Tuesday, August 5, 2014

ಕುರುಡು ಕಾಂಚಾಣಾ………………………ದ. ರಾ. ಬೇಂದ್ರೆಕುರುಡು ಕಾಂಚಾಣಾ ಕುಣಿಯುತಲಿತ್ತು |
ಕಾಲಿಗೆ ಬಿದ್ದವರ ತುಳಿಯುತಲಿತ್ತೋ ||
                        ಕುರುಡು ಕಾಂಚಾಣಾ ||
      ಬಾಣಂತಿಯೆಲುಬ ಸಾ-
      ಬಾಣದ ಬಿಳುಪಿನಾ
      ಕಾಣದ ಕಿರುಗೆಜ್ಜೆ ಕಾಲಾಗ ಇತ್ತೋ;
               ಸಣ್ಣ ಕಂದಮ್ಮಗಳ
               ಕಣ್ಣೀನ ಕವಡಿಯ
               ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ;
      ಬಡವರ ಒಡಲಿನ
      ಬಡಬಾsನಲದಲ್ಲಿ
      ಸುಡು ಸುಡು ಪಂಜು ಕೈಯೊಳಗಿತ್ತೋ;
               ಕಂಬನಿ ಕುಡಿಯುವ
               ಹುಂಬ ಬಾಯಿಲೆ ಮೈ-
               ದುಂಬಿದಂತುಧೋ ಉಧೋ ಎನ್ನುತಲಿತ್ತೋ;
      ಕೂಲಿ ಕುಂಬಳಿಯವರ
      ಪಾಲಿನ ಮೈದೊಗಲ
      ಧೂಳಿಯ ಭಂಡಾರ ಹಣೆಯೊಳಗಿತ್ತೋ;
               ಗುಡಿಯೊಳಗೆ ಗಣಣ, ಮಾ
               ಹಡಿಯೊಳಗೆ ತನನ, ಅಂ-
               ಗಡಿಯೊಳಗೆ ಝಣಣಣ ನುಡಿಗೊಡುತಿತ್ತೋ;
      ಹ್ಯಾಂಗಾರೆ ಕುಣಿಕುಣಿದು
      ಮಂಗಾಟ ನಡೆದಾಗ
      ಅಂಗಾತ ಬಿತ್ತೋ, ಹೆಗಲಲಿ ಎತ್ತೋ.

‘ಕುರುಡು ಕಾಂಚಾಣಾ’ ಕವನವು ಅಂಬಿಕಾತನಯದತ್ತರ ‘ನಾದಲೀಲೆ’ ಕವನಸಂಗ್ರಹದಲ್ಲಿ ಅಡಕವಾಗಿದೆ. ಈ ಕವನಸಂಕಲನವು ೧೯೩೮ನೆಯ ಇಸವಿಯಲ್ಲಿ ಪ್ರಕಟವಾಯಿತು. ಬ್ರಿಟಿಶ್ ಸರಕಾರದ ಶೋಷಣೆಯ ನೀತಿಯಿಂದಾಗಿ ಭಾರತೀಯರು ಕಡುಕಷ್ಟವನ್ನು ಎದುರಿಸುತ್ತಿದ್ದ ಕಾಲವದು; ಸಾಮಾನ್ಯ ಪ್ರಜೆಗಳು ಒಂದು ತುತ್ತು ಕೂಳಿಗಾಗಿ ಪರದಾಡುತ್ತಿರುವಾಗ, ಸರಕಾರವು ಹಾಗು ಸರಕಾರದ ಚೇಲಾಗಳಾದ ಲಾಭಬಡುಕರು ಮೆರೆದಾಡುತ್ತಿದ್ದ ಕಾಲವದು; ಮಾನವೀಯತೆಯು ಸತ್ತು ಹೋಗಿ, ನರಭಕ್ಷಣೆಯೇ ಮೇಲ್ಗೈ ಸಾಧಿಸಿದಂತಹ ಕಾಲವದು. ಈ ಸಂಕಟಮಯ ಪರಿಸ್ಥಿತಿಯು ಬೇಂದ್ರೆಯವರ ಕವನಗಳಲ್ಲಿ ವ್ಯಕ್ತವಾಗಿದೆ. ‘ನಾದಲೀಲೆ’ ಸಂಕಲನದಲ್ಲಿಯೇ ಇರುವ ‘ಮನುವಿನ ಮಕ್ಕಳು’, ‘ಅನ್ನಾವತಾರ’, ‘ಭೂಮಿತಾಯಿಯ ಚೊಚ್ಚಲ ಮಗ’  ಹಾಗು ‘ಗರಿ’ ಸಂಕಲನದಲ್ಲಿರುವ  ‘ತುತ್ತಿನ ಚೀಲ’ ಮೊದಲಾದ ಕವನಗಳು ಇದಕ್ಕೆ ನಿದರ್ಶನಗಳಾಗಿವೆ.
………………………………………………………………
ಕುರುಡು ಕಾಂಚಾಣಾ ಕುಣಿಯುತಲಿತ್ತು |
ಕಾಲಿಗೆ ಬಿದ್ದವರ ತುಳಿಯುತಲಿತ್ತೋ ||
                   ಕುರುಡು ಕಾಂಚಾಣಾ ||

‘ಕುರುಡು ಕಾಂಚಾಣಾ’ ಎನ್ನುವುದು ಒಂದು personification. ಕಾಂಚಾಣಲೋಭಿ ಹೃದಯಹೀನರ ಪ್ರತೀಕವಿದು. ಇವರು ಕುಣಿಯುವುದು ಸಂಪತ್ತಿನ ದೇವಿಯ ಎದುರಿನಲ್ಲಿ. ಸಂಪತ್ತು ಕೇವಲ ಕೆಲವರ ಐಶಾರಾಮಿಗಾಗಿ ಇರದೆ ಸರ್ವರ ಒಳಿತಿಗಾಗಿ, ಏಳ್ಗೆಗಾಗಿ ಇರಬೇಕು. ಮಾನವೀಯತೆಯನ್ನು ಕಡೆಗಣಿಸುವ ಸಂಪತ್ತನ್ನು ಬೇಂದ್ರೆಯವರು ‘ಕುರುಡು ಕಾಂಚಾಣಾ’ ಎಂದು ಕರೆಯುತ್ತಾರೆ. ಇಂತಹ ಕುರುಡು ಕಾಂಚಾಣದ ಉನ್ಮಾದದ ಕುಣಿತವನ್ನು ಬೇಂದ್ರೆಯವರು (ಎಲ್ಲಮ್ಮನ)ಜೋಗತಿಯ ಉನ್ಮಾದದ ಕುಣಿತದೊಂದಿಗೆ ಹೋಲಿಸುತ್ತಿದ್ದಾರೆ. ಪಲ್ಲದ ಮೊದಲ ಸಾಲಿನಲ್ಲಿ ‘ಕುಣಿಯುತಲಿತ್ತು’ ಎನ್ನುವ ಸಾಮಾನ್ಯ ನೋಟದೊಂದಿಗೆ ಪ್ರಾರಂಭವಾಗುವ ಕವನವು, ಎರಡನೆಯ ಸಾಲಿನಲ್ಲಿ ‘ತುಳಿಯುತಲಿತ್ತೋ’ ಎನ್ನುವ ಪದದಿಂದ ಉದ್ವಿಗ್ನತೆಯನ್ನು, ಹತಾಶೆಯನ್ನು ವ್ಯಕ್ತಪಡಿಸುತ್ತದೆ. ಎಲ್ಲಮ್ಮನ ಜೋಗತಿ ಹಾಗು ಕಾಂಚಾಣಜೋಗತಿ ಈರ್ವರೂ ಜೋಗತಿಯರೇ. ಎಲ್ಲಮ್ಮನ ಜೋಗತಿ ಭಕ್ತಿಯ ಉನ್ಮಾದದಲ್ಲಿದ್ದರೆ, ಕಾಂಚಾಣಜೋಗತಿ ದುಡ್ಡಿನ ಉನ್ಮಾದದಲ್ಲಿದ್ದಾಳೆ.  ಈ ಕವನದಲ್ಲಿ ಇವಳ ತೊಡುಗೆಯನ್ನು ಅವಳಿಗಿಟ್ಟು ಬೇಂದ್ರೆಯವರು ಚಿತ್ರಿಸಿದ್ದಾರೆ.

