ಹುದುಗಲಾರದ ದುಃಖ ಹುಗಿದಿರಿಸಿ ನಗೆಯಲ್ಲಿ
ನಸುನಗುತ ಬಂದೆ ಇದಿರು;
ಇನಿತು ತಿಳಿಯದ ಮೂಢನೆಂದು ಬಗೆದೆಯೆ ನನ್ನ
ಇದು ಯಾವ ಊರ ಚದುರು?
ಕೈಮುಟ್ಟಿ ಮೈಮುಟ್ಟಿ ನನ್ನ
ಮನ ಸಂತೈಸ—
ಲೆಂದು ಬಗೆವವಳು ನೀನು,
ನಾನದನೆ ಬಯಸುತಿಹ ಸೊಗಸುಗಾರಿಕೆಯವನೆ
ನಾನೆದೆಯ ಕಟುಕನೇನು?
ಮುಗುಳುನಗೆಯರಳಿಸುತ ಕರಿಯಾಲಿ
ಹೊರಳಿಸುತ
ಸುಳ್ಳುಸುಖ ಮೆರೆಸಬಹುದೆ?
ಮಮತಾಜಳನು ಹುಗಿದು ತಾಜಮಹಲನು
ಕಟ್ಟಿ
ನಿಜದುಃಖ ಮರೆಸಬಹುದೆ?
ಎಲೆಲೆ ಜೀವದ ಗೆಳತಿ ! ನನ್ನೆದೆಯ
ಗುಡಿಯಲ್ಲಿ
ನೀನು ಅಟಮಟಿಸತಿರಲು
ನಿನ್ನ ನಗೆ ಸುಖದ ಹೂವೆಂದು
ತಿಳಿಯಲಿ ಹೇಗೆ
ಅಂತಿಂತು ನಟಿಸುತಿರಲು?
……………………………………………………………………….
ವರಕವಿ ಬೇಂದ್ರೆಯವರ ಜೀವನದಲ್ಲಿ ಬಂದ ಪರಿತಾಪಗಳು ಅಷ್ಟಿಷ್ಟಲ್ಲ.
ಅವರ ಐದು ಮಕ್ಕಳು ಶಿಶುಮರಣವನ್ನಪ್ಪಿದರು. ಈ ಆಘಾತಗಳನ್ನು ಸಹಿಸುವುದು ಹೇಗೆ? ಇಂತಹ ಸಂದರ್ಭದಲ್ಲಿ ಗಂಡಹೆಂಡಿರು ತಮ್ಮ ದುಃಖವನ್ನು ಮರೆಮಾಚುತ್ತ
ಪರಸ್ಪರರನ್ನು ಸಂತೈಸುವ ಪ್ರಯತ್ನ ಮಾಡುವುದು ಸಹಜ. ಬೇಂದ್ರೆಯವರ ಹೆಂಡತಿಯು ತನ್ನ ದುಃಖವನ್ನು ಮರೆಮಾಚಿ,
ತನ್ನ ಗಂಡನನ್ನು ಸಮಾಧಾನಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಕಣ್ಣಿಗೆ ಮರೆಯಾದದ್ದು ಹೃದಯಕ್ಕೆ
ಕಾಣದಿದ್ದೀತೆ? ಅಂತೆಯೇ ಬೇಂದ್ರೆ ತಮ್ಮ ಹೆಂಡತಿಗೆ ಕೇಳುತ್ತಾರೆ:
ಹುದುಗಲಾರದ ದುಃಖ ಹುಗಿದಿರಿಸಿ ನಗೆಯಲ್ಲಿ
ನಸುನಗುತ ಬಂದೆ ಇದಿರು;
ಇನಿತು ತಿಳಿಯದ ಮೂಢನೆಂದು ಬಗೆದೆಯೆ ನನ್ನ
ಇದು ಯಾವ ಊರ ಚದುರು?
ಈ ದುಃಖ ಹುದುಗಲಾರದ್ದು; ಅಂದರೆ ಎಷ್ಟೇ ಪ್ರಯತ್ನಿಸಿದರೂ ಇದನ್ನು
ಅದುಮಿ ಇಡಲು ಸಾಧ್ಯವಾಗದು. ಅಂತಹ ದುಃಖವನ್ನು ಬೇಂದ್ರೆಯವರ ಪತ್ನಿ ತನ್ನ ನಸುನಗುವಿನಲ್ಲಿ ಹುಗಿದು
ಹಾಕಿ ತನ್ನ ಗಂಡನನ್ನು ಸ್ವಾಗತಿಸುತ್ತಿದ್ದಾರೆ. ಆದರೆ ಪತ್ನಿಯ ಅಂತರಂಗವನ್ನು ಅರಿಯದಷ್ಟು ಆತ ಪರಕೀಯನೆ
ಅಥವಾ ಶತದಡ್ಡನೆ? ಆದುದರಿಂದಲೇ ಅವರು ತಮ್ಮ ಹೆಂಡತಿಗೆ ಕೇಳುತ್ತಾರೆ: ‘ಈ ಜಾಣತನವನ್ನು ಎಲ್ಲಿಂದ ಕಲಿತೆ?’
