ನಮ್ಮ ಹದಿನೆಂಟು ಪುರಾಣಗಳು, ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳು ಭಾರತದ ಇತಿಹಾಸವನ್ನು ವಿವರಿಸುವದಲ್ಲದೆ, ಆ ಕಾಲಘಟ್ಟದ ಸಾಮಾಜಿಕ ರೂಢಿಗಳನ್ನು ಹಾಗು ಪರಿಸ್ಥಿತಿಯನ್ನು ತೆರೆದು ತೋರಿಸುತ್ತವೆ. ಸಿಂಧು ಕೊಳ್ಳದ ನಾಗರಿಕತೆ ಹಾಗು ಆರ್ಯಾವರ್ತದ ನಾಗರಿಕತೆಯನ್ನು ಅರಿಯಲು ಇವು ಅನೇಕ ಸುಳಿವುಗಳನ್ನು ನೀಡುತ್ತವೆ. ಕೆಲವು ಉದಾಹರಣೆಗಳನ್ನು ಪರಿಶೀಲಿಸೋಣ:
(೧)
ಹರಪ್ಪಾ, ಮೊಹೆಂಜೊದಾಡೊಗಳಲ್ಲಿ ದೊರೆತಂತಹ ಮುದ್ರಿಕೆಗಳಲ್ಲಿ ನಮ್ಮ ಯೋಗೀಶ್ವರ ಶಿವನನ್ನು ಹೋಲುವ ಮುದ್ರಿಕೆ ಹಾಗು ವೃಷಭಮುದ್ರಿಕೆ
ಲಭ್ಯವಾಗಿವೆ. ಕೈಲಾಸವಾಸಿ ಶಿವನೂ ಸಹ ವೃಷಭವಾಹನನೇ ಆದುದರಿಂದ ಈತನು ಸಿಂಧು ಸಂಸ್ಕೃತಿಯ ಯಜಮಾನ ವ್ಯಕ್ತಿಯೇ
ಆಗಿರಬಹುದು. ಈ ಮುದ್ರಿಕೆಗಳಲ್ಲಿ ಅಥವಾ ಅಲ್ಲಿ ದೊರೆತ ಮಡಕೆಗಳ ಮೇಲಿನ ಕಲಾಕೃತಿ ಮೊದಲಾದವುಗಳಲ್ಲಿ
ಕುದುರೆಯ ಚಿತ್ರ ಕಂಡು ಬಂದಿಲ್ಲ. ಆರ್ಯರು ಅಶ್ವಾರೋಹಿಗಳಾಗಿದ್ದುದು ಹಾಗು ಅಶ್ವಮೇಧ ಯಾಗಗಳನ್ನು ಮಾಡುತ್ತಿದ್ದುದು
ತಿಳಿದ ಸಂಗತಿಯೇ ಆಗಿದೆ. ಆದುದರಿಂದ ಶಿವನು ಆರ್ಯೇತರನಾಗಿರುವ ಸಂಭವವೇ ಅಧಿಕವಾಗಿದೆ. ಶಿವನ ಮಗನ ಹೆಸರು
ಗಣಪತಿ. ಅರ್ಥಾತ್ ಇವನು ಗಣ ಅಂದರೆ ‘ಜನಸಮುದಾಯ’ಗಳ ಧುರೀಣ, ಅಂದರೆ ಸಿಂಧೂ ಸಂಸ್ಕೃತಿಯಲ್ಲಿ ಇರಬಹುದಾದಂತಹ
‘ಸಮುದಾಯ ಆಡಳಿತ ಪದ್ಧತಿಯ’ ಪ್ರಮುಖ.
(೨)
ಅಥರ್ವಣ ಸ್ತೋತ್ರದಲ್ಲಿ ಗಣಪತಿಯನ್ನು ‘ನಮೋ ವ್ರಾತಪತಯೇ’ ಎಂದು ಸಂಬೋಧಿಸಲಾಗಿದೆ. ವ್ರಾತರು ಅಂದರೆ
‘ಅಸಂಪ್ರದಾಯವಾದಿ’ಗಳು, heterodoxರು. ಅಥರ್ವಣವೇದವೂ ಸಹ ವೈದಿಕರು ಒಪ್ಪಿದ ವೇದವಲ್ಲ. ಇನ್ನು ಗಣಪತಿಯ
ಹುಟ್ಟಿನ ಬಗೆಗೆ ಸ್ವಲ್ಪ ವಿಚಾರ ಮಾಡೋಣ. ಗಣಪತಿಯು ಪಾರ್ವತಿಪುತ್ರನು; ಶಿವನ ಜೈವಿಕ ಮಗನಲ್ಲ. ಅದರಂತೆ
ಇವನ ಸೋದರನಾದ ಷಣ್ಮುಖನು ಶಿವಪುತ್ರನು; ಪಾರ್ವತಿಯ ಜೈವಿಕ ಮಗನಲ್ಲ. ಷಣ್ಮುಖನನ್ನು ಕೃತ್ತಿಕಾ ಮೊದಲಾದ
ಆರು ತಾಯಂದಿರು ಪೋಷಿಸಿದ್ದರಿಂದಲೇ ಈತನಿಗೆ ಷಣ್ಮುಖ, ಕಾರ್ತಿಕೇಯ ಮೊದಲಾದ ಹೆಸರುಗಳು ಬಂದಿವೆಯಷ್ಟೇ.
ಈ ಸಂಗತಿಯು ಆ ಕಾಲದ ಕುಟುಂಬವ್ಯವಸ್ಥೆಯ ಮೇಲೆ ಬೆಳಕನ್ನು ಬೀರುವದಲ್ಲವೆ?
(೩)
ಪಾರ್ವತಿಯು ಹಿಮವಂತನ ಮಗಳು. ಪಾರ್ವತಿಯ ಸವತಿಯಾದ ಗಂಗೆಯೂ ಸಹ ಹಿಮವಂತನ ಮಗಳೇ! ಮಹಾಭಾರತಕ್ಕೆ ಕಾರಣನಾದ(!)
