Friday, April 4, 2014

ಇದು ಯುಗಾದಿ...........................ಬೇಂದ್ರೆ

ಅವರವರಿಗೆ ಅವರ ಹಾದಿ
ನಿನಗೆ ನನಗೆ ಒಂದೆ ಆದಿ – ಒಂದೆ ದಾದಿ
ಯುಗದ ಮಧ್ಯಬಿಂದು ಒಂದು.

ಇದು ಯುಗಾದಿ
ಆಗಿರು ಸಂವಾದಿ.
ಏಕೆ ವಾದ ಬೀದಿ?
ಸಾದಿ ನಮ್ಮ ಹಾದಿ ತಮ್ಮಾ
ಯಾಕೆ ಕೆಡುವೆ ಕಾದಿ ?
ನಿನ್ನ ಪಾಡು ನಿನ್ನ ಜಾಡು
ವಿರಸ ನಿನಗನಾದಿ.

ಮೊನ್ನೆ ಮೊನ್ನೆ ಬೂದಿಯಾದಾ
ಹೋಳಿಯಲ್ಲಿ ಕಾಮಾ
ಚೈತ್ರಗೌರಿ ಹೂತಳಣ್ಣಾ
ನೆನೆದು ಶಿವನ ನಾಮಾ
ಮಾಧವನಾ ರಾಸಲೀಲೆ-
ಗಿದೇ ಋತುವು ಹದವು
ಸುಂಟ್ರುಗಾಳಿ, ಅಡ್ಡಮಳೆ
ತೆರೆದಿತಕ್ಕಾ ಕದವು.
ಚಿಗುರು ಹಸಿತು, ಬಲಿತು ಹಳಿತು
ಎಲೆ ಎಲೆ ಎಲೆ ಉದುರಿತು
ಫಲ ಸಿಡಿದು ಬೀಜ ಬೀಜ
ಅದು ಎಲ್ಲೋ ಚದುರಿತು.

ಆದಿ ಇಲ್ಲ ; ಅಂತ್ಯ ಇಲ್ಲ
ಮಧ್ಯೆ ಯಾವ ಹಾದಿ ?
ಯುಗ ಯುಗಗಳ ವಿರಹದೊಳಿದೆ
ಪ್ರೀತಿಯಾ ಬುನಾದಿ.
ನನ್ನುಸಿರಿಗೆ ನಿನ್ನುಸಿರನು
ಸಂಗಡಿಸು ಸಮಾಧಿ.

ಶ್ರಾವಣದಲಿ ಶ್ರವಣಸುಖ
ಮಾಘದಲ್ಲಿ ಅನಘಮುಖ
ಆಶ್ವಿನ ರವಿ ಚೈತ್ರ ಚಂದ್ರ
ಪರಸ್ಪರರು ಅಭಿಮುಖ.
ಮಧು ಮಾಸದ ರಾಧಾ ರತಿ
ವೈಶಾಖಿಯ ಸತ್ಕೃತಿ
ನೈಸರ್ಗಿಕ ವೈಸರ್ಗಿಕ
ಛಂದೋಮಯ ಪ್ರತಿಕೃತಿ.

ಕವಿಯಾಗಿಯೆ ಹೇಳುತಿರೋ
ಕಿವಿಯಾಗಿಯೆ ಕೇಳುತಿರೋ
ಭವ ಭವ ಭವ ಮೋಚನವಿದೆ
ಸವಿ ಸವಿ ಸವಿದೇಳುತಿರೋ
ಸಾಯಕನೋ ಈ ಪ್ರಪಂಚಿ
ಗಾಯಕನಿಗೊ ಇದೆ ವಿಪಂಚಿ
ಮಾಯದ ಕಾಯ್ ಮಾಗುವುದೋ
ಅರಸು ಅಂಚೆ ಹಂಚಿ ಹಂಚಿ
ಸರಸಿಯೊಳಗೆ – ಹೊಂಚಿ.

ಹಾದಿಯೆಂದು ಹಾಯಬೇಡ ಯಾವುದೋ ಯುಗಾದಿ
ಯುಗಲ ಯುಗಲ ವಿರಹದೊಳಿದೆ ಪ್ರೀತಿಯೂ ಬುನಾದಿ
ಸತ್ತಿನ ಗತ್ತಿನ ಗಮಕವು ಭಾವರಸ ಸನಾದಿ
ಛಾಂದಸಿಕತೆ ಮುಕ್ತಮಾರ್ಗ ? ಶ್ರುತಿ-ಕೃತಿ ಸಂವಾದಿ.
............................................................................................................

“ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ...”
ಇದು ಬೇಂದ್ರೆಯವರ ಸುಪ್ರಸಿದ್ಧ ಕವನ. ೧೯೩೨ರಲ್ಲಿ ಪ್ರಕಟವಾದ ‘ಗರಿ’ ಕವನಸಂಕಲನದಲ್ಲಿ ಈ ಕವನ ಅಡಕವಾಗಿದೆ.
ಈ ಯುಗಾದಿ’ ಎನ್ನುವುದು ಬೇಂದ್ರೆಯವರ ಮತ್ತೊಂದು ಕವನ. ಈ ಕವನವು ೧೯೬೪ರಲ್ಲಿ ಪ್ರಕಟವಾದ ‘ನಾಕು ತಂತಿ’ ಕವನಸಂಕಲನದಲ್ಲಿ ಅಡಕವಾಗಿದೆ. ಈ ಮೂವತ್ತೆರಡು ವರ್ಷಗಳ ಅವಧಿಯಲ್ಲಿ ಬೇಂದ್ರೆಯವರ ವ್ಯಕ್ತಿತ್ವದಲ್ಲಿ ಆದ ಏಳ್ಗೆಯನ್ನು ಈ ಎರಡು ಕವನಗಳು ಸೂಚಿಸುತ್ತವೆ. ಮೊದಲ ಕವನದಲ್ಲಿ ಅವರು ಪ್ರೌಢ ಕವಿ. ಆದುದರಿಂದಲೇ ಅವರು ಯುಗಾದಿಯು ಪ್ರಕೃತಿಯಲ್ಲಿ ತರುವ ಸಂಭ್ರಮವನ್ನು ಗುರುತಿಸುತ್ತಾರೆ. ಎರಡನೆಯ ಕವನದಲ್ಲಿ ಅವರು ಮಾಗಿದ ಜೀವ, ಆಧ್ಯಾತ್ಮ ಸಾಧಕರು. ಆದುದರಿಂದ ಎರಡನೆಯ ಕವನದಲ್ಲಿ ಅವರು ಬದುಕಿನ ರಹಸ್ಯವನ್ನು ಶೋಧಿಸುತ್ತಿದ್ದಾರೆ.

ಅವರವರಿಗೆ ಅವರ ಹಾದಿ
ನಿನಗೆ ನನಗೆ ಒಂದೆ ಆದಿ – ಒಂದೆ ದಾದಿ
ಯುಗದ ಮಧ್ಯಬಿಂದು ಒಂದು.

