Tuesday, October 14, 2014

ಬೇಂದ್ರೆ ದರ್ಶನ-೨


ಶೋಷಣೆಯ ವಿರುದ್ಧ ಬೇಂದ್ರೆಯವರು ಅನೇಕ ಕವನಗಳನ್ನು ರಚಿಸಿದ್ದಾರೆ. ಈ ಕವನಗಳಲ್ಲಿ ಮರುಕ ಹಾಗು ಕಳಕಳಿ ಇವೆ, ಆದರೆ ಆಕ್ರೋಶವಿಲ್ಲ. ಇದು ಬೇಂದ್ರೆಯವರ ಮನೋಧರ್ಮ. ಪ್ರತಿಯೊಬ್ಬ ಲೇಖಕನ ಬರವಣಿಗೆಯು ಅವನ ಬಾಲ್ಯದ ಘಟನೆಗಳಿಂದ ಹಾಗು ಸಂಸ್ಕಾರಗಳಿಂದ ರೂಪಿತವಾಗಿರುವುದು ಸಹಜವಷ್ಟೇ. ಬೇಂದ್ರೆಯವರ ಕಾವ್ಯವೂ ಸಹ ಇದಕ್ಕೆ ಹೊರತಲ್ಲ. ಬೇಂದ್ರೆಯವರ ಬದುಕಿನ ಬಹುಭಾಗ  ತಾಪದಲ್ಲಿಯೇ ಕಳೆಯಿತು. ‘ಬೆಂದರೆ ಅದು ಬೇಂದ್ರೆ’ ಎನ್ನುವುದು ಗಾದೆಯ ಮಾತೇ ಆಗಿ ಹೋಗಿದೆ. ‘ಬೇಯುವುದು’ ಎನ್ನುವ ಈ ಕನ್ನಡ ಪದಕ್ಕೆ ಸಂಸ್ಕೃತದ ‘ತಪ’ ಎನ್ನುವ ಪದ ಸಂವಾದಿಯಾಗಿದೆ. ತಪದಿಂದಲೇ ತಪಸ್ಸು ಹುಟ್ಟಿದೆ; ತಪದಿಂದಲೇ ತಾಪ ಹಾಗು ಸಂತಾಪ ಹುಟ್ಟಿವೆ. ತಾಪದಲ್ಲಿಯೇ ತಪಸ್ಸು ಹುಟ್ಟುತ್ತದೆ. ಅಂದರೆ ಬೇಂದ್ರೆಯವರ ತಾಪವು ಅವರ ಜೀವಮಾನದ ತಪಸ್ಸೇ ಆಗಿದೆ. ತಪಸ್ವಿಯು ಮುನಿಯಬಹುದು ಆದರೆ ಅವನಲ್ಲಿ ರೊಚ್ಚು ಇರುವುದಿಲ್ಲ. ಬೇಂದ್ರೆಯವರ ಸಿಟ್ಟೂ ಅದೇ ತರಹದ್ದು. ಅಲ್ಲದೆ ಅವರು ಸ್ನೇಹಜೀವಿ. ನಿಮ್ಮೊಡನೆ ಗಂಟೆಗಟ್ಟಲೆ ಅವರು ಹರಟೆ ಹೊಡೆಯುತ್ತಾರೆ. ಅವರ ಹರಟೆಯಲ್ಲಿ ಗೆಳೆತನದ ಸಂದೇಶವಿರುತ್ತದೆಯೇ ಹೊರತು ಅಧಿಕಾರದ ಆದೇಶವಿರುವದಿಲ್ಲ!
(ನೆನಪಿಸಿಕೊಳ್ಳಿ: ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
                  ನೀಡುವೆನು ರಸಿಕ ನಿನಗೆ
                  ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
                  ಆ ಸವಿಯ ಹಣಿಸು ನನಗೆ.)           

ಬೇಂದ್ರೆಯವರ ‘ಗರಿ’ ಕವನ ಸಂಕಲನದ concordance ಮಾಡಿದಾಗ ನನಗೆ ಕಂಡದ್ದು: ಅವರು ಬಳಸಿದ ೭೧೫೦ ಪದಗಳ ಪೈಕಿ ಅತ್ಯಂತ ಹೆಚ್ಚಿನ ಪದಗಳು ಅಂದರೆ ೨೯೩ ಪದಗಳು ಆತ್ಮೀಯವಾಚಕ ಪದಗಳಾಗಿವೆ. ಬೇಂದ್ರೆಯವರ ಇಂತಹ ಮನೋಧರ್ಮವನ್ನು ಸೂಚಿಸುವ ಕೆಲವು ಕವನಗಳನ್ನು ಇಲ್ಲಿ ನೋಡೋಣ. ಆದರೆ, ಸುಮಾರಾಗಿ ಇದಕ್ಕೆ ವಿರುದ್ಧವಾದ ಮನೋಧರ್ಮದ, ಬೇರೊಬ್ಬ ಕವಿಯ ಕವನಗಳನ್ನು ನೋಡಿದಾಗ ಮಾತ್ರ ವ್ಯತ್ಯಾಸವು ಸ್ಪಷ್ಟವಾಗುವುದು. ಕುವೆಂಪುರವರ ಕವನಗಳು ಶೋಷಣೆಯ ವಿರುದ್ಧ ಸಿಡಿದೇಳುವ ಹಾಗು ಆದೇಶ ನೀಡುವ ಕವನಗಳಾಗಿರುವುದರಿಂದ ಅವರ ಕವನಗಳನ್ನು ಜೊತೆಜೊತೆಯಾಗಿ ಪರಿಶೀಲಿಸುವುದು ಅನುಕೂಲಕರವಾಗಿದೆ. ಈ ಹೋಲಿಕೆಯು ಕೇವಲ ಮನೋಧರ್ಮದ ಹೋಲಿಕೆ ಮಾತ್ರವಾಗಿದ್ದು ಈ ಕವಿಗಳ ಕಾವ್ಯದ ತುಲನಾತ್ಮಕ ಮೌಲ್ಯಮಾಪನ ಅಲ್ಲವೆಂದು ನಮ್ರತೆಯಿಂದ ಹೇಳಬಯಸುತ್ತೇನೆ.   