ಶಂತನು ಮಹಾರಾಜನನ್ನು ಮದುವೆಯಾದ ಇವಳು ತನ್ನ ಏಳು ಮಕ್ಕಳನ್ನು ಗಂಗೆಯ ಮಡಲಿಗೆ ಅರ್ಪಿಸಿದಳು.
ಎಂಟನೆಯ
ಮಗನಾದ ದೇವವ್ರತ(ಭೀಷ್ಮ)ನನ್ನು ಶಂತನುವಿಗೆ ಒಪ್ಪಿಸಿ ಇವಳು ತನ್ನ ತವರಿಗೆ ಮರಳಿ ಹೋದಳು. ಅರ್ಥಾತ್
ತನ್ನ ಮೊದಲ ಏಳೂ ಮಕ್ಕಳನ್ನು ಇವಳು ತನ್ನ ಕುಲದವರ ಮಡಿಲಿಗೆ ಒಪ್ಪಿಸಿದ್ದು, ಆನಂತರ ತಾನೂ ಸಹ ಅಲ್ಲಿಗೇ
ಮರಳಿದಳು.
ಗಂಗೆ
ಎಂದರೆ ಓರ್ವ ನಿರ್ದಿಷ್ಟ ಸ್ತ್ರೀ ಆಗಿರದೆ, ಗಂಗಾಕುಲಕ್ಕೆ ಸೇರಿದ ಯಾವುದೇ ಹೆಣ್ಣು ಮಗಳು ಆಗಿರಬಹುದು.
(ಕರ್ನಾಟಕದಲ್ಲಿ
ಗಂಗಾಮತಸ್ಥರು, ಹಾಲುಮತಸ್ಥರು ಇರುವುದನ್ನು ಗಮನಿಸಬೇಕು.)
(೪)
ಅಂಬಿಗರ ಹುಡುಗಿಯಾದ ಮತ್ಸ್ಯಗಂಧಿಯನ್ನು ಪರಾಶರ ಮುನಿಯು ನದಿಯ ಮಧ್ಯದಲ್ಲಿಯೇ ದೋಣಿಯಲ್ಲಿ ಕೂಡಿದ್ದು,
ಅವಳಿಗೆ ವ್ಯಾಸ ಮಹರ್ಷಿ ಹುಟ್ಟಿದ್ದು ಇವೂ ಸಹ ಎಲ್ಲರಿಗೂ
ತಿಳಿದದ್ದೇ.
ಯಾವುದೇ
ಪೂರ್ವಾಗ್ರಹವಿಲ್ಲದೇ ಈ ಎಲ್ಲ ಘಟನೆಗಳನ್ನು ಪರಾಮರ್ಶಿಸಿದಾಗ ಒಂದು ವಿಷಯ ಹೊಳೆಯುತ್ತದೆ: ಈ ಕಾಲಘಟ್ಟದಲ್ಲಿ
ಹಿಮಾಲಯದಲ್ಲಿ ಹಾಗು ಗಂಗಾಕೊಳ್ಳದ ಪ್ರದೇಶದಲ್ಲಿ ನೆಲೆಯಾದ ಆರ್ಯೇತರ ಜನಾಂಗವು ‘ಸಮುದಾಯ ಪ್ರಧಾನ’
ಜನಾಂಗವಾಗಿತ್ತು. ಈ ಜನಾಂಗದಲ್ಲಿ ‘ಒಬ್ಬ ಗಂಡ, ಒಬ್ಬ ಹೆಂಡತಿ’ ಎನ್ನುವಂತಹ ದಾಂಪತ್ಯವು ರೂಢಿಯಲ್ಲಿ
ಇರಲಿಲ್ಲ. ಸಮುದಾಯದಾಂಪತ್ಯವೇ ಅವರಲ್ಲಿ ರೂಢವಾಗಿತ್ತು. ಬಹುಶಃ ‘ವಿವಾಹ’ ಎನ್ನುವ ಪರಿಕಲ್ಪನೆಯೇ ಅವರಲ್ಲಿ
ಇರಲಿಲ್ಲ. ಸಮುದಾಯದಲ್ಲಿ ಜನಿಸಿದ ಮಕ್ಕಳಿಗೆ ಗಂಡಸರೆಲ್ಲರೂ ತಂದೆಯ ಸ್ಥಾನದಲ್ಲಿ ಹಾಗು ಸ್ತ್ರೀಯರೆಲ್ಲರೂ
ತಾಯಿಯ ಸ್ಥಾನದಲ್ಲಿ ಇರುತ್ತಿದ್ದರು. ಮಧ್ಯಪ್ರದೇಶದಲ್ಲಿ ಇರುವ ಬಸ್ತರ ಮೂಲನಿವಾಸಿ ಸಮುದಾಯದಲ್ಲಿಯೂ
ಸಹ ‘ಸಮುದಾಯ ದಾಂಪತ್ಯ’ ಪದ್ಧತಿಯು ರೂಢಿಯಲ್ಲಿತ್ತು, ಈಗಲೂ ಇರಬಹುದು.
ಈ
ಕಾಲಘಟ್ಟದ ಆರ್ಯರಲ್ಲಿ ‘ಒಬ್ಬ ಗಂಡ, ಅನೇಕ ಹೆಂಡಿರು’ ಪದ್ಧತಿಯ ವೈವಾಹಿಕ ಜೀವನವು ರೂಢಿಯಲ್ಲಿತ್ತು.