ಅನಂತವಾದ ಈ ಕಾಲದಲ್ಲಿ ಜೀವಿಗಳು ಕಾಣುತ್ತವೆ ಹಾಗು ಕಣ್ಮರೆಯಾಗುತ್ತವೆ. (‘ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ, ಭಾರತ’...ಭಗವದ್ಗೀತೆ) ಅವರವರ ಕರ್ಮಾನುಸಾರವಾಗಿ ಅವರವರಿಗೆ ಅವರವರ ಹಾದಿ ತೆರೆದಿರುತ್ತದೆ. ಆದರೆ ಈರ್ವರು ಸ್ನೇಹಿತರು ಮಾತ್ರ ಯಾವುದೋ ಒಂದು ಬಂಧನದಿಂದ ಬೆಸೆದುಕೊಂಡಿರುತ್ತಾರೆ. ಅದು ಸ್ನೇಹದ ಬಂಧನ. ಕವಿಯ ವಿಷಯದಲ್ಲಿ, ಈ ಸ್ನೇಹವು ಕವಿಯ ಹಾಗು ಕಾವ್ಯರಸಿಕನ ನಡುವಿನ ಸ್ನೇಹವಾಗಿದೆ. ಈ ಕಾವ್ಯಸ್ನೇಹದಿಂದಾಗಿ, ಅನಂತಕಾಲದೊಳಗಿನ ಇವರೀರ್ವರ  ಆದಿ ಬಿಂದು ಅಂದರೆ ಇವರು ವ್ಯಕ್ತವಾಗುವ ಬಿಂದು ಒಂದೇ ಆಗಿದೆ. ಇವರಿಗೆ ಪೋಷಣೆ ನೀಡುವ ದಾದಿಯೂ ಒಬ್ಬಳೇ ಅರ್ಥಾತ್ ಇವರೀರ್ವರೂ ಸಮಾನಸ್ನೇಹಿಗಳು. (ಸಮಾನಶೀಲೇಷು ವ್ಯಸನೇಷು ಸಖ್ಯಾ:)

ಅನಂತವಾದ ದೇಶಕ್ಕಾಗಲೀ, ಅನಂತವಾದ ಕಾಲಕ್ಕಾಗಲೀ ಆದಿಬಿಂದುವಾಗಲಿ, ಅಂತ್ಯಬಿಂದುವಾಗಲಿ, ಮಧ್ಯಬಿಂದುವಾಗಲಿ ಇರುವುದಿಲ್ಲ. ನೀವು ಎಲ್ಲಿ ನಿಂತರೂ ಆ ಬಿಂದುವೇ ಮಧ್ಯಬಿಂದು ! ಕವಿಯ ಕಾವ್ಯ ಹುಟ್ಟಿದ ಕ್ಷಣದಲ್ಲಿಯೇ ರಸಿಕನು ಆ ಕಾವ್ಯದ ಸವಿಯನ್ನು ಸವಿದಿರುತ್ತಾನೆ. ಕವಿ ಹಾಗು ಸಹೃದಯ ಇವರೀರ್ವರೂ ಜೊತೆಯಲ್ಲಿಯೇ ಜೀವಿಸುತ್ತಾರೆ. ಆದುದರಿಂದ ಇವರ ಕಾಲದೇಶಗಳ ಆದಿಬಿಂದುವೂ ಒಂದೇ ಆಗಿದೆ.

ಬೇಂದ್ರೆಯವರು ಮೊದಲ ನುಡಿಯಲ್ಲಿ ಕವಿಯ ಹಾಗು ಸಹೃದಯ ರಸಿಕನ ನಡುವಿನ ಸ್ನೇಹಬಂಧವನ್ನು ಗುರುತಿಸುತ್ತಾರೆ. ಇದು ಸಾಹಿತ್ಯದ ಮೂಲಕ ಹುಟ್ಟಿದ ಸ್ನೇಹಬಂಧವಾಗಿದೆ. ಆದರೆ ಈ ಸ್ನೇಹವು ಕೇವಲ ಸಾಹಿತ್ಯದ ಮೂಲಕವೇ ಹುಟ್ಟಬೇಕಿಂದಿಲ್ಲ. ಈರ್ವರು ಸ್ನೇಹಿತರ ನಡುವಿನ ಅವ್ಯಾಜ ಸ್ನೇಹಕ್ಕೆ ಕೆಲವೊಮ್ಮೆ ಯಾವುದೇ ಕಾರಣವು ಬೇಕಾಗಿರುವುದಿಲ್ಲ.

ಇದು ಯುಗಾದಿ
ಆಗಿರು ಸಂವಾದಿ.
ಏಕೆ ವಾದ ಬೀದಿ?
ಸಾದಿ ನಮ್ಮ ಹಾದಿ ತಮ್ಮಾ
ಯಾಕೆ ಕೆಡುವೆ ಕಾದಿ ?
ನಿನ್ನ ಪಾಡು ನಿನ್ನ ಜಾಡು
ವಿರಸ ನಿನಗನಾದಿ.

ಎರಡನೆಯ ನುಡಿಯಲ್ಲಿ ಬೇಂದ್ರೆಯವರು ತಮ್ಮ ಸ್ನೇಹಿತನಿಗೆ ಹೇಳುವ ಆಪ್ತ ಬೋಧನೆಯಿದೆ. ‘ ಗೆಳೆಯಾ, ಕಾಲವು ಪ್ರಾರಂಭವಾಗಿದೆ. ಇಂದು ಯುಗಾದಿಯ ಹಬ್ಬ. ಈ ಶುಭದಿನದಂದು ನಾವು ಪರಸ್ಪರ ಸಮ್ಮುಖರಾಗಿ, ಸುಮುಖರಾಗಿ ಸಂವಾದದ ಸಲ್ಲಾಪದಲ್ಲಿ ತೊಡಗಬೇಕು. ಹಾಗಿರದೆ ಬೀದಿಜಗಳದ ಹಾದಿಯನ್ನು ಆರಿಸಿಕೊಳ್ಳುವದರಲ್ಲಿ ಏನು ಜಾಣತನವಿದೆ? ಇಂತಹ ಮನೋಧರ್ಮವು ಗೆಳೆಯರಲ್ಲಿ ವಿರಸವನ್ನು ಹುಟ್ಟಿಸುತ್ತದೆ.

 ‘ಸಾದಿ’ ಪದಕ್ಕೆ ಎರಡು ಅರ್ಥಗಳನ್ನು ಹೇಳಬಹುದು. ಮೊದಲನೆಯದು ‘ಆದಿ’ ಇದ್ದಂತಹ ಎನ್ನುವ ಅರ್ಥ ; ಎರಡನೆಯದು ‘ಸಾಹಿತ್ಯದ ಹಾದಿ’ ಎನ್ನುವ ಅರ್ಥ. ಬೇಂದ್ರೆಯವರು ಈ ಎರಡೂ ಅರ್ಥಗಳನ್ನು ಬಳಸಿಕೊಳ್ಳುತ್ತಾರೆ. ನಮ್ಮದು ಸಾಹಿತ್ಯದ ಹಾದಿ.
ನಮ್ಮ ಜೀವಿತಾವಧಿಯಲ್ಲಿ ಈ ಹಾದಿಗೆ ಒಂದು ಪ್ರಾರಂಭವಿದೆ (ಹಾಗು ಒಂದು ಅಂತ್ಯವಿದೆ). ಇಂತಹ ಅಲ್ಪಾವಧಿಯಲ್ಲಿ ಜಗಳವನ್ನಾಡುತ್ತ ಜೀವನವನ್ನು ಯಾಕೆ ಕೆಡಸಬೇಕು? ಇದೇ ನಿನ್ನ ಇಚ್ಛೆಯಾಗಿದ್ದರೆ, Good bye! ನಿನ್ನ ಅದೃಷ್ಟ ತೋರಿದತ್ತ ನೀನು ನಡೆ. ಜಗಳಾಟವೇ ನಿನಗೆ ಅನಾದಿಕಾಲದಿಂದ ಬಂದಂತಹ ಮನೋಧರ್ಮವಾಗಿದೆ!