ಬೇಂದ್ರೆ ಕವನ:
ಕನ್ನಡ ನುಡಿದಿತು ಕನ್ನಡ ಹಕ್ಕಿ
ಕನ್ನಡವೆಂದಿತು ಆ ಗೋದೆ
ಕಾವೇರಿಯು ತಂಪಾಯಿತು, ಕನ್ನಡ
ಗಾಳಿಯು ಉಸಿರಿತು ಈ ಬೋಧೆ.

ಗೋದಾವರಿ ನದಿಯ ದಂಡೆಯ ಮೇಲೆ ಕನ್ನಡ ಎನ್ನುವ ಒಂದು ಹಳ್ಳಿ ಇದೆ. ಅಲ್ಲಿಯ ಜನರ ಮಾತೂ ಸಹ ಕನ್ನಡವೇ. ಆದುದರಿಂದ ಗೋದಾವರಿ   ತಾಯಿಯೂ ಸಹ ಕನ್ನಡವನ್ನೇ ಉಸಿರುತ್ತಾಳೆ. ಇದು ಮೊದಲೆರಡು ಸಾಲುಗಳ ಭಾವ. ಇನ್ನು
‘ಆ ಗೋದೆ=ಆಗೋದೆ’ ಪದವು ಮರಾಠಿಯ ‘ಝಾಲಾಚ ಪಾಹಿಜೆ’’ಯ ಅಣಕು ಪದವಾಗಿದೆ.
(ಟಿಪ್ಪಣಿ: ಮರಾಠಿ ಚಳುವಳಿಗಾರರು ‘ಬೆಳಗಾಂವ, ಕಾರವಾರ ಮಹಾರಾಷ್ಟ್ರ ಝಾಲಾಚ ಪಾಹಿಜೆ” ಎಂದು ತಮ್ಮ ಚಳುವಳಿಯ ಸಮಯದಲ್ಲಿ ಘೋಷಿಸುತ್ತಿರುತ್ತಾರೆ.)

ಕನ್ನಡಿಗರಿಗೆ ಇದರಿಂದ  ಕೋಪ ಉಕ್ಕದಿದ್ದೀತೆ? ಆದರೆ ಕಾವೇರಿಯೂ ಸಹ (=ಕಾವು ಏರಿಯೂ ಸಹ) ಕನ್ನಡಿಗರು ಮರುಕ್ಷಣದಲ್ಲಿಯೇ ತಂಪಾಗುತ್ತಾರೆ. ಇದು ಕನ್ನಡದ ಗಾಳಿಯು ಅಂದರೆ ವಾತಾವರಣವು ಕಲಿಸುವ ನೀತಿಬೋಧೆ! ಇದು ಬೇಂದ್ರೆದೃಷ್ಟಿ. ಇಂತಹ ಶಾಂತಿಪಾಠಕ್ಕೆ ವಿರುದ್ಧವಾದ ವೀರಭಾವವನ್ನು ಪ್ರದರ್ಶಿಸುವ ಕುವೆಂಪು ಅವರ ಕವನ ಒಂದನ್ನು ನೋಡೋಣ:

ಕುವೆಂಪು ಕವನ:
ನೀ ಮೆಟ್ಟುವ ನೆಲ ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀಗಂಧದ ಮರ
ನೀ ಕುಡಿಯುವ ನೀರ್ ಕಾವೇರಿ!

ಈ ಕವನದಲ್ಲಿ ಕನ್ನಡಿಗರಿಗೆ ವೀರಕರೆ ಇದೆ, ಹೋರಾಟದ ಆದೇಶವಿದೆ. ಕೇವಲ ಬೆಳಗಾವಿ ಅಷ್ಟೇ ಏಕೆ, ಪುಣೆಯಲ್ಲಿ ನಾವಿದ್ದಾಗ, ಪುಣೆಯೂ ಸಹ ಕನ್ನಡ ನಾಡೇ ಎನ್ನುವ ಛಲವಿದೆ! ಕವನದ ಒಳ ಅರ್ಥ ಬೇರೆ ಇರಬಹುದು. ಕನ್ನಡಿಗರು ತಮ್ಮ ಕನ್ನಡತನವನ್ನು ಬಿಡಕೂಡದು ಎನ್ನುವ ಭಾವನೆ ಇಲ್ಲಿದೆ. ಆದರೆ ಈ ಭಾವನೆ ಆದೇಶದ ಮೂಲಕ ವ್ಯಕ್ತವಾಗುತ್ತಿದೆಯೇ ಹೊರತು, ಸಂವಾದದ ಮೂಲಕ ಅಲ್ಲ. ‘ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ!’ ಎನ್ನುವಲ್ಲಿಯೂ ಸಹ ಆದೇಶಭಾವನೆಯೇ ವ್ಯಕ್ತವಾಗಿದೆ. ಶೋಷಿತರ ಆಕ್ರಂದನವನ್ನು ಚಿತ್ರಿಸುವ ಕುವೆಂಪು ಅವರ ಕವನಗಳಲ್ಲಿಯೂ ಇದೇ ಮನೋಭಾವ ಎದ್ದು ಕಾಣುತ್ತದೆ. ಉದಾಹರಣೆಗೆ:
ಬಡಬಗ್ಗರ ಜಠರಾಗ್ನಿಯು ಎದ್ದು
ಗುಡಿಸಲುಗಳಿಗೆ ಬೆಂಕಿಯು ಬಿದ್ದು
ಧಗಧಗಧಗಧಗ  ಹೊತ್ತಿದುದು
ಭುಗಿಭುಗಿಲೆನ್ನುತ ಮುತ್ತಿದುದು!

ಮುಗಿಲಿನವರೆಗೂ ಬಾನಿನವರೆಗೂ
ದಿಕ್ಕುದಿಕ್ಕುಗಳ ಜುಟ್ಟಿನವರೆಗೂ
ಬಡವರ ಬೆಂಕಿಯ ನಾಲಗೆ ಚಾಚಿ
ಶ್ರೀಮಂತರನಪ್ಪಿತು ಬಾಚಿ!

ಈ ಕವನವನ್ನು ಬೇಂದ್ರೆಯವರ ಈ ಕವನದೊಂದಿಗೆ ಹೋಲಿಸಿರಿ:
ಕಿಕ್ಕಿರಿ ತುಂಬಿದೆ ಭೂಮಿಯ ಕಣಜ
ಕಕ್ಕಸಬಡುತಿದೆ ಬೊಕ್ಕಸದೊಡಲು
ಬಾಳಿಗಿಂತಲೂ ಕೂಳೇ ಮೇಲೊ?
ಬರಿದೊ ಬರಿದು, ತೆರವೊ ತೆರವು
ಬಡವರ ಬಗ್ಗರ ತುತ್ತಿನ ಚೀಲ!