ಆದರ್ಶಪುರುಷನೆನಿಸಿದ ಶ್ರೀರಾಮಚಂದ್ರನೇನೊ ಏಕಪತ್ನೀವ್ರತಸ್ಥನಾಗಿದ್ದ. ಆದರೆ ಅವನ ತಂದೆ ದಶರಥ ಮಹಾರಾಜನಿಗೆ
ಮೂರು ಜನ ಪಟ್ಟದ ರಾಣಿಯರಲ್ಲದೆ ಮೂರುನೂರಾಅರುವತ್ತು ಜನ ದಾಸಿಯರು ಇದ್ದರು. ರಾಮಾಯಣದ ಕಥೆ ಹೀಗಾದರೆ,
ಮಹಾಭಾರತದಲ್ಲಿ ಐದು ಜನ ಗಂಡಂದಿರು, ಒಬ್ಬಳೇ ಹೆಂಡತಿ!
ಇಂತಹ
ವಿರೋಧಾಭಾಸದ ರೂಢಿಗಳಿಂದಲೇ, ಧರ್ಮರಾಜನಿಗೆ ‘ಯಾವುದು ಧರ್ಮ?’ ಎನ್ನುವ ಸಂದೇಹವು ಯಾವಾಗಲೂ ಕಾಡುತ್ತಿತ್ತು.
ಕುರುಕ್ಷೇತ್ರದ ಯುದ್ಧವು ನಡೆದಾಗ, ಭೀಷ್ಮಪಿತಾಮಹನು ಶರಪಂಜರದ ಮೇಲೆ ನರಳುತ್ತ ಮಲಗಿದ ಸಂದರ್ಭದಲ್ಲಿ,
ಅವನನ್ನು ಭೆಟ್ಟಿಯಾಗಲು ಬಂದಂತಹ ಧರ್ಮರಾಜನು ಅವನಿಗೆ ಕೇಳುವ ಪ್ರಶ್ನೆ ಹೀಗಿದೆ?’..”ಕೋ ಧರ್ಮ:?”
(“ಯಾವುದು
ಧರ್ಮ?”)
ಇದಕ್ಕೆ
ಭೀಷ್ಮನ ಉತ್ತರ ಹೀಗಿದೆ: “ಆಚಾರ: ಪ್ರಥಮೋ ಧರ್ಮಃ.” (=ಆಚಾರವೇ ಧರ್ಮ). ಆಚಾರ ಎನ್ನುವ ಪದಕ್ಕೆ ನಾವು
ಸನ್ನಡತೆ ಎಂದು ಹೇಳಬಹುದು. ‘ಸನ್ನಡತೆಯೇ ಧರ್ಮ’ ಎಂದು ಘೋಷಿಸುವ ಭೀಷ್ಮನು ದ್ರೌಪದಿಯ ವಸ್ತ್ರಾಪಹರಣದ
ಸಂದರ್ಭದಲ್ಲಿ ಕಣ್ಣು ತೆರೆದುಕೊಂಡೇ ಕೂತಿದ್ದೇಕೆ ಎನ್ನುವ ಸಂದೇಹ ಉದ್ಭವಿಸಬಹುದು. ಇದಕ್ಕೆ ಉತ್ತರವು
ಸ್ಪಷ್ಟವಿದೆ. ಆ ಕಾಲದಲ್ಲಿ ಜೂಜಾಡುವುದು ಹಾಗು ಹೆಂಡತಿ, ಮಕ್ಕಳನ್ನು ಪಣವಾಗಿಡುವುದು ಇವು ಸಮಾಜದಿಂದ
ಸಮ್ಮತಿಸಲ್ಪಟ್ಟ ರೂಢಿಗಳಾಗಿದ್ದವು. ದಾಸಿಯರನ್ನು ಸಾರ್ವಜನಿಕವಾಗಿ ಬತ್ತಲೆ ಮಾಡುವ ಅಧಿಕಾರವು ಅವಳನ್ನು
ಗೆದ್ದವನಿಗೆ ಅಥವಾ ಕೊಂಡವನಿಗೆ ಇತ್ತು! ಆದುದರಿಂದಲೆ ಜೂಜಾಟದಲ್ಲಿ ಹೆಂಡತಿಯನ್ನು ಪಣಕ್ಕಿಟ್ಟು ಸೋತವನು
‘ಧರ್ಮರಾಜ’ನಾದನು; ತುಂಬಿದ ಸಭೆಯಲ್ಲಿ ಅವಳ ವಸ್ತ್ರಾಪಹರಣವನ್ನು ತಡೆಯದ ಭೀಷ್ಮಪಿತಾಮಹನು ‘ಧರ್ಮಜ್ಞಾನಿ’ಯಾದನು!
(ವೈಯಕ್ತಿಕ ಹಾಗು ಸಾಮಾಜಿಕ ನಡೆವಳಿಕೆಗಳನ್ನು ನಿರ್ದಿಷ್ಟಗೊಳಿಸುವ ‘ಮನುಸ್ಮೃತಿ’ ಬಹುಶಃ ಮಹಾಭಾರತದ
ನಂತರ ರಚಿತವಾಯಿತು.)