ನಿನ್ನ ಹಾದಿ ಬೇರೆಯಾದರೆ ಅದಕ್ಕೆ ಕಾರಣ ನಿನ್ನ ಮನೋಧರ್ಮ. ‘ಬುದ್ಧಿಃ ಕರ್ಮಾನುಸಾರಿಣಿ’ ಎಂದು ಹೇಳುತ್ತಾರೆ. ನಾವು ಹುಡುಕಿಕೊಂಡು ಹೋಗುವ ಹಾದಿಯು ನಮ್ಮ ಕರ್ಮ ಹಾಗು ನಮ್ಮ ಬುದ್ಧಿಯು ಸೂಚಿಸಿದಂತೆ ಇರುತ್ತದೆ. ಇಷ್ಟೆಲ್ಲವನ್ನು ಬೇಂದ್ರೆಯವರು ‘ನಿನ್ನ ಪಾಡು ನಿನ್ನ ಜಾಡು’ ಎನ್ನುವ ನಾಲ್ಕು ಸರಳ ಪದಗಳ ಮೂಲಕ ಸೂಚಿಸುತ್ತಾರೆ.

 ೩
ಮೊನ್ನೆ ಮೊನ್ನೆ ಬೂದಿಯಾದಾ
ಹೋಳಿಯಲ್ಲಿ ಕಾಮಾ
ಚೈತ್ರಗೌರಿ ಹೂತಳಣ್ಣಾ
ನೆನೆದು ಶಿವನ ನಾಮಾ
ಮಾಧವನಾ ರಾಸಲೀಲೆ-
ಗಿದೇ ಋತುವು ಹದವು
ಸುಂಟ್ರುಗಾಳಿ, ಅಡ್ಡಮಳೆ
ತೆರೆದಿತಕ್ಕಾ ಕದವು.
ಚಿಗುರು ಹಸಿತು, ಬಲಿತು ಹಳಿತು
ಎಲೆ ಎಲೆ ಎಲೆ ಉದುರಿತು
ಫಲ ಸಿಡಿದು ಬೀಜ ಬೀಜ
ಅದು ಎಲ್ಲೋ ಚದುರಿತು.

ಎರಡನೆಯ ನುಡಿಯಲ್ಲಿ ಸ್ನೇಹಕ್ಕೆ ಆಹ್ವಾನವನ್ನು ನೀಡಿದ ಕವಿಯು ಮೂರನೆಯ ನುಡಿಯಲ್ಲಿ ಪ್ರಕೃತಿಯಲ್ಲಿ ಪಸರಿಸಿದ ಸಾಮರಸ್ಯವನ್ನು, ಸಫಲತೆಯನ್ನು ಕಂಡು ಆನಂದಿತರಾಗುತ್ತಾರೆ. ಪ್ರಕೃತಿಯಲ್ಲಿರುವ ಸಾಮರಸ್ಯವೇ ಅದಕ್ಕೊಂದು ಸೌಂದರ್ಯವನ್ನು ತಂದಿದೆ ; ಪ್ರಕೃತಿಗೆ ಹರ್ಷೋಲ್ಲಾಸವನ್ನು ತಂದಿದೆ.

ಹೋಳಿಹುಣ್ಣಿವೆಯಲ್ಲಿ ಕಾಮದಹನವಾದ ನಂತರ ಪ್ರಕೃತಿ ಮತ್ತೆ ಹೊಸ ಜೀವನವನ್ನು ಪ್ರಾರಂಭಿಸುತ್ತದೆ. ಈ ಸಂದರ್ಭದಲ್ಲಿ ಬೇಂದ್ರೆಯವರು ತಮ್ಮ ಮೊದಲ ಕವನ ‘ಯುಗಾದಿ’ಯಲ್ಲಿ ಹೇಳಿದ್ದನ್ನು ನೆನಪಿಸಿಕೊಳ್ಳಿ:
ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ.
ಈ ನುಡಿಗಳಲ್ಲಿ ಪ್ರಕೃತಿಯ ಸಂಭ್ರಮವಿದೆ. ಸಸ್ಯಸಂಕುಲ ಹಾಗು ಪಕ್ಷಿಸಂಕುಲಗಳಲ್ಲಿ ಇರುವ ಸಾಮರಸ್ಯದ ವರ್ಣನೆ ಇದೆ. ಆದರೆ ಪ್ರಕೃತಿಯನ್ನು ಇಲ್ಲಿ ದೈವೀಕರಿಸಿಲ್ಲ. ಬೇಂದ್ರೆಯವರ ಎರಡನೆಯ ಕವನ ‘ಈ ಯುಗಾದಿ’ಯಲ್ಲಿ ಪ್ರಕೃತಿಯನ್ನು ಬೇಂದ್ರೆಯವರು ಚೈತ್ರಗೌರಿ ಎಂದು ಕರೆದಿದ್ದಾರೆ. ಆ ದೇವಿ ಚೈತ್ರಗೌರಿಯೇ ಹೊಸ ಬದುಕಿಗೆ ರೂಪ ಕೊಡಲು ಹೂವನ್ನು ಹೊತ್ತು ಎಲ್ಲೆಡೆ ಹರಡಿದ್ದಾಳೆ. (‘ಯಾ ದೇವಿ ಸರ್ವಸಸ್ಯೇಷು ಪುಷ್ಪರೂಪೇಣ ಸಂಸ್ಥಿತಾ’ ಎನ್ನೋಣವೆ?) ಚೈತ್ರಮಾಸದ ಗೌರಿ ಕೇವಲ ಮನೆಯಲ್ಲಿ ಪ್ರತಿಷ್ಠೆಗೊಳ್ಳುವ ದೇವತೆಯಲ್ಲ. ಅವಳು ಪ್ರಕೃತಿಯ ದೇವತೆ. ಅವಳು ಶಿವನ ನಾಮವನ್ನು ನೆನೆಯುತ್ತಲೆ  ಸಸ್ಯಸಂಕುಲಕ್ಕೆಲ್ಲ ಹೂವುಗಳನ್ನು ಪ್ರಸಾದಿಸುತ್ತಾಳೆ. (ಶಿವ ಅಂದರೆ ಕಲ್ಯಾಣಕಾರಿ. ಶಕ್ತಿಯು ಸೃಷ್ಟಿಯನ್ನು ಮಾಡುವಾಗ, ಕಲ್ಯಾಣಕ್ಕಾಗಿಯೇ ಮಾಡುತ್ತಾಳೆ. ಅಲ್ಲದೆ, ಕಾಮನನ್ನು ಸುಟ್ಟವನೇ ಶಿವ. ಇದೀಗ ಮತ್ತೊಮ್ಮೆ ಸೃಷ್ಟಿಯನ್ನು ಪ್ರಾರಂಭಿಸಲು ಶಿವನ ಅನುಗ್ರಹ ಬೇಕೇ ಬೇಕು. )