ಬೇಂದ್ರೆಯವರ ಕವನದಲ್ಲಿ ಕರುಣಾಕ್ರಂದನವಿದೆಯೇ ಹೊರತು ರೋಷವಿಲ್ಲ! ಕುವೆಂಪು ಅವರ ಕವನದಲ್ಲಿ ಕ್ರಾಂತಿಯ ಸೂಚನೆ ಇದೆ. ಕುವೆಂಪು ಅವರ ಈ ಮನೋಭಾವಕ್ಕೆ ಕಾರಣವೇನು?......ಕುವೆಂಪು ತಮ್ಮನ್ನು ಲೋಕಶಿಕ್ಷಕರೆಂದು ಗುರುತಿಸಿಕೊಳ್ಳುತ್ತಾರೆ. ತಮ್ಮ ಸುತ್ತಲಿನ ಜನ ಕುರುಡರಾಗಿದ್ದಾರೆ, ಮೂಢರಾಗಿದ್ದಾರೆ; ಅವರನ್ನು ಎಚ್ಚರಿಸಬೇಕು ಎನ್ನುವುದು ಕುವೆಂಪು ಅವರ ಕಳಕಳಿಯಾಗಿದೆ. ಆದುದರಿಂದ  ಅವರ ಕವನಗಳು ಆದೇಶಾತ್ಮಕವಾಗಿವೆ; ತಮ್ಮ ಓದುಗನಿಂದ ದೂರ ನಿಂತು, ಎತ್ತರದಲ್ಲಿ ನಿಂತು ಅವರು ಅವನನ್ನು ಎಚ್ಚರಿಸುತ್ತಾರೆ. ಬೇಂದ್ರೆ ತಮ್ಮ ಸುತ್ತಲಿನ ಜನಪದದಲ್ಲಿ ಬೆರೆತು ಹೋದವರು. ಪಂಡಿತರ ಜೊತೆ ಬೆರೆಯುವಷ್ಟೇ ಸುಲಭವಾಗಿ ಅವರು ಗಾವಿಲನ ಜೊತೆಗೂ ಹರಟೆ ಹಚ್ಚುತ್ತಾರೆ. ಆದುದರಿಂದ ಗೆಳೆತನದ ಆತ್ಮೀಯ ಧಾಟಿ ಅವರ ಕವನಗಳಲ್ಲಿ ಕಂಡು ಬರುತ್ತದೆ!

(ಟಿಪ್ಪಣಿ: ಕುವೆಂಪು ತಮ್ಮ ಕವನವನ್ನು ಆದೇಶಾತ್ಮಕವಾಗಿ ಮಾಡುವ ಉದ್ದೇಶದಿಂದ, ಅನೇಕ ಸಲ ಕವನದ ಕಾವ್ಯಗುಣವನ್ನು ನಿರ್ಲಕ್ಷಿಸುತ್ತಾರೆ. ಉದಾಹರಣೆಗೆ, ಅವರ ಮೇಲಿನ ಕವನದಲ್ಲಿ ಬರುವ,  ‘ಮುಗಿಲಿನವರೆಗೂ ಬಾನಿನವರೆಗೂ…’ ಎನ್ನುವ ಸಾಲನ್ನು ಗಮನಿಸಿರಿ. ಮುಗಿಲು ಮತ್ತು ಬಾನು ಪದಗಳಲ್ಲಿ ಏನಾದರೂ ವ್ಯತ್ಯಾಸವಿದೆಯೆ? ಹಾಗಿದ್ದರೆ ಈ repetitionಗೆ ಕಾರಣವೇನು? ಬಹುಶಃ, ಕವನದಲ್ಲಿ ಆದೇಶಭಾವವನ್ನು ವರ್ಧಿಸುವದು ಅವರ ಉದ್ದೇಶವಾಗಿರಬಹುದು. ಇಂತಹ ಮತ್ತೊಂದು ಸಾಲು ‘ಸಬಕ್ತಗೀನ’ ಎನ್ನುವ ಅವರ ಕವನ ಒಂದರಲ್ಲಿ ಬರುತ್ತದೆ:
ಸಬಕ್ತಗೀನ್, ಸಬಕ್ತಗೀನ್
ಕತೆಯನವನ ಕೇಳ್ದೆಯೇನ್?
(ಮೊದಲ ಸಾಲಿನಲ್ಲಿ ಸಬಕ್ತಗೀನ್ ಎಂದು ಎರಡನೆಯ ಸಲ ಅನವಶ್ಯಕವಾಗಿ ಹೇಳಿರುವದು ಓದುಗನನ್ನು ಗಮನವನ್ನು ಎಳೆಯುವ ಉದ್ದೇಶಕ್ಕಾಗಿ ಇರಬಹುದೆ?)

ಬೇಂದ್ರೆಯವರ ಪ್ರಕೃತಿಗೀತೆಗಳಿಗೆ ಹಾಗು ಕುವೆಂಪು ಅವರ ಪ್ರಕೃತಿಗೀತೆಗಳಿಗೆ ಇದೇ ವ್ಯತ್ಯಾಸವಿದೆ. ಉದಾಹರಣೆಗೆ ಬೇಂದ್ರೆಯವರ ಪ್ರಸಿದ್ಧ ‘ಬೆಳಗು’ ಕವನದ ಕೊನೆಯಲ್ಲಿ, ‘ಶಾಂತಿರಸವೆ ಪ್ರೀತಿಯಿಂದಾ ಮೈದೋರಿತಣ್ಣಾ, ಇದು ಬರಿ ಬೆಳಗಲ್ಲೊ ಅಣ್ಣಾ’ ಎನ್ನುವ ಸಾಲನ್ನು ಪರಿಶೀಲಿಸಿರಿ. ಈ ಸಾಲು ನಿಸರ್ಗದ ಭವ್ಯತೆಯನ್ನು ಕೌತುಕದಿಂದ ನೋಡಿ, ಸಹೃದಯನೊಡನೆ ಪ್ರೀತಿಯಿಂದ ಹಂಚಿಕೊಳ್ಳುವ ಮನೋಭಾವವನ್ನು ತೋರಿಸುತ್ತದೆ. ಇದನ್ನು ಕುವೆಂಪು ಅವರ ಈ ಕವನದ ಜೊತೆಗೆ ಹೋಲಿಸಿರಿ:

ಓಡು ಹೊರಗೆ, ಓಡು ನೋಡು:
ಮೂಡುತಿಹನು ದಿನಮಣಿ!
ಹಚ್ಚನೆ ಹಸರು ಬಯಲ ಮೇಲೆ
ಮಿರುಗುತಿಹವು ದಿನಮಣಿ!
ಈ ಸಾಲುಗಳು ಓರ್ವ ನಿಸರ್ಗಪ್ರೇಮಿಯು ಉತ್ತುಂಗ ಸ್ಥಾನದಲ್ಲಿ ನಿಂತುಕೊಂಡು, ಅರಸಿಕನೊಬ್ಬನಿಗೆ ಕೊಡುವ ಶೈಕ್ಷಣಿಕ ಆದೇಶದಂತಿದೆ ಅಲ್ಲವೆ?

ಇನ್ನು ಬೇಂದ್ರೆಯವರ ಪ್ರೇಮಕವನಗಳನ್ನು ಯಾವ ಕವಿಯ ಕವನಗಳ ಜೊತೆಗೆ ತುಲನೆ ಮಾಡಬೇಕು? Of course ಕನ್ನಾಡಿನ
ಶಾಶ್ವತ ಪ್ರೇಮಕವಿಯಾದ ನರಸಿಂಹಸ್ವಾಮಿಯವರ ಕವನಗಳೊಂದಿಗೆ ಹಾಗು once again ಕುವೆಂಪು ಅವರ ಪ್ರೇಮಕವನಗಳೊಡನೆ!

ಬೇಂದ್ರೆಯವರು ಗ್ರಾಮೀಣ ಶೈಲಿಯಲ್ಲಿ ಬರೆದ ಪ್ರೇಮಕವನಗಳು ಪ್ರೇಮದ ವಿವಿಧ ಮುಖಗಳನ್ನು ತೋರಿಸುವ ಶ್ರೇಷ್ಠ ಕವನಗಳಾಗಿವೆ. ಉದಾಹರಣೆಗೆ, ನನ್ನವಳು, ಕಾಮಕಸ್ತೂರಿ, ಜನುಮದ ಜಾತ್ರಿ, ಒಲುಮೆಯ ಕಿಚ್ಚು ಇತ್ಯಾದಿ. ಆದರೆ ಅವರ ಅತ್ಯಂತ ಜನಪ್ರಿಯವಾದ ಪ್ರೇಮಕವನವನ್ನು ಗಮನಿಸಿರಿ:

‘ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು’

ಇಲ್ಲಿ ಪ್ರೇಮದ ಜೊತೆಗೆ ಬಡತನದ ತಾಪವು ತಳಕು ಹಾಕಿಕೊಂಡಿದೆ. ಆದರೆ ನರಸಿಂಹಸ್ವಾಮಿಯವರ ಪ್ರೇಮಕವನಗಳಲ್ಲಿ ಪ್ರೇಮವೇ ಮುಖ್ಯ, ಪ್ರೇಮವೇ ಅವರ ಸಿರಿಸಂಪತ್ತು. ಉದಾಹರಣಗೆ ಅವರ ‘ಗೃಹಲಕ್ಷ್ಮಿ’ ಕವನದ ಕೆಲವು ಸಾಲುಗಳನ್ನು ನೋಡಿರಿ:

ನನ್ನವಳು ನನ್ನೆದೆಯ ಹೊನ್ನಾಡನಾಡುವಳು
ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ
…………………………….
……………………………….
ಅಂಗಳದ ನಡುವೆ ಬೃಂದಾವನದ ಬಳಿ ನಿಂದು
ಹಾಡುವೆವು ಸಿರಿಯ ಕಂಡು.
ತಾರೆಗಳ ಮೀಟುವೆವು, ಚಂದಿರನ ದಾಟುವೆವು;
ಒಲುಮೆಯೊಳಗೊಂದು ನಾವು:
ನಮಗಿಲ್ಲ ನೋವು ಸಾವು.

ಬೇಂದ್ರೆಯವರ ಕವನವು ತನ್ನಲ್ಲಿಯ ಶ್ಲೇಷೆಗಳ ಚಮತ್ಕಾರದ ಮೂಲಕ,  ಬುದ್ಧಿಯನ್ನು ಚಕಿತಗೊಳಿಸುತ್ತದೆ. ಆದರೆ ಪ್ರೇಮವನ್ನೇ ತಮ್ಮ ಸಂಪತ್ತು ಎಂದು ಭಾವಿಸುವ ಪ್ರೇಮಿಗಳ ಪ್ರೇಮವನ್ನು ವರ್ಣಿಸುವ ನರಸಿಂಹಸ್ವಾಮಿಯವರ ಕವನದಲ್ಲಿ ಪ್ರೇಮದ ರೋಮಾಂಚಕತೆ ಇದೆ. ಈ ನವಿರು ಪ್ರೇಮವು ಮನಸ್ಸನ್ನು ತಟ್ಟುತ್ತದೆ. ಇದೇ ಕಾರಣದಿಂದಾಗಿ ನರಸಿಂಹಸ್ವಾಮಿಯವರು, ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ, ನನಗದುವೆ ಕೋಟಿ ರುಪಾಯಿ’ ಎಂದು ಹಾಡುವುದು.