ಮೈಮೇಲೆ ದೇವಿ ಬಂದಾಗ, ಎಲ್ಲಮ್ಮನ ಜೋಗತಿಯು ಉನ್ಮಾದದಿಂದ ಕುಣಿಯುತ್ತಾಳೆ. ಅನೇಕ ಭಕ್ತರು ಜೋಗತಿಯ ಕಾಲಿಗೆ ಬಿದ್ದು, ಅವಳಿಂದ (ಎಲ್ಲಮ್ಮನ) ಅನುಗ್ರಹವನ್ನು ಪಡೆಯುತ್ತಾರೆ. ಕುರುಡು ಕಾಂಚಾಣವೂ ಸಹ ಅದೇ ರೀತಿಯಲ್ಲಿ ಉನ್ಮಾದದಿಂದ ಕುಣಿಯುತ್ತಿದೆ. ಹೊಟ್ಟೆಗಿಲ್ಲದ ಜನರು ಎರಡು ತುತ್ತು ಕೂಳಿಗಾಗಿ ಇವಳ ಕಾಲಿಗೆ ಬೀಳುತ್ತಾರೆ. ಅವರನ್ನೆಲ್ಲ ಈ ಜೋಗತಿ ತುಳಿದು ಹಾಕುತ್ತಾಳೆ. ಈ ರೀತಿಯಾಗಿ ಕವನದ ಪಲ್ಲದಲ್ಲಿ ‘ಕಾಂಚಾಣ-ಜೋಗತಿಯ’ ಕುಣಿತವನ್ನು  ಬೇಂದ್ರೆಯವರು (ಎಲ್ಲಮ್ಮನ) ಜೋಗತಿಗೆ ಹೋಲಿಸಿ ಚಿತ್ರಿಸಿದ್ದಾರೆ; ಮುಂದಿನ ನುಡಿಗಳಲ್ಲಿ, ಅವಳ ವೇಷಭೂಷಗಳನ್ನು ವರ್ಣಿಸಿದ್ದಾರೆ.

     ಬಾಣಂತಿಯೆಲುಬ ಸಾ-
     ಬಾಣದ ಬಿಳುಪಿನಾ
     ಕಾಣದ ಕಿರುಗೆಜ್ಜೆ ಕಾಲಾಗ ಇತ್ತೋ;
              ಸಣ್ಣ ಕಂದಮ್ಮಗಳ
             ಕಣ್ಣೀನ ಕವಡಿಯ
             ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ;

(ಎಲ್ಲಮ್ಮನ) ಜೋಗತಿಯು ತನ್ನ ಕಾಲಲ್ಲಿ ಬೆಳ್ಳಿಯ ಕಿರುಗೆಜ್ಜೆಗಳನ್ನು ಧರಿಸಿರುತ್ತಾಳೆ. ಕಾಂಚಾಣಜೋಗತಿಯೂ ಸಹ ತನ್ನ ಕಣಕಾಲುಗಳಲ್ಲಿ ಕಿರುಗೆಜ್ಜೆಗಳನ್ನು ಧರಿಸಿದ್ದಾಳೆ. ಆದರೆ ಇವು ಬಾಣಂತಿಯ ಎಲುವಿನಿಂದ ಮಾಡಿದ ಗೆಜ್ಜೆಗಳು. ಈ ಗೆಜ್ಜೆಗಳು ಸವೆದು ಹೋದ ಸಾಬಾಣದಷ್ಟು (soap) ಬೆಳ್ಳಗಿವೆ. ‘ಬಾಣಂತಿಯೆಲುಬು’ ಇಲ್ಲಿ ಎರಡು ಅರ್ಥಗಳನ್ನು ಧ್ವನಿಸುತ್ತದೆ. ಬಾಣಂತಿಯು ಮಗುವನ್ನು ಹೆತ್ತು ಸೃಷ್ಟಿಕ್ರಿಯೆಯನ್ನು ಮುಂದುವರಿಸುವಂತಹ ಹೆಂಗಸು. ಬಡತನದ ಹೊಡೆತದಿಂದಾಗಿ ಹಾಗು ಸಾಮಾಜಿಕ ಅನ್ಯಾಯದಿಂದ ಬಾಣಂತಿಯು ಈಗ ಸತ್ತು ಹೆಣವಾಗಿದ್ದಾಳೆ; ನಿಸರ್ಗಸಹಜವಾದ ಸೃಷ್ಟಿಕಾರ್ಯವು ನಿಂತು ಹೋಗಿದೆ. ಸವೆದು ಹೋಗಿ ಬೆಳ್ಳಗಾದ ಸಾಬಾಣವು ದುಡಿದುಡಿದು ಕ್ಷೀಣವಾದ ಬಾಣಂತಿಯನ್ನು ಸೂಚಿಸುತ್ತದೆ.

ಎರಡನೆಯ ಅರ್ಥವೆಂದರೆ, ಬಾಣಂತಿಯ ಎಲುಬಗಳನ್ನು ಮಾಟಗಾರರು ಅಭಿಚಾರಕ್ರಿಯೆಯಲ್ಲಿ ಬಳಸುತ್ತಾರೆ. ಈ ಕಾಂಚಾಣಜೋಗತಿಯು ತನ್ನ ಕಣಕಾಲುಗಳಲ್ಲಿ ಬಾಣಂತಿಯ ಎಲುವುಗಳ ಕಿರುಗೆಜ್ಜೆಯನ್ನು ಕಟ್ಟಿಕೊಂಡು ಕುಣಿಯುವ ಮಾಟಗಾತಿಯಾಗಿದ್ದಾಳೆ. ಇವಳ ಅಂತಿಮ ಉದ್ದೇಶವು ಸಮಾಜವನ್ನು ಹಾಳುಗೆಡುವುದಾಗಿದೆ. ಆದರೆ ಈ ಗೆಜ್ಜೆಗಳು ‘ಕಾಣದ ಕಿರುಗೆಜ್ಜೆಗಳು’. ಆದುದರಿಂದ ಕಾಂಚಾಣಜೋಗತಿಯ ಕಿರುಗೆಜ್ಜೆಗಳಾಗಲಿ ಅಥವಾ ಅವಳ ಹೀನ ಉದ್ದೇಶವಾಗಲಿ ಸಮಾಜಕ್ಕೆ ಅದೃಶ್ಯವಾಗಿಯೇ ಇರುತ್ತವೆ.

