Wednesday, October 29, 2014

ಸಾಹಿತ್ಯಸುಖ -೧


ಚಾಮರಸ ಕವಿ ರಚಿಸಿದ ‘ಪ್ರಭುಲಿಂಗಲೀಲೆ’ಯ ನಾಯಕಿ ಮಾಯಾದೇವಿ.  ಚಾಮರಸನು ಮಾಯಾದೇವಿಯ ಬಾಲ್ಯವನ್ನು ವರ್ಣಿಸುವ ಒಂದು ನುಡಿ ಹೀಗಿದೆ:
ಹಿಡಿಹಿಡಿದುಕೊಂಡರ್ತಿಯಲಿ
ಬೆಂಬಿಡದೆ ಶಿಕ್ಷಾಚಾರ್ಯತನದಲಿ
ಜಡಿದು ಜಂಕಿಸಿ ಮುದ್ದುತನ ಮಿಗೆ ಮಾಯೆ ತನ್ನಂತೆ
ನಡೆಯ ಕಲಿಸಿದಳಂಚೆವಿಂಡಿಗೆ
ನುಡಿಯಕಲಿಸಿದರಗಿಳಿಗೆ
ಸರವಿಡಲು ಕಲಿಸಿದಳಾಕೆ ತನ್ನರಮನೆಯ ಕೋಗಿಲೆಗೆ

ಮಾಯಾದೇವಿಯು ತನ್ನ ಅರಮನೆಯ ಪಕ್ಷಿಗಳಿಗೆ ಮುದ್ದು ಮಾಡುತ್ತ, ಹಂಸಗಳಿಗೆ ನಡೆಯುವದನ್ನು, ಗಿಳಿಗೆ ನುಡಿಯುವದನ್ನು ಹಾಗು ನವಿಲುಗಳಿಗೆ ಹಾಡುವದನ್ನು ಕಲಿಸುತ್ತಾಳೆ. ಇದಿಷ್ಟು ಈ ನುಡಿಯ ಮೇಲುಮೇಲಿನ ಅರ್ಥ. ಆದರೆ ಈ ಸಾಲುಗಳ ಒಳಗೆ ಅಡಗಿರುವ ಭಾವ ಏನೆಂದು ಹೇಳುತ್ತದೆ? ನಾನು ಹನ್ನೊಂದನೆಯ ಇಯತ್ತೆಯಲ್ಲಿ ಕಲಿಯುತ್ತಿರುವಾಗ (ಆ ಕಾಲದಲ್ಲಿ ಅದು ಎಸ್.ಎಸ್.ಸಿ.) ನಮ್ಮ ಕನ್ನಡ ಗುರುಗಳಾದ ಶ್ರೀ ಹೋಳಿಕಟ್ಟಿಯವರು ಮೆಲುದನಿಯಲ್ಲಿ ಉಸುರಿದ ಭಾವಾರ್ಥ ನನ್ನ ಕಿವಿಯಲ್ಲಿ ಇನ್ನೂ ಗುನುಗುತ್ತಿದೆ: ‘ಚಾಮರಸನು ಮಾಯಾದೇವಿಯ onset of teenageಅನ್ನು ಸೂಚಿಸುತ್ತಿದ್ದಾನೆ.’

ಈ ಅಪ್ರತ್ಯಕ್ಷ ಭಾವವನ್ನು, ಈ ಸೂಚ್ಯಾರ್ಥವನ್ನು ನಾವು ಒಳ್ಳೆಯ ಸಾಹಿತ್ಯದ ಲಕ್ಷಣ ಎಂದು ಕರೆಯಬಹುದು. ಇದನ್ನೆ ಕೆಲವು ಪಂಡಿತರು reading between the lines ಎಂದೂ ಹೇಳುತ್ತಾರೆ. ಈ ಸಾಹಿತ್ಯಕ ಗುಣವನ್ನು ನಾವು ನಮ್ಮ ಜಾನಪದ ಸಾಹಿತ್ಯದಲ್ಲಿಯೂ ಹೇರಳವಾಗಿ ನೋಡಬಹುದು. ಒಂದು ಉದಾಹರಣೆ ಎಂದರೆ ‘ಗೋವಿನ ಹಾಡು’.

ಪುಣ್ಯಕೋಟಿ ಗೋವು ಹುಲಿಗೆ ‘ಮರಳಿ ಬರುವೆ’ ಎಂದು ಮಾತು ಕೊಟ್ಟಿದೆ. ಆ ಮೇರೆಗೆ ತನ್ನ ಕರುವಿಗೆ ಕೊನೆಯ ಸಲ ಹಾಲು ಕುಡಿಸಿ, ತಾನು ಹೆಬ್ಬುಲಿ ಇದ್ದಲ್ಲಿಗೆ ಹಿಂದಿರುಗಬೇಕು. ತನ್ನ ಕಂದ ತಬ್ಬಲಿಯಾಗುತ್ತದೆ ಎನ್ನುವ ದುಃಖದ ಜೊತೆಗೆ, ತನ್ನ ಸೋದರಿ ಗೋವುಗಳು ತನ್ನ ಕಂದನಿಗೆ ಮಮತೆಯನ್ನು ತೋರಿಸುವದಿಲ್ಲ ಎನ್ನುವ ಒಳದೋಟಿ ಅದಕ್ಕಿದೆ. ಆದರೂ ಸಹ ತನ್ನ ಸೋದರಿಯರಿಗೆ ಅದು ಪ್ರಾರ್ಥಿಸುತ್ತದೆ:
ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ಈ ನುಡಿಯ ಮೊದಲೆರಡು ಸಾಲುಗಳ ಕ್ರಮಬದ್ಧತೆಯನ್ನು ಗುರುತಿಸಿರಿ. ತನ್ನ ತಾಯಿಯನ್ನು ಕಳೆದುಕೊಂಡ ಕರುವು, ಇತರ ತಾಯಂದಿರಿಂದ ಅಕ್ಕರೆಯನ್ನು ಪಡೆಯಲು, ಮೊದಲು ಹೋಗುವುದು ಅವುಗಳ ಮುಖಭಾಗದ ಕಡೆಗೆ ತಾನೆ? ಆ ಆವುಗಳು ಈ ಕರುವನ್ನು ಕೋಡುಗಳಿಂದ ದೂರ ಸರಿಸುತ್ತವೆ. ಮುಖಭಂಗದಿಂದ ತ್ರಸ್ತವಾದ ಕರುವು, ‘ಹೋಗಲಿ, ನಾನು ಹಿಂಭಾಗದಲ್ಲಿ ನಿಲ್ಲುವೆ‘ ಎಂದುಕೊಂಡು ಹಿಂದೆ ಹೋದರೆ, ಆ ಆವುಗಳು, ‘ಛೇ! ದೂರ ಸರಿ; ನಿನಗೆ ನಮ್ಮ ಹತ್ತಿರ ಸ್ಥಳವಿಲ್ಲ’ ಎನ್ನುತ್ತ ಒದೆಯುತ್ತವೆ. ಈ ಕಠೋರ ಸತ್ಯದ ಅರಿವು ಪುಣ್ಯಕೋಟಿಗೆ ಇದೆ. ಆದುದರಿಂದಲೇ ಅದು ಆ ಕ್ರಮದಲ್ಲಿಯೇ ತನ್ನ ಪ್ರಾರ್ಥನೆಯನ್ನು ಮಾಡುತ್ತದೆ.

‘ಗೋವಿನ ಹಾಡ’ನ್ನು ರಚಿಸಿದ ನಮ್ಮ ಜಾನಪದ ಕವಿಗೆ ಈ ಸೂಕ್ಷ್ಮತೆಯ ಅರಿವಿದೆ. ಆದುದರಿಂದಲೇ ಆತನು ಪುಣ್ಯಕೋಟಿಯ ತಳಮಳವನ್ನು  ಕ್ರಮಬದ್ಧ ಪ್ರಾರ್ಥನೆಯ ಮೂಲಕ ಚಿತ್ರಿಸಿದ್ದಾನೆ. ಈ ವಾಸ್ತವತೆಯನ್ನು ಪುಣ್ಯಕೋಟಿಯ ಕರುವೂ ಸಹ ಊಹಿಸಿರುತ್ತದೆ. ಆದುದರಿಂದಲೇ, ‘ಅಮ್ಮ, ನೀನು ಹೋಗಲೇಕೌ; ನನ್ನ ತಬ್ಬಲಿ ಮಾಡಲೇಕೌ?’ ಎಂದು ಕರುವು ತನ್ನ ಅಮ್ಮನನ್ನು ಆರ್ತವಾಗಿ ಕೇಳುತ್ತದೆ. ಆಗ ಪುಣ್ಯಕೋಟಿಯು ಭಾರತೀಯ ತತ್ವಜ್ಞಾನದ ಚಿರಂತನ ಆದರ್ಶವನ್ನು ತನ್ನ ಕರುವಿಗೆ ಹೇಳುತ್ತದೆ:
ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು’.
ಈ ರೀತಿಯಾಗಿ ಗಂಭೀರ ಘೋಷಣೆಯನ್ನು ಮಾಡಿದ ಪುಣ್ಯಕೋಟಿಯು, ‘ಇಬ್ಬರಾ ಋಣ ತೀರಿತೆಂದು ತಬ್ಬಿಕೊಂಡಿತು ಕಂದನಾ.’
ಭಾರತೀಯ ತತ್ವಜ್ಞಾನವು ವೇದೋಪನಿಷತ್ತುಗಳಲ್ಲಿ ಮಾತ್ರ ಅಡಕವಾಗಿಲ್ಲ. ಅದು ಭಾರತದ ಸಾಧಾರಣ ಜನಪದರ ರಕ್ತದಲ್ಲಿ ಹರಿಯುತ್ತಿದೆ.

ನಮ್ಮ ಜಾನಪದ ಕವಿಗಳು ಸಾಹಿತ್ಯದ ಈ ಸೂಕ್ಷ್ಮತೆಯನ್ನು ಶ್ಲೇಷೆಯ ಮೂಲಕವೂ ಸಾಧಿಸಿದ್ದಾರೆ. ಈಗ ತಾನೆ ಮಗುವನ್ನು ಹೆತ್ತ ತಾಯಿಯು ತನ್ನ ಕಂದನಿಗೆ ಹೇಳುವ ತ್ರಿಪದಿಯ ಸಾಲೊಂದನ್ನು ಗಮನಿಸಿರಿ:
ಮಗ ನಿನ್ನ ಹಡೆವಾಗ ಮುಗಿಲಿಗೇರ್ಯಾವ ಜೀವ!

 ಜೀವ ಮುಗಿಲಿಗೇರಿವೆ ಎಂದರೆ ಹೆರಿಗೆಯ ಶೂಲೆ ಮಾರಣಾಂತಿಕವಾಗಿತ್ತು ಎನ್ನುವ ಅರ್ಥವನ್ನು ಕೊಡುವುದರ ಜೊತೆಗೇ, ಹೆತ್ತ ನಂತರದ ಆನಂದವು ಮುಗಿಲು ಮುಟ್ಟಿತ್ತು ಎಂದೂ ಸೂಚಿಸುತ್ತದೆ. ಈ ರೀತಿಯಾಗಿ agony and ecstacyಯನ್ನು ಒಂದೇ ಸಾಲಿನಲ್ಲಿ ತಂದ ನಮ್ಮ ಜಾನಪದ ಕವಯಿತ್ರಿ ಯಾವ ಕವಿರಾಜನಿಗೆ ಕಡಿಮೆ? ಈ ಕಾರಣಕ್ಕಾಗಿಯೇ ನೃಪತುಂಗ ಚಕ್ರವರ್ತಿಯು ಕನ್ನಡಿಗರನ್ನು ‘ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್’ ಎಂದು ಮನಸಾರೆ ಹೊಗಳಿದ್ದು!

ಎರಡೆರಡು ಭಾವಗಳನ್ನು ಸೂಚಿಸಲು ಶ್ಲೇಷೆಯ ಸಹಾಯವೇ ಬೇಕಂತಿಲ್ಲ. ರೂಪಕಗಳ ಮೂಲಕವೂ ಇದನ್ನು ಹೇಳಬಹುದು. ತನ್ನ ಮಗ ಸಂಗನಬಸವಣ್ಣ ಸತ್ತಾಗ, ಬಸವಣ್ಣನವರು ವಿಲಪಿಸಿದ ರೀತಿಯನ್ನು ನೋಡಿರಿ:
ಪಕ್ವವಾದ ಫಲವಿರಲು ಕಸುಕಾಯನೆತ್ತಿಕೊಂಡನು ಶಿವನು.

ಜೀವನದ ಸಂಧ್ಯೆಯಲ್ಲಿರುವ ತಾನು ಸಾಯಬಹುದಾಗಿತ್ತು; ಬದುಕಿನ ಮುಂಬೆಳಗಿನಲ್ಲಿರುವ ತನ್ನ ಮಗ ಉಳಿಯಬೇಕಾಗಿತ್ತು ಎನ್ನುವ ಶೋಕ ಒಂದು ಕಡೆ; ಇದು ದೈವೇಚ್ಛೆ ಎನ್ನುವ ತಿಳಿವಿನ ಶರಣಾಗತ ಭಾವ ಇನ್ನೊಂದು ಕಡೆ;  anguish and resignation to divine will ಈ ಎರಡೂ ಭಾವಗಳನ್ನು, ಈ ಒಂದೇ ಸಾಲು ಸಮರ್ಥವಾಗಿ ಸೂಚಿಸುತ್ತದೆ.

ಇಂತಹ ಒಂದೇ ಸಾಲಿನ ಮತ್ತೊಂದು ಉದಾಹರಣೆಗಾಗಿ, ಮಸಳಿ ಎನ್ನುವ ಕವಿಗಳು ಬರೆದ ಕವನದ ಈ ಸಾಲನ್ನು ನೋಡಬಹುದು:
ಶಿವ ಬರೆದ ಕಥೆಯ ಪುಟವೊಂದು ತೆರೆದು ನನ್ನ ಮನೆ ಮೂಡಲಲಿ ಬೆಳಕಾಯಿತು
ಸೂರ್ಯೋದಯದ ವರ್ಣನೆ ಇದು. ಆದರೆ ಈ ಸಾಲಿನಲ್ಲಿ ಅದಕ್ಕೂ ಹೆಚ್ಚಿನ ಭಾವವಿದೆ. ಈ ಬಾಳು ಎನ್ನುವುದು ದೈವ ಬರೆದ, ಪೂರ್ವರಚಿತ ಕತೆ ಎನ್ನುವ ನಂಬಿಕೆ, ಈ ಕತೆಯು ಯಾವಾಗಲೂ ಮಂಗಲಕರವಾಗಿ ಇರುತ್ತದೆ ಎನ್ನುವ ಶ್ರದ್ಧೆ, ಈ ದೈವನಿರ್ಣಯವನ್ನು ಸಂತೋಷದಿಂದ ಸ್ವೀಕರಿಸುವ ಮನೋಭಾವ ಇವೆಲ್ಲವೂ ಈ ಒಂದೇ ಸಾಲಿನಲ್ಲಿ ಅಡಕವಾಗಿವೆ.

ಇನ್ನಷ್ಟು ಉದಾಹರಣೆಗಳನ್ನು ನೊಡೋಣ:
ಕನ್ನಡ ಸಾಹಿತ್ಯದ ಮಹಾನ್ ಜೀವಿ ಮಾಸ್ತಿ ವೆಂಕಟೇಶ ಅಯ್ಯಂಗಾರರು ಒಮ್ಮೆ ಕಾಶಿಗೆ ಹೋಗಿದ್ದರು. ಗಂಗಾತೀರದಲ್ಲಿ ಒಬ್ಬ ಮುದುಕ ಗಂಡಸು ತನ್ನ ಮುದುಕಿ ಹೆಂಡತಿಯ ಕೆನ್ನೆಗೆ ಹೊಡೆದದ್ದನ್ನು ಅವರು ನೋಡುತ್ತಾರೆ. ಆ ಘಟನೆ ಒಂದು ಸುನೀತವನ್ನು ರಚಿಸಲು ಅವರಿಗೆ ಪ್ರೇರಣೆ ನೀಡುತ್ತದೆ. ಆ ಸುನೀತದ ಒಂದು ಸಾಲು ಹೀಗಿದೆ:
ಬಹುದೂರ ಕರೆ ತಂದೆ ಎಲೆ ಅಣ್ಣ ಹೊಡೆಯಲಿಕೆ.