ಇನ್ನು ಕುವೆಂಪು ಅವರ ಪ್ರೇಮಭಾವ ಎಂತಹುದು? ಈ ಕವನವನ್ನು ಗಮನಿಸಿರಿ:
ಷೋಡಶ ಚೈತ್ರದ ಸುಂದರಿ ನೀನು,
ಕಾಮನ ಬಿಲ್ಲಿನ ಬಣ್ಣದ ಬೋನು!’
ಬೇಂದ್ರೆ ಹಾಗು ನರಸಿಂಹಸ್ವಾಮಿಯವರ ಕವನಗಳ ನಾಯಕರು ಗಂಡು ಹೆಣ್ಣಿನ ನಡುವಿನ ಪ್ರೇಮವನ್ನು ವರ್ಣಿಸಿದರೆ, ಕುವೆಂಪು ಅವರ ಕವನದ ನಾಯಕನು ಹೆಣ್ಣಿನ ದೈಹಿಕ ಸೌಂದರ್ಯಕ್ಕೆ ಮಹತ್ವ ನೀಡುತ್ತಾನೆ. ಕುವೆಂಪು ಅವರ ಈ ಕೆಳಗಿನ ಕವನಗಳನ್ನು ಗಮನಿಸಿರಿ:
(೧) ಮನ್ಮಥ ಚುಂಬನ ದಂತಕ್ಷತದಿಂ
ಬೆಚ್ಚನೆ ಕೆನ್ನೆತ್ತರು ಸೋರಿ
ರತಿ-ಚೆಂದುಟಿಯಿಂದಿಳೆಗುರುಳುವಂತೆ ತಾಂ
ಮತ್ತೆ ಗುಲಾಬಿಯವೊಲು ತೋರಿ!

(೨)ದಿನವೊಂದರೊಳೆ ನಿನ್ನ ಎದೆಯ ರಸವನು ಹೀರಿ
ಸರ್ವಸ್ವವನು ನಲ್ಲೆ; ಸುಲಿಯಬಲ್ಲೆ!
ಮುತ್ತೊಂದರೊಳೆ ಮೊಗೆದು ಮನದಣಿಯೆ ಸೊದೆಯೀಂಟಿ
ಆನಂದದಮರತೆಯ ಹೊಂದಬಲ್ಲೆ!
………………………………….
…………………………………
ಸಂಯೋಗವೊಂದರೊಳೆ ನಿನ್ನ ನುಣ್ಣನೆ ನೊಣೆದು
ರಸಪೂರ್ಣ ಶೂನ್ಯತೆಗೆ ಕಳುಹಬಲ್ಲೆ!

ಈ ಎರಡು ಕವನಗಳಂತೂ ದೈಹಿಕ ರತಿಭಾವದ ಕವನಗಳೇ ಆಗಿವೆ. ಅಷ್ಟೇ ಅಲ್ಲ ಇಲ್ಲಿರುವ ಹಿಂಸಾರತಿಯನ್ನು ಗಮನಿಸಿದಾಗ, ಕುವೆಂಪು ಅವರು sadist ಇದ್ದರೇನೊ ಎನ್ನುವ ಅನುಮಾನವಾದರೆ ಆಶ್ಚರ್ಯವಿಲ್ಲ. ಬೇಂದ್ರೆಯವರಲ್ಲಿ ದೈಹಿಕತೆ ದೈವಿಕತೆ ಆದರೆ, ಕುವೆಂಪುರವರಲ್ಲಿ ದೈವಿಕತೆ ದೈಹಿಕತೆಯಾಗುತ್ತದೆ.

ನವೋದಯದ ಮೂವರು ಶ್ರೇಷ್ಠ ಕವಿಗಳ ವಿಭಿನ್ನ ಮನೋಭಾವಗಳಿಗೆ ಕಾರಣವೇನು? ನನಗೆ ಹೀಗೆನ್ನಿಸುತ್ತದೆ:
(೧) ಬೇಂದ್ರೆ ಬಡತನದಲ್ಲಿ ಬೆಂದವರು, ನರಸಿಂಹಸ್ವಾಮಿ ಬಡತನದಲ್ಲಿ ಬಾಳಿದವರು, ಕುವೆಂಪು ಸ್ಥಿತಿವಂತರು.
(೨) ಬೇಂದ್ರೆ ಪಂಡಿತ, ಪಾಮರ ಎಲ್ಲರೊಡನೆಯೂ ಬೆರೆತವರು; ಶೋಷಣೆಯ ವಿರುದ್ಧ ಸ್ಪಂದಿಸುತ್ತಿದ್ದರೆ ಹೊರತು ಹೋರಾಟಗಾರಲ್ಲ. ಕುವೆಂಪು ಲೋಕಶಿಕ್ಷಕನ ಪಾತ್ರವನ್ನು ನಿರ್ವಹಿಸಲು ಬಯಸಿದವರು; ಶೋಷಣೆಯ ವಿರುದ್ಧ ಹೋರಾಟ ಮನೋಭಾವವುಳ್ಳ ಚಿಂತಕರು.
(೩) ಬೇಂದ್ರೆಯವರಿಗೆ ದಾಂಪತ್ಯಕಾಮವು ಪ್ರೇಮವಾಗಿ, ದೈವಭಕ್ತಿಯಾಗಿ ಪರಿವರ್ತನೆಯಾಗಬೇಕು ಎನ್ನುವ ತಾತ್ವಿಕ ಆದರ್ಶವಿತ್ತು. ನರಸಿಂಹಸ್ವಾಮಿಗಳಿಗೆ ದಾಂಪತ್ಯಪ್ರೇಮವೇ ಮೂಲದ್ರವ್ಯ; ಕಾಮ ಅದಕ್ಕೆ ಪೂರಕ. ಕುವೆಂಪು ಅವರಿಗೆ ದೈಹಿಕ ಕಾಮವು ಒಂದು ಮಹತ್ವದ ವಿಷಯ. ಬಹುಶಃ ರಾಮಕೃಷ್ಣ ಆಶ್ರಮದ ಜೊತೆಗೆ ದೀರ್ಘ ಸಂಬಂಧವನ್ನು ಹೊಂದಿದ ಅವರಿಗೆ, ವಿರಕ್ತಿಯ ವಿರುದ್ಧದ ಅತಿರತಿಯ ಮನೋಭಾವವು ಮೂಡಿರಬಹುದು.

ಈ ರೀತಿಯಾಗಿ ಕವಿಯ ಪರಿಸರವು ಅವನನ್ನು ಹೇಗೆ ರೂಪಿಸುತ್ತದೆ, ಅವನ ಸಾಹಿತ್ಯವನ್ನು ಹೇಗೆ ಪ್ರಭಾವಿಸುತ್ತದೆ ಎನ್ನುವುದನ್ನು ನೋಡಬಹುದು.