ಇನ್ನು ಈ ಜೋಗತಿ ಧರಿಸಿದಂತಹ ‘ಜೋಮಾಲೆ’(=ಜೋಗತಿಯ ಮಾಲೆ) ಎಂತಹದು? ಬಾಣಂತಿಯನ್ನು ಕೊಂದವಳು ಅವಳ ಮಕ್ಕಳನ್ನು ಬಿಟ್ಟಾಳೆಯೆ?  ಸಣ್ಣ ಕಂದಮ್ಮಗಳು ಮುಗ್ಧ, ಅಸಹಾಯಕ ಜೀವಿಗಳು. ಅವುಗಳ ಕಣ್ಣುಗುಡ್ಡಿಗಳನ್ನೆ ಕಿತ್ತು, ಕವಡಿಗಳ ಮಾಲೆಯನ್ನು ಮಾಡಿಕೊಂಡು ಈ ಜೋಗತಿ ಕೊರಳಲ್ಲಿ ಧರಿಸಿದ್ದಾಳೆ. ಭವಿಷ್ಯದ ಸಂಕೇತಗಳಾದ ಈ ಕಂದಮ್ಮಗಳು ಇದೀಗ ಕುರುಡರಾಗಿದ್ದಾರೆ. ಈ ಮಾಲೆಯು ‘ತಣ್ಣನ್ನ ಜೋಮಾಲೆ’! ಜೋಗತಿಯ ತಣ್ಣನೆಯ ಕ್ರೌರ್ಯಕ್ಕೆ ಇದು ಸಂಕೇತವಾಗಿದೆ.


     ಬಡವರ ಒಡಲಿನ
     ಬಡಬಾsನಲದಲ್ಲಿ
     ಸುಡು ಸುಡು ಪಂಜು ಕೈಯೊಳಗಿತ್ತೋ;
            ಕಂಬನಿ ಕುಡಿಯುವ
            ಹುಂಬ ಬಾಯಿಲೆ ಮೈ-
            ದುಂಬಿದಂತುಧೋ ಉಧೋ ಎನ್ನುತಲಿತ್ತೋ;

ಕೈಯಲ್ಲಿ ಉರಿಯುವ ಪಂಜನ್ನು ಹಿಡಿದುಕೊಂಡು, ದೇವಿಗೆ ‘ಉಧೋ ಉಧೋ’ ಎಂದು ಘೋಷಿಸುವುದು ಜೋಗತಿಯ ಪೂಜೆಯ ಭಾಗವಾಗಿದೆ. ಕಾಂಚಾಣಜೋಗತಿಯ ಕೈಯಲ್ಲೂ ಸಹ ಉರಿಯುತ್ತಿರುವ ಪಂಜಿದೆ. ಇವಳೂ ಸಹ ‘ಉಧೋ ಉಧೋ’ ಎಂದು ಗರ್ಜಿಸುತ್ತಿದ್ದಾಳೆ. ಆದರೆ ಇವಳು ಹಿಡಿದಿರುವುದು ಸಾಧಾರಣ ಪಂಜಲ್ಲ. ಇದು ಬಡವರ ಒಡಲಿನ ಬೆಂಕಿಯ ಪಂಜು. ಬಡವರ ಒಡಲೇ ಒಂದು ಸಮುದ್ರದಷ್ಟು ವಿಶಾಲವಾಗಿದೆ. ಏಕೆಂದರೆ ಇವರ ಹಸಿವೆಯನ್ನು ಹಿಂಗಿಸುವಷ್ಟು ಕೂಳು ಇವರಿಗೆ ಸಿಗುವುದಿಲ್ಲ. ಅಲ್ಲದೆ ಒಬ್ಬನು ಸಿರಿವಂತನಾಗಬೇಕಾದರೆ ನೂರು ಜನ ಬಡವರಾಗಿರಬೇಕಾಗುತ್ತದೆ! ಆದುದರಿಂದ ಬಡವರ ಒಡಲು ಅಪಾರ ಹಾಗು ಅನಂತ ಸಮುದ್ರದಷ್ಟು ಆಳ ಹಾಗು ವಿಶಾಲ! ಸಮುದ್ರದಲ್ಲಿ ಇರುವ ಬೆಂಕಿಗೆ ‘ಬಡಬಾನಲ’ ಎಂದು ಕರೆಯುತ್ತಾರೆ. ಬಡವರ ಒಡಲೊಳಗಿರುವ ಬೆಂಕಿಯು ಹಸಿವಿನ ಬೆಂಕಿ. ಆ ಬೆಂಕಿಯಿಂದ ಹೊತ್ತಿಸಿದ ಪಂಜನ್ನು ಈ ಜೋಗತಿ ಹಿಡಿದಿದ್ದಾಳೆ. (ಬಡಬಾನಲವು ಸಮುದ್ರದ ಬೆಂಕಿ ಎಂದು ಅರ್ಥ ನೀಡುವುದರ ಜೊತೆಗೇ ‘ಬಡವರ+ಅನಲ’ ಎಂದು  ಶ್ಲೇಷೆಯ ಮೂಲಕ ಸೂಚಿಸುವದನ್ನೂ ಗಮನಿಸಬೇಕು.)

’ಉಧೋ ಉಧೋ’ ಎಂದು ಉಗ್ಗಡಿಸುವ ಜೋಗತಿಯ ಮೈಯಲ್ಲಿ ದೇವಿಯ ಆವೇಶ ಬಂದಿರುತ್ತದೆ. ಈ ಕಾಂಚಾಣಜೋಗತಿಯ ಮೈಯಲ್ಲಿಯೂ ಆವೇಶವಿದೆ. ಆದರೆ ಇದು ಕಾಂಚಾಣದ ಆವೇಶ. ಕಾಂಚಾಣವನ್ನು ಹೇಗಾದರೂ ಸಂಪಾದಿಸಬೇಕೆನ್ನುವ ಲೋಭವು ಅವಳನ್ನು ಕುರುಡಳನ್ನಾಗಿ ಮಾಡಿದೆ. ಅವಳ ಬಾಯಿಯಿಂದ ಬರುವ ‘ಉಧೋ ಉಧೋ’ ಎನ್ನುವ ಉಗ್ಗಡಣೆಯು ಪವಿತ್ರವಾದ ಘೋಷವಲ್ಲ; ಇದು ಹುಂಬತನದ ಘೋಷ.  ಇದು ಮುಗ್ಧ, ಅಸಹಾಯಕರ ಕಂಬನಿಯನ್ನು ಕುಡಿಯುವ ಅಪವಿತ್ರ ಬಾಯಿಯಿಂದ ಹೊರಡುತ್ತಿರುವ ಸಂವೇದನಾಶೂನ್ಯ ಘೋಷ.