ಈ ಸೃಷ್ಟಿಕ್ರಮದ ಸ್ವರೂಪವನ್ನು ಬೇಂದ್ರೆಯವರು ‘ಮಾಧವನ ರಾಸಲೀಲೆ’ ಎಂದು ವರ್ಣಿಸುತ್ತಾರೆ, ಅರ್ಥಾತ್ ಇದು ದೇವರ ಆನಂದಲೀಲೆ. ಸಂಹಾರಕಾರಿ ಶಿವನ ನಂತರ ಸೃಷ್ಟಿಪಾಲಕ ಮಾಧವನು ಅರ್ಥಾತ್ ವಿಷ್ಣು ಬರುವುದು ಸಮಂಜಸವೇ ಆಗಿದೆ. ಸೃಷ್ಟಿಯ ಪ್ರಾರಂಭಕ್ಕೆ ಯುಗಾದಿ ಅಂದರೆ ವಸಂತ ಋತುವೇ ಸುಯೋಗ್ಯವಾದ ಕಾಲವಾಗಿದೆ. ಪ್ರಕೃತಿಯಂತೂ ಪುಷ್ಪವತಿಯಾಗಿ ನಿಂತಿದ್ದಾಳೆ. ಅವಳು ಫಲವತಿಯಾಗಲು ಸುಂಟರಗಾಳಿ ಹಾಗು ಅಡ್ಡಮಳೆಗಳ ಅವಶ್ಯಕತೆ ಇದೆ.  ಪುಷ್ಪಪರಾಗವನ್ನು ಹರಡುವ ಮೂಲಕ ಹಾಗು ಜೀವಜಲವನ್ನು ಅನುಗ್ರಹಿಸುವ ಮೂಲಕ ಅವು ಸೃಷ್ಟಿಯ ಬಾಗಿಲನ್ನು ತೆರೆದು ನಿಂತಿವೆ.
[ಟಿಪ್ಪಣಿ: ‘ಸುಂಟ್ರಗಾಳಿ, ಅಡ್ಡಮಳೆ ತೆರೆದಿತಕ್ಕಾ ಕದವು’ ಎನ್ನುವ ಒಂದು ಸಾಮಾನ್ಯ ಆಡುಮಾತಿನಲ್ಲಿ ಬೇಂದ್ರೆಯವರು ಎಷ್ಟೆಲ್ಲ ಅರ್ಥವನ್ನು, ಚೆಲುವನ್ನು ತುಂಬಿದ್ದಾರೆ!]

ಈ ಸೃಷ್ಟಿಕ್ರಮದ ಮುಂದಿನ ಭಾಗವೆಂದರೆ, ಹೊಸ ತಳಿರುಗಳು ಮೂಡುವುದು, ಅವು ಬಲಿತು ಹಳೆಯದಾಗಿ ಉದುರಿ ಹೋಗುವುದು. ಹಣ್ಣು ಮಾಗಿ, ಬಿದ್ದು, ಬಿರಿದು ಎಲ್ಲೆಡೆ ಬೀಜಗಳನ್ನು ಹರಡುವುದು, ಆ ಬೀಜಗಳು ನವೀನ ಸೃಷ್ಟಿಗೆ ಕಾರಣವಾಗುವುದು. ಪ್ರಕೃತಿಯು ಅದ್ಭುತವಾಗಿದೆ!

ಆದಿ ಇಲ್ಲ ; ಅಂತ್ಯ ಇಲ್ಲ
ಮಧ್ಯೆ ಯಾವ ಹಾದಿ ?
ಯುಗ ಯುಗಗಳ ವಿರಹದೊಳಿದೆ
ಪ್ರೀತಿಯಾ ಬುನಾದಿ.
ನನ್ನುಸಿರಿಗೆ ನಿನ್ನುಸಿರನು
ಸಂಗಡಿಸು ಸಮಾಧಿ.

ಸೃಷ್ಟಿಕ್ರಮದ ಸಾಮರಸ್ಯವನ್ನು, ಆ ಅದ್ಭುತವನ್ನು ಕಂಡು ಬೆರಗಾದ ಬೇಂದ್ರೆಯವರು ತಮ್ಮ ಗೆಳೆಯನಿಗೆ ಮತ್ತೆ ಹೇಳುತ್ತಾರೆ:
ಈ ಜೀವನಚಕ್ರಕ್ಕೆ ಆದಿ, ಅಂತ್ಯಗಳಿಲ್ಲ. ಇದರ ನಡುವೆ ನೀನು ಯಾವ ಹಾದಿಯನ್ನು ಹುಡುಕುತ್ತಿರುವೆ? ಯಾವ ನಿರರ್ಥಕ ಅನ್ವೇಷಣೆಯನ್ನು ಮಾಡುತ್ತಿರುವೆ? ಈ ಸೃಷ್ಟಿಗೆ ಇರುವುದು ಒಂದೇ ಅರ್ಥ: ಅದು ಪ್ರೀತಿ.  ದೇವ ಮತ್ತು ಸೃಷ್ಟಿ, ಕವಿ ಮತ್ತು ರಸಿಕ, ಗೆಳೆಯ ಮತ್ತು ಗೆಳೆಯ ಇವರ ವಿರಹ ಹಾಗು ಸಂಗಮಗಳೇ ಈ ಬದುಕಿನ ರಹಸ್ಯವಾಗಿವೆ. ಬಾ ಗೆಳೆಯಾ, ನಮ್ಮಿಬ್ಬರ ಉಸಿರನ್ನೇ ಒಂದುಗೊಳಿಸೋಣ. ಆ ರೀತಿಯಲ್ಲಿ ನಾವಿಬ್ಬರು ಒಂದಾದಾಗಲೇ ಮಿಲನದ ಅತ್ಯುಚ್ಚ ಸ್ಥಿತಿಯಾದ ಸಮಾಧಿಯು ಸಾಧ್ಯವಾಗುತ್ತದೆ.

[ಟಿಪ್ಪಣಿ: ಬೇಂದ್ರೆಯವರು compulsive ಸ್ನೇಹಜೀವಿಗಳು. ಅವರಿಗೆ ಎಪ್ಪತ್ತೆರಡು ವರ್ಷಗಳಾದಾಗ ಪ್ರಕಟವಾದ ಅವರ ಕವನಸಂಕಲನದ ಹೆಸರು: ‘ಬಾ ಹತ್ತರ.’  ಈ ಶೀರ್ಷಿಕೆಯು ‘ರಸಿಕ ಮಿತ್ರಾ, ನನ್ನ (ಕಾವ್ಯದ) ಹತ್ತಿರ ಬಾ’ ಎಂದು ಹೇಳುವುದಲ್ಲದೆ, ‘ಬಾಹತ್ತರ’ ಅಂದರೆ (ಹಿಂದಿಯಲ್ಲಿ) ಎಪ್ಪತ್ತೆರಡು ಎನ್ನುವ ಅರ್ಥವನ್ನೂ ಕೊಡುತ್ತದೆ.]

ಶ್ರಾವಣದಲಿ ಶ್ರವಣಸುಖ
ಮಾಘದಲ್ಲಿ ಅನಘಮುಖ
ಆಶ್ವಿನ ರವಿ ಚೈತ್ರ ಚಂದ್ರ
ಪರಸ್ಪರರು ಅಭಿಮುಖ.
ಮಧು ಮಾಸದ ರಾಧಾ ರತಿ
ವೈಶಾಖಿಯ ಸತ್ಕೃತಿ
ನೈಸರ್ಗಿಕ ವೈಸರ್ಗಿಕ
ಛಂದೋಮಯ ಪ್ರತಿಕೃತಿ.