ಈ ಲೇಖನಕ್ಕೆ ಅಪ್ರಸ್ತುತವಾದರೂ ಸಹ ಮತ್ತೆ ಕೆಲವು ಲೇಖಕರ ಮನೋಧರ್ಮವನ್ನು ಅವರ ಸಾಹಿತ್ಯದ ಮೂಲಕ ಇಲ್ಲಿ ಪರಿಶೀಲಿಸುವ ನನ್ನ ಚಪಲವನ್ನು ದಯವಿಟ್ಟು  ಕ್ಷಮಿಸಿ,… ಮುಂದುವರೆಯಿರಿ.

ಮಾಸ್ತಿಯವರ ಸಾಹಿತ್ಯವು ಆದರ್ಶದ ಸಾಹಿತ್ಯ ಹಾಗು ಒಳ್ಳೆಯ ಮೌಲ್ಯಗಳ ಸಾಹಿತ್ಯ. ಮಾಸ್ತಿಯವರು ಹೆಣ್ಣುಮಕ್ಕಳ ಬಗೆಗೆ ತುಂಬ ಅನುಕಂಪ ಉಳ್ಳವರು. ‘ವೆಂಕಟಿಗನ ಹೆಂಡತಿ’, ‘ಗೌತಮಿ ಹೇಳಿದ ಕತೆ’ ಮೊದಲಾದ ಕತೆಗಳು ಈ ಮಾತನ್ನು ಸ್ಪಷ್ಟಪಡಿಸುತ್ತವೆ. ಹೀಗಿದ್ದರೂ ಸಹ ಲಂಕೇಶರು ಮಾಸ್ತಿಯವರನ್ನು ಕಂದಾಚಾರಿಗಳು, ಸಂಪ್ರದಾಯನಿಷ್ಠರು ಎಂದೆಲ್ಲ ಹೀಯಾಳಿಸುತ್ತಿದ್ದರು. ಮಾಸ್ತಿಯವರು ಪ್ರತಿಯಾಗಿ ‘ಸಂಪ್ರದಾಯವನ್ನು ತುಳಿಯುವುದೇ ಪ್ರಗತಿಯಲ್ಲ’ ಎಂದಿದ್ದಾರೆ. ಮಾಸ್ತಿಯವರ ಮನೋಧರ್ಮಕ್ಕೆ ಕಾರಣವೇನು?.... ಮಾಸ್ತಿಯವರ ಕಾಲವೇ ಆದರ್ಶದ ಕಾಲವಾಗಿತ್ತು, ನಾಡು ಹಾಗು ನುಡಿಗಳನ್ನು ಕಟ್ಟುವ ಕಾಲವಾಗಿತ್ತು. ಮಹಾತ್ಮಾ ಗಾಂಧಿಯಂತಹ ಮಹಾಪುರುಷರನ್ನು ನೋಡಿದ ಕನ್ನಡ ಲೇಖಕರೆಲ್ಲ (ಮಾಸ್ತಿ, ಕಾರಂತ, ಬೇಂದ್ರೆ, ಕುವೆಂಪು ಇತ್ಯಾದಿ) ಆದರ್ಶದ ಸಾಹಿತ್ಯವನ್ನೇ ರಚಿಸಿದ್ದಾರೆ. ತದ್ವಿರುದ್ಧವಾಗಿ, ಲಂಕೇಶರ ಸಮಯದಲ್ಲಿ ಸಾಮಾಜಿಕ ಮೌಲ್ಯಗಳ ಅವನತಿಯಾಗಿತ್ತು. ಲಂಕೇಶರು ಇಂತಹ ಸಮಾಜದ ಚಿತ್ರಣವನ್ನೇ ತಮ್ಮ ಕತೆಗಳಲ್ಲಿ ನೀಡಿದ್ದಾರೆ. ಅವರ ‘ವಾಮನ’, ‘ಮೈಲಿಮುಖದ ಹಜಾಮ’ ಮೊದಲಾದ ಕತೆಗಳು ಮಾನವನ ಕ್ಷುಲ್ಲಕತೆಯನ್ನು ತೋರಿಸುವ ಉತ್ತಮ ಉದಾಹರಣೆಗಳಾಗಿವೆ. ಅವರ ಪ್ರಸಿದ್ಧ ಕವನ ‘ಅವ್ವ’ ಸಹ, ಕ್ಷುಲ್ಲಕ ಸಮಾಜದಲ್ಲಿ ಬದುಕಬೇಕಾದ, ತಾಯಿಯೊಬ್ಬಳ ಹೋರಾಟದ ಚಿತ್ರವೇ ಆಗಿದೆ.

ಇನ್ನು ಅನಂತಮೂರ್ತಿಯವರ ಬಗೆಗೆ ಹೇಳಬೇಕಾಗಿಲ್ಲ. ಅವರೊಬ್ಬ ಸ್ವಮೋಹಿ, ಪ್ರದರ್ಶನಶೀಲ, ಮಿಥ್ಯಾಸಮಾಜವಾದಿ ವ್ಯಕ್ತಿ ಎನ್ನುವುದು ಅವರ ಸಾಹಿತ್ಯವನ್ನು ಪರಿಶೀಲಿಸಿದಾಗ ಸ್ಪಷ್ಟವಾಗುತ್ತದೆ. ಅವರ ಕತೆಗಳೆಲ್ಲ ಕಥಾನಾಯಕನ (ಅಂದರೆ ಸ್ವತಃ ಅವರ) ದ್ವಂದ್ವದ ಸುತ್ತಲೂ ಗಿರಕಿ ಹೊಡೆಯುತ್ತಿರುತ್ತವೆ. ಜಾನಪದದ ಬಗೆಗೆ ಬಾಯಿತುಂಬ ಮಾತನಾಡುವ ಅನಂತಮೂರ್ತಿಯವರ ಬರವಣಿಗೆ ಸಂಸ್ಕೃತಭೂಯಿಷ್ಠ ಹಾಗು ಅನವಶ್ಯಕವಾಗಿ ಸಂಕೀರ್ಣ ಶೈಲಿಯನ್ನು ಬಳಸಿದ ಬರವಣಿಗೆಯಾಗಿದೆ.ಅವರು ಬದುಕಿನಲ್ಲಿ ಮೇಲೆ ಏರಿದಂತೆಲ್ಲ, ಅವರ ಕಥಾನಾಯಕರೂ ಸಹ ಮೇಲ್ ಸ್ತರಗಳ ವ್ಯಕ್ತಿಗಳಾಗಿದ್ದದ್ದನ್ನು ಗಮನಿಸಬಹುದು. ಇದಕ್ಕೆ ಕಾರಣವೇನು?....ಬಹುಶಃ ಓರ್ವ ಡಾಂಭಿಕ ವ್ಯಕ್ತಿಯಲ್ಲಿ ಇರುವ  ಗುಣಗಳಿವು ಎಂದು ಊಹಿಸಬಹುದೆ? ಅವರು ಗತಿಸಿದ ಬಳಿಕ ನಡೆದ ಅವರ ಶವಸಂಸ್ಕಾರವನ್ನು ಒಂದು great irony ಎಂದು ಕರೆಯಬಹುದೇನೊ!
(‘ನಾರಣಪ್ಪ ಬ್ರಾಹ್ಮಣ್ಯವನ್ನು ಬಿಟ್ಟರೂ, ಬ್ರಾಹ್ಮಣ್ಯ ನಾರಣಪ್ಪನನ್ನು ಬಿಡಲಿಲ್ಲ.’---ಸಂಸ್ಕಾರ ಕಾದಂಬರಿ)