    ಕೂಲಿ ಕುಂಬಳಿಯವರ
     ಪಾಲಿನ ಮೈದೊಗಲ
     ಧೂಳಿಯ ಭಂಡಾರ ಹಣೆಯೊಳಗಿತ್ತೋ;
            ಗುಡಿಯೊಳಗೆ ಗಣಣ, ಮಾ
            ಹಡಿಯೊಳಗೆ ತನನ, ಅಂ-
            ಗಡಿಯೊಳಗೆ ಝಣಣಣ  ನುಡಿಗೊಡುತಿತ್ತೋ;

ಎಲ್ಲಮ್ಮನ ಜೋಗತಿಯು ಹಣೆಯ ಮೇಲೆ  ಭಂಡಾರವನ್ನು (ಅಂದರೆ ಎಲ್ಲಮ್ಮ ದೇವಿಯ ಅರಿಶಿಣವನ್ನು) ಧರಿಸಿರುತ್ತಾಳೆ. ಈ ಕಾಂಚಾಣಜೋಗತಿಯು ಧರಿಸಿರುವ ಭಂಡಾರವೆಂತಹುದು? ಒಬ್ಬನು ದುಡ್ಡನ್ನು ಕೂಡಿಹಾಕಬೇಕಾದರೆ ನೂರು ಜನ ಬೆವರು ಹರಿಸಬೇಕಲ್ಲವೆ? ಈ ಕೂಲಿ ಜನರು ದುಡಿದುಡಿದು ಸೋತು ಸಣ್ಣಗಾದಾಗ ಇವರ ಮೈಯ ತೊಗಲೂ ಸಹ ಜೋತು ಬಿದ್ದಿರುತ್ತದೆ. ಅದೇ ಇವರ  ಪಾಲಿಗೆ ಉಳಿದಿರುವ ಸಂಪತ್ತು. ಆ ಮೈದೊಗಲಿಗೆ ಹತ್ತಿದ ಧೂಳಿಯೇ ಈ ಕಾಂಚಾಣಜೋಗತಿಯು ತನ್ನ ಹಣೆಯ ಮೇಲೆ ಹಚ್ಚಿಕೊಂಡಂತಹ ಭಂಡಾರವಾಗಿದೆ. (ಭಂಡಾರ ಎಂದರೆ ಸಂಪತ್ತಿನ ಸಂಗ್ರಹಾಲಯ ಎನ್ನುವ ಶ್ಲೇಷೆ ಇಲ್ಲಿದೆ.)

ಇದಾದ ಬಳಿಕ, ದೇವಿಯ ಜೋಗತಿಯು ಗುಡಿಯೊಳಗೆ ಹೋಗಿ ಗಂಟೆ ಬಾರಿಸಿ ಪೂಜೆ ಸಲ್ಲಿಸುವಳಷ್ಟೆ? ಕಾಂಚಾಣಜೋಗತಿಯೂ ಸಹ ತನ್ನ ಹಣದ ಬಲದಿಂದ ಗುಡಿಗಳೊಳಗೆ ಪೂಜೆಯ ಅಧಿಕಾರವನ್ನು ಕೊಳ್ಳುವವಳೇ. (ದುಡ್ಡಿದ್ದವರಿಗೆ ‘ಸ್ಪೆಶಲ್ ದರ್ಶನ’ ಎನ್ನುವುದು ಎಲ್ಲರಿಗೂ ಗೊತ್ತಿದ್ದದ್ದೇ!) ಗುಡಿಗಳಲ್ಲಿ ‘ಗಣಣ’ ಎಂದು ಗಂಟೆ ಬಾರಿಸುವ ಇವಳು ಮಹಡಿಯ ಮನೆಗಳಲ್ಲಿ, ಹಣವುಳ್ಳವರ ಎದುರಿಗೆ ‘ತನನ’ ಎಂದು ಕುಣಿಯುವ ಸಾಮಾನ್ಯ ನಾಚುಗಾತಿಯಾಗುತ್ತಾಳೆ. ಇನ್ನು ದುಡ್ಡಿನ ಕಾರಾಗಾರಗಳಾದ ಅಂಗಡಿಗಳ ಒಳಗಂತೂ ಇವಳ ಝಣಝಣ ಪ್ರತಿಧ್ವನಿ ಯಾವಾಗಲೂ ಕೇಳಿ ಬರುವಂತಹದು. ಹಣದ ಕುಣಿತ ಹೇಗೆ ಸರ್ವವ್ಯಾಪಿಯಾಗಿದೆ, ಸರ್ವಮಾನ್ಯವಾಗಿದೆ ಎನ್ನುವುದನ್ನು ಬೇಂದ್ರೆಯವರು ಇಲ್ಲಿ ವ್ಯಂಗ್ಯವಾಗಿ ಸೂಚಿಸಿದ್ದಾರೆ.

ಹ್ಯಾಂಗಾರೆ ಕುಣಿಕುಣಿದು
     ಮಂಗಾಟ ನಡೆದಾಗ
     ಅಂಗಾತ ಬಿತ್ತೋ,  ಹೆಗಲಲಿ ಎತ್ತೋ.

ಆದರೆ ಇಂತಹ ವಿನಾಶಕಾರಿ ಧಂಧೆ ಎಲ್ಲಿಯವರೆಗೆ ನಡೆದೀತು? ಅದು ಅತಿಶಯಕ್ಕೆ ಮುಟ್ಟಿದಾಗ (--ಪಾಪದ ಕೊಡ ತುಂಬಿದಾಗ ಎಂದು ಹೇಳುತ್ತಾರಲ್ಲವೆ?--) ಈ ಮಂಗಾಟದ ಕುಣಿತಕ್ಕೆ ಕೊನೆಯಾಗಲೇ ಬೇಕು. ತನ್ನ (ಪಾಪದ) ಭಾರ ತಾಳಲಾರದೆ ಈ ಜೋಗತಿ ಕುಸಿದು ಬೀಳಲೇ ಬೇಕು. ‘ಅದು ಬಿದ್ದಾಗ, ತಡ ಮಾಡದೇ ಆ ಶವವನ್ನು ಎತ್ತಿ ಹಾಕಿರಿ’ (--ಅದು ಮತ್ತೆ ಮೈದುಂಬೀತು ಎನ್ನುವ ಹೆದರಿಕೆಯಿಂದಲೆ?--) ಎಂದು ಬೇಂದ್ರೆಯವರು ಹೇಳುತ್ತಾರೆ. ತುಳಿತಕ್ಕೆ ಒಳಗಾದವರ ಆಸೆ ಹಾಗು ಆಶಯವೂ ಸಹ ಇದೇ ಆಗಿದೆ.
                                                                                                         