ಮಾಸ್ತಿಯವರು ಆ ಮುದುಕ ದಂಪತಿಗಳು ತಮ್ಮ ದೂರದ ಊರಿನಿಂದ ಕಾಶಿಯವರೆಗೆ ಬಂದದ್ದನ್ನಷ್ಟೇ ಹೇಳುತ್ತಿಲ್ಲ. ದೀರ್ಘದಾಂಪತ್ಯಜೀವನದ ಬಹುದೂರವನ್ನು ಈ ದಂಪತಿಗಳು ಜೊತೆಯಾಗಿ ಕ್ರಮಿಸಿದ್ದಾರೆ. ಇದು ಕಾಲದಲ್ಲಿಯ ದೂರವೂ ಅಹುದು. ಇಷ್ಟು ದೀರ್ಘ ಕಾಲ ಜೊತೆಯಾಗಿದ್ದರೂ ಸಹ ಆ ಮುದುಕನು ದಾಂಪತ್ಯದ ಪಕ್ವತೆಯನ್ನು ಪಡೆದಿಲ್ಲ ಎನ್ನುವ ಬೇಸರ ಈ ಸಾಲಿನಲ್ಲಿದೆ. ಈ ರೀತಿಯಾಗಿ ಒಂದಕ್ಕಿಂತ ಹೆಚ್ಚು ಅರ್ಥವನ್ನು ಸೂಚಿಸುವುದು ಉತ್ತಮ ಸಾಹಿತ್ಯದ ಲಕ್ಷಣವಾಗಿದೆ.

ಇನ್ನು ವರಕವಿ ಬೇಂದ್ರೆಯವರ ಕವನಗಳಲ್ಲಿ ಸೂಚ್ಯಾರ್ಥಕ್ಕೆ ಎಲ್ಲಿಯ ಕೊರತೆ?
‘ಬಾರೊ ಸಾಧನಕೇರಿಗೆ’ ಎನ್ನುವ ಅವರ ಕವನದಲ್ಲಿ ‘ಬೇಲಿಗೂ ಹೂಬೆರಳಿದೆ’ ಎನ್ನುವ ಸಾಲೊಂದು ಬರುತ್ತದೆ. ಬೇಂದ್ರೆಯವರ ಕಾಲದಲ್ಲಿ ಬಹುತೇಕ ಮನೆಗಳ ಆವರಣಗಳಿಗೆ ಕಲ್ಲಿನ ಅಥವಾ ಇಟ್ಟಿಗೆಯ ಪ್ರಾಕಾರದ ಬದಲು ಬೇಲಿಯ ಪ್ರಾಕಾರವಿರುತ್ತಿತ್ತು. ಮೊದಲನೆಯದಾಗಿ ಆ ಕಾಲದ ವಾಸ್ತವತೆಯ documentation ಇಲ್ಲಿದೆ. ಆ ಬೇಲಿಗಳ ಹೂವುಗಳು ಸಹಸಾ tubular ಆಕಾರದಲ್ಲಿದ್ದು, ನೋಡಲು ಹೂವುಗಳ ಬೆರಳುಗಳಂತೆ ಕಾಣುತ್ತಿದ್ದವು ಎನ್ನುವ ಉಪಮಾಲಂಕಾರ ಇಲ್ಲಿದೆ. ಇದಲ್ಲದೆ ಮತ್ತೊಂದು ‘ವಿರೋಧಾಲಂಕಾರ’ವೂ ಇಲ್ಲಿದೆ. Job of fence is defense by keeping the intruders out. ಆದರೆ ಈ ಬೇಲಿಯು ಅವರನ್ನು ಹೂಬೆರಳುಗಳಿಂದ ಸ್ವಾಗತಕಾರಿಣಿಯ ಹಾಗೆ ಸ್ವಾಗತಿಸುತ್ತದೆ. ಇದೆಲ್ಲವನ್ನು ಬೇಂದ್ರೆ ಒಂದು ಸಾಲಿನಲ್ಲಿ ಸಾಧಿಸಿದ್ದಾರೆ. ವಿಶೇಷತಃ ‘ವಿರೋಧಾರ್ಥ ಸೂಚನೆ’ ಬೇಂದ್ರೆಯವರಿಗೆ ಪ್ರಿಯವಾದ ಅಲಂಕಾರವಿರಬಹುದು. ಅಂತಹ ಮೂರು ಉದಾಹರಣೆಗಳನ್ನು ನೋಡೋಣ:

(೧) ‘ಬೆಳಗು’ ಇದು ಬೇಂದ್ರೆಯವರ ಪ್ರಸಿದ್ಧ ಕವನವಾಗಿದೆ. ಅದರಲ್ಲಿಯ ಒಂದು ಸಾಲು ಹೀಗಿದೆ:
ಎಲೆಗಳ ಮೇಲೆ ಹೂಗಳ ಒಳಗೆ ಅಮೃತದಾ ಬಿಂದು
ಇಬ್ಬನಿಯ ಹನಿಗಳು ಅಮೃತದ ಬಿಂದುಗಳಂತೆ ದೈವಿಕ ಸುಖವನ್ನು ನೀಡುತ್ತಿದ್ದವು ಎನ್ನುವುದು ಮೇಲ್ನೋಟಕ್ಕೆ ಕಾಣುವ ಅರ್ಥ. ಅಮೃತ ಎಂದರೆ ಶಾಶ್ವತವಾದದ್ದು. ಈ ಇಬ್ಬನಿಗಳಾದರೋ ಕ್ಷಣಿಕವಾದಂತಹವು. ಇದು ಬೇಂದ್ರೆಯವರ ವಿರೋಧಾಲಂಕಾರ!
(೨) ನಲ್ಲ, ನಲ್ಲೆಯರ ಪ್ರಣಯವನ್ನು ವರ್ಣಿಸುವ ಕವನದ ಸಾಲೊಂದು ಹೀಗಿದೆ:
ಅಮೃತಂತ ಬಾಯಿ ಚಪ್ಪರಿಸತಾವ, ಕೇಳಿ ಕಣ್ಣು ಮಿಟುಕತದ ರಾತ್ರಿ’.
ನಲ್ಲ, ನಲ್ಲೆಯರು ತಮ್ಮ ಮುತ್ತುಗಳನ್ನು ಅಮೃತದಷ್ಟು ಸಿಹಿ ಎಂದು ಭಾವಿಸುತ್ತಾರೆ ಹಾಗು ಈ ಪ್ರಣಯಕೇಲಿಯನ್ನು ಕಂಡ ರಾತ್ರಿಯು ಕಣ್ಣು ಮಿಟುಕಿಸುತ್ತದೆ ಎನ್ನುವುದು ಮೇಲ್ನೋಟದ ಅರ್ಥ. ಅಮೃತ ಎಂದರೆ ಶಾಶ್ವತವಾದದ್ದು; ಕಣ್ಣು ಮಿಟಿಕಿಸುವುದು ಎಂದರೆ ಕ್ಷಣಕ್ಕೆ ಸಮಾನ ಕಾಲ ಎನ್ನುವುದು ಇಲ್ಲಿಯ ವಿರೋಧಾರ್ಥ!
(೩) ಬೇಂದ್ರೆಯವರು ಬರೆಯದೆ ಬಿಟ್ಟ ನಾಟಕದಲ್ಲಿ  ತಿರಸ್ಕೃತಳಾದ ಸೂಳೆಯೊಬ್ಬಳು ತನ್ನ ಒಲವಿನ ಗಿರಾಕಿಗಾಗಿ ವಿಲಪಿಸುತ್ತಿರುವ ಹಾಡೇ  ‘ಹುಬ್ಬಳ್ಳಿಯಾಂವಾ’ ಎನ್ನುವ ಕವನ. ಈ ಕವನದಲ್ಲಿ ಬರುವ ಈ ಸಾಲನ್ನು ನೋಡಿರಿ:
ಜಲ್ಮಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ
ಎದಿ ಮ್ಯಾಗಿನ ಗೆಣತಿನ ಮಾಡಿ ಇಟ್ಟುಕೊಂಡಾವಾ
ಎದೆಯ ಮೇಲಿನ ಕೆಂಪು ಅಥವಾ ಕಪ್ಪು ಚುಕ್ಕೆಗೆ ‘ಗೆಳತಿ’ ಎಂದು ಹೇಳುತ್ತಾರೆ.  ‘ಎದಿ ಮೇಲಿನ ಗೆಳತಿ’ ಎಂದರೆ ಅತ್ಯಂತ ಪ್ರೀತಿಯ ಗೆಳತಿ. ಆದರೆ ಇವಳು ಗೆಳತಿಯಲ್ಲ, ಗೆಣತಿ; ಅಂದರೆ ಇಟ್ಟುಕೊಂಡವಳು. ತನ್ನ ಗಿರಾಕಿಯು ತನ್ನನ್ನು ತುಂಬ ಪ್ರೀತಿಸುತ್ತಾನೆ ಎಂದು ಭಾವಿಸುತ್ತಲೆ, ತನಗೆ ಎಂದೂ ಹೆಂಡತಿಯ ಸ್ಥಾನಮಾನ ಸಿಗಲಾರದು ಎನ್ನುವುದು ಇವಳು ತಿಳಿದುಕೊಂಡ ವಾಸ್ತವತೆ. ಇದು ಇಲ್ಲಿಯ ದ್ವಂದ್ವಾರ್ಥ.

ಕನ್ನಡದ ಪ್ರೇಮಕವಿ ಕೆ. ಎಸ್. ನರಸಿಂಹಸ್ವಾಮಿಯವರು ಇಂತಹ ಸೂಚ್ಯಾರ್ಥವನ್ನು ತಮ್ಮ ‘ಬಳೆಗಾರ ಚೆನ್ನಯ್ಯ’ ಕವನದಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ.
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಲಪ್ಪಣೆಯೆ ದೊರೆಯೆ?
ನವಿಲೂರಿನಿಂದ ಮಾತೊಂದ ತಂದಿಹೆನು
ಬಳೆಯ ತೊಡಿಸುವದಕ್ಕಲ್ಲ ನಿಮಗೆ.

 ಈ ನುಡಿಯ ಒಂದೊಂದೇ ಸಾಲನ್ನು ಪರಿಶೀಲಿಸಿರಿ:
ಮೊದಲ ಸಾಲಿನಲ್ಲಿ ಬಳೆಗಾರನು, ತಾನು ಬಾಗಿಲಿನಲ್ಲಿ ಬಂದು ನಿಂತಿರುವೆ ಎಂದು ಕವನದ ನಾಯಕನಿಗೆ ಹೇಳುತ್ತಾನೆ. ನಾಯಕನ ಹೆಂಡತಿ ಇಲ್ಲದಾಗ, ಈ ಮನೆಯಲ್ಲಿ ತನ್ನ ಸಲಿಗೆ ಬಾಗಿಲಿನವರೆಗೆ ಮಾತ್ರ ಎನ್ನುವುದನ್ನು ಈ ಸಾಲು ಸೂಚಿಸುತ್ತದೆ.ಎರಡನೆಯ ಸಾಲಿನಲ್ಲಿ ‘ಒಳಗೆ ಬರಲಪ್ಪಣೆಯೆ ದೊರೆಯೆ?’ ಎನ್ನುವ ಬಳೆಗಾರನ ವಿನಯ ತುಂಬಿದ ವಿನಂತಿಯು ನಾಯಕನ ಅಹಂಕಾರವನ್ನು ಸೂಚಿಸುತ್ತದೆ. ಮೂರನೆಯ ಸಾಲು ಬಳೆಗಾರನ ದೌತ್ಯದ ಸೂಚನೆಯನ್ನು ಕೊಡುತ್ತದೆ. ‘ಬಳೆಯ ತೊಡಿಸುವದಕ್ಕಲ್ಲ ನಿಮಗೆ’ ಎನ್ನುವ ನಾಲ್ಕನೆಯ ಸಾಲು ನಾಯಕನಿಗೆ ಮುಸುಕಿನಲ್ಲಿ ಮುಚ್ಚಿದ ಚಾಟಿಯ ಏಟನ್ನು ಕೊಡುತ್ತದೆ.
ಬಳೆಗಾರನ ವ್ಯಂಗ್ಯಭರಿತ tongue-in-cheek ಮಾತುಗಳು ನಾಯಕನ ಧೋರಣೆಯನ್ನು ಹಾಗು ಬಳೆಗಾರನ ಪ್ರತಿಧೋರಣೆಯನ್ನು ಅಪ್ರತ್ಯಕ್ಷವಾಗಿ ವರ್ಣಿಸುತ್ತವೆ. ಅಪ್ರತ್ಯಕ್ಷ ಸೂಚ್ಯಾರ್ಥಕ್ಕೆ ಈ ನುಡಿಯು ಒಂದು ಉತ್ತಮ ಉದಾಹರಣೆಯಾಗಿದೆ.

ದ. ಬಾ. ಕುಲಕರ್ಣಿಯವರು ಸಣ್ಣ ವಯಸ್ಸಿನಲ್ಲಿಯೇ ತೀರಿಕೊಂಡರು. ಆಧುನಿಕ  ಶೈಲಿಯ ಅವರ ಕತೆಗಳು ಸ್ವಾರಸ್ಯಪೂರ್ಣವಾಗಿವೆ. ಮೂರೇ ಸಾಲುಗಳ ಅವರ ಕವನವೊಂದನ್ನು ನೋಡಿರಿ. ಇದು ಉತ್ತಮ ಕವನದ ಶ್ರೇಷ್ಠ ಉದಾಹರಣೆಯಾಗಿದೆ:
ಸೋಮವಾರ ಚಿಂತಿ
ಮಂಗಳವಾರ ಸಂತಿ
ಬುಧವಾರ ನಿಶ್ಚಿಂತಿ

ದ. ಬಾ. ಕುಲಕರ್ಣಿಯವರು ಈ ಕವನದಲ್ಲಿ ಎಲ್ಲಿಯೂ ತಮ್ಮ ಬಡತನದ ಬಗೆಗೆ ಒಂದು ಪದವನ್ನೂ ಹೇಳಿಲ್ಲ. ಆದರೆ ಈ ಮೂರು ಸಾಲುಗಳು ಅವರ ಬದುಕಿನ ಕಟು ವಾಸ್ತವನ್ನು ಹಾಗು ಅವರು ಅದನ್ನು ಸ್ವೀಕರಿಸಿ, ನಿರ್ವಹಿಸುವ ರೀತಿಯನ್ನು  ಅನನ್ಯವಾಗಿ ಚಿತ್ರಿಸಿವೆ. ಈ ವಾಸ್ತವಕ್ಕೆ ವಿನೋದದ ತೆಳು ಪರದೆ ಬೇರೆ. ಏನನ್ನೂ ಹೇಳದೆ, ಏನೆಲ್ಲವನ್ನೂ ಹೇಳುವ ಈ ಮೂರು ಸಾಲುಗಳು ದಬಾಕು ಅವರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ.

