ ಹಾಗೆ ಹೇಳಲು ನಿನಗಿರುವ ಸ್ವಾತಂತ್ರ್ಯವನ್ನು ನನ್ನ ಜೀವ ಕೊಟ್ಟಾದರೂ ರಕ್ಷಿಸುತ್ತೇನೆ.”
ಈ ಮಾತುಗಳು ಬಹಳ ಮನಸ್ಸೆಳೆಯಿತು. ಹೌದು ಇನ್ನೊಬ್ಬರ ಸ್ವಾತಂತ್ರ್ಯವನ್ನು ಗೌರವಿಸುವ ಮನಸ್ಥಿತಿ ನಮಗೆ ಬಂದಾಗ ನಿಜಕ್ಕೂ ಒಂದು ಸುಂದರ ಭುವಿ ನಮ್ಮದಾಗುತ್ತದೆ. ಪತ್ರಿಕೆಯ ಸುಮಾರು ತೊಂಭತ್ತಕ್ಕು ಹೆಚ್ಚು ವರ್ಷಗಳ ಇತಿಹಾಸವನ್ನು ಹಾಗೆ ಒಮ್ಮೆ ತಿರುವು ಹಾಕಿದ ರೀತಿ ಸೂಪರ್.. ಪ್ರಪಂಚದ ಇತಿಹಾಸದ ಭೀಭತ್ಸ ಘಟನೆಗಳನ್ನು ಓದಿದಾಗ ಪ್ರಜಾಪ್ರಭುತ್ವ ಇದೆಯಾ ಎನ್ನುವ ಅನುಮಾನ ಕಾಡುತ್ತದೆ. ಸುಂದರ ಲೇಖನ ಸರ್.

sunaath said...

ಚಂದ್ರಶೇಖರರೆ,
ಸಂವೇದನಾಶೀಲವಾದ ಸಮಾಜವೇ ನಿಜವಾದ ನಾಗರಿಕ ಸಮಾಜ. ಅಂತಹ ಸಮಾಜ ನಮ್ಮಲ್ಲಿ ಯಾವಾಗ ಬರುವುದೋ?!

sunaath said...

ಶ್ರೀಕಾಂತರೆ,
ಮಾನವ ಇತಿಹಾಸ ರಕ್ತಸಿಕ್ತವಾಗಿದೆ. ಆದರೆ ಭವಿಷ್ಯವಾದರೂ ಚೆನ್ನಾಗಿರಲಿ ಎಂದು ಹಾರೈಸೋಣ.