ಟಿಪ್ಪಣಿ: ಬೇಂದ್ರೆಯವರ ಕವನಗಳು ಕೇವಲ ಹಾಡುವ ಅಥವಾ ಮನನ ಮಾಡುವ ಕವನಗಳಷ್ಟೇ ಅಲ್ಲ. ಅವರು ತಮ್ಮ ಕವನಗಳ ಬರಹವನ್ನೂ ಸಹ ನಿರ್ದಿಷ್ಟ ರೀತಿಯಲ್ಲಿ ಬರೆಯುತ್ತಿದ್ದರು. ಯಾವ ಸಾಲಿನ ಕೆಳಸಾಲು ಎಲ್ಲಿ ಬರಬೇಕು, ಯಾವ ವಿರಾಮಗಳನ್ನು ಎಲ್ಲಿ ಬಳಸಬೇಕು ಎನ್ನುವುದರ ಬಗೆಗೆ ಅವರು ತುಂಬ ಕಾಳಜಿಯಿಂದ ಇರುತ್ತಿದ್ದರು. ಈ ಕವನದ ಮೊದಲ ಆರು ನುಡಿಗಳ ಕೊನೆಯ ಸಾಲುಗಳ ಕೊನೆಯಲ್ಲಿ ಅರ್ಧವಿರಾಮ ಬರುತ್ತದೆ. ಕೊನೆಯ (ಏಳನೆಯ ಸಾಲಿನ) ಕೊನೆಯಲ್ಲಿ ಮಾತ್ರ ಪೂರ್ಣವಿರಾಮ ಬರುತ್ತದೆ. ಕಾಂಚಾಣ-ಜೋಗತಿಯ ಪೂರ್ಣಚಿತ್ರವನ್ನು, ಯಾವುದೇ ವಿರಾಮವಿಲ್ಲದೆ ನೀಡುತ್ತಿದ್ದೇನೆ ಎನ್ನುವುದರ ಸೂಚನೆಯನ್ನು ಬೇಂದ್ರೆಯವರು ನೀಡುತ್ತಿದ್ದಾರೆ.           

ಈ ಕವನಕ್ಕೆ  shrinudiಯವರು ನೀಡಿದ ಪ್ರತಿಕ್ರಿಯೆಯನ್ನು ಇಲ್ಲಿ ಉಲ್ಲೇಖಿಸುವುದು ಅವಶ್ಯವಿದೆ:

ಆದರೆ ಸ್ವತಃ ಬೇಂದ್ರೆಯವರೇ ಕವಿತೆಯ ಭಾವ ಸಂದರ್ಭದಲ್ಲಿ ಕುರುಡು ಕಾಂಚಾಣದ ಕುಣಿತವನ್ನು ಮಹಾಲಕ್ಷ್ಮಿಯ ಉಪಾಸಕರಾದ ಗೊಂದಲಿಗರ ಕುಣಿತ ಎಂದು ಉಲ್ಲೇಖಿಸಿದ್ದಾರೆ.
"ಮಹಾಲಕ್ಷ್ಮಿಯ ಉಪಾಸಕರು ಎನಿಸಿಕೊಳ್ಳುವ ಗೊಂದಲಿಗರು ಬಡವರಿಂದಲೂ ಒಂದು ಕಾಸನ್ನು ಕೊಸರಿಕೊಳ್ಳಲು ಹೆಣಗುತ್ತಾರೆ; ಕುಣಿಯುತ್ತಾರೆ. ಬಾಣಂತಿಯರ ಸಾವು, ಚಿಕ್ಕ ಮಕ್ಕಳ ಬಲಿ, ಬಡವರ ಹೊಟ್ಟೆಯುರಿ, ಕಣ್ಣೀರು, ದುಡಿಮೆಗಾರರ ಬಾಯಿಗೆ ಬೀಳುವ ಮಣ್ಣು - ಇವೆಲ್ಲವೂ ಹಣದ ಹಂಚಿಕೆ ಜಗತ್ತಿನಲ್ಲಿ ಸರಿಯಾಗಿಲ್ಲ ಎಂದು ಕೂಗುತ್ತಿವೆ. ಜಗತ್ತಿನಲ್ಲಿ ಹಣ ಕಡಿಮೆಯಾಗಿಲ್ಲ. ಗುಡಿ, ಮಹಡಿ, ಅಂಗಡಿಗಳಲ್ಲಿ ಅದರ ಧ್ವನಿ ಕೇಳಿಬರುತ್ತಿದೆ. ಕಾಂಚಾಣಕ್ಕೆ ಕಣ್ಣಿಲ್ಲ ಇದೇ ನಿಜ. ಅಂದರೆ ಕಾಂಚಾಣವುಳ್ಳವರಿಗೆ ಕಣ್ಣು ಬರಬೇಕಾಗಿದೆ. ಈ ಹೊಸ ದೃಷ್ಟಿ ಉದಯವಾಗುವವರೆಗೆ ಕಾಂಚಾಣದ ಕಾಲಿಗೆ ಬೀಳುವವರ ಸಂಖ್ಯೆಯೂ ಕಡಿಮೆಯಾಗುವುದಿಲ್ಲ. ಅದು ತನ್ನ ಕುರುಡುತನದಲ್ಲಿ ತುಳಿಯುವ ಕೃತ್ಯವನ್ನು ನಿಲ್ಲಿಸುವುದಿಲ್ಲ."


October 15, 2020 at 10:39 PM                                                                      

37 comments:

Badarinath Palavalli said...

ಬೇಂದ್ರೆ ಅಜ್ಜನ ಕವನಗಳಲ್ಲೇ ನನಗೆ ಅತ್ಯಂತ ಮಾರ್ಮಿಕ ಕವನ ಎನಿಸಿದ ಕವನವಿದು.

’ಬಾಣಂತಿಯೆಲುಬ ಸಾ-
ಬಾಣದ ಬಿಳುಪಿನಾ
ಕಾಣದ ಕಿರುಗೆಜ್ಜೆ ಕಾಲಾಗ ಇತ್ತೋ;’

ಈ ಸಾಲುಗಳನ್ನು ಅರ್ಥಮಾಡಿಕೊಳ್ಳು ತುಂಬ ಹೆಣಗಾಡಿದ್ದೆ. ಇವುಗಳ ಹಿಂದೆ ಇಷ್ಟೆಲ್ಲ ವಿವಿದಾರ್ಥಗಳನ್ನು ಹೊಮ್ಮಿಸಿದ್ದಾರೆ ಎನ್ನುವುದು ಕವಿಯ ಗ್ರಹಿಕೆಯ ಅಗಾಧತೆಗೆ ಒಂದು ಉದಾಹರಣೆ.

ಕವನದ ಕಾಲಕ್ಕೂ ಇಂದಿನ ರಾಜಕೀಯ ವ್ಯವಸ್ಥೆಗೂ ಅಂತಹ ಅಜಗಜಾಂರವೇನೂ ನನಗೆ ಗೋಚರಿಸುವುದಿಲ್ಲ. ಎಂದಾದರೊಂದು ದಿನ ನಮ್ಮ ’ ಬಡಬಾsನಲದಲ್ಲಿ’ ಬೇಯುವ ಅಸಹನೆಯು ’ ಸುಡು ಸುಡು ಪಂಜು’ಗೆ ದಾರಿಯಾದರೆ ಅಚ್ಚರಿಯೇ ಇಲ್ಲ!

ಹಣದ ಕುಣಿತದ ಕುಣಿತದ ಸರ್ವ ವ್ಯಾಪಿತ್ವವು ಮತ್ತು ಅದನ್ನು ಕವಿ ಚಿತ್ರಿಸುವ ಪರಿಯು ಸಾದೃಶ.