ಇಂತಹ ಸೂಕ್ಷ್ಮ ಸೂಚ್ಯತೆ ಲೌಕಿಕ ಸಾಹಿತ್ಯದಲ್ಲಿ ಮಾತ್ರ ದೊರೆಯುತ್ತದೆ ಎಂದೇನಲ್ಲ. ಪುರಂದರದಾಸರು ರಚಿಸಿದ ಅನೇಕ ಪಾರಮಾರ್ಥಿಕ ಗೀತೆಗಳಲ್ಲಿ ಈ ಸೂಕ್ಷ್ಮತೆ ಇದೆ. ಉದಾಹರಣೆಗೆ ‘ಡೊಂಕು ಬಾಲದ ನಾಯಕರೆ, ನೀವೇನೂಟವ ಮಾಡಿದಿರಿ’ ಎನ್ನುವ ಗೀತೆಯನ್ನು ನೋಡಿರಿ. ಡೊಂಕು ಬಾಲದ ನಾಯಕ ಎಂದರೆ ನಾಯಿ ಎನ್ನುವುದು ಸಹಜವಾದ ಅರ್ಥ; ವಿಷಯಸುಖಕ್ಕೆ ಜೋತು ಬಿದ್ದ ಮಾನವ ಎನ್ನುವುದು ಇಲ್ಲಿಯ ಸಾಂಕೇತಿಕ ಅರ್ಥ. ಇದಲ್ಲದೆ ಮತ್ತೊಂದು ವ್ಯಂಗ್ಯಾರ್ಥವೂ ಇಲ್ಲಿದೆ. ಪುರಂದರದಾಸರ ಪೂರ್ವದ ಹೆಸರು ಶ್ರೀನಿವಾಸ ನಾಯಕ. ಆದುದರಿಂದ ದಾಸರು ತಮ್ಮನ್ನು ತಾವೇ ಪ್ರಸ್ನಿಸಿಕೊಳ್ಳುತ್ತಿದ್ದಾರೆ, ‘ಎಲವೊ, ಡೊಂಕು ಮನಸ್ಸಿನ ಶ್ರೀನಿವಾಸ ನಾಯಕನೆ, ನೀನು ಏನೇನು ಭೋಗಗಳಿಗೆ ಆಸೆಪಟ್ಟೆಯಪ್ಪಾ, ಏನೇನು ಕರ್ಮಗಳನ್ನು ಕಟ್ಟಿಕೊಂಡೆಯಪ್ಪಾ?’ ಎಂದು!

ದೇವತಾಸ್ತೋತ್ರಗಳಲ್ಲಿಯೂ ಸಹ ಈ ಸೂಕ್ಷ್ಮಾರ್ಥವನ್ನು ಕಾಣಬಹುದು. ‘ಗಣಪತಿ ಸಹಸ್ರನಾಮ’ದಲ್ಲಿ ಗಣಪತಿಯ ಆಪಾದಮಸ್ತಕ ವರ್ಣನೆ ಇದೆ. ಅದನ್ನು ಭಾಗಶಃ ಇಲ್ಲಿ ಉದ್ಧರಿಸುತ್ತೇನೆ:
………………………..
ಭಗ್ನವಾಮರದಸ್ತುಂಗ, ಸವ್ಯದಂತೊ ಮಹಾಹನುಃ,
ಹೃಸ್ವನೇತ್ರತ್ರಯಃ, ಶೂರ್ಪಕರ್ಣೋ, ನಿಬಿಡಮಸ್ತಕಃ,
ಸ್ತಬಕಾಕಾರ ಕುಂಭಾಗ್ರೋ, ರತ್ನಮೌಲಿಃ, ನಿರಂಕುಶಃ

ಕೊನೆಯ ಸಾಲಿನಲ್ಲಿ ಗಣಪತಿಯ ಶಿರೋಭಾಗವನ್ನು ವರ್ಣಿಸಲಾಗಿದೆ. ಆನೆಯ ತಲೆಗೆ ಕುಂಭಸ್ಥಲ ಎನ್ನುತ್ತಾರೆ. ಗಣಪತಿಯ ತಲೆಯು ಆನೆಯ ತಲೆಯಂತೆ ಇರುವುದರಿಂದ, ಅದನ್ನು ಇಲ್ಲಿ ಕುಂಭ ಎಂದೇ ಕರೆಯಲಾಗಿದೆ. ಈ ಕುಂಭವು ಸ್ತಬಕದಂತೆ ವಿಶಾಲವಾಗಿದೆ. ಮದೋನ್ಮತ್ತ ಆನೆಯ ಕುಂಭದಲ್ಲಿ ರತ್ನಗಳು ಒಸರುವಂತೆ ಇಲ್ಲಿಯೂ ರತ್ನಗಳಿವೆ. ಆನೆಯ ಕುಂಭಕ್ಕೆ ಅಂಕುಶದ ನಿಯಂತ್ರಣವಿರುತ್ತದೆ. ಆದರೆ ಗಣಪತಿಯ ಕುಂಭಕ್ಕೆ ಅಂಕುಶವಿಲ್ಲ; ಅವನು ನಿರಂಕುಶನು! ಈ ರೀತಿಯಾಗಿ, ಗಣಪತಿಯ ಮೇಲೆ ಯಾರ ಅಧಿಕಾರವೂ ನಡೆಯಲಾರದು ಎನ್ನುವುದನ್ನು ಕವಿಯು ಸೂಕ್ಷ್ಮವಾಗಿ ವರ್ಣಿಸುತ್ತಿದ್ದಾನೆ.

ಕನ್ನಡದ ಹಾಸ್ಯಪಿತಾಮಹ ರಾ.ಶಿ.ಯವರು, ‘ಹಾಸ್ಯವು subtle ಪದದಲ್ಲಿಯ b ಹಾಗೆ ಇರಬೇಕು’ ಎಂದು ಹೇಳಿದ್ದರು. ಈ ಮಾತು ಸಾಹಿತ್ಯದ ಎಲ್ಲ ಪ್ರಕಾರಗಳಿಗೂ ಅನ್ವಯಿಸುತ್ತದೆ.

Thursday, October 23, 2014

ವಂದೇ ಭಾರತಮ್-೩



ಪ್ರಾಗೈತಿಹಾಸಿಕ ಭಾರತದ ಸ್ಮರಣೀಯ ವ್ಯಕ್ತಿಗಳಲ್ಲಿ ಶ್ರೀರಾಮಚಂದ್ರನಿಗೇ ಪ್ರಧಾನ ಸ್ಥಾನ ಇರುವುದು ಸಹಜವಾಗಿದೆ. ಧರ್ಮದ ಮೂರ್ತರೂಪನಿವನು. ಪಿತೃವಾಕ್ಯಪಾಲನೆ, ಏಕಪತ್ನೀವ್ರತ ಮೊದಲಾದ ವೈಯಕ್ತಿಕ ಆದರ್ಶಗಳಲ್ಲದೇ, ಒಬ್ಬ ರಾಜನಿರಗಿರಬೇಕಾದ ನ್ಯಾಯವಿವೇಚನೆ ಸಹ ಶ್ರೀರಾಮಚಂದ್ರನ ಶ್ರೇಷ್ಠ ಗುಣವಾಗಿದೆ. ರಾಜನ ಹೆಂಡತಿಯು ಸಂಶಯಾತೀತಳಾಗಿರಬೇಕು ಎನ್ನುವ ಉದ್ದೇಶದಿಂದಲೇ ಶ್ರೀರಾಮಚಂದ್ರನು ಸೀತೆಯನ್ನು ಕಾಡಿಗಟ್ಟಿದ. ಆದುದರಿಂದಲೇ ‘ರಾಮರಾಜ್ಯ’ ಎನ್ನುವುದು ಈಗಲೂ ಭಾರತೀಯರ ಆದರ್ಶವಾಗಿದೆ. ಶ್ರೀರಾಮನ ಕಾಲದಲ್ಲಿ ಅವನ ರಾಜ್ಯವಿಸ್ತರಣೆಯು ಸ್ನೇಹಸಂಧಾನಗಳಿಂದ ಆದದ್ದನ್ನು ನೋಡಬಹುದು. ಇದು ತ್ರೇತಾಯುಗದ ಕತೆ. ದ್ವಾಪರಯುಗದ ಸಮಯದಲ್ಲಿ ಆರ್ಯಾವರ್ತದಲ್ಲಿ ನೂರಾರು ಜಗಳಗಂಟ ಪಾಳೆಯಗಾರರು ಹುಟ್ಟಿದರು. ಅವರ ಕತೆಯೇ ಮಹಾಭಾರತ. ಈ ಅವಧಿಯ ಅತ್ಯಂತ ವರ್ಣರಂಜಿತ ವ್ಯಕ್ತಿತ್ವವೆಂದರೆ ಶ್ರೀಕೃಷ್ಣನದು.

ಶ್ರೀಕೃಷ್ಣನು ಅಪ್ಪಟ ಕನ್ನಡಿಗನೆಂದರೆ ದಯವಿಟ್ಟು ಹುಬ್ಬೇರಿಸಬೇಡಿ. ಕೃಷ್ಣ ಎನ್ನುವುದು ಸಂಸ್ಕೃತದ ಒಂದು ವಿಶೇಷಣ ಪದ ಅಷ್ಟೇ. ಇದರರ್ಥ ಕಪ್ಪು. ಈತನು ಕಪ್ಪು ಬಣ್ಣದವನು ಎನ್ನುವದೇ ಈತನು ಆರ್ಯೇತರನಾಗಿರಬಹುದು ಎನ್ನುವ ಅನುಮಾನವನ್ನು ಹುಟ್ಟಿಸುತ್ತದೆ. ಕೃಷ್ಣನಿಗೆ ಕನ್ನಯ್ಯ ಎಂದೂ ಕರೆಯುತ್ತಾರೆ.  ಆರ್ಯಭಾಷೆಗಳಲ್ಲಿ ಕೃಷ್ಣ ಪದವು ಕಿಶನ್ ಎಂದು ಅಪಭ್ರಂಶಗೊಳ್ಳುತ್ತದೆ; ಕನ್ನಡದಲ್ಲಿ ಕಿಟ್ಟಣ್ಣ ಎಂದಾಗುತ್ತದೆ. ಆದುದರಿಂದ ಕಣ್ಣ ಮತ್ತು ಅದರದೇ ರೂಪವಾದ ಕನ್ನಯ್ಯ ಇವು ಕೃಷ್ಣ ಪದದ ರೂಪಗಳಲ್ಲ; ಇವು ಸಂಪೂರ್ಣವಾಗಿ ಸ್ವತಂತ್ರವಾದ ಕನ್ನಡ ಪದಗಳು.  

ಕೃಷ್ಣನು ಜೀವಿಸಿದ ಅವಧಿಯಲ್ಲಿ ಆರ್ಯೇತರರು(-ನಮ್ಮ ಮಟ್ಟಿಗೆ ಕನ್ನಡಿಗರು-) ಹಿಮಾಲಯದ ಕೆಳಭಾಗದಲ್ಲಿ ವಾಸಿಸುತ್ತಿದ್ದರು. ಇದಕ್ಕೆ ಒಂದು ಬಲವಾದ ಸಾಕ್ಷಿ ಎಂದರೆ, ನೇಪಾಳದ ಯುವರಾಜ ಸಿದ್ಧಾರ್ಥನ (ಬುದ್ಧನ) ಸಾರಥಿಯ ಹೆಸರು ಚೆನ್ನ ಎಂದಿರುವುದು. ಈ ಹೆಸರು ನನ್ನ ಕಲ್ಪನೆ ಅಂತೂ ಅಲ್ಲ. ನೀವು ಯಾವುದೇ ಕಥೆ ಅಥವಾ ಪುರಾಣ ಅಥವಾ ಸಂಶೋಧನೆಯನ್ನು ನೋಡಿದರೂ ಸಹ ಚೆನ್ನ ಎನ್ನುವವನೇ ಸಿದ್ಧಾರ್ಥನ ಅರ್ಥಾತ್ ಬುದ್ಧನ ಸಾರಥಿಯಾಗಿದ್ದ ಎನ್ನುವ ದಾಖಲೆ ದೊರೆಯುತ್ತದೆ.

ಚೆನ್ನ ಎನ್ನುವುದು ನೂರಕ್ಕೆ ನೂರರಷ್ಟು ಕನ್ನಡ ಹೆಸರಾಗಿದೆ. ಇದು ತಮಿಳು ಹೆಸರು ಏಕಾಗಿರಬಾರದು ಎಂದು ಕೆಲವರು ವಾದಿಸಬಹುದು. ಆದರೆ ಕನ್ನಡದ ‘ಚೆನ್ನ’ ಎನ್ನುವ ಪದವು ತಮಿಳಿನಲ್ಲಿ `ಶೆನ್’ ಎಂದಾಗುತ್ತದೆ. ಕನ್ನಡದ ಚೆಲುವಿ ತಮಿಳಿನಲ್ಲಿ ಶೆಲ್ವಿ ಆಗುತ್ತಾಳೆ. ಆದುದರಿಂದ ಸುಮಾರು ಎರಡೂವರೆ ಸಾವಿರ ವರ್ಷಗಳ ಪೂರ್ವದಲ್ಲಿ, ಹಿಮಾಲಯದ ಭಾಗವಾದ ನೇಪಾಳದಲ್ಲಿ ಕನ್ನಡಿಗರು ವಾಸವಾಗಿದ್ದರು ಎನ್ನುವುದು ಖಚಿತವಾಗುತ್ತದೆ. ಹಾಗಾದರೆ ಇಲ್ಲಿ ತಮಿಳರು ಇರಲಿಲ್ಲವೆ?

ಕನ್ನಡ ಮತ್ತು ತಮಿಳಿಗೆ ಇರಬಹುದಾದ ಪೂರ್ವರೂಪಕ್ಕೆ ಶಂ. ಬಾ. ಜೋಶಿಯವರು ಕಂದಮಿಳು ಎಂದು ಕರೆಯುತ್ತಾರೆ. ಆರ್ಯಭಾಷೆಯ ಸಂಪರ್ಕದಿಂದ ಕನ್ನಡವು ಬದಲಾಯಿತು; ಇದರಿಂದ ಕನ್ನಡಕ್ಕೆ ಒಳ್ಳೆಯದೇ ಆಯಿತು. ಆರ್ಯಾವರ್ತದಿಂದ ಕೆಳಗೆ ಸರಿದು ಹೋದ ಕಂದಮಿಳರ ಭಾಷೆ ಪೂರ್ಣವಾಗಿ ಬದಲಾಗಲಿಲ್ಲ. ಇದರಿಂದಾಗಿ ತಮಿಳಿಗೆ ನಷ್ಟವೇ ಆಗಿದೆ. ಇದರ ಚರ್ಚೆಯನ್ನು ಮತ್ತೊಮ್ಮೆ ಮಾಡೋಣ. ಇದೀಗ ಕೃಷ್ಣನ ಪೂರ್ವಾಪರಗಳನ್ನಷ್ಟೇ ನೋಡೋಣ.