ಬರಿಯ ಮಾತಿನಿಂದ ತನ್ನ ಗಂಡನನ್ನು ಸಮಾಧಾನಗೊಳಿಸಲು ಸಾಧ್ಯವಿಲ್ಲ
ಎನ್ನುವುದನ್ನು ಅರಿತ ಹೆಂಡತಿಯು, ಆತನ ಹತ್ತಿರ ಹೋಗಿ, ಆತನ ಮೈ-ಕೈ ಮುಟ್ಟಿ ಸಾಂತ್ವನಗೊಳಿಸುವುದು
ಸಹಜವಷ್ಟೇ? ಕೆಲವು ಗಂಡಸರು ಸ್ತ್ರೀಸ್ಪರ್ಶದಿಂದ ಕರಗಿ ಹೋಗುತ್ತಾರೆ. ಆದರೆ ಸ್ತ್ರೀಸಾಮೀಪ್ಯವು ತನ್ನ
ಸಂಕಟವನ್ನು ಕರಗಿಸಲು ಬೇಂದ್ರೆಯವರು ‘ಸೊಗಸುಗಾರ ಪುಟ್ಟಸ್ವಾಮಿ’ ಅಲ್ಲವಲ್ಲ! ಅವರು ತಮ್ಮ ಹೆಂಡತಿಯ
ಅಳಲಿಗೆ ಮಿಡಿಯುವ ಅಂತಃಕರಣಮಯಿ ಗಂಡನಲ್ಲವೆ? ಅದನ್ನು ಅವರು ಹೇಳುವುದು ಹೀಗೆ:
ಕೈಮುಟ್ಟಿ ಮೈಮುಟ್ಟಿ ನನ್ನ
ಮನ ಸಂತೈಸ—
ಲೆಂದು ಬಗೆವವಳು ನೀನು,
ನಾನದನೆ ಬಯಸುತಿಹ ಸೊಗಸುಗಾರಿಕೆಯವನೆ
ನಾನೆದೆಯ ಕಟುಕನೇನು?
ತಮಗೊಂದು ಕೂಸು ಇದ್ದದ್ದು ಕೇವಲ
ಒಂದು ಕನಸು; ತನಗೆ ಪುತ್ರಶೋಕವು ಆಗಿಯೇ ಇಲ್ಲ ಎನ್ನುವ
ಭ್ರಮೆಯನ್ನು ಹುಟ್ಟಿಸುವಂತೆ, ಬೇಂದ್ರೆಯವರ ಹೆಂಡತಿ ಅಭಿನಯ ಮಾಡುತ್ತಾರೆ. ಮುಖದ ಮೇಲೆ ಮಂದಹಾಸ ತರುತ್ತಾರೆ,
ತಮ್ಮ ಬಟ್ಟಲುಗಣ್ಣುಗಳನ್ನು ಓಲಾಡಿಸುತ್ತಾರೆ.
(ಬೇಂದ್ರೆಯವರ ಹೆಂಡತಿಗೆ ವಿಶಾಲವಾದ
ಕಪ್ಪು ಕಣ್ಣುಗಳು ಇದ್ದವೇನೊ? ಅವರ ಮತ್ತೊಂದು ಕವನ ‘ನೀ ಹೀಂಗ ನೋಡಬ್ಯಾಡ ನನ್ನ’ ಕವನದಲ್ಲೂ
ಸಹ ಅವರು ತಮ್ಮ ಹೆಂಡತಿಯ ಕಣ್ಣುಗಳನ್ನು ಹೀಗೆ ವರ್ಣಿಸಿದ್ದಾರೆ:
‘ಇಬ್ಬನ್ನಿ ತೊಳೆದರೂ ಹಾಲು
ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆಹೊಳೆವ ಹಾಂಗ ಕಣ್ಣಿರುವ
ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?’)