ಬೇಂದ್ರೆಯವರು ಮತ್ತೊಮ್ಮೆ ಪ್ರಕೃತಿಯ ವಿವಿಧ ಸುಮುಖಗಳನ್ನು ನೆನೆಯುತ್ತಾರೆ, ಸುಖಿಸುತ್ತಾರೆ. ಈ ಪ್ರಕೃತಿಯೂ ಸಹ ಬೇಂದ್ರೆಯವರಿಗೆ ಗೆಳತಿಯೇ ಹೌದು. ಶ್ರಾವಣ ಮಾಸವಂತೂ ಬೇಂದ್ರೆಯವರಿಗೆ ಅತ್ಯಂತ ಪ್ರೀತಿಯ ಮಾಸ. ಆ ಮಾಸದ ಸುಖವನ್ನು ಬೇಂದ್ರೆಯವರು ಶ್ರವಣಸುಖ ಎಂದು ಕರೆಯುತ್ತಾರೆ. ಅಲ್ಲದೆ, ‘ಚಾತುರ್ಮಾಸ’ವು ಪ್ರಾರಂಭವಾಗುವುದೂ ಈ ಮಾಸದಿಂದಲೇ. ಆದುದರಿಂದ ಈ ಮಾಸದಲ್ಲಿ ಧಾರ್ಮಿಕ ವಾಚನಗಳ ಶ್ರವಣಸುಖವೂ ದೊರೆಯುತ್ತದೆ. ಮಾಘಮಾಸದಲ್ಲಿ ಮಾಘಸ್ನಾನ ಮಾಡಿ ದೇವತಾರ್ಚನೆಯಲ್ಲಿ ತೊಡಗಿ ಪುಣ್ಯಸಂಪಾದನೆ ಮಾಡಬಹುದು. ಆಶ್ವಿನ ಮಾಸದ ರವಿಯು ಸೌಮ್ಯನಾಗಿ ಸುಖ ನೀಡಿದರೆ, ಚೈತ್ರಮಾಸದ ಚಂದ್ರನು ತನ್ನ ಚೆಲುವಿನಿಂದ, ವಿಸ್ತಾರದಿಂದ, ತಂಪಿನಿಂದ ಸುಖ ನೀಡುತ್ತಾನೆ. ಇವರಿಬ್ಬರು ಪ್ರತಿ ಮಾಸದ ಪೂರ್ಣಿಮೆಯಲ್ಲಿ ಅಭಿಮುಖರಾಗಿಯೇ ಇರುತ್ತಾರೆ. ಇನ್ನು ಉಳಿದ ಮಾಸಗಳು ಯಾವವು? ಮಧುಮಾಸದಲ್ಲಿ (ಚೈತ್ರಮಾಸದಲ್ಲಿ) ಈ ಮೊದಲೇ ವಿವರಿಸಿದಂತೆ ರಾಧಾರತಿ ಎಂದರೆ ಪ್ರಕೃತಿದೇವಿಯ ಸೃಷ್ಟಿಕಾರ್ಯ ನಡೆದಿರುತ್ತದೆ. ವೈಶಾಖ ಮಾಸವು ಬೇಸಗೆಯ ಮಾಸವಾದರೂ ಸಹ ಅದು ಸೃಷ್ಟಿಪೂರ್ವದ ಪ್ರಕ್ರಿಯೆಯನ್ನು ನೆರವೇರಿಸುತ್ತದೆ. ನಿಸರ್ಗದ ಈ ಭಿನ್ನ ಮುಖಗಳನ್ನು ಕಂಡ ಬೇಂದ್ರೆಯವರು ಇದು ಪ್ರಕೃತಿಯ ‘ಛಂದೋಮಯ ಪ್ರತಿಕೃತಿ’ ಎಂದು ಕರೆಯುತ್ತಾರೆ. ಛಂದೋಮಯ ಎಂದರೆ ಚಂದವಾದ ಎನ್ನುವ ಅರ್ಥವಲ್ಲದೆ ಲಯಬದ್ಧವಾದ ಎನ್ನುವ ಅರ್ಥವನ್ನೂ ಹೇಳುತ್ತದೆ.  ನಿಸರ್ಗ ಎಂದರೆ ಸೃಷ್ಟಿ ; ವಿಸರ್ಗ ಎಂದರೆ ವಿಲಯ ; ಛಂದಸ್ ಎಂದರೆ ಕವನದ metre.  ಪ್ರಕೃತಿಯ ಕಾವ್ಯಕ್ಕೆ ಸೃಷ್ಟಿ ಹಾಗು ವಿಲಯ ಇವು ಎರಡೂ ಛಂದಸ್ ಅನ್ನು ಅಂದರೆ metre ಅನ್ನು ರಚಿಸುತ್ತವೆ.

ಕವಿಯಾಗಿಯೆ ಹೇಳುತಿರೋ
ಕಿವಿಯಾಗಿಯೆ ಕೇಳುತಿರೋ
ಭವ ಭವ ಭವ ಮೋಚನವಿದೆ
ಸವಿ ಸವಿ ಸವಿದೇಳುತಿರೋ
ಸಾಯಕನೋ ಈ ಪ್ರಪಂಚಿ
ಗಾಯಕನಿಗೊ ಇದೆ ವಿಪಂಚಿ
ಮಾಯದ ಕಾಯ್ ಮಾಗುವುದೋ
ಅರಸು ಅಂಚೆ ಹಂಚಿ ಹಂಚಿ
ಸರಸಿಯೊಳಗೆ – ಹೊಂಚಿ.

ಈ ಸೃಷ್ಟಿರಹಸ್ಯವನ್ನು ಅರಿತುಕೊಳ್ಳುವವನೇ ನಿಜವಾದ ಕವಿ. ಆ ಕಾವ್ಯರಹಸ್ಯವನ್ನು ಮೈಯೆಲ್ಲ ಕಿವಿಯಾಗಿ ಕೇಳಿ, ಅರಿತುಕೊಂಡು, ಸುಖಿಸುವವನೇ ನಿಜವಾದ ರಸಿಕ. ಈ ಪ್ರಕ್ರಿಯೆ ಜರುಗಿದಾಗಲೇ, ಕವಿ ಹಾಗು ರಸಿಕ ಇವರೀರ್ವರು ಲೌಕಿಕವನ್ನು ದಾಟುವರು ಅಂದರೆ ಅವರಿಗೆ ಈ ಭವದಿಂದ ವಿಮೋಚನೆಯಾಗಿ ಅವರು ದೈವೀ ಆನಂದದಲ್ಲಿ ಮುಳುಗುವರು. ‘ಸವಿ ಸವಿ ಸವಿದೇಳುತಿರೋ’ ಎನ್ನುವ ಪದಪುಂಜಕ್ಕೆ ‘ಆನಂದಿಸು’ ಎನ್ನುವ ಅರ್ಥವಿರುವಂತೆಯೇ ‘ನಿನ್ನ ಕರ್ಮಗಳನ್ನು ಸವೆಯಿಸು (ಹಾಗು ಆ ಮೂಲಕ ಭವಮುಕ್ತನಾಗು) ಎನ್ನುವ ಅರ್ಥವೂ ಇದೆ.

ಸಾಯಕ ಅಂದರೆ ಬಾಣ. ಈ ಸಂದರ್ಭದಲ್ಲಿ ಅದು ಕಾಮನ ಬಾಣ. ಈ ಕಾಮನ ಬಾಣಕ್ಕೆ ತುತ್ತಾಗುವವನು ‘ಪ್ರಪಂಚಿ’ ಅಂದರೆ ‘ಭವಿ’. ಈ ಪ್ರಪಂಚದಲ್ಲಿ ದೇವರಹಸ್ಯವನ್ನು ಅನುಭವಿಸಿ, ಸುಖಪಟ್ಟು ಹಾಡುವವನೇ ಗಾಯಕ. ಈ ಗಾಯಕನ ಕೈಗೆ ಸಿಕ್ಕಿರುವುದು ವಿಪಂಚಿ ಅಂದರೆ ಬ್ರಹ್ಮವೀಣೆ ಅರ್ಥಾತ್ ದೇವವೀಣೆ.