ಕೃಷ್ಣ ಅಥವಾ ಕನ್ನಯ್ಯನು ಕನ್ನಡಿಗ ಎನ್ನುವುದಕ್ಕೆ ಇನ್ನಿಷ್ಟು ಉದಾಹರಣೆಗಳನ್ನು ನೋಡೋಣ. ಕನ್ನ ಅಥವಾ ಕಣ್ಣ ಎನ್ನುವ ಹೆಸರಿನ ಅನೇಕ ಕನ್ನಡಿಗರಿದ್ದಾರೆ. ಬೇಡರ ಕಣ್ಣಪ್ಪನಂತೂ (--ರಾಜಕುಮಾರರ ಸಿನೆಮಾದಿಂದಾಗಿ--) ಖ್ಯಾತನಾಗಿದ್ದಾನೆ. ‘ಕನ್ನೇಶ್ವರ ರಾಮ’ ಎನ್ನುವ ಸಿನೆಮಾವನ್ನು ಸಹ ಇಲ್ಲಿ ನೆನಪಿಸಬಹುದು. ಇನ್ನು ಕನ್ನೇಗೌಡ ಹೆಸರಿನ ವ್ಯಕ್ತಿಗಳೂ ಸಹ ನಮ್ಮಲ್ಲಿ ಇದ್ದಾರೆ. ಆರ್ಯರಿಗೆ ಕನ್ನಡ ಪದಗಳನ್ನು ದೀರ್ಘೀಕರಿಸಿ ಉಚ್ಚರಿಸುವ ಅಭ್ಯಾಸವಿದೆ. ಆದುದರಿಂದಲೇ ಕನ್ನಡಿಗರ ‘ಲಠ್ಠ’ ಹಿಂದಿಯಲ್ಲಿ ‘ಲಾಟ’ ಆಗಿದೆ. ನಮ್ಮಲ್ಲಿ ಲಟ್ಟಣಿಗೆಯಾಗಿರುವುದು ಅವರಲ್ಲಿ ಲಾಠಿಯಾಗಿದೆ. ನಮ್ಮ ‘ಸಂಗವಳ್ಳಿ’ ಅವರಲ್ಲಿ ‘ಸಾಂಗ್ಲಿ’ಯಾಗಿದೆ. ನಮ್ಮ ದಂಡಿಹಳ್ಳಿ ಅವರ ಬಾಯಲ್ಲಿ ದಾಂಡೇಲಿ ಆಗಿದೆ. ನಮ್ಮ ಕಂದಹಾಳ ಅವರಲ್ಲಿ ಕಾಂಡ್ಲಾ ಆಗಿದೆ. ಅದರಂತೆಯೇ ನಮ್ಮ ‘ಕನ್ನ’ನು ಅವರಲ್ಲಿ ‘ಕಾನ್ಹಾ’ ಆಗಿದ್ದಾನೆ,  ‘ಖನ್ನಾ’ ಆಗಿದ್ದಾನೆ. ಆದುದರಿಂದ ರಾಜೇಶ ಖನ್ನಾ ಎನ್ನುವ ಸೂಪರ್‍ಸ್ಟಾರ್‍ನ ಪೂರ್ವಜರು ಸಾವಿರಾರು ವರ್ಷಗಳ ಪೂರ್ವದಲ್ಲಿ ಕನ್ನಡಿಗರೇ ಆಗಿರಬೇಕು! ಇನ್ನೂ ಸಂಶಯವೆ? ಹಾಗಿದ್ದರೆ ‘ಖಾನದೇಶ’ ಎನ್ನುವ ಪದವನ್ನು ಗಮನಿಸಿರಿ. ೧೯೫೬ನೆಯ ಇಸವಿಯ ಮೊದಲು, ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳು ‘ಮುಂಬಯಿ ರಾಜ್ಯ’ದ ಭಾಗವಾಗಿದ್ದಾಗ , ವಿದ್ಯಾರ್ಥಿಗಳು ಕಲಿಯುತ್ತಿದ್ದ  ಭೂಗೋಲಶಾಸ್ತ್ರದಲ್ಲಿ, ‘ಖಾನದೇಶ’ದ ಪ್ರಸ್ತಾಪ ಬರುತ್ತಿತ್ತು. ಖಾನದೇಶ ಇದು ಮಹಾರಾಷ್ಟ್ರದ ವಾಯವ್ಯ ಭಾಗದಲ್ಲಿದೆ. ನಾನು ಚಿಕ್ಕವನಿದ್ದಾಗ ಭೂಗೋಲದ ಪಠ್ಯದಲ್ಲಿ ‘ಖಾನದೇಶ’ ಪದವನ್ನು ನೋಡಿ ಗಲಿಬಿಲಿಗೊಂಡೆ. ಖಾನ ಎನ್ನುವ ತುರುಕ ಮನುಷ್ಯನ ಪ್ರದೇಶವು ಖಾನಾಬಾದ, ಖಾನಿಸ್ತಾನ ಇತ್ಯಾದಿಯಾಗಿ ಆಗಬೇಕೆ ಹೊರತು ಖಾನದೇಶ ಎನ್ನುವ ಅರಿಸಮಾಸವಾಗಲಾರದು ಎಂದು ಗೊಂದಲಗೊಂಡಿದ್ದೆ. ಅನೇಕ ವರ್ಷಗಳ ನಂತರ ಶಂ. ಬಾ. ಜೋಶಿಯವರ ಸಂಶೋಧನೆಗಳನ್ನು ಓದಿದ ನಂತರವೇ, ಈ ಖಾನ ಇದು ಕನ್ನ ಎನ್ನುವ ಪದದ ದೀರ್ಘೀಕರಣ ಹಾಗು ಮಹಾಪ್ರಾಣೀಕರಣವಾಗಿದೆ ಎನ್ನುವುದು ಹೊಳೆಯಿತು. ಭಾರತದ ತುಂಬೆಲ್ಲ ಕನ್ನ ಅಥವಾ ಖನ್ನ ಅಥವಾ ಖಾನ ಪದದಿಂದ ಪ್ರಾರಂಭವಾಗಿ, ‘ಊರು’ ಎನ್ನುವ ಅರ್ಥವನ್ನು ಕೊಡುವ ಅನೇಕ ಪದಗಳಿರುವುದೂ ಸಹ ನನ್ನ ಅರಿವಿಗೆ ಬಂದಿತು, ಉದಾ: ಖಾನಾಪುರ(=ಕನ್ನಪುರ), ಖನ್ನೂರು(=ಕನ್ನೂರು) ಇತ್ಯಾದಿ. ಮುಂಬಯಿಯ ಸುತ್ತಲೂ ಇರುವ ಹಳ್ಳಿಗಳಂತೂ ಕನ್ನಡ ಹೆಸರುಗಳ ದೀರ್ಘೀಕರಣಗಳೇ ಆಗಿವೆ. ಉದಾ: ಕಾನ್ಹೇರಿ (=ಕನ್ನೇರಿ), ಖಂಡಾಲಾ (=ಕಂದಹಾಳ), ಡೊಂಬಿವಿಲಿ (=ಡೊಂಬವಳ್ಳಿ) ಇತ್ಯಾದಿ. ಕರ್ನಾಟಕದಲ್ಲಿಯೇ ಇಂತಹ ೧೬೯ಕ್ಕೂ ಹೆಚ್ಚು ಊರುಗಳ ಹೆಸರು ಲಭ್ಯವಿವೆ. ಭಾರತದ ಇತರತ್ರ ಸಹ ಇಂತಹ ಅನೇಕ ಊರುಗಳಿವೆ. ಪಾಕಿಸ್ತಾನದಲ್ಲಿಯೂ ಸಹ ಒಂದು ಖಾನಪುರ ಇರುವುದು ನನಗೆ ತಿಳಿದಿದೆ.

ಅಬುಲ್ ಫಜಲ್ ಎನ್ನುವ ಮುಸ್ಲಿಮ್ ಇತಿಹಾಸಕಾರನು ಬರೆದ ‘ಐನೆ ಅಕಬರಿ’ಯ ಮೇರೆಗೆ, ಖಾನದೇಶ ಪದದ ಹುಟ್ಟು ಹೀಗಿದೆ: ಗುಜರಾತದ ದೊರೆ ಅಹಮದ-೧ ಇವನು ಫರೂಕಿ ವಂಶದ ಮಲಿಕ ನಾಸೀರ ಎನ್ನುವವನಿಗೆ ‘ಖಾನ’ ಎನ್ನುವ ಬಿರುದನ್ನು ಕೊಟ್ಟ ಬಳಿಕ (೧೪ನೆಯ ಶತಮಾನ) , ಮಲಿಕ ನಾಸೀರನ ಆಧೀನದಲ್ಲಿದ್ದ ಪ್ರದೇಶಕ್ಕೆ ‘ಖಾನದೇಶ’ ಎನ್ನುವ ಹೆಸರು ಬಂದಿತು.  ನನಗೆ ಅನಿಸುವ ಮಟ್ಟಿಗೆ ಇದು ಸರಿಯಲ್ಲ. ಖಾನದೇಶ ಎನ್ನುವುದು ಒಂದು ಪ್ರದೇಶದ ಹೆಸರೇ ಹೊರತು ಒಂದು ಊರಿನ ಹೆಸರಲ್ಲ. ಒಂದು ವಿಸ್ತಾರವಾದ ಪ್ರದೇಶಕ್ಕೆ ಖಾನದೇಶ ಎಂದು ಮೊದಲಿನಿಂದಲೂ ಕರೆಯುತ್ತಿದ್ದರೆ ಮಾತ್ರ, ಆ ಹೆಸರು ಮುಂದುವರೆಯುವದೇ ಹೊರತು, ಯಾವುದೋ ಒಬ್ಬ ಆಕ್ರಮಣಕಾರನಿಗೆ ‘ಖಾನ’ ಎನ್ನುವ ಬಿರುದು ದೊರೆತ ಕಾರಣಕ್ಕಾಗಿ, ಆ ಪ್ರದೇಶವು ಖಾನದೇಶ ಆಗುವದಿಲ್ಲ. ತುರುಕರು ತಾವು ಗೆದ್ದ ಊರುಗಳಿಗೆ ತಮ್ಮ ಹೆಸರನ್ನು ಕೊಟ್ಟಿರುವುದು ಸಹಜವಾಗಿದೆ. ಉದಾಹರಣೆಗೆ ತುಘಲಕಾಬಾದ, ಸಿಕಂದರಾಬಾದ ಇತ್ಯಾದಿ. ಆದರೆ ರಾಜಸ್ತಾನ, ಮಾರವಾಡ ಮೊದಲಾದ ಪ್ರದೇಶಗಳು ಖಾನಸ್ತಾನ ಅಥವಾ ಖಾನವಾಡ ಎಂದು ಬದಲಾಗಲಾರವು. ಇನ್ನು ದೇಶ ಎನ್ನುವ ಪದಕ್ಕೆ ಇನ್ನೂ ಒಂದು ವಿಶಿಷ್ಟ ಅರ್ಥವಿದೆ. ದೇಶವೆಂದರೆ ಪ್ರದೇಶವೆನ್ನುವ ಸಹಜ ಅರ್ಥವಲ್ಲದೆ, ಮಹಾರಾಷ್ಟ್ರ ಹಾಗು ಉತ್ತರ ಕರ್ನಾಟಕದ ಕೆಲವೊಂದು ನಿರ್ದಿಷ್ಟ ಪ್ರದೇಶವನ್ನೂ ‘ದೇಶ’ ಎಂದು ಗುರುತಿಸುತ್ತಾರೆ. ಇದಕ್ಕೆ ಉದಾಹರಣೆ ಎಂದರೆ, ಈ ವಿಶಿಷ್ಟ ಭಾಗದಲ್ಲಿರುವ ಬ್ರಾಹ್ಮಣರನ್ನು ದೇಶಸ್ಥ ಬ್ರಾಹ್ಮಣರು ಎನ್ನುತ್ತಾರೆ. ಕೊಂಕಣ ಭಾಗದಲ್ಲಿರುವ ಬ್ರಾಹ್ಮಣರು ಕೊಂಕಣಸ್ಥ ಬ್ರಾಹ್ಮಣರು, ಕರಹಾಡ ಭಾಗದಲ್ಲಿರುವ ಬ್ರಾಹ್ಮಣರು ಕರ್ಹಾಡ ಬ್ರಾಹ್ಮಣರು ಇತ್ಯಾದಿ. ಆದುದರಿಂದ ಖಾನ ಎನ್ನುವ ತುರುಕನಿಂದಾಗಿ ಖಾನದೇಶ ಎನ್ನುವ ಹೆಸರು ಬಂದಿರುವುದು ಸಂಭವನೀಯವಲ್ಲ.

ಈ ತರ್ಕವನ್ನು ಬದಿಗಿಟ್ಟು ಮತ್ತೊಂದು ಬಲವಾದ ಸಾಕ್ಷಿಯನ್ನು ನೋಡೋಣ: ಈ ಪ್ರದೇಶವು ಮೊದಲು ‘ಅಹಿರ’(=ಅಭೀರ) ಎನ್ನುವ ಗುಡ್ಡಗಾಡು ಜನಾಂಗದ ಆಧೀನದಲ್ಲಿತ್ತು. ಈ ಜನಾಂಗದವರು ಯಾದವ ಹಾಗು ನಂದವಂಶಿ ಎನ್ನುವ ಅಡ್ಡಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ. ಇವರ ಮೂಲ ಉದ್ಯೋಗ ಹೈನುಗಾರಿಕೆ. ಆದುದರಿಂದ ಇವರಿಗೆ ಗವಳಿ ಹಾಗು ಧನಗರ ಎನ್ನುವ ಹೆಸರುಗಳೂ ಇವೆ. ಶಂ. ಬಾ. ಜೋಶಿಯವರು ‘ಧನಗರ’ ಪದವು ‘ದನಗರ’ (=ದನ ಕಾಯುವವರು) ಪದದ ಆರ್ಯೀಕರಣ ಎನ್ನುವುದನ್ನು ತೋರಿಸಿದ್ದಾರೆ. ನಮ್ಮ ಕೃಷ್ಣ ಕನ್ನಯ್ಯನು ಯಾದವ ಕುಲ ಸಂಜಾತ ಹಾಗು ನಂದಗೋಪನ ಮನೆಯಲ್ಲಿ ಬೆಳೆದವನು. ಈ ಸಮುದಾಯದ ಕೆಲಸ ಹೈನುಗಾರಿಕೆಯಾಗಿತ್ತು. ಆದುದರಿಂದ ಖಾನದೇಶವು ನಮ್ಮ ಕನ್ನಯ್ಯನ ‘ಕನ್ನದೇಶ(>ಖಾನದೇಶ)’ವೇ ಹೊರತು ಖಾನನ ದೇಶವಲ್ಲ.

ಏನೇ ಇರಲಿ, ಮಹಾಭಾರತದ ರಾಜಕಾರಣದಲ್ಲಿ ಕೃಷ್ಣನಂತಹ ಮಹತ್ವದ ವ್ಯಕ್ತಿ ಇಲ್ಲವೆನಬೇಕು. ತನ್ನ ಬಾಲ್ಯಕಾಲದಿಂದಲೇ ಕೃಷ್ಣನು ತನ್ನ ಕುಲದವರ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತ ಬಂದಿದ್ದಾನೆ. ಆರ್ಯರ ವೇದಕಾಲೀನ ದೇವತೆಯಾದ ಇಂದ್ರನ ಪೂಜೆಗೆ ಕೃಷ್ಣ ವಿರೋಧಿಯಾಗಿದ್ದ. ಇಂದ್ರನ ಆಕ್ರಮಣದಿಂದ ತನ್ನವರನ್ನು ರಕ್ಷಿಸಲು ಗೋವರ್ಧನ ಗಿರಿಯ ಗುಹೆಗಳಲ್ಲಿ ಅವರಿಗೆ ಆಶ್ರಯ ದೊರಕಿಸಿ ಕೊಟ್ಟ. ಗೋಕುಲ ಹಾಗು ಗೋವರ್ಧನ(=ಗೋವುಗಳು ಹೆಚ್ಚಾಗಲಿ) ಎನ್ನುವ ಪದಗಳನ್ನು ಗಮನಿಸಿರಿ. ಅಲ್ಲಿಯ ನಿವಾಸಿಗಳು ಎಂದರೆ ನಂದಕುಲದವರು ಹೈನುಗಾರಿಕೆಯನ್ನು ಅವಲಂಬಿಸಿದ್ದದ್ದನ್ನು  ಈ ಪದಗಳು ಎತ್ತಿ ತೋರಿಸುತ್ತದೆ. ಆರ್ಯೇತರರು ವೃಕ್ಷಪೂಜಕರು ಹಾಗು ಗಿರಿಪೂಜಕರು. ಕೃಷ್ಣನು ತನ್ನ ಕುಲದವರಿಗೆ ಗೋವರ್ಧನ ಗಿರಿಯನ್ನು ಪೂಜಿಸಲು ಹೇಳುತ್ತಾನೆ. ಭಗವದ್ಗೀತೆಯಲ್ಲಿ ಕೃಷ್ಣನು ‘ನಾನು ವೃಕ್ಷಗಳಲ್ಲಿ ಬಿಲ್ವ’ ಎಂದು ಹೇಳಿಕೊಂಡಿದ್ದಾನೆ.