ಕವಿತೆಯ ಆತ್ಮವನ್ನು ಬಿಡಿಸಿಡುತ್ತಾ ಕಾಂಚಾಣ ಮತ್ತು ಜೋಗತಿಯರನ್ನು ಪಾತ್ರಗಳನಾಗಿಸಿದ ಮನೋಜಌ ಕವಿತೆ.

ಶಿವಪ್ರಕಾಶ್ said...

ಅಬ್ಬಾ... ಅದೆಸ್ಟು ಅರ್ಥ ಅಡಗಿದೆ ಈ ಕವನದಲ್ಲಿ.... !!!!
ನನಗೆ ದಿನದಿನಕ್ಕ ಬೇಂದ್ರೆ ಅಜ್ಜನ ಮೇಲೆ ಅಭಿಮಾನ ಜಾಸ್ತಿ ಆಗ್ತಾನೆ ಇದೆ. (ಅದಕ್ಕೆ ನೀವೂ ಕೂಡ ಕಾರಣಬೂತರು :) )
ಥ್ಯಾಂಕ್ ಯು ಸರ್ :)

sunaath said...

ಬದರಿನಾಥರೆ,
ಬೇಂದ್ರೆಯವರು ಸ್ವತಃ ‘ಬಡಬಾನಲ’ದಲ್ಲಿ ಬೆಂದವರು. ಅವರ ವೈಯಕ್ತಿಕ ಹಾಗು ಸಾರ್ವಜನಿಕ ವ್ಯಥೆಯೇ ಈ ಕವನದಲ್ಲಿ ವ್ಯಕ್ತವಾಗಿದೆ ಎನ್ನಬಹುದು.

sunaath said...

ಶಿವಪ್ರಕಾಶರೆ,
ಈ ಕವನದ ವ್ಯಾಖ್ಯಾನಕ್ಕೆ ನೀವೇ ಕಾರಣೀಭೂತರು. ನಾನು ನಿಮಗೇ ಧನ್ಯವಾದಗಳನ್ನು ಹೇಳಬೇಕು.

ಮಂಜುಳಾದೇವಿ said...

ಕುರುಡು ಕಾಂಚಾಣದ ಕುಣಿತವನ್ನು ಜೋಗತಿ ಉನ್ಮಾದದ ಕುಣಿತಕ್ಕೆ ಹೋಲಿಸಿ, ಅರ್ಥಪೂರ್ಣ ಕವನ ಬರೆದ ಬೇಂದ್ರೆಯವರಿಗೂ ಮತ್ತು ಈ ಕವನದಲ್ಲಿರುವ ಒಳಾರ್ಥಗಳನ್ನು ಬಿಡಿಸಿಕೊಟ್ಟ ನಿಮಗೂ ಅನಂತ ಧನ್ಯವಾದಗಳು ಸಾರ್....!!

sunaath said...

ಮಂಜುಳಾದೇವಿಯವರೆ,
ಬೇಂದ್ರೆಯವರ ಕವನಗಳು ಅನೇಕ ಒಳಾರ್ಥಗಳಿಂದ ಕೂಡಿರುತ್ತವೆ. ಅವನ್ನು ಅರ್ಥ ಮಾಡಿಕೊಳ್ಳುವದೇ ಒಂದು ಸಂತೋಷ!

Subrahmanya said...

ಮತ್ತೊಂದು ರಸದೌತಣವನ್ನು ಬಡಿಸಿದ್ದಕ್ಕೆ ಅನೇಕ ಧನ್ಯವಾದಗಳು .

sunaath said...

ಸುಬ್ರಹ್ಮಣ್ಯರೆ,
ರಸಧಾರೆಯ ನಿಮ್ಮ ವಿವೇಕಚೂಡಾಮಣಿ ವ್ಯಾಖ್ಯಾನದ ಮರುಪ್ರಾರಂಭಕ್ಕಾಗಿ ನಾನು ನಿಮಗೆ ಧನ್ಯವಾದಗಳನ್ನು ಹೇಳಬೇಕು!

ಅಪ್ಪ-ಅಮ್ಮ(Appa-Amma) said...

ಸುನಾಥ್ ಖಾಖಾ,

ಬೇಂದ್ರೆ ಅಜ್ಜ ೧೯೩೮ ರಲ್ಲಿ ಕುರುಡು ಕಾಂಚಣದ ಬಗ್ಗೆ ಬರೆದಿದ್ದು ಈಗಲೂ ಪ್ರಸ್ತುತ.
ಮತ್ತೊಂದು ಆಳವಾದ ವ್ಯಾಖ್ಯಾನ ಕ್ಕೆ ನಿಮಗೆ ಒಂದು ಶರಣು

sunaath said...

ಅಮ್ಮ-ಅಪ್ಪ,
ಧನ್ಯವಾದಗಳು, ಶರಣು, ಶರಣು!

Anil Talikoti said...

ಮೇಲು ನೋಟಕ್ಕೆ ಸರಳವೆನಿಸುವ ಈ ಬೇಂದ್ರೆ ಕವನಗಳು - ಕರಡಿ ಕುಣಿತದ ಕರ್ಕಶದಷ್ಟೆ ಕಾಂಚಾಣದ ಕುಣಿತವೂ. ಶೋಷಣೆ ಇದರ common ಕಾಂಪೊನಂಟು. ನನಗೇನೋ ಅಲ್ಲಿಯ ಕರಡಿಯೇ ಇಲ್ಲಿಯ ಕಾಂಚಾಣವೇನೋ ಅನಿಸುವಷ್ಟು ಧೂರ್ತ ಮನುಷ್ಯ ಇದನ್ನು ಕುಣಿಸಿದ್ದಾನೆ ಅನಿಸುತ್ತದೆ.

ಮನಸು said...

ಶಾಲಾ ದಿನಗಳಲ್ಲಿ ಈ ಹಾಡಿಗೆ ನಾವು ನೃತ್ಯ ಮಾಡಿದ್ದೆವು. ಜೊತೆಗೆ ನನ್ನಪ್ಪನ ಅಚ್ಚುಮೆಚ್ಚಿನ ಕವನ ಸದಾ ಇದರ ಅರ್ಥವನ್ನು ತಿಳಿಸುತ್ತಲೇ ಇದ್ದರು.

sunaath said...

ಅನಿಲರೆ,
ಕರಡಿಯನ್ನು, ಕವಲೆತ್ತನ್ನು, ಮಂಗನನ್ನು ಕುಣಿಸುವವನೇ ಈ ಕಾಂಚಾಣವನ್ನೂ ಕುಣಿಸುತ್ತಿದ್ದಾನೆ. ಆದರೆ ಒಂದು ವ್ಯತ್ಯಾಸವೆಂದರೆ, ಆ ಕಾಂಚಾಣವು ಈ ಮನುಷ್ಯನನ್ನು ಮರಳಿ ಕುಣಿಸುತ್ತಿದೆ!

sunaath said...