ದೇವನೂರು ಮಹಾದೇವರ ಸಾಹಿತ್ಯಗುಣಗಳು ಇದಕ್ಕೆ ವಿರುದ್ಧವಾಗಿವೆ. ಅವರ ಅತ್ಯುತ್ತಮ ಕಥೆ ‘ಮಾರಿಕೊಂಡವರು’ ಕಥೆಯಲ್ಲಿ ಅಸಹಾಯಕರ ಎದೆ ಚುಚ್ಚುವ ಚಿತ್ರಣವಿದೆ. ಇದಕ್ಕೆ ಕಾರಣವೇನು? ……..ದೇವನೂರು ಮಹಾದೇವರು ಪ್ರಾಮಾಣಿಕ ವ್ಯಕ್ತಿ. ತಮ್ಮ ನೀತಿಗೆ ತಕ್ಕಂತೆ ಫೋರ್ಡ ಫೌಂಡೇಶನ್ ಕೊಡಮಾಡಿದ ಸಂಶೋಧನಾವೇತನವನ್ನು ತಿರಸ್ಕರಿಸಿದವರು. ತುಳಿತಕ್ಕೊಳಗಾದ ಸಮಾಜವನ್ನು ಅಂತಃಕರಣದಿಂದ ನೋಡುವವರು. ನಿಜವಾಗಿ ಇವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯಬೇಕಾಗಿತ್ತು. ಆದರೆ ಇಲ್ಲಿಯೂ ಸಹ ವಶೀಲಿಬಾಜಿ ಮುಖ್ಯವಾಗಿರುವದರಿಂದ ಅದು ಯಾರ್ಯಾರದೋ ಪಾಲಾಗಿದೆ. (ನವ್ಯ ಕಾದಂಬರಿಗಳ ಮೊದಲಿಗರಾದ ಶಾಂತಿನಾಥ ದೇಸಾಯಿಯವರು ಓರ್ವ ಗೆಳೆಯರಿಗೆ ಈ ವಶೀಲಿಬಾಜಿಯ ಬಗೆಗೆ ಹೇಳಿದ್ದರ ಲಿಖಿತ ದಾಖಲೆ ಇದೆ.)

ದೇವನೂರು ಅವರ ‘ಕುಸುಮಬಾಲೆ’ ಕಥಾನಕವು ಸಾಮಾನ್ಯ ಓದುಗನಿಗೆ ತಿಳಿಯದ ಶೈಲಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಸ್ವತಃ ದೇವನೂರು ಅವರು ಇದಕ್ಕೆ ಕಾರಣ ನೀಡುತ್ತ, ಯಾವ ಸಮಾಜದ ಚಿತ್ರಣವನ್ನು ಕೊಡುತ್ತಿದ್ದೇನೆಯೊ ಅದೇ ಸಮಾಜದ ಭಾಷೆ ಹಾಗು ಶೈಲಿಯನ್ನು ಬಳಸಿದ್ದೇನೆ ಎನ್ನುವ ವಿವರಣೆ ನೀಡಿದ್ದಾರೆ ಎಂದು ಕೇಳಿದ್ದೇನೆ. ಆದರೆ ಇಲ್ಲಿ ಮತ್ತೂ ಒಂದು ಕಾರಣವಿದೆ ಎಂದು ನನಗೆ ಅನಿಸುತ್ತದೆ. ದೇವನೂರು ಅವರ ಸಮಗ್ರ ಸಾಹಿತ್ಯವನ್ನು ಪರಿಶೀಲಿಸಿದಾಗ ಒಂದು ವಿಷಯ ಹೊಳೆಯುತ್ತದೆ. ಅವರು ಶೋಷಿತರ ಮತ್ತು ಶೋಷಕರ ಬಗೆಗೆ ಬರೆಯುವಾಗ ಸ್ಪಷ್ಟ ಶೈಲಿಯಲ್ಲಿ, ವ್ಯಕ್ತವಾಗಿ ಬರೆಯಲು ಮನಸ್ಸು ಮಾಡುವದಿಲ್ಲ. ಒಂದು ಉದಾಹರಣೆಯನ್ನು ಕೊಡೋಣ. ತನ್ನ ಕಾಲದ ಚಿತ್ರಶೈಲಿಯನ್ನು ತ್ಯಜಿಸಿದ ಪಿಕಾಸೊ, ಕ್ಯೂಬಿಕ್ ಶೈಲಿಯಲ್ಲಿ ಚಿತ್ರಿಸಲು ಕಾರಣವೇನು? Too open, too simple, too manifest ಶೈಲಿ ಬೇಡವೆನ್ನುವ ಉದ್ದೇಶದಿಂದ ಅಲ್ಲವೆ? ಮಾಸ್ತಿ, ಲಂಕೇಶ ಹಾಗು ದೇವನೂರು ಮಹಾದೇವರ ನಂತರದ ಮಹತ್ವದ ಲೇಖಕರಾದ ಅಮರೇಶ ನುಗಡೋಣಿಯವರು ಅನೇಕ ಉತ್ತಮ ಕತೆಗಳನ್ನು ನೀಡಿದ್ದಾರೆ. ಆದರೆ ಅವರ ಶೈಲಿ ಮಾತ್ರ too open ಶೈಲಿಯಾಗಿದೆ.