ತಮ್ಮ ಜನಾಂಗದ ದೈವಗಳನ್ನು ಪೂಜಿಸಲು ಹೇಳುವ ಕೃಷ್ಣನು, ಆರ್ಯದೈವಗಳನ್ನು ಪೂಜಿಸದೆ ಇರಲು ಹೇಳುವುದು ಸಹ ಸ್ಪಷ್ಟವಿದೆ. ಗೀತೆಯಲ್ಲಿ ಕೃಷ್ಣನು ಅರ್ಜುನನಿಗೆ ಕೊಡುವ ಉಪದೇಶವನ್ನು ಗಮನಿಸಿರಿ:
‘ತ್ರಯ್ಯಂತವಿಷಯಾ ವೇದಾಃ
ನಿಸ್ತ್ರೈಗುಣ್ಯೋ ಭವಾರ್ಜುನ’
(ಅರ್ಜುನನೇ, ವೇದಗಳು ಮೂರು ಫಲಗಳನ್ನು ಕೊಡುತ್ತವೆ. ನೀನು ಇವುಗಳನ್ನು ದಾಟಿ ಹೋಗು.)
ವೇದಗಳನ್ನು ಉಪೇಕ್ಷಿಸು ಎನ್ನುವುದು ಈ ಉಪದೇಶದ ಗೂಢಾರ್ಥವಲ್ಲವೆ?  ಇಂತಹ ಉಪದೇಶಗಳು ಇಲ್ಲಿ ಸಾಕಷ್ಟಿವೆ:
‘ಪತ್ರಂ ಪುಷ್ಪಂ ಫಲಂ ತೋಯಮ್
ಯೋ ಮೇ ಭಕ್ತ್ಯಾ ಪ್ರಯಚ್ಛತಿ’
ನನ್ನನ್ನು ಒಲಿಸಿಕೊಳ್ಳಲು, ಹೂವು, ಹಣ್ಣು, ಅಥವಾ ನೀರನ್ನು ಸಮರ್ಪಿಸಿದರೆ ಸಾಕು ಎನ್ನುವ ಈ ಮಾತಿನಲ್ಲಿ, ಯಜ್ಞ, ಯಾಗಾದಿಗಳನ್ನು ಬಿಟ್ಟುಬಿಡು ಎನ್ನುವ ಸಂದೇಶವೇ ಅಡಗಿಕೊಂಡಿದೆ.
ಭಕ್ತಿಯಿಂದ ನನ್ನನ್ನು ಭಜಿಸಿದವರು ಶೂದ್ರರಾದರೂ ಸಹ, ನನ್ನನ್ನು ಹೊಂದುತ್ತಾರೆ ಎನ್ನುವುದು, ಆರ್ಯೇತರರಿಗೆ ಕೃಷ್ಣನು ನೀಡುವ ಭರವಸೆಯೇ ಆಗಿದೆ.
‘ನನಗೆ ಐಹಿಕ ಸಂಪತ್ತನ್ನು ನೀಡು’ ಎನ್ನುವ ಪ್ರಾರ್ಥನೆ ಆರ್ಯರದಾದರೆ (ಉದಾ: ಶ್ರೀಸೂಕ್ತ), ಸುಖದುಃಖಗಳಲ್ಲಿ ಸಮಚಿತ್ತನಾಗಿರಬೇಕು ಎನ್ನುವುದು ಶ್ರೀಕೃಷ್ಣನು ಹೇಳುವ ತತ್ವವಾಗಿದೆ!

ಕೃಷ್ಣನ ಬಾಲ್ಯವು ಗೋಕುಲದಲ್ಲಿ ಒಂದು ಯಕ್ಷಲೋಕವನ್ನೇ ರಚಿಸಿತು. ಕಂಸಸಂಹಾರಕ್ಕಾಗಿ ಗೋಕುಲವನ್ನು ತ್ಯಜಿಸಿದ ಕೃಷ್ಣನು ಮತ್ತೆ ತನ್ನೂರಿಗೆ ಮರಳಲಿಲ್ಲ. ಈ ವಿಷಯವನ್ನು ಪುತಿನ ಅವರು ತಮ್ಮ ‘ಗೋಕುಲನಿರ್ಗಮನ’ ಎನ್ನುವ ಗೀತನಾಟಕದಲ್ಲಿ ಹೃದಯಂಗಮವಾಗಿ ನಿರೂಪಿಸಿದ್ದಾರೆ. ಕಂಸನ ಸ್ನೇಹಿತರಾಜರೊಡನೆ ವೈರತ್ವವನ್ನು ಕಟ್ಟಿಕೊಂಡ ಕೃಷ್ಣನ ಮೇಲೆ ಅನೇಕ ದಾಳಿಗಳಾದವು. ಪ್ರತಿ ಸಲವೂ ಕೃಷ್ಣ ರಣರಂಗದಿಂದ ಓಡಿಹೋಗುತ್ತಿದ್ದ. ಆದುದರಿಂದಲೇ ಗುಜರಾತಿಗಳು ಕೃಷ್ಣನನ್ನು ‘ರಣಛೋಡಜಿ ಮಹಾರಾಜ’ ಎನ್ನುವ ಹೆಸರಿನಲ್ಲಿ ಆರಾಧಿಸುತ್ತಾರೆ! ಇಂತಹ ಒಂದು ದುರ್ಧರ ಸಮಯದಲ್ಲಿ, ತನ್ನ ಕುಲದವರ ರಕ್ಷಣೆಗಾಗಿ ಕೃಷ್ಣ ಒಂದು ಕಠಿಣ ನಿರ್ಣಯವನ್ನು ತೆಗೆದುಕೊಳ್ಳಬೇಕಾಯಿತು. ತನ್ನ ಸಹಚರರೊಡನೆ ಕೃಷ್ಣನು ಭಾರತದ ಪಶ್ಚಿಮ ಸೀಮೆಗೆ ಗುಳೇ ಹೋದ! (ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣವಾದ ನಂತರ ಮಥುರೆಯಿಂದ ದ್ವಾರಕಾದವರೆಗಿನ ದೂರವು ಇದೀಗ ೧೩೦೦ ಕಿಲೋಮೀಟರುಗಳಷ್ಟಾಗಿದೆ.) ಆ ಕಾಲದಲ್ಲಿ ಮಥುರೆಯಿಂದ ಪಶ್ಚಿಮಕಡಲತೀರದವರೆಗಿನ ಸುಮಾರು ೧೫೦೦ ಕಿಲೋಮೀಟರುಗಳಿಗೂ ಹೆಚ್ಚಿನ ದೀರ್ಘವಾದ, ದುರ್ಗಮವಾದ ಮಾರ್ಗವನ್ನು ಕಾಡುಮೇಡುಗಳಲ್ಲಿ ಅಲೆಯುತ್ತ, ಕಾಡುಪ್ರಾಣಿಗಳನ್ನು ಹಾಗು ಕಳ್ಳಕಾಕರನ್ನು ಎದುರಿಸುತ್ತ ಕ್ರಮಿಸಿದ ಕೃಷ್ಣ ಹಾಗು ಆತನ ಸಹಚರರು ಪಶ್ಚಿಮ ಸಮುದ್ರತೀರವನ್ನು ತಲುಪಿದರು; ದ್ವಾರಕಾ ಎನ್ನುವ ಪಟ್ಟಣವನ್ನು ಸ್ಥಾಪಿಸಿದರು. ದ್ವಾರಕಾ ಎಂದರೆ ಬಾಗಿಲು. ಇದು ಪ್ರಾಗೈತಿಹಾಸ ಕಾಲದ ಮೊದಲ Gateway of India ಆಗಿರಬಹುದು. ಪರದೇಶಗಳ ಜೊತೆಗೆ ವ್ಯಾಪಾರವನ್ನು ಕೈಗೊಂಡ ದ್ವಾರಕಾ ಸಮೃದ್ಧವಾಗಿ ಬೆಳೆಯಿತು. ಸಮುದ್ರದಲ್ಲಿ ಮುಳುಗಿದ ದ್ವಾರಕಾದ ಶೋಧವನ್ನು ಮಾಡಿದವರು ಶ್ರೀ ಎಸ್. ಆರ್.ರಾವ ಎನ್ನುವ ಪ್ರಾಚ್ಯಸಂಶೋಧಕರು.

ವಿಶ್ವನಾಥ ಚಕ್ರವರ್ತಿ ಠಾಕೂರ ಎನ್ನುವವರ ಮೇರೆಗೆ ಕೃಷ್ಣನು ಗೋಕುಲದಲ್ಲಿ ಇದ್ದ ಸಮಯ ಕೇವಲ ಮೂರು ವರ್ಷ ನಾಲ್ಕು ತಿಂಗಳು. ಮುಂದಿನ ಮೂರು ವರ್ಷ ನಾಲ್ಕು ತಿಂಗಳುಗಳನ್ನು ಆತನು ವೃಂದಾವನದಲ್ಲಿ ಕಳೆದನು. ಹತ್ತು ವರ್ಷದವನಾಗುವವರೆಗೆ ಕೃಷ್ಣನು ನಂದಗ್ರಾಮದಲ್ಲಿ ವಾಸಿಸಿದನು. ಅಲ್ಲಿಂದ ಮಥುರೆಗೆ ತೆರಳಿದ ಕೃಷ್ಣನು ೧೮ ವರ್ಷ ನಾಲ್ಕು ತಿಂಗಳುಗಳ ಅವಧಿಯನ್ನು ಮಥುರೆಯಲ್ಲಿ ಕಳೆದನು. ತನ್ನ ಸಹಚರರ ಜೊತೆಗೆ ಮಥುರೆಯಿಂದ ದ್ವಾರಕೆಗೆ ತೆರಳಿದ ಕೃಷ್ಣನು ತನಗೆ ಒಂದುನೂರಾ ಇಪ್ಪತ್ತೈದು ವರ್ಷಗಳಾಗುವವರೆಗೆ ದ್ವಾರಕೆಯಲ್ಲಿ ವಾಸಿಸಿದನು.

ಯಹೂದಿಗಳ ಮುಖಂಡನಾದ ಮೋಶೆ, ತನ್ನ ಸಹಚರರ ಜೊತೆಗೆ ಈಜಿಪ್ತಿನಿಂದ ಇಸ್ರೇಲವರೆಗೆ ಕ್ರಮಿಸಿದ ಪ್ರಯಾಣವನ್ನು, ಕೃಷ್ಣನ ಮಥುರಾ-ದ್ವಾರಕಾ ಪ್ರಯಾಣದೊಡನೆ ಹೋಲಿಸಿರಿ. ಗೋಶೆನ್‍ದಿಂದ ಜೆರಿಕೊವರೆಗೆ ಮೋಶೆ ಕ್ರಮಿಸಿದ ಮಾರ್ಗ ಸುಮಾರು ೧೫೦೦ ಕಿಮಿ. ಆದರೆ ಮೋಶೆಯ ಪ್ರಯಾಸಕರ ಮಾರ್ಗಕ್ರಮಣದ ದಾಖಲೆಗಳು ಬೈಬಲ್ಲಿನಲ್ಲಿ ದಾಖಲಾಗಿವೆ. ನಮ್ಮ ದುರ್ದೈವಕ್ಕೆ, ಕೃಷ್ಣನ ಕಠಿಣ ಮಾರ್ಗಕ್ರಮಣದ ಗುರುತುಗಳು ನಮ್ಮ ಪುರಾಣಗಳಲ್ಲಿ ದಾಖಲಾಗಿಲ್ಲ. ಭಾರತೀಯರಲ್ಲಿ ಐತಿಹಾಸಿಕ ಪ್ರಜ್ಞೆಯ ಅಭಾವವಿರುವದನ್ನು ಇದು ತೋರಿಸುತ್ತಿರಬಹುದು. ಏನೇ ಇರಲಿ, ಒಬ್ಬ ಮುಂದಾಳು ಹೇಗಿರಬೇಕು ಎನ್ನುವುದನ್ನು ಈ ಪ್ರಸಂಗಗಳು ತೋರಿಸುತ್ತವೆ. ಅಂತಹ ಮುಂದಾಳಿನಲ್ಲಿ ಆತನ ಅನುಚರರು ಇಡುವ ನಿಷ್ಠೆಯನ್ನೂ ಈ ಪ್ರಸಂಗಗಳು ತೋರಿಸುತ್ತವೆ.

ಕಂಸನನ್ನು ಅವನ ಆಸ್ಥಾನದಲ್ಲಿಯೇ ಮುಖಾಮುಖಿಯಾಗಿ ಸಂಹರಿಸಿದ ಎಳೆಯ ಕೃಷ್ಣನ ಧೈರ್ಯವನ್ನು ಮೆಚ್ಚಲೇ ಬೇಕು. ಜರಾಸಂಧನ ವಧೆಯನ್ನು ಮಾಡುವಾಗಲೂ ಸಹ ಕೃಷ್ಣ, ಭೀಮ ಹಾಗು ಅರ್ಜುನ ಈ ಮೂವರೇ ಅವನ ರಾಜಧಾನಿಗೆ ಹೋಗಿದ್ದರು. ಕೌರವಸಂಹಾರಕ್ಕೂ ಸಹ ಕೃಷ್ಣನೇ ಕಾರಣನಾದನು. ಇಂತಹ ಕೃಷ್ಣನಿಗೆ ತನ್ನ ದ್ವಾರಕಾವಾಸಿಗಳ ಮೇಲೆ ನಿಯಂತ್ರಣವಿಡಲು ಸಾಧ್ಯವಾಗಲಿಲ್ಲ. ಸಂಪತ್ತು ಹಾಗು ಶಕ್ತಿಯಿಂದ ಮದೋನ್ಮತ್ತರಾದ ದ್ವಾರಕಾವಾಸಿಗಳು ‘ಯಾದವೀಕಲಹ’ದಲ್ಲಿ ನಿರ್ನಾಮರಾದರು. ಅರಣ್ಯಪ್ರದೇಶದಲ್ಲಿ ಏಕಾಕಿಯಾಗಿ ತೆರಳುತ್ತಿದ್ದ ಕೃಷ್ಣನು ಬೇಡನೋರ್ವನ ತಪ್ಪು ಗ್ರಹಿಕೆಗೆ ಬಲಿಯಾಗಿ ಶರಾಘಾತದಿಂದ ಮೃತನಾದನು.
ಎಂತಹ ಮಹಾನುಭಾವನಿಗೆ, ಎಂತಹ ಮರಣ!

ಮಹಾಭಾರತದ ಮತ್ತೋರ್ವ ಧೀರಪುರುಷ ಭೀಷ್ಮನು ರಣರಂಗದಲ್ಲಿ, ಶರಪಂಜರದ ಮೇಲೆ ಸ್ವ‍ಇಚ್ಛೆಯಿಂದ ಮರಣ ಹೊಂದಿದ್ದನ್ನು , ಕೃಷ್ಣನ ಅನಾಥ ಮರಣದೊಂದಿಗೆ ಹೋಲಿಸಿರಿ. ಆಂಗ್ಲ ಕವಿ ಈಲಿಯಟ್‍ನ ಕವನವೊಂದರ ಸಾಲನ್ನು ಸ್ವಲ್ಪ ಬದಲಾಯಿಸಿ, ಇಲ್ಲಿ ಹೇಳಬಹುದು: This is the way the life ends…not with a bang, but a whimper.

ಬಿಹಾರವು ಯಾದವರ ನೆಲೆವೀಡಾಗಿದೆ. ಇಲ್ಲಿ ನಂದರಾಜರ ಆಳಿಕೆ ಇತ್ತು. ಈ ನಂದರನ್ನು ಸೋಲಿಸಿದವನು ಚಂದ್ರಗುಪ್ತ. ಈ ಯಾದವರು ಹಾಗು ನಂದರು ಕೃಷ್ಣನ ಕುಲದವರೇ ಇರಬೇಕಷ್ಟೆ. ಆರ್ಯರೊಡನೆಯ ಸಂಘರ್ಷದಲ್ಲಿ ಸೋತು ಹೋದ ಇವರೆಲ್ಲ ತಮ್ಮ ತಾಯಿನುಡಿ ಕನ್ನಡವನ್ನು ಬದಿಗಿಟ್ಟು ಆರ್ಯೀಕರಣ ಹೊಂದಿರಬಹುದು. ಒಳ್ಳೆಯದೇ ಆಯಿತು ಬಿಡಿ. ಈಗಿನ ಬಿಹಾರದ ರಾಜಕೀಯವನ್ನು ನೋಡಿದರೆ, ಅವರ ಪೂರ್ವಜರು ಕನ್ನಡಿಗರು ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ.