ಬೇಂದ್ರೆಯವರಿಗೆ ಪ್ರಶ್ನೆಯೊಂದು ಇಲ್ಲಿ ಎದುರಾಗುತ್ತದೆ. ‘ಈ ಮಾಯದ ಕಾಯ್ ಮಾಗುವುದೋ?’ ಈ ಪ್ರಪಂಚವೇ ಮಾಯಾಸೃಷ್ಟಿ. ಅದರಲ್ಲಿರುವ ಈ ಕಾಯಿಯು ಮಾಗುವುದೋ ಅಂದರೆ ಹಣ್ಣಾಗುವುದೋ? ಕಾಯ್ ಅನ್ನುವ ಪದವನ್ನು ‘ಕಾಯ’ ಅಂದರೆ ‘ದೇಹ’ ಎನ್ನುವ ಅರ್ಥದಲ್ಲಿಯೂ ನೋಡಬಹುದು. ಆ ಸಂದರ್ಭದಲ್ಲಿ ಈ ಮಾಯಾದೇಹವನ್ನು ಧರಿಸಿದ ಜೀವಿಯು ಮಾಗುತ್ತಾನೆಯೆ ಅಂದರೆ ತನ್ನ ಕರ್ಮವನ್ನೆಲ್ಲ ಸವೆಯಿಸಿ, ಸಫಲನಾಗಿ ಮುಕ್ತನಾಗುತ್ತಾನೆಯೆ ಎನ್ನುವ ಅರ್ಥವೂ ಇಲ್ಲಿದೆ.

‘ಅರಸು ಅಂಚೆ’ ಅಂದರೆ ರಾಜಹಂಸ ಅರ್ಥಾತ್ ಆತ್ಮ. ಈ ಆತ್ಮವು ಪರಮಾನಂದದ ಸರಸ್ಸಿನಲ್ಲಿ ತೇಲುತ್ತಿರುತ್ತದೆ. ಅದು ಭವಮುಕ್ತರಿಗೆ ಹೊಂಚು ಹಾಕಿಕೊಂಡು ಕಾಯುತ್ತಿರುತ್ತದೆ ಹಾಗು ಅವರಿಗೆ ಆ ಆತ್ಮಾನಂದವನ್ನು ಹಂಚುತ್ತಿರುತ್ತದೆ.

ಹಾದಿಯೆಂದು ಹಾಯಬೇಡ ಯಾವುದೋ ಯುಗಾದಿ
ಯುಗಲ ಯುಗಲ ವಿರಹದೊಳಿದೆ ಪ್ರೀತಿಯೂ ಬುನಾದಿ
ಸತ್ತಿನ ಗತ್ತಿನ ಗಮಕವು ಭಾವರಸ ಸನಾದಿ
ಛಾಂದಸಿಕತೆ ಮುಕ್ತಮಾರ್ಗ ? ಶ್ರುತಿ-ಕೃತಿ ಸಂವಾದಿ.

ಬೇಂದ್ರೆಯವರು ಸಹೃದಯನೊಡನೆ ಮತ್ತೆ ಸಂವಾದಿಸುತ್ತಾರೆ.  ಒಂದೇ ಯುಗಾದಿ ಈ ಸೃಷ್ಟಿಯಲ್ಲಿ ಇಲ್ಲ. ಯಾವುದೋ ಒಂದು ಕ್ಷಣದಂದು ನೀನು, ‘ಇದು ಯುಗಾದಿ, ನನಗೆ ನನ್ನ ಹಾದಿ ಸಿಕ್ಕಿದೆ’ ಎನ್ನುತ್ತ ಹಾಯಲು ಬರಬೇಡ. ಈ ಎಲ್ಲ ಯುಗಾದಿಗಳ  ಸೃಷ್ಟಿಚಕ್ರದ ಹಿಂದೆ ಪ್ರೀತಿಯ ಬುನಾದಿ ಇದೆ. ಸತ್ ಎಂದರೆ ಒಳ್ಳೆಯದು. ಆ ಸತ್‍ ಎನ್ನುವುದು ಗತ್ತಿನ ಅಂದರೆ ಕುಣಿತದ ನಡಿಗೆಯನ್ನು ಹೊಂದಿದಾಗ ಹುಟ್ಟುವ ಗಮಕದಲ್ಲಿ ಭಾವರಸ ತುಂಬಿರುತ್ತದೆ. ಸತ್ತಾ ಎನ್ನುವುದಕ್ಕೆ ಪ್ರೀತಿಯ ಅಧಿಕಾರ ಎನ್ನುವ ಅರ್ಥವೂ ಇದೆ.  

ಛಾಂದಸಿಕತೆ ಎಂದರೆ ವೇದಗಳು ತೋರಿಸುವ ಜ್ಞಾನಮಾರ್ಗ. ಅದುವೇ ಮುಕ್ತಮಾರ್ಗ ಅರ್ಥಾತ್ ಮುಕ್ತಿಯ ಮಾರ್ಗ. ಅದನ್ನು ಸಾಧಿಸಬೇಕಾದರೆ ಶ್ರುತಿ (=ವೇದಗಳು) ಹೇಳುವ ಜ್ಞಾನವು ನಮ್ಮ ಕೃತಿಯಲ್ಲಿ ಅಂದರೆ ನಡತೆಯಲ್ಲಿ ಏಕರೂಪವಾಗಬೇಕು.
...............................................................................................

ಬೇಂದ್ರೆಯವರ ಮೊದಲ ಕವನವು ಪ್ರಕೃತಿಯನ್ನು ಅರಿತು ಸಂಭ್ರಮಿಸುವ ವರಕವಿಯ ಸಾಧನೆಯಾಗಿದೆ. ಎರಡನೆಯ ಕವನವು ಬದುಕಿನ ರಹಸ್ಯವನ್ನು ಅರಿತ ಸಾಧಕನ ಕಾಣ್ಕೆಯಾಗಿದೆ. ಮೊದಲನೆಯ ಕವನದಲ್ಲಿ ‘ಸ್ವಗತ’ವಿದೆ. ಎರಡನೆಯ ಕವನದಲ್ಲಿ ಸಹೃದಯನಿಗೆ ಆಹ್ವಾನವಿದೆ. ಮೊದಲನೆಯ ಕವನದಲ್ಲಿ ಪ್ರಕೃತಿಯು ಹೊಸಹೊಸದಾಗುವ ಸಂಭ್ರಮವು ಮನುಷ್ಯರಿಗೆ ಏಕಿಲ್ಲ ಎನ್ನುವ ಹಳಹಳಿ ಇದೆ. ಎರಡನೆಯ ಕವನದಲ್ಲಿ ಸೃಷ್ಟಿಸುಖವನ್ನು ಆನಂದಿಸುವ ಮನೋಧರ್ಮವಿದೆ. ಮೊದಲನೆಯ ಕವನದಲ್ಲಿ ಲೌಕಿಕ ಆನಂದವಿದೆ. ಎರಡನೆಯ ಕವನದಲ್ಲಿ ಅಲೌಕಿಕ ಆನಂದವಿದೆ. ಮೊದಲನೆಯ ಕವನದಲ್ಲಿ ಕಾವ್ಯರಸವಿದೆ. ಎರಡನೆಯ ಕವನದಲ್ಲಿ ಮಾಂತ್ರಿಕತೆ ಇದೆ. ಈ ಎರಡೂ ಕವನಗಳು ಬೇಂದ್ರೆಯವರ ವ್ಯಕ್ತಿತ್ವದಲ್ಲಿ ಆದಂತಹ ಉನ್ನತಿಗೆ ಹಿಡಿದ ಕನ್ನಡಿಯಾಗಿವೆ.