‘ಸತ್ಯ
ಹರಿಶ್ಚಂದ್ರ’ ಎಂದು ನಾವು ಕೊಂಡಾಡುವ ಹರಿಶ್ಚಂದ್ರನು ಮಾಡಿದ್ದೇನು? ತನ್ನ ಹೆಂಡತಿ ಹಾಗು ಮಗನನ್ನು
ಸಾಲ ತೀರಿಸುವ ಉದ್ದೇಶದಿಂದ ಮಾರಾಟ ಮಾಡಲಿಲ್ಲವೆ? ಇಂತಹ ಮಹಾರಾಜನನ್ನು ಹೊಗಳುತ್ತಲೇ ನಾವು ಅವನ ಹೆಂಡತಿಯ
ಹಾಗು ಮಗನ ಸ್ವತಂತ್ರತೆಯ ಹಕ್ಕುಗಳನ್ನು ಕಡೆಗಾಣಿಸುತ್ತಿಲ್ಲವೆ? ಒಟ್ಟಿನಲ್ಲಿ ಹೆಣ್ಣು ಮಗಳು ಆ ಕಾಲಘಟ್ಟದಲ್ಲಿ
ಕೇವಲ ಮಾರಾಟದ ಹಾಗು ಮಕ್ಕಳನ್ನು ಹೆರುವ ವಸ್ತುವಾಗಿದ್ದಳು, ಇಲ್ಲವೆ ಭೋಗದಾಸಿಯಾಗಿದ್ದಳು. ಗುರುದಕ್ಷಿಣೆಗಾಗಿ ತನ್ನ ಹೆಂಡತಿಯನ್ನು ಮೂರು ಜನರಿಗೆ ಪ್ರತ್ಯೇಕ
ಸಮಯಗಳಲ್ಲಿ ವರ್ಷಭೋಗ್ಯಕ್ಕಾಗಿ ಒತ್ತೆ ಇಟ್ಟ ಗಾಲವನ ಕಥೆಯನ್ನು ಇಲ್ಲಿಓದಬಹುದು.
ಈ
ಕಾಲಘಟ್ಟದಲ್ಲಿ ‘ವಾನರ ಸಮುದಾಯದಲ್ಲಿ’ ಇದ್ದಂತಹ ರೂಢಿಗಳೇನು? ವಾಲಿ ಹಾಗು ಸುಗ್ರೀವರ ಕಥೆ ರಾಮಾಯಣದಲ್ಲಿ
ಬರುತ್ತಿರುವದಷ್ಟೆ. ತನ್ನ ಅಣ್ಣ ವಾಲಿಯು ಸತ್ತನೆಂದು ಭಾವಿಸಿದ ಸುಗ್ರೀವನು ಅವನ ಹೆಂಡತಿ ತಾರೆಯನ್ನು
ತನ್ನ ಹೆಂಡತಿಯನ್ನಾಗಿ ಮಾಡಿಕೊಂಡನು. ಸುಗ್ರೀವನನ್ನು ಒಡಿಸಿದ ವಾಲಿಯು ಅವನ ಹೆಂಡತಿ ರುಮೆಯನ್ನು ತನ್ನ
ಶಯ್ಯೆಗೆ ಸೆಳೆದ. ಆದರೆ ಈ ಪದ್ಧತಿಗೆ ಆ ಕಾಲದಲ್ಲಿ ಒಂದು ಉತ್ತಮ ಕಾರಣವಿತ್ತು. ಯುದ್ಧಗಳಲ್ಲಿ ಸೋದರನು
ಮೃತನಾದಾಗ ಅವನ ಹೆಂಡತಿ ಅನಾಥಳಾಗಬಾರದು; ಅವಳ ಪತ್ನೀಪಟ್ಟವು ಅಬಾಧಿತವಾಗಿರಬೇಕು ಎನ್ನುವ ಸದುದ್ದೇಶದಿಂದಲೇ
ಈ ಪದ್ಧತಿಯನ್ನು ಬಳಕೆಯಲ್ಲಿ ತರಲಾಗಿತ್ತು. ಈ ಪದ್ಧತಿ ಶೀಖ ಸಮುದಾಯದಲ್ಲಿ ಇನ್ನೂ ರೂಢಿಯಲ್ಲಿದೆ.
ಖ್ಯಾತ ಲೇಖಕ ಖುಶವಂತ ಸಿಂಗರು ಈ ವಿಷಯವನ್ನು ಆಧರಿಸಿ ‘ಏಕ ಚದ್ದರ ಮೈಲೀಸಿ (ಒಂದು ಹೊಲಸು ಹಿಡಿದ ಹೊದಿಕೆ)’
ಎನ್ನುವ ಕಾದಂಬರಿಯನ್ನು ಬರೆದಿದ್ದಾರೆ.
ಪೂರ್ವ
ಹಾಗು ಈಶಾನ್ಯ ಭಾರತಗಳಲ್ಲಿ ಮಾತೃಪ್ರಧಾನ ಪದ್ಧತಿಯು ರೂಢಿಯಲ್ಲಿತ್ತು. ಮಹಾಭಾರತದಲ್ಲಿ ಅರ್ಜುನನು
ಪ್ರಮೀಳಾರಾಜ್ಯವೆಂದು ಕರೆಯಲಾಗುತ್ತಿದ್ದ ಮಣಿಪುರವನ್ನು ಗೆದ್ದು, ಅಲ್ಲಿಯ ರಾಣಿ ಚಿತ್ರಾಂಗದೆಯನ್ನು
ಮದುವೆಯಾಗುವ ಪ್ರಸಂಗವನ್ನು ವರ್ಣಿಸಲಾಗಿದೆ. ಅರ್ಜುನ ಹಾಗು ಚಿತ್ರಾಂಗದೆಯರ ಮಗನೇ ಬಭ್ರುವಾಹನನು.