ನೇಪಾಲ ಹಾಗು ಬಂಗಾಲವನ್ನು ಆಳಿದವರು ಮಲ್ಲ ಕುಲದ ರಾಜರು. ಇವರು ಕನ್ನಡಿಗರು ಎನ್ನುವುದನ್ನು ಇತಿಹಾಸತಜ್ಞರು ಒಪ್ಪಿಕೊಂಡಿದ್ದಾರೆ. ಕರ್ನಾಟಕದಲ್ಲಿ ಇರುವ ಅನೇಕ ಊರುಗಳು (ಉದಾ: ಮಲ್ಲಾಪುರ, ಮಲ್ಲೇಶ್ವರಮ್ ಇತ್ಯಾದಿ) ಇವರಿಂದಲೇ ಬಂದಿವೆ. ವಾಸ್ತವದಲ್ಲಿ, ಮಲಪ್ರಭಾ ನದಿಯು ಮಲ್ಲಪ್ರಭಾ ಆಗಿದ್ದು, ಜನರ ಬಾಯಿಯಲ್ಲಿ ಮಲಪ್ರಭಾ ಆಗಿದೆ. ಇಂತಹ ಮಲ್ಲರು ತಮ್ಮ ರಾಜ್ಯವನ್ನು ಕಳೆದುಕೊಂಡ ನಂತರ ಶೂದ್ರರಾದರು. ಕುಪ್ರಸಿದ್ಧ ದರೋಡೆಖೋರಿಣಿ ಫೂಲನ್ ದೇವಿಯು ಮಲ್ಲ ಕುಲದವಳು. ಮಲ್ಲರ ಉಲ್ಲೇಖವು ಋಗ್ವೇದ ಹಾಗು ಮಹಾಭಾರತದಲ್ಲಿ ಬರುತ್ತದೆ. ಆದುದರಿಂದ ಈ ಮಲ್ಲಕುಲವು ಯಾದವ ಕುಲದ ಸಮಕಾಲೀನವಾಗಿರಬೇಕು. ಈ ಎರಡೂ ಕುಲಗಳು ಕನ್ನಡಿಗ ಕುಲಗಳು. ಕೃಷ್ಣನಂತಹ ಮುಂದಾಳು ದೊರಕಿದ್ದರಿಂದ ಯಾದವರು ಈವರೆಗೂ ಪ್ರಬಲರಾಗಿಯೇ ಉಳಿದರೇನೊ? ಮಲ್ಲರು ಮಾತ್ರ ಅವನತಿಯನ್ನು ಹೊಂದಿದರು.

ಭಾರತದ ಇತಿಹಾಸವನ್ನು ಬದಲಿಸಿದ ಕೃಷ್ಣನು, ಭಾರತೀಯರಿಗೆ ಭಗವದ್ಗೀತೆಯನ್ನು ಕೊಟ್ಟ ಕೃಷ್ಣನು, ಯಾದವರನ್ನು ಮಥುರೆಯಿಂದ ಪಶ್ಚಿಮ ಸಮುದ್ರತೀರಕ್ಕೆ ಕರೆದೊಯ್ದು, ಅವರಿಗೆ ದ್ವಾರಕೆಯನ್ನು ಕಟ್ಟಿಕೊಟ್ಟ ಕೃಷ್ಣನು ಕನ್ನಡಿಗನು.
ಅವನಿಗೆ ನನ್ನ ಸಾವಿರ ನಮಸ್ಕಾರಗಳು.
ಕೃಷ್ಣಂ ವಂದೇ ಜಗದ್ಗುರುಮ್!

Tuesday, October 14, 2014

ಬೇಂದ್ರೆ ದರ್ಶನ-೨


ಶೋಷಣೆಯ ವಿರುದ್ಧ ಬೇಂದ್ರೆಯವರು ಅನೇಕ ಕವನಗಳನ್ನು ರಚಿಸಿದ್ದಾರೆ. ಈ ಕವನಗಳಲ್ಲಿ ಮರುಕ ಹಾಗು ಕಳಕಳಿ ಇವೆ, ಆದರೆ ಆಕ್ರೋಶವಿಲ್ಲ. ಇದು ಬೇಂದ್ರೆಯವರ ಮನೋಧರ್ಮ. ಪ್ರತಿಯೊಬ್ಬ ಲೇಖಕನ ಬರವಣಿಗೆಯು ಅವನ ಬಾಲ್ಯದ ಘಟನೆಗಳಿಂದ ಹಾಗು ಸಂಸ್ಕಾರಗಳಿಂದ ರೂಪಿತವಾಗಿರುವುದು ಸಹಜವಷ್ಟೇ. ಬೇಂದ್ರೆಯವರ ಕಾವ್ಯವೂ ಸಹ ಇದಕ್ಕೆ ಹೊರತಲ್ಲ. ಬೇಂದ್ರೆಯವರ ಬದುಕಿನ ಬಹುಭಾಗ  ತಾಪದಲ್ಲಿಯೇ ಕಳೆಯಿತು. ‘ಬೆಂದರೆ ಅದು ಬೇಂದ್ರೆ’ ಎನ್ನುವುದು ಗಾದೆಯ ಮಾತೇ ಆಗಿ ಹೋಗಿದೆ. ‘ಬೇಯುವುದು’ ಎನ್ನುವ ಈ ಕನ್ನಡ ಪದಕ್ಕೆ ಸಂಸ್ಕೃತದ ‘ತಪ’ ಎನ್ನುವ ಪದ ಸಂವಾದಿಯಾಗಿದೆ. ತಪದಿಂದಲೇ ತಪಸ್ಸು ಹುಟ್ಟಿದೆ; ತಪದಿಂದಲೇ ತಾಪ ಹಾಗು ಸಂತಾಪ ಹುಟ್ಟಿವೆ. ತಾಪದಲ್ಲಿಯೇ ತಪಸ್ಸು ಹುಟ್ಟುತ್ತದೆ. ಅಂದರೆ ಬೇಂದ್ರೆಯವರ ತಾಪವು ಅವರ ಜೀವಮಾನದ ತಪಸ್ಸೇ ಆಗಿದೆ. ತಪಸ್ವಿಯು ಮುನಿಯಬಹುದು ಆದರೆ ಅವನಲ್ಲಿ ರೊಚ್ಚು ಇರುವುದಿಲ್ಲ. ಬೇಂದ್ರೆಯವರ ಸಿಟ್ಟೂ ಅದೇ ತರಹದ್ದು. ಅಲ್ಲದೆ ಅವರು ಸ್ನೇಹಜೀವಿ. ನಿಮ್ಮೊಡನೆ ಗಂಟೆಗಟ್ಟಲೆ ಅವರು ಹರಟೆ ಹೊಡೆಯುತ್ತಾರೆ. ಅವರ ಹರಟೆಯಲ್ಲಿ ಗೆಳೆತನದ ಸಂದೇಶವಿರುತ್ತದೆಯೇ ಹೊರತು ಅಧಿಕಾರದ ಆದೇಶವಿರುವದಿಲ್ಲ!
(ನೆನಪಿಸಿಕೊಳ್ಳಿ: ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
                  ನೀಡುವೆನು ರಸಿಕ ನಿನಗೆ
                  ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
                  ಆ ಸವಿಯ ಹಣಿಸು ನನಗೆ.)           

ಬೇಂದ್ರೆಯವರ ‘ಗರಿ’ ಕವನ ಸಂಕಲನದ concordance ಮಾಡಿದಾಗ ನನಗೆ ಕಂಡದ್ದು: ಅವರು ಬಳಸಿದ ೭೧೫೦ ಪದಗಳ ಪೈಕಿ ಅತ್ಯಂತ ಹೆಚ್ಚಿನ ಪದಗಳು ಅಂದರೆ ೨೯೩ ಪದಗಳು ಆತ್ಮೀಯವಾಚಕ ಪದಗಳಾಗಿವೆ. ಬೇಂದ್ರೆಯವರ ಇಂತಹ ಮನೋಧರ್ಮವನ್ನು ಸೂಚಿಸುವ ಕೆಲವು ಕವನಗಳನ್ನು ಇಲ್ಲಿ ನೋಡೋಣ. ಆದರೆ, ಸುಮಾರಾಗಿ ಇದಕ್ಕೆ ವಿರುದ್ಧವಾದ ಮನೋಧರ್ಮದ, ಬೇರೊಬ್ಬ ಕವಿಯ ಕವನಗಳನ್ನು ನೋಡಿದಾಗ ಮಾತ್ರ ವ್ಯತ್ಯಾಸವು ಸ್ಪಷ್ಟವಾಗುವುದು. ಕುವೆಂಪುರವರ ಕವನಗಳು ಶೋಷಣೆಯ ವಿರುದ್ಧ ಸಿಡಿದೇಳುವ ಹಾಗು ಆದೇಶ ನೀಡುವ ಕವನಗಳಾಗಿರುವುದರಿಂದ ಅವರ ಕವನಗಳನ್ನು ಜೊತೆಜೊತೆಯಾಗಿ ಪರಿಶೀಲಿಸುವುದು ಅನುಕೂಲಕರವಾಗಿದೆ. ಈ ಹೋಲಿಕೆಯು ಕೇವಲ ಮನೋಧರ್ಮದ ಹೋಲಿಕೆ ಮಾತ್ರವಾಗಿದ್ದು ಈ ಕವಿಗಳ ಕಾವ್ಯದ ತುಲನಾತ್ಮಕ ಮೌಲ್ಯಮಾಪನ ಅಲ್ಲವೆಂದು ನಮ್ರತೆಯಿಂದ ಹೇಳಬಯಸುತ್ತೇನೆ.   

ಬೇಂದ್ರೆ ಕವನ:
ಕನ್ನಡ ನುಡಿದಿತು ಕನ್ನಡ ಹಕ್ಕಿ
ಕನ್ನಡವೆಂದಿತು ಆ ಗೋದೆ
ಕಾವೇರಿಯು ತಂಪಾಯಿತು, ಕನ್ನಡ
ಗಾಳಿಯು ಉಸಿರಿತು ಈ ಬೋಧೆ.

ಗೋದಾವರಿ ನದಿಯ ದಂಡೆಯ ಮೇಲೆ ಕನ್ನಡ ಎನ್ನುವ ಒಂದು ಹಳ್ಳಿ ಇದೆ. ಅಲ್ಲಿಯ ಜನರ ಮಾತೂ ಸಹ ಕನ್ನಡವೇ. ಆದುದರಿಂದ ಗೋದಾವರಿ   ತಾಯಿಯೂ ಸಹ ಕನ್ನಡವನ್ನೇ ಉಸಿರುತ್ತಾಳೆ. ಇದು ಮೊದಲೆರಡು ಸಾಲುಗಳ ಭಾವ. ಇನ್ನು
‘ಆ ಗೋದೆ=ಆಗೋದೆ’ ಪದವು ಮರಾಠಿಯ ‘ಝಾಲಾಚ ಪಾಹಿಜೆ’’ಯ ಅಣಕು ಪದವಾಗಿದೆ.
(ಟಿಪ್ಪಣಿ: ಮರಾಠಿ ಚಳುವಳಿಗಾರರು ‘ಬೆಳಗಾಂವ, ಕಾರವಾರ ಮಹಾರಾಷ್ಟ್ರ ಝಾಲಾಚ ಪಾಹಿಜೆ” ಎಂದು ತಮ್ಮ ಚಳುವಳಿಯ ಸಮಯದಲ್ಲಿ ಘೋಷಿಸುತ್ತಿರುತ್ತಾರೆ.)

ಕನ್ನಡಿಗರಿಗೆ ಇದರಿಂದ  ಕೋಪ ಉಕ್ಕದಿದ್ದೀತೆ? ಆದರೆ ಕಾವೇರಿಯೂ ಸಹ (=ಕಾವು ಏರಿಯೂ ಸಹ) ಕನ್ನಡಿಗರು ಮರುಕ್ಷಣದಲ್ಲಿಯೇ ತಂಪಾಗುತ್ತಾರೆ. ಇದು ಕನ್ನಡದ ಗಾಳಿಯು ಅಂದರೆ ವಾತಾವರಣವು ಕಲಿಸುವ ನೀತಿಬೋಧೆ! ಇದು ಬೇಂದ್ರೆದೃಷ್ಟಿ. ಇಂತಹ ಶಾಂತಿಪಾಠಕ್ಕೆ ವಿರುದ್ಧವಾದ ವೀರಭಾವವನ್ನು ಪ್ರದರ್ಶಿಸುವ ಕುವೆಂಪು ಅವರ ಕವನ ಒಂದನ್ನು ನೋಡೋಣ:

ಕುವೆಂಪು ಕವನ:
ನೀ ಮೆಟ್ಟುವ ನೆಲ ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀಗಂಧದ ಮರ
ನೀ ಕುಡಿಯುವ ನೀರ್ ಕಾವೇರಿ!

ಈ ಕವನದಲ್ಲಿ ಕನ್ನಡಿಗರಿಗೆ ವೀರಕರೆ ಇದೆ, ಹೋರಾಟದ ಆದೇಶವಿದೆ. ಕೇವಲ ಬೆಳಗಾವಿ ಅಷ್ಟೇ ಏಕೆ, ಪುಣೆಯಲ್ಲಿ ನಾವಿದ್ದಾಗ, ಪುಣೆಯೂ ಸಹ ಕನ್ನಡ ನಾಡೇ ಎನ್ನುವ ಛಲವಿದೆ! ಕವನದ ಒಳ ಅರ್ಥ ಬೇರೆ ಇರಬಹುದು. ಕನ್ನಡಿಗರು ತಮ್ಮ ಕನ್ನಡತನವನ್ನು ಬಿಡಕೂಡದು ಎನ್ನುವ ಭಾವನೆ ಇಲ್ಲಿದೆ. ಆದರೆ ಈ ಭಾವನೆ ಆದೇಶದ ಮೂಲಕ ವ್ಯಕ್ತವಾಗುತ್ತಿದೆಯೇ ಹೊರತು, ಸಂವಾದದ ಮೂಲಕ ಅಲ್ಲ. ‘ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ!’ ಎನ್ನುವಲ್ಲಿಯೂ ಸಹ ಆದೇಶಭಾವನೆಯೇ ವ್ಯಕ್ತವಾಗಿದೆ. ಶೋಷಿತರ ಆಕ್ರಂದನವನ್ನು ಚಿತ್ರಿಸುವ ಕುವೆಂಪು ಅವರ ಕವನಗಳಲ್ಲಿಯೂ ಇದೇ ಮನೋಭಾವ ಎದ್ದು ಕಾಣುತ್ತದೆ. ಉದಾಹರಣೆಗೆ:
ಬಡಬಗ್ಗರ ಜಠರಾಗ್ನಿಯು ಎದ್ದು
ಗುಡಿಸಲುಗಳಿಗೆ ಬೆಂಕಿಯು ಬಿದ್ದು
ಧಗಧಗಧಗಧಗ  ಹೊತ್ತಿದುದು
ಭುಗಿಭುಗಿಲೆನ್ನುತ ಮುತ್ತಿದುದು!

ಮುಗಿಲಿನವರೆಗೂ ಬಾನಿನವರೆಗೂ
ದಿಕ್ಕುದಿಕ್ಕುಗಳ ಜುಟ್ಟಿನವರೆಗೂ
ಬಡವರ ಬೆಂಕಿಯ ನಾಲಗೆ ಚಾಚಿ
ಶ್ರೀಮಂತರನಪ್ಪಿತು ಬಾಚಿ!

ಈ ಕವನವನ್ನು ಬೇಂದ್ರೆಯವರ ಈ ಕವನದೊಂದಿಗೆ ಹೋಲಿಸಿರಿ:
ಕಿಕ್ಕಿರಿ ತುಂಬಿದೆ ಭೂಮಿಯ ಕಣಜ
ಕಕ್ಕಸಬಡುತಿದೆ ಬೊಕ್ಕಸದೊಡಲು
ಬಾಳಿಗಿಂತಲೂ ಕೂಳೇ ಮೇಲೊ?
ಬರಿದೊ ಬರಿದು, ತೆರವೊ ತೆರವು
ಬಡವರ ಬಗ್ಗರ ತುತ್ತಿನ ಚೀಲ!