ಆದರೆ ಈ ನಟನೆಯ ಹಿಂದಿನ ಸಂಕಟ
ಬೇಂದ್ರೆಯವರಿಗೆ ಅರ್ಥವಾಗದಿದ್ದೀತೆ? ಆ ಸಮಯದಲ್ಲಿ
ಅವರ ಹೃದಯದಿಂದ ಬಂದ ನುಡಿಯೊಂದು ಕನ್ನಡ ಕಾವ್ಯದ ಶ್ರೇಷ್ಠ ಉಪಮೆಯಾಗಿ ಹೊರಹೊಮ್ಮಿದೆ:
ಮುಗುಳುನಗೆಯರಳಿಸುತ ಕರಿಯಾಲಿ
ಹೊರಳಿಸುತ
ಸುಳ್ಳುಸುಖ ಮೆರೆಸಬಹುದೆ?
ಮಮತಾಜಳನು ಹುಗಿದು ತಾಜಮಹಲನು
ಕಟ್ಟಿ
ನಿಜದುಃಖ ಮರೆಸಬಹುದೆ?
‘ಉಪಮಾ ಕಾಲಿದಾಸಸ್ಯ’ ಎಂದು
ಹೇಳುತ್ತಾರೆ. ಕಾಲೀದಾಸನು ಒಂದು ವಸ್ತುವನ್ನು ಮತ್ತೊಂದು ವಸ್ತುವಿಗೆ ಹೋಲಿಸುವಾಗ ಸಮುಚಿತವಾದ ಉಪಮೆಗಳನ್ನು
ಕೊಟ್ಟಿರಬಹುದು. ಆದರೆ ಬೇಂದ್ರೆಯವರ ಈ ಉಪಮೆಯಲ್ಲಿ ಕೇವಲ ಹೋಲಿಕೆ ಇಲ್ಲ; ಇಲ್ಲಿರುವುದು ಅಳಲಿನ ಆಕ್ರಂದ.
ಉಪಮೆಯನ್ನು ಭಾವಾಭಿವ್ಯಕ್ತಿಯ ಮಾಧ್ಯಮವನ್ನಾಗಿ ಬಳಸುವ ಈ ಪ್ರತಿಭೆ ಬೇಂದ್ರೆಯವರಲ್ಲಿ ಮಾತ್ರ ಕಾಣಲು
ಸಾಧ್ಯ.
[ಅವರ ಮತ್ತೊಂದು ಕವನ ‘ಚಿಗರಿಗಂಗಳಚೆಲುವಿ’ಯಲ್ಲಿಯೂ ಇಂತಹದೇ ಸಾಮರ್ಥ್ಯವನ್ನು ನೋಡಬಹುದು:
ಆಳುಗಳ ಹೋರಾಟ
ಆಳುವವರಿಗೆ ಆಟ
ಗಾಳಕ್ಕ ಸಿಕ್ಕ ಮೀನದ ಗೋಳಾಟೊ
ಗೆಣೆಯಾ ಗೋಳಾಟೋ
ಗೆದ್ದವರ ಇದ್ದವರ ಹಾರಾಟ;
ಅರೆಸತ್ತ ಜೀವಾ ಕೊಳೆತಾsವೊ
ಹುಳತಾsವೊ
ಅಳತಾsವೋ
ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿಧ್ಹಾಂಗ
ಆಳುವವರಿಗೆ ಆಟ
ಗಾಳಕ್ಕ ಸಿಕ್ಕ ಮೀನದ ಗೋಳಾಟೊ
ಗೆಣೆಯಾ ಗೋಳಾಟೋ
ಗೆದ್ದವರ ಇದ್ದವರ ಹಾರಾಟ;
ಅರೆಸತ್ತ ಜೀವಾ ಕೊಳೆತಾsವೊ
ಹುಳತಾsವೊ
ಅಳತಾsವೋ
ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿಧ್ಹಾಂಗ
ಕೊನೆಯ ಸಾಲಿನಲ್ಲಿ ಇರುವ ಈ
ಉಪಮೆಯನ್ನು ನೋಡಿರಿ. ಈ ಉಪಮೆಯೂ ಸಹ ಒಂದು ಕ್ರಿಯೆಯನ್ನು ಸೂಚಿಸುತ್ತ, ಕವನದ ಭಾವಕ್ಕೆ ಮಾಧ್ಯಮವಾಗಿದೆ.]