ವಂಗದೇಶದಲ್ಲಿ ಪೂಜಿತಳಾಗುತ್ತಿರುವ ಕಾಳೀದೇವಿಯ ಚಿತ್ರವನ್ನು ನೀವು ನೋಡಿರಬಹುದು. ಅವಳು ಕೊರಳಲ್ಲಿ
ರುಂಡಮಾಲೆಯನ್ನು ಧರಿಸಿದ್ದಲ್ಲದೆ, ತನ್ನ ಬಲಗಾಲಿನಡಿಯಲ್ಲಿ ಓರ್ವ ಪುರುಷನನ್ನು ತುಳಿದಿದ್ದಾಳೆ. ತಾಂತ್ರಿಕ
ಪೂಜಾವಿಧಾನದಲ್ಲಿ ಮಾನವಕಪಾಲದಲ್ಲಿ ಮದ್ಯ ಅಥವಾ ಮಾಂಸವನ್ನು ಹಿಡಿದಿಟ್ಟು ಬಳಸುವ ಪದ್ಧತಿ ಇದ್ದುದರಿಂದ
ಈ ಚಿತ್ರವು ಇದನ್ನು ಸೂಚಿಸುತ್ತಿರಬಹುದು. ಇನ್ನು ಕೆಲವು ಸಂಶೋಧಕರು ಈ ಚಿತ್ರಕ್ಕೆ ನೀಡುವ ವಿಭಿನ್ನ ವಿವರಣೆ
ಹೀಗಿದೆ:
ಈ
ಭಾಗದ ಒಡತಿಯು ಉತ್ತಮ ಸಂತತಿಯನ್ನು ಪಡೆಯುವ ಉದ್ದೇಶದಿಂದ, ಪ್ರತಿ ವರ್ಷವೂ ಸುಯೋಗ್ಯನಾದ ಓರ್ವ ಹೊಸ
ಪುರುಷನೊಂದಿಗೆ ಸಂಪರ್ಕ ಬೆಳಸುತ್ತಿದ್ದಳು. ಅವಳು ಬಸಿರಾಗಿ ಶಿಶುವನ್ನು ಪಡೆದ ಮೇಲೆ, ಆ ಪುರುಷನ ರುಂಡಛ್ಛೇದವನ್ನು
ಮಾಡಲಾಗುತ್ತಿತ್ತು ಹಾಗು ಆ ಪುರುಷನ ಬುರುಡೆಯನ್ನು ಅವಳು ಕೊರಳಲ್ಲಿ ಧರಿಸುತ್ತಿದ್ದಳು. ಇದು ತುಂಬ ಅನಾಗರಿಕ ಹಾಗು ಭೀಭತ್ಸ ವಿವರಣೆ ಅನಿಸುವದೆ? ಆದರೆ
ಸುಮಾರು ಐದು ಸಾವಿರ ವರ್ಷಗಳ ಮೊದಲು ಇದು ಅಸಂಭಾವ್ಯವಾಗಿರಲಿಕ್ಕಿಲ್ಲ!
ಕರ್ನಾಟಕದ
ಕರಾವಳಿಯಲ್ಲಿರುವ ತುಳುನಾಡಿನಲ್ಲಿಯೂ ಸಹ ಮಾತೃಪ್ರಧಾನ ಕುಟುಂಬವ್ಯವಸ್ಥೆ ಹಾಗು ಅಳಿಯಸಂತಾನ ಪದ್ಧತಿ
ರೂಢಿಯಲ್ಲಿದೆ. ತುಳು ಎನ್ನುವ ಪದವೇ ಯೋನಿಸೂಚಕವಾಗಿದೆ. ತುಳಜಾ(=ತುಳಸಿ) ಎನ್ನುವ ದೇವಿಯ ಹೆಸರೇ ಸೂಚಿಸುವಂತೆ
ಇವಳು ತುಳುನಾಡಿನಲ್ಲಿ ಹುಟ್ಟಿದವಳೇ ಆಗಿರಬಹುದು. ಇವಳು ಶಂಖಚೂಡ ಎನ್ನುವ ರಾಕ್ಷಸನ ಹೆಂಡತಿ. ಶಂಖಚೂಡನನ್ನು
ಹತ್ಯೆಗೈದ ಬಳಿಕ ವಿಷ್ಣುವು ಇವಳನ್ನು ಅನುಗ್ರಹಿಸಿ, ‘ದೇವಿ’ ಪಟ್ಟವನ್ನು ಕೊಟ್ಟದ್ದು, ಒಂದು ‘ರಾಜಿ
ಒಪ್ಪಂದ’ವನ್ನು ಸೂಚಿಸುತ್ತದೆ.
ಮಾತೃಪ್ರಧಾನ
ವ್ಯವಸ್ಥೆಯ ಆರ್ಯೇತರ ಸಮುದಾಯಗಳು ಪಿತೃಪ್ರಧಾನ ವ್ಯವಸ್ಥೆಯ ಆರ್ಯ ಸಮುದಾಯಕ್ಕೆ ಸೋತು ಹೋದ ಕಥೆಗಳನ್ನು
ನಮ್ಮ ಪುರಾಣಗಳು ಹೇಳುತ್ತವೆ. ಆದರೆ ಈ ಪಿತೃಪ್ರಧಾನ ಆರ್ಯರು ಮಾತೃಪ್ರಧಾನ ಸಮುದಾಯ ಒಂದರ ಸಹಾಯವನ್ನು
ಪಡೆದು ಭಾರತದಲ್ಲಿ ನೆಲೆಸಿದ ಅನೇಕ ಮೂಲನಿವಾಸಿಗಳ ಮೇಲೆ ಜಯವನ್ನು ಸಾಧಿಸಿದರು. ಈ ಮೂಲನಿವಾಸಿಗಳನ್ನು
ರಾಕ್ಷಸರೆಂದು ವರ್ಣಿಸಲಾಗಿದೆ. ಉದಾಹರಣೆಗೆ, ಕೋಲ, ಮುಂಡ, ಮೂಗ ಇತ್ಯಾದಿ. ಈ ಎಲ್ಲ ಸಮುದಾಯಗಳನ್ನು
ಮೆಟ್ಟಿಹಾಕಿದ ಆ ರಣಚಂಡಿ ಯಾರು? ಇವಳು ಮಾತೃಪ್ರಧಾನ ಆರ್ಯಕುಲದವಳೆ ಅಥವಾ ಆರ್ಯೇತರಳೆ?