20 comments:

ಜಲನಯನ said...

ಸುಮಾಥಣ್ಣ...ನಿಮ್ಮ "ಇಟ್ಟಿಗೆ" ಕುರಿತ ಮಾಃಇತಿಯನ್ನು ಪದಾರ್ಥ ಚಿಂತಾಮಣಿಯಲ್ಲಿ ಹಂಚಿಕೊಂಡಿದ್ದೇನೆ.
ಯುಗಾದಿಯ ವಿವಿಧ ಆಯಾಮಗಳನ್ನು ತೆರೆದಿಡುವ ಬೇಂದ್ರೆ ಅಜ್ಜನ ಕವನಗಳನ್ನು ವಿವರಿಸಿ ನಮ್ಮ ಮುಂದೆ ತಂದಿಟ್ಟ ಪರಿ ಸೊಗಸಾಗಿದೆ.

Badarinath Palavalli said...

'ನಿನ್ನ ಪಾಡು ನಿನ್ನ ಜಾಡು
ವಿರಸ ನಿನಗನಾದಿ'

ಎಂತಹ ಮಾರ್ಮಿಕ ಮಾತನು ಬರೆದಿಟ್ಟಿದ್ದಾರೆ ಬೇಂದ್ರೇ ಅಜ್ಜ.

ಎರಡು ಕವನಗಳು ಅದರದದೇ ಮಾಟದಿಂದ ನಮ್ಮ ಮನಸ್ಸಲ್ಲಿ ಸದಾ ನಿಲ್ಲುತ್ತದೆ.

ಕಂದಮ್ಮನಿಗೆ ಒಳಲೆಯಲಿ ಹಾಲುಣಿಸುವ ಶೈಲಿ ನಿಮ್ಮದು.
ಹಂತ ಹಂತವಾಗಿ ಕವಿತೆಯನ್ನು ನಮಗಾಗಿ ತೆರೆದಿಟ್ಟ ತಮಗೆ ಶರಣು.

(ಈ ವಿಪಂಚಿ ಪದವನ್ನು ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿಯವರು ತೆಲುಗಿನ ಮೇರು ಚಿತ್ರ ಸಿರಿವೆನ್ನೆಲದಲ್ಲಿ ತುಂಬ ಮುದ್ದಾಗಿ ಬಳಸಿಕೊಂಡಿದ್ದಾರೆ. )

sunaath said...

ಜಲನಯನ,
ನಿಮ್ಮ ಸ್ಪಂದನೆಗೆ ಧನ್ಯವಾದಗಳು. ಸ್ವತಃ ನನಗೆ FBಗೆ ಬರಲು ಸಾಧ್ಯವಾಗದೇ ಇದ್ದರೂ ಸಹ, ನೀವು ಇಟ್ಟಿಗೆಯ ಮೂಲವನ್ನು ‘ಪದಾರ್ಥಚಿಂತಾಮಣಿ’ಯಲ್ಲಿ ಹಂಚಿಕೊಂಡದ್ದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು.

sunaath said...

ಬದರಿನಾಥರೆ,
ಯುಗಾದಿಯ ಬಗೆಗಿರುವ ಈ ಎರಡು ಕವನಗಳು ಬೇಂದ್ರೆಯವರ ವ್ಯಕ್ತಿತ್ವದಲ್ಲಿ ಆದ ಮಾರ್ಪಾಟನ್ನು ಎತ್ತಿ ತೋರಿಸುತ್ತವೆ. ಪ್ರತಿಕ್ರಿಯೆಗಾಗಿ ಧನ್ಯವಾದಗಳು.

Pradeep Rao said...

ಸುನಾಥ್ ಸರ್... ಬೇಂದ್ರೆಯವರ ಕಾವ್ಯದ ವಿಮರ್ಶೆ ಓದಿ ಧನ್ಯನಾದೆ. ನಿಜವಾಗಿಯೂ ಇಂಥ ಕೂಲಂಕುಶ ವಿಮರ್ಶೆಗಳು ಸುಲಭವಾಗಿ ದೊರೆಯದೆ ಹೋಗಿ ನನ್ನ ಪೀಳಿಗೆಯವರು ಇದು ಅರ್ಥವಾಗುವುದು ಕಷ್ಟ ಎಂದು ಬಗೆದು ಹಿರಿಯ ಮಹಾನ್ ಸಾಹಿತಿಗಳ ಕೃತಿಗಳಿಂದ ವಿಮುಖರಾಗುತ್ತಿದ್ದಾರೆ. ಬರೀ ಕವನವನ್ನು ಓದಿದಾಗ ನನಗೂ ಏನೂ ತಿಳಿಯಲಿಲ್ಲ ಆದರೆ ನಿಮ್ಮ ವಿವರಣೆ ಹಸಿದವನಿಗೂ ಆಹಾರಕ್ಕೂ ನಡುವೆ ಸೇತುವೆ ಕಟ್ಟಿದ್ದಂತೆ ಓದುಗರನ್ನು ಕೊಂಡೊಯ್ದು ಅದ್ಭುತ ಕಾವ್ಯದ ಸಂದರ್ಯ ಸವಿಯುವಂತೆ ಮಾಡಿತು. ಬೇಂದ್ರೆ ಕಾವ್ಯವೂ ನಿಮ್ಮ ವಿವರಣೆಯೂ ಮನಸ್ಸು ಗೆದ್ದಿತು! ಧನ್ಯವಾದಗಳು.

sunaath said...

ಪ್ರದೀಪರೆ,
ಬೇಂದ್ರೆಯವರ ಕೊನೆ ಕೊನೆಯ ಕವನಗಳು ತುಂಬ ಸಾಂಕೇತಿಕ ಸ್ವರೂಪವನ್ನು ತಳೆದವು. ಆ ಸಂಕೇತಗಳನ್ನು ಅರ್ಥೈಸಿಕೊಂಡರೆ ಕವನ ಅರ್ಥವಾಗುವುದು ಸುಲಭ!

ಮಂಜುಳಾದೇವಿ said...

ಅರ್ಥವತ್ತಾದ ವಿವರಣೆ ಸಾರ್.....ಬೇಂದ್ರೆಯವರ ಎರಡು ಕವನಗಳನ್ನು ವಿವರಿಸಿ ,ಕವಿಯ ಬದಲಾದ ಮನಸ್ಥಿತಿಯನ್ನು ತುಂಬಾ ಚೆನ್ನಾಗಿ ವಿವರಿಸಿರುವಿರಿ......ವಯೋಮಾನಕ್ಕೆ ತಕ್ಕಂತೆ ಮನಸ್ಸು ಮಾಗಿದಾಗಲೇ ಬದುಕಿಗೊಂದು ಅರ್ಥ...!

bilimugilu said...

Sunaath Sir,
Bendreyavara saalugaLu, adakke nimma vivaraNe yugaadiya hosa hosa aayaamagaLanthe kandavu. Bahala ishtavaaytu stage by stage namage prasthuta padisida reeti. Dhanyavaada nimage.

sunaath said...

ಮಂಜುಳಾದೇವಿಯವರೆ,
ನೀವು ಹೇಳುವುದು ನಿಜ. ವಯಸ್ಸಿನ ಜೊತೆಗೆ ಮನಸ್ಸು ಮಾಗಿದಾಗಲೇ, ಕಾವ್ಯವೂ ಸಹ ಮಾಗುವುದು!

sunaath said...