ಬೇಂದ್ರೆಯವರ ಕವನದಲ್ಲಿ ಕರುಣಾಕ್ರಂದನವಿದೆಯೇ ಹೊರತು ರೋಷವಿಲ್ಲ! ಕುವೆಂಪು ಅವರ ಕವನದಲ್ಲಿ ಕ್ರಾಂತಿಯ ಸೂಚನೆ ಇದೆ. ಕುವೆಂಪು ಅವರ ಈ ಮನೋಭಾವಕ್ಕೆ ಕಾರಣವೇನು?......ಕುವೆಂಪು ತಮ್ಮನ್ನು ಲೋಕಶಿಕ್ಷಕರೆಂದು ಗುರುತಿಸಿಕೊಳ್ಳುತ್ತಾರೆ. ತಮ್ಮ ಸುತ್ತಲಿನ ಜನ ಕುರುಡರಾಗಿದ್ದಾರೆ, ಮೂಢರಾಗಿದ್ದಾರೆ; ಅವರನ್ನು ಎಚ್ಚರಿಸಬೇಕು ಎನ್ನುವುದು ಕುವೆಂಪು ಅವರ ಕಳಕಳಿಯಾಗಿದೆ. ಆದುದರಿಂದ  ಅವರ ಕವನಗಳು ಆದೇಶಾತ್ಮಕವಾಗಿವೆ; ತಮ್ಮ ಓದುಗನಿಂದ ದೂರ ನಿಂತು, ಎತ್ತರದಲ್ಲಿ ನಿಂತು ಅವರು ಅವನನ್ನು ಎಚ್ಚರಿಸುತ್ತಾರೆ. ಬೇಂದ್ರೆ ತಮ್ಮ ಸುತ್ತಲಿನ ಜನಪದದಲ್ಲಿ ಬೆರೆತು ಹೋದವರು. ಪಂಡಿತರ ಜೊತೆ ಬೆರೆಯುವಷ್ಟೇ ಸುಲಭವಾಗಿ ಅವರು ಗಾವಿಲನ ಜೊತೆಗೂ ಹರಟೆ ಹಚ್ಚುತ್ತಾರೆ. ಆದುದರಿಂದ ಗೆಳೆತನದ ಆತ್ಮೀಯ ಧಾಟಿ ಅವರ ಕವನಗಳಲ್ಲಿ ಕಂಡು ಬರುತ್ತದೆ!

(ಟಿಪ್ಪಣಿ: ಕುವೆಂಪು ತಮ್ಮ ಕವನವನ್ನು ಆದೇಶಾತ್ಮಕವಾಗಿ ಮಾಡುವ ಉದ್ದೇಶದಿಂದ, ಅನೇಕ ಸಲ ಕವನದ ಕಾವ್ಯಗುಣವನ್ನು ನಿರ್ಲಕ್ಷಿಸುತ್ತಾರೆ. ಉದಾಹರಣೆಗೆ, ಅವರ ಮೇಲಿನ ಕವನದಲ್ಲಿ ಬರುವ,  ‘ಮುಗಿಲಿನವರೆಗೂ ಬಾನಿನವರೆಗೂ…’ ಎನ್ನುವ ಸಾಲನ್ನು ಗಮನಿಸಿರಿ. ಮುಗಿಲು ಮತ್ತು ಬಾನು ಪದಗಳಲ್ಲಿ ಏನಾದರೂ ವ್ಯತ್ಯಾಸವಿದೆಯೆ? ಹಾಗಿದ್ದರೆ ಈ repetitionಗೆ ಕಾರಣವೇನು? ಬಹುಶಃ, ಕವನದಲ್ಲಿ ಆದೇಶಭಾವವನ್ನು ವರ್ಧಿಸುವದು ಅವರ ಉದ್ದೇಶವಾಗಿರಬಹುದು. ಇಂತಹ ಮತ್ತೊಂದು ಸಾಲು ‘ಸಬಕ್ತಗೀನ’ ಎನ್ನುವ ಅವರ ಕವನ ಒಂದರಲ್ಲಿ ಬರುತ್ತದೆ:
ಸಬಕ್ತಗೀನ್, ಸಬಕ್ತಗೀನ್
ಕತೆಯನವನ ಕೇಳ್ದೆಯೇನ್?
(ಮೊದಲ ಸಾಲಿನಲ್ಲಿ ಸಬಕ್ತಗೀನ್ ಎಂದು ಎರಡನೆಯ ಸಲ ಅನವಶ್ಯಕವಾಗಿ ಹೇಳಿರುವದು ಓದುಗನನ್ನು ಗಮನವನ್ನು ಎಳೆಯುವ ಉದ್ದೇಶಕ್ಕಾಗಿ ಇರಬಹುದೆ?)

ಬೇಂದ್ರೆಯವರ ಪ್ರಕೃತಿಗೀತೆಗಳಿಗೆ ಹಾಗು ಕುವೆಂಪು ಅವರ ಪ್ರಕೃತಿಗೀತೆಗಳಿಗೆ ಇದೇ ವ್ಯತ್ಯಾಸವಿದೆ. ಉದಾಹರಣೆಗೆ ಬೇಂದ್ರೆಯವರ ಪ್ರಸಿದ್ಧ ‘ಬೆಳಗು’ ಕವನದ ಕೊನೆಯಲ್ಲಿ, ‘ಶಾಂತಿರಸವೆ ಪ್ರೀತಿಯಿಂದಾ ಮೈದೋರಿತಣ್ಣಾ, ಇದು ಬರಿ ಬೆಳಗಲ್ಲೊ ಅಣ್ಣಾ’ ಎನ್ನುವ ಸಾಲನ್ನು ಪರಿಶೀಲಿಸಿರಿ. ಈ ಸಾಲು ನಿಸರ್ಗದ ಭವ್ಯತೆಯನ್ನು ಕೌತುಕದಿಂದ ನೋಡಿ, ಸಹೃದಯನೊಡನೆ ಪ್ರೀತಿಯಿಂದ ಹಂಚಿಕೊಳ್ಳುವ ಮನೋಭಾವವನ್ನು ತೋರಿಸುತ್ತದೆ. ಇದನ್ನು ಕುವೆಂಪು ಅವರ ಈ ಕವನದ ಜೊತೆಗೆ ಹೋಲಿಸಿರಿ:

ಓಡು ಹೊರಗೆ, ಓಡು ನೋಡು:
ಮೂಡುತಿಹನು ದಿನಮಣಿ!
ಹಚ್ಚನೆ ಹಸರು ಬಯಲ ಮೇಲೆ
ಮಿರುಗುತಿಹವು ದಿನಮಣಿ!
ಈ ಸಾಲುಗಳು ಓರ್ವ ನಿಸರ್ಗಪ್ರೇಮಿಯು ಉತ್ತುಂಗ ಸ್ಥಾನದಲ್ಲಿ ನಿಂತುಕೊಂಡು, ಅರಸಿಕನೊಬ್ಬನಿಗೆ ಕೊಡುವ ಶೈಕ್ಷಣಿಕ ಆದೇಶದಂತಿದೆ ಅಲ್ಲವೆ?

ಇನ್ನು ಬೇಂದ್ರೆಯವರ ಪ್ರೇಮಕವನಗಳನ್ನು ಯಾವ ಕವಿಯ ಕವನಗಳ ಜೊತೆಗೆ ತುಲನೆ ಮಾಡಬೇಕು? Of course ಕನ್ನಾಡಿನ
ಶಾಶ್ವತ ಪ್ರೇಮಕವಿಯಾದ ನರಸಿಂಹಸ್ವಾಮಿಯವರ ಕವನಗಳೊಂದಿಗೆ ಹಾಗು once again ಕುವೆಂಪು ಅವರ ಪ್ರೇಮಕವನಗಳೊಡನೆ!

ಬೇಂದ್ರೆಯವರು ಗ್ರಾಮೀಣ ಶೈಲಿಯಲ್ಲಿ ಬರೆದ ಪ್ರೇಮಕವನಗಳು ಪ್ರೇಮದ ವಿವಿಧ ಮುಖಗಳನ್ನು ತೋರಿಸುವ ಶ್ರೇಷ್ಠ ಕವನಗಳಾಗಿವೆ. ಉದಾಹರಣೆಗೆ, ನನ್ನವಳು, ಕಾಮಕಸ್ತೂರಿ, ಜನುಮದ ಜಾತ್ರಿ, ಒಲುಮೆಯ ಕಿಚ್ಚು ಇತ್ಯಾದಿ. ಆದರೆ ಅವರ ಅತ್ಯಂತ ಜನಪ್ರಿಯವಾದ ಪ್ರೇಮಕವನವನ್ನು ಗಮನಿಸಿರಿ:

‘ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು’

ಇಲ್ಲಿ ಪ್ರೇಮದ ಜೊತೆಗೆ ಬಡತನದ ತಾಪವು ತಳಕು ಹಾಕಿಕೊಂಡಿದೆ. ಆದರೆ ನರಸಿಂಹಸ್ವಾಮಿಯವರ ಪ್ರೇಮಕವನಗಳಲ್ಲಿ ಪ್ರೇಮವೇ ಮುಖ್ಯ, ಪ್ರೇಮವೇ ಅವರ ಸಿರಿಸಂಪತ್ತು. ಉದಾಹರಣಗೆ ಅವರ ‘ಗೃಹಲಕ್ಷ್ಮಿ’ ಕವನದ ಕೆಲವು ಸಾಲುಗಳನ್ನು ನೋಡಿರಿ:

ನನ್ನವಳು ನನ್ನೆದೆಯ ಹೊನ್ನಾಡನಾಡುವಳು
ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ
…………………………….
……………………………….
ಅಂಗಳದ ನಡುವೆ ಬೃಂದಾವನದ ಬಳಿ ನಿಂದು
ಹಾಡುವೆವು ಸಿರಿಯ ಕಂಡು.
ತಾರೆಗಳ ಮೀಟುವೆವು, ಚಂದಿರನ ದಾಟುವೆವು;
ಒಲುಮೆಯೊಳಗೊಂದು ನಾವು:
ನಮಗಿಲ್ಲ ನೋವು ಸಾವು.

ಬೇಂದ್ರೆಯವರ ಕವನವು ತನ್ನಲ್ಲಿಯ ಶ್ಲೇಷೆಗಳ ಚಮತ್ಕಾರದ ಮೂಲಕ,  ಬುದ್ಧಿಯನ್ನು ಚಕಿತಗೊಳಿಸುತ್ತದೆ. ಆದರೆ ಪ್ರೇಮವನ್ನೇ ತಮ್ಮ ಸಂಪತ್ತು ಎಂದು ಭಾವಿಸುವ ಪ್ರೇಮಿಗಳ ಪ್ರೇಮವನ್ನು ವರ್ಣಿಸುವ ನರಸಿಂಹಸ್ವಾಮಿಯವರ ಕವನದಲ್ಲಿ ಪ್ರೇಮದ ರೋಮಾಂಚಕತೆ ಇದೆ. ಈ ನವಿರು ಪ್ರೇಮವು ಮನಸ್ಸನ್ನು ತಟ್ಟುತ್ತದೆ. ಇದೇ ಕಾರಣದಿಂದಾಗಿ ನರಸಿಂಹಸ್ವಾಮಿಯವರು, ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ, ನನಗದುವೆ ಕೋಟಿ ರುಪಾಯಿ’ ಎಂದು ಹಾಡುವುದು.

ಇನ್ನು ಕುವೆಂಪು ಅವರ ಪ್ರೇಮಭಾವ ಎಂತಹುದು? ಈ ಕವನವನ್ನು ಗಮನಿಸಿರಿ:
ಷೋಡಶ ಚೈತ್ರದ ಸುಂದರಿ ನೀನು,
ಕಾಮನ ಬಿಲ್ಲಿನ ಬಣ್ಣದ ಬೋನು!’
ಬೇಂದ್ರೆ ಹಾಗು ನರಸಿಂಹಸ್ವಾಮಿಯವರ ಕವನಗಳ ನಾಯಕರು ಗಂಡು ಹೆಣ್ಣಿನ ನಡುವಿನ ಪ್ರೇಮವನ್ನು ವರ್ಣಿಸಿದರೆ, ಕುವೆಂಪು ಅವರ ಕವನದ ನಾಯಕನು ಹೆಣ್ಣಿನ ದೈಹಿಕ ಸೌಂದರ್ಯಕ್ಕೆ ಮಹತ್ವ ನೀಡುತ್ತಾನೆ. ಕುವೆಂಪು ಅವರ ಈ ಕೆಳಗಿನ ಕವನಗಳನ್ನು ಗಮನಿಸಿರಿ:
(೧) ಮನ್ಮಥ ಚುಂಬನ ದಂತಕ್ಷತದಿಂ
ಬೆಚ್ಚನೆ ಕೆನ್ನೆತ್ತರು ಸೋರಿ
ರತಿ-ಚೆಂದುಟಿಯಿಂದಿಳೆಗುರುಳುವಂತೆ ತಾಂ
ಮತ್ತೆ ಗುಲಾಬಿಯವೊಲು ತೋರಿ!

(೨)ದಿನವೊಂದರೊಳೆ ನಿನ್ನ ಎದೆಯ ರಸವನು ಹೀರಿ
ಸರ್ವಸ್ವವನು ನಲ್ಲೆ; ಸುಲಿಯಬಲ್ಲೆ!
ಮುತ್ತೊಂದರೊಳೆ ಮೊಗೆದು ಮನದಣಿಯೆ ಸೊದೆಯೀಂಟಿ
ಆನಂದದಮರತೆಯ ಹೊಂದಬಲ್ಲೆ!
………………………………….
…………………………………
ಸಂಯೋಗವೊಂದರೊಳೆ ನಿನ್ನ ನುಣ್ಣನೆ ನೊಣೆದು
ರಸಪೂರ್ಣ ಶೂನ್ಯತೆಗೆ ಕಳುಹಬಲ್ಲೆ!

ಈ ಎರಡು ಕವನಗಳಂತೂ ದೈಹಿಕ ರತಿಭಾವದ ಕವನಗಳೇ ಆಗಿವೆ. ಅಷ್ಟೇ ಅಲ್ಲ ಇಲ್ಲಿರುವ ಹಿಂಸಾರತಿಯನ್ನು ಗಮನಿಸಿದಾಗ, ಕುವೆಂಪು ಅವರು sadist ಇದ್ದರೇನೊ ಎನ್ನುವ ಅನುಮಾನವಾದರೆ ಆಶ್ಚರ್ಯವಿಲ್ಲ. ಬೇಂದ್ರೆಯವರಲ್ಲಿ ದೈಹಿಕತೆ ದೈವಿಕತೆ ಆದರೆ, ಕುವೆಂಪುರವರಲ್ಲಿ ದೈವಿಕತೆ ದೈಹಿಕತೆಯಾಗುತ್ತದೆ.

ನವೋದಯದ ಮೂವರು ಶ್ರೇಷ್ಠ ಕವಿಗಳ ವಿಭಿನ್ನ ಮನೋಭಾವಗಳಿಗೆ ಕಾರಣವೇನು? ನನಗೆ ಹೀಗೆನ್ನಿಸುತ್ತದೆ:
(೧) ಬೇಂದ್ರೆ ಬಡತನದಲ್ಲಿ ಬೆಂದವರು, ನರಸಿಂಹಸ್ವಾಮಿ ಬಡತನದಲ್ಲಿ ಬಾಳಿದವರು, ಕುವೆಂಪು ಸ್ಥಿತಿವಂತರು.
(೨) ಬೇಂದ್ರೆ ಪಂಡಿತ, ಪಾಮರ ಎಲ್ಲರೊಡನೆಯೂ ಬೆರೆತವರು; ಶೋಷಣೆಯ ವಿರುದ್ಧ ಸ್ಪಂದಿಸುತ್ತಿದ್ದರೆ ಹೊರತು ಹೋರಾಟಗಾರಲ್ಲ. ಕುವೆಂಪು ಲೋಕಶಿಕ್ಷಕನ ಪಾತ್ರವನ್ನು ನಿರ್ವಹಿಸಲು ಬಯಸಿದವರು; ಶೋಷಣೆಯ ವಿರುದ್ಧ ಹೋರಾಟ ಮನೋಭಾವವುಳ್ಳ ಚಿಂತಕರು.
(೩) ಬೇಂದ್ರೆಯವರಿಗೆ ದಾಂಪತ್ಯಕಾಮವು ಪ್ರೇಮವಾಗಿ, ದೈವಭಕ್ತಿಯಾಗಿ ಪರಿವರ್ತನೆಯಾಗಬೇಕು ಎನ್ನುವ ತಾತ್ವಿಕ ಆದರ್ಶವಿತ್ತು. ನರಸಿಂಹಸ್ವಾಮಿಗಳಿಗೆ ದಾಂಪತ್ಯಪ್ರೇಮವೇ ಮೂಲದ್ರವ್ಯ; ಕಾಮ ಅದಕ್ಕೆ ಪೂರಕ. ಕುವೆಂಪು ಅವರಿಗೆ ದೈಹಿಕ ಕಾಮವು ಒಂದು ಮಹತ್ವದ ವಿಷಯ. ಬಹುಶಃ ರಾಮಕೃಷ್ಣ ಆಶ್ರಮದ ಜೊತೆಗೆ ದೀರ್ಘ ಸಂಬಂಧವನ್ನು ಹೊಂದಿದ ಅವರಿಗೆ, ವಿರಕ್ತಿಯ ವಿರುದ್ಧದ ಅತಿರತಿಯ ಮನೋಭಾವವು ಮೂಡಿರಬಹುದು.