ರಾಕ್ಷಸರಿಂದ
ಪರಾಜಿತರಾದ ದೇವತೆಗಳು, ರಾಕ್ಷಸಸಂಹಾರಕ್ಕಾಗಿ ‘ದೇವಿ’ಯನ್ನು ಪ್ರಾರ್ಥಿಸುತ್ತಾರೆ. ಇಂದ್ರನು ಮಾಡಿದ
ದೇವೀಸ್ತೋತ್ರದಲ್ಲಿ ‘ಕೋಲಾಸುರ ಭಯಂಕರೀ’ ಎಂದು ಸಂಬೋಧಿಸಲಾಗಿದೆ. ಲಲಿತಾಸಹಸ್ರನಾಮದಲ್ಲಿ ಈ ದೇವಿಯನ್ನು
‘ಮುಂಡಮಥನೀ’ ಎಂದು ವರ್ಣಿಸಲಾಗಿದೆ. ವಾಸ್ತವದಲ್ಲಿ ಕೋಲರು ಹಾಗು ಮುಂಡರು ಭಾರತದ ಮೂಲನಿವಾಸಿಗಳು.
ಕೋಲರು ಈಗ ತಮಿಳುನಾಡಿನ ನೀಲಗಿರಿಯಲ್ಲಿ ಮಾತ್ರ ಕಂಡು ಬರುತ್ತಾರೆ. ಇವರ ಭಾಷೆಯು ಸದ್ಯಕ್ಕೆ ತಮಿಳುಪ್ರಭಾವಿತ
ಕನ್ನಡ ಭಾಷೆ. ಕರ್ನಾಟಕದಲ್ಲಿ ಕೊಲ್ಲೂರು ಹಾಗು ಕೋಲಾರ (=ಕೋಲ+ಹಾರ) ಇವು ಕೋಲರ ಬೀಡುಗಳಾಗಿವೆ. ಮಹಾರಾಷ್ಟ್ರದಲ್ಲಿ
‘ಹಾರ’ಕ್ಕೆ ಬದಲಾಗಿ ‘ಪುರ’ವು ಅಂಟಿಕೊಂಡು ‘ಕೋಲ್ಹಾಪುರ’ವಾಗಿದೆ. ಅಷ್ಟೇ ಏಕೆ, ಬಂಗಾಲದ ರಾಜಧಾನಿ
ಕೋಲಕತ್ತಾ ಸಹ ಕೋಲರ ಕಟ್ಟೆಯೇ ಆಗಿರುವ ಸಾಧ್ಯತೆ ಇದೆ.
‘ಮುಂಡ’ರು
ಮಾತ್ರ ಕೋಲರಂತೆ ಕ್ಷೀಣರಾಗಿಲ್ಲ. ಬಿರ್ಸಾ ಮುಂಡಾ ಎನ್ನುವವನು ಬ್ರಿಟಿಶರೊಡನೆ ಹೋರಾಡಿದ ಪ್ರಥಮ ಆದಿವಾಸಿ
ನಾಯಕನಾಗಿದ್ದಾನೆ. ಮುಂಡೆ ಎನ್ನುವ ವ್ಯಕ್ತಿಯೊಬ್ಬರು ಮಹಾರಾಷ್ಟ್ರ ಸರಕಾರದಲ್ಲಿ ಮಂತ್ರಿಯಾಗಿದ್ದರು.
ಕರಿಯಾ ಮುಂಡಾ ಎನ್ನುವವರು ವಾಜಪೇಯಿ ಸರಕಾರದಲ್ಲಿ ಮಂತ್ರಿಯಾಗಿದ್ದರಲ್ಲದೆ, ಲೋಕಸಭೆಯ ಉಪಸಭಾಪತಿಗಳೂ
ಆಗಿದ್ದರು. ‘ಮುಂಡಾ’ ಸಮುದಾಯವು ಬಿಹಾರ ರಾಜ್ಯದಲ್ಲಿ ಮತ್ತು ಕರ್ನಾಟಕದ ಮೈಸೂರು ಹಾಗು ಕೊಡಗು ಜಿಲ್ಲೆಗಳಲ್ಲಿ
ಇದೆ.
ಕೋಲರು
ಹಾಗು ಮುಂಡರಲ್ಲದೆ ಮೂಗರು, ಮಲ್ಲರು ಇವರೆಲ್ಲ ಭಾರತದ ಮೂಲನಿವಾಸಿಗಳು. ಇವರ ಬಗೆಗೆ ಹೆಚ್ಚಿನ ಮಾಹಿತಿಯನ್ನು
ಇಲ್ಲಿ ಹಾಗು ಇಲ್ಲಿ ಪಡೆಯಬಹುದು.
ಈ
ದೇವಿಯ ಆಯುಧಗಳ ವಿವರಗಳನ್ನು ‘ಬಗಲಾಮುಖಿ ಸ್ತೋತ್ರ’ದಲ್ಲಿ ಕಾಣಬಹುದು. ದೇವಿಯು ತನ್ನ ಎಡಗೈಯಲ್ಲಿ
ಪಾಶ, ಅಂಕುಶ, ಶಕ್ತಿ, ಕೊಡಲಿ, ಹಾಗು ಬಲಗೈಯಲ್ಲಿ ಗದೆಯನ್ನು ಧರಿಸಿದವಳಾಗಿದ್ದಾಳೆ. ಈ ಆಯುಧಗಳಲ್ಲಿ
ಬಿಲ್ಲು, ಬಾಣ ಇಲ್ಲದಿರುವುದು ಗಮನಾರ್ಹವಾಗಿದೆ. ಅಂದರೆ ರಾಮಾಯಣದವರೆಗೂ ಬಿಲ್ಲು, ಬಾಣಗಳನ್ನು ಯುದ್ಧಗಳಲ್ಲಿ
ಬಳಸುತ್ತಿರಲಿಲ್ಲ ಎನ್ನಬಹುದು. ಶ್ರೀರಾಮಚಂದ್ರನನ್ನು ‘ಕೋದಂಡಪಾಣಿ’ ಎಂದು ಬಣ್ಣಿಸಿರುವದರಿಂದ ಈ ಕಾಲಘಟ್ಟದಲ್ಲಿ
ಕಬ್ಬಿಣದ ಬಿಲ್ಲು, ಬಾಣಗಳ ಬಳಕೆ ಪ್ರಾರಂಭವಾಯಿತು ಎಂದು ಭಾವಿಸಬಹುದು. ಅಲ್ಲಿಯವರೆಗೆ ಬಿಲ್ಲು, ಬಾಣಗಳು
ಕೇವಲ ಬೇಡರು ಬಳಸುವ ಬಿದಿರಿನ ಬಿಲ್ಲು, ಬಾಣಗಳಾಗಿರಬಹುದು.