ಶಿವರಾಮ ಕಾರಂತರ ಕಾದಂಬರಿಗಳ ಶೈಲಿ ಅಷ್ಟೇಕೆ plain ಆಗಿರುತ್ತದೆ? ಯಕ್ಷಗಾನಕುಶಲರಾದ ಕಾರಂತರು ತಮ್ಮ ಕಾದಂಬರಿಗಳಲ್ಲಿ ಸರಳ ಶೈಲಿಯನ್ನೇಕೆ ಬಳಸುತ್ತಾರೆ?...ಕಾರಂತರ ಕಾದಂಬರಿಗಳಲ್ಲಿ ಸತ್ಯದ ದರ್ಶನವಿರುತ್ತದೆ, ಮಾನವೀಯ ಕಾಳಜಿ ಇರುತ್ತದೆ. ಪ್ರಯತ್ನಶೀಲತೆಯ ಸಂದೇಶವಿರುತ್ತದೆ. ಆದುದರಿಂದ ಅವರು ತಮ್ಮ ಅಭಿಪ್ರಾಯಗಳಿಗೆ ಬಣ್ಣ ಕೊಟ್ಟು ಹೇಳಲು ಬಯಸುವದಿಲ್ಲ. ಸತ್ಯವು ಶ್ರವಣಬೆಳಗೊಳದ ಗೊಮ್ಮಟೇಶ್ವರನ ಹಾಗೆ ಬತ್ತಲೆಯಾಗಿರಬೇಕು. ಅದಕ್ಕೆ ತೊಡುಗೆಯನ್ನು ತೊಡಿಸಿದರೆ, ಸತ್ಯ ಮರೆಯಾಗುತ್ತದೆ. ಇದು ಕಾರಂತರ ಉದ್ದೇಶ! ಕಾರಂತರು ಎಷ್ಟು ನೇರವಾದ ಮನುಷ್ಯರೋ ಅವರ ಕಾದಂಬರಿಗಳೂ ಅಷ್ಟೇ ನೇರವಾಗಿವೆ.

ಮಾತು ಎಲ್ಲೆಲ್ಲಿಗೋ ಹೋಯಿತು.
ಕ್ಷಮೆ ಇರಲಿ.

8 comments:

ಮನಸಿನಮನೆಯವನು said...

ಕಾರಂತರ ಕಾದಂಬರಿಗಳಲ್ಲಿ ನಿಜಕ್ಕೂ ಸತ್ಯದರ್ಶನವಿರುತ್ತದೆ, ಮನಸ್ಸು ಹಲವಾರು ಸಮಸ್ಯೆಗಳ ಸುಳಿಯಲಿ ಸಿಲುಕಿದಾಗ ಅವುಗಳಿಗೆ ಕಾರಂತರ ಬರಹಗಳಲ್ಲಿ ಪರಿಹಾರ ಸಿಗಬಹುದು ಎಂದು ನನ್ನ ನಂಬಿಕೆ.

sunaath said...

ಕಾರಂತರು ವಾಸ್ತವವಾದಿ ಲೇಖಕರು. ಮನುಷ್ಯಪ್ರಯತ್ನವನ್ನು ಉತ್ತೇಜಿಸುವ ಸಂದೇಶ ಅವರ ಕಾದಂಬರಿಗಳಲ್ಲಿ ಇದ್ದೇ ಇರುತ್ತದೆ.

Badarinath Palavalli said...

ಮೊದಲಿಗೆ, ಈ ಎರಡನೇ ಭಾಗಕ್ಕಾಗಿ ತಮಗೆ ಕೃತಜ್ಱತೆ ಅರ್ಪಿಸುತ್ತಿದ್ದೇನೆ.

ನಮ್ಮ ಸುವರ್ಣ ವಾಹಿನಿಯಲ್ಲಿ ನಿರೂಪಕರಾದ ಶ್ರೀಯುತ. ರಾಘವೇಂದ್ರ ಕಾಂಚನ್ ಅವರಿಗೆ ತಮ್ಮ ಕಾರ್ಯಕ್ರಮಕ್ಕೆ ಅನುವಾಗುವಂತೆ ಈ ಬರಹವನ್ನು ಪ್ರಿಂಟ್ ಔಟ್ ತೆಗೆದುಕೊಡುತ್ತಿದ್ದೇನೆ.

sunaath said...

ಶ್ರೀ ಕಾಂಚನ ಅವರಿಗೆ ಉಪಯೋಗವಾಗುವ ಹಾಗಿದ್ದರೆ, ನಾನು ಧನ್ಯ. ನಿಮಗೆ ಧನ್ಯವಾದಗಳು.

Shashi Dodderi said...

One of your best blog post. I enjoyed it.

sunaath said...

ಧನ್ಯವಾದಗಳು, ಶಶಿ.

Unknown said...

ಅಬ್ಬಾ, ಕಾದು, ಕಾದು, ಕಾದದ್ದಕ್ಕೆ -ಕಾಯ್ದ ಹಂಚಿನ ಮೇಲೆ ಇಟ್ಟಂತಾಯಿತು. ಅತ್ಯಂತ ಪ್ರಾಮಾಣಿಕ, ಮನದಿಂದ ಮೂಡಿ ಬಂದ ಮಾತುಗಳಿವು -ಎರಡೂ ಕೈ ಎತ್ತಿ ಚಪ್ಪಾಳೆ ತಟ್ಟ ಬೇಕೆನಿಸುತ್ತದೆ ಇ ಲೇಖನಕ್ಕೆ. ನನ್ನ ಓದಿನ ಕೊರತೆ ಮತ್ತು ಮತ್ತೇನೋ -ಬೇಂದ್ರೆ, ಕುವೆಂಪು ಅವರ ಮನೋಧರ್ಮದ ಬಗ್ಗೆ ಇಂತಹ ಬರಹವನ್ನು ನಾನು ಎಲ್ಲೂ ಕಂಡಿರಲಿಲ್ಲ. ಒಟ್ಟೂ ಲೇಖನದ ಮೌಲ್ಯ ಅನನ್ಯವಾಗಿದೆ.
~ಅನಿಲ

sunaath said...

ಅನಿಲರೆ,
ಧನ್ಯವಾದಗಳು.