ಈ ರೀತಿಯಾಗಿ ಕವಿಯ ಪರಿಸರವು ಅವನನ್ನು ಹೇಗೆ ರೂಪಿಸುತ್ತದೆ, ಅವನ ಸಾಹಿತ್ಯವನ್ನು ಹೇಗೆ ಪ್ರಭಾವಿಸುತ್ತದೆ ಎನ್ನುವುದನ್ನು ನೋಡಬಹುದು.

ಈ ಲೇಖನಕ್ಕೆ ಅಪ್ರಸ್ತುತವಾದರೂ ಸಹ ಮತ್ತೆ ಕೆಲವು ಲೇಖಕರ ಮನೋಧರ್ಮವನ್ನು ಅವರ ಸಾಹಿತ್ಯದ ಮೂಲಕ ಇಲ್ಲಿ ಪರಿಶೀಲಿಸುವ ನನ್ನ ಚಪಲವನ್ನು ದಯವಿಟ್ಟು  ಕ್ಷಮಿಸಿ,… ಮುಂದುವರೆಯಿರಿ.

ಮಾಸ್ತಿಯವರ ಸಾಹಿತ್ಯವು ಆದರ್ಶದ ಸಾಹಿತ್ಯ ಹಾಗು ಒಳ್ಳೆಯ ಮೌಲ್ಯಗಳ ಸಾಹಿತ್ಯ. ಮಾಸ್ತಿಯವರು ಹೆಣ್ಣುಮಕ್ಕಳ ಬಗೆಗೆ ತುಂಬ ಅನುಕಂಪ ಉಳ್ಳವರು. ‘ವೆಂಕಟಿಗನ ಹೆಂಡತಿ’, ‘ಗೌತಮಿ ಹೇಳಿದ ಕತೆ’ ಮೊದಲಾದ ಕತೆಗಳು ಈ ಮಾತನ್ನು ಸ್ಪಷ್ಟಪಡಿಸುತ್ತವೆ. ಹೀಗಿದ್ದರೂ ಸಹ ಲಂಕೇಶರು ಮಾಸ್ತಿಯವರನ್ನು ಕಂದಾಚಾರಿಗಳು, ಸಂಪ್ರದಾಯನಿಷ್ಠರು ಎಂದೆಲ್ಲ ಹೀಯಾಳಿಸುತ್ತಿದ್ದರು. ಮಾಸ್ತಿಯವರು ಪ್ರತಿಯಾಗಿ ‘ಸಂಪ್ರದಾಯವನ್ನು ತುಳಿಯುವುದೇ ಪ್ರಗತಿಯಲ್ಲ’ ಎಂದಿದ್ದಾರೆ. ಮಾಸ್ತಿಯವರ ಮನೋಧರ್ಮಕ್ಕೆ ಕಾರಣವೇನು?.... ಮಾಸ್ತಿಯವರ ಕಾಲವೇ ಆದರ್ಶದ ಕಾಲವಾಗಿತ್ತು, ನಾಡು ಹಾಗು ನುಡಿಗಳನ್ನು ಕಟ್ಟುವ ಕಾಲವಾಗಿತ್ತು. ಮಹಾತ್ಮಾ ಗಾಂಧಿಯಂತಹ ಮಹಾಪುರುಷರನ್ನು ನೋಡಿದ ಕನ್ನಡ ಲೇಖಕರೆಲ್ಲ (ಮಾಸ್ತಿ, ಕಾರಂತ, ಬೇಂದ್ರೆ, ಕುವೆಂಪು ಇತ್ಯಾದಿ) ಆದರ್ಶದ ಸಾಹಿತ್ಯವನ್ನೇ ರಚಿಸಿದ್ದಾರೆ. ತದ್ವಿರುದ್ಧವಾಗಿ, ಲಂಕೇಶರ ಸಮಯದಲ್ಲಿ ಸಾಮಾಜಿಕ ಮೌಲ್ಯಗಳ ಅವನತಿಯಾಗಿತ್ತು. ಲಂಕೇಶರು ಇಂತಹ ಸಮಾಜದ ಚಿತ್ರಣವನ್ನೇ ತಮ್ಮ ಕತೆಗಳಲ್ಲಿ ನೀಡಿದ್ದಾರೆ. ಅವರ ‘ವಾಮನ’, ‘ಮೈಲಿಮುಖದ ಹಜಾಮ’ ಮೊದಲಾದ ಕತೆಗಳು ಮಾನವನ ಕ್ಷುಲ್ಲಕತೆಯನ್ನು ತೋರಿಸುವ ಉತ್ತಮ ಉದಾಹರಣೆಗಳಾಗಿವೆ. ಅವರ ಪ್ರಸಿದ್ಧ ಕವನ ‘ಅವ್ವ’ ಸಹ, ಕ್ಷುಲ್ಲಕ ಸಮಾಜದಲ್ಲಿ ಬದುಕಬೇಕಾದ, ತಾಯಿಯೊಬ್ಬಳ ಹೋರಾಟದ ಚಿತ್ರವೇ ಆಗಿದೆ.

ಇನ್ನು ಅನಂತಮೂರ್ತಿಯವರ ಬಗೆಗೆ ಹೇಳಬೇಕಾಗಿಲ್ಲ. ಅವರೊಬ್ಬ ಸ್ವಮೋಹಿ, ಪ್ರದರ್ಶನಶೀಲ, ಮಿಥ್ಯಾಸಮಾಜವಾದಿ ವ್ಯಕ್ತಿ ಎನ್ನುವುದು ಅವರ ಸಾಹಿತ್ಯವನ್ನು ಪರಿಶೀಲಿಸಿದಾಗ ಸ್ಪಷ್ಟವಾಗುತ್ತದೆ. ಅವರ ಕತೆಗಳೆಲ್ಲ ಕಥಾನಾಯಕನ (ಅಂದರೆ ಸ್ವತಃ ಅವರ) ದ್ವಂದ್ವದ ಸುತ್ತಲೂ ಗಿರಕಿ ಹೊಡೆಯುತ್ತಿರುತ್ತವೆ. ಜಾನಪದದ ಬಗೆಗೆ ಬಾಯಿತುಂಬ ಮಾತನಾಡುವ ಅನಂತಮೂರ್ತಿಯವರ ಬರವಣಿಗೆ ಸಂಸ್ಕೃತಭೂಯಿಷ್ಠ ಹಾಗು ಅನವಶ್ಯಕವಾಗಿ ಸಂಕೀರ್ಣ ಶೈಲಿಯನ್ನು ಬಳಸಿದ ಬರವಣಿಗೆಯಾಗಿದೆ.ಅವರು ಬದುಕಿನಲ್ಲಿ ಮೇಲೆ ಏರಿದಂತೆಲ್ಲ, ಅವರ ಕಥಾನಾಯಕರೂ ಸಹ ಮೇಲ್ ಸ್ತರಗಳ ವ್ಯಕ್ತಿಗಳಾಗಿದ್ದದ್ದನ್ನು ಗಮನಿಸಬಹುದು. ಇದಕ್ಕೆ ಕಾರಣವೇನು?....ಬಹುಶಃ ಓರ್ವ ಡಾಂಭಿಕ ವ್ಯಕ್ತಿಯಲ್ಲಿ ಇರುವ  ಗುಣಗಳಿವು ಎಂದು ಊಹಿಸಬಹುದೆ? ಅವರು ಗತಿಸಿದ ಬಳಿಕ ನಡೆದ ಅವರ ಶವಸಂಸ್ಕಾರವನ್ನು ಒಂದು great irony ಎಂದು ಕರೆಯಬಹುದೇನೊ!
(‘ನಾರಣಪ್ಪ ಬ್ರಾಹ್ಮಣ್ಯವನ್ನು ಬಿಟ್ಟರೂ, ಬ್ರಾಹ್ಮಣ್ಯ ನಾರಣಪ್ಪನನ್ನು ಬಿಡಲಿಲ್ಲ.’---ಸಂಸ್ಕಾರ ಕಾದಂಬರಿ)

ದೇವನೂರು ಮಹಾದೇವರ ಸಾಹಿತ್ಯಗುಣಗಳು ಇದಕ್ಕೆ ವಿರುದ್ಧವಾಗಿವೆ. ಅವರ ಅತ್ಯುತ್ತಮ ಕಥೆ ‘ಮಾರಿಕೊಂಡವರು’ ಕಥೆಯಲ್ಲಿ ಅಸಹಾಯಕರ ಎದೆ ಚುಚ್ಚುವ ಚಿತ್ರಣವಿದೆ. ಇದಕ್ಕೆ ಕಾರಣವೇನು? ……..ದೇವನೂರು ಮಹಾದೇವರು ಪ್ರಾಮಾಣಿಕ ವ್ಯಕ್ತಿ. ತಮ್ಮ ನೀತಿಗೆ ತಕ್ಕಂತೆ ಫೋರ್ಡ ಫೌಂಡೇಶನ್ ಕೊಡಮಾಡಿದ ಸಂಶೋಧನಾವೇತನವನ್ನು ತಿರಸ್ಕರಿಸಿದವರು. ತುಳಿತಕ್ಕೊಳಗಾದ ಸಮಾಜವನ್ನು ಅಂತಃಕರಣದಿಂದ ನೋಡುವವರು. ನಿಜವಾಗಿ ಇವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯಬೇಕಾಗಿತ್ತು. ಆದರೆ ಇಲ್ಲಿಯೂ ಸಹ ವಶೀಲಿಬಾಜಿ ಮುಖ್ಯವಾಗಿರುವದರಿಂದ ಅದು ಯಾರ್ಯಾರದೋ ಪಾಲಾಗಿದೆ. (ನವ್ಯ ಕಾದಂಬರಿಗಳ ಮೊದಲಿಗರಾದ ಶಾಂತಿನಾಥ ದೇಸಾಯಿಯವರು ಓರ್ವ ಗೆಳೆಯರಿಗೆ ಈ ವಶೀಲಿಬಾಜಿಯ ಬಗೆಗೆ ಹೇಳಿದ್ದರ ಲಿಖಿತ ದಾಖಲೆ ಇದೆ.)

ದೇವನೂರು ಅವರ ‘ಕುಸುಮಬಾಲೆ’ ಕಥಾನಕವು ಸಾಮಾನ್ಯ ಓದುಗನಿಗೆ ತಿಳಿಯದ ಶೈಲಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಸ್ವತಃ ದೇವನೂರು ಅವರು ಇದಕ್ಕೆ ಕಾರಣ ನೀಡುತ್ತ, ಯಾವ ಸಮಾಜದ ಚಿತ್ರಣವನ್ನು ಕೊಡುತ್ತಿದ್ದೇನೆಯೊ ಅದೇ ಸಮಾಜದ ಭಾಷೆ ಹಾಗು ಶೈಲಿಯನ್ನು ಬಳಸಿದ್ದೇನೆ ಎನ್ನುವ ವಿವರಣೆ ನೀಡಿದ್ದಾರೆ ಎಂದು ಕೇಳಿದ್ದೇನೆ. ಆದರೆ ಇಲ್ಲಿ ಮತ್ತೂ ಒಂದು ಕಾರಣವಿದೆ ಎಂದು ನನಗೆ ಅನಿಸುತ್ತದೆ. ದೇವನೂರು ಅವರ ಸಮಗ್ರ ಸಾಹಿತ್ಯವನ್ನು ಪರಿಶೀಲಿಸಿದಾಗ ಒಂದು ವಿಷಯ ಹೊಳೆಯುತ್ತದೆ. ಅವರು ಶೋಷಿತರ ಮತ್ತು ಶೋಷಕರ ಬಗೆಗೆ ಬರೆಯುವಾಗ ಸ್ಪಷ್ಟ ಶೈಲಿಯಲ್ಲಿ, ವ್ಯಕ್ತವಾಗಿ ಬರೆಯಲು ಮನಸ್ಸು ಮಾಡುವದಿಲ್ಲ. ಒಂದು ಉದಾಹರಣೆಯನ್ನು ಕೊಡೋಣ. ತನ್ನ ಕಾಲದ ಚಿತ್ರಶೈಲಿಯನ್ನು ತ್ಯಜಿಸಿದ ಪಿಕಾಸೊ, ಕ್ಯೂಬಿಕ್ ಶೈಲಿಯಲ್ಲಿ ಚಿತ್ರಿಸಲು ಕಾರಣವೇನು? Too open, too simple, too manifest ಶೈಲಿ ಬೇಡವೆನ್ನುವ ಉದ್ದೇಶದಿಂದ ಅಲ್ಲವೆ? ಮಾಸ್ತಿ, ಲಂಕೇಶ ಹಾಗು ದೇವನೂರು ಮಹಾದೇವರ ನಂತರದ ಮಹತ್ವದ ಲೇಖಕರಾದ ಅಮರೇಶ ನುಗಡೋಣಿಯವರು ಅನೇಕ ಉತ್ತಮ ಕತೆಗಳನ್ನು ನೀಡಿದ್ದಾರೆ. ಆದರೆ ಅವರ ಶೈಲಿ ಮಾತ್ರ too open ಶೈಲಿಯಾಗಿದೆ.

ಶಿವರಾಮ ಕಾರಂತರ ಕಾದಂಬರಿಗಳ ಶೈಲಿ ಅಷ್ಟೇಕೆ plain ಆಗಿರುತ್ತದೆ? ಯಕ್ಷಗಾನಕುಶಲರಾದ ಕಾರಂತರು ತಮ್ಮ ಕಾದಂಬರಿಗಳಲ್ಲಿ ಸರಳ ಶೈಲಿಯನ್ನೇಕೆ ಬಳಸುತ್ತಾರೆ?...ಕಾರಂತರ ಕಾದಂಬರಿಗಳಲ್ಲಿ ಸತ್ಯದ ದರ್ಶನವಿರುತ್ತದೆ, ಮಾನವೀಯ ಕಾಳಜಿ ಇರುತ್ತದೆ. ಪ್ರಯತ್ನಶೀಲತೆಯ ಸಂದೇಶವಿರುತ್ತದೆ. ಆದುದರಿಂದ ಅವರು ತಮ್ಮ ಅಭಿಪ್ರಾಯಗಳಿಗೆ ಬಣ್ಣ ಕೊಟ್ಟು ಹೇಳಲು ಬಯಸುವದಿಲ್ಲ. ಸತ್ಯವು ಶ್ರವಣಬೆಳಗೊಳದ ಗೊಮ್ಮಟೇಶ್ವರನ ಹಾಗೆ ಬತ್ತಲೆಯಾಗಿರಬೇಕು. ಅದಕ್ಕೆ ತೊಡುಗೆಯನ್ನು ತೊಡಿಸಿದರೆ, ಸತ್ಯ ಮರೆಯಾಗುತ್ತದೆ. ಇದು ಕಾರಂತರ ಉದ್ದೇಶ! ಕಾರಂತರು ಎಷ್ಟು ನೇರವಾದ ಮನುಷ್ಯರೋ ಅವರ ಕಾದಂಬರಿಗಳೂ ಅಷ್ಟೇ ನೇರವಾಗಿವೆ.

ಮಾತು ಎಲ್ಲೆಲ್ಲಿಗೋ ಹೋಯಿತು.
ಕ್ಷಮೆ ಇರಲಿ.