ಕ್ಷಿಪ್ರಚಲನೆ
ಹಾಗು ದೂರಗಾಮಿ, ಪ್ರಕ್ಷೇಪಿಸಬಲ್ಲ ಅಸ್ತ್ರಗಳು ಯುದ್ಧದಲ್ಲಿ ಜಯಸಂಪಾದನೆಯ ಪ್ರಮುಖ ಸಾಧನೆಗಳಾಗಿವೆ.
ಭಾರತೀಯರಲ್ಲಿ ಈ ಸಾಧನಗಳ ಕೊರತೆ ಇದ್ದುದರಿಂದಲೇ ಇವರು ಅನೇಕ ಕಾಳಗಗಳಲ್ಲಿ ವಿದೇಶೀಯರಿಗೆ ಸೋತು ಹೋದರು.
ಈ
ಸಂಗತಿಯು ಆಧುನಿಕ ಇತಿಹಾಸದ ಎರಡನೆಯ ಜಾಗತಿಕ ಯುದ್ಧವನ್ನು ನೆನಪಿಸುತ್ತದೆ.
ಹಿಟ್ಲರನು
ಎರಡನೆಯ ಜಾಗತಿಕ ಯುದ್ಧವನ್ನು ಪ್ರಾರಂಭಿಸಿ ಪೋಲ್ಯಾಂಡನ್ನು ಆಕ್ರಮಿಸಿದಾಗ (ಸಾ.ಶ.೧೯೩೯), ಅವನ ಟ್ಯಾಂಕರುಗಳಿಗೆ
ಎದುರಾದದ್ದು ಪೋಲಿಶ್ ಅಶ್ವಪಡೆ! ಸೈನ್ಯದ ಕ್ಷಿಪ್ರಚಲನೆ ಹಾಗು ಆಯುಧಗಳ ಆಧುನೀಕರಣದ ಮಹತ್ವವನ್ನು ಅರಿಯದೆ
ಹೋದರೆ, ಯಾವ ದೇಶಕ್ಕೂ ಉಳಿಗಾಲವಿಲ್ಲ.
ಈ
ಇತಿಹಾಸವು ಭಾರತದ ಮೊದಲ ಪ್ರಧಾನಮಂತ್ರಿ ನೆಹರೂರವರನ್ನು ಅಣ್ವಸ್ತ್ರಗಳ ನಿರ್ಮಾಣಕ್ಕೆ ಪ್ರೇರೇಪಿಸಿತು.
ಸಾಂಪ್ರದಾಯಕ ಶಸ್ತ್ರ್ರಾಸ್ತ್ರಗಳನ್ನು ನೆಹರೂ ನಿರ್ಲಕ್ಷಿಸಿರಬಹುದು. ಅವರ ಅನೇಕ ತಪ್ಪುಗಳಿಗಾಗಿ ನಾವು ಅವರನ್ನು ಇಂದು ಖಂಡಿಸಬಹುದು.
ಆದರೆ ಅಣುಶಕ್ತಿಯ ಹಾಗು ಅಣ್ವಸ್ತ್ರಗಳ ನಿರ್ಮಾಣಕ್ಕೆ ನೆಹರೂ ಅವರೇ ಪ್ರೇರಕರು ಎನ್ನುವುದು ಇತಿಹಾಸದ
ಗುಪ್ತಭಾಗವಾಗಿ ಉಳಿದಿಲ್ಲ. ಅಣ್ವಸ್ತ್ರದ ಶ್ರೇಯಸ್ಸನ್ನು ನಾವು ನೆಹರೂರವರಿಗೆ ಕೊಡಲೇಬೇಕು!
ಮುಂಬಯಿಯಲ್ಲಿ
‘ಅಪ್ಸರಾ ಅಣುಶಕ್ತಿ ಕೇಂದ್ರ’ವನ್ನು ಸ್ಥಾಪಿಸಿದಂತೆಯೇ, ಉತ್ತರ ಪ್ರದೇಶದ ನರೋನಾದಲ್ಲಿ ಸಹ ರಶಿಯಾದ
ನೆರವಿನೊಂದಿಗೆ ಒಂದು ಅಣುಶಕ್ತಿಕೇಂದ್ರವನ್ನು ಸ್ಥಾಪಿಸಲಾಯಿತು. ಈ ಕೇಂದ್ರವು ಅಣುಶಕ್ತಿಯನ್ನು ಪಡೆಯುವದರಲ್ಲಿ
ಸಫಲವಾಗಲಿಲ್ಲ ಎನ್ನುವ ಮುಖವಾಡದೊಂದಿಗೆ, ಅಣ್ವಸ್ತ್ರದ ನಿರ್ಮಾಣಕ್ಕಾಗಿ ಅಲ್ಲಿ ಪ್ರಯೋಗಗಳನ್ನು ನಡೆಯಿಸಲಾಯಿತು.