ಮನಸು,
ಬೇಂದ್ರೆ ಹಾಡಿಗೆ ಹೆಜ್ಜೆ ಹಾಕಿದ ನಿಮಗೆ ಅಭಿನಂದನೆಗಳು.

ಜಲನಯನ said...

ಸುನಾಥಣ್ಣ ಈ ಹಾಡನ್ನು ಹಲವಾರು ಕಡೆ ಕೇಳಿದ್ದೇವೆ. ಅಶ್ವಥ್ ರವರ ಕಂಚಿನ ಕಂಠದಲ್ಲೂ ಇದನ್ನ ಕೇಳಿದ್ದೇನೆ.
ಆದರೆ ಇದರ ವಿವಿಧ ಆಯಾಮಗಳ ಹಲಸು ಬಿಚ್ಚಿಡುವ ನಿಮ್ಮ ಈ ಲೇಖನದ ನಂತರ ಇನ್ನಷ್ಟು ತಿಳಿಯಾಯ್ತು ಈ ಗುತ್ಥಿ.ಧನ್ಯವಾದ ಸುನಾಥಣ್ಣ

sunaath said...

ಜಲನಯನ,
ಬೇಂದ್ರೆಯವರ ಕವನಗಳ ವೈಶಿಷ್ಟ್ಯವೇ ಇದು!

ಅವೀನ್ said...

ಬಹುಶಃ ವರಕವಿಯಂತಹ ಮಹಾಕವಿಯ ಕಣ್ಣ ಹಾಯಿಗೋಲು ನಿಲುಕಲು ಸುನಾಥರಂತಹವರ ಬೆಂಬಲ ನಮ್ಮಂತವರಿಗೆ ಅದರಲ್ಲೂ ನನ್ನಂಥವರಿಗೆ ಬೇಕೇ ಬೇಕು!!

sunaath said...

ಅವೀನರೆ,
ಅಂಬಿಕಾತನಯದತ್ತರ ಕಾವ್ಯವನ್ನು ಸ್ವಲ್ಪವಾದರೂ ವ್ಯಾಖ್ಯಾನಿಸಲು ನನಗೆ ಸಾಧ್ಯವಾಗಿದ್ದರೆ, ಅದು ನಿಮಗೆ ಹರ್ಷವನ್ನು ತಂದಿದ್ದರೆ, ನಾನು ಧನ್ಯ!

Unknown said...

EE haadannu adeshto baari kelisi kondiddene!! Aadare ishtondu artha idaralli adagidddu eegale tiliyitu nodi!! Dhanyavaada!!

sunaath said...

Ravikant,
Thank you too.

ಚಿನ್ಮಯ ಭಟ್ said...

ಧನ್ಯವಾದ ಸುನಾಥ ಕಾಕಾ...ಹೈಸ್ಕೂಲಿನಲ್ಲಿ ಹಾಡಿಗೊತ್ತಿತ್ತು :)..ಮೇಲಿಂದ ಮೇಲೆ ಅರ್ಥಗೊತ್ತಾಗಿತ್ತು ಅಷ್ಟೇ..ಧನ್ಯವಾದಗಳು ಪ್ರತಿಸಾಲನ್ನೂ ಹೇಳಿಕೊಟ್ಟಿದ್ದಕ್ಕೆ :)

sunaath said...

ಚಿನ್ಮಯ,
ನಿಮಗೂ ಧನ್ಯವಾದಗಳು.

Shree nidhi said...

ನಮಸ್ಕಾರ,
ನಾನು ನಿಮ್ಮ ಈ ವಿವರಣೆಯನ್ನು ನನ್ನ ಸ್ನೇಹಿತರ ಜೊತೆ ಹಂಚಿಕೊಂಡಾಗ ಅವರು ಕಾಂಚಾಣ ಜೋಗತಿಯ ಕಲ್ಪನೆ ಬೇಂದ್ರೆಯವರದ್ದೇ ಅಥವಾ ವ್ಯಾಖ್ಯಾನಕಾರರದ್ದೇ ಅನ್ನೋ ಪ್ರಶ್ನೆ ಕೇಳಿದರು, ಅಂದರೆ ಕುರುಡು ಕಾಂಚಾಣವೇ ಮಾನವ ರೂಪತಾಳಿ ಕುಣಿಯುತ್ತಿದೆ, ಜೋಗತಿಯಲ್ಲ ಎಂಬುದು ಅವರ ವಾದ.
ಯಾವುದು ಸರಿ ತಿಳಿಸಲು ಸಾಧ್ಯವೇ?

sunaath said...

ಸ್ಪಂದನಕ್ಕಾಗಿ ಧನ್ಯವಾದಗಳು, ಶ್ರೀನಿಧಿ.
ಇನ್ನು ಈ ಕವನದ ಬಗೆಗೆ ಹೇಳುವುದಾದರೆ: ಸವದತ್ತಿಯ ಎಲ್ಲಮ್ಮನಿಗೆ ಭಕ್ತರು ಅನೇಕ, ಜೋಗತಿಯರೂ ಸಹ ಅಸಂಖ್ಯ! ಈ ಜೋಗತಿಯರು ಕೊರಳಲ್ಲಿ ಕವಡೆಗಳ ಮಾಲೆಯನ್ನು ಹಾಕಿಕೊಂಡಿರುತ್ತಾರೆ, ಪಾದಗಳಲ್ಲಿ ಗೆಜ್ಜೆಗಳನ್ನು ಕಟ್ಟಿಕೊಂಡಿರುತ್ತಾರೆ. ಎಲ್ಲಮ್ಮನ ಗುಡ್ಡದಲ್ಲಿ ಉಧೋ, ಉಧೋ ಎಂದು ಕುಣಿಯುತ್ತ, ಅಲ್ಲಿ ಬಂದಂತಹ ಭಕ್ತರ ಹಣೆಗಳಿಗೆ ಭಂಡಾರ (= ದೇವಿಯ ಅರಿಶಿಣ) ಹಚ್ಚುತ್ತ, ತನ್ಮೂಲಕ ಹೊಟ್ಟೆಪಾಡನ್ನು ಸಾಗಿಸುತ್ತಾರೆ. ಪ್ರಾಯದ ಜೋಗತಿಯರು ದೇವಿಯ ಹೆಸರಿನಲ್ಲಿ ವೇಶ್ಯಾವೃತ್ತಿಗೆ ದೂಡಲ್ಪಟ್ಟಿರುತ್ತಾರೆ. ವಯಸ್ಸಾದವರು ಎಲ್ಲಮ್ಮನ ಹೆಸರಿನಲ್ಲಿ ಭಿಕ್ಷಾಟನೆ ಮಾಡುತ್ತಿರುತ್ತಾರೆ. ಅದುದರಿಂದಲೇ ‘ಸೂಳೆ ಮುಪ್ಪಾಗಿ ಜೋಗತಿಯಾದಳು’ ಎನ್ನುವ ಗಾದೆಮಾತು ಹುಟ್ಟಿರುವುದು. ಇದೆಲ್ಲ ನಿಮಗೆ ಗೊತ್ತಿದ್ದದ್ದೇ. ಇಂತಹ ದೃಶ್ಯಗಳನ್ನು ನೋಡಿದಾಗಲೇ ಬೇಂದ್ರೆಯವರಿಗೆ ‘ಕುರುಡು ಕಾಂಚಾಣಾ’ದ ಸ್ಫುರಣೆಯಾಗಿರಬೇಕು. ಕುರುಡು ಕಾಂಚಾಣಾದ ತೊಡುಗೆಗಳು ಜೋಗತಿಯ ತೊಡುಗೆಯಂತೆಯೇ ಇವೆ, ಆದರೆ ಇನ್ನೂ ಭೀಕರವಾಗಿವೆ. ಇವರಿಬ್ಬರ ವ್ಯವಹಾರದ ರೀತಿ, ರಿವಾಜುಗಳು ಸಹ ಒಂದೇ ಆಗಿವೆ. ಇನ್ನು ಎಳೆಯ ಜೋಗತಿ ಸೂಳೆಯಾದಂತೆ, ಕುರುಡು ಕಾಂಚಾಣಾ ಸಹ ನಾಚವಾಲಿ ಆಗಿದ್ದಾಳೆ. ದೇವಿಯ ಹೆಸರಿನಲ್ಲಿ ಭಕ್ತರ ಶೋಷಣೆ ನಡೆಯುವಂತೆಯೇ, ಹಣ-ದೇವತೆಯ ಗುಡಿಯಲ್ಲಿ ಬಡವರ ಶೋಷಣೆ ನಡೆಯುತ್ತಿದೆ.