ಬಿಳಿಮುಗಿಲು,
ಬೇಂದ್ರೆಯವರು ಪ್ರೌಢರಿದ್ದಾಗ ಬರೆದ ‘ಯುಗಾದಿ’ಗೂ, ವೃದ್ಧ ಸಾಧಕರಾದಾಗ ಬರೆದ ‘ಇದು ಯುಗಾದಿ’ಗೂ ತುಂಬ ವ್ಯತ್ಯಾಸವಿದೆ, ಅಲ್ಲವೆ?

Swarna said...

ಅನುಭಾವಿಯಾಗಿದ್ದ ಅಜ್ಜನನ್ನು ಮತ್ತೊಬ್ಬ ಅನುಭಾವಿ ಅರ್ಥೈಸಿದರೆನೆ ಸೊಗಸು.
“ಸಾಯಕನೋ ಈ ಪ್ರಪಂಚಿ
ಗಾಯಕನಿಗೊ ಇದೆ ವಿಪಂಚಿ”

ಎಷ್ಟೆಲ್ಲಾ ಹೇಳುವ ಸಾಲುಗಳು. ಪ್ರಪಂಚ ಕಾರ್ಯ ನಡೆಯಲು ಪ್ರಪಂಚಿಯಾದವನು ಕಾಮನ ‘ಸಾಯಕ ‘. ಸಾಯುಜ್ಯವನ್ನು ಬಯಸುವ ಮುಮುಕ್ಷುವಿಗೆ ಪ್ರಪಂಚವೇ ವಿಪಂಚಿ. ತುಂಬಾ ಚೆನ್ನಾಗಿದೆ ಕಾಕಾ

sunaath said...

ಸ್ವರ್ಣಾ,
ಕವಿಯ ವಯಸ್ಸು ಮುಪ್ಪಾದರೆ ಸಾಲದು, ಮನಸ್ಸೂ ಸಹ ಮುಪ್ಪಾಗಬೇಕು, ಅಲ್ಲವೆ?

Kalavatimadhisudan said...

sunath sir,bendreyavara kaavyave vishesha.nimma vishishtawaada vivaraneyinda mattashtu shrimanta golisiruvudakkaagi aathmiya dhanyavaadagalu.

sunaath said...

ಕಲಾವತಿಯವರೆ,
ನಿಮಗೆ ಹಾರ್ದಿಕ ಧನ್ಯವಾದಗಳು.

ಸತೀಶ್ ನಾಯ್ಕ್ said...

ಸುನಾಥ್ ಸಾರ್..

ಎರಡೂ ಕವನಗಳನ್ನ ಒಬ್ಬರೇ ಒಂದೇ ವಿಚಾರದ ಕುರಿತಾಗಿ ಬರೆದದ್ದಾದರೂ ಎರಡರ ನಡುವೆ ಎಷ್ಟು ವೆತ್ಯಾಸ..?? ಬೇಂದ್ರೆಯವರ ಕಾವ್ಯದ ಝಲಕುಗಲನ್ನು ದಕ್ಕಿಸಿಕೊಳ್ಳಲಾಗದೆ ಒದ್ದಾಡುತ್ತಲಿರೋ ನಮ್ಮಂಥ ಎಳೆ ನಿಂಬೆಕಾಯಿ ಗಳಿಗೆ ನಿಜಕ್ಕೂ ನಿಮ್ಮ ಬರಹಗಳು ಮಾರ್ಗದರ್ಶಿ. ಎರಡೂ ಕವನಗಳ ಬಹಳ ಸುಂದರ ವಿಸ್ತೃತ ರೂಪ ನಿಮ್ಮ ಈ ಬರಹದಲ್ಲಿದೆ. ಧನ್ಯವಾದಗಳು. :)

sunaath said...

ಸತೀಶರೆ,
ವಯಸ್ಸು ಆದಂತೆ ವ್ಯಕ್ತಿಯೂ ಬದಲಾಗಲೇ ಬೇಕು. ಇದನ್ನು ಬೇಂದ್ರೆಯವರಲ್ಲಿ, ಶ್ರೀರಂಗರಲ್ಲಿ ನಿಚ್ಚಳವಾಗಿ ಕಾಣಬಹುದು.

Unknown said...

ಬೇಂದ್ರೆ, ಹಾಗೂ ನಮ್ಮೆಲ್ಲರ ಸೌಭಾಗ್ಯವೆಂದರೆ ಅವರು ಪಶ್ಚಿಮದಿಂದ ಎಷ್ಟೇ ಪ್ರಭಾವಿತರಾದರೂ ಮಹರ್ಷಿ ಅರವಿಂದರ ತತ್ತ್ವಗಳ ಸಾರ ಅವರ ಮೇಲೆ ಬೀರಿದ ಪ್ರಭಾವ ಅಪಾರ.
ಅವರ ಇ ಎರಡು ಕವನಗಳ ಬೆಳವಣಿಗೆ ಸಾಕು ಅವರ ಮನೋಧರ್ಮವನ್ನು ಎತ್ತಿ ತೋರಿಸುವದಕ್ಕೆ. "ಯುಗ ಯುಗಾದಿ ಕಳೆದರೂ" ವಿನ ಗೇಯತೆ ಇದಕ್ಕಿಲ್ಲವೆಂಬುದು ಕೂಡಾ (ನನ್ನ ಅಭಿಪ್ರಾಯ ಮಾತ್ರ) ಸಾಧಕನ ಹಿರಿಮೆಯಾಗಿದೆ.
ಈ ಸೊಗಸಾದ ಲೇಖನಕ್ಕೆ ಧನ್ಯವಾದಗಳು ಸುನಾಥ ಕಾಕಾ.
-ಅನಿಲ

sunaath said...

ಅನಿಲರೆ, ಬೇಂದ್ರೆ ಕನ್ನಡ ಮಣ್ಣಿನಿಂದಲೇ ಮೇಲೆದ್ದ ಹೂವು. ಇದರ ಸೊಗಸು, ಸುಗಂಧ ಎಲ್ಲವೂ ಕನ್ನಡಮಯ. ಬೇಂದ್ರೆಯವರ ‘ಅರಳು ಮರಳು’ ನಂತರದ ಬಹುಪಾಲು ಕವನಗಳು ಗೇಯತೆಯನ್ನು ಕಳೆದುಕೊಂಡವು ಎನ್ನುವುದು ಸತ್ಯ. ಇಲ್ಲಿ ಕವಿ ಹಿಂದೆ ಸರಿದು ಸಾಧಕ ಮುಂದೆ ಬಂದ ಹಾಗೆ ಕಾಣುತ್ತದೆ.

prabhamani nagaraja said...

ಸುನಾಥ್ ಸರ್, ಬೇ೦ದ್ರೆಯವರ ಕವನಗಳ ಅ೦ತಃ ಸತ್ವವನ್ನು ಬಹಳ ಚೆನ್ನಾಗಿ ತೆರೆದಿಡುತ್ತಿದ್ದೀರಿ. ನಿಮ್ಮಿ೦ದ ಕಲಿತದ್ದು ಬಹಳ ಹಾಗೂ ಕಲಿಯಬೇಕಾದದ್ದೂ ಬಹಳಷ್ಟಿದೆ. ಧನ್ಯವಾದಗಳು.

sunaath said...

ಪ್ರಭಾಮಣಿಯವರೆ,
ಧನ್ಯವಾದಗಳು.