ಭಾರತಕ್ಕೆ
ಕೊನೆಗೂ ಯಶಸ್ಸು ದೊರೆತಿದ್ದು ಇಂದಿರಾ ಗಾಂಧಿಯವರ ಕಾಲದಲ್ಲಿ! ಈ ಅಣ್ವಸ್ತ್ರದ ಹಾಗು ಕ್ಷಿಪಣಿಗಳಲ್ಲಿ
ಭಾರತವು ಸಾಧಿಸಿದ ಅದ್ಭುತ ಯಶಸ್ಸಿನಿಂದಾಗಿಯೇ ಭಾರತದ ಮೇಲೆ ನೇರ ಯುದ್ಧ ಮಾಡಲು ಪಾಕಿಸ್ತಾನ ಹಾಗು
ಚೀನಾ ಹಿಂಜರಿಯುತ್ತಿವೆ.
ಮಹಾತ್ಮಾ
ಗಾಂಧಿ ಹಾಗು ಜವಾಹರಲಾಲ ನೆಹರೂ ಎಂತಹ ವಿರುದ್ಧ ಮುಖಗಳ ಗುರು, ಶಿಷ್ಯರು ಎನ್ನುವುದನ್ನು ನೋಡಿದಾಗ
ಆಶ್ಚರ್ಯವಾಗುತ್ತದೆ. ಗಾಂಧೀಜಿಯವರು ಅಹಿಂಸಾವಾದಿಗಳು; ನೆಹರೂ ಅಣುಬಾಂಬಿನ ಹಿಂದೆ ಇದ್ದಂತಹ ಶಕ್ತಿ.
ಗಾಂಧೀಜಿ ಗ್ರಾಮಕೈಗಾರಿಕೆಗಳ ಪ್ರತಿಪಾದಕರು; ನೆಹರೂ ಭಾರತದಲ್ಲಿ ಭಾರೀ ಉದ್ದಿಮೆಗಳನ್ನು ಸ್ಥಾಪಿಸಲು ಹಾಗು ಭಾರತದ ಔದ್ಯಮೀಕರಣಕ್ಕೆ
ಪ್ರೇರಕರಾದವರು.
ಇಂತಹದೇ
ವಿಪರ್ಯಾಸವನ್ನು ನಾವು ರಾಮಕೃಷ್ಣ ಪರಮಹಂಸ ಹಾಗು ವಿವೇಕಾನಂದರಲ್ಲಿ ಕಾಣಬಹುದು. ಪರಮಹಂಸರು ‘ಕುರುಡು
ಆಚರಣೆಗಳಲ್ಲಿ(!)’ ನಂಬಿಕೆ ಇಟ್ಟವರು; ವಿವೇಕಾನಂದರು ಆಧುನಿಕ ಮನೋಭಾವದವರು. ಪರಮಹಂಸರು ಆಧುನಿಕ ಶಾಲೆ,
ಆಸ್ಪತ್ರೆ ಮೊದಲಾದವುಗಳ ಸ್ಥಾಪನೆಯನ್ನು ಜರೆಯುತ್ತಿದ್ದರು; ವಿವೇಕಾನಂದರು ಬೆಂಗಳೂರಿನಲ್ಲಿ ಸ್ಥಾಪಿಸಲಾದ
‘ತಾತಾ ಮೂಲವಿಜ್ಞಾನ ಸಂಶೋಧನಾ ಕೇಂದ್ರ’ಕ್ಕೆ ಪ್ರೇರಣೆ ಇತ್ತವರು!
ಹೀಗಿದ್ದರೂ
ಸಹ ನೆಹರೂರವರು ಪ್ರಧಾನ ಮಂತ್ರಿಯಾಗಲು ಗಾಂಧೀಜಿಯೇ ಕಾರಣರಾದರು; ವಿವೇಕಾನಂದರು ಸನ್ಯಾಸಿಯಾಗಲು ಪರಮಹಂಸರೇ ಕಾರಣರಾದರು!
7 comments:
informative article.. Thank you for sharing the details.
ಪುರಾಣ ರಚನೆಗಳಿಂದ ಭಾರತದ ನಿಜ ಇತಿಹಾಸದ ಅರಿವು ಪಡೆಯಬಹುದೆನ್ನುವ ತಮ್ಮ ಮಾತು ನಿಜ.
ಸಿಂಧೂ ಸಂಸ್ಕೃತಿಯಲ್ಲಿ ಶಿವನ ಜಾಡು ಖರೇ ಎನಿಸುತ್ತದೆ.
ಹಿಂದೊಮ್ಮೆ ಬಿರ್ಸಾ ಮುಂಡಾನ ಬಗ್ಗೆ ಓದಿದ ನೆನಪಾಗುತ್ತಿದೆ.
ಗುರು ಪರಂಪರೆಯಲ್ಲಿನ ಪರಸ್ಪರ ವೈರುಧ್ಯಗಳು ಅಚ್ಚರಿ ಹುಟ್ಟಿಸುತ್ತವೆ.
ದಯವಿಟ್ಟು ಮಾಲಿಕೆಯನ್ನು ಮುದುವರೆಸಿರಿ....
ಶಿವಪ್ರಕಾಶರೆ,
ಧನ್ಯವಾದಗಳು.
ವಂದೇ ಮಾತರಂ ಸರಣಿಯಲ್ಲಿ ನೀವು ನೀಡುತ್ತಿರುವ ಉಪಯುಕ್ತ ಮಾಹಿತಿಗಳಿಗಾಗಿ ಧನ್ಯವಾದಗಳು ಸಾರ್.. !!
ಮಂಜುಳಾದೇವಿಯವರೆ,
ನನ್ನ ಲೇಖನಗಳಿಗೆ feed back ನೀಡುತ್ತಿರುವದಕ್ಕಾಗಿ ನಿಮಗೆ ವಂದನೆಗಳು.
ವಿಶದವೂ,ವಿಸ್ತಾರವೂ ಆದ ವಿವರಣೆಗಳು ತುಂಬಾ ಉಪಯುಕ್ತವಾಗಿವೆ ಸುನಾಥರೆ
ಅನಿಲ,
ಧನ್ಯವಾದಗಳು.
Post a Comment