ಬೇಂದ್ರೆಯವರು ಉದ್ದೇಶಪೂರ್ವಕವಾಗಿಯೇ ಕಾಂಚಾಣವನ್ನು ಎಲ್ಲಮ್ಮನ ಜೋಗತಿಯ ಜೊತೆಗೆ ಹೋಲಿಸಿ ಕವನ ಬರೆದಿದ್ದಾರೆ. ಇನ್ನು ಕಾಂಚಾಣವು ಮಾನವರೂಪ ತಳೆಯುವ ಅವಶ್ಯಕತೆಯೇ ಇಲ್ಲ. ಈ ಕವನದಲ್ಲಿ ಇದ್ದದ್ದು ಕೇವಲ ರೂಪಕ.

Unknown said...

ತುಂಬಾ ಉಪಯುಕ್ತ ಮಾಹಿತಿ

shrinudi said...

ಆದರೆ ಸ್ವತಃ ಬೇಂದ್ರೆಯವರೇ ಕವಿತೆಯ ಭಾವ ಸಂದರ್ಭದಲ್ಲಿ ಕುರುಡು ಕಾಂಚಾಣದ ಕುಣಿತವನ್ನು ಮಹಾಲಕ್ಷ್ಮಿಯ ಉಪಾಸಕರಾದ ಗೊಂದಲಿಗರ ಕುಣಿತ ಎಂದು ಉಲ್ಲೇಖಿಸಿದ್ದಾರೆ.
"ಮಹಾಲಕ್ಷ್ಮಿಯ ಉಪಾಸಕರು ಎನಿಸಿಕೊಳ್ಳುವ ಗೊಂದಲಿಗರು ಬಡವರಿಂದಲೂ ಒಂದು ಕಾಸನ್ನು ಕೊಸರಿಕೊಳ್ಳಲು ಹೆಣಗುತ್ತಾರೆ; ಕುಣಿಯುತ್ತಾರೆ. ಬಾಣಂತಿಯರ ಸಾವು, ಚಿಕ್ಕ ಮಕ್ಕಳ ಬಲಿ, ಬಡವರ ಹೊಟ್ಟೆಯುರಿ, ಕಣ್ಣೀರು, ದುಡಿಮೆಗಾರರ ಬಾಯಿಗೆ ಬೀಳುವ ಮಣ್ಣು - ಇವೆಲ್ಲವೂ ಹಣದ ಹಂಚಿಕೆ ಜಗತ್ತಿನಲ್ಲಿ ಸರಿಯಾಗಿಲ್ಲ ಎಂದು ಕೂಗುತ್ತಿವೆ. ಜಗತ್ತಿನಲ್ಲಿ ಹಣ ಕಡಿಮೆಯಾಗಿಲ್ಲ. ಗುಡಿ, ಮಹಡಿ, ಅಂಗಡಿಗಳಲ್ಲಿ ಅದರ ಧ್ವನಿ ಕೇಳಿಬರುತ್ತಿದೆ. ಕಾಂಚಾಣಕ್ಕೆ ಕಣ್ಣಿಲ್ಲ ಇದೇ ನಿಜ. ಅಂದರೆ ಕಾಂಚಾಣವುಳ್ಳವರಿಗೆ ಕಣ್ಣು ಬರಬೇಕಾಗಿದೆ. ಈ ಹೊಸ ದೃಷ್ಟಿ ಉದಯವಾಗುವವರೆಗೆ ಕಾಂಚಾಣದ ಕಾಲಿಗೆ ಬೀಳುವವರ ಸಂಖ್ಯೆಯೂ ಕಡಿಮೆಯಾಗುವುದಿಲ್ಲ. ಅದು ತನ್ನ ಕುರುಡುತನದಲ್ಲಿ ತುಳಿಯುವ ಕೃತ್ಯವನ್ನು ನಿಲ್ಲಿಸುವುದಿಲ್ಲ."

sunaath said...

ಶ್ರೀನುಡಿಯವರೆ, ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಲೇಖನದ ಕೊನೆಯಲ್ಲಿ ನಿಮ್ಮ ಪ್ರತಿಕ್ರಿಯೆಯನ್ನು ಇದೀಗ ಸೇರಿಸಿದ್ದೇನೆ.

Unknown said...

ತುಂಬಾ ಚೆನ್ನಾಗಿದೆ !!! I was just mesmerizing!! Tq for this 🙏 i was happy this one...tq sir

sunaath said...

ಧನ್ಯವಾದಗಳು,Unknownರೆ!

Unknown said...

Very meaningful

Unknown said...

Thank u soo much sir. It's gotten easy to understand the meaning of this beautiful poem because of your help. In really thankful for your help sir.🤩☺️

Unknown said...

ನಮ್ಮ ಕನ್ನಡ ಉಪನ್ಯಾಸಕರು ಈ ಕವನದ ಸಾರಾಂಶವನ್ನು ಬರೆಯಲು ಹೇಳಿದರು. ಆಗ ನಿಮ್ಮ ಈ ವ್ಯಾಖ್ಯಾನ ಸಹಾಯಕವಾಯಿತು. ತುಂಬಾ ಅರ್ಥಪೂರ್ಣವಾಗಿದೆ.ನಿಮಗೆ ತುಂಬಾ ಧನ್ಯವಾದಗಳು ಸರ್.

sunaath said...

ಖುಶಿಯಾಗುತ್ತಿದೆ, Unknownರೆ!

ರವಿ ವರೂರ said...

ಅತ್ಯದ್ಭುತ

sunaath said...

ಧನ್ಯವಾದಗಳು, ರವಿಯವರೆ!

R Vittal Kiran said...

Great Explanation of the Song! Almost Complete!!

sunaath said...

Thank you, Vittal Kiran!