ಬೇಂದ್ರೆಯವರ ಹೆಂಡತಿಗೆ ಅವರ
ಅಂತರಂಗದಲ್ಲಿ ಅತ್ಯುಚ್ಚ ಸ್ಥಾನವಿದೆ. ಅವಳು ಅವರಿಗೆ ಜೀವದ ಗೆಳತಿ; ಅವಳು ಅವರ ಗೃಹಲಕ್ಷ್ಮಿ; ಅವಳ
ಸ್ಥಾನವು ದೇವರಿಗೆ ಹತ್ತಿರವಾದ ಸ್ಥಾನ. ಅಂದ ಮೇಲೆ ತಮ್ಮ ಹೃದಯದಲ್ಲಿ ನೆಲೆ ನಿಂತ ಅವಳ ಅಳಲು ಅವರಿಗೆ
ತಿಳಿಯದಿದ್ದೀತೆ?
ಎಲೆಲೆ ಜೀವದ ಗೆಳತಿ ! ನನ್ನೆದೆಯ
ಗುಡಿಯಲ್ಲಿ
ನೀನು ಅಟಮಟಿಸತಿರಲು
ನಿನ್ನ ನಗೆ ಸುಖದ ಹೂವೆಂದು
ತಿಳಿಯಲಿ ಹೇಗೆ
ಅಂತಿಂತು ನಟಿಸುತಿರಲು?
‘ನಿನ್ನ ನಗೆ ಕೇವಲ ವೇಷಧಾರಿ, ಅದು ಸುಖದಲ್ಲಿ ಅರಳಿದ ಹೂವಲ್ಲ’
ಎಂದು ಬೇಂದ್ರೆ ತಮ್ಮ ಹೆಂಡತಿಯು ತಮಗಾಗಿ ಮಾಡುತ್ತಿರುವ
ನಟನೆಗಾಗಿ ಮರಗುತ್ತಾರೆ. ಇಲ್ಲಿ ‘ಅಂತಿಂತು’ ಎನ್ನುವ ಪದವನ್ನು ಗಮನಿಸಬೇಕು. ‘ಅನೇಕ ವಿಧಗಳಲ್ಲಿ ಆದರೆ
ನಿರರ್ಥಕವಾದ’ ಎನ್ನುವ ವಿಸ್ತಾರಿತ ಅರ್ಥವನ್ನು ಈ ಪದವು ಇಲ್ಲಿ ನೀಡುತ್ತದೆ. ಸಾಮಾನ್ಯ ಪದಗಳನ್ನು
ಬಳಸುತ್ತಲೇ ಅಸಾಮಾನ್ಯ ಅರ್ಥವನ್ನು ಹೊಮ್ಮಿಸುವ ಬೇಂದ್ರೆ-ಪ್ರತಿಭೆ ಇದು. ಇಂತಹ ಪದಗಳನ್ನು ಬೇಂದ್ರೆಯವರ
ಕವನಗಳಲ್ಲಿ ನಾವು ಸಾಮಾನ್ಯವಾಗಿ ಕಾಣುತ್ತಲೇ ಇರುತ್ತೇವೆ.
ಈ ಕವನದ ನಾಲ್ಕೂ ನುಡಿಗಳು ಪ್ರಶ್ನೆಗಳಲ್ಲಿ ಕೊನೆಗೊಳ್ಳುವುದನ್ನು
ಗಮನಿಸಬೇಕು.
‘ಹುದುಗಲಾರದ ದುಃಖ’ ಕವನವು ಬೇಂದ್ರೆಯವರ ‘ಗರಿ’ ಕವನಸಂಕಲನದಲ್ಲಿ ಅಡಕವಾಗಿದೆ.
………………………………………………………………………….
ತಮ್ಮ ತಾಪ, ಸಂತಾಪಗಳನ್ನೆಲ್ಲ ಬೇಂದ್ರೆ ಕಾವ್ಯವಾಗಿ ಪರಿವರ್ತಿಸಿದರು.
ತಮ್ಮ ‘ಸಖೀಗೀತ’ದಲ್ಲಿ ಬೇಂದ್ರೆ ಹೀಗೆ ಹಾಡಿದ್ದಾರೆ:
ಇರುಳು-ತಾರೆಗಳಂತೆ ಬೆಳಕೊಂದು ಮಿನುಗುವುದು
ಕಳೆದ ದುಃಖಗಳಲ್ಲಿ ನೆನೆದಂತೆಯೆ
ಪಟ್ಟ ಪಾಡೆಲ್ಲವು ಹುಟ್ಟು-ಹಾಡಾಗುತ
ಹೊಸವಾಗಿ ರಸವಾಗಿ ಹರಿಯುತಿವೆ
ತಮ್ಮ ಕಾವ್ಯವನ್ನು ಆಸ್ವಾದಿಸುವ ಸಹೃದಯರಿಂದ ಬೇಂದ್ರೆ ಕೇಳುವುದು
ಇಷ್ಟೇ:
ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ.